ಜಗತ್ತಿನಲ್ಲಿ ಇಂದು ಪ್ರತಿಯೊಂದು ಜನಸಮುದಾಯವು ಜ್ಞಾನ ಮತ್ತು ಅರಿವಿನ ಪ್ರಭಾವದಿಂದ ತಮ್ಮ ಪ್ರಾಚೀನತೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಚರಿತ್ರೆಯ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿರುವುದು ಸಹಜ. ಚರಿತ್ರೆಯಲ್ಲಿಯೇ ದಾಖಲಾಗದವರು ತಮ್ಮ ತಮ್ಮ ಮೂಲಗಳನ್ನು ನೋಡಿಕೊಳ್ಳುವಲ್ಲಿ ವಿಫಲರಾದರು. ಅವಮಾನಿತರಾದರು. ತಮಗೆ ತಾವೇ ನಿಂದಿಸಿಕೊಂಡರು. ಏಕೆಂದರೆ ಚರಿತ್ರೆಯಲ್ಲಿ ದಾಖಲಾಗಲು ನಾವು ಅರ್ಹರೋ ಅಲ್ಲವೇ ಎಂಬ ಭಾವನೆಯಿಂದ, ಈ ಹಿಂದೆ ಚರಿತ್ರೆ ಬರೆದವರೆಲ್ಲ ಮೇಲ್ವರ್ಗದ ಮತ್ತು ಪುರೋಹಿತಶಾಹಿ ಅದನ್ನು ಪೋಷಿಸುವಂತಹ ವಸಾಹತುಶಾಹಿ ಧೋರಣೆಗಳಿಂದ ಪ್ರೇರಿತರಾದವರು. ಇವರು ಸ್ಥಳೀಯರನ್ನು, ಜನಸಾಮಾನ್ಯರನ್ನು ಚರಿತ್ರೆಯಲ್ಲಿ ದಾಖಲಿಸಲು ಹಿಂದೇಟು ಹಾಕಿದರು. ಅಂದಿನ ಪ್ರಸ್ತುತತೆ ರಾಜಪ್ರಭುತ್ವವನ್ನು ಹೊಗಳುವುದು ಮತ್ತು ವಸಾಹತುಗಾರರನ್ನು ನಂಬಿಸುವುದಾಗಿತ್ತು. ಬ್ರಿಟಿಷರು ಇಲ್ಲಿನ ಪಂಡಿತರನ್ನು ಪೋಷಿಸುತ್ತಲೇ ಶೋಷಣೆ ಕೂಡ ಮಾಡುತ್ತಿದ್ದರು.

ಕಾಲಕಾಲಕ್ಕೆ ಚರಿತ್ರೆ ರಚನೆಯಲ್ಲಿ ಬದಲಾವಣೆ ಕಂಡು ಬಂದಿತು. ಇದು ಯುರೋಪಿನ ವಿಧಾನಕ್ಕೆ ವ್ಯತಿರಿಕ್ತವಾದ ಭಾರತೀಯ ಅಥವಾ ದೇಶೀ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳುವಂತದ್ದು, ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಮಾದರಿ ಶಿಕ್ಷಣ ಪಡೆದ ಚರಿತ್ರೆಕಾರರು ಅವರು ಮೆಚ್ಚುವಂತೆ ಚರಿತ್ರೆ ಬರೆದರು. ಸ್ಥಳೀಯರಿಗೆ ದ್ರೋಹ ಬಗೆದರೆಂದರೆ ತಪ್ಪಾಗದು. ೨೦ನೇ ಶತಮಾನದ ಮಧ್ಯಭಾಗದಲ್ಲಿ ಏಷಿಯಾ, ಆಫ್ರಿಕಾಖಂಡಗಳಲ್ಲಿ ಕೆಳಸ್ತರದವರನ್ನು ಕುರಿತಂತೆ ಅಧ್ಯಯನಗಳು ಸಾಗಿದವು. ಕೆಳಸ್ತರ ಅಥವಾ ‘ಸಬಾಲ್ಟ್ರನ್’ ಎಂದರೆ ತುಳಿತಕ್ಕೊಳಗಾದವರು, ಅಂಚಿನಲ್ಲಿರುವವರು, ತಳವರ್ಗದವರು ಹೀಗೆ ಅನಾಮಧೇಯವಾಗಿ ಉಳಿದುಕೊಂಡು ಬಂದವರ ಸಾಮಾಜಿಕ, ಆರ್ಥಿಕವಾಗಿ, ರಾಜಕೀಯವಾಗಿ ತುಳಿತಕ್ಕೆ ಒಳಗಾದವರ ಚರಿತ್ರೆ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಭಾರತದಲ್ಲಿ ಈ ಅಧ್ಯಯನ ಕ್ರಮ ಇತ್ತೀಚೆಗೆ ಹೊಸ ಆಯಾಮವನ್ನು ಸೃಷ್ಟಿಸಿದೆ.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಜೀವಿಸುತ್ತಿರುವ ಈ ಸಮುದಾಯಗಳು ತಮ್ಮ ಗುರುತಿಗಾಗಿ ಸದಾ ಚಡಪಡಿಸುತ್ತಿದ್ದವು. ಸ್ವಾತಂತ್ರ್ಯ ಹೋರಾಟದಂಥ ಸಂದರ್ಭದಲ್ಲಿ ಅವು ವ್ಯಕ್ತಪಟ್ಟವು. ಭಾರತದ ರಾಷ್ಟ್ರೀಯತೆ ಬಗ್ಗೆ ನಿಜವಾದ ಕಾಳಜಿ ಹುಟ್ಟಿದ್ದು ಕೆಳಸ್ತರದ ಸಮುದಾಯಗಳಿಂದ. ಅನ್ನ – ಆಹಾರದಷ್ಟೇ ಅವರಿಗೆ ‘ರಾಷ್ಟ್ರ’* ಎಂಬುದು ಮಹತ್ವದ ವಿಚಾರವಾಗಿತ್ತು. ಇಂತಹವರ ಹೋರಾಟ, ಅರ್ಭಟಗಳು ಮೂಕರೋದನದಂತೆ ಈವರೆಗೆ ಕಂಡುಬರುತ್ತಿದ್ದವೆಂದರೆ ತಪ್ಪಾಗದು. ಛಿದ್ರಗೊಂಡ ಜನಸಮುದಾಯಗಳು ಐಕ್ಯತೆ, ರಾಷ್ಟ್ರೀಯತೆ, ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಮೊದಲಾದ ಸಂಗತಿಗಳಿಗಾಗಿ ಒಗ್ಗಟ್ಟಾಗಿ ಹೋರಾಡಲು ವೇದಿಕೆ ಸಿದ್ಧಪಡಿಸಿಕೊಂಡವು. ಇದನ್ನು ಬುಡಕಟ್ಟು ಜನರ ಹೋರಾಟವೆಂತಲೂ ಕರೆಯಬಹುದಾಗಿದೆ. ಅಥವಾ ರಾಷ್ಟ್ರೀಯತೆಗಾಗಿ ಕೆಳಸ್ತರದವರ ಹೋರಾಟವೆಂತಲೂ ಕರೆಯಬಹುದಾಗಿದೆ. ಮೇಲ್ವರ್ಗದ ಪ್ರಭುತ್ವ, ಪ್ರತಿಗಾಮಿತನವನ್ನು ವಿರೋಧಿಸುತ್ತಾ, ಮಾನಸಿಕವಾಗಿ ಬಡತವನ್ನು ಬಹಿರಂಗಪಡಿಸುವ ಕೆಲಸವು ನಡೆಯಿತು. ರೈತ, ಸಣ್ಣ ಹಿಡುವಳಿದಾರ, ಬುಡಕಟ್ಟು ಜನರ ಹೋರಾಟ, ರಾಷ್ಟ್ರೀಯತೆಯನ್ನು ಕಟ್ಟುವ ಹಾದಿಯಲ್ಲಿ ತಳವರ್ಗದವನರನು ಬೆಳಕಿಗೆ ತರುವ ಪ್ರಯತ್ನ ಹೊಸದು. ಇವರನ್ನು ಗುರುತಿಸುವ, ವಿಶ್ಲೇಷಿಸುವ ಕ್ರಮಗಳು ಈವರೆಗೆ ವ್ಯವಸ್ಥಿತವಾಗಿ ನಡೆದಿಲ್ಲ. ಇದು ಚರಿತ್ರೆಗೆ ಬರೆದ ದ್ರೋಹವೂ ಅಥವಾ ಚರಿತ್ರೆಯಲ್ಲಿ ದಾಖಲಾಗದವರಿಗೆ ಬಗೆದ ದ್ರೋಹವೋ ಭಾರತದ ಪ್ರಜೆಗಳಾದ ನಾವು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಚಿಂತಿಸಬೇಕಾಗಿದೆ. ಇಂಥವರ ಸಾಲಿಗೆ ಕರ್ನಾಟಕದ ಬೇಡ, ನಾಯಕ – ವಾಲ್ಮೀಕಿ ಸಮುದಾಯವನ್ನು ಸೇರಿಸಬಹುದು. ಇದೊಂದು ಬುಡಕಟ್ಟು ಎನಿಸಿಕೊಂಡರೂ ತನ್ನ ಲಕ್ಷಣ ಚರಿತ್ರೆ ಮತ್ತು ಸಂಸ್ಕೃತಿಯನ್ನು ಎಲ್ಲೂ ಬೆತ್ತಲೆಗೊಳಿಸಿ ಕೊಂಡಿಲ್ಲದಿರುವುದು ಖೇದಕರ ಸಂಗತಿ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೇಡ ಜನಾಂಗದವರನ್ನು ಕುರಿತು ಅಧ್ಯಯನ ಮಾಡುವ ನಿಟ್ಟಿನಲ್ಲಿ ವಿಶೇಷವಾಗಿ ಇಲ್ಲಿ ಚಿತ್ರದುರ್ಗ ಜಿಲ್ಲೆಯ ಬೇಡರ ಸಾಂಸ್ಕೃತಿಕ, ಬುಡಕಟ್ಟು ವೀರರನ್ನು ಕುರಿತು ಅಧ್ಯಯನ ಮಾಡುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಈ ಜನಸಮುದಾಯದ ಸಂಸ್ಕೃತಿ, ಆಚಾರ ವಿಚಾರ, ಜಾನಪದ ಹಾಗೂ ನಾಗರಿಕತೆಗಳ ನಡುವೆ ತಳಕುಹಾಕಿಕೊಂಡಿರುವ ವ್ಯಕ್ತಿ ಆರಾಧನೆಯ ಹಿನ್ನೆಲೆಯನ್ನು ಬೆಳಕಿಗೆ ತರುವ ಹುಡುಕಾಟದ ಪ್ರಯತ್ನ ಇದಾಗಿದೆ. ಎಲ್ಲಾ ಬುಡಕಟ್ಟುಗಳಿರುವಂತೆ ವೈವಿಧ್ಯಮಯ ಸಾಂಸ್ಕೃತಿಕ ಪರಂಪತೆಯಿದ್ದರೂ ಬೇಡ ಜನಾಂಗ ಚರಿತ್ರೆಯ ವಿವಿಧ ಕಾಲಘಟ್ಟಗಳಲ್ಲಿ ದಾಖಲಾಗದೆ ಇರುವುದು ದುರದೃಷ್ಟಕರ.

ಹಿಂದೆ ಜೀವನಕ್ಕಾಗಿ ಗೆಡ್ಡೆ – ಗೆಣಸುಗಳನ್ನಷ್ಟೇ ಆಶ್ರಹಿಸಿದೆ ಬೇಟೆಯನ್ನು ವೃತ್ತಿಯಾಗಿಸಿಕೊಂಡಿದ್ದರು. ಅನಂತರ ರೂಪುಗೊಂಡಿದ್ದು, ಪಶುಪಾಲನೆ, ಈ ಎರಡು ಹಂತಗಳಲ್ಲೂ ಒಂದೆಡೆ ನೆಲೆಸದೆ ಕಾಡಿನಲ್ಲಿ ಅಲೆಮಾರಿ ಬದುಕನ್ನು ಸಾಗಿಸದ ಇವರು ಮುಂದೆ ಕೃಷಿಕರಾಗಿ ಒಂದೆಡೆ ನೆಲೆಸುವ ಪ್ರಯತ್ನ ಕೈಗೊಂಡರು. ವ್ಯವಸಾಯಕ್ಕೆ ಅಗತ್ಯವಾದ ಭೂಮಿಗಾಗಿ ಕಾಡನ್ನು ಕಡಿದು ನಾಡಿನ ನೆಲೆಯನ್ನು ಶೋಧಿಸಿಕೊಂಡರು. ಹೀಗೆ ನೆಲೆಗೊಂಡ ಗುಂಪುಗಳ ನಾಯಕತ್ವ ಅಥವಾ ಮುಖಂಡತ್ವದ ಮುಂದುವರಿಕೆಯಿಂದ ಸಾಮ್ರಾಜ್ಯಗಳ ಒಡನಾಟದವರೆಗೂ ತಮ್ಮ ಸ್ಥಾನಮಾನಗಳನ್ನು ಬೆಳೆಸಿಕೊಂಡರು.

ಮೂಲತಃ ದ್ರಾವಿಡ ಗುಂಪಿನವರಾದ ಬೇಡರು ವೇದಗಳ ಕಾಲದಲ್ಲಿ ಮತ್ತು ಇತರೆ ಸಂದರ್ಭಗಳಲ್ಲಿ ವಿವಿಧ ವೃತ್ತಿಗಳಿಗೆ ಅಂಟಿಕೊಂಡು ನೆಲಸತೊಡಗಿದರು. ನಾಡಿನ ಶ್ರೇಣೀಕೃತ ವ್ಯವಸ್ಥೆಯ ಭಾಗವಾಗಿ ಕ್ರಮೇಣ ತಮ್ಮ ಜನಪದವನ್ನು ಗಣರಾಜ್ಯಗಳ ಮಟ್ಟದಲ್ಲಿ ಗುರುತಿಸಿಕೊಂಡರು. ಪುರಾಣದ ಪುಟಗಳಲ್ಲಿ ಕಿರಾತ, ನಿಷಾದ, ವಾಧ್ಯ, ಶಬರ, ಪುಳಿಂದ ಮೊದಲಾದ ಹೆಸರಿನ ಪಂಡಗದವರು ಪ್ರೇರಣೆ ಸಂಕೇತಗಳಾಗಿರುವರು. ಪ್ರಾಚೀನ ಭಾರತದ ‘ಶಬರ’ ಎಂಬ ನಾಡು; ನಿಷಾದ ಎಂಬ ರಾಜ್ಯಗಳಿದ್ದುದನ್ನು ಇಲ್ಲಿ ಪೂರಕವಾಗಿ ನೆನಪಿಸಿಕೊಳ್ಳಬಹುದು. ಅಲ್ಲದೇ, ನಳದಮಯಂತಿ ಕಥೆಯ ನಳಮಹಾರಾಜ ‘ನಿಷಾದ’ ರಾಜ್ಯದ ಅರಸನಾಗಿದ್ದನೆಂಬುದೂ ಗಮನಾರ್ಹ ಅಂಶವಾಗುತ್ತದೆ.

ಜಾತಿ, ಮತ, ಧರ್ಮಗಳ ಹಿನ್ನೆಲೆಗಳ ಬೆಂಬಲವಿಲ್ಲದೆ, ಆರ್ಥಿಕ, ಸಾಮಾಜಿಕ ಚಾರಿತ್ರಿಕ ಪ್ರೇರಣೆಗಳಿಲ್ಲದೆ ವೈಯಕ್ತಿಕ ಶ್ರಮ ಸಾಹಸ – ಸಾಧನೆಗಳಿಂದ ಮೇಲೆ ಬಂದವರು ಹಲವರು ಮಾತ್ರ. ರಾಮಾಯಣದ ಕರ್ತೃ ವಾಲ್ಮೀಕಿ, ಶಬರಿ, ಗುಹಾ, ಧರ್ಮವ್ಯಾಧ. ಬೇಡರ ಕಣ್ಣಪ್ಪ ಮೊದಲಾದವರು ಬೇಡರೇ ಆಗಿದ್ದರೂ, ಪೂರ್ವಸ್ಥಿತಿಗಳನ್ನು ಮೀರಿ ಅಪಾರ ಸಾಧನೆ ತೋರಿದ ಅಪ್ರತಿಮ ಸಾಹಸಿಗಳಾಗಿದ್ದಾರೆ. ಅಲ್ಲದೆ, ಮಹಾಭಾರತದಲ್ಲಿ ಬರುವ ಏಕಲವ್ಯನ ಪಾತ್ರ ವಿಶಿಷ್ಟವಾದುದು.

ಚಾರಿತ್ರಿಕವಾಗಿ ನೋಡುವುದಾದರೆ ಮೌರ್ಯರ ಕಾಲದಲ್ಲಿ ಬೇಡರು ಬೇಟೆಯನ್ನೇ ನಂಬಿದ್ದರು. ರಾಜಾಶ್ರಯ ಕೈ ತಪ್ಪಿದಾಗ ವಲಸೆ ಆರಂಭಿಸಿರಬೇಕು. ಬಹುಶಃ ಬೇಟೆಯಲ್ಲಿದ್ದು, ರಾಜ ಪೋಷಣೆಯ ವಿವಿಧ ವೃತ್ತಿಗಳನ್ನು ಹಂಬಲಿಸಿ, ಪ್ರೇರಣೆಯಿಂದಲೂ ಅವುಗಳಲ್ಲಿ ನಿರತರಾಗಿರಬೇಕು. ಅಶೋಕನ ಅಹಿಂಸೆ ಪ್ರತಿಪಾದನೆಗೆ ಮೊದಲು ಬಲಿಯಾದವರು, ಶರಣಾದವರೆಂದರೆ ಬೇಡರು. ಶಾತವಾಹನರ ಕಾಲಕ್ಕೆ ಇಕ್ಷ್ಯಾಕು ವಂಶದ ದೊರೆಗಳು ಬೇಡರನ್ನು ‘ಮಹಾತಳವಾರ’ ಎಂಬ ಹುದ್ದೆಗೆ ನೇಮಿಸಿಕೊಂಡಿದ್ದರು. ಹೀಗೆ ಗಂಗರ ಕಾಳದಲ್ಲಿ ಬೇಡರನ್ನು ಸೈನ್ಯಕ್ಕೆ ಸೇರಿಸಿಕೊಂಡಿದ್ದರಿಂದ ಆ ರಾಜ್ಯದ ಸಾರ್ವಭೌಮತ್ವ ಇಮ್ಮಡಿಯಾಯಿತೆಂಬುದರಲ್ಲಿ ಅನುಮಾನವಿಲ್ಲ. ಕದಂಬ, ಪಲ್ಲವರ ಕಾಲದಲ್ಲಿ ರಾಜ್ಯಗಳಿಂದ ರಾಜ್ಯಕ್ಕೆ ವಲಸೆ ಹೋಗುವುದು ಸರ್ವೇಸಾಮಾನ್ಯವಾಗಿತ್ತು. ರಾಷ್ಟ್ರಕೂಟರ ಕಾಲಕ್ಕೆ ಇವರು ಸೈನ್ಯದ ತುಕಡಿಗಳಿಗೆ ಮುಖಂಡರಾಗಿ ‘ನಾಯಕ’ (Field Marshall) ಎಂಬ ಹುದ್ದೆ ಮತ್ತು ಬಿರುದನ್ನು ಪಡೆದರು. ಚಾಲುಕ್ಯರ ಸಾಮ್ರಾಜ್ಯದಲ್ಲಿ ಸಂಘಟಿತ ಸೈನಿಕ ಪಡೆಗಳ ನೇತಾರರಾಗಿ ರಾಜಕೀಯ ಚುಕ್ಕಾಣಿ ಹಿಡಿಯಲು ಹಂಬಲಿಸುತ್ತಿದ್ದರು. ಹೊಯ್ಸಳರ ಕಾಲದಲ್ಲಿ ಬೇಡರ ಸೈನ್ಯ ಮಾತ್ರ ರಕ್ಷಣೆಗೆ ಏಕೈಕ ವರ್ಗವಾಗಿತ್ತು. ಇವರು ದಂಡನಾಯಕರಾಗಿ ಚಿಕ್ಕಪುಟ್ಟ ನಾಡುಗಳಿಗೆ ಒಡೆಯರಾಗಿ ಕಾರ್ಯನಿರ್ವಹಿಸಿದ್ದುಂಟು.

ಜೀವನ ನಿರ್ವಹಣೆಗಾಗಿ ಬೇಟೆ ಹಾಗೂ ಪಶುಪಾಲನೆಯನ್ನೇ ನಂಬಿ ಬದುಕುವ ಬೇಡರ ಗುಂಪು ಒಂದಡೆಯಿದ್ದರೆ, ರಾಜರಿಂದ ಮನ್ನಣೆ ಪಡೆದು ಅಧಿಕಾರದ ಸವಿ ಕಂಡು, ಅನುಭವಿಸುವ ಮತ್ತೊಂದು ಬೇಡರ ಗುಂಪು ಸಂಘಟಿತ ಸಮಾಜವಾಗಿತ್ತು. ಇಂತಹ ಗುಂಪಿನಲ್ಲಿ ಸೆಟೆದು ನಿಂತು ವಿರೋಧಿಗಳ ನಡುವೆ ಪುಟಿದು ಬಂದು ಕೆಚ್ಚೆದೆಯಿಂದ ರಾಜ್ಯ ಸ್ಥಾಪಿಸಿದವರು ಕುಮ್ಮಟದ ನಾಯಕ ಅರಸರು.

ಜಟಿಂಗರಾಮನ ಪರಮಭಕ್ತರಾದ ಕುಮ್ಮಟದ ಅರಸರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪರಿಸರದಲ್ಲಿದ್ದವರು. ತರುವಾಯ ಸಂಡೂರು ಪರಿಸರದ ಹೊಸಮಲೆದುರ್ಗದಲ್ಲಿ (ಮೊದಲ ರಾಜಧಾನಿ) ರಾಜ್ಯಾಳ್ವಿಕೆಗೆ ನಾಂದಿ ಹಾಡಿದರು. ಮುಂದೆ ಆನೆಗುಂದಿ ಆಸುಪಾಸಿನಲ್ಲಿ ರಾಜ್ಯವನ್ನು ಸ್ಥಾಪಿಸಿ ಕುಮ್ಮಟದುರ್ಗದಲ್ಲಿ ನೆಲೆಸಿದರು. ಇವರ ರಾಜ್ಯ ವಿಸ್ತಾರವು ವಿಶಾಲವಾಗಿತ್ತು. ಈ ಅರಸರಲ್ಲಿ ಮುಮ್ಮಡಿ ಸಿಂಗೆಯನಾಯಕ, ಕಂಪಲಿರಾಯ ಮತ್ತು ಕುಮಾರರಾಮ ಪ್ರಮುಖರು.

ಇವರ ಸಂಬಂಧಿಗಳೆಂದು ಹೇಳಲಾಗುವ ಭಾವಸಂಗಮದ ಪುತ್ರರು ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯಕ್ಕೆ ಅಡಿಗಲ್ಲಿಟ್ಟರು. ಈ ಸಾಮ್ರಾಜ್ಯದಲ್ಲಿ ಬೇಡರು ಸೈನ್ಯದ ದಂಡನಾಯಕರಾಗಿ, ತಳವಾರರಾಗಿ ಮತ್ತು ರಾಜನಿಗೆ ಆತ್ಮೀಯ ಬೇಟೆಗಾರರಾಗಿಯೂ ಕಾರ್ಯನಿರ್ವಹಿಸಿದರು. ಮೆಚ್ಚುವ ಸಂಗತಿಯೆಂದರೆ, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ‘ಬೇಡರಪಡೆ’ ಅತೀ ಪ್ರಬಲವಾದ ಸೈನ್ಯದ ತುಕಡಿಯಾಗಿತ್ತು. ಅನೇಕ ಯುದ್ದಗಳಲ್ಲಿ ಜಯಗಳಿಸಿದ್ದರಿಂದ ದೊರೆತ ಉಂಬಳಿ ಭೂಮಿಗಳನ್ನು ಇಂದಿಗೂ ಭೋಗಿಸುವರು. ತಾಳಿಕೋಟೆ ಪರಿಸರದ ರಕ್ಕಸತಂಗಡಿಯಲ್ಲಿ ನಡೆದ ಯುದ್ಧದಲ್ಲಿ ಬೇಡರ ಪಡೆ ಹತವಾದ ಸಂಖ್ಯೆಯನ್ನು ೪೦ ಸಾವಿರ ಎಂದು ವಿದೇಶಿ ಯಾತ್ರಿಕ ಅಭಿಪ್ರಾಯಪಡುತ್ತಾನೆ.

ವಿಜನಗರೋತ್ತರದಲ್ಲಿ ಆನೆಗುಂದಿ ಅರಸರು ಬೇಡರಿಗೆ ದೊರೆಗಳಾಗಿದ್ದರು. ಬೇಡರ ಅರಮನೆ ಮತ್ತು ಗುರುಮನೆಗಳೆರಡಕ್ಕೂ ಆನೆಗುಂದಿ ಕೇಂದ್ರಸ್ಥಳವಾಗಿತ್ತು. ತಮ್ಮ ಕುಲ, ಜಾತಿ ಇತ್ಯಾದಿ ವಿವಾದಗಳಿಗೆ ನ್ಯಾಯಪಂಚಾಯ್ತಿ ಮಾಡುತ್ತಿದ್ದವರು ಇವರೇ. ಹೀಗಾಗಿ ಈ ದೊರೆಗಳು ಬೇಡರನ್ನು ವಿವಿಧ ಹುದ್ದೆಗಳಿಗೆ ನೇಮಿಸಿದ್ದುಂಟು. ಆಗಿನ ಕಾಲಕ್ಕೆ ನರಪತಿಗಳೆಂದು ಕರೆಯುವ ಆನೆಗುಂದಿ ಅರಸರು ‘ಮ್ಯಾಸ ಬ್ಯಾಡ್ಕಿ ನಾಯಕತನ’ ಎಂಬ ಗೌರವ ಹುದ್ದೆ ನೀಡಿದ್ದರು. ಬೇಡರಲ್ಲಿ, ಬೇಟೆಗಾರ ವರ್ಗಕ್ಕೆ ಸೇರಿದ ಗುರಿಕಾರ (ಕುಲದ ನಾಯಕ) ಅಧಿಕಾರಯುಕ್ತ ಸ್ಥಾನಗಳಿಗೆ ಮೀಸಲಾಗಿದ್ದ. ಇತ್ತೀಚೆಗೆ ಕಮಲಾಪುರದ ಗುರಿಕಾರ ಕಾಟಯ್ಯನ ಬಳಿಯಿರುವ ಕಂಚಿನಪತ್ರ ದೊರೆತಿದ್ದು, ಮೇಲಿನ ಸಂಗತಿಯನ್ನು ತಿಳಿಯಬಹುದಾಗಿದೆ.

ತಮ್ಮ ಪಾತ್ರವನ್ನು, ಸ್ಥಾನಮಾನವನ್ನು ವಿಜಯನಗರದಲ್ಲಿ ಗುರುತಿಸಿಕೊಂಡ ಪ್ರತಿಯೊಬ್ಬ ದಂಡನಾಯಕ, ಅಧಿಕಾರಿಗಳು ಸಾಮ್ರಾಜ್ಯದ ಅವಸಾನದಲ್ಲಿ ಸ್ವಾತಂತ್ರ್ಯ ಪಾಳೆಯಗಾರರಾದರು. ರಾಜಕೀಯದ ಏಳು – ಬೀಳುಗಳಲ್ಲಿ ಹೆಚ್ಚು ಅನುಭವ ಪಡೆಯದ ಪಾಳೆಯಗಾರರು ಅಪಾರ ವೆಚ್ಚವನ್ನು ಕೋಟೆ ಕೊತ್ತಲು ಕಟ್ಟಿಲು ಮತ್ತು ಕಂದಕ ತೋಡಲು ವ್ಯಯಿಸಿದರು. ಹರಪನಹಳ್ಳಿ, ಚಿತ್ರದುರ್ಗ, ತರೀಕೆರೆ, ಬಸವಾಪಟ್ಟಣ, ಸಂತೆಬೆನ್ನೂರು, ರಾಯದುರ್ಗ, ಗುಡೆಕೋಟೆ, ಜರಿಮಲೆ, ನಾಯಕನಹಟ್ಟಿ, ಸುರಪುರ, ದೇವದುರ್ಗ ಮುಂತಾದ ಪಾಳೆಯಪಟ್ಟುಗಳಲ್ಲಿ ಬೇಡರು ತಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿನಿಧಿಸಿದ್ದಾರೆ. ಪಾಳೆಯಗಾರಿಕೆ ಎಂಬುದು ಮುಳ್ಳಿನ ಹಾಸಿಗೆಯಾಗಿತ್ತು. ಸಂಪತ್ತಿನ ಕ್ರೋಢೀಕರಣವನ್ನು ಕಪಟತನದಿಂದ ದೋಚುವುದೇ ಆ ಕಾಲದ ವಾಡಿಕೆಯಾಗಿತ್ತು. ರಾಜ್ಯಗಳನ್ನು ಸ್ಥಾಪಿಸಿ, ಖನಾಜ ಭದ್ರಪಡಿಸಿದಾಗ ಹೈದರಾಲಿ, ಟಿಪ್ಪುರವರ ದಂಡೆಯಾತ್ರೆಗಳಿಂದ ಇವರು ತತ್ತರಿಸಿ ಹೋದರು. ಅನೇಕ ಬೇಡರು ಸೆರೆಯಾಗಿ, ಅವರ ಸೈನಿಕರಾಗಿ ನರಳಿದ್ದು ದುರಂತಮಯ ಚಿತ್ರಣ.

ಟಿಪ್ಪುವಿನಿಂದ ಅಪಾರ ನೋವು, ನಷ್ಟ ಅನುಭವಿಸಿದವರು ಚಿತ್ರದುರ್ಗದ ಪಾಳೆಯಗಾರರು, ಇವರ ಅವನತಿಯ ತರುವಾಯ ರಾಜಕೀಯವಾಗಿ ಚೇತರಿಸಿಕೊಳ್ಳಲು ಸನ್ನದ್ಧರಾಗುವ ಸಂದರ್ಭಕ್ಕೆ ಬ್ರಿಟಿಷರು ಕರ್ನಾಟಕವನ್ನು ಮುತ್ತಿದರು. ಹೀಗೆ ರಾಜಕೀಯ ಸವಿಯನ್ನು ನೆಮ್ಮದಿಯಾಗಿ ಯಾವೊಬ್ಬ ಬೇಡ ಪಾಳೆಯಗಾರನು ಅನುಭವಿಸಲಿಲ್ಲ. ಮೈಸೂರು ಒಡೆಯರ ಆಳ್ವಿಕೆಯಲ್ಲಿಯೂ ಬೇಡರ ಸ್ಥಿತಿಗತಿ ಅಷ್ಟಕಷ್ಟೆ ಸೀಮಿತವಾಗಿತ್ತು.

ಬ್ರಿಟಿಷರು ರಾಜಕೀಯ ಚುಕ್ಕಾಣಿ ಹಿಡಿದ ಬಳಿಕ ಪಾಳೆಯ ಪಟ್ಟುಗಳನ್ನು ಮಟ್ಟಹಾಕಿದ್ದು ಗಮನಾರ್ಹ. ಆ ಮೂಲಕ ದೊರೆಗಳಿಗೆ ಮಾಶಾಸನ ಜಾರಿ ಮಾಡಿದರಲ್ಲದೆ, ತಳವಾರಿಕೆ, ಪೊಲೀಸ್, ಕಾವಲುಗಾರಿಕೆ ಮೊದಲಾದ ಹುದ್ದೆಗಳಿಗೆ ಇವರನ್ನು ನೇಮಿಸಿಕೊಂಡರು. ಬ್ರಿಟಿಷ್ ಅಧಿಕಾರಿ ಮತ್ತು ಬರಹಗಾರ ವರ್ಗವು ಇಲ್ಲಿನ ಜನಸಮುದಾಯಗಳನ್ನು ‘ಕ್ರಿಮಿನಲ್ ಟೈಬ್ಸ್’ ಎಂದು ದಾಖಲಿಸಿದೆ. ಎಲ್ಲರೂ ಹೀಗೆ ಇರಲಿಲ್ಲ. ಬೇಡರನ್ನು ಕಳ್ಳರು, ಸುಲಿಗೆ, ದರೋಡೆಕೋರರೆಂದು ನಮೂದಿಸಿದ್ದಾರೆ. ಬ್ರಿಟಿಷರ ಕಾಲಕ್ಕೆ ಕೃಷಿ ಹೀಗೆ ವಿವಿಧ ವೃತ್ತಿಗಳಲ್ಲಿ ವಿಸ್ತರಣೆಗೊಳ್ಳದೆ ಮೇಲಿನ ವೃತ್ತಿಗಳನ್ನು ಅವಲಂಬಿಸಿರಬಹುದು. ಇಂದು ಮಾತ್ರ ಆ ಚಿತ್ರಣ ಬದಲಾಗಿದೆ. ಬ್ರಿಟಿಷರ ಕಾನೂನು ನಿಯಮಗಳನ್ನು ವಿರೋಧಿಸಿದ ಪ್ರಥಮ ವೀರರೇ ಹಲಗಲಿ ಬೇಡರು. ಕ್ರಿ.ಶ. ೧೮೫೭ರ ದಂಗೆಯ ಶಸ್ತ್ರಾಸ್ತ್ರ ನಿಷೇಧ ಕಾಯಿದೆಯನ್ನು ಉಲ್ಲಂಘಿಸಿ, ಬ್ರಿಟಿಷರಿಗೆ ತಕ್ಕಪಾಠ ಕಲಿಸಿದ ಏಕೈಕ ಜನಸಮುದಾಯ ಹಗಲಿಯ ಬೇಡರು ಮಾತ್ರ, ಮದ್ರಾಸ್, ಮುಂಬಾಯಿ ಪ್ರಾಂತ್ಯಗಳಲ್ಲಿ ಬೇಡರ ಬದುಕು ಹೀನಾಯವಾಗಿತ್ತು. ಕೈತಪ್ಪಿದ ಪಾಳೆಯಗಾರಿಕೆಯಿಂದ ಜೀವಿಸುವುದು ಕಷ್ಟವಾಯಿತು ಸಣ್ಣಪುಟ್ಟ ಕಾರಣಗಳಿಗಾಗಿ ಬ್ರಿಟಿಷರು ಬೇಡರನ್ನು ನಿಂದಿಸುತ್ತಿದ್ದರು. ಸರ್ವಪ್ಪನಾಯಕ ಮೈಸೂರು ಭಾಗದಲ್ಲಿ ಕಂಡು ಬಂದರೆ, ಮುಂಬಾಯಿ (ಪ್ರಾಂತ) ಕರ್ನಾಟಕದಲ್ಲಿ ವೀರಸಿಂಧೂ ಲಕ್ಷಣನೇ ಬ್ರಿಟಿಷರನ್ನು ಮೆಟ್ಟಿನಿಂತ ಮೊದಲ ವೀರ. ಇವರ ದುರಂತ ಸಾವು ಬೇಡರ ರೊಚ್ಚಿಗೆ, ಹುಮ್ಮಸ್ಸಿನ ಹೋರಾಟಕ್ಕೆ ಕ್ರಾಂತಿಯ ಕಿಡಿಯಾಯಿತು. ಛಲದಿಂದ ಬ್ರಿಟಿಷರ ವಿರುದ್ಧ ಹೋರಾಡಲು ಹವಣಿಸಿದ ಬೇಡರು, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಅರ್ಪಿಸಿಕೊಂಡರು. ಉದಾ: ಧೊಂಡಿಯ ವಾಘ.

ವಸಾಹತುಶಾಹಿಪೂರ್ವದಲ್ಲಿದ್ದ ಬೇಡರ ಬದುಕು ವಸಾಹತು ಕಾಲದಲ್ಲಿ ಶೋಚನೀಯವೆಂಬಂತೆ ಕಂಡುಬಂದರೆ, ಅನಂತರ ಬದಲಾದ ಸ್ಥಿತಿಯನ್ನು ಕಾಣಬಹುದು. ಈ ವಸಾಹತೋತ್ತರ ಸಂದರ್ಭದಲ್ಲಿ ಇವರ ಸ್ಥಿತಿಗತಿ ಕುರಿತು ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಸಮಪಾಲು ಸಮಬಾಳಿಗಾಗಿ ಹೋರಾಟ ಮುಂದುವರೆದು ಪ್ರಗತಿಪಥದಲ್ಲಿ ಸಾಗಿದ್ದು ವಿಶೇಷ. ಆಧುನಿಕೋತ್ತರ ಅಧ್ಯಯನ ಕ್ರಮಗಳು ಇವರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತವೆ. ಬೇಡರ ಪಾಲಿಗೆ ಶ್ರಮ ಮಾನದಂಡವಾದುದಲ್ಲದೆ, ಪರಿವರ್ತನೆಯ ಬದುಕಿಗೆ ಸಂಕೇತ. ಇಷ್ಟೆಲ್ಲಾ ಪರಂಪರೆಯುಳ್ಳ ಬೇಡರ ಬದುಕು ಇನ್ನು ಡೋಲಾಯಮಾನ ಸ್ಥಿತಿಯಲ್ಲಿದೆ. ಸುಧಾರಣಾ ಜೀವನಕ್ರಮ ಒಗ್ಗಿಹೋಗಿದ್ದರೂ ಸಹ ಬೇಟೆಯು ಆಚರಣೆ ರೂಪದಲ್ಲಿ ಜೀವಂತಿಕೆ ಪಡೆದಿದೆ. ಪಶುಪಾಲನೆ ಆರ್ಥಿಕ ನಿರ್ವಹಣೆಗೆ ಹಾಸುಹೊಕ್ಕಾಗಿದೆ. ಕುರಿ, ಆಡು, ದನ, ಎಮ್ಮೆ, ಎತ್ತು, ಕರುಗಳೇ ಗ್ರಾಮೀನ ಆರ್ಥಿಕ ಸಂಪತ್ತು. ಇಂದು ಕೃಷಿಯಲ್ಲಿ ಸಂಪ್ರದಾಯಿಕ ಬೆಳೆಗಳನ್ನು ಬೆಳೆದರೆ ಲಾಭವಿಲ್ಲ. ವಿದೇಶಿ ಬೀಜಗಳನ್ನು ತಂದರೆ ಹೆಚ್ಚು ಇಳುವರಿ ಬಂದು ಲಾಭ ಪಡೆಯಬಹುದು. ಆದರೆ ಇದು ರೈತರ ಪಾಲಿಗೆ ಮೋಸ ಎನಿಸುತ್ತದೆ. ಮುಕ್ತ ವ್ಯಾಪಾರ ನೀತಿಯಿಂದ ಮತ್ತು ಜಗತ್ತೇ ಧ್ರುವೀಕರಣಗೊಳ್ಳುವಾಗ ಒಬ್ಬ ಸಾಮಾನ್ಯ ವ್ಯಕ್ತಿ ಬಗ್ಗೆ ಕಿಂಚಿತ್ತು ಆಲೋಚಿಸದೆ ಮುನ್ನುಗ್ಗುವರೇ ಹೆಚ್ಚು. ಸರಿಯಾಗಿ ಬೆಳೆ ಬರಲಿಲ್ಲವೆಂದರೆ ತಮ್ಮ ಮನೆದೇವರ ಹಬ್ಬ ಮಾಡಲಿಲ್ಲ. ದೇವರ ತೀರ್ಥ ಹಾಕಲಿಲ್ಲ ಎಂಬ ನಂಬಿಕೆಗಳಿವೆ. ಸರ್ಕಾರ ಇವರಿಗೆ ಪರಿಶಿಷ್ಟವರ್ಗವೆಂದು ಕರೆದು ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಆದರೂ ಗಿರಿಜನರಾದ ಬೇಡರು ಇಂಥಾ ಸೌಲಭ್ಯಗಳಿಂದ ವಂಚಿತರಾಗಿರುವರು. ಮುಂದುವರೆದ ಬೇಡರ ನಾಗರಿಕ ಸಮಾಜಕ್ಕೆ ಸರ್ಕಾರದ ಯೋಜನೆಗಳು ತಲುಪುವುದು ವಿಷಾದನೀಯ. ಮ್ಯಾಸಬೇಡರಂಥ ಬುಡಕಟ್ಟು ಜನರಿಗೆ ನಾಗರಿಕತೆಯ ಸೋಂಕಿನ ಸುಳಿವೆ ಇಲ್ಲ. ಇಂದು ಅಂಥ ಪರಧಿಗೆ ಬರುವಲ್ಲಿ ತಲ್ಲೀನರಾಗಿದ್ದಾರೆ.

ಹೀಗೆ ಬೇಡರು ಭವ್ಯವಾದ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದರೂ, ಚರಿತ್ರೆಯ ಪುಟಗಳಲ್ಲಿ ಮರೆಯಾಗಿರುವ ಸಂದರ್ಭಗಳೇ ಹೆಚ್ಚು. ವಿಜಯನಗರ ಪೂರ್ವ ಮತ್ತು ವಿಜಯನಗರೋತ್ತರ ಸಂದರ್ಭದಲ್ಲಿ ಈ ಬುಡಕಟ್ಟಿನ ವೀರರು ತಾಯಿನಾಡಿನ ರಕ್ಷಣೆಗಾಗಿ ಹೋರಾಡಿರುವುದು ಸ್ಮರಣೀಯ. ಬೇಟೆ, ಪಶುಪಾಲನೆ ಮತ್ತು ಕೃಷಿ ಅವಸ್ಥೆಗಳಲ್ಲಿ ಪ್ರಾಣಿ, ಭೂಮಿ, ಹೆಣ್ಣು ಮತ್ತು ಸಂಪತ್ತಿಗಾಗಿ ಕಾದಾಡುತ್ತಿದುದು ವಾಸ್ತವ ಸಂಗತಿ. ಇವುಗಳನ್ನು ಜನಪದರು ವಿವಿಧ ರೀತಿಯಲ್ಲಿ ಕಥೆ ಕಟ್ಟಿ ಹಾಡುತ್ತಾರೆ. ಸತ್ತ ವ್ಯಕ್ತಿಯನ್ನು ದೇವರೆಂದು ಪರಿಗಣಿಸಿ ಆಚರಿಸುವ ಸಂಪ್ರದಾಯವಿದೆ. ಇಲ್ಲಿ ಪುರುಷನೇ ವ್ಯಕ್ತಿ ಆರಾಧನೆಯ ಕೇಂದ್ರ ಬಿಂದು. ಅಂದರೆ ದೈವತ್ವಕ್ಕೇರಿದ ವ್ಯಕ್ತಿ ಎಂದು ತಿಳಿಯಬೇಕು. ಸ್ತ್ರೀಯರು ಸಹ ಈ ಹಂತವನ್ನು ಮೀರಿದ್ದರು.

ಬುಡಕಟ್ಟು ವೀರರು ಅಥವಾ ಸಾಂಸ್ಕೃತಿಕ ನಾಯಕರು ಮ್ಯಾಸಬೇಡರಂತೆ ಇತರೆ ಸಮುದಾಯಗಳಲ್ಲಿಯೂ ಕಂಡು ಬರುತ್ತಾರೆ. ಮುಖ್ಯವಾಗಿ ಮಧ್ಯಕಾಲದಲ್ಲಿ ಕಂಡು ಬರುವ ಇವರ ಪಾತ್ರ ಚರಿತ್ರೆಯ ಯಾವ ದಾಖಲೆಯಲ್ಲಿಯೂ ಸಿಗುವುದಿಲ್ಲ. ಜನರ ಬಾಯಲ್ಲಿ ಮಾತ್ರ ಇಂದಿಗೂ ಜೀವಂತಿಕೆ ಪಡೆದುಕೊಂಡಿದೆ ಇವರ ಮೌಖಿಕ ಇತಿಹಾಸ, ಅನುಕೂಲಕ್ಕೆ ತಕ್ಕಂತೆ ದೇವಾಲಯ, ಶಾಸನ, ಶಿಲ್ಪ, ಕೆರೆ – ಕಟ್ಟೆ, ಕೋಟೆ – ಕೊತ್ತಳಿಗಳು ಇಲ್ಲಿನ ಅಧ್ಯಯನಕ್ಕೆ ನೆರವಾಗುತ್ತವೆ.

ಆಧುನಿಕ ಸಂಸ್ಕೃತಿಯಿಂದ ನಮ್ಮ ಪ್ರಾಚೀನ ಸಂಸ್ಕೃತಿ ನೆಲಕಚ್ಚುವಂತಾಗಿದೆ. ಬುಡಕಟ್ಟು ವೀರರನ್ನು ಆರಾಧಿಸುವ ಬೇಡರು ಇತರರ ಪ್ರಭಾವಕ್ಕೆ ಒಳಗಾಗಿ ಖ್ಯಾತಿ ಪಡೆದ ದೇವರನ್ನು ಪೂಜಿಸುತ್ತಾ ಅನುಯಾಯಿಗಳಾಗುತ್ತಾರೆ. ಜೊತೆಗೆ ತಮ್ಮ ವಂಶದ ಅಥವಾ ಪರಂಪರೆಯ ಪೂರ್ವಿಕ ವ್ಯಕ್ತಿಯನ್ನು ಆರಾಧಿಸುವುದುಂಟು. ಮ್ಯಾಸಬೇಡರ ವಿಶೇಷತೆಯೆಂದರೆ ಎಂಥ ಜಗದ್ವಿಖ್ಯಾತ ದೇವರುಗಳಿದ್ದರೂ ತಮ್ಮ ಮಾತೃ ದೇವತೆಗಳಿಗೆ ಮೊದಲ ಆದ್ಯತೆಕೊಡುವರು. ಆದುದರಿಂದ ಇಂಥಾ ವೀರರ ಸಾಂಸ್ಕೃತಿಕ ಬದುಕು ಅಜ್ಞಾತವಾಗಿದ್ದುದನ್ನು ತೆರೆದು ತೋರಿಸಬೇಕಾಗಿದೆ.

ಇಲ್ಲಿ ವೀರ, ಅವನ ಲಕ್ಷಣಗಳು, ವೀರರ ಸಾಧನೆ, ಸೋಲು, ಸಾವು, ಆಚರಣೆ, ಸಂಪ್ರದಾಯ, ವಾಸ್ತುಶಿಲ್ಪ, ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗುತ್ತದೆ. ಇವರು ಪಾಳೆಯಗಾರರು ಆಗದೇ, ತೀರಾ ಪುರೋಹಿತ ವರ್ಗಕ್ಕು ಸೇರದೆ ಆಧ್ಯಾತ್ಮ ರೂಪದ ವೀರಪರಾಕ್ರಮಿಗಳಂತೆ ಕಂಡುಬರುವರು. ಇವರು ಮಾಡಿದ ಸಾಧನೆ ಕಡಿಮೆಯಾದರೂ, ಅಂದಿಗೆ ಅದು ಮೌಲ್ಯಯುತವಾಗಿತ್ತು. ಅಂದಿನ ಜೀವನ ಮೌಲ್ಯಗಳಲ್ಲಿ ಅದು ಬೆರೆತು ಹೋಗಿದ್ದರಿಂದ ಜನಪದ ಸಾಹಿತ್ಯದಲ್ಲಿ ಆ ಬಗ್ಗೆ ಮಾಹಿತಿ ಲಭಿಸುವುದು. ಗಾದರಿ ಪಾಲನಾಯಕ, ಜಗಳೂರು ಪಾಪನಾಯಕ, ಕೊಡಗಲು ಬೊಮ್ಮಯ್ಯ, ಯರಗಾಟನಾಯಕ, ಗಾಜನಾಯಕ, ದಡ್ಡಿಸೂರನಾಯಕ, ಯರಮಂಚಿನಾಯಕ, ಪೆದ್ದಯ್ಯ ಮೊದಲಾದ ವೀರರ ಚರಿತ್ರೆಯು ಅಮೋಘವಾದುದು. ಇವರ ಚರಿತ್ರೆ ಎಲ್ಲೂ ದಾಖಲಾಗಿಲ್ಲ. ಕೇವಲ ಮೌಖಿಕ ಸಾಹಿತ್ಯವನ್ನಷ್ಟೇ ಬಳಸಿಕೊಂಡು ಮೇಲಿನ ವೀರರು ಮತ್ತು ಅವರ ಪೂರ್ವಿಕರು, ಇಂದಿನ ವೀರರು ಇತ್ಯಾದಿಯಾಗಿ ವಿಶ್ಲೇಷಿಸುವ ಉದ್ದೇಶವನ್ನು ಹೊಂದಲಾಗಿದೆ.

ಪ್ರಸ್ತುತ ವಿಷಯದ ವ್ಯಾಪ್ತಿ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ್ದರೂ ನೆರೆಯ ಜಿಲ್ಲೆಗಳಾದ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳ ಜಗಳೂರು ಮತ್ತು ಕೂಡ್ಲಿಗಿ, ಹೊಸಪೇಟೆ ತಾಲೂಕುಗಳನ್ನು ಅಧ್ಯಯನಕ್ಕೊಳಪಡಿಸಿಕೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳಲ್ಲಿ ಬೇಡರ ಆರಾಧನಾ ಕ್ಷೇತ್ರಗಳೀವೆ. ಈ ಎಲ್ಲಾ ಪ್ರದೇಶಗಳಲ್ಲಿ ವೀರರ ಆಚರಣೆ, ರೂಢಿ, ಸಂಪ್ರದಾಯಗಳನ್ನು ಜನಾಂಗದ ವೈಶಿಷ್ಟ್ಯಗಳೊಂದಿಗೆ ವಿವರಿಸುವ ಅಗತ್ಯವಿದೆ. ಕಾಲ, ವ್ಯಾಪ್ತಿ ನಿಖರವಾಗಿಲ್ಲದ್ದರಿಂದ ಮಧ್ಯಕಾಲವೆಂದು ಕರೆದುಕೊಳ್ಳಲಾಗಿದೆ.

ಬೇಡರ ಸಾಂಸ್ಕೃತಿಕ ಲಕ್ಷಣಗಳಲ್ಲಿ ಬುಡಕಟ್ಟು ವೀರನ ಜನನ, ಬೆಳವಣಿಗೆ, ಸಾಧನೆ, ಶಿಕ್ಷಣ, ಉದ್ಯೋಗ ಅಥವಾ ವೃತ್ತಿ ಇತ್ಯಾದಿ ಸಂಗತಿಗಳು ವ್ಯಕ್ತಿತ್ವದ ಮಾನದಂಡವಾಗಿದೆ. ಯಾವೊಬ್ಬ ವೀರನ ಜನನದ ಸ್ಪಷ್ಟ ಕಾಲಮಾನ ತಿಳಿದುಬಂದಿಲ್ಲ. ಕೆಲವೇ ವರ್ಷಗಳ ಹಿಂದೆ ಚಿರತೆಯೊಂದಿಗೆ ಕಾದಾಡಿ ಮಾಡಿದ ಪೆದ್ದಯ್ಯ (ಯರಮಂಚಯ್ಯ) ನನ್ನು ನೂರಾರು ವರ್ಷಗಳ ಹಿಂದಿನವನೆಂದು ಉತ್ಪ್ರೇಕ್ಷಿಸಿ ಹೇಳುವುದುಂಟು. ಹೀಗಾಗಿ ಇಲ್ಲಿ ಕಾಲಮಾನವನ್ನು ನಿರ್ದಿಷ್ಟವಾಗಿ ಇಟ್ಟುಕೊಂಡಿಲ್ಲ. ಒಟ್ಟು ಅಧ್ಯಯನದ ವ್ಯಾಪ್ತಿಯನ್ನು ಹತ್ತನೇ ಶತಮಾನದಿಂದ ಇಪ್ಪತ್ತನೆಯ ಶತಮಾನದವರೆಗೆ ಆಯ್ದುಕೊಳ್ಳಲಾಗಿದೆ. ಪ್ರಮುಖವಾಗಿ ೧೬ – ೧೭ನೇ ಶತಮಾನಗಳಲ್ಲಿನ ಸಾಂಸ್ಕೃತಿಕ ಹೆಗ್ಗುರುತುಗಳು ಕಂಡು ಬರುವುದರಿಂದ ಆ ಕಾಲಕ್ಕೆ ಮಹತ್ವ ಕೊಡಲಾಗಿದೆ. ಇಲ್ಲಿ ಸಾಮಾನ್ಯ ವ್ಯಕ್ತಿ ವೀರನಾಗುವ ಬಗೆ, ಸಾಧನೆ, ಸಂಸ್ಕೃತಿಯ ಲಕ್ಷಣಗಳ ಮೂಲಕ ಇತರೆ ಸಮಕಾಲೀನ ಸಂದರ್ಭ, ಲಕ್ಷಣಗಳನ್ನು ಗಮನಿಸಿ ಕಾಲಮಾನದ ಮೂಲಕ ಪರಂಪರೆಯನ್ನು ಗುರುತಿಸಬೇಕಾಗಿದೆ.

ಚರಿತ್ರೆಯಲ್ಲಿ ಸ್ಥಾನ ಸಿಗದವರು, ಜನಪದರ ಬಾಯಲ್ಲುಳಿದ ಬೇಡ ವೀರರನ್ನು ಅಸಾಧಾರಣ ಪಟ್ಟಿಕಟ್ಟಿ ಉದಾತ್ತೀಕರಿಸಿದ್ದಾರೆ. ಇವರಿಗೆ ಸ್ಥಾನ ದೊರಕಿಸಿ ಕಾಲಮಾನ ನಿರ್ಣಯಿಸುವುದಲ್ಲದೆ, ಅವರ ವಿಚಾರಧಾರೆಯನ್ನು, ನೈತಿಕ ಮೌಲ್ಯಗಳನ್ನು ಇಂದಿನ ಸಮಾಜಕ್ಕೆ ತಿಳಿಸುವ ಪ್ರಸ್ತುತತೆಯಿದೆ. ಈ ಬಗ್ಗೆ ಅಧಿಕೃತ ಯಾವ ದಾಖಲೆಗಳು ಇವರ ಬಗೆಗೆ ಬೆಳಕು ಚೆಲ್ಲುತ್ತಿಲ್ಲ. ಮಹಿಳೆಯರ ಸಂದರ್ಭಗಳನ್ನು ಇಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದೆ. ಬುಡಕಟ್ಟು ವೀರ, ನಾಯಕ, ಅವನ ತಂದೆ – ತಾಯಿ, ಸಹಸಂಬಂಧಿಗಳು ಬಳಸುವ ಪರಿಕರಗಳು, ಪ್ರಾಣಿ – ಪಕ್ಷಿಗಳ ಬಗೆಗಿನ ಆ ಕಾಲದ ನಂಬಿಕೆಗಳು ಅನಾವರಣಗೊಳ್ಳುವುದು ಅರ್ಥಪೂರ್ಣ. ಜನರ ಮೌಖಿಕ ಸಾಹಿತ್ಯವನ್ನು ಚರಿತ್ರೆ ರಚನೆಗೆ ತರುವುದು ತೀರಾ ಕಷ್ಟದ ಕೆಲಸ. ಪ್ರಾಥಮಿಕ ಆಕರಗಳು ಅಲ್ಪವಾಗಿ ದೊರೆತಿರುವುದರಿಂದ ಹೆಚ್ಚಾಗಿ ಜನಪದ ಸಾಹಿತ್ಯವನ್ನೇ ಆಶ್ರಯಿಸಬೇಕಾಗುತ್ತದೆ. ಆದರೂ ಚರಿತ್ರೆಗೆ ಇತರ ಅಂತರಶಿಸ್ತುಗಳನ್ನೊಳಪಡಿಸಿಕೊಂಡು ಬುಡಕಟ್ಟು ವೀರರ ಸಾಂಸ್ಕೃತಿಕ ಚರಿತ್ರೆಯನ್ನು ವಿಶ್ಲೇಷಿಸಲಾಗುವುದು.

ಸಮಕಾಲೀನ ದಾಖಲೆಗಳು ಮರೆಯಾಗಿದ್ದು, ಅವುಗಳಿಂದ ಹುಟ್ಟಿಕೊಂಡ ಭಿನ್ನಪಾಠಗಳನ್ನು, ಪುನಃ ಬರೆದ ಹಸ್ತಪ್ರತಿಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಇವುಗಳಲ್ಲಿ ಪುರಾಣ, ಪ್ರತೀತಿಗಳೇ ಹೆಚ್ಚು. ಆಂತರಿಕ, ಬಾಹ್ಯ ವಿಮರ್ಶೆ ಮೂಲಕ ಶೋಧಿಸಿ ತಕ್ಕಮಟ್ಟಿಗೆ ವಿವರಿಸಬೇಕಾಗಿದೆ. ಮೊದಲೇ ಹೇಳಿದಂತೆ ಬುಡಕಟ್ಟು ವೀರರು ಜನಪದದ ಬಾಯಲ್ಲಿ ಉಳಿದಿರುವುದರಿಂದ ಇದು ಆ ಜನಸಾಮಾನ್ಯರ ಇತಿಹಾಸವಾಗಬಹುದು. ಹಾಗಾಗಿ ಇದರಲ್ಲಿನ ಇತಿಹಾಸದ ಸಂಗತಿಗಳನ್ನು ಜನಪದ ರಂಗಭೂಮಿಯಲ್ಲಿ ನಾಟಕವಾಡಿಸಿದಂತೆ ಆಗಿದೆ. ನಿಖರವಾದ ಇತಿಹಾಸ ಯಾವುದು ಎಂಬ ಸಂಶಯ ಬರುವುದು ಸ್ಪಷ್ಟ. ಏಕೆಂದರೆ ಜನರ ಕಥೆ, ಕಾವ್ಯಗಳನ್ನು ಕಟ್ಟಿ ನಿರೂಪಿಸುವ ವಿಧಾನ ಎಷ್ಟರಮಟ್ಟಿಗೆ ಚರಿತ್ರೆಯಾಗಬಹುದು. ಇದರಲ್ಲಿ ಸತ್ಯಾಂಶಗಳನ್ನು ಹುಡುಕುವ ಗೋಚಾದರೂ ಏಕೆ? ಇದು ಒಂದು ಕಾಲಘಟ್ಟದ ಸಾಂಸ್ಕೃತಿಕ ಬದುಕು ಎಂದರೆ ಸಮಂಜಸವಾದೀತು.

ಇಲ್ಲಿನ ಬುಡಕಟ್ಟು ವೀರರು ಒಂದೇ ಸಮುದಾಯಕ್ಕೆ ಸೀಮಿತವಾಗಿದ್ದರಿಂದ ಸಮಗ್ರ ಚಿತ್ರಣ ಕಾಣುವುದಿಲ್ಲ. ಆದರೂ ಜಾತಿ ಸಂಘಟನೆ, ಮತಾಂತರ ಪ್ರವೃತ್ತಿಗಳನ್ನು ಅಲ್ಲಗಳೆಯುವಂತಿಲ್ಲ. ಈ ಎಲ್ಲಾ ಕಾರಣಗಳಿಂದ ಪ್ರಶ್ನಾವಳಿ ತಯಾರಿಸಿ ಸಹಸ್ರಾರು ಮಂದಿಯನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಇದರೊಂದಿಗೆ ಸೋಬಾನೆ ಜನಪದಗೀತೆ, ಲಾವಣಿ ಹೀಗೆ ಉಪಯುಕ್ತ ಮಾಹಿತಿಯನ್ನು ಬಳಸಿಕೊಳ್ಳಲಾಗಿದೆ.

‘ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು’ ಅಧ್ಯಯನದ ಸ್ವರೂಪ ಪ್ರಾದೇಶಿಕ ಮತ್ತು ಮೌಖಿಕ ಚರಿತ್ರೆಯ ಅಧ್ಯಯನ ವಿಧಾನವಾಗಿದೆ. ಕಾಲಾನುಕ್ರಮವಾಗಿ ವಿಶ್ಲೇಷಿಸುವಾಗ ಮೌಖಿಕ ಆಕರಗಳನ್ನು ಬಳಸಿಕೊಳ್ಳುವುದೇ ಹೆಚ್ಚು. ಇವೆ ಜನಪದ ಕಥೆಗಳಂತೆ ಕಂಡು ಬಂದರೂ ಸಾಂಸ್ಕೃತಿಕ ಸಂಕಥನಗಳಾಗಿರುವಂತಿವೆ. ಹೀಗಾಗಿ ಶಾಸನ, ವೀರಗಲ್ಲು, ದೇವಾಲಯ ಮೊದಲಾದವುಗಳಲ್ಲದೆ, ಅಪ್ರಕಟಿತ ಹಸ್ತಪ್ರತಿ, ಪತ್ರಗಳನ್ನು ಇಲ್ಲಿ ಗಮನಿಸಿದ್ದು, ಆಕರಗಳೆಂದು ಪರಿಗಣಿಸಲಾಗಿದೆ.

.) ಚಿತ್ರದುರ್ಗ ಜಿಲ್ಲೆಯ ಭೌಗೋಳಿಕ ಪರಿಚಯ

ಏಷ್ಯಾ ಖಂಡದಲ್ಲೇ ಅತಿ ಪ್ರಾಚೀನ ನಿವೇಶನ ಮತ್ತು ಚರಿತ್ರೆ ಹೊಂದಿದ ಜಿಲ್ಲೆ ಚಿತ್ರದುರ್ಗ. ಮಧ್ಯ ಕರ್ನಾಟಕದಲ್ಲಿರುವ ಚಿತ್ರದುರ್ಗ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ರಾಯಭಾರಿಯಂತಿದೆ. ಆಂಗ್ಲರ ಕಾಲದಲ್ಲಿ ಚಿಟಲ್‌ಡ್ರೂಗ್ ಎಂದು ಹೆಸರಿತ್ತು. ಅದಕ್ಕೂ ಹಿಂದೆ ಸೀತಳ ಅಥವಾ ಚಿತ್ರಕಲ್ಲು ದುರ್ಗ, ಚಿತ್ತರಕಲ್ಲು, ಸಿದ್ಧರಕಲ್ಲು, ಚಿತ್ತಮಲೆಗುಡ್ಡ ಎಂದು ಕರೆಯುತ್ತಿದ್ದರು. ಮಧ್ಯಕಾಲದಲ್ಲಿ ಸೂಳ್ಗಲ್ಲು, ಸೂಳನಕಲ್ಲು, ಬೊಮ್ಮತ್ತನಕಲ್ಲು ಬೆಮ್ಮತ್ತನೂರು ಅಥವಾ ಬೆಮ್ಮತ್ತೂರು ಎಂದು ಕರೆಯುತ್ತಿದ್ದರ ಬಗ್ಗೆ ಉಲ್ಲೇಖಗಳಿವೆ.

ಈ ಜಿಲ್ಲೆಯ ಮೇರೆಗಳೆಂದರೆ ಉತ್ತರಕ್ಕೆ ಬಳ್ಳಾರಿ, ಪೂರ್ವಕ್ಕೆ ಅನಂತಪುರ (ಆಂಧ್ರಪ್ರದೇಶ) ಆಗ್ನೇಯ ದಿಕ್ಕಿಗೆ ತುಮಕೂರು, ಪಶ್ಚಿಮಕ್ಕೆ ದಾವಣಗೆರೆ, ವಾಯುವ್ಯ ಧಾರವಾಡ ಮತ್ತು ನೈಋತ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಗಳಿಂದ ಸುತ್ತುವರೆಯಲ್ಪಟ್ಟಿದೆ. ಮೊದಲು ಚಿತ್ರದುರ್ಗ ಜಿಲ್ಲೆಯಲ್ಲಿ ೯ ತಾಲ್ಲೂಕುಗಳಿದ್ದವು. ದಾವಣಗೆರೆ ನೂತನ ಜಿಲ್ಲೆಯಾದ ತರುವಾಯ ದಾವಣಗೆರೆ, ಹರಿಹರ ಮತ್ತು ಜಗಳೂರು ತಾಲೂಕುಗಳ ಈ ಜಿಲ್ಲೆಗೆ ಸೇರ್ಪಡೆಯಾದವು. ಉಳಿದಂತೆ ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಚಿತ್ರದುರ್ಗ ಮತ್ತು ಮೊಳಕಾಲ್ಮೂರುಗಳು ಮಾತ್ರ ಚಿತ್ರದುರ್ಗ ಜಿಲ್ಲೆಯಲ್ಲಿವೆ.

ಚಿತ್ರದುರ್ಗ ಜಿಲ್ಲೆ ೧೩೩೪ ಮತ್ತು ೧೫೨೦ ರ ಅಕ್ಷಾಂಶ ಮತ್ತು ೭೫೩೭ ಮತ್ತು ೭೭೦೧ ರೇಖಾಂಶದಲ್ಲಿದೆ. ಜಿಲ್ಲೆಯ ವಿಸ್ತೀರ್ಣ ೧೦.೮೨೫ ಚ.ಕಿ.ಮೀ ಇದ್ದು, ಉತ್ತರ ದಕ್ಷಿಣವಾಗಿ ೮೮ ಮೈಲಿ, ಪೂರ್ವ – ಪಶ್ಚಿಮವಾಗಿ ಸುಮಾರು ೧೦೦ ಮೈಲಿದೆ. ವಿಸ್ತಾರದಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ೭ನೇ ಸ್ಥಾನ ಪಡೆದಿತ್ತು. ಈಗ ಬದಲಾಗಿದೆ. ಈ ಜಿಲ್ಲೆ ದಖನ್ ಪ್ರಸ್ಥಭೂಮಿ ಭಾಗವಾಗಿದ್ದು, ರಾಜ್ಯದಲ್ಲಿ ಕಡಿಮೆ ಮಳೆ ಬೀಳುವಲ್ಲಿ ಇದು ಎರಡನೇ ಸ್ಥಾನದಲ್ಲಿದೆ. ವಾರ್ಷಿಕ ಮಳೆ ೬೫೫ ಮಿ.ಮೀ. ಇದೆ. ಆಗಾಗ ಜಿಲ್ಲೆ ಅನಾವೃಷ್ಟಿಗೆ ಒಳಗಾಗಿ ಬರಗಾಲವನ್ನು ಅನುಭವಿಸುತ್ತದೆ.

ಚಿತ್ರದುರ್ಗ ಪ್ರದೇಶವೆಂದರೆ ಬೆಟ್ಟ – ಗುಡ್ಡ, ಕೋಟೆಗಳು ಗೋಚರಿಸುವುದು ಸಹಜ. ಸ್ಥಳೀಯವಾಗಿ ಅವುಗಳಿಗೆ ನಾನಾ ಹೆಸರುಗಳಿಂದ ಕರೆದುಕೊಂಡಿದ್ದಾರೆ. ಅವುಗಳಲ್ಲಿ ಮೊಳಕಾಲ್ಮೂರು ತಾಲೂಕಿನ ಜಂಟಿಂಗರಾಮೇಶ್ವರ ಬೆಟ್ಟ (೩೪೬೯ ಅಡಿ), ಬ್ರಹ್ಮಗಿರಿ (೨೩೧೭) ನುಂಕಪ್ಪನ ಗುಡ್ಡ (೩೦೨೨), ಜೋಗಪ್ಪನ ಗುಡ್ಡ (೨೯೩೬), ಹೊಳಲ್ಕೆರೆ ತಾಲೂಕಿನ ದೊಡ್ಡಹಟ್ಟಿ, ರಂಗಪ್ಪನ ಗುಡ್ಡ, ವಡ್ಡರಗುಡ್ಡ, ಹೊಸದುರ್ಗ ತಾಲೂಕಿನ ನೀರಗುಡ್ಡ, ಕೊಟಕಲ್ ಗುಡ್ಡ, ತಿರುಮಲ ದೇವರಗುಡ್ಡ, ಹಾಲುರಾಮೇಶ್ವರ, ಹಿರಿಯೂರು ತಾಲೂಕಿನ ಉತ್ತರ ಸರಣಿ ಬೆಟ್ಟ, ಹಿಂದಸಕಟ್ಟೆ ಮತ್ತು ಚಿತ್ರದುರ್ಗ ತಾಲೂಕಿನ ಜೋಗಿಮಟ್ಟಿ (೩೮೦೩), ಧವಳಪ್ಪನಗುಡ್ಡ (೩೨೮೫), ಭೀರನಕಲ್ಲುಗುಡ್ಡ (೩೮೬೩), ಈಚಲುಗುಡ್ಡ (೩೮೦೪), ಓಬಳದೇವರಗುಡ್ಡ ಮುಂತಾದವುಗಳು ಕಂಡು ಬರುತ್ತದೆ.

ಜಲ ಸಂಪತ್ತಿನಲ್ಲಿ ಈ ಜಿಲ್ಲೆ ಮಹತ್ತರವಾದ ಸ್ಥಾನವೇನು ಪಡೆದಿಲ್ಲ. ವೇದಾವತಿ, ಚಿನ್ನಹಗರಿ (ಜನಿಗೆಹಳ್ಳ), ಸುವರ್ಣಮುಖಿ ಮುಂತಾದ ನದಿಗಳು ಹರಿದು ನೀರಾವರಿ ಸೌಲಭ್ಯವನ್ನು ಅಲ್ಪವಾಗಿ ಕಲ್ಪಿಸಿವೆ. ಈ ಜಿಲ್ಲೆಯಲ್ಲಿ ವೇದಾವತಿ ನದಿ ೨೦೮ ಕಿ.ಮೀ. ಜನಗಿಹಳ್ಳ (೧೨೮ಕಿ.ಮೀ) ಸುವರ್ಣಮುಖಿ ಹಳ್ಳ ೧೧ ಕಿ,.ಮೀ ಹರಿದು ೨೦೨೦ ಎಕರೆಗೆ ನೀರೊದಗಿಸುತ್ತದೆ. ಭದ್ರಾ ಜಲಾಶಯದಿಂದ ೪೭,೪೬೦ ಎಕರೆ, ವಾಣಿವಿಲಾಸದಿಂದ ೧೦,೦೦೦ ಹೆಕ್ಟೇರ್, ಗಾಯತ್ರಿ ಜಲಾಯಶಯದಿಂದ ೯೨೮ ಹೆಕ್ಟೇರು ರಂಗಯ್ಯನದುರ್ಗ ಜಲಾಶಯದಿಂದ ಸು.೧೦೦೦ ಎಕರೆಗೆ ನೀರಾವರಿ ಸೌಲಭ್ಯವಾಗಿದೆ. ಚಂದ್ರವಳ್ಳಿ, ರಾಣಿಕೆರೆ, ನಾಯಕನಹಟ್ಟಿ, ಭರಮಸಾಗರ, ಗೌರಸಮುದ್ರ, ನಾಗಸಮುದ್ರ, ಗೋನೂರು, ಪರಶುರಾಂಪುರ, ಬುಕ್ಕಂಬುದಿ ಮುಂತಾದ ಪ್ರಾಚೀನ ಕೆರೆಗಳಿಂದಲೂ ನೀರಾವರಿಯಾಗುತ್ತದೆ.

ಈ ಜಿಲ್ಲೆಯ ಪ್ರಮುಖ ನದಿ ವೇದಾವತಿ. ವೇದ ಮತ್ತು ಅವತಿ ಎಂಬ ಎರಡು ಹೊಳೆಗಳು ಸೇರಿ ವೇದಾವತಿ ನದಿಯಾಗಿ ಹರಿಯುತ್ತದೆ. ಹೊಸದುರ್ಗದ ಮೂಲಕ ಮತ್ತೋಠು ಸಮೀಪದಿಂದ ಹರಿದುಬಂದು ಬ್ರಹ್ಮಗಿರಿದುರ್ಗದಿಂದ ವಾಣಿವಿಲಾಸ ಸಾಗರ ಸೇರುತ್ತದೆ. ನಂತರ ಹಿರಿಯೂರು ತಾಲೂಕಿನಿಂದ ಚಳ್ಳಕೆರೆ ತಾಲೂಕನ್ನು ಪ್ರವೇಶಿಸಿ ಘಟಪರ್ತಿಯಿಂದ ಆಂಧ್ರಕ್ಕೆ ಹರಿದು, ತರುವಾಯ ಚಿನ್ನಹಗಿರಿ ನದಿಯನ್ನು ಕೂಡುವುದು. ಜನ್ನಿಗೆಹಳ್ಳ ಅಥವಾ ಚಿನ್ನಹಗರಿ ನದಿ ಈ ಭಾಗದ ಜನರಿಗೆ ಪವಿತ್ರವಾದುದು. ಈ ನದಿ ಆಧ್ಯಾತ್ಮಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಬೇಡರಿಗೆ ಆವಾಸ ನೆಲೆಯಾಗಿದೆ. ಗಂಗೆ ಪೂಜೆ, ಹಬ್ಬ, ಜಾತ್ರೆಗಳಲ್ಲದೆ, ವಾಸಿಸುವ ಮನೆಗೆ ಆಪು ಕೊಯ್ಯಲು, ಮೀನು ಹಿಡಿಯಲು, ಕುರಿ ಮೇಕೆಗಳನ್ನ ಮೇಯಿಸಲು ಮತ್ತು ಮಡುವಿನಲ್ಲಿ ಸ್ನಾನ ಮಾಡಿಸಲು ನೆರವಾಗಿದೆ. ಈ ನದಿ ಚಿತ್ರದುರ್ಗ ಸಮೀಪದ ಬೆಟ್ಟಗಳಲ್ಲಿ ಹುಟ್ಟಿ ಹೊಳಲ್ಕೆರೆ ಚಿತ್ರದುರ್ಗ, ಜಗಳೂರು ತಾಲ್ಲೂಕುಗಳ ಮೂಲಕ ಕೂಡ್ಲಿಗಿ ತಾಲೂಕಿನಲ್ಲಿ ಹರಿದು ಮುಂದೆ ರಾಯದುರ್ಗ ತಾಲೂಕನ್ನು ಪ್ರವೇಶಿಸಿ ತುಂಗಾಭದ್ರಾ ನದಿಯನ್ನು ಸೇರುತ್ತದೆ. ಇದಕ್ಕೆ ಮೊಳಕಾಲ್ಮೂರು ಸಮೀಪ ರಂಗಯ್ಯದುರ್ಗ ಜಲಾಶಯವನ್ನು ನಿರ್ಮಿಸಿದ್ದಾರೆ. ಭಟ್ಟರಹಳ್ಳಿ, ದೇವಸಮುದ್ರ ಕೆರೆಗಳ ನೀರು ಬಂದು ಆ ನದಿಯನ್ನು ಸೇರುತ್ತದೆ.

ಸ್ವರ್ಣಮುಖಿ ಇಲ್ಲಿನ ಪ್ರಮುಖ ಹೊಳೆ. ಇದರ ಮೂಲ ತುಮಕೂರು ಜಿಲ್ಲೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸು.೭ ಕಿ.ಮೀ. ಹರಿಯುತ್ತದೆ. ಹಿರಿಯೂರು ತಾಲೂಕು ಇಕ್ಕನೂರಿನ ಬಳಿ ಈ ಹೊಳೆ ನದಿಯನ್ನು ಸೇರುತ್ತದೆ. ಚಳ್ಳಕೆರೆ ತಾಲೂಕಿನ ರಾಣಿಕೆರೆಗೆ ಪೀಡರ್‌ನಾಲೆ, ಹಿರಿಯೂರು ಧರ್ಮಪುರ ಪೀಡರ್ ನಾಲೆಗಳಿಂದ ನೀರಾವರಿ ಕೃಷಿ ನಡೆಯುತ್ತದೆ. ಇನ್ನು ನೀರಾವತಿ ಯೋಜನೆಗಳನ್ನು ಕೈಗೊಳ್ಳುವುದು ಸೂಕ್ತ.

ಈ ಜಿಲ್ಲೆಯ ೩೭೦ ಕಿ.ಚ.ಮೈಲಿಗಳ ವ್ಯಾಪ್ತಿಯಲ್ಲಿ ೩೦ ರಕ್ಷಿತ ಅರಣ್ಯ ಪ್ರದೇಶಗಳಿವೆ. ಹೆಚ್ಚು ಭಾಗ ಕಣಶಿಲೆಯ ಬೋಳು ಬೆಟ್ಟಗಳಿಂದ ಕೂಡಿದ್ದು, ಅಲ್ಲಲ್ಲೇ ಕಣಿವೆಗಳಿಂದ ಕೂಡಿದೆ. ಬೆಟ್ಟದ ಸಾಲು ದಕ್ಷಿಣ ಆಗ್ನೇಯದಿಂದ ಉತ್ತರ ವಾಯುವ್ಯದ ಕಡೆಗೆ ಸಮಾನಂತರದಲ್ಲಿ ಸಾಗಿವೆ. ಪೂರ್ವದ ಸಾಲು ಹಿರಿಯೂರಿನ ಪಶ್ಚಿಮದಿಂದ ಕಂಡುಬರುತ್ತದೆ.

ಅರಣ್ಯ ಪ್ರದೇಶ ಜಿಲ್ಲೆಯಲ್ಲಿ ವ್ಯಾಪಕವಾಗಿದೆ. ಮುತ್ತಿಗಾರಹಳ್ಳಿ ಕಾಯ್ದಿಟ್ಟ ಅರಣ್ಯದಲ್ಲಿ ಸು.೧೨ ಮೈಲು ಉದ್ದ ರಸ್ತೆ ಹಾದು ಹೋಗುತ್ತದೆ. ಇಂಥಾ ಬೃಹತ್ ಅರಣ್ಯಗಳು ಕಡಿಮೆಯಿದ್ದು, ಈ ಪ್ರದೇಶದಲ್ಲಿ ಇದು ಸುಂದರವನ ತೋಪು, ನದಿ, ಹಳ್ಳ – ಕೊಳ್ಳಗಳಿಂದ ಕೂಡಿದೆ. ತೋಟ, ಸಸ್ಯ ಕ್ಷೇತ್ರದಲ್ಲಿ ಪರಿಸರ ಸಂಬಂಧಿತ ಕೆಲಸಗಳನ್ನು ಮಾಡುತ್ತಾರೆ. ಫಲವತ್ತಾದ ಮಣ್ಣಿಲ್ಲದ್ದರಿಂದ ನಿರೀಕ್ಷಿತ ಬೆಳೆ ಪಡೆಯುವುದು ಕಷ್ಟ. ಇಲ್ಲಿನ ಸಸ್ಯ ಕ್ಷೇತ್ರಕ್ಕೆ ‘ಇಂದಿರಾ ಪ್ರಿಯದರ್ಶಿನಿ’ ಪ್ರಶಸ್ತಿ ಲಭಿಸಿದೆ.

.) ಚಿತ್ರದುರ್ಗ ಜಿಲ್ಲೆಯ ಚಾರಿತ್ರಿಕ ಹಿನ್ನೆಲೆ

ಚಿತ್ರದುರ್ಗ ಎಂದೊಡನೆ ಸಾಕು ಕೋಟೆ – ಕೊತ್ತಲಗಳ ಪ್ರದೇಶ ಕಣ್ಣಿಗೆ ಗೋಚರವಾಗುತ್ತದೆ. ಕರ್ನಾಟಕದ ಮೂಲೆ ಮೂಲೆಗೂ ಜಿಲ್ಲೆಯ ಚರಿತ್ರೆ ಮನೆಮಾತಾಗಿದೆ ಎಂದರೆ ತಪ್ಪಲ್ಲ. ಅಸಾಧಾರಣವಾದ ಸಾಧನೆಗಳ ಪ್ರತೀಕ ಹುಟ್ಟಿಕೊಂಡ ಕಥೆಗಳು ಅಪಾರ ಕುತೂಹಳ ಕೆರಳಿಸುವ ಕೋಟೆ, ದೇವಾಲಯ, ಮುದ ನೀಡುವ ಸರಳ ಭಾಷೆ ಇತ್ಯಾದಿ ಲಕ್ಷಣಗಳಿಂದ ಈ ಜಿಲ್ಲೆ ನಾಡಿನ ಉದ್ದಗಲಕ್ಕೂ ಚಿರಪರಿಚಿತ.

ಚಂದ್ರವಳ್ಳಿಯ ಭೂಶೋಧನೆಗಿಂತ ಮೊದಲು (೧೯೨೯) ಚಿತ್ರದುರ್ಗದ ಇತಿಹಾಸವನ್ನು ಪುರಾಣ, ದಂತಕಥೆಗಳ ಮೂಲಕ ದ್ವಾಪರಯುಗದಿಂದ ಹೇಳುತ್ತಾ ಬರುತ್ತಿದ್ದರು. ಸ್ಥಳೀಯರು ಭಾರತ ದೇಶದೊಂದಿಗೆ ಸಂಬಂಧ ಕಲ್ಪಿಸದೇ ಮಹಾಭಾರತದ ಮೂಲಕ ಗುರುತಿಸುತ್ತಾರೆ. ಚಿತ್ರದುರ್ಗ ಬೆಟ್ಟದಲ್ಲಿ, ಹಿಡಿಂಬಾಸುರ ವಾಸಿಸುತ್ತಿದ್ದನೆಂಬ ಪ್ರತೀತಿಯಿದೆ. ಪಾಂಡವರು ವನವಾಸ ಬಂದಾಗ ಕುಂತಿಯ ರಾಜಕುಮಾರನಾದ ಭೀಮನಿಗೆ ಮತ್ತು ಹಿಡಂಬಾಗೆ ಯುದ್ದ ನಡೆದುದು ಇಲ್ಲಿಯೇ. ಇಂದಿಗೂ ಇವರ ಸಂಕೇತಕ್ಕೆ ಹಿಡಂಬೇಶ್ವರ ಮತ್ತು ಸಿದ್ದೇಶ್ವರ ದೇವಾಲಯಗಳೇ ಸಾಕ್ಷಿ. ಹಿಡಂಬೇಶ್ವರ, ಧರ್ಮೇಶ್ವರ, ಭೀಮೇಶ್ವರ, ಫಾಲ್ಗುಣೇಶ್ವರ, ನಕುಲೇಶ್ವರ ಮತ್ತು ಸಹದೇವೇಶ್ವರ ದೇವಾಲಯಗಳನ್ನು ನಿರ್ಮಿಸಲಾಯಿತು. ಮಹಾಭಾರತದ ಕಥೆ ಪ್ರಕಾರ ಭೀಮ ಹಿಡಂಬಿ ಎನ್ನುವ ರಾಕ್ಷಸಿಯನ್ನು ಮದುವೆಯಾಗುತ್ತಾನೆ. ಇವಳು ಹಿಡಿಂಬಾ ರಾಕ್ಷಸನ ತಂಗಿ. ಇವರು ವಾಸಿಸಿದ್ದರೆಂದು ಹೇಳಲಾಗುವ ಕುಂತಲನಗರ ಅಥವಾ ಕುಪ್ಪಟುರು ಎನ್ನುವ ರಾಜಧಾನಿ ಶಿವಮೊಗ್ಗದ ಉತ್ತರಕ್ಕುಂಟು.

ಚಿತ್ರದುರ್ಗ ಜಿಲ್ಲೆಯಲ್ಲಿ ‘ಅಸುರ’ ಎಂಬ ಸ್ಥಳದಿಂದ ಹರಿಹರ, ದಾವಣಗೆರೆ ನಿರ್ಮಾಣವಾಗಿದೆ ಎನ್ನುತ್ತಾರೆ. ಒಂದು ಮೂಲಕ ಕಥೆಯ ಪ್ರಕಾರ ದೈತ್ಯ ಎನ್ನುವ ಗುಹಸುರ, ದೇವರನ್ನು ಒಲಿಸಿಕೊಳ್ಳುವಲ್ಲಿ ಹರಿ ಮತ್ತು ಹರರ ಪಾತ್ರ ದೊಡ್ಡದು. ಜನಮೇಜಯನೆಂದು ಖ್ಯಾತನಾದ ಅರ್ಜುನನ ಮೊಮ್ಮಗ ಚಕ್ರಾಧಿಪತ್ಯ ಸ್ಥಾಪಿಸಿ ಕಿಷ್ಕಿಂಧೆಯನ್ನು ಆಳಿದವನೆಂದು ಹೇಳಲಾಗುತ್ತದೆ.

ರಾಮಾಯಣದ ಸಂಬಂಧವನ್ನು ಸಾರುವ ಜಂಟಿಂಗರಾಮೇಶ್ವರ, ಬ್ರಹ್ಮಗಿರಿ ಪ್ರದೇಶಗಳು ಈ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿವೆ. ‘ಜಟಾಯು’ ಎಂಬ ಪಕ್ಷಿ ಸೀತೆಯನ್ನು ಕದ್ದು ಒಯ್ಯುತ್ತಿದ್ದ ರಾವಣನನ್ನು ತಡೆದಾಗ ಅವನಿಂದ ಸಂಹಾರಕ್ಕೊಳಗಾಯಿತು. ಪುರಾಣದ ಕಾಲದಲ್ಲಿ, ಈ ಪ್ರದೇಶವನ್ನು ‘ಅಸುರರನಾಡು’ ಎನ್ನುತ್ತಿದ್ದರು. ಈಗ ಅಸುರರು, ರಾಕ್ಷಸರು, ದೈತ್ಯರು ಎಂದು ಸಾಂಪ್ರದಾಯಿಕವಾಗಿ ವ್ಯಾಖ್ಯಾನಿಸುತ್ತಾರೆ. ಬುಡಕಟ್ಟು ಜನರು ಹೆಚ್ಚಿಸುವುದರಿಂದ ಸಹಜವಾಗಿ ಬ್ರಾಹ್ಮಣ ಧರ್ಮವನ್ನು ಇವರು ವಿರೋಧಿಸಿದ್ದರು. ಇಂಥಾ ವೈರುಧ್ಯಗಳು ಚರಿತ್ರೆಯ ಎಲ್ಲಾ ಕಾಲಘಟ್ಟಗಳಲ್ಲೂ ಕಾಣಬರುತ್ತವೆ.

ಈ ಜಿಲ್ಲೆಯಲ್ಲಿ ಶಿಲಾಯುಗ, ಆದಿಶಿಲಾಯುಗ, ಮಧ್ಯಶಿಲಾಯುಗ ಮತ್ತು ನವಶಿಲಾಯುಗ, ಬೃಹತ್ ಶಿಲಾಸಂಸ್ಕೃತಿ ಮುಂತಾದ ನೆಲೆಗಳನ್ನು ಶೋಧನೆ ಮಾಡಿದ್ದಾರೆ. ಇಲ್ಲಿನ ನಾಗರಿಕತೆಯನ್ನು ಸಿಂಧೂ, ಕ್ರೇಟ್ ಮತ್ತು ಸುಮರ್‌ಗೆ ಹೋಲಿಸಿದ್ದಾರೆ. ಕ್ರಿ.ಪೂ. ೩ರಲ್ಲಿರುವಂತೆ ಸ್ಥಳೀಯರು ‘ರೊಪ್ಪ ಸಂಸ್ಕೃತಿ’ಯನ್ನು ಹೊಂದಿದ್ದರು. ಇವರ ಕಾಲಮಾನ ಕ್ರಿ.ಪೂ. ೮೦೦೦ ದಿಂದ ೬೦೦೦ ಎನ್ನಲಾಗಿದೆ.

ಐತಿಹಾಸಿಕವಾಗಿ ಇಲ್ಲಿ ಗಿರಿಕಂದರಗಳಿರುವುದರಿಂದ ಬೇಟೆಗಾರಿಕೆ ಸಮುದಾಯಗಳಿದ್ದವು. ಕ್ರಿ.ಪೂ. ೪ನೇ ಶತಮಾನದಲ್ಲಿ ನಂದರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಪುರಾಣಗಳ ಪ್ರಕಾರ ಕಲಿಂಗವನ್ನು ರಾಜಧಾನಿವಾಗಿ ಮಾಡಿಕೊಂಡು ಇಡೀ ಭಾರತವನ್ನು ಆಳುವುದರ ಬಗ್ಗೆ ಕಾಲವೇಲನ ಹಥಿಗುಂಪುಶಾಸನದಲ್ಲಿದೆ. ಕ್ರಿ.ಪೂ. ೭ನೇ ಶತಮಾನದಲ್ಲಿ ನಂದರು, ಕುಂತಲ ಪ್ರದೇಶವನ್ನು ಮೈಸೂರು ಪ್ರದೇಶದ ೨/೩ ಭಾಗವನ್ನು ಆಳುತ್ತಿದ್ದರು. ಉತ್ತರ ಭಾರತ, ಸಿಲೋನ್, ಕುಂತಲ ಪ್ರದೇಶಗಳನ್ನು ಆಳುದವರು ನಂದರು, ಕದಂಬ ರಾಜವಂಶಕ್ಕೆ ಸಂಬಂಧಿಸಿದವರು.

ಮೌರ್ಯರು ಇಲ್ಲಿ ಪ್ರಬಲವಾಗಿದ್ದುದರ ಬಗ್ಗೆ, ರಾಜ್ಯಾಳ್ವಿಕೆ, ಪ್ರಜಾಸೇವೆ ಇತ್ಯಾದಿ ವಿವರಗಳನ್ನು ಶಾಸನಗಳು ತಿಳಿಸುತ್ತವೆ. ಸಾಂಪ್ರದಾಯಿಕವಾಗಿ ನಂದ ಸಾಮ್ರಾಜ್ಯ ಅಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯದೆದುರು ನಿತ್ರಾಣರಾಗಿದ್ದ ಪರಿಸ್ಥಿತಿ ಉಂಟಾಗುತ್ತದೆ. ಟಿಬೆಟ್‌ನ ಇತಿಹಾಸಕಾರ ತಾರನಾಥನು ಅಶೋಕನ ತಂದೆ ಬಿಂದುಸಾರನ ಅವಧಿಯಲ್ಲಿ ಇಲ್ಲಿಗೆ ಬಂದಿದ್ದನಂತೆ.

ಅಶೋಕನ ಶಾಸನಗಳನ್ನು ೧೮೯೨ರಲ್ಲಿ ಬಿ.ಎಲ್. ರೈಸ್ ಅವರು ಆಗಿನ ಮೈಸೂರು ಪ್ರಾಂತ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಮೂರು ಶಾಸನಗಳನ್ನು ಶೋಧಿಸಿದ್ದಾರೆ. ಸಿಲೋನಿನ ಮಹಾವಂಶದ ಪ್ರಕಾರ ಅಶೋಕ ಚಕ್ರವರ್ತಿ ಮೈಸೂರು ಪ್ರದೇಶದೊಂದಿಗೆ ಸಂಬಂಧಹೊಂದಿದ್ದ ಎನ್ನುತ್ತವೆ. ಅಶೋಕನ ಶಿಲಾಶಾಸನ ಚಿನ್ನಹಗರಿ ನದಿ ದಂಡೆಯ ಮೇಲಿರುವ ಸಿದ್ದಾಪುರದ ಬಳಿಯಿದೆ. ಇದರ ಸಾರ ಸಂಗತಿಯೆಂದರೆ: ದೇವನಾಮ್‌ಪ್ರಿಯರು ರಾಜನಿಗೆ (ಆಯಪುತ), ಅಧಿಕಾರಿಗಳಿಗೆ (ಮಹಾಮಾತ್ರರು) ಸುವರ್ಣಗಿರಿ ಮುಖ್ಯ ಕೇಂದ್ರದಿಂದ ಹೇಳಿದ ವಿಚಾರಗಳಿವೆ. ರಾಜನೀತಿಯಲ್ಲಿ, ಅಹಿಂಸೆಯನ್ನು ಅಳವಡಿಸಿದ ಸಂಗತಿ ಅಶೋಕನ ಕೀರ್ತಿಗೆ ಸಾಕ್ಷಿ.

ಮೌರ್ಯರ ನಂತರ ಕದಂಬರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಾರೆ. ಚಂದ್ರವಳ್ಳಿಕೆರೆ, ಶಾಸನ, ದೇವಾಲಯಗಳು ಇವರ ಕಾಲದ ಹೆಗ್ಗುರುತುಗಳು. ಗಂಗರು, ಚಾಲುಕ್ಯರು ಆಳಿದ ಬಗ್ಗೆ ತಿಳಿದುಬರುತ್ತದೆ. ತೈಲಪ, ವಿಕ್ರಮಾದಿತ್ಯ ಅರಸರ ಕಾಣಿಕೆಗಳು ಅಪಾರ. ಚೋಳರ ಆಳ್ವಿಕೆಯಲ್ಲಿ ಅನೇಕ ಯುದ್ಧಗಳು ಇಲ್ಲಿ ಸಂಭವಿಸಿವೆ. ನೊಳಂಬವಾಡಿಯನ್ನು ಜಗದೇಕ ಪಾಂಡ್ಯ ಮತ್ತು ವಿಜಯ ಪಾಂಡ್ಯ ಪಡೆಯಲು ಹವಣಿಸುತ್ತಿದ್ದರು. ಹೊಯ್ಸಳರ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಕಂಡಿದೆ ಈನಾಡು. ಪೆರುಮಾಳದೇವ ದಂಡನಾಯಕ ಇಲ್ಲಿನ ಆಡಳಿತ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರೆ ಈ ಜಿಲ್ಲೆಗೆ ಎರಡನೇ ಬಲ್ಲಾಳ ಸಾಕಷ್ಟು ಪ್ರೋತ್ಸಾಹಿಸಿದ್ದ. ತರುವಾಯ ವಿಜಯನಗರ ಕಾಲದಲ್ಲಿ ಇದು ಹೃದಯ ಭಾಗವಾಗಿತ್ತು. ದೇವರಾಯ ಚಿತ್ರದುರ್ಗದ ಕಲಾಪೋಷಣೆ, ಇತರೆ ಸುಧಾರಣೆಗಳನ್ನು ಮಾಡಿರುವುದು ಸ್ಮರಣೀಯ. ಬೇಟೆಗೆ ಬಂದ (ಗಜಬೇಟೆಗಾರ) ಪ್ರೌಢದೇವರಾಯ ಇಲ್ಲಿನ (ಮೊಳಕಾಲ್ಮೂರು) ಹಳ್ಳಿಗಳನ್ನು ಇನಾಂ ಕೊಡುತ್ತಾನೆ. ದೇವರ ಪೂಜೆಗೆ ಎಣ್ಣೆಯನ್ನು ಹಾಕಿಸುವುದನ್ನು ತಿಳಿಸುತ್ತದೆ ಇಲ್ಲಿನ (ಮಚ್ಚೆನಹಳ್ಳಿ) ಶಾಸನ.

ವಿಜಯನಗರದ ಅರಸರಿಂದ ನಿಯೋಜಿಸಲ್ಪಟ್ಟ ಸ್ಥಳೀಯ ಪಾಳೆಯಗಾರರು ಇಲ್ಲಿ ಭವ್ಯ ಆಡಳಿತ ನಡೆಸಿದ್ದಾರೆ. ಸುಮಾರು ಎರಡು ಶತಮಾನಗಳಿಗೂ ಹೆಚ್ಚು ಕಾಲ ಈ ಪಾಳೆಯಗಾರರು ಆಳ್ವಿಕೆ ನಡೆಸಿದ್ದು ಸ್ಪಷ್ಟ. ಅವರಲ್ಲಿ ಪ್ರಮುಖರೆಂದರೆ ತಿಮ್ಮಣ್ಣನಾಯಕ, ಚಿಕ್ಕಣ್ಣನಾಯಕ, ಭರಮಪ್ಪನಾಯಕ, ಕಸ್ತೂರಿ ರಂಗಪ್ಪನಾಯಕ, ಮದಕರಿನಾಯಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಂಡ ಚಿತ್ರದುರ್ಗಕ್ಕೆ ಮಹಾತಿರುವು ಬಂದಿದ್ದು ಪಾಳೆಯಗಾರರಿಂದಲೇ ಇವರ ಆಳ್ವಿಕೆ ಅವಧಿಯಲ್ಲಿ ಅನೇಕ ಸಮಾಜ ಸುಧಾರಣಾ ಕೆಲಸಗಳಾಗಿವೆ. ಇವರ ಸಮಕಾಲೀನರಾಗಿ ಹರತಿ, ಮುತ್ತೋಡು, ನಾಯಕನಹಟ್ಟಿ, ಮೊಳಕಾಲ್ಮೂರು, ರಾಯದುರ್ಗ ಮೊದಲಾದವು ಆಳ್ವಿಕೆ ನಡೆಸಿದ ಪಾಳೆಯಪಟ್ಟುಗಳು.

ಮೈಸೂರು ಅರಸ ೩ನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ೬ ಪೌಜುದಾರಿಗಳು ೧೦೧ ಉಪವಿಭಾಗದ ತಾಲೂಕುಗಳಿದ್ದವು. ಚಿತ್ರದುರ್ಗ ಜಿಲ್ಲೆಗೆ ೧೩ ತಾಲೂಕುಗಳು ಅಂದು ಸೇರಿದ್ದವು. ೧೮೩೪ರಲ್ಲಿ ೬ ಪೌಜುದಾರಿಗಳನ್ನು ೪ ವಿಭಾಗಗಳಾಗಿ ಮಾಡಲಾಯಿತು. ಬೆಂಗಳೂರು ನಗರ, ಚಿತ್ರದುರ್ಗ ಮತ್ತು ಅಷ್ಟಗ್ರಾಮ. ಮಧುಗಿರಿ ಚಿತ್ರದುರ್ಗಕ್ಕೆ ಮತ್ತು ಅಷ್ಟಗ್ರಾಮ ಮಂಜರಾಬಾದ್‌ಗೆ ಸೇರಿದ್ದವು. ಪೌಜು ದಾರಿ ಕೇಂದ್ರ ಸ್ಥಳ ತುಮಕೂರಾಗಿತ್ತು. ಪ್ರತಿಯೊಂದು ವಿಭಾಗದಲ್ಲಿ ಯುರೋಪಿಯನ್ ಸೂರಿನ್‌ಟೆಂಡೆಂಟ್ ನ್ಯಾಯಾಂಗದ ಅಧಿಕಾರ ಪಡೆಯುತ್ತಿದ್ದ.

೧೮೬೨ರಲ್ಲಿ ಬೌರಿಂಗ್ ಕಮಿಷನರ್ ಆಗಿದ್ದಾಗ ರಾಜ್ಯವನ್ನು ೮ ಜಿಲ್ಲೆಗಳಾಗಿ ವಿಭಾಗಿಸುತ್ತಾನೆ. ಅದರಲ್ಲಿ ಚಿತ್ರದುರ್ಗವೂ ಒಂದಾಗಿತ್ತು. ೮ ಜಿಲ್ಲೆಗಳು ಸೇರಿ ೩ ವಿಭಾಗಗಳನ್ನು ಮಾಡಿದ್ದರು. ಎಲ್ಲಾ ವಿಂಗಡಣೆಗಳು ಜಿಲ್ಲಾ ಸೂಪರಿಟೆನ್‌ಡೆಂಟ್ ಅಧೀನದಲ್ಲಿರುತ್ತಿದ್ದವು. ೧೮೭೯ರಲ್ಲಿ ಕಮಿಷನ್ ಪುನರ್ ಜಾಗೃತಿಗೊಂಡಿತು. ರಾಜ್ಯದ ಅಧಿಕಾರವನ್ನು ಚೀಫ್ ಕಮೀಷನರ್ಸ್ ಮತ್ತು ಅಮಿಲ್ದಾರರಿಗೆ ಹಂಚಿದ್ದರು.

೧೮೬೩ರಲ್ಲಿ ಚಿತ್ರದುರ್ಗ ವಿಭಾಗ ರದ್ದಾಯಿತು. ಇದು ನಗರ ವಿಭಾಗಕ್ಕೆ ಮತ್ತು ತುಮಕೂರು ಜಿಲ್ಲೆ ಹೊಸದಾಗಿ ಆದ ನಂದಿದುರ್ಗ ವಿಭಾಗಕ್ಕೆ ಸೇರಿದವು. ಸಿರಾ ತಾಲೂಕು ೧೮೬೬ರವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿತ್ತು. ಅನಂತರ ಅದು ತುಮಕೂರು ಜಿಲ್ಲೆಗೆ ವರ್ಗವಾಯಿತು. ೧೮೮೬ರಲ್ಲಿ ಚಿತ್ರದುರ್ಗ ಜಿಲ್ಲೆ ಪುನರ್ ವಿಂಗಡಣೆ ಮಾಡುವಾಗ ಪಾವಗಡ ತಾಲೂಕು ತುಮಕೂರು ಜಿಲ್ಲೆಗೆ ಸೇರಿತು. ಸ್ವತಂತ್ರ ಜಿಲ್ಲೆಯಾಗಿ ರೂಪು ಪಡೆದ ನಂತರ ಸ್ವಾತಂತ್ರ್ಯ ಹೋರಾಟ, ಏಕೀಕರಣದ ಸಂದರ್ಭದಲ್ಲಿ ಮಹತ್ತರ ಬದಲಾವಣೆ ಕಂಡಿದೆ ಚಿತ್ರದುರ್ಗ ಜಿಲ್ಲೆ.

೧೯೪೭ರಲ್ಲಿ ಸ್ವಾತಂತ್ರ್ಯ ಪಡೆದಾಗ ಚಿತ್ರದುರ್ಗ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದೆ ಉಳಿದಿತ್ತು. ಪಂಚವಾರ್ಷಿಕ ಯೋಜನೆಗಳ ಮೂಲಕ ಗ್ರಾಮೀಣ ಅಭಿವೃದ್ಧಿ ಮಾಡುವುದರ ಮೂಲಕ ಪರಿವರ್ತನೆ ಕಂಡು ಬಂದಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಚಿತ್ರದುರ್ಗ ಮುನ್ನಡೆ ಸಾಧಿಸಿದ್ದುದು ನಿಜ. ಎಸ್.ನಿಜಲಿಂಗಪ್ಪ ದೊಡ್ಡ ಸಿದ್ದವ್ವನಹಳ್ಳಿ ಈ ಜಿಲ್ಲೆಯ ಪ್ರತಿನಿಧಿಯಾಗಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದರು. ಈ ಸಂದರ್ಭದ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ಬಂತೆ ಹೊರತು ಪ್ರಗತಿಪರ ಕೆಲಸಗಳಾಗಲಿಲ್ಲ. ಈ ಕೊರತೆಯನ್ನು ನೀಗಿಸಲು ಅನೇಕ ನಾಯಕರು ಮುಂದಾದರು. ದಿ.ಎ.ಭೀಮಪ್ಪ ನಾಯಕ ಅವರು ಈ ಜಿಲ್ಲೆಯಲ್ಲಿ ಪರಿವರ್ತನ ಕೆಲಸ ಕಾರ್ಯಗಳನ್ನು ಮಾಡಿ ತೋರಿಸಿದರು. ಇವರ ಸಾಧನೆಯ ಪ್ರತೀಕ ಅನೇಕ ಶಿಕ್ಷಣ ಸಂಸ್ಥೆ, ಕಚೇರಿಗಳು ನಿರ್ಮಾಣವಾದವು. ಇವರ ಸಮಕಾಲೀನರಾದ ಹೊ.ಚಿ.ಬೋರಯ್ಯನವರು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತಂದು ಜನಾನುರಾಗಿಯಾಗಿದ್ದರು. ಈ ಇಬ್ಬರು ಮಾಜಿ ಸಚಿವರುಗಳೇ ಆಗಿದ್ದವರು. ದಿ.ವೀರೇಂದ್ರಪಾಟೀಲ್, ದಿ.ದೇವರಾಜಅರಸು, ದಿ.ನಿಜಲಿಂಗಪ್ಪನವರ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆ ಪ್ರಗತಿ ಹಂತಕ್ಕೆ ಮುಂದಾಯಿತು. ಹಿರಿಯೂರಿನ ಮಾರಿಕಣಿವೆ ಜಲಾಶಯದ ನೀರಿನ ಸದುಪಯೋಗ ಮತ್ತು ಮೊಳಕಾಲ್ಮೂರು ತಾಲೂಕಿನಲ್ಲಿ ಹೊಸದಾಗಿ ನಿರ್ಮಾಣ ಕಾರ್ಯ ಕೈಗೊಂಡ ರಂಗಯ್ಯನದುರ್ಗ ಜಲಾಶಯವನ್ನು ಪೂರ್ಣಗೊಳಿಸಲು ಇಂದಿನವರೆಗೂ ಕಾಯಬೇಕಾಯಿತು. ಹತ್ತಿ ಗಿರಣಿ, ಕೃಷಿ ಮಾರುಕಟ್ಟೆ, ಎಣ್ಣೆ ಮಿಲ್, ಮೊದಲಾದವು ಈ ಜಿಲ್ಲೆಯ ಆರ್ಥಿಕ ವಹಿವಾಟಿಗೆ ಕಾರಣವಾಗಿವೆ.

ಕಳೆದೆರಡು ದಶಕಗಳಿಂದ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗಳ ಮೂಲಕ ಅಧಿಕಾರ ವಿಕೇಂದ್ರೀಕರಣವನ್ನು ಮಾಡಲಾಯಿತು. ಹೋಬಳಿ, ತಾಲೂಕು ಘಟಕಗಳು ಅಧಿಕಾರ ಮತ್ತು ಜನತೆಯ ಆಶೋತ್ತರ ಕೇಂದ್ರಗಳಾದವು. ಪ್ರಾಚೀನ ಪರಂಪರೆಯೊಂದಿಗೆ ರಾಜಪ್ರಭುತ್ವ ಮೆರುಗು ದೊರೆತ ಇಂಥ ಸ್ಥಳಗಳು ಪ್ರಸಿದ್ಧಿ ಪಡೆಯುವುದರಲ್ಲಿ ಯಾವ ಅಡ್ಡಿ ಆತಂತಕಗಳಿರಲಿಲ್ಲ. ನಾಯಕನಹಟ್ಟಿ, ಬಿ.ಜಿ.ಕೆರೆ, ರಾಂಪುರ, ಪರಶುರಾಂಪುರ, ನೇರ‍್ಲಗುಂಟೆ, ಸಿರಿಗೆರೆ, ಕಲ್ಲೇದೇವರಪುರ, ಯರಬಳ್ಳಿ, ಐಮಂಗಲ ಮೊದಲಾದ ಸ್ಥಳಗಳು ಗ್ರಾಮಪಂಚಾಯ್ತಿ ಘಟಕಗಳಾಗಿ, ಹೋಬಳಿ ಕೇಂದ್ರಗಳಾಗಿ ಮಹತ್ವ ಪಡೆದಿವೆ.

ವಿಶೇಷವೆಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬುಡಕಟ್ಟು ಜನರು ಇನ್ನೂ ಗ್ರಾಮಗಳಿಗೆ ಬಾರದೆ ಹಟ್ಟಿ, ಕಪಿಲೆ, ತೋಟ, ಅಡವಿಗಳಲ್ಲಿ ಜೀವಿಸುತ್ತಿರುವುದು. ಪ್ರತಿಯೊಂದು ಹಟ್ಟಿಯಲ್ಲಿಯು ಚರಿತ್ರೆ ಮತ್ತು ಸಂಸ್ಕೃತಿ ನಿರ್ಮಾಣಗೊಂಡಿರುತ್ತದೆ. ಬಹುತೇಕ ಬುಡಕಟ್ಟು ಜನರು ಕೆರೆ, ಬಾವಿ ನೀರನ್ನು ಅಡವಿಯ ಸೌದೆಯನ್ನು ಅವಲಂಬಿಸಿರುವರು. ಹೆಚ್ಚಾಗಿ ಒಣಬೇಸಾಯ ಮಾಡುವ ಇವರು, ನೀರಾವರಿ ಕೃಷಿಯಲ್ಲಿಯೂ ಹೆಚ್ಚಿನ ಉತ್ಪಾದನೆ ಇತ್ತೀಚಿಗೆ ಕಂಡಿದ್ದಾರೆ. ಜನಸಾಮಾನ್ಯರ ಚರಿತ್ರೆಯೇ ಇಲ್ಲಿ ಪ್ರಧಾನವಾದುದು. ಹಿಂದೆ ಆಳಿದ ಪಾಳೆಯಗಾರರನ್ನು ಸ್ಮರಿಸುತ್ತಾ ಅವರ ಧೈರ್ಯ, ಪರಾಕ್ರಮಗಳನ್ನು ಕೊಂಡಾಡುವುದು ತಮ್ಮ ವಂಶಜರಿಗೆ ಈ ಹೆಸರುಗಳನ್ನು ಇಡುವುದು ರೂಢಿಯಲ್ಲಿದೆ.

ಒಟ್ಟಾರೆ ಚಾರಿತ್ರಿಕವಾಗಿ ಚಿತ್ರದುರ್ಗ ಜಿಲ್ಲೆ ವಿವಿಧ ಹಂತಗಳಲ್ಲಿ ಬೆಳೆದು ಬಂದಿರುವುದನ್ನು ಗುರುತಿಸಬಹುದು. ಇದಕ್ಕೊಂದು ತಿರುವು ಸಿಕ್ಕಿದ್ದು ಚಿತ್ರದುರ್ಗದ ಪಾಳೆಯಗಾರರಿಂದ, ಪಾಳೆಯಗಾರರ ಬಗೆಗೆ ಲಭ್ಯವಿರುವ ಜನಪದ ಸಾಹಿತ್ಯವನ್ನು ಅವಲೋಕಿಸಿದರೆ ಗತಕಾಲದ ವೈಭವವನ್ನು ತಿಳಿಯಬಹುದಾಗಿದೆ. ಏಕೀಕೃತ ಆಡಳಿತ ನಡೆಸಿದ ಪಾಳೆಯಗಾರರು ತಮ್ಮ ಅವಧಿಯಲ್ಲಿ ಇತರರಿಗೆ ಪ್ರೋತ್ಸಾಹ ಕೊಟ್ಟಿದ್ದರು. ಆದರೂ ಸ್ಥಳೀಯರ ಹೊಂದಾಣಿಕೆಗೆ ವಿರೋಧಿ ಅರಸರ ಪ್ರತಿರೋಧ ಎದುರಾದದ್ದು ದುರದೃಷ್ಟಕರ. ಹೈದರ್, ಟಿಪ್ಪುವಿನ ನಂತರ ಇಲ್ಲಿನ ಅರಸರು ಸಣ್ಣ ಪುಟ್ಟ ಹುದ್ದೆಗಳಲ್ಲಿದ್ದ ಪ್ರತಿನಿಧಿಗಳಿಗೆ ಸ್ವಾತಂತ್ರ್ಯ ನಿರ್ವಹಣೆಯನ್ನು ಕೊಟ್ಟಂತಾಯಿತು. ಈ ಒಂದು ಮನೆತನಗಳು ಇಂದು ನಾನಾ ಬಗೆಯಲ್ಲಿ ಬಎಳವಣಿಗೆಯಾಗಿವೆ. ಕಲಾಸ್ಮಾರಕಗಳು, ಯಾತ್ರಾಸ್ಥಳಗಳು, ಐತಿಹಾಸಿಕ ನೆಲೆಗಳು, ಬುಡಕಟ್ಟು ಕೇಂದ್ರಗಳು ಇಲ್ಲಿ ಕಂಡು ಬರುತ್ತವೆ. ಇವುಗಳ ಬಗೆಗೆ ಜನಪದರ ಇತಿಹಾಸವು ಚಾಲ್ತಿಯಲ್ಲಿದೆ.

* * *


* ‘ರಾಷ್ಟ್ರ’ (National) ಎಂಬ ಪದವನ್ನು ೧೮೮೫ ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪಿಸುವಾಗ ಬ್ರಿಟಿಷರು ಬಳಸಿದ್ದರು.

೨ ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು