ಬೆಂಗಳೂರಿನಿಂದ ಪುಣೆಗೆ ಹೋಗುವ ರೈಲಿನಲ್ಲಿ ಕುಳಿತುಕೊಳ್ಳಿ. ತುಮಕೂರನ್ನು ದಾಟಿ ಮುಂದಕ್ಕೆ ಹನ್ನೆರಡು ಮೈಲಿ ಪ್ರಯಾಣ ಮಾಡಿದರೆ ಗುಬ್ಬಿ ನಿಲ್ದಾಣ ಬರುತ್ತದೆ.  ಅಲ್ಲಿ ಕೆಳಕ್ಕಿಳಿಯಿರಿ. ರೈಲು ಹಳಿಗಳನ್ನು ದಾಟಿಕೊಂಡು ಉತ್ತರಕ್ಕೆ ಬನ್ನಿ, ಅಲ್ಲಿಂದ ಪೂರ್ವಕ್ಕೆ ಹಳ್ಳಿಗಳ ಪಕ್ಕದಲ್ಲಿಯೇ ಒಂದು ಹಾದಿಹೋಗುತ್ತದೆ.  ಅದರಲ್ಲಿ ಸುಮಾರು ಒಂದು ಫರ್ಲಾಂಗು ದೂರ ನಡೆದು ಬನ್ನಿ. ಅಲ್ಲಿ ಸೊಗಸಾದ ಸಣ್ಣ ತೆಂಗಿನ ತೋಟವೊಂದು ನಿಮಗೆ ಇದಿರಾಗುತ್ತದೆ.  ಅದರ ಪಕ್ಕದಲ್ಲಿಯೇ ನಾಲ್ಕು ಹೆಜ್ಜೆ ನಡೆದರೆ ನಾಲ್ಕಾರು ಮನೆಗಳು ಕಣ್ಣೀಗೆ ಬೀಳುತ್ತವೆ. ಸುತ್ತಲೂ ಹಚ್ಚಹಸುರಾದ ಹೊಲಗಳ ಮಧ್ಯ ಸಣ್ಣದೊಂದು ದ್ವೀಪದಂತೆ ಕಾಣಿಸುವ ಈ ಪುಟ್ಟ ಹಳ್ಳಿಯ ಹೆಸರು “ಚಿದಂಬರಾಶ್ರಮ”ಎಂದು. ಚಿದಂಬರ ಎಂಬ ಹೆಸರಿನ ಸಾಧುಗಳು ಒಬ್ಬರು ನಲವತ್ತು ವರ್ಷಗಳ ಕೆಳಗೆ ಇದನ್ನು ಸ್ಥಾಪಿಸಿದರು. ಚಿದಂಬರರು ಸ್ಥಾಪಿಸಿದ ಆಶ್ರಮವಾದ್ದರಿಂದ ಇದು “ಚಿದಂಬರಾಶ್ರಮ”

ತಂದೆತಾಯಿ:

ತುಮಕೂರು ಜಿಲ್ಲೆಯಲ್ಲಿ ಸೆಟ್ಟಕರೆ ಎಂಬ ಒಂದು ಸಣ್ಣ ಹಳ್ಳಿಯಿದೆ. ಅಲ್ಲಿ  ಸುಮಾರು ಒಂದು ನೂರು  ವರ್ಷಗಳ ಕೆಳಗೆ ತಿಮ್ಮಪ್ಪ ಎಂಬ ಒಬ್ಬ ಬಡ ಬ್ರಾಹ್ಮಣನಿದ್ದ. ತಿಮ್ಮಪ್ಪ ಹೆಚ್ಚು ಓದಿದವನಲ್ಲ. ಹಳ್ಳಿಯಲ್ಲಿದ್ದ ಒಂದು ಸಣ್ಣ ಅಂಚೇ ಕಚೇರಿಯಲ್ಲಿ ನೌಕರನಾಗಿದದ. ಸಂಬಳ ತಿಂಗಳಿಗೆ ಮೂರು ರೂಪಾಯಿ ಮಾತ್ರ. ಈತನಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗಿ ಹೆಂಡತಿ ತೀರಿಕೊಂಡಿದ್ದಳೂ. ಬಡತನದಿಂದ ಮತ್ತೇ ಮದುವೆಯಾಗಲಿಲ್ಲ.  ಆತನ ವಯಸ್ಸು ನಲವತ್ತಕ್ಕೆ ಏರಿತು. ಇನ್ನೂ ಮದುವೆಯ ಯೋಚನೆ ಇಲ್ಲವೆಂದು ತಿಮ್ಮಪ್ಪ. ಆದರೆ ಆತನ ಆದೃಷ್ಟ ಒಳ್ಳಯದು. ಗೌರಮ್ಮ ಎಂಬ ಹುಡುಗಿಯೊಡನೆ ಮದುವೆಯಾಯಿತು.

ಗೌರಮ್ಮ ಸುಂದರಿಯಾದಂತೆ ಸುಗುಣೆಯೂ ಆಗಿದ್ದಳು. ಆಕೆ ತುಂಬ ಆದೃಷ್ಟವಂತೆಯೂ ಹೌದು. ಆಕೆ ಮನೆತುಂಬಿದ ಒಂದುವರ್ಷದೊಳಗೆ ತಿಮ್ಮಪ್ಪನಿಗೆ ನರಸಿಂಹರಾಜಪೂರದ ಅಂಚೆ ಅಧಿಕಾರಿ ಯಾಗುವ ಸುಯೋಗವು ದೊರೆಯಿತು. ಗೌರಮ್ಮ ಒಳ್ಳೆಯ ವಂಶದಲ್ಲಿ ಹುಟ್ಟಿದವಳೂ, ದೈವಭಕ್ತಳು, ಶಾಂತಮೂರ್ತಿ, ಗಂಡನನ್ನು ದೇವರೆಂದು ಭಾವಿಸಿದ್ದಳೂ.. ಈ ದಂಪತಿಗಳ ಹಿರಿಯ ಮಗನಾಗಿ ಹುಟ್ಟಿದ ವೆಂಕಟರಾಮಯ್ಯ” ಈತನೇ ಮುಂದೆ ಚಿದಂಬರನೆಂದು ಪ್ರಸಿದ್ಧನಾದ.

ವೆಂಕಟರಾಮಯ್ಯ ಹುಟ್ಟಿದುದು ದರ್ಮುಖಿ ಸಂವತ್ಸರದ ಮಾಘ ಶುದ್ಧ ಚತುರ್ಥಿಯಂದು (೫-೨-೧೮೯೭) ಸ್ವತಃ ಜ್ಯೋತಿಷಿಯಾಗಿದ್ದ ತಿಮ್ಮಪ್ಪನ ಜಾತಕವನ್ನು ಬರೆದ. ಗ್ರಹಗಳೆಲ್ಲವೂ ಉಚ್ಛ ಸ್ಥಾನದಲ್ಲಿದ್ದವು. ಆತನು ಮುಂದೆ ಒಬ್ಬ ಮಹಾಪುರುಷನಾಗುವನೆಂದು ತಿಳಿದು ತಾಯಿ- ತಂದೆಗಳಿಬ್ಬರೂ ಸಂತೋಷದ ಸಮುದ್ರದಲ್ಲಿ ತೇಲಾಢಿದರು. ಆ ಸಮಯದಲ್ಲಿ ತಿಮ್ಮಪ್ಪನಿಗೆ ಆ ಊರಿನಲ್ಲಿ ಮುನ್ಸಿಫರಾಗಿದ್ದ ಬಿ.ವೆಂಕಟಾಚಾರ್ಯರ ಪರಿಚಯವಾಯಿತು. ಅವರು ಕನ್ನಡದಲ್ಲಿ ಬಹು ದೊಡ್ಡ ಕಾದಂಬರಿಕಾರಗಳ ಅನುವಾದಕರು.  “ದೇವಿ ಚೌಧುರಾಣಿ,” ಆನಂದಮಠ, “ವಿಷವೃಕ್ಷ ಮೊದಲಾದ ಅವರ ಅನುವಾದಿತ ಕಾದಂಬರಿಗಳು ಕನ್ನಡದಲ್ಲಿ ಬಹು ಪ್ರಸಿದ್ಧವಾಗಿವೆ.

ಬಾಲ್ಯ :

ಮಗುವಾದ ವೆಂಕಟರಾಮಯ್ಯ ಬಲು ಚೆಲುವಾಗಿದ್ದ. ಮುದ್ದಿನ ಮುದ್ದೆಯಂತಿದ್ದ ಆತನನ್ನು ತಂದೆ-ತಾಯಿಗಳು ಮಾತ್ರವೆ ಅಲ್ಲ. ಊರಿನ ಜನರೆಲ್ಲ ಎತ್ತಿ ಆಡಿಸುತ್ತಿದ್ದರು.

ಗೌರಮ್ಮ ಒಂದು ದಿನ ನೀರು ಹಾಕಿಕೊಳ್ಳುವಾಗ ತನ್ನ ಒಡವೆಗಳನ್ನೆಲ್ಲ ಮಗುವಿನ ಮುಂದೆ ಹಾಕಿ ಬಚ್ಚಲು ಮನೆ ಸೇರಿದಳು. ಆ ಒಡವೆಗಳನ್ನಿಟ್ಟುಕೊಂಡು ಮಗು ಆಟವಾಡುತ್ತಿರಲೆಂದು ಆಕೆಯ ಯೋಚನೆ. ಆದರೆ ಮಗು ಆ ಒಡವೆಗಳನ್ನೆಲ್ಲ ಎತ್ತಿಕೊಂಡು ಬೀದಿಗೆ ನಡೆಯಿತು. ಬೀದಿಯಲ್ಲಿ ಹೋಗುತ್ತಿದ್ದ ಕಳ್ಳನೊಬ್ಬನಿಗೆ  ಇದು ಕಾಣಿಸಿತು. ಅವನು ಮಗುವಿಗೆ ಕೈಗೆ ಮಿಠಾಯಿಯನ್ನು ಕೊಟು, ಅದನ್ನು ಮುದ್ದಾಡುತ್ತಾ ಎತ್ತಿಕೊಂಡ: ಹಾಗೆ ಎತ್ತಿಕೊಂಡು ರಸ್ತೆ ಹಿಡಿದು ಹೊರಟ. ಅವನು  ಊರನ್ನು ದಾಟಿ, ಒಂದು ಮೈಲಿ ದೂರ ಬಂದ. ಅಲ್ಲಿ ಒಂದು  ಬಾವಿ ಇತ್ತು. ಅವನು ಅದರೊಳಗೆ ಇಳಿದ.ಮಗುವನ್ನು ಬಾವಿಯಲ್ಲಿ ಹಾಕಿ,ಒಡವೆಗಳನ್ನು ಎತ್ತಿಕೊಂಡು ಹೋಗಬೇಕೆಂಬುವುದೇ ಅವನ ಹಂಚಿಕೆ. ಆದರೆ ದೇವ ದಯೆ! ಆ ವೇಳೆಗೆ ಸರಿಯಾಗಿ ಟಿಪ್ಪಾಲು  ಹೊತ್ತುಕೊಂಡು  ಅಂಚೆಯ ಅಳೂ ಅಲ್ಲಿಗೆ ಬಂದ. ಆತನಿಗೆ ತನ್ನ ಯಜಮಾನನ ಮಗು ಕಾಣಿಸಿತು. ಅವನು ಮೆಲ್ಲನೆ ಬಾವಿಯಲ್ಲಿ ಇಳಿದು ಕಳ್ಳನನ್ನು ಕಟ್ಟಿಹಾಕಿದ.ಮಗುವನ್ನು ಮನೆಗೆ ಕರೆ ತಂದ.

ಮಗುವಾಗಿದ್ದ ವೆಂಕಟರಾಮಯ್ಯ ಬೆಳೆದು ಬಾಲಕನಾದ. ಅವನನ್ನು ಶಾಲೆಗೆ ಸೇರಿಸಿದರು. ಹುಡುಗ ತುಂಬಾ ಚುರುಕನಾಗಿದ್ದ. ಉಪಾದ್ಯಾಯರಿಗೆ ಅವನನ್ನು ಕಂಡರೆ ಬಲು ಪ್ರೀತಿ. ಒಮ್ಮೆ ಕೇಳಿದರೆ ಸಾಕು. ಪಾಠವು ಅವನ ಬಾಯಿಗೆ ಬಂದುಬಿಡುವುದು. ಇತರರು ಆರು ವರ್ಷಕ್ಕೆ ಓದಿ ಮುಗಿಸಿದ. ಎಂಟು ವರ್ಷ ತುಂಬುವುದರೊಳಗೆ ಅವನು ಲೋವರ ಸೆಕೆಂಡರಿ ತರಗತಿಗೆ ಬಂದ. ಸಂಪ್ರದಾಯಶೀಲರಾದ ತಿಮ್ಮಪ್ಪ ಮಗನಿಗೆ ಎಂಟು ವರ್ಷಕ್ಕೆ ಉಪನಯಕ ಮಾಡಿದರು. ಸಂದ್ಯಾವಂದನೆ, ದಾನ, ಪೂಜೆ, ಅಗ್ನಿ ಕಾರ್ಯ ಮೊದಲಾದ ಕರ್ಮಗಳನ್ನು ಅವುಗಳನ್ನು ಮಂತ್ರಗಳನ್ನು  ಅರ್ಥಸಹಿತವಾಗಿ ಹೇಳಿಕೊಟ್ಟರು.

ಮಹಾಭಾರತದ ಆಕರ್ಷಣೆ:

ಬಾಲಕನಾದ ವೆಂಕಟರಾಮಯ್ಯನಿಗೆ ಕಥೆಯೆಂದರೆ ಪ್ರಾಣ. ಅವನು ಒಂದು ದಿನ ರಾತ್ರಿ ತಂದೆಯ ಪಕ್ಕದಲ್ಲಿ ಮಲಗಿಕೊಂಡು, “ಅಪ್ಪಾ ಒಂದು ಕಥೆ ಹೇಳಿ:” ಎಂದ.  ತಂದೆಯು ದ್ರೌಪದಿ ಸ್ವಯಂ ವರದ ಕಥೆಯನ್ನು ಹೇಳಿದರು. ಆ ಕಥೆಯನ್ನು ಕೇಳಿದ ವೆಂಕಟರಾಮಯ್ಯನಿಗೆ ಇಡೀ ಮಹಾಭಾರತವನ್ನು ಓದಬೇಕೆಂಬ ಬಯಕೆಯಾಯಿತು. ತನಗೆ ಕನ್ನಡ ಭಾರತವನ್ನು ತರಿಸಿಕೊಡಬೇಕೆಂದು ಆತ ತಂದೆಯನ್ನು ಬೇಡಿದ. ಅವರು ಬೆಂಗಳೂರಿನಿಂದ ಕುಮಾರವ್ಯಸನ ಭಾರತವನ್ನು ತರಿಸಿಕೊಟ್ಟರು.  ಹುಡುಗ ಅದನನ್ನು ಮೊದಲಿನಿಂದ ಕೊನೆಯವರೆಗೆ ಓದುತ್ತಾ ಹೋದ. ತನಗೆ ತಿಳೀಯದ ಭಾಗವನ್ನು ತಂದೆಯಿಂದ  ಕೇಳಿ ತಿಳೀದುಕೊಳ್ಳುವನು. ಮಹಾಭಾರತದ ಭಾವ, ಭಾಷೆಗಳುಹುಡುಗನ ಮನಸ್ಸನ್ನು ಹೊಕ್ಕು ನಿಂತವು. ಬಾಲಕ ವೆಂಕಟರಾಮಯ್ಯ ಚಿದಂಬರರಾದಾಗ ಇದನ್ನು ನೆನೆದು, ವಿದ್ಯೆ ಹೊರಗಿನಿಂದ ಬರತಕ್ಕದ್ದಲ್ಲ: ಅದು ಒಳಗೆ ಇದೆ. ಅದು ಹೊರಗೆ ಕಾಣಿಸಿಕೊಳ್ಳುವಂತೆ ಮಾಡುವುದೇ ವಿಧ್ಯಾಬ್ಯಾಸ ಎನ್ನುತ್ತಿದ್ದರು.

ವೆಂಕಟಾಚಾರ್ಯರು ತಾವು ಬರೆದ ಕಾದಂಬರಿಗಳನ್ನೆಲ್ಲ ತಿಮ್ಮಪ್ಪನವರಿಗೆ ಕೊಡುತಿದ್ದರು. ಅವನ್ನು ಬಾಲಕ ವೆಂಕಟರಾಮಯ್ಯ ಆತುರದಿಂದ ಓದುತ್ತಿದ್ದ. ಹಿರಿಯರಾದವರು ಅವುಗಳನ್ನು ಕುರಿತು ಚರ್ಚಿಸುತ್ತಿರುವಾಗ ಈ ಹುಡುಗ ಬಾಯಿಬಿಟ್ಟುಕೊಂಡು ಅವರ ಮಾತನ್ನು ಆಲಿಸುತ್ತಿದ್ದ.  ನಡು-ನಡುವೆ ತಾನೂ ಕೆಲವು ಮಾತನ್ನಾಡುತ್ತಿದ್ದ. ಅವನ ಜಾಣತನದ ಮಾತುಗಳನ್ನು ಕೇಳಿ ವೆಂಕಟಾಚಾರ್ಯರಿಗೆ ಆಶ್ಚರ್ಯವಾಗುತ್ತಿತ್ತು. ಅವರ ಕಾದಂಬರಿಗಳೆಲ್ಲ  ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ತಂದುಕೊಂಡವುಗಳು. ಹುಡುಗನಿಗೆ ತಾನೂ ಬಂಗಾಳಿಯನ್ನು ಕಲಿಯಬೇಕೆಂಬ ಬಯಕೆ. ವೆಂಕಟಾಚಾರ್ಯರು ಸಂತೋಷದಿಂದ ಹುಡುಗನಿಗೆ ಬಂಗಾಳಿಯನ್ನು ಕಲಿಸಿಕೊಟ್ಟರು. ತಂದೆ ಮನೆಯಲ್ಲಿ ಸಂಸ್ಕೃತವನ್ನು  ಹೇಳೀಕೊಡುತ್ತಿದ್ದರು.  ಹೀಗಾಗಿ ಎಂಟು ವರ್ಷದ ವೆಂಕಟರಾಮಯ್ಯ ಕನ್ನಡ, ಸಂಸ್ಕೃತ ಮತ್ತು ಬಂಗಾಳಿ ಭಾಷೆಗಳಲ್ಲಿ ಸರಾಗವಾಗಿ ಓದುವುದಕ್ಕೂ ಬರೆಯುವುದಕ್ಕೂ ಶಕ್ತನಾದ.

ಪ್ರಕೃತಿಸಜ್ಜನರ ಜೊತೆಗೆ :

ವೆಂಕಟರಾಮಯ್ಯ ನರಸಿಂಹರಾಜಪುರದಲ್ಲಿ ಬಾಲ್ಯವನ್ನು ಕಳೆದುದು ಆತನ ಬಾಳು ಬೆಳಗುವುದಕ್ಕೆ ಬಹಳ ಸಹಾಯಕವಾಯಿತು. ಆ ಊರು ಇರುವುದು ಮಲೆನಾಡಿನ ಗರ್ಭದಲ್ಲಿ; ಪ್ರಕೃತಿ ಮಾತೆಯ ತೋಳ ತೆಕ್ಕೆಯಲ್ಲಿ ಹುಡುಗ ವೆಂಕಟರಾಮಯ್ಯ ಬೆಳಿಗ್ಗೆ ಮತ್ತು ಸಂಜೆ ಹತ್ತಿರದ ಕಾನನದಲ್ಲಿ ಅಲೆದಾಡುತ್ತಿದ್ದ. ಪ್ರಕೃತಿ ಮಧ್ಯದಲ್ಲಿ ಪ್ರಕೃತಿಯಂತೆ ಬಾಳಿದ ಆ ಬಾಲಕನಲ್ಲಿ ಪ್ರಕೃತಿ ಪ್ರೇಮದೊಡನೆ ದೈವಭಾವನೆಯೂ ಮೈಗೂಡಿತು. ನರಸಿಂಹರಾಜಪುರವಿರುವುದು ಶೃಂಗೇರಿಯ ಹಾದಿಯಲ್ಲಿ. ಹಿಂದಿನ ಕಾಲದಲ್ಲಿ ಇಂದಿನ ಹಾಗೆ ರೈಲು, ಬಸ್ಸುಗಳೀರಲಿಲ್ಲ. ಶೃಂಗೇರಿಗೆ ಹೋಗುವವರು ಗಾಡಿಯಲ್ಲೊ, ನಡಿಗೆಯಿಂದಲೋ ಪ್ರಯಣ ಮಾಡಬೇಕಾಗಿತ್ತು. ಹಾಗೆ ಪ್ರಯಣ ಮಾಡುವ ಜನ ನರಸಿಂಹರಾಜಪುರದಲ್ಲಿ ತಂಗಬೇಕಾಗಿತ್ತು. ಆಗಿನ ಕಾಲದಲ್ಲಿ  ಹೋಟೆಲುಗಳಿರಲಿಲ್ಲ. ಯಾತ್ರಿಕರು ತಿಮ್ಮಪ್ಪನವರ ಮನೆಯಲ್ಲಿ ಬಿಡಾರ ಹಾಕುತ್ತಿದ್ದರು. ಆತನು ಕುಚೇಲನಂತೆ ಬಡವನಾದರೂ ಕರ್ಣನಂತೆ ದಾನಶೂರ. ಆತನಲ್ಲಿ ಊಟ  ಉಪಚಾರಗಳಾದ ಮೇಲೆ ದೇವರು- ಧರ್ಮಗಳ ವಿಚಾರದಲ್ಲಿ ಚಿರ್ಚೆ ನಡೆಸುತ್ತಿದ್ದರು. ವೆಂಕಟರಾಮಯ್ಯ ಅದನ್ನು ಆಸಕ್ತಿಯಿಂದ  ಕೇಳುತ್ತಿದ್ದ. ಹೀಗೆ ಆತನ ಜ್ಞಾನ ಬೆಳೆಯುತ್ತಿತ್ತು.

ವೆಂಕಟರಾಮಯ್ಯ ೧೯೦೬ನೇ ಇಸವಿಯಲ್ಲಿ ಲೋವರ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದ. ಮಗನು ತೇರ್ಗಡೆಯಾಗುವಷ್ಟರಲ್ಲಿ ಅಪ್ಪನಿಗೆ ಕೆಲಸದಿಂದ ನಿವೃತ್ತಿಯಾಯಿತು. ಆದ್ದರಿಂದ ತಇಮ್ಮಪ್ಪನ ಸಂಸಾರ ಸೆಟ್ಟೆಕೆರೆಯನ್ನು ಸೇರಬೇಕಾಯಿತು. ತಿಮ್ಮಪ್ಪ ಸಂಪದಿಸಿದುದನ್ನೆಲ್ಲ ಖರ್ಚು ಮಾಡಿದ್ದ. ಆದ್ದರಿಂದ  ಈಗ ಅವನ ಸಂಸಾರಕ್ಕೆ ಹಿಟ್ಟಿಲ್ಲದಂತಾಯಿತು. ಪರೀಕ್ಷೆಯಲ್ಲಿ ತೇರ್ಗಡೆಯಾದ ಮಗ ಸರಕಾರಿಯ ಕೆಲಸಕ್ಕೆ ಸೇರಲೆಂದು ತಂದೆ ಬಯಸಿದ. ಆದರೆ ಒಂಭತ್ತು ವರ್ಷದ ಬಾಲಕನಿಗೆ ಯಾರು ತಾನೆ ಕೆಲಸ ಕೊಡಬೇಕು, ಯಾವ ಕೆಲಸ ಕೊಡಬೇಕು? ಅನೇಕ ದಿನಗಳು ಆ ಸಂಸಾರದವರು ಕಡಲೆಪುರಿ ತಿಂದುಕೊಂಡು ಕಾಲ ತಳ್ಳುತ್ತಿದ್ದರು.

ನೀನು ಪುಣ್ಯಶಾಲಿ:

ಏನೂ ಮಾಡದೆ ಸುಮ್ಮನೆ ಮನೆಯಲ್ಲಿ ಕುಳಿತಿರುವುದು ವೆಂಕಟರಾಮಯ್ಯನಿಗೆ ಸಾಧ್ಯವಿರಲಿಲ್ಲ.ಆತ ಇಂಗ್ಲೀಷ ವಿದ್ಯೆಯನ್ನು ಕಲಿಯಬೇಕೆಂದುಕೊಂಡ. ಮಧ್ಯಾಹ್ನದ ಹಿಟ್ಟಿಗೆ ಗತಿಯಿಲ್ಲದಿರುವಾಗ ಇಂಗ್ಲೀರ್ಷ ಓದಿಸಲು ಹಣವೆಲ್ಲಿ ತರುವುದು? ತಂದೆಯ ಕಷ್ಟ ಮಗನಿಗೆ ಅರ್ಥವಾಯಿತು. ಆತನು ಒಂದು ದಿನ ಯಾರಿಗೂ ತಿಳಿಸದೇ ಉಟ್ಟ ಬಟ್ಟೆಯಲ್ಲಿಯೇ  ಮನೆ ಬಿಟ್ಟು ಹೊರಟ. ಆತನ ಗುರಿ ತರುವೆಕೆರೆಯಲ್ಲಿದ್ದ ಇಂಗ್ಲೀಷ ಶಾಲೆ. ಹಾದಿಯಲ್ಲಿ ತಾಯಿಯ ತೌರು ಮನೆಯಾದ ಕೊಂಡಜ್ಜಿ ಸಿಕ್ಕಿತ್ತು. ಹುಡುಗ ಅಲ್ಲಿದ್ದ ತನ್ನ ಸೋದರಮಾವನಲ್ಲಿ ತನ್ನ ಸಂಕಟವನ್ನು ಹೇಳಿಕೊಂಡ. ಆತ ಸಹಾಯ ಮಾಡುವುದಾಗಿ ಹೇಳೀ, ಅಳಿಯನನ್ನು ಸಮಾಧಾನ ಮಾಢಿದ. ಆದರೆ ಅತ ಇಂದು ನಾಳೆ ಎಂದು ದಿನಗಳನ್ನು ತಳ್ಳುತ್ತಿದ್ದ. ಹುಡುಗನನ್ನು ತುರುವೆಕೆರೆಗೆ ಕರೆದೊಯ್ಯಲಿಲ್ಲ.

 

ಮಗು, ನೀನು ಪುಣ್ಯಶಾಲಿ’

ಹೀಗೆ ಕಾಲ ಉರುಳುತ್ತಿರಲು ಒಂದು ದಿನ ಆ ಊರಿಗೆ ಒಬ್ಬ ಸಂನ್ಯಾಸಿ ಬಂದರು. ಅವರು ನೇರವಾಗಿ  ನಡೆದು ಊರಿನ ಮಧ್ಯದಲ್ಲಿರುವ ಗೋಪಾಲಕೃಷ್ಣ ದೇವರ ಗುಡಿಯನ್ನು ಪ್ರವೇಶಿಸಿದರು. ಅವರು ಒಳಕ್ಕೆ ಹೋಗಿ ಚಿಲಕ ಹಾಕಿಕೊಂಡರು. ಮೂರು ದಿನಗಳವರೆಗೆ ಅವರು ಬಾಗಿಲನ್ನು ತೆರೆಯಲಿಲ್ಲ. ಪೂಜಾರಿಯು ಬಾಗಿಲಿಗೆ ಪೂಜೆ ಮಾಡಿಕೊಂಡು ಹೋಗಬೇಕಾಯಿತು. ನಾಲ್ಕನೆಯ ದಿನ ಅವರು ಬಾಗಿಲನ್ನು ತೆರೆಯುತ್ತಲೇ ಊರಿನ ಜನರೆಲ್ಲ ಬಂದು ನೆರೆದರು.ಅವರು ಆ ಸಂನ್ಯಾಸಿಗೆ ಭಕ್ತಿಯಿಂದ ನಮಸ್ಕರಿಸಿ, ಆತನು ಕೊಟ್ಟ ತೀರ್ಥವನ್ನು ಸ್ವೀಕರಿಸಿದರು. ಆ ಜನರ ಗುಂಪಿನಲ್ಲಿ ವೆಂಕಟರಾಮಯ್ಯನೂ ಸೇರಿಕೊಂಡಿದ್ದ. ಅವನನ್ನು ಕಾಣುತ್ತಲೇ ಸಂನ್ಯಾಸಿ ಅವನನ್ನು ಹತ್ತಿರ ಕರೆದು, ಅವನ ತಲೆಯನ್ನು ಸವರುತ್ತಾ, “ಮಗು, ನೀನು ಪುಣ್ಯಶಾಲಿ. ಮುಂದೆ ನೀನು ಮಹಾಪುರುಷನಾಗುತ್ತಿ, ಜನರನ್ನು ಉದ್ಧಾರ ಮಾಡುತ್ತೀ” ಎಂದರು. ವೆಂಕಟರಾಮಯ್ಯ ತನ್ನ ಸಂಕಟವನ್ನು ಅವರಲ್ಲಿ ಹೇಳಿಕೊಂಡ. ಆಗ ಅವರು ” ಮಗು ಇಲ್ಲಿಂದ ತುರುವೆಕೆರೆಗೆ  ಐದು ಮೈಲಿ. ಅಲ್ಲಿಗೆ ಹೋಗಲು ನಿನ್ನ ಮಾವನ ಸಹಾಯ ಏಕೆ ಬೇಕು? ಹಾದಿಯನ್ನು ವಿಚಾರಿಸಿಕೊಂಡು ಹೋಗು. ನಿನ್ನ ಸಹಾಯಕ್ಕೆ ದೇವರು ಇದ್ದಾನೆ” ಎಂದರು.

ಸಂನ್ಯಾಸಿಯ ಅಪ್ಪಣೆಯಂತೆ ವೆಂಕಟರಾಮಯ್ಯ ತುರುವೆಕೆರೆಗೆ ನಡೆದುಕೊಂಡು ಹೋದ. ಊರ ಬಾಗಿಲಿನಲ್ಲಿಯೇ ಆ ಊರಿನ ಶಾನಭೋಗರಾದ ರಂಗಣ್ಣನವರು ಇದಿರಾದರು. ಅವರು ಅವನನ್ನು ,”ಯಾರು ನೀನು” ಎಲ್ಲಿಂದ ಬಂದೆ? ಏಕೆ ಬಂದೆ?” ಎಂದು ಕೇಳಿದರು. ವೆಂಕಟರಾಮಯ್ಯ ಎಲ್ಲಕ್ಕೂ ಉತ್ತರಕೊಟ್ಟ. ಅವರು ಆ ಬಾಲಕನನನ್ನು ಮನೆಗೆ ಕರೆದೊಯ್ದರು. ಅವರೇ ಅವನನ್ನು ಶಾಲೆಗೆ ಸೇರಿಸಿದರು. ನಾಲ್ಕು ವರ್ಷಗಳ ಕಾಲ ಅಭ್ಯಾಸ ಮಾಡಿ ಇಂಗ್ಲೀಷ ಲೋವರ್ ಸೆಕೆಂಡರಿಯಲ್ಲಿ ತೇರ್ಗಡೆ ಹೊಂದಿದ.

ಉಪಾಧ್ಯಾಯಅಂಚೆ ಗುಮಾಸ್ತೆ :

ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಲೇ ವೆಂಕಟರಾಮಯ್ಯನ ದೃಷ್ಟಿ ಅವನು ಕರ್ತವ್ಯದ  ಕಡೆ ತಿರುಗಿತು. ಆ ವೇಳೆಗೆ ಆವನಿಗೆ ಒಬ್ಬ ತಮ್ಮ, ತಂಗಿ ಹುಟ್ಟಿದ್ದರು. ತಂದೆ-ತಾಯಿಗಳ ಬಡತನ, ಕಷ್ಟಗಳನ್ನು ಕಂಡು ಅವನ ಕರುಳು ಕರಗಿತು. ಹದಿನಾಲ್ಕು ವರ್ಷದ ಹುಡುಗ ಕೆಲಸವನ್ನು ಹುಡುಕೊಂಡು ಎಲ್ಲೆಲ್ಲಿಯೂ ಅಲೆದ. ತನ್ನೂರಿನಿಂದ ನೂರು ಮೈಲಿ ಆಚೆಯ ಹಳ್ಳೀಯೊಂದರಲ್ಲಿ ಪ್ರಾಥಮಿಕ ಶಾಲೆಯ ಉಪಾಧ್ಯಾಯರ ಕೆಲಸ ಸಿಕ್ಕಿತು.  ತಿಂಗಳಿಗೆ ಸಂಬಳ ಎಂಟು  ರೂಪಾಯಿ. ಅದರಲ್ಲಿ ಒಂದು,ಎರಡನ್ನು ತನ್ನ ಜೀವನಕ್ಕಾಗಿ ಇಟ್ಟುಕೊಂಡು, ಉಳಿದದುದನ್ನೆ ತಂದೆಗೆ ಕಳುಹಿಸುತ್ತಿದ್ದ.  ಇದರಿಂದ ಸಂಸಾರಕ್ಕೆ ಇದ್ದ ಆತಂಕ ಎಷ್ಟೋ ಕಡಿಮೆಯಾಯಿತು. ಆದರೆ ಇದು ಬಹಳ ಕಾಲ ನಡೆಯಲಿಲ್ಲ. ಆತ ಕೆಲಸ ಮಾಡುತ್ತಿದ್ದ ಹಳ್ಳೀಗೆ ಪ್ಲೇಗು ರೋಗ ಬಂದಿತು. ವೆಂಕಟರಾಮಯ್ಯ ಹೆದರಿದ. ಹೆಳದೇ ಕೆಳದೇ ತನ್ನ ಊರ ದಾರಿ ಹಿಡಿದ.

ಮಗನ ಸಾವಿನ ದವಡೆಯಿಂದ ಪಾರಾದುದಕ್ಕಾಗಿ ವೆಂಕಟರಾಮಯ್ಯನ ತಾಯಿ  ತಂದೆಗಳೂ ತುಂಬ ಸಂತೋಷಪಟ್ಟರು. ಆದರೆ ಸಂಸಾರದ ಹೊಟ್ಟೆಗೆ ಗತಿಯೇನು? ಅಂಚೆ ಇಲಾಖೆಯ ಪರೀಕ್ಷೆಗೆ ಕುಳಿತುಕೊಂಡ ಅದರಲ್ಲಿ ಅತನಿಗೆ ಮೊದಲ ಸ್ಥಾನ ದೊರಕಿತು. ಗುಮಾಸ್ತನ ಕೆಲಸವೂ ಸಿಕ್ಕಿತು. ಆತನು ಶಿವಮೊಗ್ಗೆಗೆ ಹೋಗಿ, ಅಲ್ಲಿನ ಅಂಚೆ ಕಚೇರಿಯಲ್ಲಿ ಗುಮಾಸ್ತನಾಗಿ ಸೇರಿಕೊಂಡ. ಸಂಬಳ ಇಪ್ಪತ್ತು ರೂಪಾಯಿಗಳು. ಆಗಿನ ಕಾಲಕ್ಕೆ ಆದು ಈಗಿನ ಐದುನೂರು ರೂಪಾಯಿಗೆ ಸಮ.   ಈ ಕೆಲಸ ಸಿಕ್ಕಿ ಆತನ ಸಂಸಾರದ ಕಷ್ಟವೆಲ್ಲ ನೀಗಿದಂತಾಯಿತು. ಮೊದಲತಿಂಗಳ ಸಂಬಳ ಕೈಗೆ ಬರುತ್ತಲೇ ಆತ ಮನೆಯವರನ್ನೆಲ್ಲ ಶಿವಮೊಗ್ಗಗೆ ಕರೆಸಿಕೊಂಡ.

ಚಿಕ್ಕನಾಯಕನಹಳ್ಳಿಯ ಲಿಂಗಣ್ಣ ಎಂಬುವವರು ಬಾಲ್ಯದಿಂದಲೂ ವೆಂಕಟರಾಮಯ್ಯನನ್ನು ಕಂಡಿದ್ದವರು. ಆಹುಡುಗನ ಜಾಣತನ, ಧರ್ಮ -ಕರ್ಮಗಳನ್ನು ಮೆಚ್ಚಿಕೊಂಡಿದ್ದವರು. ಅವರು ಮಗಳು ಲಿಂಗಮ್ಮನೊಡನೆ ವೆಂಕಟರಾಮಯ್ಯನ ಮದುವೆ ಆಯಿತು. ಈಗ ವೆಂಕಟರಾಮಯ್ಯ ಎಲ್ಲರ ಬಾಯಯಲ್ಲಿಯೂ “ಪೋಸ್ಟ ಮಾಸ್ಟರ‍್ ವೆಂಕಟರಾಮಯ್ಯ” ಆದರು.

ಗುರು ದೊರೆತರು :

ವೆಂಕಟರಾಮುಯ್ಯನವರಿಗೆ ಬಾಲ್ಯದಿಂದಲೂ ದೇವರು, ಧರ್ಮ ಎಂದರೆ ತುಂಬ ಅದರ. ಆವರು ಇಂಗ್ಲೀಷ , ಕನ್ನಡ, ಸಂಸ್ಕೃತ ಮತ್ತು ಬಂಗಾಳಿ ಭಾಷೆಗಳಲ್ಲಿದ್ದ ಧರ್ಮಗ್ರಂಥಗಳನ್ನೆಲ್ಲ ಓದಿದ್ದರು.ಅವರಿಗೆ ದೇವರನ್ನು ಪ್ರತ್ಯೇಕ್ಷವಾಗಿ ಕಾಣಬೇಕೆಂಬ ಬಯಕೆ ಹುಟ್ಟಿತು.  ಕಂಡ ಕಂಡ ಸಾದುಗಳು, ಸಂನ್ಯಾಸಿಗಳನ್ನೆಲ್ಲ ಅವರು, “ದೇವರು ಇರುವನೆ? ನೀವು ಕಂಡಿರುವಿರಾ? ಅವನನ್ನು ಕಾಣುವುದು ಹೇಗೆ ? ಎಂದು ಕೇಳುತ್ತಿದ್ದರು.  ದೇವರನ್ನು ಕಂಡವರೆಂಬ ಮಹಾಪುರುಷರ ಜೀವನ ಚರಿತ್ರೆಗಳನ್ನೆಲ್ಲ ಓದಿದರು.ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರನ್ನು ಕುರಿತು ಸಾಹಿತ್ಯವನ್ನೆಲ್ಲ ಓದಿರು.ನನಗೆ “ಒಬ್ಬ ರಾಮಕೃಷ್ಣ ಪರಮಹಂಸರುಬೇಕು. ಅವರು ಹೇಗೆ ಸಿಕ್ಕಾರು?” ಎಂದು ಸಂಕಟಪಡುತ್ತಿದ್ದರು.

ಹೀಗಿರಲು ಒಮ್ಮೆ ನಾರಾಯಣ ಭಗವಾನರು ಶಿವಮೊಗ್ಗಗೆ ಬಂದರು. ಅವರು ಅಂಗಡಿ ಎಂಬ ಊರಿನವರು. ಆ ಊರಿನಲ್ಲಿ “ಆನಂದವನ” ಎಂಬ ಆಶ್ರಮವಿದೆ. ಅಲ್ಲಿ ಶೇಷಾಚಲ ಭಗವಾನರೆಂಬ ಶಸಾಧು ಇದ್ದರು. ಅವರು ದೇವಮಾನವರು. ನಾರಾಯಣ ಭಗವಾನರು ಅವರ ಶಿಷ್ಯರು. ಅವರೂ ಮಹಾ ಪುರುಷರು.

ಪೋ‌ಸ್ಟ ಮಾಸ್ಟರ್ ವೆಂಕಟರಾಮಯ್ಯನವರಿಗೆ ಭಗವಾನರನ್ನು ಕಾಣಬೇಕೆನಿಸಿತು. ಒಂದು ಸಂಜೆ ಐದು ಘಂಟೆಗೆ ಭಗವಾನರ ಬಳಿಗೆ ಹ ಓದರು. ಭಗವಾನರು ದೊಡ್ಡ ಮನೆಯೊಂದರಲ್ಲಿ ಇಳಿದುಕೊಂಡಿದ್ದರು. ಆವರ ಸುತ್ತಲೂ ಹತ್ತಾರು ಜನ ಕುಳಿತ್ತಿದ್ದರು. ಸ್ವಾಮಿಗಳು ಆಗ ಧರ್ಮದ ಮೇಲೆ ಮಾತನಾಡುತ್ತಿದ್ದರು. ವೆಂಕಟರಾಮಯ್ಯನವರು ಭಗವಾನರಿಗೆ ನಮಸ್ಕರಿಸಿ ಕುಳಿತುಕೊಂಡರು. ಭಗವಾನರು ತಮ್ಮ ಮಾತನ್ನು ಮುಂದುವರೆಸಿ, “ಭಗವಂತ ಕರುಣಾಳು, ಬೇಡಿದುದನ್ನು ಕೊಡುತ್ತಾನೆ” ಎಂದರು.

ವೆಂಕಟರಾಮಯ್ಯನವರು ನಡುವೆ ಬಾಯಿ ಹಾಕಿ, “ದೇವರು ಇದ್ದಾನೆಯೇ?” ಎಂದು ಕೇಳಿದರು.

ನಾರಾಯಣ ಭಗವಾನ: ಇದ್ದಾನೆ ಎಂದು ಅವನನ್ನು ಕಂಡವರು ಹೇಳಿದ್ದಾರೆ, ಮಹಾರಾಜ್,

ವೆಂಕಟರಾಮಯ್ಯ: ನೀವೇನು ಹೇಳುತ್ತೀರಿ ? ಬೇರೆಯವರ ವಿಚಾರ ನನಗೆ ಬೇಡ.

ನಾರಾಯಣ ಭಗವಾನ್: ನಾವು ಬೇರೆ, ಅವರು ಬೇರೆಯೇ ಮಹಾರಾಜ್?

ವೆಂಕಟರಾಮಯ್ಯ :ನೀವು ದೇವರನ್ನು ತೋರಿಸುತ್ತೀರಾ?

ನಾರಾಯಣ ಭಗವಾನ್ :ನಾನೇಕೆ ತೋರಿಸಬೇಕು? ನೀವೇ ನೋಡಬಹುದಲ್ಲ ?

ವೆಂಕಟರಾಮಯ್ಯ :ಹೇಗೆ ನೋಡುವುದು ?

ನಾರಾಯಣ ಭಗವಾನ್ :ನೀವು ನನ್ನನ್ನು ಹೇಗೆ ನೋಡುತ್ತೀರೋ ಹಾಗೆ.

ವೆಂಕಟರಾಮಯ್ಯ : ಅದು ರಾಮಕೃಷ್ಣ ಪರಮಹಂಸರು ವಿವೇಕಾನಂದರಿಗೆ ಹೇಳಿದ ಮಾತು.

ನಾರಾಯಣ ಭಗವಾನ್ :ನಾನು ನೀವೂ ಅವರಿಬ್ಬರಿಗಿಂತ ಬೇರೆಯೇನು?

ವೆಂಕಟರಾಮಯ್ಯ : ನೀವು ಯಾವ ಯಾವ ಧರ್ಮಗ್ರಂಥಗಳನ್ನು ಓದಿದ್ದೀರಿ ?

ನಾರಾಯಣ ಭಗವಾನ : ನಾವು ಯಾವ ಗ್ರಂಥವನ್ನೂ  ಓದಿಲ್ಲ  ಮಹಾರಾಜ. ಮೂವತ್ತು ವರ್ಷಗಳಷ್ಟು ಕಾಲ ನಮ್ಮ ಗುರುಗಳ ಸೇವೆ ಮಾಡಿದ್ದೇವೆ. ಅದೇ ನಮ್ಮ ಓದು. ಅದೇ ನಮ್ಮ ಬಂಡವಾಳ. ಅವರ ಕೃಪೆಯಿಂದ ನಿಮ್ಮಂತಹ ಸಿಡಿಲ ಮರಿಯನ್ನು ಎದುರಿಸಬಲ್ಲೇವು.

“ನಾನು ದೇವರನ್ನು ಕಾಣಬೇಕು. ತಾವು ನನಗೆ ಹಾದಿಯನ್ನು ತೋರಬೇಕು"

ಈ ಮಾತುಗಳನ್ನು ಕೇಳುತ್ತಲೇ ವೆಂಕಟರಾಮಯ್ಯನವರ ಅಹಂಕಾರ ಅಡಗಿತು. ಅವರು ಬಹು ವಿನಯದಿಂದ, “ನಾನಾ ದೇವರನ್ನು, ಕಾಣಬೇಕು, ತಾವು ನನಗೆ ಹಾದಿಯನ್ನು ತೋರಬೇಕು ಎಂದು ಹೇಳಿ ಅಡ್ಡಬಿದ್ದರು. ಭಗವಾನರು, “ಆಗಲಿ ಮಹಾರಾಜ! ಗುರುದೆವ ದೊಡ್ಡವನಿದ್ದಾನೆ ಎಂದರು. ಗುರು ಶಿಷ್ಯರು ಏಕಾಂತದಲ್ಲಿ ಸೇರಬೇಕೆಂದು ನಿಶ್ಚಯಿಸಿದರು. ಹಾಗೇ ಸೇರಬೇಕೆಂದರೆ ಇಬ್ಬರಿಗೂ ಸಾಧ್ಯವಿಲ್ಲ ವೆಂಕಟರಾಮಯ್ಯನವರಿಗೆ ಬೆಳಿಗ್ಗೆ ಮತ್ತುರಾತ್ರಿ ಕಛೇರಿಯ ಕೆಲಸ,. ಮಧ್ಯಾಹ್ನ ಬಿಡುವು. ಭಗವಾನರು ಮಧ್ಯಾಹ್ನ ಶಿಷ್ಯರ ಅತಿಥಿಗಳಾಗಿ ಹೋಗಬೇಕು. ಆಗ ಅವರಿಗ ಬಿಡುವಿಲ್ಲ. ಅವರಿಗೆ ಗೂರಲು ರೋಗ: ಥಂಡಿ ಹೊತ್ತಿನಲ್ಲಿ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಆದರೂ ಅವರು ಹೇಳಿದರು. “ಬೆಳಗಿನ ಜಾವ ನಾಲ್ಕು ಗಂಟೆಗೆ ಸೇರೋಣ” ಎಂದು. ವೆಂಕಟರಾಮಯ್ಯ “ಹಾಗೇ ಆಗಲಿ” ಎಂದರು. ಇಬ್ಬರೂ ಒಂದು ತಿಂಗಳ ಕಾಲ ಗೊತ್ತಾದ ಕಾಲಕ್ಕೆ ಸೇರುತ್ತಿದ್ದರು.

ಆ ಕಾಲದಲ್ಲಿ ಗುರುಗಳ ಗೂರಲು ರೋಗ ಮಾಯವಾಗಿತ್ತು. ತಿಂಗಳಉ ತುಂಬುವಷ್ಟರಲ್ಲಿ ಶಿಷ್ಯನ ಸಂದೇಹವೂ ಮಾಯವಾಗಿತ್ತು. ಭಗವಾನರು ಶಿವಮೊಗ್ಗೆಯನ್ನು ಬಿಟ್ಟು ಹೊರಡುವ ಮುನ್ನ ತಮ್ಮ ಶಿಷ್ಯನನ್ನು ಕುರಿತು, “ಮಹಾರಾಜ್! ನೀವು ದೇಔರನ್ನು ಕಾಣ ಹೊರಟಿದ್ದೀರಿ: ಅವನು ಕಾಣಿಸಿಕೊಳ್ಳುವ ಮುನ್ನ ಪರೀಕ್ಷೆ ಮಾಡುತ್ತಾನೆ: ಕಷ್ಟ ಕೊಡುತ್ತಾನೆ. ನೀವು ಕುಗ್ಗಬಾರದು” ಎಂದರು.

ಮಾಭೀ :

ನಾರಾಯಣ ಭಗವಾನರು ಹೇಳಿ ಹೋದ “ಪರೀಕ್ಷೆ” ಹದಿನೈದು ದಿನಗಳಲ್ಲಿಯೇ ಪ್ರಾಪ್ತವಾಯಿತು. ವೆಂಕಟರಾಮಯ್ಯನ ಮನೆಯವರೆಲ್ಲ ರೋಗದಿಂದ ಮಲಗಿದರು. ಆತನೇ ಎಲ್ಲರ ಆರೈಕೆಯನ್ನು ಮಾಡಬೇಕಾಯಿತು. ಆತನ ಬಂಧುಗಳಲ್ಲಿ ಹಲವರು ಸತ್ತು ಹೋದರೆಂಬ ಕೆಟ್ಟ ಸುದ್ಧಿ ಬಂದಿತು. ಆತನ ತಾಯಿ ನಾಲ್ಕು ದಿನ ನರಳಿ ಕಡೆಯ ಉಸಿರನ್ನು ಎಳೆದಳು. ವೆಂಕಟರಾಮಯ್ಯ ತಾಯಿಯ ಹಾಸಿಗೆಯ ಬಳಿಯಲ್ಲಿ ಕುಳಿತು, “ಎಲ ಎಲ, ಏನಿದು? ಸಾವು ಎಂದರೇನು? ಜೀವ ಎಂದರೇನು? ಜೀವ ಎಲ್ಲಿಗೆ ಹೋಯಿತು? ದೇಹವಿದೆ, ಜೀವವಿಲ್ಲ. ಎಂದ ಮೇಲೆ ಈ ದೇಹವೇನೂ ಜೀವವಲ್ಲ” ಎಂದು ಅಂದುಕೊಂಡರು. ಆದ್ದರಿಂದ ತಾಯಿಯ ದೇಹ ಹೋದುದಕ್ಕಾಗಿ ಅವರು ಅಳಲಿಲ್ಲ. ಮತ್ತೇ ನಾರಾಯಣ ಭಗವಾನರನ್ನು ಕಂಡಾಗ ತಮ್ಮ ಅನುಭವವನ್ನು ಹೇಳಿಕೊಂಡರು. ಭಗವಾನರು, “ಮಹಾರಾಜ್! ದೇವರು ನಿಮಗೆ ಹತ್ತಿರವಾಗುತ್ತಾ ಇದ್ದಾನೆ. ಸಂಕಟ ಬಂದಾಗ ಕುಗ್ಗಬಾರದು. ಧೈರ್ಯವಾಗಿರಬೇಕು. ಇನ್ನು ಮುಂದೆ ರಾತ್ರಿಯ ಹೊತ್ತು ಜನರಿಲ್ಲದ ಕಡೆಗೆ ಕುಳಿತು ಧ್ಯಾನ ಮಾಡಿರಿ. ವೇದದಲ್ಲಿ, “ಮಾಭೀಃ” ಎಂದರೆ ಭಯಪಡಬೇಡ ಎಂದು ಹೇಳಿದೆ ” ಎಂದರು. ವೆಂಕಟರಾಮಯ್ಯ, “ಹಾಗೆಯೇ ಆಗಲಿ” ಎಂದು ಹೇಳಿ ಗುರುಗಳಿಗೆ  ನಮಸ್ಕರಿಸಿದರು.

ವೆಂಕಟರಾಮಯ್ಯ “ಮಾಭಿಃ” ಎಂದು ಹೇಳಿಕೊಳ್ಳುತ್ತಾ ಹಿಂತಿರುಗಿದರು. ಮರುದಿನ ಅವರಿಗೆ ಸೊರಬಕ್ಕೆ ವರ್ಗವಾಯಿತು. ಅವರು ತಮ್ಮ ಸಂಸಾರದೊಂದಿಗೆ ಸೊರಬಕ್ಕೆ ಹೊರಟು ಹೋದರು.  ಆ ಊರಿನ ಸುತ್ತಲು ದಟ್ಟವಾದ ಅಡವಿ ಇತ್ತು. ವೆಂಕಟರಾಯಮಯ್ಯ ದಿನವೂ ಸಂಜೆಯ ಹೊತ್ತು ಆ ಅಡವಿಯಲ್ಲಿ ತಿರುಗಾಡುತ್ತಾ ಹೋಗುವರು. ಒಂದು ದಿನ ಆವರು ಆ ಅಡವಿಯಲ್ಲಿ ಮೂರು ಮೈಲಿಗಳಷ್ಟು ದೂರ ನಡದುಕೊಂಡು ಹೋದರು. ಅಲ್ಲಿ ಒಂದು ಹಾಳು ಗುಡಿಯಿತ್ತು. ಅದು ಅರ್ಧ ಬಿದ್ದುಹೋಗಿತ್ತು. ಅದಕ್ಕೆ ಬಾಗಿಲುಗಳಿರಲಿಲ್ಲ, ವೆಂಕಟರಾಮಯ್ಯ ಅದರೊಳಗೆ ಇಣುಕಿ ನೋಡಿದರು. ಯಾವುದೋ ಕ್ರೂರ ದೇವತೆಯ ಒರಟು ವಿಗ್ರಹವೊಂದು ಕಾಣಿಸಿತ್ತು. ನೆಲವೆಲ್ಲ ಕಸಕಡ್ಡಿಗಳಿಂದ ತುಂಬಿತ್ತು. ಆ ಗುಡಿಯ ಇದರಿನಲ್ಲಿ ಒಂದು ಇಳಿಯುವ ಬಾವಿ ಇತ್ತು. ಅದೂ ಅರ್ಧ ಬಿದ್ದು ಹೋಗಿತ್ತು. ವೆಂಕಟರಾಮಯ್ಯ ಗುಡಿಯ ಬಳಿಯಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡರು. ಸೂರ್ಯನು ಮುಳುಗಿ ಕತ್ತಲಾಗುವ ಹೊತ್ತು ಅದು. ವೆಂಕಟರಾಮಯ್ಯ ಸುತ್ತಲೂ ಒಮ್ಮೆ ನೋಡಿದರು. ಅವರ ಮನಸ್ಸಿನಲ್ಲಿ ಭಯ ಇಣುಕಿದಂತಾಯಿತು. ಅವರು ಗುರುಗಳು ಹೇಳಿದ್ದ “ಮಾಭೀಃ” ಎಂಬ ಮಾತನ್ನು ಜ್ಞಾಪಿಸಿಕೊಂಡರು. ಕಗ್ಗತ್ತಲಾಗುವವರೆಗೆ ಅಲ್ಲಿಯೇ ಕುಳಿತ್ತಿದ್ದು, ಆಮೇಲೆ ಮನೆಗೆ ಹಿಂದುರುಗಿದರು.

ಸೊರಬಕ್ಕೆ ಟಪಾಲು ಬರುತ್ತಿದ್ದುದು ರಾತ್ರಿ ಹತ್ತು ಗಂಟೆಗೆ. ಆ ವೇಳೆಗೆ ಮನೆಯವರೆಲ್ಲ ಊಟ ಮಾಡಿ  ನಿದ್ರೆ ಹೋಗುತ್ತಿದ್ದರು. ವೆಂಕಟರಾಮಯ್ಯ ರಾತ್ರಿ ಹನ್ನೊಂದು ಗಂಟೆಯವರೆಗೆ ಕೆಲಸ ಮಾಡಿ ಆ ಮೇಲೆ ನಿದ್ದೆ ಮಾಡಬೇಕಾಗಿತ್ತು.ಅವರು ತಮ್ಮ ರಾತ್ರಿಯ ಕೆಲಸ ಮಾಡಿ ಆಮೇಲೆ ನಿದ್ದೆ ಮಾಡಬೇಕಾಗಿತ್ತು. ಅವರು ತಮ್ಮ ರಾತ್ರಿ ಟಪಾಲು ಕೆಲಸವನ್ನು ಮುಗಿಸಿದ ಮೇಲೆ ಮಲಗುವುದನ್ನು ನಿಲ್ಲಿಸಿದರು. ಅದಕ್ಕೆ ಬದಲಾಗಿ ತಾವು ಅಡವಿಯ ಮಧ್ಯದಲ್ಲಿ ಕಂಡಿದ್ದ ಹಾಳು ಗುಡಿಗೆ ಹೋಗಲು ಮೊದಲು ಮಾಡಿದರು. ಆ ಗುಡಿಯಲ್ಲಿ ಕುಳಿತು ಅವರು ಧ್ಯಾನ ಮಾಡುತಿದ್ದರು.  ರಾತ್ರಿ ಮುಂದುವರೆದಂತೆ ಸುತ್ತಮುತ್ತ ಹತ್ತಿರದಲ್ಲಿಯೇ ಕಾಡು ಮೃಗಗಳ ಅರ್ಭಠ ಕೇಳಿಬರುತ್ತಿತ್ತು.  ಹತ್ತಿರದಲ್ಲಿಯಿಏ ಹಾವು ಹರಿದು ಹೋಗುತ್ತಿರುವಂತೆಯೇ ಭಾವನೆ ಬರುವುದು. ಹತ್ತಿರದ ಬಾವಿಯಲ್ಲಿ ಯಾವುದೋ ಕಾಡು ಮೃಗ ನೀರು ಕುಡಿಯುವ ಶಬ್ದ. ವೆಂಟರಾಮಯ್ಯನಿಗೆ ಪ್ರಾಣ ಹೋಗುವಷ್ಟು ಭಯವಾಯಿತು. ಆದರೂ ಆತ ಮೇಲಕ್ಕೆಳಲಿಲ್ಲ. “ಮಾಭೀಃ” ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡರು. ನಾಲ್ಕು ಗಂಟೆಯ ವರೆಗೆ ಹಾಗೆಯೇ ಕುಳಿತು  ಆ ಮೇಲೆ ಮನೆಯ ಕಡೆಗೆ ಹೊರಟರು. ನಾಲ್ಕು ದಿನಗಳ ಹೀಗೆ ಮಾಡಿದ ಮೇಲೆ ವೆಂಕಟರಾಮಯ್ಯನವರ ಭಯ ಕಡಿಮೆಯಾಯಿತು.

ವೆಂಕಟರಾಮಯ್ಯನವರ ಹೆಂಡತಿ ಲಿಂಗಮ್ಮ ಗಂಡನೊಡನೆ, “ರಾತ್ರಿಯಲ್ಲಿ ನೀವು ಹೋಗುವುದೆಲ್ಲಿಗೆ?” ಎಂದು ಕೇಳಿದಳೂ. ಆಕೆ ಬಹಳ ಪೀಡಿಸಿದ ಮೇಲೆ ಆತ ತಮ್ಮ ಗುಟ್ಟನ್ನು ಆಕೆಗೆ ತಿಳಿಸಿದರು.  ಅದನ್ನು ಕೇಳಿ ಆಕೆ ಗಡಗಡನೆ ನಡುಗಿದಳು. ಇನ್ನು ಮೇಲೆ ಹೋಗಕೂಡದೆಂದು ಕಣ್ಣೀರು ಸುರಿಸುತ್ತ ಕೇಳಿಕೊಂಡಳೂ. ಆ ದಿನವೇ ನಾರಾಯಣ ಭಗವಾನರು, “ಈ ದಿನವೇ ಬಂದು ನೀವು ನಮ್ಮನ್ನು ಕಾಣತಕ್ಕದ್ದು”. ಎಂದು ಸಾಗರದಿಂದ ಹೇಳಿ ಕಳುಹಿಸಿದರು. ವೆಂಕಟರಾಮಯ್ಯನವರು ತಕ್ಷಣವೇ ಗುರುಗಳನ್ನು ಕಾಣಲು ಹೋದರು. ಶಿಷ್ಯರನ್ನು ಕಾಣುತ್ತಲೇ ಗುರುಗಳು, “ಮಹಾರಾಜ್! ಒಳ್ಳೆಯ ಶಿಷ್ಯರು ಗಂಟು ಬಿದ್ದೀರಿ ನಮಗೆ ! ಈಗ ಒಂದು ತಿಂಗಳಿಂದ ನಮಗೆ ರಾತ್ರಿಯೆಲ್ಲ ನಿದ್ರೆಯಿಲ್ಲ.ನೀವು ಕಣ್ಣೂ ಮುಚ್ಚಿಕೊಂಡು ಅಡವಿಯ ಮಧ್ಯದಲ್ಲಿ ಕುಳಿತುಬಿಡುತ್ತಿರಿ, ನಾವು ಹುಲಿ ಚಿರತೆಗಳನ್ನು, ಹಾವು ಚೇಳುಗಳನ್ನು ದೂರಕ್ಕೆ ಓಡಿಸುವ  ಜವಾನನ ಕೆಲಸ ಮಾಡಬೇಕಾಗಿದೆ. ನೀವು ನಾಳೆಯಿಂದ ಆ ಕೆಲಸ ಮಾಡಬೇಡಿ : ಎಂದು ಅಪ್ಪಣೆ ಮಾಡಿದರು.

ವೆಂಕಟರಾಮಯ್ಯನವರಿಗೆ ಈಗ ಭಯವೆಂಬುವದೇ ಇಲ್ಲ. ಗುರುಗಳು ಬೇಡವೆಂದರೂ ಅವರು ಗುಡ್ಡ, ಬೆಟ್ಟ, ಅಡವಿಗಳಲ್ಲಿ ಅಲೆದಾಡುವುದನ್ನು ಬಿಡಲಿಲ್ಲ. ಅವರಿಗೆ ತಕ್ಕ ಹೆಂಡತಿ ಲಿಂಗಮ್ಮ. ಆಕೆಯೂ ಗಂಡನ ಜೊತೆಗೆ ಹೊರಟುಅಡವಿಯಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದಳು. ಅವರಿಗೆ ಸೊರಬದಿಂದ ಚನ್ನಗಿರಿಗೆ ವರ್ಗವಾಯಿತು. ಕೆಲವು ಕಾಲದ ಮೇಲೆ ಪಾವಗಡಕ್ಕೆ, ಆಮೇಲೆ ಮಧುಗಿರಿಗೆ ವರ್ಗವಾಯಿತು. ಅವರು ಹೋದ ಕಡೆಗಳಲೆಲ್ಲಲ್ಲ ಬೆಟ್ಟಗಳಿದ್ದವು; ಅಡವಿಗಳಿದ್ದವು. ಗಂಡ ಹೆಂಡರು ರಾತ್ರಿಯ ಊಟವನ್ನು ಮುಗಿಸಿ,ಹತ್ತಿರದ ಬೆಟ್ಟವನ್ನು ಹತ್ತುತ್ತಿದ್ದರು.  ರಾತ್ರಿಯೆಲ್ಲ ಮೈಮರೆತು ಕುಳಿತು ಧ್ಯಾನ ಮಾಡುತ್ತಿದ್ದರು. ಹುಲಿ ಕಣ್ಣೀಗೆ ಬಿದ್ದರೂ “ಅದೊಂದು ದೊಡ್ಡ ಬೆಕ್ಕು, ನಮ್ಮನ್ನು ಏನು ಮಾಡುತ್ತದೆ” ಎಂದುಕೊಳ್ಳುತ್ತಿದ್ದರು.

ಭಗವದ್ಗೀತೆ :

ವೆಂಕಟರಾಮಯ್ಯನವರು ಮಧುಗಿರಿಯಿಂದ ವರ್ಗವಾಗಿ ಚಿಕ್ಕಬಳ್ಳಾಪೂರಕ್ಕೆ ಬಂದರು. ಆ ವೇಳೆಗೆ ಅವರ ಹೆಂಡತಿ ಲಿಂಗಮ್ಮನು ಒಂದು ಹೆಣ್ಣು ಮಗುವನ್ನು ಹೆತ್ತು ಸತ್ತುಹೋದಳು. ಇದರಿಂದ ಅವರಿಗೆ ಸಂಸಾರದ ಜೀವನದಲ್ಲಿ ಬೇಸರ ಹುಟ್ಟಿತು.  ದೇವರನ್ನು ಕಾಣಬೇಕೆಂಬ ಬಯಕೆ ಆತಿಯಾಯಿತು. ಅವರು ಊರಿಗೆ ದೂರವಾಗಿ ಒಂದು ಗುಡಿಸಲನ್ನು ಕಟ್ಟಿಕೊಂಡರು. ಅಲ್ಲಿ ಒಬ್ಬರೇ ಕುಳಿತು ಧ್ಯಾನ ಮಾಡುತ್ತಿದ್ದರು.  ಹೊತ್ತಿಗೆ ಸರಿಯಾಗಿ ತಮ್ಮ ಕಛೇರಿಗೆ ಹೋಗುತ್ತಿದ್ದರು. ಅಲ್ಲಿಂದ ಮನೆಗೆ ಹಂದಿರುಗುತ್ತಲೇ ಮತ್ತೇಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರು.  ಆಡಿಗೆ ಮಾಡುತ್ತಿದ್ದದು ಕಡಿಮೆ.ಹಸಿರು ಕಡಲೆಯನ್ನೋ  ಕಡಲೆಕಾಯಿಯನ್ನೋ ತಿಂದುಹಸಿವನ್ನು ಹೋಗಲಾಡಿಸಿಕೊಳ್ಳುವರು. ಸಂನ್ಯಾಸಿಯಂತೆ ಕಪಿನಿಯನ್ನು ಧರಿಸುವರು. ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ಯಾರಾದರೂ ಬಲವಂತವಾಗಿ ಮಾತನಾಡಿದರೆ ನಗುವರು.

ಹೀಗೆ ಕೆಲವು ದಿನಗಳು ಕಳೆದವು. ಒಂದು ದಿನ ಆವರ ಗುರುಗಳಾದ ನಾರಾಯಣ ಭಗವಾನರು ಅವರಲ್ಲಿಗೆ ಬಂದರು. ಅವರು ಶಿಷ್ಯನಿಗೆ ಭಗವದ್ಗೀತೆಯನ್ನು ಉಪದೇಶ ಮಾಡಿದರು. ಅದನ್ನು   ಓದುತ್ತ ಹೋದಂತೆ ವೆಂಕಟರಾಮಯ್ಯನವರ ಜೀವಕ್ಕೆ ಶಾಂತಿದೊರಕಿತು. ಲೋಕದ ಎಲ್ಲಾ ದುಃಖಗಳಿಗೂ ಅದು ಸಂಜೀವಿನಿಯಂತೆ ಕಾಣಿಸಿತು. ವೆಂಕಟರಾಮಯ್ಯನವರು ಆ ಗ್ರಂಥವನ್ನು  ಮತ್ತೇ ಮತ್ತೇ ಓದಿದರು. ಇತರರು ಆ ಗ್ರಂಥದ ಮೇಲೆ ಬರೆದಿದ್ದ ಪುಸ್ತಕಗಳನ್ನೆಲ್ಲ ತರಿಸಿ ಓದಿದರು. ಅವರಿಗೆ ಹೊಸ ಹೊಸ ಭಾವಗಳೂ ಹೊಳೆದವು. ತಮಗೆ ಕಾಣಿಸಿದ ಸತ್ಯವನ್ನು ಸುತ್ತಮುತ್ತಲಿನ ಜಗತ್ತಿಗೆ ತಿಳಿಸಬೇಕೆಂದು ಅವರು ನಿಶ್ಚಯಿಸಿದರು. ಅವರು ಭಗವದ್ಗೀತೆಯು ಎಲ್ಲರಿಗೂ ಅರ್ಥವಾಗುವಂತೆ ತಿಳಿಯಾದ ಭಾಷೆಯಲ್ಲಿ ಹೊಸದೊಂದು ಪುಸ್ತಕವನ್ನು ಬರೆದರು. ಅದರ ಹೆಸರು ನಿಷ್ಕಾಮ ಕರ್ಮಯೋಗ” ಇದನ್ನು ಅಚ್ಚುಹಾಕಿಸಿ ಜನರಿಗೆಲ್ಲ ಪುಕ್ಕಟೆಯಾಗಿ ಹಂಚಿದರು.  ಅದನ್ನು ಬರೆದಾಗ ತಮ್ಮಹೆಸರನ್ನು “ಚಿದಂಬರ” ಎಂದುಬದಲಾಯಿಸಿಕೊಂಡರು.ಕಛೆರಿಯಲ್ಲಿಯೂ ಸಹ ಅವರು ಹೆಸರು ಚಿದಂಬರಂ ಎಂದೇ ಆಯಿತು. ಅವರು ನೌಕರಿಯಿಂದ ರಜೆಯನ್ನು ಪಡೆದು  ಊರೂರನ್ನು ಅಲೆಯತೊಡಗಿದರು. ಹೋದ ಕಡೆಯಲ್ಲೆಲ್ಲ ಜನರೊಡನೆ ಒಂದಾಗಿ  ಸೇರುತ್ತಿದ್ದರು. ಜಾತಿ, ಮತ, ಪಂಥಗಳ ಭೇಧ ಅರ್ಥವಿಲ್ಲದ್ದು. ದೇವರ ಇದರಿನಲ್ಲಿ ಎಲ್ಲರೂ ಒಂದೆ. ಗಂಡು ಹೆಣ್ಣುಗಳೆಂಬ ಭೇಧವನ್ನು ಎಲ್ಲರೂ ಭಗವದ್ಗೀತೆಯನ್ನು ಓದಿರಿ. ಎಲ್ಲರೂ ಉದ್ಧಾರವಾಗುವ ಹಾದಿ ಇದರಲ್ಲಿದೆ” ಎಂದು ಅವರು ಬೋಧಿಸಿದರು. ವಿಶ್ವವಿದ್ಯಾನಿಲಯದ ಅಧ್ಯಾಪಕರಿಂದ ಹಿಡಿದು ಹಳ್ಳಿಯ ಚಾವಡಿಯಲ್ಲಿರುವ ಗೌಡನವರೆಗೆ ಅನೇಕರು  ಅವರ ಶಿಷ್ಯರಾದರು.

ಚಿದಂಬರರು ಚಿಕ್ಕಬಳ್ಳಾಪೂರದಿಂದ ತುಮಕೂರು ಜಿಲ್ಲೆಯ ಗುಬ್ಬಿಗೆ ವರ್ಗವಾಗಿ ಬಂದರು. ಇಲ್ಲಿಯೂ ಅವರು ದೂರವಾದ ಒಂದುಸ್ಥಳದಲ್ಲಿ ತಮ್ಮಗುಡಿಸಲನ್ನುಕಟ್ಟಿಕೊಂಡು ಅದರಲ್ಲಿ ವಾಸ ಮಾಡುತ್ತಿದ್ದರು. ಅವರು ಋಷಿಯಂತೆ ಗಡ್ಡ ಮೀಸೆಗಳನ್ನು ಬೆಳೆಸಿದರು. ಋಷಿಯಂತೆಯೇಜಪ, ತಪ, ಧ್ಯಾನಗಳಲ್ಲಿ ಮುಳುಗುತ್ತಿದ್ದರು.  ಕಛೇರಿಯ ಕೆಲಸ ಅವರಿಗೆ ಬೇಡವೆನಿಸಿತು. ರಜವನ್ನು ಪಡೆದು, ಸುತ್ತಮುತ್ತಲಿನ ಜನರ ಕಷ್ಟ ಸುಖಗಳನ್ನು ವಿಚಾರಿಸುತಿದ್ದರು.  ಊರೂರಿಗೆ ಹೋಗಿ ಭಗವದ್ಗೀಗೆಯನ್ನು ಜನರಿಗೆ ಉಪದೇಶಿಸುತಿದ್ದರು. ಜನರೆಲ್ಲವರನ್ನು “ಚಿದಂಬರ ಸ್ವಾಮಿ” ಎಂದು ಕರೆಯಲು ಮೊದಲು ಮಾಡಿದರು. ಅವರ ಕೀರ್ತಿ ಎಲ್ಲ ಕಡೆ ಹಬ್ಬಿತು. ಜನರು ಅವರನ್ನು ಕಾಣಲು ಗುಂಪು ಗುಂಪಾಗಿ ಬರಲು ಮೊದಲಾದರು. ಚಿದಂಬರಂರಿಗೆ ಧ್ಯಾನ, ಜಪಗಳಿಗೆ ಅವಕಾಶವಿಲ್ಲದಂತಾಯಿತು.

ಇಲ್ಲಿಯೆ ಜನಸೇವೆ ಮಾಡಬಾಋದೆ:

ಚಿದಂಬರರಿಗೆ ದೇವರನ್ನು ಕಾಣಬೇಕೆಂಬ ಬಯಕೆ ಮತ್ತೊಮ್ಮೆ ಮೇಲೆದ್ದಿತು. ಜನರ ಗುಂಪಿನಿಂದ ದೂರವಿರಬೇಕೆಂದು ಅವರು ನಿಶ್ಚಿಯಿಸಿದರು; ಹಿಮಾಲಯ ಪರ್ವತಕ್ಕೆ ಹೋಗಿ,ಅಲ್ಲಿತಪ್ಪಸ್ಸು ಮಾಡುತ್ತಾ  ಕುಳಿತುಕೊಳ್ಳಬೇಕೆಂದು ಅವರಿಗೆ ಗೀಳು ಹುಟ್ಟಿತು. ಅವರು ಹಿಮಾಲಯಕ್ಕೆ ಹೋಗಿ, ಅಲ್ಲಿ ಒಂದು ಪುಟ್ಟ ಮನೆಯನ್ನು ಕಟ್ಟಲು ತಕ್ಕ ಸ್ಥಳವನ್ನು ಗೊತ್ತು ಮಾಡಿದರು. ಅಲ್ಲಿಂದ ಗುಬ್ಬಿಗೆ ಹಿಂದಿರುಗಿ, ಅಲ್ಲಿನ ಮನೆಯ ನಕ್ಷೆಯೊಂದನ್ನು ತಯ್ಯಾರಿಸಿದರು. ಅಂಚೆಯ ಇಲಾಖೆಗೆ ಪತ್ರವನ್ನು ಬರೆತು ತಮ್ಮಕೆಲಸದಿಂದ ವಿಶ್ರಾಂತಿಯನ್ನು ಪಡೆದರು.

ಇನ್ನೊಂದು ವಾರದಲ್ಲಿ ಅವರು ಗುಬ್ಬಿಯನ್ನು ಬಿಟ್ಟು ಪ್ರಯಾಣ ಮಾಡುವವರಿದ್ದರು. ಅಷ್ಟರಲ್ಲಿ ಒಂದು ದಿನ ಅವರ ಗೆಳೆಯರಾದ ವೆಂಕಣಯ್ಯನವರು ಗುಬ್ಬಿಗೆ ಬಂದರು. ಅವರು ಮಹಾರಾಜರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಚಿದಂಬರರು ತಮ್ಮ ಹಿಮಾಲಯದ ಪ್ರಯಾಣದ ವಿಷಯವನ್ನು ತಿಳಿಸಿ, ತಮ್ಮ ಮನೆಯ ನಕ್ಷೆಯನ್ನು ಅವರಿಗೆ ಕೊಟ್ಟರು. ವೆಂಕಣ್ಣಯ್ಯನವರು ಒಂದುಕ್ಷಣ ನಕ್ಷೆಯನ್ನೇ ನೋಡುತ್ತಿದ್ದರು. ಆಮೇಲೆ ಆದನ್ನು ಉರಿಯುತ್ತಿದ್ದ ದೀಪಕ್ಕೆ ಹಿಡಿದರು.ನಕ್ಷೆ ಸುಟ್ಟು ಹೋಯಿತು. ಆಮೇಲೆ ವೆಂಕಣ್ಣಯ್ಯ ನವರು, “ಆಯ್ಯ, ದೇವರನ್ನು ಹುಡುಕಿಕೊಂಡು ಹಿಮಾಲಯಕ್ಕೆ ಹೋಗಬೇಕೆ? ದೇವರು ಎಲ್ಲೆಲ್ಲಿಯೂ ಇದ್ದಾನೆ,.ಇಲ್ಲಿಯೂ ಇದ್ದಾನೆ. ನೀನು ಹುಟ್ಟಿದುದು ಕನ್ನಡ ನಾಡಿನಲ್ಲಿ. ನಿನ್ನ ನಾಡು, ನುಡಿ, ಜನರ ಸೇವೆಯನ್ನು ಮಾಡುವುದು ನಿನ್ನ ಕರ್ತವ್ಯ. ಅದನ್ನು ನೀನು ಈಗಾಗಲೇ ಮಾಡುತ್ತಿದ್ದಿ. ಇನ್ನು ಮುಂದೆ ಒಂದು ಕಡೆ ಕುಳಿತು ಆ ಕಾರ್ಯವನ್ನು ಇನ್ನೂ ಹೆಚ್ಚಾಗಿ , ಚೆನ್ನಾಗಿ ಮಾಡು” ಎಂದರು. ಇದಕ್ಕೆ ಚಿದಂಬರರು ಒಪ್ಪಿದರು.

ಆಶ್ರಮ :

ಚಿದಂಬರರು ಜನರ ಸೇವೆಗಾಗಿ ಒಂದು  ಆಶ್ರಮವನ್ನು ಸ್ಥಾಪಿಸಬೇಕೆಂದು ನಿಶ್ಚಯಿಸಿದರು,. ಅದು ಊರಿಗೆ ಸೇರಿರಲು ಬಾರದು, ಊರಿನಿಂದ ಬಹು ದೂರವೂ ಇರಬಾರದು. ತಕ್ಕಷ್ಟು ವಿಸ್ತಾರವಾಗಿರುವ ಅಂತಹ ಒಂದು ಸ್ಥಳಕ್ಕಾಗಿ ಅವರು ಅನೇಕ ಕಡೆ ಹುಡುಕಿದರು. ಕಡೆಗೆ ಗುಬ್ಬಿಯ ರೈಲು ನಿಲ್ದಾಣದಿಂದ ಪೂರ್ವ ದಿಕ್ಕಿನಲ್ಲಿದ್ದ ವಿಸ್ತಾರವಾದ ಒಂದು ಕುರುಚಲು ಗಿಡಗಳ ಅಡವಿ ಕಣ್ಣಿಗೆ ಬಿತ್ತು. ಅವರು ಆ ಅಡವಿಯಲ್ಲಿ ತಿರುಗಾಡಿದರು. ಅದರ ಮಧ್ಯದಲ್ಲಿ ಒಂದು ಮಾರುತಿಯ ಗುಡಿ ಇತ್ತು. ಅಲ್ಲಿನ ವಿಗ್ರಹದ ಮೇಲೆ ಹುತ್ತ ಬೆಳೇದಿತ್ತು. ಸುತ್ತಣ ಅಡವಿಯಲ್ಲಿ ನರಿ, ತೋಳಗಳು ವಾಸವಾಗಿದ್ದವು,. ಹಾವು, ಚೇಳುಗಳು ಹಗಲು ಹೊತ್ತಿನಲ್ಲಿಯೇ ಅಲ್ಲಿ ಹರಿದಾಡುತ್ತಿದ್ದವು. ಚಿದಂಬರರು ಆ ಅಡವಿಯನ್ನು ಕೊಂಡು ಕೊಂಡರು.ಅವರು ಅಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿದರು.

ಆಶ್ರಮವನ್ನು ಆರಂಭಿಸುವ ಕಾರ್ಯ ಬಾಯಿಂದ ಹೇಳುವಷ್ಟು ಸುಲಭವಾಗಿರಲಿಲ್ಲ. ಅವರು ಅಲ್ಲಿದ್ದ ಅಂಜನೆಯ ಗುಡಿಯ ಬಾಗಿಲನ್ನು ಹಿಂದಕ್ಕೆ ನೂಕಿದಾಗ ಅದು ಮುರಿದು ಕೆಳಗೆ ಬಿತ್ತು. ಒಳಗಡೆಯ ಹುತ್ತದಿಂದ ಎರಡು ಸರ್ಪಗಳು ಹೆಡೆ ಬಿಚ್ಚಿಕೊಂಡು ಮೇಲಕ್ಕೆ ಎದ್ದವು. ಚಿದಂಬರರು ಭಯವನ್ನು ಗೆದ್ದವರಲ್ಲವೆ? ಬಡಿಗೆಯಿಂದ ಆ ಎರಡು ಹಾವುಗಳನ್ನೂ ಬಡಿದು ಹಾಕಿದರು. ಅಲ್ಲಿದ್ದ ಹುತ್ತವನ್ನು  ಅಗೆದು ಹಾಕಬೇಕು. ಆ ಕೆಲಸವನ್ನು ಮಾಡಲು ಯಾರಿಗು ಧೈರ್ಯವಿರಲಿಲ್ಲ.  ಚಿದಂಬರರೇ ಕೈಲಿ ಹಾರೆಯನ್ನು ತೆಗದುಕೊಂಡು ಅದನ್ನು ಅಗೆದರು. ಒಂದಾದ ಮೇಲೆ ಒಂದರಂತೆ ಏಳೂ ಸರ್ಪಗಳು ಆ ಹುತ್ತದಿಂದ ಹೊರಬಂದವು. ಆ ಏಳನ್ನೂ ಅವರು ಬಡಿದುಕೊಂದರು. ಅದರ ತಳದಲ್ಲಿ ಕರಿಯ ಕಲ್ಲಿನ ಸುಂದರವಾದ ಆಂಜನೆಯ ಮೂರ್ತಿ ಕಾಣಿಸಿತು. ಚಿದಂಬರರು ಅದನ್ನು ಅಲ್ಲಿಯೇ ಸ್ಥಾಪಿಸಿ, ಅದಕ್ಕೆ ಒಂದು ಸಣ್ಣ ಗುಡಿಯನ್ನು   ಕಟ್ಟಿಸಿದರು. ಹಾಲುಗಲ್ಲಿನ ದತ್ತಾತ್ರೆಯ ವಿಗ್ರಹವೊಂದನ್ನು ಮಾಡಿಸಿ ಅದರ ಜೊತೆಗೆ ಸ್ಥಾಪಿಸಿದರು. ಆಂಜನೆಯನಗುಡಿ ದತ್ತಾಂಜನೆಯನ ಗುಡಿ ಎನ್ನಿಸಿತು. ಸುತ್ತಮುತ್ತಲಿನ ಹಳ್ಳಿಗಳ ಜನರೆಲ್ಲರೂ ಈಗ ಆ ದೇವರ ಭಕ್ತರಾಗಿದ್ದಾರೆ. ವರ್ಷಕ್ಕೆ ಒಂದು ಸಲ ಅಲ್ಲಿ ದೇವರ ರಥೋತ್ಸವ ನಡೆಯುತ್ತದೆ.  ಸಾವಿರಾರು ಜನರು  ನೆರೆದು ಅದರಲ್ಲಿ ಭಾಗವಹಿಸುತ್ತಾರೆ.

 

ಈ ಮಾರುತಿಯ ಗುಡಿ ಎಷ್ಟು ಚೆನ್ನಾಗಿದೆ! ಈ ಮಸೀದಿ ಧ್ಯಾನಕ್ಕೆ ಎಷ್ಟು ಸೊಗಸಾಗಿದೆ!

ಶಾಲೆ:

ಆಶ್ರಮವು ಪ್ರಾರಂಭವಾಗಿ ಇನ್ನೂ ಹೆಚ್ಚು ದಿನಗಳಾಗಿರಲಿಲ್ಲ. ಒಂದು ದಿನ ಒಬ್ಬಾತ ಅವರ ಬಳಿಗೆ ಬಂದ. ಆತ ಚಿದಂಬರರನ್ನು ಕುರಿತು, “ಸ್ವಾಮಿ, ನಾನು ಬಡವ.ನನ್ನ ಮಗನಿಗೆ ಹನ್ನೆರಡು ವರ್ಷ.ಇನ್ನೂ ಮುಂಜಿಯಾಗಿಲ್ಲ. ತಾವು ಸಹಾಯ ಮಾಡಬೇಕು ಎಂದ. ಚಿದಂಬರರು, “ಅಪ್ಪ ನಾನೂ ಬಸವ. ಮಧ್ಯಾಹ್ನಕ್ಕೆ ಯಾರೂ ಬಂದರೂ ಅನ್ನ ಹಾಕಬಲ್ಲೆ,ಹೆಚ್ಚು ಹಣ ಕೊಡಲಾರೆ, ಇಷ್ಟನ್ನು ಮಾತ್ರ ತೆಗೆದುಕೋ” ಎಂದು ಹತ್ತು ರೂಪಾಯಿಗಳನ್ನು ಕೊಟ್ಟರು.  ಕೆಲವು ದಿನಗಳಾದ ಮೇಲೆ ಆತ ಮತ್ತೇ ಬಂದ. “ಸ್ವಾಮಿ ಮಗನ ಮುಂಜಿಗೆ ಸಹಾಯ ಮಾಡಿ” ಎಂದ. ಚಿದಂಬರರರು” ಹಿಂದೆಯೇ ಕೊಟ್ಟೇನಲ್ಲ?” ಎಂದರು. ಆಗ  ಆತ, ಸ್ವಾಮಿ” ಆರು ತಿಂಗಳು ಅಲೆದು ೨೫ ರೂಪಾಯಿ ಸಂಪಾದಿಸಿದೆ. ಅದರಲ್ಲಿ ಹತ್ತು ರೂಪಾಯಿ ಪ್ರಯಣಕ್ಕೆ ವೆಚ್ಚವಾಯಿತು. ಉಳಿದ ೧೫ ರೂಪಾಯಿಯಲ್ಲಿ ಮುಂಜಿ ಸಾಧ್ಯವೇ?” ಎಂದ.  ಚಿದಂಬರರು, “ಹದಿನೈದು ಏತಕ್ಕೆ :”ಹತ್ತು ರೂಪಾಯಿ ಸಾಕು. ನಿನ್ನ ಮಗನನ್ನು ಕರೆದು ತಾ” ಎಂದು ಹೇಳಿದರು. ಅಂದಿನಿಂದ ಅವರು ಆಶ್ರಮದಲ್ಲಿ  ಪುಕ್ಕಟ್ಟೆಯಾಗಿ ಮುಂಜಿ  ಮಾಡಿಸುವ ಪದ್ದತಿಯನ್ನು ಬಳಕೆಗೆ ತಂದರು. ಧರ್ಮದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿದರು. ಈಗಲೂ ಚಿದಂಬರಾಶ್ರಮದಲ್ಲಿ ಬಡವರ ಮಕ್ಕಳಿಗೆ ಪುಕ್ಕಟೆಯಾಗಿ ಮುಂಜಿ ಮಾಡಿಸುತ್ತಾರೆ.

ಮುಂಜಿಯ ಕಾರಣದಿಂದ ಚಿದಂಬರಂ ಮನಸ್ಸು ಆಳವಾದ ಆಲೋಚನೆಗೆ ಒಳಗಾಯಿತು. ಭಾರತ ಹಿಂದಿನ ಅಮೂಲ್ಯ ಗ್ರಂಥಗಳಿರುವುದು ಸಂಸ್ಕೃತದಲ್ಲಿ . ಆದ್ದರಿಂದ ನಮ್ಮ ದೇಶದ ಮಕ್ಕಳು ಸಂಸ್ಕೃತವನ್ನುಜ ಓದಬೇಕು. ಆದರೆ ಬರಿಯ ಸಂಸ್ಕೃತವನ್ನು ಓದಿದರೆ  ಹೊಟ್ಟೆ ತುಂಬುವುದು ಹೇಗೆ ? ನಮ್ಮ ಹಿಂದಿನ ಮತ್ತು ಇಂದಿನ ಎರಡು ವಿದ್ಯೆಗಳನ್ನೂ ಮಕ್ಕಳು ಕಲಿಯಬೇಕು. ವಿದ್ಯಾಭ್ಯಾಸವಾದ ಮೇಲೆ ಹುಡುಗರು ಸ್ವತಂತ್ರವಾಗಿ ಜೀವನ ನಡೆಸಬೇಕು. ಅಂತಹ ಒಂದು ಹೊಸ ರೀತಿಯಪಾಠಶಾಲೆಯನ್ನು ಆರಂಭಿಸಬೇಕುಎಂದು ಅವರು ನಿಶ್ಚಯಿಸಿದರು. ಶಿಕ್ಷಣ ಶಾಸ್ತ್ರವನ್ನು ಬಲ್ಲವರ ಸಹಾಯವನ್ನು ಪಡೆದು, ಅಂತಹ ಶಾಲೆಯೊಂದನ್ನು ತೆರೆದರು. ಇದಕ್ಕೆ ಸರಕಾರ ಒಪ್ಪಲಿಲ್ಲ. ಆದ್ದರಿಂದ ಅವರು ಆರಂಭಿಸಿದ ಶಾಲೆ ಈಗ ಮೂರು ಕವಲಾಗಿದೆ- ಸಂಸ್ಕೃತ ಶಾಲೆ, ಪ್ರೌಢ ಶಲೆ, ಮುದ್ರಣಾಲಯ ಎಂದು.

ವಿದ್ಯಾಶಾಲೆಗಳು ಆರಂಭವಾದ ಮೇಲೆ ಉಪಾಧ್ಯಾಯರು ಬರಬೇಕಾಯಿತು. ಅವರಿಗಾಗಿ ಮನೆಗಳನ್ನು ಕಟ್ಟಿಸಬೇಕಾಯಿತು. ವಿದ್ಯಾರ್ಥಿಗಳಿಗಾಗಿ “ವಿದ್ಯಾರ್ಥಿ ಮಂದಿರ, ಅತಿಥಿಗಳಿಗಾಗಿ ಅತಿಥಿ ಮಂದಿರ” ಹಾಲು ಮೊಸರಿಗಾಗಿ ದನಗಳು ಮತ್ತು ಅವುಗಳ ವಾಸಕ್ಕಾಗಿ ಗೋಶಾಲೆ, ಅಡಿಗೆಗಾಗಿ ಪಾಕಶಾಲೆ, ಅಚ್ಚಿನ ಕೆಲಸಕ್ಕಾಗಿ, ಮುದ್ರಣಾಲಯ” ಹೀಗೆ ಬೆಳೆದು ಈಗ ಇದು ಚಿದಂಬರಾಶ್ರಮ: ಎಂದು ಪುಟ್ಟ ಜಗತ್ತಾಗಿದೆ.

ದೇವಾಲಯಮಸೀದಿ :

ಚಿದಂಬರಾಶ್ರಮ ಸ್ಥಾಪನೆಯಾದ ಮೇಲೆ ಚಿದಂಬರರು ಒಮ್ಮೆ ಮಧುಗಿರಿಯಿಂದ ಪಾವಗಡಕ್ಕೆ ಪ್ರಯಾಣ ಮಾಡುತ್ತಿದ್ದರು.  ಹಾದಿಯಲ್ಲಿ ಅವರಿಗೆ ಒಂದು ಬೆಟ್ಟ ಕಾಣಿಸಿತು. ಅದರ ಬುಡದಲ್ಲಿ ಮಿಡಿಗೇಶಿಯೆಂಬ ಹಳ್ಳಿಯಿತ್ತು. ಚಿದಂಬರರಿಗ ಬೆಟ್ಟ, ಕಾಡುಗಳೆಂದರೆ ಬಲು ಪ್ರೇಮ. ಸರಸರ ಬೆಟ್ಟವನ್ನು ಹತ್ತಿ ಹೋದರು. ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದರ ಮಧ್ಯದಲ್ಲಿ ಒಂದು ಮಸೀದಿ, ಅದಕ್ಕೆ ಹತ್ತಿರದಲ್ಲಿಯೇ ಒಂದು ಆಂಜನೇಯ ಗುಡಿ, ಅದರ ಪಕ್ಕದಲ್ಲಿ ದೊಡ್ಡದೊಂದು ದೋಣಿಯಿತ್ತು.  ಚಿದಂಬರರು ಅದರಲ್ಲಿ ಸ್ನಾನ ಮಾಡಿದರು. ಗುಡಿಯಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದರು.  ಆ ವೇಳೆಗೆ ಕುರಿ ಕಾಯುವ ಹುಡುಗರು ಅಲ್ಲಿಗೆ ಬಂದರು. ಕಣ್ಣು ಮುಚ್ಚಿ ಕುಳಿತ್ತಿದ್ದ ತೇಜಸ್ಸ್ವ ಚಿದಂಬರನನ್ನು ಕಂಡು ಅವರಿಗೆ ಭಯವಾಯಿತು. ಅವರು ಬೆಟ್ಟದ ಬುಡದಲ್ಲಿದ್ದ ಹಳ್ಳೀಗೆ ಓಡಿಹೋಗಿ, “ಬೆಟ್ಟದ ಮೇಲೆ ಯಾರೋ ದೊಡ್ಡವರು ತಪಸ್ಸು ಮಾಡುತ್ತಾ ಕುಳಿತಿದ್ದಾರೆ” ಎಂದು ಹೇಳಿದರು.  ಊರಿನ ಹಿರಿಯರೆಲ್ಲ ಬೆಟ್ಟವನ್ನೇರಿ ಓಡಿ ಬಂದರು. ಆ ವೇಳೆಗೆ  ಚಿದಂಬರರರು ಎಚ್ಚತ್ತಿದ್ದರು.   ಅವರು ಆ ಹಿರಿಯರನ್ನು ಕುರಿತು., “ಅಣ್ಣಯ್ಯಗಳಿರಾ, ಬೆಟ್ಟದ ಮೇಲೆ ಇರುವ ಈಮಾರುತಿ ಗುಡಿ  ಎಷ್ಟು ಚೆನ್ನಾಗಿದೆ! ಇಲ್ಲಿರುವ ಆ ಮಸೀದಿ ಧ್ಯಾನಕ್ಕೆ ಎಷ್ಟು ಸೊಗಸಾಗಿದೆ! ಇವನ್ನು ಏಕೆ ಹಾಳೂ ಕೆಡವಿದ್ದೀರಿ?” ಎಂದರು. ಅವರ ಮಾತುಗಳನ್ನು ಕೇಳುತ್ತಲೇ ಆ  ಊರಿನವರಿಗೆಲ್ಲ ಭಕ್ತಿ ಹುಟ್ಟಿತ್ತು. ಅಂದಿನಿಂದಲೇ ಅಲ್ಲಿಪೂಜೆ, ಧ್ಯಾನಗಳನ್ನು ನಡೆಸುವುದಾಗಿ ಅವರು  ನಿಶ್ಚಯಿಸಿದರು. ಕೆಳಗಿನ ಹಳ್ಳಿಯಿಂದ  ಅವರು ಸಾಮಾನುಗಳನ್ನು ಹೊತ್ತು ತಂದರು. ಅಂದು ಸಂಜೆಗೆ ಪೂಜೆ, ಊಟಗಳು ಸಿದ್ಧವಾದವು,. ಸ್ವಾಮಿಗಳು ಮಸೀದಿಯಲ್ಲಿ ಧ್ಯಾನ ಮಾಡಿದರು. ಅಲ್ಲಿನ ಮುಸ್ಲಿಮರೆಲ್ಲ ಅದರಲ್ಲಿ ಭಾಗವಹಿಸಿದರು. ಆ ಮೇಲೆ ಸ್ವಾಮಿಗಳು ಗುಡಿಯಲ್ಲಿ ಪೂಜೆ  ಮಾಡಿದರು. ಪೂಜೆಯ ಪದ್ಧತಿ ಅಲ್ಲಿ ಈಗಲೂ  ನಡೆದುಕೊಂಡು ಬರುತ್ತಿದೆ.

ಚಂದ್ರಭಾವಿ ಆಶ್ರಮ :

ಮರುದಿನ ಚಿದಂಬರರರು ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಅಲ್ಲಿಂದ ಮೂರು ಮೈಲಿ ದೂರದಲ್ಲಿ ಚಂದ್ರಭಾವಿಯೆಂಬ ಒಂದು ಅಡವಿ. ಅಲ್ಲಿ ಚಂದ್ರಮ್ಮನೆಂಬುವಳು ಕಟ್ಟಿಸಿದ ಒಂದು ಬಾವಿಯಿದೆ. ಅದಕ್ಕೇ  ಆ ಹೆರು ಸುತ್ತಲು ಗುಡ್ಡಗಳಿವೆ. ಆ ಗುಡ್ಡಗಳಲ್ಲಿ ಕಳ್ಳಕಾಕರು ಸೇರಿಕೊಂಡು, ಹಾಡು ಹಗಲಿನಲ್ಲಿಯೇ ಪ್ರಯಾಣೀಕರನ್ನು ಸುಲಿಗೆ ಮಾಡುತ್ತಿದ್ದರು. ಜನರು ಅಲ್ಲಿ ಒಂಟಿಯಾಗಿ ತಿರುಗಾಡಲು ಹೆದರುತ್ತಿದ್ದರು. ಚಿದಂಬರರಿಗೆ ಈ ಸುದ್ಧ ಗೊತ್ತಿತ್ತು.  ಆದರೂ ಅವರು ಹೆದರಲಿಲ್ಲ.  ಅವರು ಒಂಟಿಯಾಗಿ ಸುತತಲಿನ  ಬೆಟ್ಟಗಳನ್ನೆಲ್ಲ ಸುತ್ತಿದರು. ಅಲ್ಲಲ್ಲಿ ಸಿಕ್ಕಿದವರನ್ನು ಪ್ರೀತಿಯಿಂದ ಮಾತನಾಡಿಸಿದರು. ಅವರೆಲ್ಲ,ಕಳ್ಳರೆ, ಚಿದಂಬರರು ಅವರಿಗೆ ನೀತಿಯನ್ನು ಬೋಧಿಸಿದರು.  ಅವರು ಚಿದಂಬರರ ಕಾಲಿಗೆ ಬಿದ್ದು, ಇನ್ನು ಮುಂದೆ ಒಳ್ಳೆಯವರಾಗಿ ಇರುವೆನೆಂದು ಮಾತು ಕೊಟ್ಟರು.  ಅಲ್ಲಿಯೇ ಒಂದು ಆಶ್ರಮವನ್ನು ಸ್ಥಪಿಸಬೇಕೆಂದು ಸ್ವಾಮಿಗಳನ್ನು ಕೇಳಿಕೊಂಡರು.

ಚಿದಂಬರ ಸ್ವಾಮಿಗಳು ಚಂದ್ರಭಾವಿಯಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು.  ಅದು ನಡೆದದ್ದು ಹೀಗೆ. ನಾಗಮ್ಮ ಎಂಬ ಒಬ್ಬ ಹೆಣ್ಣುಮಗಳು ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಳು. ಆಕೆ ತುಂಬಾ ಚುರುಕು. ತನ್ನ ಬಾಳನ್ನು ಹೇಗೆ ಕಳೆಯುವುದು ಎಂದು ಚಿಂತಿಸುತ್ತಿದ್ದಳು.  ಆಕೆ ತನ್ನ ಅಣ್ಣನ ಮನೆಯಲ್ಲಿ ಇದ್ದಳು. ಬೆಳಿಗ್ಗೆ ಎದ್ದು ದೇವರ ಪಠಕ್ಕೆ ನಮಸ್ಕರಿಸುವುದು ಆಕೆಯ ಪದ್ಧತಿ. ಒಂದುದಿನ ಆ ಪಠದ ಪಕ್ಕದಲ್ಲಿದ್ದ  ಮತ್ತೊಂದು ಚಿತ್ರಪಠದ ಕಡೆಗ ಆಕೆಯ ಗಮನ ಹೋಯಿತು. ಅದೊಬ್ಬ ಸಂನ್ಯಾಸಿಯ ಪಠ,.ಆತನಿಗೆ ಉದ್ಧವಾದ  ಗಡ್ಡವಿತ್ತು: ದುಂಡಾದ ಮುಖ. ನಗುತ್ತಿರುವ ಆಮ ಉಖ ತನ್ನನ್ನೇ ನೋಡುತ್ತ, :”ಏಕೆ ದುಃಖಪಡುತ್ತೀ? ನಾನು ನಿನಗೆ ಸುಖದ ಹಾದಿಯನ್ನು ತೋರಿಸುತ್ತೇನೆ” ಎಂದು ಹೇಳುವಂತೆ ಕಾಣಿಸಿತು. “ಇವರು ಯಾರು?” ಎಂದು  ಆಕೆ ತನ್ನ ಅಣ್ಣನನ್ನು ಕೇಳಿದಳು. ಆತ, “ಅಮ್ಮ , ಅವರು ಗುಬ್ಬಿಯ ಚಿದಂಬರ ಸ್ವಾಮಿಗಳು, ಅವರು ಬಹು ದೊಡ್ಡ ಸಾಧುಗಳು” ಎಂದ. ನಾಗಮ್ಮ ಸ್ವಾಮಿಗಳ ಆಶ್ರಮಕ್ಕೆ ಹೋದಳು. ಆಕೆಯು ಅವರ‍್ ಪಾದಗಳ ಮೆಲೆ ಬಿದ್ದು, “ಸ್ವಾಮಿ, ನನ್ನ ಗತಿಯೇನು? ನನ್ನ ಬಾಳನ್ನು ಹೇಗೆ ಸವೆಸಲಿ?” ಎಂದು ಅತ್ತಳು. ಚಿದಂಬರರು ಆಕೆಯ ತಲೆಯ ಮೇಲೆ ಕೈಯಿಟ್ಟು, “ಮಗಳೇ ಹೆದರಬೇಡ, ದೇವರು ದೊಡ್ಡವನು. ನೀನೊಬ್ಬ ಕರ್ಮಯೋಗಿಯಾಗುವೆ” ಎಂದು ಹರಸಿದರು.

ನಾಗಮ್ಮನಂತೆಯೇ ಮನೆತಪ್ಪಿದ ಇನ್ನೂ ಕೆಲವು ಹೆಣ್ಣುಗಳು ಚಿದಂಬರರ ಮೊರೆಹೊಕ್ಕರು. ಚಿದಂಬರರು ಅವರಿಗಾಗಿ ಚಂದ್ರಭಾವಿ ಯಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು. ಆಶ್ರಮದಲ್ಲಿ ಬೇರೆ ಬೇರೆ ಜಾತಿಯವರಿದ್ದಾರೆ. ಆದರೆ ಅವರೆಲ್ಲರೂ ಒಂದೇ ಮನೆಯವರಂತೆ ಇದ್ದಾರೆ. ಕಳ್ಳಕಾಕರ ಹಾವಳಿಯಿಂದ ಹಾಳೂ ಬಿದ್ದಿದ್ದ ಜಮೀನುಗಳನ್ನು ಆಶ್ರಮದ ಹೆಣ್ಣು ಮಕ್ಕಳು ಕೊಂಡುಕೊಂಡಿದ್ದಾರೆ. ಅವರೇ ಸ್ವತಃ  ನೇಗಿಲು  ಹಿಡಿದು ಊಳುತ್ತಾರೆ.  ಬೀಜ ಬಿತ್ತುತ್ತಾರೆ.  ಬೆಳೆ ಬೆಳೆಯುತ್ತಾರೆ.  ಚಿದಂಬರರು ಇಲ್ಲಿ ಬಂದು ದತ್ತನ ಗುಡಿಯನ್ನು ಕಟ್ಟಿಸಿದ್ದಾರೆ. ಆಶ್ರಮದ ಹೆಣ್ಣು ಮಕ್ಕಳಿಗೆ ಅವರು ಮಂತ್ರಗಳನ್ನು ಹೇಳೀಕೊಟ್ಟಿದ್ದಾರೆ.  ಆ ಹೆಣ್ಣು ಮಕ್ಕಳು ಬೆಳಿಗ್ಗೆ ಸ್ನಾನ ಮಾಡಿ ದೇವರನ್ನು ಪೂಜಿಸುತ್ತಾರರೆ. ಆಮೇಲೆ ಹೊಲಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ.  ಮಧ್ಯಾಹ್ನ ಯಾರೂ ಹೋದರೂ ಆಶ್ರಮದಲ್ಲಿ ಅನ್ನ ಹಾಕುತ್ತಾರೆ. ವರ್ಷಕ್ಕೆ ಎರಡು ಬಾರಿ ಉತ್ಸವಗಳನ್ನು ನಡೆಸುತ್ತಾರೆ. ಆಗ ಸಾವಿರಾರು ಮಂದಿ ಬಡಬಗ್ಗರಿಗೆ ಅನ್ನ ಹಾಕುತ್ತಾರೆ. ಈಗಲೂ ಸಹ ಇದು ಅಲ್ಲಿ ನಡೆಯುತ್ತಿದೆ.  ಚಿದಂಬರರು ಬದುಕಿದ್ದಾಗ ಅಲ್ಲಿಗೆ ಹೋಗುತ್ತಿದ್ದರು.  ಅಲ್ಲಿ ನೆರದವರಿಗೆಲ್ಲ ಧರ್ಮವನ್ನು ಬೋಧಿಸುತ್ತಿದ್ದರು.

ಹಳೆಯ ಅಂಗಿ:

ಚಿದಂಬರ ಸ್ವಾಮಿಗಳು ದೇವರನ್ನು ಕಂಡಿದ್ದವರು. ಆದ್ದರಿಂದಲೇ ದೇವರನ್ನು ಕುರಿತು ಅವರು ಹೇಳುತ್ತಿದ್ದ ಮಾತುಗಳು ನೇರವಾಗಿ ಮನಸ್ಸನ್ನು ಮುಟ್ಟುತ್ತಿದ್ದವು. ಅವರು ಮಾತು  ಸರಳ, ಸುಲಭ, ಶಕ್ತಿಯುತ, ಅವರ ಮಾತಿನಂತೆ ಅವರ ಬರಹವೂ ಸಹ ಸರಳ . ಅವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅವು ಕಥೆ, ಕವನ, ಜೀವನ ಚರಿತ್ರೆ, ಪುರಾಣ, ಮೊದಲಾದ ರೂಪದಲ್ಲಿವೆ. ಅವರು ಮಕ್ಕಳಿಗಾಗಿ ಒಂದು ಗೀತಾ ಬಾಲಭೋದೆಯನ್ನು ಬರೆದಿದ್ದಾರೆ. ಅವರು “ಸೇವಾಸದನ” ಎಂದು ಒಂದು  ಮಾಸಪತ್ರಿಕೆಯನ್ನೂ ಹೊರಡಿಸುತ್ತಿದ್ದರು. ಅದು ಈಗಲೂ ಮುಂದುವರೆಯುತ್ತಿದೆ.

ಚಿದಂಬರರು ಭೀಷ್ಮರ ಹಾಗೆ ತಮ್ಮ ಮನಸ್ಸು ಬಂದಾಗ ಮರಣ ಹೊಂದುವ ಶಕ್ತಿ ಇದ್ದವರು. ಒಂದು ದಿನ ಅವರು, “ನಾನಿನ್ನು ಹೊರಡುತ್ತೇನೆ. ಈ ದೇಹದ ಭಾರ ಸಾಕಾಗಿದೆ. ಈ “ಹಳೆಯ ಅಂಗಿ” ನನಗೆ ಬೇಸರವಾಗಿದೆ” ಎಂದರು. ಯಾರು ಎಷ್ಟು ಬೇಡಿದರೂ ಒಪ್ಪಲಿಲ್ಲ. ೧೯೬೬ರ ಆಗಸ್ಟ್ ಒಂದರ ರಾತ್ರಿ ಅವರು ಕಾಲವಾದರು. ಅವರೀಗ ಇಲ್ಲ. ಅವರ ಬುದ್ಧಿವಾದದಂತೆ ನಡೆಯೋಣ.