ಇರುಳು ಕಳೆದುದು. ಉದಯ ಚೂಡದಲಿ ಮೂಡಿದಳು
ಉಷೆ. ನೋಡೆ, ಮೂಡಣದ್ರಿಯ ಕೋಡುಗಲ್ಲಿನೆಡೆ
ರುಚಿರ ರವಿ ರೋಚಿಮಂಡಲವಿಣಿಕಿ ಬರೆ, ಭೂಮಿ
ಹೊಸ ಮಳೆಯ ಮಿಂದೆಸೆವ ಮಲೆಯ ಮಾಲೆಯ ನೆವದಿ
ಗಹಗಹಿಸಿ ಬೀರಿತು ಪಸುರ್ನಗೆಯ ವೀಚಿಯಂ,
ಹಿಮಮಣಿ ಮರೀಚಿಗಳ ದನ್ತಪಂಕ್ತಿಯ ಕಾನ್ತಿ ೧೩೬೦
ದೆಸೆದೆಸೆಗೆಸಯೆ.

ಪಕ್ಷಿಗಾನದಿಂದೆಳ್ಚರುತೆ,
ನಿದ್ರಿತ ಮನೋರಮೆಯ ತೋಳ್ತಳ್ಕೆಸೆರೆಯಿಂದೆ
ಬಿಡಿಸಿಕೊಂಡೊಯ್ಯನೆಯ ಮೊಗವನವಲೋಕಿಸುತೆ,
ಬೆರಗಾದನರ್ಜುನಂ ಕಂಡು ಚಿತ್ರಾಂಗದೆಯ
ಸರಳ ಸಾಮಾನ್ಯ ಸೌಂದರ್ಯಮಂ! ಅಂಗಜನ
ಸಂಗವಿಲ್ಲದ ಕಂಗಳಿಗೆ ರುಚಿಸದೆಂಬಂತೆ
ಹೆಂಗಳಲಿ ಶೃಂಗಾರವಿಂದ್ರಾಜಾತಂಗಾಕೆ
ತೋರಿದಳ್, ಪೂವಾಗಿ ಪೋಗಿ ಮಿಡಿಗಾಯ್ಗಳಂ
ಪಡೆದೊಡಲ ವಾಸಂತದಂತ್ಯದ ರಸಾಲದೋಲ್; ಮೇಣ್
ಕೆಂದಳಿರ ಕೋಮಲ ಶ್ರೀ ಸುಂದರತೆ ಮಾಣ್ದು ೧೩೭೦
ಪಸುರೆಲೆಗಳಂ ಪೊದೆದ ತರುಸುಂದರಿಯವೋಲ್.

ನಲ್ಲೆ ನಯನೋತ್ಫುಲ್ಲೆಯಪ್ಪಾ ಮುನ್ನಮಲ್ಲಿಂ
ತೆರಳ್ದಪುದೆ ಲೇಸೆಂದು ಭಾವಿಸಿ, ವಿಷಣ್ಣದಿಂ
ತನ್ನುಂಗುರವನೊಯ್ಯನಾ ಕಯ್ಯ ಬೆರಳಿಂಗೆ
ತುಡಿಸಿ, ಕರುಣಾರ್ದ್ರಹೃದಯದಿ ಸುಯ್ದು ನಿಡುನೋಡಿ,
ಪೋದಿರುಳ್ ಪೂಜಿಸಿದ ಪುಷ್ಪೋಪಹಾರದಿಂ
ಮೆರೆವ ಮಂಗಲ ಚಂದ್ರಮೌಳಿಗೆ ಮಣಿದು ಬಾಗಿ,
ತಿಂಗಳಾರಕೆ ಮರಳಿ ಬಂದು ಕಾಣುವೆನೆಂಬ
ಭರವಸೆಯ ನೆಮ್ಮಿ, ಧೈರ್ಯವನೊತ್ತಿ ಚಿತ್ರಕ್ಕೆ,
ಹೊರಹೊಂಟನಾ ಸವ್ಯಸಾಚಿ, ದಮಯಂತಿಯಂ ೧೩೮೦
ನಳನೃಪಂ ನಡುಗಾಡಿನಲಿ ಬಿಟ್ಟುಹೋದಂತೆ,
ನಡೆಯುತಿರಲಡಿಗಡಿಗೆ ಹಿಂದಕೆಳೆದುದು ಮನಂ;
ದೃಷ್ಟಮಲ್ಲದ ಸೂಕ್ಷ್ಮಮೋಹಸೂತ್ರದಿ ಪದಂ
ಬಿಗಿದಂತೆವೋಲಾಗೆ, ಮುಗ್ಗುರಿಸಿ ನಿಲ್ಲುತುಂ
ಪಿಂದೆಸೆಗೆ ನೋಡುತುಂ, ಕಾದಂಬರಿಯನುಳಿದು
ದೇವ ಚಂದ್ರಾಪೀಡನೆಯ್ದಿದವೊಲಾ ನರಂ
ಮುಂಬರಿದನೆಂತಾನುಮೆದೆಯ ಚಾಂಚಲ್ಯಮಂ
ನಿಗ್ರಹಿಸಿ ವ್ಯಗ್ರಮನದಿಂದೆ. ಖಗದಿಂಚರಂ
ಮುಳುಗುವಂದದಲಿ ನಗದಂಚಿನೊಳ್ ದಟ್ಟಯಿಸಿ
ಬೆಳೆದಿರ್ದ ಬಿದಿರುಮೆಳೆ ಪವನ ಸಂಘರ್ಷಣೆಗೆ ೧೩೯೦
ಘೀಂಕರಿಸಲಿಭದಂತೆವೋಲ್ ವಿಕಟರವಗೈದು,
ಕಂಪಿಸಿತು ಕಾಂತಾರಮಾ ಕೀಚಕಧ್ವನಿಗೆ!

ನಡೆದನತ್ತ ಕಿರೀಟಿ. ಇತ್ತ ದೇಗುಲದಲ್ಲಿ
ಚಿತ್ರಾಂಗದೆಯ ಸುಪ್ತ ಸುಖಮತ್ತಚಿತ್ತದಲಿ
ಸವಿಗನಸುಗೊಳದ ತಾವರೆಯ ಹೊನ್ನಿನ ಗುಳ್ಳೆ
ಬಿರಿದುದು. ತೆರಯುತೆವೆಯನೊಯ್ಯನೆ ಬಿಸಜನೇತ್ರೆ
ದೃಷ್ಟಿಸುತೆ ಸುತ್ತಲುಂ, ತನ್ನೆಡೆಯ ಸಜ್ಜೆಯಲಿ
ಕಾದಲಂ ಕಾಣದಿರಲುದ್ವಿಗ್ನ ಖೇದದಿಂ
ಕಳವಳಿಸುತೆದ್ದು ಕರೆದಳ್, ಮಧುನಿಕುಂಜದಲಿ
ಪಕ್ಷಿವಧು ಹೃದಯಮಿಲನಕೆ ತನ್ನ ನಲ್ಲನಂ ೧೪೦೦
ನೇಹದಿ ಕುಕಿಲ್‌ವಂತೆ. ನೀರವ ಭವಾಲಯಂ
ದನಿಯ ಮರುಬಿಂಬಿಸಲ್, ಮರುದನಿಯನಲ್ಲದೆಯೆ
ಮಾರ್ನುಡಿಯನಾಲಿಸದೆ, ವಿಹ್ವಲಿಸಿ, ಲಲಿತಾಂಗಿ
ತೊಳಲಿದಳ್, ದೇಗುಲದೊಳೆಲ್ಲೆಡೆಯೊಳಂ, ಕರೆಯುತೆ
ಹುಡುಕಿ ಹುಡುಕಿ. ತರ್ವಾಯವಾಯತನದಿಂ ಪೊರಗೆ
ಪರೊಮಟ್ಟು, ಕಣ್ಬೊಲದ ಬನದೊಳೆತ್ತಲುಮೆಸೆದು
ದೃಷ್ಟಿಯ ಮಯೂಖಗಳನರಸಿದಳ್ ನಿಡುನೋಡಿ,
ಪೆಳರ್ವೆರಸಿ ಕರೆಕರೆಯತೋಡಾಡಿ, ಹುಲಿ ಹಿಡಿದ
ದನದ ಕರು ಕಂಗೆಟ್ಟು ಹೊಲಬುಗೆಟ್ಟಡವಿಯಲಿ
ಅಂಬೆಯಂಬೆಂದು ತನ್ನಂಬೆಯಂ ಹಂಬಲಿಸಿ ೧೪೧೦
ನೆರೆ ಹಲುಬುತೊರಲಿ ಕರೆವಂತೆ. ಕೊಳದೆಡೆಗೆಯ್ದಿ
ತವಕದಿಂದವಲೋಕನಂಗೆಯ್ದು, ಒಡನೊಡನೆ
ಮರಳಿದನ್ ಮಾಕಂದ ಕಂದರ್ಪ ತರುತಲದ
ಪೊದರ್ವನೆಗೆ; ನಿಲ್ಲದಲ್ಲಿಂದೆ ಪರಿದಳ್ ಮುಂದೆ
ಬನದೊಳುಂ ಕಳ್ದು ಬಾಯ್ಗೂಡಿದುಯ್ಯಲೆಯೆಡೆಗೆ;
ಧಾವಿಸಿದಳಲ್ಲಿಂದೆ ಚಕ್ಷುಶ್ಯ್ರವ್ಯಾಕ್ಷಿಯಿಂ
ತಾಮಿರ್ವರಂದೊಂದು ಪಕ್ಷಿಯಂ ರಕ್ಷಿಸಿದ
ಮೊರಡಿಯೆತ್ತರದ ತಾಣಕ್ಕೆ; ಮೇಣತ್ತಣಿಂ
ತಳರ್ದಳೆತ್ತೆತ್ತಲುಂ ಗೊತ್ತುಗುರಿಯಿಲ್ಲದೆಯೆ
ಚಿತ್ತದುನ್ಮತ್ತತೆಯೊಳೆಂತಂತೆ ಪುತ್ತುಮಂ ೧೪೨೦
ಪೊದರುಮಂ ಗೆತ್ತು ತ್ರಿದಿವನಾಥಜಾತಂಗೆ,
ಸುಟ್ಟುರೆಯೊಳಲೆವ ತರಗೆಲೆಯಂತೆ, ಘೂರ್ಣಿಸುವ
ನೀರ್ದಿಗುರಿಗೊಳಗಾದು ಬಣಗು ತೃಣಕಣದಂತೆ.
ಪೊಳೆಯುತಿರ್ದುದು ಬಿಸಿಲ್; ಕಂಡಳಿಲ್ಲದನಾಕೆ.
ಪಾಡುತಿರ್ದುದು ಪಕ್ಕಿಯದನು ಕೇಳಿದಳಿಲ್ಲ.
ತಿರುಗಿದಳ್ ತಿರುತಿರುಗಿ, ತೊಳಲಿದಳ್ ತೊಳತೊಳಲಿ.
ಬಗೆಯದೆ ಬಳಲ್ಕೆಯಂ, ಬೆಮೆಗೊಂಡ ಪಾಂಗಿನಿಂ,
ಪಾಸುಪೊಕ್ಕಾಗಿ ಬನಬೆಟ್ಟಗಳಲೆಲ್ಲಲ್ಲಿಯಂ,
ಮಿಗಗಳುಂ ಬೆಕ್ಕಸದಿನಲ್ಲಲ್ಲಿ ನಡೆಗೆಟ್ಟವೋಲ್
ನಿಂತು ಕೌತುಕದಿನೀಕ್ಷಿಸುವ ತೆರದಿ!

ಕೃತ್ತಿಕೆಯ ೧೪೩೦
ತಿಂಗಳಲಿ, ವಿಪಿನಪರಿವೃತ ವಿಫುಲವಿಸ್ತರದ
ಗದ್ದೆಕೋಗಿನಲಿ, ಹಳದಿಯ ಪೈರು ಬೆಳೆಬೆಳೆದು
ಹಬ್ಬಿಯಿರೆ ಶಾಲಿವನ ವನಧಿಯ ಸುವಿಸ್ತೀರ್ಣ
ಲಂಬಾಯಮಾನ ಸೈಕತವೇಲೆಯನು ಹೋಲಿ,
ಲೋಲಶೀಲ ಸಮೀರನೊಯ್ಯನೊಯ್ಯನೆ ತೀಡೆ
ನೆಲವೆ ಸಪ್ರಾಣತೆಯಿನುಸಿರೆಲೆದು ಬಿಡುವಂತೆ
ತೆರೆಯೆದ್ದು ತೆರಬಿದ್ದು ಬತ್ತ ಬಿತ್ತರ ಗದ್ದೆ
ತೆನೆವುಲ್ಗೆ ತೆನೆಯಜ್ಚುವುದು ಸುಯ್ದನಿಯ ಸೂಸಿ.
ಹೊಂಬಣ್ಣವೆರಚುವುದು ಮುಂಬಿಸಿಲ್. ತುಂಬುವುದು
ಕಾಡುಗಳನೆಲ್ಲ ಪೊನ್ದೆನೆಯ ಕಮ್ಮಿತು ಗಾಳಿ ೧೪೪೦
ಮಿಗವಕ್ಕಿಗಲ ಹಿಂಡನೌತಣಕ್ಕಾಹ್ವಾನಿಸಿ!
ಬಂದೆರಗಿದಪ್ಪವಾ ವ್ರೀಹಿವಿಸ್ತಾರಕ್ಕೆ
ಬನಮೆಚ್ಚು ಕೆಮ್ಮೊನೆಯ ಪಸುರ್ಗರಿಯ ಕಣೆಗಳೆನೆ
ಗಿಳಿವಿಂಡು ದಂಡು; ಕಬ್ಬಿನ ಗರಿಗೆ ಹಕ್ಕಿಗಳ
ಕರಿಮುಗಿಲ್; ಗುಬ್ಬಳಿಸಿ ಪಟಪಟನೆ ಹಾರಿಬಹ
ಹೊರಸುಗಳ ಸಮುದಯಂ; ಪುರಲೆಗಳ ಪೆರ್ಮಂದೆ;
ಬರ್ಹಿಗಳ ರಮಣೀಯ ಸಮುದಾಯಮಿತ್ಯಾದಿ
ನಾನಾ ಶಕುಂತವ್ರಜಂ. ಪೋಲಗಾಹಿಯಬ್ಬರಿಸಿ
ದಿಕ್ಕುದಿಕ್ಕಂಬೊಕ್ಕು ತಾನೆಳ್ಬುತಿರಲಿರದೆ
ಬೆಮರಿಳಿದು ಬಿಸುಸುಯ್ದು ಮುಡಿಬಿರ್ಚಿ ಮುನಿಸುರ್ಕಿ, ೧೪೫೦
ಪಾಮರಿಯ ಬಿರುದನಿಗೆ ಕೈಪರೆಗೆ ಬಾಯ್ಪರೆಗೆ
ಕಲ್ಗವಣೆಗೊಂದಿನಿತು ಪೆಳರಿ ಗಾರಾಗುತುಂ,
ಭುರ್ರೆಂದು ಪೆರತೊಂದೆಡೆಗೆ ಪಾರಿ ಮಂಡಿಸುತೆ
ತೊಡಗಿದಪವನ್ನೊರ್ಮೆ ನೆಲ್ಮೇವಿಗೆ. ಕಂಡದಂ
ಪೀಡಿತ ಗ್ರಾಮ ಶ್ಯಾಮಾಂಗಿ ಕೋಪಕ್ಕಳುತೆ
ಬೈಯುತ್ತೆ ಶಪಿಸುತ್ತೆ ತೊಳಲುವಳ್ ಗದ್ದೆಯಂ
ಮರುಳಮರ್ದಳಂತೆ. ಇಂತವಳಿತರ ಖಗತತಿಯ
ಕಾಡಿಸುತ್ತೋಡಿಸುತ್ತಿರೆಯಿರೆ, ಮನೋಹರಂ
ಮೋಹನ ಮಯೂರ ಮಿಥುನಂ ಬೆಳಗು ಪೊಳ್ತಿನೊಳೆ
ನವಿಲುಕಲ್ಲಿನ ಕಾಡಿನೆತ್ತರದ ಕೋಡಿನಿಂ ೧೪೬೦
ಬೆಳದ ಗದ್ದೆಯ ಹಳದಿಗಿಳಿತಂದು ಮೆಲ್ಲನೆಯೆ
ಮೂಲೆಗದ್ದೆಯಲಿ ಮೆಲ್ಲುತೆ ನೆಲ್ಲಲೊಚ್ಚತಂ
ಪರಿದಪವೊಲ್ಮೆವೊಯ್ಯಾರದಿಂ ಗಿರಿನೆತ್ತಿಗೆ.
ಒಡಲಿಚನಲಂಪಿಂದೊನಪಿನೊಲಾರ್ತಿಯಂ
ಹೃದಯಮಿಲನಕೆ ಮೋಹಿಸುವ ಮಧುರ ಮನದಿಂದೆ
ತಾನಾ ಪುರಷಕೇಕಿ ಬರ್ಹಿಣಿಯ ಸಮ್ಮುಖದಿ
ಬಿರ್ಚುತೆ ಕಲಾಪ ಮೇಚಕ ಸಹಸ್ರಂಗಳಂ
ರಚಿಸಲನುಗೆಯ್ದಪುದು ಪ್ರಣಯಮಯ ನರ್ತನದಿ
ದೇವಾಪ್ಸರಾ ಲಾಸ್ಯಮಯ ನಂದನೋದ್ಯಾನಮಂ.
ಆನಂದಸ್ಪಂದನದ ಬರ್ಹಿಪಿಂಛಧ್ವನಿಗೆ, ೧೪೭೦
ಬಣ್ಣಬಣ್ಣದ ಕಣ್ಣುಕಣ್ಣುಗಳ ಕುಣಿತಕ್ಕೆ,
ಹೊಳೆವ ಹಸುರಿನ ಕಾಂತಿ ಮಿರುಗುತಿರೆ ಬಿಂಕದಿಂ
ಕೊಂಕುವಾ ನೀಲಕಂಠದ ಗಾಡಿಗರುವಕ್ಕೆ,
ಪದವೆತ್ತಿ ಪದವಿಟ್ಟು ತಿರೆಯ ತಲ್ಲಣಗೊಳಿಸಿ
ಕುಣಿವ ಬಿನ್ನಾಣಕ್ಕೆ, ನೆತ್ತಿಯ ವಿಭೃಂಭಿಸುವ
ಚೂಡ ಚಲನಾ ವೈಖರಿಗೆ ಸೋಲ್ದಪುದು ಜಗವೆ!
ಸೋಲದಿರ್ಪುದೆ ನವಿಲ್ಪೆಂಣ್ಣು? ಕುಣಿವಿನಿಯನಂ
ವ್ಯಾಬದ್ಧ ಲಕ್ಷ್ಯದೃಷ್ಟಿಯಿನೆಳೆದು ಪೀರ್ವಂತೆ
ನೋಡುತಿರಲುತ್ಫುಲ್ಲತೋಲ್ಲಾಸದಿಂದೆ, ಹಾ!
ಕಳ್ದಡಗಿದರಗುಲಿಯದೊರ್ವ ಬಿಯದಂ ಬಿಟ್ಟ ೧೪೮೦
ಮೃತ್ಯುಮಯ ಬಾಣವದೋ ಗಂಡುನವಿಲೆದೆಯಲ್ಲಿ
ನಟ್ಟುರ್ಚಳಿಸಿ ಚಿಮ್ಮುತಿದೆ ಬಿಸಿಯ ನೆತ್ತರಂ!
ಸಂಜೆಯೋಕುಳಿಯಲ್ಲಿ ಮಿಂದಡವಿ ಪಸುರಂತೆ
ರಂಜಿಸಿದೆ ನೆಲಕುರಳಿ ಬಿಳ್ದು ನೆಗೆನೆಗೆಯುವಾ
ಶೋಣಿತ ಪ್ಲಾವಿತ ಮಯೂರನೆರ್ದೆ, ಕೆಂಪೇರಿ
ಕರುಣ ಭೀಕರವಾಗಿ! ಒರ್ಮೊದಲೆ ಬಿರಿದತ್ತು
ಪ್ರಣಯ ನೃತ್ಯದ ಮೋಹ ಸಂಕಲ್ಪ ಬುದ್ಭುದಂ!
ನಾರಾಚದೇರಿಗಾರದೆ ಸೋಗೆ ನರಳುದನಿಯಂ
ಬೀರಿ ಚೀರಿಡೆ, ಕಾಣಿಸಲ್ ಜವನ ಜವದಿಂ ಬಳಿಗೆ
ನುಗ್ಗಿಬರ್ಪಾ ಮಾಯ್ದ ಕರ್ವೇಡನುಂ, ಬೆದರಿ, ೧೪೯೦
ಬರ್ಹಿವಧು ತಾಂ ಪ್ರಾಣಭಯದಿಂದೆ ಪ್ರಾಣೇಶನಂ
ಮರಣಮುಖನಂ ಬಿಟ್ಟು, ಕಣ್ಣು ಮೇಣೆರ್ದೆಗೆಟ್ಟು
ಪಾರಿದಪುದಾರ್ತನಾದಂಗೈಯುತಲ್ಲಿಂದೆ
ದೂರಾಂತರದ ಕಾನನಾಂತರಕೆ. ನೋವಿಂಗೆ
ಕೂಗುವಾ ಸುಂದರ ಮಯೂರನಂ ಬಂದೆರಗಿ
ಕುತ್ತಿಗೆಯ ಮುರಿದೆತ್ತಿಕೊಂಡೊಯ್ವನಾ ಕ್ರೂರ
ಶಬರನತಿ ಹರ್ಷದಿಂ, ವರ್ಷಮೇಘಂ ರಮ್ಯ
ಸುರಚಾಪಮಂ ಪೊತ್ತು ನಭದೊಳ್ ನಡೆಯುವಂತೆ!
ಬೈಗು ಬರಲೊಂಟಿತನಕುರೆ ಬಳಲಿ, ಬೇಸತ್ತು,
ವಿರಹದಿಂ ಪ್ರಿಯತಮ ಸಮಾಗಮ ಪ್ರತ್ಯಾಶೆ ೧೫೦೦
ಹೃದಯಮಂ ಬೇಯಿಸಲ್ಕಾ ಬೇಟವೆಣ್ ಸೋಗೆ
ನವಿಲುಕಲಿಗೆ ಮರಳಿ ಬಂದು ಕರೆವುದು ಕೇಗಿ
ತನ್ನರೆಯನಂ. ಬರಿದೆ! ಪ್ರಾಣಪ್ರಿಯಾಣ್ಮನಂ
ಕಾಣದಿರೆ ಪೊತ್ತುವುದು ಹರಣದುರಿ. ಸುತ್ತುತಿರೆ
ಹುಚ್ಚುಗಿಚ್ಚೇರಿ ಕರೆಕರೆದು ಪತಿವಿಹಗನಂ
ಶೋಕಾತಿಭಾರದಿಂದಾ ಕೇಕಿ, ಮುಚ್ಚುವುದು
ಮೆಲ್ಲನೆ ಭುವನಲಿಪ್ಸು ಬದ್ಧಭ್ರುಕುಟಿ ರಾತ್ರಿ!
ಅಂತಾ ಮಯೂರಸತಿಯಂ ಪೋಳ್ದು ಚಿತ್ರಾಂಗಿ
ಕರೆದೊರಲಿ ತೊಳಲುತಿರೆ ಸವ್ಯಸಾಚಿಯನರಸಿ
ಉನ್ಮತ್ತೆಯಂತೆ, ಕಂಡುದು ಕೈಯಬೆರಳಿನಲಿ ೧೫೧೦
ರಂಜಿಪಂಗುಲಿಮುದ್ರೆ, ರಾವಣಂ ಕಳ್ದುಯ್ದ
ಯೆನಂತರಂ ಭೂಪತಿತ ಸೀತೆಯಾಭರಣಮಂ
ಸಂದರ್ಶಿಸಿದ ದಶರಥನ ತನೂಭವಗೆಂತು
ಹರ್ಷ ಶೋಕಂಗಳೆರಡುಂ ಪೆರ್ಚಿ, ದುಃಖಾಗ್ನಿ
ಕಿಡಿಗಲೊಡಗೂಡಿ ಸಂತಸದ ಕಂಬನಿಗಳುಂ
ಪೊನಲ್ವರಿದುವೋ ಅಂತು ತನ್ನಿನಿಯನುಂಗುರಂ
ಕಾಣಲೊಡರ್ಮಿಡಿಸಿದಳಲಿಂದೆ ಸೊಗದಿಂದೆ
ಕಣ್ಣುಎದೆ ಕದಪು ತುಟಿ ಕೆನ್ನೆ ಹಣೆಗದನೊತ್ತಿ,
ಮತ್ತೆ ಮತ್ತಿರದೊತ್ತಿ, ಮುದ್ದಿಸುತೆ ರೋದಿಸುತೆ
ಮೈಮರೆತಳಡಿವಿಯಾ ತೊಯ್ದ ನೆಲವುಲ್ಲಿನಾ ೧೫೨೦
ತರಗು ಸಜ್ಜೆಯಲಿ. ತೀಡಿತ್ತಲೆವ ತಂಗಾಳಿ;
ಹಾಡುತಿರ್ದುವು ವಿಹಂಗಾಳಿ, ಪುಷ್ಟಿತ ಫಲಿತ
ಮಧುತರುಶ್ರೇಣಿಯಲಿ; ಹೊಳೆಯುತಿರ್ದುದು ಬಿಸಿಲ್;
ಬಲಿಯುತಿರ್ದುದು ನೆಳಲ ತಂಬೊಳಲ್, ಬರಬರುತೆ
ಕಳ್ತಲೆ ಕರಂಗಿದಂತಾಗಿ; ಏರ್ದುದು ಪೊಳ್ತು.

ಕಣ್ದೆರೆದಳಂಗನೆ. ಅಳುತ್ತಳುತೆ ಸುತ್ತಲುಂ
ನೋಡಿದಳರಸುವಂತೆ. ಎಂತಾನುಮರ್ಜುನಂ
ತಾನಲ್ಲಿ ತೋರ್ದಪಂ ಎಂಬ ಅತಿಕಾಂಕ್ಷೆಯಿಂ
ಭವಿಸಿದಾ ಭ್ರಾಂತಿಯಿಂ, ಬಯಸಲಾರದೆ ಬಯಸಿ,
ನೋಡಿದಳರಸಿಯರಸಿ ಸುತ್ತಲೆತ್ತೆತ್ತಲುಂ. ೧೫೩೦
ಬನಮಲ್ಲದೇನೊಂದುಮಿರಲಿಲ್ಲ. ಕುಕಿಲುತ್ತೆ
ಹಾರಿದುದು ಕೋಗಿಲೆಯೊಂದು, ಮರದಿಂದ ಮರಕೆ.

ತಿಂಗಳಾರಕೆ ಮರಳಿ ಬಹೆನೆಂಬ ಭಾಷೆಯಂ
ಭಾವಿಸುತೆ, ಭಾಮಿನಿ ಸಮಾಧಾನ ಬುದ್ಧಿಯಿಂ
ಮೇಲೇಳುತಲ್ಲಿಂ ನಡೆದು ಶಿವಾಯತನಕ್ಕೆ,
ಹರನನರ್ಚಿಸುತವನ ಹರಕೆಯ ಹಸಾದಮಂ
ಮುಡಿಯೊಳಾನುತೆ, ರಮಣನುಂಗುರವನೆದೆಯಲ್ಲಿ
ಗುಟ್ಟಾಗಿ ಬೈಚಿಟ್ಟು ನಡೆದಳ್ ಶಿಬಿರದೆಡೆಗೆ,
ಗರ್ಭಿತರಹಸ್ಯೆ ತಾನಾಗಿ!

ಗುಲಾಬಿಯ ರಂಗು
ಮೂಡುವೆಣ್ಣಿನ ಕೆನ್ನೆಗಳಲರಳಿ ಕೆಂಪೇರೆ, ೧೫೪೦
ಮರುದಿನಂ ಬೆಳಗಿನಲಿ ಚಿತ್ರೆಯಾಣತಿಯಂತೆ
ಬೀಡು ತೆಗೆದುದು ಕಟಕಮೆಳ್ದು ನಡೆದುದು ವಿಜಯ-
ಭೇರೀರವಕೆ ಬಿರಿಯೆ ದಿಗ್ಭಿತ್ತಿಗಳ ಬೆಸುಗೆ.
ದಿವಸ ದಿವಸಂ ಕಳೆದು ಪಯಣ ಪಯಣಂ ಪರಿದು,
ವಾಹಿನಿ ಸಮುದ್ರಲಗ್ನಕೆ ಸಮೀಪಿಸುವಂತೆ,
ಚೈತ್ರವಾಹಿನಿಯ ವಾಹಿನಿ ತೋಷಘೋಷದಿಂ
ತುಂಬಿತಂಬರ ಕುಂಭಿನಿಗಳಂ, ಅದೂರದಲಿ
ಕಡಲ ಕರೆಯಲಿ ಮೊರೆಯೆ ಮಣಲೂರ ಪತ್ತನಂ,
ಚಿತ್ರವಾಹನ ನೃಪನ ನಚ್ಚಿನ ರಾಜಧಾನಿ:
ಭ್ರೂಭಂಗ ಮಾತ್ರದಿಂ ವೈರಿಗಳನೆದುರಿಸುವ ೧೫೫೦
ಭೂರಮೆಯ ಬದ್ಧಭ್ರುಕುಟಿ ತಾಂ ದುರ್ಗರೂಪದೊಳ್
ನಿಂದುದೆನೆ ಕೋಂಟೆ ಮೆರದುದು ಧೀರ ದಿರ್ಘಮಾ
ಪುಟಭೇದನವ ಸುತ್ತಿ. ಭೀಕರಾಕಾರದಿಂ
ಮಲೆತ ಸಾಸಿರ ಶಿರದುರಗನಂತೆ ಹೆಡೆಯೆತ್ತಿ.
ಅಂಬರಾಂಬುದ ಚುಂಬಿ ಜಾಂಬೂನದಾಂಕಿತದಿ
ಕೋಲ್ಮಿಂಚಿನಂದದಿಂ ಮಿರುಮಿರುಗಿ ನಿಮಿರಿರ್ದ
ಡೆಂಕಣಿಯ ಸಾಲ್ಗಳಂ ಪೊತ್ತು ನೆತ್ತಿಯೊಳೆಸೆವ
ಕೊತ್ತಳಗಳಿಂದೆ, ಮೇಣಾಳುವೇರಿಗಳಿಂದೆ,
ಪಾತಾಳಮನೆ ಪುಗುವಗಳ್ತೆಯಿಂ, ದಟ್ಟಯಿಸಿ
ಕಿಕ್ಕಿರಿದ ಹರ್ಮ್ಯಾದಿ ಭವನ ಸೌಧಂಗಳಿಂ, ೧೫೬೦
ಧವಳಿಮ ಸುಧಾ ಚೂರ್ಣಮಾಕೀರ್ಣಮಾಗಿರ್ದ
ಕುಡ್ಯಕುಲಸಂದೋಹದಿಂ, ಕುಕ್ಮರುಚಿಯಿಂದೆ
ರವಿಯ ಛವಿಯಲಿ ರಕ್ತ ವಿದ್ಯುತ್ತದೆಂಬಿನಂ
ಕಣ್ದಿಟ್ಟಿಯನೆ ಕುಕ್ಕಿ ಕೋರೈಸಿ ರಂಜಿಸುತೆ
ವ್ಯೋಮ ಮಂಡಲವನಂಡಲೆದು ತಿವಿದುರ್ಕೆಳ್ದ
ಕಾರ್ತಸ್ವರಾಲೇಪನದ ಗೋಪುರಂಗಳಿಂ,
ಋತುರಾಜ ತರುರಾಜಿ ರಾಜಿಸುವ ರಮಣೀಯ
ಗಂಧ ಬಂಧುರ ಶಾಧ್ವಲೋದ್ಯಾನಗೋಷ್ಠಿಯಿಂ
ಆ ಮಹಾ ನಗರಸುಂದರಿ ವಿಜಯಮಾಲೆಯಂ
ಕೈಲಾಂತು ನಗೆಯ ಬೆಳ್ದೆರೆಗಳಿಂ ಬೀರುತ್ತೆ ೧೫೭೦
ಕಣ್ಮಿಂಚುಗಳನೆಸೆದು, ದಿಗ್ವಿಜಯಮಂ ಗೈದು
ಬರ್ಪ ಚತುರಂಗಮಂ ತುದಿವೆರಳಿನೊಳೆ ನಿಂದು
ಕಾತರದಿ ಕಾದಿಹಳೆನಲ್ಕೆ, ಶೋಭಿಸಿ ನಲಿದು
ರಂಜಿಸಿತು ರಾಜಧಾನಿ.

ಸೇನೆ ಬಂದುದನರಿತು
ನಗರ ನಗರವೆ ಅದನ್ನಿದುರುಗೊಳ್ವುರ್ಕೆಹದಿ,
ಅರಸರಸಿಯರ್ವೆರಸಿ, ಶುಭವಾದ್ಯಮೆಸೆಯುತಿರೆ,
ನಮಕುಸುಮದಾಮ ಧೂಪದ ಧೂಮ ಮೊದಲಾದ
ಪರಿಮಳಸ್ತೋಮವಾ ವ್ಯೋಮಮಂ ವ್ಯಾಪಿಸಿರೆ,
ಸುಸ್ವಾಗತಂ ಗೈಯೆ ಸರ್ವ ಸನ್ನಾಹದಿಂ
ಪ್ರವಹಿಸಿತು ದುರ್ಗದ ಮಹಾದ್ವಾರ ಸನ್ನಿಧಿಗೆ. ೧೫೮೦

ಪಿತೃಮಾತೆಯರ್ಗೆರಗಿ, ಗುರುಜನಕೆ ವಂದಿಸುತೆ,
ಹರಕೆವೆತ್ತಿನ್ನಿತರ ಬಂಧುಗಳನಳ್ಕರಿಂ
ನುಡಿಸುತುಂ, ಕೆಳದಿಯರನೊಲಿದಪ್ಪಿ ತೋಳ್ಗಳಿಂ
ಬಂಧಿಸುತೆ, ತುಳಿಲ್ಗೆಯ್ದ ತುಳಿಲಾಳ್ಗಳನ್ನುಚಿತ
ವಚನದಿಂದುಪಚರಿಸಿ, ನಾಗರಿಕ ಸಂಸ್ಕೃತ
ಶ್ರೀಮಂತರಂ ಮನ್ನಣೆಯ ಮಾಡಿ ಬೀಳ್ಕೊಟ್ಟು,
ಉತ್ಸವಂ ಬಳಸಿರೆ ನಿರುತ್ಸಾಹಿಯಾಗಿ ತಾಂ,
ಹಿಮಧೂಳಿ ತಳ್ತ ಹೇಮಂತ ಕನಲಿನಿಯಂತೆ,
ಚಿತ್ರಾಂಗದೆ, ವಿಷಣ್ಣದೀನಾಸ್ಯೆ, ನರಮೂರ್ತಿ-
ಚಿಂತಾಂತರಂಗೆ ನಗರದ ರಾಜಮಾರ್ಗದಲಿ ೧೫೯೦
ನಡೆಗೊಂಡ ಮೆರವಣಿಗೆಯಾ ಸೇದೆಯಂ ಸಹಿಸಿ,
ಪೊಕ್ಕಳ್, ಹಿರಣ್ಮಯ ಕಲಾಕರ್ಮದಿಂ ಸಮೆದು
ವರ್ಷಸಮಯದ ತಟಿದ್ಗುಣದಿ ಸಿಂಗರವೆತ್ತಡಂ
ಕ್ಷೀರ ಫೇನೋಪಮ ಶರನ್ಮೇಘದೋಲಿರ್ದ,
ತನ್ನರಮನೆಯ ಭವ್ಯಮಾ ಪಾಸಾದಮಂ. ಜನಂ
ರಾಜತನುಜೆಯ ಸೋಜಿಗದ ಪರಿಯ ತಂತಮಗೆ
ಮಾತಾಡಿಕೊಳುತೆ ನಡೆದುದು, ವಿವಿಧ ಕಲ್ಪನೆಯ
ಬೆಂಡುಗಳನೀಸುತ್ತೆ ಸಂಶಯ ಶರಧಿಯಲ್ಲಿ.

ಕಮಲವರಳಲು ಕುಮುದವರಳ್ವುದನೆ ಹಾರೈಸಿ,
ಕುಮುದಂ ವಿಕಾಸಿಸಲು ಕಮಲದ ಸೊಗವ ಬಯಸಿ, ೧೬೦೦
ಪಗಲನಿರುಳಿಂದೆ ಮೇಣಿರುಳಂ ಪಗಲ್ಗಳಿಂ
ಮೀಂಟಿ ನೂಂತುತೆ ಚಿತ್ರೆ ತಿಂಗಳಾರ್ಕಳೆವುದನೆ
ಕಾಯುತಿರ್ದಳ್ ಕಾತರದ ಹೃದಯವೇಧೆಯಲಿ.
ಮುನ್ನಿನ ಲಘುತ್ವವಳಿದುದು: ಪೌರುಷತೆ ಮಾಸಿ
ಪಲ್ಲವಿಸಿತಬಲಾಸಹಜ ಲಜ್ಜೆ ತಾನೇಕಾಂತ
ಲೋಲುಪ್ತಿಯೊಡನೆ. ಮೇಣಂದಿನ ಬಹಿರ್ಮುಖತೆ
ಹಿಮ್ಮೆಟ್ಟಿ ಗೋಚರಿಸಿತಂತರ್ಮುಖತೆ. ಸಖೀ
ಜನರೊಡನೆ ನುಡಿಯಲೊಲ್ಲಳು; ಮಾತುಕತೆಗಳಲಿ
ಬಿನದಂಗಳಲಿ ನೆರೆಯಲೊಲ್ಲಳು; ಮರೆತು ಮೆಯ್ಯಂ
ಜಾನಿಸುವಳನುದಿನಂ ನಿಂತಲ್ಲಿ ಕುಳಿತಲ್ಲಿ, ೧೬೧೦
ತೆರೆದ ಕಣ್ಮುಚ್ಚದೆಯೆ, ಮುಚ್ಚಿರಲ್ ತೆರೆಯದೆಯೆ!
ಕೆಳದಿಯರ್ಬಳಿಯೊಳಿರೆ ಲೆಕ್ಕಿಸದೆ ನುಡಿಸುವಳ್
ಪೂಗಳಂ ಲತೆಗಳಂ ತರುಗಳಂ, ಚೇತನಕೆ
ಜಡಕೆ ಭೇದವನರಿಯಳೆಂಬಂತೆ. ಸುರಿಯುತಿರೆ ಜಡಿ,
ಕಾರ್ಮಬ್ಬು ಹಗಲಿರುಳು ಮಂಕು ಕವಿದಂತಿಳೆಯ
ತಬ್ಬಿರಲ್, ವರ್ಷರ್ತು ತೋಯಿಸಿರೆ ಧಾತ್ರಿಯಂ,
ಬೇಸರಿನ ಮಳೆಗಾಲದಂತಿರ್ದಳಾ ಲಲನೆ
ನರನ ಪುನರಾಗಮನದ ಶರತ್ಪ್ರಸನ್ನಗೆತೆ
ತಪಮಿರ್ದ ನೆಲವೆಣ್ಣಿನಂತೆ.

ಇಂತಿರುತಿರಲ್,
ವಾರ್ತೆಯಂ ಕೇಳ್ದವಳ ತಾಯ್ತಂದೆಯರ್ಬಂದು ೧೬೨೦
ಪುತ್ರಿಯಂ ನುಡಿಸಿ ಬೆದರಿದರವಳ ದುಃಸ್ಥಿತಿಗೆ.
ಜವ್ವನದ ಜಾಡ್ಯಕ್ಕೆ ಮದುವೆ ತಾಂ ಮದ್ದೆನುತೆ
ಬಗೆದು ಮಣಿಪುರದರಸು ತನ್ನರಸಿಯೊಡನುಸುರಿ
ಪೋದನೊಪ್ಪಿಸುವಂತೆ ಮಗಳಂ ಪರಿಣಯಕ್ಕೆ.
ತಾಯಿಯಳ್ಕರೆಯ ಒಳ್ನುಡಿಗಳುರೆ ಕಾಯಿಸಿದ
ಸರಳಾಗೆ ಕಿವಿಗೆ, ಚಿತ್ರಾಂಗದೆ ತನಗೆ ಮದುವೆ
ನಿರ್ಜನಾರಣ್ಯದೊಳ್ ಗಾಂಧರ್ವವಿಧಿಯಿಂದೆ
ಶಿವನ ಸಾಕ್ಷಿಯೊಳಾದ ವೃತ್ತಮಂ ಗೋಪ್ಯದಲಿ
ಪೇಳೆ ಗದ್ಗದೆಯಾಗಿ, ನಡುಗುತೊರೆದಳ್ ಜನನಿ:
“ಮಗಳೆ, ನೀನೇಂ ಗೆಯ್ದೆ? ಹಾ! ಕುಲದ ಕೀರ್ತಿಯಂ ೧೬೩೦
ಮುಣುಗಿಸಿದೆ! ಮರ್ಯಾದೆ ಮೀರ್ದೆ! ಯಃಕಶ್ಚಿತಂ
ಬೈರಾಗಿಯಂ ವಿಪಿನಮಧ್ಯೆ ಕಳ್ದೊಡಗೂಡಿ
ನಮ್ಮಯ ಕುಲದ ಯಶಶ್ಚಂದ್ರಿಕೆಯ ಪಾಳ್ಗೆಯ್ದೆ,
ಪಳಿಯ ಕರ್ದಿಂಗಳಂ ಮೆತ್ತಿ.” ಎನೆ ಕೇಳ್ದದಂ,
ತನ್ನಾ ಪ್ರಣಯದೇವತಾ ನಿಂದೆಗಳುತ್ತೆ:
“ಕೈಮುಗಿವೆ! ಹಳಿಯದಿರು, ತಾಯೆ, ಹೃದಯೇಶನಂ.
ನನ್ನನೊಲಿದಾ ನರಂ ನೆಲದರಿಕೆ ಬಳಿಯವಂ;
ಕೀಳು ಕುಲದವನಲ್ಲ; ಯಃಕಶ್ಚಿತನುಮಲ್ಲ
ತಂದಪಂ ಕುಲದ ಕೀರ್ತಿಗೆ ದಿವಾದೀಪ್ತಿಯಂ,
ಮೇಣೆನ್ನನೊಲ್ದು ಪೆತ್ತರ್ಗೆ ಸಂತೃಪ್ತಿಯಂ! ೧೬೪೦
ತಿಂಗಳಾರಕೆ ಕರೆದು ತರ್ಪೆನಾನಾತನಂ
ಮಣಿಪುರಕೆ. ಪುಣ್ಯಮಹುದೆಮ್ಮ ಧರೆ ವಲ್ಲಭನ
ಪದಧೂಳಿಯಿಂ. ಪಳಿಯದಿರು ಪುರುಷಸಿಂಹನಂ,
ಸರ್ವ ವಿಧದಿಂ ಲೋಕವಿಖ್ಯಾತ ಪಾರ್ಥಂಗೆ
ದೊರೆಯಾಗುವೆನ್ನ ಬಾಳ್ಮೆಯ ಸಗ್ಗದಿಂದ್ರನಂ!”
ಕೆಚ್ಚೊರೆದ ಮಗಳ ಮುದ್ದಿಸುತಾ ಮಹಾರಾಣಿ
ತನ್ನಳಿಯನಾಖ್ಯ ಕುಲ ವಿಷಯ ಗೋತ್ರಂಗಳಂ
ಕೇಳಲದನೊರೆಯಲೊಪ್ಪದೆ ಕುವರಿ, ಸಿಂಗಮಂ
ಬೆಟ್ಟನ್ಯಮಂ ವರಿಸುವುದೆ ಸಿಂಗಿಣಿ ಎನುತ್ತಾಡಿ
ಕಳುಹಿದಳ್ ಮಾತೆಯಂ ಮೆಚ್ಚಿಸಿ ನೆಚ್ಚುಗೊಟ್ಟು. ೧೬೫೦

ಪಗಲಿರುಳ್ಗಾಲಿಗಳ ಮೇಲೆ ಕಾಲದ ತೇರು
ತಾನುರುಳ್ದತ್ತನಂತಾಚ್ಛಿನ್ನ ಯಾತ್ರೆಯಲಿ.
ಶತಪತ್ರನೇತ್ರೆ ಚಿತ್ರಾಂಗದೆಯ ಜೀವನಂ
ಪ್ರೋದ್ವಿಗ್ನ ದೂರ ದೀರ್ಘ ನಿರೀಕ್ಷಣೆಯ ಕಠಿನ
ನಿಶಿತ ಶೂಲದ ಮೊನೆಯ ಕೊನೆಯೊಳ್ ತಪಂಗೈದು
ಪ್ರವಹಿಸಿರೆ, ಮುಟ್ಟಿಬಂದುದು ತೇಲಿ ಹತ್ತಿರಕೆ
ಷಣ್ಮಾಸದವಧಿ : ಜಡವೇಷದಿಂ ಮೇಘರತಿ
ತನ್ನ ತಾಯ್ಮನೆಯಪ್ಪ ಕಡಲೊಡಲನೊಡಗೊಂಡು
ದೂರಾಂತರದ ಸಹ್ಯಗಿರಿ ಮನ್ಮಥನ ನೆನೆದು
ನಮೆದಪಳ್; ಬಳಿಸಾರೆ ಕಾರ್ಪೊಳ್ತು ಮೇಲೆಳ್ದು ೧೬೬೦
ತಪನ ಕರಕೃಪೆಯಿಂ, ಪ್ರಭಂಜನನ ನೆರವಾಂತು
ನಡೆದು, ಸುರಚಾಪ ವರ್ಣಾಭರಣಗಳ ಧರಿಸಿ,
ಸಹ್ಯಸುಂದರ ವರನ ವರಿಸಿ, ಎದೆಯಿಂ ಸ್ಮರಿಸಿ
ಬರಬರುತೆ ಪಸುರ್ಸಿರಿಯ ಮಲೆಯನಾಡಂ ಕಂಡು
ರೋಮಾಂಚನಂಗೊಂಡು ಮೆರೆವಳ್ ಮುಗಿಲ ನಾರಿ.
ಮೆಯ್ಯೊಡವೆಗಳ ಕಾಂಚನದ ಹೊಳಹೊ ದನಿಯೊ ಎನೆ
ಮಿಂಚುಗೊಂಚಲ್ಗಳಿಂ ಮೊಳಗುಬಳಗಂಗಳಿಂ
ಹನಿಗಂಪು ತಂಪು ಮೇಣ್ ಬೀಸುಗಾಳಿಗಳಿಂದೆ
ರಂಜಿಸುವ ಕಾರ್ಮುಗಿಲ್ಕಾಂತೆಯಂ ಕಾಣುತ್ತೆ
ಗಿರಿಮದನನುರ್ಬಿದಪನೆರ್ದೆಯಿಂಪನನುಭವಿಸಿ. ೧೬೭೦
ನವಿಲುಗಳ್ ಕುಣಿಯೆ, ಅರಸಂಚೆಗಳ್ ಕೊಂಚೆಗಳ್
ತಣಿಯೆ, ಕೃಷಿಕರ್ ಕೃತಜ್ಞತೆಯಿಂ ನುತಿಸಿ ಮಣಿಯೆ,
ಬಿಸಿಲ ಬೇಗೆಗೆ ಬೆಂದ ಬುವಿಯು ಬಾಂಬೊಚ್ಚಮಂ
ಮೊಗೆದು ಮೊಗೆದೀಂಟುತೀಂಟುತೆ ದಣಿಯೆ, ತೃಣರಾಶಿ
ಮೈದೋರೆ ಪಚ್ಚೆಯ ಪುಲಕದಂತೆ, ಬಿತ್ತಗಳ
ಬಣಗೆದೆಯೊಳಾಶಾಂಕರದ ಹರಣದಲೆಯಲೆಯೆ,
ಸಂಭ್ರಮದಿನಾಲಿಂಗಿಪಳ್ ಸಹ್ಯದೇವನಂ
ಮೇಘಾಂಗನೆ : ಆದರಾಹಾ ಮರಳಿ ಜಡವಾಗಿ
ಪರಿದಪಳ್ ಮತ್ತೆ ತಾಂ ಕಡಲೊಡಲಿಗೇಕಾಕಿನಿ!
ವರ್ಷ ಪ್ರಣಯ ಯಾತ್ರೆಯಾ ಮೇಘರಾಗಿಣಿಗೆ ೧೬೮೦
ಪ್ರಸ್ಥಾನ ಪ್ರಸ್ತಾವ ಮಾತ್ರದಿನುಪಮೆವೆತ್ತು
ಪೊರಮಟ್ಟಳಾ ಚಿತ್ರೆಯಾಪ್ತಸಖಿಯರ್ವೆರಸಿ,
ಪಾರ್ಥನನಿದಿರ್ಗೊಂಡು, ಅವನಂ ಬೆರಗುಗೊಳಿಸಿ,
ತನ್ನ ಪಿತೃಗಳ್ ಕೂಡಿ ಮಣಿಪುರದ ಜನರೆಲ್ಲ
ಬೆಕ್ಕಸಂಬಡುವಂತೆ, ಹಿಗ್ಗಿ ನೆರೆ ನಲಿವಂತೆ,
ಕರೆದು ತಂದಪೆನೆಂಬ ಪೆರ್ಮೆಯಾನಂದದಿಂದೆ.
ಕರಗಿ ದೂರಂ ದಿನದಿನಕೆ ಶಿವಗುಡಿಯ ಬನಂ
ಸನ್ನಿಹಿತವಾಗುತಿರೆ, ಸವಿನೆನಹಿನಿಂದೆ ಮೇಣ್
ಬರಲಿರುವ ಸಗ್ಗಸೊಗದಳುಪಿಂದೆ, ತುಂಬಿದುದು
ಚಿತ್ರಾಂಗದೆಯ ಮನಂ, ತುಂಬಿದ ಪೊಡೆಯವೋಲೆ! ೧೬೯೦
ಪೆರ್ಚಿದುದು ನಾರಿಯೆದೆ, ಮೂಡಿ ಪೊಂಬೆರೆ ತೋರೆ
ತೆರೆ ದಡಕ್ಕವ್ವಳಿಪ ಪೀಯೂಷ ವಾರಿಧಿಯ
ಸಂಭ್ರಮ ಜಲೋಚ್ಚ್ವಾಸದೋಲ್, ಗೋಚರಿಸೆ ಕಣ್ಗೆ
ಮೊದಲ ಬೇಟದ ಮೊಲಕೆ ಪಣ್ಗೊಂಡ ಕಾನನಂ,
ಮೊದಲ ಮೋಹದ ಬಲೆಯ ನೆಯ್ದೆಡೆಯ ತಿಳಿಗೊಳಂ,
ಮೊದಲ ಮಿಲನದ ಮತ್ತೆ ವಿರಹದ ಶಿವಾಲಯಂ!
ತಾನದಿಂ ತಾನದೆಡೆಗೊಡಲಾರದೆ ಓಡಿ,
ಓಪನನೆ ಕಾಣ್ಬಂತುಟತ್ಯಾದರಂಬೆತ್ತು
ನೋಡಿ, ಬಿರಿವೂಗಳಂ ಚುಂಬಿಸುತೆ, ಪರ್ಣಮಂ
ಮುದ್ದಿಸುತೆ, ಮೋಹಿಸುತೆ ವಿವಿಧ ವರ್ಣಂಗಳಂ, ೧೭೦೦
ತೀಡುತೈತಂದ ತಂಗಾಳಿಯಂ ಸಖಿಯೆಂದು
ಕ್ರೀಡಿಸುತೆ, ಪೀಡಿಸುತೆ ಮಣಿದಿರ್ದ ಲತೆಗಳಂ
ಬಿನದಕ್ಕೆ, ತಾಂ ಮಿಂದ ತಾವರೆಯ ತಿಳಿಗೊಳನ
ನೀರ್ಗನ್ನಡಿಯೊಳಾನನಂಗಂಡು ಮೆಚ್ಚುತ್ತೆ,
ಒಂದೊಂದು ತಾಣಂ ಮಹಾಕ್ಷೇತ್ರಮೆಂಬಂತೆ
ಕೆಳದಿಯರ್ಗವುಗಳಂ ಕರೆಕರೆದು ನುತಿಗೈದು
ತೋರುತಂ, ನಂದನಕ್ಕಿರ್ಮಡಿಯ ಬನಮೆನುತೆ
ಸಾರುತುಂ, ತಾನರಿಯದಾವುದನೊ ಪಾರುತುಂ,
ಇರ್ದ ಸೌಂದರ್ಯಕೆ ವಿಶೇಷತೆಯನೀಯುತ್ತೆ,
ಸೌಂದರ್ಯಮಿಲ್ಲದೆಡೆಗದನು ವಿಕ್ಷೇಪಿಸುತೆ, ೧೭೧೦
ಸಖಿಯರ್ಗಗೋಚರಸ್ವರ್ಗದಲಿ ಚಂದ್ರಮುಖಿ
ಮನದೊಳೆ ಮರಳಿ ಬಾಳಿದಳ್ ಕಳೆದ ಕಾಲಮಂ!

ಬೆಳಗಾದುದಾ ದಿನಂ, ಪುಲಕಿತ ಕುತೂಹಲದ
ಶುಭದಿನಂ, ಇನಿಯನೈತರುವ ಅವಧಿಯ ದಿನಂ,
ಪುಣ್ಮಾಸದ ನಿರೀಕ್ಷಣಂ ಫಲಿಸುವಾ ದಿನಂ,
ಚಿತ್ರಾಂಗದೆಯ ಜೀವನೋದ್ವಿಗ್ನ ಜಿಹ್ವೆಯಲಿ
ಬೇವುಬೆಲ್ಲದ ದಿನಂ; ಬೆಳಗಾದುದಾ ದಿನಂ!
ಪೂಜೆಗೈದಂಗಜಾರಿಗೆ, ಮಧುರ ಮಂಗಲದ
ಸಂಗೀತದಿಂ ಸ್ತುತಿಸಿ, ಶೃಂಗಾರಸದನೆ ತಾಂ
ಲಲಿತಾಂಗಿಯರ ಸಂಗದಲಿ ವಿಪಿನರಂಗಮಂ ೧೭೨೦
ಪೊಕ್ಕಳ್ ಸಮುಲ್ಲಾಸದಿಂ ಪಾರ್ಥದೇವನಂ
ಸ್ವಾಗತಿಸುವುತ್ಸಾಹದಿಂದೆ. ದೆಸೆದೆಸೆಗಲೆದು,
ಗಣಿಸದೆ ಬಳಲ್ಕೆಯಂ ಶೃಂಗತುಂಗಕ್ಕಡರಿ
ಕಂದರಕ್ಕನ್ವೇಷಣಾದೃಷ್ಟಿಯಂ ಬೀರಿ,
ನರನಿರಲಿ, ನರರೊರ್ವರುಂ ಕಾಣಿಸದಿರಲ್ಕೆ,
ಬಿಸುಸುಯ್ದು, ತುದಿಯ ಕಲ್ಗೋಡಿಗೇರುತೆ ಕಾಯ್ದು,
ತೃಷಿತದೃಷ್ಟಿಯ ಬೀರುತಿರಲೊಯ್ಯನೊಯ್ಯನೆಯೆ
ಮರದಡಿಗೆ ನೆಳಲರುಳಿ ಪೊಳ್ತೇರುತಿರ್ದತ್ತು.
ಪಗಲೇರಿದಂತೆ ಚಿತ್ರಾಂಗದೆಯ ಹೃದಯಾಬ್ಧಿ
ಕದಡೆದುದು ಕಾತರತೆಯೆಂಗ ಪವನನ ಹತಿಗೆ. ೧೭೩೦
ತುಳುಕಿದುದು ನಯನಾಶ್ರು. ಕೆಳದಿಯರ ಸಂತೈಕೆ
ಮೂದಲಿಕೆಯಂತಾಗೆ, ತಂದೆತಾಯಂದಿರಿಗೆ
ಕೊಟ್ಟ ವಚನವ ನೆನೆದು, ಮರಗಿದಳಬಲೆ ಕೊರಗಿ
ದೀನದಃಖದಲಿ.

ಇಂತಿರುತಿರಲ್ ಮುಳುಗಿದುದು
ಪಡುವಣೆಡೆ ಮುತ್ತಪೊಳ್ತೊಲವಿನ ಕೊಲೆಯೊಳಾದ
ಕೆಮ್ಮುಗಿಲ ನೆತ್ತರ್ಗೆಸರಿನಲ್ಲಿ. ಗರ್ಭಿಣಿಯ
ಹೃದ್ಗರ್ಭದಿ ನಿರಾಶೆ ದಟ್ಟಯಿಸಿ ಕವಿವಂತೆ
ಕವಿತಂದುದಿರುಳು.

ಹೇ ಆಶಾವಿಲಾಸಿನಿಯೆ,
ನಿಶೆಗೆ ನಕ್ಷತ್ರದೊಲೆ ನೀಂ ಬಹೆ ನಿರಾಶೆ ಬರೆ.
ನಿನ್ನಮೃತಪಾಶದಿಂದಲೆ ಮೃತ್ಯುವಡಿಗಡಿಗೆ ೧೭೪೦
ಹಿಮ್ಮೆಟ್ಟುತಿದೆ ಭುವನ ತಿಕ್ತ ಜೀವನದಿಂದೆ.
ಬಡತನದ ಕಣ್ಗೆ ಸಂಪತ್ತಿನ ಕನಸು ನೀನು;
ರಾಮಗಿರ್ಯಾಶ್ರಮದ ವಿರಹಿ ಯಕ್ಷನ ಮುಂದೆ
ಮೇಘದೂತನು ನೀನು; ಪ್ರಣಯಕ್ಕೆ ಪ್ರತ್ಯಾಶೆ;
ಧರೆಯ ಸಂಕಟದೆದುರು ಪರದ ನಾಕವನೊಟ್ಟಿ
ಸಂತವಿಡುತಿಹೆ ಬೆಂದು ಕುದಿವೆದೆಯ ಮನುಜರಂ!
ಆಶಾವಿಲಾಸಿನಿಯ ಕೃಪೆಯಿಂದೆ ಚಿತ್ರಾಂಗಿ
ಕಳೆದಳಾ ರಾತ್ರಿಯಂ, ಕಣ್ಣ ಕುದಿನೀರಿನಲಿ
ಬೇಯಲೆದೆದಾವರೆ. ನಿರೀಕ್ಷಣೆಯ ಮೊನೆಮೇಲೆ
ಮಯದೋರುತಾಶಾ ಖಮಧ್ಯಕೇರುತೆ ಮತ್ತೆ ೧೭೫೦
ಮರುದಿನವದುರುಳ್ದುದು ಹತಾಶಾಂಧತೆಯ ಬಿಲಕೆ.
ಹಗಲೇರಿ ಹಗಲಿಳಿಯುತಿರುಳಾಗಿರುಳು ಹೋಗಿ
ಕಾಲಜೀವನ ಸೊರಿದುದು, ಜೀವನಾಂಜಲಿಯ
ಬರಿಗೈದು. ಇಂತಯದು ಮೇಲೈದು ಪಗಲ್ಗಳಂ
ನಿಂತ ತುದಿವೆರಳಿನೊಳೆನಲ್ಕೆ ಕಾಯ್ದಾ ಬಸುರಿ
ರೋಷದುಃಖ ದ್ವಂದ್ವದಲಿ ಬೆಂದು ಮಣಿಪುರಕೆ
ಪಿಂತಿರುಗಿ ಬಂದಳಭೀಷಣ ಮನಃಸ್ಥಿತಿಯಲಿ!