ಮೌಖಿಕ ಚರಿತ್ರೆಯೆಂಬುದು ಅಲಿಖಿತ, ಅಪ್ರಕಟಿತ ಮಾಹಿತಿಗಳನ್ನು, ವೈಯಕ್ತಿಕ ನೆಲೆಯಲ್ಲಿ ಅಭಿವ್ಯಕ್ತಿಗೊಂಡಿದ್ದನ್ನು ಸೂಚಿಸುತ್ತದೆ. ಚರಿತ್ರೆಕಾರ ತನ್ನ ಅವಲೋಕನ ಮತ್ತು ಸಂವೇದನಾಶೀಲತೆಯಿಂದ ಇದನ್ನು ರಚಿಸುತ್ತಾನೆ. ಇಲ್ಲಿ ನಿರೂಪಕ ಮತ್ತು ರಚನೆ ಕಾರ್ಯ ಕೆಲಸಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ಚರಿತ್ರೆಯ ಘಟನೆಗಳ ಬಗ್ಗೆ ಜನರು ಏನು ಹೇಳುತ್ತಾರೋ ಅದೇ ಮೌಖಿಕ ಚರಿತ್ರೆ ಆಗುತ್ತದೆ. ಇದೆಲ್ಲಕ್ಕಿಂತ ವಿರುದ್ಧ ಪಥದಲ್ಲಿರುವುದು ಲಿಖಿತ ಇತಿಹಾಸ. ಶಾಸನ, ವೀರಗಲ್ಲು, ಮಾಸ್ತಿಕಲ್ಲು, ಶಿಲ್ಪ, ರೇಖಾಚಿತ್ರ, ದೇವಾಲಯ, ಸಮಕಾಲೀನ ದಾಖಲೆ, ಇತ್ಯಾದಿಯಾಗಿ ಲಭ್ಯವಿರುವ ಮಾಹಿತಿಯಿಂದಲೇ ಈವರೆಗಿನ ಚರಿತ್ರೆಯನ್ನು ನಿರೂಪಿಸಲಾಗಿದೆ. ಅದು ಚರಿತ್ರೆಯ ಶಿಸ್ತಿನೊಳಗೆ ವಾಸ್ತವಕ್ಕೆ ಮನ್ನಣೆಕೊಟ್ಟು ರಚಿಸಿರುವಂಥದ್ದದು, ಅದು ವಸಾಹತುಶಾಹಿ ಧೋರಣೆಯ ಅಧ್ಯಯನ ವಿಧಾನಗಳಿಂದ ಪ್ರಭಾವಿತಗೊಂಡಂತಿದೆ. ಶಾಸನಗಳನ್ನು ರಾಜನ ಸಾಮಂತರು ಹಾಕಿಸಿದ್ದರೂ ಅವು ರಾಜಪ್ರಭುತ್ವದ ಪರವಾಗಿದ್ದು, ಜನಸಾಮಾನ್ಯರ ಪಾತ್ರವನ್ನು ಕಡೆಗಣಿಸಿವೆ ಎನ್ನವುದುಂಟು. ಚರಿತ್ರೆಕಾರರು ರಚನೆಯ ಸಂದರ್ಭದಲ್ಲಿ ರಾಜಪ್ರಭುತ್ವಕ್ಕೆ ಮಹತ್ವಕೊಟ್ಟಿದ್ದರೆಂದರೆ ತಪ್ಪಲ್ಲ. ರಾಜ್ಯದ ಆರ್ಥಿಕ ಉತ್ಪಾದನೆಯಲ್ಲಿ ಎಲ್ಲರ ಸಹಕಾರ ಬೇಕಾಗಿದ್ದು, ವಿತರಣೆ ಮತ್ತು ಅನುಭೋಗದಲ್ಲಿ ರಾಜಪ್ರಭುತ್ವದ ಹಿಡಿತವಿತ್ತು. ಅಂದಿನಿಂದಲೂ ತಾರತಮ್ಯವನ್ನು ನಿವಾರಿಸಲಾಗದೆ ಉಳ್ಳವರು ಇಲ್ಲದವರೆಂಬ; ಅಕ್ಷರಸ್ಥರು ಮತ್ತು ಅನಕ್ಷರಸ್ಥರೆಂಬ ಬೇರ್ಪಡೆ ಬಿರುಕುಗಳು ಗೋಚರಿಸಿದವು. ಇದನ್ನರಿತ ಚರಿತ್ರೆಕಾರರು ತಮ್ಮ ಬರವಣಿಗೆ ವಿಧಾನವನ್ನು ಬದಲಿಸಿಕೊಂಡರು. ಅಮೆರಿಕದಲ್ಲಿ ರಿಚರ್ಡ್ ಡಾರ್ಸನ್ ಮೊದಲಾದವರು ಈ ಬಗೆಯ ಕೆಲಸ ಮಾಡಿರುವರು. ರಾಜಪ್ರಭುತ್ವ, ಯುದ್ಧ, ಸಂಘರ್ಷ ಮತ್ತು ಕೆಳವರ್ಗ ಅಲಕ್ಷಿತ ಜನಸಮುದಾಯಗಳ ಚರಿತ್ರೆಯನ್ನು ರಚಿಸಿರುತ್ತಾರೆ. ವಿದೇಶಿ ವಿಧಾನ ಅಳವಡಿಸಿಕೊಂಡು ರಾಷ್ಟ್ರದ ಚರಿತ್ರೆ ಬರೆದದ್ದು ರಾಷ್ಟ್ರೀಯವಾದಿ ಚರಿತ್ರೆ ಎನಿಸಿಕೊಂಡಿತು. ಮಾತೃ – ದೇಶ ಪ್ರೇಮದಿಂದ ರೂಪಿಸಿದ ಚರಿತ್ರೆ ವರ್ಣನೆ, ವೈಭವ ಎನಿಸುವುದುಂಟು. ಇಂದು ಆ ಕಲ್ಪನೆ ಬದಲಾಗಿದೆ. ಇಂಥಾ ಲಿಖಿತ ಚರಿತ್ರೆಯನ್ನೇ ವಾಸ್ತವವೆಂದು ತಿಳಿದಿದ್ದರು. ಕ್ರಮೇಣ ತಮ್ಮ ತಮ್ಮ ಚಿತ್ರಣಗಳನ್ನು ಹುಡುಕಲು ಹೊರಟಾಗ ಮರೆಯಾದದ್ದನ್ನು ನೋಡಿ ದುಃಖಿಸಿದರು. ಹೀಗಾಗಿ ಸಮಕಾಲೀನ ಸಿದ್ಧಾಂತಕ್ಕೆ ಪ್ರಾಚೀನದ ಬದುಕನ್ನು ಜನಪದ ಇತರ ಶಿಸ್ತುಗಳ ಮೂಲಕ ಕಟ್ಟಿಕೊಂಡ ಬೇಕೆಂಬುದು ನ್ಯಾಯ. ಚರಿತ್ರೆ ರಚನೆಯ ಸಂದರ್ಭದಲ್ಲಿ ಚರಿತ್ರೆಕಾರ ಘಟನೆಯ ವಸ್ತುನಿಷ್ಟ ವಿಶ್ಲೇಷಣೆಗೆ ಹೆಚ್ಚು ಮಹತ್ವ ಕೊಡುವುದು ಸಹಜ. ಇದರಲ್ಲಿ ಪೂರ್ವಗ್ರಹ, ಅಪವಾದಗಳಾಗಲಿ ಇರುವುದಿಲ್ಲವೆಂದಲ್ಲ. ಚರಿತ್ರಕಾರನ ಸತ್ಯದ ಪ್ರತಿಪಾದನೆಯೇ ಇತಿಹಾಸ ಎನ್ನುವುದಾದರೆ, ಸತ್ಯವಲ್ಲದ ದಾಖಲೆಗಳಲ್ಲಿ ಅಮೋಘವಾದ ಚರಿತ್ರೆ ಅಡಗಿರುವ (ರ) ಜನಸಾಮಾನ್ಯರ ಪಾಡೇನು?

ಮೌಖಿಕ ಚರಿತ್ರೆಗೆ ದೊರಕುವ ಮಾಹಿತಿಯ ಸರಕು ನಿಜವೆಂಬುದು ಮಾಹಿತಿದಾರನ ದೃಷ್ಟಿಯಲ್ಲಾದರೆ, ಚರಿತ್ರೆಕಾರನಿಗೆ ಇದನ್ನು ಹೇಗೆ ವಿಶ್ಲೇಷಿಸಬೇಕೆಂಬುದು ದೊಡ್ಡ ಸವಾಲಾಗುತ್ತದೆ. ಅನೇಕ ಭೀನ್ನ ಪಠ್ಯಗಳು ಇಲ್ಲಿ ಪರಿಣಾಮಕಾರಿಯಾಗಿರುತ್ತವೆ. ಮೌಖಿಕ ಚರಿತ್ರೆಯು ವರ್ತಮಾಣ ಕಾಲದಲ್ಲಿ ನಿರೂಪಣೆಗೊಳ್ಳುವುದರಿಂದ ಗತಕಾಲದ ಚಿತ್ರಣದಲ್ಲಿ ವರ್ಣನೆ, ರಮ್ಯ, ರಂಜನೆಗಳಲ್ಲದೆ ವೈವಿಧ್ಯತೆಗಳಿರುವುದು ಸಹಜ. ಒಡೆತನದಲ್ಲಿದ್ದ, ದಮನಕ್ಕೊಳಗಾದವರ ಚರಿತ್ರೆ ಅಸ್ಪಷ್ಟತೆಯಿಂದ ಕೂಡಿರುತ್ತದೆ. ಈ ಬಗೆಯ ಚರಿತ್ರೆ ಕೇವಲ ರಾಜಕೀಯ ಸಂಗತಿಗಳನ್ನಷ್ಟೇ ಅಲ್ಲದೆ, ನೀತಿ ರೂಢಿ, ಸಂಪ್ರದಾಯ, ಸಂಸ್ಕೃತಿ, ನಾಗರೀಕತೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇಲ್ಲಿ ಜನಸಾಮಾನ್ಯರ ಭಾವನೆಗಳ ಬುತ್ತಿ ಬಿಚ್ಚಿದಾಗ ಚರಿತ್ರೆಯ ಕಣಜವೇ ತೆರೆದಿಟ್ಟಂತೆ ಭಾಸವಾಗುವುದು. ಏನೆಲ್ಲಾ ಪರಿಕಲ್ಪನೆಗಳ ನಡುವೆಯೂ ದ್ವಂದ್ವಗಳ ನಿವಾರಣೆ ಮಾಡಿ ವಾಸ್ತವಕ್ಕೆ ವಾಲುವುದುಂಟು.

ಮಾನವ ನಿರ್ಮಿತ ಇತಿಹಾಸಪೂರ್ವ ಕಾಲದಲ್ಲಿ ಯಾವ ಭಾಷೆ ಬರವಣಿಗೆಗಳಿರಲಿಲ್ಲ. ಕ್ರಮೇಣ ಸಂಜ್ಞೆ, ಸಂಕೇತ, ನಂಬಿಕೆ, ದಂತಕಥೆಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನೆಯಾದವು. ಇಂತಹವುಗಳನ್ನು ಸಂಗ್ರಹಿಸುವಾಗ ಸ್ಥಳೀಯ ಮೆರುಗು ಮೌಖಿಕ ಚರಿತ್ರೆಯಲ್ಲಿ ವ್ಯಾಪಕವಾಗಿ ಮಡಗು ಗಟ್ಟಿರುತ್ತದೆ. ಇತರ ನೆನಪುಗಳ ವಿವರ, ಇತಿಹಾಸ ದಾಖಲೆಗಳು, ಲಿಖಿತ ದಾಖಲೆಗಳು, ನಂಬಿಕೆಗಳು, ದಿನಪತ್ರಿಕೆಗಳಲ್ಲದೆ, ಹಳೆಯ ತಲೆಮಾರಿನ ಬಗ್ಗೆ ಹಿನ್ನೋಟ ಬೀರಿದಾಗ ಜನಪದರು ಕೊಡುವ ಮಾಹಿತಿಯು ಪ್ರಸ್ತುತವೆನಿಸುತ್ತದೆ. ಇಂದಿನ ಜನರು ಅನೇಕ ಸೌಲಭ್ಯಗಳನ್ನು ಹೊಂದಿರುವರು. ದೂರವಾಣಿ, ಅಂಚೆ ವ್ಯವಸ್ಥೆ, ಟೆಲಿಗ್ರಾಫ್, ದಿನಚರಿ, ನಿಯತಕಾಲಿಕ, ಇ – ಮೇಲ್ ಮೊದಲಾದವು ಮೌಖಿಕ ಚರಿತ್ರೆಯನ್ನು ಬರೆಯಲು ನೆರವಾಗುತ್ತವೆ.

ಮೌಖಿಕ ಚರಿತ್ರೆಯ ಆರಂಭ ಪ್ರಾಚೀನವಾದುದು. ಇದಕ್ಕೊಂದು ಸೈದ್ಧಾಂತಿಕ ರಚನೆಯ ಚೌಕಟ್ಟು ಸಿಕ್ಕಿದ್ದು ಇತ್ತೀಚೆಗೆ ಅನೇಕ ಚರಿತ್ರೆಕಾರರು ಈ ಬಗೆಯ ರಚನೆಯಲ್ಲಿ ತೊಡಗಿರುವರು. ಒಂದು ವಿಷಯವನ್ನು ನಿರ್ದಿಷ್ಟಪಡಿಸಿಕೊಂಡು ಅದಕ್ಕೆ ಉಹಾತ್ಮಕತೆ ರಚಿಸಿ, ಮಾಹಿತಿ ಸಂಗ್ರಹಿಸಬೇಕು.ಹೀಗೆ ಮಾಡುವಾಗ ಒಂದು ದಾಖಲೆ ಮಾಡುವುದು ಮತ್ತೊಂದು ಧ್ವನಿಮುದ್ರಣ, ಛಾಯಾಚಿತ್ರಣ ಮಾಡಿಕೊಳ್ಳುವುದುಂಟು. ಇದು ಮುಕ್ಕಾಲು ಪಾಲು ಕ್ಷೇತ್ರ ಕಾರ್ಯವನ್ನು ಅವಲಂಬಿಸಿರುತ್ತದೆ. ಹೀಗೆ ಹೊರಡುವಾಗ ಕ್ಯಾಮೆರಾ, ಟೇಪ್‌ರೆಕಾರ್ಡರ್, ವೀಡಿಯೋ ಇತ್ಯಾದಿ ಪರಿಕರಗಳನ್ನು ಉಪಯೋಗಿಸಿ ಕೊಳ್ಳಬೇಕಾಗುತ್ತದೆ. ಟೇಪ್‌ರೆಕಾರ್ಡ್‌ರ್‌ಗಳ ಮೂಲಕ ಚಾರಿತ್ರಿಕ ಸಂಗತಿಗಳನ್ನು ಜನರಿಂದಲೇ ಸಂಗ್ರಹಿಸಲಾಗುವುದು. ಒಂದೇ ವಿಷಯಕ್ಕೆ ತಕ್ಕಂತೆ ಒಬ್ಬರಿಗಿಂತ ಇನ್ನೊಬ್ಬರು ಹೇಗೆ ಭಿನ್ನ ಮಾಹಿತಿ ನೀಡುತ್ತಾರೆಂಬುದನ್ನು ಎಚ್ಚರಿಕೆಯಿಂದ ಗುರುತಿಸಬೇಕು. ಮೌಖಿಕ ಚರಿತ್ರೆ ಒಂದು ರೀತಿಯ ಕಾರ್ಯಕ್ರಮವನ್ನು ಹೋಲುವಲ್ಲಿ ಅನನ್ಯತೆಯನ್ನು ಪ್ರದರ್ಶಿಸುತ್ತದೆ. ಸಂದರ್ಶನದಲ್ಲಿ ಮಾಹಿತಿದಾರ ತನ್ನ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ವಿವರ, ಆಧಾರ ನೀಡುವುದರಿಂದ ತೃಪ್ತಿಕರ ಚರಿತ್ರೆ ರಚಿಸುವುದು ಚರಿತ್ರೆಕಾರನಿಗೆ ಎದುರಾಗುವ ದೊಡ್ಡ ಸವಾಲು. ಏನೇ ಮಾಡಿದರೂ ವ್ಯವಸ್ಥಿತ, ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ಸಂದರ್ಶನ ಸಮಯದಲ್ಲಿ ನಾನು ಪ್ರಶ್ನಾವಳಿಯನ್ನು ೩೫ ಪ್ರಶ್ನೆಗಳು ರೂಪಿಸಿಕೊಂಡು ಸಂಬಂಧಿಸಿದ ಎಲ್ಲಾ ಬಗೆಯ ಮಾಹಿತಿಯನ್ನು ತಕ್ಕಮಟ್ಟಿಗೆ ಸಂಗ್ರಹಿಸಿದೆನು. ಬೇಡರು ತಮ್ಮ ಮೂಲ ಪುರುಷನನ್ನು ದೇವತ್ವಕ್ಕೇರಿಸಿ ಆರಾಧಿಸುವುದು ಇಲ್ಲಿ ಕಂಡು ಬರುವ ವಿಶೇಷ. ತಮ್ಮ ವಂಶದ ವೀರನಿಗೆ ಪವಾಡ, ದಂತಕಥೆಗಳನ್ನು ಕಟ್ಟಿ ಹೇಳುವುದು ಮತ್ತು ಅವರನ್ನು ದೇವರೆಂದು ಗುಡಿಕಟ್ಟಿ ಹಬ್ಬ, ಜಾತ್ರೆಗಳನ್ನು ಮಾಡುವುದು ಸೋಜಿಗದ ಸಂಗತಿಯೇನಲ್ಲ.

ನಾನು ಸಂದರ್ಶನ ಮಾಡಿದ್ದು ಬುಡಕಟ್ಟು ವೀರನ ನೇರ ವಂಶಸ್ಥರನ್ನು, ಅನುಯಾಯಿಗಳನ್ನು ಮತ್ತು ಭಕ್ತಾದಿಗಳನ್ನು. ಇದಕ್ಕೆ ಸಂಬಂಧಿಸಿದ ವಾರಸುದಾರರನ್ನು ಸ್ಮರಿಸುವುದು ಉಚಿತ. ಅಷ್ಟೇ ಅಲ್ಲದೆ, ಆ ವೀರ ಮತ್ತು ದೇವರ ಭಕ್ತಾದಿಗಳನ್ನು ನೇರವಾಗಿ ಭೇಟಿ ಮಾಡಿ ಆ ದೇವಾಲಯಗಳನ್ನು, ಅವರು ವಾಸಿಸುವ ಪ್ರದೇಶವನ್ನು ಆ ಪರಿಸರದ ಇತರೆ ಎಲ್ಲಾ ಸಂಗತಿಗಳನ್ನು ಗಮನಿಸಲಾಗಿದೆ. ರೈತರಕೃಷಿಕ, ಅಕ್ಷರಸ್ಥ, ಅನಕ್ಷರಸ್ಥ, ಅಧಿಕಾರಿ, ಶಿಕ್ಷಕ, ಬಾಲಕ, ವೃದ್ಧರಲ್ಲದೆ ವಿವಿಧ ಪ್ರವೃತ್ತಿಯ ವ್ಯಕ್ತಿಗಳನ್ನು, (ಸ್ತ್ರೀ – ಪುರುಷ) ಸಂದರ್ಶಿಸಿರುವೆ. ಕುರುಡ, ಕಿವುಡರ ಮೂಲಕ ಹುಚ್ಚ ಮೊದಲಾದವರ ಕಾಟವನ್ನು ತಾಳಿಕೊಂಡು ಅವರ ಸಹೋದರ ಸಹಾಯಕರೊಂದಿಗೆ ಅಭಿಪ್ರಾಯ ಮತ್ತು ನೆನಪುಗಳನ್ನು ತಿಳಿದುಕೊಂಡೆ. ಅವರು ಸಾಂಕೇತಿಸುವ ಚಿಹ್ನೆಗಳ ಮೂಲಕ ತೋರಿಸುವುದನ್ನು ಕಂಡು ಕುತೂಹಲ ಹುಟ್ಟಿದ್ದು ನಿಜ. ಅದೊಂದು ವಿಸ್ಮಯ ಲೋಕವೆಂದು ನಾನು ಭಾವಿಸಿದೆ. ಅವರು ಹೇಳುವ ಕಥೆಗಳು ಈ ಲೋಕವನ್ನೇ ಮೀರಿದ್ದು, ಎಲ್ಲೊ ಹೊಸ ಲೋಕವನ್ನು ಪರಿಚಯಿಸಿದಂತಾಯಿತು. ನಾನು ಈ ಮ್ಯಾಸಬೇಡರ ಹಟ್ಟಿಯಲ್ಲಿ ಬೆಳೆದವನಾದರೂ ಹೊರಗಿನ ವ್ಯಕ್ತಿ ನೋಡುವ ದೃಷ್ಟಿಕೋನದಂತೆ ಆಂತರಿಕ ಮತ್ತು ಬಾಹ್ಯ ಸಂವೇದನೆಗಳಿಗೆ ನಿರ್ಬಂಧ ವಿಧಿಸಲಿಲ್ಲ. ಹಟ್ಟಿ, ಹಳ್ಳಿಯ ಪ್ರದೇಶಕ್ಕೆ ಒತ್ತುಕೊಟ್ಟು ಇಲ್ಲಿ ಮಾಹಿತಿ ಸಂಗ್ರಹಿಸಿರುವೆ. ಪಟ್ಟಣ, ನಗರ ಪ್ರದೇಶಗಳನ್ನು ಕಡೆಗಣಿಸಿಲ್ಲ. ತೆಲುಗು ಭಾಷೆಯ ಮಾಹಿತಿಯನ್ನು ಸುಲಭವಾಗಿ ಕನ್ನಡಿಕರಿಸಿಕೊಳ್ಳುತ್ತಿದ್ದೆನು. ನಾನು ದ್ವಿ ಭಾಷಿಗನಾಗದ್ದರಿಂದಲೇ ಅನುಕೂಲವಾಯಿತು. ಇತ್ತೀಚೆಗೆ ನಾನಾ ಕ್ಷೇತ್ರಗಳಲ್ಲಿ ಪ್ರಗತಿದಾಯಕವಾಗಿ ಬೆಳೆಯುವ ಬೇಡರು ರೈತನ ಮತ್ತು ಅಧಿಕಾರಗಳ ಜೊತೆಗೆ ಪ್ರಭುತ್ವದ ಶಕ್ತಿ, ಆಗುಹೋಗುಗಳನ್ನು ಗಮನಿಸುವ ಜಾಣರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹಳೆಯ ಮೈಸೂರಿನ ಬೇಡರು ನಾಗರಿಕತೆಯಲ್ಲಿ ಮುಂದಿದ್ದು ತುಂಬಾ ನಾಜೂಕಿನವರೆಂದು ಹೇಳಬಹುದು. ಹೊಸಮೈಸೂರಿನ ಬೇಡರು ಬಡತನ, ಅನುಭವಿಸಿದ ಯಾತನೆಗಳ ಮಧ್ಯೆ ಸ್ವಾಭಿಮಾನದ ಕಿಚ್ಚನ್ನು ಉಳಿಸಿಕೊಂಡಿದ್ದಾರೆ. ರಾಜಮನೆತನ, ಕೋಟೆ, ಕೊತ್ತಲು, ದೇವಾಲಯಗಳು ನಮ್ಮ ಕುರುಹುಗಳೆಂದು ಗರ್ಜಿಸುವುದುಂಟು.

ಚಿತ್ರದುರ್ಗ ಪರಿಸರದಲ್ಲಿ ಶ್ರೀಮಂತರು, ಮಧ್ಯಮ ಮತ್ತು ಸಾಮಾನ್ಯ ವರ್ಗದ ನಾಯಕರನ್ನು ನೋಡಬಹುದು. ಮೂಲಸಂಸ್ಕೃತಿಯೊಂದು ಆಧುನಿಕ ಸಂಸ್ಕೃತಿಯಲ್ಲಿ ಪ್ರಭಾವ ತಳಕು ಹಾಕಿಕೊಂಡಿರುವ ಸಂಗತಿಗಳು ಮುಖಾಮುಖಿಯಾಗುತ್ತಿವೆ. ತಮ್ಮ ಹಿರಿಮೆಯನ್ನು ಸಾಕ್ಷ್ಯಾಧಾರಗಳ ಮೂಲಕ ಹೇಳಿಕೊಳ್ಳುವುದು ಇವರ ಅನನ್ಯತೆಯನ್ನು ತೋರಿಸುತ್ತದೆ. ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು ಎಂಬುದು ತುಂಬಾ ವ್ಯಾಪಕವಾದ ವಿಷಯವಾಗಿದೆ. ಹೀಗಾಗಿ ಮ್ಯಾಸಬೇಡರನ್ನಷ್ಟೇ ಇಲ್ಲಿ ಅಧ್ಯಯನ ಮಾಡಲಾಗಿದೆ. ಇವರನ್ನು ಸಾಂಸ್ಕೃತಿಕ ನಾಯಕರೆಂದು ಕರೆಯಬಹುದಾಗಿದೆ. ನೂತನ ಜಿಲ್ಲೆಯಾಗುವ ಮೊದಲೇ ಈ ಕುರಿತು ಅಧ್ಯಯನ ಮಾಡುತ್ತಿದ್ದುದರಿಂದ ಹಳೆಯ ಚಿತ್ರದುರ್ಗ ಜಿಲ್ಲೆಯನ್ನು ಈ ವ್ಯಾಪ್ತಿಗೊಳಪಡಿಸಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹೊಸಪೇಟೆ, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕುಗಳನ್ನು ಸಂದರ್ಶಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವೆ. ಸಂದರ್ಶನಕ್ಕೆಂದು ಹೋದಾಗ ಎದುರಾದ ಸಮಸ್ಯೆಗಳು ಒಂದು ಎರಡಲ್ಲ. ಸ್ತ್ರೀ ಪುರುಷರಿಬ್ಬರನ್ನು ಈ ಬಗ್ಗೆ ಕೇಳಿದಾಗ ಯಾವ ಉದ್ದೇಶಕ್ಕೆ ನೀವು ಇದನ್ನು ಮಾಡುತ್ತೀರಿ. ಇದರಿಂದ ನಿಮಗೇನು ಲಾಭ ಎಂದು ಕೇಳಿದರು. ನಾನು ಇದು ನಮ್ಮ ಜನಾಂಗದ ಚರಿತ್ರೆ. ಎಲ್ಲರಿಗೂ ತಿಳಿಯಬೇಕು ನಮ್ಮ ಸಾಂಸ್ಕೃತಿಕ ಚರಿತ್ರೆ, ರಾಜಕೀಯ ಚರಿತ್ರೆ ಎಲ್ಲಿ ದಾಖಲಾಗಿದೆ ತೋರಿಸಿ ಎಂದಾಗ ಅವರು ಹೇಳಿದ ಮಾತುಗಳಿಂದ ನನಗೆ ಕಣ್ಣೀರು ಹುಕ್ಕಿ ಬಂತು. ಪ್ರಾಚೀನ ಚರಿತ್ರೆ ದುರಂತವಾದುದು. ಸಮುದ್ರದಲ್ಲಿ ಮೀನು ಹಿಡಿದಂತೆ, ಬಣವಿಯಲ್ಲಿ ಸೂಜಿ ಹುಡುಕಿದಂತಾಗುತ್ತದೆ ಇವರ ಚರಿತ್ರೆ.

ಭೇಟಿ ಕೊಟ್ಟಾಗ ಮಾಹಿತಿದಾರನಿಗೆ ಪೂರ್ವದಲ್ಲಿ ತಿಳಿಸಿಲ್ಲದಿದ್ದರೆ, ಅವರಿಗೆ ಪುನಃ ದಿನಾಂಕ ಗೊತ್ತುಪಡಿಸಿ, ಮತ್ತೇ ಸಂದರ್ಶಿಸುತ್ತಿದ್ದೆ. ಮೊದಲು ಕೊಟ್ಟ ಮಾಹಿತಿಗೂ ಅನಂತರ ಕೊಟ್ಟ ಮಾಹಿತಿಗೂ ವ್ಯತ್ಯಾಸಗಳಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೆ. ಹೀಗೆ ಯಾವುದು ಸತ್ಯಕ್ಕೆ ಹತ್ತಿರದ ಸಂಗತಿಯೂ ಅದನ್ನೇ ಅವಲಂಬಿಸುತ್ತಿದೆ. ಈ ಬಗ್ಗೆ ಪತ್ರ ಬರೆದು, ಪೋನ್ ಮಾಡಿ ಆ ಸ್ಥಳಕ್ಕೆ ಹೋಗಿ ಅವರನ್ನು ಸಂದರ್ಶಿಸುತ್ತಿದ್ದೆ. ಅಲ್ಲಿ ಹೇಳಿಕೆ, ಕಥೆ, ಗೀತೆಗಳಲ್ಲದೆ, ದಿನಪತ್ರಿಕೆ, ಕಾನೂನು ದಾಖಲೆ, ದೇವರ ರೆಕಾರ್ಡ್, ಕಟ್ಟೇಮನೆ ಪತ್ರ, ಗುಡಿಕಟ್ಟೆಗಳ ವ್ಯಾಜ್ಯ ತೀರ್ಮಾನಗಳ ಪತ್ರಗಳನ್ನು ಪಡೆದು ಪರಿಶೀಲಿಸತೊಡಗಿದೆನು.

ಅಧಿಕಾರಿಯನ್ನು ಕಛೇರಿ ಮತ್ತು ಮನೆಯಲ್ಲಿ, ರೈತನನ್ನು ಹೊಲ ಮತ್ತು ಮನೆಯಲ್ಲಿ ಸಂದರ್ಶಿಸಿದಾಗ ಅನೇಕ ಒಳನೋಟಗಳು ಅಂಕುರಿಸುತ್ತಿದ್ದವು. ಹೆಸರು, ಜಾತಿ, ದೇವರು, ವೀರರ ಆರಾಧನೆ, ಸ್ಥಳ ಮೊದಲಾದವುಗಳನ್ನು ಅಭಿಮಾನ, ಆನಂದದಿಂದ ವಿವರಿಸುತ್ತಿದ್ದರು. ಒಬ್ಬೊಬ್ಬ ವ್ಯಕ್ತಿಯನ್ನು ಸಂದರ್ಶನ ಮಾಡುವುದು ಉಚಿತವೆಂದು ಸಾಮೂಹಿಕ ಸಂಘಟನೆಗಳನ್ನು ಸಂದರ್ಶಿಸುವುದಕ್ಕೆ ಮಹತ್ವ ಕೊಡಲಿಲ್ಲ. ಒಂದು ಸಾರಿ ಸಂದರ್ಶಿಸಿದ ನಂತರ ತೃಪ್ತಿಕರ ಮಾಹಿತಿ ಸಿಗಲಿಲ್ಲವೆಂದರೆ, ಅದೇ ಜನಾಂಗದ ಬೆಡಗಿನ, ಮನೆತನದವರನ್ನು ಬೇರೆಲ್ಲಿರುವುದೆಂದು ಹುಡುಕಿ ಅದಕ್ಕಿಂತ ಉತ್ತಮ, ವಾಸ್ತವದ ಮಾಹಿತಿಯನ್ನು ಪಡೆಯುತ್ತಿದ್ದೆ. ಮಾಹಿತಿ ಪಡೆದ ನಂತರ ದಿನಾಂಕ, ಸ್ಥಳ ಬರೆದು ಸಹಿ ಮಾಡುತ್ತಿದ್ದೆನು. ಪ್ರಾಚ್ಯಾವಶೇಷಗಳನ್ನು ಛಾಯಾಚಿತ್ರ ತೆಗೆದುಕೊಂಡು, ಸ್ಥಳೀಯ ಸಾಹಿತ್ಯ, ಸಾಂಸ್ಕೃತಿಕ, ಚಾರಿತ್ರಿಕ ಸಂಘಟನೆಗಳನ್ನು ಸಂದರ್ಶಿಸಿರುವೆನು. ಸರ್ಕಾರಿ, ಖಾಸಗಿ ಉದ್ಯೋಗಿಗಳು, ದೇವರ ಪೂಜಾರಿಗಳು, ನಾಯಕ ಜನಾಂಗದ ಗಣ್ಯರು, ಮಠಾಧೀಶರು ಮೊದಲಾದವರನ್ನು ಕಂಡು ಈ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದು ದಾಖಲಿಸಿರುವೆನು.

ಮ್ಯಾಸಬೇಡರು ಇಂದು ಆಧುನಿಕ ಜಗತ್ತಿಗೆ ತಮ್ಮನ್ನು ಅರ್ಪಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅನನ್ಯತೆಯನ್ನು ಎತ್ತಿತೋರಿಸಿಕೊಳ್ಳುತ್ತಿದ್ದಾರೆ. ಒಂದೆಡೆ ಪಾರಂಪರಿಕ ಸಾಂಸ್ಕೃತಿಕ ಲಕ್ಷಣಗಳನ್ನು ಉಳಿಸಿಕೊಂಡು ಬರುವುದು ಮತ್ತು ಪರಿವರ್ತನಾಶೀಲ ಸಮಾಜಕ್ಕೆ ಹೊಂದಿಕೊಳ್ಳುವುದುಂಟು. ಈ ಹಿನ್ನೆಲೆಯಲ್ಲಿ ಅವರ ಮೌಖಿಕ ಪರಂಪರೆಯನ್ನು ಚರಿತ್ರೆಯಲ್ಲಿ ದಾಖಲಿಸುವ ಪ್ರಸ್ತುತತೆಯಿದೆ. ತಮ್ಮ ಪ್ರಾಚೀನ ಸಂಸ್ಕೃತಿಯ ಕವಲುಗಳು ಕುಸಿಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸ್ಥಾನ, ಪಾಳೆಯಪಟ್ಟು, ಕಟ್ಟೆಮನೆ, ಗುಡಿಕಟ್ಟೆ, ದೊರೆಮನೆತನಗಳು ಇಂದು ಹೀನಾಯ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಜನಸಾಮಾನ್ಯರಾದ ಮ್ಯಾಸಬೇಡರು ಮತ್ತು ರಾಜಪ್ರಭುತ್ವದಲ್ಲಿ ಬೇಡರ ರಾಜಮನೆತನಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಅಲಕ್ಷಿಸಲ್ಪಟ್ಟ ವೀರರನ್ನು ಅವರ ಆರಾಧನಾ ಕ್ಷೇತ್ರಗಳನ್ನು ಇಲ್ಲಿ ಸಮಗ್ರವಾಗಿ ಅಧ್ಯಯನ ಮಾಡಲಗಿದೆ ಎಂದು ಹೇಳಲಾರೆ. ಮರೆಯಾದ ಅನೇಕ ಸಂಗತಿಗಳಿವೆ. ಅಂಥವುಗಳನ್ನು ಮುಂದಿನ ಕೃತಿಯಲ್ಲಿ ಪರಿಷ್ಕರಿಸಿಕೊಳ್ಳುವೆ. ಓದುಗರಾದ ತಾವು ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರೆ ನನ್ನ ಶ್ರಮಕ್ಕೆ ತಕ್ಕ ಪ್ರತಿಫಲವೆಂದು ಭಾವಿಸುವೆ, ಹೆಮ್ಮೆ ಪಡೆಯುವೆ.

ನನ್ನ ಈ ಬಗೆಯ ಶೈಕ್ಷಣಿಕ ಬೆಳವಣಿಗೆಗೆ ಕಾರಣರಾದವರು ಅನೇಕರು. ಅವರಲ್ಲಿ ನನ್ನ ಅಜ್ಜಿ ಮೊದಲಿಗರು. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎನ್ನುವುದುಂಟು. ಆದರೆ ಶಾಲೆಗಿಂತ ನನ್ನ ಅಜ್ಜಿ ಕಲಿಸಿದ್ದೆ ಹೆಚ್ಚು. ಅಪ್ಪ ಪೂಜಾರಿ ಸಣ್ಣ ಪಾಲಯ್ಯ, ತಾತ ದಿ.ಪೆದ್ದ ಓಬಯ್ಯ ಮತ್ತು ಅಜ್ಜಿ ದಿ.ತೋಟದ ಪಾಲಮ್ಮನವರನ್ನು ಸ್ಮರಿಸಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುವೆನು.

ಅಜ್ಜಿ ನನ್ನನ್ನು ಶಾಲೆಗೆ ಬಲಾತ್ಕಾರವಾಗಿ ಕಳುಹಿಸುತ್ತಿದ್ದಳು. ಆಗ ನನ್ನನ್ನು ಹೊಡೆದು ಬಡಿದು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಬಿಟ್ಟು ಬರುತ್ತಿದ್ದ ಮೋಟಬೋರಯ್ಯ ಮತ್ತು ತೋಟದ ಮುಕ್ಕಣ್ಣನವರನ್ನು ಸ್ಮರಿಸುವೆ. ವಿವಿಧ ಹಂತಗಳಲ್ಲಿ ನೇರವಾಗಿ ವಿಶೇಷ ಕಾಳಜಿ ತೋರಿದ ಶಿಕ್ಷಕರು ಅನೇಕ ಮಂದಿ, ಬಿ.ಬಸಪ್ಪ, ಜಿ. ಹನುಮಂತಪ್ಪ, ಕೆ.ಎಂ.ತಿಪ್ಪೇಸ್ವಾಮಿ, ಎನ್.ಬಿ. ತಿಮ್ಮಣ್ಣ, ಎನ್.ರಾಜಣ್ಣ, ಎ.ಬಸಪ್ಪ, ಡಿ.ಬೋರಪ್ಪ, ಜಿ.ಸರ್ವಮಂಗಳ, ರಾಜಾರಾಮಹೆಗಡೆ ಮೊದಲಾದವರನ್ನು ನೆನಪಿಸಿಕೊಳ್ಳುವೆ.

ಎಂ.ಎ. ಮುಗಿದಾಗ ಉದ್ಯೋಗದ ಅಲೆದಾಟದಲ್ಲಿ ನೆರವಾದ ಯಶೋಧರಮ್ಮ ಡಿ. ಬೋರಪ್ಪ, ಬಿ.ಬೋರಯ್ಯ, ಬಂಜಯ್ಯ, ಪಾಪಯ್ಯ, ಗೆಳೆಯ ಜಿ.ಎಸ್. ತಿಪ್ಪೇಸ್ವಾಮಿ, ವಿಶ್ವನಾಥ, ಬಿ.ಬಸವರಾಜ ಮೊದಲಾದವರ ಸ್ಮರಣೆ ಅಗತ್ಯವೆನಿಸುವುದು.

ಸಂಶೋಧನೆಗೆ ಪದಾರ್ಪಣೆ ಮಾಡಿದಾಗ ಪ್ರೊ.ಲಕ್ಷ್ಮಣ್ ತೆಲಗಾವಿ ಅವರು ಮಾರ್ಗದರ್ಶನ ನೀಡಿ ಪಿಎಚ್.ಡಿ ಪದವಿ ಪಡೆಯಲು ಕಾರಣರಾಗಿದ್ದಾರೆ. ಹಿಂದಿನ ಕುಲಪತಿಗಳಾದ ಡಾ.ಚಂದ್ರಶೇಖರ್ ಕಂಬಾರ, ಡಾ.ಎಂ.ಎಂ.ಕಲಬುರ್ಗಿ ಮತ್ತು ಇಂದಿನ ಕುಲಪತಿಗಳಾದ ಡಾ.ಎಚ್.ಜೆ.ಲಕ್ಕಪ್ಪಗೌಡ, ಕುಲಸಚಿವರಾದ ಡಾ.ಕೆ.ವಿ.ನಾರಾಯಣ ಡೀನ್ ಡಾ.ಹಿ.ಚಿ.ಬೋರಲಿಂಗಯ್ಯ, ಅಧ್ಯಯನಾಂಗದ ಪ್ರೋ. ಕರೀಗೌಡ ಬೀಚನಹಳ್ಳಿ, ಡಾ.ಕೆ.ಆರ್. ಸಂಧ್ಯಾರೆಡ್ಡಿ ಮೊದಲಾದವರನ್ನು ಸ್ಮರಿಸುವುದು ಉಚಿತ. ಬದುಕಿನ ಏಳು – ಬೀಳುಗಳಲ್ಲಿ ಮುಖ್ಯವಾದುದನ್ನು ಆರಿಸಿಕೊಳ್ಳುವಲ್ಲಿ ನಾನು ಪ್ರಾಯಾಸಪಟ್ಟು ವಿಳಂಬಿತನಾದಾಗ ಮಿತ್ರರು ಸಹಕರಿಸಿದ್ದಾರೆ. ವಿಭಾಗ ಸಹೋದ್ಯೋಗಿಗಳು, ಆಗಿನ ಸಂಶೋಧನಾ ಮಿತ್ರರನ್ನು ಮರೆಯುವುದಾದರೂ ಹೇಗೆ, ಮಡದಿ ಮಕ್ಕಳು, ಬಂಧುಗಳು ಇಲ್ಲಿ ನೆರವಾಗಿದ್ದಾರೆ. ಸಂದರ್ಶನದಲ್ಲಿ ಜಗಳೂರು, ಗಂಜಿಗಟ್ಟೆ, ಕಾತ್ರಿಕಟ್ಟೆ, ವಲಸೆ, ಕುಮತಿ, ಮೊಳಕಾಲ್ಮೂರು, ಚಳ್ಳಕೆರೆ, ಹಿರೇಹಳ್ಳಿ, ನಾಯಕನಹಟ್ಟಿ ಮೊದಲಾದ ಸ್ಥಳಗಳಿಗೆ ಹೋದಾಗ ನೆರವಾದವರ ಹೃದಯಕ್ಕೆ ಹೃದಯ ವಂದನೆಗಳನ್ನು ಸಲ್ಲಿಸುವೆ. ಅಂದವಾಗಿ ಡಿ.ಟಿ.ಪಿ. ಮಾಡಿದ. ವೈ ಎಂ. ಶರಣಬಸವ ಮತ್ತು ಪ್ರಸಾರಾಂಗದ ಸಹಾಯಕ ನಿರ್ದೇಶಕ ಶ್ರೀ ಸುಜ್ಞಾನಮೂರ್ತಿ, ಶ್ರೀ ಕೆ.ಎಲ್. ರಾಜಶೇಖರ್, ಕಲಾವಿದ ಶ್ರೀ ಕೆ.ಕೆ.ಮಕಾಳಿ, ಹಗಲುರಾತ್ರಿ ಸಂಶೋಧನೆ ಮಾಡಿ ಹುಚ್ಚನಾಗುವೆ ಎನ್ನುವ ಎಲ್ಲರನ್ನು ನಾನು ಹೃತ್ಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾ ಕೃತಜ್ಞತೆಗಳನ್ನು ತಿಳಿಸುವೆನು. ಈ ಪುಸ್ತಕ ಓದುಗರಾದ ನಿಮಗೂ ಸಹಾ.

ಡಾ.ವಿರೂಪಾಕ್ಷಿ ಪೂಜಾರಹಳ್ಳಿ