ಹೇ ಮಧುರ ರಸಮಯ ರಸಾಲ ಧನುವಿಂದೆಸೆವ
ಅತನುದೇವ, ರತೀಶ, ಮಾವು ತಾವರೆಯಸುಗೆ
ನೀಲ ನೈದಿಲೆ ಮಲ್ಲಿಗೆಯ ನಿನ್ನ ಪೂಗಣೆಗೆ,
ಪೆಣ್ದುಂಬಿಗಳ ಕೋದು ಕಯ್ಗಯ್ದು ನಿನ್ನಿಂಪು
ಸಿಂಜಿನಿಯ ಸವಿದನಿಗೆ ಎದೆಸೋಲದಿಹರೊಳರೆ ೪೨೦ಈ ಬೃಹದ್ಬ್ರಹ್ಮ ಸೃಷ್ಟಿಯಲಿ? ತಾಪಸರೆರೆಯ
ಪಿಂಗಲ ಜಟಾಜೂಟ ನಿಟಿಲಾಕ್ಷನಾದಿಯಲಿ
ಬೀಷಣ ತಪಸ್ಸಾಧನಾರಕ್ತಿಯಿಂ ಮಹಾ
ನಿರ್ವಿಕಲ್ಪ ಸಮಾಧಿಯೊಳ್ ಮಗ್ನನಾಗಿರಲ್,
ಸ್ವಾಮಿಯ ವಿರಾಗದಿಂ ಸೃಷ್ಟಿ ರಸವಾರುತಿರೆ,
ಬತ್ತುತಿರೆ ಜೀವರಾಶಿಗಳೆದೆಯ ಜೀವನಂ,
ಉರಿಹೊತ್ತಿ ಬರೆ ದೇವದೇವತೆಗಳೆಲ್ಲರ್ಗೆ,
ಕ್ಷೇಮ ಕ್ಷಯಿಸುತ್ತಿರಲ್ ರಾಕ್ಷಸರ ದೆಸೆಯಿಂದೆ,
ಪ್ರಳಯ ಸನ್ನಿಹಿತವಾದಂತಿರಲಕಾಲದೊಳೆ,
ತಲ್ಲಣಿಸಿ ಕುದಿಗೊಳೆ ಜಗತ್ತು, ಓ ರತಿಪತಿಯೆ, ೪೩೦
ಶಿವನೆದೆಗೆ ಕಚ್ಚೆದೆಯಿನೆಚ್ಚು ಕುಸುಮೇಷುವಂ
ಮುಕ್ಕಣ್ಣನುರಿಗಣ್ಣಿನಗ್ಗಿಗೊಳಗಾದೆ ನೀಂ!
ನಿನ್ನಿಂದೆ ಬುದುಕಿ ಬಾಳ್ದುದು ಜಗಜ್ಜೀವನಂ;
ನಿನ್ನಿಂ ಕಪರ್ದಿ ಶಂಕರನಾಗಿ, ಸುಕುಮಾರಿ
ಗಿರಿಜಾತೆಗರ್ಧದೇಹವನಿತ್ತು, ಸೃಷ್ಟಿಯಂ
ಪೊರೆಯುತಿವನನವರತಂ! ಹೇ ಅನಂಗನೆ, ನಿನಗೆ
ತನುವಿಲ್ಲದುದರಿಂದೆ ಸರ್ವತನು ನಾನಾಗಿ
ಜಗವನಾಳುತಿಹೆ. ನಿನ್ನಧಿಕಾರಕೆಡರಿಲ್ಲ.
ಸಾಗರ ತರಂಗಿಣಿಗಳಿಂದಭಿಷವಂಗೈದು,
ಕಾನನೋದ್ಯಾನ ನವ ಕುಸುಮಂಗಳಂ ಚೆಲ್ಲಿ, ೪೪೦
ಶುಕ ಪಿಕ ವಿಂಗ ಗೀತಾಂಜಲಿಯನರ್ಪಿಸುತೆ,
ಹೊಂದಳೆಗೆಯಲಿ ಸಂಧ್ಯೆಯೋಕುಳಿಯನೆರಚುತ್ತೆ,
ಸ್ವರ್ಣೋಜ್ಜ್ವಲೋದಯದ ಮಂಗಳಾರತಿಯೆತ್ತಿ
ಪ್ರಕೃತಿದೇವಿಯೆ ತಾನು ರತಿಯ ರೂಪದಿ ನಿನ್ನ
ಪೂಜಿಸುವಳನುದಿನಂ! ಇಂತಿರಲ್‌ ತವ ಮಹಿಮೆ,
ಪೇಳ್‌ ಅಬಲೆ ಚಿತ್ರಾಂಗಿ ತಾಂ ತಾಳಲಾಪಳೆ ನಿನ್ನ
ಭುವನ ಸಮ್ಮೋಹನ ಮಧುರ ಮೋಹನಾಸ್ತ್ರಮಂ?

ಲಜ್ಜಾ ವಿಷಾದದಿಂ ಕುಂದಿ, ಬೇಟದಿ ಕಂದಿ,
ಹಜ್ಜೆಯಿಡುತೊಯ್ಯನೆ ಶಿವಾಲಯಕ್ಕೈತಂದು,
ಪ್ರಾಂಗಳದೊಳೊಡತಿಯಂ ಕಂಡುಲ್ಲಸದಿ ಕೆನೆದು ೪೫೦
ಸಂಚಳಿಸುತಿರ್ದ ತನ್ನಾ ತೇಜಿಯನ್ನೇರಿ
ನಡೆದಳಂಗನೆ ದೂರ ಶಿಬಿರವಿದ್ದೆಡೆಗಾಗಿ.
ಹಸುರು ಬನದಲಿ ಸಾಗುತಿರೆ ಧವಳ ರಣತೇಜಿ
ಬಿಂಕಕ್ಕೆ ಕೊರಲ ಕೊಂಕಿಸಿ, ತನ್ನ ಬೆನ್ನಿನಲಿ
ತನ್ನಳ್ಕರೆಯ ಹೊರೆಯ ಹೊತ್ತ ಹೆಮ್ಮೆಗೆ ಹಿಗ್ಗಿ
ಖುರಪುಟಧ್ವನಿಗೈದು, ಕಾಡೆ ಕೆನೆವಂದದಲಿ
ಹೇಷಾರವಂಗೈದು, ತನ್ನ ಗಂಡಸುತನಕೆ
ಪೇಸಿದಳ್ ತಾನೆ ಚಿತ್ರಾಂಗದೆ. ಪರಾಕ್ರಮಂ
ಮುದ್ರಿಸಿದ ತನ್ನಂಗವಟ್ಟವ ಜುಗುಪ್ಸೆಯಿಂ-
ದೀಕ್ಷಿಸಿ, ನಿರಾಯುಧ ಲತಾಂಗಿಯರ ಲಾವಣ್ಯ ೪೬೦
ಮಿಕ್ರಮವನಬಲಾ ಮಹಾಬಲವನುರೆ ಹಾರಿ,
ಚೈತ್ರವಾಹಿನಿ ಬರುತಲಿರೆ ಕಾಣಿಸಿತು ಮುಂದೆ
ಕಣಿವೆಯಗಲಕೆ ಹಬ್ಬಿ ಪಾಳೆಯವ : ತರತರದ
ವರ್ಣಂಗಳಿಂದೆಸೆವ ಪಟಗೃಹದ ಪಂಕ್ತಿಯಿಂ,
ಶುಷ್ಕ ತೃಣ ಪರ್ಣ ವಿರಚಿತ ಕುಟೀರಾಳಿಯಿಂ,
ವಿಜಯ ಚಿಹ್ನೆಯ ಪತಾಕಾಧ್ವಜ ಪ್ರಸರದಿಂ,
ತಳಿರಿಡಿದ ಮಂಗಳದ ಗುಡಿ ತೋರಣಂಗಳಿಂ,
ಅಲ್ಲಲ್ಲಿ ಪಾಕಾಗ್ನಿಯಿಂ ಪೊಣ್ಮಿ ನಭಕೇಳ್ವ
ಧೂಮ ವಿನ್ಯಾಸಂಗಳಿಂ, ಸಮರ ವಿಶ್ರಾಂತ
ಸೈನಿಕರ ಹರ್ಷಪ್ರದರ್ಶನದ ಘೋಷದಿಂ, ೪೭೦
ಜಯಗಾನದಿಂ, ಹಾಸ್ಯ ಪರಿಹಾಸ್ಯ ಶಬ್ದದಿಂ,
ಹಟ್ಟಿಯಿಂದುಣ್ಮಿಬಹ ರಣವಾಜಿದಂತಿಗಳ
ಹೇಷಾರವಂಗಳಿಂ ಬೃಂಹಿತಧ್ವನಿಗಳಿಂ,
ಜಯಮತ್ತ ಡಿಂಡಿಮಧ್ವಾನಂಗಳಿಂ, ಮುಂದೆ
ರಣಶಿಬಿರಮೆಸೆದತ್ತು ಬಲು ಕಳಕಳತೆವೆತ್ತು
ಚಲನಮಯ ನಾದಮಯ ಜೀವಮಯವಾಗಿರ್ಪ
ಚಿತ್ರಗತ ಪತ್ತನದ ವಿಸ್ತೃತ ವಿಲಾಸದಿಂದೆ!

ಪಾಳೆಯದ ಹೆಬ್ಬಾಗಿಲಲಿ ತನ್ನನಿದಿರ್ಗೊಂಡು
ಸಂತೋಷದಿಂ ಸ್ವಾಗತವನಿತ್ತು ವಂದಿಸಿದ
ಸಾಮಂತ ಸೇನಾನಿ ಮನ್ನೆಯರ ಮನ್ನಿಸುತೆ ೪೮೦
ಉಚಿತ ವಚನದಲಿ, ಹೋದಿರುಳು ತಾಂ ಬರದಿರೆ
ಉಬ್ಬೆಗಂಬಡುತಿರ್ದರಿಗೆ ನೆವವನೊರೆಯುತ್ತೆ
ಮಿತಭಾಷೆಯಲಿ, ಉದಾಸೀನದಿಂ ಬೇಳ್ಕೊಂಡು,
ತನ್ನ ಬಿಡಾರದೆಡೆ ಆ ಮಹಾಪ್ರಾಣಿಯಿಂ
ಭುತಲಕ್ಕವತರಿಸಿ, ಕಿಂಕರನ ಕೈಗಿತ್ತು
ಕಾಂಚನ ಕಟ್ಟ ಖಲೀನಾಗ್ರಮಂ, ಕೈಕೊಳುತೆ
ಕನ್ಯೆಯರ ಕೈಕಂರ್ಯಮಂ ಪೊಕ್ಕಳಾ ರಾಜ್ಞಿ
ಭರ್ಮ ಕರ್ಮಂಗೈದ ರಮ್ಯ ಪಟ ಹರ್ಮ್ಯಮಂ.

ವರಣ ದಿಙ್ನಗರಿಯಿಂ ನಡೆದು ಪೊಳ್ತರೆಯಿಂದೆ
ನೆಳಲೆಂಬ ದಿವಸ ಯಾತ್ರಿಕನು ಮಧ್ಯಾಹ್ನದಲಿ ೪೯೦
ಬಿಸಿಲ ಬೇಗೆಗೆ ಬಿಗುರ್ತು, ತರುತಲವನ್ನಾಶ್ರಯಿಸಿ
ವಿಶ್ರಮಿಸಿಕೊಂಡೆಳ್ದು ಮುಂದೆಸೆಗೆ ಚಲಿಸುತಿರೆ
ಶಕ್ರದಿಕ್ಚಕ್ರಾಭಿಮುಖವಾಗಿ, ಮಣಲೂರ
ರಾಜನಂದಿನಿ ತನ್ನ ನಚ್ಚಿನ ಪಸಾಯಿತೆಗೆ
ಬೆಸಸಲೆಕ್ಕಟಿ ಕರೆದು ‘ಪೆಣ್ತನಕೆ ತಗುವಂತೆ ಮೇಣ್
ಚೆಲ್ವರಳುವಂತೆನ್ನ ಪಸದನಂಗೈ’ ಎಂದು,
ಶೃಂಗಾರಗೈದಳಾ ಆಳಿ ಅಚ್ಚರಿವಡುತೆ
ತನ್ನೊಡತಿಯತಿವಿಶೇಷಾಕಾಂಕ್ಷೆಗೆ : ಕುಮಾರಿ
ವೀರತನವನು ಕುರಿತ ಗಂಡುಡುಗೆಯನು ಕಳೆದು,
ಶೈವಾಲವಾವರಿಸಿದೆಳೆಯ ತಾವರೆಯಂತೆ ೫೦೦
ಚಾರು ಭೀರುತೆ ಮೆರೆಯೆ ನಾರಿಯ ದುಕೂಲಮಂ
ತಳೆದು, ಹೊಂಬಳೆಗಳನು ಕೈಗೆ, ಕಿಂಕಿಣಿಗನ
ಗೈವ ಮಣಿನೂಪುರಗಳನು ಕಾಲ್ಗೆ : ನಡುವಿಂಗೆ,
ತೋಯದಾಂಬರ ಶೋಭಿತಾಂತರಿಕ್ಷದ ಲಕ್ಷ್ಮಿ
ಕಟಿವಲಯದಿಂದ್ರಧನು ರಶನದಿಂದೆಸೆವಂತೆ,
ರಮಣೀಯ ರತ್ನಮಯಕಾಚನದ ಕಾಂಚಿಯಂ
ತೊಟ್ಟು; ಮುಕ್ತಾವಳಿಯನಳವಡಿಸಿ ಗ್ರೀವಕ್ಕೆ;
ಶರದುದಯ ರವಿ ಕುಕ್ಮ ರುಚಿಯಿಂದೆ ಶತಪತ್ರ
ಪತ್ರಾಗ್ರದುಂಬು ಬಿಂದು ವಿರಾಜಿಪಂತೆ, ಕಿವಿ
ತನಿಮುತ್ತುಗಳಿನೊಪ್ಪೆ; ಕಗ್ಗತ್ತಲೆಯ ರಾತ್ರಿ ೫೧೦
ನಕ್ಷತ್ರಮಾಲೆಯಿಂ ಮೆರೆವಂತೆ, ಮೇಣುಷೆಯ
ಭಾಳದಲಿ ‘ಬೆಳ್ಳಿ’ಯೊಂದೆಯೆ ಮಿರುಗುವಂದದಲಿ,
ಕುಂತಲವನಲರಿಂದಲಂಕರಿಸಿ, ಹಣೆಯಲ್ಲಿ
ಚಂದ್ರಕುಂಕುಮ ಬಿಂದುವನ್ನಿಟ್ಟು — ಮೆರೆದಳಾ
ಪಾರ್ಥಿವ ಕುಮಾರಿ, ಶಿಶಿರವನುಳಿದ ಬನದಸಿರಿ
ಸುಂದರ ವಸಂತಮಂ ತಳೆದು ರಾರಾಜಿಪೋಲ್!

ರನ್ನಗನ್ನಡಿಯಲ್ಲಿ ತನ್ನ ಪಡಿನೆಳಲೊಗೆಯೆ
ಕನ್ನೆ ಮೊಗದಲಿ ನಗೆಯ ಮುಗುಳರಳಿ ಮಲರಾಯ್ತು;
ತನ್ನ ಚೆಲುವಿಗೆ ತಾನೆ ಚೆನ್ನೆ ಸೋಜಿಗವಟ್ಟು
ಆಲಿಸಿದಳಚ್ಚರಿಯ ಕಣ್ಣಾಲಿಗಳ್ ನಟ್ಟು! ೫೨೦
ಮರೆತಳು ಪಸಾಯಿತೆಯ ಬಳಿಯಿರ್ಪುದಂ. ಮತ್ತೆ
ಹೆರರೆದುರ್ ಸ್ವಪ್ರಶಂಸೆಯ ಹೀನತೆಯನಿನಿತು
ಲೆಕ್ಕಿಸದೆ ನೋಡುತಿರ್ದಳು ಕನ್ನೆ ತನ್ನ ತಾಂ
ತನಗೆ ತಾನನ್ಯೆವೋಲ್! ಮೊಗಂ ಕೆನ್ನೆ ಕಿವಿ ಕಣ್ಣು
ಹುಬ್ಬು ಚೆಂದುಟಿ ಬಾಯ್ ಎಸಳ್‌ಮೂಗು ಹಣೆ ಕರುಳ್‌
ಹೆದೆಯೇರಿದಂಗಜನ ಬಿಲ್ಗೊಂಕಿನುಪವೆಯೆದೆ
ಒಂದೊಂದುಮಂ ನೋಡಿ ನೋಡಿ ಹಿಗ್ಗಿದಳಾಕೆ
ಕನ್ನಡಿಯನಾಲಂಗಿಸುವ ಚುಂಬಿಸುವ ಬಗೆಯ
ಬಿಗಿಹಿಡಿದು ತಡೆದು! ಸಿರಿವೆಣ್ಣಿಗಿನಿಯನ ಜಯಿಸೆ
ಚೆಲುವಿನಲಗೊಂದಿರಲ್‌ ಬೇರೆ ಕೂರಂಬೇಕೆ? ೫೩೦
ಚೆಲುವಿಗೆಲ್ಲೆಡೆ ಗೆಲ್ಲ! ಸೋಲುಂಟೆ ಪೇಳ್? ಯತಿವೇಷಿ
ಪಾರ್ಥದೇವನನಿಂದು ಕಯ್ದುವಿಲ್ಲದ ಕದನ
ಕಲೆಯಿಂದೆ ಗೆಲ್ದಪೆನ್‌ ತಾನೆಂಬ ಪೆರ್ಮೆಯಿಂ
ಚೈತ್ರವಾಹಿನಿ ತನ್ನನಾರುಮನುಸರಿಸದೊಳ್‌
ಕಟ್ಟಾಣತಿಯನಿತ್ತು ಪಾಳೆಯವ ಪೊರೆಮಡುತೆ
ಕಾಡಿನಾ ಗುಡಿಯೆಡೆಗೆ ನಡೆತಂದಳೇಕಾಂಗಿನಿ.

ಹೊಂಗದಿರ ಜೀರ್ಕೂಳವಿಯಿಂ ಸಂಜೆ ಜಿರ್ರೆ‍ಎಂದು
ರಂಗೆರಚಿ, ವಿಪಿನ ಛಾಯಾಂಧತೆಯೊಳಲ್ಲಲ್ಲಿ
ಕೆಂಬಿಸಿಲ್ ಕೋಲು ಕೋಲಾಗಿ ತರು ತರು ಮಧ್ಯೆ
ತೂರಿ ಬಂದೆಸೆದತ್ತು, ಕನ್ನೆಳಲ ಪಸಲೆಯಲಿ ೫೪೦
ಹೊನ್ನೀರ ಮಳೆಹೊಯ್ಯಲಲ್ಲಲ್ಲಿ ನೀರುಗಳ್
ಸಣ್ಣ ಸಣ್ಣಗೆ ತಂಗಿ ಮಿರುಗುವಂತೆ. ಮೃದುಗಾಳಿ
ತೀಡಿತ್ತು ಮರಗಳಲಿ ಮರ್ಮರ ಧ್ವನಿಮಾಡಿ;
ಗೂಡಿಂಗೆ ಗೊತ್ತುಕೂರಲು ಹೋಹ ಪಿಕಳಾರಿ
ಕಾಮಳ್ಳಿ ಗಿಳಿಗಳುಲಿ ಕೇಳಿಸಿತ್ತಿಂಪಾಗಿ
ಕಾನನದ ವಿಜನ ನೀರವದಿ. ರಾಜಕುಮಾರಿ
ಬನದೊಳಲ್ಲಲ್ಲಲೆದು, ನಿಂತಾಲಿಸುತೆ, ಮರಳಿ
ಮುಂಬರಿದು ಹಾರಯಿಸಿ ನಿಡುನೋಟವಟ್ಟುತ್ತೆ,
ಮೇಣೋರ್ಮೆ ಬಳ್ಳಿಹೋದರನೆ ಕುಟೀರಂಗೆತ್ತು
ತಳ್ಳಣಿಸಿ ಮುಂ ನಡೆದು, ತಪ್ಪನರಿಯತೆ ನಾಚಿ, ೫೫೦
ಸವ್ಯಸಾಚಿಯನರಸುತಿರೆ ಕಳ್ತಲೆಯ ಪೊನಲ್‌
ರಯ್ಯನೊಯ್ಯನೆ ಪರಿದು ಬಂದಾವರಿಸಿತ್ತಿಳೆಯ.
ಒಡನೊಡನೆ ಪೂರ್ವದ ಸುದೂರದ ದಿಗಂತದೆಡೆ
ಕತ್ತಲೆಯ ಕಾಡಿನಂಚಿಗೆ ಬೆಂಕಿ ಹೊತ್ತಿತೆನೆ,
ಹೊನ್ನಿನುರಿ ಹೊಮ್ಮಿ, ತಣ್ಣಗೆ ಹಬ್ಬಿ, ಹುಣ್ಣಿಮೆಯ
ಉಣ್ಣೆಮುಗಿಲಿನ ಹಾಸುಹೊಕ್ಕಿನೊಳ್ ಜೊನ್ನಸರಿ
ಪ್ರವಹಿಸಿತು. ನೋಡುತಿರೆಯಿರೆ ಕಣ್ಣನೋಟದೊಳೆ
ಗೋಚರಿಸಿತಮೃತಕಿರಣನ ಕನಕಮಂಡಳಂ,
ಮಿಸುನಿಯೊಳ್ ತೇದ ಹಾಲಿನ ಮಳೆಯ ದೆಸೆದೆಸೆಗೆ
ಚೆಲ್ಲಿ. ಹಿಮರೋಚಿಯಂಬುಧಿ ವೀಚಿಗಳ ಮೇಲೆ ೫೬೦
ತೇಲಿತು ಜಗತ್ತು ರಜನಿಯ ಸುಧಾ ಸ್ವಪ್ನದಲಿ.
ಬೆಳ್ದಿಂಗಳಿಂಗಡಲ ಹೊನ್‌ಜೊನ್ನದಲೆಗಳೆಡೆ
ಒಮ್ಮೆಯಾಸೆಯ ಪಿಂಚೆಯೌನ್ನತ್ಯದಲಿ, ಒಮ್ಮೆ
ನೈರಾಶ್ಯಕಂದರದ ನಿಮ್ನತೆಯೊಳೇರಿಳಿದು
ತೇಂಕಾಡಿದತ್ತಹಾ ಪ್ರೇಮ ಕಾತರ ಪೂರ್ಣ
ರಾಕೆಯ ಹೃದಯನೌಕೆ! ಕಾಮಿನಿ ಕಿರೀಟಿಯಂ
ಇಂತರಸಿ ಅಲೆಯುತಿರೆ, ದೂರ ಮರಗತ್ತಲೆಯ
ರಕ್ಕಸಿಯ ಉರಿವ ಕಣ್ಣೆಂಬಂತೆ ರಂಜಿಸಿದೆ, ಕಾಣ್‌,
ಉರಿನಾಲಗೆಯ ನಾಟ್ಯದಿಂ ನಲಿವ ಕೆಂಬೆಂಕೆ :
ಶರಧಿ ಪರಿವೃತ ಧರಾಮಂಡಲವ ಸುತ್ತಿ ತಾಂ ೫೭೦
ಪೊಸದೇಶಗಳ ಕಂಡುಹಿಡಿವೆನೆಂಬುಲ್ಲಸದಿ
ಸಾಹಸದ ನಾವಿಕಂ ತನ್ನ ಹಡಗಿನ ಪಡೆಯ
ಕೂಡಿ ತೊಡಗುವನು ಪಾರಾವಾರ ಯಾತ್ರೆಯಂ,
ಬೀಸಿಬಹ ಪವಮಾನಹತಿಗುರ್ಬಿ ಪಟಗೆದರಿ
ಆ ಭೈತ್ರವಂಬುಧಿಯ ಗಂಭೀರ ವಿಸ್ತರದ
ವೇಲಾ ವಿಹೀನತೆಯ ನೀಲ ಕೀಲಾಲದಲಿ
ತೇಲಿ ಪಯಣಂಗೈದು ಮುಂಬರಿದು ದಿನ ದಿನಕೆ
ದೂರ ದೂರವನೈದುವುದು. ಕರ್ಣಧಾರನದೊ
ದಿನ ದಿನಂ ಕೂಪಕದ ತುದಿಗೇರಿ, ಪೊಸನಾಡು
ಕಣ್ಗೆ ಬಿಳ್ದುಪುದೆಂಬ ಹಾರೈಕೆಯಿಂ ನೋಡಿ ೫೮೦
ನೋಡಿ ಬಳಲ್ವನ್ನೆಗಂ ದಿಟ್ಟಿ, ಕೆಳಗಿಳಿದು ಬರೆ,
ಕೇಳ್ದಪರ್ ಪಡೆಯ ಜನರವನ ಸುತ್ತುಂ ಮುತ್ತಿ.
ನುಡಿವನೆಂದಿನವೋಲೆ — ಮೇಲೆ ನೀಲಾಕಾಶ,
ಕೆಳಗೆ ನೀಲಾಂಬುನಿಧಿ, ನೆಲನ ಕುರುಹಿಲ್ಲೆಂದು!
ಇಂತು ದಿನಗಳ್ ಕಳೆದು, ಪಕ್ಷಪಕ್ಷಗಳುರುಳಿ,
ಮಾಸ ಮಾಸಗಳಾಗಿ ಹೋಗುತಿರಲಾಹಾರ
ಸಾಮಗ್ರಿ ಕೊನೆಮುಟ್ಟಿ ಬರೆ, ತಲ್ಲಣದಿ ಮಂದಿ
ಬೇಸರಿಂದಾಸರಿಂದಳಿವೆವೆಂಬಳ್ಕನಿಂ
ಹಡಗಿನೊಡೆನಯನ ಮೇಲೆ ಕನಲ್ದಪರ್, ಮೇಣವಂ
ಪಿಂತಿರುಗಲೊಪ್ಪದಿರಲಣಿಮಾಡುವರ್ ಕ್ರಾಂತಿಗೆ! ೫೯೦
ಭೀತ ನೌಕಾಸ್ವಾಮಿ ಭಗವಂತನಂ ಬೇಡಿ,
ನೋಡೆ ದಿಙ್ಮೇಖಲಾವಲಯಮಂ, ಭೋಂಕನೆಯೆ
ಕಂಸೆವುದೊಂದು ಭೂಭಾಗವತಿದೂರದಲಿ,
ಮಂಜು ಮಸುಕಾಗಿ, ಗಗನಾಂಬುಧಿಯ ತೀರದಲಿ,
ಸ್ವರ್ಗದಧರಂ ಮರ್ತ್ಯದಧರಮಂ ಚುಂಬಿಸುವ
ತಾಣದಲಿ! ಮೈಮರೆವನಾನಂದದಿಂ; ಕೂಗಿ
ಕರೆವನಾ ತನ್ನ ಹಡಗಿನ ಪಡೆಯ ಮಂದಿಯಂ;
ಹರ್ಷದ ಕೃತಜ್ಞತೆಯಿನಿಳಿಯುತಿರೆ ಕಣ್ಣೀರು,
ತೋರ್ದಪಂ, ಮಾತನುಳಿದೆಲ್ಲರ್ಗೆ ತಾಂ ಕಂಡ
ಕಾಣ್ಕೆಯಂ, ಪಡಗು ಪಡೆ ಸಂತಸದಿಂದೆ ಹುಚ್ಚೆದ್ದು ೬೦೦
ಕಡಲ ಮೊರೆವೆರಸಿ ಗೆಲುವಿನ ದನಿಗಳೇಳುತಿರೆ,
ಬೇಗ ಬೇಗನೆ-ಬೀಗಿ ನೂಂಕುವನು ನಾವೆಯಂ
ತಾಂ ದಿಗಂತದೆಡೆ ಸಂದರ್ಶಿಸಿದ ವೇಲಾವನಿಯ
ಕಡೆಗೆ!

ಅಂತಾಶೆಯಿಂದುಬ್ಬುತಾಶಂಕೆಯಿಂ
ಕಳವಳಿಸಿ, ಕತ್ತಲೆಯ ರಕ್ತನಾಲಗೆಯಂತೆ
ನರ್ತಿಸುವುರಿಯ ಕುರಿತು, ನಡೆದಳಾ ಚಿತ್ರಾಂಗದೆ.
ಸಾರೆ ಬರೆ ಬರಲನಲ ಪರಿವೇಷ ವಳಯದೊಳ್‌
ಕಂಡುದರ್ಜುನನ ಯತಿಮೂರ್ತಿ, ಮಾಗಿಯ ಮಂಜು
ಕವಿದ ಪ್ರಾತಃಕಾಲದಿನಬಿಂಬದೊಲ್, ಮಸುಳಿ
ರಜನಿಯ ತಮಿಸ್ರದಿಂದೆ. ಆ ಪೊಳ್ತಿನಂಬರಂ ೬೧೦
ಪೌರುಷದ ರೂಕ್ಷಣ ಧನುರ್ವಿದ್ಯೆಯಲ್ಲದೆಯೆ
ಲಲನಾ ಸಹಜ ರತಿಕಲಾಭ್ಯಾಸವಿನಿತಿರದ
ಆ ಚೈತ್ರವಾಹಿನಿ ಕಿರೀಟಿಯೆಡೆಗೈದಿದಳ್‌,
ವರನೆಡೆಗೆ ವೈಯಾರದಿಂದೈದುವಂಗನೆಯ
ಪಾಂಗಿನಿಂದಲ್ತು, ವಿದ್ವೇಷಿಯಂ ಸಂಹರಿಸೆ
ವಿಜಯ ದೃಢನಿಶ್ಚಯದಿ ಬಿಂಕದಿಂ ಮುಂಬರಿವ
ಕಲಿಯ ವಿಕ್ರಮ ಗಮನ ವಿನ್ಯಾಸಮಂ ಮೆರೆದು.
ಪುರುಷೊನೊಲ್ಮಯನಾಕೆ ವೈರಿಯನೆ ಗೆಲುವಂತೆ
ಬಲದಿನಾಕ್ರಮಿಸಿ ಗೆಲೆ ಭಾವಿಸಿದಳಜ್ಞಾನದಿ.
ನಾರಿ ಬಳಿಸಾರೆ ಬರೆ, ಯತಿವೀರನಾಲಿಸುತೆ ೬೨೦
ಶುಷ್ಕ ಪತ್ರದ ಮರ್ಮರ ಧ್ವನಿಯನೊಂದಿನಿತು
ಕೌತುಕದಿ ಕೊರಲೆತ್ತಿ ನೋಡುತಿರೆ, ಕಾಣಿಸಿತು
ಹತ್ತಿರೆ ನಮಸ್ಕಾರಮಂ ನುಡಿದು ಬರುತಿರ್ದ
ಸ್ತ್ರೀಯಾಕೃತಿ. ಸೆಟೆಯೆ ಕಪಟವೊ ದಿಟವೋ ಮಾನವಿಯೊ
ಮೋಹಿನಿಯೊ ರಕ್ಕಸಿಯೊ ಎಂಬ ಶಂಕೆಯಿನೊಡನೆ
ಬೆಚ್ಚರಿಂದೆಚರಿಕೆಯಿಂ ಕೇಳ್ದನಿಂತೆಂದು:
“ಆರು ನೀನೆಲೆ ತರುಣಿ? ಈ ರಾತ್ರಿ, ಈ ಘೋರ
ವಿಪಿನದೊಳ್‌ ನಕ್ತಂಚರಿಯವೋಲ್‌ ಅದೇಕಿಂತು
ಸುತ್ತುತಿಹೆ? ಕೋಳ್ಮಿಗಗಳಲೆವ ಪೊಳ್ತಿದು; ಪೆಣ್‌
ನೀನಾಗಿಯಂ ಇನಿತಳುಕದೆಯೆ ಇರುಳನಲೆಯುತಿಹೆ? ೬೩೦
ಮಾನವ ಸ್ತ್ರೀಯರ್ಗೆ ಈ ಬಾಳ್ಕೆ ಸೋಜಿಗಂ!
ಮೇಣ್ ಸದ್ವಂಶಜಾತರಿಗೆ ತಾಂ ತಗುವುದಲ್ತು!”
ಮಾರ್ನುಡಿದಳಿಂತವಳ್ : “ನಿನ್ನನ್ನರಿರೆ, ಯತಿವೀರ,
ಕಾಡೆ ತಾನಾದಪುದು ನಾಡಿಗಿಂತಲು ಮಿಗಿಲ್‌
ಸುಕ್ಷೇಮತರಮಾಗಿ : ದಿವಮಾದಪುದು ರಾತ್ರಿ ತಾಂ :
ಭಯಮೆ ತಾನಹುದಲ್ಲಸಂ; ನಕ್ತಂಚರತೆ ತಾನೆ
ನಿರ್ಮಲ ಪ್ರೇಮಯಾತ್ರೆಗೆ ಸಮಂ! ಪ್ರಣಯಾಗ್ನಿ
ಎದೆಯನಾವರಿಸೆ ಕತ್ತಲೆಯಿಹುದೆ ಕಂಗಳಿಗೆ!
ಒಲುಮೆಗಿಚ್ಚಿನ ಕೆಚ್ಚಿನಿದಿರೊಳೇವುದು ಭೀತಿ? ಮೇಣ್‌
ನಿನ್ನೆಡೆಯೊಳಾನಿರೆ ಕುಲೀನತೆಗೆ ಕುಂದಿಹುದೆ? ೬೪೦
ಪಿರಿಯದೊಂದಾಸೆಯುರಿ ಬಗೆಗೆ ತಗುಲಿರೆ ಬಂದೆ;
ನೀನದಕೆ ಗುರಿ! ಕೌತುಕಕೆ ಬೆಚ್ಚದಿರ್ ಬರಿದೆ,
ವೀರ ಯತಿ. ಇಂದು ಬೆಳಗುಂಬೊಳ್ತು ಬಳಿಯಿರ್ಪ
ದೀರ್ಘ ವಿಸ್ತೃತ ದೀರ್ಘಿಕೆಯ ದಡದೆ ತಿರುಗಾಡೆ
ಬಂದಿರ್ದ ನನ್ನಗ್ರಜಂ ನಿನ್ನನರುಹಿದನ್
ನನಗೆ. ಯತಿವೇಷದಿಂದೆನ್ನಾಸೆಯರ್ಜುನನೆ,
ಪ್ರೇಮದ ತಪಸ್ಸೆ ಸಾಕ್ಷಾತ್ಕರಣವೆತ್ತಂತೆ,
ಇಲ್ಲಿಗೈತಂದುದನ್‌ ಕೇಳ್ದೊಡೆನ್ನಿಚ್ಛೆಲತೆ
ದಾಂಗುಡಿವರಿದು ಬಂದಿಹುದು ನಿನ್ನಡಿಗಳೆಡೆಗೆ.
ವೀರ ಅರ್ಜುನದೇವ, ಅಪರಿಚಿತೆಯಾದೊಡಂ ೬೫೦
ನಿನ್ನ ಪ್ರೇಯಸಿ ನಾನು. ಪ್ರಣಯ ಭಿಕ್ಷೆಯೆ ಬೇಡಿ
ಬಂದೆ ನಾಂ; ಸುಂದರನೆ, ದಯಗೈ, ಕರಣಿಸೆನಗೆ.”

ಧೀರಾಂಗನೆಯ ಧೈರ್ಯದಾಲಾಪಮಂ ಕೇಳ್ದು
ಹೊಮ್ಮಿದುದು ಕಿರುನಗೆ ಕಿರೀಟಿಯ ಮುಖಾಂಬುಜದಿ.
ಸಂಕೋಚವೇನೆಂಬುದನೆ ತಿಳಿಯದವಳಂತೆ
ನಿಂತಿರ್ದವಳ ಪುರಷಭಂಗಿಯಂ ನಿಡಿದಾಗಿ
ದೃಷ್ಟಿಸುತೆ “ಸಾಹಸಿ, ಕಿರಾತ ಕನ್ಯೆ!”, ಎನ್ನುತಿರೆ,
“ಅಲ್ತಲ್ತು!” ಎಲೆ ಲಲನೆ, “ಅಲ್ಲದಿರೆ ವರ್ತಿಪರೆ
ನಾಗರಿಕರೀ ರೀತಿ ಪ್ರಣಯ ಪ್ರಸಂಗದಲಿ?
ಮೇಣದಂತಿರ್ಕೆ, ನೀಂ ಬಂದ ಬಟ್ಟೆಯೊಳೆ ತೆರಳ್‌ ೬೬೦
ಕ್ಷೇಮದಿಂ. ಮುನಿಯದಿರ್; ನಿಷ್ಕರುಣಿ ಎನ್ನದಿರ್,
ಬಸವೆಣ್ಣೆ. ನಾನರ್ಜುನನೆ ದಿಟಂ. ಕ್ಷೇತ್ರದಿಂ
ಕ್ಷೇತ್ರಕ್ಕೆ ಕಾರಣಾಂತರದಿಂದೆ ಭೂಯಾತ್ರೆ
ಗೈಯುತಿಹೆ ಬ್ರಹ್ಮಚರ್ಯವ್ರತವ ಕೈಕೊಂಡು,
ಯತಿವೇಷವನೆ ಧರಿಸಿ, ನೋಂಪಿಯಳಿದಲ್ಲದೆಯೆ
ಸಲ್ಲದೌ ನಿನ್ನ ಬಯಕೆಯ ಸಿ‌ದ್ಧಿ. — ನೋಂಪಿಯಾ
ಮಾತಿರಲಿ; ಬನವೆಣ್ಣೆ, ನಿನ್ನೊಳೇನಿದೆ ಎನಗೆ
ಎಣೆಯಾಗಿ? ಮೇಣೆನ್ನೆರ್ದೆಗೆ ಹೂಗಣೆಯಾಗಿ?
ನೀನಾವ ಪಾರ್ಥಿವ ಕುಲಾಂಬುಧಿಯ ಕಡೆಹದಲಿ
ಮೂಡಿರುವ ಕೌಸ್ತುಭಂ? ಮೇಣ್ ನಿನಗದೇನಿಹುದೊ ೬೭೦
ಸೌಂದರ್ಯ ಸಂಪದಂ? ಬಿತ್ತರದ ಲೋಕದೊಳ್‌
ಕೇವಲ ಕನಿಷ್ಠರೆನೆ ನಿನಗಿಂತಲುತ್ತಮರ್!”
ಎನುತಿರೆ ಧನಂಜಯಂ, ಚಿತ್ರಾಂಗದೆಯ ಮಾನ
ಹೊತ್ತಿದುದು ಕಿಡಿದೋರಿ. ಕೋಪ ಪ್ರದರ್ಶನಂ
ಪೌರುಷಕೆ ಕುರಹೆಂದು ಬೆದರಿ, ಕಂಬನಿಗರೆದು,
ಸೋಲ್ತೊಮ್ಮೆ ಗೆಲ್ದಳಾಕೆ! ಸ್ತ್ರೀಯ ಸಹಜೈಶ್ವರ್ಯ
ದೇಸಿ ತಾನಿಲ್ಲದಿರೆ ತನ್ನ ವಂಶವನರುಹಿ
ಕುಲಕೆ ಮೇಣವಹೇಳನಂಗೈದು ಫಲವೇನು?
ಎನುತಾಕೆ ಪ್ರಣಯಭಂಗಕೆ ಕಟುತಿರಸ್ಕೃತಿಗೆ
ಮನನೊಂದು, ಶೋಕಭಾರಕೆ ಕುಸಿದು, ಪೊಸೆದೆಸೆದ ೬೮೦
ಸುಗ್ಗಿ ಮೊಗ್ಗೆಯ ತೆರದಿ ಮೊಗಂ ಕಂದಿ, ಮೌನದಲಿ
ಹಿಂದುರಗಿದಳು ಬನದ ನಡುವಣ ಶಿವನ ಗುಡಿಗೆ.

ಶೂನ್ಯತೆ ಹಠಾತ್ತಾಗಿ ತುಂಬಿದುದು ಹೃದಯಮಂ;
ಶುಷ್ಕ ನಿಷ್ಫಲಮಾಗಿ ತೋರ್ದುದು ಜಗತ್ತು; ನಿಶೆ,
ಪೂರ್ಣಿಮಾ ಜ್ಯೋತ್ಸ್ನಾ ಸುಧೌತಾಂಬರವನುಟ್ಟ
ಮಧುರ ನಿಶೆ, ವಿಧುರಮಾಗೆಸೆದತ್ತು; ಹೊಸದಾಗಿ
ತಾನುಟ್ಟುಡುಗೆ ತೊಡುಗೆಗಳೆ ಸೆರೆಯ ಹೊರೆಯಾಗಿ
ಸುತ್ತಿಬಿಗಿದುವು ಶೃಂಖಲೆಯ ಭಾರದಂತೆವೋಲ್
ಚಿತ್ರಾಂಗದೆಯ ಗಾತ್ರಮಂ. ಹೇಸಿದಳು ರಮಣಿ
ತನ್ನವಸ್ಥೆಗೆ ತಾನೆ. ನೆಲದ ಸಿರಿ, ಬಿಲ್ಬಿಜ್ಜೆ, ೬೯೦
ಮೈಬಲ್ಮೆ, ರಣಕೀರ್ತಿ, ಮೇಣ್ ಅರಸುಕುವರಿಯತನಂ
ತೃಣವಾಗಿ ಋಣವಾಗಿ ಕಾಣಿಸಿದುವಬಲೆಯರ
ಗುಣವಾದ ಫಲ್ಗುಣನ ಮೋಹಿಸುವ ವಲ್ಗುತೆಯ
ಮುಂದೆ. ಮೆಯ್ಗಡರಿಕೊಂಡತಿರ್ದ ನಗಗಳಂ
ತೆಗೆದೊಗೆದು, ದೇಗುಲದ ಜಗಲಿಯೊಳೆ ದಿಂಡುರುಳಿ,
ಮದನಹರನಿದಿರನಲಿ ಕೈಮುಗಿದು ಮೈಚಾಚಿ
ಬೇಡಿದೊಳ್ ಮದನ ಕೃಪೆಯಂ ನಾರಿ, ತುಂಬೆದೆಯ
ಭಕ್ತಿಯಿಂದುತ್ಕಂಠಿತಾತ್ಮದಾಕಾಂಕ್ಷೆಯಿಂದೆ.

ಮಾತುಗಳನೊರೆಯಲಿಲ್ಲಾಕೆ: ಎದೆ ತುಂಬಿರಲ್
ತಾವೆಲ್ಲಿ ನುಡಿಗಳಿಗೆ? ವಾಕ್ ಸೀಮೆಯಂ ದಾಂಟುತಾ ೭೦೦
ಮಹಾಕಾಂಕ್ಷೆಯ ಮಹತ್ತರ ಪ್ರಾರ್ಥನಾಹ್ರದಂ
ದೀರ್ಘ ಭಾವ ಪ್ರವಾಹದ ಮೌನಮಾತ್ರದಲಿ
ಪರಿಣಮಿಸಿದತ್ತು! ಇಂತಿರೆ ತಪೋನಿದ್ರೆಯೊಳ್,
ಸ್ವಪ್ನವೊ ದರ್ಶನವೊ ಮೇಣ್ ಸ್ವಪ್ನದರ್ಶನವೊ
ಹೇಳಬಲ್ಲವರಾರು? ನಾರಿ ಕಂಡಳು ಕಣ್ಣ
ಕತ್ತಲೆಯ ಕೊಲೆಗೈವ ಕಾಂತಿ ಪ್ರವಾಹಮಂ.
ತನ್ಮಧ್ಯೆ, ಮುಗಿಲಿನೆಡೆ ಮಳೆಬಿಲ್ಲೆಸೆಯುವಂತೆ,
ರಾಜಿಸಿತು ಮಧುರ ಮದನನ ಮೂರ್ತಿ, ಚೆಲ್ವಾಂತ
ವದನ ಹಾಸದಿ ಮಧುವಿಲಾಸಮಂ ಬಿಂಬಿಸುತೆ
ಪುಣ್ಯ ಪ್ರಸನ್ನತೆಯಲಿ. ಯೌವನದ ಕಂಗಳಿಗೆ ೭೧೦
ಮನ್ಮಥನಪರಿಚಿತನೆ? ಬಂಡುಣಿಗೆ ತಾವರೆಯ
ಹೃದಯಕಳಶದ ಜೇನಿನೌತಣಕೆ ಕರೆ ಬೇಕೆ?
ರಸದ ಬಿಣ್ಪಿಂ ಬೀಗಿ, ಬಸಿರ ಭಾರಕೆ ಬಾಗಿ,
ಪಶ್ಚಿಮ ದಿಗಂತದಿಂ ಗಂಭೀರ ಗತಿಯಿಂದೆ
ಮಿಂಚೆಸೆದು ಮೊಳಗುತ್ತೆ ಮಲೆಯ ಬನಗಳ ಮೇಲೆ
ನೀರೊಡಲ ಕಾರ್ಮುಗಿಲು ಕರ್ರಗುಬ್ಬುತ ಹಬ್ಬಿ
ತೇಲಿ ಬರೆ ಕಂಡದಂ ಸೋಗೆ ನವಿಲುನ್ಮದದಿ
ಗರಿಗಣ್ಗಳಂ ಕೆದರುತಟ್ಟಹಾಸದಿ ಕೇಗಿ,
ವರ್ಷಾಗಮನಕುರ್ಬಿ ನರ್ತನಂಗೈವಂತೆ
ಚಿತ್ರಾಂಗದೆಯ ಹೃದಯ ನಲಿದುಲಿದು ನರ್ತಿಸಿತು ೭೨೦
ಭಾವಜನ ಸಂದರ್ಶಿಸಿ. ಸಂಭಾಷಿಸಿದಳಿಂತು:
“ದೇವಮೂರ್ತಿಯೆ ನಮೋ! ಪಂಚಬಾಣನೆ ನೀನು?
ರತಿರಮಣನಲ್ಲದಿರೆ ನನ್ನೆದೆ ಅದೇಕಿಂತು
ಚಿರಬಂಧು ಸಂದರ್ಶನದಿ ನಲಿಯುವಂದದಲಿ,
ಹೂವಿನೆಸಳಿನ ಮೇಲೆ ಕುಳ್ಳಿತು ವಿಕಂಪಿಸುವ
ಬಣ್ಣ ಚಿಟ್ಟೆಯ ರೆಂಕೆಗಳ ತೆರದಿ ನಡುಗುತಿದೆ?”
“ಸೃಷ್ಟಿಮೂಲ ಪ್ರಥಮಾಂ, ಸ್ಪೂರ್ತಿಯಾಂ, ಪೃಥುಲನವ್‌:
ಸುಖದುಃಖ ಪಾಶದಿಂ ಜೀವರನು ಬಂಧಿಸುವೆನಾಂ
ಭಾವಜಂ! ಭುವನ ಹೃದಯದಿ ಪ್ರೇಮಸೌಂದರ್ಯದಾ
ವಿದ್ಯುತ್ಪ್ರವಹಾಹಮಂ ಚೋದಿಸುತೆ, ಮೃತ್ಯು ಜರೆ ೭೩೦
ಬೇಸರಗಳಾನಂದಮಂ ತವಿಸದೊಲ್, ಚಿರಮದಂ
ಪೊರೆಯುತಿಹ ಚಿರಯೌವನೋಲ್ಲಾಸನಿಧಿ ನಾನ್.
ಲಲನೆ, ನೀನಾವ ಬಯಕೆಯೊಳಿಂತು ಪೊಚ್ಚಪೊಸ
ಜೌವನದ ಕಿರುಹರೆಯದೊಳೆ ಪೇಳ್ ತಪವನಾಚರಿಸಿ
ಕೋಮಲ ಶರೀರಮಂ ಕ್ಷಯಿಸುತಿಹೆ? ಯಜ್ಞಮಿದು
ಕ್ರೂರತೆರಮೆನಗೆ ದಲ್ ಪ್ರಿಯಮಲ್ತು! ಓ ಸುಂದರಿಯೆ,
ಏತಕಿದು? ನೀನಾರು ನಿನ್ನ ಪ್ರಾರ್ಥನೆಯೇನು?”
“ಪ್ರೇಮನಿಧಿ, ಓ ರತಿಪತಿಯೆ, ಮದನದೇವನೆ, ನಮೋ!
ದಿನವೊಂದರೊಳೆ ಯುಗದ ತಪವನಾಚರಿಸಿ ನಾಂ
ಬೆಂದೆ ನೊಂದೆ! ಆವುದಿದೆ, ದೇವ, ನಿನಗರಿಯದುದು? ೭೪೦
ಮಣಿಪುರದ ರಾಜನಂದಿನಿ; ಚಿತ್ರವಾಹಂಗೆ
ತನುಜೆಯಾಂ. ಪೆಸರೆನಗೆ ಚಿತ್ರಾಂಗದೆ. ಪುಷ್ಪಾಸ್ತ್ರ,
ಚಂದ್ರಚೂಡಂ ಕೃಪೆಯೊಳೆನ್ನಯ ಪಿತಾಮಹಗೆ
‘ಸಂತತಿಯೊಳೊಂದೊಂದೆ ಪುತ್ರಸಂತಾನಮಕ್ಕೆ’
ಎಂದು ವರವಿತ್ತೊಡಂ, ನಿರ್ಭಾಗ್ಯೆ ಕಠಿನೆಯೆಂ,
ನನ್ನ ತಂದೆಗೆ ಬಿಡದೆ ಪುತ್ರಿಯಾಗುದಿಸಿದೆನ್.
ಪೆಣ್ಣಾದೊಡಂ, ಭವದಲಿ ನಿಷ್ಠುರೆಯೆಯಾಗಿ
ಪುಟ್ಟಿದೆನ್‌! ಪಿತನೆನ್ನನೆಯೆ ಕುಮಾರಂಗೆತ್ತು
ರಣಕಲಾಪಂಡಿತೆಯನಾಗಿಸಿದನಾದಂ. ಓ
ಇಕ್ಷುಕೋದಂಡಪಾಣಿ, ಮೈಜೋಡನಾಂತಿರ್ಪ ೭೫೦
ಪಗೆಗಳೆರ್ದೆಯಂ ಬಿರಿವ ಕೂರಂಬಿನೆಸುಗೆಯಾ
ಬಿಲ್ ಬಲ್ಮೆಯಂ ಬಲ್ಲೆನಾದೊಡಂ, ಚೆನ್ನರಂ
ಗೆಲ್ದವರ ಸೆರೆವಿಡಿವ ಕನ್ನೆಯರ ಕಡೆಗಣ್ಣ
ನೋಟಗಳ ಜಾಣ್ಮೆಗಳನಿನಿತುಮಂ ತಿಳಿಯದಿಹ
ಮುಗ್ಧೆಯಾಂ. ನನ್ನಾಸೆಗಳ ಮುಡಿಯ ಮಾಣಿಕಂ
ಶ್ರೀ ಕೃಷ್ಣಮಿತ್ರನರ್ಜುನದೇವನೀ ಬಳಿಯ
ಕಾನನದೊಳಿಹನು ಯತಿವೇಷದಲಿ. ಬಳಿಗೈದಿ
ಬೇಡಿದೊಡೆ — ಕೃಪೆಯೊಳೆನ್ನಯ ಜೀವಪುಷ್ಟಮಂ
ಸಿರಿಯಡಿಯೊಳಾಂತು ಸಾರ್ಥಂಗೈಯಬೇಕೆಂದು,
ಜುಣುಗಿದಂ ಬ್ರಹ್ಮಚರ್ಯವ್ರತವ ತಂದೊಡ್ಡಿ. ೭೬೦
ಮೇಣ್, ಓ ಕಂದರ್ಪ, ಎಂತದನ್‌ ಅನುಸುರಲಯ್?
ಕಾಡುವೆಣ್ಣೆಂದೆನ್ನ ರೋಡಾಡಿದನು, ದೇವ!”
ನುಡಿಯುತ್ತೆ ನುಡಿಯುತ್ತೆ ನುಡಿಯಲಾರದೆ ಲಲನೆ
ಕ್ರಂದಿಸಿದಳಭಿಮಾನಭಂಗದತಿ ಶೋಕದಿಂದೆ
ಕಂಪಿಸಿದುದವಯವಂ; ಮುಗಿದುವಂಬುಜದಕ್ಷಿ;
ಹರಿದುದು ಹೊನಲು ಕಂಬನಿಯ. ಕೊರಳ ಸೆರೆಯುಬ್ಬಿ
ಕಂಠದೊಳು ಗದ್ಗದಂ ಮೈದೋರಿದತ್ತದಂ
ಕಂಡು ಕನಿಕರದಿಂದೆ ದೇವ ರತಿಪತಿಯಿಂತು:

“ಅಳಲದಿರ್, ಕಾಮಿನಿಯೆ, ಬಣಗು ವೈರಾಗ್ಯಕ್ಕೆ
ನನ್ನ ಭಕ್ತರನೆಂದಿಗುಂ ಸೋಲಲೀಯೆನಾಂ ೭೭೦
ವೈರಾಗಿಗಳ ಚಕ್ರವರ್ತಿ ಗಿರಿಜೇಶನಂ
ಗೆಲ್ದೆನಗೆ ಮತ್ತಾರು ಹೊಯಿಕೈ? ಅನುಗ್ರಹಂ
ಗೈದಪೆಂ ನಿನಗೆಲೆ ಲತಾಂಗಿ. ತ್ರ್ಯೆಲೋಕ ಜಯಿ
ವಿಜಯನಂ ಕೆಡಹಿದಪೆನೆಳೆತಂದು ನಿನ್ನಡಿಯ
ತಾವರೆಯ ಮಧುಮಯ ತಟಾಕ ತಟಿಗೆ. ಇಂದುಮುಖಿ,
ಗಣನೆಯಿಲ್ಲದ ಕಿತ್ತಡಿಗಳೆನ್ನ ಬಲುಹಿಂಗೆ
ನೆರೆ ಸೋಲ್ದು, ಜೀವಮಾನದ ತಮ್ಮ ಸಾಧನೆಯ
ಫಲಮಂ ನಿವೇದಿಸಿಹರಮಗನೆಯರಂದಕ್ಕೆ.
ಕಮಲನಾಭನ ಸಖನ ತಪದ ಮಾತಂತಿರ್ಕೆ! ಕೇಳ್,
ನಾನದರ ಬಿತ್ತರವನಾಳದ ನೆಲೆಯ ಬಲ್ಲೆನ್: ೭೮೦
ಬಂಡಿಡಿದ ಹೂವಿನೆದೆಯಂಚಿನೆಡೆಯೊಳ್ ಕುಳಿತು
ನೀರಡಿಸಿದಾರಡಿಯ ತತ್ತರಿಪ ಸಂಯಮವ
ಹೋಲಿರುವುದರ್ಜುನನ ನೋಂಪಿ! ನಾಳೆಯ ದಿನಮೆ
ಮುಕ್ತಾಯಮಹುದದು, ಪರಾಜಯವೆ ಜಯವಾಗಿ!”

ಮದನ ವಾಣಿಯನಾಲಿಸುತೆ ಉಬ್ಬಿದಳು ತರುಣಿ.
ಬತ್ತಿದ ಸರೋವರಕೆ ಹೊಸ ನೀರು ಬರುವಂತೆ,
ಕತ್ತಲೆಯ ಕಗ್ಗವಿಗೆ ನೇಸರದಯಿಸುವಂತೆ,
ಬಾಲೆಯ ನಿರಾಶೆ ತೊಲಗಿದುದಾಶೆಯೆದೆದುಂಬಿ.
ಕಂಬನಿ ಕೃತಜ್ಞತೆಯಿನಿಳಿಯುತಿರೆ ಇಂತೆಂದು:
“ಪ್ರೇಮಗುರು, ನನ್ನೊಡಲ ಸರಳ ಸಾಧಾರಣತೆ ೭೯೦
ಮಾದುಹೋಗಲಿ; ಬರಲಿಯೊರ್ದಿನಕ್ಕಾದೊಡಂ
ರತಿಯ ರಮಣೀಯತೆ. ವಿರಾಗಿಯರ್ಜುನನೆದೆಯ
ಕೋಂಟೆಯಂ ಹುಡಿಗೈವ ಶೃಂಗಾರವೈತರಲಿ.
ಆರ್ತೆಯಾಂ; ಪ್ರಣಯಾರ್ಥಿಯಾಂ; ಕೈಮುಗಿದೆನಿದೊ,
ಶರಣಾದೆ ಶರಣಾದೆನಿದೊ, ಹೇ ಅತನುದೇವ!”
ಮಣಿದ ಚಿತ್ರಾಂಗದೆಯನೆತ್ತಿದಂ ಭಾವಜಂ;
ವರದ ಹಸ್ತದೊಳೆರೆದನಿನಿದನಿಯೊಳಿಂತು ಕೃಪೆಯಂ:
“ಏಳು ನೀರೇಜಮುಖಿ, ಏಳೆನ್ನ ರತಿಯ ಸಖಿ,
ಗೆಲ್ದಪುದು ನಿನ್ನಿಚ್ಛೆ. ನಿನ್ನಂಗರಮ್ಯತಾ
ದೀಪಶಿಖಿ ಪಾರ್ಥನ ವಿರಾಗದ ಪತಂಗಮಂ, ೮೦೦
ಶೂನ್ಯತೆ ಸಮೀರನಂ ಸೆಳೆವಂತೆ, ಸೆಳೆದೆಳೆದು
ಸುಟ್ಟುರಿಸಿ ಜಾಜ್ವಲ್ಯಮಪ್ಪಂತೆವೋಲ್ ನೆಗಳ್ದಪೆಂ.
ಪ್ರಿಯಶಿಷ್ಯೆ, ದಿನಮೇತಕೊಂದು ಮಾಸಂಬರಂ

ಚೆಲುವಿನ ಬಸಂತ ಬನದಲರುಗಲ ಮೆಯ್ಯ ಸಿರಿ
ನಿನ್ನೊಡಲನಾವರಿಸಿ ತೀವಿ ನೆರೆ ತುಂಬಿರಲಿ:
ಪರಮೆಗಳ ಝೇಂಕೃತಿ, ವಿಹಂಗಮಗಳಿಂಚರಂ,
ತಂಗದಿರ ಬೆಂಗದಿರನುದಯಾಸ್ತಗಳ ಪೆಂಪು,
ತೆಂಕಣದೆಲರ ತಂಪು, ಪೊಸಮಾಂದಳಿರ ಸೊಂಪು,
ನೀರವ ವಿಭಾವರಿಯ ನೀಲಿಮ ನಭೋಂಗಣದ
ತಾರಕಿತ ಸೌಂದರ್ಯ ಸಂಪದಂ, ಇಂದ್ರಧನು, ೮೧೦
ಕಲಕಂಠನುಲಿ, ಮಯೂರನ ನೃತ್ಯದೈಶ್ವರ್ಯಂ,
ಮೊದಲ ಹೊಸ ಮಳೆಯಲ್ಲಿ ಮಿಂದ ಮಲೆಗಳ ಹಸುರು,
ಮೊರೆದು ನೊರೆಗರೆದು ಮಿರುಮಿರುಗಿ ಶಿಲೆಯಿಂ ಶಿಲೆಗೆ
ಚಿಮ್ಮಿ ನೆಗೆಯುವ ತೊರೆಯ ಲೀಲೆಯ ಮನೋಹರತೆ,
ಸರ್ವಮುಂ ನಿನ್ನ ಅಂಗೋಪಾಂಗಮಂ ಸುತ್ತಿ
ಮುತ್ತಿ ನೆಯ್ಯಲಿ ಜಗನ್ಮೋಹನದ ಜಾಲಮಂ!
ನಿನ್ನೆಡೆಯೊಳಾನಿರ್ದ್ದು ಸವ್ಯಸಾಚಿಯ ನೋಂಪಿ ತಾಂ
ನಿನ್ನ ಮೈಮುಡಿಗಳಿಂ ಸೂಸುವ ಸುವಾಸನೆಗೆ
ಮೈಮರೆಯುವಂತೆ ಮಾಳ್ಪೆನ್! ಏಳು, ನೀರೇಜಮುಖಿ,
ನೋಡು: ನೀನೀಗಳಂಗಜ ಮೋಹ ದೀಪಶಿಖಿ!” ೮೨೦

ಮರೆಯಾಯ್ತು ದರ್ಶನಂ! ಕಣ್ದೆರೆದಳೊಯ್ಯನೆಯೆ,
ಚಿತ್ರಾಂಗದೆ; ಮರುವಟ್ಟುವಡೆದಂತೆವೋಲಾಕೆ
ಸ್ವಪ್ನ ಮಧುರಾನುಭವದಾನಂದದಿಂದುಬ್ಬಿ
ನೋಡಿದಳು ಹೊರಗೆ: ಹಬ್ಬಿತ್ತು ಸ್ವಾಪ್ನಿಕ ವಿಪಿನ
ಚಂದ್ರಿಕಾ ಸಾಂದ್ರಮಾಯೆ! ಹಾಡುತಿರ್ದುದು ತೇನೆ!