ಬ್ರಹ್ಮಮಾನಸ ಮಹದ್‌ಗರ್ಭಂಸಂಭವೆ, ವಿರಾಟ್

ಪ್ರಭವೆ, ಭವ್ಯಾನಂದ ವಿಭವೆ, ಶಾರದೆ, ವರದೆ,
ಭಾವಚಿಂತಾಖನಿಯೆ, ಶಿಖಿವಾಹನೆಯೆ, ವಾಣಿ,
ಭುವನ ಮೋಹನ ಮಧುರ ದಿವ್ಯ ವೀಣಾಪಾಣಿ,
ವಾಗ್ದೇವಿ, ಸರಸ ಕವಿತಾ ಕಲಾ ಕಲ್ಯಾಣಿ,
ತುಂಬುವೆನು ನಿನ್ನಮಲ ಪಾದಪಂಕೇಜದಲಿ
ಮುಂಗುರುಳ್ದುಂಬಿಗಳನೆಲೆ ತಾಯೆ, ಕೃಪೆಗೈದು
ಕಂದನಂ ಕಾರುಣ್ಯದಿಂ ಕಂಡು, ಜಡಮತಿಗೆ
ದಿವ್ಯ ವೈದ್ಯುತ ಚೇತನವನಿತ್ತು ನಲಿದೊಲಿದು
ನರ್ತನಂಗೈಯೆನ್ನ ಜಿಹ್ವೆಯಲಿ. ನಿನ್ನಿಂದೆ, ೧೦
ಹೇ ಕಾವ್ಯಕಾಮಿನಿಯೆ, ಭುವನ ಸ್ವರ ಮೇಲನದಿ
ನಿಯಮ ಸಂಯಮ ಪೂರ್ಣ ಮಾಧುರ್ಯವುಕ್ಕುತಿದೆ
ಸ್ವಚ್ಛಂದಮಾನಂದ ಶೀಲಂ! ಆ ಸ್ಫೂರ್ತಿಯಂ
ದಯಪಾಲಿಸೆನಗೆ ನಾನುಲಿಯಲಿಹ ಗಾನದಲಿ
ಸ್ವಾತಂತ್ರ್ಯ ಮಾಧುರ್ಯ ಸಂಯಮಂಗಳ್ ಪೊಣ್ಮಿ,
ನನ್ನ ಕನ್ನಡನಾಡಿನೆರ್ದೆವೂವರಳ್ವವೋಲ್.

ಓ ಕಲ್ಪನಾ ಸುಂದರಿಯೆ, ನಿನ್ನ ಮಹಿಮೆಯೊಳೆ
ವ್ಯಾಧನಾದಂ ಪ್ರಥಮಕವಿ! ಪಸುಳೆ ನಾಂ, ತಾಯೆ,
ನೀನೊರ್ಮೆ ಚುಂಬಿಸಲ್ಕೆನ್ನೀ ತೊದಲ್ವ ತುಟಿ
ಗಾನಗೈಯದೆ ಪೇಳ್ ಬೃಹತ್ ಕಾವ್ಯ ಸಂಗೀತೆಯಂ? ೨೦
ಮಲಿನಮುಕುರಂ ಮಹಾಸೂರ್ಯನಂ ಕನ್ನಡಿಸಿ
ತಿರೆಗೆ ಕಾಂತಿಯಲೆಳಸಿ ಹಿಗ್ಗುವ ತೆರದಿ.
ಪಸುಳೆ ತಾನಾ ದೂರದರಿಲಂ ಪಿಡಿದು ತನ್ನ
ಕೈದೀವಿಗೆಯ ರಚಿಸಲಾಟಿಪೋಲ್, ಉನ್ನತ್ತ
ಸಾಹಸಿ ದಿಗಂತಮಂ ಬೆಂಬತ್ತಿ ತುಡುಕುವೋಲ್,
ವಾಲ್ಮೀಕಿ ವ್ಯಾಸಾದಿ ಪಂಪ ರನ್ನರ ದಿವ್ಯ
ಕೀರ್ತಿಕಾಮಿನಿಯಡಿಗಳಮಲತರ ಧೂಳಿಯಂ
ಶಿರದೊಳಾನುವ ಪುಣ್ಯಮಂ ಬಯಸಿ, ಹೇ ದೇವಿ,
ನಿನ್ನನೆದೆತುಂಬಿ ಪ್ರಾರ್ಥಿಸುವೆ: ಕೃಪೆದೋರ್ದೆನಗೆ
ನಿನ್ನ ವೀಣಾವಾಣಿಯಂ ನೀಡು, ಓತಾಯೆ! ೩೦

ಏಳು, ವೀಣೆಯೆ, ಏಳು! ಹೇಳು ಮುಂದಿನ ಕಥೆಯ,
ಹೇ ಅಮೃತ ಭಾಷಿಣಿಯೆ! ಸಂಧ್ಯಾವಿಯತ್ತಳದೊಳ್
ಆರಕ್ತ ಜೀಮೂತ ಪರಿವಾರವೇಷ್ಟಿತಂ
ದಿವಸಮಣಿ ಪಶ್ಚಿಮಾಂಬುಧಿಗಿಳಿಯೆ, ಕತ್ತಲೆಯ
ಪಾಳೆಯಂ ಬೀಡುಬಿಡೆ ಧಾತ್ರಿಯಲಿ, ಮೈದೋರೆ
ತಾರೆಗಳ್ ನಿಶೆಯ ವಸನದ ಕಾಂತಿಕುಸುಮಗಳ್,
ಮೃಗಯಾವಿನೋದದಿಂ ಬಲು ಬಳಲಿದಾ ತರುಣಿ,
ಚಿತ್ರಾಂಗಿ, ಬನದ ದೇಗುಲಕೊಯ್ಯನೈತಂದು,
ಬಳಿಯ ಕೊಳದಲಿ ಮಿಂದು, ಹಣ್ಣು ಹಂಪಲು ತಿಂದು,
ಮಲಗಿದಳ್ ಕಠಿನ ಶಯ್ಯೆಯ ಮೇಲೆ ಕೋಮಲೆ ೪೦
ಶಿವಾಲಯದುಪಲತಲದಿ. ಹೇ ಅಮೃತಭಾಷಿಣೆಯೆ,
ಹೇಳು ಮುಂದಿನ ಕಥೆಯ! ಏಳು, ವೀಣೆಯೆ, ಏಳು!

ನಿದ್ರಾಂಗನೆಯ ಪರಮಸಖಿ, ಸ್ವಪ್ನಸುಂದರಿ,
ವಿಭಾವರಿಯ ನಕ್ಷತ್ರ ಖಚಿತಾಂಬರವನುಟ್ಟು
ಕಾಮಧನು ಸೂತ್ರದಾ ಕಟಿಬಂಧನವ ತೊಟ್ಟು
ಭೂಯಾತ್ರೆ ಗೈಯುತಿರೆ — (ಮೋಹನ ವಸಂತದೊಳ್
ಪೂವಿಂದೆ ಪೂವಿಂಗೆ ಪರಿಮಳವನರಸುತ್ತೆ
ಮಧುಸಮಿರಣನಲೆಯುವಂತೆ) — ಕಂಡಳು ಬನದ
ಗುಡಿಯ ಕಲ್ಲಿನ ನೆಲದೊಳೀಶ್ವರಾರ್ಪಿತ ಕುಸುಮ
ಸನ್ನಿಭಳ್ ಚಿತ್ರಾಂಗಿಯಂ. ಮೆಚ್ಚಿ ನಿಂದಳು ದೇವಿ, ೫೦
ಸ್ವಪ್ನ ಸಾಮ್ರಾಜ್ಯದಾ ಚಕ್ರವರ್ತಿನಿಯಾಕೆ,
ಸ್ವಪ್ನ ಮಧು ಮಾಯೆಯಂ ಬೀಸಿ ರಮಣಿಯ ಮನಕೆ,
ಯಾಮಿನೀಪ್ರಿಯಸಖಿಯೆ, ಹೇ ಸ್ವಪ್ನಕಾಮಿನಿಯೆ,
ಲಲನೆಯಾತ್ಮದೊಳಾವ ಕಮನೀಯ ನಾಕಮಂ
ಕಟ್ಟುತಿಹೆ ತೋರ್:

ನಿಬಿಡ ನೀರವ ಕಾನನಾಂತರಂ
ನಡುವಗಲ ಮಾರ್ತಾಂಡನುರವಣೆಯನಡಗಿಸುತೆ
ತಂಪು ಬನಗತ್ತಲೆಯ ಭೀಷ್ಮ ಸಮ್ಮೋಹನದಿ
ಮೆರೆದತ್ತು ಚಿತ್ರಗತವಾದಂತೆವೋಲ್ ನಿಶ್ಚಲಂ.
ಬಲೋನ್ಮತ್ತ ದೈತ್ಯ ಬಾಹುಗಳಂತೆ, ಸುತ್ತಲುಂ
ಭೀಮ ಭೀಷಣ ಕುಟಿಲ ಜಟಿಲ ವಿನ್ಯಾಸದಿಂ ೬೦
ಶಾಖಾ ಮಹಾ ಶಾಖೆಗಳ ಬೀಸಿ, ಸ್ವಚ್ಛಂದದಿಂ
ಬೆಳೆದಿರ್ದುವಲ್ಲಿ ಭೂಜೇಶ ಕುಲ ಕೀರ್ತಿಗಳ್
ಲಕ್ಷೋಪಲಕ್ಷವಾಗಿ. ಬಳ್ಳಿದಿಂಡುಗಳಲ್ಲಿ
ನಿಮಿರಿದುವು ಜೋಲುತಿಹ ಹೆಬ್ಬಾವುಗಳ ಹೋಲಿ
ದೀರ್ಘ ವಕ್ರಾಕಾರದಲಿ. ಹುದುಗಿ ಅಲ್ಲಲ್ಲಿ
ಛಾಯಾ ವಿರೂಪಗಳ್ ಹುದುಗಿದುವು, ದಿನಮಣಿಯ
ಬೆದರಿಕೆಗೆ ಕಾನನವ ಮರೆಗೊಂಡ ಕತ್ತೆಲೆಯ
ಕುಲದಂತೆವೋಲ್, ಕರದಿ ಬಿಲ್ಲಂ ಪಿಡಿದು, ಮೇಣುಟ್ಟು
ಮಲ್ಲಗಚ್ಚೆಯ ಪೀತವಸನಮಂ, ತಿರುಗುತಿರೆ
ಚಿತ್ರಾಂಗಿ, ಕಾನನದ ರಾಣಿ ತಾನೆಂಬವೊಲ್, ೭೦
ಬನಗತ್ತಲೆಯ ಕರ್ಮುಗಿಲ್ಗೆ ಕಣ್ಮಿಂಚೆಸೆದು
ಚಿಮ್ಮಿದುದು ಜಿಂಕೆಮರಿಯೊಂದು ಹೊದರೊಡಲಿಂದೆ,
ಕರಿಮುಗಿಲ್ಲಬ್ಬದಿಂದೊಗೆವ ಮರಿಮಿಂಚೆನಲ್
ತಿರಿಕವಣೆಯಿಂ ಪಳಂಚುವ ರತ್ನಶಿಲೆಯಂತೆ.

ತೆಕ್ಕನೆಯೆ ಬೆಂಬತ್ತಿದಳ್ ಕನ್ಯೆ : ದಿಟ್ಟಯನೆ
ಮಿಕ್ಕು ಮಿರುವ ಜವದಿ ಮುಟ್ಟಿ ಮುಟ್ಟದೆ ನೆಲಂ
ಮೆಟ್ಟಿ ಮುಂಚುವ ಹರಿಣಶಿಶುವ ಸೌಂದರ್ಯಕ್ಕೆ
ಬಗೆಸೋತು, ಎದೆಯೋತು, ಮುದ್ದಿನಾ ಮುದ್ದೆಯಂ
ಇಂದಿನಿತು ನೋಯಿಸದೆ ಹಿಡಿವೆನೆಂಬಾತುರದಿ
ಕಲ್ಮುಳ್ಳು ಹಳ್ಳಕೊಳ್ಳವ ಹಳುವನೊಂದುಮಂ ೮೦
ಲೆಕ್ಕಿಸದೆ, ತೆಕ್ಕನೆಯೆ ಬೆಂಬತ್ತಿದಳ್ ಕನ್ನೆ :
ಚೈತ್ರಪ್ರಭಾತದಲಿ ಪೂರ್ವದಿಕ್ತಟದಲ್ಲಿ
ಉದಯನದಿ ಬೆಳ್ವೊನಲ್ ಪ್ರವಹಿಸೆ ಜಗಂಗಳಿಗೆ
ಕದಿರ ಚೀರ್ಕೊಳವಿಯಲಿ ಹೊನ್ನೀರನೆರಚುತ್ತೆ,
ಮಲೆಯ ಹೂದೋಂಟದಲಿ ತಂಬೆಲರ ತೀಟಕ್ಕೆ
ತಲೆದೂಗಿ ನಲಿದು ತೆರೆತೆರೆಯಾಗಿ ನಗೆಬೀರಿ
ನೆರೆದಿರಲ್ ಬಣ್ಣ ಬಣ್ಣದ ಕುಸುಮ ಪರಿಷತ್ತು,
ರೆಕ್ಕೆ ಬಂದಿಹ ಹೂವಿನಂತೆ ಬಣ್ಣದ ಚಿಟ್ಟೆ
ಪುಷ್ಪದಿಂ ಪುಷ್ಪಕ್ಕೆ ಹಾರಿ ಬಂಡನು ಹೀರಿ
ಕಂಗೊಳಿಸುತಿರೆ, ಕಂಡು ಬಾಲೆಯೊರ್ವಳ್ ಸೋತು ೯೦
ತುಡುಕಲದನೆಳಸುವಳ್ : ಸುಂದರ ಪತಂಗವದು
ರಾಮನಂ ಮೋಹಿಸಿದ ಮಾರೀಚನಂದದಲಿ
ಸಿಲುಕಿದಂತೊಮ್ಮೆ ಸಿಲುಕಿದ ತೆರದಿ ಚಿಮ್ಮುತ್ತೆ
ಪೀಡಿಸುತೆ ತುದಿಗೆ ಮಂಗಳಮಾಯವಾದಪುದು.
ಬಯಕೆ ಕೈಗೂಡದಾ ಬಾಲೆ ಹನಿಗಣ್ಣಾಗಿ
ನಿಡುಸುಯ್ದು ನಿಲ್ಲುವಳ್, ಕಂಬನಿಯೊಳಿನ್ನೊಂದು
ಹೊಂಗನಸು ಕಾಂಬಳೆಂಬಂತೆ.

ಬೆಂಬತ್ತಿದಳ್
ಚಿತ್ರಾಂಗಿ ತಾನಂತೆವೋಲ್ ಹೊಮ್ಮಿಗವರಿಯ ಹಿಂದೆ.
ಕಂದರಂಗಳನಿಳಿಯುತದ್ರಿಶಿಖರವನೇರಿ,
ನೆಗೆದು ಹಳ್ಳವ ದಾಂಟಿ, ಕೊಳ್ಳಕೊಳ್ಳವ ಧುಮುಕಿ, ೧೦೦
ಮುಳ್ಳುಹೊದರೊಳು ನುಗ್ಗಿ, ಮೈ ಬಟ್ಟೆ ಗೀರುತ್ತೆ,
ದಟ್ಟ ಹಳುವಂ ನುಸಿದು, ಬೆದ್ದ ಮೆಳೆಯೊಳು ಜುಣುಗಿ,
ಬಯಲ ಬೆಳೆದಿರುವೊಣಗು ಹುಲ್ಲಿನಲಿ ಕಿಬ್ಬಿಯಲಿ
ಕೆಸರಿನಲಿ ಹಾದು ಹಾದೇದುತ್ತೆ, ಚಲದಿಂದೆ
ಧಾವಿಸಿದಳಂಗನೆ, ಮಿಗದ ಹೊಲಬನೆ ಹಿಡಿದು.
ತೊಳಲಿ ಬಳಲಿ. ಬೆಮರಿದಳ್ ಬೇಂಟೆಯಾಯಾಸದಿಂ
ಚಿತ್ತದುದ್ವೇಗದಿಂದಾ ಪೃಥಿವೀಶನಂದನೆ
ಕನಸಿನೊಳೆ ಕುದಿದು ಕಾಯ್ದು. ಎನಿತು ಬೆನ್ನಟ್ಟಲೇಂ?
ಎನಿತು ಧಾವಿಸಲೇನು? ವ್ಯರ್ಥಮಾದುದು ತುದಿಗೆ,
ಯುಕ್ತಿಯಿಂ ಬ್ರಹ್ಮಮಂ ಸಾಧಿಸೆ ಪ್ರಯತ್ನಿಸುವ ೧೧೦
ತರ್ಕದ ಬಯಕೆಯಂತೆ! ರಮಣಿ ನಿಂತಳ್ ಸೋಲ್ತು :
ಸುಯ್ಲಿನಿಂದಾಕೆಯಾ ತುಂಬೆದೆಗಳೇತಿರೆ
ಬೀಳುತಿರೆ, ನೋಡಿದಳ್, ದೂರ ದಿಟ್ಟಿಯನಟ್ಟಿ :
ಮಿಂಚುತಿರ್ದುದು ಜಿಂಕೆಮರಿ ಗಿರಿಯ ಕಂದರದ
ಸುಂದರಾಬೋಗದಲಿ, ಹಸುರು ಹಿನ್ನೆಲೆಯಲ್ಲಿ
ಹೊನ್ನ ಹನಿಯಂತೆ, ಪಾರ್ಥಿವಕುಲಾಂಗನೆಯಲ್ತೆ?
ರೋಷದಿ ಹತಾಶೆಯಿಂ ಮೂಡಿದಾಟೋಪದಿಂ,
ಕೋಪದಿಂ, ಬತ್ತಳಿಕೆಯಿಂ ಸೆಳೆದು ಬಾಣಮಂ
ಪೂಡಿದಳ್ ತಿರುವಿಂಗೆ, ಕೊಲ್ಲೆನಾಂ ಕೊಳ್ವೆನೆಂದು.
ಗುರಿನೋಡಿದುದೆ ತಡಂ ಬೆಚ್ಚಿಬಿದ್ದಳು ಕನ್ಯೆ ೧೨೦
ಅದ್ಭುತ ಪವಾಡಮಂ ಸಂದರ್ಶಿಸಿದ ವೀರ
ವಿಜ್ಞಾನಿಯೊಲ್ ಬೆಪ್ಪುಬೆರಗಾಗಿ!

ಮತ್ತಾವ
ಮಾಯೆಯಂ ಮಥಿಸಿದೌ ನಿದ್ರಾಸಮುದ್ರದಲಿ,
ಓ ಸ್ವಪ್ನ ಸುಂದರಿಯೆ? ಸೃಷ್ಟಿಸಲ್ ತೊಡಗಿದರೆ
ನಿನ್ನ ಮಾಯಾಕುಂಚದಿರೆಲ್ಲಿ? ಎಣೆಯೆಲ್ಲಿ?
ದೇಗುಲದ ಕಲ್ನೆಲದಿ ಮಲಗಿಹ ತಳೋದರಿ
ಅದೇಕಿಂತು ಕಂಪಿಪಳ್? ಕಾಣುತಿಹಳೇನಾಕೆ? ತೋರ್.
ಹೊಮ್ಮಿಗದ ಮರಿಯೆಲ್ಲಿ? ಗಿರಿಗಹ್ವರಗಳೆಲ್ಲಿ?
ಹಳುವೆತ್ತ? ಹೊದರೆತ್ತ? ಕಂಗೊಳಿಸುತಿದೆ ಮುಂದೆ
ನಾಕ ವೈಕುಂಠ ಕೈಲಾಸ ಲೋಕಂಗಳನೆ ೧೩೦
ತಲೆಮೆಟ್ಟಿ ಗಹಗಹಿಸಿ ನಗುವೊಂದು ಚಾರು ದೃಶ್ಯಂ :
ಮೇಘಾದ್ರಿ ಮುದ್ರಿತ ಸುನೀಲ ಜಲ ಕಲ್ಲೋಲ
ಸಮ್ಮಥನ ಸಂಜಾತ ಮೌಕ್ತಿಕಾಫೇನಮಯ
ತಾಂಡವ ತರಂಗಾಟ್ಟಹಾಸ ಸಂಭ್ರಮ ಮತ್ತ
ಕಾಸಾರಮೆಸೆದತ್ತನಂತ ವಿಸ್ತಾರ ಭವ್ಯಂ!
ವ್ಯೋಮ ದರ್ಪಣವೊಡೆದು ಮುರಿವೊಂದು ತಿರೆಗಿಳಿಯುತೇಂ
ದ್ರವಮಾಯ್ತೆ? ನೆಲವೆಣ್ಣಿನೊಳ್ನಗೆಯೆ ನೀರಾಯ್ತೊ?
ಸಾಗರವೆ ಸಂಕ್ಷಿಪ್ತ ವೇಷದಲಿ ಮೆರೆದತ್ತೊ?
ಎನೆ ರಾಜಿಪಾ ಸ್ಫಟಿಕ ಸಲಿಲ ವಿಸ್ತೀರ್ಣದೊಳ್,
ಜಲದೇವಿ ವಕ್ಷದೊಳೆಸೆವ ಪಸುರ್ಮಣಿಯಂತೆ, ೧೪೦
ನೀಲ ಮಧ್ಯದಿ ಕೆತ್ತಿದೊಂದು ಪಚ್ಚೆಯ ತೆರದಿ
ನಗೆ ಮುಗುಳ್ಗಳಾಲಿಂಗಿಸಿಹ ಹೃದಯವನು ಹೋಲಿ
ದ್ವೀಪವೊಂದವಲೋಕಕಭೀರಾಮತರಮಾಗಿ
ತೇಲಿರ್ದುದುದ್ಯಾನ ನೌಕೆಯೋಲ್, ಸುತ್ತಲುಂ
ಆ  ದ್ವೀಪ ನಾವೆಯಂ ಬಳಸಿ ಮೆರೆದುವು ಕಣ್ಗೆ
ಪೇರೊಡಲ ಪೇರೆಸಳ ಹೊಂದಾವರೆಗಳೋಳಿ
ಸೇವಿಸುವ ಪರಿವಾರದಂತೆ. ಕಲಹಂಸಾಳಿ,
ಕೀಲಾಲ ಕ್ರೀಡೆಯಾಸಕ್ತಿಯಿಂ, ಶರದಭ್ರ
ರಂಗದಿಂದಿಳಿತಂದು ಭುವನ ಜೀವನ ಸುಖಕೆ
ಮನಸೋತ ಶ್ವೇತ ಜೀಮೂತ ಶಕಲಗಳೊ ಎನೆ ೧೫೦
ಹೋಲಿ, ರಂಜಿಸಿದುವಲ್ಲಲ್ಲಿ ತೇಲಿ, ದ್ವೀಪವೋ
ತೇಲುತಿಹ ನಂದನೋದ್ಯಾನವೋ ಎನಲಲ್ಲಿ
ಕೋಟಿ ವರ್ಣಂಗಳಿಂ ಬಹು ಪರಿಮಳಂಗಳಿಂ
ಇಂದ್ರಚಾಪಂಗಳನೆ ಬಿತ್ತಿ ಬೆಳೆದಗೆಯಂತೆ
ರಮಣೀಯಮಾದತ್ತು ಪುಷ್ಪಗಳ ಪರಿಷತ್ತು
ತಂಗಾಳಿಗುಲ್ಲೋಲಕಲ್ಲೋಲವಾಗಿ ಬಾಗಿ
ತಲೆದೂಗಿ. ಆ ಎಲ್ಲ ಸೊಬಗಿಂಗೆ ಮುಡಿಯಾಗಿ
ದೂರದ ದಿಗಂತದಲಿ ಗಿರಿಯುತ್ತಮಾಂಗದಲಿ
ಮೈದೋರಿದನು ಆಹ ಹೊಂಬಿಸಿಲಿನೆಳನೇಸರು!
ಸ್ವರ್ಗ ತಾಂ ಸ್ವರ್ಗೀಯತರಮಾಯ್ತು! ಮರಿ ಮಿಗವೆ ೧೬೦
ಬಿರಿದು ಹೊಂಬೊಳಲಾಯ್ತೆ, ಮದ್ದಿಡದ ಮಣ್ಕುಡಿಕೆ
ಕಿಡಿಗೊಂಡು ಸಿಡಿಯೆ ರಾತ್ರಿಯ ನಭೋಭೋಗದಲಿ
ಕರೆವಂತೆವೋಲ್ ವರ್ಣಮಯ ನಕ್ಷತ್ರವೃಷ್ಟಿ?
ಬೆಕ್ಕಸದಿ ನೋಡುತಿರ್ದುಳ್ ತರಳೆ, ಕಣ್ಗಳೆವೆ
ಇಕ್ಕದೆಯೆ. ಕಂಡಳಿನ್ನೊಂದದ್ಭುತವನಲ್ಲಿ :
ತೇಲುವಾ ದ್ವೀಪ ಮಧ್ಯದ ಪುಷ್ಪರಂಗದೊಳ್
ಅದಾರವಂ ದೇವವಂದಿತ ಮೋಹನಾಕೃತಿಯ
ರುಕ್ಮರಾಗಾತಪ ಸ್ನಾತ ಮಾನವಮೂರ್ತಿ?
ಕಂಡು ನಿಷ್ಪಂದಳಾದಳು ಕನ್ಯೆ, ಕರುವಿಟ್ಟು
ಕಂಡರಿಸಿದಂತೆ, ಮೇಣ್ ಕುಂಚಿಗೆಯ ವರ್ಣಕರ್ಮಂ ೧೭೦
ಚಿತ್ರಸ್ಥವಾದಂತೆವೋಲ್. ಕಣೆವೆರಸಿ ಕೈಬಿಲ್
ಜಗುಳ್ದುರುಳಿದುದು ನೆಲಕೆ. ಸ್ಫುರಿಸಿತಾ ಗಂಡೆದೆಯ
ಹೃದಯದಲಿ ತಾನು ಹೆಣ್ಣೆಂಬ ಲಜ್ಜೆಯ ಲಹರಿ
ಮೊತ್ತಮೊದಲ್ : ಕೋಮಲತೆ ಕುಡಿವರಿದುದೊಡನೊಡನೆ
ಸೌಂದರ್ಯ ತೃಷೆಯಿಂದೆ. ಪ್ರೇಮಲತೆ ಬಾಯಾರಿ
ಕಾತರಿಸಿತಾವುದನೊ ತಾನರಿಯದುದ ಬಯಸಿ.
ನಾಚಿದಳು ತನ್ನವಸ್ಥೆಗೆ ತಾನೆ ಕನಸಿನಲಿ
ಲಲನೆ ಕನಲ್ಲಿನ್ನೊಮ್ಮೆ ಪೌರುಷವನುರೆ ಪಾರ್ದು
ಬರಿದೆ! ಹೋರಾಡುತಿರಲಿಂತು ಬೇರೊಂದಾಯ್ತು:
ಮೂಡುವೆಟ್ಟಿನ ಮುಡಿಯ ತಪನೀಯಮಣಿಯಂತೆ ೧೮೦
ತಳತಳಿಸುತಿರ್ದುದಯ ತಪನ ಬಿಂಬದಿ ಮೂಡಿ,
ಘನಿತ ಬಾಲಾತಪದ ರೂವಿಂದೆ ಪೊರಮಟ್ಟು,
ಗಾಳಿವಟ್ಟೆಯೊಳೊಯ್ಯನೊಯ್ಯನೆ ವಿಲಾಸದಲಿ
ತೇಲಿ ಬಂದರು ಮಧುಮದನರಮರ ತೇಜದಲಿ!
ಆ ಪವಾಡದ ಮೇಲಣ ಪವಾಡಕೆದೆ ಬೆಚ್ಚಿ,
ನಿದ್ದೆಯಿಂದೆಚ್ಚತ್ತು ಕಣ್ದೆರೆದಳಂಗನೆ, ಬಿಗಿದ
ಹೊಂಗನಸಿನಾಲಿಂಗನದ ಬಂಧನಂ ಬಿರಿಯೆ,
ವಿಸ್ಮಯದ ಮಂದಸ್ಮಿತದಲಿ. ಮೃಡಮೂರ್ತಿಯಂ
ನೆನೆದು, ದೃಢಭಕ್ತಿಯಲಿ ಕೈಮುಗಿದು ಶಿರಬಾಗಿ
ಗುಡಿಯ ವಿಗ್ರಹಕೆ, ಹೊರಹೊಂಟಳಾಲಯದಿದಿರೆ ೧೯೦
ಉಷೆಯ ನಗೆನಸುಕಿನಲಿ ಮಿಸುಗುವ ಸರಸ್ತೀರಕೆ.
ಅನ್ನೆಗಂ, ಇಂದ್ರದಿಙ್ಮಂಡಲದಿ, ಪೂರ್ವವಧು
ಇನಿತು ಕಣ್ದೆರೆದಂತೆ, ದಿನಮುಖದ ಕೆಂಗಾಂತಿ
ಕುಡಿವರಿದುದು. ತಾರೆಯೊಂದಾಕೆಯ ಲಲಾಟದಲಿ
ರಾಜಿಸಿತು ಬಜ್ಜರದ ಕಿಡಿಯಂತೆವೋಲ್. ನಡುಗಿದಳ್
ರಾತ್ರಿರತಿ ನೆನೆದು ತನ್ನಾಯುವವಸಾನಮಂ.
ಇರುಳ್ನಿದ್ದೆಯಿಂ ಜಗತ್ತೇಳ್ಚರುವ ಸಮಯಮದು
ಶಾಂತಿಯಿಂ, ಶೈತ್ಯದಿಂ, ನಾದಗರ್ಭಿತಮಾದ
ತುಂಬು ಮೌನದಿ ತುಂಬಿ ಶೋಭಿಸಿತು, ಧ್ಯಾನಮಯ
ಗಾಂಭೀರ್ಯದಿಂ. ಹೊಗರೇರುವಾಗಸದೊಳುಕ್ಕಿಬರೆ ೨೦೦
ತಿಳಿಕೆಂಪು ನಸುಗೆಂಪು ಹೂಗಂಪು ಕಡುಗೆಂಪು,
ಹಳದಿ ಕುಂಕುಮ ಪೀತ ಕನಕ ಚಂದನ ನೀಲ
ನರ್ಣೋಪವರ್ಣಮಯ ಘೇನ ಬುದ್ಬುವ್ದ ಸದೃಶ
ಜ್ವಾಲೋಪಮಾರಕ್ತ ಕಾದಂಬಿನಿಗಳೆಸೆಯೆ
ಪಂಕ್ತಿ ಪಂಕ್ತಿಗಳಂತೆ ವಿವಿಧ ವಿನ್ಯಾಸದಲಿ,
ರುಂದ್ರ ರಾತ್ರಿಯ ಪಾತ್ರೆಯಂಚಿನಲಿ ತಕಪಕನೆ
ಕುದಿದೆದ್ದುದೋ ಪಗಲೆನಲ್. ರಂಜಿಸಿತು ಕಣ್ಗೆ
ಬಂಧುರ ದಿನೋದಯದ ದಿವ್ಯಪ್ರಭಾತಕಾವ್ಯಂ!
ಪಸುರ್ಗಡಲ ಪೆರ್ದೆರೆಗಳೋಲ್ ಸ್ವರ್ಧೆಯೊಳೆದ್ದು
ವೀಚಿವೀಚಿಗಳಾಗಿ ಪ್ರಾಚೀ ದಿಗಂತಮಂ ೨೧೦
ತಬ್ಬಿ, ನಾನಾದೆಸೆಗೆ ಹಬ್ಬಿದ ವನಶ್ರೇಣಿ ತಾಂ
ಚಿತ್ರಾಂಗದೆಯ ಮನಕೆ ಚೆಲ್ವಾಯ್ತು, ತನ್ನದೆಯ
ಸದ್ಯಃ ಪ್ರಫುಲ್ಲ ನವಯೌವನ ಪ್ರಸಾದದೋಲ್
ವಿಸ್ತಾರ ಚಾರುಧೀರಂ. ರಮ್ಯಾರುಣಜ್ಯೋತಿ
ಕೊಳದ ಜಳದೊಳು ಮಾರ್ಪೊಳೆಯೆ ನೀರುರಿವ ತೆರದಿ,
ಕುಮುದಿನಿಗೆ ಮೊಗಬಾಡಿ, ಕಮಲಿನಿಗೆ ನಗೆಮೂಡಿ,
ತಂಗಾಳಿ ತೀಡಿತು ವಿಹಂಗಗಳನೆಳ್ಚರಿಸುವೋಲ್.
ಮಡಿವಾಳನಿಂಚಿಳ್ಳು, ಕಾಜಾಣನಿಂಚರಂ,
ಕೋಗಿಲೆಯ ನಿಡುಸರಂ, ಗಿಳಿವಿಂಡುಗಳ ಗಳಹು,
ತರತರದ ಪಕ್ಷಿಗಳ ತರತರದ ಕೂಜಿತಂ ೨೨೦
ತುಮಲ  ಸುಮಧುರಮಾಗಿ ಚೈತ್ರಪ್ರಭಾತಮಂ
ಧ್ವನಿಸಾಂದ್ರಗೈದಿರ್ದುದಂದು ಉದುರಿದುವು ಹನಿ
ಬನಬನದಿ ತರುಗುಲ್ಮತೆಗಳಿಂ, ವನ ವನಿತೆ
ತನ್ನ ನೇಹದ ವಸಂತೋದಯಾನಂದದಿಂ
ಹರ್ಷಾಶ್ರುಬಿಂದುವರ್ಷವ ಸೂಸಿಪೋಲ್. ಕೆದರಿ
ದಳಗಳಂ ಕುಸುಮತತಿ ನಲಿಯೆ ನರುಗಂಪಿನಿಂ,
ಮತ್ತ ಮಧುಪಂಗಳುಂ ಮತ್ತೆ ಭ್ರಮರಂಗಳುಂ
ಹಿಂಡುಹಿಂಡಾಗಿ ಹೂವೊಡಲ ಹೊಂದೂಳಿಯೊಳ್
ಹೊರಳಿ, ಹೊಂಬೊಗರೇರಿ, ಮಲರು ಮಲರಿಗೆ ಹಾರಿ
ಮಕರಂದ ಭಿಕ್ಷೆಯಂ ಬೇಡಿ, ಕುಟಜಂಗಳಲಿ ೨೩೦
ಝೇಂಕರಿಸಿದುವು ನಿತ್ಯಯಾತ್ರೆಯೋಂಕಾರಮಂ!

ನಾರಿಯಾಕೃತಿಯಾಂತೆಸೆವ ಉಷಾ ಶ್ರೀಕಾಂತೆ
ವೈವಿಧ್ಯಮಯ ಮನುಜ ಜೀವನ ರಸಕ್ಕಳುಪಿ
ಭೂಮಿಯ ವಿಹಾರಕೈತಂದಳೊ ಎನಿಪ್ಪಂತೆ
ಮಣಿಪುರ ಧರಣಿಪಾಲ ಚಿತ್ರವಾಹನ ತನುಜೆ
ಚಿತ್ರಾಂಗಿ ತಾಂ ಚಲಿಸಿದಳ್, ಕೆರೆಯ ನಳನಳಿಸಿ
ಬೆಳೆದ ಎಳಹಸುರು ಹುಲ್ಲಂಚ ಮೇಲಡಿಯಿಟ್ಟು,
ಮುತ್ತು ಚೆಲ್ಲಿದ ತೆರದಿ ಮೂಡಿದೆಳಬಿಸಿಲಿನಲಿ
ಮಿರುಗುವಿಬ್ಬನಿಗಳಂ ಸವರಿ, ಪೂವಡಿಗಳಿಂ
ತಿರೆಯ ಹೃದಯಂ ನಲಿದು ಹಿಗ್ಗುವಂದದಿ ಮತ್ತೆ ೨೪೦
ಮುತ್ತಿಟ್ಟು! ಸಾಗುತಿರೆ ಷೋಡಶಕಳಾಪೂರ್ಣ
ಷೋಡಶಿ ವಿಪಿನಪಥದಿ ವೀರವೈಯಾರದಲಿ,
ಸೂಸಿದುವು ದಾರಿಯ ಗಿಡಮರಂಗಳಲರ್ವಳೆಗಳಂ;
ದಾಂಗುಡಿಗಳಂ ನಿಮಿರ್ಚುತೆ ಮುದದಿ ಹೂಬಳ್ಳಿಗಳ್
ಕೈಯಾಡಿದುವು ಕೋಮಲೆಯ ನುಣ್ಗದಪಿನೊಳ್;
ವಿಹಂಗಮಗಳೇಕಕಂಠದಿ ಜಯಧ್ವನಿಗೈದು
ಹಾರಾಡಿದುವು ರೆಂಕೆಗರಿಗೆದರುತುತ್ಸಾಹದಿ!

ಉದಯ ಸಮಯದ ಐಸಿರಿಯ ಸವಿಯುತಿರಲಿಂತು,
ಭೋಂಕನೆಯೆ ನಿಂದಳಂಗನೆಯೊಂದೆಡೆಯೊಳಲ್ಲಿ
ವಿಸ್ಮಯಾವಿಷ್ಟ ದೃಷ್ಟಿಯನಟ್ಟಿ ದೂರಕ್ಕೆ : ೨೫೦
ಇದಿರು ದಡದೊಂದರೆಯ ಪಡಿನೆಳಲಿನಗ್ರದಲಿ
ಕಾಣಿಸಿತು, ಪ್ರತಿಬಿಂಬದಂಬರಕ್ಕೆದುರಾಗಿ,
ಪದ್ಮಾಸನ ಸ್ತಿಮಿತ ಧ್ಯಾನಸ್ಥ ಮಾನವ
ಪ್ರತಿಚ್ಛಾಯೆ, ಕರುವಿಟ್ಟು ಕಂಡರಿಸಿ ಹೂಡಿದಂತೆ!
ನೋಡುತಿರ್ದಳು ಮರಳಿ ಮರಳಿ; ಚಿತ್ತವನೇಕೊ
ಕಾಡುತಿರ್ದಳು ಕೆರಳಿ ಕೆರಳಿ; ಹೃದಯವನೇನೊ
ಬೇಡುತಿರೆಯಿರೆ ತರಳೆಯರಳಿ, ಹೊಳೆದುದು ನೆನಹು:
ಕನಸುದೀವಿಯ ಪುರುಷ ಹರುಷ ಮೂರುತಿಯಿವನೆ?
ಕಾಷಾಯ ಭೂಷಿತಂ, ಪಾವನ ಜಟಾಧಾರಿ,
ಮನ್ಮಥಂಗೆಣೆಯಪ್ಪ ಫಾಲಾಕ್ಷ ಸನ್ನಿಭಂ ೨೬೦
ದೇವವಂದಿತ ಮೋಹನಾಕೃತಿಯ ನರನಿವನೆ?
ರುಕ್ಮರಾಗಾತಪಸ್ನಾತನಾತನೆಯಿವಂ?
ತಪಮಿರ್ದುದೆಂಬಿನಂ ತಾಪಸನ ತೇಜಸ್ಸು
ಮೋಹಿಸಿತ್ತಳುಕಿಸಿತ್ತಾ ಮೋಹನಾಂಗಿಯಂ,
ಮೊದಲ ಬೇಟಂ ಮೊಳೆಯುವೆಳ ಎದೆಯಳಂ, ಕನ್ಯೆ
ಚಿತ್ರಾಂಗಿಯಂ!

ಪಡಿನೆಳಲಿನಿಂದೆ ನಿರುತಕ್ಕೆ
ದಿಟ್ಟಿಯಟ್ಟಲ್, ಅಲ್ಲಿ , ಬನವೆ ಹಿನ್ನೆಲೆಯಾಗೆ,
ಅರೆ ಮುಳುಗಿ ಮಗ್ಗುಲಿಕ್ಕಿದ ಕರಿಯ ತೆರದಿಂದೆ
ಕೆರೆಯ ಕರೆಯಲಿ ನೀರಿನಿಂದೆದ್ದ ಕರಿಯರೆಯ ೨೭೦