.. ಯರಮಂಚನಾಯಕಮ್ಯಾಸಮಂಡಳಿಮಹಾಸಂಸ್ಥಾನದಅಧ್ಯಕ್ಷ

ಹಿನ್ನೆಲೆ

ಮ್ಯಾಸಬೇಡರ ಮಹಾಸಂಸ್ಥಾನದ ಮೊದಲ ಅಧ್ಯಕ್ಷನೇ ಯರಮಂಚಿನಾಯಕ. ಜಾತಿ ಇಲ್ಲದವರಿಗೆ ಜಾತಿಕೊಟ್ಟ ಮಹಾಜಾತ್ಯಾತೀತ ವ್ಯಕ್ತಿ. ನೆಲೆಯಿಲ್ಲದವರಿಗೆ ಒಂದು ನೆಲೆಯನ್ನು ಕಲ್ಪಿಸಿದ ಧೀಮಂತನಾಯಕ. ಉದಾರವಾದಿ, ಸುಧಾರಣವಾದಿ, ಸಂಘಟನೆ ಚತುರನಾಗಿ, ದಾನಶೂರನಾಗಿ ಮ್ಯಾಸಬೇಡರ ಸಮುದಾಯಕ್ಕೆ ನಾಯಕನಾಗಿ ನೇಮಕಗೊಳ್ಳುತ್ತಾನೆ ಯರಮಂಚಿ.

[1]

ಪುರಾಣಕಥೆ

ಈ ವಂಶವು ಉದಯವಾಗುವುದು ದೇವಾನುದೇವತೆಗಳ ಅನುಗ್ರಹದಿಂದ. ಕ್ರಿ.ಶ. ೬೦೩ (ಶ.ಕ. ೫೨೫) ಸಾಧಾರಣನಾಮ ಸಂವತ್ಸರದ ಮಾಘಶುದ್ಧ ೨ರಲ್ಲಿ ತ್ರಿಮೂರ್ತಿಗಳಿಂದ ಏಳು ಜನ ಋಷಿಗಳು ಉದಯಿಸುತ್ತಾರೆ. ಭೂಕೈಲಾಸದಲ್ಲಿ ವಿಷ್ಣು, ಬ್ರಹ್ಮ, ಮಹೇಶ್ವರರು ಕೆಂಪುತೊರೆ ಎಂಬ ನದಿತೀರಕ್ಕೆ ಜಲಕ್ರೀಡೆಯಾಡಿ ಮೂರು ಮೂರ್ತಿಗಳನ್ನು ಸ್ಥಾಪಿಸಿ ಅವುಗಳಿಗೆ ಸ್ನಾನಮಾಡಿಸಿ ವಿಷ್ಣು, ಬ್ರಹ್ಮ ಶಂಕರನೆಂದು ನಾಮವನ್ನು ಧರಿಸುತ್ತಾರೆ. ಶಂಕರನು ವಿಭೂತಿ ಧರಿಸಲು ಆ ವಿಭೂತಿ ರವೆಯು ಚಿಲುಮೆಯಲ್ಲಿ ಬೀಳಲು ಪರಮಾತ್ಮನು ಪಂಪಾದ್ರಿ ಬಸವನನ್ನು ಚಿಲುಮೆಯಲ್ಲಿ ಇಳಿಸುವನು. ಪಂಪಾದ್ರಿ ಬಸವಣ್ಣನ ಚುಟ್ಟುಗೊರಸೆಯಲ್ಲಿ ವಿಭೂತಿ ರವೆಯು ಸೇರುವುದು. ತ್ರಿಮೂರ್ತಿಗಳು ಕೈಲಾಸಕ್ಕೆ ಪ್ರಯಾಣ ಬೆಳೆಸಿದರು. ವಿಭೂತಿ ರವೆ ಕಾಲಲ್ಲಿ ಸೇರಿ ದೊಡ್ಡ ಗಾತ್ರದ ಹುಣ್ಣಾಗಿ ಬಸವಣ್ಣನಿಗೆ ಹಗಲುರಾತ್ರಿ ಕಳೆಯುವುದೇ ಕಷ್ಟವಾಗಿತ್ತು. ಈ ಬಸವಣ್ಣನ ಮೇಲೆ ಪರಮೇಶ್ವರ ಲೋಕಸಂಚಾರ ಮಾಡುವಾಗ ಗೋದಾವರಿ ತೀರಕ್ಕೆ ಬಂದನು. ಇಲ್ಲಿಗೆ ಬರಲು ೯ ತಿಂಗಳು ಆಯಿತು. ಹುಣ್ಣು (ಕುರುವು) ಒಡೆದು ಕೀವು ರಕ್ತ ಸೋರುವುದರೊಂದಿಗೆ ಶಿಶುವೊಂದು ಕೆಳಕ್ಕೆ ಬಿದ್ದಿತು. ಪರಮೇಶ್ವರನು ಕೈಲಾಸಕ್ಕೆ ಇಲ್ಲಿಂದ ಹೊರಟುಹೋದನು.

ಆ ದಟ್ಟ ಕಾಡಿನಲ್ಲಿ ಮಗುವಿನ ಅಳಲನ್ನು ಕೇಳುವರೇ ಇರಲಿಲ್ಲ. ಆ ರೋಧನವು ಕೆಂಪು ವನಕ್ಕೆ ಕೇಳಿತು. ಅಲ್ಲಿದ್ದ ಮಂದಗಿರಿ ರಾಜನ ಮೊಮ್ಮಕ್ಕಳಾದ ೫ ಜನ ಕಾಡು ಸಂಚಾರಿಗಳು ಈ ಬಾಲಕನನ್ನು ಎತ್ತಿ ಮುದ್ದಾಡಿದರು. ಅವನಿಗೆ ಸೆಟ್ಲುಗಿರಿ ಶುಕ್ಲಮಲ್ಲಿರಾಜನೆಂದು ನಾಮಕರಣ ಮಾಡಿದರು. ಕೆಂಪು ವನದಲ್ಲಿ ಈ ಮಗುವಿಗೆ ಬಿದಿರು ಅಕ್ಕಿ, ಅಡವಿಜೇನು ಇತರ ಗೆಡ್ಡೆಗೆಣಸುಗಳನ್ನು ಕೊಟ್ಟು ಸಾಕುತ್ತಿದ್ದರು. ಹೀಗೆ ಬೆಳೆದು ಪ್ರಬುದ್ಧಮಾನಕ್ಕೆ ಬಂದಾಗ ಮಂದಗಿರಿ ಅರಸನ ಮಗಳಾದ ದಾನಸಾಲಮ್ಮನನ್ನು ಈ ಶುಕ್ಲಮಲ್ಲಿರಾಜನಿಗೆ ಮದುವೆಮಾಡಿದರು. ನೆರೆದಿದ್ದ ಅಡವಿ ಚೆಂಚರು ಸಂಪ್ರದಾಯ ಕೆಟ್ಟು ಹೋಯಿತೆಂದು ಕಣ್ಮರೆಯಾದರು. ದಾನಸಾಲಮ್ಮನನ್ನು ಕರೆದುಕೊಂಡು ಶುಕ್ಲರಾಜ ಶುಕ್ಲಗಿರಿ ಬೂದಿಕೋಟೆಯಲ್ಲಿ ನೆಲೆಸಿದ್ದನು. ಹೀಗಿರುವಾಗ ಒಮ್ಮೆ ಧಾರಾಕಾರವಾಗಿ ಮಳೆ ಸುರಿಯಿತು. ಇತರರಂತೆ ಅಂಭೋಜಿ – ತುಂಭೋಜಿ ನಗರದ ಪ್ರಜೆಗಳು ಹೊಲಗಳಿಗೆ ಬೀಜವನ್ನು ಬಿತ್ತುತ್ತಿದ್ದರು. ಇದನ್ನು ಕಂಡ ದಾನಸಾಲಮ್ಮ ತನ್ನ ಗಂಡನಿಗೆ ಮಂದಗಿರಿಗೆ ಹೋಗಿ ನನ್ನ ತಮ್ಮ ಕಾಮಗೇತಿ ಭೂಪಾಲನ ಹತ್ತಿರ ಕುಂಬಳಬೀಜವನ್ನು ತೆಗೆದುಕೊಂಡು ಬಾ ಎಂದು ಹೇಳಿ ಕಳುಹಿಸಿದ್ದಳು. ಇದರಂತೆ ಶುಕ್ಲಮಲ್ಲಿರಾಜ ಮಂದಗಿರಿಗೆ ಹೋಗುವ ದಾರಿ ಮಧ್ಯದಲ್ಲಿ ಪರಮೇಶ್ವರನು ಬಡಜಂಗಮರೂಪಿಯಾಗಿ ಕಾಣಿಸಿಕೊಂಡು ೭ ಕುಂಬಳ ಬೀಜಗಳನ್ನು ಕೊಟ್ಟನು. ಅವನು ಕೊಟ್ಟ ೭ ಬೀಜಗಳನ್ನು ತಂದು ಹೆಂಡತಿಗೆ ಕೊಟ್ಟ. ದಾನಸಾಲಮ್ಮ ಸೂರ್ಯನ ಪರಮಭಕ್ತಳು. ಅವನನ್ನು ಕುರಿತು ತಪಸ್ಸು ಮಾಡುವಾಗ ಸೂರ್ಯನು ಅವಳ ತಪಸ್ಸಿಗೆ ಮೆಚ್ಚಿ ಪೂರ್ವಗಿರಿ ಸಮುದ್ರದಲ್ಲಿ ಸ್ನಾನ ಮುಗಿಸಿ ಅಲಂಕಾರದೊಂದಿಗೆ ಕಾಣಿಸಿಕೊಂಡಾಗ ದಾನಸಾಲಮ್ಮ ಅವನನ್ನು ಭ್ಮರಿಸುವಳು. ಇಂಥ ಹೊತ್ತಿನಲ್ಲಿ ೭ ಕುಂಬಳಿ ಬೀಜಗಳನ್ನು ತಿಪ್ಪೆಯಲ್ಲಿ ಹಾಕಿದಾಗ ಫಲವತ್ತಾಗಿ ಬೆಳೆದ ಬಳ್ಳಿಗಳು ಜನಸಾಮಾನ್ಯರಿಗೆ ಕಾಟಕೊಡಲಾರಂಭಿಸಿದವು. ಮಂದಗಿರಿ ಪ್ರಜೆಗಳು ರಾಜನಿಗೆ ದೂರು ಸಲ್ಲಿಸಿದರು. ರಾಜಾಜ್ಞೆಯಿಂದ ಬಳ್ಳಿಯನ್ನು ಏಳು ದಿನದಲ್ಲಿ ಕಿತ್ತು ನಾಶಪಡಿಸದಿದ್ದರೆ ಶಿಕ್ಷೆಗೆ ಒಳಗಾಗುವರೆಂದು ಡಂಗುರ ಸಾರಿಸಿದಳು. ಪ್ರಜೆಗಳು ದಾನಸಾಲಮ್ಮನಿಗೆ ಬಂಜೆ, ಲೋಬಿ ಎಂದೆಲ್ಲಾ ಮೂದಲಿಸುತ್ತಿದ್ದರು. ಬಳ್ಳಿಯು ಬಂಜೆ ಇವಳು ಬಂಜೆ ಎಂಬಂಥ ಮಾತುಗಳು ಇವಳ ಮನವನ್ನು ಕಲುಕಿದವು. ದಾನಸಾಲಮ್ಮ ತನ್ನ ಗಂಡನೊಂದಿಗೆ ಬಳ್ಳಿ ಹತ್ತಿರ ಬಂದು ಕೀಳಲು ದೊಡ್ಡದೊಂದು ಕುಂಬಳಕಾಯಿ ಕಾಣಿಸಿತು. ಅದನ್ನು ಮನೆಗೆ ತಂದು, ಪುರೋಹಿತರನ್ನು ಕರೆಸಿ ನಡೆದ ಪ್ರಸಂಗ ವಿವರಿಸಿದರು. ಮೊದಲ ಫಲ ತಿನ್ನಬಾರದೆಂದು ಬ್ರಾಹ್ಮಣರಿಗೆ ಅದನ್ನು ದಾನಕೊಟ್ಟರು. ಅದನ್ನು ತಂದು ಮನೆಯಲ್ಲಿ ಒಡೆದರೆ ಅದು ಹೋಳಾಗಲಿಲ್ಲದ್ದನ್ನು ಕಂಡ ಬ್ರಾಹ್ಮಣ ದಾನಸಾಲಮ್ಮನಿಗೆ ಹಿಂದಕ್ಕೆ ಕೊಟ್ಟು ಹೋದ. ಚಿಂತೆಗೀಡಾದ ದಾನಸಾಲಮ್ಮ ೧೨ ಜನ ಆಯಗಾರರಿಗೆ ಒಡೆಯಲು ಕೊಟ್ಟಿದ್ದರೆ ಅವರಿಂದಲೂ ಆಗಲಿಲ್ಲ. ಕೋಪೋದ್ರಿಕ್ತಳಾದ ನಾಗತಿ ಖಡ್ಗದಿಂದ ೭ ಭಾಗವಾಗಿ ತುಂಡರಿಸಿ ೭ ದಿಕ್ಕಿಗೆ ಹಾಕಿದಳು. ಗಂಡನೊಂದಿಗೆ ಪಾಲಗಿಡ ಸಮುದ್ರಕ್ಕೆ ನೀರು ತರಲು ಹೋದ ದಾನಸಾಲಮ್ಮನಿಗೆ ನೀರು ತುಂಬುವಾಗ ತನ್ನ ಸ್ತನಗಳಲ್ಲಿ ಹಾಲು ಉಕ್ಕುತ್ತಿತ್ತು (ಕುಚನೇತ್ರ). ನನಗೆ ಸಂತಾನವಿಲ್ಲ ಇದೇನಾಶ್ಚರ್ಯ ಹಾಲು ಬರುತ್ತಿದೆ ಎಂದು ದುಃಖಿತಳಾದಳು.

ತುಂಡರಿಸಿದ ಕುಂಬಳಕಾಯಿಂದ ತುಂಬಿನಲ್ಲಿ ದೊಡ್ಡಕ್ಕರಾಯಮ್ಮ, ೧ನೇ ಭಾಗಭಾನುಕೋಟಿರಾಜು, ೨ನೇ ಭಾಗ ತಿಪ್ಪಂಡರಾಜು, ೩ನೇ ಕಾಟಮಲೆರಾಜು, ೪ನೇ ಭಾಗ ಕೊಂಡಮಲೆ ರಾಜು, ೫ನೇ ಭಾಗ ಚಿನ್ನಪ್ಪರಾಜು, ೬ನೇ ಭಾಗ ಕಾಕಮಂಚಿರಾಜು, ೭ನೇ ಭಾಗ ಶೆಟ್ಲುಪಟ್ಟಪ್ಪರಾಜು ಜನಿಸಿದರು. ೭ ದಿನಗಳಿಗೆ ಮೊದಲು ಹುಟ್ಟಿದ ದೊಡ್ಡಕ್ಕೆ ರಾಯಮ್ಮ ೭ ಜನ ತಮ್ಮಂದಿರನ್ನು ಒಂದೇ ತೊಟ್ಟಿಲಿನಲ್ಲಿ ತೂಗುತ್ತಾ ಸಾಕಿ ಸಲಹುತ್ತಿದ್ದಳು. ಕಣ್ಣಾರೆ ಕಂಡ ಶುಕ್ಲಮಲಿರಾಜ, ದಾನಸಾಲಮ್ಮನವರು ಈ ಘಟನೆಯಿಂದ ಸತ್ಯಭಂಗವಾಯಿತೆಂದು ಮರಳಿ ಶುಕ್ಲಗಿರಿಗೆ ನಡೆದರು. ಆ ಪರ್ವತವು ಮಂದಗಿರಿ ಭೂಪಾಲನಾದ ಮಂದಕಾಮಗೇತಿರಾಜನಿಂದ ಅಲಂಕೃತಗೊಂಡಿತ್ತು. ಸೂರ್ಯನ ಕರುಣದಿಂದ ಉದ್ಭವಿಸಿದ ಶುಕ್ಲಮಲ್ಲಿರಾಜನನ್ನು ನೋಡಿದ ನಂದರಾಜನು ಕೃಷ್ಣನಾಮ ತೀರ್ಥದಿಂದ ಅವನಿಗೆ ನಮಸ್ಕರಿಸಿದನು. ಹಣೆಯಲ್ಲಿ ನಾಮವಿಟ್ಟುಕೊಂಡು ಶುಕ್ಲರಾಜನ ಪಾದವಿಡಿದು ನಮ್ಮಗಳಿಗೆ ನೀನು ಗುರುವಾಗೆಂದು ಬೇಡಿಕೊಂಡ. ಹೀಗಿರುವಾಗ ಪಾಲಗಿರಿ ಸಮುದ್ರ ಉಕ್ಕಿ ಶುಕ್ಲಗಿರಿ ಪರ್ವತವನ್ನು ಆವರಿಸಿ ಶುಕ್ಲ ಮಲ್ಲಿರಾಜು, ಮಂದರಾಜು ಇಬ್ಬರೂ ಮರಣ ಹೊಂದಿದರು.

ದೊಡ್ಡ (ಪೆದ್ದ) ಕ್ಕರಾಯಲದೇವಿ ತನ್ನ ೭ಜನ ತಮ್ಮಂದಿರನ್ನು ಬಂಗಾರು ರಾಜಕೋಟೆಯ ನೆಲಮಾಳಿಗೆಯಲ್ಲಿಟ್ಟುಕೊಂಡು ಸಾಕುತ್ತಿದ್ದಳು. ಮಂದಗಿರಿ ಸಂತತಿಗೆ ಸೇರಿದ ಗುಪ್ತ ಬೊಮ್ಮತ್ತರಾಜು, ಅವನ ವಂಶದಲ್ಲಿ ಜಡಲಬೊಮ್ಮತ್ತರಾಜು, ಮರಿಬೊಮ್ಮತ್ತರಾಜು, ಹೊಟ್ಟೆಬೊಮ್ಮತ್ತ ರಾಜು ಮತ್ತು ಬಂಗಾರಿ ಬೊಮ್ಮತ್ತರಾಜು, ಯರಪೋತು ಕರಿಬೊಮ್ಮ, ಇವರೆಲ್ಲರನ್ನು ಕರೆಸಿದ ದೊಡ್ಡಕ್ಕರಾಯಲದೇವಿ ಆನೆ – ಒಂಟಿಗಳನ್ನು ಹಿಡಿದುತಂದು, ದೊಡ್ಡ ಬಂಡೆ ಮೇಲೆ ಉಕ್ಕಿನ ಕಡಲೆಯನ್ನು ಬಿತ್ತಿಸಿ, ಅಫಸಲನ್ನು ಕಾಯಲು ಯರಿಪೋತು ಕರಿಬೊಮ್ಮನನ್ನು ನೇಮಿಸುವಳು. ಇವನಿಗೆ ದೇವಿಯ ಬೇವು ಭಂಡಾರದಿಂದ ೭೭ ಮಣ ಉಕ್ಕಿನ ಚಾಟಿಯನ್ನು ನಿರ್ಮಿಸಿ ಕೊಡುತ್ತಾಳೆ.

ಕರಿಬೊಮ್ಮನು ಚಾಟಿ ತೆಗೆದುಕೊಂಡು ಕಡಲೆ ಹೊಲಕ್ಕೆ ಹೋಗಲು ತುಂಬಾ ಗರ್ಭವಾದ ೭ ಸೂರ್ಯದೇವನ ಕುದುರೆಗಳು ಕಡಲೆಗಿಡಗಳನ್ನು ಮೇಯುತ್ತಿದ್ದವು. ಇವನು ತನ್ನ ಚಾಟಿಯಿಂದ ಹೊಡೆಯಲು ಅದು ಸಿಡಿಲಿನಂತೆ ಅಪ್ಪಳಿಸಿ ಶಬ್ದ ಕೇಳಿ ಬಂತು. ೭ ಕುದರೆಗಳು ಪಿಂಡಗಳನ್ನು ಅಲ್ಲೇ ಹಾಕಿ ಗಗನಮಾರ್ಗವಾಗಿ ಹೋದವು. ಅವುಗಳನ್ನು ತಂದು ದೊಡ್ಡಕ್ಕ ರಾಯಲದೇವಿಗೆ ಕೊಟ್ಟಾಗ ಅವುಗಳನ್ನು ರಕ್ಷಣೆ ಮಾಡಿದಳು. ಕ್ರಮೇಣ ೭ ಜನ ಭಾನುಕೋಟಿರಾಜು ೭ ದಿನಕ್ಕೆ ದೊಡ್ಡವಳಾದ ಅಕ್ಕರಾಯಲದೇವಿಯನ್ನು ಸಂದರ್ಶಿಸಿ ತಮ್ಮ ಪೂರ್ವಚರಿತ್ರೆಗಳನ್ನು, ವಂಶಪರಂಪರೆಗಳ ವಿವರಗಳನ್ನು ಕೇಳಿಕೊಂಡರು. ಆಗ ಅವಳು ನಮ್ಮ ತಾತ ಸೂರ್ಯನು, ತಂದೆ ಶುಕ್ಲಮಲ್ಲಿರಾಜು, ತಾಯಿ ದಾನಸಾಲಮ್ಮ, ನಮ್ಮದು ಸೂರ್ಯ ಶುಕ್ಲಮಲ್ಲಿನಾಯ್ಕನ ಗೋತ್ರವೆಂದು ಹೇಳಿದಳು. ಭಾನುಕೋಟಿರಾಜರು ಸೂರ್ಯನ (ತಾತ) ಸಂದಿಸಲಿಕ್ಕೆ ಹೋಗುತ್ತೇವೆಂದಾಗ ಅಕ್ಕ ರಾಯಲಮ್ಮ ತಮ್ಮಂದಿರಾ ಹಿಂದೆ ಸೂರ್ಯನನ್ನು ಕಮಲಗಂದಿ ಪುಷ್ಪದೋಪಾದಿಯ ತಲೆಯಲ್ಲಿ ಮುಡಿಸಬೇಕೆಂದು ಜಟಂಗಿ, ಜಟಾಯು ಎಂಬ ಅಣ್ಣತಮ್ಮಂದಿರು ಗಗನ ಮಾರ್ಗವಾಗಿ ಹೋಗುವಾಗ ಸೂರ್ಯನ ಕಿರಣಗಳಿಗೆ ಸುಟ್ಟು ಬೂದಿಯಾಗಿ ಜಟಂಗಿ ಬೀಳಲು, ಜಟಾಯುವು ದೇಹವೆಲ್ಲ ಸುಟ್ಟು ಹೋದರೂ, ಮತ್ತೆ ಪ್ರಯತ್ನಿಸಿ ಶಾಪಕ್ಕೊಳಗಾದವು. ಜಟಾಯು ಕಿಷ್ಕಿಂಧೆ ಸರೋವರದಲ್ಲಿ ಬಿದ್ದು ಪ್ರಾಣಬಿಟ್ಟನು ಎಂದು ಹೇಳಿದಳು. ಭಾನುಕೋಟಿ ರಾಜರು ನಾವು ನಿಜವಾದ ಸೂರ್ಯನ ವಂಶದವರಾದ ರೆಸುಡುವುದಿಲ್ಲವೆಂದು ೭ ಕುದುರೆಗಳನ್ನೇರಿ ಹೋದರು. ಸೂರ್ಯನ ದರ್ಶನ ಸಿಕ್ಕು ನೀವಾರೆಂದು ವಿಚಾರಿಸಲು ಭಾನುಕೋಟಿ ರಾಜರು ನಿನ್ನ ರಭಸಕ್ಕೆ ಹುಟ್ಟಿದ ಮೊಮ್ಮಕ್ಕಳೆಂದು ಹೇಳುತ್ತಾರೆ. ಇವರ ಸತ್ಯ, ಪ್ರಮಾಣಿಕತೆ ಕಂಡ ಸೂರ್ಯದೇವನು ನೀವು ವಡೇಲು ಅಜ್ಜನವರು ಮತ್ತು ಸಪ್ತೃಷಿಗಳ ನಾಮವನ್ನು ಇಟ್ಟುಕೊಂಡು ಬಲಮುರಿ ಶಂಖು, ನಾಗಮುರಿಬೆತ್ತ, ಎತ್ತಿನ ಸುರಾಯಿ, ಮುತ್ತಿನ ಕಾಲುಪೆಂಡೆ, ಸೂರನಂದನ ಅಲಗು, ಧರ್ಮಗಿರಿ ಗದ್ದುಗೆ, ಭೂಚಕ್ರ ಗೊಡಗು, ಕೋರಿನಿಶಾನಿ, ಖಂಡುಗದ ಗಂಟೆ – ಇವಿಷ್ಟು ಗೌರವ ಬಿರುದುಗಳನ್ನು ಕೊಟ್ಟು ಭಾನುಕೋಟಿ ರಾಜರನ್ನು ಕಳುಹಿಸಿದ. ಬೂದಿಕೋಟೆಗೆ ಬಂದ ಅವರು ಅಲ್ಲಿ ಕಂಚಿನಕೋಟೆ, ರನ್ನದ ಗೋಪುರ ಕಟ್ಟಿ ಬಂಗಾರು ಭಾನುಕೋಟಿ ಎಂದು ಹೆಸರಿಟ್ಟು ನಗರವನ್ನಾಳುತ್ತಿದ್ದರು.

ಯರಮಂಚಿನಾಯಕನ ಉದಯ

ಭಾನುಕೋಟಿ ರಾಜನಿಗೆ ಯರಮಂಚಿನಾಯಕನು ಜನಿಸುವನು. ಕ್ರಮೇಣ ಇವನು ದೊಡ್ಡವನಾಗುತ್ತಲೆ ಅಂಭೋಜಿನಗರವನ್ನು ಸೇರಿ ಅಂಭೋಜಿರಾಯರಲ್ಲಿ ತ್ರಿಮೂರ್ತಿಗಳನ್ನು ನಿರ್ಮಾಣ ಮಾಡಿದ. ಒಂಟಿಕೊಂಬು ಬೆಲ್ಲಿ (ಬಲ್ಲಿ) ಆಕಳು ಪಂಪಾದ್ರಿ ಬಸವನನ್ನು ಶ್ರೀಕೃಷ್ಣನ ಪದವಿಯಿಂದ ಯರಮಂಚಿನಾಯಕನಿಗೆ ಕೊಟ್ಟಾಗ ಅದನ್ನು ಹೊಡೆದುಕೊಂಡು ಗೋಕರ್ಣಪರ್ವತಕ್ಕೆ ಬರುವನು. ಅಲ್ಲಿನ ಪಶುಪಾಲಕರಾದ ಕೆಂಗುರಿ ಗೊಲ್ಲರನ್ನು ತನ್ನ ಗೋತ್ರಕ್ಕೆ ಸೋರಿಸಿಕೊಂಡ. ಕೆಂಗುರಿ ಪದವಿಯನ್ನು ತೆಗೆದುಕೊಂಡು ಕರೇಪೂಜಾರ‍್ಲುಪುರಕ್ಕೆ (ಪೂಜಾರಹಳ್ಳಿ ಹಳೆಊರು) ಬಂದು ಮಂದಗಿರಿ ವೈಕುಂಠ ಶಂಕಿನಿಂದ ಹುಟ್ಟಿದ ತಾತಾಚಾರಿ – ತಿರುಮಲಾಚಾರಿ ಎಂಬ ಶರಣರನ್ನು ಭೇಟಿ ಮಾಡಿ ಕೆಲವು ಬಿರುದಾವಳಿಗಳನ್ನು ಪಡೆದು ಏಳುಮಳೇಲ್‌ಪುರವನ್ನು ಸೇರುವನು. ಅಲ್ಲಿ ಇಮ್ಮಡಿ ರಾಜು, ಮುಮ್ಮುಡಿ ರಾಜರನ್ನು ಸೇರಿಸ ಮುಮ್ಮುಡಿರಾಜನ ಮಗ ಮಳೇಲು ರಾಜನನ್ನು ಗೆದ್ವಾಲರಾಜ ಸೆರೆ ಹಿಡಿದಿದ್ದ. ಇವರೆಲ್ಲ ಸೇರಿ ಗೆದಗಿರಿಪುರಕ್ಕೆ ಹೋಗಿ ಗೆದ್ವಾಲ್‌ಪುರವನ್ನು ಜಯಿಸಿ, ಗೆದ್ವಾಲ್ ರಾಜನನ್ನು ಯರಮಂಚಿನಾಯಕ ಗೆದ್ದನು. ಕೆಲವು ಬಿರುದಾವಳಿಗಳನ್ನು ಪಡೆದು, ಆತನ ಮಗಳು ನನ್ನಮ್ಮನನ್ನು ಕರೆದುಕೊಂಡು, ಮಳೇಲು ರಾಜನನ್ನು ಬಿಡಿಸಿಕೊಂಡು ಬರುತ್ತಾರೆ. ಅಲ್ಲಿನ ಕಾಗೆ – ಗುಬ್ಬಿ, ಹದ್ದು – ಪಕ್ಷಿಗಳನ್ನು ಬಿಡದೆ ತರುತ್ತಿರುವಾಗ ಗೆದ್ವಾಲ್ ರಾಜನು ಯರಂಚಿಗೆ ಕೋರಿಕೊಂಡು ಅವುಗಳನ್ನು ಮರಳಿ ಪಡೆದುಕೊಂಡನು. ಅಲ್ಲಿಂದ ಶಾಂತಗಿರಿಗೆ ಬರಲು ಪರಶುರಾಮರಿಂದ ನಿರ್ಮಿತವಾದ ವೇದ ವ್ಯಾಸಮುನಿಯನ್ನು ಕೂಡ ಅಂಭೋಜಿ ಮಗಳು ಅಂಬ ಅಂಬಾಲಿಯರಿಗೆ ಸಂತಾನ ಪ್ರಾಪ್ತಿಸಿ, ಶಿವಗಂಗೆ ಮಾಳಮ್ಮಗೆ ಅಂಬೂವಾಸಿಯನ್ನು ಕೊದು, ಕಿಷ್ಕಿಂಧ ಪರ್ವತದಲ್ಲಿ ಕೃಷ್ಣನ ಶಾಪದಿಂದ ಕಿರಾತಕನಾದವನಿಗೆ ವಾಲ್ಮೀಕಿ ಪದವಿಯನ್ನು ಕೊಟ್ಟನು. ನಂತರ ಕಾಲನೇಮ ಪರ್ವತಕ್ಕೆ ಹೋಗಿ ಕಾಲಭೈರವ ಬೋರವನನ್ನು ನಿರ್ಮಾಣ ಮಾಡುತ್ತಾನೆ. ಇವೆಲ್ಲ ಕೆಲಸಗಳನ್ನು ಮುಗಿಸಿ ಬಂಗಾರುಭಾನು ಕೋಟೆಗೆ ಬರುವಾಗ ೩೦೦ ಸಾವಿರ ದೇವಕಂಪಳ ಕಲೆಸಿ ಭಾನುಕೋಟಿ ನಗರವನ್ನು ಆಳುತ್ತಿದ್ದನು. ಯರಮಂಚಿನಾಯಕ ಈ ಕಂಪಳಕ್ಕೆ ಬೋರವನೇ ದೇವರೆಂದು, ೩ ಮಂದಿ ಪೂಜಾರಿ, ೩ ಮಂದಿ ದಾಸಯ್ಯಗಳೆಂದು ನೇಮಿಸಿದನು.

ಮ್ಯಾಸಮಂಡಳಿ ನಿರ್ಮಾಣ

ನಾಯಕ ಜಾತಿಯನ್ನು ಸುಗಮವಾಗಿ ಬೆಳೆಸಲು ಎಲ್ಲರೂ ಐಕ್ಯವಾಗಿರಲು ಸನ್ನದ್ಧರಾದರು. ಯರಮಂಚಿನಾಯಕನು ಸತ್ಯ – ಶಾಪಗಳನ್ನು ಜನರಿಗೆ ತಿಳಿಸಲು ಮುನ್ನೂರು ಸಾವಿರ ದೇವಕಂಪಳಕ್ಕೆ ಮೇಸಮಂಡಲಿ ಎಂದು ನಾಮಕರಣ ಮಾಡಿದ. ಬಂಗಾರ ಭಾನುಕೋಟಿ ಪಟ್ಟಣ ಬಿಟ್ಟು ಮೋಸ ಮಂಡಲಿಯನ್ನು ಕಲ್ಯಾಣಪುರಕ್ಕೆ ತಂದ ನಂತರ ನಿಡುಗಲ್ಲಿಗೆ ತಳವೂರಿದ. ನಿಡಗಲ್ಲಿನಲ್ಲಿ ೭ ಪುರಗಳನ್ನು ನಿರ್ಮಿಸಿ ಸತ್ಯ ಪ್ರಮಾಣಿಕತೆಯಿಂದ ಯರಮಂಚಿನಾಯಕನ ದಾಸನಾದ ಗಗ್ಗರಿದಾಸರಿ ಸತ್ಯದಿಂದ ಮೇಸ ಮಂಡಳಿಯನ್ನು ಆಳುತ್ತಿದ್ದ. ಕಾಲಾಂತರದಲ್ಲಿ ನಿಡಗಲ್ಲು ಅರಸನಾದ ಪಟ್ಟಳ್ಳಿನಾಯ್ಕನಿಗೆ ಮತ್ತು ಮೇಸ ಮಂಡಲಿಗೆ ಯುದ್ಧ ಜರುಗಿ ಯರಮಂಚಿನಾಯಕ, ಗಗ್ಗರಿದಾಸರಿಯನ್ನು ಅವನು ಪರೀಕ್ಷೆಗೊಳಪಡಿಸಿದನು. ನಿಮ್ಮ ಗಗ್ಗರಿದಾಸರಿಯನ್ನು ನಮ್ಮ ಮನೆಗೆ ಊಟಕ್ಕೆ ಕಳುಹಿಸಬೇಕೆಂದು ಯರಮಂಚಿಗೆ ಕೇಳಿಕೊಂಡರು. ದಾಸನು ಇನ್ನೊಬ್ಬರ ಮನೆಯಲ್ಲಿ ಊಟಮಾಡುವುದಿಲ್ಲ. ಬೇಕೆಂದರೆ ಲಂಕಣಿದೊಣಿಯ ಹತ್ತಿರ ಗಾರುಕುಣಿಗೆ ಅನ್ನವನ್ನು ನೀಡಿದರೆ ಕಳುಹಿಸುವೆ ಎಂದಾಗ ಪಟ್ಟಳ್ಳನಾಯ್ಕನು ಒಪ್ಪಿ ಅದನ್ನು ಮಾಡುತ್ತಾನೆ. ಕೋಳಿಸಾರು ಅನ್ನವನ್ನು ಗಾರುಕುಣಿಗೆ ಹಾಕಲು ಗಗ್ಗರಿದಾಸರಿ ಲಂಕನ ದೋಣಿಯಲ್ಲಿ ನಾಮತೀರ್ಥವನ್ನು ಮಾಡಿಬಂದು ಯರಮಂಚಿನಾಯಕನ ರ್ಧಯಾನ ಮಾಡಲು ಕುಳಿತ. ಅನ್ನವನ್ನು ತಿನ್ನುವಾಗ ಕಣ್ಣುಗುಡ್ಡೆ ಜೋಲು ಬೀಳಲು ಅದನ್ನಿಡಿದು ಯರಮಂಚಿನಾಯಕನ ಹತ್ತಿರಕ್ಕೆ ಬಂದುಳಿಸುತ್ತಾನೆ. ಅದಕ್ಕೆ ಮೇಸಮಂಡಳಿಯವರು ಪಟ್ಟಳ್ಳನಾಯಕ್ಕನನ್ನು ಹಿಡಿದು ವಿಚಾರ ಮಾಡುವಾಗ ತಪ್ಪನ್ನು ಒಪ್ಪಿಕೊಂಡನು. ಅವರಿಗೆ ಭಂಗ ತರುವ ಪ್ರಯತ್ನ ಇದಾಗಿದ್ದಿತು. ಒಪ್ಪಿಕೊಂಡಂತೆ ಆ ನಾಯಕ ಯರಮಂಚಿಗೆ ೩ ಸೇರು ಬಂಗಾರ ಮಲ್ಲಿಗೆ ಹೂ, ೩ ಸೇರು ಬೆಳ್ಳಿ ಮಲ್ಲಿಗೆ ಹೂ ಕಪ್ಪ – ಕಾಣಿಗೆ ಕೊಟ್ಟು ಹೋಗುವನು. ಯರಮಂಚಿನಾಯಕ ಅಂಗೈಯಲ್ಲಿ ಮಲ್ಲಿಗೆ ಹೂಗಳನ್ನು ಹಿಡಿದು ಗಗ್ಗರಿದಾಸರಿ ಕಣ್ಣು – ಗುಡ್ಡೆಗಳಿಗೆ ಹಾಕಿ ಒತ್ತಿದಾಗ ಮೊದಲಿನಂತೆ ಆದವು. ಗಗ್ಗರಿದಾಸರಿಗೆ ಯರಮಂಚಿನಾಯಕನು ‘ಗುಡ್ಡಬೋರ’ನೆಂದು ಹೆಸರಿಟ್ಟ. ತನ್ನ ಮೇಸ ಮಂಡಳಿಯನ್ನು ಕರೆದುಕೊಂಡು ಹೋಗಿ ಪಟ್ಟಳ್ಳನಾಯ್ಕನ ೧೨ ಜಲಿಗೆ ಎಮ್ಮೆಗಳನ್ನು ಹೊಡೆದುಕೊಂಡು ಬಂದರು. ಮೇಸ ಮಂಡಳಿಯವರು ಎಮ್ಮೆಗಳನ್ನು ಕೊಯ್ದು ಮಡಿಕೆಯಲ್ಲಿ ಬೇಯಿಸಲು ಪಟ್ಟಳ್ಳನಾಯ್ಕನು ದಂಡುದಳವನ್ನು ತೆಗೆದುಕೊಂಡು ಗಗ್ಗರಿದಾಸರಿ ನನ್ನ ಎಮ್ಮೆಗಳನ್ನು ಏಕೆ ಕೊಯ್ದನೆಂದು ವಿಚಾರಿಸಲು, ದಾಸರಿ ಒಪ್ಪಿಕೊಳ್ಳಲಿಲ್ಲ. ನಿನ್ನ ಎಮ್ಮೆಗಳನ್ನು ಕದ್ದಿಲ್ಲ. ವದ್ದಿನಕುಂಟೆ, ದದ್ದೇನಹಳ್ಳಿ, ರಂಗಸಮುದ್ರಗಳಲ್ಲಿ ಹೋಗಿ ರತರ ಬಳಿ ಕುಂಬಳಕಾಯಿ ತಂದು ಕುದಿಯಲು ಇಟ್ಟಿರುವೆವು ಎನ್ನುತ್ತಾನೆ. ಪಟ್ಟಳ್ಳನಾಯಕ ಒಪ್ಪದೆ ಹೋಗಿ ನೋಡಿದಾಗ ಕುಂಬಳ ತೊಳ (ವಪ್ಪು) ಹೊಳೆಯುತ್ತಿದ್ದವು ಆ ಪಾತ್ರೆಯಲ್ಲಿ. ಎಮ್ಮೆಗಳನ್ನು ಸಾಯಿಸಿಲ್ಲವೆಂದು ಪಟ್ಟಳ್ಳನಾಯಕನ ಮಾತು ಸುಳ್ಳಾಯಿತು.

ಗಾದರಿಪಾಲನಾಯಕನ ತಾಣಕ್ಕೆ ಪ್ರಯಾಣ

ಯರಮಂಚಿನಾಯಕನು ಕಾಲಕಳೆದಂತೆ ಮೇಸಮಂಡಳಿಯನ್ನು ತೆಗೆದುಕೊಂಡು ಮುಂಡೆ ಬಂಡೆಗೆ ಹೋಗುವನು. ಇಲ್ಲಿ ವಾಸಮಾಡುತ್ತಿರುವಾಗ ಇತರರ ಪರಿಚಯವು ಆಯಿತು. ಚಿತ್ತಯ್ಯ, ಕಾಟಯ್ಯ, ಗಾದರಿಪಾಲನಾಯಕರು ಪಶುಗಳನ್ನು ಮೇವು ನೀರಿಗಾಗಿ ಹೊಡೆದುಕೊಂಡು ಸೆಟ್ಟೂರು ಕಾವಲಿಗೆ ಬಂದಿದ್ದರು. ರೊಪ್ಪ ಕಟ್ಟಿಕೊಂಡು ಜೀವನ ಮಾಡುವಾಗ ಒಂದು ದಿನ ಗಾದರಿಪಾಲನಾಯಕನನ್ನು ಚಿತ್ತಯ್ಯ – ಕಾಟಯ್ಯ, ನೀನು ಹಾಲು ಮೊಸರನ್ನು ಮಾಡಿಕೊಂಡು ಬಾ ಎಂದು ಆಕಳುಗಳನ್ನು ಮೇಯಿಸಲಿಕ್ಕೆ ಹೊಡೆದುಕೊಂಡು ಹೋದರು. ರೊಪ್ಪದಲ್ಲಿ ಗಾದರಿಪಾಲನಾಯಕನಿದ್ದನು. ಆ ಕಾವಲಿನೊಳಗೆ ಹೆಣ್ಣು – ಗಂಡು ಹುಲಿಗಳು ಮರಿಗಳನ್ನು ಕರೆದುಕೊಂಡು ರೊಪ್ಪಕ್ಕೆ ಬರುತ್ತವೆ. ಅಲ್ಲಿದ್ದ ಗಾದರಿಪಾಲನಾಯಕ ಅವುಗಳಿಗೆ ಶರಣಾಗಿ ನಮ್ಮ ದನಕರುಗಳನ್ನು ಬೇಟೆಯಾಡಬೇಡಿರೆಂದು ಕೇಳಿಕೊಂಡ. ಹುಲಿ ದಂಪತಿಗಳು ಸಹ ಪರಸ್ಪರ ಚರ್ಚಿಸಿ ಅವನೊಂದಿಗೆ ಪ್ರಮಾಣವನ್ನು ಮಾಡುತ್ತವೆ. ಹುಲಿಮರಿಗಳನ್ನು ಇವನ ರೊಪ್ಪಕ್ಕೆ ಬಿಟ್ಟು ಹುಲಿಗಳು ಹೊರಟುಹೋದವು. ಗಾದರಿಪಾಲ ನಾಯಕನು ಹುಲಿಮರಿಗಳನ್ನು ರೊಪ್ಪದಲ್ಲಿ ಬಿಟ್ಟು ಹಾಲು ಮೊಸರನ್ನು ತೆಗೆದುಕೊಂಡು ಸೆಟ್ಟೂರಿಗೆ ಹೋಗುವನು. ಸೆಟ್ಟೂರಿನಲ್ಲಿ ಸೊಟ್ಟಪ್ಪನ ಮಗಳು ಕಾಮವ್ವ – ಎಂಬಾಕೆಯು ಇವನನ್ನು ಮೋಹಿಸಿ ಅಲ್ಲೆ ಉಳಿಯಲು ಅವನಿಗೆ ತಿಳಿಸಿದಳು. ಹುಲಿಮರಿಗಳನ್ನು ಮರೆತ ನಾಯಕ ರಾತ್ರಿ ಅಲ್ಲಿ ತಂಗಿದ್ದು, ಇತ್ತ ತಿಳಿಯಲಿಲ್ಲ. ಚಿತ್ತಯ್ಯ, ಕಾಟಯ್ಯ ಆಕಳುಗಳನ್ನು ಒಡೆದುಕೊಂಡು ರೊಪ್ಪಕ್ಕೆ ಬಂದಾಗ ಆಶ್ಚರ್ಯ ಕಾದಿತ್ತು. ರೊಪ್ಪದಲ್ಲಿದ್ದ ಹುಲಿ – ಮರಿಗಳನ್ನು ನೋಡಿ ಚಿಪ್ಪುಗೊಡ್ಡಲಿಯಿಂದ ಅವುಗಳನ್ನು ತುಂಡರಿಸಿದರು. ಮರುದಿನ ಗಾದರಿಪಾಲನಾಯಕ ಕಾಮವ್ವನನ್ನು ಕರೆದುಕೊಂಡು ರೊಪ್ಪಕ್ಕೆ ಬಂದು ಹುಲಿಮರಿಗಳನ್ನು ನೋಡಿದರೆ ಸತ್ತು ಬಿದ್ದಿದ್ದವು. ಹುಲಿಗಳಿಗೆ ಪ್ರಯಾಣ ಮಾಡಿದ್ದೆ ಎಂಥ ವಿಘ್ನವಾಯಿತೆಂದು ಕೊರಗುವನು.

ಈ ಸಂಗತಿ ಹುಲಿಗಳ ಕಿವಿಗೆ ಬಿದ್ದರೆ ನಮ್ಮನ್ನು ಉಳಿಸುವುದಿಲ್ಲ. ಬೇಗ ಬೇಗೆ ದನಕರುಗಳನ್ನು ಹೊಡೆದುಕೊಂಡು ಮೂರುಮಂದಿ ಕೂಡಿ ಪಲಾಯನಗೊಂಡು ರತ್ನಗಿರಿಗೆ ಬಂದರು. ರತ್ನಗಿರಿಯಲ್ಲಿ ಯರಮಂಚಿನಾಯಕ ಮೇಸ ಮಂಡಲಿ ಸಮ್ಮುಖದಲ್ಲಿ ನಡೆದ ಪ್ರಸಂಗವನ್ನು ವಿವರಿಸಿದರು. ಎಲ್ಲರೂ ಸೇರಿ ಬೋರವನ ನೇಮ (ಪೂಜೆ) ಮಾಡಲು ಒಪ್ಪಿದರು. ಗಾದರಿಗೆ ಸ್ವಪ್ನದಲ್ಲಿ ಹುಲಿಗಳು ಬಂದು ಮೇಸಮಂಡಲಿಯಿಂದ ಅಗಲಿಸಿ ಪಡವಲ ದಿಕಕಿಗೆ ಹುಲಿಗಳು ಬೆನ್ನತ್ತಿ ಹೋಗುತ್ತಿದ್ದವು. ಯರಮಂಚಿನಾಯಕ ಮೇಸಮಂಡಳಿಯನ್ನು ಕರೆದುಕೊಂಡು ಪೆನ್ನೋಬಳಿ, ಅಹೋಬಳಿ, ಬುಗ್ಗೋಬಳಿಗಳಲ್ಲಿ ಸಂಚರಿಸಿ ಕಾಟಂರಾಜನ ಕೋಟೆಗೆ ಬರುತ್ತಾನೆ.[2] ನಂತರ ರೇಣುಕಾಪುರಿ, ಬೂದಿಕೋಟೆ ಸಮೀಪ ಗೋಸಲಹೊಳೆ (ವೇದಾವತಿ) ಯಲ್ಲಿ ಸ್ನಾನ ಮಾಡಿದರು. ನಮ್ಮಲ್ಲಿ ಮ್ಯಾಸ ಮಂಡಲಿಯನ್ನು ಯಾರೊಬ್ಬರು ಹಿಂದುರುಗಿ ಹೊಳೆದಾಟಿ ಹೋದವರು ಏಳೂಗಡಿ ದಾಟಿದಂಗೆ ಎಂದು, ನಮ್ಮ ಮಂಡಲಿಗೆ ಕೊಲ್ಲಿಪಾಯಕ್ಕೆ ಸಂಬಂಧವಿಲ್ಲವೆಂದು ಆ ಹೊಳೆಯಲ್ಲಿ ಶಾಸನ ಬರೆಸಿದರು. ಲಿಂಗ ಮುದ್ರಿಕೆ ಮಾಡಿ ಬುಕ್ಕಾಂಬುದಿ, ಐಯೋದಿ ಸಿದ್ದಿಹಳ್ಳಿಪುರವನ್ನು ಯರಮಂಚಿನಾಯಕ ಕಟ್ಟಿಸಿ, ಅದಕ್ಕೆ ನೂರ ಒಂದು ಕೋಟೆ ಕಟ್ಟಿಸಿ ಬಂಗಾರದ ಕಳಸ ಸಾಲುಗೋಪುರಗಳನ್ನು ನಿರ್ಮಿಸುವುದಲ್ಲದೆ, ತನ್ನ ಪುರದ ಮಂದಲವಾರು ೯ ಅಜ್ಜನ ಕಾಮಗೇತಿಯನ್ನು ನೇಮಿಸಿ ಕಾಮಗೇತಿಯವರು ಬೆಂಕಿಮಿಡಿಗರ ಕೋಟೆಯನ್ನು ನಿರ್ಮಿಸಿದರು. ೯ ಸುತ್ತಿನ ಕೋಟೆಯೊಳಗೆ ೧೨ ಪೆಟ್ಟಿಗೆ ಮಂದಬೊಮ್ಮದೇವರು ಮಲ್ಲಿನಾಯಕ್ಕನ ಬೊಮ್ಮದೇವರು ೧೦೧ ಮಲ್ಲಿನಾಯ್ಕನವರು, ಕೋಟಿ ಒಂದು ಮಂದಲೋರು, ಕುಲಪಂಗಡವನ್ನು ೯ ಅಜ್ಜನವರು ನೇತೃತ್ವವಹಿಸಿದ್ದರು. ದೇವಕಂಪಳಕ್ಕೆ ೧೨ ಪೆಟ್ಟಿಗೆ ಸ್ಥಾಪನೆಮಾಡುವಾಗ ನರಕಾರಾಜನು ೯ ಅಜ್ಜರನ್ನು ೧೨ ಪೆಟ್ಟಿಗೆಗಳನ್ನು ಸೆರೆಹಿಡಿದಿದ್ದ. ಬೆಂಕಿಮಿಡಿಗರಕೋಟೆ ಸುತ್ತಲು ರನ್ನದ ಚಿನ್ನದ ಕೋಟೆ, ಕಂಚಿನಕೋಟೆ, ಉಕ್ಕಿನ ಕೋಟಿ ಎಂಬ ೬ ಕೋಟೆಗಳನ್ನು ಕಟ್ಟಿದ ನಂತರ ನರಕದ ಕೋಟೆ ಮುಚ್ಚಿದ್ದರು.

ಅಜ್ಜನವರನ್ನು ಸೆರೆಹಿಡಿದುದು ಮತ್ತು ಬಂಧನದಿಂದ ಬಿಡುಗಡೆಗೊಳಿಸಿದ್ದು

ಮೇಸಮಂಡಲಿಯ ೯ ಅಜ್ಜನವರು ಬರಲಿಲ್ಲವೆಂದು ಯರಮಂಚಿನಾಯಕನು ನರಕಾರಾಜನು ಸೆರೆ ಹಿಡಿದ ಸಂಗತಿ ತಿಳಿದುಕೊಂಡ. ನರಕಾಕೋಟೆಯನ್ನು ನೋಡಿ ಹಿಂದಕ್ಕೆ ಅಭೇದ್ಯವಾದುದರಿಂದ ಸುಲಭ ಸಾಧನೆಯಲ್ಲವೆಂದು ಡಂಗೂರ ಸಾರಿಸಿದ.ದೇವ ಕಂಪಳದಲ್ಲಿ ಯಾರೇ ಆದರೂ ಸರಿ ೯ ಅಜ್ಜನವರನ್ನು ೧೨ ಪೆಟ್ಟಿಗೆ ದೇವರುಗಳನ್ನು ಬಿಡಿಸಿಕೊಂಡು ತಂದವರಿಗೆ ಮೊದಲು ಹುಟ್ಟಿದ ಹೋರಿ, ಹೋತ, ಬೆಣ್ಣೆಮುದೆಗಳನ್ನು ಬಹುಮಾನ ಕೊಡುವುದಾಗಿ ಹೇಳಿದರು. ಯರಿಪೋತು ಕರಿಬೊಮ್ಮನ ವಂಶಕ್ಕೆ ಸೇರಿದ ಕೊಡಗು ಬೊಮ್ಮನು ವೀಳ್ಯೆವು ಹಿಡಿಯುತ್ತಾನೆ. ಅಪ್ರತಿಮ ಶಕ್ತಿಶಾಲಿಯಾಗಿದ್ದ ಬೊಮ್ಮನು ವರಾಹಾವತಾರದಿಂದ ನರಕವೆಲ್ಲ ಸುತ್ತಾಡಿ ಅಲ್ಲೊಲ – ಕಲ್ಲೊಲಮಾಡುವ ನಿಟ್ಟಿನಲ್ಲಿ ನರಕಾರಾಜನನ್ನು ಸಂಹರಿಸಿ ೯ ಅಜ್ಜನವರನ್ನು ಬಿಡಿಸಿಕೊಂಡು, ೧೨ ಪೆಟ್ಟಿಗೆಗಳನ್ನು ತಂದು ಯರಮಂಚಿನಾಯಕನಿಗೆ ಒಪ್ಪಿಸಿ ಕೀರ್ತಿಶಾಲಿಯಾದನು.

ಕೊಡಗುಬೊಮ್ಮನ ದುರಾಡಳಿತದ ವಿರುದ್ಧ ಪ್ರತಿಭಟನೆ

ಮೇಸಮಂಡಲಿಯವರು ಷರತ್ತಿನಂತೆ ಕೊಡುತ್ತಾ ಬಂದಿರುವ ಬಹುಮಾನವನ್ನು ಕಾಲಾಂತರದಲ್ಲಿ ನಿಲ್ಲಿಸಿದರು. ಇದರಿಂದ ಕೆಂಡಕಾರಿದ ಕೊಡಗುಬೊಮ್ಮನಿಗೆ ವಿದಾಯ ಹೇಳಿ ಅವನಿಗೆ ತೆರಿಗೆ ಕೊಡದೆ ರಾತ್ರೋರಾತ್ರಿ ಪಲಾಯನಮಾಡಿದರು. ಮೇಸಮಂಡಲಿ ಯರಮಂಚಿನಾಯಕ ರಾತ್ರಿಯಲ್ಲಿ ಹಟ್ಟಿಗಳನ್ನು ಕಿತ್ತುಕೊಂಡು ತನ್ನ ಪರಿವಾರವನ್ನು ರೇಕು (ಪುಲ) ಲಕುಂಟೆ, ಬೆಣ್ಣೆಮುದ್ದೇನಹಳ್ಳಿ, ಮಾಪೇನಹಳ್ಳಿ, ರೇಪೋನಹಳ್ಳಿಗಳಲ್ಲಿ ನೆಲಸುತ್ತಾ ಸಾಗಿದರು. ಯರಮಂಚಿನಾಯಕ ೧೨ ಪೆಟ್ಟಿಗೆಗೆ ಪಾಢ್ಯಮಾಡಬೇಕೆಂದು ೧೦೦೦ ಧಗಮು (ನಗಾರಿ) ಗಳನ್ನು ಕಟ್ಟಿಸಿ ದೇವರನ್ನು ಮಾಡುವ ಕಾಲದಲ್ಲಿ ಈ ಸಂಗತಿ ಕೊಡಗುಬೊಮ್ಮನಿಗೆ ತಿಳಿಯುತ್ತದೆ. ಬೊಮ್ಮ ಬಂದು ೧೦೦೦ ಧಗಮುಗಳನ್ನು ಹರಿದುಹೋಗುವಂತೆ ಒಡೆದು ಉಪದ್ರ ಕೊಡವನು. ಯರಮಂಚಿನಾಯಕ ಮೇಸಮಂಡಳಿಯನ್ನು ಯರಗುಂಟೆಗೆ (ಆಂಧ್ರ) ಸಾಗಿಸುತ್ತಾನೆ. ಕೊಡಗುಬೊಮ್ಮನು ಅಲ್ಲಿಗೂ ಬೆನ್ನತ್ತಿ ಅವರನ್ನು ಸೆರೆಹಿಡಿದು ತೆರಿಗೆ ವಸೂಲಿ ಮಾಡುವನು. ಯರಮಂಚಿನಾಯ್ಕತನ ಬಳಿಯಿದ್ದ ಮುಚ್ಚು ಕೊಳಗಗಳನ್ನು ಕೊಟ್ಟು ‘ಮುಚ್ಚಲಗುಮ್ಮಿ’ ಎಂದು ಹೆಸರಿಟ್ಟನು. ಮುಂದೆ ಹೋಗುವಾಗ ಮಹದೇವಪುರ, ಬಾಗೇನಾಳುಪರಗಳಲ್ಲಿ ಕಕ್ಕಲುಬೆಂಚ ಪಾಢ್ಯ (ಪರವು) ಮಾಡಬೇಕಾದರೆ ೯ ಅಜ್ಜ ಕಾಮಗೇತಿ ಮದಕರಿ ಭೂಪಾಲನನ್ನು ಕಗ್ಗಲ್ಲೂ ಕಾಮಗೇತಿ ಎಂದು ಗೋತ್ರವನ್ನು ಗೊತ್ತುಪಡಿಸಿದರು. ನಂತರ ತಮ್ಮಟ ಕಲ್ಲಿಗೆ ಬಂದು ಯರಗುಂಟನಾಯಕನು ತಮ್ಮ ನಾಯ್ಕನ ಓಬವ್ವನನ್ನು ಮೋಹಿಸಿ ಓಬಳಗುಡ್ಡಕ್ಕೆ ಬಂದು ಅಲ್ಲಿ ಚಿತ್ತಯ್ಯ – ಕಾಟಯ್ಯ ಜನಿಗಿಯ ಹಾಲನ್ನು ಕರೆದು ಆನೆಮೇಲೆ ಹಾಲು – ಮೊಸರನ್ನು ಹೇರಿಕೊಂಡು ಯರಮಂಚಿನಾಯ್ಕನ ಹತ್ತಿರಬಂದರು. ಹೀಗೆ ಬರುವಾಗ ಜಾರಿಬಿದ್ದು ಹಾಲು ಮೊಸರು ಹಳ್ಳವಾಗಿ ಹರಿಯಿತು. ಹರಿದ ಹಳ್ಳಕ್ಕೆ ಜನಿಗಿಹಳ್ಳವೆಂದು ಶಾಸನ ಬರೆಸಿದರು. ಮೇಸಮಂಡಲಿಯನ್ನು ಯರಮಂಚಿನಾಯಕ ಗೌರೀಪುರದ ಹತ್ತಿರ ಬೃಹತ್ ಗಾತ್ರದ ಬೇವಿನಮರದ ಸಮೀಪ ಚಿಂತಕುಂಟ್ಲುಬೋರವನನ್ನು ನಿರ್ಮಾಣ ಮಾಡಿದರು. ನಮ್ಮ ದೇವರ ಹತ್ತಿರ ಸತ್ಯವಿದ್ದರೆ ನಾಳೆ ಸೂರ್ಯ ಹುಟ್ಟುವುದರೊಳಗೆ ಹಸೀಮರವು ಒಣಗಬೇಕೆಂದು ಕೈಮುಗಿಯಲು ಹಾಗೆಯೇ ಒಣಗಿಹೋಯಿತು. ಚಿಗುರಬೇಕೆಂದು ಕೋರಿಕೊಡಂತೆ ಸೂರ್ಯ ಹುಟ್ಟುವುದರೊಳಗೆ ಒಣಗಿದ ಮರವು ಚಿಗುರಿತು. ವೈಜ್ಞಾನಿಕವಾಗಿಯು ಇದನ್ನು ನಂಬಲು ಸಾಧ್ಯವೆಂದರೆ ಸುಟ್ಟ ಮರಕ್ಕೆ ನೀರು ಗೊಬ್ಬರ ಹಾಕಿದರೆ ಚಿಗುರುವುದು ಸಹಜ. ಒಂದೇ ದಿನದಲ್ಲಿ ಆಗುವುದು ಪವಾಡವೇ ಸರಿ!

ಯರಮಂಚಿನಾಯಕ ಮೇಸಮಂಡಲಿ ಅಜ್ಜನವರಿಗೆ ಕೈಮುಗಿದು ತಾತಾ ನಿನ್ನ ಸತ್ಯದಂತೆ ವಾರದೊಳಗೆ ಕೊಡಗುಬೊಮ್ಮನು ಸತ್ತರೆ ನಿನಗೆ ಒಂದು ಕಾಯಿ ಏಳು ಗುಂಡಿಗೆ ಹೊಡೆಸಿ ಒಂದೇ ಹೋತನ್ನು ಏಳು ಭಾಗವಾಗಿ ಕತ್ತರಿಸಿ ೧೦೧ ದೀಪಗಳನ್ನು ಹಚ್ಚಿ ಶುಕ್ಲಪರ್ವತಕ್ಕೆ ಕೈಮುಗಿದು ತಮ್ಮ ತಮ್ಮ ಹಟ್ಟಿಗಳಿಗೆ ತೆರಳಿದರು. ನಾಯಕನ ಕೋರಿಕೆಯಂತೆ ಭೋರವನ ಶಾಪದಿಂದ ಕೊಡಗುಬೊಮ್ಮನು ಮರಣಹೊಂದಿದನು. ವಿಷಯ ತಿಳಿದ ಸೂರಪ್ಪನಾಯಕ, ಚಿನ್ನಪಲ್ಲಿನಾಯಕ, ಕಸ್ತೂರಿರಂಗಪ್ಪನಾಯಕ, ದಳಪತಿ ಕಾಮಗೇತಿಯನ್ನು ಕರೆಯಿಸಿದರು. ಇವರೆಲ್ಲ ಸೇರಿ ನಮ್ಮಲ್ಲಿ ಸತ್ಯ ಇದೆಯೋ ಅಥವಾ ಯರಮಂಚಿ ನಾಯಕನಲ್ಲಿರುವುದೋ ಪರೀಕ್ಷಿಸಬೇಕೆಂದು ದೊಡ್ಡಶನಿವಾರದಂದು ಬೋರವನನ್ನು ಮಾಡಲು ತೀರ್ಮಾನಿಸುವರು. ಅದರಂತೆ ಯರಮಂಚಿಗೆ ಸುಳ್ಳು ಹೇಳಿಬಾ ಎಂದು ಕಾಮಗೇತಿಯನ್ನು ಅವನ ಹತ್ತಿರ ಕಳುಹಿಸುವರು. ಅವನು ಯರಮಂಚಿ ನಾಯಕನಿಗೆ ನಾಳೆ ಶನಿವಾರ ಮೇಸ ಮಂಡಲಿಯವರು ಚಿಂತಗುಂಟ್ಲುನಲ್ಲಿ ಪಾಡ್ಯ ಮಾಡುತ್ತಾರೆಂದು ತಿಳಿಸಿದ ವಾಸೆ ಕೊಯ್ದು ಪಾಡ್ಯ ಎತ್ತಲು ಹೋಮವು ತೀರಲಿಲ್ಲವಾದ್ದರಿಂದ ೩ ಮಂದಿ ನಾಯಕರು ಮೇಸ ಮಂಡಲಿಯನ್ನು ಕಾಮಗೇತಿ ನಿಮ್ಮಲ್ಲಿ ಸತ್ಯವಿಲ್ಲವೆಂದು ಮತ್ತು ದೊರೆಗಳಲ್ಲಿ ಸತ್ಯವಂತ ಮೂಲಪುರುಷ ಯರಮಂಚಿನಾಯಕನನ್ನು ಕರೆದುಬರಲು ಕಾಮಗೇತಿ ನಡೆದ ಪ್ರಸಂಗ ಎಲ್ಲರಿಗೂ ತಿಳಿಯಿತು. ೩ ಮಂದಿ ನಾಯಕರು, ಮೇಸ ಮಂಡಲಿ ಪಂಗಡ ಪಂಗಡವಾಗಿ ದಿಕ್ಕಪಾಲಾಗಿ ಓಡಿಹೋದರು. ಬುಲ್ಲುಡ್ಲುವನು ಬಂಗಾರದೇವರನ್ನು ತೀಟುಕಲ್ಲಿಗೆ ತೆಗೆದುಕೊಂಡು ಹೋದನು. ಕುಂಡರ್ಲುವನು ಓಬಳದೇವರನ್ನು ಶಿರಿವಾಳಕ್ಕೆ, ಕಂಚೋಬಳ ದೇವರನ್ನು ಮಳೆಲುಭೂಪನು ವರಮಾಲಿಗೆ (ಜರಿಮಾಲೆ) ಉಳಿದ ದೇವಗಂಪಳ ಚದುರಿಹೋಯಿತು. ಯರಮಂಚಿನಾಯಕನನ್ನು ಕಾಮಗೇತಿ ಕರೆದುಕೊಂಡು ಬರುವಷ್ಟರಲ್ಲಿ ಕುಲಜಾತಿಯ ಹತ್ತು ಹಲವು ಪಂಗಡಗಳಾಗಿ ಚೆಲ್ಲಾ – ಪಿಲ್ಲಿಯಾಗಿದ್ದಿತು.

ಗುಂಡುಬೋರವ ಚಿಂತಗುಂಟ್ಲ ಬೋರೆದೇವರು ಕುದಾಪುರ

 

ಚಿಂತಗುಂಟ್ಲ ಬೋರೆದೇವರ ದೇವಾಲಯ, ಕುದಾಪುರ

ಜಾತೀಯ ಪುನರ್ಸಂಘಟನೆ

ಯರಮಂಚಿನಾಯಕನು ಕುಲವೆಲ್ಲ ಚೆಲ್ಲಾಪಿಲ್ಲಿಯಾಗಿದ್ದು ಕಂಡು ಮಮ್ಮಲ ಮರುಗಿದನು. ಅತೀವ ದುಃಖಿತನಾಗಿ ಭೋರವನ (ಗೆ) ಹತ್ತಿರ ಶಪಥ ಮಾಡುವುದರೊಂದಿಗೆ ತನ್ನ ವಂಶಪರಂಪರೆಯಾಗಿ ಕಾಯಿ ಒಡೆಸುವುದಿಲ್ಲವೆಂದು, ಕೈಯೆತ್ತಿ ಮುಗಿಯುವುದಿಲ್ಲ ಎಂದು ತನ್ನ ಹಟ್ಟಿಗೆ ಮರಳಿದ. ಏಳು ಗುಂಡುಗಳನ್ನು ಹಾಕಿಸಿ ಒಂದೇ ಕಾಯಿ ಏಳು ಗುಂಡಿಗೆ ಹೊಡೆಯಿಸಿ ಹೆತ್ತ ಮಗನನ್ನೇ ಏಳು ವಾಸಿಗಳನ್ನಾಗಿ ಕೊಯ್ಯುತ್ತಾನೆ ನಾಯಕ. ನಂತರ ಕಾಮಗೇತಿ ಗುಡ್ಡುಬೋರನನ್ನು ೧೦೧ ದೀಪಗಳನ್ನು ಹಚ್ಚಿಶುಕ್ಲು ಪರ್ವತ್ಕೆ ಹೋಗಿ ತಿಪ್ಪಯ್ಯನಕೋಟೆ ಹತ್ತಿರ ಕೈಮುಗಿದು ಹಿಂದುರಿಗಿ ಬರುವಷ್ಟರಲ್ಲಿ ಮ್ಯಾಸಮಂಡಲಿ ತೀವ್ರ ಸಂಘಟನೆಗೊಂಡ ಜಾಮಾಯಿಸಿತ್ತು.

ಈ ಎಲ್ಲಾ ಘಟನೆಗಳ ನಡುವೆ ಯರಮಂಚಿನಾಯಕ ಮತ್ತು ಗುಡ್ಜುಬೋರ ಸೇರಿ ಮಿಂಚೇರಿಗೆ ನಡೆದು ಗಾದರಿಪಾಲನಾಯಕನನ್ನು ಸ್ಥಾಪನೆಮಾಡಿದರು. ಮುಂದುವರೆದು ಜಗಲೂರಿಗೆ ಬಂದು ಪಾಪನಾಯಕ ಮಹಾತ್ಮನನ್ನು ಸ್ಥಾಪಿಸಿ, ದೇಗುಲಗಳನ್ನು ನಿರ್ಮಾಣ ಮಾಡಲು ಸೂಚಿಸಿದರು. ತರುವಾಯ ಆನೆಗುಂದಿಗೆ ತೆರಳಿ ತುಂಗಭದ್ರ ನದಿಯಲ್ಲಿ ಸ್ನಾನ ಮಾಡಿ ತಿರುಮಲದೇವರನ್ನು ಪೂಜಿಸಿದರು. ಅಲ್ಲಿ ಯರಗೊಡ್ಲು ಮೀಸಲಿಗೆ ಒಲಿದು ದೇವರು ಇವನ ಹಿಂದೆ ಬರುತ್ತಿತ್ತು. ಅಲ್ಲಿಂದ ಹುಳಿಯಾಳಿಗೆ (ಕೂಡ್ಲಿಗಿ ತಾ) ಮುಂದೆ ಕಂಪಳದೇವರಹಟ್ಟಿ ನಂತರ ಬಂಜಗೇರಿಗೆ ಬರಲು ಪ್ರಯತ್ನಿಸಿದರು. ಆನೆಗುಂದಿ ರಾಜರು ದೇವರಿಲ್ಲದ ಸುದ್ದಿ ತಿಳಿದು ಪೂಜಾರಿಯಿಂದ ಕೇಳಿ ಹಿಂದೆ ಹಿಂದೆ ದಂಡೆತ್ತಿ ಬಂಜಗೆರೆಗೆ ಬರುತ್ತಾರೆ. ಯರಮಂಚಿನಾಯಕ ಆ ದಂಡನ್ನು ನೋಡಿ ಕೆರೆಕೋಡಿಯಲ್ಲಿ ದೊಡ್ಡ ಮನೆಯವರು ಊಟಮಾಡುವ ಪಂಕ್ತಿಯಲ್ಲಿ ಸೇರಿಕೊಂಡ. ಆನೆಗುಂದಿ ರಾಜರು ಹಿಂದುರುಗಿ ಹೋಗಲು ಯರಮಂಚಿನಾಯ್ಕನು ಮುಂದಲಪೂಜೆ ದಗಮು ನಿನ್ನಿಂದ ಆಗಬೇಕೆಂದು ಪಟ್ಟುಹಿಡಿದನು. ದೊಡ್ಡ ತಿರುಮಲ ದೇವರನ್ನು ಸ್ಥಾಪಿಸುವ ಸಂದರ್ಭದ್ಲಿ ವರವಿನ ಮುತ್ತಿ ನಮ್ಮ ತಾತ ಯರಮಂಚಿನಾಯಕನು ಮಂಡಲಿಯನನು ಬಿಟ್ಟು ಹೋದನೆಂದು ನೇಮ ತೋರಿಸುತ್ತಾನೆ ಮಲ್ಲಿನಾಯ್ಕನು ಬೊಮ್ಮದೇವರನ್ನು ಬಂಜಗೆರೆಗೆ ತಂದು ಯರಮಂಚಿನಾಯಕನಿಗೆ ನೇಮವನ್ನು ತೋರಿಸಲು ಆ ನಾಯಕನು ದೊಡ್ಡ ತಿರುಮಲದೇವ, ಕೊತ್ತಲ ಬೊಮ್ಮದೇವರನ್ನು ಪೂಜನೀಯವಾಗಿ ಸ್ಥಾಪಿಸುತ್ತಾನೆ. ಹಾಗೆಯೇ ಯರಗೊಡ್ಲನು, ವರವಿನವನು, ನಲ್ಲಕ್ಕಿನವನು, ನಲ್ಲಬಾಳಿಸೇನು, ನಡಗಿಲನವನು, ಚಿನ್ನಮುತ್ತಿನವನು, ಜೂಗನವನು ಈ ಏಳು ಜನರು ಮೇಲಿನ ದೇವರುಗಳಿಗೆ ವಾರಸುದಾರರೆಂದು ಯರಮಂಚಿನಾಯಕನು ನೇಮಿಸುತ್ತಾನೆ. ಯರಮಂಚಿನಾಯಕ, ಯರಗೊಡ್ಲಯ್ಯ, ವರವಿನವರು ಕೂಡಿ ಬೋಡಿದಾಸರಿಯನ್ನು ದೊಡ್ಡತಿರುಮಲ ದೇವರಿಗೆ ಪೂಜಾರಿಯಾಗಿ ನೇಮಿಸುವರು.

ನಂತರ ಯರಮಂಚಿನಾಯಕ, ಯರಗೊಡ್ಲವನು, ವರವಿನವರು ಓಬಣ್ಣನಹಳ್ಳಿಗೆ, ಬಂದು ತಾತಾಚಾರ್ಯರು ತೀರಿಕೊಂಡಿದ್ದರಿಂದ ಅವರನ್ನು ಖಂಡೂಗ ವಿಭೂತಿ, ಖಂಡೂಗ ಲೋಬಾನದಿಂದ ಸ್ಥಾಪಿಸುತ್ತಾರೆ. ಮೂಲಪುರುಷ ಶುಕ್ಲಮಲ್ಲಿನಾಯಕನ ಪಾಡ್ಯಕ್ಕೆ ಅಂಬೂವಾಸಿಗಳನ್ನು ಕೊಯ್ದು ಈತನು ಜಗತ್ತಿಗೆ ಗುರುನಾಥನೆಂದು ನೇಮಿಸಿದರು. ಇದಕ್ಕೆ ಪೂಜಾರಿ ಸಿಕ್ಕಳ್ಳಿಗಿದ್ದವನೆಂದು ನೇಮಿಸಿ, ಯರಮಂಚಿನಾಯಕನು ಐಯೋಧಿಸಿದ್ಧಿ ಹಳ್ಳಿಯೊಳಗೆ ಬೊಮ್ಮದೇವರನ್ನು ಮತ್ತು ದೊಡ್ಡಕ್ಕರಾಯಮ್ಮನನ್ನು ನಿರ್ಮಾಣಮಾಡಿದರು. ಐಯೋಧಿ ಗೌರಸಮುದ್ರವೆಂದು ಅದಕ್ಕೆ ಹೆಸರಿಟ್ಟರು. ಇಲ್ಲಿನ ದೇವರುಗಳಿಗೆ ೧೦೧ ಕ್ಷೌರ, ೧೦೧ ಜಜ್ಜಲು ಕಲೆತು ಕೋಟಿಲಿಂಗ ಯರಮಂಚಿನಾಯಕನೆಂದು ಶಾಸನ ಬರೆಸಿದನು. ಯರಮಂಚಿ ನಾಯಕ ಓಬಣ್ಣನಹಳ್ಳಿಯಲ್ಲಿ ತನ್ನ ಹೆಸರಲ್ಲಿ, ಯರಗೊಡ್ಲಯ್ಯ, ಗಾದರಿಪಾಲನಾಯಕ ಇವರನ್ನು ನಿರ್ಮಾಣ ಮಾಡುವುದರೊಂದಿಗೆ ಇದಕ್ಕೆ ಯಜಮಾನರನ್ನು ನೇಮಕ ಮಾಡುವನು. ಹಾಗೆಯೇ ಗೋತ್ರದ ಪುತ್ರರಾದ ಯರಗೊಡ್ಲುನವರು, ವರವಿನವರುಗಳಿಗೆ ಏಳು ಜನ ಅಜ್ಜನವರಿಗೆ ಅಧಿಕಾರಿಗಳೆಂದು ಆಯ್ಕೆಮಾಡಿದ. ಇವೆಲ್ಲ ಜನಾಂಗೀಯ ಕಾರ್ಯಕ್ರಮಗಳನ್ನು ಮಾಡಿ ಮುಪ್ಪಾದ ಯರಮಂಚಿನಾಯಕ ಓಬಣ್ಣನ ಹಳ್ಳಿಯ ನೆಲೆಮಾಳಿಗೆಯೊಳಗೆ ಜೀವೈಕ್ಯನಾದನು. ಅಂದಿನಿಂದ ಈತನನ್ನು ಮೇಸ ಮಂಡಳಿಯ ದೊರೆ, ದೈವಿಕ ಪುರುಷ, ಪವಾಡಪುರುಷನೆಂದು ಕರೆಯುತ್ತಾರೆ. ತನ್ನ ಜೀವನನ್ನು ಜಾತಿಗಾಗಿ ಮುಡಪಾಗಿಟ್ಟ ವ್ಯಕ್ತಿ ಈತ. ಅನೇಕ ಸ್ಥಳಗಳಲ್ಲಿ ಯರಮಂಚಿನಾಯಕನ ಗುಡಿಗಳು, ಅನುಯಾಯಿಗಳು ಕಂಡುಬರುತ್ತಾರೆ.[3]


[1] ಯರಮಂಚಿ ಎಂಬುದು ವಿಜಯನಗರದ ಅವಧಿಯಲ್ಲಿದ್ದ ಒಂದು ರಾಜಮನೆತನದ ಹೆಸರು.) ನೋಡಿ : Epigraphical Glossary Vol-VI, SII, Part-II, p-19

[2] ಆರ್ವಿಯಸ್ಸ್‌ಸುಂದರಂ : ಕಾಟಮರಾಜನ ಕಥೆ, ೨೦೦೦. ಪ್ರಕಟಿತ ಕೃತಿ ತೆಲುಗು ಮೂಲದ್ದು. ಈ ಅರಸನೇ ಕಾಟಮರಾಜ ಇರಬೇಕು.

[3] ೬.೨.೧೯೪೭ ರಂದು ಓಬಣ್ಣನಹಳ್ಳಿಯ ಗ್ರಾಮಸ್ಥರು ಜಾತ್ರೆ ಮಾಡುವಾಗ ಯರಮಂಚಿನಾಯಕನ ಚರಿತ್ರೆ ಕುರಿತಂತೆ ಸಣ್ಣಪುಸ್ತಕವನ್ನು ತಂದಿರುತ್ತಾರೆ.