’ಕಥಕ್’ ಶೈಲಿಗೆ ಬೆಂಗಳೂರಿನಲ್ಲೇ ಏಕೆ, ದಕ್ಷಿಣದಲ್ಲೇ ಒಂದು ಸ್ಥಿರವಾದ ಸ್ಥಾನಮಾನವನ್ನು ದೊರಕುವಂತೆ ಮಾಡಿರುವ ಕೀರ್ತಿ ಮಾಯಾರಾವ್‌ರವರಿಗೆ ಸಲ್ಲಬೇಕು. ಅವರಂತೆ ತಮ್ಮ ಮತ್ತೊಬ್ಬ ಸೋದರಿ ಉಮಾರಾವ್‌ರೊಂದಿಗೆ ಚಿಕ್ಕವಯಸ್ಸಿನಲ್ಲಿಯೇ ಆ ಉತ್ತರ ಭಾರತದ ನೃತ್ಯ ಶೈಲಿಯನ್ನು ಕರಗತ ಮಾಡಿಕೊಂಡು, ತಮ್ಮ ತಾರುಣ್ಯದ ದಿನಗಳಲ್ಲಿ ನಗರ, ರಾಜ್ಯದಲ್ಲಿ ಪ್ರದರ್ಶನಗಳನ್ನಿತ್ತು, ಆ ಅವಧಿಯಲ್ಲಿ ತಮ್ಮ ಗುರು ಮನೆತನದ ಚಿಗುರಾದ ಬೃಜು ಮಹಾರಾಜ್ ರಾಜ್ಯಕ್ಕೆ ಭೇಟಿಕೊಟ್ಟಾಗ, ಈ ರಾವ್ ಸಹೋದರಿಯರು ಆ ಖ್ಯಾತ ಕಲಾವಿದೆಯೊಂದಿಗೆ ನರ್ತಿಸಿದ ಹೆಗ್ಗಳಿಕೆ. ಮುಂದೆ ಉಮಾ ನೃತ್ಯವನ್ನು, ತ್ಯಜಿಸಿದರು. ಚಿತ್ರಾ ತಮ್ಮ ಕಾಲೇಜು ವ್ಯಾಸಂಗವನ್ನು ಮುಗಿಸುವ ಮೊದಲೇ ತಮ್ಮ ಅಕ್ಕ ಮಾಯಾ ಎಂ.ಎಸ್. ನಟರಾಜನ್‌ರೊಂದಿಗೆ ಸ್ಥಾಪಿಸಿದ, ಅಲ್ಪಾಯಸ್ಸಿನ ’ನಾಟ್ಯ ಸರಸ್ವತಿ’ ಯಲ್ಲಿ ನೃತ್ಯ ಶಿಕ್ಷಕಿಯಾಗಿ ಅನುಭವ ಗಳಿಸಿಕೊಂಡರು.

ಮುಂದೆ ತಮ್ಮ ಡಿಗ್ರಿಯನ್ನು ಗಳಿಸಿದ ನಂತರ ಮಾಯಾರವರ ಜಾಡನ್ನೇ ಹಿಡಿದು ಹವ್ಯಾಸಿಯಾಗಿ ಆರಂಭಿಸಿದ ಕಲೆಯನ್ನು ವೃತ್ತಿಯನ್ನಾಗಿಸಿಕೊಂಡು ಕೇಂದ್ರ ಸರ್ಕಾರದ ಶಿಷ್ಯವೇತನದ ನೆರವಿನಿಂದ ಭಾರತೀಯ ಕಲಾ ಕೇಂದ್ರದಲ್ಲಿ, ಖ್ಯಾತನಾಮರಾದ ಶಂಭು ಮಹಾರಾಜರಿಂದ ಕಥಕ್‌ನಲ್ಲಿ ಪಾಂಡಿತ್ಯವನ್ನು ಮಾಯಾರಾವ್‌ರಿಂದ ನೃತ್ಯ ಸಂಯೋಜನಾ ಕಲೆಯನ್ನೂ ಗಳಿಸಿದರು. ಅದೇ ಅವಧಿಯಲ್ಲಿ ಡಾಗರ್ ಸಹೋದರರಿಂದ ಸಂಗೀತವನ್ನು ಕಲಿತರು.

ಅಲ್ಲಿಂದ ಮುಂದೆ ಚಿತ್ರಾ ದೇಶ-ವಿದೇಶಗಳಲ್ಲಿ ಸಂಚರಿಸಿ ಕಥಕ್ ಶೈಲಿಯನ್ನು ಜನಪ್ರಿಯಗೊಳಿಸುವಲ್ಲಿ ಕಾರ್ಯೋನ್ಮುಖರಾದರು. ಪ್ರಸ್ತುತ ತಮ್ಮ ಸಹೋದರಿ ಮಾಯಾರವರು ನಗರದಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾನಿಲಯದ ಮಟ್ಟದ ಕಥಕ್ ಮತ್ತು ಕೋರಿಯೋಗ್ರಫಿ ಸಂಸ್ಥೆಯಲ್ಲಿ ಶಿಕ್ಷಣವನ್ನು ಒದಗಿಸಿ, ಈ ಶಿಕ್ಷಣವನ್ನು ಭಾರತೀಯ ವಿದ್ಯಾ ಭವನವು ನಡೆಸುತ್ತಿರುವ ಕಲಾ ಭಾರತಿಯಲ್ಲಿ ಮುಂದುವರಿಸುತ್ತಿದ್ದಾರೆ.

ಇಂತಹ ಸಾರ್ಥಕ ಕಲಾ ಜೀವನವನ್ನು ಸಾಧಿಸಿರುವ ಇವರಿಗೆ ನಮ್ಮ ಅಕಾಡೆಮಿ ತನ್ನ ೧೯೯೬-೯೭ನೇ ಸಾಲಿನ ಪ್ರಶಸ್ತಿ ಹಾಗೂ ’ಕರ್ನಾಟಕ ಕಲಾ ಶ್ರಿ ’ಬಿರುದನ್ನಿತ್ತು ಗೌರವಿಸಿದೆ.