. ಕರ್ನಾಟಕದ ಹೊರಗಿರುವ ಬೇಡರ ಆರಾಧನಾ ಕ್ಷೇತ್ರಗಳು

ಕರ್ನಾಟಕದಲ್ಲಿ ನೆಲೆಸಿರುವ ಬೇಡನಾಯಕರು ತಮ್ಮ ಅಪೂರ್ವ ಆರಾಧನಾ ಕ್ಷೇತ್ರಗಳನ್ನು ಕರ್ನಾಟಕದಾಚೆಗೂ ಹೊಂದಿದ್ದಾರೆಂಬುದು ಮಹತ್ವದ ಸಂಗತಿ. ಒಂದಿಲ್ಲೊಂದು ರೀತಿಯಲ್ಲಿ ಇವರು ಆ ಪ್ರದೇಶಗಳೊಡನೆ ನಿಕಟ ಸಂಬಂಧ ಹೊಂದಿರುವರು. ಪ್ರಾಚೀನ ಸಂದರ್ಭದಲ್ಲಿ ಏಕೀಕೃತವಾಗಿದ್ದ ಪ್ರದೇಶಗಳು ಇಂದು ಪ್ರತ್ಯೇಕವಾದ ಗಡಿಗಳನ್ನು ಹೊಂದಿರುವುದರಿಂದ ಇವರನ್ನು ಗಡಿಯಾಚೆಗೂ ನೋಡಬಹುದಾಗಿದೆ. ಅಂದು ಇಂಥ ತಾರತಮ್ಯ ಇದ್ದಂತಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳನ್ನು ಇಲ್ಲಿ ಪರಿಚಯಿಸಲಾಗಿದೆ.

ತಾಮಸ ನದಿ ಮತ್ತು ಚಿತ್ರಕೂಟ: ಕಿರಾತ ಜನಾಂಗಕ್ಕೆ ಪವಿತ್ರವಾದ ನದಿ ತಾಮಸ. ವಾಲ್ಮೀಕಿ ತಪಸ್ಸು ಮಾಡಿದ್ದು, ಇದರ ದಂಡೆಯ ಮೇಲೆ, ಆ ಆಶ್ರಮದ ಹೆಸರು ಚಿತ್ರಕೂಟ. ಈ ಆಶ್ರಮ ಚಿತ್ರಕೂಟ ಪರ್ವತದ (ಮಥುರ) ಪರಿಸರದಲ್ಲಿತ್ತಲ್ಲದೆ, ಇಂದಿನ ಅಲಹಾಬಾದ್‌ನ ಆಗ್ನೇಯ ದಿಕ್ಕಿಗೆ ೧೮ ಮೈಲು ದೂರವಿರುವ ಗಂಗಾನದಿ ದಡದಲ್ಲಿದೆ.

ವಾಲ್ಮೀಕಿ ರಾಮಾಯಣದ ಕರ್ತೃ; ಭಾರತದ ಮಹಾಕವಿಗಳಲ್ಲೊಬ್ಬರು. ಪೂರ್ವಾಶ್ರಮದಲ್ಲಿ ಇವನೊಬ್ಬ ಬೇಟೆಗಾರ. ಸಂಪ್ರದಾಯದಂತೆ ಇವನ ಮೂಲ ಹೆಸರು ರತ್ನಾಕರ. ಕಳ್ಳತನ, ದರೋಡೆಯಲ್ಲಿ ನಿರತನಾದ ಈತನಿಗೆ ನಾರದನಿಂದ ಪರೀಕ್ಷೆ ನಡೆಯಿತು. ನಿನ್ನ ಅಪರಾಧಕ್ಕೆ ನಿನ್ನ ಹೆಂಡತಿ – ಮಕ್ಕಳು ಬಾಧ್ಯಸ್ಥರೇ (ಪಾಲುದಾರರು) ಎಂದು ಕೇಳಲು ತಿಳಿಸಿದ. ಅವನು ತನ್ನ ಪರಿವಾರವನ್ನು ವಿಚಾರಿಸಲಾಗಿ ನಿನ್ನ ಅಪರಾಧಕ್ಕೆ ನೀನೇ ಹೊಣೆ ಎಂದರು. ಇದರಿಂದ ಮನಃಪರಿವರ್ತನೆಗೊಂಡ ವಾಲ್ಮೀಕಿಗೆ ‘ಮರ’ ಎಂಬ ರಾಮವಾಣಿಯ್ನನು ವಾಚಿಸುವಂಥೆ ನಾರದ (ಸಪ್ತರ್ಷಿಗಳು) ಆದೇಶಿಸಿದ. ಅಂದಿನಿಂದ ಅವನಿಗೆ ಜ್ಞಾನೋದಯದ ಉತ್ತುಂಗ ಶಿಖರ ತಲುಪಿ ಮಹಾಕಾವ್ಯ ರಚಿಸಿದ್ದು, ಪೂಜನೀಯ ಗ್ರಂಥಗಳಲ್ಲಿ ಅಗ್ರಮಾನ್ಯವಾಗಿದೆ. ಈತನ ಮಂದಿರಗಳು ಅಲ್ಲಲ್ಲಿ ನಿರ್ಮಾಣಗೊಂಡಿದ್ದರೂ, ಚಿತ್ರಕೂಟವು ಮಹತ್ವ ಕ್ಷೇತ್ರವೆನಿಸಿದೆ.

ಕಾಳಹಸ್ತಿ: ಇದು ಆಂಧ್ರದ ಕರ್ನೂಲು ಜಿಲ್ಲೆಯಲ್ಲಿರುವ ಧಾರ್ಮಿಕ ಯಾತ್ರಾಸ್ಥಳ. ಪ್ರಾಚೀನ ಕಾಲದಿಂದಲೂ ಇದು ನಾನಾ ಕಾರಣಗಳಿಗಾಗಿ ಚಾರಿತ್ರಿಕ ಮಹತ್ವ ಪಡೆದಿದೆ. ಶೈವ ಸಂಪ್ರದಾಯದ ಶಲಾಕ ಪುರುಷರಲ್ಲಿ (೬೩) ಒಬ್ಬರಾದ ಬೇಡರ ಕಣ್ಣಪ್ಪನ ನೆಲುಸುನಾಡಿರುವುದೇ ಇಲ್ಲಿಗೆ ಸಮೀಪದಲ್ಲಿರುವ ಪುಟ್ಟಾಪಿನಾಡು. ಬೇಡರ ಕಣ್ಣಪ್ಪನ ಪ್ರಸಿದ್ಧ ದೇವಾಲಯ ಇಲ್ಲಿದೆ. ಇದಕ್ಕೆ ವಿವಿಧ ಅರಸರು ಪೋಷಿಸಿದ್ದು, ವಿಜಯನಗರದ ಶ್ರೀಕೃಷ್ಣದೇವರಾಯ ಅನುಪಮ ಕಾಣಿಕೆ ಸಲ್ಲಿಸಿದ್ದಾನೆ. ದಕ್ಷಿಣ ಭಾರತದ ಬೇಡನಾಯಕರು ಇಂದಿಗೂ ಇದನ್ನು ಪ್ರಧಾನವಾಗಿ ಪೂಜಿಸುತ್ತಾರೆ. ಕಣ್ಣಪ್ಪನ ದೇವಾಲಯಗಳು ಕರ್ನಾಟಕದಲ್ಲಿದ್ದು. ಆತನ ಹೆಸರನ್ನು ಬೇಡರ ಮಕ್ಕಳಿಗೆ, ಸಂಘಗಳಿಗೆ ಇಟ್ಟುಕೊಳ್ಳುವುದು ಅಭಿಮಾನಪೂರ್ವಕ ಸಂಗತಿ.

ಶ್ರೀಶೈಲ: ಗೋದಾವರಿ ನದಿಪರಿಸರದಲ್ಲಿ ಶ್ರೀಶೈಲ ಕ್ಷೇತ್ರವಿದೆ. ಬೇಡರು ತಮ್ಮ ಮೂಲನೆಲೆ, ಪುಣ್ಯಕ್ಷೇತ್ರ ಶ್ರೀಶೈಲ ಪ್ರದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಿ ಮಲ್ಲಿಕಾರ್ಜುನ ದೇವರು ಪ್ರಸಿದ್ಧವಾದುದು. ಪಸುಪಾಲಕ ದೇವರೆಂದು ಇದನ್ನು ಕರೆಯುವುದುಂಟು. ಬೇಡರು ಮಲ್ಲಯ್ಯನೆಂದು ಈ ದೇವರಿಗೆ ಕರೆದು, ಇಲ್ಲಿನ ದನಗಳಿಗೆ ಮಲ್ಲಯ್ಯನ ಎತ್ತುಗಳೆಂದು ಕರೆದು (ದೇವರ ಎತ್ತುಗಳು) ಕರ್ನಾಟಕಕ್ಕೆ ಬಂದಿರಬೇಕು. ಇಂದಿಗೂ ಅವರು ಹರಕೆಗಳನ್ನು ತೀರಿಸಲು ಇಲ್ಲಿಗೆ ಬರುತ್ತಾರೆ. ಈ ಎತ್ತುಗಳು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕಮರ ಕಾವಲಿನಲ್ಲಿವೆ. ಶ್ರೀಶೈಲಕ್ಕೆ ಹೋಗುವುದರ ಬದಲು ರಾಯದುರ್ಗದ ಕೆಳಗಿರುವ ಹುಚ್ಚಮಲ್ಲಯ್ಯನ (ಉಡೆಗೋಳ) ದೇವಾಲಯಕ್ಕೆ ಪೂಜಾಕಾರ್ಯಗಳನ್ನು ಮುಗಿಸಿಕೊಂಡು ಬರುತ್ತಾರೆ. ಶೈವ ಸಂಪ್ರದಾಯದ ಬೇಡರು ಇವರ ಅನುಯಾಯಿಗಳು.

[1]

ತಿರುಪತಿ: ಮಹಾಕ್ಷೇತ್ರವಾದ ತಿರುಪತಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಸಿದ್ಧ ಯಾತ್ರಾಸ್ಥಳ. ಶ್ರೀಕೃಷ್ಣ ಕೊಳಲಿನ ನಾದಕ್ಕೆ ಬೇಡರು ಬೇಟೆಯಿಂದ ವಿಚಲಿತರಾಗಿ ಇಲ್ಲಿಗೆ ಧಾವಿಸಿದಂತೆ. ಬೇಡರ ಪಡೆಯು ಶ್ರೀಕೃಷ್ಣನನ್ನು ಪ್ರಾಣಿಯೆಂದು ಬಗೆದು ಬಾಣಬಿಡಲು ಅವನ ಕಾಲಿನ ಹೆಬ್ಬೆರಳು ಊನಾಗುತ್ತದೆ. ತಿರುಪತಿಯಲ್ಲಿ ಶ್ರೀಕೃಷ್ಣ ಸಮಾಧಿ ಮಾಡಿದರೆಂಬ ನಂಬಿಕೆಗಳಿವೆ. ಇಲ್ಲಿರುವ ವೆಂಕಟೇಶ್ವರ ಮೂಲದಲ್ಲಿ ಬೇಟೆಗಾರರ ದೇವರೆಂಬುದು ಗಮನಾರ್ಹ. ಕರ್ನಾಟಕದ ಬೇಡ ನಾಯಕರ ಕೆಲವು ಪಂಗಡಗಳು ಇವನ ಅನುಯಾಯಿಗಳು, ಜಗಳೂರು ಪಾಪನಾಯಕ, ತಿರುಪತಿ ಯಾತ್ರೆ ಕೈಗೊಂಡು, ಧಾರ್ಮಿಕ ಮಹಾಪುರುಷನೆಂದು ಖ್ಯಾತನಾಗಿರುವುದು ಇತಿಹಾಸ.

ಮಂತ್ರಾಲಯ: ತುಂಗಭದ್ರಾ ನದಿ ದಂಡೆಯ ಮೇಲೆ ಈ ಯಾತ್ರಾಕ್ಷೇತ್ರವಿದೆ. ನಾಯಕ ಅರಸು ಮನೆತನಕ್ಕೆ ಸಂಬಂಧಿಸಿದ ಕುರುಹು ಇಲ್ಲಿ ದೊರೆತಿದೆ. ಕುಮಾರರಾಮನ ಅಜ್ಜಿ ಅಥವಾ ಕಂಪಲಿರಾಯನ ತಾಯಿಯ ಹೆಸರು ಮಂಚಾಲಮ್ಮ. ಇವಳು ಆಂಧ್ರದವಳಾಗಿದ್ದು, ಮಂತ್ರಾಲಯವು ತವರೂರಾಗಿತ್ತು. ಇವಳು ತೀರಿಕೊಂಡಾಗ ಮಂತ್ರಾಲಯದಲ್ಲಿ ಸಮಾಧಿ ಮಾಡುತ್ತಾರೆ. ತರುವಾಯ ಭವ್ಯ ದೇವಾಲಯವನ್ನು ನಿರ್ಮಿಸಿರುವರು. ಮಂಚಾಲಮ್ಮನ ಸಮಾಧಿ ದೇವಾಲಯವಾಗಿ ಅನಂತರ ರಾಘವೇಂದ್ರ ಸ್ವಾಮಿಗಳ ನೆಲೆಯಾಯಿತು. ಅಕ್ಕಪಕ್ಕದಲ್ಲಿ ಎರಡು ದೇವಾಲಯಗಳಿವೆ. ಬ್ರಿಟಿಷ್ ಕಲೆಕ್ಟರ್ ಸರ್.ಥಾಮಸ್ ಮನ್ರೋ (೧೮೦೦) ಇದಕ್ಕೆ ಇನಾಂಭೂಮಿಯನ್ನು ಕೊಡುತ್ತಾನೆ. ಬೇಡರು ಇಂದಿಗೂ ಇಲ್ಲಿ ಯಾತ್ರೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಭಾರತದಲ್ಲಿ ಬೇಡ ಜನಾಂಗವನ್ನು ಪ್ರತಿನಿಧಿಸಿರುವ ಕ್ಷೇತ್ರಗಳು ಹಲವು. ಆಂಧ್ರಪ್ರದೇಶದ ಅಹೋಬಲಂನ ಉಗ್ರನರಸಿಂಹಸ್ವಾಮಿ ಕ್ಷೇತ್ರ ಪವಿತ್ರವಾದುದು. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಉಮ್ಮೊಜಿನಾಯಕನೆಂಬ ಸ್ವಾತಂತ್ರ್ಯ ಹೋರಾಟಗಾರನ ಆರಾಧನಾ ಕ್ಷೇತ್ರವಿದ್ದು, ಹಬ್ಬ – ಜಾತ್ರೆಗಳು ನಡೆಯುತ್ತವೆ. ಹೀಗೆ ಮಹಾನ್ ವ್ಯಕ್ತಿಗಳನ್ನು ಸಂಕೇತಿಸುವ ಸ್ಥಳ ಹಾಗೂ ಪ್ರದೇಶಗಳು ಹಲವು. ಶ್ರೀ ಮಹರ್ಷಿ ವಾಲ್ಮೀಕಿ – ಉತ್ತರಪ್ರದೇಶ, ಏಕಲವ್ಯ – ಹಸ್ತಿನಾಪುರ (ದೆಹಲಿ), ಹಿರಣ್ಯ ಕಶಿಪು (ಹಸ್ತಿನಾಪುರ), ಧರ್ಮವ್ಯಾಧ – ಉತ್ತರ ಪ್ರದೇಶ, ಬೇಡರಕಣ್ಣಪ್ಪ – ಕಾಳಹಸ್ತಿ (ಆಂಧ್ರ) ತಿರುಮಲನಾಯಕ – ಮಧುರೆ (ತಮಿಳುನಾಡು), ವೀರಪಾಂಡ್ಯ ಕಟ್ಟಮೊಮ್ಮನಾಯ – ಪಂಜಾಕುರುಟ್ಟ (ತಮಿಳುನಾಡು), ಪೆರಿಯಾರ್ ರಾಮಸ್ವಾಮಿ ನಾಯಕರ್ – ಈರೋದ್ (ತಮಿಳುನಾಡು), ರಾಜಸಿನ್ನನಾಯಕ (ಚೆನ್ನೈ) ರಾಜಕೃಷ್ಣಪ್ಪನಾಯಕ – ಚಂದ್ರಗಿರಿ (ಆಂಧ್ರಪ್ರದೇಶ), ರಾಜಕೃಷ್ಣಪ್ಪನಾಯಕ – ಉದಯಗಿರಿ (ಆಂಧ್ರಪ್ರದೇಶ), ಸತ್ಯಹರಿಶ್ಚಂದ್ರ – ಮಗಧ, ಗುಹಾ – ಉತ್ತರಪ್ರದೇಶ, ತಿಮ್ಮಾಜಿನಾಯಕ್ – ಮಹಾರಾಷ್ಟ್ರ, ಭಕ್ತಕನಕದಾಸ – ತಂಜಾವೂರು (ತಮಿಳುನಾಡು) ಆನೆಗುಂದಿ ಮತ್ತು ಕಾಗಿನೆಲೆ (ಕರ್ನಾಟಕ) ಪುರುಷರಲ್ಲದೇ ಮಹಿಳೆಯರನ್ನು ಗುರುತಿಸಬಹುದಾಗಿದೆ. ಶಬರಿ – ಹಂಪಿ (ದಕ್ಷಿಣಭಾರತ) ಸೀತೆ – ಕಠ್ಮಂಡು (ನೇಪಾಳ), ರಾಣಿತಿಮ್ಮಜಮ್ಮ – ಚಿತ್ರದುರ್ಗ, ಪೂರ್ಣಮ್ಮ ರಾಣಿ – ಚಿತ್ರದುರ್ಗ, ರಾಮಲಕ್ಕನಾಯಕಿ – ಕೋಲಾರ ಮೊದಲಾದ ವ್ಯಕ್ತಿ ಸ್ಥಳಗಳನ್ನು ಹೆಸರಿಸಬಹುದು.

ಪುರಾಣ ವ್ಯಕ್ತಿ, ಆಧ್ಯಾತ್ಮಿಕ ಪುರುಷರನ್ನು ಸಂಕೇತಿಸುವ ಸಮಾಧಿ – ದೇವಾಲಯಗಳು ಪ್ರಸ್ತುತವೆನಿಸಿವೆ. ವಾಲ್ಮೀಕಿ ಮಂದಿರಗಳು – ಅಮೃತಸರ (ಪಂಜಾಬ್), ಕಠ್ಮಂಡು (ನೇಪಾಳ), ದೆಹಲಿ (ಹರಿಯಾಣ), ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ರಾಜ್ಯಗಳಲ್ಲಿವೆ. ಕರ್ನಾಟಕದ ಕೂಡ್ಲಿಗಿ (ಬಳ್ಳಾರಿ), ಆಯನೂರು (ಶಿವಮೊಗ್ಗ), ಹುಬ್ಬಳ್ಳಿ, ಧಾರವಾಡ (ಧಾರವಾಡ) ಗದಗ (ಗದಗ) ಮೊದಲಾದವು ನೋಡಬಹುದು. ಬೇಡರಕಣ್ಣಪ್ಪ ಮಂದಿರಗಳು ಶ್ರೀಕಾಳಹಸ್ತಿ, ಚಿತ್ತೂರು (ಆಂಧ್ರಪ್ರದೇಶ), ನ್ಯಾಮತಿ (ಶಿವಮೊಗ್ಗ) ಕನ್ನನಾಯಕ – ಶಿವಮೊಗ್ಗ, ಶ್ರೀ ಕಾಳಹಸ್ತೇಶ್ವರ – ಕಣ್ಣಪ್ಪ ದೇವಾಲಯ, ಬೆಂಗಳೂರು, ಚಿತ್ರದುರ್ಗ ಇತರ ಸ್ಥಳಗಳು ಉಲ್ಲೇಖನಾರ್ಹ.

. ಕರ್ನಾಟಕದಲ್ಲಿ ಆರಾಧನಾ ಕ್ಷೇತ್ರಗಳು

ಬೇಡರಿಗೆ ಭೌಗೋಳಿಕವಾಗಿ ನದಿ, ಬೆಟ್ಟ – ಗುಡ್ಡ, ಮರಗಳು ಪೂಜನೀಯ ತಾಣಗಳಾಗಿವೆ. ಕರ್ನಾಟಕದಲ್ಲಿ ಇಂಥಾ ಅಜ್ಞಾನ ಸ್ಥಳಗಳನ್ನು ಬೆಳಕಿಗೆ ತರುವುದು ಅವಶ್ಯ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾನಗಲ್ಲು, ಸಿರ್ಸಿ, ಸಿದ್ಧಾಪುರ, ಅನಿಲಗೊಳ ಇತರ ಸ್ಥಳಗಳಲ್ಲಿ ಕುಮಾರರಾಮನ ಆರಾಧನಾ ಕ್ಷೇತ್ರಗಳಿರುವುದು ಗಮನಾರ್ಹ. ಹಬ್ಬ ಜಾತ್ರೆಗಳು ಇಲ್ಲಿ ನಡೆಯುವುದು ವಿಶೇಷ. ಧಾರವಾಡ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಮೇಲಿನಂತೆ ಕಾಣಬಹುದು. ಧಾರವಾಡದಲ್ಲಿರುವ ‘ವಾಲ್ಮೀಕಿ ಮಂದಿರ’ ಕರ್ನಾಟಕಕ್ಕೆ ಮಾದಿ. ಬೆಳಗಾಂ ಜಿಲ್ಲೆಯಲ್ಲಿ ಸೂಲದ ಈರಪ್ಪ (ಅಥಣಿ), ಚಿಕ್ಕಲದಿನ್ನೆಯ ದೊಡ್ಡನಾಯಕರನ್ನು ಆರಾಧಿಸಲಾಗುತ್ತದೆ. ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಬೇಡರಕಣ್ಣಪ್ಪನ ದೇವಾಲಯವಿರುವುದಲ್ಲದೆ, ವರ್ಷದಲ್ಲಿ ಆಗಾಗ ಬೇಡರು ಹಬ್ಬ – ಜಾತ್ರೆಗಳನ್ನು ಆಚರಿಸುತ್ತಾರೆ.

‘ತಲ’ ಮತ್ತು ‘ಕಾಡು’ ಎಂಬ ಬೇಡರಿಂದ ‘ತಲಕಾಡು’ ನಿರ್ಮಾಣವಾಗಿದೆ. ಬೇಡರು ಇಲ್ಲಿ ಪೂರ್ವಜರನ್ನು ಆಚರಿಸುವ ಹಬ್ಬಹರಿದಿನಗಳನ್ನು ಮಾಡುತ್ತಾರೆ. ಚಾರಿತ್ರಿಕ ಮಹತ್ವ ಪಡೆದ ಈ ಸ್ಥಳ ಕಾವೇರಿ ನದಿ ಪರಿಸರದ ತೀರ್ಥಕ್ಷೇತ್ರಗಳಲ್ಲಿ ಪ್ರಮುಖವಾದುದು. ಪಶ್ಚಿಮಘಟ್ಟಗಳ ಸರಹದ್ದಿನಲ್ಲಿರುವ ಕಲ್ಲತ್ತಗಿರಿಯ ವೀರಭದ್ರೇಶ್ವರ ದೇವಾಲಯದಲ್ಲಿ ಬೇಡರಕಣ್ಣಪ್ಪನ ವಿಗ್ರಹವಿದೆ. ಹಂಪಿ ವಿರೂಪಾಕ್ಷಸ್ವಾಮಿ ದೇವಾಲಯದಲ್ಲಿ ಎರಡು ಮೂರು ಶಿಲ್ಪಗಳಲ್ಲಿ ಬೇಡರಕಣ್ಣಪ್ಪನನ್ನು ಚಿತ್ರಿಸಲಾಗಿದೆ. ಆದಿಚುಂಚನಗಿರಿ ಚುಂಚನಕಟ್ಟೆಯಲ್ಲಿ ಬೇಡರು ಆರಂಭದ ಜೀವನ ನಡೆಸಿದ ಮೂಲನೆಲೆ. ಭೈರವನ ಆರಾಧಕರಾದ ಬೇಡರು ರಾಜ್ಯಾಳ್ವಿಕೆ ನಡೆಸಿದ್ದುಂಟು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಉಳ್ಳಾರ್ಥಿ ಬೋರೆ ದೇವರು, ಗುಡಿಹಳ್ಳಿ ಓಬಳದೇವರು. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಾಮಗೇತನಹಳ್ಳಿಯ ಸೂರೆದೇವರು. ಚಳ್ಳಕೆರೆ ತಾಲೂಕಿನ ರುದ್ರಮ್ಮನಹಳ್ಳಿ ನಲುಜೆರುವಯ್ಯ ಮೊದಲಾದ ಸಣ್ಣಪುಟ್ಟ ಕ್ಷೇತ್ರಗಳು ಎಲಮರೆಕಾಯಿಯಂತೆ ಖ್ಯಾತಿ ಪಡೆದಿವೆ.

ಪ್ರಾಚೀನ ಆರಾಧನಾ ಕ್ಷೇತ್ರಗಳು

ಪ್ರಾಚೀನ ಕರ್ನಾಟಕದಲ್ಲಿ ಬೇಡರಕ ಕುರುಹುಗಳು ಸಿಗುವುದು ವಿರಳ. ಕೋಲಾರ ಜಿಲ್ಲೆಯ ಆವನಿಬೆಟ್ಟದಲ್ಲಿ ವಾಲ್ಮೀಕಿ ತಪಸ್ಸು ಮಾಡಿದ್ದನೆಂದು, ಶ್ರೀರಾಮ – ಸೀತೆಯವರು ಕೋಟೆಯನ್ನು ಕಟ್ಟಿಸಿದ್ದರೆಂಬ ನಂಬಿಕೆಗಳಿವೆ. ಅವನಿ ಮಾತ್ರ ವಾಲ್ಮೀಕಿ ಹೆಸರಿನ ಮೂಲಕ ಪ್ರಸಿದ್ಧ ಕ್ಷೇತ್ರವಾಗಿದೆ. ಕಿಷ್ಕಿಂಧೆಯಲ್ಲಿ ‘ಶಬರಿ’ ಶ್ರೀರಾಮನ ಬರುವಿಕೆಗಾಗಿ ತಪಸ್ಸು ಮಾಡಿದ್ದು ಸ್ಮರಣೀಯ. ಆನೆಗುಂದಿ, ತಲಕಾಡು, ನೀರ್ಥಡಿ ಮೊದಲಾದ ಕ್ಷೇತ್ರಗಳು ಆರಂಭದಲ್ಲಿ ಬೇಡರ ಆವಾಸ ಕೇಂದ್ರಗಳಾಗಿದ್ದವು.

ಕಂಪಳರಂಗ ಕ್ಷೇತ್ರ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನಲ್ಲಿರುವ ಕಂಪಳ ದೇವರಹಟ್ಟಿ ಮಹಾಕ್ಷೇತ್ರವು ಚಿನ್ನಹಗರಿ ನದಿದಂಡೆಯ ಮೇಲಿದೆ. ಪ್ರಾಚೀನ ಬೇಡರ ನೆಲೆಯಾದ ಇಲ್ಲಿ ಶಿಲಾಯುಗದ ನೆಲೆಗಳು, ಮಾನವಾಕೃತಿ ಕಲ್ಲುಗಳು (ರಾಕ್ಷಸ ಕಲ್ಲುಗಳು) ಮುಖ್ಯವೆನಿಸಿವೆ. ಸ್ಥಳೀಯರು ತಮ್ಮ ಪವಿತ್ರ ಭಾವನೆಗಳನ್ನು ಆಧ್ಯಾತ್ಮಿಕವಾಗಿ ಹಂಚಿಕೊಂಡಿದ್ದಾರೆ. ಇದಕ್ಕೆ ಚಿಕ್ಕಕುಮತಿ ಎಂಬ ಮತ್ತೊಂದು ಹೆಸರಿದೆ.

ನಾಯಕರ ಮೂಲ ನೆಲೆಯಾದ ಕಂಪಳ ಕ್ಷೇತ್ರ ಕರ್ನಾಟಕದ ತಿರುಪತಿಯಿದ್ದಂತೆ. ವೈಷ್ಣವ ಸಂಪ್ರದಾಯದ ಮಹಾಕ್ಷೇತ್ರಗಳಲ್ಲಿ ಇದು ಒಂದು. ಶ್ರೀಕೃಷ್ಣ ಇಲ್ಲಿ ಬೇಡರನ್ನು ಬೇಟೆಯಿಂದ ಸ್ಥಿತ್ಯಂತರಗೊಳಿಸಿದ್ದನಂತೆ. ಪ್ರಾಣಿ ಹಿಂಸೆಗೆ ವಿದಾಯ ಹೇಳಿದ ಬೇಡರಿಗೆ ಇದು ವರದಾನವಾದ ನೆಲೆ. ಶ್ರೀ ಕೃಷ್ಣನ ಸಂಹಾರವಾಗಿರುವವರೆಗೆ ಒಂದು ಪಂಗಡದಲ್ಲಿದ್ದ ಬೇಡರು ಮತ್ತು ಗೊಲ್ಲರೆಂದು ಇಬ್ಭಾಗವಾಯಿತಂತೆ. ಇಲ್ಲಿ ಸಾಂಸ್ಕೃತಿಕ ಸಂಘರ್ಷ ನಡೆದು ಬೇಟೆಯ ಬೇಡ ಬೇಟೆ ತೊರೆದು ಪಶುಪಾಲನೆ ಕೈಗೊಂಡಿದ್ದು, ಗೊಲ್ಲರು ಗೋಪಾಲಕರಾಗಿ ಮುಂದುವರೆದಿದ್ದು, ಮೇಲಿನ ಘಟನೆ ದೃಢೀಕರಿಸುತ್ತದೆ. ಅಂದಿನಿಂದ ಬೇಡರು ಬೇಟೆ, ಪ್ರಾಣಿ ಹಿಂಸೆ ಕೈಬಿಟ್ಟು ಮಾನವ ಕುಲದ ಒಳತಿಗಾಗಿ ಶ್ರಮಿಸಲು ಕರೆ ನೀಡಿ, ಗೋಪಾಲನೆ ಮಾಡಲು ೧೨ ಸಾಲಿಗ್ರಾಮ, ಕೊಳಲು, ಮುತ್ತಿನ ಗೆಜ್ಜೆ (ಮುತ್ತಿನ ಕಾಲ್ಬೆಂಡೆ) ಗಳನ್ನು ಕೊಟ್ಟಿದ್ದರು. ವರ್ಷಕ್ಕೆ ಎರಡು – ಮೂರು ಬಾರಿ ಗುಗ್ಗರಿ ಹಬ್ಬ, ದೀಪಾವಳಿ ಮೊದಲಾದವು ಜರುಗುತ್ತವೆ. ತೀರಾ ಕಟ್ಟುನಿಟ್ಟಿನ ಹಬ್ಬಗಳಲ್ಲಿ ಆಚರಣೆಗಳನ್ನು ‘ಕರಿನಾರು’ ಬೆಡಗಿನವರು ಮಾಡಿಕೊಂಡು ಬಂದಿದ್ದಾರೆ. ಇಂಥ ಸಂಪ್ರದಾಯಗಳನ್ನು ನಾಯಕ ಯಜಮಾನರು ರೂಢಿಸಿ ಉಳಿಸಿಕೊಂಡು ಬಂದಿರುವರು. ಬೇಡರು ಆಂಧ್ರದಿಂದ ವಲಸೆ (ತಿರುಪತಿ) ಬಂದು ನೆಲೆಸಿದ್ದು ಇಲ್ಲಿಯೇ. ನಂತರ ಆನೆಗುಂದಿ, ಕಂಪಲಿ, ಎಕ್ಕೆಗೊಂದಿ, ಚಿತ್ರದುರ್ಗ, ನಾಯಕನಹಟ್ಟಿಗಳ ಕಡೆ ಚದುರಿದರು. ಇಲ್ಲಿ ಕಂಪಳರಂಗ, ಗಾದರಿಪಾಲನಾಯಕ, ಗಾದರಿಪಾಲನಾಯಕ, ಪಾಪನಾಯಕ ದೇವರುಗಳ ದೇವಾಲಯಗಳಿದ್ದು, ಅನೇಕ ಆಚರಣೆಗಳಿದ್ದವು. ಗಾದರಿಪಾಲನಾಯಕ, ಪಾಪನಾಯಕ ದೇವರುಗಳ ದೇವಾಲಯಗಳಿದ್ದು, ಅನೇಕ ಆಚರಣೆಗಳಿದ್ದವು. ಸಂಸ್ಕೃತಿಯ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಲು ಬೇಡರು ಆಗಾಗ ಇಲ್ಲಿ ಸೌಹಾರ್ದಯುತ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಭೈರವ ಕ್ಷೇತ್ರ: ಮಹಾಕ್ಷೇತ್ರವೆನಿಸಿದ ಆದಿಚುಂಚನಗಿರಿಯಲ್ಲಿ ಭೈರವ ಕ್ಷೇತ್ರವಿದೆ. ಆರಂಭದಲ್ಲಿ ಬೇಟೆಯೊಂದಿಗೆ ನಿರತರಾದ ಬೇಡರು ಕಾಡು ಕಡಿದು ವ್ಯವಸಾಯ ಮಾಡಿದ ಮೂಲನೆಲೆಯಿದು. ಬೇಡರು ಭೈರವನ ಅನುಯಾಯಿಗಳಾಗಿದ್ದು, ತಮ್ಮ ಹೆಸರುಗಳನ್ನು ಬೋರಯ್ಯ, ಬೋರಪ್ಪನೆಂದು ಕರೆದುಕೊಳ್ಳುತ್ತಾರೆ. ಒಕ್ಕಲಿಗರು ಇಲ್ಲಿನ ಬೇಡರನ್ನು ಓಡಿಸಿ, ವಸಾಹತು ಸ್ಥಾಪಿಸಿದರಂತೆ, ಇಲ್ಲಿಂದ ಬಂದ ಬೇಡರು ಬಹುಶಃ ಚಿತ್ರದುರ್ಗ ಪರಿಸರದಲ್ಲಿ ನೆಲೆಸಿರಬೇಕು. ಈ ಜಿಲ್ಲೆಯಲ್ಲಿ ಭೈರವನ ಸಹಸ್ರಾರು ದೇವಾಲಯ ನೆಲೆಗಳಿವೆ. ಹಬ್ಬ – ಜಾತ್ರೆಗಳು ಜರುಗುವುದು ವಿಸ್ಮಯ.

ಮಲೆಮಾದೇಶ್ವರ ಕ್ಷೇತ್ರ: ಶಿವ ಪಾರ್ವತಿಗೆ ‘ನೀನು ಭೂಲೋಕಕ್ಕೆ ಹೋಗಿ ಬೇಡರವಳಾಗಿ ಹುಟ್ಟು’ ಎಂದು ಶಾಪ ಕೊಟ್ಟಿದ್ದನ್ನು ಈ ಗ್ರಾಮ ನೆನಪಿಸುತ್ತದೆ. ಶಿವನು ಬೇಡನಾಗಿ ಇಲ್ಲಿಗೆ ಬಂದಿದ್ದನೆಂಬುದು ಪ್ರತೀತಿ. ಕೊನೆಗೆ ಶಿವ – ಪಾರ್ವತಿಯರು ಬೇಡ – ಬೇಡತಿಯರಾಗಿ ಮದುವೆಯಾದ ಸ್ಥಳ ‘ಮಲೆಮಾದೇಶ್ವರ ಬೆಟ್ಟ’ ವೆಂದು ಕರೆಯಲಾಗುತ್ತದೆ. ಬೇಡ ಪರಿವಾರದ ತಮ್ಮಡಿಗಳೆಂದು ಕರೆಸಿಕೊಳ್ಳುವವರು ಇದರ ಪೂಜಾರಿಗಳು, ಹಬ್ಬ ಜಾತ್ರೆಗಳು ನಡೆಯುವಾಗ ಅಪಾರ ಸಂಖ್ಯೆಯ ಭಕ್ತಾದಿಗಳು ಸೇರುತ್ತಾರೆ.

ತಲಕಾಡು: ಕಾವೇರಿ ನದಿ ದಂಡೆಯ ಮೇಲಿರುವ ಕ್ಷೇತ್ರವೇ ತಲಕಾಡು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಿಂದ ಸಮೀಪದಲ್ಲಿದೆ. ಆದಿಯಲ್ಲಿ ಇದು ತಲಕಾಡಿನ ಗಂಗರ ರಾಜಧಾನಿ ಕೇಂದ್ರ. ಈ ಗ್ರಾಮದ ಹಿನ್ನೆಲೆ ಹೀಗಿದೆ. ತಲ ಮತ್ತು ಕಾಡು ಬೇಡರಿಗೆ ಒಲಿದ ಲಿಂಗದಿಂದ ಪರಿಣಾಮಕಾರಿಯಾದುದು ತಲಕಾಡಿನ ನಿರ್ಮಾಣ. ತಲ ಮತ್ತು ಕಾಡರಿಬ್ಬರು ದರೋಡೆಕೋರರು, ಕಳ್ಳರಾಗಿದ್ದರು. ಒಂದು ಹಂತಕ್ಕೆ ಪರಿವರ್ತನೆಗೊಂಡಾಗ ತಲಕಾಡಿನ ಕ್ಷೇತ್ರ ಜನಪ್ರಿಯಗೊಂಡಿತ್ತು. ಮರುಳೇಶ್ವರ, ಈಶ್ವರ ಮೊದಲಾದ ದೇವಾಲಯಗಳಿದ್ದು, ಹಬ್ಬ, ಜಾತ್ರೆ ಇತರ ಆರಾಧನೆಯು ಸಾಗಿಬಂದಿದೆ.

ನುಂಕೆಮಲೆ: ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನಲ್ಲಿರುವ ಪ್ರಸಿದ್ಧ ಗಿರಿಧಾಮ ನುಂಕೆಮಲೆ. ಇದರ ಪರಿಸರದಲ್ಲಿ ಬೇಡರು ವ್ಯಾಪಕವಾಗಿ ನೆಲಸಿರುವರು. ವರ್ಷಕ್ಕೊಮ್ಮೆ ಜರುಗುವ ನುಂಕಪ್ಪನ ಜಾತ್ರೆಯಲ್ಲಿ ಕೊಮ್ಮನಪಟ್ಟೆ ಬೇಡರು ‘ಸಿಡಿ’ ಆಡುತ್ತಾರೆ. ಇದೊಂದು ರೀತಿಯಲ್ಲಿ ಉಗ್ರವಾದ ಆಚರಣೆ. ಇಲ್ಲಿ ನಡೆಯುವ ವಿವಿಧ ಆಚರಣೆಗಳ ಪೈಕಿ ಕದಂಬರ ಅರಸರು ನಿರ್ಮಿಸಿದ ದೇವಾಲಯಗಳಿಗೆ ಪೂಜಿಸುತ್ತಾರೆ. ನುಂಕಪ್ಪ ಮತ್ತು ಆತನ ಸಹೋದರಿ ತುಪ್ಪದಮ್ಮನ ದೇವಾಲಯಗಳಿವೆ. ಬೇಡರ ಪವಿತ್ರಕ್ಷೇತ್ರಗಳಲ್ಲಿ ಇದು ಮಹತ್ವವೆನಿಸಿದೆ.

ಸಿಡಿ ಹಾಡುವ ಮುನ್ನ ಕಬ್ಬಿಣದ ಮಳೆಗಳನ್ನು ಚಿನ್ನಿಗೆ ಏರಿಸುವ ದೃಶ್ಯ

 ಅಶೋಕ ಸಿದ್ಧಾಪುರ: ಮೊಳಕಾಲ್ಮೂರು ತಾಲೂಕಿನ ಚಿನ್ನಹಗರಿನದಿ ದಂಡೆಯ ಮೇಲೆ ಈ ಸ್ಥಳವಿದೆ. ಇಲ್ಲಿನ ಕಂಪಳದೇವರ ಗುಡಿ ಮನಮೋಹಕವಾಗಿರುತ್ತದೆ. ಈ ಪರಿಸರದಲ್ಲಿರುವ ಜಟಿಂಗ ರಾಮೇಶ್ವರದಲ್ಲಿ ಕುಮಾರ ರಾಮನ ಗರಡಿ ಮನೆಯಿದೆ. ವ್ಯಕ್ತಿಗಳ ಹೆಸರಿನಲ್ಲಿ ಆರಾಧಿಸುವ ಪದ್ಧತಿಗಳನ್ನು ಇಲ್ಲಿ ಪಟ್ಟಿ ಮಾಡಬಹುದಾಗಿದೆ. ವಾರಾಹಿಯಾದ ಮಾರಮ್ಮನನ್ನು ಬೇಡರು ತಮ್ಮ ಮನೆದೇವತೆಯನ್ನಾಗಿ ಸ್ವೀಕರಿಸಿದ್ದು, ಕುರಿ, ಕೋಣಗಳ ಬಲಿ ನಿರಂತರವಾಗಿ ನಡೆಯವುದು ವಿಶೇಷ.

ಆನೆಗುಂದಿ: ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಪ್ರಾಚೀನ ಗ್ರಾಮ ಆನೆಗುಂದಿ. ವಾಲ್ಮೀಕಿ, ಬೇಡ, ನಾಯಕ ಜನಾಂಗದ ಮೂಲ ನೆಲೆ. ಬೇಟೆಯಲ್ಲಿ ನಿರತರಾದ ಬೇಡರಿಗೆ ಇದು ಆವಾಸಸ್ಥಾನವಾಗಿತ್ತು. ‘ಶಬರಿ’ಯ ನೆಲೆ ಇದರ ಪಕ್ಕದಲ್ಲಿದೆ. ಬೇಡರಿಗೆ ಅರಮನೆ ಮತ್ತು ಗುರುಮನೆಗಳೆರಡು ಆನೆಗುಂದಿಯೇ ಕೊಡಗಲುಬೊಮ್ಮ ಇಲ್ಲಿನ ಕೋಟೆಯನ್ನು ನುಚ್ಚುನೂರು ಮಾಡಿ ೧೨ ಪೆಟ್ಟಿಗೆ ದೇವರುಗಳನ್ನು ತೆಗೆದುಕೊಂಡು ಹೋಗುತ್ತಾನೆ.

ಕಬ್ಬಳ ಕಾಶೀಪುರ: ಚನ್ನಗಿರಿ ತಾಲೂಕಿನಲ್ಲಿರುವ ಕರೆಬಿಳಚಿ, ಶಾಂತಿಸಾಗರ (ಸೂಳೆಕೆರೆ) ಕಬ್ಬಳ ಕಾಶೀಪುರ ಗ್ರಾಮಗಳು ಮಹತ್ವವಾಗಿವೆ. ಬೇಟೆರಂಗನಾಥಸ್ವಾಮಿ ದೇವಾಲಯವು ಬೆಟ್ಟದ ಮೇಲಿದೆ. ೧೮ನೇ ಶತಮಾನಕ್ಕೂ ಪೂರ್ವದಲ್ಲಿ ಇದು ನಿರ್ಮಾಣವಾಗಿದೆ. ಬೇಟೆಗಾರ ಬಿಲ್ಲು – ಬಾಣ ಹಿಡಿದು ಬೇಟೆಗಾರನಂತೆ ವಿಗ್ರಹವು ವಿಷ್ಣುವನ್ನು ಹೋಲುವುದು. ಆಗಾಗ ಹಬ್ಬ – ಜಾತ್ರೆಗಳಲ್ಲಿ ಸಡಗರ ಸಂಭ್ರಮವಿರುತ್ತದೆ.

ಸಿಡಿ ದೃಶ್ಯ

ಮೈಸೂರು: ಚಾಮುಂಡಿಬೆಟ್ಟದ ಅಧಿದೇವತೆ ಚಾಮುಂಡೇಶ್ವರಿಯನ್ನು ಇಲ್ಲಿನ ಪರಿವಾರ ನಾಯಕರು ಆರಾಧಿಸುವರು. ಬೇರೆ ದೇವತೆಯನ್ನು ಆರಾಧಿಸಿದರೂ ತಮ್ಮ ವಂಶದ ನಾಯಕರನ್ನು ಆರಾಧಿಸುವ ಕ್ರಮ ಗಮನಾರ್ಹ. ಮಾರನಾಯಕನು ಇಲ್ಲೊಂದು ದೇವಾಲಯವನ್ನು ನಿರ್ಮಿಸಿದನಂತೆ. ಸ್ತ್ರೀ ಮತ್ತು ಪುರುಷ ದೇವತೆಗಳ ಆರಾಧನೆಯು ಇಲ್ಲಿ ರೂಢಿಯಲ್ಲಿದೆ.

ಸಿಡಿ ದೃಶ್ಯ, ನುಂಕಮಲೆ

 ಚಾಮರಾಜನಗರ: ಈ ಜಿಲ್ಲೆಯ ಬಾಗಳಿಯಲ್ಲಿ (ಟಿ.ನರಸೀಪುರ ರಸ್ತೆ) ಮುದ್ದಗಲ್ಲಮ್ಮನ ಆರಾಧನೆಯನ್ನು, ಇಲ್ಲಿರುವ ವಿರಗಲ್ಲನ್ನು ಪರಿವಾರದ ಸಮುದಾಯದವರು ಆರಾಧಿಸುತ್ತಾರೆ. ಈ ಭಾಗದ ಇತರೆಡೆಗಳಲ್ಲಿ ಕಣ್ಣಪ್ಪನ ಶಿಲ್ಪಗಳನ್ನು, ಶೈವ ಕಥೆಗಳಲ್ಲಿ ಬರುವ ವ್ಯಕ್ತಿಗಳ ಬಗೆಗಿನ ಪೂಜ್ಯ ಭಾವನೆ ಪ್ರಚಲಿತದಲ್ಲಿದೆ.

ಕಾಗಿನೆಲೆ: ಬ್ಯಾಡಗಿ ತಾಲೂಕಿನಲ್ಲಿರುವ ‘ಕಾಗಿನೆಲೆ’ ಕನಕದಾಸರ ಮುಕ್ತಿಕ್ಷೇತ್ರ, ಆದಿಕೇಶವ ಇಲ್ಲಿನ ದೈವ. ಸಂಗಮೇಶ್ವರ, ಮಲ್ಲೇಶ್ವರ, ಸೋಮೇಶ್ವರ, ಕಾಳಹಸ್ತೀಶ್ವರ, ವೀರಭದ್ರ, ಲಕ್ಷ್ಮೀನರಸಿಂಹ, ಆದಿಕೇಶವ, ಕಲ್ಮೇಶ್ವರ ದೇವಾಳಯಗಳಿವೆ. ಕನಕಗುರು ಪೀಠವಿದ್ದು, ಪಶುಪಾಲಕ ಪಂಗಡದವರು ಇಲ್ಲಿಗೆ ನಡೆದುಕೊಳ್ಳುವರು. ಬೇಡರಲ್ಲಿ ವೈಷ್ಣವ ಭಕ್ತರು ಮತ್ತು ದಾಸರು ಇಲ್ಲಿಗೆ ನಡೆದುಕೊಳ್ಳುವುದು ವಾಸ್ತವ.

ನೀರ್ಥಡಿ ರಂಗನಾಥ: ಬೇಡ ವಂಶದ ತಿಮ್ಮಣ್ಣನಾಯಕನ ಮೂಲ ಸ್ಥಳ. ಇಲ್ಲಿನ ವ್ಯಕ್ತಿಗಳ ಸಂಕೇತವಾಗಿ ತಮ್ಮ ಸಂಸ್ಕೃತಿ, ವ್ಯಕ್ತಿ ‘ಇತರ ಪ್ರಕೃತಿಯ ಸಂಕೇತಗಳ ಮೂಲಕ ಭಕ್ತಿಗೆ ಹೆಸರಾದ ರಂಗನಾಥನನ್ನು ಬೇಡರು ಆರಾಧಿಸುವುದು ಸ್ಪಷ್ಟ.

ಪ್ರಾಚೀನ ಕಾಲದ ಅನೇಕ ಕ್ಷೇತ್ರಗಳು ಖ್ಯಾತಿ ಪಡೆದಿದ್ದು, ಮರೆಯಾದಂಥವು ಹಲವು. ಬೇಡರ ಮೂಲ ಪುರುಷರ ನೆಲೆಗಳನ್ನು, ಹೆಸರುಗಳನ್ನು ಸಮೀಕ್ಷಿಸಬಹುದು. ಸಂಸ್ಕೃತಿ ನಿರ್ಮಾಪಕರಲ್ಲಿ ಮಂದಭೂಪಾಲ, ಅಂಭೋಜರಾಜ, ಶುಕ್ಲಮಲ್ಲಿನಾಯಕ, ದಾನಸಾಲಮ್ಮ, ಚಂಚುಲಕ್ಷ್ಮಿ, ಪೆದ್ದಕ್ಕರಾಯಲದೇವಿ, ಭಾನುಕೋಟಿರಾಜು, ಸೂರಪ್ಪರಾಜು, ಸೆಟ್ಲುಪಟ್ಟಪ್ಪರಾಜು, ಕೋರ್ಲಿಮಲ್ಲಿರಾಜು, ಕಾಕುಮಂಚಿರಾಜು, ಪಾಪನ್ನರಾಜು ಮತ್ತು ತಿಪ್ಪಂಡರಾಜು ಮೊದಲಾದವರು ಕಂಡುಬರುತ್ತಾರೆ.


[1] ನೋಡಿ : ವಾಲ್ಮೀಕಿ ಕಿರಣ (ಸ್ಮರಣ ಸಂಚಿಕೆ) ೧೯೯೮, ಪು. ೫೨-೫೫