ಉರುಳುರುಳು, ಸಾಗರವೆ, ಮುನ್ನೀರಿನಾಗರವೆ,
ತೆರೆತೋಳ್ಗಳಿಂದೆಯಾಲಿಂಗಿಸಿ ಧರಿತ್ರಿಯಂ
ವರುಷ ಶತ ಗತವಾದರಳಿಯದನುರಾಗದಲಿ, ೧೭೬೦
ಹರುಷ ಭೋಗದಲಿ! ಸುರನೀಲಿ ಸುಂದರಮೂರ್ತಿ,
ಗಂಭೀರ ವಿಸ್ತಾರ ಸುಗಭೀರ ನೀರನಿಧಿ,
ನೇಸರಿಂ ಕೆಲಸಿಡಿದು ನಮ್ಮೀಧರಾದೇವಿ
ಬೆಂಕಿ ಮೀಹದೊಳಂದು ಮಿಂದೆದ್ದ ಮೊದಲಲ್ಲಿ
ಹೆತ್ತ ಬಾಳ್ಬಿಂಬಿತ್ತ ದಾತೃವೆ, ನಮೋ ನಮಃ!
ಗಡಿಮೀರಿ ನಿಡುಬೆಳೆದ ನಿನ್ನ ತಡಿಗುಂಟೆ ಗುಡಿ?
ಅಲ್ಲಿಯಾತ್ಮದ ಬಯಕೆವಳ್ಳಿ ದಾಂಗುಡಿ ದಾಂಟಿ,
ಕಾಲದೇಶಾಂಡವನೊಡೆದು ಮೀಂಟಿ, ಬ್ರಹ್ಮಮಂ
ತಬ್ಬುವುದನಂತತೆಯನೀಂಟಿ! ಮನವನೆದೆಗೆ
ಧೀರತೆಯ ಕಿಡಿಗೆರದು ಸಾಹಸಕ್ಕೆಳೆದೊಯ್ವ ೧೭೭೦
ಕೆರೆ ನಿನ್ನ ಮೊರೆ, ನಿರಂತರ ಚೇತಸದ ಜಲಧಿ!
ನರನ ನಾಗರಿಕೆತೆಯ ತೀರ್ಥಯಾತ್ರೆಯ ಮಹಾ
ವಿಸ್ತೃತ ಸಲಿಲ ಪಥವೆ, ಮೊರೆದುರುಳು, ರತ್ನಧಿಯೆ,
ಉಲ್ಲೋಲ ಕಲ್ಲೋಲ ರುದ್ರಾಟ್ಟಹಾಸದಿಂ
ಶಂಕರ ಭಯಂಕರದ ಮೋಹನವೆರಚಿ ಬೀಸಿ!

ಮೊರೆದುದಂಬುಧಿಯಂತು ಮಣಿಪುರ ಸಮೀಪದಲಿ
ದೀರ್ಘ ಸೈಕತ ವೇಲೆಯನ್ನಪ್ಪಳಿಸಿ ಬಡಿದು
ಮಂಥನದಿ ಮುತ್ತೆದ್ದು ನೊರೆಗರೆವಲೆಗಳಿಂದೆ.
ನಿಂದುದು ಬೃಹನ್ನಿಶೆಯ ಜ್ಯೋತ್ಸ್ನಾತಪೋಮೂರ್ತಿ
ಮುಡಿಯುತೆ ಸುಧಾಕಿರಣನಂ ಜಟಾಜೂಟದಲಿ, ೧೭೮೦
ನಿಶ್ಚಲಧ್ಯಾನ ನಿದ್ರೆಯಲಿ, ವಿಶ್ವವ್ಯಾಪಿ
ತಾನಾಗಿ. ನಿರ್ಜನ ನಿಶಾ ವೇಳೆಯಲಿ ಚಿತ್ರೆ,
ಕ್ಷಾತ್ರಕುಲ ರಮಣಿ, ಬಾಳ್ಗೊಲೆಗುಜ್ಜುಗಂಗೈದು
ಕಡಲತಡಿಗೈತಂದು, ಮಣಿದು ದಿಕ್ಪಾಲರಿಗೆ,
ಗಗನದೇವರ್ಕಳಿಗೆ, ಪವನಂಗೆ, ಸಾಗರಗೆ,
ಶಶಿತಾರೆಗಳಿಗೆ ಬಿನ್ನೈಸಿದಳ್ ಕೈಮುಗಿದು:
“ಲೋಕಸಾಕ್ಷಿಗಳಲ್ತೆ, ಕರುಣ ದೇವರ್ಕಳಿರ,
ಕಾರ್ಯದವಿವೇಕಮಂ ಲೆಕ್ಕಿಸದೆ ಕಾರಣದ
ಪರಿತಾಪಮಂ ಗಣಿಸಿ ಕ್ಷಮಿಸಿಮಪರಾಧಮಂ,
ದುಃಖಾಗ್ನಿ ದಗ್ಧ ದುರ್ಬಲೆಯ ಈ ಪಾಪಮಂ! ೧೭೯೦
ಒಲುಮೆಗಿಂತಲು ಬೇರೆ ಪರಮಾರ್ಥವಿನ್ನಿಲ್ಲ
ನರರ ಬದುಕಿನಲಿ; ಮೇಣರ್ಥಹೀನಂ ಬಾಳ್ಮೆ
ಒಲುಮೆಯಿಲ್ಲದಿರೆ. ಹೂವಿಂದೆ ಸಾರ್ಥಕವಹುದು
ಗಿಡದ ಬಾಳಂತೆ ಬಾಳ್ಗಿಡಕೆ ಒಲುಮೆಯೆ ಹೂವು.
ಒಲಿದೊಲ್ಮೆ ಮರಳಿಯೊಲಿಯದಿರೆ ಒಲುಮೆಗದೆ ಕೊಲೆ!
ಮೊದಲೆ ಕೊಲೆಯಾಗಿರುವ ನನ್ನೆದೆಯನಾನಿಂದು
ಮತ್ತೆ ಕೊಲೆಗೈವೆನೆ? ಕಳೇಬರವನರ್ಪಿಸುವೆ
ಪಾವನ ಸರಿತ್ಪತಿಯ ವಿಸ್ತೃತೌದಾರ್ಯಕ್ಕೆ!”
ಪ್ರವಹಿಸೆ ಕಪೋಲದಲಿ ಲವಣಾಶ್ರುಬಿಂದುತತಿ,
ನದಿ ಹರಿಯುವಂತೆ ಕಡಲಿಂಗೆ ಲಾವಣ್ಯವತಿ. ೧೮೦೦
ನಡೆದಳ್‌ ಲವಣಸಿಂಧುತಟಕೆ. ನಡೆದುದೆ ತಡಂ,
ಲಕ್ಷೋಪಲಕ್ಷ ಹೆಡೆಗಳನೆತ್ತಿ ಭುಸ್ಸೆಂಬ
ಸಾಸಿರ ಶಿರದ ಮಹಾಫಣಿಯಂತೆ ಸಾಗರಂ
ವಿಕ್ಷುಬ್ಧ ವೀಚಿಯುಚ್ಛ್ವಾಸದಿಂ ಮುನಿದೆದ್ದು
ಗರ್ಭಾತ್ಮಘಾತಿನಿಯ ನೂಂಕಿದುದೊಲದ ತಾಯ್
ತನೂಜೆಯಂ ತಡೆವವೋಲ್! ಒಡನೆ, ಮೈದೋರ್ದುದೆನೆ
ಸಾಗರದ ಸಾರವೆ ಸಲಿಲದಾಕೃತಿಯ ನೀಗಿ,
ಮೆರೆದುದು ಸಮುದ್ರ ಮೂರುತಿ ವಾರಿಧಿಯ ಮಧ್ಯೆ
ಸರ್ವ ಸೌಂಧರ್ಯ ಸಾಕ್ಷಾತ್ಕಾರಮಾದವೋಲ್!
ನವ್ಯ ನವರತ್ನಮಯ ಕಾಂಚನ ಕಿರೀಟದಿಂ ೧೮೧೦
ಪೊಣ್ಮುವ ಗಭಸ್ತಿಯಿಂ ಪರಿವೇಷ ಮಂಡಲಂ
ಬಣ್ಣಬಣ್ಣದ ಕದಿರ್ ಪೆಣೆದ ಹಿನ್ನೆಲೆಯಂತೆ
ಶೋಭಿಸುತ್ತಿರಲ್, ತರುಣಾರುಣ ಶರೀರ ರುಚಿ
ತೆರೆಯ ನೊರೆಮುತ್ತಿನಿಂ ಮೆರೆವ ನೀರಾಂಬರದಿ
ಹೊರಸೋಸಿ ಎಸೆಯೆ, ಮೇಣ್ ಸುತ್ತಲೆತ್ತತ್ತಲುಂ
ನೀರಧಿಯಲೆಗಳೊಡನೆ ನೀರದಂಗಳ ರಾಜಿ
ಸ್ಪರ್ಧೆಯಿಂ ನರ್ತನಂಗೈಯೆ, ತಾವರೆಮೊಗದ
ಮೀನನೇತ್ರದ ಕೂರ್ಮಸಮ ಕಪೋಲದ ಚೆಲುವ
ಶೈವಾಲ ಶೃಂಗಾರದಂಬುಧಿಯ ಶ್ರೀಮೂರ್ತಿ
ಘೋಷಿಸಿತಿಂತು ಗಂಭೀರ ನೀರದ ನಿನಾದದಿಂ : ೧೮೨೦
“ಸಾಹಸಂಗೈಯದಿರ್; ನಡೆ, ಮಗಳೆ, ನಿನ್ನೆಡೆಗೆ.
ಕಡಲೊಡಲ ಕುಳಿರನಿಂ ಬೆಚ್ಚನೆಯ ಮನೆಮಡಿಲೆ
ಲೇಸು. ಕಣ್ಣೆದುರಿರ್ಪ ನೋವು ತಾನದೆ ಸೊಗಂ
ಕಾಣದಿಹ ಸಾವಿಗಿಂ. ಮೇಣ್, ಮರ್ದ್ದಲ್ತು ಕೊಲೆ
ವಿರಹಕ್ಕೆ. ನಿನಗಹುದು ನಿನ್ನಿನಿಯ ದರ್ಶನಂ
ನೀನು ಕೊನೆಯುಸಿರೆಳೆವ ಮೊದಲ್. ನಿನ್ನೊಡಲಿನೊಳ್
ಬಳೆಯುತಿದೆ, ಸ್ವಾತಿಹನಿ ಮುತ್ತಾಗಿ ಬೆಳೆವಂತೆವೋಲ್,
ನಿಮ್ಮ ಬೇಟದ ಸಾರಸರ್ವಸ್ವ ಶಿಶು! ಒಲ್ಮೆ ತಾಂ
ಬಾಳ್ಗಿಡಕೆ ಪೂವೆಂದೆಯಲ್ತೆ? ದಿಟಮಾದೊಡಂ,
ಮರಕೆ ಮಲರಲ್ಲದೆಯೆ ಹಣ್ಣು ಗುರಿಯಪ್ಪಂತೆ, ೧೮೩೦
ಪ್ರಣಯ ಸಾಧನೆಗೆ ಶಿಶುವಾತ್ಸಲ್ಯ ತಾಂ ಸಿದ್ಧಿ!
ಮಿಡಿ ಬಂದ ಮಾವು ಹೂ ಹೋದುದೆಂದಳಲಹುದೆ?
ಫಲದ ಸಾಫಲ್ಯಕ್ಕೆ ಸುಮದ ಸೌಂದರ್ಯ ಬಲಿ
ತಾನಂತೆ ಬಲಿಯಹುದು ನೀರನೀರೆಯರೊಲುಮೆ
ಕಂದನಾನಂದಕೆ. ಹಸುಳೆಯೊಲ್ಮೆ ದಾಂಪತ್ಯ
ಮಂದಿರಕೆ ಗೋಪುರದ ಹೊಂಗಳಸಮಲ್ಲದೆಯೆ
ಗರ್ಭಗುಡಿಯಲಿ ಪುಣ್ಯವೇದಿಕೆಯ ದೇವಮೂರ್ತಿ:
ವತ್ಸ ವಾತ್ಸಲ್ಯಮಿಲ್ಲದ ವಿವಾಹಂ ವ್ಯರ್ಥಮೌ!
ಮಹನಹಂ ನಿನ್ನ ಮಗನಾತನಂ ಮುದ್ದಿಪುದು,
ಲಾಲಿಪುದು, ಪಾಲಿಪುದು, ತಿದ್ದುವುದು! ಗುರುವಾಗಿ ೧೮೪೦
ನೀನವಗೆ ಕಲಿಸುವುದು ಪೃಥಿವೀಶ ಕಲೆಗಳಂ!
ಜೀವದ್ವಯಂಗಳಂ ಕೆರಳಿ ಕಗ್ಗೊಲೆಗೈವ
ಈ ಸಾಹಸಂ ಬೇಡವಾ ಸಾಹಸಂಗೈದು
ಬದುಕು, ನಡೆ, ಕೀರ್ತಿವೆತ್ತಿರು ತಪಸ್ವಿನಿಯಾಗಿ!”

ಇಂತೆಂದು ನಿಂತುದಾಶೀರ್ವಾದದಾ ವಾಣಿ;
ಕಣ್ಣೊಳೆಯೆ ಕಾಣದಾದುದು ಸಮುದ್ರದ ಮೂರ್ತಿ!
ಕಣಸಿನಿಂದೆಚ್ಚತ್ತವೋಲ್ ಚಿತ್ರೆ ಮೈತಿಳಿದು
ನಡೆದಳೊಯ್ಯನೆ ತನ್ನ ಮಂದಿರಕೆ, ಬಹು ಬಹುಲ
ಭಾವ ಭಾರದಲಿ. ಅಂದು ಮೊದಲಾಗುತಾ ರಮಣಿ
ತಾಯಾಗಿ ಪೊತ್ತು ಪೊರೆದಳ್ ತನ್ನ ಸುಪವಿತ್ರ ೧೮೫೦
ಭಾರಮಂ, ಪೂಜ್ಯ ಮನದಿಂ, ಪೂಜೆಯೆಂದರಿದು.
ತುಂಬಿ ಬರಲೊಂಬತ್ತು ತಿಂಗಳಾ ಪಸುಳೆ ತಾಂ
ತಿಂಗಳೊಗೆತರ್ಪಂತೆ ಕಳ್ತಲಾಕಾಶದಲಿ
ಜನ್ಮಿಸಿತು, ಜನಮನ ಸಮುದ್ರವುಲ್ಲಾಸದಿಂ
ಪಿಂತಣಾಶಂಕೆಯಂ ತೊರೆದುಚ್ಚಳಿಸುವಂತೆ:
ಪೇಳದಿರ್ದೊಡಮೇನ್, ತಾಯ್? ತಾಂ ಪೇಳ್ದತ್ತು
ಚಂದ್ರಸಮ ತೇಜಸ್ವಿ ಶಿಶು ತನ್ನ ವಂಶಮಂ!

ಕ್ರತ್ರಿಯೋಚಿತಮಾಗಿ ರಾಜಸಂಭ್ರಮದಿಂದೆ
ಬಭ್ರುವಾಹನನೆಂದು ಪೆಸರಿಟ್ಟು, ಚಿತ್ರಾಂಗಿ
ಪಾರ್ಥನಂ ಮರೆದಳೆನ ಅರ್ಭಕನ ಮೋದಿಂ ೧೮೬೦
ಪೆರ್ಮೆಯಿಂ ಮೊಲೆಯೂಡಿ ಪಾಲಿಸಿದಳಾತನಂ,
ಸಿಂಹಿಣಿ ಕಿಶೋರಕೇಸರಿಯಂ ಪೊರೆಯುವಂತೆ.
ಮತ್ತೊರ್ವನರ್ಜುನನೊ ಎನೆ ಬಭ್ರುವಾಹನಂ
ಬಳೆದನಾ ತನ್ನ ನಾಡಿಗೆ ಕೋಂಟೆ ತಾನಾಗಿ,
ನೆರೆಯ ನೆಲಗಳ ದೊರೆಗೊಡಂಕೆಗೆ ಕೊಡಲಿಯಾಗಿ!

ಚಿತ್ರವಾಹನನಳಿಯೆ ಚಿತ್ರಾಂಗದೆಯೆ ರಾಜ್ಯ
ಸೂತ್ರಮಂ ಪಿಡಿದು, ದರ್ಪದಿ ನಡೆದು, ಕಿರುಮಗಂ
ಹರೆಯಕ್ಕೆವಂದಮೇಲದನವನ ಕೈಲಿಟ್ಟು,
ಹೊಳಲ ಹೊರವಳಯದೊಂದುದ್ಯಾನ ವನದಲ್ಲಿ
ನಿಚ್ಚಂ ತಪಂ ನಿಂದುಮೋರೊರ್ಮೆ ತನ್ನೆಡೆಗೆ ೧೮೭೦
ತನಯಂ ಬರಲ್ಕೆ ಕಲಿಪಳ್ ರಾಜನೀತಿಯಂ
ಮೇಣ್ ಧರ್ಮಭೀತಿಯಂ. ಆ ಬಭ್ರುವಾಹನಂ
ಬಲ್ಮೆಯೆನಿತಿರ್ದೊಡಂ, ಕರ್ಚ್ಚಿ ವಿಷಮಂ ಕಾರಿ
ಕೊಲ್ಲದೆಯೆ ಹೆಡೆಯೆತ್ತಿ ಹೆದರಿಸುವ ನಯಮನೆಯೆ
ಪಿಡಿದು, ನಿರ್ನಿಮಿತ್ತದಿ ವಿಜಯಲಾಂಪಟ್ಯದಿಂ

ನೆರೆ ನಾಡುಗಳ ಮುತ್ತಿ ನೆತ್ತಂ ತೊರೆ ಹರಿಸಿ
ಕಪ್ಪಗಾಣಿಕೆ ಕೊಳ್ಳದೆಯೆ, ನೆರೆಯ ದೊರೆಗಳಂ
ಮಿತ್ರರಂಗೈದರಸುಗೆಯ್ಯುತ್ತುಮಿರೆ ಭೂಮಿ
ವರ್ದಿಸಿತು ಸ್ವರ್ಗಮಾಯ್ತೆಂಬಿನಂ. ಮಣಿಪುರಂ
ಬಿತ್ತರಿಸಿ ಶೋಭಿಸಿತು. ಸೌಂದರ್ಯ ಸ್ವಾತಂತ್ರ್ಯ ೧೮೮೦
ಸಂಸ್ಕೃತಿಗಳಂವೆರಸಿ ಧೈರ್ಯಶೌರ್ಯಂಗಳಿಂ
ಶಾಂತಿಯಿಂ ನಲಿದತ್ತು ಜನಪದಂ ನಿಚ್ಚಮಾ!

ಸಂವತ್ಸರಗಳುರುಳಿ ಹರಿದುದು ನಿರಂತರಂ
ಕಾಲನದಿ. ತಿಂಗಳಾರಕೆ ಮರಳಿಯೈತಂದು
ಕಾಂಬೆನೆಂದೊರೆದು ವಚನವನಿತ್ತ ಪಾರ್ಥಯತಿ
ಕಾರಣಾಂತರದಿಂದೆ ತಿಂಗಳೆರಡಂ ತಳುಹಿ
ಬನದ ಶಿವಗುಡಿಗೆ ಬಂದಿನಿಯಳಂ ಕಾಣದೆಯೆ
ಕಣ್ಣೀರು ಕರೆಗಣ್ಮೆ ಮನದಿ ಮಮ್ಮಲ ಮರುಗಿ,
ತಿಳಿಯದೆಯೆ ಕಾಂತೆಯೆಲ್ಲಿರ್ದಳಾರ್ಗೆಂಬುದಂ,
ಕಾದಲೆಗೆ ಕಾದಲ್ಲಿ ಕೆಲದಿನಂಗಳುಮಿರ್ಧವಳ್ ೧೮೯೦
ತೋರದಿರೆ, ಮುಂಬರಿದನುತ್ತರೋತ್ತಮಕ್ಕೆ
ತನ್ನಕ್ಕರೆಯ ಪೆಣ್ಗೆನುತೆ ಭಾರತೋತ್ತರಕೆ.
ಮುಂದೆ ಸಂಭವಿಸಿತ್ತು ನಿಯತಿ ಕೃತ ನಿಯಮದಿಂ
ಕುರು ಪಾಂಡುಸಂಭವರ ಭೀಷಣ ರಣೋದ್ಯಮಂ,
ಮೈನವಿರನೊಡರಿಪ ಮಹದ್‌ಭವ್ಯಭಾರತಂ,
ಗಾಂಗೇಯ ದ್ರೋಣಾದಿ ಕರ್ಣ ದುರ್ಯೋಧನರ
ಜೀವಕಾನನ ದಹನ ಪ್ರೋಜ್ವಲಂ, ಮುರವೈರಿ
ಪಾರ್ಥ ಧರ್ಮಜ ಭೀಮನಭಿಮನ್ಯು ಮೊದಲಪ್ಪ
ವೀರರ ಯಶೋಕೇತನಾಂಕಿತ ನಿಕೇತನಂ!
ಆ ಮಹಾಘಟನೆಗಳ ಸಂಘಟ್ಟಣೆಯ ಮಧ್ಯೆ ೧೯೦೦
ಕಿಢಿಮಳೆಯ ನಟ್ಟನಡು ಸಿಡಿಮರ್ದ್ದಿನಂತಿರ್ದ
ಸಿತವಾಹನಂಗೆಲ್ಲಿ ಚಿತ್ರಾಂಗದೆಯ ನೆನಹು?
ಪೆಸರೆಂಬುವವಲಂಬಮಾದೊಡಂ ತಾನುಂಟೆ ಪೇಳ್
ಸ್ಮೃತಿಗೆ? ಪೆಸರಿಲ್ಲದಾ ವನಿತೆ ಬಗೆಯಿಂ ಜಗುಳಿ
ಬಿಳ್ದಳೊಯ್ಯನೆ ವಿಸ್ಮೃತಿಯ ತಿಮಿರ ವೈತರಣಿಗೆ!

ನರನು ಮರೆತೊಡಮೇನು ಮರೆಯುವುದೆ ತಾಂ ಋತಂ?
ಮರೆದಪಳೆ ಚಿತ್ರಾಂಗದೆ? ಭಾರತಾರಂಭಮಂ
ಕೇಳ್ದಂದು ಮೊದಲ್ಗೊಂಡು ‘ಪಾರ್ಥಂಗೆ ಗೆಲಮಕ್ಕೆ!
ಅರ್ಜುನಗೆ ಸೊಗಮಕ್ಕೆ! ಜಯವಧು ಸವತಿಯಕ್ಕೆ!
ಧರ್ಮಸಂಸ್ಥಾಪಕಂ ದೇವಕೀನಂದನಗೆ ೧೯೧೦
ನಿತ್ಯಮಂಗಳಮಕ್ಕೆ! ಲೋಕಕ್ಕೆ ಶಾಂತಿಯಕ್ಕೆ!’
ಎಂದು ನೋಂತಭವನಂ ಪ್ರಾರ್ಥಿಸಿದಳನುದಿನಂ
ಪಾಂಡವ ವಿಜಯವಾರ್ತೆ ಕಿವಿಗೆ ಬೀಳ್ವನ್ನೆಗಂ!
ಅಂತು ನೋಂಪಿಯೊಳಿರುತ್ತಿರೆ ಬಭ್ರುವಾಹನಂ
ತಾನೊರ್ಮೆ ತಾಯೆಡೆಗೆ ವಂದು, ಮಾತಿನ ನಡುವೆ
ನೋಂಪಿಯುದ್ದೇಶಮಂ ಕೇಳೆ, ಬೆಸಸಿದಳಾಕೆ:
“ಧರ್ಮದ ಜಯಕೆ ಬೇಡುತಿಹನೀಶನಂ. ಋತದ
ಖಡ್ಗಕ್ಕೆ ಸುವ್ರತದ ಪ್ರಾರ್ಥನೆಯಹುದು ಸಾಣೆ.
ಧರ್ಮದ ಮಹಾಭಾರತದ ಜಯಕೆ ಪಾರ್ಥನಾ
ಪೌರುಷವೆನಿತೊ ಚಿತ್ರೆಯೀ ವ್ರತದ ಪ್ರಾರ್ಥನಾ ೧೯೨೦
ಪೌರುಷಂ ತಾನನಿತೆವೇಳ್ಕುಮೆಂಬುದು ಶ್ರದ್ಧೆ
ನನತು! ಧರ್ಮದ ಮೇಲ್ಮೆಗಾಗಿ ಹೋರಾಡುವಾತಂ
ಗೆಲ್ದರದಕಾತನಾ ಬಿಲ್ಬಲ್ಮೆಯೊಂದಲ್ತು
ಕಾರಣಂ; ಧರ್ಮಿಷ್ಠರಾದರಾಶೀರ್ವಾದ
ಪೂರ್ಣಬಲಮಿಹುದಲ್ಲಿ ತಿಳಿ ದಿಟಂ. ಗಾಂಗೇಯ
ದೇಹಮಾ ಕೌರವರ ಪಕ್ಷಮಾಗಿರ್ದೊಡಂ
ಪರಕೆಯೆಲ್ಲಂ ಪಾಂಡವರ ಕಡೆಗೆ! ಮುರವೈರಿ
ಪಾಂಡವರ ಕಡೆಗೆ; ಬಲವೆರಸಿ ಬಲರಾಮನಾ
ಕೌರವರ ಕಡೆಗಲ್ತೆ? ನಾನಂತೆ ಪಾರ್ಥನಾ
ಗಾಂಡೀವಕಾಶೀರ್ವಚನಶಕ್ತಿಯಂ ನೀಡಿ ೧೯೩೦
ನೆರವಾದಪೆಂ!”

ತಾಯ ನುಡಿಯನಾಲಿಸಿ ಮಗಂ
ಹೇಳಿದನು ಕಣ್ಣಿನಲಿ ಹನಿ ತುಂಬಿ ತಾನುಮಾ
ಕುರುಭೂಮಿಗೆಯ್ದಿ, ಧರ್ಮದ ಜಯಕೆ ನೆರವಾಗಿ,
ಮಣಿಪುರದ ಕೀರ್ತಿಗೆ ಕಲಶವಿಟ್ಟು ಬಹೆನೆಂದು.
ಕರೆಯದೆಯೆ ತೆರಳುವುದು ನೆಲದೊಡೆಯರಿಗೆ ತಗುವ
ಮರಿಯಾದೆಯಲ್ಲೆಂದೊರೆಯೆ ಜನನಿ, ಮಗನದಕೆ
ಸುಯ್ದು, ತಾನೆಂದಾದರೊಂದು ದಿನಮರ್ಜುನಗೆ
ಮಾರಾಂತು ಕದನಮುಖದಲ್ಲಿ ತನ್ನದಟುಮಂ
ತೇಜಮ ತೋರಿ, ಮುಂದಾವಗಂ ಮಣಿಪುರದ
ದೊರೆಗಳಂ ಮರೆಯದಂದದಿ ಮಾಳ್ಪನೆಂದುರಿದು ೧೯೪೦
ನುಡಿಯೆ, ಕಂಪಿಸಿ ತಾಯಿ ತಿಳಿಯದಾಶಂಕೆಯಿಂ,
ಸಂತಯಸಿ ಕಳುಹುತೆ ಕುಮಾರನಂ, ಕೈಮುಗಿದು
ಕಣ್ಮುಚ್ಚಿ ಬೇಡಿದಳ್ ಸುರರಂ ಪೊರೆಯಿಮೆಂದು!

ಪೊಳ್ತುವೊಳೆಯಿಂತು ಪರಿದಿರೆ ಪರ್ವಿದುದು ವಾರ್ತೆ:
ಕ್ರತು ನಿಮಿತ್ತದಿ ಜನ್ನಗುದುರೆ ಬೆಂಗಾವಲ್ಗೆ
ಸೈನ್ಯಸಾಗರ ಸಹಿತ ರಣಧೀರ ನೃಪರೊಡನೆ
ರಣವಧೂವಲ್ಲಭಂ ವಿಜಯಂ ವಿಜಯಕೆಂದು
ಪರೊಮಟ್ಟು, ದೇಶದೇಶಂ ಗೆಲ್ಲುತದಟಿನಿಂ
ಬಾಕ್ಕೇಳಿಸುತೆ, ಚಂಡ ಜವದಿಂದಮಿತ್ತಣ್ಗೆ
ನುರ್ಗುತಿಹನೆಂದು. ಚಿತ್ರಾಂಗದೆಗೆ ಸಂತಸಂ ೧೯೫೦
ಕೈಗಣ್ಮಿದತ್ತು, ಬಹುಕಾಲದಾನಂತರಂ
ಪ್ರತ್ಯಕ್ಷವಹುದೆಂದು ಪತಿಯ ಸಂದರ್ಶನಂ.
ಮೇಣದಂತೆ ನಲಿದನಾಕೆಯ ಕುವರನುಂ, ತನಗೆ
ಮೂಜಗದ ಬೀರದ ಜಸಕೆ ತವರಿನಂತಿರ್ಪ
ಸವ್ಯಸಾಚಿಯ ಕೂಡೆ ಸಮರಂ ದೊರೆವುದೆನುತೆ.
ಇರ್ವರುಂ ತಾಮೊರ್ವರೊರ್ವರ್ಗೆ ಗುಹ್ಯಮಂ
ಪೇಳದಿರೆ, ವರ್ಷರ್ತು ಹರ್ಷಮನೆರಚುವಂತೆ
ಕಾರ್ಮುಗಿಲ್ ಮುತ್ತಿ ಗಗನವನೈದೆ ಮಳೆಗರೆಯೆ,
ಪಸುರುಗುವ ಪೊಸವುಲ್ಲ ಸೊಂಪಿಡಿದೆಸೆವ ನೆಲದ
ಶಾದ್ವಲ ಶ್ಯಾಮಲ ಸ್ಮಿತದ ಸುಂದರ ರೋಚಿ ತಾಂ ೧೯೬೦
ಸುರಕಾರ್ಮುಕದ ವರ್ಣಗಳ ಮೆರೆದು ಮೋಹಿಸುವ
ನಾನಾ ಕುಸುಮತತಿಯ ಕೇಸರದ ಧೂಳಿಯಂ
ಕೆದರುತಿಹ ಗಾಳಿಯಂ ಕೆಳೆಗೊಂಡು ಕಳಕಳಿಸೆ,
ಪಕ್ಷಿ ಸುಸ್ವನಮಯ ಪೊರೋದ್ಯಾನವೀಧಿಯೊಳ್
ಪಾಳೆಯಂ ಬಿಟ್ಟುದರ್ಜುನನ ಸೇನೆ! ಯಜ್ಞಹರಿ
ಪಟ್ಟಲಿಖಿತಂ ವೆರಸಿ ಕಟ್ಟುಗೊಂಡುದು ಕೂಡೆ
ಚಿತ್ರಾಂಗದಾ ತನುಜನ ದಿಟ್ಟ ಭಟರಿಂದೆ!

ಬತ್ತಿಸಿ ನೃಪಾಲರಾಟೋಪಮಂ ಕೋಪದಿಂ,
ನೀಲಧ್ವಜನ ಮುರಿದು, ಹಂಸಧ್ವಜನ ಗೆಲ್ದು,
ಸೋಲಿಸಿ ಪ್ರಮೀಲೆಯಂ, ಲಕ್ಷ್ಮಿಯ ನಿವಶಮೆನೆ ೧೯೭೦
ಸ್ವರ್ಣ ಸಂಪತ್ತಿನಿಂ ಮೇರುವಿಂಗಣೆಯಾಗಿ
ಕಣ್ಣು ಕೋರೈಸೆ ರಾಜಿಪ ರಾಜಧಾನಿಗಳ
ಸುಲಿಸುಲಿದು ಸೂರೆಗೊಂಡಾ ಪಾರ್ಥನೆಯೆ ಕಂಡು
ಮಣಿಪುರದ ಸಿರಿಗೆ ಬೆರಗಾಗಿ ಕೇಳಿದನಂದು
ಹಂಸಧ್ವಜನ ಕುರಿತು ನಾಡಿನರಸಾರೆಂದು.

“ಏನನೆಂಬೆನು ಪಾರ್ಥ? ಈ ಹೊಳಲಿನರಸನಿಗೆ
ಸಿದ್ದಾಯಕಾಗಿ ನಾವನಿಬರುಂ ತಪ್ಪದೆಯೆ
ಪ್ರತಿವರ್ಷಕೊಂದು ಸಾಸಿರ ಬಂಡಿ ಚಿನ್ನಮಂ
ತೆತ್ತು ಬಹೆವಲ್ಲದಿರೆ ದಂಡನೆಯೆಂದು ಬೆದರಿ!
ಈತಂಗೆ ಸಚಿವಂ ಸುಬುದ್ಧಿ. ಮೇಣೀತನಾ ೧೯೮೦
ವಾಹಿನಿಯ ವಾರ್ಧಿಯನ್ನೀಸಬಲ್ಲವರಿಲ್ಲ
ಲೋಕದಲಿ. ಪೆಸರಾತನಿಗೆ ಬಭ್ರುವಾಹನಂ!
ಕರುಣೆಯಲಿ ನಯವಿನಯಗಳಲಿ ಮೇಣದಟಿನಲಿ
ಸಂಸ್ಕೃತಿಯ ಸೌಜನ್ಯಭಕ್ತಿಯಲಿ ಸೊಬಗಿನಲಿ
ಸರ್ವಸಂಪನ್ನತೆಯೊಳಾತಂಗೆ ಸಮನಿಲ್ಲ
ತ್ರೈಜಗದೊಳಂ. ಪುಣ್ಯಪುರುಷನಾತಂಗೆ ಗುರು
ಆತನ ಜನನಿಯಂತೆ! ವರ ತಪಸ್ವಿನಿಯಾಗಿ,
ದೇಶದಭ್ಯುದಯಕೊಂದಾಶೀರ್ವಚನಮಾಗಿ,
ನಗರೋಪವನದೊಳೆಲೆವನೆಯೊಳಿರುತಿಹಳಂತೆ!
ಪೆಸರಾಕೆಗಾ ದೇವಿಗಿರ್ಪುದೈ ಚಿತ್ರಾಂಗದೆ!
ಚಿತ್ರಾಂಗದೆಯ ಕಥೆ ವಿಚಿತ್ರಮೆಂದಾಡುವರ್:
ಚಿತ್ರವಾಹನಗಾಕೆಯೊಬ್ಬಳೆ ಕುವರಿಯಾಗಿ
ಜನಿಸೆ, ಮಂಗಳಂ ಮಗನೆಯೆಂದೊಲಿದು ಸಲಹಿನದ
ಆಣ್ಮಗೆ ತಗುವ ಕಲ್ಪಿಯ ಕಲಿಸಿ. ಜವ್ವನದಿ
ಬೇಂಟೆಗೆನುತಾಕೆ ಕಾಡೊಳಗಲೆಯುತಿರಲೊರ್ವ
ಗೈರಿಕವಸನವೇಷಿ ಸುರಪುರಷನೈತರಲ್,
ಕಣ್ಬೇಟವಗ್ಗಲಿಸಿ, ಗಾಂಧರ್ವ ವಿಧಿಯಿಂದೆ
ಮದುವೆ ನಿಲೆ, ಬಭ್ರುವಾಹನ ಜನನಮಾಯ್ತೆಂದು
ಕರ್ಣಪ್ರತೀತಿಯಿದೆ ದಿಟಮೆಂತೊ ನಾನರಿಯೆ!”

ಹಂಸಧ್ವಜನ ನುಡಿಯ ಕೇಳುತರ್ಜುನನೆದೆಯ ೨೦೦೦
ಗಹ್ವರ ಗಹನದಲಿ ಮೂಡಿತೊಂದತಿದೂರದಾ
ದೂರಸ್ಮೃತಿ. ಅದರದಕಿದಕೇನು ನಂಟೆನುತೆ
ತಳ್ಳುತಾಚೆಗೆ ನೆನಹನೊಡನೆ ಬಳಿ ಕುಳಿತಿರ್ದು
ಕಥೆಯ ಕೇಳುತಲಿರ್ದ ವೃಷಕೇತುವಂ ಕುರಿತು
‘ಯುವಕ ವೀರನೆ, ಬಭ್ರುವಾಹನಗೆ ಮಾರಾಂತು
ಜಯಿಸುವೆಯ ನೀನೆಂದು ಮೊದಲಾಗಿ ನುಡಿಗಳಂ
ತೊಡಗಿದನ್. ಆದರೇನ್? ಬಿದಯ ವಂಚಿಸಲಹುದೆ?
ಕಣ್ಮುಚ್ಚಲೇನರ್ಜುನಂ? ನೋಡು ಅದೊ ಛಾಯೆ
ರಾಹುವಂದದಿ ಬರುತಲಿದೆ ಬಳಿಗೆ ಬಳಿಸಾರ್ದು!

ಒಯ್ಯನೊಯ್ಯನೆ ತನ್ನೆಡೆಗೆ ಪರಿ ಬರುತಿರ್ಪ ೨೦೧೦
ವಿಧಿ ವಿಹಂಗಮ ಪಕ್ಷ ಛಾಯೆಯೆನೆ, ಕಳ್ತಲೆಯ
ಕರ್ಗಪ್ಪು, ಪಗಲಳಿಯೆ, ತೀವಿತು ಧರಿತ್ರಿಯಂ.
ಏನ ನೆನೆದನೊ ಮನದೊಳಿಂದ್ರಜಂ? ಮೂಡುವಾ
ತಾರಾಳಿಯೊಡನೆ ತಾನಾರುಮರಿಯದ ರೀತಿ
ಮಾರುವೇಷವ ಧರಿಸಿ, ಮೆಲ್ಲಮೆಲ್ಲನೆ ಹೊಳಲ
ಬೀದಿಗಳನಲೆದಲೆಯುತರಸಿ ಚಿತ್ರಾಂಗದೆಯ
ಪರ್ಣಶಾಲೆಯ ಬಳಿಗೆ ವಂದು, ಬೆರಗಾದನಾ
ನಿರ್ಜನತೆ ನೀರವತೆ ನಿರ್ಭೀತಿಯನು ನೋಡಿ
ಪೂಜೆಯೊಳ್ ತೊಡಗಿರ್ದ ಚಿತ್ರಾಂಗಿಯಾ! ಒಡನೆ
ಹೊಮ್ಮಿ ಗೌರವಭಾವವಾತನೆರ್ದೆಯಲಿ ನರಂ ೨೦೨೦
ಹೊರದೂಡಿದನು ತನ್ನ ತೋರಿದಾಶಂಕೆಯಂ.
ಹಂಸಧ್ವಜಂ ಪೇಳ್ದ ಕಥೆಯನಾಕರ್ಣಿಸುತೆ
ಮುನ್ನ ಬಹುವತ್ಸರಗಳಾಚೆ ಕಾನನ ಮಧ್ಯೆ
ಯತಿವೇಷಿಯಾಗಿ ಬರೆ ತಾನು ಕಂಡೊಲ್ದಾಕೆ
ಮೇಲೆ ಕಣ್ಮರೆಯಾಗಿ ಪೋದಾಕೆಯಿರಬಹುದೆ
ರಾಣಿ ಚಿತ್ರಾಂಗಿಯೆಂದೆಂಬ ಸಂದೆಯದಿಂದೆ
ಬಂದು ಕಂಡರ್ಜುನಂಗಳಿದುದು ಮನದ ಶಂಕೆ.
ಚಿತ್ತದಲಿ ಚಿತ್ರಿಸುತ್ತಾ ಭುವನ ರಮಣೀಯ
ರಮಣಿಯಂ ಹೋಲಿಸಿದನಲ್ಲಿ ತನ್ನೆದುರಿರ್ದ
ರಾಜ್ಞೀ ತಪಸ್ವಿನಿಯ ರೂಪಿಂಗೆ! ಹೋಲಿಕೆಯೆ? ೨೦೩೦
ತೆಗೆ ತೆಗೆ ಅದೆಲ್ಲಿಯದು? ಅವಳೆಲ್ಲಿ ಇವಳೆಲ್ಲೆ?
ಸರ್ವ ಸೌಂದರ್ಯಸಾರವದು! ನಿಸ್ಸಾರವಿದು!
ತಾಯ್ತನದ ಗಾಂಭಿರ್ಯವನು ಹೋಲಿಸುವುದುಂಟೆ
ತರಳ ತರುಣತೆಯ ಮೋಹನ ಚಂಚಲತೆಯೊಡನೆ?
ಪುಷ್ಪ ಗರ್ಭಿತ ನವ ವಸಂತದ ಲಸಲ್ಲತೆಗೆ
ಪಣ್ ಬೀತುವೋದ ಮಾಗಿಯ ಮರದ ಸಾಮ್ಯಮೇಂ?
ಅಂತಿಂತುಮಿವಳಲ್ಲಮವಳೆಂದು ತರಿಸಂದು
ಮರಳಿದನ್ ಪಾಳೆಯಕೆ ಮರುಳಾಗುತಾ ನರಂ
ಸಂದೇಹಮಂ ತವಿಸಿ, ತನ್ನೆದೆಯ ಸಂತೈಸುತೆ.

ಅತ್ತ ಕಾಹಿನ ಭಟರ್ ತನಗೆ ತಂದಿತ್ತ ಆ ೨೦೪೦
ಜನ್ನಗುದುರೆಯ ಹಣೆಯ ಉರವಣೆಯ ಒಕ್ಕಣೆಯ
ಪಟ್ಟಲಿಖಿತದ ಕನಕದೋಲೆಯಂ ತಾನೋದಿ,
ಸಾಹಸಂ ಲಭಿಸಿತೆಂದುರ್ಕೆಹದಿನುರಿದೆದ್ದು,
ಕಾಳೆಗಂಗೊಡೆ ಮನಂಮಾಡಿ, ಮಂತ್ರಿಗೆ ಬೆಸಸಿ,
ಹಗೆಗೊಲೆಗೆ ತಾಯಿಯಾಶೀರ್ವಾದಮಂ ಪಡೆಯೆ
ಪುರವನದ ನಡುವಿರ್ದ ಪರ್ಣಶಾಲೆಗೆ ಜವದಿ
ರಯಗತಿಯಿನೈತಂದನಾ ಇಂದ್ರಜ ತನೂಜಂ.
ಬರೆ ಕುಮಾರಂ, ಜನನಿ ಸಂಭ್ರಮದಿನಿದಿರೆದ್ದು,
ಮಣಿದಾ ಮಣಿಪುರೇಶಮಣಿಯಂ ಮಣಿಯುತೆತ್ತಿ
ಬೆಸಗೊಳಲ್ ಮುದದಿಂದೆ ಬಂದ ಹದನೇನೆಂದು, ೨೦೫೦
ದವಳ ಧೌತಾಂಬರದ ವರ ಜಪಮಣಿಯ ಕರದ
ಧ್ಯಾನಸ್ತಿಮಿತ ಶಾಂತಿಮಂಡಿತ ಮುಖಾಂಬುಜದ
ತಾಯಂ ತಪಸ್ವಿನಿಯನಳ್ಕರುಳ್ಕುವ ತೆರದಿ
ವೀಕ್ಷಿಸುತೆ ಪಾರ್ಥಜಂ ರಾಜಕಾರ್ಯವನರುಹಿ
ಪರಕೆ ಬೇಡುತಿರೆ, ಹಮ್ಮೈಸಿ ಕುಳಿತಾ ಮಾತೆ
ಕಂಬನಿಯ ಕರೆದು ಮಾತಿಲಿಯಾಗಿ ರೋದಿಸಿರೆ,
ಬೆರಗು ಹೊಡದಂತಿರ್ದನಾ ಬಭ್ರುವಾಹನಂ:
“ಮಗನೆ, ಮನ್ನಿಸು ನಿನ್ನ ಮಾತೆಯ ಅಧೈರ್ಯಮಂ,
ನಾಣ್ಚುತಿಹಳೈ ನಿನ್ನ ಕಲಿತನಕ್ಕೆನ್ನೆರ್ದೆಯ
ಹೆದರಿಕೆಯ ಹೆಣ್ಣು. ಸಾಹಸಿ, ವೀರ, ಧುರಧೀರ ೨೦೬೦
ಕಲಿ ನಿನಗೆ ರುಚಿಸದಿರ್ದೊಡಮೆನ್ನ ಸಾತ್ವಿಕತೆ,
ದೀನ ವಾಣಿಯನಾಲಿಸೈ : ಧರ್ಮನಂದನಂ
ಪೂಜ್ಯನಾತನ ತುರಗಮೇಧಮುಂ ಧರ್ಮಕೃತಿ.
ಧರ್ಮಸಂಸ್ಥಾಪಕಂ ಶ್ರೀ ಕೃಷ್ಣನೀ ಕ್ರತುಗೆ
ಜೀವಾತುವಾಗಿಹಂ. ಧರ್ಮಾನುಜಾರ್ಜುನಂ
ಬಂದಿಹನು ಪುಣ್ಯಕೃತಿ ಹಯಮೇಧಕೋಸುಗಮೆ
ಕುದರೆ ಬೆಂಗಾವಲ್ಗೆ. ಪುಣ್ಯಮಂ ಪ್ರತಿಭಟಿಸಿ
ನಿಲ್ವುದು ಧರ್ಮಮಲ್ತು. ಧರ್ಮ ರಕ್ಷಕರೆಲ್ಲರುಂ
ನೆರಪಿ ನೆರವಾಗಬೇಕಾದುದಿದಕೇಕೆ ನೀಂ
ನಿಲ್ಲುವೈ ಎಡರಾಗಿ? — ಬೇರೊಂದು ತೆರದಿಂದೆ ೨೦೭೦
ನಿನಗೆ ಗುರು ಪೃಥೆಯಾತ್ಮಜಂ. ಬಾಲ್ಯ ಕಾಲದಲಿ
ಕಲಿಯಾದೆನಾನರ್ಜುನನ ನಾಮ ಜಪದಿಂದೆ
ಬಿಲ್ಬಿಜ್ಜೆಯಂ ಕಲಿತು! ನಾನಲ್ತೆ ಗುರು ನಿನಗೆ?
ಗುರುಗೆ ಗುರವಾದವಗೆ ಗೌರವಮೆ ಗುರಗಾಣ್ಕೆ!
ಗುರು ಪಿತೃಗೆ ಸಮನಲ್ತೆ? ವೈರಿಸಂಹೃತಿಯಿಂದೆ
ಪಿತೃವಧಾ ಪಾತಕಂ ಬಿಡದೆ ಬರ್ಪುದೆ ದಿಟಂ
ನೀನಿಂದಳವಿಗೊಟ್ಟು ಮಲೆಯಲ್ಕೆ: ಮುನಿಯದಿರ್,
ಕಂದ, ಕೇಳ್ದು ನನ್ನೀ ನನ್ನಿಯಂ!” ಪಾರ್ಥಜಂ
ಮಾತೆಯ ನುಡಿಗೆ ನಡುಗಿ ಭೀತಿಯಿಂದಡಿಗೆರಗಿ:
“ಕ್ಷತ್ರಿಯರ ಪಂಥದಿಂದಾತನ ತುರುಗಮಂ ೨೦೮೦
ಕಟ್ಟಿದೆನ್. ನಿಮ್ಮ ಚಿತ್ತಕೆ ಬಾರದಿರ್ದೊಡದು,
ನಿಮ್ಮಡಿಗೆ ಸಂಪ್ರೀತಿಯೇನದಂ ಬೆಸಸಿದೊಡೆ
ಕೈಕೊಂಬೆನದಕೇತಕಳುವುದೆಂ” ದಮ್ಮನಂ
ಸಂತವಿಡುತಿರೆ ನುಡಿದಳಾ ಮಾತೆ: “ವಹಿಲದಿಂ
ನಡೆ, ನಿನ್ನಖಿಳ ರಾಜ್ಯಸಂಪತ್ತುಮಂ ಗುರಗೆ,
ಧರ್ಮಜಾನುಜಗೆ, ಮಧುಸೂದನ ಪ್ರಿಯಸಖಗೆ
ಮದ್ಗುರುವಿನಡಿದಾವರೆಗಳಿಗೆ ನಿವೇದಿಸೈ.
ಸನ್ಮಾನದಿಂದಾತನಂ ಪುರಕೆ ಕರೆದು ತಾ;
ಸಂತುಷ್ಟಳಾದಪೆಂ ನಾಂ ಭಟವರೇಣ್ಯನಾ
ನರವೀರವರನ ಸಂದರ್ಶನ ಸುಕೃತದಿಂದೆ.” ೨೦೯೦
ಎನುತ್ತೆ ಸೂನುಗೆ ಬುದ್ಧಿವೇಳ್ದು ಕಳುಹುತೆ, ಮತ್ತೆ
ಸಂಕಲ್ಪ ಸಂಪ್ರಾಪ್ತಿಗಾಗಿ ಪರಮೇಶನಂ
ಪೂಜಿಸುತೆ, ಪಾರ್ಥನ ಬರವಿಗುಬ್ಬಿದಳ್ ಚಿತ್ರೆ!

ಮರುದಿನಂ ಮೂಡಣೆಡೆ ಬೆಳ್ಳಿದಾರಗೆ ಬಾಡೆ,
ಬೆಟ್ಟಗೋಡಂ ಮೆಟ್ಟಿ ಕನಕ ದಿನಮಣಿ ಮೂಡೆ,
ಹಕ್ಕಿಯಿಂಚರ ಹಾಡೆ, ದೇಗುಲದ ವಾದ್ಯತತಿ
ಮಂಗಳ ರವಂ ಗೆಯ್ಯೆ, ಸುಪ್ರಭಾತಂ ನೆಯ್ಯೆ
ಸ್ವರ್ಗೀಯ ರಮ್ಯತೆಯನಾ ಬಭ್ರುವಾಹನಂ
ಜನನಿಯ ನಿರೂಪದಂತಾಜಿ ನಿಂದತ್ತೆಂದು
ಪುರದೊಳಗೆ ಡಂಗುರಂಬೊಯ್ಸಿದಂ; ತೆಗೆಸಿದಂ ೨೧೦೦
ಕೋಶದ ಸುವಸ್ತುಗಳನೆಲ್ಲಮಂ ನರನಡಿಗೆ
ನೈವೇದ್ಯಮಂ ನೀಡೆ, ಗುಡಿ ತೋರಣಂಗಳಂ
ಕಟ್ಟಿಸುತೆ ನಗರವನಲಂಕರಿಸಿ, ಸೇನೆಯಂ
ಶಾಂತಿಕೇತನದಿಂದೆ ಸಿಂಗರಿಸಿ, ಮನ್ನೆಯರ
ನಾಗರಿಕ ಜನರೆಲ್ಲರಂ ಕರೆಸಿ, ನೆರಪುತ್ತೆ
ಶೃಂಗಾರ ಸಾಗರ ತರಂಗಾಂಗಿಯರೆನಲ್ಕೆ
ಕನ್ನಡಿ ಕಳಶವಿಡಿದ ಕನ್ನೆಯರ ಗಡಣಮಂ,
ಸಾತ್ವಿಕ ಸುಮಂಗಳದ ಸಂಗೀತ ಶೈಲಿಯಿಂ
ಪೊರಮಟ್ಟನೊಂದು ಮೆರವಣಿಗೆ ವೈಖರಿಯಿಂದೆ
ಪಾರ್ಥನ ಶಿಬಿರಕಾಗಿ.

ಇತ್ತ ಪಾರ್ಥನ ಸೇನೆ ೨೧೧೦
ಪ್ರದ್ಯಮ್ನನನುಸಾಲ್ವನಿನಸುತನ ಸೂನು ಮೇಣ್
ಯೌವನಾಶ್ವಂ ಹಂಸಕೇತು ನೀಲಧ್ವಜಂ
ಮೊದಲಾದ ರಣಕಲಾ ಕೋವಿದರ ಸನ್ನೆಯಲಿ
ವೈರಿದಳದಾಗಮನವನೆ ನಿರೀಕ್ಷಿಸುತುಮಿರೆ
ವಿವಿಧ ವ್ಯೂಹಂಗಳಂ ರಚಿಸಿ, ಗೋಚರಮಾಯ್ತು
ಸಮರವೀವ ಸುಭಟರ ಮೋಹರಕೆ ಬದಲಾಗಿ
ಬೀಗರನ್ನೆದುರುಗೊಳಲೆಂಬಂತೆ ತನ್ನೆಡೆಗೆ
ಮೋಹನಾಂಗಿಯರೊಡನೆ ಮೋಹದಿಂ ಬರುತಿರ್ದ
ಮದುವೆ ದಿಬ್ಬಣದೊಸಗೆ ಮೆರವಣಿಗೆ! ಗೊಳ್ಳೆಂದು
ನಗೆಯ ತೆರೆ ನೊರೆಯುಕ್ಕೆ ಮಸಗಿತುತ್ಸಾಹದಿಂ ೨೧೨೦
ಪಾಂಡವ ದಳದ ಜಳಧಿ, ಸಿಡಿಲು ಕೋಲಾಡಿದುದು
ಸಂಖ್ಯೆಯಿಲ್ಲದ ಕೈಗಳಂಕೆಯಿಲ್ಲದ ಜನರ
ಚಪ್ಪಾಳೆ; ‘ನಿನಗೊಸಗೆ!’ ‘ತನಗೊಸಗೆ’ ‘ಪಣ್ ಚೆಲ್ವು!’
‘ಸವಿಗೆಲ್ವು!’ ಎಂದು ಜವ್ವನಿಗ ಸೈನಿಕರೆಲ್ಲ
ತಮತಮಗೆ ನುಡಿದರ್ ಕುಚೋದ್ಯ ಚೋದ್ಯಂಗಳಂ!
‘ಹೊಳಲನಾಳುವರೇನು ಗಂಡಸರೊ?’ ‘ಗಂಡಸರ
ಕಂಡೊಡನೆ ಗಂಡರೆಮಗೆಂದೆಂಬ ಹೆಂಗಸರೊ?’
‘ಅಂದಾ ಪ್ರಮೀಳೆಯಾದೊಡಮೆಮಗೆ ಮಾರಾಂತು
ಗಂಡಂ ಮೆರೆದಳಲ್ತೆ?’ ‘ಬಭ್ರುವಾಹನ ಎಂಬ
ಹೆಸರು ಸ್ತ್ರೀಲಿಂಗವೋ ಪುಲ್ಲಿಂಗವೋ ತಿಳಿಯೆ?’ ೨೧೩೦
ಇಂತಿಂತು ಬೀರಾಳ್ಗಳಿಲ್ಲಲ್ಲಿ ನಗೆ ನುಡಿಯುತಿರೆ
ಬೆಕ್ಕಸಂಗೊಂಡಿಂದ್ರಜಂ ಪಕ್ಕದಲ್ಲಿರ್ದನಂ
ಪ್ರದ್ಯುಮ್ನನಂ ಕುರಿತು: “ದನುಜಾರಿ ನಂದನನೆ,
ಕರವಾಳ್ಗಳಂ ಪಿಡಿದು ರೋಷದಿಂ ಮೇಲ್ವಾಯ್ವ
ಕೂರಾಳ್ಗಳಂ ನೆರಪಿ ಬರ್ಪ ಬದಲೀ ನೃಪಂ
ನಾರಿಯರ ಗಡಣದೊಡನೈತರ್ಪನೇಕಿಂತು?
ಹೆತ್ತ ತಾಯಿಯೆ ಬಿಜ್ಜಯೋಜಳಾದೀತಂಗೆ
ಬದುಕಿನಲಿ ರಾಣಿಯರೊ, ಕದನ ಸಮುಖದಲ್ಲಿ
ಬದುಕಿಪ ಗುರಾಣಿಯರೊ ಸ್ತ್ರೀದಳಂ? ಸೋಜಿಗಂ!”
ಎಂದಣಕವಾಡುತಿರೆಯಿರೆ ಬಳಿಗೆ ಬಂದುದಾ ೨೧೪೦
ಬಭ್ರುವಾಹನ ನಾಗರಿಕ ಸೇನೆ. ತೇರಿಂದೆ
ಭೂಮಿಗವತರಿಸಿ, ಗುರವೆಂಬ ಗೌರವದಿಂದೆ
ಪಾರ್ಥನ ಬಳಿಗೆ ನಡೆದು ಚಿತ್ರಾಂಗದೆಯ ಮಗಂ
ಮಣಿಯೆ ಸಾಷ್ಟಾಂಗದಿಂ, ವೀರಪಾನೋನ್ಮತ್ತ
ಮತಿಯಾ ಕಿರೀಟಿ ಮೋರೆಯ ತಿರುಹಿ ಕಿರುನಗೆಯ
ಮದದಿಂದಹಂಕೃತಿಯ ಬಿಂಗದಿಂದಿತರರಂ,
ಕಾಳೆಗಕೆ ಬೆದರಿ ತನ್ನಡಿ ಶರಣ್ಬೊಕ್ಕರಂ,
ತಾಂ ಪಿಂದೆ ಕಂಡಂತೆ ಕಂಡುದಾಸೀನದಿಂ
ವೆರ್ತಿಸೆ, ಕಿರೀಟಿಯ ಸುತಂ ಕನಲ್ದನೊಳಗೊಳಗೆ
ಮುನಿಸು ಹೊಗೆ ಹೊತ್ತಿ. ಬಯ್ದನು ಮನದೊಳಬ್ಬೆಯಂ ೨೧೫೦
ತನ್ನನೀ ದುರವಸ್ಥೆಗಪಮಾನ ಕೂಪಕ್ಕೆ
ನೂಂಕಿ ನಗೆಗೀಡುಮಾಡಿದಳೆಂದು! ಕುಲಮೆಯೊಳ್
ಕಾಯ್ದ ಕಬ್ಬುನದಂತೆ ಕೆಂಪಾದ ಮೊಗದಿಂದೆ
ಕೇಸುರಿಯ ಕಾರುವಕ್ಷಿಗಳಿಂದೆ ದುರುದುರುನೆ
ವೈರಿಯಾ ಮೋರೆಯನಿರಿದು ನೋಡಿ: “ಎಲವೆಲವೊ
ನಯರುಚಿ ವಿಹೀನ, ಸಂಸ್ಕೃತಿ ಬಾಹಿರ, ಕಿರಾತ,
ಜಯಮದಂಧನೆ, ಪಾರ್ಥ, ಗೌರವವರಿಯೆಯೆಲಾ!
ಧರ್ಮಜನ ಧರ್ಮಕಾರ್ಯದೊಳಿರ್ಪೆ ನೀನೆಂದು
ಮೇಣ್ ಗುರವೆಂದೊರೆದ ಜನನಿಯಾಣತಿಯಂತೆ
ಬಂದು ನಾನೆರಗಿದೊಡೆ ಮೋರೆ ತಿರುಗಿದೆಯಲಾ ೨೧೬೦
ನೆಣಗೊಬ್ಬಿನಿಂ ಸೊರ್ಕಿ! ಸಮರೋತ್ಸವಕೆ ಸುಗಿದು
ನಿನ್ನ ಬಲ್ಮೆಯ ಜಸದ ಹುಸಿವೆಳಗಿಗುರೆ ಸೋಲ್ತು
ಸೋಲ್ಮೆಯಪಕೀರ್ತಿಯಿಂ ನುಸುಳಿಕೊಳಲೆಂದಳಸಿ
ಬಂದೆನೆಂದರಿಯದಿರೊ! ಜನನಿಯುಪದೇಶದಾ
ವಿನಯಕೆ ವಿಧೇಯನಾಗವಿವೇಕಿಯಾದನಾಂ!
ನಿನ್ನ ಕೀರ್ತಿಗೆ ಚಿತೆಯೊಡ್ಡೈಸಲೆಂದಿರ್ದೆ;
ಮೇಣೆನ್ನ ಭುಜಪರಾಕ್ರಮ ತೀರ್ಥದಲಿ ನಿನ್ನ
ಭಸ್ಮಾವಶೇಷಮಂ ತೊಳೆಯಲೆಂದಿರ್ದೆನ್ನನಾ
ಬೋಳೈಸಿದಳ್ ತಾಯಿ! ನಿನ್ನ ಸೂಡಿಗೆ ನೀನೆ
ಕೆರಳಿಸೆನ್ನಂ ಕಿಚ್ಚನುರಿಯಿಟ್ಟೆಯೆಂದು ತಿಳಿ! ೨೧೭೦
ನಿನ್ನ ವಿಕ್ರಮ ಸಿಂಹದಾ ಕೇಸರವನೆಲ್ಲ
ಕತ್ತರಿಸದಿರೆ, ಪೆರ್ಚುಗೆಯ ದಂಷ್ಟ್ರನಖಗಳಂ
ಕಸಿಮಾಡದಿರೆ, ನಿನ್ನನೀ ನಿನ್ನ ಪಡೆವೆರಸಿ
ಬಿರುಗಾಳಿ ತರಗೆಲೆಯನೊದೆದಟ್ಟುವಂತೆಂಬ್ಬಿ
ನಾಡಿನಾಚೆಯ ನರಿಯ ಮಾಡದಿರೆ, ಹೆತ್ತಬ್ಬೆ
ಮೇನಯ್ಯನಾಣೆ! ಬಾಳಿದು ಸುಡಲಿ!” ಎಂದುರಿದು
ನುಡಿಯುರಿಯ ದಳ್ಳಿಸುವ ಬಭ್ರುವಾಹನಗಾ ನರಂ
ಹುಬ್ಬುಗಂಟಿಕ್ಕಿ ನೋಡುತ್ತುಗ್ರ ವ್ಯಗ್ರದಿಂ:
“ಬಾಯ್ಗುದುರೆವಾಯ್ಗೆ ಕಡಿವಾಣವನ್ನಿಕ್ಕೆಲವೊ
ಹೆಂಬೇಡಿ! ಬಳ್ಳಿಕ್ಕುತಿದೆ ಪೊಳ್ಳು ಜಂಬುಕಂ ೨೧೮೦
ಸಿಂಗದಿದಿರಿನಲಿ! ನಿನ್ನನ್ನರಂ ಬಾಯ್ನುಡಿಯ
ಬೀರರನ್ನೆನಿತೊ ಕಂಡಿಹೆನೊ ನಾಂ. ಭೀರುವಿಗೆ
ವೀರರ್ಗುಚಿತಮಾದ ಗೌರವ ದೊರೆಯದೆಮ್ಮ
ಸಾನ್ನಿಧ್ಯದೊಳ್. ಸೆಣಸಿ ಶೂರ ಸಂಗ್ರಾಮದಲಿ
ಬಿಳ್ದೊಡಂ ಬಳ್ದೊಡಂ ಸನ್ಮಾನ್ಯನಾ ಕಲಿಯೆ;
ಮೇಣುಳಿದ ಪಂದೆಗಳಿಗಾ ಪೂಜೆ ಸಲ್ಲದೈ.
ಕಾದಲಾರ್ಪೊಡೆ ಕಾದಿ ಗೆಲಿ. ಹೋರಿ ಸೋತೊಡಂ
ಸಯ್ತೆಡಂ ವಿಖ್ಯಾತನಹೆ. ಕಳಕ್ಕಾರದಿರೆ
ಕಪ್ಪಕಾಣಿಕೆಯೊಡನೆ ಕಾಲ್ಗೆರಗಿ, ಕಟ್ಟಿದಾ
ಕ್ರತು ತೇಜಿಯನ್ನೊಡನೆ ತಂದಿತ್ತು, ಕೊಟ್ಟುದಕೆ ೨೧೯೦
ಗಳಪದೆ ಹಸಾದವೆಂದಿರು. ನಪುಂಸಕರುಂಟು
ಕೆಲರವರ್ ಸತ್ತ್ವಟದ ಪೆಸರ್ ನುಡಿದು ಸಮತೆಯಂ
ನಟಿಸಿ ಸಾಧಿಸಲೆಳಸುವರ್ ಪೌರುಷತೆಯೊಡನೆ.
ಮುಂ ಕುರುರೆಯಂ ಕಟ್ಟಿ ಹುಡುಗಾಟವೆಂದರಿತೆ
ನೀನೀಗಳೇಂ? ಸಂಸ್ಕೃತಿಗೆ ವಂದಿಯಾದೊಡೇಂ
ನೀನದಕ್ಕೊಡೆಯನಲ್ತೆಂಬುದಂ ತೋರುತಿದೆ
ನಿನ್ನ ನಾಲಗೆಯ ನಡೆ! ತಂದೆಯಿಲ್ಲದೆ ಹುಟ್ಟಿ
ಪಂದೆಯಾದೆಲವೊ ನಿನ್ನಯ್ಯನೇಂ ಬಳೆತೊಟ್ಟ
ನಟ್ಟುವನೊ? ದಿಟ್ಟನಿಂದೆಂದಾದೊಡಂ ಪಂದೆ
ಪುಟ್ಟುವುದೆ?”

ಬಿರುನುಡಿಗಳಂ ತನ್ನ ಮೊಗಕಿರಿದು ೨೨೦೦
ಜರೆದೇಡಿಪರ್ಜುನನ ಮುಖಕೆ ದಿಟ್ಟಿಯಿನೊದ್ದು
ಪಿಂತಿರುಗಿದಂ ಬಭ್ರುವಾನಂ ಮಖಹಯಂ
ಪುರಜನಸ್ತ್ರೀಯರಂ ಚತುರಂಗ ಸೇನೆಯಂ
ಬೆರಸಿ, ಭೀಷಣ ಯದ್ಧ ಸನ್ನದ್ದನಾಗಲ್ಕೆ!
ಫಲ್ಗುಣನ ತಾರುಣ್ಯದಪರಾವತಾರಮೆನೆ
ವೀರವಲ್ಗುತೆವೆತ್ತೆಸೆದ ಬಭ್ರುವಾಹನನ
ಕಂಡು, ಪೋಲ್ವೆಗೆ ಬೆರುಗುಗೊಂಡರಾ ಸೇನೆಯಲಿ
ಪಳಬರಾದವರೆಲ್ಲರುಂ. ಮತ್ತೆ ಕೆಲಬರ್ಗೆ
ಮೂಡಿದುದು ಗೌರವದೊಡನೆ ಭೀತಿ. ಇಂದ್ರಜನ
ಕೆಚ್ಚೆದೆಯೊಳುಂ ತೋರ್ದುದು ಅಧೀರತೆಯ ಛಾಯೆ! ೨೨೧೦
ವೀರಪುಂಗವರರ್ಥಮಯ ಮೌನ ನೇತ್ರದಿಂ
ನೋಡಿದರ್ ತಾವೊಬ್ಬರೊಬ್ಬರಂ. ವರ್ಷರ್ತು
ಗಗನದಲಿ ಕಾಳಮೇಘಗಳೊತ್ತಿ ಮುತ್ತಿಬರೆ
ಜಡಿಯ ಸೋನೆಯನಿರದೆ ಸೂಸಿ, ದುರ್ದಿನಂ
ಕರ್ಕಶವಾಯ್ತು ವಿಧಿಯ ಬದ್ಧ ಭ್ರುಕುಟಿಯಂತೆ.
ಚಿರಿದತ್ತೊಂದು ರಣಶಕುನಿ, ಕಿವಿಗೊಟ್ಟು ಕೇಳ್,
ದುಃಶಕುನ ಗರ್ಭಿತ ವಿಕೃತ ವಿಕಟ ರವದಿಂದೆ