. ವೀರರ ಆರಾಧನೆ

ಬೇಡ ಸಮುದಾಯದಲ್ಲಿ ವೀರರನ್ನು ಮತ್ತು ಅವರ ಆರಾಧನಾ ಕ್ಷೇತ್ರಗಳನ್ನು ಗುರುತಿಸಬಹುದಾಗಿದೆ. ಅಖಿಲ ಕರ್ನಾಟಕದ ವ್ಯಾಪ್ತಿಯಲ್ಲಿ ಇಂಥ ಕ್ಷೇತ್ರಗಳು ವ್ಯಾಪಕವಾಗಿರುವುದು ಚಿತ್ರದುರ್ಗ ಜಿಲ್ಲೆಯಲ್ಲಿ. ಇಲ್ಲಿ ವೀರ ಎಂದರೆ ಯಾರು? ಅವರ ಸಾಧನೆ ಏನು? ಅವರನ್ನು ವೀರ ಎಂದು ಕರೆಯುವ ಮಾನದಂಡ ಯಾವುದು ಎಂಬ ಪ್ರಶ್ನೆ ಎದುರಾಗುತ್ತದೆ. ವೀರರ ಲಕ್ಷಣಗಳು ಪ್ರಾದೇಶಿಕವಾಗಿ ಭಿನ್ನವಾಗಿವೆ. ಪರಂಪರೆ ಮತ್ತು ಸಮಕಾಲೀನತೆಗಳ ನಡುವೆ ಸ್ಥಳ, ವೃತ್ತಿಗಳ ಬಗ್ಗೆ ಭಾವನಾತ್ಮಕವಾದ ಬೆಸುಗೆಯಿದೆ. ಆರಾಧಿಸುವ ವರ್ಗವು ಶೈವ ಮತ್ತು ವೈಷ್ಣವ ಪರಂಪರೆಯಲ್ಲಿ ಬೇಡರು ಗುರುತಿಸಿಕೊಂಡಿದ್ದಾರೆ. ಬೇಡನಾಯಕ ವೀರರು ರಾಜಪ್ರಭುತ್ವಕ್ಕಿಂತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವುದುಂಟು. ಆರಾಧನೆಗೊಳಪಡುವ ವೀರರು ದೈವತ್ವಕ್ಕೇರುವ ಮುನ್ನ ತನ್ನ ಒಡೆಯನಿಗೆ ಪ್ರಾಣಾರ್ಪಣೆಯಾಗಲಿ, ಆತ್ಮಬಲಿದಾನಗಳಂಥ ಯಾವ ವಿಧವಾದ ಸಾವನ್ನು ಹೊಂದಿರಲಿಲ್ಲ ಎಂದು ಹೇಳುವಂತಿಲ್ಲ. ಇವರ ಸಾವು ಅಸಹಜವಾದುದು. ಮತ್ತು ವೈಯಕ್ತಿಕವಾಗಿ ತನ್ನ ಸಂಸ್ಕೃತಿಗೆ ಸಂಬಂಧಪಟ್ಟದ್ದು. ವೀರನ ಹೋರಾಟದ ಲಕ್ಷಣಗಳು ಕಾಲಕಾಲಕ್ಕೆ ಬದಲಾಗುತ್ತವೆಯಾದರೂ ಬೇಡನಾಯಕ ವೀರರಲ್ಲಿ ಇಂಥಾ ಬದಲಾವಣೆ ಕಾಣಲಾಗದು. ದನಕರುಗಳ ರಕ್ಷಣೆ, ಕುರಿಮಂದೆಗಳ ರಕ್ಷಣೆ, ಹೆಣ್ಣಿನ ಮಾನರಕ್ಷಣೆ, ಸಂಸ್ಕೃತಿ ರಕ್ಷಣೆ, ದೈವ ನಂಬಿಕೆಗಳಲ್ಲಿ ವೀರರು ಸಾಹಸವೆಸಗಿರುವರು. ಇಂಥ ಮಡಿದ ವೀರನ ಸಥಳ ಅಥವಾ ಸಮಾಧಿಗೆ ಪೂಜಾಕಾರ್ಯಗಳಲ್ಲದೆ, ಹಬ್ಬ – ಆಚರಣೆಗಳು ರೂಢಿಯಲ್ಲಿವೆ.

ಬೇಡವೀರನೊಬ್ಬ ಹೋರಾಡಿ ಮಡಿದ ಚಿತ್ರ, ಪೂಜಾರಹಳ್ಳಿ

ಪರಲೋಕ ಮತ್ತು ಪುನರ್ಜನ್ಮವನ್ನು ನಂಬುವ ಬೇಡರು ತಮ್ಮ ಪರಂಪರೆಯಂತೆ ಪಿತೃಋಣ, ಋಷಿಋಣ, ದೇವಋಣಗಳನ್ನು ತೀರಿಸುವುದು ಸಹಜ. ಮುಕ್ತಿ ಪಡೆಯಲು ಮದುವೆ ಮಕ್ಕಳಾಗಬೇಕು; ವಿದ್ಯಾಭ್ಯಾಸ, ಪೂಜೆ, ದಾನ, ನೀತಿಗಳು ಅವಶ್ಯಕತೆವೆನಿಸಿವೆ. ಉದಾ: ಬುದ್ಧ ವೈಶಾಖ ಶುದ್ಧ ಪೂರ್ಣಿಮೆಯಂದು ಜನಿಸಿದ್ದು ಮನೆ ತೊರೆದದ್ದು ಮತ್ತು ಧರ್ಮ ಬೋಧಿಸಿದ್ದು, ನಿರ್ವಾಣ ಹೊಂದಿದ್ದು ಅದೇ ದಿನ. ಹೀಗಾಗಿ ಮೇ ತಿಂಗಳ ಬುದ್ಧಪೂರ್ಣಿಮಾ ಬೌದ್ಧರಿಗೆ ಪವಿತ್ರದಿನ. ಈ ಮೂರು ವೈಶಾಖ ಪುಣ್ಯ ತಿಥಿಯಲ್ಲಿ ಬರ್ಮಾ, ಸಿಂಹಳ, ಸಯಾಂ ಮೊದಲಾದ ರಾಷ್ಟ್ರಗಳಲ್ಲಿ ಉತ್ತಮ ವೈಭವ, ಸಂಭ್ರಮದಿಂದ ‘ಬುದ್ಧ ದಿನ’ ಆಚರಿಸುತ್ತಾರೆ. ಬೌದ್ಧ ಧರ್ಮವನ್ನು ಅಪ್ಪಿಕೊಂಡವರು ೫ ತತ್ವಗಳಾದ ಕೊಲ್ಲುವುದಿಲ್ಲ, ಕಳುವು ಮಾಡುವುದಿಲ್ಲ, ಅತ್ಯಾಚಾರ ಮಾಡುವುದಿಲ್ಲ. ಸುಳ್ಳು ಹೇಳುವುದಿಲ್ಲ, ಮಧ್ಯ ಕುಡಿಯುವುದಿಲ್ಲ ಎಂಬುವುಗಳನ್ನು ಪಾಲಿಸಬೇಕಿತ್ತು. ಬೋಧಿ, ಗಯಾ, ಲುಂಬುಣಿ ಇವರಿಗೆ ಪವಿತ್ರ ಸ್ಥಳಗಳು. ಹೀಗೆ ಬೇಡರಿಗೆ ಒಂದು ಧರ್ಮ, ಮತ ಮತ್ತು ಒಬ್ಬ ನೇತಾರನ ಮೂಲಕ ವೀರನ ಅಥವಾ ಸಂತನ ಆರಾಧನೆ ಇಲ್ಲ.

ವೀರರ ಆರಾಧನೆ ಹೆಚ್ಚಾಗಿ ದ್ರಾವಿಡ ಸಮುದಾಯಗಳಲ್ಲಿ ಕಂಡು ಬರುತ್ತವೆ. ಬೇಟೆ, ಪಶುಪಾಲನಾ ವೃತ್ತಿಗಳಲ್ಲಿ ನಿರತರಾದವರು ತಮ್ಮ ಪೂರ್ವಜನರನ್ನು ಆರಾಧಿಸುವುದುಂಟು. ತೀರಾ ಭಿನ್ನವೆಂಬಂತೆ ಚಿತ್ರದುರ್ಗ ಜಿಲ್ಲೆಯ ಬೇಡರಲ್ಲಿ ಈ ಬಗೆಯ ಲಕ್ಷಣಗಳನ್ನು ನೋಡಬಹುದು. ಇದೇ ತಾಲೂಕಿನ ಬೊಚ್ಚಬೋರಯ್ಯಹಟ್ಟಿಯ ನಾಯಕರು ತಮ್ಮ ಪೂರ್ವಜನಾದ ಗಾದರಿಪಾಲನಾಯಕನಿಗೆ ಅವನ ಸಮಾಧಿ ಸ್ಥಳವಾದ ಮಿಂಚೇರಿ (ಗಾದ್ರಿಮಲೈಬೆಟ್ಟ) ಅರಣ್ಯಕ್ಕೆ ವರ್ಷಕ್ಕೊಮ್ಮೆ ಯಾತ್ರೆ ಹೋಗುವುದು ವಿಶೇಷ. ಜಗಳೂರು ಪಾಪನಾಯಕ ಮೊದಲಾದ ವೀರರ ಬಗ್ಗೆ ಇಂಥ ಆಚರಣೆಗಳಿವೆ.

ಪವಾಡ, ಧಾರ್ಮಿಕ ವೈಶಷ್ಟ್ಯ, ಸಂತನ ಸಮಾಧಿ, ಸಂತನ ನಿವಾಸ ಮೊದಲಾದ ಸ್ಥಳಗಳಿಗೆ ತೀರ್ಥಯಾತ್ರೆ ಹೋಗುವುದು ಸಹಜ. ತೀರ್ಥಯಾತ್ರೆ ಕುರಿತಂತೆ ೨೪ ವಿಧವಾದ ಅರ್ಥ ಮತ್ತು ಆಚರಣೆಗಳಿವೆ. ಬೇಡರಲ್ಲಿಯೂ ತೀರ್ಥಯಾತ್ರೆ ಹೋಗುವ ಸಂಪ್ರದಾಯವಿದೆ. ಇವರ ಕೆಲವು ಬೆಡಗುಗಳಲ್ಲಿ, ಈ ಬಗ್ಗೆ ನಿರ್ಬಂಧ ಹಾಗೂ ನಿಷೇಧಗಳಿವೆ. ಶ್ರೀಶೈಲಕ್ಕೆ ಹೋಗುವವರು ತಿರುಪತಿಗೆ ಹೋಗುವಂತಿಲ್ಲ. ಹಾಗೆಯೇ ಕಾಳಹಸ್ತಿಗೆ ಹೋಗುವವರು ಕೂಡ. ಗರ್ಭಿಣಿಯಾದ ಪತ್ನಿ ಅಸಹಜ ಸಾವನ್ನಪ್ಪಿದರೆ, ಗೋವಧೆ ಮಾಡಿದರೆ, ನರಮನುಷ್ಯನನ್ನು ಕೊಂದರೆ ಹೀಗೆ ನಾನಾ ಪಾಪ ಕೃತ್ಯಗಳನ್ನೆಸಗಿದವರು ನದಿ ತೀರದ ಯಾತ್ರಸ್ಥಳಗಳಿಗೆ ಹೋಗುತ್ತಾರೆ. ಅವು ಬೇಡರಿಗಷ್ಟೇ ಸೀಮಿತವಾಗಿರುವುದಿಲ್ಲ.

. ಆರಾಧನಾ ಸ್ವರೂಪ

ಬೇಡರು ತಮ್ಮ ಬುಡಕಟ್ಟಿನ ಲಕ್ಷಣಗಳನ್ನು ಉಳಿಸಿಕೊಂಡು ಬಂದಿರುವುದರಿಂದ ಆಧುನಿಕ ಮತ್ತು ಪರಂಪರಾಗತ ಸಂಗಿತಗಳ ನಡುವೆ ದ್ವಂದ್ವಗಳು ಏರ್ಪಡುವುದು ಸಹಜ. ತಾನು ಮತ್ತು ತನ್ನ ಜನಾಂಗದ ನೇತಾರರನ್ನು ಲಿಖಿತ – ಮೌಖಿಕ ಪ್ರಕಾರಗಳಲ್ಲಿ ಜೀವಂತಗೊಳಿಸಿಕೊಂಡಿರುವುದನ್ನು ಇಂದಿಗೂ ನೋಡಬಹುದಾಗಿದೆ. ಹಿಂದೂ ಧರ್ಮದ ವ್ಯಾಪ್ತಿಯಲ್ಲಿಯೇ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಪ್ರತ್ಯೇಕತೆಯನ್ನು ಉಳಿಸಿಕೊಂಡಿವೆ. ಅದು ವೀರರ ಆರಾಧನೆಯಾಗಿರಬಹುದು, ಸತಿಪದ್ಧತಿ ಯಾಗಿರಬಹುದು. ಇತರೆ ಯಾವುದೇ ಆರಾಧನಾ ಲಕ್ಷಣಗಳಿರುವ ಪದ್ಧತಿ, ರೂಢಿ ಸಂಪ್ರದಾಯಗಳು ವ್ಯಕ್ತಿ ನೆಲೆಯಲ್ಲಿ ಪೂಜಾರ್ಹಗೊಳ್ಳುತ್ತಿರುವುದು ಬೇಡರ ಸಾಂಸ್ಕೃತಿಕ ಲೋಕದೃಷ್ಟಿಯ ವೈಶಿಷ್ಟ್ಯ.

ಬೇಡರು ತಮ್ಮ ಪರಂಪರಾನುಗತವಾಗಿ ಬಂದಿರುವ ಬಳುವಳಿಗಳಲ್ಲಿ ಹುಟ್ಟು ಸಾವಿನ ನಡುವೆ ಇರುವ ಬದುಕಿನ ಸಾಮರಸ್ಯಕ್ಕೊಂದು ಅರ್ಥವನ್ನು ಕಲ್ಪಿಸಿಕೊಂಡಿದ್ದಾರೆ. ಹೀಗೆ ಕಲ್ಪಿಸಿಕೊಂಡಿರುವ ಅಂಶಗಳ ಪೈಕಿ ವೀರರ ಆರಾಧನೆಯು ಒಂದು. ಪುರುಷ ಪ್ರಧಾನ ಕುಟುಂಬ, ಪಶುಪಾಲನೆ ಬೇಟೆಯ ಸ್ಥಿತ್ಯಂತರಗಳನ್ನು ಮೀರಿ – ಅವುಗಳ ನಡುವೆ ತಾನೊಂದು ಸಾಧನೆ ಮಾಡುವ ಕಾಯಕಕ್ಕೆ ಸಿಕ್ಕ ಮರ್ಯಾದೆಯು ಮೇಲಿನಂತಿರುತ್ತದೆ. ‘ಹುಟ್ಟು’ವುದಕ್ಕೆ ಮಹತ್ವ ಕೊಡದ ಬುಡಕಟ್ಟು ಜನರು ಬದುಕಿಗೆ, ಸಾಧನೆಗೆ ಮತ್ತು ಮೃತ್ಯುವಿಗೆ ಪ್ರಾಮುಖ್ಯತೆ ಕೊಟ್ಟಿರುವುದಕ್ಕೆ ಬೇಡರೇ ಉದಾಹರಣೆ. ಇವರು ತಮ್ಮ ವೀರರು ಗತಕಾಲದಲ್ಲಿ ಸಾಧಿಸಿದ ಕ್ರಿಯೆಯಿಂದ ಪಾವನಗೊಳ್ಳುವೆವೆಂಬ ಕಾರಣಕ್ಕೆ ಏನೋ ಅತೀ ಹೆಚ್ಚಾಗಿ ರೂಢಿಸಿಕೊಂಡಿರುವ ಲಕ್ಷಣಗಳು ತೋರಿಬರುತ್ತವೆ.

ವೀರರ ಹೆಸರಿನ ಹಿರಿಯರ ಹಬ್ಬ

ರಾಜಪ್ರಭುತ್ವದಲ್ಲಿ ‘ವೀರ’ನಾದವನು ಸಾವಿಗೆ ಅಂಜಿಕೆ – ಅಳುಕುತ್ತಿರಲಿಲ್ಲ. ಸಾವಿನ ಬಗ್ಗೆ ಅಷ್ಟೊಂದು ಪವಿತ್ರ ಭಾವನೆ ನೆಲೆಯೂರಿತ್ತು. ರಾಜಮನ್ನಣೆ, ಪ್ರಜಾಮನ್ನಣೆ ಹಾಗೂ ತನ್ನ ಇಷ್ಟಾ ಪರಿವಾರದ ಒಪ್ಪಿಗೆಯು ಇಲ್ಲಿ ಮಾನ್ಯವಾಗಿದೆ. ಪರಾಕ್ರಮ, ಸಾಹಸ, ಜೋಳವಾಳಿ, ಸಹಗಮನ, ವೀರಸ್ವರ್ಗಗಳ ಚರ್ಚೆ ಈ ಹಿಂದೆಯೇ ನಡೆದಿತ್ತು. ಅವು ಕಲಿತನದ ಲಕ್ಷಣಗಳೆಂಬ ಭಾವನೆಗೆ ಜೋತುಬಿದ್ದು ಕಿಚ್ಚು, ಅರಿವು, ದಾನ, ಅಭಿಮಾನ, ರಕ್ಷಣೆ, ಧರ್ಮ, ಸಾಧನೆ, ಸತ್ಯಗುಣ, ಶೌಚಗುಣಗಳು ಮೇಳ್ವೆಸಿದವು. ವೀರನ ಗುಣಗಳು ಮಣ್ಣಿನಿಂದ ದಕ್ಕುತ್ತಿದ್ದವು. ‘ಸತ್ತರೆ ಸ್ವರ್ಗ – ಗೆದ್ದರೆ ರಾಜ್ಯ’ ವೆಂಬ ಸಿದ್ಧಾಂತಕ್ಕೆ ಒಳಗಾದ ಎಲ್ಲಾ ನಾಯಕನ ಪಾಡು ಅಲೌಕಿಕತೆಯಲ್ಲಿ ಆರಾಧನೆಗೆ ಆಸ್ಪದವಾಯಿತು.

ಬೇಡರು ಸ್ಥಳೀಯ ವ್ಯಕ್ತಿಯನ್ನೇ ಆರಾಧಿಸುವುದು ಹೆಚ್ಚು. ಅಭಿಮಾನವೋ ಅಥವಾ ಪ್ರಾದೇಶಿಕ ಭಿನ್ನತೆಯೋ ಗೊತ್ತಿಲ್ಲ. ವಾಲ್ಮೀಕಿ, ಬೇಡರಕಣ್ಣಪ್ಪ, ಶಬರಿ, ಏಕಲವ್ಯ ಮೊದಲಾದವರನ್ನು ಸ್ಮರಿಸುತ್ತಾರೆಯೇ ಹೊರತು ಆರಾಧಿಸುವಲ್ಲಿ ಉದಾಸೀನತೆಯಿದೆ. ಪವಿತ್ರಸ್ಥಳ, ವ್ಯಕ್ತಿ, ಪ್ರಸಂಗದಲ್ಲಿ ಪಾಲ್ಗೊಂಡು, ರಕ್ಷಿಸಿ ಕಾಪಾಡಿದ ವೀರನ ಮನೋಭಾವವು ಶ್ಲಾಘನೀಯ. ಆದಿಯಲ್ಲಿ ಇದನ್ನು ಧರ್ಮಕೇಂದ್ರಿತ ನೆಲೆಯಲ್ಲಿ ಗ್ರಹಿಸಿದ್ದರಿಂದ ಕ್ರಮೇಣ ಅದು ಅಧ್ಯಾತ್ಮಿಕ ಸ್ವರೂಪಕ್ಕೆ ಬಂದಿತು. ಒಬ್ಬ ವ್ಯಕ್ತಿಯ ತ್ಯಾಗವು ಅವನ ಗುಣ – ವಿಶೇಷತೆಯನ್ನು ಇಮ್ಮಡಿಗೊಳಿಸಿದೆ. ಸತ್ಯ, ಪ್ರಾಮಾಣಿಕತೆ, ಭಾಷೆ ತಪ್ಪಿಲ್ಲದವರ ಪಾಡು ಸಹಾ ವೀರತ್ವದ ಸಂಕೇತ. ಶೌಚ, ವೀರಶ್ರೀ ಗುಣಗಳಿಗೆ ನಾವು ಮಹಾಭಾರತದ ಕರ್ಣ – ಅರ್ಜುನರನ್ನು ಉಲ್ಲೇಖಿಸುತ್ತೇವೆ. ಪೌರಾಣಿಕ ವೀರರ ಆರಾಧನೆಗಿಂತ ಚಾರಿತ್ರಿಕ ಕಾಲಘಟ್ಟದ ಜನಪದ ವೀರರ ಚಾರಿತ್ರಿಕ ಸಂಗತಿಗಳು ತೀರಾ ರೋಮಾಂಚನಕಾರಿಯಾಗಿವೆ.

ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಆತ್ಮಬಲಿದಾನವು ಧಾರ್ಮಿಕ ಮತ್ತು ಲೌಕಿಕ ಕ್ಷೇತ್ರಗಳೆರಡಲ್ಲೂ ಚಾಲ್ತಿಯಲ್ಲಿತ್ತು. ಹೆಣ್ಣಿನ ಮಾನರಕ್ಷಣೆ ಕಾಪಾಡಿ ವೀರತ್ವ ಮೆರೆದವರು ಒಂದೆಡೆಯಾದರೆ, ಗೋಗ್ರಹಣ ಮಾಡಿದ್ದು, ಗೋರಕ್ಷಣೆ – ಕಾಳಗ ನಡೆದದ್ದು ಸ್ಮರಣೀಯ. ಮೇಲೆ ತಿಳಿಸಿರುವಂತೆ ಆತ್ಮ ಬಲಿದಾನದಲ್ಲಿ ಧಾರ್ಮಿಕ ಮತ್ತು ಲೌಕಿಕವೆಂಬ ಪ್ರಕಾರಗಳಿವೆ. ಇವುಗಳಲ್ಲಿ ಪುನಃಜೈನ ಮತ್ತು ಹಿಂದೂಧರ್ಮಗಳ ಲಕ್ಷಣಗಳು ಬೇರೆ ಬೇರೆ. ಧಾರ್ಮಿಕ ಬಲಿದಾನವು ಆದರ್ಶ ಮತ್ತು ಮೌಲ್ಯ ಪಾಲನೆಗಳ ಸಾರ್ಥಕ ಬದುಕಿಗೆ ಅಸ್ಪದವಾದರೆ; ಲೌಕಿಕವು ರಾಜಪ್ರಭುತ್ವದ ಆದೇಶದಂತೆ ಪಾಲಿಸಲಾಗುತ್ತಿತ್ತು. ಬೇಡರಲ್ಲಿ ಮೊದಲನೆಯ ಅಂಶ ಪ್ರಚಲಿತದಲ್ಲಿದೆ. ಎರಡನೇಯ ಪ್ರಕಾರಕ್ಕೆ ರಾಜನ ಅನುಮತಿ ಯಿದ್ದರೂ ಇಲ್ಲದಿದ್ದರೂ ಕೃತ್ಯಗಳು ಸಂಭವಿಸುತ್ತಲೇ ಇದ್ದವು. ಬೇಡರು ಅಪಾರ ಸಂಖ್ಯೆಯಲ್ಲಿ ಮರಣಹೊಂದಿ ರಾಜಮನ್ನಣೆಗಳಿಸಿದರೂ ಅವರ ವಿವರ ಲಭ್ಯವಿಲ್ಲ. ಹೀಗೆ ಲೌಕಿಕ ಕ್ಷೇತ್ರದಲ್ಲಿ ಜೊಳವಳಿ, ವೇಳೆವಾಳಿ (ಸ್ತ್ರೀ), ಸಹಗಮನ, ಅನುಗಮನ, ವೇಳೆ ಉಂಳಿ (ಪುರುಷ) ವೆಂಕವಾಳಿ, ಕಿಳ್ಗುಂಟೆ ಎಂಬ ಸಾವಿನ ಪ್ರಭೇದಗಳು ರಾಜಪ್ರಭುತ್ವದಲ್ಲಿದ್ದವು.

ಮೇಲಿನಂತೆ ಸಾವಿನ ಪ್ರಕಾರಗಳಲ್ಲಿ ಬೇಡರು ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ವಿರಳ. ಅಸ್ಪಷ್ಟ ಹಲವು ಉಲ್ಲೇಖಗಳು ಈ ಬಗ್ಗೆ ಬೆಳಕು ಚೆಲ್ಲುತ್ತವೆ. ಆದರೆ ತಮ್ಮ ಸಂಸ್ಕೃತಿಯ ಹಿತದೃಷ್ಟಿಯಿಂದ ತ್ಯಾಗ ಮಾಡಿರುವುದು ಸ್ಪಷ್ಟ. ಬೇಟೆ, ಪಶುಪಾಲನೆ ಕ್ಷೇತ್ರಗಳಲ್ಲಿ ಬೇಡ ವೀರರು ರಕ್ಷಣೆ ಸಾಧಿಸಿದ್ದು ಗಮನಾರ್ಹ. ಹುಲಿಯೊಡನೆ, ಶತೃಗಳೊಡನೆ ಹೋರಾಡಿ ಮಡಿದು, ಅವನ ಸಮಾಧಿಗೆ ಪೂಜಾರ್ಹ ಸ್ಥಾನ ತುಂಬಿರುವುದು ಉಲ್ಲೇಖನೀಯ. ‘ಅಸಹಜ’ ಸಾವು ದೈವತ್ವಕ್ಕೇರುವ ವ್ಯಕ್ತಿಗೆ ಹಾಸುಹೊಕ್ಕಾಗಿದ್ದ ಕಾಲವು ಜನಮನ್ನಣೆಗಳಿಸಿತ್ತೆಂದು ಒತ್ತಿಹೇಳುವಂತಿಲ್ಲ!

ದಾಯಾದಿಗಳ, ತನ್ನ ಬುಡಕಟ್ಟಿನ ರಕ್ಷಣೆ, ಸಂಸ್ಕೃತಿಯ ವೃದ್ಧಿಗಾಗಿ ನಡೆಸಿದ ಹೋರಾಟದ, ಪರಾಕ್ರಮ, ಶೌರ್ಯ ಸಾಹಸಗಳ ಸಂಕೇತವು ಆರಾಧನೆಯ ಇನ್ನೊಂದು ಮುಖ. ಬೇಡನಾಯಕ ವೀರರ ಆರಾಧನೆಯು ಸಾಂಸ್ಕೃತಿಕ ಚರಿತ್ರೆಯ ಪರಧಿಯಲ್ಲಿಯೇ ಅನಾವರಣಗೊಂಡಿದೆ. ತಲೆಮಾರುಗಳಿಂದ ತಲೆಮಾರಿಗೆ ರವಾನೆಯಾಗುವ ಆಧ್ಯಾತ್ಮಿಕ ಸರಕು ಒಂದು ಹಂತಕ್ಕೆ ಜನಪದರಲ್ಲಿ ತಟಸ್ಥಗೊಳ್ಳುವ ಔಚಿತ್ಯವು ಸಂಭವಿಸುವುದು ವಿಚಿತ್ರ; ಇದು ಅಷ್ಟೇ ಪರಿಣಾಮಕಾರಿ ಅಂಶ.

. ಆರಾಧನಾ ಕ್ಷೇತ್ರಗಳು

‘ಕ್ಷೇತ್ರ’ವು ಭೌಗೋಳಿಕವಾಗಿ, ನದಿ ಬೆಟ್ಟ ಸುಂದರ ಪರಿಸರದಲ್ಲಿ ನಿರ್ಮಾಣವಾಗಿರುತ್ತದೆ. ಒಂದು ಸ್ಥಳ, ಕ್ಷೇತ್ರವೆಂದು ಕರೆಸಿಕೊಳ್ಳುವಲ್ಲಿ ಅಲ್ಲಿ ನಡೆದ ಚಾರಿತ್ರಿಕ, ಸಾಂಸ್ಕೃತಿಕ ಘಟನೆಗಳ ಪ್ರಭಾವದ ಮೇಲೆಯೇ ಎಂದು ಹೇಳಬಹುದು. ಜಾತ್ರೆ, ಯಾತ್ರೆ ಮತ್ತು ತೀರ್ಥಯಾತ್ರೆಗಳ ವ್ಯಾಪ್ತಿಯನ್ನು ಕ್ಷೇತ್ರ ಹೊಂದಿರುತ್ತದೆ. ಈ ಮಟ್ಟಿಗೆ ಪ್ರಗತಿ ಹೊಂದಿರಬೇಕಾದರೆ ಅಷ್ಟಕ್ಕೆ ಇಲ್ಲಿನ ಪವಾಡವನ್ನು ಬಿಂಬಿಸುವ ಸಂಗತಿಗಳಾವುವು ಎಂಬ ಅವಲೋಕನವು ಮುಖ್ಯವೆನಿಸುತ್ತದೆ. ‘ಕ್ಷೇತ್ರ’ ಪುರಾಣ, ಪ್ರತೀತಿ, ಆಧ್ಯಾತ್ಮಿಕ ನಂಬಿಕೆಗಳಿಂದ ಮಾನ್ಯವಾಗಿರುವುದುಂಟು. ಜಾತ್ರೆ, ಪದ್ಧತಿ, ಆಚಾರಣೆ, ಸಂಪ್ರದಾಯಗಳು ಅವರ ಮೆರುಗನ್ನು ಕಾಲಕಾಲಕ್ಕೆ ಇಮ್ಮಡಿಗೊಳಿಸುವಲ್ಲಿ ಅನುಮಾನವಿಲ್ಲ. ಬೇಡನಾಯಕ ವೀರರ ಆರಾಧನಾ ಕ್ಷೇತ್ರಗಳನ್ನು ಗುರುತಿಸುವಾಗ ಕರ್ನಾಟಕದ ಹೊರಗಿರುವ ಆರಾಧನೆ ಕ್ಷೇತ್ರಗಳು ಮತ್ತು ಕರ್ನಾಟಕದಲ್ಲಿನ ಆರಾಧನಾ ಕ್ಷೇತ್ರಗಳೆಂದು ವಿಂಗಡಿಸಲಾಗಿದೆ. ಆ ಮೂಲಕ ಪ್ರಾಚೀನ ಕಾಲ, ಮಧ್ಯ ಕಾಲ ಮತ್ತು ಆಧುನಿಕ ಕಾಲಘಟ್ಟದ ಕ್ಷೇತ್ರಗಳನ್ನು ಪರಿಚಯಿಸುತ್ತಾ ಬೇಡ ವೀರರ ದೇವಾಲಯಗಳ ಅವಲೋಕನವು ಈ ವ್ಯಾಪ್ತಿಯಲ್ಲಿದೆ. ಪ್ರಾಚೀನ ಕಾಲದ ಕ್ಷೇತ್ರಗಳು ಪುರಾಣ, ದಂತಕಥೆಗಳಿಂದ ಜನಾರ್ಕಷಣೆಗೊಂಡಿವೆ. ಮಧ್ಯಕಾಲೀನ ಕ್ಷೇತ್ರಗಳು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿದ್ದು, ಆಧುನಿಕ ಕ್ಷೇತ್ರಗಳು ಆಧ್ಯಾತ್ಮಿಕ ಕ್ಷೇತ್ರಗಳಾಗಿ ಬಲಸಂವರ್ಧನೆ ಗೊಂಡಿರುವುದು ಗಮನಾರ್ಹ.

ಬೇಟೆಯೊಂದಿಗೆ ಜೀವಿಸತೊಡಗಿದ ಬೇಡರ ನೆಲೆ ಕಾಡು. ನಿಸರ್ಗ ರಮಣೀಯ ಸ್ಥಳಗಳಿಗೆ ಇವರೇ ಒಡೆಯರು. ಸಸ್ಯ ಸಂಪತ್ತು. ವನ್ಯ ಸಂಪತ್ತು ಇವರಿಗೆ ದಕ್ಕುತ್ತಿದ್ದು, ಗುಹೆ, ಗುಂಡಾರ, ಕಲ್ಲಾಸರೆಗಳು ಆವಾಸ ನೆಲೆಗಳಾಗಿದ್ದವು. ಹೀಗಿರುವಾಗಲೂ ಬೆಟ್ಟ, ಗುಡ್ಡ, ನದಿ, ಹಳ್ಳಿ – ಕೊಳ್ಳಗಳನ್ನು ಆರಾಧಿಸುವ ಮನೋಭಾವ ಉದಯಿಸಿರಬೇಕು. ಕಾಡಿನಿಂದ ನಾಡಿಗೆ ಪದಾರ್ಪಣೆ ಮಾಡಿದ ಬೇಡನಿಗೆ ಕಾಡಿನ ಕ್ಷೇತ್ರಗಳು ಪಥ್ಯವೆನಿಸದೆ ಪವಿತ್ರವಾಗಿರುವುದು ಇಂದಿಗೂ ನೋಡಬಹುದು. ಇಂಥ ಕ್ಷೇತ್ರಗಳು ಸಾಮಾನ್ಯ ಹಟ್ಟಿಗಳೇ ಆಗಿವೆ. ನಗರ, ಪಟ್ಟಣಗಳನ್ನು ಇಲ್ಲಿ ಕ್ಷೇತ್ರವೆಂದು, ಬೇಡರು ನೆಲಸಿದ್ದರೆಂದು ಹೇಳುವುದು ಕಷ್ಟ. ಪ್ರಾದೇಶಿಕವಾಗಿ ಇಂಥ ಕ್ಷೇತ್ರಗಳು ಎಲೆಮರೆಕಾಯಿಯಂತಿವೆ.

. ಆರಾಧನಾ ಕ್ಷೇತ್ರಗಳ ತಾತ್ವಿಕ ಚಿಂತನೆ

ಮಾನವ ತನ್ನ ಇಚ್ಚೆ ಮತ್ತು ಭಕ್ತಿಯ ಸಂಕೇತಕ್ಕನುಗುಣವಾಗಿ ವಾಸಿಸುವ ನೆಲೆಯಲ್ಲಿಯೇ ಪೂಜಿಸುವ ಕಲೆಯನ್ನು ಸ್ಥಾಪಿಸಿಕೊಂಡ. ಕಾಲಕಾಲಕ್ಕೆ ಪರಿವರ್ತನೆ ವಲಸೆ, ಸಂದಿಗ್ಧ ಪರಿಸ್ಥಿತಿಗಳಲ್ಲಿ ಪ್ರಕೃತಿ ಆರಾಧನೆಯು ರೂಢಿಗೆ ಬಂತು. ಹೀಗೆ ವ್ಯಕ್ತಿಗಳು ತಮ್ಮ ಅಭೂತಪೂರ್ವ ಭಾವನೆಗಳನ್ನು ಪ್ರಕೃತಿಯೊಂದಿಗೆ ಹಂಚಿಕೊಂಡಿದ್ದು ಸ್ಮರಣೀಯ.

ಕರ್ನಾಟಕದ ಮಟ್ಟಿಗ ಚಿಂತಿಸುವಾಗ ಸತ್ತವ್ಯಕ್ತಿಗೆ ಸಮಾಜದಲ್ಲಿ ಗೌರವಕೊಟ್ಟು ಆರಾಧಿಸುವ ಪ್ರಕ್ರಿಯೆಯಿದೆ. ಮತಧರ್ಮ, ಜಾತಿಗಳ ಪರಧಿಯೊಳಗೆ ಆರಾಧನಾ ಸ್ಥಳಗಳು ಕಂಡು ಬರುತ್ತವೆ. ಸಾಂಕೇತಿಕವಾಗಿ ವಿವಿಧ ಸಮುದಾಯಗಳು ಆರಾಧನಾ ಕಟ್ಟಡಗಳನ್ನು ಕಟ್ಟಿಕೊಂಡಿವೆ. ದೇವಾಲಯ, ಮಠ, ಮಂದಿರ, ಸಮಾಧಿ, ಗದ್ದುಗೆ, ಚರ್ಚು, ಮಸೀದಿ, ಗುರುದ್ವಾರ, ಬಸದಿ, ಚೈತ್ಯಾಲಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಈ ಬಗೆಯ ಆಧ್ಯಾತ್ಮ ಕುರುಹುಗಳನ್ನು ನೋಡಬಹುದು.

ಬೌದ್ಧ ಧರ್ಮದ ಕುರುಹುಗಳು ಪ್ರಾಚೀನ ಕರ್ನಾಟಕದಲ್ಲಿದ್ದದ್ದು ಉಲ್ಲೇಖನೀಯ. ಬೌದ್ಧ ವಿಹಾರ (ಚೈತ್ಯಾಲಯ) ಗಳು ಕರ್ನಾಟಕದಲ್ಲಿದ್ದ ಬಗ್ಗೆ ಉತ್ತಮ ಉದಾಹರಣೆಯೆಂದರೆ; ಟಿಬೆಟ್‌ಯನ್ನರು ನಿರಾಶ್ರಿತರಾಗಿ ಬಂದು ವಸತಿ ನೆಲೆಗಳನ್ನು ಕಟ್ಟಿಕೊಂಡು ಬೌದ್ಧ ವಿಹಾರಗಳನ್ನು ನಿರ್ಮಿಸಿಕೊಂಡಿರುವರು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ವಿಹಾರ ಮನಮೋಹಕವಾಗಿದೆ. ಐಹೊಳೆಯ ಚೈತ್ಯಾಲಯ ಪ್ರಾಚೀನ ಕುರುಹು. ಹೀಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.

ಜೈನಧರ್ಮದ ನೆಲೆಗಳು ಕರ್ನಾಟಕಾದ್ಯಂತ ಕಂಡುಬಂದಿದೆ. ಜೈನ ಬಸದಿಗಳೆಂದರೆ ಬೆಳಗಾವಿಯ ಕಮಲ ಬಸದಿ, ಹುಂಚದ ಪಂಚಬಸದಿ, ಮೂಡಬಿದರೆಯ ಸಾವಿರಕಂಬ ಬಸದಿ, ಕಾರ್ಕಳದ ಚತುರ್ಮುಖ ಬಸದಿ, ಲಕ್ಷ್ಮೇಶ್ವರ ಶಂಖಬಸದಿ ಹಾಗೂ ಐಹೊಳೆಯ ವೇಣುಬಸದಿ ಗಮನಾರ್ಹವಾದವು. ಶೈತಾಂಬರ ಜೈನರು ತಮ್ಮ ವಾಸಸ್ಥಳಗಳಲ್ಲಿ ತೀರ್ಥಂಕರರ ಬಸದಿಗಳನ್ನು ಕಟ್ಟಿಕೊಂಡಿರುವುದು ಇತ್ತೀಚಿಗೆ ಕಾಣುತ್ತೇವೆ.

ಕರ್ನಾಟಕದಲ್ಲಿ ತೀರ್ಥಕ್ಷೇತ್ರ ಮತ್ತು ಪ್ರಸಿದ್ಧ ದೇವಾಲಯಗಳಿರುವುದು ನಮ್ಮ ಹೆಮ್ಮೆ, ಹಂಪೆಯ ವಿರೂಪಾಕ್ಷ, ಗೋರ್ಕಣದ ಮಹಾಬಲೇಶ್ವರ, ಉಳವಿಯ ಚನ್ನಬಸವೇಶ್ವರ, ಮೇಲುಕೋಟೆಯ ಚೆಲುವನಾರಾಯಣ, ಘಾಟಿಯ ಸುಬ್ರಹ್ಮಣ್ಯ, ಧರ್ಮಸ್ಥಳದ ಮಂಜುನಾಥ, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ನಂಜುಂಡೇಶ್ವರ, ಮುರುಡೇಶ್ವರದ ಮುರುಡೇಶ್ವರ, ಕೊಲ್ಲೂರಿನ ಮುಕಾಂಬಿಕೆ, ಶೃಂಗೇರಿಯ ಶಾರದಾಂಬೆ, ಹೊರನಾಡಿನ ಅನ್ನಪೂರ್ಣೇಶ್ವರಿ, ದೇವಸೂಗೂರಿನ ಅಮೇಶ್ವರ, ಸವದತ್ತಿಯ ಎಲ್ಲಮ್ಮ, ಉಚ್ಚಂಗಿಯ ಉಚ್ಚಂಗೆಮ್ಮ, ಮೈಲಾರದ ಮೈರಾಲಿಂಗ, ಕಟೀಲಿನ ದುರ್ಗಾಪರಮೇಶ್ವರಿ, ಉಡುಪಿಯ ಕೃಷ್ಣ, ಆದಿಚುಂಚನಗಿರಿಯ ಭೈರವೇಶ್ವರ, ಹುಲುಗಿಯ ಹುಲಿಗೆಮ್ಮ, ಗುಲಬರ್ಗದ ಶರಣಬಸವೇಶ್ವರ, ಶಿರಸಿಯ ಮಾರಿಕಾಂಬೆ ಪ್ರಮುಖ ದೇವಾಲಯಗಳಾಗಿವೆ.

ಮಹಮ್ಮದಿಯರು ತಾವು ವಾಸಿಸುವ ಸ್ಥಳಗಳಲ್ಲಿ ಮಸೀದಿಗಳನ್ನು ಕಟ್ಟಿಕೊಂಡು ಪ್ರಾರ್ಥನೆ ನಡೆಸುವುದುಂಟು. ನಂತರ ಸಮಾಧಿ (ದರ್ಗಾ) ಗಳಿಗೆ ಪೂಜಿಸುತ್ತಾರೆ. ಉದಾ: ಗುಲಬಗೆರ್ಯ ಬಂದೇನವಾಜ, ಬಾಬಾ ಬುಡನಗಿರಿಯ ದಾದಾಹಯತ್, ಲಕ್ಷ್ಮೇಶ್ವರ ದಾದಪೀರ ಅಳಂದೆಯ ಲಾಡ್ಲೆಪೀರ, ಕೌತಾಳಮ್ಮಿನ ಖಾದರಲಿಂಗ, ಬೆಂಗಳೂರಿನ ಮಸ್ತಾನಸೂಬ್ ದರ್ಗಾಗಳು ಪ್ರಮುಖವಾಗಿವೆ.

ಕ್ರೈಸ್ತರು ಕರ್ನಾಟಕದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದಕ್ಕೆ ಚರ್ಚುಗಳೇ ಕಾರಣ. ಬೆಂಗಳೂರಿನ ಸಂತಮೇರಿ, ಸಂತಮಾರ್ಕ್, ಸಂತೆಜೋಸೆಫ್, ಮೈಸೂರಿನ ಸಂತ ಫಿಲೋಮಿನಾ ಚರ್ಚ್, ಮಂಗಳೂರಿನ ಸಂತಮಿಲ್‌ಗ್ರೇಶ್, ಅಲೋಶಿಯಸ್, ಹರಿಹರದ ಆರೋಗ್ಯಮಾತೆ, ಬಳ್ಳಾರಿಯ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚುಗಳು ಪ್ರಮುಖವೆನಿಸಿವೆ. ಕ್ರೈಸ್ತರಂತೆ ಸಿಖ್ಖರು ಗುರುದ್ವಾರವನ್ನು ಬೀದರ್‌ನಲ್ಲಿ ಸ್ಥಾಪಿಸಿಕೊಂಡಿರುವುದು ಗುರುನಾನಕ್ ಸ್ಮರಣೆಗಾಗಿ. ಸಿಖ್ಖರು ಪಾಂಚ್‌ಪ್ಯಾರೆ ಎಂದು ಗೌರವಿಸುವ ೫ ಗುರುದ್ವಾರಗಳಲ್ಲಿ ಇದೂ ಒಂದಾಗಿದೆ.

ಮಠ – ಪೀಠಗಳನ್ನು ವಿವಿಧ ಸಮುದಾಯದವರು ಸ್ಥಾಪಿಸಿಕೊಂಡಿರುವುದುಂಟು. ಇವುಗಳಲ್ಲಿ ಹಲವು ಪ್ರಾಚೀನ ಪರಂಪರೆ ಪಡೆದಿದ್ದರೆ, ಕೆಲವು ಆಧುನಿಕವಾಗಿ ಸ್ಥಾಪನೆಗೊಂಡಿರುವುದುಂಟು. ಲಿಂಗಾಯುತರು, ಬ್ರಾಹ್ಮಣರು, ಒಕ್ಕಲಿಗರು ಹೀಗೆ ಮೇಲ್ವರ್ಗದವರು, ಆರಂಭದಲ್ಲಿ ಮಠಗಳನ್ನು ಹೊಂದಿದ್ದರು. ಲಿಂಗಾಯಿತರ ಮಠಗಳೆಂದರೆ; ಆದಿಚುಂಚನಗಿರಿಮಠ, ತುಮಕೂರಿನ ಸಿದ್ಧಗಂಗಾಮಠ, ಚಿತ್ರದುರ್ಗದ ಮುರುಘಾಮಠ, ಸಿರಿಗೆರಿಯ ತರಳಬಾಳಮಠ, ಡಂಬಳದ ತೋಂಟದಾರ್ಯ ಮಠ, ಹುಬ್ಬಳ್ಳಿ ಮೂರುಸಾವಿರ ಮಠ, ಮೈಸೂರಿನ ಸುತ್ತೂರು ಮಠ, ಇಳಕಲ್ಲಿನ ಚಿತ್ತರಗಿ ಮಹಾಂತಸ್ವಾಮಿ ಮಠ, ಭಾಲ್ಕಿಯ ಪಟ್ಟದೇವರ ಮಠ, ಕಾಶಿಯ ಜಂಗಮವಾಡಿ ಮಠಗಳು ಪ್ರಮುಖವಾಗಿವೆ. ಪಂಚಚಾರ್ಯರ ಬಾಳೆಹೊನ್ನೂರಿನ ರಂಭಾಪುರಿ ಮಠ ಮತ್ತು ಉಜ್ಜೀನಿ ಮರುಳಸಿದ್ಧೇಶ್ವರ ಮಠ ಗಮನಾರ್ಹವಾಗಿವೆ. ಶೃಂಗೇರಿಯ ಶಂಕರಮಠ ಸ್ಮಾರ್ತ ಬ್ರಾಹ್ಮಣರದ್ದು, ಉಡುಪಿಯಲ್ಲಿರುವ ಪೇಜಾವರ, ಪುತ್ತಿಗೆ, ಫಲಿಯಾರು, ಆದಮಾರು, ಶಿಗ್ಗರು, ಸೋದೆ, ಕಾಣಿಯಾರು ಇತರ ಅಷ್ಟಮಠಗಳು ಮಾಧ್ವರ ಮಠಗಳಾಗಿವೆ. ಮಾಧ್ವ ಸಂಪ್ರದಾಯದಲ್ಲಿ ರಾಘವೇಂದ್ರ ಮಠ ಉತ್ತಾರಾಧಿಮಠ, ವ್ಯಾಸರಾಯ ಮಠ ಮೊದಲಾದವುಗಳಿವೆ. ಶ್ರೀವೈಷ್ಣವರು ಪರಕಾಲಮಠ (ಮೈಸೂರು) ಯತಿರಾಜಮಠ (ಮೇಲುಕೋಟೆ) ಗಳನ್ನು ಹೊಂದಿದ್ದಾರೆ. ಹುಂಚ, ಸಿಂಗನಗದ್ದೆ (ನರಸಿಂಹರಾಜಪುರ), ಮೂಡಬಿದರೆ, ಶ್ರವಣಬೆಳಗೊಳ, ಸೋದೆ ಹಾಗೂ ಕಾರ್ಕಳಗಳಲ್ಲಿ ದಿಗಂಬರ ಜೈನ ಮಠಗಳಿವೆ.

ಕಳೆದ ದಶಕಗಳಲ್ಲಿ ದೇವಾಂಗ, ಕುರುಬ, ಬೇಡ, ಲಂಬಾಣಿ ಸಮುದಾಯದ ಏಳು ಮಠಗಳನ್ನು ಸ್ಥಾಪಿಸಿಕೊಂಡಿರುವರು. ಕಾಗಿನೆಲೆ (ಕನಕಗುರುಪೀಠ) ಮಠ ಕುರುಬರದು. ಹಂಪಿಯಲ್ಲಿ ದೇವಾಂಗಮಠ, ರಾಜಹಳ್ಳಿಯಲ್ಲಿ ವಾಲ್ಮೀಕಿ ಮಠಗಳಂತೆ ಲಂಬಾಣಿಗರ ಸೇವಾಲಾಲ್ ಮಠಗಳಿವೆ. ಇಂದಿಗೂ ಹೊಸಮಠ ಮತ್ತು ಗುರುಗಳ ನೇಮಕ ನಡೆಯುವುದುಂಟು.

ವಿನೂತನ ಬೆಳವಣಿಗೆಯಿಂದ ಧಾರ್ಮಿಕ ನೆಲೆಗಳಿಗೆ ಯಾತ್ರೆ ಹೋಗುವ ಪರಿಪಾಠದಿಂದ ಜಾತ್ರೆಗಳು ಜರುಗುತ್ತವೆ. ಬೇಡರ ನೆಲೆಗಳು ವಿರಳವಾದರೂ ಪ್ರಾದೇಶಿಕ ಸ್ಥಳಗಳ ಮಹತ್ವವನ್ನು ಅಲ್ಲಗೆಳೆಯುವಂತಿಲ್ಲ.


[1] ನೋಡಿ : ವಾಲ್ಮೀಕಿ ಕಿರಣ (ಸ್ಮರಣ ಸಂಚಿಕೆ) ೧೯೯೮, ಪು. ೫೨-೫೫