ಶಿರದಿ ಮೆರೆದತ್ತಾ ತಪೋವ್ಯಕ್ತಿಯಮಲಾಕೃತಿ!

ಪಲ್ಲವಿತ ಶೃಂಗಾರವಲಿ ಕುಡಿವರಿವಂತೆ
ಯೌವನ ನವೀನ ಚೂತದ ಪೂತ ಸನ್ನಿದಿಗೆ
ನಡೆದಳೊಯ್ಯನೆ ನೀರೆ, ಕೌತೂಹಲಾವಿಷ್ಟೆ,
ವೈರಾಗಿಯಿರ್ದ ತಡಿಗಾಗಿ. ವ್ಯಾಮೋಹದಿಂ
ಬರಬರುತೆ ಬಳಿಸಾರೆ, ಚಂಚಲಿಸಿದುದು ಚಲನೆ;
ತಡವರಿಸಿದುದು ನಡಿಗೆ; ಎವೆಯಿಕ್ಕದಾಯ್ತಕ್ಷಿ;
ಗದಗದಿಸಿತೆದೆ, ಮೈನವಿರ್ ನಿಮಿರಿ.
ಮಣಿಪುರದ
ನೃಪತನಯೆ, ವೇಷವಾವೇಶದೊಳ್ ಬಿಜ್ಜೆಯೊಳ್
ಬಿಲ್ಲ ಬಿನ್ನಾಣದೊಳ್ ಬೀರದೊಳ್ ಕೆಚ್ಚೆದೆಯ ೨೮೦
ಕಜ್ಜದೊಳ್ ಲಜ್ಜೆಯರಿಯದ ಧೀರ ಚರ್ಯೆಯೊಳ್
ನೃಪಕುಮಾರನೆ ತಾನು ಎಂಬಂತಿರಿರ್ದಾಕೆ
ನಿಂದಳದೊ ಮೊತ್ತಮೊದಲಬಲತಾ ಭಾವದಿಂ
ಹಾ ಪೆಣ್ತನದ ನಾಣನನುಭವಿಸಿ!

ಓ ಮಾಯೆ,
ಓ ರತಿಯೆ, ಓ ಕಲಾಸುಂದರಿಯೆ, ನಿರ್ಲಿಪ್ತ
ನಿಶ್ವಿಂತ ನಿರ್ಗುಣ ಬ್ರಹ್ಮದಲಿ ಶಕ್ತಿಯಂ
ಸೃಷ್ಟಿಯಾಸಕ್ತಿಯಂ ಕೆರಳಿಸಿದ ಮೋಹಿನಿಯೆ,
ಪ್ರೇಮ ಸೌಂದರ್ಯ ರೂಪದಿ ಸುಳಿದು ವಿಶ್ವಮಂ
ಶುಷ್ಕತಾ ಶೂನ್ಯಕ್ಕೆ ಬಿಡದೆ ಹೊರೆಯುವ ರಸವೆ,
ನಿನ್ನ ಬಂಧುರ ಬಂಧನಾಲಿಂಗನಕೆ ಸಿಲ್ಕಿ ೨೯೦
ಶಶಿ ಸೂರ್ಯ ಗ್ರಹಗೋಷ್ಠಿ ತಾರೆಗಳೆ ನಡೆಯುತಿರೆ
ಪೆಣ್ಣೊರ್ವಳಂತಪ್ಪುದೊಂದು ಸೋಜಿಗವೆ ಪೇಳ್?
ಚೈತ್ರೋದಯದ ವಿಪಿನ ಹೃದಯದೊಳ್ ಚೈತನ್ಯ-
ಧುನಿಯಾಗಿ ಬೇರು ಬೇರುಗಳಲ್ಲಿ ಕೊಂಬೆಯಲಿ,
ಪರ್ಣ ಪರ್ಣಾಂತರಂಗದಿ, ಮುದ್ದು ಮೊಗ್ಗಿನಲಿ,
ಸೌಂದರ್ಯಮೆ ಶರೀರಮಂ ತಾಳ್ದಿಳೆಗೆ ವಂದು
ಹೂವಿನಲಿ , ಬಳ್ಳಿಯಲಿ, ತರು ಶರೀರದ ನಾಡಿ
ನಾಡಿಯಲಿ, ಖಗ ಮೃಗಂಗಳ ಪ್ರಾಣಪಾತ್ರದಲಿ.
ತೃಣ ತೃಣಂಗಳ ಜೀವನಾಲವಾಲದಿ ತುಂಬಿ
ಪ್ರವಹಿಪಾ ಸ್ಫೂರ್ತಿ, ಮಾಧುರ್ಯನಿರ್ಝರಿಣಿಯೋಲ್,
ಚಿತ್ರಾಂಗದೆಯ ಜೀವ ಶೈಲಾಗ್ರದಿಂ ಧುಮುಕಿ ೩೦೦
ಹೃದಯ ಗಹ್ವರಕಲ್ಲಿ, ಪ್ರಣಯ ಪ್ರಪಂಚಮಂ
ಮಥಿಸಿದತ್ತು! ಸೋತು ನಿಂತಳು ಲಲನೆ, ಬರೆದೆವೋಲ್!
ಗಾನಗೈದುವು ಹಕ್ಕಿ: ಝೇಂಕರಿಸಿದುವು ತುಂಬಿ;
ಬೀಸಿತ್ತು ತಂಗಾಳಿ; ಕಂಪನೆರಚಿತ್ತಲರ್;
ಕಳಕಳ್ಯ ನಗುತಲಿರ್ದುದು ಕಾಡು; ಕನ್ನಡಿಯ
ತೆರದಿಂದೆ ಹಬ್ಬಿತ್ತು ವಿಸೃತ ಸರೋವರಂ;
ತಿಳಿಯಾಳದಾಗಸದಿ ಮೆಲ್ಲನೊಯ್ಯನೆ ಮುಗಿಲ್
ಚಲಿಸಿತು ಸರೋವಕ್ಷದಲಿ ಛಾಯೆಯನು ಚೆಲ್ಲಿ;
ಹೊಂಬಿಸಿಲ್ ಹಸರಿ ಎಸೆದಿತ್ತಿಳೆಯೆದೆಯ ಮೇಲೆ!
ಕ್ಷಣಗಳೊಂದೊಂದು ಯುಗವಾಗಿ ಕಳೆಯುತ್ತಿರಲ್, ೩೧೦
ಹೊತ್ತೇರೆ ಬೆಳೆವುತ್ತಿರಲ್‌ ಬಿಸಿಲ್‌, ಇರಲಿರಲ್‌
ಕಣ್ದೆರೆದನೊಯ್ಯನೆಯೆ ಧ್ಯಾನದಿಂದಿಳಿತಂದು
ದಿವ್ಯ ತೇಜಸ್ವಿ. ಕಂಡನು ಮುಂದೆ ನಿಂದಿರ್ದ
ತರುಣ ವೇಷದ ತರುಣಿಯರು ಇನಿತು ಬೆರಗಿಂದೆ.
ಎರಡು ಕಣ್ಗಳುಮೆರಡು ಕಾಸಾರಗಳ ಹೋಲಿ
ಶೋಭಿಸುತ್ತಿರೆ, ಹೆಣ್ಣು ತೇಂಕಾಡಿದಳು ಅಲ್ಲಿ
ತೇಲಿ ಮುಳುಮುಳುಗೇದುತುಸಿರ್ಕಟ್ಟಿದಂತೆವೋಲ್!
ಮೊಗದಲ್ಲಿ ನಗೆಮುಗುಳ್ ಮೂಡಿ ಮೆಲ್ಲನೆ ಮಲರೆ
ಮಧುರ ಗಂಭೀರ ವಚನದಿ ನುಡಿದನು ತಪಸ್ವಿ:
“ಆರು ನೀನೆಲೆ ತರುಣ ವೀರ? ವಿಪಿನಾಂತರದಿ ೩೨೦
ಇನಿತು ಮುಂಬೊಳ್ತಿನೊಳಗೇಂ ಗೆಯ್ದು ತಿರಗುತಿಹೆ?
ಚೈತ್ರಪ್ರಭಾತದೀ ರಮ್ಯತಾಸ್ವಾದನೆಯೋ,
ಮೃಗಯಾ ವಿನೋದಮೋ, ನಿನಗಾವುದಳ್ತಿ ಪೇಳ್?
ನುಡಿ, ಅಂಜದಿರು; ನಾವು ಮುನಿವ ಮುನಿವರರಲ್ಲ!”
‘ಅಂಜದಿರು’ ಎಂಬ ನುಡಿ ಕಿಡಿಸೂಸೆ, ಬಿಂಕದುರಿ
ಮಸಗಿದುದು ಭುಗಿಲೆಂದು ವೀರ ನಾರಿಯ ಮನದಿ.
ಎದೆಯ ಹುತ್ತಿನೊಳದುವರೆಗೆ ಮೋಹಮಂತ್ರದಿಂ
ಮುಗ್ಧವಾಗಿರ್ದ ಪುರುಷತೆ ಒಡನೆ ಹೆಡೆಯೆತ್ತಿ
ಪಡಿಹಿಂಸೆಗಣಿಯಾಗಿ ಮಲೆತು ನಿಂದುದು ಕನಲಿ.
ಮರೆತಳು ನಮಸ್ಕಾರಮಂ, ಪೂಜ್ಯಬುದ್ಧಿಯಂ, ೩೩೦
ತಾನೊರೆಯವೇಳ್ಕುಮೆಂದಿರ್ದ ಸವಿನುಡಿಗಳಂ.
ನಯಮಂ ವಿನಯಮಂ ವಿಧೇಯತಾಭಾವಮಂ.
ಪ್ರತಿಸ್ಪರ್ಧಿ ವೀರ ಆಲಾಪಮಂ ಗೈವಂತೆ
ಬೆಸಗೊಂಡಳೊರಟಾಗಿ ಆಟವಿಕ ಸ್ತ್ರೀಯವೋಲ್:
“ಅಂಜುವವರಾವಲ್ಲ! ಅಂಜಿಕೆಯ ಕಂಡಿಲ್ಲ,
ಕೇಳಿಲ್ಲ! ಅಂಜುಕುಳಿಗಳ ರಕ್ಷಣೆಯೆ ನಮ್ಮ
ಕುಲಕರ್ಮ; ನಂಜಿನಂತಹ ಲೋಕ ಕಂಟಕರ
ಭಂಜನೆಯೆ ನಾವೊಲಿದ ಕರ್ತವ್ಯ! ಅಂಜದಿರು!
ಅಂಜದಿರು, ನುಡಿ ಎನಲ್, ನೀನಾರೆಲೆ ತಪಸ್ವಿ?”
ದಂತಪಂಕ್ತಿಯ ಕಾಂತಿಯೊಡನೆ ಕಿರುನಗೆ ಮಿರುಗೆ, ೩೪೦
ಅನಿಮೇಷ ದೃಷ್ಟಿಯಂ ಬೀರಿ , ಕಿತ್ತಡಿಯಿಂತು
ಕೊಂಕುನುಡಿಸರಳನೆಚ್ಚನ್ ಬಿಂಕದಂಗನೆಗೆ:
“ವೀರಕ್ಕೆ ವಿನಯಮೆಂಬುದು ಮುಡಿಯ ಮಾಣಿಕಂ;
ವಿನಯಮಿರದಿರಲದೆ ಕುಸಂಸ್ಕ್ರತಿ! ಕಿರಾತರೋಲ್
ಮಾತು ಮಾತಿಗೆ ಮಲೆತು ಕೆರಳಿದರಹಮ್ಮಿನಿಂ
ಕ್ಷಾತ್ರಮಲ್ತದು ಧೂರ್ತಲಕ್ಷಣಂ! ತರುಣ ವೀರ,
‘ನೀನಾರೆಲೆ ತಪಸ್ವಿ!’ ಎಂದೆನ್ನ ಮೂದಲಿಸಿ
ಪ್ರಶ್ನಿಸಿದೆಯಲ್ತೆ? ಪೇಳ್ದಪೆನಾಲಿಸದನಿನ್ನು:
ತಿರಿವ ಬಡಜೋಗಿಗಳ್ ನಾವು ಲೋಗರೆ ದಿಟಂ!
ನೆಲೆಯಿಲ್ಲದಲೆದಲೆದು ಬೇರು ಬಿಳ್ಕೆಯನುಂಡು ೩೫೦
ತರುತಲ ನಿವಾಸದಲಿ ಬರುನೆಲದ ಹಾಸಿನಲಿ
ಬಿದ್ದೆದ್ದು ಬಳಲುವರ್ ನಾವು ಲೋಗರೆ ದಿಟಂ!
ನಿಮ್ಮ ಯೋಗ್ಯತೆಯಿಲ್ಲ; ನಯವಿಲ್ಲ; ನುಣ್ಪಿಲ್ಲ;
ಸಿರಿಯಿಲ್ಲ, ಪೆಂಪಿಲ್ಲ, ನಾವು ಲೋಗರೆ ದಿಟಂ!
ನೀವು ಯೋಗ್ಯರೆ ಅಹುದು! —  ಮುನಿಯದಿರ್, ಸಾತ್ವಿಕನೆ,
ತಾಳ್ಮೆಯೊಳೆ ಬಾಳ್ಮೆಯಿದೆ. (ನಿನ್ನಾನನದಿ ಕೆಂಪು
ಸುಳಿಯಲದೆ ಚೆಲ್ವಾಗಿ ಪೊಣ್ಮುತಿದೆ! — ) ನಾನಾರೆ?
ಕುರುವಂಶನಾಮದೊಂದರಸುಮನೆತನಮಿಹುದು.
ಬಲ್ಲೆಯೇಂ? — ಸುಪ್ರಸಿದ್ಧನು ನೀನು. ನಿನಗೆ ಆ
ಅಪ್ರಸಿದ್ಧ ಅರಿವದೆಂತಹುದು? ಆ ಬಳಿಯ ೩೬೦
ಪಾಂಡುರಾಜಗೆ ಪಂಚಪಾಂಡವರ್ ಜನಿಸಿದರ್.
ನೀರಸ ಕಥಾಲಾಪಮಿದು ನಿನಗೆ ಬೇಸರಂ!
ಕೇಳಿಬಲ್ಲೆಯ ಯುಧಿಷ್ಠಿರ ಭೀಮರೆಂಬರಂ?
ನಕುಲ ಸಹದೇವರಂ? ಪಾರ್ಥನೆಂಬಾತನಂ?
ಶ್ರೀಕೃಷ್ಣನೆಂಬೊರ್ವ ಗೊಲ್ಲನಂ? — ನೀನರಿಯೆ:
ಅಖ್ಯಾತರಲ್ಪರಜ್ಞಾತರವರನಿಬರುಂ!
ನೀಂ ಜಗದ್ವಿಖ್ಯಾತ ವನಚರಂ! ನಿನಗೆಂತು
ವೇದ್ಯಮಹುದಜ್ಞಾತರಿತಿಹಾಸಮದು? ಇರಲಿ;
ನಾಂ ಯುಧಿಷ್ಠಿರನಲ್ತು, ಮೇಣ್ ಭೀಮನುಮಲ್ತು;
ನಕುಲ ಸಹದೇವರೊಳಗೊಬ್ಬಾತನಲ್ತು; ಮೇಣ್ ೩೭೦
ಕೃಷ್ಣನೆಂಬಾ ಗೋವಳಿಗನಲ್ತು. ಆದೊಡಾಂ
ಧರ್ಮಜ ಕೃಪಾಪೋಷಿತಂ; ಬೀಮನಳ್ಕರೆಗೆ
ಪಾತ್ರನಾಗಿಹ ಕೃಷ್ಣ ಪದಕಮಲ ಕಿಂಕರಂ;
ಪಾಂಡವರ ಮಧ್ಯಮಂ; ಮೇಣ್ ಧನಂಜಯನೆಂಬ
ದುರ್ಯಶಕ್ಕೀಡಾಗಿ ತೊಳಲ್ವ ನಾನರ್ಜುನಂ!”
ಇಂತು ನುಡಿಗಣೆಯ ಬಿರುವಳೆಯ ಸುರಿದು ತಪಸ್ವಿ
ಸಿಂಹಗಾಂಭೀರ್ಯದಿಂದೆಳ್ದು ನಡೆದಡವಿಯೊಳ್
ಮರೆಯಾದನೊರ್ಮೆಯುಂ ಸಿಂಹಾವಲೋಕನಂ
ಗೈಯದೆಯೆ. ನಾರಿ ನಿಂತಳು ಕಂಬದಂತಲ್ಲಿ,
ಮಾತನುಳಿದುಬ್ಬೆಗದ ಮೋನದಲಿ ನಿಡುಸುಯ್ದು, ೩೮೦
ತನ್ನ ಕಣ್ಣಂ ತಾನೆ ನಂಬಲಾರದೆ, ಬೆಪ್ಪು
ಬೆರಗಾಗಿ, ಲಜ್ಜೆ ಭಯ ವಿಸ್ಮಯದ ಭಾರದಿಂ
ಕುಸಿದು ಕುಗ್ಗಿ! — ಕೆಚ್ಚೆದೆಯ ಬೇಂಟೆಯ ಕಿರಾತಕಲಿ
ಪಶ್ಚಿಮಾದ್ರಿಯ ರುದ್ರಸಾಂದ್ರ ಭೀಷಣರುಂದ್ರ
ಘೋರ ವಿಪಿನಾಂತರದ ನಿಮ್ಮೋನ್ನತಂಗಳಲಿ
ಬೆಳಗಿನಂ ಬೈಗನ್ನೆವರಮಲೆದು, ಕಾಣದಿರೆ
ಬೇಂಟೆ, ಬೇಸರದಿಂದೆ, ತನುವಿನಾಸರದಿಂದೆ,
ಕನಲುವನ್; ಕುದಿಯುವನ್; ಬಿದಿಯ ಬಯ್ವನ್ ಬಾಯ್ಗೆ
ಬಂದಂತೆ. ಪೊಳ್ತಿಳಿಯುತಿರೆ, ಪಸಿವುಮೇರಿ ಬರೆ,
ಬಾಣಮಂ ಬತ್ತಳಿಕೆಗಿಡಿಯುತೆ, ಹತಾಶೆಯಿಂ ೩೯೦
ಬಿಲ್ಲನೊರ್ದೆಸೆಗೆಸೆದು ಪವಡಿಪನ್ ಹಚ್ಚನೆಯ
ಹಸುರ ಮೇಲಲ್ಲಿ ಹಳುವಿನ ತಣ್ಣಿಲರಿನಲ್ಲಿ.
ಮಗ್ನನಾಗಿರಲವಂ ನಿದ್ರಾ ಸಮುದ್ರದಲಿ,
ತೃಪ್ತ ಜಠರದ ಭೀಮ ಭೀಷ್ಮಭಲ್ಲುಕಮೊಂದು
ಚರಿಸುತೈತಂದು ಕಾಣುತೆ ನರನ ಗಾತ್ರಮಂ
ಫೂತ್ಕರಿಸುತಾಘ್ರಾಣಿಪುದು ಬರಿಯ ಕೌತುಕಕೆ!
ಕೋಳ್ಮಿಗದ ಸಿನುಗು ಕೌರಹ ಬಿಸಿಯುಸಿರ್ ಮೊಗಕೆ
ತೀಡುತಿರೆ, ಕರ್ವೆಡನೆಳ್ಚತ್ತು ಕಣ್ದೆರೆಯೆ: ಹಾ,
ಮೊಗದ ಮೇಲಿದೆ ಹಿರಿಯ ಕರ್ರನೆ ಕರಡಿ ಮೋರೆ!
ತೆಕ್ಕನೆಯೆ ಕಣ್ದೆರೆಯೆ ನರನಾ ಕಾಳ್ಮಿಗಂ ಬೆಚ್ಚಿ ೪೦೦
ಹೂಂಕರಿಸುತೋಡಿಯಡವಿಗೆ ಜುಣುಗುವುದು ಜವದಿ.
ಬೇಡನಾದರೊ ತೆರೆದ ಕಣ್ಗಳ ಮುಚ್ಚಲಾರದೆ,
ಕೂಗಲಾರದ ಚಲಿಸಲಾರದತಿ ವಿಸ್ಮಯದಿ,
ಕಂಗೆಟ್ಟು, ಮರವಟ್ಟು. ಬಡಿದುದನೆ ಬಲ್ ಗರಂ
ಮಿಳ್ಮಿಳನೆ ನೋಡುವನ್ ಕರಡಿ ಹೋದತ್ತಕಡೆ
ಮಂಕು ಮರುಳಾಗಿ! — ಹಾ ! ನಿಂತಳಂತಯೆ ತರುಣಿ,
ತನ್ನ ಬಾಳಿನ ಬಯಕೆಯಾರಾಧನೆಯ ಮೂರ್ತಿ,
ತನ್ನಿಷ್ಟದೇವತೆಯೆ, ತನ್ನೊಲುಮೆಯರ್ಜುನನೆ,
ತನ್ನೆದುರಿನೊಳ್ ಮೂಡಿ, ತಿಳಿಯದೊಂದಾಡಿತದ
ತನ್ನ ತಿಳಿಗೇಡಿತನಕಲಸಿ ಮರೆಯಾಗುತಿರೆ ೪೧೦
ವನಮಧ್ಯದಲ್ಲಿ! ಅಂತಿರಲಿರಲ್, ವಿಸ್ಮಯಂ
ಶೋಕಕೆಡೆಗೊಟ್ಟು ಚೆಲ್ಲಿತು ಹೆಣ್ಣ ಕಣ್ಣಿನಲಿ
ಬಿಸುಗಂಬನಿಯ ಹೊನಲ್! ಸುತ್ತಲುಂ ಮೆರೆದತ್ತು
ಚೈತ್ರೋದಯದ ವಿಪುಲ ಸಂಪತ್ತು. ಆದೊಡೇನಾ
ಕನ್ಯೆಯಾತ್ಮವದಿತ್ತನಂತ ದಾರಿದ್ರ್ಯದೋಲ್!