ಪ್ರಲಯ ರೌದ್ರಭೀಲ ಶೂಲಧರ ಧೂರ್ಜಟಿಯ
ತಾಂಡವ ಸಮಯ ಚಂಡ ಡಮರು ಡಿಂಡಿಮದಂತೆ
ಮೊಳಗಿದುದು ರಣಭೇರಿ, ಮೇರು ಮಾರ್ದನಿ ಬೀರಿ ೨೨೨೦
ಬಿರುದುದೆನೆ ದಿಗ್ಭಿತ್ತಿ! ಧಿಮ್ಮಿ ಧಿಮಿಧಿಮಿ ಧಿಮ್ಮಿ
ಗದೆಯ ಘಾತಸ್ಥೂಲ ಭಿಮ ವಿನ್ಯಾಸದಿಂ,
ಕುಣಿಕುಣಿಯೆ ನರಮುಂಡಮಾಲೆ ಕಟಿಬಂಧನದಿ,
ಪಸಿಯ ಬಿಸಿಬಿಸಿ ನೆತ್ತರುಗುವ ರುಂಡದ ಸರಂ
ಕಂಠದಲಿ ರಿಂಗಣಗುಣಿಯುತಾಡೆ, ಕತ್ತಲಲಿ
ಮೆಳೆಹೊತ್ತಿ ಕಾಳ್ಗಿಚ್ಚು ದಳ್ಳುರಿಯುರಿವವೋಲೆ
ಕರ್ಮೊಗದ ಕೆನ್ನೀರ್ ಬಸಿವ ನಾಲಗೆ ಮೇಲೆ
ಕೆಳಗೆ ಬಳ್ಕುತೆ ದಿಕ್ಕುದೆಸೆ ನೆಕ್ಕಿತೆನೆ ಜೋಲೆ,
ಪದಹತಿಗೆ ರಣರಂಗವೆಡಬಿಲಕೆ ತೂಗಿತೆನೆ
ತೊಡಗಿದಳ್ ನರ್ತನಕೆ ಕರ್ಕಶ ಕದನಕಾಳಿ: ೨೨೩೦
ರುಂದ್ರ ಚಾಮುಂಡಿಯ ಚಲಚ್ಚಂಡ ಛಂದಸಿಗೆ
ಚಲಿಸಿತು ಚಮೂದ್ವಯಜಳಧಿ ಲಯವಿನೋದದಲಿ!

ಬಭ್ರುವಾಹನ ಸೇನೆಯೊಂದು ಕಡೆ; ಸಮ್ಮುಖದಿ
ಪಲ್ಗುಣ ವರೂಥಿನಿಯ ಪಂಕ್ತಿ : ಮುಂಗಾರಿನಲಿ
ಸಿಡಿಲು ಮಿಂಚಿನ ಗಬ್ಬದೆರಡು ಕೂರ್ಮುಗಲೋಳಿ
ಬಾನ್ಗಾಳಿಯುರುಬಿಂಗೆ ಸಂಘಟ್ಟನಂಗೈದು
ತಟಿದಗ್ನಿಯುಳ್ಕೆಯನಿರಮ್ಮದಾರಾವಮಂ
ಕಾರುವ ಮೊದಲ್ ದಿಟ್ಟಿಗಾಳೆಗಂ ಗೆಯ್ವಂತೆ
ನಿಂದುವಾಯೋಜನಂಗೊಂಡು ರಣಕಣುವಾಗಿ.
ತೇರಾನೆ ಕುದುರೆ ಕಾಲಾಳುಗಳ್ ತಿರೆಯೆಲ್ಲಮಂ ೨೨೪೦
ತೀವಿಜೃಂಭಿಸಿದತ್ತು, ಶೀರ್ಷಕ ತನುತ್ರಾದಿ
ಭರ್ಮಕರ್ಮದ ವರ್ಮ ಚರ್ಮಾಸಿ ತೂಣೀರ
ಖಡ್ಗ ಕೋದಂಡ ಮುದ್ಗರ ಗದಾ ಕೇತನಂ
ಭೀಂಡಿವಾಲಂ ಚಕ್ರ ಪರಿಘಚಯಮಿತ್ಯಾದಿ
ನಾನಾಯುಧಂಗಳ ಕನತ್ಕನಕ ಕಾಂತಿಯಿಂ,
ದಿವಿಜ ದೃಷ್ಟಿಗುಮೆಂದು ಪರ್ವಮಾದುದೆನಲ್ಕೆ!

ಸಂಗರ ಪ್ರಾರಂಭ ಸಮಯ ತೂರ್ಯ ಧ್ವನಿಗೆ
ವೇಗದುದ್ವೇಗದಿಂ ರೋಷದಿಂ ಘೊಷದಿಂ
ಸಂಧಿಸಿತುಭಯ ಬಲಂ, ಭೂಕಂಪ ಕಾಲದಲಿ
ಸಮ್ಮುಖ ಶಿಖರ ಸೀಮೆಯಿಂದೆ ಬಂಡೆಗಳುರುಳಿ ೨೨೫೦
ಕಂದರ ತಲದಿ ಢಿಕ್ಕಿಹೊಡೆದು ಹುಡಿಹುಡಿ ಹಾರಿ
ಕಿಡಿಕಿಡಿ ಸಿಡಿಯುವಂತೆ. ಕರಿಘಟೆಯ ಬೃಂಹಿತಂ,
ಹಯದ ಹೇಷಾರವಂ, ಚಕ್ರಚೀತ್ಕೃತಿ ರವಂ,
ಸಿಂಜಿನಿಯ ಚಾಪಟಂಕೃತಿ, ಕಲಿಯ ಪೌರುಷದ
ರುಷಿತರಾವಂ, ಖಡ್ಗ ಖಡ್ಗದ ಖಣಿಲ್, ಕವಜ
ಶೀರ್ಷಕ ಠಣಾರವಂ, ಬಹುಲ ನಾನಾರವಂ
ಕೀಲಿಸಿತು ಕಿವಿಗತಿ ಕಠೋರವಂ! ಚಿಮ್ಮಿದುದು
ಕೆನ್ನೆತ್ತರಿನ ಚಿಲುಮೆ ಗಾಯಗಾಯಂಗಳಿಂ;
ಧುಮುಕಿತ್ತು ಶೊಣಿತದ ರಕ್ತಧುನಿ; ರಣಕಾಳಿ
ರುಂಡ ಮುಂಡಗಳ ಚೆಂಡಾಟವಾಡಿದಳಲ್ಲಿ; ೨೨೬೦
ಯಮ ಭಯಂಕರವಾದುದಾ ಕಳಂ. ಅಭ್ರದೊಳ್
ನೆರೆದಿರ್ದಮರಗಣಂ ಬೆರ್ಚಿದುದು. ಕರಯುಗದಿ
ವಿಜಯಮಾಲೆಯನಾಂತು, ಗಜಪುರದ ಕಡೆಗೊರ್ಮೆ
ಮಣಿಪುರದ ಕಡೆಗೊರ್ಮೆ ಬಗೆಯನಿರ್ಕಡೆ ಮಾಡಿ,
ಕೇಸೊಲವಿನುಯ್ಯಾಲೆಯಲಿ ನಲಿದಳ್ ವಿಜಯಲಕ್ಷ್ಮಿ!

ಇಂತುಟಾ ದಿನವೆಲ್ಲ ರಣದ ಕೋಲಾಹಲಂ
ಕೊಲೆಯ ಹಾಲಾಹಲಂ ಹರಿದುದೆಡೆಬಿಡದಲ್ಲಿ
ಮಣಿಪುರ ಧರಣಿಯಲ್ಲಿ. ಬಭ್ರುವಾಹನ ಜನನಿ
ತಿಳಿಯದೇನೊಂದುಮಂ ತೃಣ ಕುಟೀರದ ಮಧ್ಯೆ
ಬೇಡುತಿರ್ದಳ್ ಬಿಡದೆ ಫಣಿಧರ ಪಿನಾಕಿಯಂ ೨೨೭೦
ತನ್ನಭೀಷ್ಟಂ ಸಫಲಮಕ್ಕೆಂದು. ಪೊತ್ತಿಳಿದು
ಕತ್ತಲಾದುದು. ಮತ್ತೆ ಕತ್ತಲಲಿದುದಯದೆಡೆ
ಮುಂಬೆಳಕು ಮೈದೋರಿದುದು ಮಳೆಯ ಮರ್ಬಿನಲಿ.
ಖಿನ್ನತೆ ವಿಷಣ್ಣತೆಗಳೆತ್ತಲುಂ ಮುತ್ತಿಬರೆ
ಹಾರೈಸಿದಾ ವಾರ್ತೆ ಬರದೆ ಚಿತ್ರೆಯ ಮನಕೆ
ಭವಿಸಿತೊಂದತಿ ಚಿತ್ರಹಿಂಸೆ. ಮೇನಾ ದಿನಂ
ಕಳಿದುದು ನಿರೀಕ್ಷಣೆಯ ನಿಶಿತಧಾರೆಯ ಮೇಲೆ.
ಪತಿಸುತಹಿತದಿ ಕುತೂಹಲಿತ ಮಾನಸೆಯಾಕೆ
ಪೂಜಿಸಿದಳಾ ರಾತ್ರಿ, ತಮದ ನಿದ್ರೆಯನುಳಿದು
ಸಾತ್ವಿಕ ತುರೀಯ ನಿದ್ರಾ ಭಕ್ತಿರಸದಿಂದೆ. ೨೨೮೦
ಇರುತಿರಲ್‌, ಧ್ಯಾನನಿದ್ರಾ ಸ್ವಪ್ನದರ್ಶನದಿ
ಕಾಣಿಸಿತ್ತೊಂದು ದಿವ್ಯಾಕೃತಿ ರುಚಿರ ಮೂರ್ತಿ!

“ಸಾಧ್ವಿಯೆ, ತಪಸ್ವಿನಿಯೆ, ಪಿಂಗಲ ಜಟಾಧಾರಿ
ಮಂಗಲ ವಿಭೂತಿಯಾ ತ್ರಿಶೂಲಿಯಾಣತಿಯಂತೆ
ಬಂದಿಹೆನೆಡೆಗೆ ನಿನ್ನ. ಮಣಿಪುರದ ಕಣದಲ್ಲಿ
ಮಡಿದುದೌ ನಿನ್ನ ರಣಕಲಿ ಕುಮಾರನ ಕೈಲಿ
ಕದನ ಮುಖದಲಿ ಫಲ್ಗುಣನ ಸೇನೆಯಲಿ ಜನಂ
ವಿಫುಲ ಸಂಖ್ಯೆಯಲಿ. ಚಣಚಣಕೆ ವೈರಿಯ ದಳಂ
ಬಲಗುಂದುತಳಿದುಳಿದು ಹಿಂಜರಿಯತೋಡುತಿದೆ
ಲೆಕ್ಕಿಸದೆ ವೀರ ಪಾರ್ಥನ ವೀರವಾಣಿಯಂ. ೨೨೯೦
ಗಾಯಗೊಂಡರ್ ಕೆಲರ್ ಸೇನಾನಿಗಳ್; ಕೆಲರ್
ತೊರೆದರಸುವಂ. ಮೇಣುಳಿದವರ್ಗೆ ಮಿಡುಕುತಿದೆ
ಹರಣಂ ಕೊರಳಿನಲ್ಲಿ. ಸೂರ್ಯನ ಮಗನ ಮಗಂ,
ಹಂಸಧ್ವಜಂ, ನೀಲಕೇತು, ಮೇಣನುಸಾಲ್ವ
ಪ್ರದ್ಯುಮ್ನ ಯೌವನಾಶ್ವಾದಿ ರಣವೀರರುಂ
ಬಳಲಿದರಳವಿಗೊಟ್ಟು. ಕಟ್ಟಕಡೆಗೇನೆಂಬೆ?
ಕೈಗೂಡಿತಾಹವಂ ನಿನ್ನ ಕಂದಗೆ ನರಗೆ : ಮೇಣ್
ಹಬ್ಬಿತು ಪ್ರಳಯ ಭೀತಿ ಲೋಕಕ್ಕೆ; ಕಂಪಿಸಿತು
ರೌಪ್ಯಗಿರಿ; ಸುಗಿದರಮರರ್ ಬೆದರಿ ಬಿರುವುರಿಗೆ!
ದೇವಪತಿ ಪರಿದೋಡಿ ಕೈಲಾಸಕಭವನಂ ೨೩೦೦
ಬೇಡಿದನ್ ಕ್ಷೇಮಮಂ ತನ್ನ ನಂದನ ನರಗೆ,
ನನ್ನನಿಲ್ಲಿಗೆ ಕಳುಹಿಸಿದನ್ ಸುಧಾಕರಮೌಳಿ
ನಿನ್ನ ಭಕ್ತಿಗೆ ಮೆಚ್ಚಿ : ಹೋಗು ನಡೆ ಬೇಗದಲಿ;
ತಳುವಿದರೆ ಬೀಳುವುದು ಪಾರ್ಥನ ಕಳೇಬರಂ
ರಣಧರೆಗೆ; ತೊಡಗಿದೆ ನಿಶಾಯುದ್ಧಮೀ ರಾತ್ರಿ;
ನಿನ್ನ ಹೃದಯದ ಬಲಯನಿತ್ತು ರಣದೇವತೆಗೆ,
ಕೆರಳ್ದ ಬಿದಿಯಂ ತಣಿಸಿ, ಪತಿಸುತರ್ಗಿರ್ವರ್ಗೆ
ನೀಂ ಶುಭಂಕರಿಯಾಗು, ನಡೆ, ಹೋಗು ಬೇಗದಲಿ!”

ನಡುಗಿ, ಬೆದರುತೆ, ಬೆವರಿ, ಕಣಸಿನಿಂದೆಳ್ಚತ್ತು,
ಹಾ ಎನುತ್ತಾ ಜನನಿಯಾ ಸತಿಯುಮಾ ಚಿತ್ರೆ ೨೩೧೦
‘ಹಾ ಮಗನೆ! ಹಾ ಪತಿಯೆ!’ ಎಂದೊರಲಿ ಕಂಗೆಟ್ಟು
ಕುದಿವೆದೆಯಳೋ ಎಂದು ರೋದಿಸೆಲೆವನೆಯಿಂದೆ
ಪೊರೊಮಟ್ಟು, ಕರ್ಗ್ಗತ್ತಲೊಳ್ ದೀಪಾರಾಜಿಯಿಂ
ತೊಳಪ ಬೀದಿಗಳ ನಡುನಡು ಮಂದಿ ಕಿಕ್ಕಿರಿದು
ನುಡಿಯ ಡಂಗುರ ಹೊಯ್ಯುತಿರೆ ವಿಜಯವಾರ್ತೆಯಂ,
ಕೇಳಿ, ಹವ್ವನೆ ಹಾರಿ ಹಮ್ಮೈಸಿ! ಮುತ್ತಿದರ್
ಕೆಳದಿಯರವಳ ಸುತ್ತಿ, ನಿರ್ಜನತೆ ನಿಶ್ಚಿಂತೆ
ನಿರ್ಮಲತೆಗಳ ತಪಸ್ವಿನಿ, ರಾಣಿ, ಅರಮನೆಗೆ
ಇರುಳೊಳೊರ್ವಳೆ ಬಂದುದಕ್ಕಜಂ ತಾಳ್ದು. ೧೩೨೦
ಹೇಳಿದರು ಧೈರ್ಯಮಂ : ರಣವಾರ್ತೆ ಶುಭವೆಂದು :
ದೇವಿ, ನೀಂ ಧನ್ಯೆ ಮಗನಂ ಪಡೆದು; ಪಾರ್ಥನಂ
ಹಿಮ್ಮೆಟ್ಟಿಸಿದನೆಂದು; ವೈರಿಯನುರಿಪನೆಂದು;
ಮಣಿಪುರದ ಕೀರ್ತಿಗೆ ಕಳಶವಿಕ್ಕಿ ವಹನೆಂದು :
ಹಜ್ಜೆ ಹಜ್ಜೆಗೆ ವೈರಿವಾಹಿನಿ, ವಿಹಂಗಮಂ
ನಾರಾಚದೇರಿಂಗೆ ಗರಿಗಳನುದುರಿಸುತ್ತೆ
ಹೋಹಂತೆ, ದಿಂಡುರುಳಿ ಬೀಳುತಿರುವಾಳ್ಗಳಂ
ಪತ್ತು ಸಾಸಿರ ಲಕ್ಕದಂದುರ್ಚುತೆ ಕೆದರಿ
ಕಟ್ಟೋಡುತಿದೆ ಎಂದು; ಭೀತಿ ಬೇಡಣಮೆಂದು!
ಕಿವಿಗೆ ನುಡಿಯಲಗಿಕ್ಕಿ ತಿರುಪಿದವೊಲಾಗಲಾ ೨೩೩೦
ವೀರಸತಿ ತಡವ ಮಾಡದೆ ಬೇಗ ತನ್ನಿಮೆನೆ
ತಂದರಾಳ್ಗಳದೊಂದು ಧವಳ ರಣತೇಜಿಯಂ.
ಶಾಂತಿಯಂ ಸೂಚಿಸೆ ಶರತ್ಸಮಯ ತೋಯದಂ
ಬೋಲೆಸೆವ ಧೌತಧವಳಾಂಬರ ಪತಾಕೆಯಂ
ಸರ್ವರುಂ ಕಾಣ್ಬಂತುಟ್ಟೆತ್ತಿ, ಮೇಣೂದುತ್ತೆ
ಸಂಧಿ ಸೂಚಕ ಸುಸ್ವರದ ವೀರ ತೂರ್ಯಮಂ,
ನೆಗೆದು ಕುದುರೆಯ ಬೆನ್ಗೆ ನಡೆದಳಾಹವದೆಡೆಗೆ
ಕವಚಗಿವಚಂ ಕತ್ತಿಗಿತ್ತಿಗಳನೊಂದುಮಂ
ಕೈಕೊಳದೆ, ಕೊರಳ ಜಪಮಣಿಮಾಲೆ ಮೇಣುಟ್ಟ
ನಾರು ಬೆಳ್ಳನೆ ಸೀರೆಯಲಿ! ಕೆಳದಿಯರ್ಕೆಲರ್ ೨೩೪೦
ಹಿಂಬಾಲಿಸಲ್ ಯತ್ನಿಸಿದರೇನು? ನಿಮಿಷದಲಿ
ಮಿಂಚಿ ಕಣ್ಮರೆಯಾಗಿ ಹೊಕ್ಕಳು ಕಳನ ನಡುವೆ
ಬಭ್ರುವಾಹನ ಜನನಿ, ಸಿತವಾಹನನ ಪತ್ನಿ,
ಮಣಿಪುರದ ರಾಣಿ ಚಿತ್ರಾಂಗದೆ.

ಯಮಾಲಯಂ
ತಾನೆನಲ್ಕೆಸೆದುದಾ ರಣಭೂಮಿ! ಅಸ್ರಾಗ್ನಿ
ಪೊತ್ತಿದ ಸಹಸ್ರಾರು ದೀವಿಗೆ ಸೊಡರ್ಮಾಲೆಗಳ್
ನರ್ತಿಸುವ ತಿಮಿರ ಕಾಳಿಯ ರಸನೆಗಳ ಹೋಲಿ
ರಂಜಿಸುದುವಲ್ಲಿ. ನೆತ್ತರುರುಷ್ಟಿ ತೊಪ್ಪನೆಯೆ
ತೊಯ್ದ ಕೆಂಗೆಸರಿನಲಿ, ಕಿವಿಗೆ ಕರ್ಕಶಮಾದ
ರಣದ ಭಿಷಣ ರುದ್ರ ಕಠಿನ ಕೋಲಾಹಲಂ ೨೩೫೦
ಮೀಸಿದತ್ತು. ರೋಷದುನ್ನಾದ ಶಿಖರಿಯನೇರಿ
ಜ್ವಾಲಾಮುಖಿಯೆನಲ್ಕೆ ಧುಮುಕುತಿರ್ದುದು ರಣಂ!

ಕೂರ್ಮೊನೆಯ ಬಾಣಾಳಿ ಹಾಸುಹೊಕ್ಕಡಹಾಯ್ದು
ಸಂಚಳಿಸಿ, ನೆರೆಯಗುರ್ವಾಗಿರ್ದು, ಮೃತ್ಯುವಿನ
ಭೋಜನ ಸಮಯ ವದನ ರದನ ಪಂಜರದಂತೆ
ದುರ್ದಮ್ಯ ದುರ್ವಾರವಾಗಿ, ಕೊನೆಯಿಲ್ಲವೆನೆ
ಕಣ್ದಿಟ್ಟಿ ಹೋಹನ್ನೆಗಂ ಹಸರಿ ಹಬ್ಬಿರ್ದ
ರುಂದ್ರ ರಣರಂಗದಲಿ, ನುಗ್ಗಿ ನಡೆದಳ್ ಚಿತ್ರೆ,
ಬಿಳಿಯ ಬಾವುಟವಿಡಿದು, ತುತ್ತುರಿಯ ದನಿಗೈದು,
ಶಾಂತಿಯಂ ತೋರಿ ಮೇಣ್ ಸಂಧಿಯನಿರದೆ ಸಾರಿ! ೨೩೬೦
ಚುಚ್ಚಿದುವು ಬಾಣಗಳಲಗು ತೇಜಿಯಂ ಮತ್ತೆ
ರಾಜ್ಞಿಯಂ. ಬಿಳಿಯ ಮೈ ಕೇಂಪಾದುದಶ್ವಕ್ಕೆ.
ಸಾಧ್ವಿಯಾ ಶ್ವೇತಾಂಬರಂ ರಕ್ತ ರಂಗಾಗಿ
ಚಿಮ್ಮಿತ್ತರುಣಜಲಂ ಧವಳಿಮ ಪತಾಕೆಗುಂ.
ಯುದ್ಧ ಶಬ್ಧದ ಮಧ್ಯೆ. ಪೊಂಜುಗಳುರಿವ ಕಾಂತಿ
ಕತ್ತಲಲಿ ಕಣ್ಮಾಯೆಗೈಯುವಾ ಗಲಿಬಿಲಿಯ
ಹೋರಟೆಯ ಹೋರಾಟದಟಮಟದ ಹುಚ್ಚಿನಲಿ
ಮೊದಲು ಲೆಕ್ಕಿಸಲಿಲ್ಲವಾರುಮಾ ತೇಜಿಯಂ
ಮೇಣದರ ಮೇಲಿರ್ದ ಶಾಂತಿಯ ಪತಾಕೆಯಂ
ಪಿಡಿದು ಸಂಧಿಯ ತುತ್ತುರಿಯನೂದುತಿರ್ದಳಂ. ೨೩೭೦
ಆದರೇನೊಂದಿನಿತು ಹೊತ್ತಿನೊಳೆ ಕೆಲರಾಳುಗಳ್
ಕೇಳಿ ತೂರ್ಯವನೊಡನೆ ಕಂಡರಾ ಧ್ವಜಮುಮಂ.
ವೈರಿಯ ಕುಹುಕವೇನು? ಅಲ್ತಲ್ತು! ನೋಡು ಅದೋ!
ಶುಭದೇವತಾ ಮುರ್ತಿ, ಬಭ್ರುವಾಹನ ಜನನಿ,
ವೀರ ವೀರರ ವೀರಮಾತೆ! ಹೋ ಹೋ ಎಂದು
ಗುಲ್ಲೆದ್ದುದೊಡನೆ! ಭಟರಲಿ ಕೆಲವರದೊ ಮುಂದೆ
ನುಗ್ಗುತಿಹರಾಕೆಯ ಸಹಾಯಕೆ!

ಅಲೆಕ್ಕಿಸುತೆ
ತನಗಾದ ನಾರಾಚದೇರ್ಗಳಂ, ಚಿತ್ರಾಂಗಿ
ಬಭ್ರುವಾಹನ ರಥದ ಕೇತನವನರಸುತ್ತೆ
ಧಾವಿಸುತ್ತಿರೆ, ಕಾಣಿಸಿತು ಮುಂದೆ ದೂರದಲಿ ೨೩೮೦
ಸಮರ ಭೈರವ ಭೀಷ್ಮಲೀಲೆಯಲಿ ತೊಡಗಿರ್ದ
ತಂದೆ ಮಕ್ಕಳ ಕಾಹುರದ ಕಾಳೆಗದ ರಾಹು!
ಕಾಣಿಸಿತು ನೆತ್ತಿಯೆಡೆ ರಣಚಂಡಿಯೊಡಗೂಡಿ
ರಕ್ತದಾಹಾತುರದಿ ಕುಣಿಯುತಿರ್ದಾ ಮೃತ್ಯು!
‘ಕೊಳ್ಳೆನ್ನ, ಕೊಳ್ಳೆನ್ನ! ಕಾಪಾಡು ಕಾಪಾಡು,
ಪತಿಸುತರನೋ ಮೃತ್ಯು!’ ಎಂದೆನುತ್ತಾ ರಾಣಿ
ಹೊತ್ತ ಬಾವುಟದೊಡನೆ ತೂರ್ಯದ ಮಹಾರವಂ
ಪೊರಪೊಣ್ಮಿ ಕರೆಗಣ್ಮಿ ಕಳಕೆಲ್ಲ ಕೇಳ್ವಂತೆ
ದನಿಗೈದು, ಹಯದಿಂ ಕೆಳಕ್ಕೆ ಧುಮ್ಮಿಕ್ಕಿ ‘ಹಾ!
ಹಾ! ಮಗನೆ! ಹಾ ಮಗನೆ! ಕೈಯ ತಡೆ! ಕೈಯ ತಡೆ! ೨೩೯೦
ದಮ್ಮಯ್ಯ! ದಮ್ಮಯ್ಯ!’ ಎನುತಾರ್ದು, ಬಸವಳಿದು,
ಧೊಪ್ಪೆಂದು ಕೆಡೆದಳಾ ತಂದೆ ಮಕ್ಕಳ ನಡುವೆ,
ಸೇತುವೆನೆ ಪಿಣಿಲು ಹೆಣೆದಾ ಕಣೆಯ ರುಧಿರಮಯ
ಶಯ್ಯೆಯಲಿ! ಧುಮುಕಿದರು ಹಾ ಎನುತ್ತಿರ್ವರುಂ
ಬಭ್ರುವಾಹನ ನರರ್ ತಂತಮ್ಮ ತೇರ್ಗಳಿಂ!
ನಡೆದೋಡಿದರ್ ನಾರಿ ಬಿದ್ದೆಡೆಗೆ : ಬಳಿಯೆಯೆ
ಬಾನಂಗಳಿಡಿದಾ ಪತಾಕೆಯಿದೆ! ಹೊನಲಿಡುತೆ
ಹರಿಯುತಿದೆ ನೆತ್ತರಾ ಮೆಯ್ಗಾಯಗಳ ಮುಖದಿ!
ತಾನುಟ್ಟ ಬಟ್ಟೆ ತೊಪ್ಪನೆ ತೊಯ್ದು ಸೋರುತಿದೆ!
ಮೈಮರೆತ ತಾಯಿಯಂ ಚಿತ್ರಾಂಗದೆಯ ಸೂನು ೨೪೦೦
ಕಂಡೊಡನೆ, ಹಾ ಎನುತ್ತಡಿಗೆ ಮುಡಿಯಂ ಚಾಚಿ
ಕಂಗೆಟ್ಟು ರೋದಿಸುತ್ತಿರಲರ್ಜುನಂ ತನ್ನ
ಸೆರಗಿನೆಲರಂ ಬೀಸಿ, ತರಿಸಿ ನೀರಂ, ನೀಡಿ,
ಮಾಡಿದನು ಶುಶ್ರೂಷೆಯಂ. ಕಣ್ ತೆರೆಯುತಾ ಚಿತ್ರೆ
ಹುಯ್ಯಲಿಡುವಾ ತನ್ನ ಕಂದನಂ, ಪಕ್ಕದೊಳೆ
ಖಿನ್ನಮುಖಿಯಾಗಿರ್ದ ಪತಿದೇವನಂ ನೋಡಿ,
ಕರುಣೆಯಿಂ ದುಃಖದಿಂ ಹರ್ಷದಿಂ ರಾಗದಿಂ
ನೊಡಿ, ನೆರೆನೋಡಿ, ನಿಡುಸುಯ್ಯುತೆ ನುಡಿದಳಿಂತು:
“ದುಗುಡಮೇಕೆಲೆ ಮಗನೆ? ಸಂತಸಕೆ ಸಮಯಮಿದು!
ನಾನಳಿವೆನಾದರೇಂ? ಮಂಗಳ ಮುಹೂರ್ತಕ್ಕೆ ೨೪೧೦
ನಾನಿಲ್ಲಿಗೈತಂದನಲ್ಲದಿರ್ದೊಡೆ ನಿನ್ನ ಈ
ತಂದಯಂ ಕೊಲುತಿರ್ದೆ ನೀಂ! ಮಹಾ ಪಾತಕಕೆ
ಪಕ್ಕಾಗುತಿರ್ದೆ. ನಾನಿನ್ನೆಗಂ ನಿನ್ನೊಡನೆ
ಪೇಳದ ರಹಸ್ಯವೊಂದಿರ್ಪುದದನಿಂದೊರೆವೆನ್
ಆಲಿಸೈ. ನೀನುಮಂತೆಯೆ ಕೇಳ್ವುದೈ, ನರನೆ :
ನೀನೆನ್ನ ಹೃದಯೇಶನೆನ್ನ ಪತಿ! ಬೆಚ್ಚದಿರ್,
ಬೆರಗಾಗದಿರ್, ಕೆಚ್ಚುನುಡಿಯೆನ್ನದಿರ್.”

ಚಿತ್ರೆ
ಹೇಳಿದಳು ತನ್ನ ಕಥೆಯಾದ್ಯಂತಮಂ, ಬಹುಲ
ಸಂಕ್ಷೇಪದಿಂದೆ. ನರನಾಮಾಂಕಿತದ ಮುದ್ರೆಯಂ
ಶ್ರೀಯುಂಗುರವನಿತ್ತಳಾತನ ಕೈಗೆ ಸಾಕ್ಷಿಯಂ. ೨೪೨೦
ಕೈಯೊಂದರೊಳ್ ಮಗನ ಮತ್ತೊಂದರೊಳ್ ಪತಿಯ
ಪಾಣಿಯಂ ಪಿಡಿದು, ಸಂಧಿಯನೊರೆದು, ಶಾಂತಿಯಂ
ನುಡಿದು, ಶಾಂತಾತ್ಮದಿಂ ಶಿವನಾಮವಂ ಸ್ಮರಿಸಿ
ಕಣ್ಣಮುಚ್ಚಿದಳಮೃತಮಯ ಚಿರಸಮಾಧಿಯಲಿ!
ಪ್ಲವಿಸಿತ್ತಸೀಮರೋದನಮೆತ್ತಲುಂ! ರಣಂ
ಮಿಂದತ್ತು ಕರೆವ ಕಂಬನಿ ಮಳೆಯ ತೀರ್ಥದಲಿ!

ಕಳೆದುದಾ ವಿಷಮ ಮಿಷಮಯ ರಾತ್ರಿ. ಮರುದಿನಂ
ಮೂಡಿದುದು. ಕವಿದು ಮೋಡಂ ಸೋನೆಮಳೆ ಸೂಸಿ
ಖಿನ್ನವಾಗಿತ್ತಾ ಜಗತ್ತು ಮೌನದೊಳತ್ತು.
ಬೆಚ್ಚಿ ಬಿದ್ದತ್ತಿದ್ದಕಿದ್ದಂತೆ ಮಣಿಪುರಂ ೨೪೩೦
ಧರೆ ಬಿರಿಯಲಳ್ಳರಿಯೆ ಶೋಕ ಭೇರೀರವಂ,
ಕಹಳೆ ನಿಸ್ಸಾಳತತಿ! ಮೃದುವಾದ್ಯ ಸುಸ್ವನಂ
ವೈದಿಕ ಪೊರೋಹಿತರ ಮಂತ್ರಘೋಷಂ ಬೆರಸಿ
ಮೇಲೆದ್ದುದೊಯ್ಯನೊಯ್ಯನೆ ಜನರ ರೋದನದ
ಕೂಡೆ. ಮಣಿಪುರದರಮನೆಯ ಕನಕ ವಪ್ರದಿಂ
ಪೊರಮಟ್ಟು ನಡದುದು ಮಸಣಯಾತ್ರೆ ವಾರಿಧಿಯ
ವಿಸ್ತೃತ ಹರಿದ್ರಾಭ ಸೈಕತ ಮೇಲೆಯೆಡೆಗೆ.
ದಂತಿಗಳ ಪಂತಿಗಳ ವಾಜಿಗಳ ರಾಜಿಗಳ,
ಕಾಲಾಳುಗಳ ಸಾಲುಗಳ, ರಥ ಸಮೂಹಗಳ,
ದೃಷ್ಟಿ ದೂರಂಬರಂ ನದಿಯಂತೆ ಪರಿದಿರ್ದ ೨೪೪೦
ನಾಗರಿಕ ನರನಾರಿಯರ ದಳದ ಮೆರವಣಿಗೆ
ಚಲಿಸಿತು ಕಡಲತಡಿಗೆ, ದುಃಖಾಭಾರಾಕ್ರಾಂತ
ಮಂದಗತಿಯಿಂದೆ. ಚಾಮರ ಛತ್ರಗಳ ಮಧ್ಯೆ
ಪುಷ್ಪ ನವಪರಿಮಳಗಳಿಂದೆ ಸಿಂಗರಗೈದ
ಚಿತ್ರಾಂಗದೆಯ ಕಳೇಬರವಿರ್ದ ಶಿಬಿಕೆಯೆಡೆ
ಪಾರ್ಥ ಪಾರ್ಥಜರಿರ್ವರುಂ ಕಾಲ್ಮಡಿಗೆಯಿಂದ
ಸಾಗಿದರಿತರ ಮಿತ್ರ ಸಾಮಂತ ಗೋಷ್ಠಿಯಲಿ.
ಕಟೆಯೊಳಸಿಕೋಶಮಿರೆ ಕನಕ ಖಚಿತಂ ಚಾರು,
ಝಗಝಗಿಸೆ ಕೌಕ್ಷೇಯಕಂ ರಾಜಗೌರವಕೆ
ಮುಷ್ಟಿಯಲಿ, ಛಂದೋ ಗಮನದಿಂದೆ ಮನದಿಂದೆ ೨೪೫೦
ನಡೆದರಾ ಉಭಯ ಸೈನ್ಯಗಳೈಕಮತ್ಯದಲಿ.

ಚಂದನ ಶ್ರೀಗಂಧ ಕಾಷ್ಠದಿಂಧನದಿಂದೆ,
ಕಸ್ತೂರಿ ಕರ್ಪೂರ ಸಜ್ಜರಸ ಲೋಬಾನ
ಯಕ್ಷಕರ್ದಮದಿಂದೆ, ಬಕುಳ ಮಲ್ಲಿಗೆ ಜಾಜಿ
ಮೊಲ್ಲೆ ಸಂಪಗೆ ಕಮಳ ದೇವಕುಸುಮಗಳಿಂದೆ
ಕಂಪಿಡಿದು, ಸೊಂಪಿಡಿದು, ಮರ್ತ್ಯದಿಂ ಸ್ವರ್ಗಕ್ಕೆ
ಕೊಂಡೊಯ್ಯುವೊಂದು ಬೃಂದಾರಕ ವಿಮಾನವೆನೆ,
ಚಿತೆ ಹೂಡಿ ನಿಂದುದು ವನಧಿ ವೇಲೆಯಲಿ. ಮಂದಿ
ಸಂದಣಿಸಿ ಬಂದು ನೆರೆದುದು ಕಡಲಿನಂಚಿನಲಿ,
ಮತ್ತೊಂದು ಮಾನವ ಸಮುದ್ರವೆಂಬಂತೆ. ಘನ ೨೪೬೦
ಘನಸಾರ ಕಾಶ್ಮೀರಜನ್ಮಾದಿ ಲೇಪನದ,
ಧೌತ ಕೌಶೇಯ ಪರಿದಾನ ಪರಿಶೋಭಿತದ,
ನವರತ್ನಮಯ ಹೇಮದಾಭರಣ ಭೂಷಿತದ,
ಉಚಿತ ಪರಿಕರ್ಮಾಂಗ ಸಂಸ್ಕಾರ ಕೃತ ಶವಂ
ಚಿತೆಗಡರ್ದತ್ತು. ಮೃದುವಾದ್ಯ ವೀಣಾರವಂ
ಪೊರಪೊಣ್ಮಿತಾಕ್ರಂದನಂವೆರಸಿ. ಮಾರುತಂ
ಗಂಧಭಾರಕೆ ಕುಸಿದು ಸುಯ್ದಿರೆ, ಸಮುದ್ರಪತಿ
ಮೊರೆದಿರೆ ತರಂಗ ಸಂಕುಲ ನಾದದಿಂ, ನಭಂ
ಸೋನೆಮಳೆ ನೆವದಿಂದೆ ಬಿಡದೆ ಕಂಬನಿ ಸೂಸೆ,
ಸರ್ವಶುಚಿ ಸಪ್ತಾರ್ಚಿ ಸೂಡನದೊ ಪತ್ತಿದಂ ೨೪೭೦
ಪೊಗೆ ಸೂಸಿ, ಕಿಡಿಗೆದರಿ, ನೆತ್ತರುರಿನಾಲಗೆಯ
ತಾಂಡವದಿನಿಂಧನ ಸುಗಂಧ ಚಿತೆಯಂ ನೊಣೆದು
ನೆಕ್ಕಿ : ಧಗಧಗಧಗಿಸುತಾಪೋಷನಂಗೈದು!

ಕಂಡರೆಲ್ಲರು ಚಿತಾ ಚಿತ್ರಭಾನುವ ಮಧ್ಯೆ,
ಕಣಸು ಕಂಡಂತೆ, ಚಿತ್ರಾಂಗದೆಯ ಸುಪ್ರಭಾ
ಸುರಧನು ದುಕೂಲ ಸುಂದರ ದೇವಮೂರ್ತಿಯಂ,
ಪುಷ್ಪಕ ವಿಮಾನ ಪೀಠಸ್ಥೆಯಂ! ನಂದನದ
ಸುರಕುಜದಲರ ಹಾರಮಂ ಪಿಡಿದು ಗೀರ್ವಾಣ
ಫಣಿವೇಣಿಯರುವಿರ್ದರಲ್ಲಿ, ಸುರಗಾನಮಂ
ಪಾಡಿ. ನೋಡುತಿರೆ ಪುಷ್ಪಕಮೇರ್ದುದಂರಕೆ ೨೪೮೦
ಜನತೆಯುತ್ಕಂಠೆಯಲಿ!

ಜ್ಞಾನಮಜ್ಞಾನಮಂ
ದಹಿಸುವಂತಗ್ನಿ ಸುಡೆ ಸುಡೆ ಕಾಯ ಮಾಯೆಯಂ
ತವಿಸದರದಂ ಪ್ರೇಮದಮೃತತ್ವದಂತಿರ್ದು
ಕುಂಭ ಕುಂಭಂಗಳಲಿ ತುಂಬುಮೆನೆ ತುಂಬೆರದ
ಫೇನ ಧವಳಿಮ ಧೇನುದುಗ್ಧಾಭಿಷೇಕದಿಂದೆ!

ಹಗಲಿರುಳು ಏಳುದಿನಮಲ್ಲಿ ಚೈತ್ಯಾಲಯಂ
ಚಿತ್ರಾಂಗದೆಯ ಯಶಶ್ಚೈತ್ರ ಸುರತರುವಂತೆ
ಬೆಳದುದೊಯ್ಯನೆ ಹಾಲುಗಲ್ಲಿನಲಿ. ಕುಳಿರಿಂದೆ
ಹೆಪ್ಪಾದ ಹಾಲ್ಗಡಲಿನೈಕಿಲೊಳ್ಗಡ್ಡೆಯಂ
ಕಡಿಕಡಿಯುತ್ತಿಟ್ಟಿಗೆಯನೊಟ್ಟಿ, ಕಲ್ಪನೆಯಲ್ಲಿ ೨೪೯೦
ಸವಿಯ ನೆನಹಿನ ಮನೆಯನೊಲಿದು ನಿರ್ಮಿಸುವಂತೆ,
ಕಟ್ಟಿದರಜಸ್ರಂ ಸಹಸ್ರ ಶಿಲ್ಪಿಗಳಲ್ಲಿ
ಸ್ಮಾರಕ ನಿಕೇತನ ಸ್ತೂಪಮಂ! ತಿರೆಮೊಲ್ಮೆ
ಸಿರಿವೆತ್ತಿ ಸಗ್ಗನೀಲಿಗೆ ಮುತ್ತು ಕೊಡುವಂತೆವೋಲ್
ಮಣಿಪುರ ಮನದ ಮಹಾ ಸ್ಮೃತಿಸುಧಾಶಿವರೂಪಿ ತಾಂ
ಮೆರೆದುದಾ ಮೂಕಶೊಕದ ಶಿಲೆಯ ಸಂಗೀತೆ!