ಮ್ಯಾಸಬೇಡ (ನಾಯಕ) ಎನ್ನುವ ಬುಡಕಟ್ಟು ಚಿತ್ರದುರ್ಗ ಜಿಲ್ಲೆಯ ಪ್ರಾಚೀನ ಪರಂಪರೆ ಪಡೆದ ಜನಸಮುದಾಯವಾಗಿದೆ. ‘ಮ್ಯಾಸ’ ಎಂದರೆ ಮೇಯಿಸುವವರು. ವ್ಯಾಸ ಮಹಾಕವಿಯಿಂದ ಮ್ಯಾಸ ಪದ ನಿಷ್ಪತ್ತಿಯಾಗಿದೆ ಎನ್ನಲಾಗಿತ್ತು. ಇದಕ್ಕೆ ಮೇಷ ಎಂದರೆ ಕುರಿ. ಬೇಡರು ವೇಷಗಾರರಾಗಿದ್ದು, ಕ್ರಮೇಣ ಮ್ಯಾಸರೆಂದು ಆಗಿದ್ದಾರೆ ಎಂಬು ಅಭಿಪ್ರಾಯಗಳಿವೆ. ವಾಸ್ತವವಾಗಿ ‘ಮ್ಯಾಸಬ್ಯಾಡ್ಕಿ ನಾಯಕತನ’ ಎಂಬುದು ಗೌರವಾನ್ವಿತ ಹುದ್ದೆ. ಯಜಮಾನಿಕೆ, ಜನಾಂಗದ ಮುಖಂಡ ಅಥವಾ ಗುರಿಕಾರನಿಗೆ ಈ ಪದವಿ ಲಭಿಸುತ್ತಿತ್ತು. ಮ್ಯಾಸ ಎಂದರೆ ಶ್ರೇಷ್ಠ, ಎಂಜಲಾಗದ ಪದಾರ್ಥವನ್ನು ದೇವರಿಗೆ ನೈವೇದ್ಯ ಮಾಡುವವರು, ಸೈನ್ಯಕ್ಕೆ ಕಾಯ್ದಿಟ್ಟವರು ಎಂದೆಲ್ಲ ಕರೆಯಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಕಾಡಿನಲ್ಲಿ ವಾಸಿಸುತ್ತಾ, ತೆಲುಗು ಭಾಷೆ ಮಾತನಾಡುವುದು, ಚಲ್ಲಾಣ, ರುಮಾಲು ತೊಟ್ಟು ಕಂಬಳಿ ಹೊದ್ದು, ಕೈಯಲ್ಲಿ ಕೋಲು ಹಿಡಿದರೆ ಮ್ಯಾಸನಾಯಕನೆಂದು ನಿಖರವಾಗಿ ಹೇಳಬಹುದು. ಇನ್ನು ಸುಲಭವೆಂದರೆ ದೃಢಕಾಯ ದೇಹ, ಎತ್ತರವು ನೀಳವಾದ ಮೈಕಟ್ಟು, ವಕ್ರ ವಕ್ರ ವರ್ತನೆ (ಹಿಂದೆ), ಉದ್ದನೆ ಕೂದಲು, ಕೈಗೆ ಬಳೆ ಹೀಗೆ ನಾನಾ ಲಕ್ಷಣಗಳನ್ನು ಇವರು ಹೊಂದಿದ್ದರು. ಹೀಗೆ ಕಂಡವರನ್ನು ಮ್ಯಾಸಬೇಡರೆಂದು ಕರೆಯುವರು. ಅವರು ಹೆಮ್ಮೆ ಪಡುತ್ತಿದ್ದರು. ಇಂದು ಉದಾಸೀನ ಪಡೆದಂತೆ ಕಾಣಿಸುತ್ತದೆ. ಏಕವಚನದಲ್ಲಿ ವಾಚಿಸುವಂತಿಲ್ಲ. ಒಟ್ಟಾರೆ ಮ್ಯಾಸರು ಎಂಬುದು ಪಶುಪಾಲನೆಯಿಂದ ಬಂದ ಪದವಾದರೂ ರಾಜಕೀಯ ಮಹತ್ವ ಸಿಕ್ಕಿದ್ದು ವಿಜಯನಗರ ಕಾಲದಲ್ಲಿ. ಇಲ್ಲಿ ವಾಲ್ಮೀಕಿ, ಬೇಡ, ನಾಯಕ ಎಂಬ ಪರ್ಯಾಯ ಹೆಸರುಗಳಿಂದ ಕರೆಯುವ ಇವರಿಗೆ ಭವ್ಯ ಇತಿಹಾಸ ಇರುವುದನ್ನು ಗಮನಿಸಬಹುದು.

ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ವಾಲ್ಮೀಕಿ, ಶಬರಿ, ಏಕಲವ್ಯ, ಬೇಡರಕಣ್ಣಪ್ಪ, ಕುಮಾರರಾಮ, ಮದಕರಿನಾಯಕ ಮತ್ತು ಎಚ್ಚಮನಾಯಕ ಮೊದಲಾದ ಚಾರಿತ್ರಿಕ ಪೌರಾಣಿಕ ವ್ಯಕ್ತಿಗಳನ್ನು ಹೆಮ್ಮೆಯಿಂದ ಆರಾಧಿಸುವರು. ಇವರಲ್ಲಿ ಕುಮಾರರಾಮನಷ್ಟು ದೈವತ್ವಕ್ಕೇರಿದ ವ್ಯಕ್ತಿ ಇನ್ನೊಬ್ಬನಿಲ್ಲ. ಮಧ್ಯಕಾಲೀನ ಸಂದರ್ಭದಲ್ಲಿ ಈ ಬುಡಕಟ್ಟು ವೀರರ ಪೈಕಿ ಹಲವರನ್ನು ಹೆಸರಿಸಬಹುದು. ಅವರುಗಳೆಂದರೆ ಶುಕ್ಲಮಲ್ಲಿನಾಯಕ, ಗಾದರಿಪಾಲನಾಯಕ, ಜಗಳೂರು ಪಾಪನಾಯಕ, ಕೊಡಗಲು ಬೊಮ್ಮಯ್ಯ, ಯರಮಂಚಿನಾಯಕ, ಯರಗಾಟನಾಯಕ, ಗಾಜನಾಯಕ, ದಡ್ಡಿಸೂರನಾಯಕ ಮತ್ತು ನಲುಜೆರುವಯ್ಯನನ್ನು ಹೆಸರಿಸಬಹುದು. ಇಂಥ ವೀರರನ್ನು ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಬೇಡರು ಆರಾಧಿಸುವುದು ಕಂಡುಬರುತ್ತದೆ.

ವನವಾಸ ಮಾಡಿದ ಪೌರಾಣಿಕ ವ್ಯಕ್ತಿಗಳು: ಸೀತೆ, ಶ್ರೀರಾಮ, ಲಕ್ಷ್ಮಣ; ಪಾಂಡವರು ಮತ್ತು ಹರಿಶ್ಚಂದ್ರ ಚಂದ್ರಮತಿಯರಾದರೆ ಕಾಡು ಬೇಡರಿಗೆ ಮಾತ್ರ ಅನೂಚಾನವಾಗಿ ಆ ವಾಸಸ್ಥಾನವಾಗಿತ್ತು. ಅರಣ್ಯದ ಬಗೆಗಿನ ಬೇಡರ ನಂಬಿಕೆ, ನಡವಳಿಕೆ, ಭಾಷೆ, ಜೀವನಕ್ರಮ, ದೇವರ ಕಲ್ಪನೆ, ಆಚರಣೆಗಳು, ವಿಧಿಕ್ರಿಯೆಗಳು, ಅಲೆದಾಟ, ಬೇಟೆ, ಪಶುಪಾಲನೆ ಇವು ಇವರ ಸಂಸ್ಕೃತಿಯ ಪ್ರಮುಖ ಸಂಗತಿಗಳಾಗಿವೆ. ಇವರು ಕುಲದೇವರೆಂದು ಸೂರ್ಯ ಮತ್ತು ಚಂದ್ರನನ್ನು ಪೂಜಿಸುವರು. ಕುಲದೈವವೆಂದು ಭಾವಿಸಿರುವ ಪಕ್ಷಿ – ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಅವುಗಳನ್ನು ಬಲಿಕೊಡುವುದಿಲ್ಲ. ಇವುಗಳನ್ನು ಹೊರತು ಪಡಿಸಿದರೆ ಬೇಟೆ ಮತ್ತು ಬಲಿಗೆ ಬಳಸಲಾಗುತ್ತದೆ.

ಇಂದು ಗುಗ್ಗರಿಹಬ್ಬ, ಎತ್ತಿನಹಬ್ಬ, ದೀಪಾವಳಿ, ಶಿವರಾತ್ರಿ ಹಬ್ಬಗಳಲ್ಲಿ ವೈಶಿಷ್ಟ್ಯಪೂರ್ಣ ಜೀವನ ನಡೆಸುವ ಈ ಬೇಡರು ಈಚಲುಮರದ ಸಾಮಗ್ರಿಗಳು ಮತ್ತು ಉತ್ಪನ್ನಗಳನ್ನು ಉಪಯೋಗಿಸುವುದಿಲ್ಲ. ಹಾಗೂ ಈ ಮರದ ಕೆಳಗೆ ಕುಳಿತುಕೊಳ್ಳುವುದಿಲ್ಲ. ಕೋಳಿಯನ್ನು ಸಾಕುವುದು ಮತ್ತು ತಿನ್ನುವುದು ನಿಷೇಧ. ಊರುನಾಯಕರೊಡನೆ ಮದುವೆ ಮಾಡಿಕೊಂಡರೆ ತಮ್ಮ ಜಾತಿಯಿಂದ ಆತನನ್ನು ಬಹಿಷ್ಕರಿಸುತ್ತಿದ್ದರು. ಹೀಗೆ ಕಟ್ಟುನಿಟ್ಟಿನ ಸಂಪ್ರದಾಯಗಳು ಇಂದು ಸಡಿಲಗೊಂಡಿವೆ. ತಿರುಪತಿ ತಿಮ್ಮಪ್ಪ ಮತ್ತುಅಹೋಬಲ ನರಸಿಂಹದೇವರ ಭಕ್ತರ ವೈಷ್ಣವಪಂಥ ಹಾಗೂ ಶ್ರೀಶೈಲ ಮಲ್ಲಿಕಾರ್ಜುನನ ಅನುಯಾಯಿಗಳು ಶೈಪಂಥಗಳು ಇವರಲ್ಲಿವೆ. ಮಕ್ಕಳಿಗೆ ಶೈವ – ವೈಷ್ಣವ ಹೆಸರುಗಳಿಡುತ್ತಾರೆ. ವೀರನಾದವನು ಸಾಹಸ ತೋರಿ ಮಡಿದಾಗ ಸತಿಸಹಗಮನ ಆಚರಿಸುವುದು ಇವರಲ್ಲೂ ಸಾಮಾನ್ಯವಾಗಿತ್ತು. ಈ ಬಗ್ಗೆ ವೀರಗಲ್ಲು, ಮಾಸ್ತಿಕಲ್ಲುಗಳು ಬೆಳಕು ಚೆಲ್ಲುತ್ತವೆ. ಅವನನ್ನು ತಮ್ಮ ವಂಶದ ಪೂರ್ವಿಕ ತಾತ, ತಂದೆಯೆಂತಲೂ ‘ಹಿರಿಯರಗುಡಿ’ ಎಂದು ಕರೆದು ಪೂಜಿಸುವರು. ಉದಾ: ಮೊಳಕಾಲ್ಮೂರು ತಾಲೂಕಿನ ಕಪ್ಪಡಬಂಡ್ಡಹಟ್ಟಿ (ನೇತ್ರನಹಳ್ಳಿ) ಯ ಪೆದ್ದಯ್ಯನ ವೀರಗಲ್ಲು. ಆದರೆ ಮ್ಯಾಸಬೇಡರ ಮೂಲ, ಬುಡಕಟ್ಟು ವೀರರ ಕಾಲಮಾನ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ ಲಭ್ಯವಿರುವ ಮೌಖಿಕ ಆಧಾರಗಳ ಪ್ರಕಾರ ಈ ಮುಂದಿನಂತೆ ಅವಲೋಕಿಸಬಹುದು.

ಬೇಟೆ, ಪಶುಪಾಲನೆಯನ್ನು ನಂಬಿ ಬದುಕುವ ಬೇಡರು ಆದಿಯಲ್ಲಿ ಉತ್ತರಭಾರತದಿಂದ (ಕಿರಾತ ದೇಶ) ಬಂದವರೆಂದು ಹೇಳುತ್ತಾರೆ. ಹಿಮಾಲಯ ಪರ್ವತ, ಗಂಗಾನದಿ ಬಯಲಿನಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಿದ್ದರು. ರಾಮಾಯಣದ ಸಂದರ್ಭದ ಐತಿಹಾಸಿಕ ಸ್ಥಳಗಳಲ್ಲಿ ಬೇಡರ ವಾಸವನ್ನು ತಳ್ಳಿಹಾಕುವಂತಿಲ್ಲ. ವಿಂಧ್ಯಾಪರ್ವತ, ನರ್ಮದಾ, ತಪತಿ, ಗೋದಾವರಿ, ಕೃಷ್ಣ ಇತರ ನದಿ ಪರಿಸರ, ಗಿರಿಕಂದರಗಳಲ್ಲಿ ವಾಸಿಸುತ್ತಿದ್ದರು. ಬಹುಶಃ ಇದಕ್ಕಾಗಿಯೇ ಬೇಡರು ಯಾರಿಗೆ ಹೆದರದವರೆಂದು ಏಕಾಂಗಿ ಜೀವನಕ್ಕೆ ಹೆಸರಾದವರೆಂದು ಕರೆಯಲಾಗಿದೆ. ಉದಾ: ಕಾಮಕೇತನ ವಂಶಸ್ಥರು ಮತ್ತು ಏಕಲವ್ಯನ ವಂಶಸ್ಥರು ಒಂದೇ. ಚಿತ್ರದುರ್ಗ ನಾಯಕರು ಈ ವಂಶಕ್ಕೆ ಸೇರಿದವರು. ದೆಹಲಿಯಿಂದ ಬಂದವರೆಂದು ಇವರ ಮೂಲವನ್ನು ಹೇಳಲಾಗುತ್ತದೆ.

ಪ್ರಾಚೀನ ಕಾಲದ ಬೇಡರ ಸ್ವರೂಪವೇ ಬೇರೆ ಬಗೆಯದು. ದೃಢಕಾಯ – ದೀರ್ಘ ದೇಹ, ಕೃಷ್ಣವರ್ಣವಿದ್ದು, ಬರಿಗಾಲಲ್ಲಿ, ಸಂಚರಿಸುತ್ತಿದ್ದರು. ಮೃಗಪಕ್ಷಿಗಳನ್ನು ಬೇಟೆಯಾಡಿ ಭಕ್ಷಿಸುತ್ತಿದ್ದರು. ಉಡಿಗೆ – ತೊಡಿಗೆಗಳಾಗಿ ಪ್ರಾಣಿಗಳ ಚರ್ಮ ಪಕ್ಷಿಗಳ ತುಪ್ಪಳ – ಗರಿ, ಮರದ ತೊಗಟೆ, ತಪ್ಪಲು, ಎಲೆ ಬಳಸುತ್ತಿದ್ದರು. ಇಂದಿಗೂ ಈ ಪದ್ಧತಿಯನ್ನು ಮೊಳಕಾಲ್ಮೂರು ತಾಲೂಕಿನ ಕಂಪಳದೇವರಹಟ್ಟಿ ಜಾತ್ರೆಯಲ್ಲಿ ನೋಡಬಹುದು. ಬೇಡರು ಬೇಟೆಗಾರರಾಗಿ, ಪಶುಪಾಲಕರಾಗಿ, ಪಾಳೆಯಗಾರರಾಗಿ ಆಳ್ವಿಕೆ ನಡೆಸಿದ್ದಾರೆ. ಇವರ ವೃತ್ತಿ, ವರ್ಣ, ಜಾತಿ, ವರ್ಗಗಳ ದೃಷ್ಟಿಯಿಂದ ಸಂಚಿಮ್ಯಾಸ, ವ್ಯಾಧ, ಪುಳಿಂದ, ಬಿಲ್ಲ ಏಕಲವ್ಯ (ಬೆಸ್ತ, ಅಂಬಿಗ, ಭಲ್ಲೂಕ) ಶಬರ, ನಿಷಾಧರುಗಳೆಂದು ವಿಂಗಡಿಸಲಾಗಿದೆ. ಇಂದು ಕರ್ನಾಟಕದಲ್ಲಿ ೧೭ ಪಯಾರ್ಯ ಜಾತಿಗಳು ನಾಯಕ ಅಥವಾ ಬೇಡ ಜನಾಂಗದಲ್ಲಿವೆ.

ಸೂರ್ಯ, ಚಂದ್ರ ಮತ್ತು ಭೂಮಿಯನ್ನು ದೇವರುಗಳೆಂದು ಪೂಜಿಸುವ ಬೇಡರಿಗೆ ಕಾಡು ಆರಾಧನೆಯ ನೆಲೆಯಲ್ಲಿದೆ, ವಾಸದ ಬೀಡಾಗಿತ್ತು. ಆರಾಧನೆಯಲ್ಲಿ ಸೂರ್ಯನಿಗೆ ಕೈಮುಗಿಯುವುದು ಬಹುಪ್ರಾಮುಖ್ಯವಾದುದು. ರಾಜನನ್ನು ಪ್ರತ್ಯೇಕ ದೈವವೆಂದು ಗೌರವಿಸುವುದು ಆತನು ರಾಜ್ಯಭಾರ ನಡೆಸುವ ದಿನಗಳಲ್ಲಿ ಮಾತ್ರ. ರಾಜ ಎಷ್ಟೇ ವೀರನೆನಿಸಿದರೂ ಮಡಿದನಂತರ ಅವನನ್ನು ಮರೆಯುತ್ತಾರೆಯೇ ಹೊರತು ದೇವರಿಗೆ ಸಮಾನವಾಗಿ ಕಾಣುವುದಿಲ್ಲ, ಆರಾಧಿಸುವುದಿಲ್ಲ. ಹಾಗೆ ಕಾಣದೆ ಇರುವ ಸಂಬರ್ಭಗಳಿವೆ. ಆದರೆ ಒಬ್ಬ ಬುಡಕಟ್ಟು ವೀರ ಮರಣಿಸಿದ ನಂತರ ಆ ಜನಾಂಗದವರಿಗೆ ಆರಾಧ್ಯದೈವವಾಗುತ್ತಾನೆ. ಉದಾ: ಪಶುಪಾಲಕನಾದ ಗಾದರಿಪಾಲನಾಯಕನಿಗೆ ಆಧ್ಯಾತ್ಮ ಪುರುಷ ಸ್ಥಾನ ಕಲ್ಪಿಸಿ, ದೇವರಾಗಿ ಪರಿಗಣಿಸಿದ್ದಾರೆ. ಅದರಂತೆ ದತ್ತಿದಾನ ನೀಡಿದ ಕಸ್ತೂರಿರಂಗಪ್ಪನಾಯಕ, ‘ಗಾದ್ರಿಮಲೆಹೆಬ್ಬುಲಿ’ ಎಂದು ಬಿರುದಾಂಕಿತನಾದ ಮದಕರಿನಾಯಕ ನಿಗೆ ರಾಜನ ಮನ್ನಣೆ ಹೊರತು ಜನರಿಂದ ಭಕ್ತಿ ಮನ್ನಣೆ ಸಿಗಲಿಲ್ಲ. ಜನಮನ್ನಣೆಗಳು ಸಿಕ್ಕರೂ ಅವನಿಗೆ ಸಮೂಹದ ಹೃದಯಗಳಲ್ಲಿ ದೈವತ್ವದ ಮನ್ನಣೆ ಲಭಿಸಲಿಲ್ಲ. ರಾಜರ ಪ್ರಾಬಲ್ಯವನ್ನು ವೀರತ್ವದಿಂದ ಅಳೆಯುತ್ತಾರೆ. ಆದರೆ ಬುಡಕಟ್ಟು ವೀರನನ್ನು ಆಧ್ಯಾತ್ಮ ಪುರುಷನೆಂದೂ ಅನುಭಾವಿಯೆಂದೂ ಕರೆಯುತ್ತಾರೆ.

. ಪುರಾಣಗಳಲ್ಲಿ ವೀರ ಬೇಡರ ಪರಂಪರೆಯ ವಿಕಾಸ

‘ನಳ’ ಕೃತಯಗದಲ್ಲಿ ಬರುವ ಪ್ರಸಿದ್ಧ ಪೌರಾಣಿಕ ಚಕ್ರವರ್ತಿ. ಇವನು ನಿಷದ ದೇಶದ ರಾಜನಾಗಿರುವಾಗ, ಬೇಡರಲ್ಲಿ ಎರಡು ಪಂಗಡಗಳಿದ್ದವಂತೆ. ಒಂದು ಪಂಗಡ ಬೇಟೆಯಲ್ಲಿ ನಿರತವಾಗಿದ್ದರೆ, ಮತ್ತೊಂದು ರಾಜ್ಯಾಳ್ವಿಕೆಯಲ್ಲಿತ್ತು ಎನ್ನಲಾಗಿದೆ. ನಿಷದದ ರಾಜನಾದ ನಳನು ಬೇಡರ ಪಡೆಯೊಂದಿಗೆ ಬೇಟೆಗೆ ಹೊರಡುತ್ತಾನೆ. ತನ್ನ ಸತಿ ದಮಯಂತಿಯೊಂದಿಗೆ ಕಾಡಿಗೆ ಬಂದಾಗ ಪತ್ನಿಯನ್ನು ತೊರೆದು ಅಗಲುತ್ತಾನೆ. ಅನಾಥೆಯಾಗಿ ದಮಯಂತಿ ಕಾಡಿನಲ್ಲಿ ಸಂಚರಿಸುವಾಗಿ ಸರ್ಪವೊಂದು ಅವಳ ಕಾಲಿಗೆ ಬಂದುಸುತ್ತಿಕೊಂಡಾಗ ಕಿರಿಚುವುದು, ಅದನ್ನು ಕೇಳಿಸಿಕೊಂಡ ಬೇಟೆಗಾರ – ಬೇಡನೊಬ್ಬನು ಬಂದು ರಕ್ಷಿಸುವುದು ಇಂಥ ಅಂಶಗಳು ಅಂದಿನಿಂದಲೂ ಬೇಡರ ವೀರತ್ವದ ಸಂಕೇತಗಳಾಗುತ್ತವೆ.

ಇತರೆ ಎಲ್ಲಾ ಋಷಿ – ಮುನಿಗಳು ತಪಸ್ಸಿಗೆಂದು ನಾಡಿನಿಂದ ಕಾಡಿಗೆ ತೆರಳಿದರು. ಆದರೆ ವಾಲ್ಮೀಕಿ ಮೂಲತಃ ಕಾಡಿನಲ್ಲೇ ನೆಲೆಸಿ ಬೇಟೆಯಾಡುತ್ತಿದ್ದವನು. ತಪೋನಿರತನಾಗಿ ಜ್ಞಾನ ಸಂಪಾದಿಸಿ ನಾಡಿಗೆ ಪುರಾಣಗ್ರಂಥ ರಾಮಾಯಣ ಮಹಾಕಾವ್ಯವನ್ನು ಧಾರ್ಮಿಕ ಕೊಡುಗೆಯಾಗಿ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ರಾಮಾಯಣದ ಶ್ರೀರಾಮಚಂದ್ರನನ್ನು ದೋಣಿಯಲ್ಲಿ ಗಂಗಾನದಿಯನ್ನು ದಾಟಿಸಿದ ‘ಗುಹಾ’ನೆಂಬ ಒಬ್ಬ ಬೇಡರ ಮುಖಂಡ, ರಾಮನ ಆಪ್ತನಾಗಿದ್ದ. ಈತನಲ್ಲಿ ಬುಡಕಟ್ಟು ವೀರನ ಎಲ್ಲಾ ಲಕ್ಷಣಗಳನ್ನು ಕಾಣಬಹುದಾಗಿದೆ. ರಾಮಾಯಣ ಬರೆದ ವಾಲ್ಮೀಕಿ ಬೇಡರ ಕುಲದವನು. ಇವನ ಬದುಕಲ್ಲಿ ವೃತ್ತಿ – ಪ್ರವೃತ್ತಿ, ಅಜ್ಞಾನ – ಅರಿವು, ಕುರುಹುಗಳನ್ನು ದಾಟಿದ ಕ್ರಿಯಾತ್ಮಕತೆಯನ್ನು ಕಾಣುತ್ತೇವೆ. ಮೊದಲ ಹಂತದಲ್ಲಿ ಕಳ್ಳತನ, ದರೋಡೆ, ಸುಲಿಗೆ ಕಂಡುಬರುವುದು. ಎರಡನೇ ಹಂತದಲ್ಲಿ ಇವುಗಳ ಬಗ್ಗೆ ಅರಿವು ಮೇಳೈಸುತ್ತದೆ. ಮೂರನೇ ಹಂತದಲ್ಲಿ ಕ್ರೌಂಚಪಕ್ಷಿಯನ್ನು ಕೊಲ್ಲುವ ಬೇಡನ ಕೃತ್ಯದಿಂದ ಹಿಂಸೆಯ ಪರಿಕಲ್ಪನೆ ಹೊಂದು ಋಷಿಯಾಗುವ ಸನ್ನಿವೇಶ ಅಮೋಘವಾದದು. ಬೇಟೆಗಾರಿಕೆಯ ವೃತ್ತಿಯಲ್ಲಿ ತನ್ನಿಂದ ಘಟಿಸಿದ ಹಿಂಸೆಗೆ ಮುನಿದ ವಾಲ್ಮೀಕಿ ಮಹರ್ಷಿಯಾದ. ಮತ್ತೆ ಕಾಡಿನ ತನ್ನ ಆಶ್ರಮದಲ್ಲಿ ಪ್ರಾಣಿಪಕ್ಷಿಗಳ ಸಂರಕ್ಷಣೆಯನ್ನು ಮಾಡಿದ ಇದು ಬೇಡರ ಬದುಕಿನಲ್ಲಿ ವೃತ್ತಿ ಪ್ರವೃತ್ತಿಗಳಾಗಿ ಬೇಟೆಗಾರಿಕೆ – ಪಶುಪಾಲನೆಗಳು ರೂಪುಗೊಂಡಿದ್ದಕ್ಕೆ ನಿದರ್ಶನ. ಇವನು ಚಿತ್ರಿಸಿದ ಪಾತ್ರಗಳಲ್ಲಿ ‘ಶಬರಿ’ ಪ್ರಮುಖಳು. ಶ್ರೀರಾಮನ ಪರಮಭಕ್ತೆ. ತನ್ನ ಸಂಪೂರ್ಣ ಬದುಕನ್ನು ಅವನ ದರ್ಶನಕ್ಕಾಗಿ ಮೀಸಲಾಗಿಟ್ಟಿದ್ದಳು. ಕೊನೆಗೆ ರಾಮಬಂದಾಗ ಅವನಿಗೆ ಹಾಲ – ಹಂಪಲು (ಬೋರೆಹಣ್ಣು) ಗಳನ್ನು ಕೊಡುವುದು ಬೇಡರ ಆಹಾರ ಪದ್ಧತಿಯ ಹೊಂದಾಣಿಕೆಯನ್ನು ಸೂಚಿಸುತ್ತದೆ.

ಮೂರುಲೋಕದ ಗಂಡನೆಂದೂ ಸವ್ಯಸಾಚಿಯೆಂದೂ ಖ್ಯಾತನಾದ ಮಹಾಭಾರತದ ಅರ್ಜುನನಿಗೆ ಬಿಲ್ವಿದ್ಯೆಯಲ್ಲಿ ಸರಿಸಮ ಯಾರೂ ಇರಲಿಲ್ಲ. ಆದರೆ ಇವನನ್ನು ಮೀರಿಸುವಷ್ಟು ಬಿಲ್ವಿದ್ಯೆಯ ಸಾಮರ್ಥ್ಯ ಬೇಡನಾದ ಏಕಲವ್ಯನಿಗಿತ್ತು. ಅವನು ಪರೋಕ್ಷವಾಗಿ ತನ್ನ ಗುರುಗಳಾದ ಬೇಡ ಜನಾಂಗದ ಪ್ರಥಮ ದ್ರೋಹಿ (ಶೂದ್ರರಿಗೆ) ದ್ರೋಣಾಚಾರ್ಯರಿಗೆ ತನ್ನ ವಿದ್ಯಾ ಸಾಧನೆಯ ನೆಲೆಗೆ ಆಧಾರವಾದ ಹೆಬ್ಬೆರಳನ್ನೇ ಕಾಣಿಕೆಯಾಗಿ ನೀಡುತ್ತಾನೆ.

.. ಜಾನಪದ (ಮೌಖಿಕ) ಪರಂಪರೆಯ ಬೇಡರ ವೀರನಾಯಕರು

ಪ್ರಾಚೀನ ಕಾಲದಿಂದಲೂ ಬೇಡರು ಬೇಟೆ, ಪಶುಪಾಲನೆ, ಮೀನುಗಾರಿಕೆ, ದೋಣಿ ಸಾಗಾಣಿಕೆ ಕೆಲಸಗಳನ್ನು ಮಾಡಿದ್ದಾರೆ. ಮಧ್ಯಕಾಲದಲ್ಲಿ ಬಿಲ್ಲುಗಾರರಾಗಿ, ಬೇಟೆಗಾರರಾಗಿ, ಸಿಪಾಯಿಗಳಾಗಿ, ರಾಜರಾಗಿ, ಪಾಳೆಯಗಾರರಾಗಿ, ಚಕ್ರವರ್ತಿಗಳಾಗಿ, ಮಹಾಪುರುಷರೆಂದು ವಿವಿಧ ವೃತ್ತಿ, ಕಸುಬು, ಅಧಿಕಾರಗಳನ್ನು ಅನುಭವಿಸುತ್ತಾ ಬಂದಿದ್ದಾರೆ.

ವಾಸ್ತವವಾಗಿರುವ ಬೇಡರ ಜನಜೀವನ ಬೇರೆ, ಬೇಡರ ಕಥೆಗಳ ಜಗತ್ತೇ ಬೇರೆ. ಇವೆರಡರಲ್ಲಿ ಬೇಡರ ಸ್ಪಷ್ಟ ಚಿತ್ರಣ ಕಾಣುವುದು ಕಷ್ಟ. ಬೇಡರು ತಿಳಿಸುವ ಪ್ರಕಾರ ಮೊದಲು ನರ್ಮದಾನದಿ, ವಿಂದ್ಯಾಪರ್ವತಗಳ ತಪ್ಪುಲು, ದಂಡಕಾರಣ್ಯದಲ್ಲಿ ಜೀವಿಸುತ್ತಿದ್ದರು. ಬೇಟೆ, ಪಶುಪಾಲನೆ ಮಾಡುತ್ತಾ ಅಲ್ಲಿಂದ ವಲಸೆ ಬಂದರು. ಅವರಲ್ಲಿ ಪ್ರಮುಖರೆಂದರೆ: ಬುಟ್ಟಿಗಲೋರು, ಕಾಮಗೇತಿ, ಗುಜ್ಜಾಲರು ಇತ್ಯಾದಿ. ಬುಟ್ಟುಗಲೋರು ಸಂತತಿಯಲ್ಲಿ ಗುಪ್ತಬೊಮ್ಮತ್ತಿರಾಜು, ಬಂಗಾರುಬೊಮ್ಮತ್ತಿರಾಜು, ಜಡಲ ಬೊಮ್ಮತಿರಾಜು, ಹೊಟ್ಟೆಬೊಮ್ಮತ್ತಿರಾಜು, ಎರಿಬೊಮ್ಮತ್ತಿರಾಜು, ಮರಿಬೊಮ್ಮತ್ತಿರಾಜು, ಕೊಡಗ ಬೊಮ್ಮತಿರಾಜು ಇತರ ಅಣ್ಣ – ತಮ್ಮಂದಿರ ವಿವರಗಳು ದೊರೆಯುತ್ತವೆ. ಇವರು ಮೂಲತಃ ಪಶುಪಾಲಕರು. ಇವರಲ್ಲಿ ವಿವರಗಳು ದೊರೆಯುತ್ತವೆ. ಇವರಲ್ಲಿ ಕೆಲವರು ತಾವು ಶ್ರೀಶೈಲ, ವೈಕುಂಠ ಮತ್ತು ಕಾಶಿಗಳಿಂದ ಬಂದವರೆಂದು ತಿಳಿಸುತ್ತಾರೆ. ಹೀಗೆ ಬೇಡರ ಅನೇಕ ಮುಖಂಡರು ಒಂದೆಡೆ ಸೇರಿ ನೆಲೆಸುವಾಗ ತಮ್ಮ ವಿಭಿನ್ನ ಸಂಸ್ಕೃತಿಗೆ ಅಡಿಪಾಯ ಹಾಕಿದರು. ಮ್ಯಾಸ ಬೇಡರ ಸಂಸ್ಕೃತಿ ನಿರ್ಮಾಣವಾದುದು ಈ ವೀರರ ಹಂತದಿಂದಲೇ ಎಂದು ಗುರುತಿಸಬಹುದು. ಮೂಗನಾಯಕ ಮಹಾಶಕ್ತಿಶಾಲಿ, ಬೇಡರ ಮುಖಂಡ ಮತ್ತು ಸಾಂಸ್ಕೃತಿಕ ವೀರನಾಗಿ ಕಂಡುಬರುತ್ತಾನೆ. ಇವನು ಬೇಡರ ಸಂಸ್ಕೃತಿ ನಿರ್ಮಾಣಕ್ಕೆ ಶ್ರಮಿಸಿದ ವೀರರಲ್ಲೊಬ್ಬ. ಇಲ್ಲಿ ಬುಡಕಟ್ಟು ವೀರನನ್ನು ಸಾಂಸ್ಕೃತಿಕ ವೀರನೆಂದೇ ಪರಿಗಣಿಸಲಾಗುವುದು. ಎಲ್ಲಾ ಸಂಸ್ಕೃತಿಗಳಿಗಲ್ಲವಾದರೂ ವೀರನು ಈ ಸಮುದಾಯಕ್ಕೆ ದೇವರ ಪ್ರತೀಕವಾಗಿರುತ್ತಾನೆ.

ಮಂದಭೂಪಾಲ

ಮಂದಭೂಪಾಲ ಮ್ಯಾಸಬೇಡರ ಮೂಲಪುರುಷ. ಇವನಿಗೆ ಕಾಡುಬೇಡವರಪುತ್ರ ಎಂದು ಬೇಡರು ಕರೆದಿರುವರು. ಮಹಾವಿಷ್ಣುವಿನ ಆಶೀರ್ವಾದ ಪಶುಗಳ ಮಂದೆಗೆ ಇದ್ದಂತೆಯೇ ಚೆಲುವಿನ ಮುದ್ದಾದ ಗಂಡುಮಗು ಸೃಷ್ಟಿಯಾಯಿತಂತೆ. ಈ ಮಗುವಿನ ಜೊತೆಯಲ್ಲಿ ಪರಮಾತ್ಮನ ಪ್ರಸಾದದಿಂದ ಒಂದು ಹೆಣ್ಣು ಮತ್ತು ಗಂಡು ಕರುಗಳೆರಡು ಜನಿಸಿದವು. ಶ್ರೀ ಮಹಾವಿಷ್ಣುವೂ ಲಕ್ಷ್ಮೀದೇವಿಯೂ ಈ ಮಗುವನ್ನು ಕಂಡು ಸಂತೋಷಪಟ್ಟರಲ್ಲದೆ, ಮಂದಭೂಪಾಲ ಎಂದು ನಾಮಕರಣ ಮಾಡಿದರು. ಜನಪದರ ಪ್ರಕಾರ ಪಶುಗಳ ಮಂದೆಯಲ್ಲಿ ಜನಿಸಿದುದರಿಂದ ಮಂದಭೂಪಾಲನೆಂದು ಅನ್ವರ್ಥನಾಮವಾಯಿತು (ಮಂದೆ = ತುರುಗಳ ದೊಡ್ಡಿ). ಈ ವಂಶದವರಿಗೆ ‘ಮಂದಲಗೋತ್ರ’ ಎಂದು ಕರೆಯಲಾಯಿತು.

[1] ಕರುವಿಗೆ (ಗಂಡು) ಪಂಪಾದ್ರಿ ಬಸವನೆಂದು ಪರಶಿವನಿಂದ ನಾಮಕರಣವಾಯಿತು. ಹೆಣ್ಣು ಕರುವಿಗೆ ಒಂಟಿಕೋಡಿನ ಬೆಳ್ಳಿ ಹಸುವೆಂತಲೂ ಕರೆದರು. ಈ ಬಗೆಗಿನ ಕಥೆಗಳಲ್ಲಿ ನರಸಿಂಹನ ಅವತಾರ ಲಕ್ಷ್ಮೀ ಜನ್ಮತಾಳುವುದು ಬೇಡನಾಯಕರನ್ನು (ಮೂರು ಲೋಕವನ್ನು) ಆಳಲು ಸಮರ್ಥ ನಾಯಕನೊಬ್ಬನಿಗೆ ದೇವತೆಗಳು ಚರ್ಚಿಸುವುದು ಕಂಡುಬರುತ್ತದೆ. ಪ್ರಕೃತಿ ಸೌಂದರ್ಯದಲ್ಲಿ ಬೇಡವೀರರ ಕಥೆಗಳು ತುಂಬಾ ರೋಮಾಂಚನ ಮತ್ತು ಅಷ್ಟೇ ಅದ್ಭುತ.

ಕೃಷಿ ಆಧಾರಿತ ಪ್ರತಿಯೊಂದು ಜನಾಂಗವೂ ಅಂಗವೈಶಿಷ್ಟ್ಯತೆಯಿಂದ ಕೂಡಿದ ಹಸು – ಕರುಗಳನ್ನು ದೈವಾವತಾರವೆಂದು ನಂಬುತ್ತಾರೆ. ಇಂಥವುಗಳನ್ನು ತಮ್ಮ ಕುಲದೈವರ ಕಾಡುಗಳಲ್ಲಿ ಬಿಟ್ಟುಬರುತ್ತಾರೆ. ಅಥವಾ ‘ಕೋಲೆ ಬಸವನಾಟ’ದವರಿಗೆ ದಾನ ಕೊಡುತ್ತಾರೆ.

ಮಂದೆಗೆ ಕಾಡುಬೇಡರ ಆಗಮನವಾಗಿ ರೊಪ್ಪ ಅಥವಾ ಮಂದೆಯಲ್ಲಿದ್ದ ಮಗುವನ್ನು ಕಂಡು ಪುಳಕಿತರಾಗುವರು. ಈ ಪಾಳಯದ ನಾಯಕ ಗುಪ್ತಬೊಮ್ಮತಿರಾಜು. ಇವನು ಮಂದೆಗೆ ಬಂದು ಮಗುವನ್ನು ಕೈಗೆತ್ತಿಕೊಂಡು ಅದರ ಜನನ, ಸುಂದರ ಮೈಕಟ್ಟಿನ ಬಗ್ಗೆ ಪರಿಪರಿಯಾಗಿ ಚಿಂತಿಸುತ್ತಿದ್ದ; ಶಂಕೆ ಪಡುತ್ತಿದ್ದ. ಸೂರ್ಯ, ಚಂದ್ರರನ್ನು ಬೇಡುತ್ತಾ ಈ ಅನಾಥ ಮಗು (ದೇವತೆಗಳ ಮಗುವೋ ಏನೋ?) ಎಲ್ಲಿಯದೋ ಏನೋ ನಾನು ಸಾಕಬೇಕೆಂದಿರುವೆನೆಂದು ಬೇಡಿಕೊಂಡ. ಆಕಾಶವಾಣಿಯೊಂದು ಕೇಳಿಬಂದಂತೆ ಶ್ರೀಮಾನ್ ಮಹಾನ್ ವಿಷ್ಣುವಿನ ನಾಮತೀರ್ಥ ಪ್ರಸಾದದಿಂದ ಈ ಮಗು ಜನಿಸಿದೆ. ಪರಮಾತ್ಮನು ಮುಗ್ಧ ಭಕ್ತಿಗೆ ಮೆಚ್ಚಿ ಕೊಟ್ಟಿರುವನು. ಮಗುವನ್ನು ರಕ್ಷಿಸುವಂತೆ ತಿಳಿಸಿತು. ಇವನು ತನ್ನ ಪಾಳೆಯದಲ್ಲಿ ಮಂದಭೂಪಾಲನೆಂದು ನಾಮಕರಣ ಮಾಡುತ್ತಾನೆ.

ಅಪ್ರಾಪ್ತ ಬಾಲಕ ಮಂದಭೂಪಾಲ ತನ್ನ ಹಿರಿಯರ ಜಾಡಿನಲ್ಲಿ ಬೆಳೆಯಲಾರಂಭಿಸಿದ. ದನಗಾಹಿಯಾಗಿ, ಕೈಯಲ್ಲಿ ಕೊಡಲಿ, ಕೊಕ್ಕೆ, ಬಿಲ್ಲು, ಬಾಣಗಳನ್ನು ಹಿಡಿದು ಕಾಡಿನಲ್ಲಿ ಸಂಚರಿಸುತ್ತಾ ಪಶುಗಳನ್ನು ಕಾಯುತ್ತಿದ್ದ. ದಟ್ಟವಾದ ಕಾಡುಗಳಲ್ಲಿ ನಿರ್ಭೀತಿಯಿಂದ ಇದ್ದು, ಕ್ರೂರ ಮೃಗಗಳಿಗೆ ಅಂಜದೆ ಅಳುಕದೆ, ನದಿಯಲ್ಲಿ ಸ್ನಾನ, ಪೂಜೆ ಇತ್ಯಾದಿ ಕಾರ್ಯಗಳನ್ನು ಮುಗಿಸುತ್ತಿದ್ದ. ನರ್ಮದಾ ನದಿಯಲ್ಲಿ ಪ್ರತಿನಿತ್ಯ ಸಂಧ್ಯಾವಂದನೆ ಸಲ್ಲಿಸಿ ರಾಜ, ಮಂತ್ರಿ ಹೀಗೆ ಮುಖಂಡನಾಗಲು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದ.

ಇವನು ವಯಸ್ಕನಾದಂತೆ ಗುಪ್ತಬೊಮ್ಮತಿರಾಜು ಮದುವೆ ಮಾಡಲು ಯೋಚಿಸಿದ. ಚಂದ್ರಗಿರಿ ಪರ್ವತ ಪ್ರಾಂತ್ಯದಲ್ಲಿ ಸುಂದರ ಲಕ್ಷಣವುಳ್ಳ ಹೆಣ್ಣನ್ನು ನೋಡಿಬಂದರು. ಅವಳ ಹೆಸರು ಪ್ರಮಿಳಾ. ಇವರಿಬ್ಬರಿಗೆ ಮದುವೆಯಾದ ಮೇಲೆ ಮಂದಭೂಪಾಲ ಬೇಡರ ಪಾಳೆಯಕ್ಕೆ ‘ನಾಯಕ’ನೆಂದು ಮುಖಂಡತ್ವ ವಹಿಸಿಕೊಂಡ.[2]

ಮಂದ ಭೂಪಾಲನ ಪತ್ನಿ ಪ್ರಮೀಳಾ ದೈವಭಕ್ತಳಾಗಿ, ಗಂಡನೊಂದಿಗೆ ಅನ್ಯೋನ್ಯವಾಗಿ ಜೀವಿಸುತ್ತಿದ್ದಳು. ಪ್ರತಿನಿತ್ಯ ಇಬ್ಬರು ನದಿಯಲ್ಲಿ ಸ್ನಾನಮಾಡಿ, ಸೂರ್ಯ ನಾರಾಯಣನನ್ನು ಪೂಜಿಸುತ್ತಿದ್ದರು. ಮಂದಭೂಪಾಲ ಬುಟ್ಟುಗುಲೋರ ಕನ್ಯೆಯನ್ನು ಮದುವೆಯಾದ್ದರಿಂದ ಆ ಗೋತ್ರದ ಅಳಿಯನಾದ. ಇವನ ಪ್ರಭುತ್ವದಲ್ಲಿ ಮಂದಗೋತ್ರ ಮತ್ತು ಬುಟ್ಟಿಗಲೋರಗೋತ್ರವೆಂಬ ಎರಡು ಗೋತ್ರಗಳು ಹುಟ್ಟಿಕೊಂಡವು. ಮಂದಭೂಪಾಲ ಗುಪ್ತಗಿರಿಪುರದ ರಾಜಕೀಯದೊಂದಿಗೆ ಪಶುಪಾಲನೆಯು ಹೊಂದಿದ್ದ. ರೊಪ್ಪದಲ್ಲಿ ಮಲಗಿರುವಾಗ ಕನಸು ಬಿದ್ದು, ಪರಮಾತ್ಮ ಸಂತಾನ ಪ್ರಾಪ್ತಿ ಬಗ್ಗೆ ತಿಳಿಸಿದಂತಾಯಿತು. ಪ್ರಮೀಳಾ ಗರ್ಭಾವತಿಯಾದಳು. ಕಾಡಿನಲ್ಲಿದ್ದ ಬೇಡ ಸಮುದಾಯದವರು ಇವಳನ್ನು ಪ್ರೀತಿ ಮತ್ತು ಅಕ್ಕರೆಯಿಂದ ಅಲಂಕರಿಸಿ ಸೀಮಂತಕಾರ್ಯ ಮಾಡಿದರು. ಒಂಬತ್ತು ತಿಂಗಳುಗಳು ತುಂಬುತ್ತಿದ್ದಂತೆ ಗಂಡುಮಗುವಿಗೆ ಜನ್ಮನೀಡಿದಳು. ಪಾಳೆಯದಲ್ಲಿ ಅಂದು ಸಂಭ್ರಮವೋ ಸಂಭ್ರಮ. ಅನೇಕ ಕ್ರೀಡೆ, ಉತ್ಸವಗಳ ನಡುವೆ ಮಗುವಿಗೆ ‘ಅಂಭೋಜರಾಜ’ನೆಂದು ಹೆಸರಿಟ್ಟರು.[3] ಇವನ ನಂತರ ಮಂದಭೂಪಾಲನಿಗೆ ೩ ಜನ ಗಂಡು ಮಕ್ಕಳು ಜನಿಸಿದರು. ತುಂಬೇರಾಜ, ಕಾಂಭೋಜರಾಜ ಮತ್ತು ಕಲ್ಲಿಮರಾಜ. ಹೀಗೆ ನಾಲ್ಕು ಜನರಿಗೆ ಬುಟ್ಟುಗಲೋರ ಗೋತ್ರದಲ್ಲಿ ಮದುವೆಮಾಡಿ, ರಾಜ್ಯಭಾರವನ್ನು ಅಂಭೋಜರಾಜನಿಗೆ ವಹಿಸಿದ.

ಅಂಭೋಜರಾಜ

ಮೇಲೆ ತಿಳಿಸಿರುವಂತೆ ಇವನು ಮಂದಭೂಪಾಲನ ಹಿರಿಯಪುತ್ರ. ತಂದೆಗೆ ವಾರ್ಧಿಕ್ಯ ಪ್ರಾಪ್ತಿಯಾಗುತ್ತಿದ್ದಂತೆ, ಯಜಮಾನಿಕೆಯನ್ನು ವಹಿಸಿಕೊಳ್ಳುತ್ತಾನೆ. ತಂದೆಯ ಕೊನೆಗಾಲದ ನಂತರ ಉತ್ತರಾಧಿಕಾರಿಯಾಗಿ ಗುಪ್ತಗಿರಿಗೆ ಸೇರಿದ ಪಾಳೆಯಗಳ ಉಸ್ತುವಾರಿಯನ್ನು, ಬೇಡರ ಪಡೆಗಳ ನಾಯಕತನವನ್ನು ಪಾಲಿಸಿದ ಜತೆಗೆ ಪಶುಪಾಲನೆ ಮತ್ತು ಬೇಟೆಯಲ್ಲಿಯೂ ಕಾಲಕಳೆಯುತ್ತಿದ್ದ.

ಇವನ ಆಳ್ವಿಕೆಯಲ್ಲಿ ಬೇಡರ ಮಹಿಳೆಯರು ಸಹಾ ಬೇಟೆಯಲ್ಲಿ ತೊಡಗಿದ್ದರು. ಈ ಬೇಡತಿಯರು ದೃಢಕಾಯರಾಗಿದ್ದು, ಪುರುಷನಂತೆ ಬಿಲ್ಲು – ಬಾಣ ಹಿಡಿದು ಬೇಟೆಯಾಡುತ್ತಿದ್ದರು. ಶುದ್ಧ ಆಡಳಿತ ನೀಡುವ ಸಲುವಾಗಿ ಅಂಭೋಜರಾಜ ಕುಲ – ಗೋತ್ರ ಇತರೆ ವ್ಯವಹಾರಗಳಿಗೆ ಸಂಬಂಧಿಸಿದ ನ್ಯಾಯ ತೀರ್ಮಾನಕ್ಕಾಗಿ ಪಾಳೆಯಗಳ ನಾಯಕರನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡ. ಹಬ್ಬ – ಹರಿದಿನಗಳಲ್ಲಿ ಬೇಡ ನಾಯಕರು ತಪ್ಪದೇ ಕಾಸು – ಮೀಸಲನ್ನು ತರಬೇಕಿತ್ತು. ಕಂಪಳದಲ್ಲಿ ಆ ವಿಪತ್ತು ಸಂಭವಿಸಿದರೆ ಎಲ್ಲರೂ ಸೇರಿ ನಿಭಾಯಿಸುತ್ತಿದ್ದರು. ಹೀಗೆ ಬೇಡರ ಪಡೆಗಳು ರಚ್ಚಗಟ್ಟೆ ಬಳಿ ನೆಲೆಯೂರಿ ವಿರೋಧಿಗಳ ಉಪಟಳವನ್ನು ಅಡಗಿಸುತ್ತಿದ್ದರು. ಅನ್ಯರ ಆಕ್ರಮಣವನ್ನು ಪ್ರಾಣದ ಹಂಗುಮೀರಿ ಹೋರಾಡಿ ತಡೆಯುತ್ತಿದ್ದುದು ವಿಶೇಷ. ಅಂಭೋಜರಾಜನ ಸಹೋದರರಾದ ತುಂಭೋಜರಾಜ, ಕಾಂಭೋಜರಾಜ, ಕಲ್ಲಿಮರಾಜರು ತನ್ನ ಅಣ್ಣನನ್ನು ಅನುಸರಿಸಿ ನಡೆಯುತ್ತಿದ್ದರು. ಗೋದಾವರಿ ನದಿ ತೀರದಲ್ಲಿ ಅಂಭೋಜರಾಜನ ೩ನೇ ತಮ್ಮ ಕಾಂಭೋಜನಿಗೆ ಒಂದು ಗಂಡು ಮಗುವಾಯಿತು. ಅವನಿಗೆ ‘ಕಾಮಗೇತಿಭೂಪಾಲ’ ಎಂದು ಹೆಸರಿಟ್ಟರು. ಬೆಳ್ಳಿ ಹಸುವಿನ ಆಶೀರ್ವಾದವು ಇವನಿಗಿತ್ತು.

ತನ್ನ ತಂದೆಯಂತೆ ಅಂಭೋಜರಾಜ ಉತ್ತಮ ಆಳ್ವಿಕೆ ನಡೆಸುತ್ತಿದ್ದನು. ಬೇಡಗಂಪಳವು ಕ್ರೌಂಚಟವಿಯಲ್ಲಿ ವಾಸಿಸುತ್ತಿದ್ದಾಗ ಬೇಟೆ, ಪಶುಪಾಲನೆ, ಗೆಡ್ಡೆ ಗೆಣಸು ಸಂಗ್ರಹಣೆಯಲ್ಲಿ ತಮ್ಮ ಸಾಹಸ ತೋರಿಸಿದ್ದಾರೆ. ಹುಲಿ, ಚಿರತೆ, ಸಿಂಹ, ಇತರೆ ಉಗ್ರಪ್ರಾಣಿಗಳ ಹತ್ಯೆ ಪ್ರತಿದಿನ ನಡೆಯುತ್ತಿತ್ತು. ಅಂಭೋಜರಾಜನಿಗೆ ಸಂತಾನ ಪ್ರಾಪ್ತಿ ಆಗಲಿಲ್ಲ. ಇದೇ ಕೊರಗು ಅನೇಕ ವರ್ಷಗಳವರೆಗೆ ಕಾಡಿತು. ಇದೇ ಹೊತ್ತಿನಲ್ಲಿ ದೈವಲೀಲೆಯಿಂದ ಪಂಪಾದ್ರಿಬಸವನಚಿಟ್ಟೆ ಗೊರಸಿನಲ್ಲಿ ವಿಭೂತಿ (ಶಿವನ) ಕಣ ಸೇರಿಕೊಂಡಿತು. ಇದು ದೊಡ್ಡಗಾತ್ರದಲ್ಲಿ ಬೆಳೆದು ಅದು ಸಂಚರಿಸಲಿಕ್ಕಾಗಲಿಲ್ಲ. ಪಂಪಾದ್ರಿ ಬಸವನಿಗೆ ನೋವು ಹೆಚ್ಚಾಗಿ ಹುಣ್ಣು ಬಂಡೆಗೆ ತಾಗಿ ಒಡೆದುಕೊಂಡಿತು. ಮಲೀನರಕ್ತ ಹಳ್ಳವಾಗಿ ಹರಿಯಿತು. ಈ ರಕ್ತದ ಮಡುವಿನಲ್ಲಿ ಚೆಂದದ ಮುದ್ದಿನ ಮಗುವೊಂದು ಕಾಣಿಸಿಕೊಂಡಿತು. ಅವನ ಹೆಸರೇ ಶುಕ್ಲಮಲ್ಲಿನಾಯಕ. ಹೀಗೆ ನಾನಾ ಕಾರಣಗಳಿಗಾಗಿ ಅಂಭೋಜರಾಜ ಶಾಪಗ್ರಸ್ಥನಾಗುತ್ತಾನೆ. ಮಿಕ್ಕ ಘಟನೆಗಳೆಲ್ಲವೂ ಮಹರ್ಷಿ ವಾಲ್ಮೀಕಿಯ ಆರಂಭದ ಜೀವನದಂತೆ ಕಂಡುಬರುತ್ತವೆ. ಹೀಗಾಗಿ ಜನಪದರು ಅಂಭೋಜರಾಜನನ್ನು ವಾಲ್ಮೀಕಿಯೆಂದು ಸಹ ನಂಬಿಕೊಂಡಿದ್ದಾರೆ.

ಶುಕ್ಲಮಲ್ಲಿನಾಯಕ

ಮ್ಯಾಸನಾಯಕರ ಸಂಸ್ಕೃತಿಯ ಸ್ಥಾಪಕರಲ್ಲಿ ಶುಕ್ಲಮಲ್ಲಿನಾಯಕನ ಹೆಸರು ಪ್ರಸಿದ್ಧವಾದುದು. ಜನಪದರು ಹೇಳುವಂತೆ ನರ್ಮದಾ, ಗೋದಾವರಿ ಮತ್ತು ಗಂಗಾನದಿ ಮಾರ್ಗಗಳಲ್ಲಿ ಶಿವನು ವಾಹನವೇರಿ ಬರುತ್ತಾನೆ. ಗೋದಾವರಿ ತೀರದ ಪ್ರಕೃತಿಗೆ ಮನಸೋತು ಶಿವಪೂಜೆ ಸಲ್ಲಿಸಲು ಚಿಲುಮೆ ತೋಡಿ ಗಂಗೆಯನ್ನು ಬರಮಾಡಿಕೊಂಡು ಮರಳಿನ ಲಿಂಗಮಾಡಿ ಗಂಗಾಮಾತೆಗೆ ಪೂಜೆ ಸಲ್ಲಿಸುತ್ತಾನಂತೆ. ಈ ಪೂಜೆ ಕಂಡ ಬ್ರಹ್ಮ, ವಿಷ್ಣು, (ಶಿವರು) ಸಹ ಅದೇ ರೀತಿ ಪೂಜೆ (ಗಂಗೆಗೆ), ದಾನಮಾಡಿ ತೆರಳುತ್ತಾರೆ. ಕೊನೆಗೆ ಅಂಭೋಜರಾಜನಿಗೆ ಸಂದರ್ಶನ ನೀಡುತ್ತಾರೆ.

ಅಂಭೋಜರಾಜನ ಹಸುಗಳಲ್ಲಿ ಪಂಪಾದ್ರಿ ಬಸವ ಎಂಬ ವೃಷಭ ಬಾಯಾರಿಕೆಯಿಂದ ನರಳುತ್ತಾ ತ್ರಿಮೂರ್ತಿಗಳು ಶಿವಗಂಗೆ ಪೂಜೆ ಸಲ್ಲಿಸಿದ ಸ್ಥಳಕ್ಕೆ ಬಂದಿತು. ಅಲ್ಲಿದ್ದ ಫಲಪುಷ್ಪಗಳನ್ನು ತಿಂದು ನೀರು ಕುಡಿಯಿತು. ಆಗ ಪರಮೇಶ್ವರನ ವಿಭೂತಿಯ ಕಣ ಪಂಪಾದ್ರಿ ಬಸವನ ಚಿಟ್ಟೆಗೊರಸಿನಲ್ಲಿ ಸೇರಿತಂತೆ. ಕ್ರಮೇಣ ಅಲ್ಲೇ ಬೆಳೆದು ಹುಣ್ಣು ದೊಡ್ಡ ಗಾತ್ರಕ್ಕೆ ಬೆಳೆದಾಗ ಅಂಭೋಜರಾಜ ತೆಗೆಯಲು ಯತ್ನಿಸಿ ವಿಫಲನಾದ. ಒಂಬತ್ತು ತಿಂಗಳ ನಂತರ ಶುಕ್ಲಪಕ್ಷದಂದು ಆ ಹುಣ್ಣಿಮೆಯಲ್ಲಿ ಗಂಡುಮಗು ಜನಿಸಿತು. ಅವನೇ ಶುಕ್ಲಮಲ್ಲಿನಾಯಕ. ಅವನನ್ನು ಅಂಭೋಜರಾಜ ಸಾಕಿ ಬೆಳೆಸಿದ.

ಗೋದಾವರಿ ತೀರದಲ್ಲಿ ಅಂಭೋಜರಾಜನ ಸಹೋದರರಲ್ಲಿ ಒಬ್ಬನಾದ ತುಂಬೇರಾಜನಿದ್ದ ಇವನ ಐದು ಜನ ಹೆಣ್ಣುಮಕ್ಕಳು ಬೇಟೆಗೆಂದು ಬಂದು ಸ್ನಾನಮಾಡುತ್ತಿದ್ದಾಗ ಈ ಮಗ ಅಳುವ ಶಬ್ದ ಕೇಳಿ ಬರುತ್ತಿತ್ತು. ಈ ಐದು ಜನರು ಮಗುವನ್ನು ರಕ್ಷಿಸಿ ಪಂಪಾದ್ರಿ ಬಸವನಿಗೆ ದೇವರು ಕೊಟ್ಟ ಫಲ ಎಂದು ತಿಳಿದರು. ಮಗುವನ್ನು ಗುಹೆಯಲ್ಲಿಟ್ಟಿದ್ದರು. ಅಂಭೋಜರಾಜನಿಗೂ ವಿಷಯ ತಿಳಿದು ಹೋಗಿ ನೋಡಿದ. ಇವರು ಶುಕ್ಲಪಕ್ಷದಿನ, ಮಲಿನ ರಕ್ತದಲ್ಲಿ ಹುಟ್ಟಿದ್ದ ಮಗುವನ್ನು ತಂದಿದ್ದರಿಂದ ಶುಕ್ಲಮಲಿನನಾಯಕನೆಂದು ಹೆಸರಿಸಿದರು. ಇವನು ಕ್ರಮೇಣ ಬೇಡ ಬುಡಕಟ್ಟಿನ ವ್ಯವಹಾರಗಳಿಗೆ, ಬೆಳವಣಿಗೆಗೆ ಕಾರಣನಾದ.

ದಾನಸಾಲಮ್ಮ

ಅಂಭೋಜರಾಜ ಮತ್ತು ಆತನ ಹೆಂಡತಿ ಮಧುಮತಿಗೆ ಮಕ್ಕಳಾಗಲಿಲ್ಲ. ಸಂತಾನ ಭಾಗ್ಯಕ್ಕಾಗಿ ಅವಳು ಸೂರ‍್ಯನಾರಾಯಣನನ್ನು ಪ್ರಾರ್ಥಿಸುತ್ತಿದ್ದಳು. ಅವಳು ಹೆತ್ತಂತ ಮಗುವಿಗೆ ದಾನಸಾಲಮ್ಮ ಎಂದು ಹೆಸರಿಟ್ಟರು. ಇವಳಿಂದ ತಂದೆತಾಯಿಗಳಿಗೆ ಉಳಿಗಾಲವಿಲ್ಲ ಎಂದಾಗ ಅಂಭೋಜರಾಜನ ತಮ್ಮನಾದ ಕಾಂಬೋಜರಾಜನಿಗೆ ಕೊಟ್ಟರು. ಇವಳು ಬೆಳೆದು ಪ್ರೌಢಾವಸ್ಥೆಗೆ ಬಂದಾಗ ಶುಕ್ಲಮಲ್ಲಿನಾಯಕನೊಂದಿಗೆ ಮದುವೆಯಾಗುತ್ತದೆ. ಗುಪ್ತಗಿರಿಯ ಬೇಡ ಪಳೆಯದವರೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಾನಸಾಲಮ್ಮ ವಾರ್ದಿಕ್ಯ ಪ್ರಾಪ್ತಿಯಾಗಿ ಮರೆಯಾದರೂ ಅವರ ವಂಶಪರಂಪರೆ ಇಂದಿಗೂ ಇದೆ. ಇವಳನ್ನು ತಮ್ಮ ಪೂರ್ವಜರ ಸಾಲಿಗೆ ಸೇರಿಸುವ ಬೇಡರು ಸ್ತ್ರೀ ದೇವತೆಯಾಗಿಯೂ ಪೂಜಿಸುವರು.

ಚಂಚುಲಕ್ಷ್ಮಿ

ಶುಕ್ಲಮಲ್ಲಿನಾಯಕ ಮತ್ತು ದಾನಸಾಲಮ್ಮನಿಗೆ ಜನಿಸಿದ ಮಗುವೆ ಚಂಚುಲಕ್ಷ್ಮಿ. ಇವರು ಸೂರ್ಯದೇವನ ಆರಾಧಕರು. ಮಂದಭೂಪಾಲನು (ದಾನಸಾಲಮ್ಮನ ಅಜ್ಜ) ಚಂದ್ರಗಿರಿ ಪ್ರಾಂತ್ಯದ ಬಂಗಾರಬೂದಿಕೋಟೆಯ ನೆಲಮಾಳಿಗೆಯಲ್ಲಿ ಸೂರ್ಯದೇವನ ಬೆಳಕು ಬೀಳುವ ಸ್ಥಳದಲ್ಲಿ ಅಲ್ಲಿನ ರಾಜ ಮತ್ತು ಮಂತ್ರಿ ಪದವಿಗಳಿಗಾಗಿ ತಪಸ್ಸು ಮಾಡುತ್ತಿದ್ದನಂತೆ. ದಾನಸಾಲಮ್ಮನ ತಾಯಿ ಮಧುಮತಿ ಇವಳನ್ನು ಪಡೆಯಲು ಸೂರ್ಯದೇವರನ್ನು ಪ್ರಾರ್ಥಿಸಿದ್ದಳು. ದಾನಸಾಲಮ್ಮಳು ಸಹಾ ಸೂರ್ಯದೇವನು ಪತಿಯಾಗಬೇಕೆಂದು ಪ್ರಾರ್ಥಿಸುತ್ತಾಳೆ. ಶುಕ್ಲಮಲ್ಲಿನಾಯಕನನ್ನು ಮದುವೆಯಾದರು, ಇವಳಿಗೆ ಸೂರ್ಯದೇವನ ಮೋಹ ಹೋಗಿರಲಿಲ್ಲ.

ಮಗಳು ಚಂಚುಲಕ್ಷ್ಮಿ ಬೇಟೆಯಾಡಲು ಇಚ್ಛೆಪಟ್ಟಳಲ್ಲದೆ, ಬಿಲ್ಲುಬಾಣಗಳಿಂದ ತರಬೇತಿ ಪಡೆದಳು. ಪಶುಪಾಲಕರೊಂದಿಗೆ ಅರಣ್ಯಕ್ಕೆ ಹೋಗುತ್ತಿದ್ದಳು. ತಂದೆತಾಯಿಗಳಿಗೆ ಬಹಳ ಆನಂದವಾಯಿತು. ಗೋಕರ್ಣ ಪ್ರದೇಶದಲ್ಲಿ ಸಂಚರಿಸಿ ಗೆಡ್ಡೆಗೆಣಸು ಸಂಗ್ರಹಿಸುತ್ತಿದ್ದರು. ನಿರ್ಭೀತಿಯಿಂದ ಬೇಟೆಯಾಡಿ, ಕಾಡಿನ ನಿವಾಸಿಗಳೊಂದಿಗೆ ಮಧುರ ಬಾಂಧವ್ಯ ಸಾಧಿಸಿದ್ದಳು.

ವಯಸ್ಸಿಗೆ ಮೀರಿ ಚಂಚುಲಕ್ಷ್ಮಿ ಅಪ್ರತಿಮ ಸುಂದರಿಯಾಗಿ ಬೆಳೆದಳು. ಆಂಧ್ರದ ಚಿಲಮತ್ತೂರು ಎಂಬ ಕಾಡಿನಲ್ಲಿ ಬೇಡತಿಯಾಗಿದ್ದಳು ಚಂಚುಲಕ್ಷ್ಮಿ.[4] ಹಿರಣ್ಯ ಕಶ್ಯುಪವನ್ನು ಮಹಾವಿಷ್ಣುವು ನರಸಿಂಹಾವತಾರದಿಂದ ಕೊಂದು ವ್ಯಘ್ರನಾಗಿ ಆ ಕಾಡಿಗೆ ಪ್ರವೇಶಿಸುತ್ತಾನೆ. ಚಂಚುಲಕಷ್ಮಿಯ ಸೌಂದರ್ಯವನ್ನು ಕಂಡು ಶಾಂತನಾಗುತ್ತಾನೆ. ನರಸಿಂಹನು ಒಲಿದುಬಂದು ಇವಳನ್ನು ವಿವಾಹವಾಗುವನು. ಇವನು ಗುಹೆಯಲ್ಲಿ ವಾಸಿಸುತ್ತಾ, ಎಲ್ಲರಿಗೂ ದರ್ಶನ ಕೊಡುತ್ತಾನೆ. ಕಾಮಗೇತಿಭೂಪಾಲನಿಗೆ ಬೇಡರ ಮುಖಂಡರು ಕೋರಿಕೊಂಡಂತೆ ವಿಷ್ಣುವು ತನ್ನೆಲ್ಲ ಸ್ವತ್ತುಗಳನ್ನು ಬೇಡರಿಗೆ ಕೊಟ್ಟ. ಬಲಮುರಿಶಂಖು, ನಾಗಮುರಿಬೆತ್ತ, ರತ್ನಗಿರಿ ಗುದ್ದುಗೆ, ನಾಮತೀರ್ಥ, ಮುತ್ತಿನ ಕಾಲುಪೆಂಡೆ, ಶಂಖು, ಭವನಾಸಿ, ಚಿಪ್ಪುಕೊಡಲಿ, ಕುಕ್ಕೆ, ಉದಿ – ಪದಿ, ನೋಮನೇಮ ಕೊಟ್ಟರಂತೆ. ಚುಂಚುಲಕ್ಷ್ಮಿಯನ್ನು ಶ್ರೀಮನ್ನಾರಾಯಣ ವಿವಾಹವಾದ ತರುವಾಯ ‘ನಾಯಕ’ ಜಾತಿಗೆ ಎಲ್ಲಿಲ್ಲದ ಕೀರ್ತಿ, ಗೌರವ ಲಭಿಸಿತು. ಅಂದಿನಿಂದ ನಾಯಕನೆಂದು ಮಲ್ಲಿನಾಯಕ, ಮಂದಲೋರು ಎಂಬ ಎರಡು ಪಂಗಡಗಳು ಬೆಳೆದುಬಂದವು.

ಪೆದ್ದಕ್ಕರಾಯಲದೇವಿ

ಶುಕ್ಲಮಲ್ಲಿನಾಯಕ ಮತ್ತು ದಾನಸಾಲಮ್ಮನವರು ಗೋಕರ್ಣ ಪರ್ವತ ಪ್ರದೇಶದಲ್ಲಿರುತ್ತಾರೆ. ಒಂದು ದಿನ ಭಾರೀ ಮಳೆ ಸುರಿಯಿತು. ಬೇಡರು ತಮ್ಮ ಉಪಯೋಗಕ್ಕಾಗಿ ನಾನಾ ತರದ ಬೀಜಗಳನ್ನು ನೆಡುತ್ತಿದ್ದರು. ಇದನ್ನು ಕಂಡು ದಾನಸಾಲಮ್ಮ ತನ್ನ ಗಂಡ ಸಾಂಚಿ ಶಿಖನಾಯಕನಾದ ಶುಕ್ಲಮಲ್ಲನಾಯಕನಿಗೆ ಕುಂಬಳಕಾಯಿ ಬೀಜ ನೆಡಲು ಕೇಳಿದ್ದಳು. ಮಂದಗಿರಿಪುರದಲ್ಲಿರುವ ನನ್ನ ಅಣ್ಣ ಕಾಮಗೇತಿ ಭೂಪಾಲನನ್ನು ನೋಡಿಕೊಂಡು ಬರುವಾಗ ಕುಂಬಳಕಾಯಿ ಬೀಜಗಳನ್ನು ತರಲು ಹೇಳಿದಳು. ಇವುಗಳನ್ನು ತರಲು ಹೋದಾಗ ದಾರಿಯಲ್ಲಿ ವೃದ್ಧನ ದಯೆಯಿಂದ ಲಭಿಸುತ್ತದೆ. ಅಲ್ಲಿ ದೊರೆತ ಕುಂಬಳಕಾಯಿ ಬೀಜದಿಂದ ಬಳ್ಳಿಯಾಗಿ ಬೆಳೆದು ಕಾಯಿಬಿಟ್ಟಿತು. ಆ ಕುಂಬಳಕಾಯಿ ೭ ಹೋಳಾಯಿತು. ಅದನ್ನು ದಾರಿಗೆ ಹಾಕಿ ಬಂದಾಗ ಕುಂಬಳಕಾಯಿ ಹೆಣ್ಣು ಶಿಶುವಾಗಿ ಜನ್ಮಪಡೆಯಿತು. ಅವಳಿಗೆ ಪೆದ್ದಕ್ಕ ರಾಯಲದೇವಿ ಎಂದು ಕರೆದರು. ಕ್ರಮೇಣ ಇವಳಿಗೆ ವಡೇಲುಮಾರಿ, ಮುತ್ತಿಗಾರುಮಾರಿ, ಗೌರಸಮುದ್ರಮಾರಿ, ದಡ್ಡಿಲುಮಾರಿ ಮತ್ತು ಅಕ್ಕರಾಯಮ್ಮ ಎಂಬ ಹೆಸರುಗಳಿಂದ ಕರೆದು ಆರಾಧಿಸುತ್ತಾರೆ.

ಪೆದ್ದಕ್ಕರಾಯಲದೇವಿ ರೌದ್ರಾವತಾರ ತಾಳಿ ಕಾಡಿನಲ್ಲಿ ಸಂಚರಿಸುವಾಗ ಏಳು ದಿಕ್ಕುಗಳ್ಲಿ ಮಕ್ಕಳು ಅಳುವ ಶಬ್ದ ಕೇಳಿ ಬಂತು. ಹೋಗಿ ನೋಡಲಾಗಿ ಏಳು ಮಕ್ಕಳು ಕುಂಬಳಕಾಯಿ ಹೋಳುಗಳಲ್ಲಿ ಹುಟ್ಟಿದವರೆಂಬುದು ತಿಳಿದು ಅವರನ್ನೆತ್ತಿಕೊಂಡು ಬಂದು ಗುಹೆಯೊಳಗೆ ಏಳು ತೊಟ್ಟಿಲುಗಳನ್ನು ಕಟ್ಟಿ ಬೆಳೆಸಿದಳು. ಅವರುಗಳೆಂದರೆ ಭಾನು ಕೋಟಿರಾಜು, ಸೂರಪ್ಪರಾಜು, ಸೆಟ್ಲುಪಟ್ಟಪ್ಪರಾಜು, ಕೋರ‍್ಲಮಲ್ಲಿರಾಜು, ಕಾಕುಮಂಚಿರಾಜು, ಪಾಪನ್ನರಾಜು, ತಿಪ್ಪಂಡರಾಜು ಎಂದು ನಾಮಕರಣ ಮಾಡಲಾಯಿತು. ಇವರು ಸೂರ್ಯನ ವರದಿಂದ ಹುಟ್ಟಿದವರೆಂಬ ನಂಬಿಕೆಗಳಿವೆ. ನಂತರ ಶುಕ್ಲಮಲ್ಲಿನಾಯಕನ ಸಂತತಿ ವೃದ್ಧಿಯಾಯಿತು.

ಮ್ಯಾಸಬೇಡರೆಲ್ಲ ಸೇರಿ ಮಲ್ಲಿನಾಯಕನ ಗೋತ್ರಕ್ಕೆ ದೊರೆಪಟ್ಟ ಕಟ್ಟುತ್ತಾರೆ. ಹಿಂದೆ ಈ ಪದವಿಗಾಗಿ ಮಂದಭೂಪಾಲನು ದೊರೆಯಾಗಲು ತಪಸ್ಸು ಮಾಡಿ ಮೋಸ ಹೋದನು. ನಂತರ ಮಲ್ಲಿನಾಯಕನಿಗೆ ಅವಕಾಶ ಸಿಕ್ಕಿತು. ಮಲ್ಲಿನಾಯಕರು ದೊರೆಗಳಾಗಿ, ಮಂದಲಾರು ದಳವಾಯಿಗಳಾಗಿ ಸೂರ್ಯ ಚಂದ್ರರವರೆಗೆ ನಡೆದುಕೊಂಡು ಹೋಗುವಂತೆ ಆದೇಶಿಸಲಾಯಿತು. ಶುಕ್ಲಮಲ್ಲಿನಾಯಕ ಹಾಗೂ ದಾನಸಾಲಮ್ಮನವರ ಪುತ್ರಿ ಪೆದ್ದಕ್ಕರಾಯಲದೇವಿ ಮತ್ತು ೭ ಜನ ಮಕ್ಕಳು ಕಾಡಿನಲ್ಲಿದ್ದರು. ಹೀಗೆ ಬೇಡರ ಸಂಸ್ಕೃತಿ ನಿರ್ಮಾಣದಲ್ಲಿ ಅನೇಕರು ಶ್ರಮಿಸಿರುವುದುಂಟು.

ವಂಶ ಪರಂಪರೆ

ನಾಯಕರ ಸಂಸ್ಕೃತಿ ಮತ್ತು ಪ್ರಭುತ್ವ

ಬೇಡನಾಯಕರು ತಮ್ಮ ಪ್ರಾಚೀನ ಪರಂಪರೆಯನ್ನು ರಕ್ಷಿಸಿಕೊಳ್ಳಲು ವಿವಿಧ ರೀತಿಯಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಇವುಗಳಲ್ಲಿ ಪ್ರಮುಖವಾದವು ಕಟ್ಟೆಮನೆಗಳ ಸ್ಥಾಪನೆ, ನಾಯಕರ ನೇಮಕ, ದಾಸ ಮತ್ತು ಪೂಜಾರಿಗಳನ್ನು ಕಟ್ಟೆಮನೆ ಹಿರಿಯರು ಈ ರೀತಿ ಮಾಡಿರುತ್ತಾರೆ. ಮ್ಯಾಸಬೇಡರು ತಮ್ಮ (ತೆಲುಗು ಭಾಷೆ) ಬೆಡಗಿಗೆ ತಕ್ಕಂತೆ ದೇವರುಗಳನ್ನು ಸ್ಥಾಪಿಸಿಕೊಂಡಂತೆ ಕಟ್ಟೆಮನೆಗಳು ಹುಟ್ಟಿಕೊಂಡವು.

೧. ರಾಯಲುಕಟ್ಟೆ ಪದಿಮುತ್ತಿಗಾರು ಕಟ್ಟೇಮನೆ ಮೊಳಕಾಲ್ಮುರು ತಾ.
೨ ರಾಗಿಮಾನುಕಟ್ಟ ಕಂಪಳದೇವರ ಕಟ್ಟೇಮನೆ ಮೊಳಕಾಲ್ಮುರು ತಾ
೩. ರಚ್ಚಕಟ್ಟ ಕಲ್ಲೇದೇವರಪುರ ಕಟ್ಟೇಮನೆ ಜಗಳೂರು ತಾ
೪. ಅಲಕಲು ಕಟ್ಟ ತಪಲೇಟಿ ಚೆರವು ಕಟ್ಟೇಮನೆ ಚಿತ್ರದುರ್ಗ ತಾ
೫. ಮೊಲಕಾಲ ಕಟ್ಟ ಚಿಂತಗುಂಟ್ಲು ಕಟ್ಟೇಮನೆ ಕುದಾಪುರ, ಚಳ್ಳಕೆರೆ ತಾ
೬. ನಾಯಕನಹಟ್ಟಿ ಹಟ್ಟಿಮಲ್ಲಪ್ಪನಾಯಕನ ಕಟ್ಟೇಮನೆ ಚಳ್ಳಕೆರೆ ತಾ
೭. ಗೋನೂರುಕಟ್ಟ ಸೂರಪ್ಪನಾಯಕನಕಟ್ಟೇಮನೆ ಚಿತ್ರದುರ್ಗ ತಾ
೮. ಏಕಲುಕಟ್ಟ ಗೋನೂರು ಕಟ್ಟೇಮನೆ ಚಿತ್ರದುರ್ಗ ತಾ
೯ ನೂಕಲುಕಟ್ಟ ನಾಯಕನಹಟ್ಟಿ ಕಟ್ಟೇಮನೆ ಚಳ್ಳಕೆರೆ ತಾ
೧೦ ಪೋಕಲಕಟ್ಟ ನನ್ನಿವಾಳ ಕಟ್ಟೇಮನೆ ಚಳ್ಳಕೆರೆ ತಾ
೧೧ ಆಚಾರಕಟ್ಟ ಕಾಮಗೇತನಹಳ್ಳೀ ಕಟ್ಟೇಮನೆ ಚಳ್ಳಕೆರೆ ತಾ
೧೨ ಗಿರಕಲ ಕಟ್ಟ ಜಂಬುದ್ವೀಪಗಳ ಗುಡ್ಡೆಕಟ್ಟೇಮನೆ ಚಳ್ಳಕೆರೆ ತಾ
೧೩ ನನ್ನಿವಾಳಮುಕಟ್ಟ ಚಿನ್ನಪಾಲನಾಯಕನ ಕಟ್ಟೇಮನೆ ಚಳ್ಳಕೆರೆ ತಾ

(ಆನಂತರ ೩ ಕಟ್ಟೇಮನೆಗಳು ಮಾತ್ರ ಇದ್ದವು. ಗೋನೂರು, ನಾಯಕನಹಟ್ಟಿ ಮತ್ತು ನನ್ನಿವಾಳ)

ಮೂರು ಜನ ನಾಯಕರ ನೇಮಕ

ಈ ಸಂಸ್ಕೃತಿಯ ಅಭಿವೃದ್ಧಿ, ಜಾತಿಕಲಹ, ನ್ಯಾಯತೀರ್ಮಾನಕ್ಕಾಗಿ ಈ ಜನಾಂಗದ ಹಿರಿಯರನ್ನು ಜಾತಿಸಂವಿಧಾನದಡಿಯಲ್ಲಿ ನಾಯಕನೆಂದು ನೇಮಿಸುತ್ತಾರೆ.

ಗಟ್ಟಿಮುತ್ತಿನಾಯಕ
ಮೀಸಲು ನಾಯಕ
ಬೋಸೇನಾಯಕ

ಮೂರು ಜನಪೂಜಾರಿಗಳ ನೇಮಕ
ಕಾಮಗೇತಿ
ನಲ್ಲಿಗೇತಿ
ಎರಿಪೋತಿ ಬುಲ್ಲುಡುಲು

ಮೂರು ಜನದಾಸಯ್ಯಗಳು
ಮುಂಡಾಸುದಾಸ, ಗೊಡಗುದಾಸ ಮತ್ತು ಬೋಡಿದಾಸ

ಗೋತ್ರಗಳು (ಎರಡು)

ಮಲ್ಲಿನಾಯಕ  ಮಂದಿ ಹಿರಿಯರು ಮಂದಲ
ಬೋಡಿದಾಸನು ಕಾಟಬ್ಬನವರು ಗಜ್ಜಗನವನು
ಸಜ್ಜಲವಾನು ಯರಗೋಡ್ಲವನು ಬಿದ್ದನವನು
ಯರಗೋಡ್ಲವನು ನಳಬಾಳಸಿವಾಡು ಬುಡ್ಡುಬೋರುನವಾಡು
ನಲ್ಲಬಾಳಸಿವಾನು ಗಡಗಿಲೋಡು ಕಗ್ಗಲ್ಲವಾಡು
ನಲ್ಲಕ್ಕಿಯವನು ವರಗನೋಡು ಮಲ್ಲೂರುವಾಡು
ವರನವನು ಚಿನ್ನಮುತ್ತಿವಾಡು ಯರಬೊಮ್ಮನಾಡು
ಚನ್ನಮುತ್ತಿಗನು ಜೂಗನೋಡು ಪರಮೇಶಿನವಾಡು

೧೨ ಪೆಟ್ಟಿಗೆ ದೇವರುಗಳು

ಪಚ್ಚಪದಿ ದೊಡ್ಡ ತಿರುಮಲದೇವರು ಬೇಡರೆಡ್ಡಿ ಹಳ್ಳಿ  ಚಳ್ಳಕೆರೆ ತಾ
ಕಾಪುಕಂಪಳ ರಂಗಸ್ವಾಮಿ ಕಂಪಳದೇವರಹಟ್ಟಿ ಮೊಳಕಾಲ್ಮೂರು ತಾ
ದಡ್ಲು ಮಾರಮ್ಮ ದೇವರಹಳ್ಳಿ ಚಳ್ಳಕೆರೆ
ಚಿಂತಗುಟ್ಲ ಬೋರೇದೇವರು ಖುದಾಪುರ ಚಳ್ಳಕೆರೆ
ಮಂದಬೊಮ್ಮ ದೇವರು ದೊಣಮಂಡಲ ಹಟ್ಟಿ ಚಳ್ಳಕೆರೆ
ಪೆದ್ದಕ್ಕರಾಯಮ್ಮ (ಮಾರಮ್ಮ) ಗೌರಸಮುದ್ರ ಚಳ್ಳಕೆರೆ
ಮಂಗಪೋಟಿ ಓಬಳದೇವರು ತಾಳಿಕೆರೆ ರಾಯದುರ್ಗ
ನಲ್ಲಚೆರುವು ಓಬಳದೇವರು ರುದ್ರಮ್ಮನಹಳ್ಳಿ ಚಳ್ಳಕೆರೆ
ಮಲ್ಲಿನಾಯಕ ಬೊಮ್ಮದೇವರು ವರವು ಚಳ್ಳಕೆರೆ
೧೦ ಬಂಗಾರಿದೇವರು ನನ್ನಿವಾಳ ಚಳ್ಳಕೆರೆ
೧೧ ಬೋಸೇ ದೇವರು ಬೋಸೇದವರಹಟ್ಟಿ ಚಳ್ಳಕೆರೆ
೧೨ ಮಾಕನಡಕು ಓಬಳದೇವರು ಮಾಕನಡಕು ಕೂಡ್ಲಿಗಿ

* * *


[1] ತೆಲುಗಿನಮಂದ ಕನ್ನಡದ ಮಂದೆ, ಗುಂಪು, ವರ್ಗ, ಬೆಡಗು ಎಂದು ಆಗಿದೆ.

[2] ಬೇಡರ ಬುಡಕಟ್ಟಿನಲ್ಲಿ ಮೊಂಡಬೇಡರೆಂಬ ಪಂಗಡವಿದೆ. ಇವರು ಮೊಂಡ ವೃತ್ತಿಯಿಂದ ಭಿಕ್ಷೆ ಬೇಡಿ ಜೀವಿಸುತ್ತಾರೆ. ಮಂದವಾರು ಗೋತ್ರಕ್ಕೆ ಮೊಂಡರು ಸೇರಿದ್ದು, ಇಂದಿಗೂ ಅಣ್ಣತಮ್ಮಂದಿರೆಂಬ ಭಾವನೆ ಉಳಿದಿದೆ. ಮೊಂಡರು ಸಾಂಸ್ಕೃತಿಕವಾಗಿ ಇಂದು ಪರಿವರ್ತನೆಯ ಹಂತದಲ್ಲಿದ್ದಾರೆ.

[3] ಅಂಬು = ನೀರು, ಜ=ಹುಟ್ಟಿದ. ಇವರ ತಂದೆತಾಯಿಗಳು ನದಿ ನೀರಲ್ಲಿ ನಿಂತು, ದೇವರನ್ನು ಪ್ರಾರ್ಥಿಸಿದ್ದರಿಂದ ಮತ್ತು ಅದೇ ಸಮಯಕ್ಕೆ ಜನಿಸಿದ ಕಾರಣಕ್ಕೆ ‘ಅಂಭೋಜರಾಜ’ನೆಂದು ಕರೆದರು.

[4] ಕದ್ರಿ ನರಸಿಂಹನೊಂದಿಗೆ ಚುಂಚುಲಕ್ಷ್ಮಿಯ ಕಥೆ ಹೆಣೆದುಕೊಂಡಿರುವುದುಂಟು. ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಚಿಲಮತ್ತೂರಿನ ಅಡವಿಯಲ್ಲಿ ಲಕ್ಷ್ಮಿಯು ತನ್ನ ರೂಪವನ್ನು ಮರವೊಂದರಲ್ಲಿ ಬಿಟ್ಟು ಪುರಾಣ ಪ್ರಕಾರ ಸಂಚರಿಸಿದಳು. ಅಡವಿ ಚೆಂಚರದಂಪತಿಗಳು ನಾರದನ ನಿರ್ದೇಶನದ ಮೇರೆಗೆ ಹಣ್ಣನ್ನು ತಿಂದದ್ದರಿಂದ ಚುಂಚುಲಕ್ಷ್ಮಿ ಹುಟ್ಟಿದಳು. ನರಸಿಂಹ ಅವತಾರದಲ್ಲಿ ವಿಷ್ಣು ಚುಂಚುಲಕ್ಷ್ಮಿಯನ್ನು ಮದುವೆಯಾದ. ಆದಿಲಕ್ಷ್ಮಿಯು ತನ್ನ ರೂಪಕಾಂತಿಯನ್ನು ತೆಗೆದುದ್ದರ ಪರಿಣಾಮವಾಗಿ ಈ ಸೀಮೆಯ ಹೆಣ್ಣು ಮಕ್ಕಳ ಮುಖದಲ್ಲಿ ಕಳೆಬಾಡಿ ಹೋಗಿರುತ್ತದೆಂಬ ನಂಬಿಕೆಯಿದೆ. ಇದಕ್ಕೆ ಅತೀಯಾದ ಬಿಸಿಲಿನ ಉಷ್ಣಾಂಶವು ಕಾರಣವಿರಬಹುದು. ಈ ಕದರಿನರಸಿಂಹನಿಗೆ ಬೇಡರು, ಉಪ್ಪಾರ ಮತ್ತು ಮಾದಿಗರು ಒಕ್ಕಲುಗಳಲ್ಲಿ ಪ್ರಮುಖರು. ಇಂದಿಗೂ ತಮ್ಮವರಿಗೆ ಕದಿರಪ್ಪ, ಕದಿರಮ್ಮ, ಲಕ್ಷ್ಮಿ, ಲಕ್ಷ್ಮಿನರಸಪ್ಪ, ಲಕ್ಷ್ಮಿನರಸಮ್ಮ ಎಂದು ಹೆಸರಿಡುತ್ತಾರೆ. ಚಿಲಮತ್ತೂರಿನ ಅಡವಿಯಲ್ಲಿ ಕದರಿದ್ಯಾವರ ಕಣಿವೆಯಿದೆ. ನರಸಿಂಹನು ಚುಂಚುಲಕ್ಷ್ಮಿಯನ್ನು ವರೆಸಿ ವಿವಾಹವಾದ ಸ್ಥಳವಿದು. ಕಾಮದಹನದ ಹುಣ್ಣಿಮೆಯ ೭ನೇಯ ದಿನ ಕದರಿಯಲ್ಲಿ ನಡೆಯುವ ರಥೋತ್ಸವಕ್ಕೆ ೩ ದಿನ ಕಾಲ್ನಡಿಗೆಯಲ್ಲಿ ಬಂದು ಇಲ್ಲಿಂದ ತೀರ್ಥವನ್ನು ಪಡೆದು ಮತ್ತೇ ೩ ದಿನ ಹಿಂತುರಿಗಿ ನಡೆದೇ ಹೋಗಬೇಕು. ನಂತರ ೭ನೇ ತೀರ್ಥವನ್ನು ಹಾಕಿದ ನಂತರವೇ ರಥ ಕದಲುವುದೆಂಬ ನಂಬಿಕೆಯಿದೆ. ಬೇಡನಾಯಕರು ಕದರಿನರಸಿಂಹ ಮತ್ತು ಚುಂಚುಲಕ್ಷ್ಮಿಯನ್ನು ಆರಾಧಿಸುವ ಸಂಪ್ರದಾಯಗಳು ಬೆಳೆದುಬಂದಿದೆ.