ಭುವನೈಕಮೋಹಿನಿಯೆ, ನೀನೆನ್ನ ಸಂಪದಕೆ
ಲಕ್ಷ್ಮಿ; ವಿದ್ಯೆಗೆ ವಾಣಿ; ಪರಮಸೌಂದರಕೆ ರತಿ;
ಸರ್ವಾಭಿಲಾಷೆಗಳಿಗಾಕಾಂಕ್ಷೆಗಳಿಗೆಲ್ಲ
ಚರಮಗತಿ! ನೀನೆ ಶಾಶ್ವತ ಸತ್ಯ; ಪ್ರಾಣೇಶ್ವರಿ,
ನಿನ್ನನುಳಿದೆಲ್ಲವೂ ಬರಿಯ ನಶ್ವರ, ಮಿಥ್ಯೆ!
ನೀನಿಲ್ಲದೆಲ್ಲವೂ ಶೂನ್ಯ ಶೂನ್ಯಂ, ಪೂರ್ಣೆ!
ನೀನಮೃತವೆನಗೆ; ನೀನಿಲ್ಲದಮೃತವೆ ಮೃತ್ಯು!
ನೀ ಮಾಯೆ; ನೀ ಮುಕ್ತಿ! ಜಪ ತಪ ವ್ರತವೇಕೆ
ನೀನೆಯಿರೆ; ಸೊದೆಯ ಸೋನೆಯೆ ಸುರಿಯುತಿರೆ ಮರುಳು
ಕೃಷಿಯೇಕೆ ಉದರಪೋಷಣೆಗೆ! ಕಾಂಚನಖನಿಯ ೧೦೯೦
ಖನನಂ ವೃಥಾ ಪರಿಶ್ರಮವಲ್ತೆ ಸ್ಪರ್ಶಮಣಿ
ಕರದೊಳಿರೆ? ಸುಡರೇಕೆ ತಳತಳಿಸುತಿರೆ ಖಮಣಿ?
ಹೇ ಚಿತ್ತರಂಗಿನಿಯೆ, ನಿನ್ನ ಸಂಗವೆ ಪರಮ
ಮಂಗಲಂ; ಮೋಕ್ಷಮಾಲಿಂಗನಂ! ತೆಗೆ, ಕೀರ್ತಿ
ಬರಿ ಮಾಯೆ! ನೀನೆ ನಿರುತಂ; ಮಿಕ್ಕುದೆಲ್ಲ ಹುಸಿ!”

ನುಡಿದನಿಂತರ್ಜುನಂ. ನೋಡಿದನು ತನ್ನೆದುರು
ನಿಂದೆಸೆವ ಸೌಂದರ್ಯದಿವಮಂ, ತೃಷಾಪೂರ್ಣ
ನೇತ್ರಸೂತ್ರದಿ ಬಂಧಿಸೆಳೆವಂತೆ. ಮದನನುರಿ
ಗಾತ್ರಸಂಪೂರ್ಣದಲಿ ನಾಳನಾಳಂಬೊಕ್ಕು
ದಹಿಸಿದತ್ತಡನೊಡನೆ ರಾಗಾರುಣಜ್ವಾಲೆ ೧೧೦೦
ಪ್ರೋಜ್ವಲಿಸುವೋಲ್ ಉಗ್ರದವಾಗ್ನಿ ತರುನಿಚಯಮಂ
ಕೊಂಡುರಿಯುವಂತೆ ಪೊತ್ತಿದುದು ಚಿತ್ರಾಂಗಿಯಂ
ಪ್ರಣಯ ಪ್ರಲಯ ಶಿಖಿ. ವಿಕಂಪಿಸಿದಳುತ್ಕಂಠೆ.
ನಿಂದುದು ಹರಿವ ಕಾಲಮಂತೆ ನಿಂದುದು ಸೃಷ್ಟಿ
ದೃಷ್ಟಿಸುತ್ತಾ ಮಧುರ ಮನ್ಮಥ ಮಹೂರ್ತಮಂ,
ಕರ್ತಮ್ಯಮಂ ಮರೆತು ತನ್ಮಯತೆಯಿಂದೆ. ವಿಧಿ
ಇಂದ್ರಧನುರಿಂದ್ರಜಾಲಂ ನೆಯ್ದು ಬೀಸುತಿರೆ,
ಮಧುಮದನರೋಕುಳಿಯ ಬಣನೀರನ್ನೆರಚಿ
ಚೆಲ್ಲಿದರ್ ಬೆಂಕೆಯುರಿಗೆಣ್ಣೆಯಂ: “ಪ್ರೇಮನಿಧಿ,
ಪ್ರಾಣೇಶ, ಸೂರೆಗೊಳ್ಳೆನ್ನ ಸರ್ವಸ್ವಮಂ, ೧೧೧೦
ಮೇಣೆನ್ನನಿಲ್ಲಗೈ!” ಎನುತೆ ನಳಿತೋಳ್ಗಳಂ
ನೀಡಿದಳ್ ಚಿತ್ರಾಂಗಿ! ಪ್ರೇಮಾದಲಿಂಗನದಿ
ಶೂನ್ಯವಾಯಿತ್ತೆಲ್ಲವಾನಂದ ವಿಸ್ಮೃತಿಯ
ಭೋಗ ನಿರ್ವಾಣದಲಿ! ಉದುರಿತು ಕುಸುಮವೃಷ್ಟಿ
ಮಲ್ಲಿಗೆಯ ಹೋದರಿಂದೆ, ಮಾತನುಳಿದಿನಿಮುತ್ತುಗಳ್
ತಿರೆಯ ತುಟಿಗಿಳಿವಂತೆ; ತೀಡಿದುದು ತೆಂಗಾಳಿ;
ಎಸೆದುದು ವಿಹಂಗ ಮಂಗಲವಾದ್ಯಮೆತ್ತಲುಂ
ಋತುನೃಪನ ಸಾಲಂಕೃತಾಸ್ಥಾನವೆನೆ ಮೆರೆವ
ಚಾರು ಕಾಂತಾರದ ಮನೋಜ್ಞ ತರುಗೋಷ್ಠಿಯಿಂ:
ಸ್ವರ್ಗ ಮರ್ತ್ಯಂಗಳುಂ ಕಾಲದೇಶಗಳುಂ ೧೧೨೦
ಸುಖದುಃಖ ಜನ್ಮಮೃತ್ಯುಗಳೆಲ್ಲಮೊಂದಾಗಿ
ಮುಳುಗಿರ್ದುವೊಂದನಂತಾನಂದ ರಸಧಿಯಲಿ!

ಇಂತು ಕಾಲದ ಪಕ್ಷಿ ಪಗಲಿರುಳ್ಗಳೆಂಬೆರಡು
ರೆಂಕೆಗರಿ ಬಿರ್ಚಿ ಸುಖಮಧುಸುಧೆಯನೀಂಟುತ್ತೆ
ಹಾರುತ್ತಿರೆ, ನವೀನ ದಂಪತಿಗಳರ್ವರುಂ
ರಸದ ಹರಿಗಲನೇರಿ ಜೇನು ಹೊಳೆಯಲಿ ತೇಲಿ
ಪಯಣಗೈದುರು, ಸೋರ್ಮುಡಿಯ ಹೆರಳು ಮುಂಗುರುಳು
ನುಣ್ಗದಂಪಿಂಪು ಕೆಂದುಟಿ ಎರ್ದೆಗಳೆಂದೆಂಬ
ನಂದನ ದ್ವೀಪ ಬೃಂದಾವನದಿ ಮಾಂದಳಿರ
ತೂಗುಯ್ಯಲೆಯ ಶ್ಯೆಯೆಯಲಿ, ರಾಸಲೀಲೆಯಲಿ! ೧೧೩೦
ಚಿತ್ರವಾಹನ ಪುತ್ರಿಯುಂ ಶಕ್ರತನಯನುಂ
ಮಧುಮದನರಿಂದ್ರಜಾಲದ ಲಲಿತ ಪಂಜರದಿ
ಎಣೆವಕ್ಕಿಗಳ ಹೋಲಿ ಭೊಗಿಸಿದರನುದಿನಂ
ಗೃಹ ಬಂಧು ಮಿತ್ರರಂ ಮರೆದು, ಕರ್ತವ್ಯಮಂ
ತೊರೆದು : ನವಪಲ್ಲವಿತ ವನವನಲೆಯುತ್ತೊರ್ಮೆ,
ಪರಿಮಳಿತ ಪುಷ್ಪಾಪಚಯದಿ ದಾಮವ ರಚಿಸಿ
ಓರೊರ್ವರಿಗೆ ಸುಡತಾನಂದಿಸುತ್ತೊರ್ಮೆ,
ಕಾಮಳ್ಳಿ ಕಾಜಾಣ ಪಿಕಳಾರ ಗಿಳಿ ಚೋರೆ
ಕೋಗಿಲೆಗಳುಲಿಹಕ್ಕೆ ನಲಿಯುತುಂ, ಬಿನದಿಸುತೆ
ಕುಳಿರ ತಿಳಿಗೊಳನ ತಣ್ಣನೆ ಮೀಹದಿಂದೊರ್ಮೆ, ೧೧೪೦
ಇನಿರಸದ ಪಣ್ಗಳಂ ತಿರಿದುಂಡು, ದಿನದಿನಂ
ಬಿಡದೆ ರಮಿಸಿದರಿಂತು. ತಾನೆನಿತೊರ್ಮೆ ಅರ್ಜುನಂ
ನಡುಪಗಲ ಬಿರುಬಿಸಿಲಳುರೆ ಜಗತ್ತೆಲ್ಲಮಂ,
ತರುವರದ ನಿಬಿಡ ಛಾಯಾ ಶೀತಲಾಶ್ರಯದಿ
ಶಾದ್ವಲದ ಮೇಲೆ ಕಿಸಲಯದ ಪರ್ಯಂಕದಲಿ
ಬಿಂಬಾಧರೆಯ ಕೋಮಲಾಂಕದೆಡೆ ಶಿರವಿಟ್ಟು
ವಿಶ್ರಮಿಸಿಕೊಳುತೆ, ಹೇಳುವನು ಪಾಂಡವ ಕಥಾ
ವಿಸ್ತಾರಮಂ. ಕೇಳುತೆ ಮೃಗಾಕ್ಷಿ ಮರೆದಪಳ್
ಬಾಹ್ಯಮಂ. ಮುಗಿಯೆ ಹೊರಗಣ್ಣಲರ್ದಪುದು ಮನದ
ಮಾಯಾಕ್ಷಿ: ಮಿಂಚುವುವು ಚಿತ್ತರಸಭಿತ್ತಿಯಲಿ ೧೧೫೦
ಹಸ್ತಿಪುರಿ ಮೇಣಿಂದ್ರಪ್ರಸ್ಥಾದಿ ನಗರಗಳ್,
ನಾಡುಗಳ್, ಪಾಳಯದ ಬೀಡುಗಳ್ ಕಾಳೆಗದ
ನೋಟಗಳ್; ಪಾಂಡು ಧೃತರಾಷ್ಟ್ರ ಕೌರವ ಭೀಷ್ಮ
ದ್ರೋಣ ಧರ್ಮಜ ಭೀಮ ಕರ್ಣ ದ್ರೌಪದಿ ಶಕುನಿ
ಶ್ರೀಕೃಷ್ಣ ಬಲರಾಮ ನಕುಲ ಸಹದೇವದಿ
ನೆಲದರಿಕೆಯಾಳುಗಳ್! ಆಲಿಸುತ್ತಾಲಿಸುತೆ
ತೇಲಿಹೋಹಳು ಕನಸಿನಲಿ ಚಿತ್ರೆ, ತಾನೆ ತಾಂ
ಕನಸಾಗಿ. ಕುಸುಮ ವನ ಜನಿತ ಪರಿಮಳ ಮಂದ
ಶೀತಲಸಮೀರಣಂ ತೀಡುತ್ತಿರೆ ಕಿರೀಟಿ
ಕಥೆಯ ಹೇಳುತ್ತೆ ಹೇಳುತ್ತೆ ಜೋಂಪಿಸಿ ಮಲಗಿ ೧೧೬೦
ನಿದ್ದೆಗೈಯುವನೊಯ್ಯನೆಯೆ ಕಣ್ಣೆವೆಯ ಮುಚ್ಚಿ.
ನಿದ್ರಿಸುವ ಸೌಂದರ್ಯಮುದ್ರಿಕೆಯ ಕಣ್ದೆಣಿಯೆ
ನೋಡಿ ನಲಿದಪಳಬಲೆ. ಚುಂಬನಕ್ಕೆವೆ ಬಿರ್ಚಿ
ನಗೆಮುಗುಳನಿನಿತು ಅಲರಿಸುತೆ ಕೇಳುವನವಂ:
“ನೀನಾರೆಲೆಗೆ ಚೆನ್ನೆ? ಯಾವ ದೂರದ ದಿವ್ಯ
ಲೋಕದಿಂದಿಳಿತಂದು ಎನ್ನ ಬಾಳನು ಇನಿತು
ಇನಿಗೈದಪೆ? ನಿನ್ನ ಹೆಸರೇನರುಹು. ಸವಿದನು
ಸುಖಿಸುವೆನು. ಕೇಳಿದೆನಿತೊ; ಹೆಸರನೊರೆಯದಿಹೆ!
ಹೆಸರಿಲ್ಲವೇ ನಿನಗೆ? ನೀನೆನಗೆ ತೋರುತಿಹೆ
ಮಧುರಮಾಯಾಸ್ವಪ್ನದಂತೆ. ನಿರುತವನರಿಯೆ. ೧೧೭೦
ಹೆಸರನೊರೆ, ಓ ಎನ್ನ ಸವಿಗನಸೆ, ಮನದನ್ನೆ!”
ಬಾಯ್ದೆರೆಯನರಳಿಸುತೆ ಮರಿಗೋಗಿಲೆಯ ತೆರದಿ
ಚಿತ್ರಾಂಗಿ: “ಹೆಸರೇಕೆ, ಓ ಎನ್ನ ಎದೆಯನ್ನ?
ಬಿಸಿಲ ಬೇಗೆಗೆ ಬಳಲಿ ದಾರಿ ಬಳಿ ತೋಂಟದಲಿ
ಸ್ವಾದು ಚೂತದ ಫಲದ ಕೊಯ್ದುಂಬವಂಗೇಕೆ
ಹೊಲದ ಹೆಸರಿನ ಗೊಡವೆ? ಓ ಎನ್ನ ಉಸಿರೊಲವೆ,
ತನಿವಣ್ಣನುಂಡು ಸವಿ! ಯಾರಾದರೇನಂತೆ
ನಾಂ? ಹೆಸರಿನಲಿ ರಸವೆ? ಹೆಸರಿಲ್ಲದವಳು ನಾಂ.
ಬರಿ ಮಾಯೆ! ಸವಿಸೊನ್ನೆ! ಆದರೇಂ! ಮನದನ್ನ,
ಮಾಯೆ ನನ್ನಿಯ ಮೊದಲ ಛಾಯೆ! ಇಂದಲ್ಲದಿರೆ, ೧೧೮೦
ಎಂದಾದರೊಂದುದಿನವರಿವೆ ನೀಂ, ನಾನಾರು
ಎಂಬುದನು, ಮುಂದೆ.- ನೋಡಿದೊ ಮಧುವಿಪಿನವೆಂತು
ಮುಳುಗಿದೆ ಹಗಲ್ಗನಸಿನಲಿ! ತಣ್ಣನೆಯ ಗಾಳಿ
ತೀಡುತಿಹುದೆಂತು ಬಿಜ್ಜಣವಿಕ್ಕಿ! ನೋಡಲ್ಲಿ
ಬಿಸಿಲ ಹನಿ ಹಸುರಿನಲಿ ತಂಪನೆರಚುತೆ ಕಣ್ಗೆ
ಕುಣಿಯುತಿಹುದೆಂತು! ಆ ಮರದ ಕೊಂಬೆಯಮೇಲೆ
ನವಿಲು ಕುಳಿತಿದೆ ಚಿತ್ರ ಬರೆದಂತೆ! ಆ ಹರಿಣಿ
ತನ್ನ ಮರಿಯೊಡನೆಂತು ಸರಸವಾಡುತಿದೆ! ಅದೊ,
ಬನದ ಮೌನದ ತೂರ್ಯವನೆ ಊದುವಂದದಲಿ
ವನವನಪ್ರತಿಧ್ವನಿತ ಕಳಕಂಠವಾಣಿ! ಆಃ ೧೧೯೦
ಗಿರಿಯಿಂದೆ ಗಿರಿಗೆಂತುಟನುರಣಿತವಾಗುತಿದೆ ಕೇಳ್!”
ಮಧುರವಾಙ್ಮಧುಧಾರೆ ಸೋರೆ, ಫಾಲ್ಗುಣತಾರೆ,
ಆ ನೀರೆ ತಾಂ ಪಾಡೆ ಸ್ವರಸರಸ್ಸಲಿಲದಲಿ
ಕಾಡೆ ತೇಂಕಾಡುವೋಲ್ ಕುಂತಿಯ ತನೂಭವಂ
ಗಾನದಾನಂದ ವೈತರಣಿಯಲಿ ಮುಳುಗಿ ಮೈ
ಮರೆದಪಂ. ಚೈತ್ರವಾಹಿನಿಯಿಂತು ತಾನಾರು
ಎಂಬುದನೆ ರಟ್ಟುಗೈಯದೆಯೆ ಫಲ್ಗುಣನೊಡನೆ
ಕ್ರೀಡಿಸಿರೆಯಿರೆ ಇಕ್ಷುದಂಡ ಕೋದಂಡನಿಂ
ಪಡೆದುಕೊಂಡವಧಿಯದು ಬಳಿಸಾರಿದತ್ತೊಯ್ಯನೆ.
ಮೇಣೋರ್ದಿನಂ ದಿವಸದವಸಾನ ಸಮಯದಲಿ ೧೨೦೦
ಫಲ್ಗುಣಂಬೆರಸಿ ಚಿತ್ರಾಂಗಿ ಬನವೋಗಳಂ
ತಿರಿದಿನಿಯನಂ ಅಲಂಕರಿಸುತುಂ, ಪಣ್ಗಳಂ
ಕುಯ್ದುಕುಯ್ದಾತಂಗೆ ತಿನಲೀಯುತುಂ, ಕ್ರೀಡೆಯಿಂ
ಪುಷ್ಟಿತವ್ರತತಿತತಿಯಿಂ ವ್ರತಿಪತಿಯ ಕಟಿಗೆ
ಸಾರಸನಮಂ ರಚಿಸಿ ತೊಡಿಸುತುಂ, ವ್ರೀಡೆಯಿಂ
ಮುಡಿಸುತುಂ, ಸರಸವಾಡುತ್ತೆ ಸಾರಸವದನೆ
ಮೆಲ್ಲಮೆಲ್ಲನೆ ಬಳಿಯ ಕುತ್ಕೀಲ ಚೂದದ ತುಂಗ
ಶೃಂಗರಂಗಕ್ಕೇರಿದಳ್. ತೋರಿದಳ್ ಪತಿಗೆ
ರಮಣೀಯ ದೃಶ್ಯವೈಶಾಲ್ಯಮಂ: ಗಿರಿಯೊಡನೆ ೧೨೧೦
ಗಿರಿ, ಕಾಡೊಡನೆ ಕಾಡು, ನಗಕಿದಿರು ಕಾನನಂ,
ಕಾಂತಾರಕಿದಿರು ಪರ್ವತಪಂಕ್ತಿ, ವರ್ಧಿಸುತೆ
ಸ್ಪರ್ಧಿಸುತೆ ದೂರದಂಬರದ ಪಾರಂಬರಂ
ನೆರೆ ಪರ್ವಿ ಮೆರೆದಿರ್ದುವಾ ದೃಷ್ಟಿಸೀಮೆಯಲಿ.
ನೋಡುತಿರಲಿರಲರ್ಜುನಂ ಸುಯ್ದು, ಖಿನ್ನತಾ
ಭಾರದಿಂಬಾಗುತೆ, ಕುಬೇರ ದಿಙ್ಮುಖವಾಗಿ
ನಟ್ಟಾಲಿ ಬೀಳ್ವಂತೆ ನಿಟ್ಟಿಸುತೆ ಮೌನಮಿರೆ
ಕಂಡು ಕಾತರೆ ಚಿತ್ರೆ ಸಕುರಣ ಧ್ವನಿಯಿಂದೆ
ಬೆಸಗೊಂಡಳಿಂತು: “ಓ ನನ್ನ ಪ್ರಾಣಪ್ರಭೂ,
ಶೂನ್ಯ ಚುಂಬಿತ- ಅಸ್ತ- ಅಚಲ- ಚೂಡದಿ ವರುಣ- ೧೨೨೦
ದಿಕ್ತಟದಿ ಮುಕ್ತಪಾದಾವಲಂಬಂ ರವಿಯ
ರುಕ್ಮಬಿಂಬಂ ಕ್ರಕಚಿತ ದಿಗಂತರೇಖೆಯಂ
ಮೆಟ್ಟಿ ನಿಂದೆಸೆಯುತಿರೆ ನೀನದೇನಿಂತೇಕೆ, ಪೇಳ್,
ಉತ್ತರ ದಿಶಾವಲಯದತ್ತ ಚಿತ್ತನುಮಾಗಿ
ನಟ್ಟ ನಿಡುನೋಟದಿಂದೇನನಾಲೋಚಿಸಿಹೆ?”
ನಲ್ಲೆಯ ಕದಂಪಂ ಬೆರಳ್ದಳಿರಿಂ ಸವರುತಿಂತು
ಮಾರುತ್ತರಂಗೊಟ್ಟನಿಂದ್ರಜಂ: “ಹೃದಯೇಶ್ವರಿ,
ನೀನೆನ್ನನೇಕಿಲ್ಲಿಗೆಳೆತಂದೆ, ಅಯ್ಯೋ, ಈ
ಎತ್ತರಕೆ, ಮೇಣ್ ಬಿತ್ತರಕ್ಕೆ? ಆ ಕಂದರದ
ಸಂಕುಚಿತ ಜೀವನವೆ ಸುಖದಮಾಗಿರ್ದತ್ತು ೧೨೩೦.
ಅಲ್ಲಿ ನಿನ್ನೊಡಗೂಡಿ ವಿಸ್ತೃತ ಪ್ರಪಂಚವಿದು
ಇಹುದೆಂಬುದನೆ ಮರೆತ ಸೊಗದೊಳ್ ನೆನೆಯದಿರ್ದೆ.
ಅಯ್ಯೊ, ನೀನಿಲ್ಲಿಗೇಕೆನ್ನನೆಳೆತಂದೆ? ಸತಿ,
ಉತ್ತರಾಶಾ ಮೇಖಲೆಯ ದಾಂಟುತೆನ್ನಾಶೆ
ಗರಿಗೆದರಿ ಹಾರುತಿದೆ ಅಗ್ರಜಾವರಜರಂ
ಸಂದರ್ಶಿಸುವ ಸಂಭ್ರಮದಿ. ಇಂದು ನನ್ನೆದೆಯ
ಹಕ್ಕಿ ತುಡಿದಿದೆ ಮದನ ಕನಕ ಪಂಜರದಿಂದೆ
ಬಿಡುಗಡೆಯ ಬಯಸಿ! ಸುಂದರಿ, ನಿನ್ನ ಮನೆಯಲ್ಲಿ?
ತಂದೆತಾಯಿಯರಕ್ಕತಂಗಿಯರ್ ತಮ್ಮದಿರ್
ಬಂಧುಗಳ್ ಬಳಗದವರಾರಿಲ್ಲವೇಂ ನಿನಗೆ? ೧೨೪೦
ನೋಡೆ ನಿನ್ನಂ ಬಯಸುವವರಿಲ್ಲವೇನಲಿ ಪೇಳ್?
ಮೇಣ್ ನೀಂ ನೋಡಲೆಳಸುವರಿಲ್ಲವೇಂ?”

ರತಿಪತಿಯ
ವರದವಧಿ ಕೊನೆಮುಟ್ಟಿಹುದನರಿತು ಚಿತ್ರಾಂಗಿ
ನಿಡುಸುಯ್ದು ಕಡುದುಗುಡದಿಂದೆ: “ಹೃದಯೇಶ್ವರಾ,
ಇಂದಿಂಗೆ ಬೇಸತ್ತೆಯೇನೆನಗೆ? ದಣಿವಾಯ್ತೆ
ನಿನಗಿಂದು? ಇರು, ಇನಿಯ, ನಾಳೆ ಮುಂಬೆಳಗಿನಲಿ
ನಾನಿಲ್ಲವಾದಪೆನ್! ಕನಕಪಿಂಜರದಿಂದೆ
ಹೃತ್ಪಕ್ಷಿ ಮುಕ್ತಿ ಪಡೆದಪುದು! ಮನೆ ನನಗಿಲ್ಲ.
ಹೆಸರಿಲ್ಲ, ನಾನೊಂದು ಕನಸು. ನಿನ್ನೆದೆಯೊಲ್ಮೆ
ಕಾಣುತಿಹೆ ಸವಿಗನಸು. ನಿದ್ದೆಯಿಂದೆಚ್ಚತ್ತು ೧೨೫೦
ನಾಳೆ ನೀಂ ನೋಳ್ಪನಿತರೊಳೆ ಬಿರಿವುದೀ ಮಾಯೆ!
ಆವರೆಗೆ ಈ ಹೂವನೂ ಧರಿಸು ಮಾಲೆಯಲಿ,
ಪ್ರಾಣೇಶ! ಎನಿತೆನಿತೊ ಹೂವುಗಳು, ಇದಕಿಂತ
ಬಣ್ಣದಲಿ ಕಂಪಿನಲಿ ಚೆಲುವಿನಲಿ ನೂರ್ಮಡಿಯ
ಹೂವುಗಳು ನಿನ್ನ ಹಾರದೊಳೊಳವು; ಬಲ್ಲೆನಾಂ!
ಆದೊಡಂ ನಿನ್ನಲಸ ಸಮಯದಲಿ, ಈ ವಿಜನ
ವಿಪಿನದಲಿ, ನಿನ್ನ ಕ್ರೀಡಾವಸ್ತುವಾಗಿರ್ದು,
ಬೇಸರಾಸರ್ಗಳೆದು ಹಗಲಿರುಳು ನಿನ್ನೊಡನೆ
ನಲಿದಾಡಿದೀ ದೀನ ಕಾನನ ಪ್ರಸೂನಂ,
ಹೇ ಕಾಂತ, ಮರೆಯದಿರು; ತೊರೆಯದಿರು!”

ಅರ್ಜುನಂ ೧೨೬೦
ಪೆರೆನೊಸಲನಡಿಗೆ ಚಾಚಿದ ತಿಮಿರಕುಂತಲೆಯ
ಮೈತಬ್ಬಿ, ಗದ್ಗದಿತ ಕರುಣಾರ್ದ್ರವಾಣಿಯಿಂ:
“ಹಗಲಿರುಳನೆಂದಿಗೂ ಕೈಬಿಡದು, ಕಾಮಿನಿಯೆ;
ಉದಯಸ್ತ ಹಸ್ತ ಸಂಸರ್ಗದಿಂ ಪೃಥ್ವಿಯಂ
ಸುತ್ತುವರ್ ದಿನದಿನಂ ಚಿರ ರಾಸಕೇಳಿಯಿಂ!
ಅಂತ ನಾವಿರ್ವರು! ಚಿಂತೆ ನಿನಗೇಕೆ, ಸಖಿ?”
ಪದ್ಮದಲದಿಂ ಶಿಶಿರಬಿಂದು ಬಸಿವಂದದಲಿ
ಕಂಬನಿಗಳುರುಳೆ ಹನಿಹನಿ ಮುತ್ತು ಮುತ್ತಾಗಿ,
ಮೃಗನೇತ್ರೆ ಶುಭಗಾತ್ರೆ ನುಡಿದಳಿಂತಾ ಚಿತ್ರೆ:
“ಪೃಥಿವೀಂದ್ರ, ರತಿವರನ ವರಮಹಿಮೆಯಿಂದಾದ ೧೨೭೦
ಸೌಂದರ್ಯವಿದು ನಶಿಸುವುದು ನಾಳೆ; ಋತುನೃಪಂ
ಬಿಟ್ಟ ಕಾನನ ರಾಜಿಯಂತೆವೋಲಾದಪೆಂ!
ಹಿಂದೊರ್ಮೆ ನೂಂಕಿದಂದದೊಳೆನ್ನನಿನ್ನೊರ್ಮೆ
ಹಳಿಯುವೆ ಕಿರಾತ ಕನ್ನಿಕೆಯೆಂದು; ಮಾಯೆಯಿಂ
ನೋಂಪಿಯಂ ಕಿಡಿಸಿ ವಂಚಿಸಿದ ಶಾಕಿನಿಯೆಂದು!
ನೀನಿಲ್ಲಿಗೈತಂದ ಪ್ರಥಮಾ ನಿಶೀಥದಲಿ
ಶೀತಕಿರಣಸ್ನಾತ ಶುಭ್ರೋರ್ಣದಭ್ರತತಿ
ವಿಭ್ರಾಜಿಸಿರೆ, ಹುತಾಶನ ಮುಂದೆ ತರುತಲದ
ನಿನ್ನೆಡೆಗವಂದ ನಾಣಿಲಿ ನಿಶಾಚರಿಯು ನೆನೆ!
ಪರಿಭೂತೆಯವಿನೀತೆ ಲಜ್ಜೆಯಿಲ್ಲದ ಧೂರ್ತೆ ೧೨೮೦
ನಾನಾ ಕಿರಾತೆ! ಶ್ರೀ ಮದನ ಪ್ರಾಸಾದದಿಂ
ನಿನ್ನ ಹೃದಯವನೊಂದು ಮಾಸಂಬರಂ ಗೆಲ್ದು
ಸಗ್ಗವನೆ ಸೂರೆಗೊಂಡಾಕೆ! ಓಪನೆ, ಪಾಪಿ
ಇವಳೆಂದು ಕೋಪಿಸದೆ ಕಾವುದೈ. ಕಂಪಿಸಿದೆ
ನನ್ನೆದೆ ಅಮಂಗಲದ ಭೀತಿಯಿಂ!” ವಿಸ್ಮಿತಂ
ಸಸ್ಮಿತವದನನಾಗಿ ಕಥೆಗೇಳುತೆ ಕಿರೀಟಿ
ರಮಣಿಯಂ ಸಂತೈಸುತಿರೆ, ದೂರ ಬಹುದೂರ
ಕಂದರ ಪ್ರಾಂತದಲಿ ದೇವೇಂದ್ರ ದಿಕ್ಕಿನೆಡೆ
ಮೆಲ್ಲಮೆಲ್ಲನೆ ದಟ್ಟಯಿಸುತಿರ್ದ ಕತ್ತಲೆಯ
ಮರ್ಬಿನಲಿ ಮಿರುಗಿದವು ಸಾಸಿರ ಸೊಡರ್ಮಾಲೆ, ೧೨೯೦
ಮಳೆಬಿದ್ದ ಮಲೆನಾಡಿನಡವಿಯಲಿ ಕವಿದುಬಹ
ಕಾರ್ಗತ್ತಲೆಯ ಗರ್ಭದೊಳ್ ನಿಬಿಡ ವೃಕ್ಷಲತೆ
ಮಸಿಮುದ್ದೆಯಾಗಿರುವ ಮೌನದೇಕಾಂತದಲಿ
ಲಕ್ಷೋಪಕ್ಷ ಖದ್ಯೋತ ಸಂಕುಲರಾಶಿ
ಮೆರೆವಂತೆ, ಮೇಣ್ ಕರ್ದಿಂಗಳಾಗಸದಲ್ಲಿ
ಅಮೃತಪಥದಲಿ ಹೊಳೆವ ತಾರಾಸ್ತಬಕ ಮಹಾ
ಸ್ತೋಮದಂತೆ! ಕೌತುಕದೊಳವಲೋಕನಂಗೈದು
ದೀಪಾಳಿಯಂ, ಪ್ರಶ್ನಿಸಿದ ದಿವಿಜೇಂದ್ರಸೂನುವಿಗೆ
ತರುಣಿಯೆಂದಳ್ ನಗುತೆ: “ಮಣಿಪುರದ ಭೂಪಾಲ
ಚಿತ್ರವಾಹನ ತನಯೆ, ಪಾರ್ಥಿವ ಮಹಾವೀರೆ, ೧೩೦೦
ಚಿತ್ರಾಂಗದೆಯ ಬಿಟ್ಟ ಪಾಳೆಯವ ಬೀಡಿನಲಿ
ದೀಪಗಳ್ ಜ್ವಲಿಸುತಿವೆ!” ಎನೆ ಕುತೂಹಲದಿಂದೆ
ಕ್ಷಾತ್ರರಮಣಿಯ ಕಥಾ ತೇಜದೇಳ್ಗೆಯಂ
ಕೇಳ್ವಾತುರದಿ ಪೃಥಾನಂದನಂ ಬೆಸಗೊಳಲ್,
ಹೇಳಿದಳು ಚಿತ್ರೆ ಪಾರ್ಥಂಗೆ ರೋಮೋದ್ಗಮಂ
ಸಂಭವಿಸುವಂತೆ. ಸತಿ ಹೇಳುತಿಯಯಿರೆ, ನರಂ
ಕೇಳುತಿರುತಿರಲೆದ್ದುದೊಂದು ರಕ್ಕಸ ಗಾಳಿ
ತ್ರಿಭುವನವನಲುಗಿಪಾ ಪ್ರಲಯಪ್ರಭಂಜನೆನೆ
ಗಿರಿವನವ್ವಳಿಸಿ, ನಾಶದಾವೇಶದಿಂ
ಬೀಸಿ. ಭೂಧರಮೆ ಶಿರವೊಲೆದುದೆನೆ ವಿಪಿನಾಳಿ ೧೩೧೦
ತೂಗಿದತ್ತೆಡಬಲಕೆ. ನೈಕ ಶತಮಾನದಿಂ
ಭೀಷ್ಮ ಪವಮಾನಹತಿಯಂ ಪ್ರತಿಭಟಿಸಿ ಮಲೆತು
ನಿಮಿರಿರ್ದ ಗರುವ ತರುವರಕುಲಂ ಮೂಲಮಂ
ತಿರಿಪಿ ಮೀಂಟಿದವೋಲ್ ನೆಲಕ್ಕುರುಳಿದುವು, ಪೊದರ್
ಗಿಡುಗಳಂ ಪುಡಿಗೈದು, ರೌರವ ಮಹಾರವಂ
ಕಾಡೆ ಕೂಗಿಡುವಂತೆ ಪೊಣ್ಮೆ. ಮಂತ್ರಿಯ ಮುಂದೆ
ಮಂತ್ರಕೆ ಬೆದರುತೋಡುವ ಮರುಳ್ಗಳನೆ ಹೋಲಿ
ಧೂಳಿ ತರಗೆಲೆ ತೃಣಂ ಕಸಕಡ್ಡಿಗಳ ಹಿಂಡು
ಚೆದುರಿದುದು ನಾನಾದೆಸೆಗೆ ನುಗ್ಗಿ. ಒಡನೊಡನೆ
ವರುಣ ಹರಿದಂತದಿಂದೆದ್ದುದು ನಭಶ್ಯಿರಕೆ ೧೩೨೦
ಕಾರ್ಮುಗಿಲ್ ಕರ್ಬೊಗೆಯ ಪೆರ್ಬಂಡೆಯಂತುರ್ಬಿ,
ದುಶ್ಯಕುನ ಛಾಯೆಯಂತೊಯ್ಯನೊಯ್ಯನೆ ಪರ್ವಿ
ಗಗನದಾದ್ಯಂತಮಂ. ಕೆಮ್ಮಿಂಚು ಹೊಮ್ಮಿಂಚು
ಕುಡು ಮಿಂಚು ಕುಡಿಮಿಂಚು ಗೆರೆ ಬಳ್ಳಿಮಿಂಚುಗಳ
ಗೊಂಚಲ್ಗಳೆತ್ತಲುಂ ಕಾರ್ಮೊಡಮೊತ್ತದಲಿ,
ಕಾರೆಂಬ ಕಾಳಾಹಿಯಗ್ನಿ ಜಿಹ್ವೆಗಳಂತೆ,
ಸಂಚಲಿಸಿ ಚಂಚಲಿಸಿ ಮಿಂಚಿ ಮುಂಚುತೆ ಹಿಂಚಿ
ರಂಜಿಸಿದುವತಿಭಯಂಕರ ಶಂಕರತೆವೆತ್ತು.
ನಡುನಡುವೆ ದಿಗ್ಭಿತ್ತಿಗಳ ಬೆಸುಗೆ ಬಿರಿವಂತೆ
ನಿರ್ಘೋಷಿಸಿತು ರೋಷದಿಂದಶನಿ, ಕಂಪಿಸುವವೋಲ್ ೧೩೩೦
ಗಿರಿವನಸ್ಥಿರ ಧರಾಮಂಡಲಂ! ಸನ್ನಿಹಿತ
ವರ್ಷಭೀಷಣ ಮುಖಕೆ ಬೆದರಿ, ಕಾರ್ಗತ್ತಲೆಯ
ವನಮಧ್ಯೆ, ದಂಪತಿಗಳಿರ್ವರುಂ ಬೇಗದಿಂ
ಶಿವಗುಡಿಗೆ ನಡೆದರುದ್ವೇಗದಿಂ. ಭೋರೆಂದು
ಕಾರು ಕಾರ್ಡತ್ತಾಲಿಕಲ್ಗವಣೆಗಳನೆಸೆದು
ಪೊಡವಿಯಡವಿಯ ಹೊಡೆಗೆ! ಹೊರಗೆ ಕತ್ತಲೆ ರಾತ್ರಿ
ಸಿಡಿಲ್ಮಂಚು ಗುಡುಗು ಮಳೆಯಗುರ್ವುವಡೆದಿರುತಿರಲ್
ಚಿತ್ರೆ ಸಿತವಾಹಂಗೆ ಚಿತ್ರಾಂಗದೆಯ ಕಥೆಯಂ
ಚಿತ್ರಿಸಿದಳಬಲಾಸುಲಭ ಕಲಾಧ್ವನಿಯಿಂದೆ.
ಮುಳ್ಳುಮೊನೆಗೆಡೆಯಿಲ್ಲದಂದಧಿ ಧರಿತ್ರಿಯಂ ೧೩೪೦
ತೀವಿರ್ದುದಿರಿವ ಕಲ್ಗತ್ತಲೆ. ಮುಸಲಧಾರೆ
ಪೊಯ್ದತ್ತವಿಚ್ಛಿನ್ನಮಾಗಿ, ಭೈರವ ಗಾಳಿ
ಮರ್ದಿಸೆ ಹುಹುಂಕೃತಿಯೊಳಡವಿ ಗೋಳಿಡುವವೋಲ್!

ಇಂತಿರುಳು ಸಾಗುತಿರೆ, ಕಥೆ ಮುಗಿಯಲರ್ಜುನಂ
ಲಲಿತೆಯಂ ಮುದ್ದಿಸುತೆ ಮಾತು ಮಾತಿನ ಮಧ್ಯೆ,
ಮರುದಿನಂ ಪೊರಮಟ್ಟು ತೀರ್ಥಯಾತ್ರೆಯ ಮುಗಿಸಿ
ತಿಂಗಳಾರಕೆ ಮರಳಿ ಬಹೆನೆಂದು ನುಡಿಯಿತ್ತು,
ಕಷ್ಟದಿಂದೆಂತಾನುಮವಳನೊಡಬಡಿಸಿದಂ
ಪ್ರಣಯಪ್ರಯತ್ನದಿಂ. ಕಂಬನಿಯ ಸೂಸುತ್ತೆ,
ಕಾಂತನಂ ನಳಿತೋಳ್ಗಳಿಂದೆ ಬಿಗಿಯಪ್ಪುತ್ತೆ, ೧೩೫೦
ಪತಿದೇವನಂ ಬಿಡುವ ಮನಸಿಲ್ಲದೆಯೆ ಬಿಡಲ್
ಸಮ್ಮತಿಯಿತ್ತಳಾಕೆ. ಪವಡಿಸಿದರಿರ್ವರುಂ
ಮೊಗಕೆ ಮೊಗಮೆರ್ದೆಗೆ ಎರ್ದೆಯಿಟ್ಟು ಆಲಿಂಗನದ
ಸುಖಲಹರಿಯಲಿ ತೇಲಿ : ಕರಗಿತು ಕಡೆಯ ರಾತ್ರಿ!