.. ವೀರರ (ತ್ವ) ಪರಿಕಲ್ಪನೆ

ಒಂದು ಸಮುದಾಯದಲ್ಲಿ ಮಾನವೀಯ ಮೌಲ್ಯಗಳಿಗೆ ಅನುಗುಣವಾಗಿ ವ್ಯಕ್ತಿಯನ್ನು ಗೌರವಿಸಲಾಗುತ್ತದೆ. ಅವು ಅವನ ಗುಣ, ನಡವಳಿಕೆ, ಸಾಮರ್ಥ್ಯ, ವರ್ತನೆ, ಭೌತಿಕತೆ ಹಾಗೂ ಬೌದ್ಧಿಕತೆಯ ಸಂಕೇತವಾಗಿರುತ್ತವೆ. ಇತರರಿಗಿಂತ ಭಿನ್ನವಾದ ಸಾಧನೆ ಅಥವಾ ಸಾಹಸಮಯ ಕಾರ್ಯಗಳನ್ನು ಮಾಡಿದವರಿಗೆ ವೀರತ್ವದ ಪಟ್ಟ ಕಟ್ಟುತ್ತಾರೆ.

ಎಡರು – ತೊಡರುಗಳಿಗೆ ಎದೆಗುಂದದೆ ಕೈಗೊಂಡ ಕಾರ್ಯದ ಸಂಕಲ್ಪವನ್ನು ಉತ್ಸಾಹದಿಂದ ಸಾಧಿಸಿ ಸತ್ತವನನ್ನು ‘ವೀರ’ನೆನ್ನುತ್ತಾರೆ. ವೀರತ್ವವೆಂಬುದು ಉತ್ತಮ ಪ್ರಕೃತಿಯವರ ಉದಾತ್ತ ಸ್ವಭಾವ. ಅದನ್ನು ಪರೋಪಕಾರ, ಭಕ್ತಿ, ದಯೆ, ದಾನ, ತ್ಯಾಗ ಪ್ರೇಮ ಹೀಗೆ ಯಾವ ಸ್ವಭಾವದಲ್ಲಾದರೂ ಗುರುತಿಸಬಹುದು. ಭಕ್ತಿಯಲ್ಲಿ ಬೇಡರಕಣ್ಣಪ್ಪ, ತ್ಯಾಗ, ದಾನಗಳಲ್ಲಿ ಕರ್ಣ, ಸತ್ಯದಲ್ಲಿ ಹರಿಶ್ಚಂದ್ರ! ಪ್ರೇಮದಲ್ಲಿ ಕೃಷ್ಣ, ಯುದ್ಧದಲ್ಲಿ ಅರ್ಜುನ ಹೀಗೆ ಹಲವು ಬಗೆಯ ವೀರರನ್ನು ಗುರುತಿಸಬಹುದು.

ಪುರಾಣ ಮತ್ತು ಇತಿಹಾಸದಲ್ಲಿ ಸಾಹಸಮಯ ವ್ಯಕ್ತಿಗಳನ್ನು, ಮಹಾನಾಯಕ, ವೀರ, ಶೂರ, ಧೀರ, ಧೀರೋದಾತ್ತ ಪರಾಕ್ರಮಿ ಎಂದು ಗುರುತಿಸಿರುವುದುಂಟು. ಇಂಥ ವೀರರ ಜೀವನ ಚಿತ್ರಣ ಆ ಕಾಲದ ಸಾಂಸ್ಕೃತಿಕ ಚರಿತ್ರೆಯಲ್ಲಿ ದಾಖಲಾಗಿದೆ. ಇಂದು ಬದಲಾವಣೆಗೊಳ್ಳುತ್ತಿರುವ ಜನಸಮುದಾಯಗಳಲ್ಲಿ ವೀರರ ಲಕ್ಷಣಗಳು ಸಹಾ ಬದಲಾಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೂಜೆ, ನಿರಂಕುಶ ಅಥವಾ ರಾಜಪ್ರಭುತ್ವದಲ್ಲಿ ರಾಜನೇ ನಾಯಕ. ಅವನನ್ನು ವೀರನೆಂದು ಪರಿಗಣಿಸಲಾಗಿದೆ. ಜನಸಮುದಾಯದ ಗಣ್ಯವ್ಯಕ್ತಿ, ಮುಖಂಡನಿಗೂ ಆ ರೀತಿ ಕರೆಯಲಾಗಿದೆ. ವೀರನನ್ನು Hero ಗಿಂತಲೂ Leader ಎಂಬ ಪದದ ಮೂಲಕ ಬುಡಕಟ್ಟು ಜನರು ಗುರುತಿಸುತ್ತಾರೆ.

ವೀರತ್ವದ ಕಲ್ಪನೆ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ವ್ಯಕ್ತಿಯ ಆರಾಧನೆಗೆ ಇದು ಪೂರಕ ಎಂದರೂ ತಪ್ಪಲ್ಲ. ಅಸಾಮಾನ್ಯ ಸಾಧನೆ ತೋರಿ ವೀರನೆನಿಸಿದವನು, ಕೆಲವು ದಿನಗಳಲ್ಲಿ ಆಧ್ಯಾತ್ಮ ಪುರುಷನಾಗಲೂಬಹುದು. ಇಂತಹ ಲಕ್ಷಣ ಬುಡಕಟ್ಟು ವೀರರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಜನಪದ ಪರಿವಲಯದಲ್ಲಿ ಇಂಥಾ ಅನೇಕ ವೀರರನ್ನು ಕುರಿತು ವಿವರಗಳು ವರ್ಣನೆಗಳು ಹೇರಳವಾಗಿ ದೊರೆಯುತ್ತವೆ.

ಲಿಖಿತ ಚರಿತ್ರೆಯಲ್ಲಿ ಕಂಡು ಬರುವ ವೀರನ ಆಸೆ – ಆಕಾಂಕ್ಷೆಗಳಿಗೂ ಮೌಖಿಕ ಪರಂಪರೆ ಕಟ್ಟಿಕೊಡುವ ವೀರನ ಆಶಯಗಳಿಗೂ ಭಿನ್ನತೆಗಳಿವೆ. ಉದಾ: ನಮ್ಮ ಜನಪದ ಸಾಹಿತ್ಯದಲ್ಲಿ ಕಂಡು ಬರುವ ಕುಮಾರರಾಮನ ವೀರತ್ವವನ್ನು ಗುರುತಿಸುವುದು ಅವನು ಪರದಾರ ಸೋದರತ್ವವನ್ನು ಪಾಲಿಸಿದನೆಂಬ ಕಾರಣಕ್ಕಾಗಿ.

ಜಗತ್ತಿನ ಚರಿತ್ರೆಯಲ್ಲಿ ವೀರ ಪರಂಪರೆ ರೋಮಾಂಚನ ಸಂಗತಿಯಾಗಿ ದಾಖಲಾಗಿದೆ. ಗ್ರೀಸ್‌ನ ಐತಿಹಾಸಿಕ ಚಕ್ರವರ್ತಿ ಸೀಜರ್ ಫ್ರೆಡರಿಕ್‌ನಿಗೆ ಜಗತ್ತನ್ನೇ ಜೈಸಬೇಕೆಂಬ ಹಂಬಲವಿತ್ತು. ಪರ್ಶಿಯಾದ ಮಹಾನ್ ಚಕ್ರವರ್ತಿ ಅಲೆಗ್ಸಾಂಡರ್‌ನೂ ವಿಶ್ವವನ್ನು ಗೆಲ್ಲುವ ಆಸೆ ಹೊಂದಿದ್ದ. ೧೯ನೇ ಶತಮಾನದಲ್ಲಿ ನೆಪೋಲಿಯನ್ ಬೊನಾಪಾರ್ಟೆ ಇಡೀ ಭೂಮಂಡಲವನ್ನು ನಿಯಂತ್ರಿಸುವ ಹೆಬ್ಬಯಕೆ ಹೊಂದಿದ್ದ. ಸಾಮಾನ್ಯವಾಗಿ ಚಕ್ರವರ್ತಿಗಳು ಇಂಥಾ ಗುರಿ – ಉದ್ದೇಶ ಹೊಂದಿರುತ್ತಾರೆ. ಆದರೆ ಒಂದು ಬುಡಕಟ್ಟಿನ ವೀರ, ವ್ಯಕ್ತಿ ಯಜಮಾನನ ಆಸೆ – ಆಕಾಂಕ್ಷೆಗಳು ಬೇರೆಯಾಗಿರುತ್ತವೆ.

ವೀರರು ಹೆಚ್ಚಾಗಿ ರಾಜ್ಯಾಡಳಿತ, ಕ್ರೀಡೆ, ಬೇಟೆ, ಪಶುಪಾಲನೆ ಮತ್ತು ಕೃಷಿ ವ್ಯವಸ್ಥೆಯ ಕ್ಷೇತ್ರಗಳಲ್ಲಿ ಕಂಡು ಬರುತ್ತಾರೆ. ವೀರನ ಲಕ್ಷಣ, ಸಾಧನೆಗಳಿಗೆ ಆರ್ಥಿಕಾಭಿವೃದ್ಧಿಯೂ ಮಾನದಂಡವಾಗಿತ್ತು. ವೀರನೊಬ್ಬ ಅಜ್ಞಾನ ಸಮುದಾಯಕ್ಕೆ ವೀರನಾಗಿದ್ದರೂ, ನಾಗರಿಕ ಜಗತ್ತಿನಲ್ಲಿ, ಅನಾಮಧೇಯನಾಗಿರುತ್ತಾನೆ. ರಾಜಪ್ರಭುತ್ವಗಳು ಸಾಹಸ, ಪರಾಕ್ರಮ, ಶಕ್ತಿ ಪ್ರದರ್ಶನಕ್ಕೆ ಪ್ರೋತ್ಸಾಹಿಸುತ್ತಿದ್ದವು. ಆದ್ದರಿಂದ ಸೈನಿಕರು, ಮಾಂಡಲಿಕರು, ಸಾಮಂತರು, ಪ್ರಜೆಗಳು ದೃಢಕಾಯತೆಯನ್ನು ಕಾಪಾಡಿಕೊಳ್ಳುತ್ತಿದ್ದರು. ವೀರರು ಯುದ್ಧ ಬೇಟೆ ಅಂಗ ರಕ್ಷಣೆ ರಾಜನ ಪ್ರಾಣ ರಕ್ಷಣೆ ಮಾಡುತ್ತಿದ್ದರು. ರಾಜಕೀಯ ದೃಷ್ಟಿಯಿಂದ ಕರ್ನಾಟಕದ ಪಾಲಗೆ ೧೦ನೇಯ ಶತಮಾನದಿಂದ ೧೨ನೇ ಶತಮಾನದ ಮಧ್ಯದವರೆಗಿನ ಕಾಲವು ವೀರ ಸತ್ಯವನ್ನು ಕಾಯ್ದುಕೊಂಡಿತ್ತೆಂದರೆ ತಪ್ಪಾಗಲಾರದು. ನಿರಂತರ ಯುದ್ಧ ಆಕ್ರಮಣ ಮುತ್ತಿಗೆ, ಸೋಲು ಗೆಲುವುಗಳಲ್ಲಿ ರಾಜವಂಶಗಳು ತೂಗುಯ್ಯಾಲೆಯಾಡುತ್ತಿದ್ದ ಕಾಲವದು. ಈ ಪ್ರಭಾವಗಳಿಂದ ಅಂದಿನ ಧಾರ್ಮಿಕ ತತ್ವಗಳು ಮತ್ತು ಕಲಾತ್ಮಕ ಪರಿಸರದಲ್ಲಿ ವೀರತ್ವವು ವಿಜೃಂಭಿಸಿರುವುದನ್ನು ಕಾಣಬಹುದು. ಅಂದಿನ ಕಲೆ, ವಾಸ್ತುಶಿಲ್ಪ ಹಾಗೂ ಸಾಹಿತ್ಯ ಪ್ರಕಾರಗಳಲ್ಲಿ ವೀರತ್ವದ ನಿರೂಪಣೆಗೆ ಮೊದಲ ಆದ್ಯತೆ ಇತ್ತು. ಯುದ್ಧ ವೀರರನ್ನು ಸೈನಿಕರನ್ನು ಹುರಿದುಂಬಿಸುವುದಕ್ಕಾಗಿಯೇ ಸಾಹಿತ್ಯ ಪ್ರಕಾರಗಳೂ ರೂಪುಗೊಳ್ಳುತ್ತಿದ್ದವು. ಇದಕ್ಕೆ ಪಂಪ – ರನ್ನರ ವಿಕ್ರಮಾರ್ಜುನವಿಜಯಂ ಮತ್ತು ಸಾಹಸಭೀಮವಿಜಯಂ ಕಾವ್ಯಗಳ ಶೀರ್ಷಿಕೆಗಳು ಪೂರಕವಾಗುತ್ತವೆ. ಅಲ್ಲದೆ, ಅಂದಿನ ವೀರಗಲ್ಲುಗಳಲ್ಲಿ ಉಕ್ತವಾಗಿರುವ

ಜಿತೇನ ಲಭ್ಯತೇ ಲಕ್ಷ್ಮೀ…
ಮೃತೇನಾಪಿ ಸುರಾಂಗನಾ |
ಕ್ಷಣ ವಿದ್ವಂ ಸಿನಿಕಾಯೇ
ಕಾ ಚಿಂತಾ ಮರಣೇ ರಣೇ ||

ಯುದ್ಧವನ್ನು ಜೈಸಿದ್ದಾದರೆ ಲಕ್ಷ್ಮೀ ಲಭಿಸುತ್ತಾಳೆ. ಮೃತನಾದರೆ (ವೀರತ್ವವನ್ನು ಮೆಚ್ಚಿ) ಅಪ್ಸರಾಸ್ತ್ರೀಯರು ಒಲಿಯುತ್ತಾರೆ. ಆದ್ದರಿಂದ ಕ್ಷಣ ಕಾಲಕ್ಕೆ ನಾಶವಾಗುವ ದೇಹದ ಮೋಹದಿಂದ ಯುದ್ಧಭೂಮಿಯಲ್ಲಿ ಸಾಯುವುದಕ್ಕೆ ಹೆದರಬೇಡ ಎಂಬಂಥ ಶಾಸನಗಳನ್ನು ಪರಿಗಣಿಸಬಹುದು. ಹೀಗೆ ಶಾಸನ ಮತ್ತು ಶಿಷ್ಟ ಸಾಹಿತ್ಯದಲ್ಲಿ ಉಲ್ಲೇಖವಾಗಿರದ ಅನೇಕ ವೀರರನ್ನು ಮೌಖಿಕ ಪರಂಪರೆಯ ಆಕರದಿಂದ ಕಟ್ಟಿಕೊಡುವುದು ತೀರಾ ಅನಿವಾರ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶವನ್ನು ಕಾಯುವ ಸೈನಿಕರನ್ನು ವೀರರೆನ್ನುತ್ತಾರೆ. ಕುಸ್ತಿಯಲ್ಲಿ ಭಾಗವಹಿಸಿ ಜೈಸುವ

[1] ಜಟ್ಟಿ, ಪೆಲ್ವಾನ್ ಎಂದು ಕರೆಸಿಕೊಳ್ಳುತ್ತಾರೆ. ವೀರರ ಆರಾಧನೆ ಗ್ರೀಸ್, ರೋಮ್, ಈಜಿಪ್ಟ್, ಚೀನಾ ಮುಂತಾದ ದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಕಂಡುಬಂದರೂ, ಭಾರತದಲ್ಲಿ ಸಿಂಧೂ ಬಯಲಿನ ನಾಗರಿಕತೆ, ವೇದಗಳ ಸಂಸ್ಕೃತಿ ಕಾಲಘಟ್ಟಗಳಿಂದಲೂ ಭಾರತದಲ್ಲಿ ಸಿಂಧೂ ಬಯಲಿನ ನಾಗರಿಕತೆ, ವೇದಗಳ ಸಂಸ್ಕೃತಿ ಕಾಲಘಟ್ಟಗಳಿಂದಲೂ ಅನೂಚಾನವಾಗಿ ಬೆಳೆದುಬಂದಿದೆ. ರಾಜ, ಮಂತ್ರಿ, ಪಾಳೆಯಗಾರ ಇಂಥವರನ್ನು ವೀರರು ಎಂದು ಹೆಚ್ಚಾಗಿ ನೆನಪಿಸಿಕೊಳ್ಳುವುದುಂಟು. ಸರ್ಜಪ್ಪನಾಯಕ, ಕೆಂಪೇಗೌಡ, ಸಿರಾದ ರಂಗಪ್ಪನಾಯಕ, ಮದಕರಿನಾಯಕ, ಕೊಡಗಿನ ಲಿಂಗರಾಜ, ಕುಮಾರರಾಮ, ಕಿತ್ತೂರುರಾಣಿ ಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಸಿಂಧೂರ ಲಕ್ಷ್ಮಣ, ಹಲಗಲಿ ಜಡಗ – ಬ್ಯಾಳಾ, ಮುಂಡರಗಿ ಭೀಮರಾಯ ಮುಂತಾದ ಸಾಹಸಮಯ ಸಂಸ್ಥಾನಿಕರನ್ನು ಅವರ ಸಾಧನೆಯಿಂದ ವೀರರೆಂದು ಹೆಸರಿಸುತ್ತಾರೆ. ಇಂದು ಸೈನ್ಯದಲ್ಲಿ ಅಪ್ರತಿಮ ಸಾಧನೆ ತೋರಿದವರಿಗೆ ‘ಪರಮವೀರಚಕ್ರ’, ಅರ್ಜುನ ಕ್ರೀಡೆಗಳಲ್ಲಿ ‘ಏಕಲವ್ಯ’ ಎಂಬ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ.

ವೀರ ಪದದ ಅರ್ಥ ಮತ್ತು ವ್ಯಾಪ್ತಿ

‘ವೀರ’ ಎಂಬ ಪದಕ್ಕೆ ಸಮನಾದ, ಪರ್ಯಾಯವಾದ ೨೦ಕ್ಕೂ ಹೆಚ್ಚು ಅರ್ಥ ಮತ್ತು ಲಕ್ಷಣಗಳಿವೆ. ‘ವೀರ’ ಎಂದರೆ ಶೌರ್ಯದಿಂದ ಕೂಡಿದ ಪೌರುಷದ, ಶೂರನಾದ, ಪರಾಕ್ರಮಿಯಾದ, ಬಲಿಷ್ಠನಾದ, ಶಕ್ತಿಯುತನಾದ, ಶ್ರೇಷ್ಟನಾದ, ಉತ್ತಮವಾದ ಇತರ ಲಕ್ಷಣಗಳನ್ನು ಹೆಸರಿಸಿದ್ದಾರೆ. ಕಲಿ, ಶೂರ, ಶೌರ್ಯ, ಕಲಿತನ, ನಟ, ಪಾತ್ರಧಾರಿ, ಬೆಂಕಿ (ಅಗ್ನಿ) ಮಗ, ಗಂಡ, ಜಿ, ವಿಷ್ಣು, ವೀರಭದ್ರ ಎಂದು ಕನ್ನಡ ಶಬ್ದಕೋಶದಲ್ಲಿ ತಿಳಿಸಲಾಗಿದೆ. ಆಧುನಿಕ ಲಕ್ಷಣಗಳಿಂದ ಪ್ರಾಚೀನ ಮೌಲ್ಯಗಳನ್ನು ‘ವೀರನ’ ಲಕ್ಷಣಗಳಿಗೆ ಸಮೀಕರಿಸಿದಂತೆ ಮಾಡಲಾಗಿದೆ.

ಕಾವ್ಯ ಮತ್ತು ನಾಟಕಗಳಿಗೆ ಸಂಬಂಧಿಸಿದಂತೆ ‘ವೀರ’ ರಸವೂ ಒಂದು ‘ವೀರ’ ಎಂಬುದು ಇಪ್ಪತ್ತೇಳು ಶೈವಾಗಮಗಳಲ್ಲೂ ಬರುತ್ತದೆ. ಮಹಾಭಾರತದ ಉಲ್ಲೇಖ ಹೀಗಿದೆ: ಪೂರ್ವಜರನ್ನು ಯುದ್ಧದಲ್ಲಿ ಕಳೆದುಕೊಂಡಿದ್ದು, ಫಾಲ್ಗುಣ, ಶುದ್ಧಪ್ರತಿಪದೆಯಂದು ಯುದ್ಧ ಯೋಗ್ಯವಾದ ವೈಭವ, ಆಡಂಬರಗಳೊಂದಿಗೆ ದೇವರ ದರ್ಶನಕ್ಕೆ ಹೋಗುವ ಪುರುಷನೇ ಶೂರ ಎನ್ನಲಾಗಿದೆ. ಯುದ್ಧ ಮಾಡುವ ಶಕ್ತಿವಂತನಿಗೆ ಶೂರ, ಸಾಹಸತನವಷ್ಟೇ ಅಲ್ಲದೆ ಮಾನಸಿಕ ದಿಟ್ಟತನ ಇರಬೇಕಿತ್ತು.

ಮಧ್ಯಕಾಲೀನ ಕರ್ನಾಟಕದಲ್ಲಿ ವೀರ ಎಂಬುದು ಬಿರುದಾಗಿದ್ದು, ವೀರರಲ್ಲಿ ಶ್ರೇಷ್ಠನಾದವನಿಗೆ ವೀರ ಚೂಡಾಮಣಿ ಎನ್ನುತ್ತಾರೆ. ವೀರ ಮತ್ತೊಬ್ಬ ವೀರನನ್ನು ಸೋಲಿಸಿದರೆ ಅವನಿಗೆ ವೀರ ಝಳಪ್ಪ ಎಂಬ ಬಿರುದಿತ್ತು. ವೀರನಾದವನು ಕೈಯಲ್ಲಿ ಕಂಕಣವೆಂಬ ಆಭರಣವನ್ನು ಕಟ್ಟಿಕೊಳ್ಳುತ್ತಾನೆ. ಸಾಹಸ ಕೆಲಸ, ಪೌರುಷದ ಕೆಲಸ ಮಾಡಿದರೆ ವೀರಕಾರ್ಯ ಎಂದು ಸಮಾಜ ಗೌರವಿಸುತ್ತಿತ್ತು. ಇಂಥಾ ವೀರರು ಮಡಿದರೂ ಅಂಥವರ ಬಗ್ಗೆ ಹುಟ್ಟಿಕೊಳ್ಳುವ ವೀರಕಾವ್ಯಗಳು ಅವರ ಶೌರ್ಯ ಸಾಹಸಗಳನ್ನು ವರ್ಣಿಸುತ್ತವೆ.

ಪರಾಕ್ರಮಿಗಳ, ಸಾಹಸಿಗರ ಸಂತತಿಯನ್ನು ವೀರಕುಲವೆನ್ನುತ್ತಾರೆ. ವೀರರು ಹೋರಾಡುವ ಸ್ಥಳಕ್ಕೆ ವೀರಕ್ಷೇತ್ರ ಎನ್ನುವರು. ಯುದ್ಧಭೂಮಿಯಲ್ಲಿ ಕಾದಾಡುತ್ತಾ ಕೊನೆಯುಸಿರೆಳೆದ ಸೈನಿಕರ ಸಾವನ್ನು ‘ವೀರಮರಣ’ ವೆಂದು ಉಲ್ಲೇಖಿಸುತ್ತಾರೆ. ಈ ಮರಣದ ಮೂಲಕ ಸಿಗುವ ಇಂಥ ಸದ್ಗತಿಯನ್ನು ‘ವೀರಸ್ವರ್ಗ’ವೆಂದು ಕರೆಯುತ್ತಾರೆ. ಶೂರರಾದ ಕ್ಷತ್ರಿಯರು ಸಾಹಸ ಕಾರ್ಯಗಳನ್ನು ಪ್ರದರ್ಶಿಸಿರುವುದಕ್ಕೆ ವೀರಗಲ್ಲುಗಳೇ ಸಾಕ್ಷಿ.

ಪ್ರಾಣಾರ್ಪಣೆ ಮಾಡಿಕೊಂಡ ವೀರನ ನೆನಪಿಗೆ ವೀರಗಲ್ಲನ್ನು ನೆಡುವ ಪದ್ಧತಿಯಿತ್ತು. ಯುದ್ಧ, ಬೇಟೆ, ಗೋಗ್ರಹಣ, ಮಹಿಳೆಯರ ಮಾನರಕ್ಷಣೆ ಹೀಗೆ ನಾನಾ ಕಾರಣಗಳಿಗಾಗಿ ವೀರಗಲ್ಲುಗಳನ್ನು ಕೆತ್ತಿಸಿದ್ದಾರೆ. ಹಿಂದೆ ಶೂರ, ವೀರರಿಗೆ ‘ವೀರಗಾಣಿಕೆ’ ಇತ್ತು. ಪ್ರತ್ಯೇಕ ಧರ್ಮಕ್ಕೆ ವೀರಧರ್ಮವೆಂದು, ವೀರನ ತಾಯಿಗೆ ವೀರಮಾತೆ ಅಥವಾ ವೀರಜನನಿ ಎಂದೂ, ಪತ್ನಿಗೆ ವೀರಪತ್ನಿ ಎಂದು ನಮ್ಮ ರಾಜ್ಯದ ರಕ್ಷಣೆ ಹೊತ್ತು ಸಮರ ಸಾಧನೆಯ ಹೋರಾಟವನ್ನು ಮಾಡಿದ ರಾಣಿಯನ್ನು ‘ವೀರರಾಣಿ’ ಎಂದು ಕರೆಯುತ್ತಿದ್ದರು. ಉದಾ: ವೀರರಾಣಿ ಕಿತ್ತೂರು ಚೆನ್ನಮ್ಮ ಶತೃಗಳನ್ನು ಕೊಂದ ಒನಕೆ ಓಬವ್ವನಿಗೆ ‘ವೀರ ವನಿತೆ’ ಎಂದು ಚಿತ್ರದುರ್ಗದ ಕೋಟೆಯನ್ನು ಕಾಪಾಡಿದ ಮಹಾಸಾಧ್ವಿಯೆಂದು ದಾಖಲಿಸಲಾಗಿದೆ.

ಬಸವಣ್ಣನವರ ವಚನ: ‘ವೀರನಾದರೆ ವೈರಿಗಳು ಮೆಚ್ಚಬೇಕು’ ಎಂಬಲ್ಲಿ ವೀರ ದಿಟ್ಟತನ ಸಾಹಸ, ಧೈರ್ಯ, ಹೋರಾಟದ ಗುಣಗಳು ಶತೃಗಳಲ್ಲಿ ಅಚ್ಚರಿ ಮೂಡಿಸುವಂತಿರಬೇಕು. ಎಂಬಲ್ಲಿ ವೀರನ ಲಕ್ಷಣ, ಕೈಚಳಕ, ಕೌಶಲ್ಯ ಇತ್ಯಾದಿ ಅಂಶಗಳನ್ನು ತಿಳಿಯಬಹುದು. ಒಟ್ಟಾರೆ ಹೇಳುವುದಾದರೆ, ಊರಿನ ಸತ್ಕಾರ್ಯ, ಹೆಣ್ಣಿನ ಮಾನಸಂರಕ್ಷಣೆ, ಗೋರಕ್ಷಣೆ ಇತ್ಯಾದಿ ಸಾಹಸಗಳನ್ನು ಮಾಡುವವನು ವೀರ ಎನಿಸಿಕೊಳ್ಳುತ್ತಾನೆ. ವೀರ ಶಕ್ತಿಯನ್ನು ಸತ್ಕಾರ್ಯಕ್ಕೆ ಬಳಸಿಕೊಂಡವನು. ದೇಶಕ್ಕಾಗಿ ದೇಹ ಮತ್ತು ಪ್ರಾಣ ಆರ್ಪಣೆ ಮಾಡಿದವನಿಗೆ ಬಹುತೇಕ ವೀರ ಎಂದು ಹೆಸರಿಡುತ್ತಾರೆ.

ಬುಡಕಟ್ಟು ವೀರರು

ಬುಡಕಟ್ಟು ಸಮುದಾಯಗಳು ಇಂದು ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುವುದನ್ನು ಕಾಣಬಹುದಾಗಿದೆ. ಜೊತೆಗೆ ಪ್ರಾಚೀನ ಪರಂಪರೆಯ ಸಂಗತಿಗಳನ್ನು ಮೆಲುಕು ಹಾಕುವುದುಂಟು. ಬುಡಕಟ್ಟು ವೀರರನ್ನು ತಮ್ಮ ಮೂಲಪುರುಷರೆಂದು ನಾಯಕರೆಂದು ಕರೆದುಕೊಳ್ಳುತ್ತಾರೆ. ಇದು ಪಿತೃ ಆರಾಧನೆಯನ್ನು ಹೋಲುತ್ತದೆ. ಗೊಲ್ಲರಲ್ಲಿ, ಮ್ಯಾಸ ಬೇಡರಲ್ಲದೆ, ಇತರ ಅನೇಕ ಬುಡಕಟ್ಟುಗಳಲ್ಲಿ ಈ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಬುಡಕಟ್ಟು ಜನಸಮುದಾಯಗಳಿಗೆ ಅರಣ್ಯವೇ ಅವಾಸಸ್ಥಾನವಾಗಿರುವುದು ಪ್ರಕೃತಿ ಆರಾಧಕರೇ ಬುಡಕಟ್ಟು ಜನರು. ಇವರಿಗೆ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ. ಇವರನ್ನು ಹೊರತುಪಡಿಸಿದರೆ ಋಷಿಗಳು ಕಾಡಿಗೆ ಹೋಗಿ ತಪಸ್ಸು ಮಾಡುತ್ತಾರೆ. ಮಹಾಕಾವ್ಯಗಳಲ್ಲಿ ರಾಮ, ಲಕ್ಷ್ಮಣ, ಸೀತೆಯರು ರಾಮಾಯಣದಲ್ಲಿ ಮತ್ತು ಪಾಂಡವ ಸಹೋದರರು ಮಹಾಭಾರತದಲ್ಲಿ ವನವಾಸ ಹೋಗುವುದನ್ನು ಚಿತ್ರಿಸಲಾಗಿದೆ. ಬುಡಕಟ್ಟು ವೀರರನ್ನು ಈ ಬಗೆಯಲ್ಲಿ ಮತ್ತು ಧಾರ್ಮಿಕ ನೆಲೆಯಲ್ಲಿ ರಚಿಸಿರುವುದುಂಟು. ಈ ಜನರು ತಮ್ಮ ಪ್ರಾಚೀನ ವೀರರನ್ನು ದೇವತೆಗಳನ್ನಾಗಿ ಆರಾಧಿಸುತ್ತಾರೆ. ತಿರುಪತಿ ವೆಂಕಟೇಶ್ವರನನ್ನು ಬೇಟೆಗಾರರ ದೇವರೆಂದು, ಶ್ರೀಶೈಲ ಮಲ್ಲಿಕಾರ್ಜುನನ್ನು ಬುಡಕಟ್ಟು ಜನರ ಮೂಲದೈವವೆಂದು ನಂಬಿಕೊಂಡಿದ್ದಾರೆ. ಇಂದಿಗೂ ತಮ್ಮ ಮೂಲಗಳನ್ನು ಈ ದೈವಗಳೊಂದಿಗೆ ಸಮೀಕರಿಸಿಕೊಳ್ಳುವುದುಂಟು. ಬೇಡರಲ್ಲಿ ಬರುವ ವೀರರು ಬುಡಕಟ್ಟಿನ ಹಿನ್ನೆಲೆಯ ಪ್ರಭಾವದಂತೆಯೇ ಶೈವ ಮತ್ತು ವೈಷ್ಣವ ಧರ್ಮಗಳಲ್ಲದೆ, ಶಕ್ತಿಯ ಆರಾಧನೆಯನ್ನು ರೂಢಿಸಿಕೊಂಡಿರುವರು.

ಬುಡಕಟ್ಟು ವೀರರು ತಮ್ಮ ಕುಲಾಚಾರ ಪದ್ಧತಿ, ನ್ಯಾಯತೀರ್ಮಾನ, ವಿವಾಹ, ಇತರ ಪದ್ಧತಿಗಳಿಂದ ಪ್ರಧಾನ ವ್ಯಕ್ತಿಗಳಾಗಿ ಗೋಚರಿಸುತ್ತಾರೆ. ಪಟ್ಟಣ ಮತ್ತು ಗ್ರಾಮೀಣ ಬುಡಕಟ್ಟು ಜನರ ಸ್ಥಿತಿಗತಿಗಳನ್ನು ಭಿನ್ನವೆಂಬುದು ಸ್ಪಷ್ಟ. ಶಿಷ್ಟ ಕಾವ್ಯಗಳಲ್ಲಿ ಬರುವ ವೀರರಿಗಿಂತ ಬುಡಕಟ್ಟು ಸಂಪ್ರದಾಯದ ಮೌಖಿಕ ಪರಂಪರೆಯ ವೀರರ ಆರಾಧನೆ ಜನಮನದಲ್ಲಿ ಜೀವಂತಿಕೆ ಪಡೆದಿದೆ. ಕಥನ ಗೀತೆಗಳಲ್ಲಿ ಐತಿಹಾಸಿಕ ವ್ಯಕ್ತಿಯನ್ನು ಗುಣಗಾನ ಮಾಡಿರುವುದೇ ಹೆಚ್ಚು. ಅದಕ್ಕಿಂತಲೂ ಪೌರಾಣಿಕ ವೀರನನ್ನು ಬಹುಬೇಗ ಜನಪ್ರಿಯಗೊಳಿಸಿ ಆರಾಧಿಸುವುದನ್ನು ನೋಡಬಹುದಾಗಿದೆ. ಒಂದು ಪ್ರದೇಶಕ್ಕೆ ಸೀಮಿತವಾದ ವೀರರು ಒಂದು ಜನಾಂಗ ಮತ್ತು ಸಂಸ್ಕೃತಿಯ ಪರಧಿಯನ್ನು ಧಾಟಿ ನಿಲ್ಲುತ್ತಾರೆ. ಇಂದಿಗೆ ಸುಮಾರು ೫ – ೬ ಶತಮಾನಗಳಿಂದ ಇಂಥ ವೀರ ಪರಂಪರೆಗೆ ಚಾರಿತ್ರಿಕ ಮಹತ್ವವಿದೆ.

ಬುಡಕಟ್ಟು ವೀರರು ಬೇಟೆ, ಪಶುಪಾಲನೆ ಮತ್ತು ಕೃಷಿ ವೃತ್ತಿಗಳ ಜೊತೆಜೊತೆಗೆ ರಾಜಪ್ರಭುತ್ವಕ್ಕೂ ನಿರ್ಣಾಯಕ ವ್ಯಕ್ತಿಗಳಾಗಿದ್ದುದುಂಟು. ಹೀಗಾಗಿ ಅನೇಕ ಪಾಳೆಯಪಟ್ಟುಗಳಿಗೆ ಒಡೆಯರಾಗಿ ಆಳಿದರು. ರಾಜ್ಯ ಸಾಮ್ರಾಜ್ಯಗಳಲ್ಲಿ ಸೈನಿಕರಾಗಿ ದಂಡಾಧಿಪತಿಗಳಾಗಿ ಕೆಲಸ ನಿರ್ವಹಿಸಿದ್ದರು. ವಿಜಯನಗರ ಸಾಮ್ರಾಜ್ಯದ ಅವನತಿಯ ಸಣ್ಣಪುಟ್ಟ ಸಂಸ್ಥಾನಗಳ ಏಳಿಗೆಗೆ ಅಸ್ಪದವಾಯಿತು. ಪಾಳೆಯಗಾರರು ಸ್ವಾತಂತ್ರ್ಯರಾಗಿ ಆಳ್ವಿಕೆ ನಡೆಸಿದ್ದು, ಈ ಹಂತದಲ್ಲಿಯೇ, ನಾಯಕನಪಟ್ಟ ಪಾಳೆಯಗಾರರು, ಗುಡೆಕೋಟೆ, ಜರಿಮಲೆ ಮೊದಲಾದ ಪಾಳೆಯಗಾರರು ತಮ್ಮ ಮೂಲಗಳನ್ನು ಬೇರೆ ಬೇರೆಯಾಗಿ ಹೊಂದಿರುತ್ತಾರೆ. ಕಾಟೆಮಲ್ಲನಾಯಕ ಆಂಧ್ರದಿಂದ ವಲಸೆ ಬಂದು ನಾಯಕನಹಟ್ಟಿ ಸಮೀಪ ರಾಮದುರ್ಗದ ಹತ್ತಿರ ತಳವೂರಿನ ನಂತರ ರಾಜ್ಯ ಸ್ಥಾಪನೆಗೆ ವಿಜಯನಗರದ ಅರಸರು ಪ್ರೋತ್ಸಾಹಿಸಿರುವುದನ್ನು ತಿಳಿಯಬಹುದು.

ಕಾಡಿನ ಸಂಸ್ಕೃತಿಯ ರೂಢಿಸಿಕೊಂಡಿದ್ದ ಬೇಡರು ರಾಜಪ್ರಭುತ್ವದೊಡನೆ ಹೊಂದಾಣಿಕೆ ಮಾಡಿಕೊಂಡಿದ್ದು ಸವಾಲುಗಳನ್ನು ಎದುರಿಸಿದಂತಾಗಿತ್ತು. ಬುಡಕಟ್ಟು ವೀರ ರಾಜನನ್ನೇ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುತ್ತಿದ್ದ ಮತ್ತು ಅರಸನಿಗಿಂತಲೂ ಹೆಚ್ಚು ಖ್ಯಾತಿ ಮತ್ತು ಆರಾಧನೆಗೊಳಪಡುತ್ತಿದ್ದ.

ಸಾಂಸ್ಕೃತಿಕ ವೀರರು

ಮಾನವನ ಜೀವನ ವಿಧಾನಗಳ ಒಟ್ಟು ಮೊತ್ತವೇ ಸಂಸ್ಕೃತಿ. ರೀತಿ, ನೀತಿ ನಡವಳಿಕೆಗಳ ಪರಿಷ್ಕರಣೆಗಳು ಸಂಸ್ಕೃತಿಯೆಂಬ ಯಂತ್ರದ ಮೂಲಕ ಆಗುತ್ತವೆ. ಆದರೂ ಸಂಸ್ಕೃತಿ ಮಾನವನ ರೂಪಿತ ಜಗತ್ತಿನಲ್ಲಿ ಬಹುವ್ಯಾಪಕವಾಗಿ ಬೆಳವಣಿಗೆಯಾಗಿದೆ. ಪ್ರಾಚೀನ ಕಾಲದಿಂದಲೂ ಒಂದು ಜನಾಂಗದ, ಧರ್ಮದ ಮತ್ತು ಪ್ರದೇಶದ ಜನಸಮುದಾಯಗಳಲ್ಲಿ ವೀರರು ಕಂಡುಬಂದಿದ್ದಾರೆ. ಕನ್ನಡ ಸಾಹಿತ್ಯದಲ್ಲಿಯೂ ಗಮನಿಸಬಹುದು. ಪಂಪ ವಿಕ್ರಮಾರ್ಜುನ ವಿಜಯದಲ್ಲಿ ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿರುವುದು. ರನ್ನ ಸಾಹಸ ಭೀಮ ವಿಜಯದಲ್ಲಿ ಸತ್ಯಾಶ್ರಯ, (ತೈಲಪ) ನನ್ನು ಭೀಮನೊಡನೆ ಹೋಲಿಸಿ ಗುಣಗಾನ ಮಾಡಿರುವುದು ಆ ಕಾಲದ ವೀರತ್ವದ ಮೆರುಗನ್ನು ಸಾರ್ವತ್ರಿಕಗೊಳಿಸುವ ಸಾರು ಲೋಕೈಕ ಪರಮ ಕರ್ತವ್ಯವೆಂಬಂತೆ ಭಾವಿಸಲಾಗಿತ್ತು.

ಕುಮಾರರಾಮ ಬೇಡ ಜನಾಂಗದ ಆರಾಧ್ಯದೈವ. ಅವನು ಐತಿಹಾಸಿಕ ವ್ಯಕ್ತಿಯೂ ಹೌದು, ಬುಡಕಟ್ಟು ವೀರನು ಹೌದು. ಹೇಗೆಂದರೆ ಅವನ ರಾಜ್ಯಾಳ್ವಿಕೆಗಿಂತ ಗೋಗ್ರಹಣಮಾಡಿ ಪಶುಗಳನ್ನು ಸಂರಕ್ಷಿಸಿ ಬುಡಕಟ್ಟು ಜನರ ಪ್ರೀತಿಗೆ ಪಾತ್ರವಾಗಿದ್ದು, ಶ್ಲಾಘನೀಯ. ವೀರನೆನಿಸಿಕೊಳ್ಳಲು ಸಮಾಜದಲ್ಲಿ ಏನೆಲ್ಲಾ ಪರಿವರ್ತನೆಗಳನ್ನು ಸಾಧಿಸಬೇಕಾಗಿತ್ತು. ಚಿತ್ರದುರ್ಗ ಜಿಲ್ಲೆ ಬುಡಕ್ಟ್ಟು ಜನರ ಗಣಿಯಾಗಿದೆ. ಮೊಳಕಾಲ್ಮೂರು ತಾಲೂಕಿನ ಕಪ್ಪಡಬಂಡಹಟ್ಟಿಯಲ್ಲಿರುವ ಪೆದ್ದಯ್ಯನ ವೀರಗಲ್ಲು ೨೦ನೇ ಶತಮಾನದಲ್ಲಿ ಕೆತ್ತಿರುವುದಾಗಿದೆ. ವೀರನ ಪರಂಪರೆ ಇಂದಿಗೂ ಬೆಳೆದಿದೆ ಎಂಬುದಕ್ಕೆ ಇದು ಉದಾಹರಣೆ. ಗೊಲ್ಲರಲ್ಲಿಯೂ ಚಿತ್ತಯ್ಯ, ಸಿರಯಣ್ಣ ಮೊದಲಾದವರು ಕಂಡು ಬರುತ್ತಾರೆ. ವಿಶೇಷವೆಂದರೆ ಬುಡಕಟ್ಟು ನೆಲೆಗಳ ಮೇಲೆ ಅಲ್ಲಿನ ನಾಯಕನ ಪ್ರಭಾವ ಹೆಚ್ಚಾಗಿರುತ್ತದೆ. ಹಟ್ಟಿಯನ್ನು ಕಟ್ಟಿದವನು, ಜನಾಂಗದ ಹಿರಿಯನು, ಎಲ್ಲಕ್ಕೂ ಮುಂದಾಳತ್ವ ವಹಿಸುವವನು, ಸಾಂಸ್ಕೃತಿಕ ವೀರರನ್ನು ಪುರಾಣದ ವೀರರಿಗೆ ಸಮವೆಂದು ಆರಾಧಿಸುವುದುಂಟು. ಆ ಪರಂಪರೆ ಹಾಗೆಯೇ ಮುಂದುವರೆಯುತ್ತದೆ. ಪ್ರಸಿದ್ಧ ಯಾತ್ರಾಸ್ಥಳಗಳಿಗೆ ತಮ್ಮ ಮೂಲ ವ್ಯಕ್ತಿಗಳ ಹೆಸರಿನಲ್ಲಿ ಪೂಜೆ ಸಲ್ಲಿಸಿ ಬರಲು ಹೋಗುತ್ತಾರೆ. ಹಂಪೆ, ಆನೆಗುಂದಿ ಬೇಡರಿಗೆ ಮೂಲ ನೆಲೆಗಳಾಗಿವೆ. ಪ್ರತಿ ವರ್ಷ ಇಲ್ಲಿಗೆ ಬೇಡರು ಬಂದು ಹೋಗುತ್ತಾರೆ. ಐತಿಹಾಸಕ ವೀರ ವ್ಯಕ್ತಿಗಿಂತಲೂ ಸ್ಥಾನಮಾನಗಳಿಸಿದ ಬುಡಕಟ್ಟು ಸಾಂಸ್ಕೃತಿಕ ವೀರ ಆ ಸಮುದಾಯದ ಎಲ್ಲದಕ್ಕೂ ಕಾರಣಿಭೂತನಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ನೇತಾರನಾಗಿ ಹೊಸ ಪರಿವರ್ತನೆಗೆ ನಾಂದಿ ಹಾಡಿದ ಕಾರಣ ಅವನು ಆ ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಉಳಿಯುತ್ತಾನೆ.

ಹಿಂದೆ ಸಾಂಸ್ಕೃತಿಕ ವೀರ ಎಂದು ಕರೆಯುವ ಪದ್ಧತಿ ಇರಲಿಲ್ಲ. ಆಧುನಿಕ ಪರಿಕಲ್ಪನೆಗಳು ಬಂದಾಗ, ವಿದ್ವಾಂಸರು ಇಂಥಾ ಚೌಕಟ್ಟನ್ನು ರೂಪಿಸಿದರು. ವೀರ ಎಂದರೇನು? ತಿಳಿದುಕೊಂಡರೆ ‘ಸಾಂಸ್ಕೃತಿಕತೆ’ಯನ್ನು ಅವಲೋಕಿಸುವುದು ಅಗತ್ಯವಾಗಿದೆ. ಜನರ ಜೀವನ ಮೌಲ್ಯಗಳಿಗೆ, ಮಹತ್ತರವಾದ ಪರಿವರ್ತನೆಯನ್ನು ತಂದುಕೊಟ್ಟ ಹರಿಕಾರ ವೀರನಿರಬಹುದಾಗಿದೆ. ಒಂದು ಸಮುದಾಯದ ಪುರಾಣ, ಜಾನಪದ, ಐತಿಹ್ಯ, ಪ್ರತೀತಿಗಳಲ್ಲಿ ತನ್ನ ಜನರಿಗೆ ಸಂಸ್ಕೃತಿಯನ್ನು ರೂಪಿಸಿದ ಅಥವಾ ತಂದುಕೊಟ್ಟ ವ್ಯಕ್ತಿಗೆ ಸಾಂಸ್ಕೃತಿಕ ವೀರ ಎನ್ನಲಾಗುತ್ತದೆ. ಮನುಷ್ಯನ ಪಾತ್ರವಲ್ಲದೆ, ಪ್ರಾಣಿ ಸ್ವರೂಪದ ಚರಿತ್ರೆ ಸುತ್ತಮುತ್ತಲಿನ ವ್ಯಕ್ತಿಯನ್ನು ಮೇಲಿನಂತೆ ಸಂಕೇತಿಸಲಾಗುವುದು. ವೀರನು ಉತ್ತಮವಾದ ವಸ್ತುಗಳನ್ನು ಕೊಟ್ಟರೆ, ಉತ್ಪಾದಿಸಿದರೆ, ಆತನೇ ಸೃಷ್ಟಿಸಿದರೆ ಅಂತಹವುಗಳು ಸಂಸ್ಕೃತಿ ನಿರ್ಮಾಣದ ಲಕ್ಷಣಗಳು. ಆಹಾರ, ಕಲೆ, ಸಾಧನ ಮತ್ತು ಜನರ ನಡಾವಳಿಗಳು ಆ ವೀರನಿಂದ ಬಳುವಳಿಯಾಗಿ ಬಂದಿರುತ್ತವೆ. ಸೂರ್ಯ, ಬೆಂಕಿ, ಬೇಸಿಗೆ, ಮಳೆ ದೇವರು ಮೊದಲಾದವುಗಳನ್ನು ಸಾಂಸ್ಕೃತಿಕ ವೀರನಾದವನು ತನ್ನ ಜನರಿಗಾಗಿ ಕದಿಯುವ ಅಥವಾ ಜಯಿಸುವ ಪ್ರಸಂಗ ಬರುತ್ತದೆ. ಬಂಧನದಿಂದ ಬಿಡಿಸುವುದು, ಮಾರುತಗಳನ್ನು ನಿಯಂತ್ರಿಸುವುದು, ಹುರುಳಿಕಾಯಿ ಇತರೆ ಧಾನ್ಯಗಳ ಉತ್ಪಾದನೆ, ಪ್ರಾಣಿ – ಸಸ್ಯಗಳಿಗೆ ಒಂದು ಸಾಂಕೇತಿಕ ಗುರುತನ್ನು ನೀಡಲಾಗುತ್ತದೆ. ಮಳೆ ಬರುವುದನ್ನು ನದಿಗಳ ಗತಿಯನ್ನು ನಿರ್ಧರಿಸುವುದು ವೀರನೇ. ಅಲ್ಲದೇ, ಬಿತ್ತನೆ ಉಳುಮೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಹಾಡು ಮತ್ತು ನೃತ್ಯಗಳನ್ನು ತಿಳಿಸುವವನು ವೀರ. ತನ್ನ ಪರಿಸರದಲ್ಲಿ ಲಭ್ಯವಿರುವ ಗಿಡಮೂಲಿಕೆಗಳ ಮೂಲಕ ನಾಟಿ ಔಷಧಿಯನ್ನು ಜನರಿಗೆ ಕೊಡುತ್ತಾನೆ.

ಸಾಂಸ್ಕೃತಿಕ ವೀರನೆಂದರೆ ಅತಿಮಾನುಷ ಕಲ್ಪನೆಯಿತ್ತು. ವಸಾಹತು ಲೇಖಕರು ಜಗತ್ತಿನ ಎಲ್ಲಾ ವೀರರಿಗಿಂತ ಇಲ್ಲಿನವರು ಭಿನ್ನ ಎಂಬುದನ್ನು ಅರಿತರು. ಆಗ ವೀರನ ಬಗೆಗಿನ ನಂಬಿಕೆಗಳನ್ನು ನಮ್ಮವರು ಕಂಡುಕೊಂಡದ್ದೂ ಬೇರೆ. ಸಾಂಸ್ಕೃತಿಕ ವೀರ ಬಹುತೇಕ ಪ್ರಾಣಿ – ಪಕ್ಷಿ ರೂಪವನ್ನು ತಾಳಿರುತ್ತಾನೆ. ಜನರ ಪ್ರತಿನಿಧಿಯಾಗಿಯೂ ಸಾಂಸ್ಕೃತಿಕ ವೀರ ಕಂಡು ಬರುವನು. ಬೆಳಕನ್ನು ತಂದುಕೊಟ್ಟಿದ್ದು, ಬಂಧನಕ್ಕೊಳಗಾಗಿದ್ದ ನೀರು, ಬೇಟೆಯನ್ನು ಬಿಡಿಸುತ್ತಾನೆ. ತೆರಿಗೆ ವಿಧಿಸುವುದು, ವಿಧಿ – ಆಚರಣೆಗಳನ್ನು ಮಾಡುವುದು ದುಷ್ಟ ಶಕ್ತಿಯಿಂದ ಜಗತ್ತನ್ನು ವಿಮೋಚನೆಗೊಳಿಸುವ ಮನೋಭಾವ ವೀರನಲ್ಲಿರುತ್ತದೆ. ಈ ಭೂಮಿಯ ಮೇಲೆ ಮಾನವ ಜೀವನಾರಂಭ ಮಾಡಿದಾಗ ಆಗ ಅವನೊಬ್ಬ ಸಾಂಸ್ಕೃತಿಕ ವೀರನೇ ಆಗಿದ್ದ. ಅವನಿಗೆ ಮಾನವ ಸಂಕುಲವೇ ಬೆಳೆಯಿತು. ಪ್ರಾಣಿಗಳಲ್ಲಿ ಹೀಗೆ ಅಮಿಬಾ, ಚಿಂಪಾಂಜಿ, ಗೊರಿಲ್ಲಾಗಳನ್ನು ಉದಾಹರಿಸಬಹುದು. ಧ್ರುವ ಪ್ರದೇಶಗಳ್ಲಲಿ ವರ್ಷಕ್ಕೆ ಎರಡು ದಿನಗಳು ಮಾತ್ರ. ೬ ತಿಂಗಳು ಕತ್ತಲು, ೬ ತಿಂಗಳು ಬೆಳಕು. ಆಯಾ ಅವಧಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೊಸ ಹೊಸ ರೂಪ ಪಡೆಯುತ್ತವೆ.

ಬುಡಕಟ್ಟು ಜನರ ಆವಾಸ ನೆಲೆ ಕಾಡೆ ಆಗಿರುವುದರಿಂದ ಕಾಡಿನಲ್ಲಿ ವೀರರು ಪವಾಡಗಳನ್ನು ಮಾಡುವುದುಂಟು. ಪ್ರಾಣಿ – ಮನುಷ್ಯರ ನಡುವೆ ಸಂಬಂಧ ಕಲ್ಪಿಸುವುದು, ಹೊಂದಾಣಿಕೆ ಮಾಡುವ, ಪರಿವರ್ತನೆಗಳು ಕಂಡುಬರುತ್ತವೆ. ಸಾಂಸ್ಕೃತಿಕ ವೀರ ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ಕಟ್ಟಳೆಗಳನ್ನು ಬಿಟ್ಟುಕೊಟ್ಟಂಥ ವ್ಯಕ್ತಿ. ಸಾಂಸ್ಕೃತಿಕ ವೀರನನ್ನು ಉದಾತ್ತೀಕರಿಸುವ ಅನುಯಾಯಿಗಳು ಅವನಿಗೆ ಅನೇಕ ಜನ ಹೆಂಡಿರು, ಮಕ್ಕಳು, ಸಹೋದರರು ಇರುವರೆಂದು ಹೇಳುತ್ತಾರೆ. ಇವರುಗಳ ನಡುವಿನ ವ್ಯತ್ಯಾಸ, ಲಕ್ಷಣಗಳು ಪರಸ್ಪರ ಭಿನ್ನವಾಗಿರುವಂಥವು. ಸಾಂಸ್ಕೃತಿಕ ವೀರನ ಸಾಧನೆಗಳು ವರ್ತಮಾನದ ಘಟನೆಗಳಿಗೆ ಕಾರ್ಯಕಾರಣ ಸಂಬಂಧವನ್ನು ಸೂಚಿಸುತ್ತವೆ. ಪುರಾಣಪುರುಷರಂತೆ ಸಾಂಸ್ಕೃತಿಕ ವೀರರು ಆರಂಭದಲ್ಲಿ ಸಾಧನೆ ತೋರಿ ಮರೆಯಾದ ನಂತರ ಅವರನ್ನು ದೇವರಾಗಿ ಮಾಡಿಕೊಂಡಿರುತ್ತಾರೆ.ಮೊದಲಿದ್ದ ಸಾಂಸ್ಕೃತಿಕ ವೀರ ಎಂಬುದು ಕಳಚಿಕೊಂಡು ದೇವತೆರೂಪ ಸಿಗುತ್ತದೆ ಆ ವ್ಯಕ್ತಿಗೆ. ಮ್ಯಾಸಬೇಡರ ಸಾಂಸ್ಕೃತಿಕ ವೀರರು ಒಂದು ರೀತಿಯಲ್ಲಿ ಬುಡಕಟ್ಟನ್ನು ಕಟ್ಟಿ, ಸಂಸ್ಕೃತಿ ನಿರ್ಮಿಸಿದ ‘ಬುಡಕಟ್ಟು ಸಂಸ್ಕೃತಿಯ ನಾಯಕರು’ ಆಗಿರುವರು.

ಬುಡಕಟ್ಟುಗಳಲ್ಲಿ ವೀರನಾಗಿ ಆ ಸಂಸ್ಕೃತಿಯ ನಾಯಕನಾಗಿ ಒಂದು ಹಂತಕ್ಕೆ ಶರಣನಾಗಿ ಸ್ಥಾನ ಪಡೆಯುವ ಔಚಿತ್ಯವು ಬೆಳೆದುಬಂದಿದೆ. ಮಲೆಮಹದೇಶ್ವರ ಮಂಟೇಸ್ವಾಮಿ, ತಿಪ್ಪೇಸ್ವಾಮಿ, ಜಗಳೂರು ಪಾಪನಾಯಕ, ಗಾದರಿಪಾಲನಾಯಕ ಮೊದಲಾದವರು ಸಾಂಸ್ಕೃತಿಕ ವೀರನಾಯಕರಾಗಿ ನಂತರ ಶರಣರಾಗಿರುವುದು ಗಮನಾರ್ಹ. ತಿಪ್ಪೇಸ್ವಾಮಿ ಮಧ್ಯಕಾಲದಲ್ಲಿದ್ದ ಒಬ್ಬ ಬೇಡ ಶರಣ. ನಾಯಕನಹಟ್ಟಿ ಪಾಳೆಯಗಾರರಿಗೆ ಗುರುಗಳಾಗಿದ್ದರು. ಬೇಡರಿಗೆ ಈತ ಮನೆದೇವರಾಗಿದ್ದಾನೆ. ‘ಮಾಡಿದವರಿಗೆ ನೀಡು ಭಿಕ್ಷೆ’ ಎಂಬ ಸಿದ್ಧಾಂತದಿಂದ ತಳವರ್ಗ, ಕೂಲಿಕಾರ್ಮಿಕರಿಗೆ ‘ಕಾಯಕ’ ಅರಿವನ್ನು ತಂದುಕೊಟ್ಟು ಕೀರ್ತಿಶಾಲಿ, ಯಾವುದೇ ಒಂದು ಸಮುದಾಯ ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಲು ಹಂಬಲಿಸುತ್ತದೆ. ವ್ಯಕ್ತಿ ಮೂಲಕವೋ, ಸಂಕೇತದ ಮೂಲಕವೋ ಶಾಶ್ವತಗೊಳಿಸುವ ಸಲುವಾಗಿ ಒಬ್ಬ ವ್ಯಕ್ತಿಯನ್ನು ರೂಪಿಸುವುದು, ನೇತಾರರಾಗಿ ಮಾಡುವುದು ಅವರ ಮನ್ನಣೆಗೆ ಪ್ರಿಯವಾಗಿದೆ. ರಾಜಪ್ರಭುತ್ವಕ್ಕಿಂತ ಬುಡಕಟ್ಟುಗಳ ಪ್ರಭುತ್ವ ಸಮಾಜದ ಮೇಲೆ ವ್ಯಾಪಕ ಪ್ರಭಾವ ಬೀರಿರುವುದನ್ನು ಸ್ಮರಿಸಬಹುದಾಗಿದೆ.

ಮ್ಯಾಸಬೇಡರ ವೀರರ ಸಾಂಸ್ಕೃತಿಕ ಸಂದರ್ಭಗಳು

ಚಿತ್ರದುರ್ಗ ಜಿಲ್ಲೆಯಲ್ಲಿ ಕಂಡುಬರುವ ಬೇಡ ಮತ್ತು ಗೊಲ್ಲರ ಸಮುದಾಯಗಳು ಪ್ರಾಚೀನ ಕಾಲದ ಬುಡಕಟ್ಟುಗಳು. ಇವೆರಡರಲ್ಲೂ ವೀರರನ್ನು ಗುರುತಿಸಬಹುದಾಗಿದೆ. ಮ್ಯಾಸಬಡರಲ್ಲಿ ವಿಶೇಷವಾಗಿ ಪಿತೃಪ್ರಧಾನತೆ ಮೂಲಕ ಪಾರಂಪರಿಕವಾಗಿ ತಮ್ಮ ಪೂರ್ವಜರನ್ನು ಆರಾಧಿಸಿಕೊಂಡು ಬರುವುದು ಇಂದಿಗೂ ಪ್ರಚಲಿತವಿದೆ. ಸತ್ತ ವ್ಯಕ್ತಿಯನ್ನು ಹೂಳುವಾಗ ಅನೇಕ ವಿಧಿ – ಆಚರಣೆಗಳನ್ನು ಮಾಡುವರು. ಆಕಸ್ಮಿಕ ಮತ್ತು ಅಸಹಜ ಸಾವುಗಳಿಗೆ ಸಿಲುಕಿದ ಶವವನ್ನು ಸುಡಲಾಗುತ್ತದೆ.

ಹೀಗೆ ಅಡವಿ – ಬೆಟ್ಟ – ಗುಡ್ಡಗಳಲ್ಲಿ ವಾಸಿಸುತ್ತಿದ್ದ ಮ್ಯಾಸಬೇಡರು ತಮ್ಮ ಬುಡಕಟ್ಟು ಸಂಪ್ರದಾಯವನ್ನು ಗಟ್ಟಿಗೊಳಿಸಲು ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಶ್ರಮಿಸಿದರು.ಒಂದೊಂದು ಬೆಡಗಿನವರು ತಮ್ಮ ಹಿರಿಯ ವ್ಯಕ್ತಿಯನ್ನು ಆರಾಧಿಸುವ, ಸ್ಮರಣೆ ಮಾಡುವುದನ್ನು ಕಾಣಬಹುದು. ಇಲ್ಲಿನ ವೀರರು ದೇಶರಕ್ಷಣೆಯನ್ನು ತನ್ನ ಸಂಸ್ಕೃತಿಯ ರಕ್ಷಣೆಯೆಂದು ಭಾವಿಸಿಕೊಮಡರು. ತಮ್ಮ ಬದುಕೇ ರಾಷ್ಟ್ರ ರಕ್ಷಣೆ, ಅಭಿವೃದ್ಧಿಯ ಸಂಕೇತವೆಂಬುದು ಬುಡಕಟ್ಟು ಲೋಕದ ಸಾರ್ವತ್ರಿಕ ಅಭಿಪ್ರಾಯವಾಗಿದೆ. ಇಲ್ಲಿ ಸಮಾಜ ಮೆಚ್ಚುವ ಕೆಲಸ ಮಾಡಿದರೆ ವ್ಯಕ್ತಿಯನ್ನು ಗೌರವಿಸಲಾಗುತ್ತಿತ್ತು. ಇಂಥ ಅನೇಕ ಸಾಂಸ್ಕೃತಿಕ ವೀರರಿಂದ ಮ್ಯಾಸಬೇಡರ ಸಂಸ್ಕೃತಿ ಅಭಿವೃದ್ಧಿಯಾಯಿತು.

ಮ್ಯಾಸಬೇಡರ ಸಂಸ್ಕೃತಿಯಲ್ಲಿ ದೇವರುಗಳ ಸ್ಥಾಪನೆ, ಹಬ್ಬ – ಹರಿದಿನ, ನ್ಯಾಯತೀರ್ಮಾನಕ್ಕೆ ಕಟ್ಟೇಮನೆ, ದೇವರ ಮನೆಗಳು ಇಲ್ಲಿ ಪ್ರಮುಖ ಲಕ್ಷಣಗಳಾಗಿವೆ. ಈ ಕೆಲಸ ಮಾಡಲಿಕೆ ೭ ಜನ ಹಿರಿಯರು, ೩ ಜನ ನಾಯಕರು ಇದ್ದರು. ಇಂದು ಈ ವಿಧಾನವಿಲ್ಲ, ತುಂಬಾ ಮಾರ್ಪಾಟು ಆಗಿದೆ. ಇವರಲ್ಲಿ ವ್ಯಾಜ್ಯ, ವಿವಾದಗಳನ್ನು ತಮಗೆ ತಾವೇ ಬಗೆಹರಿಸಿಕೊಳ್ಳುತ್ತಿದ್ದರು. ಈ ರೀತಿ ಇರುವಾಗ ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ, ಸಾಮಾಜಿಕ ಕಟ್ಟುಪಾಡಿಗಾಗಿ ಇಲ್ಲಿನ ವೀರರು ಹೋರಾಡಿ ಮಡಿದುದು ಸ್ಪಷ್ಟವಾಗಿದೆ. ಲೌಕಿಕ ಜಂಜಾಟಗಳಲ್ಲಿ ಮಿಂದು ಅದರಾಚೆಗೆ ಹೊರ ಸೆಳೆವ ವೀರನ ವ್ಯಕ್ತಿತ್ವವು ಅನುಕರಣೀಯವಾದುದು.

ಗಾದರಿಪಾಲನಾಯಕ ಪಶುಪಾಲಕನಾಗಿ ಇಡೀ ಸಮುದಾಯವನ್ನು ಆಳುವ ಶಕ್ತಿಯಿದ್ದರೂ, ಅವನು ದನಗಾಹಿಯಾಗಿ ಅಪಾರ ಸೇವೆ ಸಲ್ಲಿಸಿದ. ಆಕಳುಗಳ ರಕ್ಷಣೆಗಾಗಿ ಹುಲಿಗಳೊಡನೆ ಹೋರಾಡಿ ಮಡಿದುದು, ನಂತರ ಇಬ್ಬರು ಮಡದಿಯರು ಸಹಗಮನ ಅನುಸರಿಸಿದ್ದು ಗಮನಾರ್ಹ. ಇವನನ್ನು ಜನಪದ ಸಾಹಿತ್ಯ ಆಧ್ಯಾತ್ಮಿಕ ಪುರುಷನಾಗಿ ಜನಪದರು ಕಾಣುತ್ತಾರೆ.

ಶರಣನಂತೆ ಸ್ಥಾನ ಪಡೆದ ಜಗಳೂರು ಪಾಪನಾಯಕನು ಒಬ್ಬ ಸಾಮಾನ್ಯ ಪಶುಪಾಲನಾಗಿದ್ದ. ತಿರುಪತಿಯಾತ್ರೆ, ಜ್ಞಾನೋದಯದಿಂದ ವಾಕ್‌ಶುದ್ಧಿ ಇತ್ತು. ಪವಾಡ ಪುರುಷನಾಗಿರುವಾಗ ಜಗಪತಿರಾಯ ಎಂಬ ಅರಸ ಇವನನ್ನು ಕೊಲೆ ಮಾಡಿಸುತ್ತಾನೆ. ಇವನ ಹೋರಾಟ ಸಾಹಸಗಳು ವಿಸ್ಮಯಕರವಾಗಿವೆ.

ಯರಗಾಟ ನಾಯಕನು ಸಹಾ ಪಶುಪಾಲಕ, ವಲಸೆ ಹೋಗಿ ದನ ಮೇಯಿಸಿಕೊಂಡು ಬರುತ್ತಿದ್ದುದು ಸಾಮಾನ್ಯ. ಈ ವೀರ ಹೆಣ್ಣಿಗಾಗಿ ಏನೆಲ್ಲಾ ಸಾಹಸ ಮಾಡಿ ಪಡೆದರೂ, ಜೀವಿಸುವ ಸುಖ ನೆಮ್ಮದಿ, ಅವಕಾಶ ಸಿಗಲಿಲ್ಲ. ಇವನಂತೆಯೇ ಕೊಡಗಲು ಬೊಮ್ಮಯ್ಯ, ಬರ್ಬರ ಆಳ್ವಿಕೆಯಲ್ಲಿ, ಕ್ರೂರವಾದ ತೆರಿಗೆಗಳಿಂದ ಜನದಂಗೆ ಎದ್ದಿದ್ದರು. ಸಾಹಸಿಯಾಗಿದ್ದರೂ ಲಂಪಟನಾಗಿದ್ದಾನೆ. ಪರಸ್ತ್ರೀಯರನ್ನು ಕದ್ದದ್ದು ಒಂದು ತಪ್ಪಾದರೆ ಕೊಲ್ಲುವ ಹೇಯ ಕೃತ್ಯವನ್ನು ಎಸಗುತ್ತಾನೆ. ಈ ವಿಚಾರವನ್ನು ದಡ್ಡಿಸೂರನಾಯಕ ಗಾದಿ (ಜ) ನಾಯಕ ಕಥೆಗಳಲ್ಲಿ ಅವಲೋಕಿಸಬಹುದು. ಮಂದೆಗೆ ಚಿರತೆ ದಾಳಿ ಮಾಡಿದಾಗ ಯರಮಂಚಯ್ಯ ಅದನ್ನು ಹೊಡೆದು ತಾನು ಮಡಿದ ಸಂಗತಿಯು ಪಶುಗಳ ರಕ್ಷಣೆಗೆಂಬುದು ಗಮನಾರ್ಹ. ಇವನ ವೀರಗಲ್ಲು ಇಂದಿಗೂ ಆರಾಧನೆಗೊಳಪಟ್ಟಿದೆ. ಹೀಗಾಗಿ ಪಶುಪಾಲಕರಾಗಿ ತಮ್ಮ ದನಗಳನ್ನು ಹುಲಿ, ಚಿರತೆ, ಸಿಂಹ ಕಿರಬಗಳಂಥ ಕಾಡುಪ್ರಾಣಿಗಳಿಂದ ರಕ್ಷಿಸಲು ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡಿದ ಯರಮಂಚಯ್ಯನ ಮಗ ಪೆದ್ದಯ್ಯನ ಸಾಧನೆ ಅವಿಸ್ಮರಣೀಯವಾದುದು.

ಮ್ಯಾಸಬೇಡರ ಬುಡಕಟ್ಟು ವೀರರ ಸಾಂಸ್ಕೃತಿಕ ಸಂದರ್ಭಗಳು ಕಾರ್ಯಕಾರಣಕ್ಕೆ ತೀರಾ ಹತ್ತಿರವಾಗಿರುತ್ತವೆ. ಈ ಸಂಬಂಧವನ್ನು ಕಾರಣ ಮತ್ತು ಕಾರ್ಯಗಳ ಮೂಲಕ ಒಂದು ಘಟನೆಯನ್ನು ವಿಶ್ಲೇಷಿಸಲಾಗುವುದು. ಇವರ ಬಗೆಗೆ ಜನಮನರಲ್ಲಿನ ರೋಮಾಂಚನವಾದ ಕಥೆಗಳು ಲಭ್ಯ. ಬೇಟೆಯಾಡುವ ಸಂದರ್ಭ, ಕೊಲ್ಲುವ ಪ್ರಾಣಿ, ಹತನಾಗುವ ಬೇಟೆಗಾರ, ಸಹಗಮನ ಅನುಸರಿಸುವ ಪತ್ನಿಯರ ಬಗ್ಗೆ ವೀರಗಲ್ಲು – ಮಾಸ್ತಿ ಕಲ್ಲುಗಳೇ ಸಾಕ್ಷಿ. ಪಶುಪಾಲನೆಯಲ್ಲಿ ತುರುಕಾಳಗ ಮಾಡಿದ ಸತ್ತ ವ್ಯಕ್ತಿಯನ್ನು, ಹೆಣ್ಣಿನ ಮಾನರಕ್ಷಣೆ ಕಾಪಾಡಿದವನನ್ನು ವೀರನೆಂದು ಕರೆಯುವುದು ಸ್ಪಷ್ಟ. ಸಮಕಾಲೀನ ಸಮಾಜಕ್ಕೆ ಅಸಾಧ್ಯವಾದ ಘಟನೆ ಎಂದು ತೋರಿ ಬಂದಾಗ, ಆ ಮೂಲಕ ವೀರನಾಗುವ ಪರಿ ಜನಪದರೇ ನಿರ್ಣಯಿಸುತ್ತಾರೆ.

* * *


[1] ಚಿನೋವ್‌ ಅಚುಬೆಯ ಥಿಂಗ್ಸ್ ಫಾಲ್ ಅಪಾರ್ಟ್‌ಎಂಬ ಕಾದಂಬರಿಯಲ್ಲಿ ಒಕಾಂಕೊನೆಂಬ ವೀರ ಸುತ್ತಲಿನ ಏಳು ಹಳ್ಳಿಗಳಿಗೆ ಕುಸ್ತಿ ಪಟುವಾಗಿ ಜಯಶಾಲಿಯಾಗುತ್ತಿದ್ದ ಸಂಗತಿ ತಿಳಿದುಬರುತ್ತದೆ.