ಇಂದು ಬುಡಕಟ್ಟು ಸಮುದಾಯಗಳನ್ನು ಆಧುನಿಕ ಜಗತ್ತಿಗೆ ಪರಿಚಯ ಮಾಡಿಕೊಡಬೇಕಾದ ಅಗತ್ಯತೆಯಿದೆ. ಒಂದು ಬುಡಕಟ್ಟಿನಲ್ಲಿ ಒಬ್ಬಿಬ್ಬರು ಸುಶಿಕ್ಷಿತ ನಾಗರಿಕರಾಗಿ, ಉಳಿದವರು ಅರಣ್ಯ ವಾಸಿಗಳಾದುದೇ ಹೆಚ್ಚು. ಈ ಬುಡಕಟಟು ಜನರು ನಾಗರಿಕತೆಯ ಸೋಂಕಿಗೂ ಸಿಗದೆ, ಪ್ರಾಚೀನ ಸಂಸ್ಕೃತಿಯನ್ನು ಉಳಿಸಿಕೊಳ್ಳದೇ ಡೋಲಾಯಮಾನ ಸ್ಥಿತಿಯಲ್ಲಿದ್ದಾರೆ. ಇವರ ಮೂಲ ವೃತ್ತಿ ಬೇಟೆ. ಸರ್ಕಾರ ಬೇಟೆಯನ್ನು ನಿಷೇಧಿಸಿದ್ದರೂ ಅದು ಆಚರಣೆಯಲ್ಲಿದೆ. ಪಶುಪಾಲನೆ, ಕೃಷಿ ಚಟುವಟಿಕೆಗಳಲ್ಲಿ ಬುಡಕಟ್ಟು ಜನರು ಪರಿವರ್ತಿತಗೊಂಡರೂ ನೆಮ್ಮದಿಯ ಬದುಕಿಗೆ ಹಾತೊರೆಯುವರು.

ಭಾರತದಲ್ಲಿ ವಸಾಹತುಶಾಹಿ ಸಂದರ್ಭವು ಬುಡಕಟ್ಟು ಜನರ ಇತಿಹಾಸ ರಚನೆಗೆ ಒತ್ತುಕೊಟ್ಟಿತು. ಬ್ರಿಟಿಷ್ ಅಧಿಕಾರಿಗಳು, ವಿದ್ವಾಂಸರು, ಕ್ರೈಸ್ತ ಮಿಷನರಿಗಳು, ಪ್ರವಾಸಿಗರು ಬುಡಕಟ್ಟಿನ ಬಗ್ಗೆ ತಳೆದ ನಿಲುವುಗಳನ್ನು ವರದಿ, ದಿನಚರಿ ಇತರೆ ಕೃತಿಗಳಲ್ಲಿ ಕಾಣಬಹುದು. ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಇವರ ಬಗ್ಗೆ ಅನೇಕ ವಿಧವಾದ ಸಂಶೋಧನೆಗಳು ನಡೆದಿವೆ. ಎಡ್ಗರ್ ಥರ‍್ಸ್‌ಟನ್, ವೆರಿಯರ್ ಎಲ್ವಿನ್ ಇತರರು ಪ್ರಮುಖರಾಗಿರುವರು.

‘ಬುಡಕಟ್ಟು’ ಎಂದರೆ ಕುಟುಂಬ, ಕುಲ, ಸಮೂಹ ಎಂಬರ್ಥವಿದೆ. ಆಂಗ್ಲಭಾಷೆಯ ‘ಟ್ರೈಬ್ಸ್’ಗೆ ಸಂವಾದಿಯಾಗಿ ಕನ್ನಡದಲ್ಲಿ ಬುಡಕಟ್ಟು ಎಂದೇ ಕರೆಯುತ್ತಾರೆ. ಪ್ರಾಚೀನ ಲ್ಯಾಟಿನ್ ಭಾಷೆಯಲ್ಲಿ ಟ್ರೈಬ್ಸ್ ಎಂಬ ಪದ ಉಗಮವಾಯಿತು. ಮೊಟ್ಟಮೊದಲ ಗ್ರೀಕ್ – ರೋಮನ್‌ನ ವಿದ್ವಾಂಸರು ಲ್ಯಾಟಿಯಂ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ಆ ರೀತಿ ಕರೆದರು. ಒಂದೇ ಕುಟುಂಬದ, ರಕ್ತ ಸಂಬಂಧಿಕರಿಗೆ ಸಮುದಾಯಕ್ಕೆ ಬುಡಕಟ್ಟು ಎನ್ನಲಾಗುವುದು. ಆದಿವಾಸಿ, ಮೂಲನಿವಾಸಿ, ಗಿರಿಜನ, ವನ್ಯಜಾತಿ, ಜನಜಾತಿ ಎಂದು ಸಹ ಕರೆಯುವರು. ಒಂದು ಸಮಾಜಕ್ಕೆ ಕುಟುಂಬವೇ ಮೂಲಘಟಕ ಮತ್ತು ಆಧಾರ ಕುಟುಂಬಗಳು ಸೇರಿ ಸಮುದಾಯ, ಹಟ್ಟಿಗಳು ನಿರ್ಮಾಣವಾದವು.

ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ಜನರ ಸ್ವರೂಪ ತೀರಾ ಭಿನ್ನವಲ್ಲದಿದ್ದರೂ ಪ್ರತ್ಯೇಕ ಲಕ್ಷಣಗಳು ಕಂಡು ಬರುತ್ತವೆ. ಒಂದು ಪ್ರದೇಶಕ್ಕೆ ಸೀಮಿತವಾಗಿ ರಾಜಕೀಯ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ. ಜೀವನಶೈಲಿ, ಆಚಾರ – ವಿಚಾರ ಆಡಳಿತ ಇತರ ಎಲ್ಲಾ ಲಕ್ಷಣಗಳಲ್ಲಿ ಏಕತೆ, ಸ್ವಾತಂತ್ರ್ಯವನ್ನು ಹೊಂದಿದ್ದರೆ ಬುಡಕಟ್ಟು ಎಂದು ಕರೆಯಬಹುದು. ಬುಡಕಟ್ಟುಗಳು ಭೂ ಪ್ರದೇಶದಲ್ಲಿ ವಿಕಾಸಗೊಳ್ಳುತ್ತಾ ಹೋದಂತೆ ಪರಿವರ್ತನೆ ಕಂಡುಬಂತು. ಗೊಲ್ಲರು ಮತ್ತು ಬೇಡರು ಹೀಗೆ ವಿಕಾಸ ಹೊಂದಿದ ಬುಡಕಟ್ಟುಗಳಾಗಿವೆ.

ಬೇಡರಿಗೆ ಪ್ರಕೃತಿಯೇ ಮನೆ, ಬೇಟೆ ಅವರ ಆಹಾರ. ಚಿತ್ರದುರ್ಗ ಜಿಲ್ಲೆಯಲ್ಲಿ ೧೯೯೧ರ ಜನಗಣತಿಯ ಪ್ರಕಾರ ಬೇಡ ಅಥವಾ ನಾಯಕ ಜನಾಂಗಕ್ಕೆ ಸೇರಿದ ಸು.೨,೨೨,೭೬೩ ಬುಡಕಟ್ಟು ಜನರಿದ್ದರು. ಇವರಲ್ಲಿ ಬಹುಪಾಲು ಮ್ಯಾಸ ನಾಯಕರು. ಇಲ್ಲಿನ ಬೇಡರು ಬೇಟೆ, ಪಶುಪಾಲನೆಯನ್ನು ಅವಲಂಬಿಸಿದ್ದರು. ಇಂದು ಕೃಷಿಯಲ್ಲಿ ತೊಡಗಿರುವುದು ಗಮನಾರ್ಹ. ಸಾಮಾಜಿಕ ಹಾಗೂ ರಾಜಕೀಯ ಒತ್ತಡಗಳಿಂದಾಗಿ ಬೇಟೆಗಾರಿಕೆ ಹವ್ಯಾಸ ಕಲೆ ಅಥವಾ ಹಿಂದಿನ ಪರಂಪರೆಯ ಅನುಕರಣೆಯಾಗಿದೆ. ಇವರಂತೆ ಗೊಲ್ಲರು, ಜೇನುಕುರುಬರು, ಸೋಲಿಗರು, ಗೊಂಡರು ಎಂಬ ಬುಡಕಟ್ಟುಗಳು ಕಂಡು ಬರುತ್ತವೆ. ಮ್ಯಾಸಬೇಡರು ತಮ್ಮ ಪರಂಪರೆಯ, ಸಂಸ್ಕೃತಿಯ ಹೆಗ್ಗುರುತುಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರ ಜೀವನಶೈಲಿ, ಆಹಾರ ಉಡುಗೆ – ತೊಡುಗೆ, ಆಚಾರ – ವಿಚಾರಗಳಲ್ಲಿಯೂ ಹಿಂದಿನ ಲಕ್ಷಣಗಳನ್ನು ಕಾಣುತ್ತೇವೆ. ಕಾಡಿನಲ್ಲೇ ವಾಸಿಸುವುದರಿಂದ ಕಾಡು ಬೇಡರೆಂದು ಕರೆಯುವರು. ಪ್ರಕೃತಿ ಆರಾಧಕರಾದ ಬೇಡರು ಪಿತೃ ಆರಾಧಕರಾಗಿ, ಬುಡಕಟ್ಟು ವೀರರನ್ನು ತಮ್ಮ ದೇವರೆಂದು, ಮೂಲಪುರುಷನೆಂದು ನಂಬಿಕೊಂಡಿದ್ದಾರೆ. ಭಾರತದಲ್ಲಿನ ಬುಡಕಟ್ಟುಗಳ ಲಕ್ಷಣಗಳಿಗೂ ಮತ್ತು ಕರ್ನಾಟಕದ ಬುಡಕಟ್ಟುಗಳ ಲಕ್ಷಣಗಳಿಗೂ ಹೋಲಿಕೆಯಲ್ಲಿ ಕೆಲವು ವೈರುಧ್ಯಗಳಿರುವುದುಂಟು.

ಬೇಡ ಬುಡಕಟ್ಟು ಸಮುದಾಯದ ಪರಿಚಯ

ಮಾನವನ ಉಗಮದ ತರುವಾಯ ಪ್ರತಿಯೊಬ್ಬರೂ ಬೇಟೆಗಾರರೇ ಆಗಿದ್ದರು. ವಿಕಾಸ ಹೊಂದುತ್ತಾ ಒಂದೊಂದೇ ಸಮುದಾಯಗಳು ಶ್ರೇಣೀಕೃತಗೊಂಡವು. ಹೀಗೆ ಪುರಾತನ ಕಾಲದಿಂದಲೂ ಬೇಡರಿಗೆ ಚಾರಿತ್ರಿಕ ಮಹತ್ವವಿದೆ. ಭಾರತದಲ್ಲಿ ಇವರನ್ನು ಕಿರಾತ, ಶಬರ, ಮಾಧ್ಯ, ಪುಲಿಂದ, ಬಿಲ್, ಕೋಳಿ, ನಿಷಾಧ, ನಾಯಕ, ವಾಲ್ಮೀಕಿ ಇತರ ಹೆಸರುಗಳಿಂದ ಕರೆಯುತ್ತಾರೆ. ಮಾನವ ಜನಾಂಗಗಳಲ್ಲಿ (ಖಚಿಛಿes) ಇವರು ಪ್ರೊಟೊ ಆಸ್ಟ್ರಾಲಾಯಿಡ್‌ಗೆ ಸೇರಿದವರು. ಭಾರತದಲ್ಲಿ ದ್ರಾವಿಡ ಸಂಸ್ಕೃತಿಯ ಲಕ್ಷಣಗಳನ್ನು ಹೊಂದಿರುವ ಬೇಡರು ಆರ್ಯ ಸಂಸ್ಕೃತಿಯ ಪ್ರಭಾವಕ್ಕೆ ಸಿಲುಕಿದ್ದಾರೆ. ಉತ್ತರ ಭಾರತದಲ್ಲಿನ ಬೇಡರು ಮಂಗೋಲಿಯನ್ ಬುಡಕಟ್ಟಿಗೆ ಸೇರಿರುತ್ತಾರೆ. ವಿವಿಧತೆಯಲ್ಲಿ ಏಕತೆ ಕಾಣುವ ವಿಶಿಷ್ಟತೆ ಭಾರತದಲ್ಲಿದೆ. ಇಂಥಾ ವೈಶಿಷ್ಟ್ಯಗಳ ಪೈಕಿ ಭೌಗೋಳಿಕ, ಜನಾಂಗಿಕ ಸಂಗತಿಗಳು ಪ್ರಮುಖವಾದವು. ಯಾವುದೇ ಪ್ರದೇಶ, ದೇಶ, ಹಳ್ಳಿ ಹೀಗೆ ಭೌಗೋಳಿಕ (ನೆಲಸುತಾಣ) ಪ್ರದೇಶದಲ್ಲಿ ಸ್ಥಳೀಯರಿಗಿಂತ ಹೊರಗಿನವರೆ ಬುದ್ಧಿವಂತಿಕೆಯಿಂದ ದಬ್ಬಾಳಿಕೆ ನಡೆಸಿರುವುದು ಇತಿಹಾಸ. ಇದನ್ನು ಪ್ರಾಯೋಗಿಕವಾಗಿಯೂ ಇಂದು ಹೋಲಿಸಿ ನೋಡಬಹುದು. ಸಮಾನರಾದವರೊಡನೆ, ಒಂದು ದೇಶ, ಜನಾಂಗ ಧರ್ಮಕ್ಕಿಂತ ಹೊರಗಿನ ಶಕ್ತಿ ಆಳ್ವಿಕೆ ನಡೆಸಿದ್ದೇ ಹೆಚ್ಚು. ಇದಕ್ಕೆ ಉದಾಹರಣೆ ಆರ್ಯರು, ಹೂಣರು, ಪರ್ಶಿಯನ್ನರು, ಸಿಥಿಯನ್ನರು, ಪೋರ್ಚುಗೀಸರು, ಫ್ರೆಂಚರು, ಇಂಗ್ಲಿಷರು ಮತ್ತು ಡಚ್ಚರನ್ನು ಹೆಸರಿಸಬಹುದು. ಇವರು ತನ್ನ ದೇಶವಲ್ಲದೆ, ಅನ್ಯ ದೇಶಗಳಲ್ಲಿ ಸಂಚರಿಸಿ ವ್ಯಾಪಾರ, ರಾಜ್ಯಾಳ್ವಿಕೆ ನಡೆಸಿದ್ದು ಗಮನಾರ್ಹ. ಇಂಥ ಪರಕೀಯರನ್ನು ಆದಿಯಲ್ಲಿ ಸಪ್ತಸಿಂಧು, ಗಂಗಾನದಿಯ ಬಯಲಿನಲ್ಲಿ ಎದುರಿಸಿದವರು ಕಿರಾತರು. ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಆದಿವಾಸಿ, ಗಿರಿಜನರಾದ ಕಿರಾತರು ಅಥವಾ ವಾದ್ಯರ ಚರಿತ್ರೆ ರೋಮಾಂಚನವಾದುದು. ರಾಹುಲ ಸಾಂಕೃತ್ಯಾಯನ ಅವರು ದಿವೋದಾಸ, ವೊಲ್ಗಾ – ಗಂಗಾ, ಮತ್ತು ಜಯಯೌದೇಯ ಕೃತಿಗಳಲ್ಲಿ ಈ ಸಂಗತಿಯನ್ನು ಚರ್ಚಿಸುತ್ತಾರೆ. ಕಿರಾತರು, ಶಬರರು ಆರ್ಯರೊಡನೆ ಯುದ್ಧಮಾಡಿ ಗೆದ್ದ ಉದಾಹರಣೆಗಳಿವೆ. ಕಿರಾತರ ಗೆರಿಲ್ಲಾ ಯುದ್ಧಕ್ಕೆ ಆರ್ಯ, ಪಡೆಗಳು ತತ್ತರಿಸಿ ಹೋಗಿದ್ದವಂತೆ. ಈ ಹಿನ್ನೆಲೆಯಲ್ಲಿ ಆರ್ಯರನ್ನು ಎದುರಿಸಿದವರಲ್ಲಿ ಕಿರಾತರು ಪ್ರಮುಖರು. ನಿಷಾದ ಮತ್ತು ಕಿರಾತ, ದಾಸ – ದಸ್ಯು ಮೊದಲಾದವರು ಆರ‍್ಯ – ಮಂಗೋ ಲಾಯ್ಡ್, ಆಸ್ಟ್ರಿಕ್, ದ್ರಾವಿಡ ಮತ್ತು ಇಂಡೋ ಆರ‍್ಯನ್ ಅಥವಾ ಇಂಡೋ ಯುರೋಪಿಯನ್‌ಗಳ ವರ್ಣ ಸಂಕರದ ಪರಿಣಾಮ ಭಾರತೀಯ ಮಾನವನಾಗಿ ವಿಕಾಸ ಹೊಂದಿದ್ದಾರೆ. ಆರ್ಯ ಮತ್ತು ದ್ರಾವಿಡ ಜನಾಂಗಗಳ ಮೂಲ ಮತ್ತು ಪ್ರಾಚೀನತೆ ಬಗ್ಗೆ ಇನ್ನು ಚರ್ಚೆ, ವಿವಾದಗಳು ನಡೆಯುತ್ತಿವೆ. ಭಾರತೀಯ ಜನಾಂಗ ಶಾಸ್ತ್ರಗಳಲ್ಲಿ ಆದಿಔಷ್ಟ್ರೇಯ (ಪ್ರೊಟೊ ಆಸ್ಟ್ರಾಲಾಯಿಡ್) ಭಾರತದ ಮೂಲನಿವಾಸಿಗಳನ್ನು ವ್ಯಾಧೀಯ ಅಥವಾ ಚಾಷ್ಟ್ರೇಯ ಎಂದು ಬಳಸುತ್ತಿದ್ದಾರೆ. ಈ ಬಗ್ಗೆ ಇನ್ನು ಖಚಿತವಾಗಿ ಹೇಳಬೇಕೆಂದರೆ ಆದಿಔಷ್ಟೇಯ ಔಷ್ಟ್ರೇಯರಿಗಿಂತ ಮೊದಲು ವಾಸವಾಗಿದ್ದ ಜನ ಎಂದಾಗುತ್ತದೆ. ಮಾನವ ಬುಡಕಟ್ಟಿನ ಬಗ್ಗೆ, ಈ ಜನಾಂಗದ ಬಗ್ಗೆ ಸಿದ್ಧಾಂತ ಮಂಡಿಸುತ್ತದೆ. ಈ ಬಗ್ಗೆ ಹರಪ್ಪ, ಮೊಹೆಂಜದಾರೊ, ಮಸ್ಕಿ, ತಕ್ಷಶಿಲಾ, ಚಂಗಲ್‌ಪೇಟೆ ಇತರ ನಿವೇಶನಗಳ ಉತ್ಖನನದಲ್ಲಿ ದೊರೆತ ಅವಶೇಷಗಳೇ ಸಾಕ್ಷಿ. ಇವು ಭಾರತದಲ್ಲಿ ವಿವಿಧ ಜನಾಂಗ, ಪಂಗಡಗಳಿದ್ದ ಬಗ್ಗೆ ಬೆಳಕು ಚೆಲ್ಲುತ್ತವೆ.

ಆರ್ಯರಿಗಿಂತಲೂ ಪೂರ್ವದಲ್ಲಿ ವ್ಯಾಧೀಯ (ಬೇಡ) ಜನಾಂಗದಿಂದ ದ್ರಾವಿಡ ಮಾದರಿಯ ಜನಾಂಗ ಭಾರತದಲ್ಲಿತ್ತೆಂಬುದು ನಿರ್ವಿವಾದ. ‘ಗಿರಿವಾಸಿಗಳಾದ ವ್ಯಾಧೀಯರು ಬಯಲು ಪ್ರದೇಶಗಳಿಗೆ ಬಂದ ಮೇಲೆ ಅವರು ಯಾವ ರೀತಿ ಪರಿವರ್ತನೆ ಹೊಂದುವರೆಂಬುದನ್ನು ಎಚ್ಚರಿಕೆಯಿಂದ ಎಂದೂ ಗಮನಿಸಿಲ್ಲ. ಅನೇಕ ಗಿರಿಜನರಾದರೂ ಮೈದಾನ ಪ್ರದೇಶಗಳಿಗೆ ಕಾಲಕ್ರಮದಲ್ಲಿ ಇಳಿದು ಬಂದು ನೆಲೆಸಿದ್ದಾರೆ.

[1] ಉತ್ತರ ಭಾರತದ ರಾಜಮಹಲ್, ಬಿಹಾರಗಳಲ್ಲಿ ಮುಂಡಾ, ಸಂತಾಲ ಗಿರಿಜನರಿದ್ದರು. ದ್ರಾವಿಡ ಲಕ್ಷಣಗಳನ್ನು ಅನೇಕ ಗಿರಿಜನರು ಹೊಂದಿದ್ದರು. ವ್ಯಾಧೀಯರಂತೆ ಮಾಲೆ, ಸಂತಾಲರ – ವಲಸೆಗಾರಿಕೆ ಹೊಂದಿದ್ದರು. ಉಸ್ಮಾನ್‌ಹಿಲ್ ಎಂಬುವರ ಪ್ರಕಾರ ವ್ಯಾಧ ಶಿರೋರೂಪವು ಶೇ.೩೩.೧ರಷ್ಟು ಲಂಬ ಶಿರೋಲಕ್ಷಣವನ್ನು ತೋರಿಸುತ್ತಾರೆ. ಮೊಹೆಂಜೋದಾರೊವಿನಲ್ಲಿ ಅತಿಲಂಬ ಶಿರೋಲಕ್ಷಣದ ತಲೆಬುರುಡೆಗಳು ವ್ಯಾಧಿಯ ಲಕ್ಷಣಗಳೇ ಆಗಿವೆ.

ಭಾರತದ ನಿವಾಸಿಗಳೆಲ್ಲರೂ ಮೂಲದಲ್ಲಿ ವ್ಯಾಧ ಜನಾಂಗವಾಗಿದ್ದು, ಕ್ರಮೇಣ ವಿವಿಧ ದರ್ಜೆಗಳನ್ನು ತೋರ್ಪಡಿಸಿಕೊಂಡಿದ್ದಾರೆ. ಇವರು ಸಿಂಹಳದ ವ್ಯಾಧದಂತೆ ಮೂಲ ಲಕ್ಷಣಗಳನ್ನು ಹೋಲುತ್ತಾರೆ. ವ್ಯಾಧ ಜನಾಂಗವು ಒಂದಾನೊಂದು ಕಾಲದಲ್ಲಿ ಈ ದೇಶದಲ್ಲಿ ವಿಶಾಲ ವ್ಯಾಪಿಯಾಗಿದ್ದು ತನ್ನ ವಲಸೆ ಹೋಗುವ ಕಾಲಗತಿಯಿಂದ ಪ್ರಾಯಶಃ ಅಲ್ಲಿಂದ ಹೊರಟು ಹೋಯಿತೆಂಬುದನ್ನು ತೋರಿಸುತ್ತದೆ. ಭಾರತದ ಹೊರಗೂ ವ್ಯಾದ ಜನಾಂಗದ ಪುಟ್ಟ ಪ್ರದೇಶಗಳಿವೆಂದು ಹೇಳಲಾಗುತ್ತದೆ. ದಕ್ಷಿಣ ಅರೇಬಿಯಾದ ಹಧ್ಮತ್ ಎಂಬಲ್ಲಿ ವಾದ್ಯ ಜನಾಂಗದ ‘ಕೂನ್’ ಎಂಬ ಪ್ರದೇಶವಿದೆ. ಆಫ್‌ಘಾನಿಸ್ತಾನದ ಹೆಲ್‌ಮಾಂಡ್ ನದಿಯ ಇಕ್ಕೆಲಗಳಲ್ಲಿ, ಆಸ್ಟ್ರೇಲಿಯಾ ಮೂಲನಿವಾಸಿಗಳಲ್ಲಿ ಮುರ್ರೇಯಿಯನ್ ಪ್ರಭೇದಕ್ಕೆ ಸೇರಿದ ಬೆಸ್ತ ಜನಾಂಗವಿದ್ದ ಉಲ್ಲೇಖಗಳಿವೆ (ಅಶೋಕನ ಕಂದಹರ್ ಶಾಸನ ಸಹ ಇದನ್ನು ತಿಳಿಸುತ್ತದೆ)

ಈಗಾಗಲೇ ಭಾರತದಲ್ಲಿ ‘ಗುಹೆ, ಗಿರಿಗಳಲ್ಲಿ ವಾಸ ಮಾಡುವ ವ್ಯಾಧ ಜನರನ್ನು ಗಿರಿಜನರೆಂದು ಕರೆದಿದ್ದಾರೆ. ವ್ಯಾಧರ ದೈಹಿಕ ಲಕ್ಷಣಗಳಲ್ಲಿ ಸ್ವಲ್ಪಮಟ್ಟಿಗೆ ಭಿನ್ನತೆಗಳಿವೆ. ಎಡ್ಗರ್ ಥರ್ಸ್‌ಟನ್‌ರು ವನ್ಯಕಣಿಕರು ಮತ್ತು ಗ್ರಾಮ ವಾಸೀ ಕಣಿಕರಲ್ಲಿ ಇಂಥಾ ವ್ಯತ್ಯಾಸವನ್ನು ಗುರುತಿಸುತ್ತಿದ್ದಾರೆ. ಈ ಹಿಂದೆ ತಿಳಿಸಿರುವಂತೆ ವ್ಯಾಧರ ಮೊಟ್ಟಮೊದಲ ಘರ್ಷಣೆ ಆರ್ಯ ಧಾಳಿಕಾರರೊಡನೆ. ಆರ್ಯರು ತಮ್ಮ ಭಾಷೆಯನ್ನು ಅವರ ಮೇಲೆ ಹೇರಿದರು. ಈ ಆಕ್ರಮಣಕಾರೀ ಆರ್ಯರ ಮೂಲ ಜನಾಂಗ ಲಕ್ಷಣಗಳು ಸ್ವಲ್ಪ ಮಾತ್ರವೂ ನಮಗಿಂದು ದೊರಕುವುದಿಲ್ಲ. ಆದರೆ ಪರಸ್ಪರ ಸಂಪರ್ಕದಿಂದ ವ್ಯಾಧರು ಮತ್ತು ಭಾರತೀಯ ಆರ್ಯರು ಬಹಳ ರೂಪಾಂತರ ಹೊಂದಿದಂತೆ ತೋರುತ್ತದೆ. ತೋಡರಿಗೆ ೭೪ರ ಹತ್ತಿರ ಶೃಂಗವಂದು ಕಂಡುಬರುವುದು. ಇವರು ಉತ್ತರ ಭಾರತದ ಮೂಲನಿವಾಸಿಗಳೆಂಬುದನ್ನು ಮತ್ತಷ್ಟು ಹೆಚ್ಚಾಗಿ ಸಮರ್ಥಿಸುತ್ತದೆ. ಇಲ್ಲೂ ಕೂಡ ೭೪ರ ಹತ್ತಿರದ ಶೃಂಗವೂ ೭೨ರ ಹತ್ತಿರದ ಭಾರತೀಯ ಆರ‍್ಯಶೃಂಗದ ವೈವಿಧ್ಯವೆಂದು ತೋರುತ್ತದೆ.[2] ಅತೀ ಕುಬ್ಜತನ ವ್ಯಾಧರ ಲಕ್ಷಣ. ದ್ರಾವಿಡರ ಇಂಥಾ ವಾಧ ಬುಡಕಟ್ಟಿನಿಂದ ಹುಟ್ಟಿ ಬಂದಿದ್ದಾರೆ. ಹೀಗೆ ವ್ಯಾಧ ಜನಾಂಗದೊಡನೆ ಮಿಶ್ರಿತಗೊಂಡು ಇತರ ಸಮುದಾಯಗಳು ಉದಯವಾಗಿರಬೇಕು. ಕರ್ನಾಟಕದಲ್ಲಿ ಹಾವನೂರು ವರದಿ ಪ್ರಕಾರ ೧೭ ಪರ್ಯಾಯ ಹೆಸರುಗಳಿಂದ ಇವರು ಗುರುತಿಸಿಕೊಂಡಿದ್ದಾರೆ. ೧೯೯೧ ಡಿಸೆಂಬರ್‌ನಲ್ಲಿ ೪ (ಜಾತಿಯ ಪ್ರಭೇದ) ಹೆಸರುಗಳನ್ನು ಸಂವಿಧಾನದಲ್ಲಿ ಪುನಃ ಅಂಗೀಕರಿಸಿ ಪರಿಶಿಷ್ಟ ವರ್ಗಕ್ಕೆ ಸೇರಿಸಲಾಗಿದೆ.

ಬೇಟೆಯ ಮೂಲಕ ಬೇಡ ಎಂಬ ಜಾತಿ ನಿರ್ಮಾಣವಾಗಿದೆ. ಇಂದಿಗೂ ಬೇಟೆಗಾರರಿಗೆ ಬೇಡರೆಂದೇ ಕರೆಯುವರು. ಬೇಡರು ಯಾವುದಕ್ಕೂ ಅಂಜದವರು. ಬೇಟೆ, ಪಶುಪಾಲನೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ನಿಪುಣರಾಗಿದ್ದರು. ಹೀಗೆ ರಾಜಪ್ರಭುತ್ವದ ಪದವಿಗಳವರೆಗೂ ಇವರು ಅರ್ಹರಾಗಿದ್ದರು. ಬಿಲ್ಲುಬಾಣ ಹಿಡಿದು ಬೇಟೆಯಾಡುವುದಷ್ಟೇ ಅಲ್ಲ. ಸೈನಿಕರಾಗಿ, ನಾಯಕರಾಗಿ, ತಳವಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಕ್ಷತ್ರಿಯರು, ವೀರಯೋಧ ಜನಾಂಗದವರಾದ ಬೇಡರು ಹಿಂದೂಧರ್ಮದ ಚೌಕಟ್ಟಿನಲ್ಲಿಯೇ ಪ್ರತ್ಯೇಕ ಧರ್ಮವನ್ನು ಸೃಷ್ಟಿಸಿಕೊಂಡಿರುವರು.

ಪ್ರಾಚೀನ ಕಾಲದಲ್ಲಿ ಕಿರಾತರ ಬದುಕು ವೈವಿಧ್ಯಮಯವಾಗಿತ್ತು. ಆರ್ಯರ ಕಾಲದಲ್ಲಿ ಕಿರಾತರ ಹೆಣ್ಣು, ವನಸ್ಪತಿ, ಆಯುರ್ವೇದಗಳಲ್ಲಿ ಪರಿಣಿತಿ ಪಡೆದಿದ್ದರು. ಕಿರಾತರು, ಶಬರರು ಕ್ಷತ್ರಿಯರೆಂದು, ಶೂದ್ರರೆಂದು ಕರೆಸಿಕೊಂಡಿದ್ದು, ಅನಂತರದ ಹೊಸ ಬೆಳವಣಿಗೆಗೆ ಎನ್ನಬಹುದು. ಮಹಾಭಾರತದಲ್ಲಿ ಶೂದ್ರನಾದ ಬೇಡ, ರಾಮಾಯಣದಲ್ಲಿ, ಪರ್ಯಾಯ ದ್ವೀಪದೊಳಗೆ ದರೋಡೆಕೋರರು, ಹಸೆಮಾಂಸ ತಿನ್ನುವ ನಿಸರ್ಗ ಪ್ರಿಯರಾಗಿದ್ದರು. ಭಾರತದಲ್ಲಿ ಪಶ್ಚಿಮ ದಿಕ್ಕಿಗಿರುವ ಕಾಮರೂಪದಲ್ಲಿ ಪ್ರಬಲ ಅರಸ ‘ಪ್ರಗ್ಜೊತಿ’ ಕುರುಕ್ಷೇತ್ರ ಕಾಳಗದಲ್ಲಿ ಬೇಡರ ಸೈನ್ಯ ಪ್ರಬಲವಾಗಿ ಹೋರಾಡಲು ಕಾರಣನಾದನು. ಕ್ರಿ.ಶ.೭ನೇ ಶತಮಾನದಲ್ಲಿ ಹಿಮಾಲಯ ಪ್ರದೇಶದಿಂದ ವಿಸ್ತರಣೆಗೊಂಡು ಕಿರಾತರು, ಪಂಜಾಬ್, ವಿಂದ್ಯಾಪರ್ವತಗಳಲ್ಲಿ ವಸಾಹತು ನೆಲೆಗಳನ್ನು ಸ್ಥಾಪಿಸಿಕೊಂಡರು. ಕಿರಾತರೇ ವ್ಯಾಪಕವಾಗಿ ನೆಲೆಸಿದ್ದು ಕಿರಾತ ದೇಶದಲ್ಲಿ ದುದ್‌ಕೋಶಿ ಮತ್ತು ಕರ್ಕಿನದಿ (ನೇಪಾಳ) ದಂಡೆ ಮೇಲೆ ಈ ಕಿರಾತ ದೇಶವಿತ್ತು. ಇಂಥದ್ದೇ ಗುಜರಾತಿನ ದೇವರಗುಡ್ಡದ ಹತ್ತಿರ ಕಿರಾತ ದೇಶವೊಂದಿತ್ತು.

ದಕ್ಷಿಣ ಭಾರತದ ಬೇಡರು ಬೇಟೆಗಾರರಾಗಿ ಕಂಡು ಬರುತ್ತಾರೆ. ನಾಯಕತನ ಶೂರ, ಸ್ವಾಭಿಮಾನಗಳಿಂದ ಕೂಡಿರುವ ಇವರನ್ನು ಕರ್ನಾಟಕದ ರಜಪೂತರೆಂದು ಕರೆಯುವರು. ಮಲೆಪರೆಂದು, ಗಿರಿಜನರೆಂದು, ಬೇಡರ ಪಡೆಗಳೆಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕದ ಮಟ್ಟಿಗೆ ಬೇಡರನ್ನು ಉಲ್ಲೇಖಿಸುವ ಮೊದಲ ಶಾಸನ ಗದ್ದೆಮನೆ ಶಾಸನ. ಕ್ರಿ.ಶ. ೭ನೇ ಶತಮಾನದಲ್ಲಿ ಬೇಡರ ಪ್ರತ್ಯೇಕ ರಾಜ್ಯಗಳಿದ್ದವೆಂದು ತಿಳಿದುಬರುತ್ತದೆ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ವಿದ್ವಾಂಸ ಕದಂಬರು ಬೇಡರೆಂದು ವಿವರಿಸಿದ್ದಾನೆ. ಬೇಡರನ್ನು ಉಲ್ಲೇಖಿಸುವ ಶಾಸನಗಳಿರುವುದು ಹೆಚ್ಚಾಗಿ ಮಲೆನಾಡಿನಲ್ಲಿ, ನಾನಾ ಬಗೆಯಾಗಿ ಹೋರಾಡಿ, ಮಡಿದ ಸಾಹಸಗಾಥೆಗಳನ್ನು ಇವು ಉತ್ತರಿಸುತ್ತವೆ. ಶಾತವಾಹನರ ಕಾಲಕ್ಕೆ ತಳವಾರ ಎಂದು ಕರೆಸಿಕೊಂಡು ಹುದ್ದೆಯಲ್ಲಿದ್ದ ಬೇಡರು, ರಾಷ್ಟ್ರಕೂಟರ ಕಾಲಕ್ಕೆ ‘ನಾಯಕ’ ಪದವಿಗೆ ಬಡ್ತಿ ಪಡೆದಂತಾಯಿತು. ವಿಜಯನಗರ ಪೂರ್ವದಲ್ಲಿಯೇ ಮಹಾನಾಯಕಚಾರ್ಯ ಎಂಬ ಬಿರುದುಗಳನ್ನು ಗಳಿಸಿದ್ದರು.

ಕರ್ನಾಟಕದ ಬೇಡರ ಪರಿಚಯವೇ ಅನಗತ್ಯ! ಅಷ್ಟೊಂದು ಪ್ರಸಿದ್ಧಿ ಗಾಂಭಿರ್ಯತೆಯನ್ನು ತಾಳಿದೆ ಈ ಜನಾಂಗ. ಈ ನಾಡಿನ ಮೂಲನಿವಾಸಿಗಳಲ್ಲಿ ಬೇಡರು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಇವರು ಅಪ್ಪಟ ಬುಡಕಟ್ಟಿನ ಜನರೆಂಬುದು ವಾಸ್ತವ. ಗಂಗರ ೧ನೇ ಶಿವಮಾರನ ಕ್ರಿ.ಶ. ೭೧೩ ರ ಶಾಸನದಲ್ಲಿ ಕಿರಾತ ಹೆಣ್ಣು ನವಕಾಮನ ಆಸ್ಥಾನದಲ್ಲಿ ನರ್ತಿಕಿಯಾಗಿದ್ದಳಂತೆ. ಇವರ ಅಭ್ಯುದಯವನ್ನು ಸಹಿಸದ ಗಂಗ ಕೊಂಗುಣಿವರ್ಮ, ಧರ್ಮರಾಜ ಶಿವಮಾರನು ಕ್ರಿ.ಶ. ೯೭೩ರಲ್ಲಿ ಕಿರಾತರನ್ನು ಹತ್ತಿಕ್ಕಿದ್ದರು. ಬೇಡರು ತಮ್ಮ ಅಸ್ತಿತ್ವವನ್ನು ಬಿಗಿಗೊಳಿಸಿಕೊಂಡಿದ್ದು, ರಾಷ್ಟ್ರಕೂಟರ ಕಾಲದಲ್ಲಿ, ಗಂಗರ ಕಾಲದಲ್ಲಿ ಅಪಾರ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿದ ಇವರು ಇಲ್ಲಿ ನಾಯಕರೆಂದು ಕರೆಸಿಕೊಂಡರು. ಕ್ರಿ.ಶ.೯೫೪ರ ಶಾಸನದಲ್ಲಿ ೩ನೇ ಕನ್ನರದೇವನು ಬನವಾಸಿ ೧೨,೦೦೦ ಜಿಲ್ಲೆಯಲ್ಲಿ ಬೇಡರು ಕಳ್ಳರಾಗಿ, ದಾರಿಗಳ್ಳರಾಗಿ ದನಗಳನ್ನು ಅಲ್ಲದೇ, ಬ್ರಾಹ್ಮಣರಿಗೆ ಉಪಟಳ ಕೊಡುತ್ತಿದ್ದರು. ಕ್ರಮೇಣ ನಾಡಗಾವುಂಡರಾಗಿ ಪ್ರಮುಖ ಹುದ್ದೆಗಳನ್ನು ಕೆಲವರೇ ಪಡೆದುಕೊಂಡರು.

ಬೇಡರು ಮೂಲತಃ ಬೇಟೆ ಮತ್ತು ಪಶುಪಾಲನಾ ವೃತ್ತಿಗಳಿಗೆ ಸೇರಿದವರೆಂಬುದಕ್ಕೆ ಇವರ ಮಹಿಳೆಯರು ಸಹ ಬೇಟೆ ಜೊತೆ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದು ಗಮನಾರ್ಹ. ಪಶುಪಾಲನೆಯಲ್ಲಿ ತೊಡಗಿದ ಬಗ್ಗೆ ಕ್ರಿ.ಶ. ೯೭೭ರ ಶಾಸನ ಬೆಳಕು ಚೆಲ್ಲುತ್ತದೆ. ಪಶ್ಚಿಮ ಚಾಲುಕ್ಯರ ಕಾಲದಲ್ಲಿ ರಟ್ಟರನ್ನು ಇತರ ವಿರೋಧಿಗಳನ್ನು ಹತ್ತಿಕ್ಕಿದ್ದು ಬೇಡರ ಸಾಧನೆಗೆ ಕಿರೀಟಪ್ರಾಯವೇ ಸರಿ. ಬೇಡರು ಯುದ್ಧದಲ್ಲಿ ತಂದುಕೊಟ್ಟ ಜಯಕ್ಕಾಗಿ ದಾನದತ್ತಿಗಳನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ಹೀಗೆ ಉನ್ನತ ಹುದ್ದೆಗಳಿಗೆ ಅಲಂಕರಿಸುವಲ್ಲಿನ ಸ್ಪರ್ಧೆ ಅಗತ್ಯವೂ ಅನಿವಾರ್ಯವೂ ಆಗಿತ್ತು.

ಕ್ರಿ.ಶ.೧೧೧೭ರಲ್ಲಿ ಹೊಯ್ಸಳ ವಿಷ್ಣುವರ್ಧನ ಬಿಟ್ಟಿದೇವನು ಕಿರಾತ ಮುಖ್ಯಸ್ಥರನ್ನು, ಶಕ್ತಿಶಾಲಿ ವೀರರನ್ನು ತನ್ನ ಸಹಾಯಕ್ಕೆ ನೇಮಿಸಿಕೊಂಡಿದ್ದ. ಇದೇ ಸಂದರ್ಭದಲ್ಲಿ ಹೊಯ್ಸಳರಿಗೂ ಮತ್ತು ಸೇವುಣರಿಗೂ ಯುದ್ಧ ನಡೆದಾಗ ಬೇಡ ಸೈನಿಕರ ಶ್ರಮ ಹೊಯ್ಸಳರ ಪರವಾಗಿದ್ದುದು ನಿರ್ಣಾಯಕ ಅಂಶ. ವಿಷ್ಣುವರ್ಧನನ ನೆಚ್ಚಿನನಾದ ಬೇಟೆಯ ತಿಪ್ಪೆಯನಾಯಕನಿಗೆ ಸೋವೆನಾಯಕಿತಿ, ಮಾಚವೆನಾಯಕಿತಿ ಎಂಬ ಹೆಂಡತಿಯರಿದ್ದರು. ಅಂದು ವೃತ್ತಿಗಳಲ್ಲಿ, ರಾಜಪ್ರಭುತ್ವದಲ್ಲಿ ಹೊಂದಾಣಿಕೆಯಿದ್ದು, ವಿವಾಹಗಳು ಸಾಮಾನ್ಯವಾದ ನಿರ್ಧಾರದೊಂದಿಗೆ ನಡೆಯುತ್ತಿದ್ದವು.

ವಿಜಯನಗರ ಕಾಲದಲ್ಲಿ ಮುಕ್ಕಾಲು ಭಾಗ ಸೈನಿಕರು, ಪ್ರಜೆಗಳು, ಸೇವಕರು ಬೇಡರೇ ಆಗಿದ್ದರೆಂಬ ಹೆಗ್ಗಳಿಕೆ ಮಾತು ಸುಳ್ಳಲ್ಲ. ಇವರಿಗೂ ಪೂರ್ವದಲ್ಲಿ ಕಮ್ಮಟದುರ್ಗದ ಮುಮ್ಮಡಿ ಸಿಂಗೇಯನಾಯಕ, ಕಂಪಿಲರಾಯ ಮತ್ತು ಕುಮಾರರಾಮರು ಪೂವಾಲಿ ಬೆಡಗಿನ ನಾಯಕವಂಶಸ್ಥರಾಗಿದ್ದರು. ಕುಮಾರರಾಮನ ತಾಯಿ ಹರಿಯಾಲದೇವಿ ಗುಜ್ಜಲ ವಂಶದವಳು. ಚಿಕ್ಕರಾಜ್ಯವಾದರೂ ಕುಮ್ಮಟದುರ್ಗ ಇತಿಹಾಸದಲ್ಲಿ ಅಗ್ರಸ್ಥಾನ ಪಡೆದಿದೆ. ಇವರ ಭಾವನಾದ ಸಂಗಮನ ಮಕ್ಕಳೇ ಹರಿಹರ ಮತ್ತು ಬುಕ್ಕ. ಇವರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದರು. ಪ್ರಸಿದ್ಧ ಇತಿಹಾಸಕಾರರಾದ ಡಾ.ಭಂಡಾರಕರ್, ಡಾ.ವಿ.ಎಸ್. ಸ್ಮಿತ್ ಮತ್ತು ಪಂಡಿತ ರಾಮಕೃಷ್ಣ ಶಾಸ್ತ್ರಿ ಮೊದಲಾದವರು ಅಭಿಪ್ರಾಯಪಡುವಂತೆ: ‘ಹಕ್ಕ – ಬುಕ್ಕರು ಪ್ರಾತಪರುದ್ರನ ಸೇನೆಯಲ್ಲಿದ್ದರು. ಅವನು ಪರಾಭವಗೊಂಡಾಗ ಕಂಪಿಲಿಗೆ ಹೋಗಿ ಸೇರಿಕೊಂಡರೆಂದೂ, ಕಂಪಿಲರಾಯನು ಬೇಡರ ಜಾತಿಗೆ ಸೇರಿದವನೆಂದೂ ಆದ್ದರಿಂದ ಹಕ್ಕಬುಕ್ಕರು ಕೂಡ ಕಂಪಿಲರಾಯನ ಜಾತಿಯವರೇ ಆಗಿದ್ದರೆಂಬ ಸಂಗತಿ ಗಮನಾರ್ಹವಾದುದು. ಹೀಗಾಗಿ ವಿಜಯನಗರದ ಸ್ಥಾಪನೆಗೆ ಬೇಡರೇ ಕಾರಣರಾದುದನ್ನು ಅಲ್ಲಗಳೆಯುವಂತಿಲ್ಲ. ವಿಜಯನಗರ ಸೈನ್ಯದಲ್ಲಿ ಬಹುಸಂಖ್ಯೆಯ ಬೇಡರ ಕಾಲಾಳು ಪಡೆಯಿತ್ತು. ಅಮರನಾಯಕರೆಂದು ಅನೇಕ ಪ್ರಯೋಜನಗಳನ್ನು ಇವರು ಪಡೆದುಕೊಂಡರು. ವಿಜಯನಗರದ ಅರಸರು ಮುಸಲ್ಮಾನರ ವಿರುದ್ಧ ಹೋರಾಡಲು ಬೇಡಪಡೆಯವರನ್ನು ಆಶ್ರಯಿಸಿದ್ದರು. ಬಿ.ಎಲ್.ರೈಸ್‌ರು ತಮ್ಮ ಗ್ಯಾಸೆಟಿಯರ್‌ನಲ್ಲಿ ತಿಳಿಸಿರುವಂತೆ ‘ತಾಳಿಕೋಟೆ ಯುದ್ಧದಲ್ಲಿ ಬೇಡ ಜನಾಂಗದ ೭೨ ಸಂಸ್ಥಾನದ ನಾಯಕರು ಶಕ್ತಿ ಸಾಹಸ ತೋರಿಸಿ ಕಷ್ಟಕ್ಕೀಡಾದುದು ಚರಿತ್ರೆ ಪುಟಗಳಲ್ಲಿ ರಾರಾಜಿಸುತ್ತದೆ. ರಕ್ಕಸಗಿ – ತಂಗಡಗಿ ಯುದ್ಧ ೧೫೬೫ ಜನವರೆ ೨೩ರಂದು ನಡೆದಾಗ ಸು.೪೦ ಸಾವಿರ ಬೇಡರ ಪಡೆ ಹತವಾಯಿತೆಂದು ವಿದೇಶಿ ಪ್ರವಾಸಿ (ಪಿರಿಸ್ತಾ) ಹೇಳಿದ್ದಾನೆ. ಈ ಸಂಗತಿಯನ್ನು ಬಳ್ಳಾರಿ ಜಿಲ್ಲೆಯ ಹಿರಿಯ ತಲೆಮಾರಿನ (ಬೇಡ – ನಾಯಕ) ವ್ಯಕ್ತಿಗಳು ನಿಜವೆಂದು ಒಪ್ಪುತ್ತಾರೆ. ಆದ್ದರಿಂದಲೇ ನಮ್ಮ ಹೆಣ್ಣು ಮಕ್ಕಳು ಗಂಡನಿಲ್ಲದ್ದರಿಂದ ದೇವದಾಸಿಯವರಾದರೆಂದು ಮರುಕಪಡುತ್ತಾರೆ. ಬೇಡರು ತೋರಿದ ಸಹಾಯ, ದಂಡನಾಯಕತ್ವಗಳಿಗೆ ವಿಜಯನಗರದ ಅರಸ ಸದಾಶಿವರಾಯ ೧೫೬೭ರಲ್ಲಿ ‘ಬೇಡರಿಗೆ ಸ್ವಾಯತ್ತತೆಯನ್ನು ದಯೆಪಾಲಿಸಿದ್ದು’ ಸ್ಮರಣೀಯ. ಅದೇ ವರ್ಷ ರಾಮರಾಯನ ತಮ್ಮನ್ನು ಪ್ರಸಿದ್ಧ ರಿಜೆಂಟನು ಆಗಿದ್ದ ತಿರುಮಲರಾಯ ರಕ್ಕಸಗಿ ತಂಗಡಗಿಯಲ್ಲಿ ಬೇಡರನ್ನು ತೊಡಗಿಸಿಕೊಂಡಿದ್ದಕ್ಕೆ ಬೇಡರ ಮುಖ್ಯಸ್ಥ ಕಾಮಗೇತಿ ಮದಕೇರಿ ನಾಯಕನಿಗೆ ಚಿತ್ರದುರ್ಗ, ಹೊಳಲ್ಕೆರೆ ಇತರೆ ಸ್ಥಳಗಳನ್ನು ಅಮರಮಾಗಣಿಯಾಗಿ ಬಿಟ್ಟುಕೊಟ್ಟ. ಇವನ ತಮ್ಮ ಗುಲ್ಲಿಯಪ್ಪನಾಯಕನಿಗೂ ಸಹ ಉಂಬಳಿ ಕೊಡಲಾಯಿತು.

ವಿಜಯನಗರದಲ್ಲಿ ಸೈನಿಕರಾಗಿ, ದಂಡುಹೋದ ಸ್ಥಳಗಳಲ್ಲಿ ವಸತಿ ಹೂಡುತ್ತಾ, ತಂಗಿರುತ್ತಿದ್ದ ಸ್ಥಳಗಳಲ್ಲಿ ನಾಯಕರು, ಸೈನಿಕರು ಕ್ರಮೇಣ ಪಾಳೆಯಗಾರರಾದರು. ೧೫ – ೧೬ನೇ ಶತಮಾನದಲ್ಲಿ ಇವರು ಏಳಿಗೆಯಾದರೂ ೧೭ನೇ ಶತಮಾನದ ಶಾಸನಗಳಲ್ಲಿ ಪಾಳೆಯಗಾರ ಪದದ ಉಲ್ಲೇಖವಿದೆ. ಪಾಳೆಯಗಾರರು ಆಕಾಲಕ್ಕೆ ರಾಜಪ್ರಭುತ್ವ ಪಡೆದ ಕೆಳದರ್ಜೆಯ (ವರ್ಗ) ಜನರು. ಸರಿಯಾದ ಸ್ಥಾನಮಾನ ಸಿಗದ ಪರಾಕ್ರಮಿಗಳು ಹೋರಾಟದ ಮೂಲಕ ಪ್ರಭುತ್ವ ಪಡೆದರು. ಇವರಿಗೆ ಇಂದು ನೀಚಾರ್ಥವಾಗಿ ಕರೆಯುತ್ತಿರುವುದು ವಿಪರ್ಯಾಸ. ಬೇಡರೇ ಮೊದಲ ಪಾಳೆಯಗಾರರಾದರೂ ಅನಂತರದಲ್ಲಿ ಇತರ ಜನಾಂಗದವರು ಈ ರೀತಿ ಪ್ರಭುತ್ವ ಹೊಂದಿದರು. ಇಂಥ ಪಾಳೆಯಗಾರಿಕೆಯಿಂದ ಅತಿ ದೂರದಲ್ಲಿದ್ದವರು ಮ್ಯಾಸಬೇಡರು. ಇವರಿಗೆ ರಾಜಪ್ರಭುತ್ವಕ್ಕಿಂತ ತಮ್ಮ ಸಂಸ್ಕೃತಿ, ಸಂಪ್ರದಾಯ, ನಾಗರಿಕತೆ ಹೆಚ್ಚು ಮಹತ್ವವಾಗಿ ಕಾಣಿಸಿತು. ಸಾಂಸ್ಕೃತಿಕ ರಾಜಪ್ರಭುತ್ವಕ್ಕಿಂತ ತಮ್ಮ ಸಂಸ್ಕೃತಿ, ಸಂಪ್ರದಾಯ, ನಾಗರಿಕತೆ ಹೆಚ್ಚು ಮಹತ್ವವಾಗಿ ಕಾಣಿಸಿತು. ಸಾಂಸ್ಕೃತಿಕ ರಾಜಪ್ರಭುತ್ವವನ್ನು ನಾಯಕನಹಟ್ಟಿಯಲ್ಲಿ ಸ್ಥಾಪಿಸಿದರು. ನಾಯಕನಹಟ್ಟಿ ಸಮೀಪದ ಹೊಸಗುಡ್ಡ (ರಾಮದುರ್ಗ) ಈ ಹಿನ್ನೆಲೆಯಲ್ಲಿ ಮಹತ್ವಾವಾದುದು.

ನಾಗರಿಕತೆಯೊಂದಿಗೆ ರಾಜಕೀಯ ನಿಪುಣತೆ ಪಡೆದ ಬೇಡರು ಅಲ್ಲಲ್ಲಿ ಪಾಳೆಯಪಟ್ಟುಗಳನ್ನು ಸ್ಥಾಪಿಸಿಕೊಂಡರು. ಅವುಗಳೆಂದರೆ; ಚಿತ್ರದುರ್ಗ, ಗುಡೆಕೋಟೆ, ಜರಿಮಲೆ, ರಾಯದುರ್ಗ, ಮೊಳಕಾಲ್ಮೂರು, ರತ್ನಗಿರಿ, ನಿಡಗಲ್ಲು, ಶಿರಾ, ಬಳ್ಳಾರಿ, ಪೆನುಗೊಂಡ, ಮದಗಮಾಸೂರು, ಇಕ್ಕೇರಿ, ಸ್ವಾದಿ, ಚಂದಾವರ, ಹರ್ತಿಕೋಟೆ, ಹಾಗಲವಾಡಿ, ವಾಗಿನಗೇರಾ, ಸುರಪುರ, ಬಿದನೂರು, ಮುಂಡಿಕೋಟೆ, ಮಟ್ಟಿ, ಕಡಪೆ, ತಲಕೇರಿ (ಚೇರಿ), ಬೆಳಗುತ್ತಿ, ಕುಮ್ಮಟದುರ್ಗ, ಆನೆಗುಂದಿ, ಮಂಗಳೂರು, ಬಸವಾಪಟ್ಟಣ, ಬೇಲೂರು, ಹಲಲೆಕೋಟೆ, ಬಾಣವಾರ, ಚಿಕ್ಕನಾಯಕನಳ್ಳಿ, ಕೊಲ್ಲಾಪುರ, ಬಂಕಾಪುರ, ನಂದೀಯಾಳ, ದಾವನಹಳ್ಳಿ, ಕಿತ್ತೂರು, ತಂಜಾವೂರು, ಮಧುರೇ, ಬಾದಾಮಿ, ದೊರಮಲೆ, ಗೋನೂರು, ನನ್ನಿವಾಳ, ಮಿಡಿಗೇಶಿ, ಪಾವಗಡ, ಶಿವರ, ಐಮಂಗಲ, ಪುರವರ, ಬಾಗೂರು, ಗುತ್ತಿ, ಚೆನ್ನಪಟ್ಟಣ, ಮಲೇದುರ್ಗ, ಕನಕಗಿರಿ, ಗುರುಗುಂಟಾ ಲೇಪಾಕ್ಷಿ, ಆದವಾನಿ, ಚಂದ್ರಗಿರಿ, ದೊಡ್ಡೇರಿ, ತಲಕಾಡು, ರಾಯಚೂರು, ರಾಣ್ಯ, ಹದಿನಾಡು, ಯಳಂದೂರು, ಕಾರುಗನಹಳ್ಳಿ, ಹುಳಿಯಾರು, ಕೊರಟಗಿ, ಹೊನ್ನುಡುಕಿ, ಹಂಪನಹಳ್ಳಿ, ಕರಜಿಗಿ, ಹುಚ್ಚಂಗಿದುರ್ಗ, ಮತ್ತೋಡು ಮೊದಲಾದವುಗಳನ್ನು ಹೆಸರಿಸಬಹುದು.

ಕರ್ನಾಟಕದ ಉತ್ತರ ಭಾಗದಲ್ಲಿ ವಾಗಿನಗೇರಾದ ಬೇಡರು ಮೊಘಲರ ಔರಂಗಜೇಬನಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಇವರು ಮೊಘಲ, ಮರಾಠ ಮತ್ತು ಮುಸ್ಲಿಂ ಅರಸರನ್ನು ಎದುರಿಸಿದ್ದು, ಅನಿವಾರ್ಯವಾಗಿ ಅವರ ಅಧೀನ ಮತ್ತು ಹಿಡಿತದಲ್ಲಿದ್ದುದು ದುರದೃಷ್ಟಕರ. ಔರಂಗಜೇಬನು ಬೇಡರ ಸಾಹಸ, ಧೈರ್ಯಗಳನ್ನು ಒಪ್ಪಿಕೊಂಡು ಮನಸಾರೆ ಹೊಗಳಿರುತ್ತಾನೆ.

ಮೈಸೂರು ಪ್ರದೇಶದಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆ ಪಾಳೆಯಗಾರರಿಗೆ ನುಂಗಲಾರದ ತುತ್ತಾಗಿತ್ತು. ವಿದೇಶಿಯರನ್ನು ಹಿಮ್ಮೆಟ್ಟಿಸಲು ಸ್ಥಳೀಯರನ್ನು ಒಂದು ಗೂಡಿಸುವಲ್ಲಿ ವಿಫಲನಾದ ಟಿಪ್ಪು ಸ್ಥಳೀಯರನ್ನು ಸೋಲಿಸುವುದರೊಂದಿಗೆ ತನ್ನ ಪರಾಕ್ರಮವನ್ನು ಹೆಚ್ಚಿಸಿಕೊಂಡರೂ ವಿದೇಶಿಯರನ್ನು ಹೊರದೂಡುವಲ್ಲಿ ಇಂಥವರ ಅಗತ್ಯವನ್ನು ಗಾಳಿಗೆ ತೂರಿದ್ದು, ಅವನ ಅವಸಾನಕ್ಕೆ ಕಾರಣವಾಯಿತು. ಇದಲ್ಲದೆ, ಕರ್ನಾಟಕದ ಕೆಲವು ಭಾಗಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಹೈದರನು ಅಸಂಖ್ಯಾತ ಬೇಡರನ್ನು ಇಸ್ಲಾಂಗೆ ಪರಿವರ್ತಿಸಿದನಂತೆ. ಇನ್ನೊಂದು ದುರಂತವೆಂದರೆ; ಶ್ರೀರಂಗ ಪಟ್ಟಣದ ಯುದ್ಧದಲ್ಲಿ ೨೦,೦೦೦ ಸಾವಿರ ಬೇಡರನ್ನು ಬಂಧಿಸಿದ್ದು, ಇವು ಬೇಡರ ಏಳಿಗೆಗೆ ಮುಳ್ಳಿನ ಹಾದಿಯಾಗಲು ಕಾರಣವಾದವು.

ಇಂಥಾ ನಾನಾ ಸಂಕಷ್ಟಗಳ ನಡುವೆ ಬೇಡರು ಪ್ರಜಾಪಾಲನೆ ಮಾಡಿದ್ದು, ಶ್ಲಾಘನೀಯ. ಹೀಗೆ ೧೭ ಮತ್ತು ೧೮ನೇ ಶತಮಾಣದಲ್ಲಿ ಬೇಡರು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಪ್ರಬಲಶಾಲಿಗಳಾಗಿದ್ದರು. ಸ್ವಾಮಿನಿಷ್ಠೆಗೆ ಹೆಸರಾದ ಬೇಡರು ನಿಸ್ವಾರ್ಥದಿಂದ ಗೆಲುವು ತಂದುಕೊಟ್ಟ ಉದಾಹರಣೆಗಳಿವೆ. ಈ ಸಾಹಸಕ್ಕೂ ಏನೋ ವಿಲಿಯಂ ಸ್ಮಿತ್ ಎಂಬ ಇತಿಹಾಸಕಾರನು ‘ಜಗತ್ತಿನಲ್ಲಿ ಬೇಡರಷ್ಟು ಶೂರರು ಸಿಗಬಹುದು. ಆದರೆ ಬೇಡರಿಗಿಂತ ಶೂರ ದೊರೆಯಲಾರರು’ ಎಂದಿದ್ದಾನೆ.

ನಾಲ್ಕನೇ ಮೈಸೂರು (ಆಂಗ್ಲೋ) ಯುದ್ಧದಲ್ಲಿ ಬ್ರಿಟಿಷರ ಮೈತ್ರಿಕೂಟದಿಂದ ಹತನಾಗುವ ಮುನ್ನ ಟಿಪ್ಪುಸುಲ್ತಾನ, ತನ್ನ ವಾರಸುದಾರಿಕೆಯನ್ನು ವಹಿಸಿಕೊಳ್ಳಲು ಅರ್ಹರಾದ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟಿದ್ದು, ಈ ನಾಡಿನ ರಕ್ಷಣೆಗಾಗಿ ವಿದೇಶಿಗಳೊಂದಿಗಿನ ಮೈತ್ರಿ, ನೆಪೋಲಿಯನ್‌ನೊಂದಿಗೆ ಪತ್ರ ಸಂಪರ್ಕ ಸ್ನೇಹಿತ ಒಪ್ಪಂದಗಳಿಸಿದರೂ ಸೋಲು ಅನಿವಾರ್ಯವಾಯಿತು. ಬ್ರಿಟಿಷರನ್ನು ಕೊನೆಯ ಎದುರಿಸುವುದು ದುಸ್ತರವಾದ ಕಾರ್ಯವಾಗಿತ್ತು. ಏಕೆಂದರೆ ನೆರೆಹೊರೆಯವರೆಲ್ಲಾ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು; ಮರಾಠರು, ಹೈದರಾಬಾದಿನ ನಿಜಾಮ ಸ್ಥಳೀಯ ಕೆಲ ಸಂಸ್ಥಾನಗಳು. ಟಿಪ್ಪುವಿನ ನಂತರ ಅವನ ಆಳ್ವಿಕೆಯಲ್ಲಿದ್ದ ಪ್ರದೇಶವನ್ನು ಇವರು ಹಂಚಿಕೊಂಡರು. ಬಳ್ಳಾರಿ ಪ್ರದೇಶವನ್ನು ಹೈದರಾಬಾದ್ ನಿಜಾಮನಿಗೆ, ಉತ್ತರ ಕರ್ನಾಟಕದ ಭಾಗವನ್ನು ಮರಾಠರಿಗೆ ಹೀಗೆ ಹಂಚಿದರು. ಬಳ್ಳಾರಿ ಪ್ರದೇಶದಲ್ಲಿ ಪರಿಸ್ಥಿತಿ ಕುರಿತು ನಿಜಾಮ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿ ಕರ್ನೂಲು, ಕಡಪಾ, ಅನಂತಪುರ ಮತ್ತು ಬಳ್ಳಾರಿ ಜಿಲ್ಲೆಗಳನ್ನು ದತ್ತಿ ಮಂಡಲವೆಂದು ಬ್ರಿಟಿಷರಿಗೆ ಬಿಟ್ಟುಕೊಟ್ಟ ಅಧಿಪತ್ಯಕ್ಕೆ ಸೇರಿದವು. ಉಳಿದ ಭಾಗಗಳು ಬಾಂಬೆ ಕರ್ನಾಟಕ, ಮೈಸೂರು ಸಂಸ್ಥಾನ ಸಂಡೂರು ಸಂಸ್ಥಾನ, ಕೊಡಗು ಸಂಸ್ಥಾನಗಳಿದ್ದದನು ಗಮನಿಸಬಹುದು. ಹೈದರಾಬಾದ್ ಕರ್ನಾಟಕದ ವ್ಯಾಪ್ತಿಗೆ ಬೀದರ್, ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಬರುತ್ತವೆ. ಹೀಗೆ ಹರಿದು ಹಂಚಿಹೋದ ಕರ್ನಾಟಕದಲ್ಲಿ ಬ್ರಿಟಿಷರ ಆಳ್ವಿಕೆ ರಾರಾಜಿಸುತ್ತಿತ್ತು. ಸಣ್ಣಪುಟ್ಟ ಸಂಸ್ಥಾನಗಳು ಇವರ ಅಧೀನದಲ್ಲಿ (ಒಬ್ಬ ಏಜೆಂಟ್‌ನಿದ್ದ) ಆಳ್ವಿಕೆ ನಡೆಸುವ ಪರಿಸ್ಥಿತಿ ಉಂಟಾಗಿದ್ದಿತು.

ಮದ್ರಾಸ್ ಅಧಿಪತ್ಯಕ್ಕೆ ಸೇರಿದ ಬಳ್ಳಾರಿ ಪ್ರದೇಶದಲ್ಲಿ ಆಡಳಿತ ಕಾರ್ಯ ಚುರುಕುಗೊಂಡವು. ಮೊದಲ ಕಲೆಕ್ಟರ್‌ನಾಗಿ ಸರ್. ಥಾಮಸ್‌ಮನ್ರೋ ೧೮೦೦ರಲ್ಲಿ ಆಡಳಿತ ಪ್ರಾರಂಭಿಸುತ್ತಾನೆ. ಇವನು ೭ ವರ್ಷ ಕಾಲ ಕಲೆಕ್ಟರ್‌ನಾಗಿ, ನಂತರ ಗವರ್ನರ್ ಜನರಲ್‌ನಾಗಿ ಆಡಳಿತ ನಡೆಸುವಾಗ ಅನೇಕ ಕಾರ್ಯಯೋಜನೆ, ಕಾಯ್ದೆ ಕಾನೂನು ಜಾರಿಗೆ ತಂದ. ಇವನು ಮಾಡಿದ ಮೊದಲ ಕೆಲಸವೆಂದರೆ ಸು.೮೦ ಮಂದಿ ಪಾಳೆಯಗಾರರಿಂದ ಕಪ್ಪು – ಕಾಣಿಕೆ ಒಪ್ಪಿಸಿಕೊಂಡನಲ್ಲದೆ, ಹಂತ ಹಂತವಾಗಿ ಅವರನನು ಮಟ್ಟಹಾಕಲು ಹವಣಿಸಿ ಯಶಸ್ವಿಯಾದನು. ಇವನ ಕ್ರೂರ ನೀತಿಗಳ ವಿರುದ್ಧ ೧೮೦೩ರಲ್ಲಿ ಪಾಳೆಯಗಾರ ವಂಶಸ್ಥರು ಬಳ್ಳಾರಿಯಲ್ಲಿ ದಂಗೆ ನಡೆಸುತ್ತಾರೆ. ಇದರಿಂದ ಕಂಗೆಟ್ಟ ಮನ್ರೋ ಪಾಳೆಯಗಾರರ ವಾರಸುದಾರರನ್ನು ಸೈನಿಕ, ತಳವಾರ, ನೀರಗಂಟಿ, ಗೌಡ, ದಳವಾಯಿ, ಪಟೇಲ ಇತರ ಸಮಾಧಾನಕರ ಹುದ್ದೆಗಳಿಗೆ ನೇಮಿಸುವಲ್ಲಿ ವಿಶ್ವಾಸಕ್ಕೆ ಪಾತ್ರನಾದರೂ, ತಮ್ಮ ಪ್ರಭುತ್ವಗಳನ್ನು ಕಳೆದುಕೊಂಡ ಪಾಳೆಯಗಾರರ ಹೃದಯಗಳನ್ನು ಸಮಾಧಾನಪಡಿಸುವಲ್ಲಿ ಸೋತ.

ಬ್ರಿಟಿಷರ ಆಳ್ವಿಕೆ ದಿನದಿಂದ ದಿನಕ್ಕೆ ವಿಸ್ತೃತಗೊಳ್ಳುತ್ತಿದ್ದಂತೆ ತಮ್ಮ ಅಸ್ತಿತ್ವದ ಪ್ರಶ್ನೆ ಎದುರಾದುದು ಬೇಡರಿಗೆ ಎಂದರೆ ಅತಿಶಯೋಕ್ತಿಯಾಗಲಾರದು. ಇವರು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಜನರಿಂದ ನಮಗೆ ಅಪಾಯ ತಪ್ಪಿದ್ದಲ್ಲವೆಂದು ಖಚಿತಪಡಿಸಿಕೊಂಡರು. ಹೀಗೆ ಸಂಭವಿಸಬಹುದಾದ ಘಟನೆಗಳನ್ನು ತಪ್ಪಿಸಲು (ತಮ್ಮ ಮೇಲೆ) ೧೮೫೭ರಲ್ಲಿ ನಿಶ್ಯಸ್ತ್ರಿಕರಣ ಕಾಯ್ದೆಯನ್ನು ಜಾರಿಗೆ ತಂದರು. ಇದನ್ನು ಮೊಟ್ಟಮೊದಲು ವಿರೋಧಿಸಿದವರು. ಕರ್ನಾಟಕದ ಬೇಡರು. ಹಿರಿಮೆಯನ್ನು ಹೊಂದಿರುವ, ನಾಡ ಪ್ರೇಮವನ್ನು ತೋರ್ಪಡಿಸುವ ಕಿಚ್ಚಿನ ಬೇಡರಿಗೆ ಇದು ನುಂಗಲಾರದ ತುತ್ತಾಯಿತು. ಆಧುನಿಕ ಗಾಳಿಗೆ ಸಿಲುಕಿದ ಮುಧೋಳ ತಾಲೂಕಿನ ಹಲಗಲಿ ಬೇಡರು ಬ್ರಿಟಿಷರ ಈ ಕಾಯ್ದೆಯನ್ನು ವಿರೋಧಿಸಿ ದಂಗೆ ಎದ್ದು ಹೋರಾಟ ನಡೆಸಿದರು. ಇದು ಭಾರತದಾದ್ಯಂತ ಸುದ್ದಿ ಮಾಡಿತು. ಅನೇಕ ಬೇಡರ ವೀರಮಣಿಗಳು ಈ ಸ್ವಾತಂತ್ರ್ಯ ಹೋರಾಟದ ಮೊದಲ ಹಂತದಲ್ಲಿ ಪಾಲ್ಗೊಂಡಿದ್ದು, ಅವಿಸ್ಮರಣೀಯ. ಇವರು ಆತ್ಮರಕ್ಷಣೆಗಿಂತ ದೇಶ ರಕ್ಷಣೆಗೆ ಕೊಟ್ಟಿದ್ದ ಮಹತ್ವದಿಂದ ಇಂದಿಗೂ ಹಲಗಲಿ ಬೇಡರೆಂದರೆ ಭಾರತದ ಬುಡಕಟ್ಟು ಜನರ ಹೋರಾಟಗಳಲ್ಲಿ ಇವರನ್ನು ಅಗ್ರಪಂಕ್ತಿಯಲ್ಲಿಟ್ಟು ನೋಡುತ್ತಾರೆ. ಇವರಲ್ಲಿ ಅನೇಕರು ಮಡಿದು ಹುತಾತ್ಮರಾದರು. ಜಡಿಗ್ಯಾ, ಬ್ಯಾಳರು (ವೀರಮರಣದ ಸ್ಮಾರಕವಿದೆ) ಇವರಲ್ಲಿ ಪ್ರಾರ್ಥಃ ಸ್ಮರಣೀಯರು.

ಹಲಗಲಿಯ ಬೇಡರಂತೆ ಅದೇ ಪರಿಸರಕ್ಕೆ ಹೊಂದಿಕೊಂಡ ಸಿಂಧೂರಿನ ಬೇಡರ ಪಾತ್ರವು ಅಮೋಘವಾದುದು. ಇಲ್ಲಿ ವೀರಸಿಂಧೂರ ಲಕ್ಷ್ಮಣನು (ಬೀಳಗಿ ತಾ, ಬಾಗಲಕೋಟೆ ಜಿ) ಸಹಾ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಗಮನಾರ್ಹ. ಇವನು ಬ್ರಿಟಿಷರನ್ನು ಹೊರದೂಡಲು ನಡೆಸಿದ ಚಟುವಟಿಕೆಗಳು ಜನಮೆಚ್ಚುವಂಥವು. ಆದ್ದರಿಂದಲೇ ಇವನು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದನು. ಕೊನೆಯಲ್ಲಿ ಇವನನ್ನು ಸ್ಥಳೀಯರೇ ಬ್ರಿಟಿಷರಿಗೆ ಹಿಡಿದುಕೊಟ್ಟು, ಇವನು ದುರಂತ ಮರಣ ಹೊಂದಲು ಕಾರಣರಾದರು. ಸಿಂಧೂರ ಲಕ್ಷ್ಮಣನಂಥ ಏಕಾಂಗಿವೀರ ಈ ನಾಡಿನ, ದೇಶದ ಪ್ರೇಮಕ್ಕಾಗಿ ಆಂಗ್ಲರನ್ನು ಹೊರಗಟ್ಟಲು ನಡೆಸಿದ ಪ್ರಯತ್ನಗಳು ವಿಫಲವಾದರೂ ಅವನ ಸಾಧನೆ ಪ್ರಶಂಸನೀಯವಾದುದು. ಇವರ ಬಗ್ಗೆ ಲಾವಣಿಗಳು ಪ್ರಚಲಿತದಲ್ಲಿವೆ.

ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣದಲ್ಲಿ ಬೇಡರ ಪಾತ್ರವನ್ನು ಗೌಣಮಾಡುವಂತಿಲ್ಲ. ಚಿತ್ರದುರ್ಗ, ಬಳ್ಳಾರಿ, ತುಮಕೂರು, ದಾವಣಗೆರೆ, ಕೊಪ್ಪಳ, ಧಾರವಾಡ, ಗದಗ ಮೊದಲಾದ ಜಿಲ್ಲೆಗಳಲ್ಲಿ ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಸ್ಮರಿಸುವುದು ಅಗತ್ಯ. ಸ್ವಾತಂತ್ರ್ಯ ನಂತರದಲ್ಲಿ ಬೇಡರು ಅಭಿವೃದ್ಧಿ ಪಥಕ್ಕೆ ಕಾಲಿಟ್ಟರು. ಪರಿಶಿಷ್ಟ ವರ್ಗಕ್ಕೆ ಸೇರಿಸಿದ ತರುವಾಯ ವಿವಿಧ ಕ್ಷೇತ್ರಗಳಲ್ಲಿ (ಮೀಸಲಾತಿ) ಮುನ್ನಡೆಗೆ ಕಾರಣವಾಯಿತು. ರಾಜಪ್ರಭುತ್ವ ಮರೆಯಾಗಿ ಪ್ರಜಾಪ್ರಭುತ್ವ ಬಂದಾಗ ಹೊ.ಚಿ.ಬೋರಯ್ಯ, ದಿ.ಎ. ಭೀಮಪ್ಪ ನಾಯಕ, ತಿಪ್ಪೇಸ್ವಾಮಿ ಮೊದಲಾದವರು ಆಡಳಿತ ನಡೆಸಿರುತ್ತಾರೆ.

ಬೇಡರ ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಕರ್ನಾಟಕದಲ್ಲಿರುವ ಎಲ್ಲಾ ಬೇಡರ ಸ್ಥಿತಿಗತಿಗಳು ಏಕರೀತಿಯವೆಂದು ಭಾವಿಸಿದರೆ ತಪ್ಪಾಗುತ್ತದೆ. ಹರಿದು ಹಂಚಿಹೋಗಿದ್ದ ಕರ್ನಾಟಕದ ಪ್ರಾಚೀನ ಕಥೆಗಳು ದುರಂತಮಯ. ಹಳೆ ಮೈಸೂರು ಮತ್ತು ಹೊಸ ಮೈಸೂರು ಪ್ರದೇಶಗಳೆಂದು ವಿಭಾಗಿಸಿ ನೋಡಿದರೂ ತಳಕು ಹಾಕಿಕೊಂಡಿರುವ ಸಂಗತಿಗಳು ಮೈನವಿರೆಳಿಸುತ್ತವೆ. ಹೀಗೆ ಹೈದರಾಬಾದ್, ಮುಂಬಾಯಿ ಮತ್ತು ಮದ್ರಾಸ್ ಕರ್ನಾಟಕಗಳನ್ನು ಅವಲೋಕಿಸಬೇಕಾಗುತ್ತದೆ. ಮಧ್ಯಕರ್ನಾಟಕದಲ್ಲಿ ನಾಯಕ, ವಾಲ್ಮೀಕಿ ಮತ್ತು ಮ್ಯಾಸನಾಯಕರು ಹೆಚ್ಚಾಗಿ ನೆಲೆಸಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ರಾಜಮನೆತನದವರು, ಮಧ್ಯಮ ವರ್ಗದವರು ಮತ್ತು ಶ್ರೀ ಸಾಮಾನ್ಯರೆಂದು ಬೇಡರಲ್ಲಿ ನೋಡಬಹುದು. ಬೀದರ್, ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬೇಡರ ಬದುಕು ಹೀನಾಯವಾಗಿದೆ. ಈ ಪ್ರದೇಶ ಫಲವತ್ತಾಗಿದ್ದರೂ ವಿವಿಧ ಅರಸರು ಇದನ್ನು ವಶಪಡಿಸಿಕೊಂಡು ಕಬ್ಬಿನ ರಸ ಹೀರಿದ ಸಿಪ್ಪೆಯಾಗಿ ಮಾಡಿದ್ದಾರೆ. ಕ್ರಿ.ಶ.೧೭೨೫ ರಿಂದ ೧೯೪೮ರವರೆಗೆ ಹೈದರಾಬಾದ್ ನಿಜಾಮನ ಅಧೀನದಲ್ಲಿ ಈ ಪ್ರದೇಶಗಳಿದ್ದವು. ವಚನ ಚಳವಳಿ, ಇಸ್ಲಾಂ ಧರ್ಮದ ಪ್ರಭಾವ. ಮುಸ್ಲಿಮರ ಆಳ್ವಿಕೆ, ನಿಜಾಮನ ಆಳ್ವಿಕೆ ಇಲ್ಲಿನ ಪ್ರಮುಖ ಸಂಗತಿಗಳು. ಮಿಶ್ರ ಭಾಷೆ, ಸಂಸ್ಕೃತಿಗಳ ತವರೂರು ಹೈದರಾಬಾದ್ ಕರ್ನಾಟಕವಾಗಿದೆ. ಆದಿಲ್‌ಶಾಹಿ ಮತ್ತು ನಿಜಾಮ ಕಪಿಮುಷ್ಠಿಯಲ್ಲಿ ಬೇಡರು ರಾಜ್ಯಾಳ್ವಿಕೆ ನಡೆಸಿರುವುದು ಹೆಮ್ಮೆಯ ಸಂಗತಿ. ಆನೆಗುಂದಿ, ಕುಮ್ಮಟದುರ್ಗ, ಕ್ಯಾದಿಗೆರಾ ಮುದಲ್ಲು, ಹುಲಿಹೈದರ, ಕನಕಗಿರಿ, ತಾವರೆಗೆರಾ, ಗುರುಗುಂಟಾ, ಯರಮರಸ್, ದೇವದುರ್ಗ, ತಗ್ಗಿಹಾಲ, ಸುರಪುರ, ವಾಗಿನಗೇರಾ, ಅರಿಕೇರಿ, ವನದುರ್ಗ ಮೊದಲಾದ ಸಂಸ್ಥಾನಗಳನ್ನು ಹೆಸರಿಸಬಹುದು. ಇಂದಿಗೂ ಇಲ್ಲಿ ರಾಜವಂಶೀಯರು ನೆಲೆಸಿರುವರು. ಮಧ್ಯಮ ವರ್ಗದಲ್ಲಿ ಅಧಿಕಾರಿಗಳು, ಜಮೀನ್ದಾರಿಗಳು ಮತ್ತು ಕೂಲಿ ಕಾರ್ಮಿಕರು, ಕೃಷಿಕರು ಮೂರನೇಯ ವರ್ಗದಲ್ಲಿ ಕಂಡುಬರುತ್ತಾರೆ. ಇಲ್ಲಿ ದೊರೆ, ರಾಜನೆಂದು ಕರೆಸಿಕೊಳ್ಳುವ ವರ್ಗ ಶ್ರೇಷ್ಠವಾದುದು ಎಂದು ನಂಬಲಾಗಿದೆ. ಇವರಲ್ಲಿ ಬೇಟೆ, ಪಶುಪಾಲನೆ ಮತ್ತು ಕೃಷಿ ಚಟುವಟಿಕೆಗಳಲ್ಲದೆ, ವ್ಯಾಪಾರ ವಹಿವಾಟನ್ನು ನೋಡಬಹುದಾಗಿದೆ. ಫಲವತ್ತಾದ ದೋಹಬಾ ಪ್ರದೇಶದಲ್ಲಿ ಬೇಡರು ಹೆಚ್ಚಾಗಿ ನೆಲಸಿರುವರು. ಆದರೆ ಜಮೀನುಗಳನ್ನು ಹೊಂದಿಲ್ಲ. ಇದ್ದುದನ್ನು ಮಾರಿಕೊಂಡು ಆ ದಣಿಯನ ತ್ತಿರ ದುಡಿಯುತ್ತಾರೆ. ಪಾಮನಾಯಕನ ಮೂಲಕ ಸ್ಥಾಪನೆಯಾದ ಸುರಪುರ ಸಂಸ್ಥಾನ ರಾಜಾವೆಂಕಟಪ್ಪನಾಯಕ (೧೮೫೮) ವರೆಗೆ ಇರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರು ಈತನನ್ನು ಕೊಲೆಮಾಡಿಸಿದಾಗ ಇಡೀ ಬೇಡ ಸಮುದಾಯವೇ ಅನಾಥವಾದಂತಾಯಿತು. ಇಲ್ಲಿನ ಬೇಡರು ವಸಾಹತುಶಾಹಿಯನ್ನು, ನಿಜಾಮನ ಪ್ರಭುತ್ವವನ್ನು ಮತ್ತು ರಜಕಾರರ ಹಾವಳಿಯನ್ನು ಒಟ್ಟೊಟ್ಟಿಗೆ ವಿರೋಧಿಸಿದ್ದು ವಿಶೇಷ. ಸಾಮಾಜಿಕವಾಗಿ ರಾಜಮರ್ಯಾದೆಗಳು ಮುಂದುವರೆದಿದ್ದವು. ಶ್ರೇಷ್ಟ ಕನಿಷ್ಟರೆಂದು ಬೇಡರಲ್ಲಿ ಗುರುತಿಸುತ್ತಿದ್ದರು.

ರಾಮೋಶಿಗಳು ಮಹಾರಾಷ್ಟ್ರದ ಪ್ರಭಾವದಿಂದ ಇಲ್ಲಿ ನೆಲೆಸಿರುವರು ಅವರ ಸಂಸ್ಕೃತಿ ಬೇಡರಿಗಿಂತ ಭಿನ್ನವೇನು ಅಲ್ಲ. ಬೇಡರಲ್ಲಿ ಚಿಕ್ಕಮಕ್ಕಳಿಗೆ ಮದುವೆ ಮಾಡುವ ಕಾರ್ಯಕ್ರಮವಿತ್ತು. ಕಟ್ಟುನಿಟ್ಟಿನ ನಿಯಮಗಳು ಸಮಾಜದಲ್ಲಿ ಪಾವಿತ್ರ್ಯವನ್ನು ಕಾಪಾಡುತ್ತಿದ್ದವು. ಮದುವೆ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ, ಧಾರ್ಮಿಕತೆ ಇವರ ಲಕ್ಷಣಗಳಿಂದ ಕರ್ನಾಟಕದ ಉಳಿದ ಬೇಡರಿಗಿಂತ ಇಲ್ಲಿ ವಿಶೇಷತೆಗಳಿವೆ.

ಮುಂಬಾಯಿ ಮತ್ತು ಉತ್ತರಕರ್ನಾಟಗಳ ಜನಜೀವನದಲ್ಲಿ ಅಷ್ಟೇನು ಬದಲಾವಣೆಗಳು ಕಂಡುಬರುವುದಿಲ್ಲ. ವಸಾಹತುಶಾಹಿ ಆಡಳಿತಗಾರರು ಈ ಹಿಂದೆ ಬರೆದ ವರದಿ ಮತ್ತು ಗ್ಯಾಸೆಟಿಯರ್‌ಗಳು ಅವರದೇ ಆದ ಪೂರ್ವಗ್ರಹಗಳಿಂದ ಕೂಡಿವೆ. ಅವರ ಆಡಳಿತಕ್ಕೆ ಅನುಕೂಲವಾದ ಸಂಗತಿಗಳನ್ನು ತಿಳಿಸುತ್ತಾ, ಜನರ ಮನವೊಲಿಸುವಲ್ಲಿ ಮುಂದಾಗಿದ್ದರು. ಉದಾ:ಒಂದು ಜಾತಿಯನ್ನು ಅಪರಾಧ ಜನಾಂಗ (Criminal Race) ವೆಂದು ಕರೆದು ಇನ್ನೊಂದನ್ನು ಉತ್ತಮವೆಂದು ಹೆಸರಿಸುತ್ತಿದ್ದರು. ಈ ಭಾಗದಲ್ಲಿ ಬೇಡರು, ಕುರುಬರು, ಕಬ್ಬಲಿಗರಲ್ಲಿ ಸಾಮ್ಯತೆಗಳಿವೆ. ದಕ್ಷಿಣ ಕರ್ನಾಟಕದಲ್ಲಿ ಬೇಡರು,. ಗೊಲ್ಲರು ಅಣ್ಣ ತಮ್ಮಂದಿರೆಂದು ಕರೆದುಕೊಳ್ಳುವಂತೆ, ಉತ್ತರ ಕರ್ನಾಟಕದಲ್ಲಿ ಬೇಡರು ಮತ್ತು ಕುರುಬರು ಕರೆದುಕೊಳ್ಳುವರು. ಬೆಳಗಾವಿ ಸಮೀಪ ಚಿಕ್ಕಲದಿನ್ನೆಯ ಬೇಡ ಪಾಳೆಯ ಪಟ್ಟಾಗಿತ್ತು. ಇವರಲ್ಲಿ ಮರಗೀಬೇಡರು, ದಾಸಬೇಡರು, ನಾಯಕ ಮಕ್ಕಳು ಎಂಬ ಒಳಜಾತಿಗಳಿವೆ. ಇವರ ಕುಲದೇವತೆ ದುರಗಮ್ಮ, ಎಲ್ಲಮ್ಮ ಮತ್ತು ಹನುಮಂತ. ಈ ಬೇಡರು ಕಳ್ಳತನ, ದರೋಡೆ ಮಾಡುಲ್ಲಿ, ನಿಪುಣರು, ಸಾರಾಯಿ ಕುಡಿಯುವುದು, ಸಿಕ್ಕ ಪ್ರಾಣಿ ಮಾಂಸ ಸೇವಿಸುವುದು ವಿಶೇಷ. ತಮ್ಮಲ್ಲಿಯೇ ಮದುವೆ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವ ಇವರು ವಿಧವೆ – ಮುತ್ತೈದೆಯರೆಂದು ತಾರತಮ್ಯ ಮಾಡುವುದಿಲ್ಲ. ಬೇಡರು ಬೇಟೆಯನ್ನು ಸಾಂಪ್ರದಾಯಿಕವಾಗಿ ಉಳಿಸಿಕೊಂಡು ಬಂದಿದ್ದಾರೆ. ಉತ್ತರ ಕರ್ನಾಟಕ ಹಳ್ಳಿಗಳಲ್ಲಿ ತಳವಾರಕೇರಿ, ಬೇಡರಕೇರಿ, ನಾಯಕರ ಕೇರಿಗಳಿವೆ.

ಹೀಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಬೇಡರ ಬದುಕು ಸುಧಾರಣೆ ಹಂತದಲ್ಲಿದ್ದು, ಇನ್ನು ಕೆಲವು ಕಡೆ ಹೀನಾಯಗೊಂಡಿರುವುದುಂಟು. ಇವೆರಡರ ಪೈಕಿ ತೀರಾ ಹಿಂದುಳಿಯದೆ ಅಷ್ಟೇನು ಮುಂದುವರೆಯದೆ ತಟಸ್ಥಗೊಳ್ಳದೆ ಇರುವುದು ಮ್ಯಾಸಬೇಡರ ಸಂಸ್ಕೃತಿಯ ವಿಶೇಷ. ಮೂರನಾಲ್ಕು ಶತಮಾನಗಳಿಂದ ಬುಡಕಟ್ಟಿನ ನಂಬಿಕೆ, ಆಚರಣೆ, ಪದ್ಧತಿಗಳನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದಿದ್ದಾರೆ. ಜಾಗತೀಕರಣ ಪ್ರಕ್ರಿಯೆಯಲ್ಲಿ ಬೇಡರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅನನ್ಯತೆಯನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಮದ್ರಾಸ್ ಕರ್ನಾಟಕ ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ವೈಶಿಷ್ಟ್ಯತೆಗಳನ್ನು ಗುರುತಿಸಬಹುದು. ನಾಯಕರಿಗೆ ಮೀಸಲಾತಿ ಸಿಕ್ಕಾಗ ವಿವಿಧ ರಂಗಗಳಲ್ಲಿ ಬೆಳೆಯಲು ಅಸ್ಪದವಾಯಿತು. ಸಂಘಟನೆ, ಹೋರಾಟ, ಚಳುವಳಿಗಳು ನಡೆದವು. ಎಲ್.ಜಿ. ಹಾವನೂರು ಆಯೋಗ, ನಾಯಕ ಜನಾಂಗದ ಸಂಘಟನಾತ್ಮಕ ಚಳವಳಿಗಳು, ವೈಚಾರಿಕ ಕ್ರಾಂತಿ, ಮೀಸಲಾತಿಗಾಗಿ ಹೋರಾಟ ಕೃಷಿ ಮತ್ತು ವೈಜ್ಞಾನಿಕ ಕ್ರಾಂತಿ, ಸಂಶೋಧನಾ ಕ್ರಾಂತಿ, ಇಂದಿನ ಬೇಡರ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ನಿಜಕ್ಕೂ ಸೋಜಿಗವಾಗುತ್ತದೆ. ಸ್ವಾತಂತ್ರ್ಯ ದೊರೆತು ೫೫ ವರ್ಷಗಳಲ್ಲಿ ಏನೆಲ್ಲಾ ಪಲ್ಲಟಗಳಾಗಿರುವುದಕ್ಕೆ ನಮ್ಮಲ್ಲಿನ ಅನೈಕ್ಯತೆ, ಅಪವಿತ್ರ, ಮೆತ್ರಿ, ಒಡೆದು ಆಳುವ ನೀತಿ ಮೊದಲಾದ ಸವಾಲುಗಳು ಮತ್ತು ಜವಾಬುಗಳನ್ನು ನಾಯಕ ಜನಾಂಗ ಇಂದು ಎದುರಿಸುವಲ್ಲಿ ಸಜ್ಜುಗೊಂಡಿದೆ.

* * *


[1] ಯುಗಯಾತ್ರೀ ಭಾರತೀಯ ಸಂಸ್ಕೃತಿ, ಪು:೧೭

[2] ಅದೇ: ೧೭