ಏಳು, ವೀಣೆಯೆ! ಏಳು, ಶೃಂಗಾರ ಸುಂದರಿಯೆ!
ಏಳು, ಅಂತರ್ಯಾಮಿ ಚಿಂತಾ ಪ್ರಭಾಮಯೀ
ಪ್ರತಿಭಾ ಮನೋಹರಿಯೆ! ಹೇಳು ಮುಂದಣ ಕಥಾ
ಭೋಗಮಂ, ಮಧುಮಯ ಪ್ರಣಯ ಪ್ರಸಂಗಮಂ.
ಕವಿ ನಿರನುಭವಶಾಲಿ. ಅದರಿಂದೆ ಬೇಡಿದಪೆ ೮೩೦
ನಿನ್ನನಾಂ. ಜಡಮತಿಗೆ ರಸಮಂತ್ರಮಂ ನೀಡಿ,
ಮಿಡಿದು ನುಡಿಸೆನ್ನೆದೆಯ ನಾದಮಯದಿಂದ್ರಧನು
ತಂತ್ರಿಯಿಂ ಮಾಡಿದ ಮಹಾಕಾಶವೀಣೆಯಂ!

ಪೂವಡಿಗಳುಷೆವೆಣ್ಣು ಪೂರ್ವ ರೋದೋಂತದೆಡೆ
ಕೆಂದುಟಿಯ ನಗೆಬೀರಿ ಹೊಂಗದಿರ್ಗಯ್ಗಳಿಂ
ಬಿತ್ತಿ ಸೂಸಿದಳು ಹನಿಮುತ್ತುಗಳ ಸೇಸೆಯಂ
ಬಿತ್ತರದ ವಸುಮತಿಯ ಸಿರಿ ಹಸುರಡೆಯ ಮೇಲೆ.
ಸರಸಿಯಂಚಲದ ಕೋಮಲ ನವ್ಯ ಶಾಡ್ವಲದ
ಮೃದು ಮೆತ್ತೆಯಲಿ, ಚೂತ ತರುತಲದ ಸೊಂಪಿನಲಿ
ಪದ್ಮಾಸನಂಬೆತ್ತು ಮಂಡಿಸಿರ್ದರ್ಜುನಂ ೮೪೦
ಕಂಡು ನಿಬ್ಬೆರಗಾದನದೊ ನಟ್ಟು ಕಣ್ದಿಟ್ಟಿ
ಕಟ್ಟಿದಿರಿನಲ್ಲಿ! ಕಿವಿಗೊಟ್ಟು ಕೇಳುತಿಹನದೊ!
ಬಿಳ್ದಪುದೊ ಗಂಧರ್ವ ಮಧುರ ಗಾಯನ ವೃಷ್ಟಿ,
ಪವಹಿಪುದೊ ನಿರ್ಜರ ಸ್ತ್ರೀ ಗೇಯ ನಿರ್ಝರಿಣಿ
ಎಂಬಂತೆ ಸಂಗೀತದುಲ್ಲೋಲ ಕಲ್ಲೋಲ
ಲೋಲ ವೀಚಿಯ ವಾಹವೊಂದೊಯ್ಯನೈತಂದು
ವನಮಂ ತಟಾಕಮಂ ಧರೆಯನಾಕಾಶಮಂ
ಪರ್ವತಪ್ರಾಂತಮಂ ಚುಂಬಿಸಾಲಿಂಗಿಸುತೆ
ಮಲಗಿಸಿತು ಮಧುಜಗವನಾನಂದ ಮೂರ್ಛೆಯಿಂದೆ!
ಪೆಣ್ದುಂಬಿ ಗಾವರಂ ಕೋಗಿಲೆಯ ನಿಡುಸರಂ ೮೫೦
ಬಹುಪಕ್ಷಿ ಕೂಜನದ ತುಮುಲ ಕಾಕಲಿ ಗೀತಿ
ಆ ಗಾನ ಗೌರವದೆದರು ಮೂಕವಾಗುತಿರೆ,
ಮಿಂದುದರ್ಜುನನಾತ್ಮವಾ ಸ್ವನಸ್ರೋತದಲಿ
ಮೈನವಿರ್ನಿಮಿರಿ : ಜನ್ಮಾಂತರದ ಭೋಗಮಂ
ಬಗೆಗೆ ತಂದುದು; ಮೇಣ್ ಭವಿಷ್ಯ ಸುಖದಾಶೆಯಂ
ಕಡೆದುದೆದೆಯಲಿ; ಕರಗಿದಂತಾಯ್ತು ಜಡಜಗಂ
ಕಾಲದೇಶ ಸಮೇತಮಿಂಪಿನ ಸಮಾಧಿಯೊಳ್
ಪ್ರಲಯಮಾಗಿ! ಎವೆಯಿಕ್ಕದೆಯೆ ನೋಡುತಾಲಿಸಿರೆ,
ತೆಕ್ಕನೆಯೆ, ಪುಷ್ಪಮಯವಾದ ಕಾನನದಿಂದೆ
ಪೊಣ್ನುವ ಸುಗಂಧವೆನೆ, ಕೊಳದಾಚೆಯಂಚಿನಲಿ ೮೬೦
ಹೊಮ್ಮಿದುದು ಗಾನಮೆ ಘನೀಭೂತಮಾದಂತೆ
ಸರ್ವ ಸೌಂದರ್ಯನಿಧಿ ಲಲನಾ ಕಲಾ ಸುಕೃತಿ!
ಸ್ಥೂಲತೆಯನುಳಿದ ಬಿಳಿದಂತದಿಂ ಕಯ್ಗಯ್ದ
ಸವಿಗನಸೆ ಸಂಚರಿಸಲೆಳಸಿದುದೊ ಎಂಬೊಲಾ
ಮೃದುಗಮನೆ, ಹರಿಣನೇತ್ರೆ, ಲತಾಂಗಿ, ನಳಿನಮುಖಿ,
ಹೂಗಳಿಗೆ ಹೂವೆಂಬ ಭ್ರಾಂತಿಯಂ ಪುಟ್ಟಿಸುತೆ,
ಲತೆಗಳಿಗೆ ಲತೆಯಂತೆ ಬಳಕುತ್ತೆ, ಕಂಪಿಂಗೆ
ಕಂಪಾಗಿ, ತಂಬೆಲರಿಗೆಲರಾಗಿ ಸುಳಿಯುತ್ತೆ,
ಮೃದುಗಾನದಾಲಾಪಮಂ ಗೆಯ್ಯತೊಯ್ಯನೆಯೆ
ನಡೆತಂದು ಕೆರೆಯಂಚಿನಲಿ ನಿಂದು ಬೀಸಿದಳ್ ೮೭೦
ಮುಗುಳ್ನಗೆಯ ಮಾಯೆಯಂ! ಭೋಕನೆ ವಸಂತರ್ತು
ಬಿರಿದರಳಿ ಸ್ವರ್ಗದಿಂ ಮರ್ತ್ಯಕವತರಿಸಿತೆನೆ,
ಲಲಿತೆಯಂ ಕಾಣುಹ ತಡಂ ಕಿರೀಟಿಯ ತೃಷಿತ
ಸರ್ವೇಂದ್ರಿಯಂಗಳಿಗೆ ಮಧುಪಾನಮಾದತ್ತು:
ಕೆಂದಲಿರು, ತುರುಗಲರು, ಪರಭೃತಧ್ವನಿ, ಭೃಂಗ
ಮಧುಪ ನಿವಹದ ಗಾನ, ಗಿಣಿ ಗೊರವಂಕೆಗಳೆ
ಮೊದಲಹ ವಿಹಂಗಮಗಳಿಂಪುದನಿ, ಹರಿಣಾದಿ
ಬೆಳ್ಮಿಗಗಳಳುಕಿಲ್ಲದಿಹ ಸಂಚರದ ಲೀಲೆ,
ಹೂಗಂಪುವೊತ್ತು ಬನಬನವಲೆವ ಮೆಲುಗಾಳಿ,
ತಂಪು ಬಿಸಿಲಿಂಪಲಂಪುಗಳಿಂದೆ ಸೊಂಪಿಡಿದ ೮೮೦
ಕಾನನಂ ಮಧುಮಹೋತ್ಸವಮಾದ ತೆರದಿಂದೆ
ರಾಜಿಸಿತು, ರಂಜಿಸಿತು, ಶೊಭಿಸಿತ್ತರ್ಜುನಂ
ಕಾಣಲೊಡಮಂಗಜನ ಶೃಂಗಾರ ಶಾಣೆಯಂ,
ಮದನ ವರದಿಂ ಸ್ವರ್ಗ ಸೌಂದರ್ಯದೈಸಿರಿಯ
ಸೂರೆಗೊಂಡೆಸೆದಿರ್ದ ರತಿರೂಪಿ ಚಿತ್ರಾಂಗಿಯಂ!
ಸರ್ವ ರಸ ರೂಪಾದಿ ಗಂಧ ವರ್ಣಂಗಳುಂ
ಸ್ಪರ್ಶಮುಂ ಸುರಗೇಯಮುಂ ನೆರೆದು ಹಿನ್ನೆಲೆಯ
ಚಿತ್ರಿಸಿರೆ, ಕೆರೆಯ ಪಸುರಿಡಿದ ಕರೆಯಂಚಿನಲಿ
ನಿಂತಾ ಧವಳಸ್ವಪ್ನೆ, ಚೈತ್ರಾಗಮದ ಪೂತ
ಲತೆಯಂತೆ ನಸುಬಾಗಿ, ಪ್ರಾತಃಸರೋವರದ ೮೯೦
ಸಲಿಲ ದರ್ಪಣದಲ್ಲಿ ತನ್ನ ತಾಂ ದರ್ಶಿಸುತೆ
ಬೆಚ್ಚಿದಳ್, ಪಡಿನೆಳಲ ಸೊಬಗಿಗಚ್ಚರಿವಟ್ಟು,
ಕಯ್ಗಣ್ಮಿದಾಹ್ಲಾದದಿಂ! ನಗೆಯ ಬೆಳ್ಮುಗುಳೊಂದು
ತೊಂಡೆವಣ್ದುಟಿಗಳಿನಿಯೆತ್ತಿನಿಂದರಳುತ್ತಿರೆ,
ಚೆನ್ನೆ ನಳಿತೋಳ್ಗಳಿಂ, ಕಿಸಲಯ ಸದೃಶ ಮದನ
ಕರದ ಕರವಾಳ್ಗಳಿಂ, ಮಸಿಗತ್ತಲೆಯ ಕೊಲದ
ಕಟ್ಟನೊಡೆಯುತ್ತೆ ಕರ್ಬೋನಲ ಪರಿಯಿಸುವಂತೆ
ತುರುಬು ಸಡಿಲಿಸಿ ಬೀಸಿದಳ್ ಕೇಶಪಾಶಮಂ,
ಧರ್ಮಾನುಜನ ವ್ರತದ ಕೊರಳಿಗುರುಳ್ಗಣಿಯಂ
ತೊಡರ್ಚಿ ಬಿಗಿವಂತೆ. ನೋಡುತ್ತಲಿರ್ದನು ನರಂ ೯೦೦
ಮೈಯೆಲ್ಲ ಕಣ್ಣಾಗಿ, ಜೀವ ತಾಂ ದೃಷ್ಟಿಯಾಗಿ!
ನಿಶ್ಚಲಿತ ಯಮುನೆಯ ತರಂಗಿತ ತಮೋವೇಣಿ
ಪೆರೆನೊಸಲ ಬೆಳ್ದೀಗಳ್ವೆಟ್ಟಿನಿಂದಿಳಿದುದೆನೆ
ಕರಿ ಸುರುಳಿಗರುಳು ತೆರೆತೆರೆಯಾಗಿ ನೆರೆ ಜೋಲ್ದ
ಬಿಡುಮುಡಿಯ ನಿಡುವೊನಲ್ ರಾರಾಜಿಸಿತು ಕಣ್ಗೆ
ಕದ್ದಿಂಗಳಂ ಮೆತ್ತಿ. ಮೃದುಲ ವಕ್ಷಸ್ಥಲದ
ತೆರೆಮರೆಯ ಸೆರಗನೊಯ್ಯನೆ ಮೆಲ್ಲನೋಸರಿಸಿ,
ನಾಣ್ಮೀಸಲಳಿಯದಿಹ ಕುಂದಿಲ್ಲದವಯವದ
ಕೋಮಲ ಮೃಣಾಳತೆಯನೀಕ್ಷಿಸುತೆ, ಪೆರ್ಮೆಯಿಂ
ಬಿಂಕದೊಯ್ಯಾರದಿಂ ನರನಿರ್ದ ತಡಿದೆಸೆಗೆ ೯೧೦
ನೋಡಿದಳ್, ಕಂಡರುಂ ಕಂಡಳಿಲ್ಲೆಂಬಂತೆ.
ಸಂಭ್ರಮಾನಂದಾತಿಶಯಕವಳುಡುಗೆ ಕರಗುತೇನ್
ಆಕಾಶಮಾಗಿಹುದೊ ಎನೆ ಸೂಕ್ಷ್ಮತರಮಾಗಿ
ಮುಚ್ಚದೆಯೆ ಸೊಬಗನಾವರಿಸಿರ್ದುದಂಗಮಂ!

ಪಡಿನೆಳಲ ಪೊತ್ತು ತಾಂ ಧನ್ಯನೆಂದಾ ಕೊಳಂ
ಜುಂಮ್ಮೆಂದು ಪುಳಕಿಸುವ ಮಾಳ್ಕೆ ಕಂಪಿಸಿದತ್ತು
ತಂಬೆಲರ ಚುಂಬನಕ್ರೀಡೆಯಿಂದೆ. ಕಣ್ಣಾಗಿ
ಬೆರಗು ಹೊಡೆದರ್ಜುನಂ ನೋಡುತಿರಲಾ ಭಾಮೆ
ಬಂದವೊಲೆ ಹಿಮದಿರುಗಿ ನಿಬಿಡ ಕಾಂತಾರದಲಿ
ತರುಗುಲ್ಮಪರ್ಣಗರ್ಭಂಬೊಕ್ಕು, ಸುರಸಂಧ್ಯ ತಾಂ ೯೨೦
ಶರ್ವರಿಯ ತೋಳ್ಷೆರೆಯೊಳಿಳಿದು ಬಯಲಪ್ಪವೋಲ್,
ಮರೆಯಾದಳಿರದೆ. ಸೃಷ್ಟಿಯ ಹೃದಯಸತ್ತ್ವ ತಾಂ
ಪರಮ ಸೌಂದರ್ಯದಾಕೃತಿವೆತ್ತಿನಿತು ಮಿಂಚಿ
ಸುಳಿದಡಗಿದಂತಾಯ್ತು. ಮೇಲೆಳ್ದನರ್ಜುನಂ.
ಕನಸಿನಿಂದೆಳ್ಚತ್ತುಮದನರಸುವವನಂತೆ
ನೋಂಪಿಯಂ ಪಳಿದು, ನುಡಿಯಾಣೆಯಂ ಕಡೆಗಣ್ಚಿ,
ಮಧುಪ ಭೃಂಗ ವಿಹಂಗ ಸಂಗೀತ ಸಂಗದಲಿ
ಮಧುರಂಗದಂತರಂಗದ ವಿಪಿನವೀಥಿಯೊಳು
ಒಲುಮೆ ಮರುಳಮರ್ದುದೆನೆ ತೊಳಲಿದಂ ನಿಡುವೊಳ್ತು
ಸೊಬಗಿನರಸಿಯನರಸಿ. ಕರ್ವುವಿಲ್ಲನ ಬರಂ ೯೩೦
ನರನಂ ಮರುಳ್ಮಾಡಿ ಚಿತ್ರಾಂಗದೆಯ ನೆಲೆಗೆ
ಕೊಂಡೊಯ್ದುದಿಂತು!

ಕಾಣುತೆ ಸಿವನ ಕೋಯಿಲಂ
ನಡೆದು ಬಾಗಿಲ್ವಾಡಮಂ ಸೇರಿ ನೋಡುತಿರೆ,
ಯತಿಗೆ ಶಿವಗುಡಿಯೆ ಮದನನ ಸದನವಾಯಿತೆನೆ
ಗೋಚರಿಸಿತಾ ಕಂಡ ಕಾಮಿನಿಯ ವಿಗ್ರಹಂ,
ವೈರಾಗ್ಯದಾತ್ಮಹತ್ಯೆಗೆ ಮಾಯೆ ಸಾರ್ಚಿದಾ
ಪ್ರಗ್ರಹಂ! ಬಿರುಗಾಳಿಗುಬ್ಬೆದ್ದ ವಿಕ್ಷುಬ್ಧ
ವಿಸ್ತೃತ ಸಮುದ್ರದ ತರಂಗ ತಾಂಡವದಂತೆ
ಭಾವದುದ್ರೇಕಮವ್ವಳಿಸಿರ್ದುದರ್ಜುನನ
ಪ್ರಾಣಪಾರಾವಾರದಾ ಹೃದಯವೇಲೆಯಂ. ೯೪೦
ನುಡಿಯಲೆಳಸಿದನೊರ್ಮೆ; ನುಡಿಯಲೆಳಸಿದನಿರ್ಮೆ;
ನುಡಿದೋರಲಾರದೆಯೆ ಪ್ರಸ್ತರ ಪ್ರತಿಮೆಯೋಲ್
ನೋಡುತಿರ್ದನು ಬರಿದೆ ಮಿಳ್ಮಿಳನೆ. ಶಾಂತಿಮಯ
ದೇವಕುಲದಂಗಣದೊಳಲರಿಡಿದ ಮಲ್ಲಿಗೆಯ
ಹೊದರಿನೆಡೆ ತುದಿವೆರಳ ಮೇಲ್ ನಿಕ್ಕುಳಿಸಿ ನಿಂದು
ತೋಳೆತ್ತಿ ಹೂಗೊಯ್ಯುತಿರ್ದಾ ಮೃಗಾಕ್ಷಿ ತಾಂ,
ಮಿರುಮಿರುಪ ಪೀತನೀಲಾಭಕಂಠದ ಕೇಕಿ
ನೆಗಳ್ವಂತೆ ಸಂಕುಗೊರಲಂ ಬಿಂಕದಿಂ ಕೊಂಗಿ,
ಪರಿಚಿತ ಧನಂಜಯನನಪರಿಚಿತೆಯಂದದಿಂ
ನೋಡಿ, ಕೆಸುವಿನೆಲೆ ಮೇಲೆಸೆವ ಶಿಶಿರದ ಬಿಂದು ೯೫೦
ಗಾಳಿಗೆ ಜುಗುಳ್‌ವಂತೆ ಪಾರ್ಥನ ಹೊರೆಗೆ ಬಂದು
ಕೈಜೋಡಿಸುತೆ, ನಾಣ್ಚಿ ಕೆಂಪೇರುತಿರೆ ಮೊಗಂ,
ಸವಿಗೊರಲ್ಬೀಣೆಯಂ ಮಿಡಿದಳ್ ವಿನಯದಿಂದೆ:
“ಯತಿಪತಿಯೆ, ಬಿಜಯಗೈ; ಸನ್ಮಾನ್ಯನೆನಗೆ ನೀಂ;
ಮೇಣತಿಥಿ. ದೇಗುಲವಿದೆನ್ನ ಮನೆ, ಆಶ್ರಮಂ.
ನಾಂ ತಪಸ್ವಿನಿಯಿಲ್ಲಿ. ನಿನಗೆ ಸುಸ್ವಾಗತಂ!”
ಪಳಪಳನೆ ಸುರಿಯುತಿರೆ ಮಾತುಗಳ ಮುತ್ತುಮಳೆ
ಕಡುಬಡವನಂತಾದನರ್ಜುನಂ. ನಾಚಿದನ್;
ತನ್ನ ವೇಷಕೆ ತಾನೆ ಹೇಸಿದನ್. ‘ಯತಿಪತಿ’
ಯತಿತ್ವಮಂ ಪಳಿಯುತ್ತೆ, ಪಾರುತೆ ಪತಿತ್ವಮಂ, ೯೬೦
ತನ್ನ ನಿಜಮಂ ನುಡಿದನತಿ ಕಾತರತೆಯಿಂದೆ:
“ಕುಸುಮ ಕೋಮಲೆ, ನಾನು ಯತಿಯಲ್ಲ, ಕ್ಷತ್ರಿಯಂ.
ಕೋಳುಹೋಗದಿರೆನ್ನನಂತು ಸಂಭಾವಿಸುತೆ.
ಸಂಗ್ರಾಮಗಳಲಿ ಕೋದಂಡಮಂ ಪಿಡಿದರಿಯ
ರುಂಡಮುಂಡಂಗಳಂ ಖಂಡಖಂಡಂಗೈದು
ಚೆಂಡಾಡಿ ದಿಂಡುರಳ್ಚಿದೀ ಕೈಯ ಕಲೆಗಳಂ
ನೋಡಿಲ್ಲಿ. ಕೌಕ್ಷೇಯಕಾಘಾತಗಳನುಂಡು,
ಲೋಹಿತಸ್ರೋತದೊಳ್ಮುಳುಗಿ, ಮಜ್ಜೆಯೊಳದ್ದಿ,
ಬಿರುಸಾದ ದೇಹವಿದು ಪಾರ್ಥಿವಕುಲೋದ್ಭವಂ:
ಯತಿವೇಷವೆನಗೆ ಆಂತರವಲ್ಲವಾಗಂತುಕಂ.” ೯೭೦
ನಸುಮುಗುಳ್ನಗೆಯನಲರಿಸುತೆ ನುಡಿದಳ್ ನಾರಿ:
“ವೀರವರ, ನೀನಾಡುವುದೆ ಬೇಡವೆನ್ನೆದೆಗೆ,
ನಿನ್ನ ಕಂಡೊಡನೆ, ಗೋಚರಮಾಯ್ತು ಕೈತವಂ!
ಅಂತೆ ನಾನಾದೊಡಂ ಜಾತಿ ಗೋಗಿನಿಯಲ್ತು:
ಬಗೆಯೊಂದು ಬಯಕೆಯಂ ಪಡೆಯೆ ನೋತಿಹೆನಿಂತು.”
“ಸುಂದರಿಯೆ, ಪೇಳಾವ ಪುಣ್ಯಂಗೈದುದಾ ಬಯಕೆ
ನಿನ್ನೆದೆಯನಾಲಿಂಗಿಸೆ? ಬಯಕೆ ನಿನಗಾವುದೌ
ಲೋಕದ ಬಯಕೆಯಾಗಿರುವ ನಿನಗೆ? ಉದಯಾದ್ರಿ
ಅಸ್ತಾದ್ರಿಗಳ ಮಧ್ಯೆ ಶರಧಿಮುದ್ರಿತ ಧರೆಯ
ರಾಷ್ಟ್ರ ರಾಷ್ಟ್ರಂಗಳಂ ಚರಿಸಿ ಬಂದಿಹೆನು ನಾಂ ೯೮೦
ತೀರ್ಥಯಾತ್ರೆಯಲಿ. ನುಡಿ, ಬಯಕೆಯೇನೆಂಬುದಂ;
ಮೇಣದಾರೆಂಬುದಂ. ಮುದದಿಂ ನಿವೇದಿಪೆನ್
ನನ್ನರಿವು ಬಲ್ಮೆಗಳಿಗೊಳಗಾದುದೆಲ್ಲಮಂ.
ನುಡಿ, ಬಯಕೆಯಂ, ದೇವಿ, ಓ ಭುವನ ಮೋಹನ ಮೂರ್ತಿ!”
“ನನ್ನಿಷ್ಟನಾತಂ ಜಗತ್ಪ್ರಸಿದ್ಧಂ, ವೀರಂ,
ಮೂರು ಲೋಕಂಗಳಲಿ ದೊರೆಯಿಲ್ಲವಾತಂಗೆ
ಸೌಂದರ್ಯದಲಿ ಬುದ್ಧಿಯಲಿ ಮಹಾವಿಕ್ರಮದಲಿ!”
“ಅಹುದಹುದೆ? ಅದಾರವಂ ದೇವಿಯ ಕೃಪಾದೃಷ್ಟಿ
ಪರಿಪುಷ್ಟ ಪುಣ್ಯಪಾತ್ರಂ?”

“ಸದ್ವಂಶ ಸಂಜಾತಂ.
ಪಾರ್ಥಿವಕುಲ ವರಿಷ್ಠವಂಶ ಸಂಭವಶ್ರೇಷ್ಠ!” ೯೯೦
“ಇಂದುಮುಖಿ, ಹೆಸರಿನ ಹುಸಿಗೆ ನಿನ್ನಿದೆಯ ಸಿರಿಯ
ಮಾರದಿರು. ನಂಬಿ ಬರುಗನಸೊಂದನಾಮೇಲೆ
ಕೋಳುಹೋಗದಿರು. ವಿಗ್ರಹಮಿಲ್ಲದಾ ಗುಡಿಗೆ
ಕರುಣೆಗೈ! ನಿನ್ನೆದೆಯ ಕೋಮಲಾಶ್ರಮದಿಂದೆ
ಕಳುಹದಿರು ನಿನ್ನೊಲುಮೆಯೈಸಿರಯ ಪೂಜೆಯಂ.
ಫಣಿವೇಣಿ, ಕೀರ್ತಿಯಂಬುದು ಗಿರಿಯ ಕಂದರದ
ನೀಹಾರಮಿನನುದಯಕೆಂತು ಹಬ್ಬುವುದಂತು
ಕಿವಿಯಿಂದ ಕಿವಿಗೆ ನಾಲಗೆಯಿಂದ ನಾಲಗೆಗೆ
ನೆಗೆಯುವುದು ಹಿಂಜಿ ಹಸರಿಸಿ ಹಬ್ಬಿ. ಗಾತ್ರವದು
ಸೂತ್ರವಲ್ಲಾತ್ಮಕ್ಕೆ. ನಿನ್ನ ಹೃದಯದ ನಿಧಿಯ
ಸೂರೆಗೊಂಡಿರುವಾತನಾರವನ್? ನಡಿಯೆನಗೆ!” ೧೦೦೦
“ಹೆರರ ಜಸಕಿಂತೇಕೆ ಕರುಬುತಿಹೆ, ವೀರಯತಿ?
ನೆಲದರಿಕೆಯಾ ಮಹಾ ಕುರುಕುಲವನರಿಯೆಯಾ?”
“ಕುರುಕುಲಂ?”

“ಕುರವಂಶ ಶರಧಿಯ ಸುಧಾಸೂತಿ
ಲೋಕೈಕವೀರ ನಾಮವನು ಕೇಳ್ದರೆಯೆಯಾ?”
“ನಿನ್ನ ಚೆಂದುಟಿಗಳಿಂ ಕೇಳಲಾಟಿಪೆನದಂ;
ಲೋಲಲೋಚನೆ, ಹೆಸರ ಹೆಜ್ಜೇನನೂಡೆನಗೆ!”
ಕಲಹಂಸ ಗಾಮಿನಿಯು ಕಿರುನಗೆಯ ಬಿಂಕದಿಂ
ಸೂಸಿದಳ್ ಕಲಕಂಠ ಕೋಕಿಲೆಯ ವಾಣಿಯಂ,
ಸವ್ಯಸಾಚಿಯ ಧಮನಿಯಲಿ ಹರಿಯೆ ಮಧುಮದಿರೆ:
“ತ್ರಿಭುವನ ಜಗದ್ವಿಜಯಿ ಅರ್ಜುನಂ! – ಬೆರಗಾಗಿ ೧೦೧೦
ದೃಷ್ಟಿಸುತ್ತಿಹೇಯೇಕೆ? – ಬಹುಗುಣಿತ ಜನಗಣದ
ಸಂಸ್ತುತಿಯ ಧವಳ ಧಾರಾ ಸ್ವಾತಿ ವರ್ಷಕ್ಕೆ
ಬಾಯ್ದೆರೆಯುತೆನ್ನ ಹೃದಯದ ಭಕ್ತಿ ಶುಕ್ತಿಯಲಿ
ಮುತ್ತುಗಳ ರಚಿಸಿ ಕೋದಿಹೆ ವರಣಮಾಲೆಯಂ;
ಪ್ರೇಮಾಂಜಲಿಯ ನಿವೇದಿಸಲು ಕಾದಿರುವೆನೈ!
ಹೇಳೆನಗೆ, ಯತಿವರನೆ, ಆ ಕೀರ್ತಿ ಬರಿ ಹುಸಿಯೆ?
ಹುಸಿಯೆಂದು, ಹೇಳೊಮ್ಮೆ ; ಆ ವರಣಮಾಲೆಯನು
ಹರಿದು, ಮುತ್ತುಗಳನೊಡೆದಿಳೆಗದ್ದಿ ಹುಡಿಗೈವೆ!”
“ಬೇಡ ಬೇಡಾ ಸಾಹಸಂ, ದೇವಿ; ಬೇಡುವೆನು.
ಆ ಹೆಸರುಮಾ ಬಲ್ಮೆಯಾ ಧೈರ್ಯವಾ ಕೀರ್ತಿ ೧೦೨೦
ಹುಸಯಿರಲಿ, ಇರದಿರಲಿ; ಕೈಬಿಡದಿರಾತನಂ,
ನೂಂಕದಿರು; ದಿಕ್ಕಿಲ್ಲದಿಹನು ಪರದೇಶಿ ತಾಂ!
ಇದೊ ದೇವಿ, ಮಣಿದ ಮೊಳಕಾಲಿನಲಿ ಸೆರಗೊಡ್ಡಿ
ಶರಣಾರ್ಥಿಯಾಗಿರುವನರ್ಜುನಂ!”
“ಆಃ! ನೀನೆ
ಅರ್ಜುನನೆ?” “ಅಹುದು; ನಾನಾ ಪ್ರೇಮಭಿಕ್ಷಾರ್ಥಿ!
ನಿನ್ನೆದೆಯ ಬಾಗಿಲಿಗೆ ತಿರುಪೆಗಾಗಿಯೆ ಬಂದೆ.”
ಎನುತೆ ಮೊಳಕಾಲೂರಿ, ತೃಷಿತ ದೃಷ್ಟಿಯ ಬೀರಿ,
ಕರಪುಟಾಂಜಲಿಯೆತ್ತಿ, ತನ್ನ ತನುರುಚಿರತೆಯ
ಪದತಲದಿ ಪೂಜೆಗೈವಾತನು ಕಾಣುತಂ ೧೦೩೦
ಕನಿಕರದಿ ಕರಗಿದಳ್ ಚಿತ್ರಾಂಗಿ. ಭಾವದಿಂ
ತಲ್ಲಣಿಸಿತೆದೆಯುರ್ಬ್ಬಿ. ಕಣ್ ತೊಯ್ದುದಿರ್ಪಿನಿಂ.
ಸಯ್ದೇರಿದತ್ತುಸಿರು. ಕಾಯಂ ವಿಕಂಪಿಸುತೆ
ಬೆವರಿದುದು. ಮಣಿದ ಮುಗಿಲಿನ ಮೇಲೆ ಮಳೆಬಿಲ್ಲು
ನಸುಬಾಗಿ, ನಿಲ್ವಂತೆ, ನರನನೆತ್ತಲ್ ಕೊಂಕಿ,
ಮರಳಿ ಹಿಂಜರಿದು, ನೆಟ್ಟನೆ ನಿಮಿರದಳ್ ನಿಂತು
ಕಲ್ಪತರುವಂತೆ. ಸಂಯಮವ ಸಾಧಿಸಿ ಮತ್ತೆ
ನುಡಿದೋರಿದಳ್ ಮನ್ಮಥನ ಶಿಷ್ಯೆ: “ವೀರರ,
ಧರ್ಮಾನುಜಾರ್ಜುನಂ ದ್ವಾದಶಾಬ್ದಂಬರಂ
ಬ್ರಹ್ಮಚರ್ಯವೃತವ ಕೈಕೊಂಡು ಪೃಥ್ವಿಯೊಳ್ ೧೦೪೦
ತೀರ್ಥಯಾತ್ರೆಯ ಮಾಳ್ಪನೆಂಬುದೇಂ ಮಿಥ್ಯೆಯೇಂ?”
“ತಿಂಗಳಿರುಳಿನ ಕತ್ತಲೆಯ ಕಟ್ಟಳೆಯ, ದೇವಿ,
ಕೆಡಿಪಂತೆಯೆಸಗಿರುವೆ ನೀನೆನ್ನ ನೋಂಪಿಯಂ.
ನಿನ್ನಿದಿರೊಳಾವ ನಿಯಮಂ? ಏನು ಸಂಯಮಂ?
ಸುಡುವುದಗ್ನಿಗೆ ಕಟ್ಟು; ವಿಶ್ವಕರ್ತೃವಿನಾಜ್ಞೆ;
ತರಗೆಲೆಯನೆಂತಂತು ಸುಗ್ಗಿಯ ಮುಗುಳ್ಗಳಂ,
ಶವವನೆಂತಂತೆ ಜೀವೆಪ ಹಸುಳೆಯಂ, ದಹಿಸಿ
ತೋರ್ದುಪುದು ನಿಷ್ಪಕ್ಷಪಾತಮಂ; ಆದೊಡಂ
ನಿನ್ನನ್ನರೊಂದು ಕೈಯಿಡೆ ನಿಯಮಮಂ ತ್ಯಜಿಸೆ
ಹಿಂಜರಿಯದೌ! ಪಾಲಿಸುವೆನೆಂತು ನಿಷ್ಠೆಯಂ ೧೦೫೦
ಭಾವರಾಗದ ಜೀವಿ, ಸಹಜ ಸಂಚಲ ನರಂ
ನಾಂ? ಪರಾಜಯಮಿದುವೆ ಪರಮಜಯವಿಂದೆನಗೆ!”
ಕೇಳಿದಳ್. ಮನದಿ ಸಂತೋಷಿಸುತೆ ಬಾಹ್ಯದಲಿ
ಹಗೆನುಡಿಯನಾಡಿದಳ್: “ಪತಿತನಾಗದಿರು, ಯತಿ!
ಹೂಣಿಕೆಯ ನೇಮವನು ಮುರಿದು ಕಾಮಗೆ ನೀಡಿ
ಕಾಣಿಕೆಯನಪಯಶೋದುಂದುಭಿಯ ಮೊಳಗದಿರ್
ನಿನ್ನ ಕೀರ್ತಿಯ ಲೋಕದಲಿ. ಕಾಡಿಗೆಯ ಕಣ್ಣು
ಕತ್ತಲಿಸಿದುದೆ ನಿನ್ನ ಚಿತ್ತಮಂ? ಧೀರ ಮುನಿ,
ಪೈಜೆಯಂ ಪಾಲಿಸುವ ನಿನ್ನ ಧೈರ್ಯವದೆತ್ತ
ಜಾರಿದುದೊ? ಎನ್ನೊಳೇನಂ ಕಾಣುತಿಂತು ನೀಂ ೧೦೬೦
ಧುಮುಕುತಿಹೆ ನಾಯಕದ ನರಕಕ್ಕೆ? ಕೇಳೊರ್ಮೆ
ನಾಂ ಸಾಂದ್ರ ವಿಪಿನ ಕೇಂದ್ರದಿ ಸಂಚರಿಸುತಿರಲ್
ಕ್ಷುಧಿತ ಭೀಷಣ ಭೀಮ ಫಣಿವರ ಕರಾಳತರ
ಕ್ರೂರನೇತ್ರದ ಮೋಹದಾಕರ್ಷಣೆಗೆ ಸಿಲ್ಕಿ
ಕೋಮಲ ಕುರಂಗ ಶಿಶುವೊಂದೊಯ್ಯನೊಯ್ಯನೆಯೆ,
ಸೂಜಿಗಲ್ಲಿನ ಸೆಳೆತಕೊಳಗಾದ ಸೂಜಿಯೊಲು,
ಮೃತ್ಯುಜಿಹ್ವಾರಾಭಿಮುಖಮಾಗಿರ್ದು
ಚೀರಿದತ್ತದಡವಿಯೆ ಮರುಗುವಂತೆ. ಭೀಷ್ಮಫಣಿ
ನೇತ್ರಸೂತ್ರದಿನೆಳೆಯುತಿರೆ ಬಿಗಿದು, ಜಿಂಕೆಮರಿ
ಬಿಡಿಸಿಕೊಳಲೆಳಸಿಯುಂ ಬಿಡಿಸಕೊಳಲಾರದೆಯೆ ೧೦೭೦
ತನ್ನಿಚ್ಛೆಗೆದುರಾಂತೆ ಘೋರಾಹಿ ಮುಖದೆಡೆಗೆ
ಚಲಿಸುದುದು. — ರಕ್ಷಿಸಿದೆನಾನೇಣಶಾಬಮಂ
ಕೊನೆಗದಂತಿರ್ಕೆ! — ನೀನಾ ಮಿಗವಸುಳೆಯೋಲೆ
ಕುರುಡು ಮೋಹದೊಳದ್ದಿ ಮರುಳ್ಗೊಂಡು ನುಗ್ಗುತಿಹೆ!
ನಶ್ವರದ ಪೂಜೆಗೆ ಚಿರಂತನವ ಬಲಿಗೊಡಲು
ಹವಣಿಸುತ್ತಿಹೆ. ಪ್ರೇಮಮಲ್ತು; ಕಾಮದ ಚಿಹ್ನೆ
ಇದು ಕಣಾ! ಕ್ಷಣಿಕ ಸುಖ ಸಂಪ್ರಾಪ್ತಿಗೋಸುಗಂ
ಶಾಶ್ವತಾತ್ಮದ ಬಲಿಯೆ! ಏನಿದೀ ದುರ್ಬಲತೆ?
ಅರ್ಜುನದೇವ, ಮಿಥ್ಯೆ ನಿನ್ನ ಪೌರುಷದ ಕಥೆ!”
“ನನ್ನ ಜೀವನ ಪರಮಪುರಾಷರ್ಥ ರೂಪಿಣಿಯೆ, ೧೦೮೦