ಮ್ಯಾಸಬೇಡರು– ಕಾಡುಗೊಲ್ಲರು ಎಲ್ಲಾ ಹಬ್ಬಗಳನ್ನು ಹಿಂದೂಗಳಂತೆ ಆಚರಿಸಿದರೂ ‘ಗುಗ್ಗರಿ ಹಬ್ಬ’ ಅವರನ್ನು ಬೇರೆಯವರಿಂದ ಪ್ರತ್ಯೇಕಿಸುವಷ್ಟು ವಿಶಿಷ್ಟವಾಗಿದೆ.

ನನ್ನಿವಾಳದ ಸುತ್ತ ಎರಡು- ಮೂರು ಕಿಲೋಮೀಟರ್ ಫಾಸಲೆಯೊಳಗೆ ಬರೀ ಮ್ಯಾಸನಾಯಕರಿಂದ ಕೂಡಿದ ಹನ್ನೆರಡು ಹಟ್ಟಿಗಳು ಇವೆ. ಗುಗ್ಗರಿ ಹಬ್ಬಕ್ಕೆ ಇವರೆಲ್ಲರೂ ತಮ್ಮ ದೇವರುಗಳೊಂದಿಗೆ ಕಟ್ಟೆ ಮನೆಯ ಕೇಂದ್ರವಾದ ನನ್ನಿವಾಳ ನೆರೆಯುತ್ತಾರೆ.

ಗುಗ್ಗರಿ ಹಬ್ಬ

ಮ್ಯಾಸಮಂಡಲಕ್ಕೆ ಸೇರಿದ ಎಲ್ಲರೂ ತಮ್ಮ ದೇವಸ್ಥಾನಗಳ ಬಳಿ, ಹನ್ನೆರಡು ಪೆಟ್ಟಿಗೆ ದೇವರುಗಳ ಹೆಸರಿನಲ್ಲಿ ನಡೆಸುವ ಹಬ್ಬ. ತಾವು ಬೆಳೆದ ಹುರುಳಿ, ಅಲಸಂದೆ, ಹೆಸರು– ಹೀಗೆ ಗುಗ್ಗರಿಗೆ ಬಳಸಬಹುದಾದ ದ್ವಿದಳ ಧ್ಯಾನ್ಯಗಳನ್ನು ತಮ್ಮ- ತಮ್ಮ ದೇವರುಗಳಿಗೆ ‘ಎಡೆ’ಮಾಡಿ ನೈವೇಧ್ಯ ಮಾಡುವವರೆಗೆ ಬಳಸುವಂತಿಲ್ಲ. ಬೇಯಿಸುವಂತೆಯೂ ಇಲ್ಲ! ಇದನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ.

ಗುಗ್ಗರಿಗೆ ಬಳಸುವ ‘ಕಾಳ ಹಬ್ಬ’ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ಸರ್ವೇಸಾಮಾನ್ಯವಾಗಿ ಬಳಸುವ ಧಾನ್ಯ– ಹುರುಳಿ. ಮೂಲದಲ್ಲಿ ಮ್ಯಾಸಬೇಡರನ್ನು ತಮ್ಮ ಅಣ್ಣ– ತಮ್ಮಂದಿರು ಎಂದು ಹೇಳಿಕೊಳ್ಳುವ ಕಾಡುಗೊಲ್ಲರಿಗೆ ಮತ್ತು ಅವರ ದೈವಗಳಿಗೆ ಹುರುಳಿ- ನಿಷಿದ್ಧ ಧಾನ್ಯ. ಅವರು ಇದನ್ನು ‘ಹುರುಳಿ ಬತ’ ಎನ್ನುತ್ತಾರೆ. ಆದರೆ ಮ್ಯಾಸಬೇಡರಿಗೆ ನವಣೆ ನಿಷೇಧಿತ ಧಾನ್ಯ. ಇದನ್ನು ಅವರು ‘ನವಣೆ ಬತ’ ಎನ್ನುತ್ತಾರೆ.

ಆದರೆ, ಮ್ಯಾಸಬೇಡರ ದೇವರುಗಳಿಗೂ ಕಾಟಂಲಿಂಗನನ್ನು ಹೊರತುಪಡಿಸಿ ನವಣೆ ಆಗದಿರುವುದರಿಂದ ಇದನ್ನು ಎಡೆಗೆ ಬಳಸುವುದಿಲ್ಲ! ಹೀಗಾಗಿ ಕಾಡುಗೊಲ್ಲ- ಮ್ಯಾಸಬೇಡರು ತಮ್ಮ ದನಕರುಗಳನ್ನು, ದೇವರ ಎತ್ತುಗಳನ್ನು ಹಾಗೂ ತಮ್ಮ ದೈವಗಳನ್ನು ಹುರುಳಿ- ನವಣೆ ಹೊಲಗಳ ಮೇಲೂ ಹಾಯಿಸುವುದಿಲ್ಲ.

ಇಂಥದೇ ವಿಶಿಷ್ಟ ಆಚರಣೆಯನ್ನು ಚಳ್ಳಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಬಳಿ ಇರುವ ಚೆನ್ನಮ್ಮ ನಾಗತಿಹಳ್ಳಿಯಲ್ಲಿರುವ ‘ಕ್ಯಾತಪ್ಪನ ಪರಿಷೆ’ಯಲ್ಲೂ ಕಾಣಬಹುದು. ಈ ಹಬ್ಬ ನಡೆಯುವ ಒಂದು ತಿಂಗಳು ಆ ದೇವರಿಗೆ ನಡೆದುಕೊಳ್ಳುವ ಯಾವ ಗೊಲ್ಲರೂ ತಮ್ಮ ಮನೆಗಳಲ್ಲಿ ಹುರುಳಿ, ನವಣೆಗಳನ್ನು ಇಟ್ಟುಕೊಳ್ಳುವಂತಿಲ್ಲ. ಹಬ್ಬ ಮುಗಿಯುವವರೆಗೂ ಬೇರೆಯವರ ಮನೆಗಳಲ್ಲಿ ಇಡುತ್ತಾರೆ. ಆದರೆ, ಮ್ಯಾಸನಾಯಕರ ಯಾವ ದೇವರುಗಳಿಗೂ(ಕಾಟಂಲಿಂಗನನ್ನು ಬಿಟ್ಟು) ನವಣೆಯ ‘ತಂಬಟ’(ತಂಬಿಟ್ಟು) ಆಗುವುದಿಲ್ಲ. ಗುಗ್ಗರಿ ಹಬ್ಬವನ್ನು ಕಾಡುಗೊಲ್ಲರು, ಮಣೇಗಾರರು ಆಚರಿಸುತ್ತಾರೆ!.

ಗುಗ್ಗರಿ ಹಬ್ಬದ ದಿನ ಎಲ್ಲರೂ ತಾವು ಬೆಳೆದ ಈ ಧಾನ್ಯಗಳನ್ನು ತಂದು ದೇವಸ್ಥಾನದಲ್ಲಿ ಸುರಿಯುತ್ತಾರೆ. ಬೇಯಿಸಿದ ನಂತರ ದೇವರುಗಳಿಗೆ ‘ಎಡೆ’ ಹಾಕುತ್ತಾರೆ. ನಂತರ ‘ಪ್ರಸಾದ’ವೆಂದು ತಿನ್ನುತ್ತಾರೆ. ನಂತರ ಮುಂದಿನ ಗುಗ್ಗರಿ ಹಬ್ಬದವರೆಗೂ ಬಳಸುತ್ತಾರೆ.

ಈ ಹಬ್ಬವನ್ನು ಎಲ್ಲಾ ಪಂಗಡಗಳ ಮ್ಯಾಸನಾಯಕರು ಆಚರಿಸಿದರೂ ವಿಶೇಷ ಆಸ್ಥೆಯಿಂದ ಹಬ್ಬ ಮಾಡುವವರು– ಮಳೆಲೋರು. ಇವರ ಮನೆದೇವರು ಮಾಕನಡುಕು ನರಸಿಂಹಸ್ವಾಮಿ. ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿದೆ. ಗುಗ್ಗರಿ ಹಬ್ಬದ ದಿನ ಇಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಗುಗ್ಗರಿ ನೀರಿನಲ್ಲಿ ಕುದಿಯುತ್ತಾ, ಬೇಯಿತ್ತಿರುವಾಗ, ಪಟ್ಟದ ಪೂಜಾರಿಯ ಹೆಂಡತಿ ಅಂದು ಒಂದೊತ್ತಿನಲ್ಲಿದ್ದು, ಮಡಿಯಲ್ಲಿ ಬಂದು ಬೇಯುತ್ತಿರುವ ಗುಗ್ಗರಿ ಕೊಳಗದಲ್ಲಿ ಕೈಯಿಟ್ಟು ಗುಗ್ಗರಿಯನ್ನು ಬರಿಗೈಯಿಂದ ತಿರುವುತ್ತಾಳೆ! (ಸೌಟು ಮಾಡುವ ಕೆಲಸವನ್ನು ಈಕೆಯ ಬರಿಗೈ ಮಾಡುತ್ತದೆ!). ಆಕೆಯ ಕೈಯಲ್ಲಿ ಬೊಬ್ಬೆ ಕೂಡಾ ಏಳುವುದಿಲ್ಲ.

ಮ್ಯಾಸಬೇಡರ ಆಚರಣೆಗಳೆಲ್ಲಾ ದೇವರ ಎತ್ತಗಳ ಸನ್ನಿಧಿಯಲ್ಲೇ ನಡೆಯಬೇಕು. ತಮ್ಮ ಎಲ್ಲ ಚಟುವಟಿಕೆಗಳನ್ನು ಮುತ್ತಯ್ಯಗಳು ಈ ದೇವರ ಎತ್ತುಗಳ ಮೂಲಕ ವೀಕ್ಷಿಸುತ್ತಿದ್ದಾರೆ ಹಾಗೂ ಅವರ ಸಾಕ್ಷಿ- ಸಮಕ್ಷಮದಲ್ಲಿ ಇದೆಲ್ಲ ನಡೆಯುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಕಾರ್ಯಕ್ರಮಗಳು ನಡೆಯುತ್ತವೆ.

ದೇವತಾ ಕಾರ್ಯಕ್ಕೆ ಹೋದ ಕಿಲಾರಿ, ದೇವರ ಎತ್ತುಗಳು ಹಾಗೂ ಕಟ್ಟೆ ಮನೆ ‘ದೊರೆ’(ಯಜಮಾನ)ಯನ್ನು ‘ಸೆಳೆ ಮಿಂಚು’(ಹಾದಿಯುದ್ದಕ್ಕೂ ನೀರು ಸುರಿದು) ಕೊಟ್ಟು, ‘ತಡಿ- ಮಡಿ’(ಅಗಸ ಮಡಿ ಬಟ್ಟೆ ಹಾಸಿ) ಯಲ್ಲಿ ಕರೆದುಕೊಂಡು ಹೋಗಿ ‘ಹಸಿರು ಗದ್ದಿಗೆ’(ಹಸಿ ಸೊಪ್ಪಿನ ಹಾಸಿಗೆ) ಯಲ್ಲಿ ಕೂರಿಸುವುದಲ್ಲದೇ ಅವರ ವಸತಿಗಾಗಿ ಹಸಿರು ಸೊಪ್ಪಿನ ‘ಬೆರಗು’(ಗುಡ್ಲು) ಹಾಕಿಕೊಡುತ್ತಾರೆ. ಕಟ್ಟೆ ಮನೆಯೊಂದಿಗೆ ಕುಲಸಾವಿರದವರಲ್ಲದೆ ಏಳು ಮಂದಿ ಹಿರಿಯರೂ ಸೇರುತ್ತಾರೆ.

ಇದೇ ಹಬ್ಬದಲ್ಲಿ ಇನ್ನೊಂದು ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ. ಗುಗ್ಗರಿ ‘ಎಡೆ’ಯ ನಂತರ ಈ ದೇವರುಗಳನ್ನು ಊರ ಹೊರಗೆ ಹೊರಡಿಸಿಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಇವರ ದೇವರುಗಳೆಲ್ಲ ‘ಬುಟ್ಟಿ ದೇವರು’ಗಳು ಅಥವಾ ‘ಪೆಟ್ಟಿಗೆ ದೇವರುಗಳು,’ ‘ಗಂಪ’ಎಂದರೆ ಪುಟ್ಟಿ (ತಟ್ಟಿ) ಅಥವಾ ‘ಪೆಟ್ಟಿಗೆ ದೇವರುಗಳು, ತೆಲುಗಿನಲ್ಲಿ ಇವನ್ನು (ದೇವಗಂಪಲು) ಎನ್ನುತ್ತಾರೆ.

ಹಿಂದುಳಿದ ವರ್ಗದ ಜನಗಳ ಬಹಳಷ್ಟು ದೇವರುಗಳು ವಾಸ ಮಾಡುವುದು ಇಂತಹ ಪುಟ್ಟಿ, ತಟ್ಟಿ, ಹೆಡಿಗೆ ಅಥವಾ ಪೆಟ್ಟಿಗೆಗಳಲ್ಲೇ. ಉದಾಹರಣೆಗೆ; ಶ್ರೀಶೈಲದಿಂದ ಮ್ಯಾಸನಾಯಕರು ವಲಸೆ ಬರುವಾಗ ತಮ್ಮ ಜೊತೆಯಲ್ಲಿ ಹನ್ನೆರಡು ಪೆಟ್ಟಿಗೆ ದೇವರುಗಳನ್ನು ಜೊತೆಯಲ್ಲೇ ತರುತ್ತಾರೆ. ಊರುನಾಯಕರು ಮಾರಮ್ಮನನ್ನು ತಟ್ಟಿಯಲ್ಲಿ ಅಥವಾ ಪೆಟ್ಟಿಗೆಯಲ್ಲಿ ಇಟ್ಟುಕೊಂಡು ಬೀದಿ ತಿರುಗುತ್ತಾ ತಿರುಗುತ್ತಾ ಭಿಕ್ಷೆ ಎತ್ತುವುದನ್ನು ಕಾಣಬಹುದು. ಬೆಸ್ತರು ‘ಜೋಕುಮಾರ’ನನ್ನು ತೂರುವ ಪುಟ್ಟಿ ಅಥವಾ ಮೊರದಲ್ಲಿ ಇಟ್ಟು ಮೆರೆಸುವುದನ್ನು ಇಲ್ಲಿ ನೆನೆಯಬಹುದು.

ಊರ ಹೊರಗೆ ಕರೆದುಕೊಂಡು ಬಂದ ದೇವರುಗಳನ್ನು ಒಂದು ಕಡೆ ನಿಲ್ಲಿಸುತ್ತಾರೆ. ಅಲ್ಲಿಗೆ ‘ಎತ್ತಿನ ಕಿಲಾರಿ’ (ದೇವರುಗಳ ಹೆಸರಿನಲ್ಲಿ ಬಿಟ್ಟ ದನಗಳನ್ನು ಕಾಯುವ ಪವಿತ್ರ ಕಾಯಕ ಮಾಡುವ ಪೂಜಾರಿ. ಮ್ಯಾಸನಾಯಕರ ಸಾಂಸ್ಕೃತಿಕ ವೀರರಾದ ಗಾದರಿ ಪಾಲನಾಯಕ ಮತ್ತು ಜಗಲೂರ ಪಾಪನಾಯಕ ಅವರುಗಳು ಎತ್ತಿನ ಕಿಲಾರಿಗಳಾಗಿದ್ದರು) ಕೆಲವು ದೇವರ ದನಗಳನ್ನು ಅಲ್ಲಿಗೆ ತಂದು ಕಲೆಸುತ್ತಾನೆ. ಇಲ್ಲಿಗೆ ಬರುವ ಈ ಬುಟ್ಟಿ ದೇವರುಗಳನ್ನು ‘ಉದಿ’ ಎಂದೂ, ಬಂದು ಸೇರುವ ದನಗಳನ್ನು ‘ಪದಿ’ಎಂದೂ, ಎವೆರಡೂ ಸೇರುವುದನ್ನು ‘ಉದಿ-ಪದಿ’ಗಳ ಸೇರುವಿಕೆ ಎಂದು ಭಕ್ತಿಯಿಂದ ಪೂಜಿಸುತ್ತಾರೆ.

ದೀವಣಿಗೆಯಲ್ಲಿ(ದೀಪಾವಳಿಯಲ್ಲಿ) ಇದೇ ಪ್ರಕ್ರಿಯೆಯನ್ನು ದನಗಳನ್ನು ‘ಕಿಚ್ಚು’(ಬೆಂಕಿ) ಹಾಯಿಸುವುದರ ಮೂಲಕ ನೆರವೇರಿಸಲಾಗುತ್ತದೆ.

ಗುಗ್ಗರಿ ಹಬ್ಬದ ಶೃಂಗ ಘಟನೆಯೆಂದರೆ ದೇವರ ಎತ್ತುಗಳನ್ನು ಓಡಿಸುವ ಸ್ಪರ್ಧೆ. ಕಿಲಾರಿಗಳೂ ದೇವರ ಎತ್ತುಗಳ ಜೊತೆಯಲ್ಲೇ ಓಡಬೇಕು. ಇದೊಂದು ರೋಮಾಂಚಕ ದೃಶ್ಯ. ದೊರೆ ಈ ಎಲ್ಲ ಆಚರಣೆಗಳನ್ನು ಗಮನಿಸುತ್ತಾನೆ. ಹುರಿದುಂಬಿಸುತ್ತಾನೆ. ಪೂಜಾರಿಗಳು ಕೇಕೆ ಹಾಕುತ್ತಾ ಅಬ್ಬರಿಸುತ್ತಾರೆ. ಇದೇ ಸಂದರ್ಭದಲ್ಲಿ ನೆರೆದ ಭಕ್ತಾದಿಗಳು ಮಣ್ಣಿನ ಮೇಲೆ ಹಾಕಿರುವ ‘ಪ್ರಸಾದ’ ತಿನ್ನುವ ‘ಮಣೇವು’ ಸ್ಪರ್ಧೆಯೂ ನಡೆಯುತ್ತದೆ.

ಎಲ್ಲ ಕಡೆಯೂ ಇದೇ ಮಾದರಿಯಲ್ಲಿ ಗುಗ್ಗರಿ ಹಬ್ಬವನ್ನು ಆಚರಿಸುತ್ತಾರೆ. ಆದರೆ, ನನ್ನಿವಾಳದಲ್ಲಿ ಈ ಗುಗ್ಗರಿ ಹಬ್ಬದ ಜೊತೆ ಜೊತೆಗೆ ‘ಢಿಕ್ಕಿ ಹಬ್ಬ’ವನ್ನೂ ಆಚರಿಸುವುದರಿಂದ ಇಲ್ಲಿಯ ಗುಗ್ಗರಿ ಹಬ್ಬ ಬೇರೆಲ್ಲ ಕಡೆಗಿಂತ ಭಿನ್ನವಾಗಿರುತ್ತದೆ.