ಚಿದಾನಂದಾವಧೂತನು ಶಾಕ್ತಪಂಥದ ದೇವಿ ಆರಾಧಕ.ಈ ತತ್ವಪದ ಸಂಪುಟದ ಕೊನೆಯ ಭಾಗದಲ್ಲಿ ದೇವಿಯನ್ನು ಕುರಿತಾದ ಸ್ತುತಿಪದ್ಯಗಳು ಹೆಚ್ಚು ಸಂಖ್ಯೆಯಲ್ಲಿವೆ.ಆ ಬಗೆಯ ದೇವಿಸ್ತುತಿಗಿಂತ ಹಿಂದಿನ ಭಾಗದಲ್ಲಿ ಸ್ತ್ರೀ ನಿಂದನೆಯ ಪದಗಳೂ ಇವೆ.ಅಂದರೆ ಲೌಕಿಕದ ಒಂದು ರೂಪವನ್ನು ಬಿಡುಗಡೆಯ ಎಡೆಯಿಂದ ನೋಡುತ್ತ ಅದರದೇ ಇನ್ನೊಂದು ಸ್ವರೂಪವನ್ನು ಆರಾಧಿಸುವ ಬಗೆ ಅನಾದಿಕಾಲದಿಂದಲೂ ಹೇಗೆ ರೂಢಿಗೆ ಬಂದಿತೆಂಬುದನ್ನು ಒಂದಿಷ್ಟು ಗಮನಿಸಬೇಕಾಗಿದೆ. ಯಾವುದರ ಬಗೆಗೆ ಮೋಹ ಅಧಿಕವೋ ಅದೇ ವೈರಾಗ್ಯಕ್ಕೂ ಕಾರಣವಾಗಿ, ಒಂದು ನಿಲುಗಡೆಯಲ್ಲಿ ದೈಹಿಕ ರೂಪವನ್ನು ನಿರಾಕರಿಸಿ, ಅದರದೇ ಇನ್ನೊಂದು ಅಂತಃಸತ್ವದ ಶಾಶ್ವತ ರೂಪವನ್ನು ಹುಡುಕಿಕೊಳ್ಳುವುದು ಒಂದು ಅನ್ವೇಷಣೆಯ ಮಾರ್ಗವೇ ಆಗಿಬಂದಂತೆ ತೋರುತ್ತದೆ. ಇದು ಬಹಿರಂಗದ ತೊಳಲಾಟದ ನಂತರ ಒದಗಿಬರುವ ಸ್ವೀಕಾರಸಂಗತಿ.ದೇವಿ ಮಹಾತ್ಮೆಯಲ್ಲಿ ಚಿದಾನಂದಾವಧೂತನು ಕಾಮವಿಚಾರ ಕುರಿತು ಪ್ರಸ್ತಾಪಿಸುತ್ತ ‘ಸ್ತ್ರೀಯು ಪ್ರತ್ಯಕ್ಷ ರಾಕ್ಷಸಿಯು. ಗಾಣದೊಳು ಸಿಕ್ಕ ಕಬ್ಬಿನಂತೆ ಹಿಂಡಿ ಹಿಪ್ಪೆಯ ಮಾಡುವಳು ಹಾಗೂ ಸ್ತ್ರೀ ಸಂಗವು ಕೇವಲ ನರಕವಾಸವೆಂದು ತಿಳಿದು ಅದನ್ನು ಮನ, ನೇತ್ರ, ನುಡಿ, ಶರೀರ, ಇಂದ್ರಿಯಾದಿಗಳಿಂದ ಮುಟ್ಟದಿರುವ ಬ್ರಹ್ಮಚರ್ಯದಿಂದ ಜಯಿಸುವುದು. ಸ್ತ್ರೀಮುಟ್ಟುವುದು ನರಕ ಮುಟ್ಟುವುದಕ್ಕಿಂತ ಕೆಟ್ಟದೆಂದು ತಿಳಿ.ಸ್ತ್ರೀಯರೆಲ್ಲರೂ ಜಗದಂಬೆಯಾದ ಪಾರ್ವತಿಯ ಸಮಾನರೂ ಪೂಜ್ಯರೆಂದು ತಿಳಿಯಬೇಕು…’ ಎಂದು ಹೇಳುತ್ತಾನೆ.ಯಾವುದು ಸಮಸ್ಯಾತ್ಮಕವೋ ಅದನ್ನು ತಿಳಿಯಾಗಿಸುವುದರ ಪ್ರಯತ್ನ ಮಾಡುವುದು.ಇದು ಕಠಿಣ ಸಾಧನೆಯ ಮಾರ್ಗ. ಇದನ್ನು ಬಹುತೇಕ ತತ್ವಪದಕಾರರು ಹಠಯೋಗಿಗಳಂತೆ ಸಾಧಿಸಿದ್ದಾರೆ.
ರಾಮಕೃಷ್ಣ ಪರಮಹಂಸರೂ ಸ್ತ್ರೀಯನ್ನು ಬೇರೊಂದು ರೂಪದಲ್ಲಿ ಕಂಡು ಆರಾಧಿಸಿದ್ದು ಲೋಕಪ್ರಸಿದ್ಧ ಸಂಗತಿಯೇ ಆಗಿದೆ.ಚಿದಾನಂದಾವಧೂತನು ಸ್ವತಃ ಸಂಚಾರಿಯೂ, ಲೋಕಾನುಭವಿಯೂ, ಜನಸಾಮಾನ್ಯರನ್ನು ಎಚ್ಚರಿಸಬೇಕಾದವನೂ ಆದುದರಿಂದ ಕೆಲವು ಸಾಂಸಾರಿಕ ಕಟುಸಂಗತಿಗಳನ್ನು ಹೇಳಲೇಬೇಕಾಗಿ ಬಂದಿರುವಂತೆ ತೋರುತ್ತದೆ.ಈ ಅವಧೂತನು ಒಂದು ಆನೆಯ ಮೇಲೆ ಕುಳಿತು ಎದರಿಗೆ ನಿಂತ ಮದದಾನೆಯನ್ನು ಪಳಗಿಸಿದವನಂತೆ ತೋರುತ್ತಾನೆ.ಮಾಯೆಯನ್ನು ಮಾಯೆಯ ಮೂಲಕವೇ ಗೆಲ್ಲುವುದು.ಸಂಸಾರ ಮಾಯೆಯನ್ನು ದಾಟಿ ದೈವ ಸಾಕ್ಷಾತ್ಕಾರದ ಹಾದಿಯನ್ನು ಕಂಡುಕೊಳ್ಳುವುದು. ಆ ದೈವವು ಗ್ರಾಮೀಣ ಶಕ್ತಿದೇವತೆಯೇ! ಗ್ರಾಮೀಣರು ತಮ್ಮ ಬೇಸಾಯದ ಬದುಕಿನಲ್ಲಿ ಬಹಳಷ್ಟು ನೆರವಾಗುವ ಹೆಣ್ಣು ಮಕ್ಕಳನ್ನು ಗೌರವಿಸುತ್ತ,
ಅದೇ ನೆರವಾಗುವಿಕೆಯನ್ನು ನೆಲದೊಂದಿಗೂ, ಜಲದೊಂದಿಗೂ ಕಂಡು ಅದಕ್ಕೆಲ್ಲ ಗ್ರಾಮಸಂರಕ್ಷಣೆಯ ಮೂರ್ತಸ್ವರೂಪವನ್ನು ತಂದುಕೊಂಡರು.ಅದರ ಇನ್ನಷ್ಟು ಪರಿಷ್ಕೃತ ರೂಪವೇ ಚಿದಾನಂದಾವಧೂತನು ನಂಬಿದ ಬಗಳಾಂಬಿಕೆಯೆಂಬ ಶಕ್ತಿದೇವತೆ. ಸಂಸಾರವೆಂಬುದು ಗ್ರಾಮೀಣರಿಗೆ ಮಾತ್ರ ಮೀಸಲಲ್ಲವಲ್ಲ. ಅದು ನಗರಕ್ಕೂ, ಅರಮನೆಗೂ, ದೈವವನ್ನು ಪೂಜಿಸುವ ಪೂಜಾರಿಗೂ ಇದ್ದುದೇ! ಗ್ರಾಮೀಣರ ಶಕ್ತಿದೈವ ಅಣ್ಣಮ್ಮ, ನಗರವಾಸಿಗಳಿಗೆ ಅನ್ನಪೂರ್ಣೇಶ್ವರಿ.ಗ್ರಾಮಸ್ಥರ ಎಲ್ಲವ್ವ, ಶಿಷ್ಟರ ಎಲ್ಲಮಾಂಬೆ.ಇವೆರಡರ ನಡುವಣ ವ್ಯತ್ಯಾಸ ಹಿರಿದೇನಲ್ಲ. ಇದರ ಮಧ್ಯದ ಸಂಭಾವ್ಯ ಶಕ್ತಿಯನ್ನು ಗುರುತಿಸಿ, ಅದನ್ನು ಸ್ತ್ರೀ ಪರಿಮಿತ ಸಾಂಸಾರಿಕ ಸಂಕಷ್ಟಗಳನ್ನು ಬಿಡಿಸುವ ದೈವವೆಂದು ಸ್ತುತಿಸುತ್ತಾನೆ.ಅಕ್ಕನಿಂದ ಭಂಗಿಸಿಕೊಂಡ ಶಿಶುವು ದುಃಖದಿಂದ ತಾಯಿಯ ಬಳಿ ನಡೆದಂತೆ.ಈ ತಾತ್ವಿಕ ಸಂಗತಿಯನ್ನು ಭಾರತೀಯರೆಲ್ಲರೂ ಒಪ್ಪಿಕೊಂಡಿರುತ್ತಾರೆ.ಗ್ರಾಮದೇವತೆ ಮಾರಮ್ಮನಿಂದ ಹಿಡಿದು ಉತ್ತರಭಾರತದ ಜನಪ್ರಿಯ ದುರ್ಗಾಮಾತೆಯವರೆಗೆ ಇದರ ವ್ಯಾಪ್ತಿ ಹಬ್ಬಿರುತ್ತದೆ.ಈ ಕಾರಣಕ್ಕಾಗಿಯೆ ಚಿದಾನಂದಾವಧೂತನ ದೇವಿ ಮಹಾತ್ಮೆ ಕೃತಿಯು ಕರ್ನಾಟಕದಾದ್ಯಂತ ಒಂದು ಪಾರಾಯಣ ಗ್ರಂಥವೇ ಆಗಿಬಿಟ್ಟಿದೆ.
ಪುರುಷನ ಸಾಂಸಾರಿಕ ಸಮಸ್ಯೆಗಳ ಬಿಡುಗಡೆಯ ಮಾರ್ಗ ಯಾವುದು?ಅದು ಇನ್ನೊಬ್ಬ ಸ್ತ್ರೀಯಿಂದಲೇ?ಲೌಕಿಕದಲ್ಲಾದರೆ ಇರಬಹುದು. ಅದೂ ಒಂದು ಭ್ರಮೆಯ ಭಾವದಲ್ಲಿ! ಪಾರಲೌಕಿಕದಲ್ಲಾದರೆ ಶಕ್ತಿದೇವತೆಯೇ ರಕ್ಷಕಳು.ಈ ಮಾರ್ಗ ಕಂಡುಕೊಂಡ ಚಿದಾನಂದಾವಧೂತನು ಶಕ್ತಿದೇವತೆಯನ್ನು ಕುರಿತಾದ ನಾನಾ ಬಗೆಯ ಸ್ತುತಿಯಲ್ಲಿ ತೊಡಗಿ ತನ್ನ ಬೆಳಕನ್ನು ಕಂಡುಕೊಂಡಿರುತ್ತಾನೆ.ಈ ದಿಸೆಯಲ್ಲಿ ಆತನಿಗೆ ಅವನದೇ ಆದ ಕೆಲವು ನಿಯಮಗಳಿರುತ್ತವೆ.ದಯೆ, ಧರ್ಮಾನುಸಂಧಾನ, ಪ್ರೀತಿಯನ್ನು ಸಂಸಾರದಲ್ಲಿರುವ ಹೆಂಡಿರು, ಮಕ್ಕಳಿಂದ ಕಾಣಲಾಗುವುದಿಲ್ಲವೆಂದು, ಒಂದು ವೇಳೆ ಅದು ಇರುವುದಾದರೆ ಧನಬಲದ ಅಳತೆಗೆ ಮಾತ್ರ ಎನ್ನುತ್ತಾನೆ.ಆಧುನಿಕ ಜಗತ್ತು ಹಣದ ಹಿಂದೆಯೇ ಓಡುತ್ತಿರುವುದರಿಂದ ಚಿದಾನಂದಾವಧೂತನು ತನ್ನ ಕಾಲಕ್ಕಿಂತ ಈ ವರ್ತಮಾನದ ಸತ್ಯವನ್ನೇ ಕಟುವಾಗಿ ಹೇಳುವಂತೆ ತೋರುತ್ತದೆ.ಚಿದಾನಂದಾವಧೂತನು ಆಧುನಿಕತೆಯ ಅವಗಢವನ್ನು ಅಲ್ಲಮನಂತೆ ತುಂಬ ಗಾಢ ಸ್ವರೂಪದಲ್ಲಿ ಬಿಂಬಿಸುತ್ತ, ಸಾರ್ವಕಾಲಿಕ ಸತ್ಯದೆಡೆಗೆ ಬೆರಳು ಮಾಡುವವನಂತೆ ಕಾಣಿಸುತ್ತಾನೆ.
ಕಾಲ ವಿಪರೀತದಿಂದ ಕೇಡು ಬರೆ ನೀನದನು
ಕಾಲಲೊದೆಯದೆ ಬಹಳ ಚಿಂತೆಯನು ಮಾಡಿ
ಓಲಗಿಸಿ ಮನದೊಳಗೆ ತಾ ಕೆಟ್ಟೆಯೆನ್ನುವನು
ಪಾಲಿಸುವುದಿಲ್ಲೆಂದು ಸೇರುವೆಯ ನರಕವನು ||
ಕಾಲ ವೈಪರೀತ್ಯದ ಕೇಡು ಎಂಬ ಮಾತು ಎಲ್ಲ ಕಾಲದಲ್ಲಿಯೂ ಇದ್ದುದೇ! ಇದು ಒಂದು ಸಮೂಹಕ್ಕೆ ಭರವಸೆಯಂತೆ ಕಂಡರೆ ವಯಸ್ಕರಿಗೆ ಅನುಮಾನದ, ಶಂಕೆಗಳನ್ನೊಡ್ಡುವ ವಿದ್ಯಮಾನ. ಆಧುನಿಕತೆಯು ಪರ-ವಿರೋಧಗಳ ನಡುವೆಯೇ ಹುಟ್ಟಿಕೊಳ್ಳುವಂಥದ್ದು.ಕಾಲ ವಿಪರೀತದ ಕೇಡು ಒಂದು ಬಗೆಯ ಭ್ರಮೆಯಾದರೂ ಅದು ಕಳೆದ ಶತಮಾನಗಳಲ್ಲಿದ್ದುದು ಬೇರೆ ರೀತಿಯಲ್ಲಿ.ಈಗಿನ ವಿದ್ಯಮಾನಗಳೇ ಬೇರೆ ಎಂದು ತಿಳಿಯಬೇಕಾಗುತ್ತದೆ.ಈ ಸಂಬಂಧದಲ್ಲಿ ಕಾಲಜ್ಞಾನವೆಂಬ ಪ್ರತ್ಯೇಕ ಹೇಳಿಕೆಯ ಸಾಹಿತ್ಯವೇ ಹುಟ್ಟಿಕೊಂಡಿದೆ.ಕಳೆದ ಶತಮಾನಗಳ ಕೇಡು, ಯುದ್ಧ ಮತ್ತು ಮನುಷ್ಯರ ಬದುಕಿನ ಸಂಕಷ್ಟದ ವಿದ್ಯಮಾನಗಳಿಗೆ ಸಂಬಂಧಪಟ್ಟದ್ದಾದರೆ ಈಗಿನ ಕಾಲ ವಿಪರೀತದ ಕೇಡು ಪ್ರಾಕೃತಿಕವಾದುದಾಗಿದೆ.ಚಿದಾನಂದಾವಧೂತನ ಕಾಲವಿಪರೀತದ ಕೇಡನ್ನು ಈಗ ತೀವ್ರಥರದಲ್ಲೇ ಪರಿಗಣಿಸಬೇಕಾಗಿದೆ.ಮತ್ತೆ ಈ ಕಾಲ ವಿಪರೀತ ಈಗ ಮನಸ್ಸಿಗೆ ಅಪ್ಯಾಯಮಾನವಾದುದಾಗಿದೆ.ಅದು ತತ್ಕಾಲಕ್ಕೆ ಕೇಡಿನಂತೆ ಕಾಣದೆ ಓಲೈಸುವಂತೆಯೇ ಇದೆ.ಓಲೈಸುತ್ತಲೇ ಆಗೊಮ್ಮೆ, ಈಗೊಮ್ಮೆ ಜನಸಮೂಹ ಅಪಾಯದ ಅಂಚಿಗೆ ನಡೆಯುತ್ತಿದೆಯೇನೋ ಎಂಬ ಸೂಚನೆಗಳೂ ಕಾಣುತ್ತಲಿವೆ.ಇದನ್ನೇ ಎಲ್ಲ ತತ್ವ ಪದಕಾರರೂ ಮತ್ತೆ ಮತ್ತೆ ಪರಿಭಾವಿಸುತ್ತಾರೆ.
ಒಮ್ಮೊಮ್ಮೆ ಪುರುಷನ ಸಾಧನೆಯಲ್ಲಿ ಸ್ತ್ರೀಯರ ಪಾತ್ರ ನಗಣ್ಯವೆಂಬುದನ್ನು ತತ್ವಪದಗಳು ಕ್ವಚಿತ್ತಾಗಿ ಹೇಳುತ್ತವೆ.ಈಗಾಗಲೇ ಹೇಳಿದಂತೆ ಚಿದಾನಂದವಧೂತನು ಸಂಸಾರದ ಭಂಗಮೂಲವೆನಿಸುವ ಸ್ತ್ರೀಯನ್ನು ಇನ್ನೊಂದು ದಿಕ್ಕಿನ ಪ್ರಾರ್ಥನಾ ರೂಪಕ್ಕೆ ಪರಿವರ್ತಿಸುತ್ತಾನೆ.ಹೀಗಾಗಿ ಈತನ ದೇವಿ ಆರಾಧನಾ ಸ್ತೋತ್ರಗಳು, ತತ್ವಪದಗಳು ಕರ್ನಾಟಕದಾದ್ಯಂತ ಜನಪ್ರಿಯವಾಗಿರುತ್ತವೆ.ಈತನ ಕಾಲಾವಧಿ 1700 ರಿಂದ 1790ರವರೆಗೆ. ಸಂಸಾರ ತ್ಯಜಿಸಿದ್ದಿರಬಹುದಾದ, ಅವಧೂತಚರ್ಯೆಯ, ಅದ್ವೈತ ಶಾಕ್ತಪಂಥದ ಈ ಅವಧೂತನು ಬಗಳಾದೇವಿಯ ಭಕ್ತ. ಜ್ಞಾನಸಿಂಧು, ದೇವಿ ಮಹಾತ್ಮೆ, ಕಾಮವಿಡಂಬನ, ಬಗಳಾಂಬ ಸ್ತೋತ್ರ, ಚಿದಾನಂದರ ವಚನ, ಪಂಚೀಕರಣ ತತ್ವಚಿಂತಾಮಣಿ, ನವಚಕ್ರ ಕುಲರೇಖಾ ಇತ್ಯಾದಿ ಕೃತಿಗಳನ್ನು ಬರೆದಿರುತ್ತಾನೆ. ಈತನ ತತ್ವಪದಗಳನ್ನು ಗಮನಿಸಿದರೆ ಈತನು ಗುರು ಚಿದಾನಂದರ ಮೇಲೆ ಅಪಾರ ಗೌರವವಿರಿಸಿದ್ದವನಾಗಿ, ಆತನ ಆಜ್ಞೆಯಂತೆಯೇ ತಾನು ಎಲ್ಲವನ್ನೂ ಬರೆದದ್ದು ಎಂದಿದ್ದಾನೆ.ಆಂಧ್ರಪ್ರದೇಶದ ಆದೋನಿಮಂಡಲದ ದೊಡ್ಡಹರಿವಾಣ ಗ್ರಾಮವು ಚಿದಾನಂದವಧೂತನ ಜನ್ಮಸ್ಥಳ.ಈತನ ಮೂಲ ನಾಮಾಂಕಿತ ಘಂಕಪ್ಪ. ಲಕ್ಷ್ಮೀಪತಿ-ಅಣ್ಣಮ್ಮ ತಂದೆ-ತಾಯಿ.ಗಂಗಾವತಿಯ ಬಳಿಯಲ್ಲಿದ್ದ ಚಿದಾನಂದರು ಈತನ ಮಾರ್ಗದರ್ಶಕ ಗುರುಗಳು.ಈ ಗುರುಗಳ ಅಂಕಿತದಲ್ಲಿಯೇ ಕಾವ್ಯ, ತತ್ವಪದ ರಚನೆ ಮಾಡಿದ. ರಾಯಚೂರು ಜಿಲ್ಲೆಯ ಅಂಬಾಮಠದಲ್ಲಿ ಬಗಳಾಮುಖಿಯ ದೇವಸ್ಥಾನವಿದ್ದು, ಗುರು ಚಿದಾನಂದರ ಸಮಾಧಿ ಅಲ್ಲಿಯೇ ಇದೆ.ಆದರೆ ಶಿಷ್ಯ ಚಿದಾನಂದಾವಧೂತನು ತನ್ನ ಜೀವನಾಂತ್ಯದಲ್ಲಿ ಕನಕಗಿರಿಗೆ ಹೋಗಿ ನೆಲೆಸಿ ಅಲ್ಲಿಯೇ ಜೀವಸಮಾಧಿಯಾದುದಾಗಿ ತಿಳಿದುಬರುತ್ತದೆ.ವಿವಿಧ ಮಾರ್ಗದ ತತ್ವಪದಕಾರರೂ ಚಿದಾನಂದಾವಧೂತನ ಪದವನ್ನು ಹಾಡುವುದಿದೆ.ಕನಕಗಿರಿಯ ಅಂಬಾಮಠ ಶಾಕ್ತ ಪರಂಪರೆಯ ತತ್ವಪದಕಾರರ ಪ್ರಮುಖಸ್ಥಾನವಾಗಿ ಇಂದಿಗೂ ಜೀವಂತ ಗದ್ದುಗೆಯಾಗಿ ಪ್ರಸಿದ್ಧವಾಗಿರುತ್ತದೆ.
ಚಿದಾನಂದಾವಧೂತರ ಈ ತತ್ವಪದ ಸಂಪುಟದ ಹಲವಾರು ಪಠ್ಯಗಳು ಜಗನ್ನಾಥ ಶಾಸ್ತ್ರಿ ಮತ್ತು ಶೀಲಾದಾಸ್ ಅವರೇ ಅಲ್ಲದೆ ಇನ್ನೂ ಮುಂತಾದ ಸಂಪಾದಕರಿಂದ ಪ್ರಕಟಗೊಂಡು ಕರ್ನಾಟಕದಾದ್ಯಂತ ಪ್ರಚಲಿತವಿದೆ.ಅವುಗಳೊಂದಿಗೆ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಇದು ಒಂದು ಜನಪ್ರಿಯ ಸಂಪುಟ ಪ್ರಕಟವಾಗುತ್ತಿದೆ. ಇದನ್ನು ಸಿದ್ಧಪಡಿಸಲು ಅವಕಾಶ ಮಾಡಿಕೊಟ್ಟ ಈ ಸಂಪುಟಗಳ ಯೋಜನೆಯ ಅಧ್ಯಕ್ಷರಾದ ಡಾ.ಕೆ.ಮರುಳಸಿದ್ಧಪ್ಪ ಅವರಿಗೆ, ಯೋಜನಾ ಸಂಪಾದಕರಾದ ಡಾ.ನಟರಾಜ ಬೂದಾಳು ಅವರಿಗೆ, ಸಂಯೋಜನಾಧಿಕಾರಿಯಾದ ಕಾ.ತಾ.ಚಿಕ್ಕಣ್ಣನವರಿಗೆ, ಡಾ.ರಹಮತ್ ತರೀಕೆರೆಯವರಿಗೆ ಕೃತಜ್ಞತೆಗಳು. ಗ್ರಂಥಸಿದ್ಧತೆಯಲ್ಲಿ ಸಹಕರಿಸಿದ ಬಿ.ಕೆ.ಶ್ರೀನಿವಾಸ, ಕುಪ್ನಳ್ಳಿ ಎಂ.ಭೈರಪ್ಪ, ಅಭಿರುಚಿ ಗಣೇಶ್, ಕೆ.ಲಕ್ಷ್ಮಿ ಅವರು ಸಹಕರಿಸಿರುತ್ತಾರೆ.ಇವರ ಸಹಕಾರವನ್ನು ನೆನೆಯುತ್ತೇನೆ.

ಕೃಷ್ಣಮೂರ್ತಿ ಹನೂರು

ಚಿದಾನಂದಾವಧೂತರ ತತ್ವಪದಗಳು
ಭಾಗ-1: ದೇವ ದೇವತೆಗಳ ಸ್ತುತಿ

1
ಅಂಬ ಕಟಾಕ್ಷಿಸೆ ಅಂಬ

ಅಂಬ ಕಟಾಕ್ಷಿಸೆ ಅಂಬ
ಅಂಬ ಪರಾಂಬ ಬಗಳಾಂಬ ಪ

ಮಧು ಕೈಟಭಾರಿಯೆ ಮಹಿಷಾಸುರೇಶ್ವರಿಯೆ
ಕದನ ಶುಂಭಾಂತಕಿ ಕರುಣಾ ಕೃಪಾಕಟಾಕ್ಷೆ 1

ಪರಮ ಪಾವನದೇವಿ ಪಂಡಿತ ಜನ ಸಂಜೀವಿ
ಶರಣ ಜನರ ತಾಯಿ ಸುಧಾ ಶರಧಿ ಸಂಭಾವಿ 2

ನಾರಾಯಣಿ ಭದ್ರೇ ನರಸಿಂಹಿಣಿ ರೌದ್ರಿ
ವಾರಾಹಿ ಕಾಳಿಯೆ ಗೌರಿ ಉಮಾಮಹೇಶ್ವರಿ ಶಂಕರಿ 3

ನಿತ್ಯ ನಿರ್ಗುಣರೂಪೇ ನಿಗಮ ಸ್ತುತ್ಯ ಚಿದ್ರೂಪೇ
ನಿತ್ಯ ನಿರ್ವಿಕಾರಿ ನಿಂದಕಜನಸಂಹಾರಿ 4

ಚಿದಾನಂದಾವಧೂತೇ ಚಿನ್ಮಯ ಬಗಳ ಪ್ರಖ್ಯಾತೇ
ಬೋಧ ಸದ್ಗುರುನಾಥೇ ಭಕ್ತವಿಲಾಸ ಪ್ರೀತೆ 5

2
ಅಕ್ಕ ಕೇಳೆ ಪಾಪಮಾಡಿ ಲೆಕ್ಕವಿಲ್ಲದೆ

ಅಕ್ಕ ಕೇಳೆ ಪಾಪಮಾಡಿ ಲೆಕ್ಕವಿಲ್ಲದೆ ಯಮನ ಕೈಯ್ಯ
ದುಃಖದಲ್ಲಿ ನರಕದೊಳಗೆ ಮುಳುಗುವವರ ಕಡೆ ಹಾಯ್ವುದೆಂತೋ ಪ

ನೀರಗುಳ್ಳೆಯೆಂದು ತನುವ ನಿತ್ಯವಲ್ಲವೆಂದು ತಿಳಿಯರು
ಘೋರ ನೀಚತನವ ಮಾಡುವವರ ಕಡೆ ಹಾಯ್ವದೆಂತೋ

ಹಿಂದೆ ಮುಂದೆ ನುಡಿಯುತಿಹರು ನಿಂದೆ ಮಾತನಾಡುತಿಹರು
ಸಂದೇಹಕ್ಕೆ ಒಳಗಾದವರು ಕಡೆ ಹಾಯ್ವದೆಂತೋ 1

ಕೊಟ್ಟ ಸಾಲವನ್ನೇ ಕೊಡರು ಮತ್ತೆ ಆಣೆ ಎಂಬರಯ್ಯ
ಹೆತ್ತ ಮಗನನು ದಾಟುವವರು ಕಡೆ ಹಾಯ್ವದೆಂತೋ 2

ಕೊಟ್ಟ ಸಾಲವನ್ನೇ ಕೊಡರು ಮತ್ತೆ ಆಣೆ ಎಂಬರಯ್ಯ
ಹೆತ್ತ ಮಗನನು ದಾಟುವವರು ಕಡೆ ಹಾಯ್ವದೆಂತೋ 3

ತಂದೆ ತಾಯಿ ಹೊರಡಿಸುವರು ತಂದು ಒಳಗೊಳಗೇ ತಿನ್ನುವವರು
ಮಂದಿಗಳ ಬಯ್ಯುವವರು ಕಡೆ ಹಾಯ್ವದೆಂತೋ 4

ವಿಧ ವಿಧದ ದೇವರನ್ನು ಮುದದಿ ಕಟ್ಟಿಕೊಂಡಿಹರು
ಚಿದಾನಂದ ಬಗಳೆಯ ಅರಿಯದವರು ಕಡೆ ಹಾಯ್ವದೆಂತೋ 5

3
ಆಣೆಕಲ್ಲಾಡಿದಳೇ ಆನಂದದಲಿ ಬಗಳೆ

ಆಣೆಕಲ್ಲಾಡಿದಳೇ ಆನಂದದಲಿ ಬಗಳೆ
ಸೆಣಸುವ ವೈರಿಗಳ ಶಿರಗಳ ಪಿಡಿದು ಪ

ಮೊಂಡ ಮೂಕರ ತಲೆಯ ಮೂಳ ಮೂಸರ ತಲೆಯ
ಭಂಡತನದಿ ಬಗುಳುವ ಪಾಪಿಯ
ಚಂಡಾಲರ ತಲೆಯ ಚರಿಗೇಡಿಯ ತಲೆಯ
ಪುಂಡರ ತಲೆಯನಂದು ಎನ್ನ ಕಣ್ಣಮುಂದೆ ತಾನು 1

ಒಂದೊಂದು ಎರಡು ಎಂದು
ಮುಂದೆ ಮೂರು ನಾಲ್ಕು ಎಂದು
ಹಿಂದೆ ಆದುದು ತಪ್ಪಿತು ಥೂ ಥೂ ಎಂದು
ಇಂದಿದು ಸದ್ಗುರು ರಾಯನ ಗುಸ್ತೆಂದು
ಚೆಂದದಿ ಆಡಿದಳೆ ಎನ್ನ ಕಣ್ಣ ಮುಂದೆ ತಾನು 2

ನಾನು ಎಲ್ಲಿದ್ದರೆ ತಾನಲ್ಲಿದ್ದಾಡುತ
ಧ್ಯಾನವೆನ್ನಯ ಮೇಲೆ ಇಟ್ಟುಕೊಂಡು
ಮಾನನಿಧಿ ಚಿದಾನಂದ ರಾಣಿ ಬಗಳೆ
ಏನ ಹೇಳಲಿ ನಿದ್ರೆ ನೀರಡಿಕೆಯಿಲ್ಲದೆ ಎನ್ನ ಕಾಯುತ 3

4
ಅದಕೋ ಬ್ರಹ್ಮಾಸ್ತ್ರ ನೋಡು ನೋಡದಕೋ

ಅದಕೋ ಬ್ರಹ್ಮಾಸ್ತ್ರ ನೋಡು ನೋಡದಕೋ ಬ್ರಹ್ಮಾಸ್ತ್ರ
ಅದಕೋ ಬ್ರಹ್ಮಾಸ್ತ್ರ ಅದ್ಭುತವಾದಸ್ತ್ರ
ಬೆದರಿಪುದೆಲ್ಲರ ಬೇವುವು ಬ್ರಹ್ಮಾಂಡ ಪ

ಮಾರಿಗೆ ಮಾರಿಯು ಮೃತ್ಯುಗೆ ಮೃತ್ಯುವು
ಘೋರಕೆ ಘೋರವು ಕ್ರೂರಕೆ ಕ್ರೂರ 1

ತಗ ತಗ ಚಕಚಕ ಲಕಲಕ ನಳನಳ
ಝಗ ಝಗ ನಿಗಿ ನಿಗಿ ಕಳೆ ಕೋರೈಸುತಿದೆ 2

ಛಟಛಟ ಛಿಳಿಛಿಳಿ ಧಗಧಗ ಭುಗುಭುಗು
ಪಟಿ ಪಟಿಸುತ ಉರಿ ಹೊಗೆಯೊಂದಾಗುತಿದೆ 3

ಹಲವು ಬ್ರಹ್ಮಾಂಡವ ಸುಟ್ಟರು ಹಸಿವಡಗದು
ಹಲವು ಸಾಗರ ಕುಡಿದೆ ತೃಷೆಯಡಗದು 4

ಬಿರುಗಣ್ಣಿಂದಲಿ ಖಡ್ಗವ ಬೀರುತ
ಗುರುಚಿದಾನಂದ ತಾನಾಗಿಹ ಬಗಳೆ 5

5
ಅನ್ಯವನರಿಯೆನು ಮತ್ತೆಂದು ಅನ್ಯವ ಅರಿಯೆನು

ಅನ್ಯವನರಿಯೆನು ಮತ್ತೆಂದು ಅನ್ಯವ ಅರಿಯೆನು
ನಿನ್ನ ಕಾಂಬೆ ಕಂಡದನೆಲ್ಲ ನಿರ್ವಿಕಾರ ಬಗಳೆ ಕೇಳು

ತನ್ನ ಹೆಂಡತಿಯನೀಗ ತನ್ನ ಸುತನು ರಮಿಸುತಿರಲು
ಭಿನ್ನದಿಂದ ಕಂಡೆನಾದರೆ ಮೆಚ್ಚಬೇಡ
ಎನ್ನಲಿ ಇಚ್ಚೆ ಬೇಡ ಹೊನ್ನು
ರನ್ನವು ಮುಂದೆ ಇರಲು ಹರಿದುದಾದರೆ
ಎನ್ನ ಚಿತ್ತ ನಿನ್ನ ಮೇಲೆ ಎನಗೆ ಆಣೆ ಸತ್ಯ-
ವೆನ್ನು ಇದು ತಪ್ಪದೆನ್ನು 1

ಪಡೆದ ತಾಯಿ ತಾನು ಹೋಗಿ
ಕಂಡವನ ಕೂಡುತಿರಲು
ಮಿಡುಕು ಹುಟ್ಟಿತಾದರೆ ನಾನು ಸತ್ಯ ಬಿಟ್ಟೆ-
ನಾದರೆ ನೀನು ದೊರೆವುದೆಂತು ನಿನ್ನ ಕರುಣವೆಂತು 2

ತಂದೆ ಕೆಡಹಿ ಕೊರಳನೀಗ
ನಂದನನನು ಕೊರೆಯುತಿರಲು
ಎಂದೆನಾದರೆ ಮನದಿ ಇವನ ಜ್ಞಾನಿಯಲ್ಲವು
ನಾನು ಏನು ಅಲ್ಲವು
ಸುಂದರವ ಚಿದಾನಂದ ಬಗಳೆ ಎಂದು ಕಾಣದಿರಲು
ಎಂದು ಎಂದಿಗೆ ನಿನ್ನ ಚರಣ ಭಕ್ತನಲ್ಲವು
ನಾನು ಮುಕ್ತನಲ್ಲವು 3

6
ಇಷ್ಟ ಲಿಂಗವ ಪೂಜಿಸಲೆಂದು ಗುರುವು

ಇಷ್ಟ ಲಿಂಗವ ಪೂಜಿಸಲೆಂದು ಗುರುವು ಕೈಯಲಿ ಕೊಟ್ಟ
ಇಷ್ಟಲಿಂಗ ನೀನೆ ಎಂದು ಕಿವಿಯಲಿ ಹೇಳಿಬಿಟ್ಟ ಪ

ಉದಯದಲಿ ಲಿಂಗವನ್ನು ಬಯಲ ಕಡೆಗೆ ಒಯ್ಯುವೆ
ಅದರ ತರುವಾಯದಲಿ ಲಿಂಗಮುಖವನೀಗ ತೊಳೆವೆ
ಹದ ಮಾಡಿಯೆ ಬಿಸಿನೀರನು ಲಿಂಗಕ್ಕೆ ಎರೆವೆ
ವಿಧವಿಧದ ವಸ್ತ್ರಗಳನ್ನು ಲಿಂಗಕ್ಕೆ ಉಡಿಸುವೆ 1

ಬಸಿತವನು ಹಣೆಯ ತುಂಬ ಲಿಂಗಕ್ಕೆ ಧರಿಸುವೆ
ಕುಸುಮವೇನು ದೊರಕಿದರು ಲಿಂಗಕ್ಕೆ ಮುಡಿಸುವೆ

ಬಿಸಿಯಾರಿದ ಎಡೆಯ ನಾನಾ ಲಿಂಗಕ್ಕೆ ಉಣಿಸುವೆ
ಪಶುಪತಿಯೆ ಉದಕವೆಂದು ಲಿಂಗಕ್ಕೆ ಕುಡಿಸುವೆ 2

ಲಿಂಗ ಕೊಳ್ಳೆಂದು ತಾಂಬೂಲ ನೀಡುವೆ
ಭಂಗಭವನ ಸ್ತೋತ್ರ ಮಾಡಿ ಲಿಂಗವನ್ನು ಮಲಗಿಸುವೆ
ಲಿಂಗವನ್ನು ನಡೆಸ್ಯಾಡಿ ಲಿಂಗವನ್ನು ಮಲಗಿಸುವೆ
ಲಿಂಗ ಚಿದಾನಂದ ಬ್ರಹ್ಮಲಿಂಗವಾಗಿ ಇರುತಿಹೆ 3

7
ಉಗ್ರ ನರಸಿಂಹ ಜ್ವಾಲಾ ಉಗ್ರನರಸಿಂಹ

ಉಗ್ರ ನರಸಿಂಹ ಜ್ವಾಲಾ ಉಗ್ರನರಸಿಂಹ
ಶೀಘ್ರದಿ ಬಂದು ಪ್ರಹ್ಲಾದನ ಮೊರೆಯನು
ಕೇಳ್ವ ಅಸುರನ ಸೀಳ್ವಾ ಪ

ಫಳ ಫಳಯೆನುತಾರ್ಭಟಿಸುತ ಕುಂಭ
ದಲೊಡೆದು ಕೋಪವ ಝಡಿದು ಛಿಳಿ ಛಿಳಿ
ಛಿಳಿರನೆ ಕಣ್ಣಲಿ ಕೆಂಗಿಡಿಯುಗುಳೇ ದಿವಿಜರು ಪೊಗಳೇ
ಭಳಿ ಭಳಿ ಭಳಿರೆಂದಬ್ಬರಿಸುತ ದುಂದುಭಿ-
ಯೊದರೇ ಅಸುರರು ಬೆದರೇ
ಝಳಪಿಸಿ ಖಡುಗದಿ ರಕ್ಕಸ ಬಲವನು
ತರಿದಾ ಶಿಶುವನು ಪೊರೆದಾ 1

ಭುಗು ಭುಗಲೆನೆ ನಾಸಿಕದಿ ಉಸುರ್ಹೊಗೆ
ಹೊರಟು ಖಳನುದ್ದುರುಟು
ಜಿಗಿ ಜಿಗಿದವನನು ಕೆಡಹಿ ತೊಡೆಯೊಳಗಿಟ್ಟು
ರೋಷವ ತೊಟ್ಟು
ಬಗೆದುದರವ ರಕ್ತವನೊಕ್ಕುಡಿತೆಯಲಿ
ಸುರಿದು ತಾ ಚಪ್ಪರಿದು
ಸೊಗಸು ಉರಕೆ ಕರುಳ ಮಾಲೆಯ
ಹಾಕಿದ ದೇವ ಭಕ್ತರಕಾಯ್ವ 2

ಹಿರಣ್ಯಕಶಿಪನ ಹತ ಮಾಡಿದ ಭಕ್ತ ಪ್ರಹ್ಲಾದನಿಗೆ ಆಹ್ಲಾದದ
ವರವನು ಪಾಲಿಸಿ ಸುರರನು ಪೊರೆದು
ಕರುಣದಿ ಸುರಿದು ಧರಣಿಯೊಳಗೆ ಪೆ-
ಸರಾಗಿಹ ಅಹೋಬಲ ಸ್ಥಳದಿ ನೀನಾ ನೆಲದಿ
ಗುರು ಚಿದಾನಂದ ಅವಧೂತರೆನಿಪ ದಾತಾ ಸಜ್ಜನ ಪ್ರೀತಾ 3

8
ಎಂಥ ವಿಕ್ರಮಳೆ ನೀನು

ಎಂಥ ವಿಕ್ರಮಳೆ ನೀನು
ಎಂಥ ವಿಕ್ರಮಳೆ ನಿನಗಣೆ ಯಾರು ಶ್ರೀ ಲಕ್ಷ್ಮೀ-
ಕಾಂತ ರೂಪದಿ ಕೊಂದೆ ಮಧುಕೈಟಭರ ದೇವಿ ಪ

ಹರಿಕಿವಿಯಲಿ ಅವತರಿಸಿ ಮಧು ಕೈಟಭರ-
ವರೆನಿಸಿ ಪಡೆಯೆ ವಿಧಿಯಿಂ ವರವ
ಅರಿದು ವಿಷ್ಣುವಿನಿಂದ ಮರಣ ಇವರಿಗೆಂದು
ಸ್ಮರಣೆಯ ಮಾಡಿದ ದೇವಿ ಪಾದಪಂಕಜ
ಪರಮ ಮಂಗಳ ವಿಷ್ಣು ಎಬ್ಬಿಸು ಈ ಕ್ಷಣ
ಹರಣವನೆ ಕಾಯಲಿ ಮೂರ್ವರು ನಿಮ್ಮ
ಚರಣವ ನಂಬಿರಲಿ ಎತ್ತಿದಳಾಗ
ಅರಳಿದವು ಕಣ್ಣು ಉಸಿರಾಡಿತು ಮೂಗಿನಲಿ 1

ಎದ್ದವನಚ್ಯುತ ಬ್ರಹ್ಮ ಏಳನೇ ಶರಧಿಯೊ
ಳೆದ್ದ ಬಡಬನಂದದಲಿ ಮೃತ್ಯುವ
ಗೆದ್ದ ಮೃತ್ಯುವಿನಂತಾಗಲು ಸಿಡಿಲಿನ
ಮುದ್ದೆಯಂದದಿ ಕಣ್ಣ ಕಿಡಿಯುಕ್ಕೆ ಔಡಗಿ-
ದೆದ್ದು ಚಕ್ರಕೆ ಕೈಯನಿಕ್ಕುತ ಹೊಯ್ದನು
ಅದ್ದಲು ಆ ಮಧುವ ಕೈಟಭನನ್ನು
ಒದ್ದು ಹಾಕಿದ ಶಿರವ ಇಬ್ಬರ ಕೂಡೆ
ಬಿದ್ದರು ಮಹಾಹವ ಮೂರ್ವರ ಬಹು-
ಯುದ್ಧವ ಹೇಳುವುದೇನು ಆ ಬಹು ರೌದ್ರವ 2

ಆದುದು ಪಂಚ ಸಹಸ್ರ ವರುಷ ಯುದ್ಧ
ತೊಯ್ದರು ರಕ್ತದಿ ಕ್ರೋಧದುಬ್ಬಟ್ಟೆಯಿಂದ
ಕಾದು ಕರಗಿದುದುಕವು ವಿಷ್ಣು ಬೇಸರ್ತ-
ಮದ ಬೇಡಿರಿ ವರವನು ನೀಬೇಡೆನೆ ಕೊಟ್ಟ-
ರಾದರೆ ಚಕ್ರದಿ ತಲೆ ಹರಿಯಲೆಂದು
ಛೇದಿಸಿದನು ಶಿರವ ಮೇಧಸು ಕೊಬ್ಬು
ಮೇದಿನಿಯಾದಿರವ ಹೊಗಳಿದ ಬ್ರಹ್ಮ
ಮಾಧವನ ಸ್ತೋತ್ರದ ತಾನೆಯಾದ
ಚೋಧ ಚಿದಾನಂದ ಬಗಳಾ ಚಾರಿತ್ರವ 3

9
ಎನ್ನವಳಗೆ ಇದ್ದು ಪರದೇಶಿ ನಾ

ಎನ್ನವಳಗೆ ಇದ್ದು ಪರದೇಶಿ ನಾ
ನನ್ನ ನೀಗ ಹಳಿವರೇನೋ ಪರದೇಶಿ ಪ

ಎನ್ನಲಿಂದ ಮಲಗುತ್ತಿದ್ದೆ ಪರದೇಶಿ
ಎನ್ನಲಿಂದ ಉಣ್ಣುತಿದ್ದೆ ಪರದೇಶಿ ನೀ
ಎನ್ನಲಿಂದ ಉಡುವುತಿದ್ದೆ ಪರದೇಶಿ 1

ಎನ್ನಲಿಂದ ನಡೆವುತಿದ್ದೆ ಪರದೇಶಿ ನೀ
ಎನ್ನಲಿಂದ ನಡೆವುತಿದ್ದೆ ಪರದೇಶಿ
ಎನ್ನಲಿಂದ ಮಲಗುತ್ತಿದ್ದೆ ಪರದೇಶಿ ನೀ
ಎನ್ನಲಿಂದ ಕುಡಿವುತಿದ್ದೆ ಪರದೇಶಿ 2

ಉಪಕಾರವ ನೀನರಿಯಾ ಪರದೇಶಿ ನೀ
ನಪಕಾರವ ಮಾಡುತಿದ್ದೆ ಪರದೇಶಿ
ಗುಪಿತ ಗುರು ಚಿದಾನಂದ ಪರದೇಶಿ
ನಿಪುಣ ನಾನು ನೀನೇ ಕಂಡ್ಯಾ 3

10
ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದು

ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದು
ಸೊಲ್ಲು ಸೊಲ್ಲಿಗೆ ನೆನೆವ ಚಿಂತೆ ಎನಗೆ ಹತ್ತಿಹುದು ಪ

ಮಡದಿ ಸುತರು ಮನೆಯ ಪಶುವು ಬಗಳೆಗೆ ಹತ್ತಿಹುದು
ಷಡು ಚಕ್ರಂಗಳ ಭೇದಿಪುದೆಲ್ಲಾ ಎನಗೆ ಹತ್ತಿಹುದು
ಕೊಡು ಕೊಳ್ಳುವುದು ಹಾಕುವುದೆಲ್ಲಾ ಬಗಳೆಗೆ ಹತ್ತಿಹುದು
ಎಡೆದೆರಪಿಲ್ಲದೆ ನಾದವ ಕೇಳುವುದೆನಗೆ ಹತ್ತಿಹುದು 1

ನಿತ್ಯ ನಿತ್ಯದ ಪರಾಮರಿಕೆಯು ಬಗಳೆಗೆ ಹತ್ತಿಹುದು
ಮತ್ತೆ ಭ್ರೂಮಧ್ಯದ ಅರಿವೆಯ ಹುಚ್ಚು ಎನಗೆ ಹತ್ತಿಹುದು
ಬಿತ್ತಿ ಬೆಳೆಯುವುದು ಮಳೆಯಿಲ್ಲೆಂಬುದು ಬಗಳೆಗೆ ಹತ್ತಿಹುದು
ಎತ್ತೆತ್ತಲು ತಾ ಬೆಳಕ ನೋಡುವುದು ಎನಗೆ ಹತ್ತಿಹುದು 2

ಭಕುತರ ಬದುಕನು ಹಸನು ಮಾಡುವುದು ಬಗಳೆಗೆ ಹತ್ತಿಹುದು
ಭಕುತಿಯ ಶರಧಿಲಿ ಮುಳುಗಾಡುವುದು ಎನಗೆ ಹತ್ತಿಹುದು
ಸದಾ ಕಾಲವು ಕಾದಿರುತಿಹುದು ಬಗಳೆಗೆ ಹತ್ತಿಹುದು
ಚಿದಾನಂದ ಶ್ರೀ ಬಗಳೆಯ ಭಜಿಪುದು ಎನಗೆ ಹತ್ತಿಹುದು 3

11
ಏನ ಪಡೆದಿದ್ದೆನೋ ಸುಕೃತವ

ಏನ ಪಡೆದಿದ್ದೆನೋ ಸುಕೃತವ ಮುಂ-
ದೇನ ಪಡೆದಿದ್ದೆನೋ ಮಾನ ನಿಧಿಯು
ಚಿದಾನಂದ ಗುರುವ ಕಂಡು
ತಾನೆ ತಾನಾಗಿ ತನ್ನನು ಮರೆದಿರ್ದುದ ಪ

ಆನಂದ ಮೂರುತಿಯ ನಾನೀಗ ಅತಿ ವೇಗ ಧ್ಯಾನಿಸಲು
ಏನೇನು ತೋರದೆ ಯೋಚನೆಗಳು ಕುಂದಿ
ನಾನು ನೀನೆಂಬ ನೀತಿಯ ಮರೆದಿರ್ದುದಾ 1

ಶತಕೋಟಿ ಶಶಿಸೂರ್ಯರ ಪ್ರಭೆಯ ತಾಳ್ದು
ಶತ ಪತ್ರಗಳ ಗೇಹನ ಅತಿಹರುಷದಿ ಕಂಡು ಆತನೇ ತಾನಾಗಿ
ಮತಿಯನೆ ತೊರೆದೆ ಮರೆತು ನಾ ನಿರ್ದುದ 2

ನಿರುಪಮ ನಿರ್ಗುಣನ ನಿರ್ವಿಕಲ್ಪ ನಿರವಯ ನಿರೀಹನ
ವರಚಿದಾನಂದ ಗುರುವ ವರದಾತನ
ಚರಣ ನೆನೆದು ಮನ ಚಲಿಸದಂತಿರ್ದುದ 3

12
ಒಳಗೆ ಹೊರಗೆ ಓಡಾಡುವ ಉತ್ತಮಳಾರು

ಒಳಗೆ ಹೊರಗೆ ಓಡಾಡುವ ಉತ್ತಮಳಾರು ಹೇಳೆ
ಬಳಿಕ ಹೇಳುವೆ ಬಹಳ ಭಾಗ್ಯ ಬಗಳಾಂಬ ಕೇಳೇ ಪ

ಸರಿ ವಾಲೆ ಕಪ್ಪನ್ನಿಟ್ಟು ವಜ್ರಗಳ ಸರವನೆ ಹಾಕಿ
ಪರಮಾನಂದಪಡಿಸುತಿಹ ಪಂಡಿತಳಾರು ಹೇಳೆ
ದುರುಳ ಮಹಿಷಾಸುರನ ಕೊಂದು ಮರಳಿ ಚಿದಾನಂದನಲ್ಲಿ
ಸ್ಥಿರವ ಮಾಡಿಯಿಹಳು ಬಹಳ ಶಿಷ್ಯಳು ಕೇಳೇ 1

ಪಿಲ್ಲಿ ಮಂಟಿಕೆ ಗೆಜ್ಜೆಯನಿಟ್ಟು
ಘುಲ್ಲು ಘುಲ್ಲು ಹೆಜ್ಜೆಯನಿಕ್ಕುತ
ಪಲ್ಯ ಕಾಯ ಬಡಿಸುತಿಹಳಾರು ಹೇಳೆ
ಮಲ್ಲ ನಿಶುಂಭರ ಕೊಂದು ಮಹಾತ್ಮ ಚಿದಾನಂದ
ನಲ್ಲಿ ಮೆಲ್ಲಗೆ ವಾಸವ ಮಾಡಿಹ ಬಗಳ ಮಹಿಮಳು ಕೇಳೇ 2

ದುಂಡು ಮುತ್ತ ಕಟ್ಟಿ ಹೇಮಗುಂಡು ಸರವೊಲೆವುತ
ಮಂಡಿಗೆಯ ಹಿಡಿದು ಬಡಿಸುತಿಹ ಉದ್ದಂಡಳಾರು ಹೇಳೆ
ಚಂಡ ಮುಂಡರ ಶಿರವ ಖಂಡಿಸಿ ಚಿದಾನಂದನಲಿ ಅ-
ಖಂಡ ವಾಗಿಹಳು ಬಗಳ ಪುಂಡಳು ಕೇಳೇ 3

ಹೊನ್ನ ಕಡಗ ಸೀರೆಯುಟ್ಟು ಚೆನ್ನ ರತ್ನದ ಕುಪ್ಪಸ ತೊಟ್ಟು
ಅನ್ನವ ಹಿಡಿದು ಬಡಿಸುತಿಹ ಮಾನ್ಯಳು ಯಾರು ಹೇಳೇ

ಕುನ್ನಿ ದುರ್ಜನರ ಭೇದಿಸಿ ಚಿದಾನಂದ ಗುರುವ
ಬೆನ್ನು ಕಾದು ಬಿಡದೆ ಇಹಳು ಬಗಳಾಂಬ ಕೇಳೇ 4

ನಿತ್ಯಾತ್ಮ ಚಿದಾನಂದನಲ್ಲಿ ನಿಲುಗಡೆಯಿಲ್ಲದೆ ಓಡಾಡುತ
ಸುತ್ತಮುತ್ತ ಸುಳಿದಾಡುವ ಸೂಕ್ಷ್ಮಳಾರು ಹೇಳೇ
ಕರ್ತೃವಾಗಿ ತತ್ವವ ಕೇಳುತ ಚಿದಾನಂದನಲಿ ವಾಸವ
ಮಾಡುವ ಮಹಾಮಾಯಿ ಬಗಳೆ ಪಾರುಪತ್ಯಳು ಕೇಳೇ 5

13
ಕಂಡಿರೆ ಬಗಳಾಶ್ಚರ್ಯವ ಕಂಡಿರೇ

ಕಂಡಿರೆ ಬಗಳಾಶ್ಚರ್ಯವ ಕಂಡಿರೇ ಬಗಳಾಶ್ಚರ್ಯವ
ದಿಂಡೆಯರಾದವರನ್ನೆಲ್ಲ ತುಂಡು ಮಾಡಿ
ಶುಂಭ ನಿಶುಂಭರಸುವ ಕೊಂಡವಳ ಪ

ಕ್ರೂರ ಧೂಮ್ರಾಕ್ಷ ಶುಂಭರಾಜನ ನೇಮದಿಂದ
ಸಾರಿ ದೇವಿಯನ್ನು ಮುಂದಲೆ ಹಿಡಿದು ಎಳೆವೆನೆನಲು
ವೀರಳೀಗ ಕೇಳಿ ಅವಡುಗಚ್ಚಿ ಕಣ್ಣು ತೆರೆಯೆ
ಹಾರಿದನು ಧೂಮ್ರಾಕ್ಷನುರಿದು ಭಸ್ಮವಾದನು 1

ಚಂಡ ಮುಂಡಗಪ್ಪಣೆಯನುದ್ದಂಡ ಶುಂಭನೀಗ ಕೊಡಲು
ಖಂಡೆಯವನೆ ಹಿರಿದು ಮುಂಕೊಂಡು ದೇವಿ ಬಲಕೆ ನಿಂದು
ಗುಂಡೆಯರ ಕೂದಲು ಹಿಡಿದು ತುಂಡು ಮಾಡಿಯೆ ತಿಂದು
ಚಂಡ ಮುಂಡರ ತಲೆಯ ಖಂಡಿಸಿದ ವೀರಳ 2

ರಕ್ತ ಬೀಜನ ರಕ್ತದಿಂದ ರಕ್ತಬೀಜರಾಗೆ
ರಕ್ತನಯನಿ ಹಾಸಿದಳು ನಾಲಿಗೆಯ ಭೂಮಿಗೆ
ರಕ್ತ ಬೀಜರನ್ನು ಕಡಿದು ನುಣ್ಣಗೆ ನುಂಗಿ ಆದಿ-
ರಕ್ತ ಬೀಜನನ್ನು ಶೂಲದಿಂದ ತಿವಿದು ತಿಂದಳು 3

ಅಂಬನ ಮೇಲೆ ನಿಶುಂಭನೆರಡು ಹಸ್ತ ಹೋಗಿ
ಎಂಬೆನೇನು ಒದಯಲಾಗ ಅಂಬುಜಾಕ್ಷಿ ತೊಡೆಯ ಕಡಿಯೆ

ತುಂಬಿ ಕೋಪದಿಂದಲವನು ತಿಂಬೆನೆಂದು ಮುಂದೆ ಬರಲು
ಅಂಬಿನಿಂದ ತಲೆಯ ಕಳೆದಳಂಬರದಲುಘೇ ಎನಲು 4

ತಕ್ಕೆಯಲ್ಲಿ ಬಿದ್ದು ದೆಕ್ಕಬುಕ್ಕಿಯಾಡೆ ಶುಂಭನನ್ನು
ನಕ್ಕು ಶಿವನ ಶೂಲದಿಂದಲಿಕ್ಕಿದಳು ಖಳನ ಎದೆಯ
ಉಕ್ಕಿ ಹರುಷ ದೇವತೆಗಳು ಓಲಗವನೆ ಮಾಡಿದರು
ದುಃಖಾತೀತ ಚಿದಾನಂದ ತಾನಾದ ಬಗಳೆಗೇ 5

14
ಕವಚ ಕವಚದೊಳು ಬ್ರಹ್ಮಾಸ್ತ್ರ ವಜ್ರ ಕವಚ

ಕವಚ ಕವಚದೊಳು ಬ್ರಹ್ಮಾಸ್ತ್ರ ವಜ್ರ ಕವಚ
ಕವಚ ಏಳು ಕೋಟಿಯೊಳು ರಾಜ ಕವಚ ಪ

ಬಗಳಾ ಸ್ಮರಣೆಯಲಿ ಇರುಳು ಹಗಲು ಇಹುದೇ ವಜ್ರಕವಚ
ಬಗಳಾ ಸ್ತೋತ್ರವ ಮಾಡುತಿಹುದೇ ವಜ್ರ ಕವಚ
ಬಗಳಾ ಮೂರ್ತಿಯ ಧ್ಯಾನದೊಳಿರುವುದೇ ವಜ್ರ ಕವಚ
ಬಗಳೆಯ ಅರ್ಚನೆಯೊಳಿಹುದೇ ವಜ್ರ ಕವಚ 1

ಬಗಳಾದೇಹವ ತನ್ನದು ಮಾಡುವುದೇ ವಜ್ರ ಕವಚ
ಬಗಳಳಾಗಿ ತಾನಿರುವುದೇ ವಜ್ರಕವಚ
ಬಗಳಾ ಒಳಹೊರಗೆ ಒಂದಾಗಿಹುದೇ ವಜ್ರ ಕವಚ
ಬಗಳೆ ನಿಜವಾಗಿ ಒಲಿದಿಹುದೇ ವಜ್ರಕವಚ 2

ನಾರಾಯಣ ಕವಚ ಶಿವಕವಚ ಶಕ್ತಿಕವಚ
ಸೂರ್ಯ ಕವಚ ಎಲ್ಲ ದೇವ ಕವಚ
ಕಾರಣಾತ್ಮಕ ಚಿದಾನಂದ ಬಗಳ ಕವಚ
ಆರ ಯತ್ನವು ನಡೆಯದಿಹುದದು ವಜ್ರಕವಚ 3

15
ಗೆಳೆತನ ಹಿಡಿದನೆ ಬಗಳೆಯ ಕೂಡೆ

ಗೆಳೆತನ ಹಿಡಿದನೆ ಬಗಳೆಯ ಕೂಡೆ
ಗೆಳೆತನ ಅರಿಗೂ ದೊರಕದ
ತನಯ ಸತಿಯು ಧನವೆಂಬುದ ಸೇರದ
ಜನನ ಮರಣಕೆ ಹೊರತಾದ

ಎನ್ನ ಕಾಲು ಬಗಳೆ ಹಸ್ತವಾಗಿ
ಎನ್ನ ಹಸ್ತ ಬಗಳೆ ಹಸ್ತವಾಗಿ
ಎನ್ನ ಬುಜ ಬಗಳೆ ಬುಜವಾಗಿ
ಎನ್ನ ಕಣ್ಣೇ ಬಗಳೆ ಕಣ್ಣಾಗಿ 1

ಎನ್ನ ದೇಹವು ಬಗಳೆ ದೇಹವಾಗಿ
ಎನ್ನ ಇಂದ್ರಿಯ ಬಗಳೆ ಇಂದ್ರಿಯವಾಗಿ
ಎನ್ನ ಮನವು ಬಗಳೆ ಮನವಾಗಿ
ಎನ್ನ ಜೀವ ಬಗಳೆ ಜೀವವಾಗಿ 2

ನಾನೇ ಬಗಳೆಯಾಗಿ ಬಗಳೆಯೇ ನಾನಾಗಿ
ನಾನು ನೀನು ಎಂಬೆರಡುಳಿದು
ಜ್ಞಾನ ಚಿದಾನಂದ ಬ್ರಹ್ಮಾಸ್ತ್ರ ತಾನಾಗಿ
ತಾನೇ ತಾನಾದ ಗೆಳೆತನವ 3

16
ಚಂಡಳಹುದೋ ನೀನು ಕದನ ಪ್ರಚಂಡಳಹುದೋ

ಚಂಡಳಹುದೋ ನೀನು ಕದನ ಪ್ರಚಂಡಳಹುದೋ ನೀನು
ದಿಂಡೆಯರನ್ನು ಖಂಡಿಸಿ ತುಂಡಿಪ
ಚಂಡ ವಿಕ್ರಮ ಮಾರ್ತಾಂಡ ಮಂಡಿತ ದೇವಿ ಪ

ಭುಗು ಭುಗು ಭುಗಿಲೆಂದು ಮಧು ಕೈಟಭೆಂಬುವರು
ನೆಗೆ ನೆಗೆ ನೆಗೆಯುತ ರಣಕೆ ಬರಲು ಪೋಗಿ

ಜಿಗಿ ಜಿಗಿ ಜಿಗಿದವರ ನೀನು ಯುದ್ಧವ ಮಾಡಿ
ನೆಗೆದುರೆ ಖಡ್ಗವನು ಇಡಲು ಶಿರವು
ಧಗಿಸುವ ಚಕ್ರವನು ಇಡಲು ಶಿರವು
ಜಿಗಿಯೆ ಚರ್ಮವ ಸೀಳಿ ಮಾಡಿದೆ ಭೂಮಿಯ ನೀನು 1

ಛಟ ಛಟಾಕೃತಿಯಿಂದ ಮಹಿಷಾಸುರನ ಬಲ
ನಟ ನಟ ನಟಿಸುತ ಪಟು ಭಟರಿದಿರಾಂತು
ಘಟಿಸಿ ರಣಕೆ ಬರಲು ಫಲ್ಗಳ ಕಟ
ಕಟನೆ ಕಡಿದು ನಿಲ್ಲಲು ಅಸುರ ಬಲ
ಸೆಟೆದು ಹಿಂದಾಗುತಲಿರಲು ಸುರ
ಕಟಕ ನಿಮ್ಮನ್ನು ಹೊಗಳಿ ಕೊಂಡಾಡಲು 2

ಘುಡು ಘುಡು ಘುಡಿಸತತ್ತ ಮಹಿಷಾಸುರನು ಬರೆ
ದಢ ದಢನೆ ಪೋಗಿ ಹೊಡೆದು ನಿನ್ನಯ ಪಾದ
ದಡಿಯೊಳವನ ಕೆಡಹಿ ಚದುರ ಬೀಳೆ-
ಕಡಿದು ಕಂಡವ ಕೊಡಹಿ ನಿಲ್ಲಲು ಸುರ
ರೊಡೆಯ ನೆಲ್ಲರ ನೆರಹಿನಿಲ್ಲಲು ಸುರ
ಬಿಡದೆ ಅಭಯವಿತ್ತು ಹರುಷದಿ ವಾರಾಹಿ 3

ಶುಂಭ ನಿಶುಂಭರೆಂಬ ರಾಕ್ಷಸರುಪಟಳ
ಅಂಬುಜಾಂಡಕೆ ರಂಭಾಟವದು ಹೆಜ್ಜೆ
ಜಂಭಾರಿ ದಿವಿಜರೆಲ್ಲ ನಿಲ್ಲದೆ ದೂರ
ಬೆಂಬಿಡದ್ಹೇಳಲೆಲ್ಲ ಕೇಳಿಯೆ ಉ-
ಗ್ರಾಂಬಕಳಾಗಿ ನಿಲ್ಲೆ ಅಸುರ ಕಾದಂಬ ನಿನ್ನನು
ಕಂಡು ಬೆದರಿ ವೋಡಿದರೆಲ್ಲ 4

ಆರು ನೀನೆಂದು ಶುಂಭನ ದೂತ ವಿ
ಜಾರಿಸೆ ಕೇಳಿಯೆ ಎಮ್ಮರಸನಿಗೆ
ನಾರಿ ನೀ ಸತಿಯಳಾಗು ಜಾಗತ್ಯಕ್ಕೆ
ವೀರ ಶಂಭುನ ಸೊಬಗು ಬಣ್ಣಿಸುವೊಡೆ
ಮೂರು ಲೋಕಕೆ ಹೊರಗು ಬಾ ಎನೆ ನೀನು
ಚೋರಗುತ್ತರವಿತ್ತೆ ಹೇಳ್ವೆನೇನದ ಬೆರಗು 5

ಕೇಳು ಶುಂಭನ ದೂತ ಖೇಳ ಮೇಳದಿ ನಾನು
ಕೀಳು ಸಪ್ತದಿಯಾಡ್ದೆ ಈರೇಳು ಲೋಕದಲಿ
ತೋಳು ಸತ್ವವು ಬಲಿದು ಸಮರದಲಿ
ಸೋಲಿಸೆನ್ನನು ಪಿಡಿದು ಒಯ್ಯಲು ಅವ
ರಾಳು ಆಗಿಯೆ ನಡೆದು ಬಹೆನು ಪೋಗಿ
ಖೂಳರ ಕರೆದು ತಾ ರಣಕೆಂದು ನುಡಿದು 6

ಅಂಬ ವಚನವ ಶುಂಭ ಕೇಳಿ ಸುಗ್ರೀವ
ನೆಂಬ ನಿಶಾಚರ ಶುಂಭನಲ್ಲಿಗೆ ಪೋಗಿ
ಶಾಂಭವಿಯಾಡಿದುದ ಶಬ್ದವ ಕೇಳ-
ಲಂಬುದಿಯ ನೀಂಟುವುದ ವಡಬಾನಳ-
ನೆಂಬವೋಲ್ ಕೋಪವ ತಾಳ್ದು ಬರಲು ಸರ್ವ
ಸಂಭ್ರಮದಲಿ ನೋಡಿ ಎದ್ದು ನೀ ನಿಂದುದನು 7

ಸರಸರನೆ ಶುಂಭಾಸುರನ ಬಲ ಬರೆ ಕಂಡು
ಗರಗರನೆ ಹಲ್ಲ ಕೊರೆದು ಅವನ ದಂಡ
ಸರಕುಗೊಳ್ಳದೆ ಛೇದಿಸಿ ಸುಭಟ
ವೀರರಿರವನೆಲ್ಲಾ ಶೋಧಿಸಿ ಶುಂಭ ನಿಶುಂ
ಭರ ಶೋಣಿತ ಕಾರಿಸಿ ಸುರರಿಗಿತ್ತೆ
ಸ್ಥಿರವಪ್ಪ ಸೌಭಾಗ್ಯದವರ ನೀ ಪಾಲಿಸಿದೆ 8

ದುಷ್ಟ ಜನರೆಲ್ಲ ಸುಟ್ಟು ಭಸ್ಮಮಾಡಿ
ಶಿಷ್ಟ ಜನರ ಪ್ರಾಣಗುಟ್ಟು ನೀನೆಂತೆಂಬರ
ನಟ್ಟಿ ದಟ್ಟಿಸಿದೆ ಪರಾಂಬ ಭಕ್ತರ ಅ-
ಭೀಷ್ಟ ಪಾಲಿಪ ಜಗದಾಂಬ ದುರ್ಜನರಘ-
ರಟ್ಟಳಹುದೇ ತ್ರಿಪುರಾಂಬ ರಕ್ಷಿಸು ಎನ್ನ
ಶಿಷ್ಟ ಚಿದಾನಂದ ಅವಧೂತ ಬಗಳಾಂಬ 9

17
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾ

ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾ
ದಿಂಡೆಯರಾದವರ ಖಂಡಿಸುತಿರುವ ಕತ್ತಿಯ
ತಿರುಹುತಿರುವ ಗದೆಯ ಪ

ನಿಷ್ಟರಾಗಿಹ ಭಕ್ತರ ದೂರನು ಕೇಳಿ ಕೋಪವತಾಳಿ
ಕಟ್ಟುಗಳಿಲ್ಲದ ರೌದ್ರವು ತೋರಲು
ಮೋರೆ ಕಂಗಳು ಕೆಂಪೇರಲು
ಉಟ್ಟಿಹ ಪೀತಾಂಬರವನೆ ಕಾಶಿಯ
ಹೊಯ್ದು ದಿಟ್ಟ ನಿಟ್ಟುಸಿರಸುಯ್ದು
ಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ 1

ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದು
ಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆ
ಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆ
ಪಂಕಜಮುಖಿ ತಾ ಕೂಗುತ ಅವುಡುಗಚ್ಚೆ
ಭೂಮಿ ಬಾಯಿ ಬಿಚ್ಚೆ 2

ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿ
ತೊಡರಿಕೊಂಡಳು ವೈರಿ ಸೇನೆಯ ನಿಲಿಸಿ ತಾ ಘುಡು ಘುಡಿಸಿ
ತುಡುಕಿ ಪಿಡಿದಳು ದುಷ್ಟರ ಜಿಹ್ವೆಯ
ನೂಕಿ ತಾ ಮುಂದಕೆ ಜೀಕಿ
ಖಡುಗದಿ ಸೀಳುತ ರೌದ್ರದಿ ನಿಂತಳು ವೀರೆ
ಕಂಗಳು ಕಿಡಿಯನೆ ಕಾರೆ 3

ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆ
ರಿಪುತಲೆಗಳು ಉರುಳೆ
ತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆ
ಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟು
ಕಾಯ್ದಳು ತನ್ನನು ನಂಬಿದವರ ಭಯ ಹರಿಯೆ
ಬಹು ಸುಖ ಸುರಿಯೆ 4

ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿ
ಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿ
ಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿ
ಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯ
ಆ ಬಗಳಾಮುಖಿಯ 5

18
ಚಂದವೇ ಚಕ್ರವಾಹಿನಿ ಚಿದ್ರೂಪಿಣಿ

ಚಂದವೇ ಚಕ್ರವಾಹಿನಿ ಚಿದ್ರೂಪಿಣಿ
ಸಾಂದ್ರ ಸರ್ವತ್ರ ಸಾಕ್ಷಿಣಿ
ಮಂದಹಾಸ ಮುಖಾಂಬುಜ ಕೋಮಲ
ಸುಂದರಗಾತ್ರೇ ಸುಮನಸ ಸ್ತೋತ್ರೆ ಪ

ವಿಶ್ವಾತ್ಮ ವಿಶ್ವರೂಪಿಣಿ ವಿಶ್ವಂಭರಿ
ವಿಶ್ವ ಪ್ರಕಾಶ ಮಣಿ
ವಿಶ್ವಕರ್ತೃ ವಿಶ್ವೇಶ್ವರ ವಿನುತೇ
ವಿಶ್ವಾತೀತೇ ವಿಶ್ವ ಭಗಿನೇ 1

ನಾದ ಬಿಂದು ಕಳಾತೀತೆ ನಾರಾಯಣಿ |
ವೇದ ವೇದಾಂತ ವೇದ್ಯೆ
ಭೇದಾತೀತೆ ಯೋಗೀಶ್ವರ ಭರಣಿ
ಸಾಧು ಜನರ ಭವ ಸರ್ವ ಸಂಹಾರಿಣಿ 2

ಭೀಮ ತೀರದಿ ನೆಲೆಸಿಹ ಸನ್ನುತಿ ಮಧ್ಯ
ಪ್ರೇಮದಿ ನಿಂತಿಹ
ಕಾಮಿತವೀವ ಕರುಣಾಮಯಿ
ಸ್ವಾಮಿ ಚಿದಾನಂದ ಬಗಳ ಸ್ವರೂಪಿಣಿ 3

19
ಜಗಲಿಯ ಹಾಕಿದಳೆ ಬಗಳೆ ಜಗಲಿಯ ಹಾಕಿದಳೆ

ಜಗಲಿಯ ಹಾಕಿದಳೆ ಬಗಳೆ ಜಗಲಿಯ ಹಾಕಿದಳೆ
ಸೊಗಸೇನ ಹೇಳಲಿ ಶತ್ರುಗಳನೆ ತಂದು
ಝಗಿ ಝಗಿಸುತ ಎನ್ನಯ ಎದುರಿಗೆ ಕುಳಿತು ಕೊಳ್ಳಲು ಪ

ತಲೆಗಳು ಥರದ ಕಲ್ಲು ಒಳ್ಳೊಳ್ಳೆಯ ಎಲುವುಗಳು ಹಾಸುಗಲ್ಲು
ಬಲಿದ ಮಾಂಸದ ಕೆಸರನೆ ಹಾಕಿ ಮೆತ್ತಿ
ಎಳೆದು ಹೆಣಗಳನು ತಂದು ಭರ್ತಿಯ ತುಂಬುತ 1

ಮೆದುಳನೆ ಮಲ್ಲವ ಮಾಡಿ ಮೇಲೆಯೆ
ಪದರಂಗಾರವ ಮಾಡಿ ವಿಧವಿಧ ಚಿತ್ರವ ರಕ್ತದಿ ಬರೆದು
ತಿದಿಯ ಸುಲಿದು ಚರ್ಮವ ಹಾಸಿಗೆ ಹಾಕುತ 2

ಕತ್ತಿಯ ಹೆಗಲಲಿಟ್ಟು ಎನ್ನಯ ಸುತ್ತ
ಮುತ್ತ ತಿರುಗಾಡುತ ಸತ್ಯ ಚಿದಾನಂದನ ರಾಣಿ ಬಗಳಾಮುಖಿ
ಮತ್ತೆ ದುಷ್ಟರ ಕೊಂದು ವಿಶ್ರಾಂತಿ ಪಡೆಯಲು 3

20
ಜಯತು ಜಯತು ಜಯತು ಶ್ರೀ ಜಗಪ್ರೀತೆ

ಜಯತು ಜಯತು ಜಯತು ಶ್ರೀ ಜಗ ಪ್ರೀತೆ
ಜಯತು ಹರಿಹರ ಮಾತೆ
ಜಯತು ಸುರಮುನಿ ಪೂತೆ ಭುವನ ವಿಖ್ಯಾತೆ ಪ

ಜಡಿ ಜಡಿ ಜಡಿದು ಕೋಪದಲಿ ಮಧು ಕೈಟಭರಿಬ್ಬರನು
ಘುಡು ಘುಡು ಘುಡಿಸು ಸಹಸ್ರ ಪಂಚಬುದ ಕಾದಿ
ತಡೆ ತಡೆ ತಡೆಯೆ ಸುದರ್ಶನಾಸ್ತ್ರದಿಂದವರ ಶಿರವ
ಕಡಿ ಕಡಿ ಕಡಿದೆ ಬಗಳಾಂಬ ಭಳಿರೆ ಜಗದಾಂಬ 1

ಒದ ಒದ ಒದರಿ ಭೋ ಎಂದು ಮಹಿಷಾಸುರನ ಬಲವ
ಗದೆ ಗದೆಗದೆಯಿಂದವರ ಬೀಳಗೆಡಹಿ
ಬೆದ ಬೆದ ಬೆದಕಿ ಸುಭಟಾಗ್ರಣಿಗಳೆಂಬುವರನ್ನೆಲ್ಲ
ಸದೆ ಸದೆ ಸದೆದು ನೀಬಿಟ್ಟೆ ಅಖಿಲರಣ ದಿಟ್ಟೆ 2

ಭರ ಭರ ಭರದಿ ಬರಲು ಮಹಿಷಾಸುರನೆಂಬುವನ
ತರಿ ತರಿ ತರಿದು ಅವನ ಸಾಹಸವ ಮುರಿದು
ಗರಗರಗರನೆ ಪಲ್ಗಳನೆ ಕೊರೆದು ಪದದಿಂದಲೊದ್ದೆ
ಸರಿ ಸರಿ ಸರಿಯೆ ಶಾರದಾಂಬ ಭಳಿಕೆ ತ್ರಿಪುರಾಂಬ 3

ಖಣಿ ಖಣಿ ಖಣಿಲು ಖಣಿಲೆಂದು ಶುಂಭ ನಿಶುಂಭರನು
ದಣಿ ದಣಿ ದಣಿಸಿ ಕಾಳಗದಿ ಬೇಸರಿಸಿ ಬಳಿಕ

ಕಣೆ ಕಣೆ ಕಣೆಯಿಂದಲವರ ತಲೆಗಳನೆ ತರಿಸಿದೆ ನಿನಗೆ
ಎಣೆ ಎಣೆ ಎಣೆಯಾರು ದಿನಮಣಿಯೆ ಕಣಿಯೆ 4

ಇಂತು ರಕ್ಕಸರನೆಲ್ಲ ಮರ್ದನವ ಮಾಡಿ
ಸಂತಸದಿ ದಿವಿಜರಿಗೆ ಅಭಯವಿತ್ತೆ
ಚಿಂತಾಯಕ ಚಿದಾನಂದಾವಧೂತನಿಗೆ
ಪಂಥದಾಸತಿ ಎನಿಪ ಪ್ರೀತೆ ವಿಖ್ಯಾತೆ ಜಯತು ಜಯತು 5

21
ದೂತ ಸಂವಾದ ದೇವಿಯೊಡನಾದುದು

ದೂತ ಸಂವಾದ ದೇವಿಯೊಡನಾದುದು ಪ್ರೀತಿಯಲಿ ಕೇಳಿರೆಲ್ಲ
ದಾತೆ ಶುಂಭನ ಯುದ್ಧಕೆತಾಯೆಂದಟ್ಟಿ ಮಾತ ಮುಗಿಸಿದಳಲ್ಲ ಪ

ತೆರೆಕಣ್ಣ ಮುಚ್ಚಿದ್ದಿ ಯಾಕೆ ಕಾಡೊಳಗಿರುವೆ ಕೇಳೆಲೆ ಮಹಾದೇವಿ
ಪುರುಷರು ನಿನಗಾರು ಓರ್ವಳೆ ಮಾತಾಡು ಕೇಳೆಲೆ ಮಹಾದೇವಿ
ಕರೆಯಲು ಬಂದೆ ಹಿಮಾಚಲಕೆ ನಿನ್ನ ಕೇಳೆಲೆ ಮಹಾದೇವಿ
ಅರಸ ಶುಂಭನ ದೂತ ಸುಗ್ರೀವ ನಾನೀಗ ಕೇಳೆಲೆ ಮಹಾದೇವಿ 1

ಕಣ್ಣ ತೆರೆದು ನುಡಿದಳು ದೇವಿ ಖಳನಿಗೆ ಕೇಳೆಲೋ ಸುಗ್ರೀವ
ನನ್ನ ಗೊಡವೆ ಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ
ನಿನ್ನಧಿಕಾರವದೇನು ಶುಂಭನಾರು ನೀನಾರು ಕೇಳೆಲೋ ಸುಗ್ರೀವ
ನನ್ನ ಗೊಡವೆ ಏನು ನುಡಿಯಿಂದ ಕೆಲಸವೇನು ಕೇಳೆಲೋ ಸುಗ್ರೀವ 2

ನಂಬೆನ್ನ ಮಾತನು ಕಪಟವೇನಿಲ್ಲ ಕೇಳೆಲೆ ಮಹಾದೇವಿ
ಶುಂಭನ ಭಾಗ್ಯ ಹೇಳಲಿಕಳವಲ್ಲ ಕೇಳೆಲೆ ಮಹಾದೇವಿ
ತುಂಬಿವೆ ಮನೆಯೊಳು ದಿವ್ಯ ರತ್ನವು ಕೇಳೆಲೆ ಮಹಾದೇವಿ
ಶುಂಭಗೆ ನೀನು ಕಡೆರತ್ನ ದೊರಕಲು ಕೇಳೆಲೆ ಮಹಾದೇವಿ 3

ಕರುಣದಿ ಕಪಟವಿಲ್ಲದಲೆ ನೀನು ಕೇಳ್ವೊಡೆ ಕೇಳೆಲೋ ಸುಗ್ರೀವ
ಇರಬಾರದು ಸುಮ್ಮಗಿದ್ದುದನಾಡಿವೆವು ಕೇಳೆಲೋ ಸುಗ್ರೀವ
ಪುರುಷರು ಇಂದಿನವರೆಗಿಲ್ಲ ನಾ ಸ್ವತಂತ್ರ ಕೇಳೆಲೋ ಸುಗ್ರೀವ
ಪುರುಷರಿಗೋಸ್ಕರ ನಾನು ತಪವನು ಮಾಡುವೆ ಕೇಳೆಲೋ ಸುಗ್ರೀವ 4

ಶುಂಭನು ಶೀಘ್ರದಿ ಕರೆತಾರೆಂದನು ನಿನ್ನ ಕೇಳೆಲೆ ಮಹಾದೇವಿ
ಶುಂಭನ ಭಾಗ್ಯ ದೊರಕಿದಡೆ ನೀ ಕೃತಾರ್ಥೆ ಕೇಳೆಲೆ ಮಹಾದೇವಿ
ಶುಂಭಗೆ ನಿನಗೆ ಸಕ್ಕರೆ ಹಾಲು ಬೆರೆತಂತೆ ಕೇಳೆಲೆ ಮಹಾದೇವಿ
ಶುಂಭಗೆ ಚಾಕರ ನಿನಗೆ ಚಾಕರ ನಾನು ಕೇಳೆಲೆ ಮಹಾದೇವಿ 5

ಮಾಡಬಾರದ ಪ್ರತಿಜ್ಞೆಯ ಮಾಡಿಹೆನು ಕೇಳೆಲೋ ಸುಗ್ರೀವ
ಆಡಲಿ ಏನ ಅದೃಷ್ಟಹೀನೆಯು ಕಂಡ್ಯಾ ಕೇಳೆಲೋ ಸುಗ್ರೀವ
ಖಾಡಾ ಖಾಡಿಯಲಿ ಜಯಿಸಿದವನೆ ಭರ್ತನೆಂದೆರೆ ಕೇಳೆಲೋ ಸುಗ್ರೀವ
ಕೂಡಿ ಬರುವೆ ಮಾಡಿದ ಭಾಷೆಯ ಹುಸಿಯದೆ ಕೇಳೆಲೋ ಸುಗ್ರೀವ 6

ಕರೆಯಲು ಬಿಗಿಯಲು ಬೇಡವೆ ನೀನೀಗ ಕೇಳೆಲೆ ಮಹಾದೇವಿ
ಥರಥರ ಸಾಲು ಸಾಲಿನ ಛತ್ರಿ ನಿನ್ನವು ಕೇಳೆಲೆ ಮಹಾದೇವಿ
ಇರುವನು ನೀ ಹೇಳಿದಂತ ಶುಂಭನು ಕೇಳೆಲೆ ಮಹಾದೇವಿ
ದೊರೆವುದು ನಿನಗೆ ತ್ರೈಭುವನದರಸುತನ ಕೇಳೆಲೆ ಮಹಾದೇವಿ 7

ಕಂಡುದಿಲ್ಲವೋ ಈವರೆಗೆನ್ನ ಜಯಿಸಿದವರನ್ನು ಕೇಳೆಲೋ ಸುಗ್ರೀವ
ದಿಂಡುಗಡೆದರು ಎನ್ನೆದುರು ನಿಂತವರೆಲ್ಲ ಕೇಳೆಲೋ ಸುಗ್ರೀವ
ಗಂಡನ ಪಡೆದಿರೆ ಶುಂಭ ಜಯಿಸುವನೆನ್ನ ಕೇಳೆಲೋ ಸುಗ್ರೀವ
ಗಂಡನಾವನಿಲ್ಲದಿರೆ ಏನ ಮಾಡುವೆ ಕೇಳೆಲೋ ಸುಗ್ರೀವ 8

ಚಾರ್ವಾಕರ ಮಾತಾಡಲು ಬೇಡ ಕೇಳೆಲೆ ಮಹಾದೇವಿ
ಬರ್ವಳು ನಿನ್ನ ಮಾತಿಗೆ ಶುಂಭ ಬಹನೇ ಕೇಳೆಲೆ ಮಹಾದೇವಿ
ಉರ್ವಿಗೆ ಕರ್ತನ ಎದುರಿಗೆ ನೀ ನಿಲ್ಲುವೆಯ ಕೇಳೆಲೆ ಮಹಾದೇವಿ
ಗರ್ವವ ಮಾಡಲು ಮುಂದಲೆ ಹಿಡಿದೊಯ್ವರು ಕೇಳೆಲೆ ಮಹಾದೇವಿ 9

ಎನ್ನ ಪ್ರಾರಬ್ಧವು ಇದ್ದಂತೆ ಆಗುವುದು ಕೇಳೆಲೋ ಸುಗ್ರೀವ
ನಿನ್ನ ಮೇಲೇನು ಮಾತಿಲ್ಲವೋ ಕೇಳೆಲೋ ಸುಗ್ರೀವ
ಎನಗೆ ಹಿತಕಾರಿ ನೀನು ಅಹಿತ ನಾನೇ ಕೇಳೆಲೋ ಸುಗ್ರೀವ
ಇನ್ನು ಮಾತಾಡಬೇಡವೋ ಕರೆತಾನಡಿ ಕೇಳೆಲೋ ಸುಗ್ರೀವ 10

ಇಂತು ವಿಳಾಸ ಮಾತನಾಡಿಯೆ ಖಳನನು ಕಳುಹಿದಳು ಪರಾಂಬೆ
ಎಂತು ಹೇಳ್ವನೋ ಶುಂಭನಾವಾಗ ಬರುವನೋ ಎನುತಲಿ ಜಗದಂಬೆ
ಚಿಂತೆ ಹರಿಪೆ ಸುರರನು ಶುಂಭನನು ಕಟ್ಟಿ ಎನುತಲಿ ಸರ್ವಾಂಬ
ಚಿಂತಯಕ ತಾನಾದ ಚಿದಾನಂದ ಕರುಣೆಯು ಬಗಳಾಂಬ 11

22
ದೂರಹವು ದೂರಹವು ದುರಿತಗಳೆಲ್ಲ

ದೂರಹವು ದೂರಹವು ದುರಿತಗಳೆಲ್ಲ
ಕ್ರೂರ ಸ್ತಂಭಿನಿ ಬಗಳೆ ಸ್ಮರಣೆ ಮಾತ್ರದಲಿ ಪ

ಕಳ್ಳರಡಕಟ್ಟಿದಲ್ಲಿ ಕಾರಾಗೃಹದಲ್ಲಿ
ಗುಲ್ಲಾದ ಸ್ಥಳದಲ್ಲಿ ಘನ ಗಾಳಿಯಲ್ಲಿ
ಎಲ್ಲ ರೋಗಗಳಲ್ಲಿ ಚಿಂತೆಗಳು ಮುತ್ತಿದಲ್ಲಿ
ಬಲ್ಲ ಬಗಳೆಯ ಸ್ಮರಣೆ ನಾಲಗೆಗೆ ಬರಲು 1

ಮಾರಿ ದುರ್ಗಿಯಲ್ಲಿ ಮಹಾಗ್ರಹವು ಹಿಡಿದಲ್ಲಿ
ಮಾರಣವು ಮುಟ್ಟಿದಲ್ಲಿ ಮಹಾಕಾರ್ಯದಲ್ಲಿ
ಊರು ಮುತ್ತಿದಲ್ಲಿ ವಸ್ತು ಹೋಗಿದ್ದಲ್ಲಿ
ಕಾರಣ ಬಗಳೆ ಸ್ಮರಣೆ ನಾಲಗೆಗೆ ಬರಲು 2

ಮಳೆಯೊಳು ಸಿಕ್ಕಿದಲ್ಲಿ ಸಾಯ್ವಸಮಯದಲ್ಲಿ
ಹೊಳೆಯೊಳು ಮುಳುಗಿದಲ್ಲಿ ಹೊಲ ಬೆಳೆಯದಲ್ಲಿ ಬ-
ಹಳ ದಾರಿದ್ರ್ಯದಲ್ಲಿ ಬೇಗೆ ಸುತ್ತಡಸಿದಲ್ಲಿ
ಬಲು ಚಿದಾನಂದ ಬಗಳೆ ಸ್ಮರಣೆ ನಾಲಗೆಗೆ ಬರಲು 3

23
ದೆಕ್ಕಬುಕ್ಕ ಇಕ್ಕಬೇಕು ಅಂಬನ ಮನದ

ದೆಕ್ಕಬುಕ್ಕ ಇಕ್ಕಬೇಕು ಅಂಬನ ಮನದ
ಅಕ್ಕರವು ತೀರುವತನಕ ಪ

ಕೊರಳಿಗೆ ಬೀಳಬೇಕು ಅಂಬನ ಎದೆಯ
ಸೆರಗ ಹಿಡಿದು ಎಳೆಯಬೇಕು ಅಂಬನ
ಕರುಳನೀಗ ಪೀಕಬೇಕು ಅಂಬನ ಉಟ್ಟ
ನಿರಿಗೆ ಜಗ್ಗಿ ಬೀಳಬೇಕು ಅಂಬನ 1

ತೊಡೆಯ ಮೇಲೆ ಹೊರಳಬೇಕು ಅಂಬನ ಮುಸುಕ
ಹಿಡಿದು ಎಳೆಯಬೇಕು ಅಂಬನ
ಕಡಿಯಬೇಕು ಗಲ್ಲವನ್ನು ಅಂಬನ ಸ್ತನವ
ಹಿಡಿದು ಕುಡಿಯಬೇಕು ಅಂಬನ 2

ಓಡಿ ಬಂದು ಅಪ್ಪಬೇಕು ಅಂಬನ ಕುದುರೆ
ಮಾಡಿ ಹೆಗಲನೇರಬೇಕು ಅಂಬನ
ಓಡಬೇಕು ಒಡನಮುಟ್ಟಿ ಅಂಬನ ಸಾಕ್ಷಿ
ಗೂಢ ಚಿದಾನಂದ ಬಗಳಾಂಬನ 3

24
ದೇವಿಯ ನೋಡಿರೊ ಪರ ದೇವಿಯ

ದೇವಿಯ ನೋಡಿರೊ ಪರ ದೇವಿಯ ನೋಡಿರೋ
ಭಾವಿಸೆ ಅನುದಿನ ಹೃದಯದಿ ಬೆಳಗುವ ಕಳೆಯ ಚಿತ್ಪ್ರಭೆಯ ಪ್ರಭೆಯ ಪ

ಎಲ್ಲರ ಕೈಯಲಿ ಪೂಜೆಯಕೊಂಬ ಗುಣಿಯ ರತ್ನದ ಗಣಿಯ
ಒಲ್ಲೆನೆಂದರು ವರಗಳ ಕೊಡುವ ದಯಾಮಯಿಯ ಭಕ್ತ ಪ್ರಿಯೆಯ
ಬೆಲ್ಲದಂದದಿ ಮಾತುಗಳಾಡುವ ಸುಧೆಯ ಸುಖ ಶಾರದೆಯ
ಬಲ್ಲಿದ ಶತ್ರುಗಳಾಗಿಹ ರವರನು ಬಡಿವ ಕಡಿದುಡಿವ 1

ಬ್ರಹ್ಮ ವಿಷ್ಣುರುದ್ರಾದಿಗಳವರ ತಾಯಿ ಮಹಾಮಾಯಿ
ಬೊಮ್ಮನು ಬರೆದಿಹ ಪ್ರಾರಬ್ಧವೆಲ್ಲವ ಸೆಳೆವ ಎಲ್ಲವ ಕಳೆವ
ಚಿಮ್ಮಿ ಹಾಕುವಳು ಕಂಟಕಂಗಳ ಬಿಡಿಸಿ ಅಭಯ ಕೊಡಿಸಿ
ತಮ್ಮವರೆಂದೇ ಭಕ್ತರ ಬದಿಯಲಿ ಇಹಳ ಮಹಾಮಹಿಮಳ 2

ಚಿತ್ಕಲಾತ್ಮ ಚಿದಾನಂದನೆಂಬ ವಿಭುವಾಮಹಾ ಪ್ರಭುವ
ಹತ್ತಿರ ನಿಂತು ಬೆಳಗುತಲಿಹಳು ಕೋಟಿ ಸೂರ್ಯರ ಸಾಟಿ
ಮತ್ತೇ ಮೀರಿಯೆ ಬ್ರಹ್ಮರಂದ್ರಕೆ ಸಾಗಿ ತಾ ವಾಸವಾಗಿ
ನಿತ್ಯದಿ ಜ್ಯೋತಿರ್ಮಯವಾಗಿ ತೋರುವ ಸಖಿಯ ಬಗಳಾಮುಖಿಯ 3

25
ನಿನ್ನ ನಾನೇನೆಂದೆನೆ ಬಗಳಾಮುಖಿ

ನಿನ್ನ ನಾನೇನೆಂದೆನೆ ಬಗಳಾಮುಖಿ ನಿನ್ನ ನಾನೇನೆಂದೆನೆ
ನಿನ್ನ ನಾನೇನೆಂದೆ ತತ್ವವ ಕೇಳುತ ಚೆನ್ನಾಗಿ
ಎನ್ನ ಬಳಿ ಕುಳ್ಳಿರೆಂದೆನಲ್ಲದೇ ಪ

ಹತ್ತಿಯನರೆ ಎಂದೆನೇ ಹಳ್ಳದ ನೀರ
ಹೊತ್ತು ಹಾಕೆಂದೆನೆ ಮತ್ತೆ ಹರಡಿಯ ತೋರಿ ಬೀ-
ಸುತ್ತೆ ಚವುರಿಯಲಿ
ಮತ್ತೆ ಗಾಳಿಯ ನೀಗ ಬೀಸೆಂದೆನಲ್ಲದೇ 1

ಕುಸುಬೆಯ ಒಡೆಯೆಂದೆನೇ ಕುದುರೆಯ ಮೈ-
ಹಸನಾಗಿ ತೊಳೆಯೆಂದೆನೇ
ಹೊಸ ಪೀತಾಂಬರವನುಟ್ಟು ಹೂವಮುಡಿಯೊಳು ಇಟ್ಟು
ಅಸಿಯ ಹಿಡಿದು ಮುಂದೆ ನಡೆಯೆಂದೆನಲ್ಲದೆ 2

ಕಲ್ಲನು ಹೊರು ಎಂದೆನೆ
ಎಲ್ಲ ಕೆಲಸವನೀಗ ಮಾಡೆಂದೆನೆ
ಬಲ್ಲಂತೆ ಪಾರುಪತ್ಯವನು ಮಾಡುತ್ತಾ ಕಾಲ್ಗೆಜ್ಜೆ
ಘುಲ್ಲೆನಿಸಿ ನಡೆ ಎಂದೆನಲ್ಲದೇ 3

ಗೋಡೆಯನು ಬಳಿ ಎಂದೆನೆ
ರಾಗಿಯ ಹಿಟ್ಟನು ಬೀಸೆಂದೆನೆ
ಈಡಾಗಿ ಒಪ್ಪುವಾಭರಣಗಳ ನೀ ತೊಟ್ಟು
ಆಡುತ್ತ ಮಠದೊಳಗೆ ಇರು ಎಂದೆನಲ್ಲದೇ 4

ಬಟ್ಟೆಯನು ಒಗೆ ಎಂದೆನೆ
ದುಷ್ಟರನು ಕೂಡಿ ನಲಿಯೆಂದೆನೇ
ಶಿಶು ಚಿದಾನಂದ ಬ್ರಹ್ಮಾಸ್ತ್ರ ದೈವ ತಾ
ನಿಷ್ಟ ದೇವತೆಯಾಗಿ ನೆಲೆಸೆಂದೆನಲ್ಲವೆ 5

26
ನೀನು ನಾನಾಗಿಹೆ ದೇವರೆ

ನೀನು ನಾನಾಗಿಹೆ ದೇವರೆ
ನೀನು ನಾನೆ ಎಂದು ಪೂಜಿಸುವೆ ದೇವರೆ ಪ

ನಿನಗೆ ಸ್ನಾನ ಮಾಡಿಸುತ್ತೇನೊ ದೇವರೆ ನಾ
ನಿನಗೆ ಮೈಯನೊರೆಸುತ್ತೇನೊ ದೇವರೆ
ನಿನಗೆ ವಸ್ತ್ರವುಡಿಸುತ್ತೇನೋ ದೇವರೆ
ನಿನಗೆ ಭಸಿತ ಹಚ್ಚುತ್ತೇನೋ ದೇವರೆ 1

ನಿನಗೆ ಗಂಧ ಹಚ್ಚುತ್ತೇನೊ ದೇವರೆ
ನಿನಗೆ ಅಕ್ಷತಿಡುತ್ತೇನೊ ದೇವರೆ
ನಿನಗೆ ತುತ್ತುಗಳುಣಿಸುತ್ತೇನೊ ದೇವರೆ
ನಿನಗೆ ನೀರ ಕುಡಿಸುತ್ತೇನೊ ದೇವರೆ 2

ನಿನಗೆ ಬಾಯ ತೊಳೆಸುತ್ತೇನೊ ದೇವರೆ
ನಿನಗೆ ವೀಳ್ಯ ಮಾಡಿಸುತ್ತೇನೊ ದೇವರೆ
ನಿನಗೆ ಶರಣು ಮಾಡುತ್ತೇನೊ ದೇವರೆ ನಾ
ನಿನಗೆ ಧ್ಯಾನ ಮಾಡುತ್ತೇನೊ ದೇವರೆ 3

ನಿನಗೆ ಹಾಸಿಗೆ ಮಾಡಿತ್ತೇನೊ ದೇವರೆ ನಾ
ನಿನಗೆ ಮಲಗಿಸುತ್ತೇನೊ ದೇವರೆ
ನಿನಗೆ ಹಾಡಿ ಹೊಗಳುತ್ತೇನೊ ದೇವರೆ ನಾ
ನಿನಗೆ ಎಚ್ಚರಗೊಡುತ್ತೇನೊ ದೇವರೆ 4

ನಿನ್ನನರಿವರಿಲ್ಲ ದೇವರೆ ಕೇಳು
ನಿನ್ನನರಿವಗೆ ನೀನೇ ದೇವರೆ
ನಿನ್ನ ಹೆಸರು ಚಿದಾನಂದ ದೇವರೆ ಎನಗೆ
ನಿನ್ನ ಸೇವೆ ನಿತ್ಯವಿರಲೋ ದೇವರೆ 5

27
ಪಾಲಿಸೆನ್ನ ಪಾರ್ವತೀಪತಿ ಪಾಲಿಸೆನ್ನನು

ಪಾಲಿಸೆನ್ನ ಪಾರ್ವತೀಪತಿ ಪಾಲಿಸೆನ್ನನು
ಪಾಲಿಸೆನ್ನನು ಚೆಲ್ವ ಕಾಲಕಂದರ ಹರ
ಪಾಲಯಮಾಂ ಶಿವ ಲೋಲ ವಿರೂಪಾಕ್ಷ ಪ

ಶರನಾಮ ಸುರನ ಕುವರಿಯನಾಳಿದವನ
ಹಿರಿಯ ಪಿತನ ಶಿರವ ತರಿದವನ ಸುತನಿಗೆ
ತುರಗವಾದವನ ಜೆಹ್ವೆಯ ತುದಿಗೆ ಸಿಲುಕಿ
ಮರುಳಾಗಿದ್ದವನ ಬಾಯ ತುತ್ತಾಗಿ
ಮರೆಯೊಳಿದ್ದವನ ಕಾಯವಾಧರಿಸಿ ನೀ
ಶಿರದೊಳು ತಾಳಿದೆಯಾ ಎನ್ನೊಡೆಯ 1

ಬಾಯೊಳಗಿಹ ರಮಣನ ಅನುಜನ ಮಾವನ ದಿನದ
ಮೈಯವನ ಮಗನ ಶಿರದಾಯತವಾಗಿಪ್ಪನ ವೈ-
ರಿಯ ನೇರಿದಾಯತಾಕ್ಷಿಯ ಪೆತ್ತನ ವಂಶವ ಮುರಿ-
ದಾ ಯಾಗಗಳ ಕಿತ್ತವನ ಆತ್ಮಜನಿಗೆ
ಆಯಾ ಮಾರ್ಗಣವಿತ್ತವನೆ 2

ಸರಸಿಜ ಮಿತ್ರನ ಸೂನುವಿನ ಕಂದನ
ವರಪುರಂಧ್ರಿಯ ಮಾನವ ಕಾಯ್ದನಣ್ಣನ
ಕರದೊಳಿದ್ದಾಯುಧವ ಪೆಗಲೊಳಾತು
ನರರ ರಕ್ಷಿಸಿ ಪೊರೆವ ದೇವನನೇರಿ
ಚರಿಪ ಪಂಪಾಪುರವನಾಳ್ವ ಸದ್ಗುರು
ಚಿದಾನಂದ ದೇವಭಕ್ತರ ಕಾವ 3

28
ಬಗಳ ತಾ ಪ್ರತ್ಯಕ್ಷದಲಿರೆ ತನ್ನನು

ಬಗಳ ತಾ ಪ್ರತ್ಯಕ್ಷದಲಿರೆ ತನ್ನನು ಮನುಜನೆಂಬುವನಜ್ಞಾನಿ
ಬಗಳಾ ಸತ್ಯವು ಜೀವನ ಮಿಥ್ಯವು ಎಂಬುವನೇ ಜ್ಞಾನಿ ಪ

ಪರುಷಮಣಿ ತಾ ತನ್ನಲ್ಲಿರಲು ಕಲ್ಲೆಂದು ಕಂಡಂತೆ
ಸುರತರು ಮನೆ ಮುಂದೆ ಬೆಳೆದಿರೆ ಕಾಡಮರನೆಂದಂತೆ 1

ಸುರಧೇನುವ ಕಟ್ಟಿರೆ ಮನೆಯಲಿ ಗೊಡ್ಡಾವು ಎಂದಂತೆ
ಇರೆ ಚಿಂತಾಮಣಿ ತನ್ನ ಹಸ್ತದಿ ಇಟ್ಟಂಗಿಯ ಚೂರೆಂದಂತೆ 2

ಕೆಂಡವು ಕಾಣೆವು ಎಂದೆನ್ನದಿರಿ ಬಗಳದೇವಿ ತಾ ಸತ್ಯ
ಖಂಡಿತ ಮಾತಿದು ನೀವರಿಯದಿರೆ ಚಿದಾನಂದ ದೊರಕುವುದು ಮಿಥ್ಯ 3

29
ಬಗಳ ಸ್ಮರಣೆಯಲ್ಲಿ ಫಲವು ಸಂಶಯ

ಬಗಳ ಸ್ಮರಣೆಯಲ್ಲಿ ಫಲವು ಸಂಶಯ
ವೆಂಬುವನ ಬಾಯನೀಗ ಸೀಳಬೇಡವೆ
ಬಗೆಯುತ್ತಂ ತನಗೆ ತಾನಾಗಲಾಗಿ ಬರೆಯನೀಗ
ಬ್ರಷ್ಟಗೆ ಬರೆಯಬೇಡವೆ ಪ

ನೆನಸದ ಮುನ್ನ ಕಾಮ್ಯ ನಿಜವೆ
ತಾನಾಗಲು ನೀಚನ ನಾಲಗೆಯ ಕೀಳಬೇಡವೆ
ದಿನದಿನಕೆ ಸಂಪತ್ತು ದಟ್ಟವಾಗಿ ಹೆಚ್ಚುತಿರಲು ದಿಂಡೆಯ
ವನ ದವಡೆ ದವಡೆ ತಿವಿಯಬಾರದೆ 1

ಕವಲಿಲ್ಲದಲೆ ಕಲ್ಯಾಣ ತನಗಾಗಲು ಕುಹಕಿ
ಕಿವಿಯ ಕೊಯ್ಯಬೇಡವೆ
ಯವೆಯ ಮಾತ್ರ ಅಷ್ಟರೊಳು ಯೋಚಿಸಿದ್ದು ಸಿ-
ದ್ಧವಾದೆ ದುರ್ಜನನ ಎದೆಯನೀಗ ನಿರ್ದಯದಿ ಒದೆಯ ಬೇಡವೆ 2

ಆವುದನ್ನೆ ಚಿಂತಿಸಲು ಆ ಕ್ಷಣದಿ ಆಗಲಾಗಿ ಅದನು ತೆಗಳು-
ವವನ ಮೂಗ ಕೊರೆಯಬೇಡವೆ
ದೇವ ದೇವ ಚಿದಾನಂದ ಬಗಳೆ ಕರು-
ಣವಿರೆ ದಬಕು ದಬಕು ಎಂದು ನನಗೆ ಇಕ್ಕ ಬೇಡುವೆ 3

30
ಬಗಳಾ ಬ್ರಹ್ಮವಾಗಿ ತೋರುತಿದೆ ನೀ

ಬಗಳಾ ಬ್ರಹ್ಮವಾಗಿ ತೋರುತಿದೆ ನೀ ಕಣ್ಮುಚ್ಚಿ ತೆರೆಯೆ
ಬಗಳಾ ಬ್ರಹ್ಮವಾಗಿ ತೋರುತಿದೆ ನೀ ಬಗೆ-
ಬಗೆಯ ಜ್ಯೋತಿಯ ಬೆಳಕನು ಕಾಣುತ
ಝಗ ಝಗಿಸುತ ಎರಕದ ಪುತ್ಥಳಿಯಂತೆ ಪ

ಉಣ್ಣುವಲ್ಲಿ ಉಡುವಲ್ಲಿ ಉಚಿತಂಗಳಲ್ಲಿ
ಮಣಿವಲ್ಲಿ ಏಳುತಿರುವಲ್ಲಿ ಮುಂದಣ ಹೆಜ್ಜೆಯಲಿ
ಘಣ ಘಣ ಘಂಟಾಸ್ವರವನೆ ಕೇಳುತ
ತ್ರಿಣಯನಳಾಗಿ ಒಳಗೆ ಹೊರಗೆ 1

ತಾಗುವಲ್ಲಿ ತಟ್ಟುವಲ್ಲಿ ತತ್ತರವಾದಲ್ಲಿ
ಹೋಗುವಲ್ಲಿ ನಿಲ್ಲುವಲ್ಲಿ ಶಯನದಲ್ಲಿ ನಿದ್ದೆಯಲ್ಲಿ
ನಾಗಸ್ವರದ ಧ್ವನಿಯಿಂಪನೆ ಕೇಳುತ
ಯೋಗಾನಂದದಿ ಓಲಾಡುತಲಿ 2

ಇಹಪರವೆರಡದು ಹೋಗಿ ಇರುಳು ಹಗಲನೆ ನೀಗಿ
ಮಹಾಜೀವ ವಾಸನೆ ಗತವಾಗಿ ಮತಿಯಿಲ್ಲವಾಗಿ
ಬಹು ಬೆಳಗಿನ ಬೆಳದಿಂಗಳ ಬಯಲಲಿ
ಮಹಾ ಚಿದಾನಂದ ಬ್ರಹ್ಮಾಸ್ತ್ರವಾಗಿ 3

31
ಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳ

ಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳ
ಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳ

ಭಸ್ಮಾಸುರನಾಗ ಜಗವರಿಯೆ ಬೇಕೆಂದು
ಗೌರಿಯನು ಮೋಹಿಸಿಯೆ
ವಿಸ್ಮಯದಲಿ ವಿರೂಪಾಕ್ಷ ಭಜಿಸಿ
ವಿಷ ಹೃದಯದಿ ಘಾತಕವನೆ ಚಿಂತಿಸೆ 1

ಉರಿವ ಹಸ್ತವ ಪಡೆದು ಹರುಷದಲಿ ಬರಲು
ಪಶು ಪತಿಯು ಭಯದಿಂದ ಓಡುತಿರಲು
ದೇವತೆಗಳೆಲ್ಲರೂ ಸ್ತೋತ್ರ ಗೈಯೆ
ಶಿವನನು ಕಾಯಲವತರಿಸಿದೆ ದೇವಿ 2

ಥಳ ಥಳಿಸುತ ಮೋಹದಿಂದಿರಲು
ತವಕಿಯು ಹರುಷದಿ ಕೈ ಹಿಡಿದು ಬರಲು
ಕಳರಿದ ಶಿವ ಪ್ರಾಣ ಉಳಿಯಲೆಂದು
ತಾಮಸನ ನಾಟ್ಯದಲಿ ಗೆಲಲು ಎಂದೆ 3

ಧಿಮ್ಮಿ ತತ್ತಧಿಕಿತಕ ಎಂದು
ದಿಟ್ಟವಾಗಿ ಕುಣಿಯುತಲಂದು
ಸುಮ್ಮನೆ ಕೈಯಲಿಡಿಸಿದೆ ಕೈಯ
ಸುಟ್ಟೆಯಸುರನ ಸುರರುಘೆ ಎನೆ 4

ಸುರರು ಹೂವಿನ ಮಳೆಯ ಸುರಿಯಲು
ಸುರಗಣಿಕೆಯರು ನಾಟ್ಯವಾಡಲು
ಪರಮ ಚಿದಾನಂದ ಬಗಳೆಯು ಸಾರ್ತರೆ
ಪಾರ್ವತಿ ಪತಿ ನೋಡಿ ನಗುನಗುತಿರೆ 5

32
ಬಗಳೆ ತಾನಾದವಗೆ ಏನು ಚಿಂತೆ

ಬಗಳೆ ತಾನಾದವಗೆ ಏನು ಚಿಂತೆ
ನಿಗಳ ಬಂಧನದ ಮತ್ತಗಜದಂತೆ ಪ

ನಿದ್ರೆಯೊಳಗಣ ನಿದ್ರೆ ನಿತ್ಯದಿ ತಾಳ್ದಿಳಿದು
ನಿದ್ರೆ ದೃಷ್ಟಿಯೊಳಗೆ ದೃಷ್ಟಿಯಿಟ್ಟು
ನಿದ್ರೆಯನು ಸೋಂಕದಲೆ ನಿಂದು ನಿದ್ರೆಯ ಸುಖವ
ನಿದ್ರೆಯೊಳಗನುಭವಿಸಿ ನಿತ್ಯ ತಾನಾದ 1

ಕುಣಿಯುತಿಹ ಚಿತ್ಕಳೆಯ ಮನಕೆ ತಾ ತೋರುತಲಿ
ಘಣ ಘಣಿಪ ಘಂಟೆ ನಾದವನಾಲಿಸಿ

ಎಣಿಕೆಯಿಲ್ಲದ ಸೂರ್ಯ ಚಂದ್ರ ಬೆಳಗನೆ ಬೆಳಗಿ
ಮನ ಸುಖಿಸಿ ಮನವಳಿದು ಮಹಿಮ ತಾನಾದ 2

ನಿಂದ ನಿಜದಲಿ ಬೆರತು ಬಾಹ್ಯಾಂತರವ ಮರೆತು
ಹೊಂದದಲೆ ದುರ್ಗುಣದ ವಾಸನೆಗಳಾ
ಬಂಧನಂಗಳ ಕಳೆದು ಬವಣೆಗಳ ತಾ ನೀಗಿ
ಸುಂದರಾತ್ಮನೆ ಆಗಿ ಶೂನ್ಯ ತಾನಾದ 3

ಎಲ್ಲೆಲ್ಲಿ ತಾನುಂಡು ಎಲ್ಲೆಲ್ಲಿ ತಾ ಮಲಗಿ
ಎಲ್ಲ ಸ್ಥಳದೊಳು ತಾನು ಚರಿಸಿ
ಎಲ್ಲ ಜನ ಬೆರಗಾಗೆ ತನ್ನ ದರುಶನ ನೀಡಿ
ಸೊಲ್ಲುಡುಗಿ ಸಾಕ್ಷಾತ್ತು ಸಹಜ ತಾನಾದ 4

ತೂಗಾಡುತ ಕಣ್ಣ ಮುಚ್ಚಿ ತೆರೆಯುತ್ತ
ಆಗ ಜರೆ ಜನನ ಮರಣಂಗಳಳಿದು
ಯೋಗಿ ಚಿದಾನಂದ ಗುರು ತಾನಾದ
ಬಗಳಾಂಬ ತಾನಾಗಿ ಪೂರ್ಣಬ್ರಹ್ಮ ತಾನಾದ 5

33
ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿ

ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿ
ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿ ಪ

ಕಾಂತಿಯೆಂಬ ಸತಿಯು ದೊರಕಲಿ ಬಹಳ ಸಂತೋಷಿ
ಕಾಂತಿ ಎಂಬ ಕುಲ ಕುಡಿ ಬೆಳೆಯಲಿ ಬಹಳ ಸಂತೋಷಿ 1

ಕ್ಷಮೆಯು ಎಂಬ ಕ್ಷೇಮವು ಬೆಳೆಯಲಿ ಬಹಳ ಸಂತೋಷಿ
ದಮೆಯು ಎಂಬ ದನಕರು ಹೆಚ್ಚಲಿ ಬಹಳ ಸಂತೋಷಿ 2

ಆತ್ಮ ಸಂತೋಷದಾ ಅಂಗಡಿ ನಡೆಯಲಿ ಬಹಳ ಸಂತೋಷಿ
ಸ್ವಾತ್ಮಾನುಸುಖ ಸಾಮ್ರಾಜ್ಯ ದೊರೆಯಲಿ ಬಹಳ ಸಂತೋಷಿ 3

ಭೂತ ದಯೆಯ ಅಂಗಿಯ ತೊಡಿರಿ ಬಹಳ ಸಂತೋಷಿ
ಖ್ಯಾತಿ ಎಂಬ ಕುಪ್ಪಸ ಹಾಕಿರಿ ಬಹಳ ಸಂತೋಷಿ 4

ಸೂಸಲಿ ಚಿದಾನಂದ ಕೃಪೆಯಿಂದಿಗೆ ಬಹಳ ಸಂತೋಷಿ
ವಾಸವ ಮಾಡಲಿ ನಮ್ಮಲ್ಲಿ ಬಗಳೆ ಬಹಳ ಸಂತೋಷಿ 5

34
ಭಾಷೆಯ ಪಡೆದಿಹೆನು ಭಾಷೆಯ ಪಡೆದಿಹೆನು

ಭಾಷೆಯ ಪಡೆದಿಹೆನು ಭಾಷೆಯ ಪಡೆದಿಹೆನು
ಈಶಳಾದ ಬಗಳಾ ದೇವಿಯ ಕೈಯಲಿ ಕೈಯನು ಹೊಯ್ದು ಪ

ಎತ್ತ ಎತ್ತ ಹೋಗೆ ಬೆನ್ನಹತ್ತಿ ತಿರುಗು ಎಂಬ
ಹತ್ತಿರಿರಬೇಕು ಕಾದು ನಿತ್ಯದಿ ಎಂದೆಂಬ ಹಾಗೆ 1

ಎಲ್ಲ ಕ್ಷೇಮ ಪರಾಮರಿಕೆ ನಿನ್ನದೀಗ ಎಂಬ ಹಾಗೆ
ಎಲ್ಲ ಮಾನಾವಮಾನ ನಿನ್ನ ಹೊಂದಿತು ಎಂಬ ಹಾಗೆ 2

ದೇಹವಿದು ಎನ್ನದಲ್ಲ ನಿನ್ನದೀಗ ಎಂಬ ಹಾಗೆ
ದೇಹಿ ಚಿದಾನಂದ ಬಗಳೆ ನೀನು ನಾನೆ ಎಂಬ ಹಾಗೆ 3

35
ಮದ್ದಿನ ಹವಾಯಿ ನೀ ನೋಡು ಬಗಳ

ಮದ್ದಿನ ಹವಾಯಿ ನೀ ನೋಡು ಬಗಳ
ಮದ್ದಿನ ಹವಾಯಿ ನೀ ನೋಡು
ಮದ್ದಿನ ಹವಾಯಿ ಹೃದಯ ಬಯಲಲ್ಲದೆ
ಎದ್ದಿರು ಚತುಷ್ಟ ತನುವಿಗೆ ಬೇರೆಯು ಪ

ತೂರ್ವುತಲಿದೆ ಬಿರಿಸಾಕಾಶದ ತುದಿ
ಗೇರ್ವುತಲಿದೆ ಅಂಬರ ಬಾಣ
ಬೀರ್ವುತಲಿದೆ ಚಕ್ರದ ಕಿಡಿಯಗಲಕೆ
ಜಾರ್ವುತಲಿದೆ ಅಜ್ಞಾನದ ಖೂನ 1

ಗಡಿಗ ಬಾಣದ ಗತಿಯನೆ ನೋಡು
ಗಜುಗಿಂಗಳ ಕಾಯಬ್ಬರವ
ಗಿಡುಗಳು ಹಾರ್ವವು ಜಿನಿಸು ಜಿನಿಸುಗಳು
ಭಡಲ್ ಭಡಲ್ಲಿಹ ಸಪ್ಪಳವು 2

ಅಂತರ ದೌಸು ಸರಬತ್ತಿಗಳು
ಅಗಸೆಯ ಹೂವಿನ ಅಚ್ಚರಿಯ
ಕಂತುಕ ಪೆಟಲವು ಮುತ್ತಿ ಸೇ-
ವಂತಿಗೆ ಕವಳೆಯ ಹೂವಿನ ಸುರಿಮಳೆಯು 3

ಕೋಳಿಯು ಮುಳುಗುತಲೇಳುತಲಿರುತಿರೆ
ಕೋಣ ಆನೆಗಳ ಕಾದಾಟ
ಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯು
ಬೆಳ್ಳನೆ ಜ್ಯೋತಿಯ ಕಡಕದಾಟ 4

ನಿನ್ನ ಕಾಂತಿ ಇವು ನೀನೇ ನೋಡುತಲಿರು
ತನ್ಮಯ ದೃಷ್ಟಿಯನಿಟ್ಟು
ಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-
ತನ್ಯಾತ್ಮಕ ಶುದ್ಧನವ 5

36
ಮರತೆ ಮರತೆ ಪ್ರಪಂಚವ ಎನಗೆ ಈಗ

ಮರತೆ ಮರತೆ ಪ್ರಪಂಚವ ಎನಗೆ ಈಗ
ಹರಿಯಿತು ಅಜ್ಞಾನದ ಋಣವು ಅಯ್ಯ ಪ

ಸುರಪತಿ ಕಲ್ಪವೃಕ್ಷವು ತಾನು ಈಗ
ಸಿರಿ ಗಿರಿಯನೀಗ ಬಯಸೆನು ನಾನು
ಪರಮ ಬಗಳ ತಾನಾಗಿಹ ನಾಶವಹ
ಮುರುಕಿ ದೇಹ ಭ್ರಾಂತಿಯಲಿರುವೆನೆ ಕೇಳಕ್ಕಯ್ಯ 1

ಸತ್ಯವಾದ ಕಾಮಧೇನುವು ಅದು ಈಗ
ಬುತ್ತಿಗೆ ಕೈ ನೀಡುವುದೇ ಕೇಳಕ್ಕಯ್ಯ
ನಿತ್ಯ ಮಂಗಳೆ ಬಗಳೆಯಾಗಿಹಳು ಸ್ವಪ್ನದಿ ತೆರದಿ
ಮಿಥ್ಯ ಸಂಸಾರಕೆ ಆಸೆ ಮಾಡುವೆನೆ ಕೇಳಕ್ಕಯ್ಯ 2

ಚಿಂತೆ ದೂರ ಚಿಂತಾಮಣಿಯನು
ಕ್ಷುದ್ರ ದೂರ ಕಲ್ಪವೃಕ್ಷವನು ನೆನೆವೆ ಕೇಳಕ್ಕಯ್ಯ
ಚಿಂತಾಯಕ ಚಿದಾನಂದನಾದ ಬಗಳೆ ಇರುವಾಗ
ಎಂತು ಜನನ ಮರಣದ ಚಿಂತೆ ಕೇಳಕ್ಕಯ್ಯ 3

37
ಮರತೆ ಮರತೆ ಬಗಳ ಮಹಾಮಂತ್ರವ

ಮರತೆ ಮರತೆ ಬಗಳ ಮಹಾಮಂತ್ರವ
ಸುರತರುವಿಗೆ ತರುವಾದ ಬ್ರಹ್ಮಾಸ್ತ್ರವ ಪ

ಭುಗುಭುಗಿಸಿ ಭುವನಗಳನ್ನೆಲ್ಲಾ ಪಾಲಿಪ ಮಂತ್ರ
ಧಗಧಗಿಸಿ ಝಗ ಝಗಿಸಿ ನಿಗಿ ನಿಗಿವ ಮಂತ್ರ
ಜಗದೊಡೆಯರಾದವರಿಗೆ ಒಡೆಯಳ ಮಂತ್ರ
ತಗತಗನೆ ಶತಕೋಟಿ ರವಿ ಸೂಸುವ ಮಂತ್ರ 1

ಸರಸಿಜಾಸನ ತಾನೆ ಜಪಿಸುತಿಹ ಮಂತ್ರ
ಹರಿಹರರು ಅನವರತ ಸ್ಮರಿಸುವಾ ಮಂತ್ರ
ಸುರಪ ಇಂದ್ರಾಗ್ನಿಗಳಿಗಭಯ ನೀಡಿಹ ಮಂತ್ರ
ದುರುಳರಿಪು ವನಗಳಿಗೆ ದಾವಾಗ್ನಿ ಮಂತ್ರ 2

ಹರಿಯ ಸಮಭಾಗ್ಯ ಕೋ ಎಂದು ಕೊಡುವ ಮಂತ್ರ
ಹರಗೆ ಸರಿಯಾದ ಸತ್ವವನೀವ ಮಂತ್ರ
ಗುರು ಚಿದಾನಂದ ತಾನಾದ ಬಗಳ ಮಹಾ ಮಂತ್ರ
ಪರಬ್ರಹ್ಮ ಸತ್ಯ ಬ್ರಹ್ಮಾಸ್ತ್ರ ಮಂತ್ರ 3

38
ಮಾಯಿ ಬಗಳಾಂಬ ಸತ್ಯ ಬ್ರಹ್ಮ ರುದ್ರರ

ಮಾಯಿ ಬಗಳಾಂಬ ಸತ್ಯ ಬ್ರಹ್ಮ ರುದ್ರರ
ತಾಯಿ ನಿಜ ಮುಕ್ತಿ ದಾಯಿ ನಂಬಿದವರ
ತಾಯಿ ಈ ಅಜಾಂಡಾನಂತ ಕೋಟಿಯನು
ಕಾಯ್ವ ಕೊಲ್ವ ತಾಯಿ ಪ

ಹೆಚ್ಚೇ ಕೋಪವು ಅವಡುಗಚ್ಚೆ ಕೇವಲರೌದ್ರ
ಮುಚ್ಚೆ ಖಡ್ಗವ ಒರೆಯಿರಿ ಬಿಚ್ಚೆ ಶತ್ರುಗಳೆದೆ
ಬಚ್ಚೆ ಸಚ್ಚರಿತಳು ತಾ ಸವರಿಯೆ ರಿಪುಗಳನು
ನುಚ್ಚು ನುಚ್ಚನೆ ಮಾಡಿ ನಲಿವ ಅಂಬ 1

ಬಿಗಿದೆ ಬತ್ತಳಿಕೆಯಿಂದಲುಗಿದೆ ಶರವನೆ ಕೆನ್ನೆಗೆ
ತೆಗೆದೆ ಬಿಡಲಿಕೆ ತಟ್ಟುಗಿದೆ ಪ್ರಾಣಗಳೆಲ್ಲವ ಮುಗಿಸಿದೆ
ತೆಗೆದಸುರರ ತೆಕ್ಕೆಯಲಪ್ಸರೆಯರು
ನೆಗೆ ನೆಗೆದು ಹಾರಲು ನಸುನಗುವ ಅಂಬ 2

ತ್ಯಾಗಿ ಸರ್ವಸಾಮ್ರಾಜ್ಯ ಭೋಗಿ ಅಮಿತ್ರರೆಂಬರ
ನೀಗಿ ಸರ್ವ ಶಾಂತಿಯದಾಗಿ ಭಕ್ತರ ಭಯ ಹೋಗಿ
ಯೋಗಿ ಎನಿಪ ಚಿದಾನಂದ ಬಗಳೆ
ನೀಗಿದಳೀಪರಿ ದ್ವೇಷಿಗಳೆಂಬರ 3

39
ಮಾಯೆಯನ್ನು ಗೆದ್ದೆನೆಂದು ಮುರುಕಿ

ಮಾಯೆಯನ್ನು ಗೆದ್ದೆನೆಂದು ಮುರುಕಿ ಮುರುಕಿ ಕಿರುಚುವ
ಮೂರ್ಖನವನ ಮಂದ ಮತಿಯನೇನ ಹೇಳಲಿ
ರಾಯರಾದ ಮೂರು ಮಂದಿ ಮೊರೆಯ ಹೊಕ್ಕಿಹರು ಬಗಳ
ಮಾಯೆಯನ್ನು ಗೆದ್ದೆನೆನಲು ಲಜ್ಜೆಯಿಲ್ಲವೆ ಪ

ಮೋಡದಾ ಮಿಂಚಿನಂತೆ ಮೋಹಕವೆ ಬೆಳಗುತಿರಲು
ಗೂಢವಿಹ ಮುನಿಯು ತಪಿಸಿ ಮುಳುಗಿಹೋದರು
ರೂಢಿಯಲ್ಲ ಮೋಹನದಿ ಮುಳುಗಿ ತೇಲಲು ಆ-
ರೂಢ ಆರಕ್ಷಕರುದಯದಲಾದರು 1

ತಾನದಾರು ತಾನದೆಲ್ಲಿ ತನ್ನ ಸ್ಥಳವು ಎತ್ತಲು
ತಾನು ನಾನು ಎಂಬುದಕ್ಕೆ ಠಾವು ಇಲ್ಲವು
ತಾನು ಗೆದ್ದೆ ಗೆದ್ದೆನೆಂದು ಹೇಳಿಯಾಡೆ
ಏನು ರೂಪು ನಾಮಕ್ರಿಯೆ ಜೀವ ಶಿವರು ಮಾಯೆಯು 2

ತಾನೆ ಸಾಕ್ಷಿಯಾಗಿ ಪ್ರಪಂಚ ನಾಶವಾಗಿ
ಏನೇನು ವಾಸನೆ ಹುಟ್ಟದಾಗಿಯು
ತಾನು ಜಗವು ಸರ್ವವಾಗಿ ಸರ್ವಜಗವು
ತಾನೆಯಾಗಿ ತಾನೆ ಚಿದಾನಂದ ಬಗಳೆ ತಾನಾದರಲ್ಲದೆ 3

40
ಮುಕ್ತನಾಗುವೆ ನಿತ್ಯ ಮುಕ್ತನಾಗುವೆ

ಮುಕ್ತನಾಗುವೆ ನಿತ್ಯ ಮುಕ್ತನಾಗುವೆ
ಭಕ್ತಿಯಿಟ್ಟು ಗುರುವಿನಲ್ಲಿ ಭಜಿಸಿ ಬಗಳೆ ನೀನೆಯಾಗಿ ಪ

ಮುರುಕಿ ಮೂಳಿಯರ ಜೊಲ್ಲು ಮಧುವೆಂದು ಸವಿದಂತೆ
ಹಿರಿಯರಂಘ್ರಿ ತೀರ್ಥವನು ಕುಡಿದು ತೃಪ್ತನಾಗೋ ನೀನು 1

ಏಣಲೋಚನೆಯನ್ನು ನೀನು ಬಿಡದೆ ಬಿಡದೆ ನೋಡಿದಂತೆ
ಜ್ಞಾನಿಗಳ ಮೂರ್ತಿಯನ್ನು ಘಳಿಗೆ ಘಳಿಗೆ ನೀನು ನೋಡೋ 2

ಕಾಮ ಕೇಳಿಗಾಗಿ ಹಲ್ಲ ಕಿರಿದು ಕಾಲಿಗೆರಗಿದಂತೆ
ಪಾಮರೋದ್ಧಾರನಾದ ಗುರುಪದಕ್ಕೆ ಶರಣು ಹೋಗೋ 3

ನಾರಿಯಲ್ಲಿ ಲೋಲನಾಗಿ ನೀಚಮಾತು ಕೇಳಿದಂತೆ
ವೀರ ಸಾಧು ತತ್ವವನ್ನು ವಿವರವಾಗಿ ನೀನು ತಿಳಿಯೋ 4

ಚದುರೆ ಮೇಲೆ ನಿನ್ನ ಚಿತ್ತ ಚದುರದಂತೆ ಇದ್ದ ಹಾಗೆ
ಚಿದಾನಂದ ಬಗಳೆಯಲ್ಲಿ ನೆಲಸೆ ಚೇತನಾತ್ಮ ಶುದ್ಧನಹೆಯೋ 5

41
ರಂಗನಹುದೋ ನೀನು ಕನಕಾಚಲ

ರಂಗನಹುದೋ ನೀನು ಕನಕಾಚಲ
ರಂಗನಹುದೋ ನೀನು ತುಂಗ ಮಹಿಮ ಕೃ-
ಪಾಂಗ ಚೆಲುವ ಮುದ್ದು ರಂಗಲಕ್ಷ್ಮಿಯ ರಮ-
ಣಾಂಗ ಜಪಿತ ಮೂರ್ತಿ ಪ

ದುರುಳ ರಕ್ಕಸನು ವೇದ ಕದ್ದೊಯ್ಯೆ
ಮೀನಾಗಿ ತಂದೆಯದನ ಕೂರ್ಮನಾಗಿ
ಗಿರಿಯ ಪೊತ್ತು ಎರೆದೆ ಸುರರಿಗೆ ಅಮೃತವ
ವರಾಹನಾಗಿ ಧರೆಯ ಕದ್ದವನ
ಶಿರವ ಖಂಡಿಸಿ ನೃಕೇಸರಿಯಾಗಿಯೆ
ಕಂಬವನೊಡೆದು ನಿಶಾಚರನ ಸಂಹ-
ರಿಸಿದೆ ರಣಧೀರ ಮಾಧವ 1

ಪುಟ್ಟ ಮಾನವನಾಗಿ ಬಲಿಯ ದಾನವ ಬೇಡಿ
ಅಷ್ಟು ಬ್ರಹ್ಮಾಂಡವನೆಲ್ಲ ಈರಡಿ ಮಾಡಿ
ತುಟ್ಟ ತುದಿಗೆ ಅವನ ಶಿರದ ಮೇ-
ಲಿಟ್ಟು ದ್ವಾರವ ಕಾಯ್ದನಾ ಭೂಸುರರಿಗೆ
ಕೊಟ್ಟ ಮೇದಿನಿಯ ದಾನವ ಭಳಿರೆ ಜಗ
ಜಟ್ಟಿ ಪರಶುರಾಮ ಕ್ಷತ್ರಿಯ ಛೇದನ 2

ದಶರಥನ ಸುತನಾಗಿ ವಸುಧಜೆಯ ಕಳೆದು
ಅಸಮ ಕಪಿವೀರರ ನೆರಪಿ ಸೇತುವೆ ಕಟ್ಟಿ
ಅಸದಳ ರಾಕ್ಷಸರ ಇಂದ್ರಜಿತು
ದಶಶಿರ ಅತಿಕಾಯರ ಕುಂಭಕರ್ಣ
ಅಸಹಾಯ ರಣಶೂರರ ಛೇದಿಸಿ ಸೀತಾ
ಶಶಿಮುಖಿಯ ಕರೆತಂದ ರಘುರಾಮ ಕಂಠೀರವ 3

ದೇವಕೀಸುತನಾಗಿ ಬಾಣನ ಭಂಗಿಸಿ
ಮಾವ ಕಂಸನ ಶಿಶುಪಾಲ ನರಕಾಸುರ ಕೌ-
ರವ ವೀರರನು ಕೊಂದು ಪಾಂಡುರಾಜನ ಪುತ್ರ-
ರನು ಪಾಲಿಸಿ ಪೃಥವಿ ಪಾವನರಾದರನು ರಕ್ಷಿಸಿ ಬೌ-
ದ್ಧಾವತಾರ ತಾನಾಗಿ ವ್ರತ ಭಂಗಿಸಿದೆ ನೀನು 4

ತೇಜಿಯನೇರಿ ನೇಣನೆ ಹಿಡಿದು ಪಾಪದ
ಬೀಜವನುರುಪಿ ಪುಣ್ಯದ ಬಿತ್ತನುರುಹಿಯೆ
ಸೋಜಿಗಸಹಸ್ರರ ಕನಕಗಿರಿ
ಮೂಜಗದೊಳು ವಿಸ್ತಾರವಾಗಿಹ ಘನ
ತೇಜೋ ಮೂರುತಿ ಗಂಭೀರ ಸಿದ್ಧ ಪರ್ವತ
ರಾಜ ಸದ್ಗುರು ಚಿದಾನಂದಾವಧೂತ 5

42
ರಕ್ಷಿಸೆನ್ನ ರಕ್ಷಿಸೆನ್ನನು ಸುರಯಕ್ಷರಕ್ಷಕ

ರಕ್ಷಿಸೆನ್ನ ರಕ್ಷಿಸೆನ್ನನು ಸುರಯಕ್ಷರಕ್ಷಕ ಮಹಾ
ದಕ್ಷ ಯತಿ ಮುನಿ ಪಕ್ಷ ವಿರೂಪಾಕ್ಷ
ಕುಕ್ಷಿಯೊಳು ನೀ ನೆಲಸಿ ಎನ್ನ ಕೃಪೇಕ್ಷಣದಿ ಕೈವಿಡಿದು
ರಕ್ಷಿಪ ಅಕ್ಷಯ ರಾಕ್ಷಸಾಂತಕ ಪಕ್ಷಿವಾಹನ ದೇವಪ್ರಿಯ ಪ

ವೇದವೇದ್ಯ ಸುಜನ ರಕ್ಷ ನಾದಭೇದ್ಯ
ಸಾಧನ ನಾಲ್ಕನು ಸಾಧಿಪ ಸಾಧಕ
ನಾದ ದೇವನೆ ನಿನ್ನ ಪಾದವ ಸ್ತುತಿಪೆನು
ವೇದ ಸ್ಮೃತಿಗಳು ಆದಿಶೇಷನು
ಸಾಧಿಸುತ ಭೇದಿಸಿಯೆ ನಿನ್ನನು
ಹಾದಿ ಕಾಣದು ಪೊಗಳ್ವಡೆನಗೆ ಅರಿಯದಾ-
ಗಿದೆ ಅನಾದಿ ಮೂರುತಿ 1

ಹಾರಹೀರ ಫಲಿಸಿದಂಥಾ ಶೂರ ವೀರ
ಸಾರವಿಲ್ಲದ ಸಂಸಾರ ದೂರ ವಿ-
ದೂರ ಭಯ ಜರ್ಜರ ಕರುಣಾಕರ
ಸಾರ ಪೂರಿತ ಕಾರಣಾತ್ಮಕ
ಮಾರ ವೈರಿಯೆ ಧೀರ ಜಗದುದ್ಧಾರ ಎನಗೆ
ತೋರಿ ಶಕುತಿಯ ಸಾರ ಹೃದಯನೆ
ಗೌರಿ ವಲ್ಲಭನೆ 2

ಪರಮ ಪುರುಷ ಪಾರ್ವತೀಪ್ರಿಯ
ಶರಣ ಹೃದಯ ನಿರುತ ಪಾಲಿಪ ಶಂಭು
ಹರ ಪಿನಾಕಿ ಶಿವ ವರ ಚಿದಾನಂದ
ಗುರು ಅವಧೂತಾತ್ಮ ನಿರುಪಮ ನಿರ್ಮಾಯ
ನಿರವಯ ನಿರುತ ಪರಮ ಶಿವ ವಿಶ್ವಹೃದಯ
ಪರತರಾತ್ಮಕ ಪರಮ ಮಂಗಳ
ಪರಮ ಚೈತನ್ಯಾತ್ಮ ವಸ್ತುವೇ 3

43
ರೂಪ ತೋರೆನಗೆ ಬಗಳೆ ರೂಪ ತೋರೆನಗೆ

ರೂಪ ತೋರೆನಗೆ ಬಗಳೆ ರೂಪ ತೋರೆನಗೆ
ರೂಪದೊಳಗಲೆ ಮಂಗಳವಾದ ಪ

ಕಾಲ ಕಡಗ ಕಂಠಾಭರಣ ಕಂಕಣ ತೊಟ್ಟಿರುವ
ಲೋಲ ಕರ್ಣಾಭರಣದಿಂದಲಿ ಲಕ್ಷ್ಮಿಯ ರೂಪದ 1

ಒಡ್ಡಾಣವು ಚಿಂತಾಕನು ಸರಿಗೆ ವಂಕಿಯ ಧರಿಸಿರುವ
ದೊಡ್ಡ ರತ್ನಂಗಳ ಕೆತ್ತಿಹ ವೋಲೆಯನ್ನಿಟ್ಟಿರುವ 2

ಸತ್ಯ ರೂಪಿಣಿ ಬಗಳ ನಾಯಕಿ ಶರಖಡ್ಗಪಾಣಿ
ಸತ್ಯ ಚಿದಾನಂದ ಬ್ರಹ್ಮದವರ ಕುಟುಂಬಿನಿ 3

44
ವೀರೆಯ ನೋಡಿರೋ ಅಸುರರ ಮಾರಿಯ

ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋ
ಶೂರಾದಿ ಶೂರರ ದಾರಿಯ ಹಚ್ಚಿಸಿ
ಮುರಿದ ಮಹಿಷಾಸುರನ ತರಿದ ಪ

ರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದು
ಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆ
ಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದು
ಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ 1

ವರ ರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲು
ಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದು
ಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವ
ಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು 2

ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನ
ಹೊಳಕಿದ ನಾನಾ ಪರಿ ಆಯುಧದಿ ಮುಂದೆ ಧಿರುಧಿರು ಎಂದೆ
ಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯ
ಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ 3

ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆ
ಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದ
ಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿ
ಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ 4

ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆ
ಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದು
ಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿ
ಮೃಡ ಚಿದಾನಂದನು ತಾನಾದ ಬಗಳ ಕರುಣಿ ಭಕ್ತರ ಭರಣಿ 5

45
ಶ್ರೀ ಕಾಶಿವಿಶ್ವನಾಥ ಶಿಷ್ಟ ಜನ ಪ್ರೀತ

ಶ್ರೀ ಕಾಶಿವಿಶ್ವನಾಥ ಶಿಷ್ಟ ಜನ ಪ್ರೀತ
ಲೋಕ ರಕ್ಷಕ ವರದಾತ ಪ್ರಖ್ಯಾತ
ಏಕಾನೇಕ ವಿವೇಕ ಶರಧಿ ಶರ
ಪಾಕಾರಿ ಪ್ರಿಯ ಪಾಹಿಮಾಂ ಶಂಭೋ ಪ

ಕರಿಮುಖಪಿತ ಈಶ ಕಲಿವಿನಾಶಕ
ಕರಿಚರ್ಮ ವಸ್ತ್ರಧಾರಿ ಕದನ ಕಂಠೀರವ
ಉರಗಭೂಷಣ ದೇವ ಉತ್ತಮ ಭಾವ
ಕರದಿ ಬ್ರಹ್ಮಕಪಾಲ ಶಿರರುಂಡಮಾಲಧರ
ದುರಿತ ನಿವಾರ ಗುಣಸಾರ ಗಂಭೀರ
ಸಾರ ರಹಿತ ಸಂಸಾರ ವಿದೂರ
ಆರಾಧಿತ ಪ್ರಜ್ಞಾಂಬುಜಭವನುತ
ಸಾರಾಸಾರ ವಿಚಾರ ಪಿನಾಕಿ 1

ಶಶಿಯ ಶಿರದೊಳಿಟ್ಟ ಸುರಮುನಿ ಶ್ರೇಷ್ಠ
ಅಸಮ ಅಂಧಕಾಸುರ ಸಂಹಾರ
ಭಸಿತ ಮೈಯೊಳು ಪೂಸಿ ಭುಜಗನ ವಿಷತಾಳ್ದ
ವೃಷಭವಾಹನ ಲೋಲ ಉರ್ವಿಜನ ಪಾಲ
ಈಶ ಸುರೇಶ ಉಮೇಶ ಭೂತೇಶ
ಭಾಸುರ ಕೋಟಿ ಸವಿತ ಸಂಕಾಶ ವಿನು-
ತಸುರಜನ ಪಾಲಿತ ಶುಭಾಂಗ ಕಪರ್ದಿ 2

ಮೆರೆದೆ ಭುವನ ಈರೇಳು ಧರಿಸಿ ಕುಕ್ಷಿಯೊಳು
ನರರ ರಕ್ಷಸಿ ಪೊರೆದು ನಾದದೊಳ್ಬೆರೆದು
ಧರಣಿಯೊಳೆ ಪೆಸರ್ವಡೆದ ವರ ಕಾಶಿಪುರದ
ಮೆರವ ವಿಶ್ವೇಶದೇವ ಸುರನಿಕರ ವಂದಿತಹರ ಅಸುರ
ಹರ ಭವದೂರ ವೀರ ಚಿದಾನಂದ ಅವಧೂತ
ಕಾರಣ ನಿರ್ಮಲ ಚಾರುಪರಾತ್ಮಕ
ಮಾರ ಭಸ್ಮಾಂಕಿತ ಗೌರಿಯ ರಮಣ 3

46
ಸತ್ಯಕೆ ಶಿವನೀಗ ಮೆಚ್ಚುವ

ಸತ್ಯಕೆ ಶಿವನೀಗ ಮೆಚ್ಚುವ
ಸತ್ಯವಿಲ್ಲದಿರೆ ಶಿವನೆಂತು ಒಲಿವ ಪ

ಕೊಟ್ಟನಲ್ಲವೆ ಶಿಖಿಧ್ವಜ ಕೃಷ್ಣಗರ್ಧ ದೇಹವ
ಕೊಡನೆ ಶಿಬಿಯು ಕೊಯ್ದು ಇಂದ್ರಗೆ ಮಾಂಸವ
ಕೊಡನೆ ಚಂದ್ರಹಾಸ ಕೊರೆದು ಹೋಮ ಕಂಗವ
ಕೊಡನೆ ಕಪೋತ ಶಿಬಿಗೆ ಶರೀರವ 1

ಕೊಡನೆ ಭದ್ರಾಯು ತನ್ನ ಕುಲವಧುವ
ಕೊಡನೆ ದಧೀಚಿ ಕಲಹಕೆ ಬೆನ್ನೆಲುವ
ಕೊಡನೆ ಶಿರಿಯಾಳನೀಗ ತನ್ನ ಮಗನ
ಕೊಡನೆ ಕರ್ಣನೀಗ ಕರ್ಣ ಕುಂಡಲವ 2

ಈ ಪರಿಯ ನಿಷ್ಠೆಯಂತೋ ಆಶ್ಚರ್ಯವನೀಗ
ಪಾಪಲೇಪಕೆ ತಾನು ಹೊರತೀಗ ಆದವ
ಕಾ ಪಥಗಳನ್ನೆಲ್ಲಾ ಕಡೆಯ ದಾಟಿದವ
ಭೂಪ ಚಿದಾನಂದ ಬಗಳೆ ಯಾದವ 3

47
ಹರ ಹರ ಹರ ಹರ ಹರ ಹರ

ಹರ ಹರ ಹರ ಹರ ಹರ ಹರ
ಹರ ಹರ ಹರ ಹರ ಹರ ಹರ ಪ

ಹರ ಹರ ಹರ ಹರ ಹರ ಹರ
ಏಳತಲೆನ್ನಿ ಹರ ಹರ ಹರ ಹರ
ಬೀಳುತಲೆನ್ನಿ ಹರ ಹರ ಹರ ಹರ 1

ನಡೆಯುತಲೆನ್ನಿ ಹರ ಹರ ಹರ ಹರ
ನುಡಿಯುತಲೆನ್ನಿ ಹರ ಹರ ಹರ ಹರ 2

ಉಣ್ಣುತಲೆನ್ನಿ ಹರ ಹರ ಹರ ಹರ
ಉಡುವಾಗಲೆನ್ನಿ ಹರ ಹರ ಹರ ಹರ 3

ಮಲಗುತಲೆನ್ನಿ ಹರ ಹರ ಹರ ಹರ
ವಂದಿಸುತೆನ್ನಿ ಹರ ಹರ ಹರ ಹರ 4

ಚಿದಾನಂದನನು ಹರ ಹರ ಹರ ಹರ
ಚಿಂತಿಸೆ ಚಿಂತೆಯು ಹರ ಹರ ಹರ ಹರ 5

48
ಹೇಮಾಂಬರವನುಟ್ಟು ತತ್ವವ ಕೇಳುತ

ಹೇಮಾಂಬರವನುಟ್ಟು ತತ್ವವ ಕೇಳುತ ಕೈಮುಗಿದಿಹಳವಳಾರೆ
ಭೂಮಿಗೆ ಕರ್ತಾ ಬ್ರಹ್ಮಾಂಡ ಕೋಟಿಗೆ ತಾಯಿಯಾದ ಬಗಳೆ ವೀರೆ ಪ

ಹರಡಿಯ ತಿರುವುತ ಹೂಗಳ ಬೀರುತ
ಹರಿದಾಡುತಿಹಳವಳಾರೆ
ಪರಮ ಬಗಳೆ ಚಿದಾನಂದ ಗುರುವ ಕಾಯ್ದು
ಇರುಳು ಹಗಲು ಇಹವೀರೆ 1

ಮುಸಿ ಮುಸಿ ನಗುತಲಿ ಕರುಣೆಯ ತೋರುತ
ಹೊಸಬಳು ಇಹಳವಳಾರೇ
ಶಶಿ ಜೂಟೆ ಬಗಳ ಚಿದಾನಂದ ನೆಡಬಲ
ಅಸಿಯ ಹಿಡಿದು ಕಾವ ವೀರೆ 2

ಘುಲು ಘುಲು ನಡೆಯುತ ಢಾಲು ಕತ್ತಿಯ ಹಿಡಿದು
ಗಾಳಿ ಹಾಕುತಳಿಹಳವಳಾರೆ
ಖಳನಾಶ ಬಗಳೆ ಚಿದಾನಂದನಲಿ
ಬಳಿಕ ಮನ್ನಣೆ ಪಡೆದ ವೀರೆ 3

ಭಾಗ-2: ಗುರು ಸಂಕೀರ್ತನೆ

49
ಅರಿತ ಗುರುವಿನ ಪಾದ ಹುಡುಕಿ

ಅರಿತ ಗುರುವಿನ ಪಾದ ಹುಡುಕಿ
ಹೊಂದು ಮುಕ್ತಿಯಿಂದು
ಮರೆತ ಗುರುವಿನಸಂಗ ಕೇಡು
ಇಂದು ನರಕ ಮುಂದು ಪ

ಒಳ್ಳೆ ನಾವೆಯೊಳು ಕಲ್ಲು ಹಾಕಿಸಿಡು
ಅದು ದಾಟಿಸುವುದು
ಕಲ್ಲಿಗೆ ಕಲ್ಲು ಕಟ್ಟಿದರಲ್ಲೆ ಮುಳುಗುವುದು
ಅದು ಮುಂದಕೆ ಹೋಗದು 1

ಜಾರುವವನ ಕೈಯ ಹಿಡಿದರೆ ತಾನು
ಜಾರುವ ಮೇಲೆ ಜಾರಿ ಬೀಳುವ
ಘೋರ ಗುರುವಿನ ಸಂಗ ಹಿಡಿದು
ಭ್ರಷ್ಟನಾಗುವ ಮುಂದೆ ಕೆಟ್ಟು ಹೋಗುವ 2

ತಾನು ಮೂರ್ಖ ಅವನು ಮೂರ್ಖ
ಕೂಡಲೆಂದು ಮತ್ತೂ ಕೇಡು ಇಂದು
ಜ್ಞಾನಿ ಚಿದಾನಂದನ ಪಾದ ಹುಡುಕಿ
ಹೊಂದು ಮುಕ್ತಿ ಇಂದು 3

50
ಉಣ್ಣು ಉಣ್ಣು ಉಣ್ಣು ದೇವ ಉಣ್ಣು

ಉಣ್ಣು ಉಣ್ಣು ಉಣ್ಣು ದೇವ ಉಣ್ಣು ಪ
ಕಣ್ಣಲಿ ನೋಡು ದೇವ ಮತ್ತನ್ನಕೆ ತುಪ್ಪ ಹಾಕು
ಚೆನ್ನಾಗಿ ಕಲಸಿ ಬಾಯೊಳಗಿಕ್ಕು 1

ಎಡದಲೀಶ ಕಂಡ್ಯ ನೀ ದೃಢ ಸಮಾಧಿಯ ಪುರುಷ
ಬಿಡಬೇಡ ಬೇಡಿಕೋ ಪೂರ್ಣ
ನಿತ್ಯತೃಪ್ತನೆ ದೇವ ನೀ ನಿತ್ಯ ಪರವಸ್ತು
ನಿತ್ಯ ಚಿದಾನಂದ ತಾನಾದ ದೇವ 3

51
ಎಂಥಾ ದಯಾಕರನು ನೋಡೆ ಸದ್ಗುರುರಾಯ

ಎಂಥಾ ದಯಾಕರನು ನೋಡೆ ಸದ್ಗುರುರಾಯ
ಎಂಥಾ ದಯಾಕರನು ನೋಡೆ ಅಂತರಂಗದ
ತಾಪವ ಹರಿಸಿ ಅಂತರಾತ್ಮನ ತೋರಿದ ಪ

ಹಸಿವು ತೃಷೆ ಪರಿಹರಿಸಿ ನಾನಾಬಗೆ
ವಿಷಯವೆಲ್ಲವ ತೊರೆಸಿ
ಮುಸುಕ ನುಗಿದು ಮಾಯೆಯ
ಪರಂಜ್ಯೋತಿಯ ಬೆಳಗಿಸಿದನು ನೋಡೆ 1

ಸಂಸಾರದ ಬಹು ದುಃಖವ ಹರಿಸಿ
ಶಿಂಶುಮಾರ ಚಕ್ರವ ಹಂಸೋ
ಹಂಸೋಹಮೆಂದೆನ್ನನೇರಿಸಿ
ಸಂಶಯ ಹರಿಸಿದನೆ 2

ನಿರುಪಮ ನೀನೆ ಎಂದು ನಿರ್ಗುಣ
ಪರಮ ಪುರುಷನೆ ಬಂದು
ಗುರು ಚಿದಾನಂದ ಸಾಕ್ಷಾತ್ಕಾರ ನೀನೆಂದು
ಗುರು ನೀನೆ ನಿಜವೆಂದನೆ 3

52
ಎನಿಕೆ ಒಂದಾಗಲಿ ಗುರುವೆ ಎನಿಕೆ ಒಂದಾಗಲಿ

ಎನಿಕೆ ಒಂದಾಗಲಿ ಗುರುವೆ ಎನಿಕೆ ಒಂದಾಗಲಿ
ಎನಿಕೆ ಒಂದಾಗಲಿ ಯೋಚನೆ ಇದಾಗಲಿ
ಧ್ಯಾನ ಚಿದಾನಂದ ಗುರುವ ಧ್ಯಾನ ಮರೆಯದಂತೆ ಎನಗೆ ಪ

ಕಂಡವರು ಉಗುಳಲಿ ಕಾಲಲೆನ್ನ ಒದೆಯಲಿ
ಭಂಡ ಮನುಜನಿವನು ಎಂದು ಬಾಳುಗೇಡಿ ಎನಲಿ ಎನಗೆ 1

ಅನಾಯಾಸ ಬರಲಿ ಅಸಹ್ಯಿಸಿಕೊಳ್ಳುತಿರಲಿ
ಹೀನಮನುಜನಿವನು ಎಂದು ಬಾಳುಗೇಡಿ ಎನಲಿ ಎನಗೆ 2

ಮುಂದೆ ಕೆಡಹಿ ಬೀಳಲಿ ಮುಂಗೈ ಮೊಳಕಾಲ್ಮುರಿಯಲಿ
ಹಿಂದಣಿಂದ ಕಳ್ಳರು ಕಟ್ಟಿಯೆಹಿಮ್ಮಡ ಕಡಿಯಲೆನಗೆ 3

ತನುವು ಎಲ್ಲ ನೋಯಲಿ ತಲೆ ಬೇನೆಯು ಬರಲಿ
ಘನ ಕುರುವು ಕುತ್ತವು ಬಲಿದು ಘನವಾಗಿ ಇರಲಿ ಎನಗೆ 4

ಇಂತು ಎನಗಾಗಲಿ ಇದೇ ಎನಗಿರಲಿ
ಚಿಂತಾಯುತ ಚಿದಾನಂದನ ಚಿಂತೆ ಮರೆಯದಂತೆ ಎನಗೆ 5

53
ಎನ್ನ ಗುರುವು ಬಂದನೆ ಏನಂತ ಅಂದನೆ

ಎನ್ನ ಗುರುವು ಬಂದನೆ ಏನಂತ ಅಂದನೆ
ನಿನ್ನ ನೀನು ತಿಳಿದು ನೋಡೆ
ನೀನೆ ನಾನು ಎಂದನೆ ಪ

ಒತ್ತು ಮಡವನೆಂದನೆ ವಾಯು ಪೀಕೆಂದನೆ
ಎತ್ತು ಸ್ವರವನೆಂದನೆ ಏರು ಮಾಳಿಗೆಂದನೆ 1

ಕೆರೆಯ ಮುಳುಗು ಎಂದನೆ ಕಾಣುಜ್ಯೋತಿ ಎಂದನೆ
ಸುರಿವ ಸುಖವು ಎಂದನೆ ಸೂರೆ ಪ್ರಪಂಚೆಂದನೆ 2

ಹಗರಣದಿಂದಂದನೆ ಹಮ್ಮಿನಿಂದಂದನೆ
ಬಗೆಬಗೆಯಿಂ ಚಿದಾನಂದ ನೀನೇ ಬ್ರಹ್ಮ ಎಂದನೆ 3

54
ಏನ ಮಾಡಿ ತೀರುವೆ ಸದ್ಗುರುನಾಥಗೆ

ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆ
ನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ

ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹ
ನಾದಕ್ಕೆ ಬೇರಿಹ ನಾಮರೂಪವಳಿದಿಹ
ಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ 1

ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತ
ಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದು
ಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ 2

ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿ
ಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲ
ನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ 3

55
ಕಣ್ಣಿನೊಳು ಕಣ್ಣು ಕಂಡೆ ಕಾಣ ಬಾರದನು ಕಂಡೆ

ಕಣ್ಣಿನೊಳು ಕಣ್ಣು ಕಂಡೆ ಕಾಣ ಬಾರದನು ಕಂಡೆ
ಪನ್ನಗಧರನ ಕಂಡೆ ನೋಡಿ ಕಣ್ಣಿನೊಳು ಪ

ಝಗ ಝಗಿಸುವುದು ಕಂಡೆ ಜ್ಯೋತಿ ಪ್ರಕಾಶವ ಕಂಡೆ
ನಿಗಿ ನಿಗಿ ಕಿಚ್ಚು ಸುರಿಸುವುದು ಕಂಡೆ ನೋಡಿ ಕಣ್ಣಿನೊಳು 1

ಮುತ್ತು ಸುರಿವುದು ಕಂಡೆ ಮಲ್ಲಿಗೆ ಮಳೆಗರೆವುದು ಕಂಡೆ
ರತ್ನದ ಕಾಂತಿ ಕಂಡೆ ನೋಡಿ ಕಣ್ಣಿನೊಳು 2

ಸಾದು ಸತ್ಪುರುಷರ ಕಂಡೆ ಸಾಕ್ಷಾನ್ನಿರುಪಾಧಿಯ ಕಂಡೆ
ಗುರು ಚಿದಾನಂದನ ಕಂಡೆ ನೋಡಿ ಕಣ್ಣಿನೊಳು 3

56
ಕನಸ ಕಂಡೆ ನಿನ್ನಿನಿರುಳೊಳು ಕೇಳು

ಕನಸ ಕಂಡೆ ನಿನ್ನಿನಿರುಳೊಳು ಕೇಳು
ಕನಸಿನ ಸೊಗಸನು ತರಳೆ
ಚಿನುಮಯಾತ್ಮಕ ಚಿದಾನಂದ ಅವಧೂತ
ದಿನಕರ ಪ್ರಭಾತೀತ ಗುರುನಾಥ ಬಂದಿಹ ಪ

ಕಾಶ ಕೌಪೀನವನುಟ್ಟು ಚೆಲ್ವ
ಬಾಸುರ ಕುಂಡಲವಿಟ್ಟು
ಕೇಶದ ಜಡೆಗಳು ಥಳಥಳಿಸಲು ಸರ್ವ
ಭೂಷಿತನಾಗಿ ತನ್ನೆದುರಿಗೆ ನಿಂತಿಹ 1

ನೆಟ್ಟನೆ ನಡುಮನೆಯೊಳು ತಾನು
ನೆಟ್ಟನೆ ಬಂದು ಕುಳಿತಿಹನು
ಶಿಷ್ಟ ಮೂರುತಿ ತನ್ನ ಕಾಯಬೇಕು ಎಂದು
ಮುಟ್ಟಿ ಪಾದವ ನಾನು ಶರಣು ಮಾಡಲಿದ್ದೆ 2

ಸುಂದರ ಕಳೆಯುಳ್ಳ ಸ್ವಾಮಿ
ತಾನು ಸಿಂಧು ಕೃಪಾಕರನಾಮಿ
ಎಂದಡಿಗಡಿಗೆ ಸಾಷ್ಟಾಂಗವೆರಗಿ
ನಿಂದು ಪೂಜಿಸಿ ಕಣ್ತುಂಬ ನೋಡಿನಲಿವ 3

ನಾನಾ ಪೂಜೆಯನೆಲ್ಲವ ಮಾಡಿ ಗುರುಧ್ಯಾನದಿ
ನಾನೋಲಾಡಿ ಮಾನವನಾಗಿ
ನಾನು ನಿಂದಿರಲೆನ್ನ ಕಿವಿಯೊಳು
ನಾನು ನೀಗಿತ್ತೆಂದು ಉಪದೇಶ ನೀಡುವ 4

ಈಪರಿ ಕನಸನು ಕಂಡು ಎಲ್ಲ
ತಾಪವು ಪರಿಹಾರಗೊಂಡು
ಭೂಪ ಚಿದಾನಂದ ಅವಧೂತ ತಾನಾದ
ರೂಪಾಗಿ ಬೆಳಗಿರೆ ಬೆಳಗಿರೆ ಬೆಳ್ಳನೆ ಬೆಳಕಿತ್ತು 5

57
ಕೊಡು ಬೇಡುವೆನೊಂದ ಚಿದಾನಂದ

ಕೊಡು ಬೇಡುವೆನೊಂದ ಚಿದಾನಂದ
ಕೊಡು ಬೇಡುವೆನೊಂದ
ಕೊಡು ಬೇಡುವೆನೊಂದ
ಕಡೆ ಹಾಯ್ದು ಹೋಗಿ ಮೆಲ್ಲಡಿಯಾದ ನಿಮ್ಮ
ಪಾದದಡಿಯೊಳಡಗುವುದು ಪ

ನಿರ್ಮಳ ನಿತ್ಯ ನಿರಂಜನ ಸ್ವರ್ಮಣಿ ಸುಸಾತ್ವಿಕ
ವರ್ಮ ಧರ್ಮ ಕರ್ಮ ನಿರ್ಮಾಯವಾದ ಷ-
ಡೂರ್ಮೆ ವಿರಹಿತೆಂಬ ಪೆರ್ಮೆಯೊಳಡಗುವುದ 1

ವಿಶ್ವಾತ್ಮ ವಿಶ್ವಾಧಾರ ವಿಶ್ವಹರ ವಿಶ್ವ
ವಿಶ್ವದಾಕಾರ ಸ್ವಸ್ವ ನಿಸ್ವನದ ಸ್ವಸ್ವಪೂರಿತ ಮ-
ಹಾಸ್ವಯಂ ಜ್ಯೋತಿಯೆ ಭಾಸ್ವ ಮೂರುತಿ ಈಗ 2

ಶತಕೋಟಿ ಸೂರ್ಯರಾಕಾರ ಶತಾಶತ
ಶತವಿಂದು ಪ್ರಭಾವಕಾರ
ಸ್ತುತಿಗೆ ಮೀರಿದ ದೊರೆಯೋಗಿ ಚಿದಾನಂದ
ಪತಿಯ ಪಾದಪದ್ಮನುತಿಸಿ ಕೊಡುವುದೀಗ 3

58
ಗುರು ಹೊಂದಿದವನೀಗ ಎಂದಿಗೂ ಕೆಡನು

ಗುರು ಹೊಂದಿದವನೀಗ ಎಂದಿಗೂ ಕೆಡನು
ಮರಳಿ ಹುಟ್ಟಿದರೇನು ಗುರುವು ಕಾಯುವನು ಪ

ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆ
ಬರಿಯ ಪ್ರಾಪಂಚದ ನಡೆಯನೆ ನಡೆದು
ಮರೆತೆಯಾದರೇನು ಗುರು ಕರುಣ ತಾನದುವೆ
ನರಕಕ್ಕೆ ಕಳುಹದೋ ಯಮನ ಸೇರಿಸದೋ 1

ತನ್ನ ಅವಗುಣದಿ ಜನ್ಮಗಳ ಸೇರಿದರೇನು
ಅನ್ಯಕೆ ಎಳಸದದು ಸೋಂಕಿನಲಿ ಮನವು
ಚೆನ್ನಾಗಿಯೇ ಗುರುದ್ವಾರವನು ಕಾದಿಹನು
ಭಿನ್ನಿಸದೆ ಪರತತ್ವ ಬೋಧೆ ಹೇಳುವನು 2

ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿ
ಹುಟ್ಟುತಿಹ ಹಂದಿ ಪಶುವಾಗಿ ತಾನು
ಘಟ್ಟಾಗಿ ನರಜನ್ಮ ಧರಿಸುತ್ತ ಕಡೆಯಲಿ
ಶಿಷ್ಟ ಚಿದಾನಂದ ಬಗಳೆಯನು ಕೂಡುವನು 3

59
ಗುರುಗಳಿಗೆ ಧೂಪ ಗುರುಗಣಗಳಿಗೆ ಧೂಪ

ಗುರುಗಳಿಗೆ ಧೂಪ ಗುರುಗಣಗಳಿಗೆ ಧೂಪ
ಗುರುಪಾದಕೆ ನಿತ್ಯ ನಿತ್ಯದಲಿ ಧೂಪ ಪ
ನಾನದಾರಿಹೆನೆಂದು ತಿಳಿದವಗೆ ಧೂಪ
ನಾನು ಆತ್ಮವು ಎಂದು ಕಂಡವಗೆ ಧೂಪ
ನಾನಾ ಜೀವ ಭ್ರಾಂತಿಯಳಿದವಗೆ ಧೂಪ
ತಾನೆ ತಾನಾಗಿಹೆನೆಂದವಗೆ ಧೂಪ 1

ಸಂಸಾರದೊಳು ಇದ್ದು ಇಲ್ಲದವನಿಗೆ ಧೂಪ
ಸಂಸಾರ ಸಂತೆಂದು ಕಂಡವಗೆ ಧೂಪ
ಸಂಸಾರ ಲೇಪ ಅಂಟದವನಿಗೆ ಧೂಪ
ಸಂಸಾರದೊಳು ಮುಕ್ತನಾದವಗೆ ಧೂಪ 2

ಸೂರ್ಯ ಚಂದ್ರ ಸ್ವರದಿ ನಡೆದವಗೆ ಧೂಪ
ಆರು ಚಕ್ರದಿ ನಡೆದವಗೆ ಧೂಪ
ಭೋರೆನಿಪ ಓಂಕಾರ ಕೇಳ್ದವಗೆ ಧೂಪ
ಧೀರ ಚಿದಾನಂದ ಗುರುವಾದವಗೆ ಧೂಪ 3

60
ಗುರುಗಳೆಂಬರೆ ಇವರು ಸತ್ಯವು

ಗುರುಗಳೆಂಬರೆ ಇವರು ಸತ್ಯವು
ಗುರುಗಳೆಂಬರೆ ಇವರು ಸತ್ಯವು ಪ

ಅಣುರೇಣು ತೃಣಕಾಷ್ಠ ಬ್ರಹ್ಮ ಹೇಳುವರು
ಗುಣಗಳ ಹುಡುಕರು ಪ್ರಕೃತಿಯ 1

ಜನನ ಮರಣಗಳ ಕಡಿದು ಹಾಕುವರು
ಜನನಕ್ಕೆ ಬರಗೊಡರು ಜನಗಳ 2

ನರನನು ವೈದು ಹರನ ಮಾಡುವರು
ಗುರು ಚಿದಾನಂದರಹರು ನಿಜದಲಿ 3

61
ಗುರುವ ನೆನೆದರೆ ಸಾಲದೆ ಚಿದಾನಂದ

ಗುರುವ ನೆನೆದರೆ ಸಾಲದೆ ಚಿದಾನಂದ
ಗುರುವ ನೆನೆದರೆ ಸಾಲದೆ
ಹಿರಿದು ಸಂಸಾರಗಳು ಮಾಡುತ್ತೊಂದು
ದಿನಕ್ಕೊಮ್ಮೆ ಗುರುವ ನೆನೆದರೆ ಸಾಲದೆ ಪ

ಜುಟ್ಟು ಜನಿವಾರ ಬಿಸುಟು ತಾವೀಗ
ಉಟ್ಟೊಂದು ಕೌಪೀನವ
ಕಟ್ಟಿ ಕಾಷಾಯ ಕಮಂಡಲು ದಂಡ ಹಿಡಿದು
ದಿಟ್ಟ ಸಂನ್ಯಾಸ ಪಡೆಯುವುದೇಕೆ 1

ಅಡವಿ ಅರಣ್ಯವ ಸೇರಿ ಅಲ್ಲಿದ್ದ
ಅಡವಿ ತೊಪ್ಪಲನೆ ತಿಂದು
ಗಿಡ ಮರಗಳಲಿ ಮಲಗಿ ಮಳೆ ಛಳಿಗೆ ಕಂ
ಗೆಡೆದೆ ಕಡು ತಪವ ಮಾಡುವುದೇಕೆ 2

ಉಡುದಾರಗಳನೆ ಹರಿದು ತಾವೀಗ
ಸುಡುಗಾಡಿನಲಿಹ ಬೂದಿಯನು
ಬಿಡದೆ ಲೇಪಿಸಿ ಮೈಗೆ ದಿಗಂಬರ ತಾನಾಗಿ
ಕಡು ಚರಿಯ ಬೇಡುವುದೇಕೆ 3

ಕಾವಿ ವಸ್ತ್ರಗಳನುಟ್ಟು ಮೈಗೆಲ್ಲ
ತಾ ವಿಭೂತಿಯ ಧರಿಸಿ ಕಂಠದಲಿ
ತೀವಿ ರುದ್ರಾಕ್ಷಿ ಶಿವಶಿವಾಯೆಂದು
ತಾವು ಗೊಣಗುವುದೇಕೆ 4

ಜ್ಞಾನಿಗೀಯವಸ್ಥೆಯಾ ವೇಷಗಳು ತಾವು
ಇವಗೇನು ಇಲ್ಲಿಲ್ಲ ತಾನೆ ಚಿದಾನಂದ ಗುರು
ತಾನೆ ತಾನೇ ಎಂದು ಭಾವಿಸುತಲಿ
ತೀವಿ ತನ್ನನೇ ಮರೆತಿರಲದೇಕೆ 5

62
ಗುರುವನು ಸ್ಪರ್ಶಿಸಿ ಗುರುಮೂರ್ತಿಯಾದೆನು

ಗುರುವನು ಸ್ಪರ್ಶಿಸಿ ಗುರುಮೂರ್ತಿಯಾದೆನು
ಗುರುವನು ಸ್ಪರ್ಶಿಸಿ ಪ

ಕ್ಷೀರದಿ ಕ್ಷೀರವು ಕೂಡಿ ಕ್ಷೀರವೇ ಆದಂತೆ
ಪಾರ ಪಾರವೆ ಕೂಡಿ ಪಾರವೇ ಆದಂತೆ 1

ಜ್ಯೋತಿ ಜ್ಯೋತಿಯ ಕೂಡಿ ಜ್ಯೋತಿಯೇ ಆದಂತೆ
ನೀತಿ ನೀತಿಯೆ ಕೂಡಿ ನೀತಿಯೇ ಆದಂತೆ 2

ಮಂಗಳವೆನಿಸುವ ಚಿದಾನಂದ ಬ್ರಹ್ಮದಿ
ಮಂಗಳದೊಳು ಕೂಡಿ ಮಂಗಳವಾದೆನು 3

63
ಗುರುವು ಬಂದ ನಮ್ಮ ಸಿರಿಯು ಬಂದ

ಗುರುವು ಬಂದ ನಮ್ಮ ಸಿರಿಯು ಬಂದ
ಹರಿ ಹರ ಬ್ರಹ್ಮರ ದೊರೆರಾಯ ಬಂದ ಪ

ಸರ್ವರೂಪಕ ಬಂದ
ಸರ್ವಾಂತರ್ಯಾಮಿ ಬಂದ
ಸರ್ವ ಚೇತನ ಬಂದ
ಸರ್ವಸಾಕ್ಷಿ ಬಂದ 1

ಆನಂದಾತ್ಮಕ ಬಂದ ಅಜ
ಅನಾದಿಯು ಬಂದ
ಸ್ವಾನಂದ ಶರಧಿ ಬಂದ
ಸುಖರೂಪ ಬಂದ 2

ಅಂತರಾತ್ಮಕ ಬಂದ
ಅವ್ಯಕ್ತಾಚಲ ಬಂದ
ಚಿಂತಾಮಣಿಯೆ ಬಂದ
ಚಿದಾನಂದ ಬಂದ 3

64
ಗುರುವಿನ ಕರುಣವ ನಾನೇನ ಹೇಳಲಿ

ಗುರುವಿನ ಕರುಣವ ನಾನೇನ ಹೇಳಲಿ
ಗುರುವಿನ ಕರುಣವ ಪ

ಇಟ್ಟನು ಕೊಟ್ಟನು ಉಪದೇಶ
ಸೃಷ್ಟಿಯೆ ನೀನೆಂದ ನಾನೇನ ಹೇಳಲಿ 1

ಮೂಗಿನ ಕೊನೆಯಲ್ಲಿ ಮಾಡಿದ ಮನೆಯನ್ನು
ಕೂಗಿಸಿದನು ನಾದ ನಾನೇನು ಹೇಳಲಿ 2

ಶರೀರನ ಮರೆಯಿಸಿ ದೊರೆಯು ಚಿದಾನಂದ
ಗುರುವನೆ ಮಾಡಿದ ನಾನೇನ ಹೇಳಲಿ 3

65
ಗುರುವಿನ ಗುಣಂಗಳ ನೆನೆವೆ ಸಿದ್ದೇಶ ನಾನು

ಗುರುವಿನ ಗುಣಂಗಳ ನೆನೆವೆ ಸಿದ್ಧೇಶ ನಾನು
ಗುರುವಿನ ಪಾದಂಗಳ ನೆನೆವೆ ಸಿದ್ಧೇಶ ಪ

ಸುಖವು ಬಂದರೆ ಹಿಗ್ಗದವರು ಸಿದ್ಧೇಶ ನಾನಾ
ದುಃಖವು ಬಂದರೆ ಬಗ್ಗದವರು ಸಿದ್ಧೇಶ
ಅಖಿಳವೆಲ್ಲವ ಬ್ರಹ್ಮವೆಂದರು ಸಿದ್ಧೇಶ ಇವರು
ಮುಕುತ ಗಣಂಗಳು ಈಗ ಸಿದ್ಧೇಶ 1

ಮಾನ ಹಚ್ಚಿಕೊಳ್ಳದವರು ಸಿದ್ಧೇಶ ಅಭಿ
ಮಾನಗಳು ನೀಗಿದವರು ಸಿದ್ಧೇಶ
ತಾನೆ ಎಂದು ತಿಳಿದವರು ಸಿದ್ಧೇಶ ಅವರು
ಜ್ಞಾನ ಮುಕ್ತಗಣಂಗಳು ಸಿದ್ಧೇಶ 2

ಸಂಸಾರವಿದ್ದರೆ ಬಾಧಕವಿಲ್ಲದವರು ಸಿದ್ಧೇಶ
ಸಿದ್ಧ ಚಿದಾನಂದರಿಹರು ಸಿದ್ಧೇಶ ಇವರು
ಶುದ್ಧ ಮುಕ್ತ ಗಣಂಗಳು ಸಿದ್ಧೇಶ 3

66
ಗುರುವಿನ ನೆನೆದವನೆಲ್ಲರಿಗಧಿಕ

ಗುರುವಿನ ನೆನೆದವನೆಲ್ಲರಿಗಧಿಕ
ಗುರುವಿನ ನೆನೆದವನೇ ಪ

ನರನಿಂದಧಿಕ ನರಪತಿಗಧಿಕ
ಸುರರಿಂದಧಿಕ ಸುರನಾಥಗಧಿಕ
ವರಮುನಿಗಧಿಕ ವಸುಧೆಗಳಿಗಧಿಕ
ಗುರುಪಾದವ ನಿತ್ಯ ನೆನೆದವನಯ್ಯ 1

ಧರೆಗಿಂತಲಧಿಕ ಗಿರಿಗಿಂತಲಧಿಕ
ಹರಿಗಿಂತಲಧಿಕ ಹರಗಿಂತಲಧಿಕ
ಪರಕಿಂತಲಧಿಕ ಪರತರಕಧಿಕ
ಗುರುಪಾದವ ನಿತ್ಯ ನೆನೆದವನಯ್ಯ 2

ಆವವರಧಿಕ ಅವರಿಗಿಂತಧಿಕ
ಭಾವಶುದ್ಧಿಯಿಂದ ಗುರುವಿನ
ಸಾವಧಾನದಿ ನಿತ್ಯ ಮನದಲಿ ನೆನೆದವ
ದೇವ ಚಿದಾನಂದ ಗುರುನಾಥನಯ್ಯ 3

67
ಗುರುವು ಗುರುವು ಎಂದು ಜಗದೊಳಗಿಹರು

ಗುರುವು ಗುರುವು ಎಂದು ಜಗದೊಳಗಿಹರು
ಗುರುವು ಅದ್ಯಾತರ ಗುರುವು
ನರನನು ತಿಳುಹಿಯೆ ಹರನನು ಮಾಡುವ
ಗುರುವು ಆತನೆ ಸದ್ಗುರುವು ಪ

ಜ್ಞಾನವನರುಹಿ ಅಜ್ಞಾನವ ಹರಿಸುವ
ಜ್ಞಾನಿಯಾದವ ಗುರುವು
ಏನೇನೋ ಭ್ರಾಂತಿಯದೆಲ್ಲವ ನೀಗಿ ನಿ-
ಧಾನ ಮಾಡಿದನಾತ ಗುರುವು
ನೀನೀಗ ನಾನೆಂದು ಸಂಶಯ ಬಿಡಿಸಿ
ಸನ್ಮಾನ ಮಾಡಿದನಾತ ಗುರುವು 1

ಯಮ ನಿಯಮಾಸನ ಎಲ್ಲವನರುಹಿಯೆ
ಎಚ್ಚರಿಸಿದಾತನೆ ಗುರುವು
ಸಮರಸವಾಯು ಮನವ ಮಾಡಿ
ಕುಂಭಕಮರಿಸಿದಾತನೆ ಗುರುವು
ಘುಮು ಘುಮು ಘುಮು ಎಂಬ ಘಂಟಾ
ಘೋಷವನ್ನೆಬ್ಬಿಸಿ ಅನುವುಮಾಡಿದವ ಗುರುವು
ದ್ಯುಮಣಿಕೋಟಿ ಕಳೆದೃಷ್ಟಿಗೆ ತುಂಬಿಸಿ
ದೃಢವ ಮಾಡಿದನಾತನೆ ಗುರುವು 2

ದೃಷ್ಟಿಯ ನಿಟ್ಟು ಖೇಚರಿ ಮುದ್ರೆ ನಿಲಿಸಿ
ದಯ ಮಾಡಿದಾತನೆ ಗುರುವು
ಕಟ್ಟಳಿಲ್ಲದ ತೇಜ ಖವಖವ ನಗಿಸಿಯೆ
ದಿಟ್ಟ ಮಾಡಿದನಾತ ಗುರುವು
ಮುಟ್ಟಿ ತುಂಬಿದ ಬೆಳದಿಂಗಳ ಖಂಡದಿ
ಮುಳಿಗಿಸಿದಾತನೆ ಗುರುವು
ಶಿಷ್ಟ ಚಿದಾನಂದ ಸದ್ಗುರುವನಮಾಡಿ
ಸಾಕ್ಷಿ ಮಾಡಿದನಾತ ಗುರುವು 3

68
ಗುರುವೇ ಗುರುವೇ ಗುರು ಗುರುವೇ ಮಹಾ

ಗುರುವೇ ಗುರುವೇ ಗುರು ಗುರುವೇ ಮಹಾ
ಗುರು ಗುರುವೇ ಶ್ರೀ ಗುರುವೇ ಪ

ನಿತ್ಯತೃಪ್ತ ನಿರಾಮಯ ನಿರಂಜನ ನಿಷ್ಕಲಂಕ ಗುರುವೇ
ಪ್ರತ್ಯಾಗಾತ್ಮ ಪರಾತ್ಪರಾತ್ಪರ ಪ್ರತ್ಯಯರಹಿತ ಗುರುವೇ 1

ನಿರ್ವಿಕಲ್ಪ ನಿರಾಕಾರ ನಿರ್ಗುಣ ನಿರ್ಮಾಯನೇ ಗುರುವೇ
ನಿರ್ವಿಕಾರ ನಿದ್ರ್ವಂದ್ವ ನಿಜಾಕಾರ ನಿರುಪಮಾತ್ಮ ಗುರುವೇ 2

ಪೂಜ್ಯಮಾನ ಸುರಾಸುರ ಸಿದ್ಧಾಯಿಂ ಪೂಜಾರ್ಪಿತ ಗುರುವೇ
ಈ ಜಗದೇಕ ನಾಥನೆ ಚಿದಾನಂದ ತೇಜಃಪುಂಜ ಗುರುವೇ 3

69
ತನ್ನ ತಿಳಿದು ತಾನಾದಂಥ ಗುರುವಿನ ಪಾದವ

ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದು
ತನ್ನನರಿಯದ ಗುರುವ ಹೊಂದಬೇಡೆಂದೆಂದು ಪ

ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋ
ಅನ್ಯ ದೇವರೆನೆಂದೆನ್ನುವನ ಹಾದಿ ಹೋಗಬೇಡೋ 1

ಕೋಟಿರವಿ ತೇಜವ ಕಣ್ಣಲಿ ನೋಡು
ಬೂಟಿಕ ಕಾಯಕಗಳ ದೂರಮಾಡು 2

ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನು
ಊಹಿಸುವ ಬೇರೆ ಗುರುವನು ಉತ್ತಮ ಅವನು 3

ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವ
ಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4

ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖಿ
ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5

70
ಗುರುವೇ ನಿತ್ಯ ಗುರುವೇ ನಿತ್ಯನು

ಗುರುವೇ ನಿತ್ಯ ಗುರುವೇ ನಿತ್ಯನು
ಗುರುವೇ ನಿತ್ಯನು ಸತ್ಯ ಪ

ಓದು ಓದು ಅದು ಯಾತರ ಓದು
ಓದು ಅಧ್ಯಾತ್ಮವ ಓದು
ಬೋಧ ಬೋಧ ತಾನ್ಯಾತರ ಬೋಧವು
ಬೋಧವೆ ಆತ್ಮದ ಬೋಧ 1

ಬುದ್ಧಿ ಬುದ್ಧಿ ತಾನ್ಯಾತರ ಬುದ್ಧಿಯು
ಬುದ್ಧಿಯು ನಿಶ್ಚಯಂ ಬುದ್ಧಿ
ಸಿದ್ಧಿ ಸಿದ್ಧಿ ತಾನ್ಯಾತರ ಸಿದ್ಧಿಯು
ಸಿದ್ಧಿಯು ಜ್ಞಾನದ ಸಿದ್ಧಿ 2

ಶಾಂತ ಶಾಂತ ತಾನ್ಯಾತರ
ಶಾಂತವು ಎಲ್ಲಕೆ ನಿಂತುದೆ ಶಾಂತ
ಭ್ರಾಂತುಭ್ರಾಂತು ತಾನ್ಯಾತರ
ಭ್ರಾಂತದು ಗುರುವಿನಲ್ಲಿದ್ದುದೆ ಭ್ರಾಂತು 3

ಧ್ಯಾನ ಧ್ಯಾನ ತಾನ್ಯಾತರ ಧ್ಯಾನವು
ಧ್ಯಾನವು ತನ್ನದೆ ಧ್ಯಾನ
ಮೌನ ಮೌನ ಅದು ಯಾತರ ಮೌನವು
ಮೌನವು ತುರ್ಯದೆ ಮೌನ 4

ಭಕ್ತಿ ಭಕ್ತಿ ತಾನ್ಯಾತರ ಭಕ್ತಿಯು
ಮುಕ್ತಿಯು ನಿಜವಹ ಭಕ್ತಿ
ಮುಕ್ತಿ ಮುಕ್ತಿ ತಾನ್ಯಾತರ ಮುಕ್ತಿಯು
ಮುಕ್ತಿ ಚಿದಾನಂದ ಮುಕ್ತಿ 5

71
ಗುರುವೆ ನಿನ್ನಯ ದಾಸನಾದೆ ಎನ್ನ

ಗುರುವೆ ನಿನ್ನಯ ದಾಸನಾದೆ ಎನ್ನ
ಕರುಣದಿ ಪೊರೆವೊಡೆ ನಾನೇ ನೀನಾದೆ ಪ

ನಿರ್ಮಳ ಕಾವಿಯನುಟ್ಟು ಭೇದ
ಮರ್ಮವೆನಿಪ ರುದ್ರಾಕ್ಷಿಯ ತೊಟ್ಟು
ಧರ್ಮ ಕುಂಡಲವೆಂಬೊದಿಟ್ಟು ಹರ
ಕರ್ಮ ಭಸ್ಮವ ಸ್ಥಾನ ಸ್ಥಾನಕೆ ಇಟ್ಟು 1

ಸ್ವಸ್ಥ ಸುಸ್ಥಳದಲ್ಲಿ ಕುಳಿತು ಗುರು
ವಿಸ್ತರಿಸಿದ ಗೋಪ್ಯವ ಮಾಡ ಕಲಿತು
ನಾಸ್ತಿ ಎಂಬುದ ನಾ ಮರೆತು ಪರ
ವಸ್ತುನೀ ನಿಜವೆ ಎಂಬುದ ನಾನರಿತು 2

ತಾನೆಂದು ಚಿಂತಿಸಲ್ಯಾಕೆ ಚಿ-
ದಾನಂದ ಗುರುವೆ ಎದುರಲಿರಲಿಕೆ
ಧ್ಯಾನ ಮೌನಗಳವು ಯಾಕೆ ನಾನು
ನೀನೆ ಎಂಬುದ ಮನಗಂಡಿರಲೇಕೆ 3

72
ಗುರುವೇ ಮಹಾಗುರುವೇ ಚಿದಾನಂದ

ಗುರುವೇ ಮಹಾಗುರುವೇ ಚಿದಾನಂದ
ಗುರುವೇ ಕೊಡಿರಿ ಮತಿ ನಮಗೆ ಪ

ಅದ್ದಿ ಪಾಪದೊಳು ಸಮೃದ್ಧಿ ನನ್ನದೆಂಬ ಹಮ್ಮು
ಹೊದ್ದಿ ತುಂಬಿಹುದು ನನಗೆ ದು-
ರ್ಬುದ್ಧಿ ನಮಗೆ ಕೊಡಿರಿ ನೀವು
ಸದ್ಬುದ್ಧಿ ಮಹಾಗುರುವೇ 1

ಅಂತೇ ಸಂಸಾರವು ಸತ್ಯಂತೆ ಇದನು ನಂಬುವನು
ಕತ್ಯಂತೆ ಮಾಡುವುದೆಲ್ಲ ಭ್ರಾಂತಂತೆ ನಮಗೆ ಕೊಡಿರಿ ಗುರು
ಚಿಂತೆ ಮಹಾಗುರುವೆ 2

ಮಾನ ಉಳಿವುದಿಲ್ಲ ನಿದಾನಾ ಸಂಸಾರವೆ ಬಲು
ಹೀನ ತೊಳಲಿದೆ ನಾನು ಜನ್ಮನಾನಾ ನಮಗೆ ಕೊಡಿರಿ ಸು-
ಜ್ಞಾನ ಮಹಾಗುರುವೇ 3

ಶಕ್ತಿ ಆದರೆಯು ವಿರಕ್ತಿ ಬ್ರಹ್ಮದಲಿ ಆ-
ಸಕ್ತಿ ಕೊಡುವುದದು ಬಲುಭಕ್ತಿ ನಮಗೆ ಕೊಡಿರಿ ನೀವು
ಮುಕ್ತಿ ಮಹಾಗುರುವೇ 4

ಹಾರಿ ಭವದಾರಣ್ಯ ಕುಠಾರಿ ತೋರಿಸುವ ನಿಜ
ದಾರಿ ಸಚ್ಚಿದಾನಂದ ತೋರಿ ನಮಗೆ ಹಿಡಿದು ಕೊ-
ಡಿರಿ ಮಹಾಗುರುವೆ 5

73
ಜಯದೇವ ಜಯದೇವ ಜಯ ಚಿದಾನಂದ

ಜಯದೇವ ಜಯದೇವ ಜಯ ಚಿದಾನಂದ
ಜಯ ಜಯತು ಜಯ ಜಯತು ಜಯ ನಿತ್ಯಾನಂದ ಪ

ದೃಶ್ಯಾ ದೃಶ್ಯವಿದೂರ ದೂರ ಪರತತ್ವಾ
ಮಿಕ್ಕು ಮೀರಿಹ ತೇಜ ತೇಜ ಮಹತ್ವಾ
ಪೊಕ್ಕು ನೋಡಿಯೆ ಕಂಡು ನಿನ್ನ ನಿಜತ್ವ
ನಕ್ಕು ನಿಜದಲಿ ಮಾಳ್ವೆ ಪಂಚೋಪಚಾರತ್ವ 1

ತಾನೆ ತಾನಾದ ಸುವಸ್ತು ನಿರ್ಲೇಪ
ಧ್ಯಾನ ಮೌನ ಸಮಾಧಿಗೆ ತೋರ್ವರೂಪ
ಏನ ಬಣ್ಣಿಸುವೆನು ಈ ಜಗವ್ಯಾಪಾ
ನಾನರ್ಪಿಸುವೆ ನಿನಗೆ ಗಂಧಾನುಲೇಪ 2

ನಿರ್ಗುಣಾಷ್ಟಾಂಗ ಯೋಗಗಳ ಸಾಗಿಸುವೆ
ಧರ್ಮದ ದುರಿತ ಕುಠಾರ ನೀನೆನಿಪೆ
ಭರ್ಗಾ ಶ್ರೀವತ್ಸ ವೀಥಿಗಳ ರಕ್ಷಿಸುವೆ
ಸರ್ಗಾದಿ ಮಹಾಪುಷ್ಪ ನಿನಗೆ ನಾನರ್ಪಿಸುವೆ 3

ವಾಸನಕ್ಷಯದ ನಿರ್ವಾಸನ ಸ್ಫೂರ್ತಿ
ಭಾಸಮಾನದಿ ತೋರುತಿದೆ ನಿನ್ನ ವಾರ್ತೆ
ಈಶ ತಾಪಸರುಗಳು ನಿನ್ನ ಮೂರ್ತಿ
ದೇಶಿಕೋತ್ತಮ ನಿನಗರ್ಪಿಸುವೆ ಧೂಪಾರತಿ 4

ವಿಶ್ವಾತ್ಮ ವಿಶ್ವ ವಿಶ್ವಾಧೀಶನಾಥ
ವಿಶ್ವ ನಾಟಕ ವಿಶ್ವ ಸೂತ್ರ ವಿಖ್ಯಾತ
ವಿಶ್ವ ಪೂರಿತ ತಂತ್ರ ವಿಶ್ವಾತೀತ
ವಿಶ್ವ ಜ್ಯೋತಿಯನರ್ಪಿಸುವೆ ಗುರುನಾಥ 5

ನಿತ್ಯ ಸಂತುಷ್ಟ ಶಿರೋಭಾಗ
ಅತ್ಯಂತ ಆನಂದವಹ ಸದಾಭೋಗ
ಪ್ರತ್ಯಗಾತುಮತರ ಪುಷ್ಪಪರಾಗ
ಅರ್ಥಿಯಲಿ ಅರ್ಪಿಸುವೆ ನೈವೇದ್ಯ ನಾನೀಗ 6

ಇಂತುಪಚಾರಪಂಚದ ಪೂಜೆಯನೀಗ
ಅಂತರಂಗದಿ ಚಿದಾನಂದನಿಗೆ ಈಗ
ಸಂತಸದಿಂದ ನಾ ಮಾಡುತಲಾಗ
ಎಂತು ಎನಲಿ ತಾನೇ ತಾನಾದ ಬೇಗ 7

74
ಜಾಗುರೇ ಯೋಗೀಶೇ ಭಲರೇ

ಜಾಗುರೇ ಯೋಗೀಶೇ ಭಲರೇ
ಜಾಗುರೇ ಯೋಗೀಶೇ
ಜಾಗುರೇ ಯೋಗೀ ಚತುರ್ಗುಣ ಪೋಗಿ
ರಾಗವ ನೀಗಿ ತಾನೆ ತಾನಾಗಿ ಪ

ಆಶಾವರ್ಜಿತೇ ಬಹಳಾಯಾಸ ನಿರ್ಜಿತೇ
ವಾಸನನಾದಂ ಮಹಮತ್ತಾದಂ
ಭಾಸುರತಾದಂ ಭವನೀಜಾದಂ 1

ಕರ್ಮ ವಿದಾರಿತೇ ಬಹಳ ವರ್ಮನಿಸ್ಸಾರಿತೇ
ನಿರ್ಮಳಾತ್ಮಂ ನಿಷ್ಕಳಾತ್ಮಂ ಸ್ವಪೂರ್ಣತ್ಮಂ
ಸಮತೇಜಾತ್ಮಂ 2

ವಾದಾ ದೂರಿತೇ ಬಹಳ ವಿ
ವಾದೋತ್ತಾರಿತೇ ಸದಾನಂದಂ ಸಹಜಾನಂದಂ
ಚಿದಾನಂದ ಗುರು ತಾನಾದಂ 3

75
ದೊರಕಿಸಬಹುದು ತಂದೆ ತಾಯಿಗಳ ಜನ್ಮ ಜನ್ಮದಲಿ

ದೊರಕಿಸಬಹುದು ತಂದೆ ತಾಯಿಗಳ ಜನ್ಮ ಜನ್ಮದಲಿ
ದೊರಕಿಸಲಾಗದು ಸದ್ಗುರುನಾಥನ ಆವ ಜನ್ಮದಲಿ ಪ

ತಂದೆ ತಾಯ್ಗಳ ಋಣವ ಜನ್ಮಾಂತರದಲಿ ತೀರಿಸಬಹುದು
ಗುರು ಋಣವು ತೀರುವುದದೆಂತೋ 1

ತಂದೆತಾಯಿ ಋಣಗಳಿಂದ ಜಾತನಾಗುವೆ
ಮುಂದೆ ಗುರು ಋಣಗಳಿಂದ ಅಜಾತನಾಗುವೆ 2

ಗುರುವಿನ ಋಣವನು ತೀರಿಸಲಾಗದು
ಗುರು ಚಿದಾನಂದನ ಕೃಪೆಯಿಂ ತೀರುವುದು 3

76
ನರನೆನಬಹುದೆ ಸದ್ಗುರು ವರನಾ

ನರನೆನಬಹುದೆ ಸದ್ಗುರು ವರನಾ
ತರುವೆನಬಹುದೆ ಸುರತರುವನ್ನ ಪ

ಆಸನವನೆಹಾಕಿ ಕುಳ್ಳಿರಿಸಿದವನ
ನಾಸಿಕ ಕೊನೆದೃಷ್ಟಿ ಇರಿಸಿದವನ
ಬೀಸುವ ವಾಯುವ ಕುಂಭೀಸೀದವನ
ಸೂಸುವ ಮುತ್ತಿನ ಮಳೆ ಸುರಿಸಿದವನ 1

ಆರು ಮಂಟಪ ನೆಲೆ ಅಡರಿಸಿದವನ
ಭೇರಿ ಘಂಟವು ಶಂಖವು ಭೋರಿಡಿಸಿದವನ
ಬೀರುವ ದ್ವಿದಳ ಸದರಕಾಶಿಸಿದವನ
ನೂರು ಕೋಟಿಯ ರವಿ ಬೆಳಕ ಚೆಲ್ಲಿದವನ 2

ಸಾವಿರ ದಳದ ಮನೆಯ ಜೈಸಿದವನ
ಈವ ಬ್ರಹ್ಮರಂದ್ರ ಸುಖವುಣಿಸಿದವನ
ಕೇವಲ ಶಿಂಶುಮಾರಕೆ ಸೇರಿದವನ
ದೇವ ಚಿದಾನಂದನ ಮಾಡಿದವನ 3

77
ನಾನಿನ್ನೇನ ಪೇಳಲಿ ಗುರುರಾಯ

ನಾನಿನ್ನೇನ ಪೇಳಲಿ ಗುರುರಾಯ
ನೋಡ ನೋಡುತ ಆಡ ಆಡುತ ಕಳೆದೆಲ್ಲೋ ಮಾಯಾ ಪ

ನರದೇಹ ಎಂಬುದು ಎಂಥಾ ಮರವು
ನೀನೇ ಬ್ರಹ್ಮಾಂಡ ತೋರಿದಿ ಅರಿವು 1

ತತ್ತ್ವಮಸಿ ಮಹಾವಾಕ್ಯ ಕೇಳಿ ಹಾರಿ ಹೋ
ಯಿತು ದ್ವೈತದ ಧೂಳಿ 2

ಮುತ್ತು ಮಾಣಿಕ ಪೆಸರಾಯಿತು ಲೋಪ
ತುಂಬಿ ಉಳಿಯಿತು ಚಿದಾನಂದ ಸ್ವರೂಪ 3

78
ನೀನೇ ದಯಾಳು ದೊರೆ ಸದ್ಗುರುನಾಥ

ನೀನೇ ದಯಾಳು ದೊರೆ ಸದ್ಗುರುನಾಥ
ನೀನೇ ದಯಾಳು ದೊರೆ ಪ

ಸತಿಸುತ ಮಿತ್ರರ ನೀನೇ ಮರೆಸಿದೆ
ಮತಿಯನೆ ತುಂಬಿದೆ ಸದ್ಗುರುನಾಥ 1

ನನ್ನನು ವೈದೆ ನಿನ್ನನು ಮಾಡಿದೆ
ನನ್ನತನವ ಕಳೆದೆ ಸದ್ಗುರುನಾಥ 2

ನಾಚಿದುದು ಭವ ನಿನ್ನನು ಸ್ಮರಿಸೆ
ನೀ ಚಿದಾನಂದರಸೇ ಸದ್ಗುರುನಾಥ 3

79
ಧ್ಯಾನವಿರಲಿ ಗುರುವೆ ನಿನ್ನಯ

ಧ್ಯಾನವಿರಲಿ ಗುರುವೆ ನಿನ್ನಯ
ಧ್ಯಾನವಿರಲಿ ಗುರುವೆ
ನಿನ್ನ ನಿತ್ಯಾ ಕಾಲದಿ ಪದ
ಧ್ಯಾನದೊಳಗೋಲಾಡುವಂತೆ ಗುರು ಚಿದಾನಂದ ಎಂಬ ಪ

ಗಿರಿಯೊಳಿರಲಿ ಧರೆಯೊಳಿರಲಿ
ಗಿರಿಯ ಗುಹೆಯ ಗೃಹದೊಳಿರಲಿ
ಪುರದೊಳಿರಲರಣ್ಯಗಳೊಳು
ಚರಿಸುತಿರಲಿ ಮರೆಯದೇ 1

ಮರದೊಳಿರಲಿ ಮುಳ್ಳೊಳಿರಲಿ
ಕೆರೆಯ ತೀರ್ಥ ಕ್ಷೇತ್ರದೊಳಿರಲಿ
ಹರವು ಹಳ್ಳ ಕೊಳ್ಳಗಳೊಳು
ಹರಿವುತಿರಲಿ ಮರೆಯದೆ 2

ಹಸಿವೆಯಿರಲಿ ತೃಷೆಯೊಳಿರಲಿ
ಬಿಸಿಲು ಮಳೆ ಛಳಿಗಳೊಳಿರಲಿ
ವಿಷಯ ವ್ಯಾಧಿ ಕಂಟಕಗಳೊ
ಳ್ವಿಷಮವಿರಲಿ ಮರೆಯದೇ 3

ನಡೆವುತಿರಲಿ ಎಡವುತಿರಲಿ
ನಡೆಯಲಾರದೆ ಕೆಡೆಯುತಿರಲಿ
ಕಡುವಿರೋಧದಿಂ ಕುವಾದ
ತಡೆಯುತಿರಲಿ ಮರೆಯದೆ 4

ಹೆಂಡೆಲಿಡಲಿ ಹೆಂಟೆಲಿಡಲಿ
ಕಂಡ ಕಂಡದರಲಿಡಲಿ
ಭಂಡ ಮನುಜರವರು ಏನು
ಮಾಡುತಿರಲಿ ಮರೆಯದೇ 5

ನಿನ್ನ ಧ್ಯಾನ ಷಟ್ಸಮಾಧಿ
ನಿನ್ನ ಧ್ಯಾನ ಮುಕ್ತಿ ನಿಲಯ
ನಿನ್ನ ಧ್ಯಾನಕಧಿಕವಿಲ್ಲ ನಿನ್ನ
ಧ್ಯಾನವೆನಗೆ ನಿತ್ಯವಿರಲಿ ಮರೆಯದೆ 6

ಧಾನ ವಿದ್ದಡಿರದಡೇನು
ನಿನ್ನ ಪಾದ ಕಂಡ ಬಳಿಕ
ಧ್ಯಾನದಿಂದ ಸಾಧ
ನೇನು ಗುರು ಚಿದಾನಂದ ಯೋಗಿ 7

80
ಪದವಿಯಂಬುದದಿಹುದೆ ಪರಮ ಗುರುಪಾದಕಿಂತ

ಪದವಿಯಂಬುದದಿಹುದೆ ಪರಮ ಗುರುಪಾದಕಿಂತ
ಪದವಿಯಂಬುದು ಗುರುಪದದೊಳಗಡಗಿಹುದು ಪ

ನಿತ್ಯವೂ ಗುರುಪಾದವ ನೆನೆವುದೇ ನಿತ್ಯ ಪದವಿ
ಮತ್ತೆ ಶರಣೆಂಬುದೇ ವೈಕುಂಠ ಪದವಿ
ಅತ್ಯಂತ ಭಕ್ತಿಯಾಭಾವಾನಂದ ಪದವಿ 1

ಬಂಧುರ ಸುವಾಕ್ಯಗಳ ಬಣ್ಣಿಪುದೆ ಬ್ರಹ್ಮಪದವಿ
ಇಂದು ಧನ್ಯನುನಾ ಎಂಬುದೀಶ್ವರ ಪದವಿ
ಸಂದುಸುಖಿಸುತ್ತಿಹುದೆ ಸದಾಶಿವ ಪದವಿ 2

ಬೆರಗಿ ನಿಂದಿರುತಿಹುದೆ ಭೇದ ವಿಚ್ಛೇದ ಪದವಿ
ಮರೆತು ತನುವಿರುತಿಹುದೆ ಮಹಾ ಮೋಕ್ಷ ಪದವಿ
ಮರೆವು ಅರಿವೆರಡಿಲ್ಲದಿಪ್ಪುದೆ ಮಹಾಪದವಿ
ನಿರವಯ ಚಿದಾನಂದನಾದುದೆ ನಿಜಪದವಿ 3

81
ಬ್ರಹ್ಮ ತಾವೆಂದು ಭಾವಿಸಿರೋ ಭಾಗ್ಯರಿರಾ

ಬ್ರಹ್ಮ ತಾವೆಂದು ಭಾವಿಸಿರೋ ಭಾಗ್ಯರಿರಾ
ಬ್ರಹ್ಮತಾವೆಂದು ಭಾವಿಸಿದವರುಂಟು ಪ

ಕಪಿಲ ನಾರದನು ಗೌತಮನು ಕಣ್ವನು
ನಿಪುಣ ಕೌಶಿಕನು ನಿರ್ಮಲನು ಅಗಸ್ತ್ಯಾ
ಉಪಮಾನ್ಯ ಶಿಖಿ ಪಂಚ ದೂರ್ವಾಸ
ರಂತಿವರು ಬ್ರಹ್ಮ ತಾವೆಂದು ಭಾವಿಸುವರು 1

ವ್ಯಾಸ ಶ್ರೀವತ್ಸ ಶುಕನು ಶೌನಕನು
ವಾಶಿಷ್ಟ ಅತ್ರಿ ಗಾರ್ಗೇಯನು ಕಶ್ಯಪನು
ದಾಸ ಪ್ರಹ್ಲಾದ ಬಕದಾಲ್ಬ್ಯ ಜಮದಗ್ನಿ
ಭಾಸುರರಿಂತಿವರು ಬ್ರಹ್ಮತಾವೆಂದು ಭಾವಿಸುವರು 2

ಸನಕ ಸನಂದನ ಸನತ್ಸುಜಾತನು
ಮುನಿಯು ತೃಣಬಿಂದು ಮಾರ್ಕಾಂಡೇಯ ರೋಮಶನು
ಘನ ವಾಮದೇವ ದತ್ತಾತ್ರೇಯ ವಡಬನು
ಚಿನುಮಯರಿವರು ಬ್ರಹ್ಮತಾನೆಂದು ಭಾವಿಪರು 3

ಭರದ್ವಾಜ ದಧೀಚಿ ಮರೀಚಿ ಕರ್ದಮನು
ಭರತ ಭಾರದ್ವಾಜ ಆಸ್ತಿಕನು ಪೌಲಸ್ತ್ಯ
ಹರಿಹರ ಬ್ರಹ್ಮತ್ರೈಮೂರ್ತಿ ಸಹಿತರಿವರು
ನಿರುತದಿಂ ನಿತ್ಯ ತಾವೆಂದು ಭಾವಿಸುವರು 4

ಬ್ರಹ್ಮ ತಾವೆನಲು ಭವ ಮೂಲ ಹರಿವುದು
ಬ್ರಹ್ಮ ಬೇರೆನಲು ಬಹುಜನ್ಮವೇ ಬಹುದು
ಬ್ರಹ್ಮತಾವೆಂದು ಭಾವಿಸಿ ನೀವು ನಿತ್ಯ
ಬ್ರಹ್ಮ ಚಿದಾನಂದ ತಾವಾಗುವಿರಿ ಸತ್ಯ 5

82
ಭಜರೇ ಚಿದಾನಂದ ಮೇ ಮನಸಾ

ಭಜರೇ ಚಿದಾನಂದ ಮೇ ಮನಸಾ
ಭಜರೇ ಚಿದಾನಂದಂ ಭವ್ಯ ಚರಿತ ಸಾ
ಮಜ ವಸ್ತ್ರಾಂಗಂ ಸುಮನೋತ್ತುಗಂ ಪ

ಪಾಲ ಶರಣ ಪಾಲಿತಂ
ಫಾಲಾಕ್ಷ ವಿಶಾಲ ವಿಷಯ ಶೋಷಿತಂ
ನೀಲ ಕಂಧರ ನಿರಾಶ ನಿಗಮ ಶಿರ
ಲೋಲ ಸದಾನಂದಿತಂ ಮೇ ಮನಸಾ 1

ಈಶ ತಾಪ ಭೀಷಣಂ ಈಶ್ವರ
ವಿಶ್ವೇಶನಾದ ಘೋಷಣಂ
ಭಾಸುರ ಕೋಟಿ ಸೇವಿತ ಸಂಕಾಶ ಮ
ಹೇಶ ಸದಾನಂದಿತಂ ಮೇ ಮನಸಾ 2

ಪರಮ ಪರಾಪುರುಷಂ ಪಾರ್ವತಿ ಮನೋ
ಹರ ಹರಿ ವಿಶ್ವಾರ್ಜಿತಂ
ವರ ಚಿದಾನಂದ ಗುರುವೇ ಸಾಕ್ಷಾತಂ
ಸ್ಮರಣ ಮನೋನಿಶ್ಚಿತಂ ಮೇ ಮನಸಾ 3

83
ಮುಕ್ತನಾದೆನೋ ನಿನ್ನ ಮರೆತು ನೆನೆಯಲಿ

ಮುಕ್ತನಾದೆನೋ ನಿನ್ನ ಮರೆತು ನೆನೆಯಲಿ ಮುನ್ನ
ಮುಕ್ತನಾಗುವುದೇನು ಗುರುನೀ ಮುಟ್ಟಿಲಿಕೆಂದು ಪ

ಪಾಶವೆಂಟು ಹರಿದು ಪರಿದು ತ್ರಿಗುಣಂಗಳ
ಕ್ಲೇಶ ಪಂಚಕವು ಕೆಡೆದುಪೋದುವು
ಆಸೆ ಮೂರೆಂಬುವು ಆಕ್ಷಣ ಉರಿದವು
ಘಾಸಿಯಾದವು ಸಪ್ತವ್ಯಸನ ಗಳಿಗೆಯೊಳು 1

ನಾಲ್ಕು ಕರಣಂಗಳು ನಾಸ್ತಿಕವಾದುವು
ಬೇಕೆಂಬ ತ್ರಯತಾಪ ಬೆಳೆನಿಂತವು
ಪೋಕರಾದವು ಷಡುವರ್ಗ ಷಡಪುಗೆಟ್ಟು
ಹೋಕೆ ಮರೆತವು ದುರ್ಭಾವ ಹೊಲಬುದಪ್ಪಿ 2

ಕನಕ ಪರುಷ ಮುಟ್ಟೆ ಕನಕ ಪರುಷವಾಗದು
ಘನಗುರುವಿನ ಮುಟ್ಟೆ ಗುರುವಹನು
ಚಿನುಮಯ ಚಿದಾನಂದ ಚಿದ್ರೂಪನಾದವರಿಗೆ
ಜನನ ಮರಣಗಳೆಂಬ ಜನಿತವೆಲ್ಲಿಹುದಯ್ಯ 3

84
ಯೋಗಿಯ ನೋಡಿರೋ ಸದ್ಗುರು ಯೋಗಿಯ

ಯೋಗಿಯ ನೋಡಿರೋ ಸದ್ಗುರು ಯೋಗಿಯ ನೋಡಿರೋ
ಯೋಗಿ ಚಿದಾನಂದಾವಧೂತ ಗುರುದೊರೆಯ ಸದ್ಗುಣ ಚರಿತನ ಪ

ಆಶಾಪಾಶಗಳೆಂಬುವನೆಲ್ಲವ ಜರಿದು ವಾಸನೆ ತರಿದು
ದೋಷದುರ್ಗ ಜನನಾದಿಗಳನು ಬಳಿದು ಸಂಶಯ ತುಳಿದು
ಕ್ಲೇಶ ಪಂಚಕ ಕಾಮಕ್ರೋಧವ ಕಡಿದು ಮುಂದಕೆ ನಡೆದು
ಭಾಸುರ ತೇಜದಿ ತೋರುವ ಪ್ರಭೆಯನುಕೂಡುವ ತಲೆಯೊಲಿದಾಡುವ 1

ಬಲಿದಾಧಾರವ ಕುಂಭಕದಿಂದಲಿ ಬಲಿಸಿ ವಾಯುವ ನಿಲಿಸಿ
ನೆಲೆಯನೆ ಹತ್ತಿ ಆ ನೆಲೆಯನೆ ನಿಲುಕುತ ಮತ್ತಾ
ನೆಲೆಯ ಹೊಲಬಲಿ ತೋರುವ ಭಾಸ್ಕರ ಕೋಟಿಯ ಮೀರಿ
ಕಳೆಗಳ ತೋರಿ ಥಳಥಳ ಥಳಿಸಿಯೆ ಮೆರೆವಾ ಆತ್ಮನ ನೋಡುವ ಸಂತಸಪಡುವ 2

ಆರು ಚಕ್ರಗಳಲಿ ತೋರುವ ದಳಗಳನರಿದು ಅದರೊಳು ಬೆರೆತು
ಭೋರಿಡುತಿಹ ದಶನಾದದ ಬೊಬ್ಬೆಯ ಕೇಳಿ ಹರುಷವ ತಾಳಿ ಚಾ
ತುರದಿ ಮೆರೆಯುತಲಿಹ ಜ್ಯೋತಿಯ ಸಾರ ಸೇವಿಪ ಶೂರ
ಧಿರ ಚಿದಾನಂದಾವಧೂತಾತ್ಮ ಗುರುವಾ ಎನ್ನನು ಪೊರೆವಾ 3

85
ರಕ್ಷಿ ರಕ್ಷಿ ರಕ್ಷಿಸಯ್ಯ ಚಿದಾನಂದ ಸ್ವಾಮಿ

ರಕ್ಷಿ ರಕ್ಷಿ ರಕ್ಷಿಸಯ್ಯ ಚಿದಾನಂದ ಸ್ವಾಮಿ
ರಕ್ಷ ಶಿಕ್ಷ ಕರ್ತನಾದ ದಯದಿಂದ ಪ

ದಾಸ ನಿಜವಲ್ಲವೆನೆ ಸಾಕ್ಷಿ ಬೇಕೆ ನಿನ್ನ
ದಾಸರ ದಾಸನಾಗಲಿಕೆ
ಏಸುಕಾಲ ಪರೀಕ್ಷೆ ನಿನ್ನ ನೋಡಲಿಕೆ ಎನ್ನ
ಲೇಸು ಹೊಲಬು ನಿನ್ನನು ಬಿಡದು ಜೋಕೆ 1

ನಿನ್ನ ನೋಡೆ ನಾನು ಬೇರೆಯಲ್ಲವಯ್ಯ
ಇದು ಮಾಡಿ ಬಂದ ಸುಕೃತವೇಯೆಲ್ಲ
ನಿನ್ನವನ ನೀನೆ ಕೈವಿಡಿದೆಲ್ಲ ಕೇಳು
ನಿನ್ನೊಳಗೆನ್ನೊಳಗೆ ಭೇದವೇನೂ ಇಲ್ಲ 2

ಖೂನ ವಿಲ್ಲದ ಖೂನದಿಂದ ನಿನ್ನ ಕಂಡೆ ನಾ
ಖೂನವಿದ್ದೂ ವಿಲ್ಲದಂತೆ ಬಲಗೊಂಡೆ
ಧ್ಯಾನ ಮೌನವೆಲ್ಲವ ನಾ ಕಳಕೊಂಡೆ
ಧ್ಯಾನವೆಂತು ನಿನ್ನನೆ ಭಜನೆಗೊಂಡೆ 3

ನಿನ್ನ ಪಾದವ ನಂಬಿಯೆ ಸಂತೋಷನಾದೆ ನಾ
ನಿನ್ನ ಪಾಡಿ ಪೊಗಳಿ ವಿಶೇಷನಾದೆ
ನಿನ್ನ ಲೀಲೆ ನೆನೆದು ನಾನೀಶನಾದೆ
ನಿನ್ನ ನೋಡಿಯೆ ಕಂಡು ಜಗದೀಶನಾದೆ 4

ಕೋಟಿ ಶತಶಶಿ ಪ್ರಭೆಯ ತಾಳ್ದ ಅಂದವನ್ನು
ಪಾಟಿಸಿ ಪೊಗಳಬಲ್ಲೆನೆ ಮುಂದಾ
ನೀಟೆನಿಪ ದೇವಗುರು ಚಿದಾನಂದ ನಿನ್ನ
ನೀಟಿನಂತೆ ನಿಲ್ಲಿಸು ಕರುಣದಿಂದ 5

86
ರೂಪ ತೋರೆನೆಗೆ ಗುರುವೆ ರೂಪ ತೋರೆನೆಗೆ

ರೂಪ ತೋರೆನೆಗೆ ಗುರುವೆ ರೂಪ ತೋರೆನೆಗೆ
ರೂಪನಾಮಕೆ ವಿರಹಿತನಾದ ದೇವನೆ ರೂಪ ತೋರೆನಗೆ ಪ

ಬ್ರಹ್ಮಾಂಡ ತಂಡಗಳೊಳು ಹೊರಗಾವರಸಿಕೊಂಡು
ಬ್ರಹ್ಮಾಂಡ ಖಂಡಗಳ ಬೆಳಗುವೆ ವಿರೂಪವೆಡೆಗೊಂಡು 1

ನಿನ್ನ ತೇಜಸ್ಸಿನಿಂದ ತೋರ್ಪುದು ತೋರ್ಪ ಜಗವೆಲ್ಲ
ನಿನ್ನನುಳಿದೇ ಬೇರೆ ತೋರೆನಲವಕಾಶವ ಇಲ್ಲ 2

ನಾದ ಬಿಂದುಕಳೆ ನೀನೆಂಬೆನೆ ದೃಶ್ಯವು ಇವು ಎಲ್ಲ
ನಾದ ಬಿಂದುಕಳೆ ಸಾಧಕಗಳು ವಸ್ತು ನಿಜವಲ್ಲ 3

ಬೋಧಾನಂದ ತುರೀಯಗಳೆಂಬೆನೆ ಆ ಅವಸ್ಥೆಗಳೆಲ್ಲ
ಬೋಧಾನಂದ ತುರೀಯದಿ ನೋಡಲು ಎದುರಿದ್ದವು ಎಲ್ಲ 4

ನಿರ್ವಿಕಾರ ನಿರ್ಗುಣ ನಿರವಯ ನಿರಂಜನ
ಸ್ಪೂರ್ತಿ ಪರಮಗುರು ಪರಬ್ರಹ್ಮ ಚಿದಾನಂದ ಮೂರ್ತಿ 5

87
ಲಹರಿಕೊಂಡಿತು ಜ್ಞಾನ ಲಹರಿಕೊಂಡಿತು

ಲಹರಿಕೊಂಡಿತು ಜ್ಞಾನ ಲಹರಿಕೊಂಡಿತು
ಮಿಹಿರ ಕೋಟಿ ಚಿದಾನಂದ ಮಿಹಿರಲೋಕ ಸೇರಲಾಗಿ ಪ

ನಿತ್ಯ ಗುರುವ ಧ್ಯಾನ ಮಾಡೆ ನಿಗಮಧರೆಗೆ ಕೈಗೆ ಕೂಡೆ
ನಿತ್ಯ ಆನಂದ ತುಳುಕಾಡುವ ನಿಜಬೋಧವೆಡೆಯಾಡೆ 1

ಪ್ರಣವ ನಾದಗೀತೆ ಪಾಡೆ ಪಾಡುಪಂಥ ಸರಿದು ಆಡೆ
ಎಣಿಸಿ ಬಾರದ ದುಃಖ ಕೇಡೆ ಏಕವೆಂಬು ಘಟ್ಟಿಮಾಡೆ 2

ಚಿದಾನಂದ ಗುರುವ ನೋಡೆ ಚಿತ್ತ ಮುಳುಗಿ ಮುಳುಗಿ ಆಡೆ
ಪದಸರೋಜವನ್ನು ಕೂಡೆ ಪರಿಣಾಮವ ದೋವಿಯಾಡೆ 3

88
ಶರಣು ಆತ್ಮಕ ಸರ್ವತೋಮುಖ ಶರಣು

ಶರಣು ಆತ್ಮಕ ಸರ್ವತೋಮುಖ ಶರಣು ಸರ್ವಲೀಲಾತ್ಮಕ
ಶರಣು ಗುರು ಚಿದಾನಂದ ವಿಗ್ರಹ ಶರಣು ಸುರಮುನಿ ಪಾಲಕ ಪ

ರೂಪು ಹರ ನಿರ್ಲೇಪ ಘನ ಚಿದ್ರೂಪ ರೂಪ ವಿರೂಪಕ
ತಾಪನಾಶಕ ಪೋಷ ಭಕ್ತಕೃತಪರಾಧಿ ಪವಿತ್ರಕ
ದೀಪ ಹೃದಯ ಸಭಾಸ ಉನ್ಮನ ದೀಪ್ಯಮಾನ ಮಹಾತ್ಮಕ
ಭೂಪ ಸುರಮುನಿ ಸಿದ್ಧರಕ್ಷಕ ಭುವನದಧಿಪತಿ ರಕ್ಷಕ 1

ಪ್ರಣವ ಪುರುಷ ಪರೇಶಪಾವನ ಪ್ರಣತ ಸುಜನ ಪರಾವರ ಮ
ರಣ ರಹಿತ ನಿಜ ನಿಶ್ಚಲಾತ್ಮಕ ಗುಪ್ತ ಮೂರುತಿ ಗುರುವರ
ಎಣಿಸಬಾರದನಂತ ಲೋಕಕೆ ಏಕನಾಥ ದಿವಾಕರ
ಅಣಿಮ ಮಹಿಮಾಷ್ಟಾಂಗ ಯೋಗಗಳಳವಿಗೊಡದ ಪ್ರಭಾಕರ 2

ಎರಡು ಮೂರಾರೆಂಬವೆಲ್ಲವ ಎಣಿಸೆ ಏಳೈದೆಂಬವ
ಪರಿವಿಡಿದು ನಾಲ್ಕೆಂಟು ನವದಶ ಪರಿಪರಿಯ ವಿಕಾರವ
ಹರಿಹರ ಬ್ರಹ್ಮಮರೇಂದ್ರರು ಹರಿವರಿಯದ ಸ್ವಭಾವವ
ಬೆರಸದಿಹ ಚಿದಾನಂದ ಮೂರ್ತಿಯ ಭೇದವಿರಹಿತ ಚಿತ್ಪ್ರಭಾ 3

89
ಶ್ರವಣ ಶ್ರವಣಗಳೆನ್ನಿರಿ ಸರ್ವಕಾಲದಿ ನೀವು

ಶ್ರವಣ ಶ್ರವಣಗಳೆನ್ನಿರಿ ಸರ್ವಕಾಲದಿ ನೀವು
ಶ್ರವಣವಾಗುವತನಕ ಶಿವನು ನೀವಾಗಲೆಂತೋ ಪ

ಗುರುಮೂರ್ತಿಯನು ಕಂಡು ಗುಣವಿಭಾಗಿಸಿದಂತ
ನರಪಶುವು ಕ್ರಿಮಿಕೀಟ ಸರ್ವಗಳಲಿ
ಗುರುವು ಪರಿಪೂರ್ಣ ಗುಣಿಸಲಿಂತಾದನೆಂದು
ಹಿರಿದು ಸಮನಿಸಿ ನೋಡಿ ನಿಶ್ಚೈಸಿದರೆ ಸಾಲದೆ 1

ಜಾಗೃತದಿ ಸ್ವಪ್ನದಲಿ ಸುಷುಪ್ತಕಾಲದಿ ಕಂಡ
ವರ್ಗವೆಲ್ಲವ ಗುರುವೆ ಎಂದು ತಿಳಿದು
ಭರ್ಗಪೂರಿತನೆಂದು ಭೇದವಿಡದೇ ಮನದಿ ಸ-
ಮಗ್ರ ಸಂತೋಷನಾಗಿರುತಿರಲದೆ ಸಾಲದೆ 2

ಕ್ರೂರ ಸಂಕಟ ಕಷ್ಟ ನಷ್ಟ ದುಃಖದಲಿ
ಆರು ಹೊದ್ದಿಹರೆಂದು ಇದನು ತಿಳಿದು
ಧೀರ ಚಿದಾನಂದ ಗುರು ದಿವ್ಯ ಮೂರುತಿ ತಾನು-
ದಾರನಾತನ ಚರಣವನು ನೆನೆಯೆ ಸಾಲದೆ 3

90
ಶ್ರೀಗುರು ಎಂಥಾ ದಯವಂತನಿಹ ನೋಡೆ

ಶ್ರೀಗುರು ಎಂಥಾ ದಯವಂತನಿಹ ನೋಡೆ
ಈಗ ಋಣವ ಕಳೆದೆನೆನಲು ಆನಂದವಹುದು ನೋಡೆ ಪ

ಕರೆಯುತ ಸನಿಹಕೆ ಚರಣವ ಶಿರದಲಿಟ್ಟನು ನೋಡೆ
ಹರುಷ ಉಕ್ಕುತ ಎನ್ನ ಮುಖವ ನೋಡಿದ ನೋಡೆ
ಪರಮಾತ್ಮನು ನೀತಿ ಎಂದು ಪರಿ ಪರಿ ಹೇಳಿದ ನೋಡೆ
ಅರೆಮರೆಯೆಲ್ಲವು ನೀ ಬ್ರಹ್ಮನೆಂದು ಆಡಿದ ಕರ್ಣದಿ ನೋಡೆ 1

ತೋರುವುದೆಲ್ಲವು ನೀನೆ ಎಂದು ತಿಳುಹಿದ ಎನ್ನನು ನೋಡೆ
ದಾರಾಸುತ ಸಹೋದರರೆಂಬರ ದಾರಿಯ ಬಿಡಿಸಿದ ನೋಡೆ
ಮೂರು ಗುಣಗಳ ಮಂದಮತಿಗಳ ಮುಂದುಗೆಡೆಸಿದ ನೋಡೆ
ಕಾರಣಕಾರ್ಯವ ಕಳೆದ ಅವಿದ್ಯದ ಕಷ್ಟವ ಕಳೆದ ನೋಡೆ 2

ಷಟ್ಚಕ್ರಂಗಳ ದಾಟಿಸಿ ಎನ್ನುನು ಶ್ರೇಷ್ಠನ ಮಾಡಿದ ನೋಡೆ
ಅಡರಿಸಿ ಮೇಲಕೆ ಸಹಸ್ರಾರದಿ ಆನಂದಿಸಿದನು ನೋಡೆ
ಕಿಡಿಯುಗುಳುವ ಕೋಟ್ಯಾದಿತ್ಯರ ಬೆಳಕನು ತೋರಿದ ನೋಡೆ
ಮೃಡ ಚಿದಾನಂದ ಸದ್ಗುರು ಬ್ರಹ್ಮದಿ ಮುಕ್ತನು ಮಾಡಿದ ನೋಡೆ 3

91
ಸದ್ಗುರುನಾಥನ ಕರುಣ ದೇಹಕೆ ಬೀಳೆ

ಸದ್ಗುರುನಾಥನ ಕರುಣ ದೇಹಕೆ ಬೀಳೆ
ಬದ್ಧ ಜೀವವದೆಂಬುದೆ ಮಾಡಿದನು
ಇದ್ದ ಸ್ವಾಸ್ಥಿಗಳೆಲ್ಲ ಆಶ್ರಯವದಾಯಿತು
ಶುದ್ಧಿ ಮಾಡಲಿಕ್ಕಿಲ್ಲ ಜೀವನನು ಪ

ಗುರುವೆ ನೋಡುವನಾದ
ಗುರುವೆ ಕೇಳುವನಾದ
ಗುರುವೆ ಶೀತೋಷ್ಣ ಅರಿವನಾದ
ಗುರುವೆ ಘ್ರಾಣಿಪನಾದ ಗುರುವೆ ಉಣ್ಣುವನಾದ
ಗುರುವೆ ಮನಸು ಬುದ್ಧಿ ತಾನಾದನು 1

ನಡೆವವನು ತಾನಾದ ನುಡಿವವನು ತಾನಾದ
ಸಡಗರದ ಸಂಪತ್ತು ತಾನಾದನು
ಕೊಡುವವನು ತಾನಾದ
ಕೊಂಬುವವ ತಾನಾದ
ಕೊನಬುಗಾರಿಕೆಯೆಲ್ಲ ತಾನಾದನು 2

ತಾನೆ ಸಾಕ್ಷಾತ್ತಾಗಿ ಕೂರುವವ ಮಲಗುವವ
ತಾನೆ ನಗುವವನು ತಾನೆ ಸಂತೋಷಿಯು
ತಾನೆ ಚಿದಾನಂದ ಗುರುನಾಥ ದೇಹದಿಂ
ತಾನೆ ತಾನಾಗಿರಲು ಜೀವ ಮುಳುಗಿದನು 3

92
ಸದ್ಗುರುವಿನ ಚಿಂತೆಯಲಿದ್ದವನೇ ಧನ್ಯ

ಸದ್ಗುರುವಿನ ಚಿಂತೆಯಲಿದ್ದವನೇ ಧನ್ಯ
ಧನ್ಯನಾದವನೆ ಪುಣ್ಯ ಪ

ಸತಿಯು ಕರೆಕರೆಯನು ಮಾಡೆ
ಸುತನಲ್ಲದ ಸ್ಥಳದಲ್ಲಿ ಓಡ್ಯಾಡೆ
ಅತಿ ಶತ್ರುಗಳು ತಾವೆಲ್ಲರೂ ಕೂಡೆ
ಮತಿಯರು ಸೂಚಿಸದಿರಲು ನೋಡೆ 1

ಮನೆಯಲೆಲ್ಲರು ರೋಗದಿ ಬಿದ್ದಿರೆ
ದಿನದಿನಕೆ ಅಶನಕೆ ದೊರಕದಲಿರೆ
ತನಗೇ ಕೇಡನು ಬೇಡುತಲಿರೆ
ಅನುಕೂಲ ಉದರಕ್ಕಿಲ್ಲದಿರೆ 2

ಮದುವೆಯ ಧಾವಂತದಲಿರಲು
ಮದಲಿಂಗನು ಈಗಾಗೆನಲು
ಅದರೊಳು ಮನದೆರೆಯು ಹೆಚ್ಚಿರಲು
ಚಿದಾನಂದನ ದಯತಾ ನಿಂತಿರಲು 3

93
ಸಾಧನವೇಕೆ ಸಾಧನವೇಕೆ

ಸಾಧನವೇಕೆ ಸಾಧನವೇಕೆ
ಸದ್ಗುರುನಾಥ ಸನಿಹದಿ ಇರಲಿಕ ಪ

ಯಮನಿಯಮಾಸನ ಎಂಬಿವು ಯಾಕೆ
ಕಮಲಾಸನವನು ಬಲಿಯಲದೇಕೆ
ಶ್ರಮದಲಿ ವಾಯುವ ಬಿಗಿಯಲದೇಕೆ
ಭ್ರಮಿತದಿ ಬ್ರಹ್ಮನ ಕಾಣುವುದೇಕೆ 1

ಮಿತ ಆಹಾರವ ಮಾಡಲದೇಕೆ
ಅತಿ ವೈರಾಗ್ಯವು ದೇಹಕೆ ಯಾಕೆ
ಸತತವು ಕಾಡನು ಸೇರುವುದೇಕೆ
ಮತಿ ತಿಳಿಯದೆ ತಿರುಗಾಡುವುದೇಕೆ 2

ಶರಧಿಯು ತಾನಿರೆ ಒರತೆಯದೇಕೆ
ತರಣಿಯ ತಾನಿರೆ ದೀಪವದೇಕೆ
ಗುರು ಚಿದಾನಂದನಿರೆ ಯೋಗಗಳೇಕೆ
ಗುರುಕೃಪೆ ದೊರೆತರೆ ಭಯ ತಾನೇಕೆ 3

94
ಶಿವನೇ ನೀನೆನ್ನೊ ಮನುಜ

ಶಿವನೇ ನೀನೆನ್ನೊ ಮನುಜ
ಶಿವನೇ ನೀನೆನ್ನು ಶಿವನೇ ನೀನೆನ್ನು
ಶಿವನೇ ನೀ ನಿಜ ನಿಜ ಶಿವನಹುದಲ್ಲೋ-
ಎಂಬ ಸಂಶಯ ಬೇಡೋ ಪ

ಜನನ ರಹಿತನೆನ್ನೋ ವಿಶ್ವಾತ್ಮಕನೆನ್ನೋ
ವಿಶ್ವರೂಪನೆನ್ನೋ ವಿಶ್ವಾತೀತ-
ವಿಶ್ವ ಸಾಕ್ಷಿಯ ತಾನೆನ್ನೋ 1

ನಿರ್ವಿಕಲ್ಪನೆನ್ನೋ ನಿರ್ಗುಣನೇ ಎನ್ನೋ
ನಿರ್ವಿಕಾರ ಚಿದಾನಂದನೆ ತಾನೆನ್ನೋ 2

ಭಾಗ-3: ತಾತ್ವಿಕ ಹಿನ್ನೆಲೆಯ ಕೀರ್ತನೆಗಳು

95
ಅದಕೋ ವೈರಾಗ್ಯ ಅದಕೋ ವೈರಾಗ್ಯ

ಅದಕೋ ವೈರಾಗ್ಯ ಅದಕೋ ವೈರಾಗ್ಯ
ಅದಕೋ ವೈರಾಗ್ಯ ಕೇಳದಕೋ ವೈರಾಗ್ಯ ಪ

ಸತಿಸುತ ಭಾಗ್ಯವ ಸರ್ವವ ತ್ಯಜಿಸಿಯೆ
ಮತಿಬ್ರಹ್ಮವಾದುದೆ ಅದಕೋ ವೈರಾಗ್ಯ 1

ಅನ್ನೋದಕ ವಸ್ತ್ರ ಅಪೇಕ್ಷೆ ಅಡಗಿಯೆ
ಚಿನ್ಮಾತ್ರನಾದುದೆ ಅದಕೋ ವೈರಾಗ್ಯ 2

ದೂಷಣಭೂಷಣವೆರಡಕ್ಕೆ ಹೊಂದದೆ
ವಾಸನ ಕ್ಷಯವಿರೆ ಅದಕೋ ವೈರಾಗ್ಯ 3

ಇಹಪರ ಭೋಗವ ತೊರೆದಿಹ ಭಾವವೆ
ಮಹಾಶಿವನಾದುದ ಅದಕೋ ವೈರಾಗ್ಯ 4

ಇರುಳು ಹಗಲು ಚಿದಾನಂದ ಸದ್ಗುರುವಾಗಿ
ಶರೀರವ ಕಳೆದುದೆ ಅದಕೋ ವೈರಾಗ್ಯ 5

96
ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪ

ಅಪ್ಪ ಕೇಳೋ ಬೇಡಿಕೊಂಬೆ ನಿನ್ನ ತಿಳಿಯಪ್ಪ
ಒಪ್ಪಿ ಮಾತನ್ನಾಡಿಸಿದರೆ ನೀನೆ ಜಗದಪ್ಪ ಪ

ನಾನದಾರು ಬಂದೆನೆಲ್ಲಿಗೆ ಎನ್ನುತ ನೀನಪ್ಪ
ನಾನು ಹೋಗುವೆ ಎಲ್ಲಿಗೆ ಎಂದು ಚಿಂತಿಸು ನೀನಪ್ಪ
ನೀನು ಸುಳಿಗಾಳಿಯ ಶಾವದ ತೆರದಂದದಿ ಇಹೆಯಪ್ಪ
ನಾನಾ ಭವವಾಚರಿಸುತಿಹೆ ಆದಿ ಅಂತ್ಯವಿಲ್ಲಪ್ಪ 1

ತನುವ ನೆಚ್ಚಬೇಡ ಮೊದಲಿನ ತನುವದೇನಾಯಿತಪ್ಪ
ತನಯ ಸತಿಯರನೆಲ್ಲ ಬಿಟ್ಟುಬಂದೆ ನೀನು
ಮನೆ ಕಟ್ಟುವೆ ನೀನು ಮೊದಲಿನ ಮನೆ ಏನಾಯಿತಪ್ಪಾ
ನಿನಗೆ ಕುಲವು ಎಷ್ಟಾದವು ಎಣಿಸಿಕೊಳ್ಳಪ್ಪ 2

ಹಿಂದೆ ಮುಂದೆ ಕಾಣದಂತೆ ತಿರುಗಿ ತಿರುಗಿ ಅಪ್ಪ
ಬೆಂದು ಬೆಂದು ಓಡಾಡುತಿಹೆ ಸ್ವರ್ಗ ನರಕಕಪ್ಪ
ಎಂದೆಂದಿಗೂ ಅರಿವಾಗದ ಮರೆವು ಮುಚ್ಚಿ ಅಪ್ಪ
ಅಂಧಕಾರ ಸಂಸಾರದಿ ಕಳವಳಿಸುತ ಅಪ್ಪ 3

ಕಣ್ಣುಯಿದ್ದು ಕಣ್ಣಿಗೀಗ ಬೀಳಬೇಡವಪ್ಪ
ನಿನ್ನ ನರಿವುದಕ್ಕೆ ಮನುಜ ಜನ್ಮ ಸಾಧನವಪ್ಪ
ಹೊನ್ನು ಹೆಣ್ಣು ಮಣ್ಣು ಎನಗೆ ಬೇಡ ಬೇಡಪ್ಪ
ಎನ್ನ ಬೋಧೆ ಕೇಳದಿರಲು ಕೆಟ್ಟುಹೋದೆಯಪ್ಪ 4

ವಾಸನದಿಂದ ತಿರುಗುವೆ ರಾಟಾಳರಂತಪ್ಪ
ದೇಶಿಕ ಸದ್ಗುರು ಹೊಂದು ದೇವನಹೆಯಪ್ಪ
ನಾಶವಹವು ನಾನಾ ಗುಣಗಳು ಜೀವನ ತನುವು ಅಪ್ಪ
ಈಶ ಚಿದಾನಂದನಹೆ ಜನ್ಮವಳಿದು ಅಪ್ಪ 5

97
ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನು

ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನು
ಪರಮ ಗುರು ಕರುಣದಿ ನೀವು ನಿಮ್ಮನು ಪ

ಬಿದಿಗೆ ಚಂದ್ರನು ಆವುದೆಂದು ಕೇಳಲಿಕೆ
ಅದಕೋ ಶಾಖಾಗ್ರ ಎಂದೆನಲು ಅರಿದಂತೆ
ವಿಧಿಸಿ ಗುರುಮುಖದಿ ವಿವರಿಸಿ ಕಂಡು ಅರಿದು
ಸದಯಲಾನಂದ ತಾವೆಂದು ಭಾವಿಪುದು 1

ಊರು ಆವುದು ಎಂದು ಕೇಳುತಿರಲಿಕೆ
ಊರದಕೋ ಗುಡ್ಡದ ಮೇಲೆನಲು ಅರಿದಂತೆ
ಧೀರ ಗುರು ಮುಖದಿ ದಿಟ್ಟಿಸಿ ಕಂಡು ಅರಿತು
ಸಾರ ಸಂಪತ್ತು ತಾವೆಂದು ಧ್ಯಾನಿಪುದು 2

ಅರಸು ಅವನು ಎಂದು ಕೇಳುತಿರಲಿಕೆ
ಅರಸ ಅಲ್ಲಿಹನೆಂದು ನಡೆವವನೆ ಅರಿತಂತೆ
ಪರಮ ಗುರು ದಯದಿ ಪಾಟಿಸಿ ಕಂಡು ಅರಿದು
ಪರಮ ಗುರು ಚಿದಾನಂದ ತಾವೆಂದು ಭಾವಿಪುದು 3

98
ಅಳತದೆ ಕೂಸು ಅಳತದೆ

ಅಳತದೆ ಕೂಸು ಅಳತದೆ
ಈ ಭವ ಭಯದೊಳು ಬಿದ್ದು ಬರಲಾರೆನೆಂದು ಪ

ಅಂಬೆಗಾಲೂರುತ್ತ ಕುಂಬಿಣಿ ತಿರುಗುತ
ಡೊಂಬನಂಥ ಹೊಟ್ಟೆ ಎಳೆಯಲಾರೆನೆಂದು 1

ಕಂದನಾಗಿ ಬಂದು ಹಿಂದು ಮುಂದುರಿಯದೆ
ಇಂದುಧರನ ರೂಪ ಕಣ್ಣೊಳಗಿಟ್ಟುಕೊಂಡು 2

ಜನನ ಮರಣ ಹುಟ್ಟು ಮುರಿದು ಮೂಲ್ಯಾಗಿಟ್ಟು
ಚಿದಾನಂದ ಸ್ವಾಮಿನ್ನ ಕೂಡಿಕೊಂಡೆನೆಂದು 3

99
ಆತ್ಮನ ಕೊಂಬುವರಾರು ಅವರಿಗೆ ಸರಿಯಾರು

ಆತ್ಮನ ಕೊಂಬುವರಾರು ಅವರಿಗೆ ಸರಿಯಾರು
ಆತ್ಮನು ಅವನೆ ಗುರುವು ಅವನೆ ಅವನೆ ಈಶ್ವರ ಕೇಳಿ ಪ

ಘಟದ ದೀವಿಗೆಯಂತೆ ಪಟದ ಚಿತ್ರದಂತೆ
ಅಡವಿಯ ಅಗ್ನಿಯಂತೆ ನಿಜವನೆತ್ತಿ ತೋರಿದಂತೆ 1

ಪಡೆದ ದೇವತೆಯಂತೆ ಮರುಳನರಿವಿನಂತೆ ಉರಗನ
ಹೆಡೆಯು ಗಿರಿಯ ಧೂಮದ ತೆರದಿ ಕಾಣಿಸಿದಂತೆ 2

ಮರೆಯ ವೇಷದಂತೆ ಭರಣಿಯ ರಸದಂತೆ
ಅರಿವೆಯ ರತುನ ಧರಣಿ ಸ್ವರ್ಗವು ಸ್ಥಿರದಿ ಕಾಣಿಸಿದಂತೆ 3

ಕೊಳದ ತಾವರೆಯಂತೆ ಘನ ಮರೆಯ ರವಿಯಂತೆ
ಜಲದ ಬಡಬಾನಲಗಿನ ಪ್ರಭೆಯು ಬೆಳಗಿ ತೋರಿಸಿದಂತೆ 4

ಈ ಪರಿ ಆತ್ಮನ ನಿಜವತಾ ಪರದೈವವೆಂದರಿವ
ಭೂಪ ಚಿದಾನಂದ ರೂಪನೇ ತಾನಾಗಿ ವ್ಯಾಪಿಸಿಕೊಂಡಿಹ ಜಗದ 5

100
ಆತ್ಮನೊಬ್ಬನೆ ದೇವಾತ್ಮನೆಂಬುದು ಉಪಾಧಿ ಬೇಡ

ಆತ್ಮನೊಬ್ಬನೆ ದೇವಾತ್ಮನೆಂಬುದು ಉಪಾಧಿ ಬೇಡ
ಆತ್ಮನೆಂಬುದೇ ಕಾಂಬುದು ನಿಮ್ಮ ಮಹಾತ್ಮರಾದವರು ಪ

ಕುಂಭಗಳು ಇರುತಲಿರೆ ಅಂಬರದ ಚಂದ್ರನು
ಕುಂಭಗಳೊಳಗೆ ಹಲವಾಗಿ ಬಿಂಬಿಸುವ ತೆರದಿ
ಅಂಬುಜಾಸನ ಮೊದಲು ಜೀವ ಕಂಬದೊಳು
ದೃಷ್ಟಿಯಿಟ್ಟು ಇಂಬಾಗಿ ಇರುವನೊಬ್ಬ ಚೇತನಾತ್ಮಕನು 1

ಕನ್ನಡಿ ಪಳುಕಿನ ಗೃಹದಿ ಸನ್ನಿಧಿಯಲೊಂದು ದೀಪವಿಡೆ
ಕನ್ನಡಿಯೊಳಗೆ ದೀಪ ಹಲವಾದ ತೆರದಿ
ಉನ್ನತ ಜೀವರಾಶಿಯ ತನ್ನ ಛಾಯೆ ಹೊಳೆ ಹೊಳೆದು
ತನ್ನ ತಾವೇ ಇರುವನೊಬ್ಬ ಚೇತನಾತ್ಮಕನು 2

ಒಬ್ಬನಾ ಕಾಂತಿಯಿಂ ಹಬ್ಬಿಕೊಂಡಿದೆ ಲೋಕ
ಒಬ್ಬನೆಂದೇ ತಿಳಿದೆಡೆ ತಾನೊಬ್ಬನೇ ಇಹನೀಹರನು
ಒಬ್ಬನನೊಯ್ದು ನೀವು ಹಾಗಿಬ್ಬರ ಮಾಡಲಾಗದು
ಒಬ್ಬನೇ ಚಿದಾನಂದನು ಚೇತನಾತ್ಮಕನು 3

101
ಆತ್ಮವೇ ಜೀವಾತ್ಮನು

ಆತ್ಮವೇ ಜೀವಾತ್ಮನು
ಆತ್ಮ ಬೇರೆ ಜೀವಾತ್ಮ ಬೇರೆಯಲ್ಲ ಪ

ಅರಸು ಎಂಬುವ ಹೋಗಿ ಚಾಕರನಾಗಿರೆ
ಅರಸು ಬೇರೆ ಚಾಕರ ಬೇರೆ ತಿಳಿ 1

ಬ್ರಹ್ಮಚಾರಿಯು ಹೋಗಿ ಯತಿಯಾಗಿ ಆಗಿರೆ
ಬ್ರಹ್ಮಚಾರಿಯು ಬೇರೆ ಯತಿ ಬೇರೆ ತಿಳಿ 2

ಸಾಧಕನು ಹೋಗಿ ಸಾಧ್ಯನು ಆಗಿರೆ
ಸಾಧಕನು ಬೇರೆ ಸಾಧ್ಯನು ಬೇರೆ ತಿಳಿ 3

ಆತ್ಮನೆಂಬುವ ಹೋಗಿ ಜೀವನೇ ಆಗಿರೆ
ಆತ್ಮನು ಬೇರೆ ಜೀವನು ಬೇರೆ ತಿಳಿ 4

ಒಬ್ಬ ಉಪಾಧಿಯಿಂದಲಿ ನಾನು ಎರಡಿರೆ
ಒಬ್ಬ ಚಿದಾನಂದ ತಾನೆ ಸತ್ಯ ಸತ್ಯ 5

102
ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೆಯೇನು

ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೆಯೇನು
ಆಧ್ಯಾತ್ಮ ವಿದ್ಯೆಯರು ಅನುಭವಿಸಲರಿಯದವಗೆ ಪ

ಪುಸ್ತಕಂಗಳ ಪಿಡಿದು ಪುಸ್ತಕದೊಳಿದ್ದುದನು
ವಿಸ್ತರಿಸಿ ಎಲ್ಲರಿಗೆ ಹೇಳುತಿಹನು
ಪುಸ್ತಕದ ಅರ್ಥವನು ಮನಕೆ ತಾರದಲೆ
ಪುಸ್ತಕದ ಅಕ್ಷರವ ಪೇಳುವವಗೆ 1

ಜ್ಞಾನವನು ಹೇಳುತಿಹ ಜ್ಞಾನವನು ತಾನರಿಯ
ಜ್ಞಾನಿಗಳ ನಡೆಯನು ಮೊದಲೆ ತಿಳಿಯ
ಜ್ಞಾನಿಗಳೇ ಕಂಡು ಜ್ಞಾನವಿಲ್ಲೆಂದೆಂಬ
ಜ್ಞಾನಿ ತಾನೆಂತೆಂದು ಬರಿ ಬಣ್ಣಿಸುವಗೆ 2

ದೇವತಾರ್ಚನೆ ಜಪವ ತಪವ ಡಂಭದಿ ತಾಳ್ದು
ಪಾವುಗೆಯ ಮೆಟ್ಟಿ ಸುಳಿ ಸುಳಿದಾಡುತ
ಸಾಧಿಸದೆ ಪುಣ್ಯ ಪುರುಷರ ನೆಲೆಯ ತಿಳಿಯದಲೆ
ದೇವ ತಾನೆಂದು ಬರಿ ಬೋಧಿಸುವವಗೆ 3

ಯೋಗೀಶ್ವರರ ಕಂಡು ಯೋಗದಿಂದೇನೆಂಬ
ಯೋಗವಳವಟ್ಟ ತೆರನಂತೆ ನುಡಿದ
ಯೋಗಾಮೃತದ ಪೂರ್ಣರಸವ ಸವಿದುಣ್ಣದೆಲೆ
ಯೋಗಿ ತಾನೆಂದು ಬರಿ ತೋರುತಿರುವವಗೆ 4

ಮಾಡಿದಡೆ ಬಹದಲ್ಲ ಕೇಳಿದಡೆ ಬಹದಲ್ಲ
ಆದರಿಸಿ ಒಬ್ಬರಿಗೆ ಹೇಳಿದಡೆ ತಾ ಬರದು
ಸಾಧಿಸಿಯೆ ಮನನದಭ್ಯಾಸದಿಂ ದೃಢವಾಗಿ
ವಾದಹರ ಚಿದಾನಂದ ತಾನಾದರಲ್ಲದೆ 5

103
ಆನಂದವಾಯಿತು ಬ್ರಹ್ಮ ಆನಂದವಾಯಿತು

ಆನಂದವಾಯಿತು ಬ್ರಹ್ಮ ಆನಂದವಾಯಿತು
ಆನಂದದೊಳು ಆನಂದವೇ ಆಗಿ
ಸ್ವಾನಂದ ಸುಖ ಶರೀರ ವ್ಯಾಪಿಸೆ ಪ

ಬಂಧತ್ರಯಾಭ್ಯಾಸದ ಬಂಧವ ಪಿಡಿಯುತ
ನಿಂದು ನಾಸಿಕಗೊನೆ ನಿಟಿಲವ ನೋಡುತ
ಛಂದ ಛಂದದ ಪುಷ್ಪ ಚದುರಲಿ ಕಾಣುತ
ಸುಂದರನಾದ ಕೇಳಿ ಸುಖಿಸುವರ ಕಂಡು 1

ಎಡಬಲ ಹಾದಿಯ ಎಡಬಲಕಿಕ್ಕುತ
ನಡುವಿನ ಮಾರ್ಗವ ನೇರದಿ ಪೊಕ್ಕು
ನಡೆದು ಸುಷುಮ್ನದ ನಾಳನೆಲೆಯ ನೋಡಿ
ಕುಡಿದಮೃತವ ಸೊಕ್ಕಿ ಕುಳಿತಿಹರ ಕಂಡು 2

ನಿದ್ರೆಯ ಕುಂಡಲಿ ನಿದ್ರೆಯ ತಿಳಿಪುತ
ಮುದ್ರಿಸಿ ನವಬಾಗಿಲನೆಲ್ಲವ ಮುಚ್ಚುತ
ಭದ್ರ ಮಂಟಪದೊಳು ಭಾಸದಿ ಬೆಳಗಿ ಸ-
ಮುದ್ರ ಗುರು ಚಿದಾನಂದ ಬೆರೆದವರ ಕಂಡು 3

104
ಆನೆ ಬಂದಿತಯ್ಯ ಯೋಗಿ ಎಂಬ ಆನೆ

ಆನೆ ಬಂದಿತಯ್ಯ ಯೋಗಿ ಎಂಬ ಆನೆ ಬಂದಿತಯ್ಯ
ಆನೆ ಬಂದಿತು ಪ್ರಪಂಚ ಪೇಟೆಯ
ತಾನೆ ಕೀಳುತ ತಳಪಟ ಮಾಡುತ ಪ

ಪಾಷಗಳೆಂದೆಂಬ ಸರಪಳಿ ಹರಿದು
ಈಷಣಗಳು ಎಂಬ ಸಂಕೋಲೆ ಮುರಿದು
ದ್ವೇಷವೆನಿಪ ಗಾಡಿಕಾರರನರೆದು
ಕ್ಲೇಷವೆನಿಪ ಕಾವಲವರ ಜಡಿದು 1

ದಶವಾಯುಗಳೆಂಬ ದನಗಳನೋಡಿಸಿ
ವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿ
ಹಸಿವು ತೃಷೆಗಳನು ಕಾಲೊಳಿಕ್ಕಿ
ಕಸೆಕಸೆ ಅಂಗಡಿಗಳನು ತೂರಿಕ್ಕಿ 2

ಬಹುಮತಗಳು ಎಂಬ ಮನೆಯನೆ ಕೆಡಹಿ
ಇಹಪರ ವಾಸನೆ ಕೊಟ್ಟಿಗೆ ಕೊಡಹಿ
ಮಹಾ ಅಭಿಮಾನದ ನಾಯಿಗಳ ಮುಡುಹಿ
ಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ 3

ಆನಂದ ಮದಧಾರೆ ಸಾಲುಸಾಲಿಡುತ
ಸ್ವಾನಂದ ಬೋಧ ಲಹರಿಯಲಿ ತೂಗುತ
ಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ
ತಾನೆ ತಾನಾಗಿ ತನ್ನ ಮರೆಯುತ 4

ಬೆಳಗುವ ಸುಷುಮ್ನ ಬಾಜಾರವಿಡಿದು
ಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದು
ತಿಳಿಗೊಳ ಸಹಸ್ರಾರದ ನೀರ ಕುಡಿದು
ಬಲು ಚಿದಾನಂದವೆಂಬ ಆನೆಯು ನಡೆದು 5

105
ಆವಾವಯ್ಯ ಇಹದ ಕುಲಗಳು

ಆವಾವಯ್ಯ ಇಹದ ಕುಲಗಳು
ಆವಾವಯ್ಯ ಇಹದ ಕುಲಗಳು
ಅಷ್ಟಮದಗಳನ್ನೇ ಗೆದ್ದು
ಭಾವಶುದ್ಧಿಯಿಂದ ಮುಕ್ತಿಭಾಮಿನಿಯನ್ನು ಸೇರಿದವಗೆ ಪ

ಮೂರನಳಿದು ಏಳ ಕಳೆದು ಮೂರ ಖಂಡಿಸಿ
ಏಳ ಮುರಿದು ಆರ ಮೂರ ಮೀರಿದವಗೆ 1

ನಾಕ ಕಳೆದು ಎರಡ ಮರೆತು ನಾಲ್ಕು ಮರೆತು ಎರಡ ತಿಳಿದು
ನಾಲ್ಕು ಎಂಟು ಎಂಬ ಜರೆದು ನಾಲ್ಕರಲ್ಲಿ ನಿಂತವನೆ 2

ಹತ್ತನಟ್ಟಿ ನವವ ಮೆಟ್ಟಿ ಹರಿಯ ಕೋಟಿ ಕಿರಣವೆಂಬ
ತತ್ವ ಚಿದಾನಂದ ತಾನೆ ತಾನೆ ಆದವಗೆ 3

106
ಇಲ್ಲವಿಲ್ಲವು ಮಾಯೆಯಿಲ್ಲ ಬ್ರಹ್ಮರ ಹೊಳೆವು

ಇಲ್ಲವಿಲ್ಲವು ಮಾಯೆಯಿಲ್ಲ ಬ್ರಹ್ಮರ ಹೊಳೆವು
ಬಲ್ಲವನರಿಯಲವ ಬ್ರಹ್ಮವಿನಾ ಜಗವಿಲ್ಲ ಪ

ಕಾಷ್ಟದಲಿ ರೂಪು ನಾಮಗಳೆಷ್ಟು ಆದರೇನು
ಕಾಷ್ಟದ ಹೊರತು ಮತ್ತಿನ್ನೊಂದು ಉಂಟೇ
ಶ್ರೇಷ್ಠ ಮೊದಲಾಗಿ ತೃಣವರೆಗೆ ದಿಕ್ಕುಗಳೆಲ್ಲ
ಶಿಷ್ಟಬ್ರಹ್ಮವಲ್ಲದೆ ಬೇರೆ ಜಗವಿಲ್ಲ 1

ಕನಕದಿಂದಲಿ ಒಡವೆ ನಾನಾ ಬಗೆಯಲಾಗೆ
ಕನಕವೇ ಹೊರತು ಮತ್ತಿನ್ನೊಂದು ಉಂಟೆ
ಏನಿತೆನಿತಸುರ ಸುರರು ಯಮುನೆ ಪರ್ವತವೆಲ್ಲ
ಘನಬ್ರಹ್ಮವಲ್ಲದಲೆ ಬೇರೆ ಜಗವಿಲ್ಲ 2

ಬ್ರಹ್ಮ ಆಧಾರದಲಿ ತೋರುತಡಗುವುದು ಮಾಯೆ
ಸುಮ್ಮನೆಯೆ ಮೃಗಜಲವು ತೋರಡಗಿದಾತ
ಹೆಮ್ಮೆ ತಾನೆಷ್ಟು ಮಾತಿನ ಮಾತ್ರವಲ್ಲದಲೆ
ನಿರ್ಮಲ ಚಿದಾನಂದ ವಿನಾ ಜಗವಿಲ್ಲ 3

107
ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ

ಇಲ್ಲವೋ ಮುಕ್ತಿ ಇಲ್ಲವಿಲ್ಲವೋ ಮೆಲ್ಲ ಮೆಲ್ಲನೆ ದೃಷ್ಟಿನಿಲ್ಲಿಸಿ
ಮೇರು ಶಿಖರವ ನೋಡುವತನಕ ಪ

ಚಕ್ರವಾರ ಮೆಟ್ಟಿನಿಂತು ಚಂಚಲಿಸದಂತೆ ದೃಷ್ಟಿಯಿಟ್ಟು
ವಿಕ್ರಮದಲಿ ಬ್ರಹ್ಮರಂದ್ರ ಪೊಕ್ಕು ತೇಜ ಕಾಣುವತನಕ 1

ದೃಢಚಿತ್ತದಲಿದ್ದು ಮಾರುತನ ಮೇಲಕೆ ಊದಿ
ಒಡನೆ ಕೂಡಿಸಿ ವಾಯುಮನವನು ಅಸುವನು ಕಾಣುವತನಕ 2

ಓಂಕಾರ ಧ್ವನಿಯ ಕೇಳಿ ಒತ್ತೊತ್ತು ಬೆಳಗಿನೊಳು
ಶಂಕರನೆನಿಪ ಚಿದಾನಂದ ಬ್ರಹ್ಮವನೆ ಕಾಣುವ ತನಕ 3

108
ಇಹಾತನೆ ಯೋಗಿ ಜಗದೊಳಗೆಲ್ಲವೂ ತಾನಾಗಿ

ಇಹಾತನೆ ಯೋಗಿ ಜಗದೊಳಗೆಲ್ಲವೂ ತಾನಾಗಿ
ಇಹಾತನೆ ಯೋಗಿ ಪ

ಉಡುವರ ಕಂಡು ಉಡುವನು ತಾನು
ತೊಡುವರ ಕಂಡು ತೊಡುವನು ತಾನು
ಕೊಡುವರ ಕಂಡು ಕೊಡುವನು ತಾನಾಗಿ 1

ನಡೆವರ ಕಂಡು ನಡೆವನು ತಾನು
ಹಿಡಿವರ ಕಂಡು ಹಿಡಿವನು ತಾನು
ಬಿಡುವರ ಕಂಡು ಬಿಡುವನು ತಾನು 2

ಪೇಳ್ವರ ಕಂಡು ಪೇಳ್ವನು ತಾನು
ಕೇಳ್ವ ಕಂಡು ಕೇಳ್ವನು ತಾನು
ತಿಳಿವರ ಕಂಡು ತಿಳಿವನು ತಾನಾಗಿ 3

ಆಡುವರ ಕಂಡು ಆಡುವನು ತಾನು
ಕಾಡುವರ ಕಂಡು ಕಾಡುವನು ತಾನು
ಓಡುವರ ಕಂಡು ಓಡುವನು ತಾನಾಗಿ 4

ಹಿರಿಯರ ಕಂಡು ಹಿರಿಯನೆ ತಾನಾಗಿ
ಕಿರಿಯರ ಕಂಡು ಕಿರಿಯನೆ ತಾನಾಗಿ
ಗುರು ಚಿದಾನಂದನೆ ತಾನಾಗಿ 5

109
ಎಂಬೆನು ವಿವೇಕ ಮನುಜಗೆ ಇರೆ ಎಂಬೆನು

ಎಂಬೆನು ವಿವೇಕ ಮನುಜಗೆ ಇರೆ ಎಂಬೆನು ಬ್ರಹ್ಮನು ಎಂಬೆ
ಎಂಬೆನು ವಿವೇಕ ಮನುಜಗೆ ಇಲ್ಲದಿರೆ
ಕತ್ತೆಯಮರಿಯದು ಎಂಬೆ ಪ

ವೇದದ ನಿಜ ಅರ್ಥವ ತಿಳಿದಡೆ ಉತ್ತಮೋತ್ತಮನು ಎಂಬೆ
ಕ್ರೋಧದಿ ತರ್ಕದಿ ಕಾದಾಡುವವನು
ಕೋಳಿಯ ಹುಂಜನು ಎಂಬೆ
ನಾನಾರೆನುತಲಿ ನಿಜವನು ತಿಳಿವನ ನಾರಾಯಣನು ಎಂಬೆ
ನಾದದ ತಿಳಿವನು ನಿಂದಿಸುವಾತನ ಸರಸವಾಡೋ ಪಶು ಎಂಬೆ 1

ಮತಿಯ ವಿಚಾರದಿ ಜಗ ಬ್ರಹ್ಮವೆಂಬನ ವಿಚಾರವಾದಿಯು ಎಂಬೆ
ಯತಿಗಳು ಬರೆ ಕುಳಿತೇಳದ ಮನುಜನ
ಎಮ್ಮೆಯ ಮಗನವನೆಂಬೆ
ಸುತ್ತಮುತ್ತಂಗನೆ ಮೋಹವ ತೊರೆದನ
ಯೋಗಪುರುಷ ತಾನೆಂಬೆ
ಗತಿಮತಿ ತೊರೆದಿಹ ನರನನು ಈಗಲೆ
ಎಂಜಲು ತಿಂಬುವ ನಾಯೆಂಬೆ 2

ಪರಮಾರ್ಥದಿ ಶಮದಮದಿಂದಿಹನನು ಪಂಡಿತನೀಗಲು ಎಂಬೆ
ಹಿರಿಯರ ಕಾಣಲು ಹಲ್ಲನೆ ಕಿರಿವನ ಹಿರಿಯ
ಮುಸುವನು ತಾನೆಂಬೆ
ಗುರಿಯನು ತಪ್ಪದೆ ದೃಷ್ಟಿಸಿ ನಡೆವನ ಗುಣಕೆ ಅತೀತನು ಎಂಬೆ
ಬರಿಯ ಪ್ರತಿಷ್ಟೆಯ ಸಾಧಿಸುತಿರುವನ
ಬರಡು ಗೊಡ್ಡು ಎಂದೆಂಬೆ 3

ನಾದದ ಧ್ವನಿಯನು ಕೇಳುತಲಿಹನನು ಜಗಜೀವನನು ಎಂಬೆ
ನಾದದ ಸುಖವನು ಅರಿಯದ ನರನನು
ಜೀನುಗಾರನು ಎಂದೆಂಬೆ
ದಿನಕರ ಕೋಟಿಯ ತೇಜದಿ ಹೊಳೆವನ ದಿವ್ಯ
ಮೂರುತಿ ಎಂದೆಂಬೆ
ವನವನ ಅಲೆಯುವ ಬರಡು ಮುನಿಯನು
ವನಕೆಯ ತುಂಡದು ತಾನೆಂಬೆ 4

ಆತ್ಮದ ಕಳೆಯನು ಅರಿತವನಿದ್ದರೆ ದೃಢದಲಿ ಬ್ರಹ್ಮನು ಎಂಬೆ
ಸತ್ವಶಾಲಿ ಆ ಮಹಿಮರ ಜರೆವರ ಗುಡ್ಡದ
ಗೂಗೆಯಮರಿ ಎಂಬೆ
ಚಿನುಮಯ ಚಿನ್ಮಾತ್ರನೆ ತಾನಾದವನನು ಚಿದಾನಂದ ಗುರುವೆಂಬೆ
ಕರೆಕರೆ ಎನಿಸುವ ಸಾಧು ವೇಷವನು ದೂರಕೆ ನೀ ನಿಲ್ಲೆಂಬೆ 5

110
ಎಂಥಾ ಮರವೆ ಮಾಡಿತೋ ಈ ಪ್ರಣವ ನಾದಾ

ಎಂಥಾ ಮರವೆ ಮಾಡಿತೋ ಈ ಪ್ರಣವ ನಾದಾ
ಎಂಥಾ ಮರವೆ ಮಾಡಿತೋ
ಅಂತರಂಗದಲಿ ಭೋರೆಂದು ತುಂಬಿ
ಅಂತು ಅಂತೆನಲು ಕೂಡದು ಪ್ರಣವನಾದ ಪ

ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದ
ಮುಟ್ಟು ಚಟ್ಟನೆ ಮರೆಸಿತು
ಕೆಟ್ಟಕೇಡನೇನ ಹೇಳಲಿ
ಉಟ್ಟ ಬಟ್ಟೆಯ ಅರಿವೇ ಇಲ್ಲ 1

ಆಸೆಯೆಂಬುದ ಮರೆಸಿತು ಈ ಪ್ರಣವನಾದ
ದ್ವೇಷವೆಂಬುದು ತೊರೆಸಿತು
ನಾಶವಾಯಿತು ಜಪತಪವೆಲ್ಲ
ಮೋಸವೆನಗಿಂತು ಮಾಡಿತು 2

ಧ್ಯಾನವೆಂಬುದು ಮರೆಸಿತು ಈ ಪ್ರಣವನಾದ
ಓಂಕಾರವೆಂಬುದು ಕಲಿಸಿತು
ಜ್ಞಾನಮೂರುತಿ ಚಿದಾನಂದ
ತಾನೆ ತಾನೆ ತಾನೆ ಎಂಬ 3

111
ಎತ್ತಲಿಂದ ಬಂದೆ ಎನ್ನ ಒಗೆತನಕೆ

ಎತ್ತಲಿಂದ ಬಂದೆ ಎನ್ನ ಒಗೆತನಕೆ ಎಲೆಖೋಡಿ ಸವತಿ
ಎತ್ತಲಿಂದ ಬಂದೆ ಎನ್ನ ಒಗೆತನಕೆ ಪ

ಕತ್ತಲು ಬೆಳುದಿಂಗಳಂತಾಯಿತು
ಮಿತ್ತು ಎತ್ತಲಿಂದ ಬಂದು ಸೇರಿತು
ಬಂದು ಎದುರಿಗೆ ಹಲ್ಲ ತೆರೆದಳು
ಒಂದು ಮಾತನು ಆಡದೆನ್ನೊಳು
ಒಂದನ್ನು ಸೇವೆಗೆ ಬರಗೊಡಳು
ಸಂದಿಯಲಿ ಲೊಟಕೆಯ ಹಾಕುತಲಿಹಳು 1

ಹಾಲೊಳು ವಿಷವ ಹೊಯ್ದಂತೆ ಮಾಡಿದಳು
ಇಲ್ಲವನೆ ಹೇಳಿ ಕಾಲಕಾಲಲಿ ಎನ್ನ ಒದೆಸಿದಳು
ಬೇಳ ಮೇಳದಿ ತೊಡೆಯ ಮೇಲೆ ಹೊರಳಿ
ಮೇಲೆಯೆ ಮೀಸೆಯ ಹುರಿ ಮಾಡುವಳು 2

ನೆರಳ ನೀರೊಳು ಬಗ್ಗಿ ನೋಡುವಳು ಎಬ್ಬಿ ತೆಗೆದು
ಮರಳಿ ಮರಳಿ ಒಡವೆಯ ನಿಡುವಳು
ಹೊರಯಿಕೆ ಒಳಯಿಕೆ ಮುರುಕಿಸಿ ನಡೆಯುತ
ಲಿರೆ ಗಂಡಸು ಎಂದು ಅಣಕಿಸುತಿಹಳು 3

ಮೋರೆಯನೀಗ ಎನಗೆ ತೋರಿಸಳು
ಸೀರೆ ಕುಪ್ಪಸವ ಆರು ಕಾಣದಂತೆ ಉಡುವಳು
ದಾರಿಯ ಹಿಡಿ ನೀನಿರಬೇಡೆಂಬಳು
ನೂರು ಬಾರಿಯು ಸಾರಿದೆನೆಂಬಳು 4

ಮಾತವಳ ಕೂಡ ಆಡಿ ಎಂಬಳು ಎನ್ನ ಕೈಯಲಿ ಖಡ್ಡಿ
ಯಾತಕೆ ಎನ್ನ ಕರದೆ ಎಂಬಳು
ದಾತ ಚಿದಾನಂದನ ಚಿಂತನೆ ಮರೆಸಿ
ಪಾತಕಿ ಎನ್ನ ಒಗೆತನ ಕೊಂಡಳು 5

ಜನನ ಮರಣಗಳಳಿದು ಜಠರ ಬಾಧೆಗಳಳಿದು
ಘನ ಪುರುಷನಾಗಿ ಘನತಾನಾಗಿ ಇರುವನವನ 6

ಸಕಲ ವಾಸನೆಯಳಿದು ಸಪ್ತ ವ್ಯಸನಗಳಳಿದು
ಅಖಿಲೇಂದ್ರಿಯಗಳ ವ್ಯಾಪಾರವಳಿದು
ಸುಖ ದುಃಖವೆರಡಳಿದು ಸೂಕ್ಷ್ಮ ದೇಹವನಳಿದು
ಮುಕುತಿ ಪತಿ ಚಿದಾನಂದ ಮೂರುತಿ ತಾನಾದವನು 7

112
ಎದ್ದ ನೋಡಿ ಯೋಗಿ ದಿವಾಳಿ ತನ್ನ

ಎದ್ದ ನೋಡಿ ಯೋಗಿ ದಿವಾಳಿ ತನ್ನ
ಉದ್ಯೋಗವುಡುಗಿ ಕೈಗಂಟು ಮುಳುಗಲು ಪ

ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತು
ಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು 1

ತಪ್ತನಾಲಕು ಒಡವೆ ತಾರದಲ ಹೋಯಿತು
ಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತು
ಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು 2

ದೇಣಿಗಾರನು ಚಿದಾನಂದನು ಒಂದೇ ಕುಳಿತು
ದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿ
ದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆ
ಮಾಣದಲೆ ತನ್ನಾಳು ಮಗನ ಮಾಡಿಕೊಂಡ 3

113
ಎಲ್ಲಿದ್ದರೇನು ಯೋಗಿ ಮತ್ತೆಲ್ಲಿದ್ದರೇನು

ಎಲ್ಲಿದ್ದರೇನು ಯೋಗಿ ಮತ್ತೆಲ್ಲಿದ್ದರೇನು
ಫುಲ್ಲ ಲೋಚನನರಿತು ಪುರುಷೋತ್ತಮನಾದ ಬಳಿಕ ಪ

ಈಷಣ ತ್ರಯವಳಿದು ಇಷ್ಟ ಕಾಮ್ಯಗಳಳಿದು
ದೋಷವೆಂಬುದ ನಳಿದು ದ್ವೇಷವಳಿದು
ಆಸೆಯೆಂಬುದು ಅಳಿದು ಅಷ್ಟಪಾಶಗಳಳಿದು
ಈಶ ಸರ್ವೇಶವಿಭು ತಾನಾಗಿರುವವನು 1

ಮನದ ವರ್ತನೆಯಳಿದು ದುಷ್ಟಮದಗಳ ಕಳೆದು
ಕನಸು ಜಾಗೃತಿ ಸುಷುಪ್ತಿ ಕರ್ಮವಳಿದು
ಜನನ ಮರಣಗಳಳಿದು ಜಠರ ಬಾಧೆಗಳಳಿದು
ಘನ ಪುರುಷನಾಗಿ ಘನ ತಾನಾಗಿ ಇರುವವನು 2

ಸಕಲ ವಾಸನೆಯಳಿದು ಸಪ್ತವ್ಯಸನಗಳಳಿದು
ಅಖಿಲೇಂದ್ರಿಯಗಳ ವ್ಯಾಪಾರವಳಿದು
ಸುಖದುಃಖವೆರಡಳಿದು ಸೂಕ್ಷ್ಮ ದೇಹವನಳಿದು
ಮುಕುತಿ ಪತಿ ಚಿದಾನಂದ ಮೂರುತಿ ತಾನಾದವನು 3

114
ಏನು ಭಯ ನನಗೆ ಏನು ಭಯ

ಏನು ಭಯ ನನಗೆ ಏನು ಭಯ
ತಾನೆಯಾದ ಪರಬ್ರಹ್ಮ ತಾನೆಯಾಗಿ ತಾನಿಹಗೆ ಪ

ಕಾಮಿಸಿ ಸುತರು ಸೊಸೆಯು ಕೊನೆಯಿಲ್ಲದ ಬಯಕೆಯಾಗೆ
ಕಾಮನನ್ನು ಕಾಲಲೊದ್ದು ಕಸಕೆ ಮಾಡಿದವಗೆ 1

ಇಹಪರ ವಾಸನೆಯನೆಲ್ಲ ಲೋಕ ವಾಸನೆಯ
ದಹಿಸಿ ಬೂದಿಯನ್ನೆ ಮಾಡಿ ಧೂಳಿಪಟ ಮಾಡಿದವಗೆ 2

ಬಣ್ಣ ಬಣ್ಣದ ಕ್ರೋಧಮದಗಳ ಬಳಿದು ಶೋಕ ಮೋಹವ
ನುಣ್ಣಗೆ ಮಾಡಿ ಎಲ್ಲವ ನುಂಗಿ ನೀರು ಕುಡಿದವಗೆ 3

ದಿಟ್ಟ ತಾಪತ್ರಯ ಕ್ಲೇಶ ದುಷ್ಟಗುಣ ವೆಂಬುದೆಲ್ಲವ
ಹೊಟ್ಟು ಮಾಡಿ ಹಾರಲೊದ್ದಿಹ ದಿಟ್ಟ ಮಾನವಗೆ 4

ಕ್ರಿಯಾ ಭ್ರಾಂತಿ ಸಂಶಯ ಕಪಟ ಮೋಹ ಮೊಳೆಯ ಕಿತ್ತು
ಬಯಲು ಚಿದಾನಂದ ಸದ್ಗುರು ಬ್ರಹ್ಮವಾಗಿ ತೂಗುವಗೆ 5

115
ಏಸು ಜನ್ಮದ ಸುಕೃತವದು ಬಂದು ಒದಗಿತೋ

ಏಸು ಜನ್ಮದ ಸುಕೃತವದು ಬಂದು ಒದಗಿತೋ
ದೇಶಿಕೋತ್ತಮನ ದಯದಿ
ಆಸೆಗಳು ಮರೆಯಾಗಿ ಅಷ್ಟ ಪಾಶಗಳಳಿದು
ಈಶ ಸರ್ವೇಶನಾಗಿ ಹೋದೆ ಪ

ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆ
ಮಂಗಳವೆ ತೋರುತಿಹುದು ಅಹುದು
ತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-
ದಿಂಗಳನೆ ಹರಡಿದಂತೆ ಅಂತು
ಕಂಗೊಳಿಸುತಿಹುದು ಬಗೆಬಗೆಯ ವರ್ಣಭಾಯೆ
ಅಂಗ ವರ್ಣಿಸುವರಾರೋ ಆರೋ
ಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದು
ಹಿಂಗದನುದಿನ ತೋರುವ ಗುರುವಾ 1

ನಾದವದು ಸುನಾದ ಸುಸ್ವರವರಳೆ
ಭೇದವೆಂಬುದು ಮರೆಯಿತು ಕುರಿತು
ಮದವು ಇಂದ್ರಿಯ ಸ್ವರ ವ್ಯಾಪಾರ ಉಡುಗಿ
ಹೋದವು ಸುಖದಿ ಮುಳುಗಿ
ಕ್ರೋಧ ಕಾಮವು ಲೋಭ ಎಂಬುವರ ಕೈಕಾಲು
ಸೇದಿದುವು ಬೋಧದೊಳಗೆ ಕೆಳಗೆ
ಛೇದವಾದುವು ತಾಪತ್ರಯವು ಈಷಣ ವ್ಯಸನ
ಮೋದಿದರು ಅಮೃತ ಕಳದಿ ಝಳದಿ 2

ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆ
ಚಿತ್ತವೆಂಬುದು ಸಾಯೇ ಬೇಯೆ
ಮತ್ತೆ ಮನ ದೃಗ್ ದೃಶ್ಯ ಧಾರಣರವರು
ಎತ್ತ ಹೋದರೋ ಎಲ್ಲರೂ
ಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರು
ಎತ್ತುವರು ಇಲ್ಲದಾಯ್ತು ಹೋಯ್ತು
ಪ್ರತ್ಯಗಾತ್ಮನು ಚಿದಾನಂದ ಗುರು ತಾನಾದ
ಅತ್ಯುಕ್ತಿ ಹೇಳ್ವುದೇನು ಏನು 3

116
ಒಂದೇ ಬ್ರಹ್ಮವು ಮತ್ತೊಂದಿಲ್ಲವು

ಒಂದೇ ಬ್ರಹ್ಮವು ಮತ್ತೊಂದಿಲ್ಲವು
ಇದ್ದುದು ಬ್ರಹ್ಮವು ಒಂದೇ
ಒಂದನು ಎರಡಾಗಿ ಮಾಡುವುದೆಂತೈ
ಮಾಡಲು ಕೆಡುವನು ಮುಂದೆ 1

ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲ
ಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆ
ನಾನಾ ಜೀವಕೆ ಬ್ರಹ್ಮವೊಂದೇ 2

ಲೋಹಗಳಿಂದಲಿ ಅನೇಕ ವಿಧವಿರೆ
ಅನೇಕ ವಿಧಕೆ ಲೋಹವೊಂದೇ
ಮಹಾಬ್ರಹ್ಮಾದಿ ಮಹತ್ತು ಅಣುವಿರೆ
ಮಹತ್ತು ಅಣುವಿಗೆ ಬ್ರಹ್ಮವೊಂದೇ 3

ಬೀಜದಿಂದ ಬೀಜವನೇಕವಾಗಲು
ಅನೇಕ ಬೀಜಕೆ ಬೀಜವೊಂದೇ
ತೇಜ ಚಿದಾನಂದ ಬ್ರಹ್ಮವು ಸರ್ವವು
ಆ ಸರ್ವಕೆ ಬ್ರಹ್ಮವು ತಾನೊಂದೆ 4

117
ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ

ಕಂಡಿರೇ ಬ್ರಹ್ಮದಾಟವ ಕಂಡಿರೆ ಬ್ರಹ್ಮದಾಟ ಅ-
ಖಂಡರಾದ ಮಹಾತ್ಮರಿರಾ ಪ

ಬುದ್ಧಿಯನ್ನು ಹೇಳುತಿದೆ ಬುದ್ಧಿಯನ್ನು ಕೇಳುತಿದೆ
ಬುದ್ಧಿಹೀನನೆಂದು ತಾನೆ ಬದ್ಧನಾಗಿ ಕುದಿಯುತಿದೆ 1

ಒಮ್ಮೆ ಸುಖಪಡುತಲಿದೆ ಒಮ್ಮೆ ದುಃಖ ಮಾಡುತಿದೆ
ಒಮ್ಮೆ ಹಾಡಿಪಾಡಿ ನಕ್ಕು ಒಮ್ಮೆ ಕೆಲೆದು ಕೆನೆಯುತಿದೆ 2

ದುಡುಕು ತಾನು ಮಾಡುತಿದೆ ದುಡುಕು ಅವನದೆನ್ನುತಿದೆ
ದುಡುಕು ದುಡುಕು ಎಂದು ತಾನೆ ಬಿಡಿಸಿ ನ್ಯಾಯ ಹೇಳುತಿದೆ 3

ಗಂಡ ಹೆಂಡಿರಾಗಿ ಇದೆ ಗಂಡು ಮಗನ ಬೇಡುತಿದೆ
ಗಂಡು ಗಂಡು ಎಂದು ತಾನು ಗಂಡ ದೀಪ ಹೊರುತಲಿದೆ 4

ಬಹಳ ವೇಷ ಹಾಕಿ ಇದೆ ಬಹಳ ಹೆಸರ ಕರೆಸುತಿದೆ
ಬಹಳ ಚೇಷ್ಟೆಯಿಂದ ತಾನು ಬಹಳ ಭೇದವಾಗಿ ಇದೆ 5

ಇಂತು ಬಹಳ ರೂಪವಿದೆ ಇಂತು ತಿಳಿಯಲೊಂದೆ ಇದೆ
ಇಂತು ಚಿದಾನಂದ ಬ್ರಹ್ಮ ಇಂತು ಹೊತ್ತು ಕಳೆಯುತಿದೆ 6

118
ಕಂಡ್ಯ ಕೆಳದಿ ಮಾಡಿದ ಮಾಟ ಕಂಡ್ಯ ಕೆಳದಿ

ಕಂಡ್ಯ ಕೆಳದಿ ಮಾಡಿದ ಮಾಟ ಕಂಡ್ಯ ಕೆಳದಿ
ಗಂಡನು ತಾನೆಂಬ ಖಂಡನಂಬುಗೆ ಗೊಟ್ಟು
ಹಿಂಡನಗಲಿಸಿದನು ಉದ್ದಂಡ ಚಿದಾನಂದ ಪ

ಅವರಿಗೆ ನಾ ಮರುಳಾಗಿ ತನಯ
ರೈವರ ಬಿಟ್ಟೆ ನಾಲ್ವರು ಭಾವಂದಿರನು ಬಿಟ್ಟೆ ಸನುಮ-
ತವಾಗಿದ್ದ ಸರಿವರ್ಗತನವ ಬಿಟ್ಟೆ
ನಿನಗೆ ಮಾಡಿದ ಲೇಸ ಎನ್ನಲೇಸನು ನೀನು 1

ಅರಸನೊಳ್ಳಿದನೆಂದು ಅರಣ್ಣರ ಬಿಟ್ಟೆ
ಹಿರಿಯ ಮಮತೆಯಲ್ಲಿದ್ದ ಅಕ್ಕಂದಿರನು ಬಿಟ್ಟೆ
ಸರಿಹೋಗಿ ಎನಗಿಷ್ಟದ ಸವತಿ ಮೂವರ ಬಿಟ್ಟೆ
ಕರುಣಾಕರನು ಕೈ ವಿಡಿಯಲಂತಾದುದಾ 2

ಅತಿಮೋಹ ಮಾಡುವ ಅಷ್ಟಾಪ್ತರನು ಬಿಟ್ಟೆ
ಪಿತರೀರ್ವರನು ನಾನು ಹೇವರಿಸಿ ಬಿಟ್ಟೆ
ಸತತ ಚಿಂತಿಪ ಹತ್ತು ಸಖಿಯರನು ನಾ ಬಿಟ್ಟೆ
ಮತಿ ಎನಗಿನ್ನೇನೆ ಮಂದಗಮನೆ ಹೇಳೆ 3

ನಿತ್ಯ ಕಾಲದಿ ಅವನ ನಿಜಸೇವೆ ಮಾಡುತಿಹೆ
ಸತ್ಯ ಸತ್ಯವೆ ಎಂಬ ತೆರದಿಂದಲಿ
ಪ್ರತ್ಯಗಾತ್ಮನು ತನ್ನ ಕೀರ್ತಿವಾರ್ತೆಯ ನೆಲ್ಲ
ಕೂರ್ತು ಮರೆಯಾದಂತೆ ಎನಗೆ ಮಾಡಿದುದ ನೀನು 4

ಎನ್ನ ಸುಖದುಃಖ ಫಲ ಎನ್ನ ಕೈ ಮೇಲುಂಟೆನೆ
ಚೆನ್ನ ಚಿದಾನಂದ ಗುರುವಿನಿಂದ
ಉನ್ನತ ನಂಬುಗೆ ಎಂಬುದಿಂತಾಯಿತೇ
ಬಣ್ಣಿಸಲೇನವ್ವ ಬಯಲ ಕೂಡಿಸಿ ಬಿಟ್ಟ 5

119
ಕವಿ ಮಾತುಗಳ ಕೇಳಿ ಕೆಟ್ಟೋಗಬೇಡಿರಿ

ಕವಿ ಮಾತುಗಳ ಕೇಳಿ ಕೆಟ್ಟೋಗಬೇಡಿರಿ
ಕವಿ ನಾಶ ತನವೆಂದು ಹೇಳಲಿಲ್ಲ
ಶಿವನ ತಿಳಿದು ನಿಮ್ಮ
ಶಿವನೆಂದು ಕಂಡರೆ ಸಾಕ್ಷಾತ್ ಬ್ರಹ್ಮನೆ ನೀವೆಯೆಲ್ಲಾ ಪ

ಸೋಗೆಗಣ್ಣುಗಳೆಂದು ಹೇಳಿದನಲ್ಲವೇ
ಸೋಗೆಗಣ್ಣಿನ ಸೀಳ ಹೇಳಲಿಲ್ಲ
ಮೂಗನು ಸಂಪಿಗೆ ನನೆಯೆಂದನಲ್ಲವೆ
ಮೂಗಿನ ಸಿಂಬಳ ಹೇಳಲಿಲ್ಲ 1

ಬಾಯಿ ಕರ್ಪೂರದ ಕರಡಿಗೆ ಎಂದನಲ್ಲವೆ
ಬಾಯೊಳಗಣ ಲೊಟ್ಟೆ ಹೇಳಲಿಲ್ಲ
ಕಾಯವು ಕನಕದ ಬಾಳ ಎಂದನಲ್ಲವೆ
ಕಾಯ ದುರ್ಗಂಧವ ಹೇಳಲಿಲ್ಲ 2

ಮಂದಗಮನೆ ಎಂದು ನಡೆಗಂದನಲ್ಲವೆ
ಹಂದಿದುಟಿಯನದ ಹೇಳಲಿಲ್ಲ
ಸುಂದರ ಸರ್ಪವೇಣಿ ಎಂದನಲ್ಲವೆ
ಸಂದಿ ಸಂದಿಯ ಹೇನ ಹೇಳಲಿಲ್ಲ 3

ನರದೇಹವನು ಕೊಂಡಾಡಿದನಲ್ಲವೆ
ನರದೇಹ ನರಕವೆಂದ್ಹೇಳಲಿಲ್ಲ
ಗುರು ಚಿದಾನಂದ ಸದ್ಗುರುನಾಥನ ನಂಬಿ
ಶರೀರವ ಕಳೆ ಎಂದು ಹೇಳಲಿಲ್ಲ 4

120
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು

ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು
ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ

ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣ
ಎಲುಬುಗಳಡಕಲಿ ನರಗಳ ಬಿಗಿವು ಎಡದೆರಪಿಲ್ಲದೆ ಇಹುದಣ್ಣ ಬಲು
ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ
ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1

ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ
ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣ
ಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣ
ಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2

ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣ
ಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣ
ಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣ
ಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3

121
ಕುಲವೇನೆಂತು ಹೇಳಲಿ ಯೋಗೀಶನ

ಕುಲವೇನೆಂತು ಹೇಳಲಿ ಯೋಗೀಶನ
ಕುಲವೇನೆಂತು ಹೇಳಲಿ
ಕುಲವ ಕೇಳುತಿಹ ಕತ್ತೆಯ ಮಗನಿಗೆ ಪ

ಬಲಿದು ಆಧಾರವನು ಕುಂಬಕದೊಳು ನಿಲಿಸಿ ವಾಯುವನು
ನೆಲೆಯನು ಹತ್ತಿಸಿ ನೆಲೆಯಾಗಿ ನೆಲೆಸಿ
ನೆಲೆಯೊಳು ಕುಳಿತಿಹ ಪುಣ್ಯ ಪುರುಷನಿಗೆ 1

ಜಾಗ್ರತದಿ ಸ್ವಪ್ನವನು ಸುಷುಪ್ತಿಯು ಸಹ
ನಿಗ್ರಹಿಸೆಲ್ಲವನು ಸ್ವರ್ಗದ ಮೇಲೆ ಮಹಾ ಸ್ವರ್ಗವಿರಲು
ಸುಸ್ವರ್ಗದಿ ನೆಲೆಸಿಹ ಭರ್ಗನಾದವಗೆ 2

ಎಣಿಕೆಯ ಜನ್ಮವನು ಕಳೆದು ಮುಂದೆ
ಕ್ಷೀಣಿಸಿ ಪ್ರಾರಬ್ಧವನು ತ್ರಿಣಯನನಾಗಿ ದಿನ
ಮಣಿಯಾಗಿ ಕಣಿಯಾಗಿ
ಗುಣಕಗೋಚರ ಚಿದಾನಂದನಾದವನಿಗೆ 3

122
ಕೊಡವನು ಹೊರಲಾರೆನೆ ಅಕ್ಕ

ಕೊಡವನು ಹೊರಲಾರೆನೆ ಅಕ್ಕ
ಕೊಡವನು ಹೊರಲಾರೆನೆ
ಕೊಡವನು ಹೊರಲಾರೆ ಕಷ್ಟಪಡಲಾರೆ
ಕೊಡವನು ಒಡೆದರೆ ಕಡೆಹಾಯುವೆನೆ ಪ

ತಿಳಿಯಲು ಒಂಭತ್ತು ಪೂರ್ತಿ ಕೊಡನೆ
ತೊಳೆಯುವ ನಿತ್ಯವು ತುಂಬಿಹ ಕೊಡನೆ
ಹೊಲಸಿನ ಹೊದಿಕೆಯ ಹೊದ್ದಿಹ ಕೊಡನೆ
ತೊಳೆದರು ನಿತ್ಯ ಶುಚಿಯಾಗದ ಕೊಡನೆ 1

ರೂಪು ದಿನದಲಿ ಮಾಸಿಹ ಕೊಡನೆ
ಅಪತ್ತಿನಿಂದ ನರಳುವ ಕೊಡನೆ
ಪಾಪದ ಪುಂಜದ ಪಡಿಶಂಟು ಕೊಡನೆ
ಜೋಪಾನ ಮಾಡಲು ಜರಿವಾ ಕೊಡನೆ 2

ಎಲ್ಲಿಂದ ಬಂದಿತೋ ಎನಗೀ ಕೊಡವು
ಎಲ್ಲಿಯ ಪಾಪಿಯು ಮಾಡಿದ ಕೊಡವು
ಬಲ್ಲ ಚಿದಾನಂದನ ಮರೆಸುವ ಕೊಡವು
ಬಾಳನು ಕೊಡಿಸುವ ಸತಿಯೆಂಬ ಕೊಡವು 3

123
ಕೋಲನ್ನ ಕೋಲೇ ಕೋಲೇ ಕೋಲನ್ನ ಕೋಲೇ

ಕೋಲನ್ನ ಕೋಲೇ ಕೋಲೇ ಕೋಲನ್ನ ಕೋಲೇ
ಸದ್ಗುರುವ ಬಲಗೊಂಬೆ ಕೋಲನ್ನ ಕೋಲೆ ಪ

ನಾಯಿಗೋಣನೆ ಮುರಿದು ನಾಗಾರ ಇಲಿ ತಿಂದು
ಹೋಯಿತೇ ಕಣ್ಣು ಕಾಗೆಯದು ಕೋಲನ್ನ ಕೋಲೆ 1

ಕಷ್ಟದ ಹದ್ದನೆ ಬಡಿದು ಇಷ್ಟವಿಲ್ಲದೆ ಗುಡ್ಡವನೇರಿದವನ ನರಿ
ಸೂಚಿಸಿತೇ ಕೋಲನ್ನ ಕೋಲೆ 2

ಆನೆಯ ಅಣುನುಂಗಿ ಅಡರಿತೇ ಮೇಲಕೆ
ಕೋಣನ ಕೋಗಿಲೆ ನುಂಗಿತೇ ಕೋಲನ್ನ ಕೋಲೆ 3

ಊದಿತ್ತು ಓಲೆಯು ಒಂಭತ್ತು ಮಡಕೆಗೆ
ಹಾದಿಯಾಯಿತೇ ನಡುವಣ ಮಾರ್ಗ ಕೋಲನ್ನ ಕೋಲೇ 4

ಕದವನೆ ತೆರೆದು ಕಳ್ಳರ ಬಲಿಕೊಟ್ಟು
ಮೊದಲಗಿತ್ತಿಗೆ ಮೂಗುತಿಯಿಟ್ಟೆ ಕೊಲನ್ನ ಕೋಲೇ 5

ಬೆಳುದಿಂಗಳು ತುಂಬಿ ಬೆಳ್ಳಿಯ ತೆರೆಯೆದ್ದು
ಕೊಳವುಕ್ಕಿ ಕಮಲ ಕಳೆಯೇರೆ ಕೋಲನ್ನ ಕೋಲೇ 6

ಓಡಿಲಗಲ ಮಾಡಿ ಉಣ್ಣದೂಟವುಂಡು
ಓಡುವ ಹಾರುವನ ಕಟ್ಟಿಹಾಕಿ ಕೋಲನ್ನ ಕೋಲೆ 7

ಕೋತಿಯು ಸತ್ತಿತೇ ಕೊಡವೀಗ ಒಡೆಯಿತೇ
ಜೋತಿಯು ಒಳಗ್ಹೊರಗೆ ಬೆಳಗಿತೇ ಕೋಲನ್ನ ಕೋಲೆ 8

ಮುದುಕಿಯನೆ ಕೊಂದು ಮರವನೆ ಮುರಿದೊರಗಿ
ಚಿದಾನಂದ ಬ್ರಹ್ಮ ತಾನಾಯಿತೇ ಕೋಲನ್ನ ಕೋಲೆ 9

124
ಕೋಲು ಕೋಲು ಕೋಲು ಕೋಲೇ

ಕೋಲು ಕೋಲು ಕೋಲು ಕೋಲೇ
ಕೋಲೇ ಕೋಲನ್ನ ಪ

ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿ
ನಾದದ ನಾದ ಸುನಾದವ ಕೇಳಿ
ಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕು
ಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ 1

ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿ
ಜಾಣತನದ ನಾಗ ಸ್ವರವನೂದಿ
ಮಾಣದೆ ಮುತ್ತುಗಳುದುರುವ ಬಯಲಲಿ
ಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ 2

ಪೀಕುತ ನಾಲಗೆ ಕ್ಷೀರಾಹಾರದೊಳಿದ್ದು
ನೂಕುತಂಗಲದೊಳು ರಸನವನು
ತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡು
ಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ 3

ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿ
ಕಣ್ಣ ಅಂತರ್ಯದಿ ದೃಷ್ಟಿಯಿಟ್ಟು
ಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳು
ಥಣ್ಣಗೆ ಥಳ ಥಳಿಸುವುದದು ಹಟ ರಾಜ 4

ವಾಯುವ ಸಮನಿಸಿ ರೇಚಕ ಪೂರಕದಿಂದ
ಸಾಯಾಸದಲಿ ಕುಂಭಕವ ನಿಲ್ಲಿಸಿ
ಬಾಯಿ ಮಾಡುವ ಸುನಾದವ ಲಕ್ಷಿಸಿ
ಹಾಯಿ ಎಂದೆನಿಪ ಸುಖಹೊಂದೆ ಲಯಯೋಗ 5

ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿ
ದೃಷ್ಟಿಸಿ ತನ್ನನೆ ನೋಡುತಿರೆ
ಸುಟ್ಟು ಜೀವತ್ವವ ದೇಹಭಾವವ ಮರೆತು
ಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ 6

ಹೊರಗೊಂದು ಆಗದೆ ಒಳಗೊಂದು ಆಗದೆ
ಹೊರಗೆ ಒಳಗೆ ತಾನೆ ತಾನೆಯಾಗಿ
ಗುರು ಚಿದಾನಂದನು ಸಹಜ ತೋರುತ ಸರ್ವ
ಪರಮ ಮಂಗಳ ಸಾಕ್ಷಿಯದು ರಾಜಯೋಗ 7

125
ಗುಡುಗುಡಿ ಭಾರಿ ಗುಡುಗುಡಿ

ಗುಡುಗುಡಿ ಭಾರಿ ಗುಡುಗುಡಿ
ಗುಡುಗುಡಿ ಪಡೆಯಿರಿ ಗುರುಪುತ್ರರಾದವರು ಪ
ಆಸನ ನಳಿನವೆಂಬ ಸಿಂಬೆಯ ಮಾಡಿ
ಭೂಷಣ ಶರೀರವ ಕಾಯ ಮಾಡಿ
ಭಾಸುರ ಭಕ್ತಿ ಎಂದೆಂಬ ನೀರನೆ ಹೊಯ್ದು
ಸುಷುಮ್ನವೆಂಬ ಸೂಲಂಗಿಯನೆ ಹಾಕಿ 1

ತ್ರಿಕೂಟವೆಂದೆಂಬ ತ್ರಿವಿಧ ಮೂಲೆಯ ಚೊಂಗೆ
ಭೂತಲದ ಹಮ್ಮೆಂಬ ತೊಪ್ಪಲು
ಸಾಕಾರ ಗುರುವೆಂಬ ಬೆಂಕಿಯನೆ ಹಾಕಿ
ಏಕಚಿತ್ತವೆಂಬ ಮುಚ್ಚಳವನೆ ಮುಚ್ಚಿ 2

ಸೋಹಂ ಎಂದೆಂಬ ಕೊಳವೆಯನೆ ಹಚ್ಚಿ
ಬಹ ಪೂರಕ ಸೂರಿಯನೆ ಸೇದುತ
ಆಹ ರೇಚಕವೆಂಬ ಹೊಗೆಯನೆ ಬಿಡುತ
ಮಹಾ ಕುಂಭಕವೆಂಬ ಉಸುರನೆ ಹಿಡಿಯುತ 3

ಘುಡು ಘುಡು ಎಂದೆಂಬ ಮೇಘದ ನಾದವನು ನುಡಿಸೆ
ಸುಡು ಮಾಯೆಯೆಂದು ಥೂ ಎಂದು ಉಗುಳುತ
ಬಿಡಬಾರದು ಇದು ನಿತ್ಯವೆಂದೆನುತ
ಅಡಿಗಡಿಗೆ ಊದುತ್ತ ಉರಿಯ ಎಬ್ಬಿಸುತ 4

ಹಾರಿತು ಬ್ರಹ್ಮಾನಂದವೆಂದೆಂಬ ಹರಳು
ಏರಿತು ಪೂರ್ಣಾನಂದದ ಲಹರಿ
ಜಾರಿತು ತನುಮನವೆಲ್ಲ ಮರೆತು ಚಿತ್ತ
ಸೇರಿತು ಚಿದಾನಂದನೊಳಗೆ ಲಯಿಸಿ ಕೂಡಿ 5

126
ಗುಮ್ಮವ ನೋಡಿರೋ ಮೂಲಮಾಯೆ

ಗುಮ್ಮವ ನೋಡಿರೋ ಮೂಲಮಾಯೆ ಗುಮ್ಮವ ನೋಡಿರೋ
ಗುಮ್ಮವು ಹೀಗೆಂದು ಶತಕೋಟಿ ಬ್ರಹ್ಮರು ಆಗಿವೆ
ಗುಮ್ಮವ ಹೀಗೆಂದು ಗುರುತರಿವರಿಲ್ಲಯ್ಯ ಪ

ಇಲ್ಲದೆ ತಾನೀಗ ತೋರುವ ಗುಮ್ಮ
ಎಲ್ಲ ಲೋಕತಾನೆ ಆಗಿಹ ಗುಮ್ಮ
ಗೆಲ್ಲುವೆನಗೆ ಗೆಲುವಾಗದ ಗುಮ್ಮ
ಒಳ್ಳೆ ಒಳ್ಳೆಯವರನು ಅಂಜಿಪ ಗುಮ್ಮ 1

ಏನು ಜ್ಞಾನವ ನೋಡೆ ಹೋಗುದು ಗುಮ್ಮ
ಏನುಸಾಧನೆಮಾಡೆ ಎತ್ತದ ಗುಮ್ಮ
ಮಾನಿನಿ ಸುತ ಸಂಪತ್ತಾದ ಗುಮ್ಮ
ನಾನಾ ಭವವು ಆಗಿ ತೊಳಲಿದ ಗುಮ್ಮ 2

ತಿಳಿವೆನೆಂದರೆ ತಿಳಿಗೊಡದು ಗುಮ್ಮ
ತಿಳಿದರೆ ತನ್ನೊಳಗಡವುದು ಗುಮ್ಮ
ಬಲು ಚಿದಾನಂದ ಗುರುವಿನಲಿ ಗುಮ್ಮ
ಹೊಳೆ ಹೊಳೆದು ತೋರಿಪುದು ಗುಮ್ಮ 3

127
ಗುರು ಎಂಥಾ ಗಾರುಡಿಗ

ಗುರು ಎಂಥಾ ಗಾರುಡಿಗ
ಗುರುವಿನ ನಂಬಿ ಗುಣವೆಲ್ಲ ಕಳಕೊಂಡೆ ಪ

ಶರಣು ಮಾಡೆಂದರೆ ಶರಣು ಮಾಡುತ್ತಲಿರ್ದೆ
ಕರದಲ್ಲಿ ಏನಿತ್ತೋ ಜವೆಯ ಬೂದಿ
ಶಿರದ ಮೇಲೆನ್ನ ಮೈಮೇಲೆ ಎಳೆಯಲು ಶರೀರವ
ಮರೆತೆನೆ ಇದಕೆ ಸಾಕ್ಷಿಯಾದನೆ ಗುರು 1

ಆರು ಇಲ್ಲದುದ ನೋಡಿ ಬೇರೆನ್ನ ಕರೆದೊಯ್ದು
ಮೋರೆಯನು ಕಿವಿಯೊಳಗಿಟ್ಟು ಮಂತ್ರಿಸಿದ
ನಾರಿ ಬದುಕು ಮನಮಕ್ಕಳನೆಲ್ಲವ
ಸೇರಿ ಸೇರದಂತೆ ಮಾಡಿದನೆ ಗುರು 2

ಭವಗೇಡಿ ಕುಲಗೇಡಿ ಸಂಗಗೇಡಿಯಾದೆ
ಇವನ ವಿಶ್ವಾಸದ ಫಲದಲಿಂದ
ಇವನ ಮೇಲೆ ಎನ್ನ ವ್ಯಾಕುಲ ಹತ್ತಿದೆ
ವ್ಯವಹಾರವೆಂಬುದು ಎಡವಟ್ಟಾಯಿತು 3

ಮಂತ್ರಿಸಿದ ಕ್ರಿಯೆ ಮರಳಲೀಯದೆ ಎನ್ನ
ಮಂತ್ರ ತಂತ್ರಕ್ಕದು ಬಗ್ಗಲಿಲ್ಲ
ಮಂತ್ರದ ಮಹಿಮೆಯು ಮಹಾಮಹಿಮೆಯು
ಮಾಂತ್ರಿಕರೊಳಗೆ ದೊಡ್ಡವನಹುದೋ ಗುರು 4

ಇವನ ನಂಬಿದ ಮೇಲೆ ಇವನಂತಲ್ಲದೆ
ಭುವನಕ್ಕೆ ತಿರುಗಿ ತಾ ತಾರೆನೆ
ವಿವರಿಸೆ ಹುರುಳಿಲ್ಲ ಹೇಳಿ ಕೇಳೋದೇನು
ಭುವನ ರಕ್ಷಕ ಚಿದಾನಂದನೆ ಗುರು 5

128
ಗುರುನಾಥ ಗುರುನಾಥ ಹೇಳಿದ

ಗುರುನಾಥ ಗುರುನಾಥ ಹೇಳಿದ
ಮಾತು ಮಾತೆನ್ನಬಹುದು ಮಾತುವೊಂದೇ ಪ

ವೇದಕ್ಕೆ ನಿಲ್ಲದು ವಿವರಕ್ಕೆ ತೋರದು
ಆದಿ ಪುರಾಣದ ಅರ್ಥ ಅರ್ಥ ಅದು
ವಾದಕ್ಕೆ ದೂರದು ಕರವಶವಾಗದು
ಸಾಧಿಸಿ ತನಗೆ ತಿಳಿದು ಹೇಳಿದ ಮಾತು ಮಾತು ವೊಂದೇ 1

ಮೂರರ ನಡುವದು ಮೂಲವೆ ತಾನದು
ಧೀರ ಧೀರರೆಲ್ಲ ದಿಟ್ಟಿಪುದು
ಬೇರೆ ಮತ್ತಿಲ್ಲದು ಬೆಗಡಾಗಿ ಇಹುದು 2

ಸಾರಾಯದಿಂದೆನಗೊಲಿದು ಹೇಳಿದ ಮಾತು ಮಾತುವೊಂದೇ
ಮಾತಿನ ಮಹಿಮೆಯ ಮತ್ತೇನ ಹೇಳಲಿ
ಪ್ರೀತಿ ಎಂಬವೆಲ್ಲ ಪೀಡೆಯಾದವು
ಭೂತನಾಥ ಚಿದಾನಂದ ಭೂಪತಿಯಾದ
ಈ ತೆರದಲಿ ತಾನಿಂತು ಹೇಳಿದ ಮಾತು ಮಾತುವೊಂದೇ 3

129
ಘಂಟಾನಾದವ ಕೇಳೋ ಮುಕ್ತ

ಘಂಟಾನಾದವ ಕೇಳೋ ಮುಕ್ತ
ಘಂಟಾನಾದವ ಕೇಳೋ
ಘಂಟಾನಾದವು ಘಣ ಘಣವೆನಲು
ಅಂಟಿಕೊಳ್ಳದೆ ಲೌಕಿಕ ಸುಖಕೆ 1

ಈಷಣ ತ್ರಯಗಳು ಎಲ್ಲವು ಕೆಟ್ಟು
ಪಾಶವೆಂಟನು ಎಲ್ಲವ ಸುಟ್ಟು
ವಾಸನೆ ಹದಿನೆಂಟನು ಕಳಚಿಟ್ಟು
ಕ್ಲೇಷ ಪಂಚಕಗಳು ಹುಡಿಯಿಟ್ಟು 2

ಅರಿಗಳು ಅರುವರ ತಲೆಯನೆ ಹೊಯ್ದು
ಕರಣ ನಾಲ್ವರ ಕಾಲನೆ ಕೊಯ್ದು
ಹರಿವಾ ಹತ್ತರ ನೆತ್ತಿಗೆ ಹೊಯ್ದು
ಮೆರೆವಾವರಣ ಏಳನೆ ಮೇದು 3

ಘಂಟಾನಾದದ ಇಂಪನಾಲಿಸು
ಎಂಟು ಮೂರ್ತಿಗಳೊಡೆಯನಹೆ
ಕಂಟಕಹರ ಚಿದಾನಂದ ಬ್ರಹ್ಮವು
ತಾನಾಗಿಯೇ ನೀ ನಿಜ ವಿರುವೆ 4

130
ಚರಣವನೀಗ ಹೊಂದಬೇಡ ಕೇಡಿಗ

ಚರಣವನೀಗ ಹೊಂದಬೇಡ ಕೇಡಿಗ
ಗುರುವಿನ ಚರಣವನೀಗ ಹೊಂದಬೇಡ ಪ

ಜಾರಣ ಮಾರಣ ಬೋಧಿಸಿ ಗುರುವ
ಜೀವನ ನೀಗಲೆ ತಿನ್ನುವ ಗುರುವ
ಕಾರಣಿಕವನೆ ನುಡಿಯುವ ಗುರುವ
ಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1

ಮಹಿಮೆ ಗಿಹಿಮೆ ತೋರುವ ಗುರುವ
ಮರಳಿ ಜನ್ಮಕೆ ತರುವ ಗುರುವ
ದಹಿಸಿ ಮನೆಯ ಹೋಹ ಗುರುವ
ದಂಡಣೆಯ ಗುರುವ ಕೇಡಿಗ ಗುರುವ 2

ಹರಿದು ತಿನ್ನುವ ಮೋಸದ ಗುರುವ
ಬರಕತವಿಲ್ಲದ ಗುರುವ
ಕರಕೊಳ್ಳುತಲಿರುವ ಕರ್ಮಿತಾ
ಗುರುವ ಕೇಡಿಗ ಗುರುವ 3

ಶಾಂತಿ ಶಮೆ ದಮೆಗಳು ದೊರಕದ ಗುರುವ
ಸೈರಣೆ ಎಂದಿಗು ನಿಲುಕದ ಗುರುವ
ಕರುಣೆಯ ತಾತೋರದ ಗುರುವ ದಯವಿಲ್ಲದ
ಗುರುವ ಕೇಡಿಗ ಗುರುವ 4

ಆಸೆಯನು ಬಿಡದಿಹ ಗುರುವ
ಅಂಗದ ಹಸಿವನು ತಿಳಿಯದ ಗುರುವ
ಬಾಸ ಚಿದಾನಂದನ ನರಿಯದ ಗುರುವ
ಬ್ರಹ್ಮನಾಗದ ಕೇಡಿಗ ಗುರುವ 5

131
ಜಯತು ಜಯತು ಜಯತು ಸತ್ಯ ಸನಾಥ

ಜಯತು ಜಯತು ಜಯತು ಸತ್ಯ ಸನಾಥ
ಜಯತು ನಿಜ ನಿರ್ಭೀತ
ಜಯತು ಸದ್ಗುರುನಾಥ ಜಯತು ಅವಧೂತ
ಜಯತು ಜಯತು ಪ

ಭುಗು ಭುಗಿಸೆ ಪ್ರಭೆ ಛಾಯೆ ಝಗಝಗಿಸೆ ಖಳೆ ಮಾಯೆ
ನಿಗಿನಿಗಿಸೆ ಶತಸೂರ್ಯ ಹೊಳೆವ ಮಧ್ಯ
ಧಗಧಗದಗಿಪ ಶಶಿ ಪ್ರಭೆಯು ಸವಿದುಂಬಮೃತಸುಧೆಯನ್ನು
ತಗತಗತಗಿಪ ನಿತ್ಯ ನಿರ್ವಿಕಾರ 1

ಪಾಲಿಸಗಣಿತ ಮಹಿಮ ಪಾಲಿಸಕ್ಷಯ ರೂಪ
ಪಾಲಿಸೈ ನಿಷ್ಕಾಮ ನಿರ್ವಿಕಲ್ಪ
ಪಾಲಿಸನಂತ ಪರಮಾತ್ಮ ಹರ ನಿರ್ಲೇಪ
ಪಾಲಿಸೈ ಚಿದ್ರೂಪ ಸತ್ಯ ಸಂಕಲ್ಪ 2

ಶರಣು ನಿತ್ಯಾನಂದ ಶರಣು ನಿರ್ಗುಣ ಸಾಂದ್ರ
ಶರಣು ಪ್ರಭೆಯ ಖಂಡ ಸಹಜ ಆನಂದ
ಶರಣು ಭವಭವ ದುರಿತ ದಾವಾಗ್ನಿ ನಿಜ ಬಾಧ
ಶರಣು ಭಕುತರ ವಂದ್ಯ ರಾಜಯೋಗೀಂದ್ರ 3

ವಂದಿಪೆ ಚಿದಂಬರ ನಿರಾಮಯ ನಿರಪೇಕ್ಷಾ
ವಂದಿಸುವೆ ಆರೂಢ ಪರಮ ಅಧ್ಯಕ್ಷ
ವಂದಿಸುವೆ ನಿಶ್ಚಲ ಪರಬ್ರಹ್ಮ ಘನರಕ್ಷಾ
ವಂದಿಸುವೆ ಗುಣಾತೀತ ದಕ್ಷ ನಿಜ ಮೋಕ್ಷ 4

ನಿರುಪಮ ನಿಜಾನಂದ ನಿಸ್ಪೃಹನೆ ನಿಶ್ಚಿಂತ
ಪರಮ ಪರತರವಸ್ತು ನಿರ್ಭಯಾನಂದ
ಗುರುತರ ನಿರಂಜನ ನಿರಾಧಾರ ನಿರ್ಲಿಪ್ತ
ಗುರು ಚಿದಾನಂದ ಅವಧೂತ ಪ್ರಖ್ಯಾತ 5

132
ಜೀವನ ಶಟವಿ ಹೇಳುವೆ ಕೇಳು

ಜೀವನ ಶಟವಿ ಹೇಳುವೆ ಕೇಳು
ಜೀವನವೆಂಬುವ ಮಾತೇ ಶಟವಿ
ದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ

ನಾರಿಗೆ ಒಗೆತನವೋಂದೇ ಶಟವಿ
ಮೋರೆಯ ನಾದರೆ ಮುರುಕಿಪ ಶಟವಿ
ಮೂರುದಿನದ ಒಗೆತನ ಶಟವಿ ಎಲೆ ಜೀವನ ಶಟವಿ 1

ಆರ ಸಂಗಡ ಜಗಳವು ಶಟವಿ
ಆರನಾದರು ಅಣಕಿಪೆ ಶಟವಿ
ಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ 2

ನನ್ನದು ನನ್ನದು ಎಂಬೆ ಶಟವಿ
ನಿನ್ನ ತಂದೆಯು ಹೋದನೆ ಶಟವಿ
ನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ 3

ಗುರು ಹಿರಿಯರ ನೀ ನಿಂದಿಪೆ ಶಟವಿ
ಗುಣ ನಿನಗೇನೇನಿಲ್ಲವೊ ಶಟವಿ
ಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ 4

ಶರೀರವು ಸ್ಥಿರವಲ್ಲವು ಶಟವಿ
ತೆರಳುವೆ ನೀನು ಬೆಳಗಿಗೆ ಶಟವಿ
ತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ 5

ನಿನ್ನ ಸಂಸಾರ ಸುಳ್ಳಿದು ಶಟವಿ
ನೀರಲಿ ಅಕ್ಷರ ಬರದಂತೆ ಶಟವಿ
ನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ 6

ನಿನಗೆ ಅನಂತ ಜನ್ಮವು ಶಟವಿ
ನೀನು ಹೆಣ್ಣು ಗಂಡಲ್ಲ ಶಟವಿ
ನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ 7

ಪಾಪದ ವಿದ್ಯದ ಮೂಲದಿ ಶಟವಿ
ರೂಪಿಗೆ ಬಂದಿಹೆ ನೀನೀಗ ಶಟವಿ
ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ 8

ಭೂಪ ಚಿದಾನಂದನ ಹೊಂದೆಲೋ ಶಟವಿ
ರೂಪು ವಿರೂಪು ಆಗುವಿ ಶಟವಿ
ದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ 9

133
ಜೀವನು ಹೋಗಿ ನಿರಂಜನ

ಜೀವನು ಹೋಗಿ ನಿರಂಜನ
ಪಂಕ್ತಿಗೆ ಕೂರಲು ಅನಬೇಕೇನ
ಜೀವನೆ ಬ್ರಹ್ಮವು ಸತ್ಯವೆಂದು
ಇದಕೇನಿಲ್ಲನುಮಾನ ಪ

ಗುಲಾಮ ಹೋಗಿ ಸದರಿಗೆ ಕೂರಲು
ಗುಲಾಮನನ ಬೇಕೇನ
ಗುಲಾಮನಹುದೇ ಸದರಿಗೆ ಕುಳಿತವ
ಗುರು ಅವ ಸಂಶಯವೇನ 1

ಗೌಡಿಯು ಅರಸಗೆ ಪಟ್ಟದರಸಿಯಾಗೆ
ಗೌಡಿಗೆ ಅನಬೇಕೇನ
ಗೌಡಿಯೆ ಪಟ್ಟದರಸಿಯಾಗಲಿಕೆ
ಗೌಡಿಯೆ ಅರಸು ಅನಮಾನೇನು 2

ನರ ಚಿದಾನಂದ ಸದ್ಗುರುವನು ಹೊಂದಲು
ನರನನು ಅನುಬೇಕೇನ
ನರಚಿದಾನಂದ ಸದ್ಗುರು
ತಾನಲ್ಲದೆ ಯೋಚನೆ ಮಾಡಲಿಕೇನು 3

134
ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡು

ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡು
ದಿವಸದಿಂದಲಿ ದೃಢನಾಗಿ ಸಾಧಿಸು
ಕೇವಲ ಶಿವನೀನಾಗುವಿ ಆಗುವಿ ಪ

ಏರಿಸು ವಾಯುವನು ಏರಿಸಿದ ಬಳಿಕ
ಪೂರಿಸು ಕುಂಭವನು ಘಳಿಗಿಂತಿರಲಲ್ಲಿ
ಭೇರಿಯ ಕಹಳಾರವ ಮೃದಂಗವ
ಸಾರಿಯೆ ಕೇಳುತ ಶ್ರಮವನು ಹರಿಸುತ 1

ಆರು ನೆಲೆಗೆ ಮುಟ್ಟಿನಿಲ್ಲು ನಿಂತ ಬಳಿಕ
ಕಾರಣ ಮೃಡನಾಳಪೊಕ್ಕು ಮರವೆಂದು ಕಳೆದಿಕ್ಕು
ವಾರಿಯಮೃತಧಾರೆ ತ್ರಿವೇಣಿಯ
ಸಾರಸನದಿಯಲಿ ಮುಳುಗುತ ಮುಳುಗುತ 2

ಚಂದ್ರಮಂಡಲ ಎದುರಲಿ ಇರಲು ನೊಡುತಲಿ
ಮುಂದೆ ಜೋತಿರ್ಮಯವಿರಲು ಬ್ರಹ್ಮವೆ ತಾನಿರಲು
ಇಂದ್ರಾದಿಗಳಿಗಳವಡದಿಹ ಸ್ಥಾನವಾ
ನಂದದೆ ಎರೈ ಗುರು ಕೃಪೆಯಿಂದಲಿ 3

ಕಾಮ ಕ್ರೋಧಗಳವು ನಾಶ ಜನ್ಮ ನಿರ್ನಾಶ
ಧೂಮವಾಗುವವು ಆಶಾ ಎಲ್ಲ ನಿರ್ದೋಷ
ಕಾಮಿತ ಕರ್ಮ ಅವಿದ್ಯೆಯನುಳಿದು
ತಾಮರ ಸಾಧಿಪ ನಂದದಿ ಬೆಳಗುತ 4

ಯೋಗವ ಸಾಧಿಸು ಇದು ನಿತ್ಯ ಆಗುವುದು ತಥ್ಯಾ
ಯೋಗಿ ಜನಕೆ ಇದು ಪಥ್ಯಾ ಸತ್ಯವಿದು ಸತ್ಯ
ಭೋಗೈಶ್ವರ್ಯದ ಮುಕ್ತಿಗಧಿಪತಿ
ಯಾಗು ಚಿದಾನಂದ ಗುರು ನೀನಾಗಿಯೆ 5

135
ತನ್ನ ತಿಳಿದು ತಾ ನಿರ್ಲಿಪ್ತನಾದವಗೆ ಇನ್ನೇನಿನ್ನೇನು

ತನ್ನ ತಿಳಿದು ತಾ ನಿರ್ಲಿಪ್ತನಾದವಗೆ ಇನ್ನೇನಿನ್ನೇನು
ತನ್ನ ತನ್ನೊಳು ಕಂಡು ತಾನಾದ ಮಹಾತ್ಮಗೆ ಇನ್ನೇನಿನ್ನೇನು ಪ

ನಾನು ನೀನೆಂಬ ಹಮ್ಮುಳಿದುಳಿದಾತಗೆ ಇನ್ನೇನಿನ್ನೇನು
ನಾನು ನೀನೇ ನಿಶ್ಚಯವೆಂದು ನಿಶ್ಚಲನಾದವಗೆ ಇನ್ನೇನಿನ್ನೇನು 1

ಸರ್ವವನರಿತು ಸರ್ವವೆ ತಾನಾದವಗೆ ಇನ್ನೇನಿನ್ನೇನು
ಸರ್ವ ಸರ್ವವು ಆದ ಸರ್ವಾತ್ಮಗೆ ಇನ್ನೇನಿನ್ನೇನು 2

ಮನದ ಮಾಟಗಳಿಗೆ ಮರುಳಾದವಗೆ ಇನ್ನೇನಿನ್ನೇನು
ಮನವು ತಾನಾದವಗೆ ಮನಕೆ ನಿಲುಕದವಗೆ ಇನ್ನೇನಿನ್ನೇನು 3

ಸುಖ ದುಃಖಗಳಿಗೆ ತಾ ಸಾಕ್ಷಿಯಾದವಗೆ ಇನ್ನೇನಿನ್ನೇನು
ಸುಖ ದುಃಖ ತೋರದೆ ಸಮಮನನಾದವಗೆ ಇನ್ನೇನಿನ್ನೇನು 4

ಆರು ಸ್ಥಾನವ ಬಿಟ್ಟು ಮೂರನಾಶ್ರಯಿಸಿದವಗೆ ಇನ್ನೇನಿನ್ನೇನು
ಆರು ಆರನೆ ಸುಟ್ಟು ಅಗಣಿತ ಮಹಿಮಗೆ ಇನ್ನೇನಿನ್ನೇನು 5

ಎರಡನುಳಿದು ಮತ್ತೆರಡನು ಮರೆತವಗೆ ಇನ್ನೇನಿನ್ನೇನು
ಎರಡರೊಳು ತಾನೆಡೆಬಿಡದಿಪ್ಪಗೆ ಇನ್ನೇನಿನ್ನೇನು 6

ಮುಟ್ಟು ಚಟ್ಟುಗಳ ಮುಗಿಸಿದಾತಗೆ ಇನ್ನೇನಿನ್ನೇನು
ಮುಟ್ಟು ಚಟ್ಟಲಿ ಅಡಗಿರುವಾತಗೆ ಇನ್ನೇನಿನ್ನೇನು 7

ಸಕಲ ವಿಧವ ನೋಡಿ ಸಂತುಷ್ಟನಾದವಗೆ ಇನ್ನೇನಿನ್ನೇನು
ಸಕಲದಿ ಬೆರೆತು ಸಂಶಯವಳಿದಿಪ್ಪವಗೆ ಇನ್ನೇನಿನ್ನೇನು 8

ಚಿದಾನಂದ ಗುರುವಿನ ಚಿತ್ತದಿ ಪಿಡಿದಾತಗೆ ಇನ್ನೇನಿನ್ನೇನು
ಚಿದಾನಂದ ಗುರುವಿನ ಚಿತ್ಸುಖಭರಿತಗೆ ಇನ್ನೇನಿನ್ನೇನು 9

136
ತಾನೆ ಬ್ರಹ್ಮಪುಟ್ಟಿರೆ ಮಾನವರೆದೆಂಬರಯ್ಯ

ತಾನೆ ಬ್ರಹ್ಮಪುಟ್ಟಿರೆ ಮಾನವರೆದೆಂಬರಯ್ಯ
ತಾನೆ ತನ್ನ ತಿಳಿದು ನೋಡೆ ತಾನೆ ಚಿದಾನಂದ
ವಸ್ತು ತಾನೆ ಬ್ರಹ್ಮ ಪುಟ್ಟಿರೆ ಪ

ತಂದೆ ತಾಯಿಯೆಂಬುವರು ಒಂದನ್ನೂ ಮಾಡಲಿಲ್ಲ
ಇಂದು ಕಿವಿ ಮೂಗು ತಾಳಿ ಬಂದಿದೆ ಸಾಕ್ಷಾತ್ ವಸ್ತು
ತಾನೆ ಬ್ರಹ್ಮಯಿರುತಲಿದೆ 1

ಭಾವ ಕಲ್ಪಿತವಲ್ಲದ ದೇವನೆ ತಾನಾಗಿರೆ
ದೇವತೆಯೆಂಬುದ ಮರೆತು ಕಲ್ಲದೇವರ ಪೂಜಿಪರಯ್ಯಾ
ತಾನೆ ಬ್ರಹ್ಮ ಇರುತಲಿರೆ 2

ಕಾರಣಪುರುಷನಾಗಿ ದೇಹವನ್ನೇ ಧರಿಸಿರೆ
ಕಾರಣಪುರುಷನ ಬಿಟ್ಟು ಬೇರೆ ಧ್ಯಾನಿಸುವರಯ್ಯಾ
ತಾನೆ ಬ್ರಹ್ಮ ಪುಟ್ಟಿರೆ 3

ವೇದಶಾಸ್ತ್ರಪುರಾಣದ ಓದೆಲ್ಲ ತಾನೆ ಇರೆ
ಓದನ್ನು ತಿಳಿಯದ ತಾವು ಓದಿ
ಓದಿ ಸಾವರಯ್ಯೋ ತಾನೇ ಬ್ರಹ್ಮ ಪುಟ್ಟಿರೆ 4

ಇಂದು ಹರವಾಸರೆಂದು ಬಂಧ ಹೆಸರ ಮಾಡುತ
ಬಂಧ ಹರ ಚಿದಾನಂದಗೆ ಒಂದು ಕುತ್ತ ಎಣಿಸ
ರಯ್ಯೋ ತಾನೆ ಬ್ರಹ್ಮ ಪುಟ್ಟಿರೆ 5

137
ತಾರಕ ತಾರಕ ತಾರಕ ತಾರಕವೆಂಬ

ತಾರಕ ತಾರಕ ತಾರಕ ತಾರಕವೆಂಬ
ತಪನಿಧಿಯನು ತಪಿಸುತಲಿದೆ ನೋಡಾ ಪ

ಮುಗಿಲಾಕಾರದಿ ಮೋಹರಿಸುತಲಿಹ ಮಿಂಚುಗಳನೆ
ಭುಗಿಲು ಭುಗಿಲು ಎನಿಸುವ ಕಳೆಗಳ
ಬುದು ಬದಗಳ ನೋಡ 1

ಥಳಕು ಥಳಕು ಥಳಥಳನೆಂದೆಂಬ ಥರಗಳನದ ನೋಡ
ಬೆಳಕುಗಳಹ ಬಲು ಬೆಳಗನೆ ಬೆಳಗುವ ಭೇದಗಳನೆ ನೋಡ 2

ತೋರುತಡುಗುವ ತೋರು ಕಿಡಿಗಳ ಕೋಟಿಗಳನೆ ನೋಡ
ಮೀರಿಯೆ ಮಿಣಿ ಮಿಣಿ ಮಿಣಿಕಿಪ ವಿಸರದ ಮಿಶ್ರಗಳನೆ ನೋಡ 3

ಝಣಝಣರೆಂಬ ಝೂಗಟೆ ಮೊಳಗಿನ ಝೇಂಕಾರವ ನೋಡ
ಎಣಿಸಲು ಬಾರದ ಎಡೆದೆರಪಿಲ್ಲದ ಏಕಾರವ ನೋಡ 4

ಸಾಗರ ಸುಖವನು ಸವಿಸವಿದುಣ್ಣುವ ಸಾಕಾರವೇ ನೋಡ
ಯೋಗಿ ಎನಿಪ ಚಿದಾನಂದನೊಲಿದ ಯೋಗಿಗೆ ಇದು ನೋಡ 5

138
ತುಂಬಿ ತುಂಬಿ ತುಂಬಿದೆ ಮುಕ್ತಿಯು

ತುಂಬಿ ತುಂಬಿ ತುಂಬಿದೆ ಮುಕ್ತಿಯು
ತುಂಬಿದೆ ಮುಕ್ತಿಯು ತುಂಬಿದೆ ಮುಕ್ತಿಯು ತುಂಬಿ ಪ

ಧಡಧಡ ಧಡಿಸುತ ದಟ್ಟಣೆಯಿಂದಲಿ ದಯೆಗೈಯುತಲಿದೆ ತುಂಬಿ
ಎಡದೆರಹಿಲ್ಲದೆ ಏಕವೆ ಎನಿಸುತ ಎಲ್ಲೆಡೆ ತುಂಬಿದ ತುಂಬಿ 1

ಅಂಬರದೊಳು ಚಿದಂಬರವೆನಿಸುವ ಅಂಬರತಾನಿದೆ ತುಂಬಿ
ಬಿಂಬದಿ ತೋರುವ ಬಿಂಬಂತೆಲ್ಲವನಿಂಬಿಡುತಿದೆ ತಾ ತುಂಬಿ 2

ಜ್ಞಾನಾಮೃತ ರಸರಸವನೆ ಬೀರುತ ಜ್ಞಾನಕೆ ದೂರಿದೆ ತುಂಬಿ
ತಾನೆ ತಾನೆ ತಾನಾದ ಪುರುಷಗೆ ತಾನೆಯಾಗಿದೆ ತುಂಬಿ 3

ನಾದದ ಮನೆಯಲಿ ನಾದದಿ ಮರೆಸುವ ನಾದದಿಬೆರೆತಿದೆ ತುಂಬಿ
ಭೇದಾಭೇದಗಳಹ ದೃಗ್ದೃಶ್ಯದ ಭೇದವ ಸಾಕ್ಷಿಪ ತುಂಬಿ 4

ಇಂದು ಅಮೃತಕರ ಸೂಸುವ ತೆರದಲಿ
ಹೊಂದಿರುವವರನು ತಾತುಂಬಿ
ಮಂದಹಾಸ ಮಹಾಲೀಲಾತ್ಮಕ ಸಿಂಧು ಚಿದಾನಂದ ತುಂಬಿ 5

139
ತುಂಬಿಕೊಂಡಿರುತಿಹನೊಬ್ಬ ಜಗ

ತುಂಬಿಕೊಂಡಿರುತಿಹನೊಬ್ಬ ಜಗ
ವಿಂಬಿಲ್ಲದೆಲ್ಲವ ಸಕಲವೆಲ್ಲವ ತುಂಬಿ ಪ

ಆರರೊಳಗೆ ತುಂಬಿ ಅತ್ತತ್ತಲು ತುಂಬಿ
ಮೂರು ಠಾವಲಿ ತುಂಬಿ ಮೂರು ಮನೆ ತುಂಬಿ
ಬೇರೆ ಮೇಲಕೆ ತುಂಬಿ ಬೆಳಗಿನೊಳಗೆ ತುಂಬಿ
ಸಾರಾಮೃತದಿ ತುಂಬಿ ಸಾಕ್ಷಾತ್ಕಾರದಲಿ ತುಂಬಿ 1

ಮನಸಿನೊಳಗೆ ತುಂಬಿ ಮನವರ್ತನದಿ ತುಂಬಿ
ತನುವಿನಲ್ಲಿಯೆ ತುಂಬಿ ಸರ್ವಾಯವ ತುಂಬಿ
ತನುತ್ರಯದಲಿ ತುಂಬಿ ತನುವಿನಲ್ಲಿಯೆ ತುಂಬಿ
ಘನ ಸುಖದಿ ತುಂಬಿ 2

ಇಳೆಯ ಒಳಗೆ ತುಂಬಿ ಇಹಜಂಗಮದಿ ತುಂಬಿ
ಬಲು ಸ್ಥಾವರದಿ ತುಂಬಿ ಬಯಲಿನಲ್ಲಿಯೆ ತುಂಬಿ
ಕೆಳಗೆ ನಡುವೆ ತುಂಬಿ ಕೇವಲ ಕೊನೆಯ ತುಂಬಿ
ಚಲಿಸದಂದದಿ ತುಂಬಿ ಚಿದಾನಂದನೇ ತುಂಬಿ 3

140
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲ

ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲ
ಚಾರು ಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದು ಪ

ಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿ
ಕುಂಡಲಿ ಎಂಬುದು ಕೀಲು ಚದುರಿನ ದಳಪಟ್ಟಿ ಮೇಲು 1

ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನ
ಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ 2

ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆ
ಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು 3

ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯ ಸಾಂದ್ರ
ಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ 4

ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದ
ಮೂಡಲಿಂದ ಪಶ್ಚಿಮಕ್ಕೆ ಗುರು ಚಿದಾನಂದನ ಸ್ಥಾನಕ್ಕೆ 5

141
ತೋರು ಶರೀರದೊಳಗಾತ್ಮನಾ ತೋರು ಶರೀರದೊಳಗೆ

ತೋರು ಶರೀರದೊಳಗಾತ್ಮನಾ ತೋರು ಶರೀರದೊಳಗೆ
ಸಾರ ನಿರ್ಗುಣ ನಿತ್ಯ ಶುದ್ಧನಾ ಪ

ಲೋಕಂಗಳ ಮಾಡಿರುವ ಲೋಕಕೆ ತಾನೆ ಗುರುವ
ಲೋಕವೇ ತಾನಾಗಿರುವ ಬಹು
ಲೋಕ ಲೋಕದ ಹೊರಗಿರುವ ದೇವನೇ 1

ದೃಶ್ಯವೇ ತಾನೆನಿಪ್ಪ ದೃಶ್ಯವ ನೋಡುತಲಿಪ್ಪ
ದೃಶ್ಯಕ್ಕೆ ಆನಂದಿಪ ಎಲ್ಲ ದೃಶ್ಯಕೆ ಆಧಾರವಿಪ್ಪನೇ 2

ಬೋಧನೆ ತಾನಾಗಿರ್ದ ಬೋಧಾಬೋಧದ ಸಿದ್ಧ
ಬೋಧದಿ ತಾ ಬೆರೆದಿರ್ದಾ ಬರೆ-
ಬೋಧಾ ಬೋಧಂಗಳ ಹೊದ್ದದ ದೇವನೇ 3

ನಾದದ ಮನೆಯಾಗಿಪ್ಪ ನಾದವ ಕೇಳುತಲಿಪ್ಪ
ನಾದದಿಂ ನಲಿದಿಪ್ಪ ಮಹಾನಾದನಾದಕೆ ಬೆರೆದಿಪ್ಪ ದೇವನೇ 4

ನಿರುಪಮ ನಿರಾಲಂಬ ನಿರವಯ ನಿಶ್ಚಲಬಿಂಬ
ಶರಣರೊಳು ಬಲಗೊಂಬ ವರ
ಪರಮ ಗುರು ಚಿದಾನಂದ ದೇವನೇ 5

142
ದಣಿದು ಮಲಗಿದೆನು ನಾನು

ದಣಿದು ಮಲಗಿದೆನು ನಾನು-
ದಣಿದು ಮಲಗಿದೆನು
ಮಣಿದೆ ಗುರುವಿಗೆ ಹಣಿದೆ ಶತ್ರುಗಳ
ತಣಿದೆ ರಕ್ತವ ಕುಣಿದೆ ತಲೆಗಳ
ಘಣ ಘಣ ಘಣ ಘಣ ನಾದವ ಕೇಳುತ
ಮಣಿಮಯ ಮಂಟಪ ಉನ್ಮನಿ ಬಯಲಲಿ ಪ

ತರಿಸಿ ತಾಪವನು ಕಾಲಲಿ ಒರೆಸಿ ಮಮತೆಯನು
ಹರಿಸಿ ಸಂಶಯ ಹುರಿಸಿ ದುರ್ಗುಣ
ಕೊರೆಸಿ ವ್ಯಸನವ ಜರಿಸಿ ಮದಗಳ
ಸುರಿ ಸುರಿ ಸುರಿವ ಸುಧಾ ಕಾರಂಜಿಯ
ಮೆರೆವ ಸಹಸ್ರಾರ ಚಪ್ಪರ ಮಂಚದಿ 1

ಹೊಡೆದು ವಾಯುಗಳ ತುಂಡರಿಸಿ ಕ್ಲೇಶಗಳ
ಮಡಿಯೆ ಈಷಣವು ಕಡಿಯೆ ಕಲ್ಪನೆ
ಕೆಡೆಯೆ ಭ್ರಾಂತಿಯು ಒಡೆಯೆ ಶತ್ರುಗಳು
ಕಿಡಿ ಕಿಡಿಯುಗುಳುತ ವಿಷ ಮೂರ್ಧ್ನಿಯ
ಬಿಡಿ ಮುತ್ತುದುರುವ ಹಂಸತೂಲದಿ 2

ಬಳಿದು ವ್ರತಗಳನು ಎಳೆದು ಮತಗಳನು
ತುಳಿದು ಗರ್ವವ ತೊಳೆದು ಶೋಕವ
ಮುರಿದು ರಾಗವ ಸೆಳೆದು ಮಾನವ
ಥಳಥಳ ಬೆಳುದಿಂಗಳಿನೊಳು
ಬಲು ಚಿದಾನಂದ ಬ್ರಹ್ಮವೇ ಆಗಿಯೆ 3

143
ದಶವಿಧ ನಾದವು ಭಕ್ತರಿಗೆ ಕೇಳುತಿದೆ

ದಶವಿಧ ನಾದವು ಭಕ್ತರಿಗೆ ಕೇಳುತಿದೆ
ದಶವಿಧ ನಾದವು ಭಕ್ತರಿಗೆ ಕೇಳುತಿದೆ
ದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲು
ಯೋಗಿಯ ಕಿವಿ ಎರಡರಲಿ ಪ

ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕೃತಿಯಾಗಿ ಚಿಮ್ಮತಿರೆ
ಝಣಝಣವೆಂಬ ಝಿಲ್ಲಿಯ ನಾದವು
ಎಣಿಕೆಯಿಲ್ಲದೆ ನಾಗಸ್ವರದ ಧ್ವನಿ
ಎಡೆದೆರೆಪಿಲ್ಲದೆ ಕೂಗುತಿದೆ
ಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1

ಮೃಣು ಮೃಣು ಎನಿಪ ಮೃದಂಗ ನಾದವು
ಮುಂಕಾಟ್ಟಾಗಿಯೆ ನುಡಿಯುತಿದೆ
ತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆ
ಘನಘನ ಎನುತಲಿ ಶಂಖನಾದವು
ಘಮ್ಮೆನ್ನುತಲಿ ಭೋರೆನುತಲಿದೆ
ಘಣಘಣ ಎನುತಲಿ ಘಂಟಾನಾದವು
ಘಂಟ್ಯಾಗಿಯೆ ಓಂ ಎನುತಲಿದೆ 2

ಭೇರಿಯ ನಾದವು ಧಮಧಮ ಎನುತಲಿ
ಬಹಳಾಗಿಯೆ ಭೋಂಕರಿಸುತಿದೆ
ಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆ
ನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆ
ವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3

144
ದಶವಿಧ ನೌಬತ್ತಾಗುತದಣ್ಣ

ದಶವಿಧ ನೌಬತ್ತಾಗುತದಣ್ಣ
ದಶವಿಧ ನೌಬತ್ತಾಗುತದೆ
ದುಸುಮಾನರ ಎದೆ ಇಬ್ಬಗೆಯಾಗಲು
ದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ

ಚಿಣಿ ಚಿಣಿ ಎಂಬ ಸಿಂಜಿಣಿನಾದವು
ಚಿತ್ಕೃತಿಯಾಗಿ ಚಿಮ್ಮುತಿದೆ
ಝಣಝಣಕೃತವೆಂಬ ಝಿಯಾನಾದವು
ಝೇಂಕಾರದಿ ಝೇಂಕರಿಸುತಿದೆ
ಎಣಿಕೆಯು ಇಲ್ಲದೆ ನಾಗಸ್ವರ ಧ್ವನಿ
ಎಡದೆರಪಿಲ್ಲದೆ ಕೂಗುತಿದೆ
ಘಣಘಣ ಎನಿಪ ತಾಳದ ನಾದವು
ದಟ್ಟಣೆಯಲಿ ತಾ ತುಂಬುತಿದೆ 1

ಮೃಣು ಮೃಣು ಎನಿಪ ಮೃದಂಗ ನಾದವು
ಮುಂಕಟ್ಟಾಗಿಯೆ ನುಡಿಯುತಿದೆ
ತನನಾ ಎಂಬವೀಣಾಸ್ವನವು ತಂಪಾಗೆಲ್ಲವ ಮುಚ್ಚುತಿದೆ
ಘನ ಘನ ಎನುತಲಿ ಶಂಖನಾದವು
ಘಮ್ಮೆನ್ನುತಲಿ ಭೋರೆನುತಲಿದೆ
ಘಣಘಣ ಎನುತಲಿ ಘಂಟಾನಾದವು
ಘಂಟ್ಯಾಗಿಯೆ ಓದಿ ಎನುತಲಿದೆ 2

ಭೇರಿಯ ನಾದವು ಧಮಧಮ ಎನುತಲಿ
ಧಾಂಧಮ ಧಾಂಧಮ ನುಡಿಯುತಿದೆ
ಘೋರದಿ ಮೇಘದ ನಾದವು ಗರ್ಜಿಸುತಿದೆ
ಘುಡಿ ಘುಡಿಸುತಿದೆ ನೂರಾರು ಸಿಡಿಲಂತೆ
ನೂಕು ನುಗ್ಗಡಿಸುತಿದೆ ವೀರ ಚಿದಾನಂದ
ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3

145
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ

ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತ
ದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ

ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನು
ನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1

ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನು
ಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು 2

ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತ
ಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3

ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತ
ಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4

ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲ
ಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5

ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತ
ಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6

ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತ
ಆರಾದರನು ಅರಿಯನು ಬ್ರಾಹ್ಮಣರೊಳಿವ ಕಿರಾತ 7

ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡ
ಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8

ಬಗೆ ಬಗೆ ನಾಮವು ನಿರುವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯ
ಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ 9

ತಾಯಕ್ಕತ್ತೆಯು ಸೊಸೆ ಸಹೋದರಿ ರಜಕೀಪರಿಭಾಳಾ
ಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ 10

ಈ ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತ
ಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ರಿಯೆ ಉಂಬ 11

146
ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದ

ದುಃಖವಿಲ್ಲವೋ ಪರಮಾತ್ಮನಿಗೆ ಲಿಂಗದ ದೇಹದ
ದುಃಖವಿಲ್ಲವೋ ಪರಮಾತ್ಮನಿಗೆ ಪ್ರತ್ಯಗಾತ್ಮನಿಗೆ
ದುಃಖವುಂಟೆ ನಿಜ ನಿರ್ಲಿಪ್ತಗೆ
ಮಿಕ್ಕ ಥಳಥಳ ಸಾಕ್ಷಿಬ್ರಹ್ಮಂಗೆ ಪ

ಜಲದೊಳು ಹೊಳೆವ ಇಂದುವಿಂಗೆ
ಜಲದ ಕಂಪವು ಹೊಳೆವುದೇ ಪೂರ್ಣಚಂದ್ರಗೆ
ಆ ಪರಬ್ರಹ್ಮಂಗೆ ಹೊಳೆಯಲು ಲಿಂಗದಿ
ಲಿಂಗದ ಗುಣಗಳು ಕೆಲವನು ತಿಳಿಯಲು ಪುಣ್ಯಾತ್ಮನಹೆ 1

ಉದಧಿಲಿ ತೋರ್ವ ಸೂರ್ಯನಿಗೆ ಆ
ಉದಧಿಯ ಕೊಳಕು ಬೆರೆಸೀತೆ
ದ್ವಾದಶಾತ್ಮಂಗೆ ಆ ಪರಿ ಆತ್ಮಂಗೆ ಲಿಂ-
ಗಾದಿ ಜನ್ಮವೊಂದುಗುಡೆ ಕಷ್ಟಪಡುವಿಕೆ
ಲಿಂಗವೆ ಅಳಿಯಲು ನಿತ್ಯಾತ್ಮನುತ
ಭಂಗವ ಕಳದೇ ಚಿದಾನಂದ ಬ್ರಹ್ಮನಹನು 2

147
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕು

ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕು
ದೃಷ್ಟಿಯಿಲ್ಲದಿರಲು ಅನುಭವ ಪಟು ದೊರಕದು ಪ

ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕು
ಆಲಿಯು ಮುಚ್ಚದೆ ಆಲಿಯ ರೆಪ್ಪೆಯು ಬಡಿಯದಲಿರಬೇಕು 1

ಅನಿಮಿಷ ದೃಷ್ಟಿಯಂದದಿ ಬ್ರಹ್ಮವ ಆಲಿಸುತಿರಬೇಕು
ಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು 2

ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕು
ದೃಷ್ಟಿಯು ತಾನೆಡಬಲಕೆ ಸರಿಯದೆ ದೃಷ್ಟಿಯು ಇರಬೇಕು 3

ಕುಳಿತಾ ಸ್ಥಳವು ತಪ್ಪಲು ಮತ್ತೆಯು ಕುಳಿತುಕೊಳ್ಳಬೇಕು
ಥಳಥಳ ಹೊಳೆಯುವ ಬೆಳಗದ ಪಸರಿಸಿ ತರನಾಗಿರಬೇಕು 4

ಉದಯಾಸ್ತಮಾನವು ದಿವರಾತ್ರಿಯುಡುಗಿ ಇರಬೇಕು
ಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5

148
ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು

ದೇಹವ ಬಿಟ್ಟು ಬ್ರಹ್ಮವು ಎಂತೆನೆ ದೇಹಬಿಟ್ಟು ಬ್ರಹ್ಮವೆಲ್ಲಿ
ದೇಹವು ಬ್ರಹ್ಮವು ಒಂದೆಯೋ ದೇಹವು ಇಹುದು ಬ್ರಹ್ಮದಲ್ಲಿ ಪ

ಮಾಯೆಯು ಬಿಟ್ಟು ಬ್ರಹ್ಮವು ಎಂದೆನೆ
ಮಾಯೆಯು ಬಿಟ್ಟು ಬ್ರಹ್ಮೆಲ್ಲಿ
ಕಾಯ ಬಿಟ್ಟು ಆತ್ಮವು ಎಂತೆನೆ
ಕಾಯವ ಬಿಟ್ಟು ಆತ್ಮೆಲ್ಲಿ 1

ಪಿಂಡವ ಬಿಟ್ಟು ಬ್ರಹ್ಮಾಂಡ ವೆಂತೆನೆ
ಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿ
ಖಂಡವ ಬಿಟ್ಟಾಖಂಡವೆಂತೆನೆ
ಖಂಡವ ಬಿಟ್ಟು ಅಖಂಡವದೆಲ್ಲಿ 2

ಜಗವನು ಬಿಟ್ಟು ತನ್ನನು ತೋರೆನೆ
ಜಗವನು ಬಿಟ್ಟು ತಾನೆಲ್ಲಿ
ಜಗಪತಿ ಚಿದಾನಂದ ಸದ್ಗುರು ನೀನು ನೀ
ಜಗಸಂಶಯವೆಲ್ಲಿ 3

149
ದೊರೆಯಾಗಿ ನಾನಿಹೆನಮ್ಮ ಅಜ

ದೊರೆಯಾಗಿ ನಾನಿಹೆನಮ್ಮ ಅಜ
ಹರಿಹರರ್ಗಿಲ್ಲದೆ ಪದ ಸೇರಿತಮ್ಮ ಪ

ಭೂಮಿಯೆ ಮಣಿಮಂಚವಮ್ಮ ಮಹಾ
ವ್ಯೋಮವೆಂಬುದೆ ಹೊಸ ವಸ್ತ್ರವಮ್ಮ
ಸಾಮವೆ ಮಣಿಭೂಷಣವಮ್ಮನಿ
ಸ್ಸೀಮ ಭಿಕ್ಷವೇ ಪರಿ ಪರಮಾನ್ನವಮ್ಮ 1

ಸಂಗರಹಿತ ಸತಿಯಮ್ಮ ಆ
ಮಂಗಳವೆಂಬ ಘನಸುತರಮ್ಮ
ಜಂಗಮವೇ ಜನವಮ್ಮ ಭೇ
ದಂಗಳ ಪರಿದಿಹುದೇ ಅರಮನೆಯಮ್ಮ 2

ನಾದವೆಂಬುದ ವಾದ್ಯವಮ್ಮ ಸು
ನಾದವೆಂಬುದೇ ಗೀತಗಾಯಕರಮ್ಮ
ಆದಿ ಬಂಧುವೇ ಮದವಮ್ಮ ತೇಜ
ವಾದ ಚಿತ್ತವೇ ದೀವಟಿಗೆಮ್ಮ 3

ಜ್ಞಾನವೆಂಬುದೇ ಬಲವಮ್ಮ ಮಹ
ದಾನಂದ ರಾಜ್ಯಕ್ಕೆ ಅಧಿಪತಿಯಮ್ಮ
ತಾನೆ ಎಂಬುದೇ ಮುದ್ರೆಯಮ್ಮ ಇಂತು
ನ್ಯೂನವಿಲ್ಲದೆ ಸ್ಥಿರ ಸೇರಿದುದಮ್ಮ 4

ಸುರವರರ್ಗಿನಿತುಂಟೆ ಅಮ್ಮ
ಹಿರಿಯಾರಾರಾದರೇನು ದೊರಕದಮ್ಮ
ಗುರುವಿನ ದಯದಿಂದಲಮ್ಮ ನಿಜ
ಗುರು ಚಿದಾನಂದನೇ ತಾನಾದುದಮ್ಮ 5

150
ನಂಬುವುದು ತಾನು ಎಂತು ಸತಿಯು ಸುತರು

ನಂಬುವುದು ತಾನು ಎಂತು ಸತಿಯು ಸುತರು ಮಗಳನು
ನಂಬಿ ಕಡೆ ಹಾಯ್ದುದುಂಟೆ ಹಾದಿಕಾರರನು ಪ

ದಾರಿಕಾರರಿಗೆ ವಸತಿ ಮಳಿಗೆ ಭೇಟಿಯಲ್ಲೇ
ದಾರಿ ಹಿಡಿದ ಬಳಿಕ ತಿರುಗಿ ಭೇಟಿಯಾಗೋದೆಲ್ಲಿ
ದಾರ ಸುತರ ಭೇಟಿಯಿದೇ ದೇಹದೊಳಗೆ ಎಂದರಿಯೋ
ಶರೀರವು ಬಿದ್ದ ಬಳಿಕ ಭೇಟಿ ಮುಂದೆ ಮರೆಯೋ 1

ಕನಸಿನವರ ತಾನು ಈಗ ನೆನಸಲಿಕ್ಕೆ ಬಹರೆ
ಕನಸಿನಂತೆ ತೋರುವರು ನೀನು ನಚ್ಚುವರೆ
ಮನೆಯ ಬದುಕುಭಾಗ್ಯವೆಲ್ಲ ಮನದಿ ಜರೆದು ಬಿಡು
ನಿನಗೆ ಗತಿಯು ಏನು ಎಂದು ನೀನು ತಿಳಿದು ನೋಡು 2

ಹೆಗ್ಗಣವು ಜಾಗಿನೊಳಗೆ ಬಿದ್ದು ಮಿಡುಕಿದಂತೆ
ವೆಗ್ಗಳಾಗಿ ಸಂಸಾರಕೆ ಮಾಡಿವೆಯೋ ಚಿಂತೆ
ನುಗ್ಗು ಆದೆ ಬಯಲಭ್ರಾಂತಿ ನಿನಗೆ ವ್ಯಾಪಕಾಗಿ
ಮುಗ್ಗುವೆ ನೀನೊಣನ ತೆರದಿ ನರಕದಲ್ಲಿ ಹೋಗಿ 3

ನನ್ನ ಸಂಸಾರವೆನ್ನಬೇಡ ನೀನು ಇದನು ಈಗ
ನನ್ನ ನನ್ನದೆಂದೆ ಹೋದ ನಿಮ್ಮಪ್ಪ ಮುಕ್ತನು
ಇನ್ನು ನಾಶವಿದು ಒಬ್ಬರಿಲ್ಲ ಸತ್ಯ
ನಿನ್ನದಾರೆಂದು ಮರೆಯದಡೆ ನಿತ್ಯಾ 4

ಇಂದ್ರಜಾಲ ನೋಡಲಿಕ್ಕೆ ಖರೆಯದಾಗಿ ಇಹುದು
ಅಂದದಾ ಪರಿಯು ಸಂಸಾರವೆ ನಿತ್ಯವಿಹುದು
ಬಂಧನವು ನಿನಗೆ ಇಹುದು ಗುರುವಿನ ಪಾದವ
ಹೊಂದು ಮುಂದೆ ಚಿದಾನಂದನಹೆ ನೀನೀಗ ಎಂದು 5

151
ನಡೆಯೇ ತೀರ್ಥವು ನುಡಿ ಪ್ರಸಾದವು

ನಡೆಯೇ ತೀರ್ಥವು ನುಡಿ ಪ್ರಸಾದವು
ಕೊಡುವುದೇ ತಾನೀಗನುಗ್ರಹವು
ಹಿಡಿವುದೇ ತತ್ವವು ಬಿಡುವುದೇ ವೈರಾಗ್ಯ
ದೃಢದಲಿ ತನ್ನ ತಿಳಿದಾ ಮಹಾತ್ಮನಾ ಪ

ಮೆಟ್ಟಿದ್ದೆ ಕಾಶಿಯು ಮಲಗಿದ್ದೆ ಶ್ರೀ ಶೈಲ
ದಿಟ್ಟಾಗಿ ಕುಳಿತುದೇ ಕುರುಕ್ಷೇತ್ರವು
ಘಟ್ಟಿಯಾಗಿಹುದೇ ಗಯವೀಗ ಗೋಕರ್ಣ
ಮುಟ್ಟಿಯೇ ತನ್ನತಾ ತಿಳಿದ ಮಹಾತ್ಮನಾ 1

ಉಂಡದ್ದೆ ಕೇದಾರ ಉಟ್ಟಿದ್ದೆ ಶ್ರೀ ಬದರಿ
ಕಂಡದ್ದೆ ಕಂಚಿ ಕಾಳಹಸ್ತಿ
ಮಂಡೆಗೆರಕೊಂಡುದೇ ಮೈಲಾರ ಮಧುರೆಯು
ಖಂಡಿಸಿ ತನ್ನತಾ ತಿಳಿದ ಮಹಾತ್ಮನಾ 2

ಸುಧಾ ಶರಧಿಯು ಆತ ಸಾಕ್ಷಾತ್ತು ದೈವವು
ವಿಧ ವಿಧದ ಜಗ ತಾನೆಯಾದಾತನು
ಮದಕಾಮ ಕ್ರೋಧ ಪಾಶ ಶೋಕ ವರ್ಜಿತ
ಚಿದಾನಂದ ಗುರುವೇ ತಾನಾದ ಮಹಾತ್ಮನಾ 3

152
ನಾ ಕಂಡ ಕನಸು ಕನಸಲ್ಲ ಅದು ಹೇಳಲು

ನಾ ಕಂಡ ಕನಸು ಕನಸಲ್ಲ ಅದು ಹೇಳಲು
ಬಾರದು ಕೇಳಲು ಬಾರದು ಪ

ಕಂಗಳ ಮುಟ್ಟಿ ನಾನಿರುತಿಹೆ ಅಂತರಂಗದೊಳಗೆ ದೃಷ್ಟಿಯನಿಡೆ
ಮಂಗಳವಿತ್ತು ಮಹತ್ತುಯಿತ್ತು ಜಂಗಮವಿತ್ತು ಜಗತ್ತು ಇತ್ತು 1

ಧ್ಯಾನವು ಗುರುಪಾದದಲ್ಲಿದೆ ಒಳ್ಳೆ ಗಾನವು ಕಿವಿಗೆ ಕೇಳಿಸುತಲಿರೆ
ಆನಂದವಿತ್ತು ಸುಖತರವಿತ್ತು ತನ್ಮಯವಿತ್ತು ಥಳಿಥಳಿಸಿತ್ತು 2

ಆನಂದ ಮನೆಯೊಳಗಾನಿರೆ ಚಿದಾನಂದ ದೇವರ ಕೂಡಿರೆ
ತಾನೆ ತಾನಿತ್ತು ತವೆ ಬೆರೆತಿತ್ತು ಏನೇನೋ ಇತ್ತು ಎಂತೆಂತೋ ಇತ್ತು 3

153
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನ

ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನ
ಬದುಕು ಆಗಲಿಲ್ಲ ಪ

ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲ
ಪಂಡಿತತ್ವದ ಪರಮಾರ್ಥಕಿಲ್ಲ
ಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲ
ಕಂಡ ಕಂಡಂತೆ ಚರಿಸುವಂತಾಯಿತೆ 1

ಅರಿವು ಮರೆವು ಇಲ್ಲ ಆಸೆಗಳೇನಿಲ್ಲ
ಇರುಳು ಹಗಲು ಎಂಬುದೆರಡಿಲ್ಲವೋ
ಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲ
ಮರುಳು ಮರುಳು ಆಗಿ ತಿರುಗುವಂತಾಯಿತು 2

ಚಿದಾನಂದ ಗುರುವಿನ ಚಿತ್ತದಿ ಪಿಡಿದರೆ
ಒದವಿದ ಬ್ರಹ್ಮಾನಂದವ ಸವಿದು
ವಿಧವಿಧವಾದ ಬೆಳಕಿನೊಳಾನಡಗಿರೆ
ಇದರಿಂದಲಿ ಇಂತಾದುದಿದೆಲ್ಲವು 3

154
ನಾಚಿಸಿದೆಯ ದೇವಯನ್ನ ಎಲ್ಲ

ನಾಚಿಸಿದೆಯ ದೇವಯನ್ನ ಎಲ್ಲ
ಈ ಚರಾಚರ ತುಂಬಿಹ ವ್ಯುತ್ಪನ್ನ ಪ

ಶ್ರೀಗಿರಿ ನೋಡುವೆನೆಂದು ನಾ
ಸಾಗಿ ಪಯಣಗೊಂಡು ಬಂದು
ರಾಗವುದಿಸಿ ಮನಕಿಂದು ಮುಂದೆ
ಭೋಗ ತರದ ಮನ ತೂರಿತು ನಿಂದು 1

ಮಧ್ಯಾಹ್ನ ಬಿಸಿಲೊಳು ನಡೆಯೆ ನಾನು
ಅದ್ವಯವಿಲ್ಲದೆ ಹಾದಿ ನೀರ್ಗುಡಿಯೆ
ಇದ್ದ ಚೈತನ್ಯ ತಾ ನುಡಿಯೆ ಇಂತು
ಹೊದ್ದ ಶರೀರ ಬಳಲಿ ನೆಲಕೆಡೆಯೆ 2

ಧರಣಿಯ ಸುರರೂಪ ತಾಳಿ ನೋಡೆ
ವರಣ ವರಣ ರುದ್ರಾಕ್ಷಿ ಚಾಳಿ
ಚರಣ ಕಿರಣದಲ್ಲಿ ಹೂಳಿ ನಾನು
ಗುರುವೆ ಎಂದು ನುಡಿವುದ ಕೇಳಿ 3

ಎಲ್ಲಿ ಪೋಗುವೆ ಎಂದು ಕೇಳೆ
ಮಲ್ಲಿಕಾರ್ಜುನನ ನೋಡಿಯೇ ಬಹೆನೆಂದು
ಸೊಲ್ಲುಡುಗಲು ನಾನಿತ್ತೆಂದು ಗುರು
ಸುಳ್ಳು ಆದನೆ ಸರ್ವ ಪೂರಿತನಿಂದು 4

ಸರ್ವರೂಪದು ಮೃಷೆಯಾಯ್ತು ಎಲ್ಲ
ಸರ್ವಜನರಿಗೆ ಬೋಧಿಸುವಡೇನಾಯ್ತು
ಸರ್ವತಾನೆನಿಪುದೇನಾಯ್ತು ಎಲ್ಲ
ಸರ್ವರನುಳಿದು ಬಂದಿಹುದೊಳಿತಾಯ್ತು 5

ಇಂತು ಬುದ್ಧಿಗಳಿಂದ ಝಡಿಯೆ ಎಲ್ಲ
ಅಂತು ಕೇಳುತ ನೀವು ಆರೆಂದು ನುಡಿಯೆ
ನಿಂತಲ್ಲಿ ದೃಶ್ಯವ ಪಡೆಯೆ ಕಂಡು
ಸಂತೋಷದಿಂ ನಾ ಸಾಷ್ಟಾಂಗವೆರಗೆ 6

ಆನಂದ ತೊರೆಯೊಳು ಮುಳುಗಿ ಚಿ-
ದಾನಂದ ಗುರುವ ಕಾಣದೆ ಮನಮರುಗಿ
ಧ್ಯಾನದಿ ಕಂಗಳು ತಿರುಗಿ ನೋಡಿ
ತಾನೇ ತಾನಾದ ಘನದಿ ಮನ ಕರಗಿ 7

155
ನಾದದಿ ಬೆರೆತಿರು ಮುಕ್ತಾ ನಿತ್ಯವಿರಕ್ತಾ

ನಾದದಿ ಬೆರೆತಿರು ಮುಕ್ತಾ ನಿತ್ಯವಿರಕ್ತಾ
ವಾದದಿ ಬೆರೆತಿರುಮುಕ್ತಾ ನಾದದಿ ತಾನಾಗಿ ನಿನ್ನ ವಿಚಾರಿಸು
ನಾದಂ ಧಿಂಧಿಂಧಿಮಿಕೆ ಎಂಬ ಪ

ಸರ್ವರೂಪಕವಿದೆ ನಾದ ಸಕಲ ವಿನೋದ
ಪರ್ವಿಕೊಂಡಿರುತಿಹ ನಾದ ಬಹುಲೋಕ ಮೋದ
ದುರ್ವಿಕಾರದ ಮನವ ಎಲ್ಲೆಡೆ ಹರಿಯಿಸುವ ವೀಣಾನಾದ 1

ಆನಂದಕಾಶ್ರಯನಾದ ಆಗಿದೆ ಭೇದ
ಸ್ವಾನಂದ ತಾನೆಯದೆ ನಾದ ಹೇಳಲಿಕ ಭೇದ
ಜ್ಞಾನ ಶುದ್ಧನು ಸುಭಕ್ತಿ ವಿರಕ್ತಿಯು
ತಾನಹುದಹುದೆಂದು ಭೇರಿಯ ನುಡಿಸುವ 2

ತಾಪತ್ರಯದ ಮೂಲ ಹರಣ ಯೋಗಿಗಳ ಭರಣ
ಪಾಪ ಪುರುಷನ ಸಂಹರಣ ತಾನಿಹುದು ಸದ್ಗುಣ
ಭಾಪು ಚಿದಾನಂದ ಗುರುವನು ಕೂಡಲು
ಈ ಪಥವಲ್ಲದೆ ಇನ್ನೊಂದು ತಾನಿಲ್ಲ 3

156
ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ

ನಾದದಿ ಮಲಗ್ಯಾನೆ ಯೋಗಿ ನಿತ್ಯಾನಂದ ಭೋಗಿ
ನಾದದಿ ಮಲಗ್ಯಾನೆ ಯೋಗಿ
ನಾದಂ ಝಣಂ ಝಣನಾದಂ ಭಿಣಿಂಭಿಣಿ
ನಾದಸಲೆಯ ವೀಣಾನಾದವ ಕೇಳುತ ಪ

ಈಷಣತ್ರಯ ಪಾಪಾತ್ಮರಿರಾ ಎಬ್ಬಿಸಲು ಬ್ಯಾಡಿ
ವಾಸನವೆಂಬ ಅಷ್ಟಕರ್ಮಿಗಳೇ ಒದರ ಬ್ಯಾಡಿ
ಪಾಶವ ಹರಿವುತ ಪಂಚಕ್ಲೇಶವ
ಈಸು ಉಳಿಯದಂತೆ ತರಿದಾಯಾಸದಿ 1

ಅಂತರ ಎಂಬ ಘಾತಕರಿರಾ ಅತ್ತ ಹೋಗಲು ಬ್ಯಾಡಿ
ಭ್ರಾಂತುಯಂದೆಂಬ ಬ್ರಷ್ಟರಿರ ಜಗಳಾಡಲಿ ಬ್ಯಾಡಿ
ಅಂತರಿಸದೆ ಆರು ಶತ್ರುವ ಛೇದಿಸಿ
ಅಂತಿಂತೆನ್ನದೆ ಆಯಾಸದಿಂದಲಿ 2

ಸಂಕಲ್ಪವೆಂಬೋ ಖೋಡಿಗಳಿರಾ ಸದ್ದು ಮಾಡಲಿ ಬ್ಯಾಡಿ
ಮಂಕು ಎಂದೆಂಬ ಮಾಂದ್ಯಗಳಿರ ಮುಂದಕ್ಕಡ್ಡಾಡಬೇಡಿ
ಬಿಂಕದಹಂಕಾರ ಬೇರ ಕಿತ್ತು
ಓಂಕಾರ ಚಿದಾನಂದ ವಸ್ತು ಆಯಾಸದಿ 3

157
ನಾದನಾದ ಸುನಾದವ ತಿಳಿದವ ನಾದ ಮೂರುತಿ

ನಾದನಾದ ಸುನಾದವ ತಿಳಿದವ ನಾದ ಮೂರುತಿ ನಿಜನಾದ ಪ

ಆರು ಅರಿಗಳು ಅವರನು ಗೆಲುವೊಡೆ ಆಶ್ರಯ ತಾನಿದೆ ನಾದ
ಧೀರತನದಲಿಹ ನಾಲ್ವರ ಸಾಧಿಸೆ ದಿಟವು ತಾನಿದೆ ನಾದ 1

ಅಷ್ಟಮದಂಗಳನೆಲ್ಲವ ತಿಳಿವೊಡೆ ಅದಿಯಹುದು ಈ ನಾದ
ದುಷ್ಟರು ಇವರ ದೃಢವನು ಕೆಡಿಸಲು ದೃಷ್ಟಿಗೆ ತಾನಿದೆ ನಾಧ 2

ಮೂರು ಮೂರು ಮೂರೆನಿಸುವ ತ್ರಿಪುಟಿಯ ಮೂಲನಾಶವಿದೆ ನಾದ
ಚೋರರು ಸಪ್ತಾ ಸಪ್ತರು ಎಂಬರ ಭೇದಿಸೆ ತಾನಿದೆ ನಾದ 3

ಎರಡರ ಭೇದವನೆಲ್ಲವನಳಿವೊಡೆ ಎದೆದೆರಪಿಲ್ಲದ ನಾದ
ಭರಿತವನಂದಾನಂದವ ತುಳುಕುವ ಭಾಗ್ಯವು ತಾನಿದೆ ನಾದ 4

ನಾದದಿ ನಿತ್ಯವು ಬೆರೆತಿಹ ಪುರುಷನೆ ನಾದ ಚತುರ್ಮಖನಾದ
ವಾದರಹಿತ ಚಿದಾನಂದ ಗುರುವಿನ ಪಾದದೊಳಗೆ ಅವನಾದ 5

158
ನಾದವನಾಲಿಸೋ ನಿತ್ಯದಿ ನಾದದೊಳಗಿನ

ನಾದವನಾಲಿಸೋ ನಿತ್ಯದಿ ನಾದದೊಳಗಿನ ನಾದ ಸುನಾದ
ಓಂಕಾರ ನಾದವನರಿವನೆ ಧನ್ಯ ಯೋಗೀಶ ಪ

ನಾದದಿಂದಲಿ ಅಷ್ಟಪಾಶವಿಕ್ಕಡಿಯಹುದು
ನಾದದಿಂದಲಿ ಮದಗಳೆಂಟುಡುಗಿ ಹೋಗುವವು
ನಾದದಿಂದಲಿ ಅರಿಗಳರುವರೂ ತೊಲಗುವರು
ನಾದದಿಂದಲಿ ಕರ್ಮವು ದೂರಹುದು
ನಾದದಿಂದಲಿ ಧರ್ಮವು ವೃದ್ಧಿಪುದು
ನಾದದಿಂದಲಿ ಬ್ರಹ್ಮವು ಯೋಗೀಶ 1

ನಾದದಿಂದಲಿ ಮೌನ ತನಗೆ ತಾನಾಗುವುದು
ನಾದದಿಂದಲಿ ಚತುಸ್ವಾಧನವು ದೊರಕುವುದು
ನಾದದಿಂದಲಿ ಸಪ್ತ ಭೂಮಿಕೆಗಳಾಗಿಹವು
ನಾದದಿಂದಲಿ ಜ್ಞಾನವು ಸ್ಥಿರವಹುದು
ನಾದದಿಂದಲಿ ಚಿತ್ರವಚಲವಹುದು
ನಾದದಿಂದಲಿ ಸರ್ವರು ಯೋಗೀಶ 2

ನಾದದಿಂದಲಿ ಬುದ್ಧಿ ನಿರ್ಮಲವಾಗುವುದು
ನಾದದಿಂದಲಿ ಮನವು ಹಿಡಿತದಲಿರುತಿಹುದು
ನದದಿಂದಲಿ ದೃಕ್ದೃಶ್ಯ ಸಾಧನವಹುದು
ನಾದವೆ ಬ್ರಹ್ಮವಹುದು
ಚಿದಾನಂದನಾದವನ ತೋರಲು ಬಹುದು ಅವನಲಿ
ಭೇದವಿಲ್ಲದೆ ಕೂಡಲುಬಹುದು ಯೋಗೀಶ 3

159
ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿ

ನಾದವಾದನು ನಾದದ ಮನೆಯಿದ್ದ ಅಚ್ಚರಿ ನೋಡಿ
ವಾದಿಗಳನು ಗೆದ್ದು ಜಯವ ತಾ ಮಾಡಿ ನಾದವಾದನು ಪ

ಸುಮನಸವೆಂದೆಂಬ ಕುದುರೆಯ ಹತ್ತಿ
ಅಮಲವೆನಿಪ ಧೈರ್ಯದ ಕತ್ತಿಯ ಹಿಡಿದು
ಭ್ರಮಣೆಯಲ್ಲದ ವಿವೇಕ ಫೇರಿಯಿಂದ
ವಿಮಲಾನಂದದಿ ದುಮುಕಿಸುತಿರುತಿಪ್ಪ ನಾದವಾದನು 1

ಅಷ್ಟ ಆನೆಗಳ ತಲೆಗಳ ಹೊಡೆದು
ಷಷ್ಟರಧಿಕರ ಸಾಲನು ಕಡಿದು
ದುಷ್ಟಕುದುರೆಗಳ ಏಳರ ಕಾಲನು ಉಡಿದು
ಕಷ್ಟರೂಪದ ಚೋರರೈವರನು ದೂಡಿದ ನಾದವಾದನು 2

ಈಷಣತ್ರಯ ಪ್ರಧಾನರ ಜೀವವ ಕಳೆದು
ವಾಸನೆ ದಳವಾಯ್ಗಳೀರ್ವರ ನೆರೆ ತುಳಿದು
ಮೋಸಗಾರರ ದೊರೆ ನಾಲ್ವರನಳಿದು
ಏಸು ನುಡಿಯಲಿ ತಾನೊಬ್ಬನೇ ಉಳಿದು ನಾದವಾದನು 3

ದೋಷಕರೆಲ್ಲರ ದೇಶ ಬಿಟ್ಟೋಡಿಸೆ
ನಾದವಾದರು ಎಲ್ಲರು ಕೊನೆಗೆ ಉಳಿದವರೆಲ್ಲಾ
ಸಾಷ್ಟಾಂಗವೆರಗಿದರು
ವಾಸಿ ಪಂಥವ ಬಿಟ್ಟು ಕೊಂಡಾಡುತ ನಾದವಾದನು 4

ಇಂತು ರಣವ ಮಾಡಲು ಕೈಯ ಸುರಗಿ
ಸಂತೋಷವೆಂಬ ಮೃತದಿ ತಾ ಮುಳುಗಿ
ಶಾಂತನಾಗಿಯೆ ಚಿದಾನಂದ ಗುರುವಿಗೆರಗಿ
ನಿಂತು ನೋಡಿಯೆ ಕಂಡನಾತನೆ ತಿರುಗಿ ನಾದವಾದನು 5

160
ನಾದವ ಕೇಳುತ ನಿದ್ರೆಯ ಮಾಡುತ ಬ್ರಹ್ಮವು

ನಾದವ ಕೇಳುತ ನಿದ್ರೆಯ ಮಾಡುತ ಬ್ರಹ್ಮವು ತಾನಾಗಿ
ನಾದವ ಕೇಳುತ ನಾನಾ ಗುಣಗಳು ಹೋದವು ತಾವಾಗಿ ಪ

ಕೂಡಿತು ದೃಷ್ಟಿ ಪರಬ್ರಹ್ಮದಿ ತಾ ಅನುದಿನದಲಿ ಬಾಗಿ
ಮನ ಇಂದ್ರಿಯಗಳು ಹುಡುಕಿದರಿಲ್ಲ ಹೋದವು ತಾವಾಗಿ 1

ನಾನಾ ವರ್ಣದ ಛಾಯೆಯ ನೋಡುತ ನಿದ್ರೆಯ ಮಾಡಿದೆನೋ
ಭಾನು ಕೋಟಿ ಛಾಯೆಯ ನೋಡುತ ನಿದ್ರೆಯ ಮಾಡಿದೆನೋ 2

ಕಾಣದ ರೂಪದ ಕಾಣುತಲೆ ನಾ ಕಾಮಿಸಿ ಮಲಗಿದೆನೋ
ಬೋಧ ಚಿದಾನಂದ ಸದ್ಗುರುನಾಥನ ಧ್ಯಾನವ ಮಾಡಿದೆನೊ 3

161
ನಾದಾನಂದದಿ ಮುಳುಗಾಡೋ

ನಾದಾನಂದದಿ ಮುಳುಗಾಡೋ ಪ

ಇಲ್ಲವೆಂಬುದು ಸಲ್ಲ ಗುರು
ಎಲ್ಲಾ ಪೂರಿತನಹುದಲ್ಲ ಇದ ಬಲ್ಲವರು ಬಲ್ಲರೆಲ್ಲ
ತಾನೆಲ್ಲ ತಿಳಿಯೆ ನೀ ಸಾಕ್ಷಿಕನಹುದಲ್ಲ 1

ಮತಿಯಿಂದ ತಿಳುಕೋ ವಿಚಾರ ಈ
ಗತಿಯಲ್ಲಿ ಆತ್ಮನು ಪೂರ
ಗತಿಗೆ ಕೇಡಿಲ್ಲ ಇದು ಸ್ಥಿರ ಮಹ
ದತಿ ಸೌಖ್ಯ ಪದಕೆ ರಾಜ ನೀನೆ ಉದಾರ 2

ಭೇದ ಭೇದವು ನಿನಗೇತಕೆ ನೀ
ವಾದ ದೂರನು ಪರಕೆ ಈ
ವಾದ ಸಂವಾದಗಳ್ಯಾತಕೆ ಮಹ
ದಾದಿ ಪುರುಷನು ನೀನಹುದು ಬಿಡು ಜೋಕೆ 3

ಸತ್ಯ ಸಂವಿದ್ರೂಪ ಆತ್ಮ ನೋಡೆ
ಪ್ರತ್ಯಾಗಾತ್ಮ ಪರಕತೀತ ಅರಿಂದಲಾದುದು
ಖ್ಯಾತ ಸುನಾದವರಿದನೇ ನಿ
ರ್ಭೀತ ಮಹಾನಾದ ಚಿದಾನಂದನ ಕೂಡಿದನಾತ 4

162
ನಿನ್ನನೆ ತಿಳಿದು ನೀ ನೋಡು ಕಂಡ್ಯಾ

ನಿನ್ನನೆ ತಿಳಿದು ನೀ ನೋಡು ಕಂಡ್ಯಾ
ನೀ ನನ್ನ ತಿಳಿಯೆ ನೀ ಶಿವನು ಕಂಡ್ಯಾ ಪ

ಆದಿ ಮಧ್ಯಂತರ ಅನಾದಿ ಕಂಡ್ಯಾ
ನಾದ ಬಿಂದು ಕಳಾತೀತ ಕಂಡ್ಯಾ
ಭೇದಾಭೇದಕೆ ಅಭೇದ ಕಂಡ್ಯಾ ನೀ
ವಾದ ಸುವಾದ ವರ್ಜಿತನು ಕಂಡ್ಯ 1

ಮೂರು ಗುಣಕೆ ನೀ ಮೂಲ ಕಂಡ್ಯ
ನೀನಾರು ಅರಿಗಳಿಗತ್ತತ್ತ ಕಂಡ್ಯ
ತೋರುವುದಕೆ ನೀ ತೋರ್ಕೆ ಕಂಡ್ಯ
ನೀ ಮಾರನಟ್ಟುಳಿಗೆ ಮಹೇಶ ಕಂಡ್ಯ 2

ಮಂಗಳ ತರಕೆ ಮಂಗಳನು ಕಂಡ್ಯ ನೀ
ಮಂಗಳ ಮೂರುತಿ ಮಹಾತ್ಮ ಕಂಡ್ಯ
ಮಂಗಳ ವಸ್ತುಮಾಪತಿಯು ಕಂಡ್ಯ ನೀ
ಮಂಗಲನಿಗೆ ಮಾಯೆ ಮಾತು ಕಂಡ್ಯ 3

ನಿರುಪಮ ನಿರ್ಗುಣ ನೀನು ಕಂಡ್ಯ ನೀ
ಪರಮ ಪರಾತ್ಪರನು ಕಂಡ್ಯ
ಸುರವರ ಜೇಷ್ಠ ಸ್ತುತಿಪನು ಕಂಡ್ಯ ನೀ
ಭರಿತವಾನಂದ ಸಿಂಧು ಕಂಡ್ಯ 4

ಗುರುವಿನ ಪಾದ ಸೇರು ಕಂಡ್ಯ
ಗುರು ಕಟಾಕ್ಷವ ನೀನು ಪಡೆಯೋ ಕಂಡ್ಯ
ಗುರುವೆಂದು ಎಲ್ಲವನರಿಯೋ ಕಂಡ್ಯ
ಗುರು ಚಿದಾನಂದ ನೀನೆನ್ನು ಕಂಡ್ಯಾ 5

163
ನೆಲೆಯಾವುದಯ್ಯ ಹೊಲಬಾವುದಯ್ಯ

ನೆಲೆಯಾವುದಯ್ಯ ಹೊಲಬಾವುದಯ್ಯ
ತಿಳಿದು ಆತ್ಮನನು ತಿಳಿಯದ ಮನುಜರಿಗೆ ಪ

ವೇದ ಸಾರವನೋದಿ ವೇದದರ್ಥವ ಕಂಡು
ಆದಿಯಾಗಿಹಅನಾದಿ ಮೂರುತಿಯನ್ನು
ಸಾಧಿಸಿ ಸಾಧ್ಯವಾಗದೆ ಸರ್ವರೊಳಗಾಗಿ
ಬಾಧೆಯೊಳಗೆ ಸಿಕ್ಕುಬಿದ್ದ ಮನುಜಗೆ 1

ತನುದುಸ್ಥಿತಿಯ ಕಂಡು ತನುವಲಿಹನ ಕಂಡು
ಚಿನುಮಯವಾದ ಚಿದ್ರೂಪನೆಂಬನ
ಮನದ ಕೊನೆಯಲಿಟ್ಟು ಮಥಿಸಲಾರದೆ ತಾನು
ಘನ ದುಃಖದೊಳು ಬಿದ್ದು ಗಲಭೆಯಾದವಗೆ 2

ಕರಣ ಚರಿತೆಯ ನೋಡಿ ಕರಣ ಸಾಕ್ಷಿಯ ಕಂಡು
ಸ್ಥಿರ ಬುದ್ಧಿಯಾಗಿಯೆ ಸ್ಥಿಮಿತನಾಗದೆ ತಾನು
ವರ ಚಿದಾನಂದ ಪದ ಹೊಂದಲಾರದೆ
ನರಕದೊಳಗೆ ಬಿದ್ದು ನರಳಾಡುವವನಿಗೆ 3

164
ಪಥವ ಬಿಡು ಬಿಡು ದೇವ ಪಥದಿ ಮಲಗುವರೆ

ಪಥವ ಬಿಡು ಬಿಡು ದೇವ ಪಥದಿ ಮಲಗುವರೆ
ಗತಿ ಚಿದಾನಂದನಿರೆ ಗತಿಗೆಡುವೆನೆ ಭಯಕೆ ಪ

ಅಲ್ಲಿ ನಾನಾ ಬೋಧೆ ಬೋಧಿಸಲು ಭವ ಹರಿದು
ನಿಲ್ಲದಲೆ ನಾನೀಗಲೈ ತರಲಿಕೆ
ಇಲ್ಲಿ ಸರ್ವವೆ ಆಗಿ ನೀ ಬಂದು ಮಲಗಿರುವೆ
ಸುಳ್ಳನಿತು ಸೇರದಿದು ನಿನ್ನವಗೆ ಬಿಡು ಪಥವ 1

ಮನುಜ ಸಂಗವನಳಿದು ಮಹದರಣ್ಯವ ಹೊಕ್ಕು
ಆನಂತರದ ಪುಣ್ಯದಾಶ್ರಮವ ನೋಡಿ
ಸನುಮತದಿ ಪೂಜೆಯನು ಮಾಳ್ವೆನಾನೆಂದು ಬರೆ
ಘನಸರ್ಪವಾಗಿ ನೀನಡ್ಡ ಬಿದ್ದಿಹೆ ದೇವ 2

ಸಕಲ ಸಂಗವನುಳಿದು ಸ್ವಾನುಭಾವಗಳಿಂದ
ಅಖಿಲ ಮೃಗಗಳ ಕೂಡಿ ನಿಶ್ಚಲತೆಯಿಂದ
ಭಕುತಿಯಲಿ ನಿನ್ನನು ಭಜಪೆನೆಂದೈದುತಿರೆ
ಭಕುತನಿಗೆ ಸರ್ಪನಂತಿಹುದಿದೇನೈ ಸ್ವಾಮಿ 3

ಏಕಾಂತ ಗೃಹಗಳಲಿ ಏಕಾಂತ ಸ್ಥಳಗಳಲಿ
ಏಕಾಂತವಾಗಿ ನಿನ್ನನೆ ಪೂಜಿಸಿ
ಏಕಾಂತ ಸರ್ವಸಾಧನವೆನುತಲೈದುತಿರೆ
ಏಕಾಂತ ಮಾತೇಕೆ ಪಥವ ಬಿಡು ಎಲೆ ದೇವ 4

ಶುಕಗೆ ಪಂಜರದಂತೆ ಸಾಕ್ಷಿಯೆನಗಿರುತಿರಲು
ಅಖಿಲ ಚಿಂತೆಯ ಗಿಡುಗ ಬರಲಹುದೆ
ಮುಕುತಿದಾಯಕ ಚಿದಾನಂದ ಗುರು ಕೇಳೆನಗೆ
ಯುಕುತಿಯುಂಟೇ ಬೇರೆ ಬಿಡುಬಿಡಿರೆ ಬಿಡು ಪಥವ 5

165
ಪರಮ ಪುರುಷ ನಿನಗೆ ನಮೋ ನಮೋ

ಪರಮ ಪುರುಷ ನಿನಗೆ ನಮೋ ನಮೋ
ಪರಮ ಪರಾತ್ವರಗೆ ನಮೋ ನಮೋ ಪ

ಆದಿ ಅನಾದಿಗೆ ನಮೋ ನಮೋ ಮಹ
ದಾದಿ ತತ್ವಕೆ ನಮೋ ನಮೋ
ವಾದರಹಿತನಿಗೆ ನಮೋ ನಮೋ ನಿಜ
ವಾದ ವಸ್ತುವಿಗೆ ನಮೋ ನಮೋ 1

ಲೋಕ ಹಿತಾಖ್ಯಗೆ ನಮೋ ನಮೋ ಜಗ
ದೇಕವಲ್ಲಭನಿಗೆ ನಮೋ ನಮೋ
ನಾಕ ವಂದಿತಗೆ ನಮೋ ನಮೋ ನಿ-
ರಾಕಾರ ನಿತ್ಯನಿಗೆ ನಮೋ ನಮೋ 2

ಸಿಂಧು ಆನಂದಗೆ ನಮೋ ನಮೋ
ನಾದ ಬಿಂದು ಕಳಾತ್ಮಗೆ ನಮೋ ನಮೋ
ಸುಂದರ ತೇಜಗೆ ನಮೋ ನಮೋ
ಚಿದಾನಂದ ವಿಗ್ರಹಗೆ ನಮೋ ನಮೋ 3

166
ಪೂಜೆಯ ಮಾಡಿದೆನೆ ದೇವರ ಪೂಜೆಯ

ಪೂಜೆಯ ಮಾಡಿದೆನೆ ದೇವರ ಪೂಜೆಯ ಮಾಡಿದೆನೆ
ಈ ಜಗದರಸ ಚಿದಾನಂದ ತಾನೆಂದು ಪ

ಶುದ್ಧ ಸ್ನಾನವನೆ ಮಾಡುತ ನಿರ್ಮಲ ವಸನವನು
ಬಂಧಿಸಿ ಬಿಗಿದು ಸ್ವಸ್ಥಾನಾಸ ಮಧ್ಯದಲ್ಲಿ ಕುಳಿತು 1

ನಿಸ್ಪೃಹ ಭಸಿತವನೇ ಧರಿಸುತ ನಿಷ್ಕಲಂಕನಾಗಿ
ವಿಶ್ವೇಶ್ವರ ವಿರೂಪಾಕ್ಷನೇ ತಾನೆಂದು 2

ಸರ್ವ ಪೂಜಿತನು ತಾನೀಗ ಸರ್ವನಿವಾರಿತನು
ಸರ್ವರೂಪಕ ತಾನೀಗೆಂದು ಧ್ಯಾನವರ್ಪಿಸಿದೆನೆ 3

ಆನಂದ ವ್ಯಾಪಕನೆ ತಾನೀಗ ಸರ್ವನಿವಾರಿತನು
ಸರ್ವರೂಪಕ ತಾ ನೀಗೆಂದು ಧ್ಯಾನವರ್ಪಿಸಿದೆನೆ 4

ಇಂದ್ರಿಯ ರೂಪಕ ತಾನೀಗ ಇಂದ್ರಿಯ ವ್ಯಾಪಕನೇ
ಇಂದ್ರಿಯ ಸಾಕ್ಷಿಕ ತಾನೀಗೆಂದು ಸಿಂಹಾಸನವರ್ಪಿಸಿದೆನೆ 5

ನಿಶ್ಚಲಾತ್ಮಕನವ ತಾನೀಗ ನಿಶ್ಚಲೈಕ್ಯನಾದ
ನಿಶ್ಚಲವಸ್ತು ನಿಜತಾನೇ ಎಂದರ್ಘ್ಯವರ್ಪಿಸಿದೆನೆ 6

ವಿಶ್ಚದ ವಿಶ್ವಕರ್ತು ತಾನೀಗ ವಿಶ್ವ ವಿಶ್ವಭೋಕ್ತೃ
ವಿಶ್ವಲೀಲಾತ್ಮಕ ತಾನೀಗೆಂದು ಪಾದ್ಯವರ್ಪಿಸಿದೆನೆ 7

ಅನಂತ ಮಹಿಮ ತಾನೀಗ ಅನಂತ ನಿಗಮ
ಅನಂತ ನಿಗಮ ಗೋಚರ ತಾನೆಂದು ಸ್ನಾನವರ್ಪಿಸಿದೆನೆ 8

ಅಂಬರ ರೂಪಕ ತಾನೀಗ ಅಂಬರ ವ್ಯಾಪಕನೇ
ಅಂಬರದೊಳು ಚಿದಂಬರ ತಾನೆಂದು ವಸ್ತ್ರವರ್ಪಿಸಿದೆನೆ 9

ಚೈತನ್ಯಾಧಾರ ತಾನೀಗ ಚೈತನ್ಯಾದೂರ ಚೈತನ್ಯಾಧಿಪ
ತಾನೆಂದು ಯಜ್ಞೋಪವೀತ ವರ್ಪಿಸಿದನೆ 10

ಕಲುಷ ನಿರ್ಧೂತ ತಾನೀಗ ಕಲುಷ ನಿರ್ಜಿತನೇ
ಕಲುಷ ಹರತಾ ನಿಜವೆಂದಾಭರಣವರ್ಪಿಸಿದೆನೆ 11

ಲೇಪಕ್ಕಾಧಾರ ತಾನೀಗ ಲೇಪ ನಿರಾಧಾರ
ಲೇಪಹರ ತಾ ನಿಜವೆಂದು ಅನುಲೇಪವರ್ಪಿಸಿದೆನೆ 12

ಪುರತನು ವಿಸ್ತರಿಸಿ ತಾನೀಗ ಪುರಾಧಿಪತಾನೆನಿಸಿ
ಪುರುಷೋತ್ತಮ ತಾನೆಂದು ಸುಪುಷ್ಪವರ್ಪಿಸಿದೆನೆ 13

ಪರ ಇಹವು ತಾನೇ ತಾನೀಗ ಪರಾತ್ಪರನು ತಾನೆ
ಪರವಸ್ತು ತಾ ನಿಜವೆಂದು ಧೂಪವರ್ಪಿಸಿದೆನೆ 14

ಜ್ಯೋತಿಯ ರೂಪ ತಾನೀಗ ಜ್ಯೋತಿ ನಿರ್ಮಯನು
ಜ್ಯೋತಿಯಹ ಚಿಜ್ಯೋತಿಯು ತಾನೆಂದು ಜ್ಯೋತಿಯರ್ಪಿಸಿದೆನೆ 15

ನಿತ್ಯನಿರ್ಲಿಪ್ತನು ತಾನೀಗ ನಿತ್ಯ ತೃಪ್ತನು
ನಿತ್ಯತೃಪ್ತ ತಾನೆಂದು ನೈವೇದ್ಯವರ್ಪಿಸಿದೆನೆ 16

ಮಂಗಳವೆ ಆದ ತಾನೀಗ ಮಂಗಳಾಂಗನಾದ
ಮಂಗಳ ಮೂರುತಿ ತಾನೆಂದು ತಾಂಬೂಲವರ್ಪಿಸಿದೆನೆ 17

ನಿರ್ವಿಕಾರ ನಿಜ ತಾನೀಗ ನಿರಾವಲಂಬ ನಿಜ ನಿ-
ರಾವರಣ ತಾನೆಂದು ಪ್ರದಕ್ಷಿಣವರ್ಪಿಸಿದೆನೆ 18

ಜಯ ಜಯಾತ್ಮಕನೆ ತಾನೀಗ ಜಯ ಸದಾತ್ಮಕನೆ
ಜಯನಿತ್ಯಾತ್ಮಕ ತಾನೆಂದು ನಮಸ್ಕಾರವರ್ಪಿಸಿದೆನೆ 19

ಲೋಕೈಕನಾಥ ತಾನೀಗ ಏಕೈಕ ನಾಥನು
ಏಕ ನಾಥಾ ತಾನೆಂದು ವಿಸರ್ಜನವರ್ಪಿಸಿದೆನೆ 20

ಈ ಪರಿ ಪೂಜೆಯನು ನಿತ್ಯದಿ ಆ ಪರಬ್ರಹ್ಮದಲಿ
ಭೂಪ ಚಿದಾನಂದ ರೂಪನೆ ತಾನೆಂದೀ ಪರಿ ಮಾಡಿದೆನೆ 21

167
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆ

ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆ
ಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ

ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದು
ನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ
ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನ
ನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1

ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿ
ಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯ
ತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-
ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2

ಗಾಳಿಯದು ಹಾಯಲಿಕೆ ಗತವಹುದು ಅನುಭವವು
ಬೀಳೆ ಅವರ ನೆರಳು ಬಯಲಹುದು ಬೋಧನೆಯು
ಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆ
ಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3

ನವನೀತ ಪುರುಷನು ನಾರಿಯೇ ಅಗ್ನಿಯು
ನವನೀತ ಕರಗದೆ ಅಗ್ನಿಯೆದುರಿನಲಿ
ಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆ
ಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4

ಪಾತಕದ ಬೊಂಬೆಯು ಫಣಿವೇಣಿಯರ ರೂಪ
ಘಾತಕವು ತಾನಹುದು ಯೋಗಗಳಿಗೆಯಲಯ್ಯ
ಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆ
ದಾತ ಚಿದಾನಂದನು ತಾನೆ ಅಹನಯ್ಯ 5

168
ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವ

ಬಿಟ್ಟೆನಯ್ಯ ಬಿಟ್ಟೆನಯ್ಯ ಪ್ರಪಂಚವ
ಮುಟ್ಟಿದೆನು ಬ್ರಹ್ಮವನು ಮುಕ್ತನಾದೆನು
ಹುಚ್ಚು ಮೂಳಿ ಹೆಂಡತಿಯ ಪ

ಮೆಚ್ಚಿ ನಲಿವ ಮಗನು ಸೊಸೆಯು
ಉಜ್ಜಿ ಬದುಕನೆಲ್ಲ ನಾನು ಉಡುಗಿ ಕಳೆದೆನು 1

ನೆಂಟರಿಷ್ಟರೆಲ್ಲರನ್ನು ದೂರಮಾಡಿ ಕುಳಿತೆ ನಾನು
ಹೆಂಟೆಯಂತೆ ಕಂಡೆನಯ್ಯ ಹೇರು ಹೇಮವ 2

ಅಷ್ಟದೇವರನ್ನು ನಾನು ಅಡವಿಗೆಂದು ಅಟ್ಟಿಬಿಟ್ಟೆ
ಕಷ್ಟಪಡಿಪ ಪುರೋಹಿತನ ಕಡೆಗೆ ತಳ್ಳಿದೆ 3

ವಾರವಾರ ನೇಮವನ್ನು ಒಲೆಯನೀಗ ಹೊಗಿಸಿದೆ
ದಾರಿ ಹಚ್ಚಿಸಿದೆನು ಕುಲವ ಶೀಲವ್ರತಗಳ 4

ಮತಗಳೆಂಬ ವಾದವನ್ನು ಮಣ್ಣುಪಾಲು ಮಾಡಿದೆನು
ಸತತ ಚಿದಾನಂದ ಬ್ರಹ್ಮ ಸಾಕ್ಷಿಯಾದನು 5

169
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆ

ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆ
ಬೆಳಕು ಪಸರಿಸುತಿದೆಕೊ ಎತ್ತಿತ್ತ ನೋಡೆ
ಮುಂಬೆಳಕು ಕಾಣಿಸುತ್ತ ರವಿಕೋಟಿಯರ ಪಳಿಯುತಿದೆ
ನಿರ್ಮಳ ನೋಡಲುಪ್ಪವಡಿಸ ಯತಿರಾಜ ಪ

ಷೋಡಶಾಕಾರವಹ ಸೋಮ ಕಳೆಗುಂದಿಹುದು
ಖೋಡಿ ಜನನ ಮರಣ ಚಕ್ರ ತಾ ಕೊರಗಿದುದು
ಪಾಡಳಿದು ಜೀವಶಿವ ಶೈತ್ಯ ಬಿಟ್ಟಾಡಿದುದು
ಆರೂಢನೊಲಿದುಪ್ಪವಡಿಸ ಯತಿರಾಜ 1

ತಾಪತ್ರಯಗಳೆಂಬ ರಾತ್ರಿ ತಾ ಜಗುಳಿದುದು
ಪಾಪಿ ಇಹಪರವೆಂಬ ಸುಳಿಗಾಳಿ ಜಾರಿದುದು
ಕೋಪಿ ಸಪ್ತವ್ಯಸನ ಗೂಗೆ ಕಣ್ಣುಡುಗಿದುದು
ನಿರ್ಲೇಪನುಪ್ಪವಡಿಸ ಯತಿರಾಜ 2

ಅಷ್ಟ ಪ್ರಕೃತಿಗಳೆಂಬ ನಕ್ಷತ್ರವಡಗಿದವು
ದುಷ್ಟ ಪಂಚೇಂದ್ರಿಯದ ಕುಮುದಗಳು ಬಾಡಿದವು
ನಷ್ಟರಾರುವರೆಂಬ ಶಿವನಿಕರ ವೋಡಿದವು
ಶಿಷ್ಟ ನೀನೊಲಿದುಪ್ಪವಡಿಸ ಯತಿರಾಜ 3

ಶಾಂತರಸ ಲಹರಿ ತನಿವಾತ ಸೂಸುತಲಿದೆ
ಸ್ವಾಂತನಾದ ಭ್ರಮರ ಪರಿಪರಿಯ ಪಾಡುತಿದೆ
ಅಂತರಂಗದ ಕಮಲ ತಾನಿಲ್ಲಿ ಬಿರಿಯುತಿದೆ
ನಿಶ್ಚಿಂತನೊಲಿದುಪ್ಪವಡಿಸ ಯತಿರಾಜ 4

ನಿರುಪಮ ನಿರಾಲಂಬ ನಿರಮಾಯ ನಿರಪೇಕ್ಷ
ಪರಮ ಪರತರ ವಸ್ತು ಪರಮೇಶ ಪರಮಾತ್ಮ
ನಿರುತ ನಿತ್ಯಾನಂದ ಮೂರ್ತಿ ಚಿದಾನಂದ
ಗುರುನಾಥನುಪ್ಪವಡಿಸ ಯತಿರಾಜ 5

170
ಬೇಡಿದೆನು ಕೊಡುಕಂಡ್ಯ ಬೇಡಿದೆನು

ಬೇಡಿದೆನು ಕೊಡುಕಂಡ್ಯ ಬೇಡಿದೆನು ಕೊಡುಕಂಡ್ಯ
ಬೇಡಿದೆನು ನೀ ನೀಡು ಕಂಡ್ಯಾ ಪ

ನಿನ್ನ ಹಾಡನು ಹಾಡಿ ನಿನ್ನ ನಿಜದೊಳಗಾಡಿ
ನಿನ್ನನೇ ಕಾಡಿ ನಿನ್ನನೇ ಬೇಡಿ
ನಿನ್ನ ಓಲಗವ ಮಾಡಿ ನಿನ್ನ ನಿಟ್ಟಿಸಿ ನೋಡಿ
ನಿನ್ನ ಲೀಲೆಯೊಳು ನಾನಿರುತಿಹುದದನಾ 1

ನೋಟದೊಳಗಿನ ನೋಟ ಕೂಟದೊಳಗಿನ ಕೂಟ
ಆಟದೊಳಗಿನ ಆಟ ಇಂಥ ಆಟ
ನೀಟದೊಳಗಿನ ನೀಟ ನಿನ್ನಲ್ಲಿ ಬೆರೆದಾಟ
ಪಾಟ ಮಾಡಿಯೆ ಎನಗೆ ಪಾಲಿಸುವುದನ 2

ಶರೀರದಿಚ್ಚೆಯನುಳಿದು ಶರೀರ ವಾಸನೆ ಕಳೆದು
ಶರೀರ ವಿಷಯದ ಹೊಲಬೆಲ್ಲ ಬಳಿದು
ಶರೀರದ ನೆಲೆಯು ತಿಳಿದು ಶರೀರದೊಳೊಬ್ಬನನುಳಿದು
ಶರೀರದ ಸಂಗ ದೊರಕದಿಹದದನಾ 3

ನಾದಲಕ್ಷಿಸಿ ಹಿಡಿದು ನಾದ ಸಂಗವ ಪಡೆದು
ನಾದಾಮೃತವ ಕಿವಿತುಂಬ ಕುಡಿದು
ನಾದ ದಾರಿಯ ನಡೆದು ನಾದದೊಳ್ವೆಳಗೊಡದು
ನಾದವನೆ ಮರೆತು ಸುಖಿಸುತಿಹದದನ 4

ನಿನ್ನ ನೀನುಳಿದಿಲ್ಲ ನೀ ದೈವ ಜಗಕೆಲ್ಲ
ನಿನ್ನಂತೆ ಆಪ್ತರಿಲ್ಲ ನಿನ್ನ ನಂಬಿದೆನಲ್ಲ
ನೀ ಕಾಯಬೇಕಲ್ಲ ಚೆನ್ನ ಚಿದಾನಂದ
ನೆನೆಹಂಬತಾತ್ವಿಕ ಹಿನ್ನೆಲೆಯ ಕೀರ್ತನೆಗಳುದದನಾ 5

171
ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆ

ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆ
ಬ್ರಹ್ಮನಾದವನ ಬಗೆಯನು ಹೇಳುವೆ ಕೇಳಿ ಪ

ಆಶಾಪಾಶಗಳಿಗೆ ವಶವಾಗದವ ಬ್ರಹ್ಮ
ಮೋಸಹೋಗದೆ ಮಾಯೆಗೆ ಇರುವವ ಬ್ರಹ್ಮ
ಕೂಸಿನಂದದಿ ಭಾವ ಕೂಡಿಹನವ ಬ್ರಹ್ಮ
ಘಾಸಿಯಾಗನು ಮದನಗೆ ಅವನು ಬ್ರಹ್ಮ 1

ಸತಿಸುತರಿಚ್ಛೆಯ ಸಮನಿಸದವ ಬ್ರಹ್ಮ
ಇತರರ ವಾಕ್ಯಕೆ ಕಿವಿಗೊಡದವ ಬ್ರಹ್ಮ
ಗತಿ ಯಾವುದೆನಗೆಂದು ಗುಣಿಸುತಿಪ್ಪವ ಬ್ರಹ್ಮ
ಅತಿ ಹರುಷದಿಂ ಬಾಳುತಿರುವವನು ಬ್ರಹ್ಮ 2

ಸಕಲ ವಿಶ್ವವು ಎನ್ನ ಸರಿಯು ಎಂಬುವವ ಬ್ರಹ್ಮ
ಸುಖ ದುಃಖವನು ಸಮದೃಷ್ಟಿಯಲಿ ನೋಡುವವ ಬ್ರಹ್ಮ
ಭಕುತಿ ಭಾವನೆಯಿರುವ ಮಾನವನು ತಾ ಬ್ರಹ್ಮ
ಮುಕುತಿ ಮಾರ್ಗದಲಿರುವ ಯೋಗಿಯವ ಬ್ರಹ್ಮ 3

ಹುಚ್ಚರಂದದಿ ನೋಡೆ ಹುದುಗಿಕೊಂಡಿಹ ಬ್ರಹ್ಮ
ಅಚ್ಚರಿಯ ಅವನಾಟ ತಿಳಿವವನು ಬ್ರಹ್ಮ
ನಿತ್ಯಕಾಲದಿ ಜ್ಞಾನ ಬೇಕೆನ್ನುವವ ಬ್ರಹ್ಮ
ಕೊಚ್ಚಿತೆಂಬನು ಎಲ್ಲ ಕುಲಜ ಬ್ರಹ್ಮ 4

ದಾಸದಾಸರ ದಾಸನಾದವನೆ ಬ್ರಹ್ಮ
ಈ ದೇಹದಾ ಹಂಗ ತೊರೆದವನು ಬ್ರಹ್ಮ
ಭಾಸುರ ಚಿದಾನಂದನ ಭಜಿಪ ಭಕ್ತನೆ ಬ್ರಹ್ಮ
ವಾಸರಿಲ್ಲವೋ ಈ ವಾಕ್ಯಕೆಂಬುವವ ಬ್ರಹ್ಮ 5

172
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆ

ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆ
ಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ

ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡು
ಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿ
ಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನೇ 1

ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿ
ನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ 2

ಆಪವಿರಲು ಚಂದ್ರನು ಬಂದ ತೆರನಂತೆ
ಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇ
ಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿ
ಉದಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ 3

173
ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ಎಂಬ ಮಾತೆಂತನೆ

ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ಎಂಬ ಮಾತೆಂತನೆ
ಬದಲಿಲ್ಲದಿರುವುದೇ ಬ್ರಹ್ಮಾಸ್ತ್ರ
ಬ್ರಹ್ಮಾಸ್ತ್ರಕೆ ಬ್ರಹ್ಮಾಸ್ತ್ರವೇಯಲ್ಲದೆ
ಬ್ರಹ್ಮಾಸ್ತ್ರವೇ ಬ್ರಹ್ಮಾಸ್ತ್ರವು ಬ್ರಹ್ಮಾಸ್ತ್ರ ಪ

ಪಾಶುಪತಾಸ್ತ್ರ ನಾರಾಯಣಾಸ್ತ್ರವನೆಲ್ಲ
ಪೂರ್ಣಾಹುತಿಯ ಕೊಂಬುದೇ ಬ್ರಹ್ಮಾಸ್ತ್ರ
ವಾಸವಾದಿತ್ಯ ಆಗ್ನೇಯಾಸ್ತ್ರವನೆಲ್ಲ
ಬೆದರದೇ ನುಂಗುವುದೆ ಬ್ರಹ್ಮಾಸ್ತ್ರ 1

ಬ್ರಹ್ಮರಂದ್ರವೆ ಅದು ರಾಜಯೋಗ ಸ್ಥಾನ
ಬ್ರಹ್ಮರಂದ್ರದ ನಿವಾಸಿ ಬ್ರಹ್ಮಾಸ್ತ್ರ
ಬ್ರಹ್ಮದೇವರ ಜಿಹ್ವೆ ಹಿಡಿದತುರೀಯ ದೇವತೆ
ಬ್ರಹ್ಮಾಸ್ತ್ರವೇ ಅಸ್ತ್ರವು ಬ್ರಹ್ಮಾಸ್ತ್ರ 2

ಬ್ರಹ್ಮ ತುರೀಯಾತೀತ ಬ್ರಹ್ಮಾಸ್ತ್ರ
ನಿರ್ಗುಣ ಬ್ರಹ್ಮಾಸ್ತ್ರನ ಸ್ವರಾಟ್ ಬ್ರಹ್ಮಾಸ್ತ್ರ
ಬ್ರಹ್ಮ ಚಿದಾನಂದ ಬ್ರಹ್ಮಾಸ್ತ್ರವೆನಿಸಿತು
ಬ್ರಹ್ಮಾಸ್ತ್ರವೇ ಬಗಳ ಬ್ರಹ್ಮಾಸ್ತ್ರ 3

174
ಬ್ರಹ್ಮಾಸ್ತ್ರದ ನಿಜವನು ನಾ ಪೇಳುವೆ

ಬ್ರಹ್ಮಾಸ್ತ್ರದ ನಿಜವನು ನಾ ಪೇಳುವೆ
ಬ್ರಹ್ಮಾಸ್ತ್ರವೇ ಬ್ರಹ್ಮವು
ಬ್ರಹ್ಮಾಸ್ತ್ರ ತಾನೆಂದು ಭಜಿಸುವಾತನು
ಬ್ರಹ್ಮಾಸ್ತ್ರವೇ ಆತನು ಬ್ರಹ್ಮಾಸ್ತ್ರ ಪ

ಪೀತಾಂಬರದುಡಿಗೆ ರಾಶಿಯು ಹಾಕಿದ ಎದೆಕಟ್ಟು
ಪೀತವಾಗಿಹುದೇ ಬ್ರಹ್ಮಾಸ್ತ್ರ
ಪೀತವರಣ ಪೀತ ಪುಷ್ಟ ಗಂಧಾನುಲೇಪನ
ಪೀತದಿಂದಿಹುದೇ ಬ್ರಹ್ಮಾಸ್ತ್ರ ಪ್ರೀತಸರ್ವವು ಆಗಿ
ಪ್ರೀತ ಪ್ರೀತೆಯೆ ಆಗಿ ಪೀತಾವರಣವೆ ಬ್ರಹ್ಮಾಸ್ತ್ರ 1

ಬಿಗಿದ ಬತ್ತಳಿಕೆಯು ಎಡಹಸ್ತ ಶಾರ್ಙದಿ
ಝಗಿ ಝಗಿಸುವುದೇ ಬ್ರಹ್ಮಾಸ್ತ್ರ
ತೆಗೆದು ಕೆನ್ನೆಗೆ ಶರವನೆಳೆದು ರೌದ್ರದಿ
ನಿಗಿನಿಗಿಸುವುದೇ ಬ್ರಹ್ಮಾಸ್ತ್ರ 2

ವೀರ ಮಂಡಿಯ ಹಾಕಿ ಖಡ್ಗವ ಸೆಳೆದು
ತೂರತಲಿಹುದೇ ಬ್ರಹ್ಮಾಸ್ತ್ರ
ಕಾರುವ ಕಿಡಿಗಳ ಕ್ರೂರ ದೃಷ್ಟಿಯಲಿ
ಘೋರವಾಗಿಹುದೇ ಬ್ರಹ್ಮಾಸ್ತ್ರ
ಬಾರಿಬಾರಿಗೆ ಹೂಂಕಾರಗೈಯುತ ಅವಡುಗಚ್ಚಿ
ಮಾರಿಯಾಗಿಹುದೇ ಬ್ರಹ್ಮಾಸ್ತ್ರ
ಸಾರ ಕಿಚ್ಚಿನ ಜ್ವಾಲೆ ಭುಗುಭುಗು ಭಟಭಟ
ಎನುತಲಿಹುದದೇ ಬ್ರಹ್ಮಾಸ್ತ್ರ 3

ದಿಸೆಗಳು ಮುಳುಗಿವೆ ಉರಿಯ ಕಾಂತಿಯಲಿ
ರವಿಶತ ಕೋಟೆಯ ರಶ್ಮಿ ಚೆಲ್ಲುವುದೇ ಬ್ರಹ್ಮಾಸ್ತ್ರ
ಪಸರಿಸಿ ಇಹ ಬ್ರಹ್ಮಾಂಡವನಂತವ
ಭಸ್ಮ ಮಾಡುವುದೇ ಬ್ರಹ್ಮಾಸ್ತ್ರ
ನುಸಿಗಳು ಅಸಂಖ್ಯಾದಿ ಬ್ರಹ್ಮರುದ್ರಾದ್ಯರ
ಅಸುವ ಕೊಂಬುದೇ ಬ್ರಹ್ಮಾಸ್ತ್ರ 4

175
ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆ

ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆ
ನುಂಗಿ ಕಾಮ ಕ್ರೋಧಗಳನ್ನು
ಅಂಗ ಮೆರೆವ ಮರವೆನಿಕ್ಕಿ ಪ

ನಿತ್ಯತೃಪ್ತನು ನಿರಾಕಾರ ನಿರ್ಲಿಪ್ತನು
ಪ್ರತ್ಯಗಾತ್ಮ ಅತ್ಯಾಧಿಕ
ಸತ್ಯಸಂಧನು ತಾನೆ ಎಂಬ 1

ವಿಶ್ವ ನಾಟಕ ಮಹಾವಿಶ್ವದಾಧಾರ
ವಿಶ್ವದೊಳ ಹೊರಗೆಲ್ಲ
ವಿಶ್ವತೃಪ್ತ ತಾನೆ ಎಂಬ 2

ಏನ ಕೇಳುವಿರೋ ನೀ
ವೇನ ಹೇಳುವಿರೋ
ಜ್ಞಾನ ಮೂರುತಿ ಚಿದಾನಂದ
ತಾನೆ ತಾನೆ ಎಂಬ 3

176
ಭವ ಸಂಸಾರ ಶರಧಿಯ ಗುರು ಅಂಬಿಗ

ಭವ ಸಂಸಾರ ಶರಧಿಯ ಗುರು ಅಂಬಿಗ ದಾಟಿಸಿದ
ಶಿವನ ಮಾಡುತಲೆನ್ನ ಮುಕ್ತಿಗೇರಿಸಿದ ಪ

ಬಯಕೆಗಳೆಂಬ ತೆರೆಯು ತಾಪತ್ರಯಗಳೆ ಲಹರಿಯು
ಪ್ರಿಯಗಳೆಂಬುವೆ ನೊರೆಯು ಕ್ಲೇಶವೆಂಬುದೆ ಹರಿಯು 1

ತಿಳಿವು ಇಲ್ಲದ ಮಡುವು ಕಸಿವಿಸಿ ಎಂಬುದೆ ದಡವು
ಬಲು ಅವಿವೇಕವೆ ಗುಡುಗು ಸುಖದುಃಖಗಳೆಂಬುವು ತೆರೆಯು 2

ಸತಿಯೆಂಬುವಳೆ ಮೊಸಳೆ ಸುತರೆಂಬವರೆ ಜಿಗಳೆ
ಅತಿ ಬಗುಳವೇ ನೀರ್ಗೋಳಿ ಮೋಹವೆಂಬುದೆ ಸುಳಿ 3

ಸಂದಣಿಯೆಂಬುವು ಜಲಚರವು ಸಡಗರವೆಂಬುದೆ ತಳವು
ಹೊಂದಿಹ ಚಿಂತೆಯೆ ದಡವು ಸ್ಥಿರವಿಲ್ಲದುದೇ ಗಡುವು 4

ಜ್ಞಾನದ ನಾವೆಗಳಿಂದ ಪ್ರಣವದ ಹುಟ್ಟುಗಳಿಂದ
ದಾಟಿಸಿದ ಚಿದಾನಂದ ಅಂಬಿಗ ಛಲದಿಂದ 5

177
ಭ್ರಮೆಯಿಂದ ಎರಡಾಯ್ತು ಇದ್ದುದೊಂದೆ ವಸ್ತು

ಭ್ರಮೆಯಿಂದ ಎರಡಾಯ್ತು ಇದ್ದುದೊಂದೆ ವಸ್ತು
ಭ್ರಮೆಯಳಿದ ಬಳಿಕ ಮುನ್ನಿಹುದೆ ನಿಜವಸ್ತು ಪ

ಸ್ಥಾಣುವೆಂಬುದು ಪೋಗಿ ಮನುಜ ರೂಪಾದಂತೆ
ಕಾಣಿಸಿತು ರಜ್ಜುವದು ಸರ್ಪದಂತೆ 1

ಕೆಂಪು ಎಂಬುದು ಪೋಗಿ ಕನಕರೂಪಾದಂತೆ
ಇಂಪು ಕಾಣಿಸಿ ಶುಪ್ತಿ ರಜತದಂತೆ 2

ಒಬ್ಬನಿರುತಿಹ ಆತ್ಮ ಜೀವತ್ವವದು
ಭ್ರಾಂತಿ ಒಬ್ಬನೆ ಚಿದಾನಂದ ತಾನೆ ಸತ್ಯ 3

178
ಮಡಿಯಾಗಿ ತಂಗಿ ಮಹಾಲಿಂಗ ಪೂಜೆ

ಮಡಿಯಾಗಿ ತಂಗಿ ಮಹಾಲಿಂಗ ಪೂಜೆ ಮಾಡೆ
ಮುಕ್ತಿ ಸದನಕೇರುವೆ ನೋಡೇ ಪ

ದೇಹವೆಂಬ ಮನೆಯ ಸಾರಿಸೆ
ಮೋಹವೆಂಬ ತಂಗಳ ಮಡಕೆ ಹೊರಗಿರಿಸೆ
ಸೋಹಂ ಎಂಬ ರಂಗವಲ್ಲಿಯನಿಡೆ
ಜ್ಯೋತಿಯನು ಬೆಳಗಿಸೆ ನೀನು 1

ನಾನಾವಾಸನೆಯ ಮೈಲಿಗೆಯನು ಬಿಡೆ
ಮನಮೈಲಿಗೆಯನು ತೊಳೆ
ಸ್ವಾನುಭವದ ಪೀತಾಂಬರವನುಡೆ
ನಾನು ಎಂಬ ಕಸವನು ಗುಡಿಸೆ
ನಾದದ ಸುಖವನು ಅನುಭವಿಸೆ ನೀನು 2

ಧ್ಯಾನ ಮನನೆನಪಿಲ್ಲದಾಗಿ
ಸ್ವಸ್ಥಾನದಲ್ಲಿ ಭಾನುವೀಗ ಬೆಳಗಿದಂತಾಗಿ ನೀನು
ನಾನು ಎಂಬುದು ಅಳಿದು ನೀನೆ
ಚಿದಾನಂದನಾಗಿ ಪೂಜಿಸು 3

179
ಮನವೆಂಬ ಬೇಟೆಗಾರ

ಮನವೆಂಬ ಬೇಟೆಗಾರ
ಹತ್ತಿಂದ್ರಿಯ ನಾಯಿ
ಮನ ಬಂತು ಘೋರವಾದ
ಮನಮನಾದಿ ಮೃಗಂಗಳನು
ಮಹಾಕೊಲೆಯ ಕೊಲ್ಲುತಿಹನು ಪ
ಮಹಾಪ್ರಪಂಚ ಬಲೆಯು
ತಾಪತ್ರಯ ತೊಡಕು
ಮಹಾವಿಷಯ ಮೇವು ಮಹಾವಿಷಯ
ಮೇವಿಗೆ ಬಂದು ಮನುಜಮೃಗಗಳು ಕೆಡವುತಿಹವು 1

ನಯನೇಂದ್ರಿಯಗಳೆಂಬ ನಾಯಿ
ಕಂಡಾಗಲೆ ಹಿಡಿವುದು
ಪ್ರಾಯ ಒಳ್ಳೆಯ ನಾಯಿ
ನಿಯತವಿಹುದಲ್ಲೆ-
ನ್ನದಲೆ ನೆನೆದಾಗಲೇ ಹಿಡಿಯುತಿಹುದು 2

ಒಂದಕ್ಕದೊಂದು ವೇಗವುಹತ್ತೀಪರಿನಾಯಿ
ಬಂದರೆಂತೊಂದು ಸತ್ಯವು
ಬಂದು ಹಿಡಿಯದಿರೆ
ಮತ್ತೊಂದಾದರೆ ಹಿಡಿದು ಕೆಡವುತಿಹುದು 3

ಬಾಹ್ಯದ ಅಡವಿಯೊಳಗೆ
ಮೃಗಂಗಳಿಗೆ ಬಹಬಾಧೆ ನಿತ್ಯದೊಳಗೆ
ಬಾಹ್ಯ ವಿಷಯಪೇಕ್ಷೆಯ
ಬಿಟ್ಟರೆ ಬದಿಯ ನಾಯಿಗಳು ಸೇರದಿಹವು 4

ತನಗೆ ತಿಳಿಯಬೇಕು
ತಾನುಳಿವುದಕೆ ತನಗೇಯಬೇಕು
ತನ್ನ ಚಿದಾನಂದನೆಂದು ತನ್ನ ಕಂಡರೆ ಭಯವಿಲ್ಲ 5

180
ಮರತೆ ನೀ ಕಂಡ್ಯ ಮನವೇ ಎಚ್ಚರವು

ಮರತೆ ನೀ ಕಂಡ್ಯ ಮನವೇ ಎಚ್ಚರವು
ಗುರುವರನ ನೆನೆಯೋ ನೀನು
ಅರಿತು ಸರ್ವಸರ್ವರಲ್ಲಿ ಆತ ತಾನಿಹನೆಂದು
ಹಿಂದು ನೆಲೆಗೊಳಿಸು ಬೇಗ ಪ

ಅಣುಮಹತ್ತಾದನೆಂದು
ಅನಂತ ಗುಣಗಣನೆಯಾದನೆಂದು
ಎಣಿಸೆ ಏಕ ದೇವಾದವನ
ಕುಣಿಕುಣಿದು ನೆನೆದು ಆಡುವಾಡು 1

ಆವಾವಸ್ಥೆಯ ತೋರ್ಪ
ಅವನೆಲ್ಲ ತೀವಿಹನು ಪೂರ್ಣನಾಗಿ
ದೇವದೇವಾದನ ಧೈರ್ಯದಿಂ ಹೃದಯದಲಿ
ಸಾವಧಾನದಲಿ ನಿಲಿಸು ಬಲಿಸು 2

ನಿರುಪಮ ನಿರಾಶಾಪರ ನಾ
ನಿಶ್ಚಿಂತ ನಿರುತ ನಿರ್ಲೇಪನಾ
ಪರಮ ಪಾವನ ಮೂರ್ತಿ ಪದ್ಮಾವತಿ ಶತಕೋಟಿ
ವರ ಚಿದಾನಂದ ಗುರುವಾ ಸ್ಥಿರವಾ 3

181
ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿ

ಮಾಡುತಿಹ ಸಂಸಾರ ಮಲಿನ ಹೊದ್ದೆದೆಯೋಗಿ
ಆಡಲೇನವ ಆನಂದವಿಹ ಸುಖವ ಪ

ಬಾಲ ಶಿಶುಲೀಲೆಗಳ ಬಗೆ ಬಗೆಯ ಲಾಲಿಸುತ
ಶೂಲಧರಸುತರೀಗ ಬಂದರೆನುತ್ತ
ಕಾಲು ಕೈ ಮೋರೆಗಳ ತೊಳೆದುಣಿಸಿ ರಕ್ಷಿಸುತ
ಮೂಲೋಕಕೆನ್ನ ಭಾಗ್ಯ ಮಿಗಿಲು ಮಿಗಿಲೆನುತ 1

ಸತಿ ವಿನೋದವ ಮಾಡೆ ಸರಸವನೆ ಮಾಡುತ್ತ
ಅತಿ ಆದಿವಸ್ತು ತಾನೀಕೆಯನುತಾ
ಮತಿಭ್ರಾಂತನಾಗದಲೆ ಮಂಗಳನು ತಾನೆನುತ
ಮತಿಯಾಟ ಬ್ರಹ್ಮವಿದು ಇದುವೆ ಎನ್ನುತ್ತ 2

ಬಡತನವು ಬಂದು ಕಾಡುತ್ತಲಿರೆ ನೋಡುತ್ತ
ದೃಢಬುದ್ಧಿಯಾಗಿ ತಾನೀಗಲಿರುತ
ಬಿಡದೆ ರಕ್ಷಿಪ ವಿಶ್ವಕುಟುಂಬಿಯಹನೆನುತ
ಪಡದೆ ಆಯಾಸ ಸುಖವಾಸಿಯಾಗಿರುತ 3

ಬಡಿದಾಡುತಿಹ ಗೃಹದ ಜನರುಗಳ ನೋಡುತ್ತ
ಬಿಡು ನಿನ್ನ ಬುದ್ಧಿಯನು ಎಂದು ಹೇಳುತ್ತ
ಕಡೆಗಣಿಸಿದವರ ಅತ್ತಿತ್ತ ಮಾಡುತ್ತ
ಕಡಹ ನಿಶ್ಚಲದಿಂದ ಮತಿಶಾಂತವಿರುತ 4

ನಿಂದ್ಯದೂರಪವಾದವನು ಕೇಳುತ್ತ
ಮಂದ ಶ್ರವಣನೋ ಎಂಬ ತರದಲಿರುತ
ನಿಂದು ದೃಢ ಚಿತ್ತದಲಿ ನಿರ್ಲೇಪ ತಾನೆನುತ
ಬಂಧಹರ ಚಿದಾನಂದ ತಾನಾದಗೆನುತ 5

182
ಮಾರಿಯನು ತೋರುತಿಹೆನು ಅದನೀಗ

ಮಾರಿಯನು ತೋರುತಿಹೆನು ಅದನೀಗ
ನಾರಿ ಎಂದೆಂಬರಯ್ಯ ಪ

ಸೀರೆ ಕುಪ್ಪಸವನುಟ್ಟು
ಸಿಂಗರದಿ ತೋರ ಕಂಕಣವನಿಟ್ಟು ಅಯ್ಯ
ಮೂರಳೆಯ ಕಟ್ಟಾಣಿ ಕಟ್ಟಿಯೇ
ಮೋರೆ ಮುರಕಿಸುತಿಹುದು ಅಯ್ಯ 1

ಚಳ್ಳತುಂಬುಗಳಿಂದ
ಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯ
ಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆ
ಹಲ್ಲು ಕಡಿಯುತಲಿಹುದು ಅಯ್ಯ 2

ಓಲೆ ಮಾಡಿಸು ಎಂಬುದು
ವರಹಕೆ ಬಾಳುವೆ ನೋಡಿರಿ ಎಂಬುದಯ್ಯ
ಹೇಳುವುದು ಕಿವಿಯೊಳಗೆ ಲೋಭ
ಕಾಲು ಕೈ ತಿರುಹುವುದು ಅಯ್ಯ 3

ಕರೆಕರೆಯ ಮಾಡುತಿಹುದು ತಾಯಿಯ
ಹೊರಡಿಸು ಮನೆಯಿಂದಲೆಂಬುದಯ್ಯ
ಹರನ ಚಿಂತೆಗೆ ಹಾನಿಯು ಇದರಿಂದ
ನರಕ ಬಹಳವ ತಿರುಗುವೆ ಅಯ್ಯ 4

ನಾರಿಯೆನಿಸಿಹುದೆ ಮೃತ್ಯು
ಇದನೀಗ ದೂರ ಮಾಡಿದನಾದರೆ ಅಯ್ಯ
ಸೇರುವುದು ಸರ್ವಮುಕ್ತಿ
ಚಿದಾನಂದನಿರೆ ತಾನೆಯಹುದು ಅಯ್ಯ 5

183
ಮುಕ್ತಿ ಬೇರಿಲ್ಲಯ್ಯ ಸಾಯುಜ್ಯಮುಕ್ತಿ ಬೇರಿಲ್ಲವೋ

ಮುಕ್ತಿ ಬೇರಿಲ್ಲಯ್ಯ ಸಾಯುಜ್ಯಮುಕ್ತಿ ಬೇರಿಲ್ಲವೋ
ಮುಕ್ತಿ ಬೇರಿಲ್ಲ ಭಕ್ತಾ ಭಕ್ತ ವಿರಕ್ತರ
ಪಾದ ನೆನೆಹು ಎಂಬುದು ನಿಜ ಪ

ನಿತ್ಯನಿರ್ಗುಣಧಾರನ ನಿರಾಲಂಬ
ಪ್ರತ್ಯಯ ಮಂಗಳಕಾರನ
ಸತ್ಯಸಂಪದನಿಂದ ಸುಗುಣಾದಿವರ್ದಿಪ
ನಿತ್ಯಾನಂದರ ನೆನಹು ಎಂಬುದು ನಿಜ 1

ಆಶಾಪಾಶಗಳಳಿದುದು ಅಹಂ ಎಂಬ
ವಾಸನೆಯ ಕಳೆದು ದೋಷರಹಿತವಾದ
ದಾಸರ ದಾಸನೆಂದೆನಿಪ ಸುದಾಸನೆಂಬುವನೆ ನಿಜ 2

ತರಣಿ ಕಿರಣಾಬ್ಧಿಯ ತಾಳಿರುವಂಥ
ಗುರು ಚಿದಾನಂದ ಮೂರ್ತಿಯ
ಸಿರಿಚರಣವ ಕಂಡು ಶೀಘ್ರದಿ ಪೂಜಿಸೆ
ಗುರುತಾನದನೆ ಗುಣನೆನೆವುದೆ ನಿಜ 3

184
ಮುಟ್ಟು ಚಟ್ಟೆಂದು ನಗುವಯ್ಯ

ಮುಟ್ಟು ಚಟ್ಟೆಂದು ನಗುವಯ್ಯ
ನಿನ್ನ ತಿಳಿಯಯ್ಯ
ಮುಟ್ಟು ಚಟ್ಟೆಂಬುದು ನಗುವಯ್ಯ
ಮುಟ್ಟಿದು ಅದುದು ನಿನ್ನಿಂದಲೆ
ಮುಟ್ಟಿಗೆ ಸಾಕ್ಷಿಯು ನೀ ಪರವಸ್ತು ಪ

ತಿಂಗಳು ತಿಂಗಳು ರಕ್ತಕಲಕು ಘಟ್ಟಾಗಿ ಬಲಿಶು
ಇಂಗಾ ಇಂಗಡದ ವಯವ ಜಿಗಿತು
ಅಂಗಾಯಿತು ತೆರದ
ಅಂಗವ ಮುಟ್ಟಿರಿ ಮುಟ್ಟಿರಿ ಎಂದು
ಮಂಗನ ತೆರದಲಿ ಕುಣಿವುದು ಮುಟ್ಟು 1

ಮೃಗಜಲದಂತೆ ಮಾಯೆ ಮುಟ್ಟು
ಅದುದು ಯಥೇಷ್ಟ
ಬಗೆಬಗೆ ರೂಪಳವಟ್ಟು
ತೋರಿದವರದುರಿಟ್ಟು
ನಗಸಾಗರನದಿ ನರಸುರ ಕ್ರಿಮಿಪಶು
ನಗಧರ ಹರವಿಧಿ ಲೋಕವೆ ಮುಟ್ಟು 2

ಮುಟ್ಟು ಭಟ್ಟರು ಹೇಳುವಂತಿಲ್ಲ
ಬೆಳಗಿದುದು ಎಲ್ಲ
ಅಷ್ಟಾಗಿ ಕಳೆಥಳಿಥಳಿಪುದೆಲ್ಲ
ತನ್ನರಿದವ ಬಲ್ಲ
ಶಿಷ್ಟ ಚಿದಾನಂದ ನೀನೆಂದು ಕಾಣಲು
ಮುಟ್ಟಿಗೆ ಜಾಗವಿಲ್ಲ ನೀಚರ ವಸ್ತು ನಿಜ ಬ್ರಹ್ಮ 3

185
ಮುತ್ತು ಬಂದಿದೆ ಕೊಳ್ಳಿರಣ್ಣಾ ಅದಕೆ

ಮುತ್ತು ಬಂದಿದೆ ಕೊಳ್ಳಿರಣ್ಣಾ ಅದಕೆ
ವೆಚ್ಚವೇನಿಲ್ಲ ಬೆಲೆಯಾಗದಣ್ಣಾ ಪ

ಥಳಥಳ ಹೊಳೋಯುತದಣ್ಣ
ಅದು ಬಲ್ಲ ಜಾಣಂಗಿನ್ನು ಬಯಲೊಳಗಣ್ಣ
ಕೂದಲ ಎಳೆಗಿಂತ ಸಣ್ಣ ಅದು
ಬಣ್ಣ ಬಣ್ಣದ ಬ್ರಹ್ಮದ ಲೋಕಣ್ಣ 1

ತನು ಎಂಬ ತಕ್ಕಡಿ ಪಿಡಿದು
ಆದಿ ಶರಣರು ತೂಗ್ಯಾರು ವಾಸನೆ ಕಳೆದು
ಮನವೆಂಬ ಮಣಿದಾರ ಪಿಡಿದು
ಲೋಕ ಹೋಗದೆ ತೂಗ್ಯಾರು ಯೋಗ ಮಾಡಿ ಅವರು 2

ಮುತ್ತಿನ ಮಹಿಮೆ ಮುಂದದ
ಇದರ ಗೊತ್ತು ತಿಳಿಯದೆ ಮಂದಿ ಸತ್ತುಹೋಗೇದ
ಸುತ್ತಮುತ್ತಲ ಸುಳಿವುತಲದು
ಚಿದಾನಂದನ ಚಿತ್ತದೊಳಗದ 3

186
ಮುದಕಿಯ ಕಂಡರೆ ಸೇರದೆನಗೆ

ಮುದಕಿಯ ಕಂಡರೆ ಸೇರದೆನಗೆ ಮುದಕಿಯ ಕಂಡರೆ ಸೇರದೋ
ಸದಮಲಪರತತ್ವದ ಗುರಿಯ ತೋರದಂತೆ ಮಾಡಿದ ಪ

ಒಬ್ಬನನೊಯ್ದಿಬ್ಬರ ಮಾಡಿ ಓಡಿಶ್ಯಾಡುವ ಮುದಕಿ
ಹಚ್ಚಿಕೊಂಡು ಜಗವೆನಲ್ಲ ಹರಿದು ಆಡುವ ಪಾಡುವ ಮುದುಕಿ 1

ನಿಲ್ಲದೆ ಸ್ವರ್ಗಕೆ ನರಕಕೆ ಮನುಜರನೆಲ್ಲರ ತಿರುಗಿಪ ಮುದುಕಿ
ಎಳ್ಳಷ್ಟೂ ಎಚ್ಚರ ಹುಟ್ಟಿಸದ ಎಡವಟ್ಟಾದ ಮುದುಕಿ 2

ಇಂದ್ರಜಾಲವ ಖರೆಯಂದದಲಿ ಎಸಗಿಕೊಂಡಿಹ ಮುದುಕಿ
ಬಂಧಿಸಿಯಿಹಳು ಊನವಿಲ್ಲದಲೆ ಬಾಜಿಗಾರ ಮುದುಕಿ 3

ಏನೇನಿಲ್ಲವು ತನಗದು ರೂಪವು ಎಲ್ಲವು ಆದ ಮುದುಕಿ
ತಾನಾರೆಂದು ತನ್ನನ್ನು ತಿಳಿಯೆ ತನ್ನೊಳಗಡಗಿಹ ಮುದುಕಿ 4

ಮುನ್ನ ಅನಾದಿಯು ಎನಿಸಿಕೊಂಡರು ಮೂಲಮಾಯೆ ತಾ ಮುದುಕಿ
ತನ್ಮಾತ್ರಾದ ಚಿದಾನಂದ ಬ್ರಹ್ಮದಿ ತೋರುತ ಅಡಗುವ ಮುದಕಿ 5

187
ಮುಳುಗಿದನು ಯೋಗಿ ಮುಳುಗಿದನು

ಮುಳುಗಿದನು ಯೋಗಿ ಮುಳುಗಿದನು
ಒಳ್ಳೆ ಬಲಹುಳ್ಳ ನಾದ ಸಮುದ್ರ ಮಧ್ಯದಿ ಯೋಗಿ ಪ

ಸತಿ ಮೂವರ ಸಮನಿಸಲಾರದೆ
ಪಿತರೀರ್ವರ ಕರಕರೆಯನು
ನೀಗಿಸುತರೈವರೆನಿಪರು ಮಾತು ಕೇಳದಿರೆ
ಮತಿಯೇನು ಹೇಳಲಿ ಎಲ್ಲ ಸಂಗವ ಬಿಟ್ಟು 1

ಜೇಷ್ಟರಾರುವರ ಕಾಟವ ತಾಳದೆ
ದುಷ್ಟನಾದಿನಿಯ ನಾಲ್ವರ ತೊರೆದು
ಅಷ್ಟಮಾತುಳರಪ್ರಯೋಜಕವೆಂದು
ಕಷ್ಟರಿವರು ಎಂದು ಮನವ ಭೀತಿಯ ಬಿಟ್ಟು 2

ಇಂತು ಎಲ್ಲವ ಬಿಟ್ಟು ಚಿಂತಕ ತಾನಾಗಿ
ಭ್ರಾಂತು ಎಳ್ಳಿನಿತು ಒಬ್ಬರೊಳಿಲ್ಲದೆ
ಚಿಂತಕನು ಚಿದಾನಂದ ಮೂರುತಿಯನು
ಅಂತು ಬಲಿದು ಎನ್ನ ದೇಹ ಮರೆವಗಿಳಿ 3

188
ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾ

ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾ
ಮರುಳಾಗುತಿರುತಿಹನವ ಹುಚ್ಚಾ ಪ

ಯೋನಿಯ ಮುಖ ನೋಡೆ ಎಲ್ಲಕೆ ಹೇಸಿಕೆ
ತಾನೆ ರಕ್ತವ ನಿತ್ಯತವಿಸುತಿಹುದು
ಏನೇನು ಶುಚಿಯಲ್ಲ ಇಂತು ವಿವೇಕವಿಲ್ಲ
ಏನು ಕಾರಣ ಮೋಹ ಪಡುವರೋ 1

ನರಕಾಣುವ ಪೂರಿತವದು ಭಗವದು
ಭರದಿ ದುರ್ಗಂಧ ವಾಸನೆ ಬಹುದು
ಸರಸಿಚೋದ್ಭವನಾಗಲಿ ಶಿವನೆ ತಾನಾದರಾಗಲಿ
ಮರುಳೆ ಪುನಾ ಜನ್ಮಕೆ ತಾರದೆ ಬಿಡುವುದೇ 2

ಚಕ್ರಿ ಖಂಡವು ಆಸ್ತಿ ಚದುರಸ್ತಿರೊಪಾಗಿ
ಕರ್ಮವೆಂಬುದಕೆ ಸ್ಥಾನವಾಗಿಹುದು
ನಿರ್ಮಳ ಚಿದಾನಂದ ವಸ್ತುವ ತಿಳಿಗೊಡದ
ಧರ್ಮದಾ ಪಥದಲ್ಲಿ ಕೆಡಹುತಿಹುದು 3

189
ಯಮದೂತರು ನರನನು ಎಳೆದೊಯ್ದುದನು

ಯಮದೂತರು ನರನನು ಎಳೆದೊಯ್ದುದನು
ಎಲ್ಲರಿಗೆ ಹೇಳುವೆನು
ಕುಮತಿಯಲಿ ಸದ್ಗುರು ಚರಣವ ಹೊಂದದ
ಕೇಡಿಗಾಗುವ ಫಲಗಳನು ಪ

ಮುರಿದ ಮೀಸೆಯಲಿ ಮಸಿದೇಹದಲಿ
ಉರಿಹೊಗೆ ಹೊರಡುವ ಉಸುರಿನಲಿ
ಕರುಳು ಮಾಲೆಯಲಿ ಕೋರೆದಾಡೆಯಲಿ
ಜರೆಮೈ ಹಸಿದೊಗಲುಡುಗೆಯಲಿ 1

ಝಡಿವ ಖಡುಗದಲಿ ಹೂಂಕಾರದಲಿ
ಕಡಿದವಡೆಯಲಿ ಹುರಿಮೀಸೆಯಲಿ
ಬಿಡಿಗೂದಲಲಿ ಕರದ ಪಾಶದಲಿ
ಸಿಡಿಲ ತೆರೆದ ಬಿಡುಗಣ್ಣಿನಲಿ 2

ಮಿಡುಕುತ ಸತಿಸುತರನು ಆಪ್ತರನು
ಹಿಡಿದೊಪ್ಪಿಸುತಿಹ ವೇಳೆಯಲಿ
ಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲು
ಬಿಡುವನು ಪ್ರಾಣವ ಕಾಣುತಲಿ 3

ಯಾತನೆ ದೇಹವ ನಿರ್ಮಿಸಿ ಅದರೊಳು
ಪಾತಕ ಮನುಜನ ಹೊಗಿಸುತಲಿ
ಘಾತಿಸುವು ನಾನಾಬಗೆ ಕೊಲೆಯಲಿ
ಘನನುಚ್ಚು ಕಲ್ಲೊಳಗೆ ಎಳೆಯುತಲಿ 4

ಈ ತೆರವೈ ಈ ಧರ್ಮ ಶಾಸ್ತ್ರವ
ನೀತಿಯ ತೆರದಲಿ ಮಾಡುತಲಿ
ಪಾತಕವನು ಬಹುಪರಿ ಶಿಕ್ಷಿಪರು
ದಾತ ಚಿದಾನಂದನಾಜ್ಞೆಯಲಿ 5

190
ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆ

ಯೋಗಕ್ಕೆ ಸ್ಥಿತಿ ನಾಲ್ಕೇ ಒಡವೆ
ಯೋಗಕ್ಕೆ ಈ ನಾಲ್ಕು ಇಲ್ಲದಿದ್ದರೆ ಅದು ಅಡವಿ ಪ

ಸುಸುಖ ಬುದ್ಧಿಯ ತಾಳು ಎಲ್ಲ ವ್ಯವಹಾರ ತಾಳ್ದು
ಹಸಿವೆ ಎಂಬುದು ನೀಗಿ ಮೌನಕ್ಕೆ ಮನಸಾಗಿ
ಅಸನವಿಕ್ಕಿದರುಂಡು ಸಾತ್ವಿಕವ ಕೈಗೊಂಡು
ಉಸುರೆ ಪ್ರಥಮ ಸ್ಥಿತಿ ಇದುವೆ ಪಶುಸಿದ್ಧಿ 1

ಕರ್ಮಂಗಳನ ಸುಟ್ಟು ವಿಧಿ ನಿಷೇಧಗಳ ಬಿಟ್ಟು
ನಿರ್ಮಳತ್ವವ ತಾಳಿ ಪಾಪ ಪುಣ್ಯವ ದೂಡಿ
ದುರ್ಮತಿ ಸನ್ನತಿಗಳಿಲ್ಲ ದೋಷ ಭೂಷಣವಿಲ್ಲ
ಧರ್ಮವೆರಡನೆಯ ಸ್ಥಿತಿ ಇದುವೆ ಶಿಶುಸ್ಥಿತಿ 2

ಅಂತರವೆ ಸಹ್ಯವಾಗಿ ಬ್ರಾಂತ್ಯ ಅಸಹ್ಯವಾಗಿ
ನಿಂತು ಕಣ್ಣು ಮುಚ್ಚಿ ಕುಳಿತು ಮೈಯ ಮರೆಯುತ
ಸಂತತಾನಂದದ ಬೆಳಗ ತೋರುತಿರೆ ನಿತ್ಯಬೆಳಗು
ಇಂತಿದು ಮೂರನೆಯ ಸ್ಥಿತಿ ಇದುವೆ ತೂಕಡಿಸುವ ಸ್ಥಿತಿ 3

ಧ್ಯಾನವೆಂಬುದ ನೀಗಿ ಧಾರಣೆಯದು ಹೋಗಿ
ಹೀನ ಮೈಲಿಗೆ ತೊಳೆದು ಆತ್ಮ ಜ್ಯೋತಿಯು ಹೊಳೆದು
ತಾನೆ ಮಲಗಿಹನು ರಾತ್ರೆ ದಿವಗಳ ಕಾಣ
ಇದುವೆ ನಾಲ್ಕನೆಯ ಸ್ಥಿತಿ ಇದುವೆ ನಿದ್ರಾಸ್ಥಿತಿಯು 4

ಒಂದರಿಂದ ಒಂದರಂತೆ ಇವನು ಸಾಧಿಸಬೇಕು
ಒಂದಲ್ಲದಿರೆ ನಿರ್ವಿಕಲ್ಪ ಸಮಾಧಿ ತಾನಿಲ್ಲ
ಸಂದುಗೊಂದಿನ ಹಾದಿಯಲ್ಲ ವಿಹಂಗ ಪಥ
ಬಂಧ ಹರನು ಚಿದಾನಂದನೆ ತಾನಂಹನು 5

191
ಯೋಗಿ ಬಂದ ಕಣೇ ಚಿದಾನಂದ ಯೋಗಿ ಬಂದ ಕಣೇ

ಯೋಗಿ ಬಂದ ಕಣೇ ಚಿದಾನಂದ ಯೋಗಿ ಬಂದ ಕಣೇ
ಪೋಗಿ ಮಾಗಿಯು ವಸಂತ ಬಂದಂತೆ
ತಾನಾಗಿ ಭಕುತ ಜನ ಹೃದಯದಾಗರಕೆ ಪ

ಶಾಂತಕುಂಡಲಗಳನು ತೂಗುತ
ಸ್ವಾಂತನಿರ್ಮಳ ಕೌಪವ
ಸಂತಸದಲಿ ಬಗಿದಳವಡಿಸಿಯ ವಿ-
ಶ್ರಾಂತ ಸುಭಸಿತವ ಪೂಸಿ ರಂಜಿಸುತ್ತಿಪ್ಪ 1

ನಿಷ್ಕಲ ಹೃದಯದಲಿ ಒಲೆಯುತಿಪ್ಪ
ಪುಷ್ಕಲ ಜಪಮಾಲೆಯ ಮುಸುಕಿ ನಿಂದಲಿ
ಮಹಾಪ್ರಳಯಂಗಳೆಣಿಸುತ್ತ
ಪುಷ್ಕರ ಶತಕೋಟಿ ತೇಜನಾಚಿಸುತಿಪ್ಪ 2

ಇಹಪರ ಪಾದುಕೆ ಮಾಡಿ ಮೆಟ್ಟುತ
ಅಹಿಧರ ಬೆಳಗುತಲಿ ವಿಹಿತದಿಂದಲಿ
ಬ್ರಹ್ಮಗಾನವ ಮಾಡಲು ವಿಷ್ಣು
ವಹಿಸೆ ಅಮೃತ ಕಳಶದ ಕಳೆಯಸೆಯಲು 3

ವಿವೇಕ ಧೈರ್ಯರೆಂಬ ಚಡಿಕಾರರು
ತಾನೆ ಮುಂಗಡೆಯಲಿರ್ದು
ಸಾವಧಾನದಿ ಪಥವಬಿಡಿಸುತಿರಲು ಸರ್ವ
ದೇವೆಂದು ಪೊಗಳಿದ ವಿಜಯ ಭಟ್ಟಾದೀಶ
ಇಂತು ವೈಭವದಿಂದ ಚಿದಾನಂದ
ನಿಂತ ನಿಜಸ್ಥಿರವಾ ಸಂತಸದಲ್ಲಿ ಕಂಡು ಸರ್ವವ ಮರೆತು ನಾ
ನಂತು ಇಂತೆನಲೇನ ಆತ ತಾನಾಗಿರ್ದ 4

192
ಯೋಗಿ ಬಿಟ್ಟರೆ ಬಿಡದು ನಾದವು

ಯೋಗಿ ಬಿಟ್ಟರೆ ಬಿಡದು ನಾದವು
ಯೋಗಿ ಬಿಟ್ಟರೆ ಬಿಡದು ನಾದವು
ಕೂಗುತಿಹುದು ಸರ್ವಕಾಲದಿ
ಜಾಗಟೆ ಕೊಳಲು, ತಮ್ಮಟೆ
ಚಂಗು ಕೊಂಬು ತಾಳರವಗಳಿಂದ ಪ

ಮಲಗೆ ಕುಳಿತರೆ ಕೂಗುತಿಹುದು
ನಿಲಲು ನಡೆಯೆ ಕೂಗುತಿಹುದು
ಒಲಿದು ಮಾತುಗಳಿರಲಿಕೆ
ಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದ
ನಿಲದೆ ಮುರಿದು ಮದವ
ಸುಲಭ ಸುಖವ ಸುರಿಸುತ 1

ಕಣ್ಣು ಮುಚ್ಚಲು ಕೂಗುತಿಹುದು
ಕಣ್ಣು ತೆರೆಯೆ ಕೂಗುತಿಹುದು
ಉಣ್ಣುತಲಿ ತಾನು ಇರಲಿಕೆ
ಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದ
ಮಣ್ಣಗೂಡಿಸಿ ಶೋಕ ಮೋಹವ
ಪುಣ್ಯರವವ ಬೀರುತ 2

ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದು
ಬಮ್ಮನೊಮ್ಮೆ ಮರೆತು ಇರಲಿಕೆ
ಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದ
ಹಮ್ಮುವಾಸನ ಕ್ಷಯವಮಾಡಿ
ನಿರ್ಮಲತ್ವವ ತೋರುತ 3

ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿ
ಅರಗಳಿಗೆ ಕ್ಷಣ ಮೂಹೂರ್ತದಿ
ಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದ
ತರಿದು ಜನನ ಮರಣವನ್ನು ತೇಜ ಬಿಂದು ಸುರಿವುತ 4

ಇಂತು ನಿತ್ಯ ಕಾಲದಿ ಬಿಡದೆ
ಸಂತತದಲಿ ಹಾಡಿಪಾಡಿ
ನಿಂತು ಚಾಕರಿಯನೆ ಮಾಡುತ
ಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನು
ಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ 5

193
ಯೋಗಿಗದ್ಯಾತಕೆ ತಳ್ಳಿ ಸಂಸಾರಬಳ್ಳಿ

ಯೋಗಿಗದ್ಯಾತಕೆ ತಳ್ಳಿ ಸಂಸಾರಬಳ್ಳಿ
ಯೋಗಿಗದ್ಯಾತಕೆ ತಳ್ಳಿ ಯೋಗಿಸು
ನಿಶ್ಚಲಯೋಗಿ ಸುನಿರ್ಮಲ
ಯೋಗಿ ಸುಖೋನ್ನತಯೋಗಿ ಚಿದಾನಂದ ಪ

ನಿದ್ರೆಯಿಂದಲಿ ಮೈಯ ಮರೆತು
ನಿರ್ಗುಣದೊಳು ಬೆರೆತು
ಶುದ್ಧಮಂಡಲದಂತೆ ಪೊಳೆದು
ಸುಖದುಃಖಗಳನುಳಿದು
ಶುದ್ಧವಿಶುದ್ಧ ಚಿನ್ಮಾತ್ರವೇ ಎಂಬ
ಬದ್ಧಹರನಾಗಿ ಭಾಗ್ಯೋದಯನಾದ 1

ಆನಂದ ಮೂರ್ಛಿತನಾಗಿ
ಅಹುದಹುದಹುದಾಗಿ
ಧ್ಯಾನಮೌನಗಳವು ಪೋಗಿ
ಧಾರಣೆಯನು ನೀಗಿ
ಜ್ಞಾನಂಜ್ಞೇಯಂ ಜ್ಞಾತೃವು ತೊರದೆ
ಸ್ವಾನಂದಾಮೃತ ಶರಧಿಯೊಳ್ ಮುಳುಗಿದ 2

ಏನೇನರಿಯನು ತುರಿಯ
ಎರಡೆಂಬುದನರಿಯ
ಮೌನಮೂರುತಿ ಅದನು ಅರಿಯ
ತಾನೆ ತಾನೆ ತಾನಾಗಿರುತಲಿ
ತಾನೆ ಚಿದಾನಂದ ಗುರು ತಾನೆ ಆದ 3

194
ಯೋಗಿಗೆ ಸೃಷ್ಟಿ ಬರುವುದೆಂತು ವಿದ್ಯದಲಲ್ಲದೆ

ಯೋಗಿಗೆ ಸೃಷ್ಟಿ ಬರುವುದೆಂತು ವಿದ್ಯದಲಲ್ಲದೆ
ಯೋಗ ವಿದ್ಯೆದಲ್ಲಿ ಎಂತು ಅನ್ನಬಹುದೆ ಇಂತು
ಯೋಗಿಯೆ ಈಶ್ವರ ತಾನೀಗೇಕೆ
ಯೋಗಿಯು ಈಶ್ವರ ಬೇರೆ ಎನೆ ನರಕವು ಪ

ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕು
ಆಲಿಯು ಮುಚ್ಚದೆ ಆಲಿಯು ರೆಪ್ಪೆಯು ಬಡಿಯದಲಿರಬೇಕು 1

ಅನಿಮಿಷ ದೃಷ್ಟಿಯಂದಲಿ ಬ್ರಹ್ಮವ ಆಲಿಸುತಿರಬೇಕು
ಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು 2

ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕು
ದೃಷ್ಟಿಯು ತಾನೆಡಬಲಕೆ ನಲಿಯದೆ ದೃಷ್ಟಿಯು ಇರಬೇಕು 3

ಕುಳಿತಾ ಸ್ಥಳವು ತಪ್ಪಲು ಮೆತ್ತೆಯು ಕುಳಿತುಕೊಳ್ಳಬೇಕು
ಥಳಥಳ ಹೊಳೆಯುತ ಬೆಳಗದ ಪಸರಿಸಿ ಗೂಢನಿರಲುಬೇಕು 4

ಉದಯಾಸ್ತಮಾನವು ದಿವರಾತ್ರಿಯುಡಗಿ ಇರಬೇಕು
ಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5

195
ಯೋಗಿಯ ಲಕ್ಷಣವಿದೆ

ಯೋಗಿಯ ಲಕ್ಷಣವಿದೆ
ಯೋಗಿಯ ಲಕ್ಷಣ ತಿಳಿಯದಡೆ ಇವನಿಂತು ಬಲ್ಲ ಪ

ಮೌನವೆಂಬುದು ಬಹಳ ಏನೇನೆಂದರು ಕೇಳ
ಕಾನನವೊಂದೇ ಊರು ಒಂದೇ ತಾನೆಂಬುದು ಢಾಳ
ಹೀನವಾದವ ಕೇಳ ತಾನ ಈ ಪರಿಯಲಿಹ ಯೋಗಿ 1

ಮಾತಾಡೆ ಮಾತಿಲ್ಲ ಯಾತರ ಗೊಡವೆಯಿಲ್ಲ
ಭೂತ ಹೊಡೆದಂತೆ ಸುಮ್ಮನಿಹನು
ಭೀತಿಯ ತಾನಿಲ್ಲ ಈ ತೆರದಲಿ ತಾನಿರುತಿಹ ಯೋಗಿ 2

ಎದ್ದರೆ ಎದ್ದಿಹ ಬಿದ್ದರೆ ಬಿದ್ದಿಹ
ನಿದ್ದೆಯು ಯಾವಾಗಲು ಕಟ್ಟಿಹುದು
ಬುದ್ಧಿಯ ಮಾತಿಲ್ಲ ಬುದ್ಧಿಯವರ್ಜಿಸಿಹ
ಇದ್ದು ಈ ತೆರದಿ ತಾನಿದ್ದು ಇರುತಿಹ ಯೋಗಿ 3

ಶರೀರದ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲ
ಪೋರರ ಕಂಡರೆ ಪೋರರಂತೆ
ಮಾರನ ಬಾಧೆಯಿಲ್ಲ ಮಹಾಕೋಪಗಳಿಲ್ಲ
ಧೀರತನದಲಿಂತು ಇರುತಿಹ ಯೋಗಿ 4

ಹೊರಗಿಂತು ತೋರಿಹನು ಹೃದಯದ ಪರಿಯನ್ನು
ಅರಿವೆನೆಂದರೆ ಅರಿಗಳವಲ್ಲವೋ
ಇರುಳು ಹಗಲು ಚಿದಾನಂದ ಮೂರುತಿಯನು
ಸ್ಥಿರವೀಗ ತಾನಂದು ನಿತ್ಯ ಬೆರತಿಹನು 5

196
ಯೋಗಿಯಹುದಹುದೋ ಚಿದಾನಂದ

ಯೋಗಿಯಹುದಹುದೋ ಚಿದಾನಂದ
ಯೋಗಿಯಹುದುಹುದೋ ದಯಾ
ಸಾಗರ ಕಾರಣ್ಯದಾಗರ ನಿತ್ಯಾತ್ಮ ಪ

ಅಷ್ಟಮದಂಗಳನ್ನು ಸುಟ್ಟು ಭಸ್ಮವ ಮಾಡಿಹ
ಅಷ್ಟ ಪ್ರಕೃತಿಯನ್ನು ಕಾರಿ ಮಹ
ದಷ್ಟ ಯೋಗವ ಸಾಧಿಸಿ ಶ್ರವಣವನ್ನು
ಕೊಟ್ಟುನಾದವ ಭೇದಿಸಿ ಆತ್ಮದಲ್ಲಿ
ದೃಷ್ಟಿ ಎಂಬುದ ನಿರಿಸಿ ಸರ್ವಕಾಲ
ಶಿಷ್ಟರೆಂದೆನಿಪ ಉತ್ಕೃಷ್ಟಮಾರ್ಗದ ವಾಸಿ 1

ಆರು ಅರಿಯ ಮೀರಿದರು ಭ್ರಮೆಯ ವಿಕಾರವ ತರಿದು
ತರಿದು ಹೀರಿ ಆರು ಚಕ್ರದ ಮೇಲೆ
ಏರಿ ಸಹಸ್ರಾರ ಸ್ಥಳದಿ ನಿಂದು ಜ್ಯೋತಿರ್ಮಯ
ಸಾರವ ಸೇವಿಸುತಲಂದು ನಿತ್ಯಾ ನಿತ್ಯ
ಘೋರ ತಪದಿ ಯೋಗಿ ಶೂರ ಭಕ್ತರ ಬಂಧು 2

ಸಪ್ತವ್ಯಸನ ರೂಪ ಕೆಡಿಸಿ ಬಳಿಕ ದುಷ್ಟ
ಸಪ್ತಾವರಣವನ್ನು ತುಳಿದು ಪಾದದಲೊದ್ದು
ಗುಪ್ತವಾಗಿಹ ಪ್ರಭೆಯ ಶೋಧಿಸಿ ಘನ
ತೃಪ್ತ ಅಮೃತ ಸುಧೆಯ ಸುರಿದು ಮೇರು
ಕಾಂಚನ ಗಿರಿಯ ಸೇರಿಯೆ ಜ್ಯೋತಿ
ವ್ಯಾಪಕ ಭಾಸ್ಕರ ದೀಪ್ಯಮಾನ ಪ್ರಭಾ 3

ಕರ್ಮ ಪಾಪವು ಪುಣ್ಯ ಹಮ್ಮು ವಾಸನ ಕ್ಷಯ
ದುರ್ಮತಿ ದುರ್ಗುಣವೆಲ್ಲ ದೊಡ್ಡ
ಬ್ರಹ್ಮಾನಂದದ ಲಕ್ಷಣ ತಿಳಿದಾ ನಿತ್ಯಾ
ನಿರ್ಮಳ ನಿರಾವರಣ ರೂಪಿತ ಆತ್ಮ
ಸ್ವರ್ಮಣಿ ಸುಗುಣ ನಿರ್ಗುಣ ಪರ
ಬ್ರಹ್ಮವೇ ತಾನಾಗಿ ಬೆಳಗುವ ಯತಿ ಜಾಣ 4

ಸಾಧನ ನಾಲ್ಕನು ಸಾಧಿಸಿ
ನಾದವ ಭೇದಿಸಿ ಜ್ಯೋತಿ ಸಂಪಾದಿಸಿ ಆತ್ಮನ
ಭೇದವೆಂಬುದನರಿತ ಬಳಿಕ ಘನ
ಸಾಧನ ಗುಣ ಚರಿತಯೋಗಿ ತಾನೆನಿಸಿ ಕೈವಿಡಿಯೆನ್ನ
ಬೋಧ ಸದ್ಗುರು ಚಿದಾನಂದ ಅವಧೂತ 5

197
ರಕ್ಷ ಚಿದಾನಂದ ರಕ್ಷಚಿದಾನಂದ ರಕ್ಷಮಾಂ ರಕ್ಷ

ರಕ್ಷ ಚಿದಾನಂದ ರಕ್ಷಚಿದಾನಂದ ರಕ್ಷಮಾಂ ರಕ್ಷ ಪ

ಪಟುತರ ಕಾಂತಿ ವಿಸ್ಪುಟಿತ ಮಧುರ ಪುಂಜ
ಘಟವಿಧಿಪೂರ ಸದ್ಘಟನ ಚಿದಾನಂದ 1

ಸಾರ ನಿಗಮತತಿ ದೂರ ಸುಮನ ಮನೋ-
ಹರ ನಿಖಿಳ ಜಗೋತ್ತಾರ ಚಿದಾನಂದ 2

ಬಿಸಜರಿಪು ನೇತ್ರ ಸುಭಸಿತ ಮಂಗಳಾಕಾರ
ವಿಷಧರೋದ್ಧಾರ ದಿಗ್ವಸನ ಚಿದಾನಂದ 3

ಈಶ ಭೂತೇಶ ಮಹೇಶ ಗಿರೀಶ
ಉಮೇಶ ನಟೇಶ ಸರ್ವೇಶ ಚಿದಾನಂದ 4

ಗುರು ಪ್ರಣವಾನಂದ ಗುರು ತ್ರಿಯಕ್ಷರ
ಗುರು ಚಿದಾನಂದ ಗುರುವೇ ಚಿದಾನಂದ 5

198
ಲಕ್ಷ್ಯವ ಹಿಡಿದೆ ಅಂದವಳ

ಲಕ್ಷ್ಯವ ಹಿಡಿದೆ ಅಂದವಳ
ಲಕ್ಷ್ಯನಿಂತೆ ನೀನೇ ಬ್ರಹ್ಮವಾಗಿ ಹೊಳೆಯೋ ಪ

ಸುಣ್ಣದ ಬಟ್ಟಿಸುಟ್ಟಂತೆ
ಕೆಂಗಣ್ಣಲಿ ತಂಬಾಕವ ನೊಣ ನೋಡಿದಂತೆ
ನಿನ್ನೊಳಾಪರಿ ಲಕ್ಷ್ಯನಿಂತೇ ತೇಜ
ತಾನಾಗಿಯೇ ಬೆಳಗೋದು ಚಿಕ್ಕೆಯಂತೆ 1

ಒಡವೆಯ ಅಮರಿಸಿದಂತೆ
ಕಾಲಡಿ ಮುಳ್ಳ ಚಿಮ್ಮಟಿಗೆಯು ಹಿಡಿದಂತೆ
ದೃಢದಲೀ ಪರಿ ಲಕ್ಷ್ಯನಿಂತೇ
ಕಿಡಿಕಿಡಿಯ ಕೆಂಕರಿಗೆದರಿ ಹರಡುವ ಕಾಂತಿಯಂತೆ 2

ಕಳೆಗಳು ಬಹು ತೇಜ ತೋರಿ ನೋಡೆ
ಕಳೆಯಡಗಿದ ಶುದ್ಧಮಂಡಲದ ಪರಿ
ಥಳಥಳ ರವಿ ಕೋಟಿ ಮೀರಿ
ಬಲು ಸುಲಭ ಚಿದಾನಂದ ಕಾಣುವುದೀ ಪರಿ 3

199
ವಿಷಯದೊಳಿರೆ ಬ್ರಹ್ಮಜ್ಞಾನ

ವಿಷಯದೊಳಿರೆ ಬ್ರಹ್ಮಜ್ಞಾನ
ವಿಷಯ ಪಾಪ ಹತ್ತಿತೇನ
ವಿಷಯದೊಳಿರುತಾತ್ಮನಾಗಿಯೆ ಎಚ್ಚರಿಕೆ
ಭಸ್ಮವಹುದು ದುರ್ಗುಣ ಪ

ಮುತ್ತೈದೆ ಇರುತಿರಲ್ಕೆ ಆಕೆಗೆ ಕೆಲಸವು ಬಹಳವಾಗಿ
ಮುತ್ತೈದೆಯು ತಾನು ಎಂಬುದು ಮರೆತರೆ
ಮತ್ತೆ ವಿಧವೆಯಾದುದೆಲ್ಲಿ 1

ಒತ್ತೊತ್ತು ಮನೆ ಇರುತಿರಲು
ಸ್ವಪ್ನಹತ್ತಿರೆ ಕೆಟ್ಟುಹೋಗಿರಲು
ಮತ್ತುತ್ತಮನು ಸ್ವಪ್ನದಲಿ ಕೆಟ್ಟು ಎಚ್ಚರವಾಗೆ
ಉತ್ತುಮನು ಕೆಟ್ಟಿದೇನು 2

ಶರೀರ ಧರ್ಮವು ಜ್ಞಾನಿಗೆ ಹೊಳೆಯೆ
ಕಾಮ ಹೊರಳಿ ಕ್ರೋಧ ಲೋಭ ಸುಳಿಯೆ
ವರ ಚಿದಾನಂದ ಗುರುತಾನಾಗೆ ಎಚ್ಚರಿಕೆ
ಮರೆದ ಕರ್ಮನಿಂದುರಿಯೇ 3

200
ವೀರ ಬಂದ ವೀರ ಬಂದ

ವೀರ ಬಂದ ವೀರ ಬಂದ
ಘೋರ ಹಮ್ಮು ಎಂಬ ದಕ್ಷನ
ತೋರ ಶಿರವರಿಯಲೋಸುಗ ಪ

ಭಯನಿವಾರಣವೆಂಬ ಕಾಸೆಯನೆ ಹೊಯ್ದ
ಜಯಶೇಖರನೆಂಬ ವೀರ ಕಂಕಣ ಕಟ್ಟಿ
ನಿಯತ ಸಾಹಸವೆಂಬ ರತ್ನ ಮುಕುಟವಿಟ್ಟು
ಸ್ವಯಂ ಸೋಹಂ ಎಂಬ ಕುಂಡಲವ ತೂಗುತ 1

ಆಡಲೇನದ ಶುದ್ಧವೆಂಬ ಭಸಿತವಿಟ್ಟು
ರೂಢಿಯ ಸತ್ಯವೆಂದೆಂಬ ಹಲಗೆಯಾಂತು
ಇಡಾಪಿಂಗಳವೆಂಬ ಪಾವುಗೆಗಳ ಮೆಟ್ಟಿ
ಗಾಢ ಧೈರ್ಯವೆಂಬ ಖಡುಗ ಝಳಪಿಸುತ 2

ಒಂದೊಂದೆ ಹೆಜ್ಜೆಯನಂದು ಪಾಲಿಸುತಾಗ
ಹಿಂದೆಡಬಲ ನೋಡದೆ ಮುಂದು ನಿಟ್ಟಿಸಿ
ಛಂದಛಂದದಲಾಗುವಣಿ ಲಗುವಿನಿಂದ
ಬಂದನು ಬಹು ಶೂರಧೀರ ಮಹಾವೀರ 3

ದಾರಿ ಊರುಗಳನೆ ಧೂಳಗೋಂಟೆಯ ಮಾಡಿ
ಆರಾಧರೇನು ಶಿಕ್ಷಿಸುವೆನೆಂದೆನುತ
ಭೇರಿ ಕರಡಿ ಸಮ್ಮೇಳಗಳೊಡಗೂಡಿ
ಕಾರಣವಹ ಯಜ್ಞಮಂಟಪದೆಡೆಗಾಗಿ 4

ಸುಷುಮ್ನವೆಂದೆಂಬ ಬಾಗಿಲ ಮುರಿಯುತ ಆ
ಸಮಯದಿ ಬಂದ ಅಸುರರ ಕೊಲ್ಲುತ
ಭೇಸರಿಸುವ ದೊರೆ ದೊರೆಗಳನಿರಿಯುತ
ದ್ವೇಷರೆನಿಪ ಷಡುರಥಿಕರ ಕಟ್ಟುತ 5

ಅಷ್ಟಸಿದ್ಧಿಗಳೆಂಬ ದಿಕ್ಪಾಲಕರ ನಟ್ಟಿ
ಭ್ರಷ್ಟ ಮೋಹವದೆಂಬ ಯಮನ ಹಲ್ಮುರಿದೆತ್ತಿ
ನಷ್ಟಮನವೆಂಬ ಬೃಗುವಿನ ಮೀಸೆಯ ಕಿತ್ತು
ಶಿಷ್ಟಶಿಷ್ಟರನು ಎಲ್ಲರ ಕೆಡೆಮೆಟ್ಟಿ 6

ಹಮ್ಮು ತಾನಾಗಿರುತಹ ಉನ್ಮತ್ತ
ದಕ್ಷನ ಶಿರವನು ತರಿಯುತಲಾಗ
ಗಮ್ಮನೆ ತ್ರಿಕೂಟ ಯಜ್ಞಕುಂಡದೊಳು
ಸುಮ್ಮನಾಹುತಿಯಿಟ್ಟು ಸುಲಭದಲಿ ನಲಿಯುತ 7

ಪಾಪರೂಪನಾದ ಜೀವದಕ್ಷನನು
ಈ ಪರಿಯಲಿ ಕೊಂದು ನಾಟ್ಯವಾಡಲು
ಭಾಪುರೇ ಎಂದು ಸಾಧು ಪ್ರಮಥರು ಹೊಗಳಲು
ತಾಪಹರನಾಗಿ ಶಾಂತಿಯ ಹೊಂದುತ 8

ನಿರುಪಮ ನಿತ್ಯ ನಿರಾಳನೆ ತಾನಾಗಿ
ಪರಮೇಶ ಪರವಸ್ತು ಪರತರವೆಯಾಗಿ
ಭರಿತ ಚೇತನ ಪ್ರತ್ಯಗಾತ್ಮನೆ ತಾನಾಗಿ
ನಿರುತ ನಿತ್ಯಾನಂದ ಚಿದಾನಂದ ಯೋಗಿ 9

201
ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮನೆಂದೆಂಬೆ

ವೀಣಾಸ್ವರವನು ಕೇಳುತಲಿರುವನ ವಿಶ್ವಾತ್ಮನೆಂದೆಂಬೆ
ವೀಣಾಸ್ವರ ಕೇಳಲು ದುರ್ಗುಣವುಡಗಿ ಪೋಗುವುವು ಎಂದೆಂಬೆ ಪ

ನಾದಬ್ರಹ್ಮವನಾಲಿಸುತಿಹನು ನರನಲ್ಲವು ನಾನೆಂಬೆ
ನಾದಬ್ರಹ್ಮವನಾಲಿಸುತಿರಲಿಕೆ ನಾನಾಗುಣವು ಲಯವೆಂಬೆ 1

ಘಂಟಾ ಸ್ವರವನು ಕೇಳುತ ಸುಖವನು ಅನುಭವಿಸುವನ ಗುರುವೆಂಬೆ
ಘಂಟಾಘೋಷದಿಜನನ ಮರಣವು ಮುಳುಗಿಹವು ಎಂದೆಂಬೆ 2

ಭೇರಿನಾದವ ಕೇಳುತಲಿರುವನ ಭಾಗ್ಯವಂತನು ಎಂಬೆ
ಧೀರ ಚಿದಾನಂದ ಸದ್ಗುರುನಾದದಿ ಲಯವಿಹನು ಎಂದೆಂಬೆ 3

202
ವೈರಾಗ್ಯದಾವಾಗ್ನಿ ಉರಿಯು ಛಟಿಭಟಿಸಿತು

ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತು
ಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತು ಪ

ಸತಿಸುತರು ಎಂಬ ಹೆಮ್ಮರವೀಗ ಸುಟ್ಟವು
ಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತು
ಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವು
ಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು 1

ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವು
ಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವು
ವಾಸಗಳೆಂದೆಂಬ ಕುಡಿ ಕಿಡಿಯಾಗಿ ಉದುರಿದವು
ಆಸೆ ಎಂಬ ಫಲ ವಹ್ನಿಗಾಹಾರವಾದವು 2

ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವು
ಮನೆಯೆಂಬ ಗೂಡುಗಳು ನಿಗಿನಿಗಿಯಾದವು
ಬಿನುಗು ಚಿಂತೆ ಎಂಬ ಹರಿಣ ಮುಗ್ಗರಿಸಿದವು
ಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು 3

ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವು
ತುಚ್ಛ ವಿಷಯಗಳೆಂಬ ನರಿಗಳೋಡಿದವು
ದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವು
ಕಷ್ಟ ತಾಪತ್ರಯದ ಕತ್ತಲು ಹರಿಯಿತು 4

ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿ
ಯಂತೆ ಧಗಧಗನೆ ಝಗಝಗನೆ ಸುಡುತಲಿ
ಚಿಂತಯಕ ಚಿದಾನಂದ ಉರಿಯು ಅಖಂಡವಾಗಿ
ಶಾಂತರೆಂಬರ ಮುಕ್ತರುಗಳ ಮಾಡಿತ್ತು 5

203
ಶಾಂತ ಶಾಂತವು ಎಂದು ಎಂಬರಿ ನಿಮ್ಮನು

ಶಾಂತ ಶಾಂತವು ಎಂದು ಎಂಬರಿ ನಿಮ್ಮನು
ಶಾಂತವಿಂತಿರುತಿರೆ ಶಾಂತ
ಶಾಂತವಿಂತಿರೆ ಜೀವ ಮುಕ್ತನು
ಶಾಂತಿಲಿ ಭ್ರಾಂತಿರೆ ಭಯವುಕೃತಾಂತ ಪ

ಸತಿ ಜಾರೆಯಾಗಲು ಗುರುನಾಥಲೀಲೆಯೆಂದು
ಸತಿಗನುಕೂಲವೇ ಶಾಂತ
ಖತಿಯ ಮಾಡಲು ನಾನಾಜನರು ಚಂಚಲವಾಗದ
ಸ್ಥಿತಿಯೇ ಶಾಂತ ಸತತ ಸಂಸಾರ ಕರಕರೆ ಬಳಲಿಕೆ
ಸಂಗವಿಲ್ಲದಿಹುದೇ ಶಾಂತ
ಅತಿ ಚೋರ ಸುಲಿದೊಯ್ಯೆ ಆನಂದದಲಿ
ನಸುನಗುತಿರುವುದೇ ಶಾಂತ 1

ವಿಷವನಿಕ್ಕಿದವರನ್ನು ಕಾಣಲು ಅವರೊಳು
ವಿಶ್ವಾಸವಿಹುದೇ ಶಾಂತ
ದುಶ್ಮನನು ತನ್ನನ್ನು ಕಡಿಯಬರೆ ಇದು
ಮೋಕ್ಷವೆಂಬುದೆನೆ ಶಾಂತ
ಮುಸುಕಿನ ಮಾತ ಊರ ಮುಂದಿಕ್ಕಲು
ಮತಿಗೆಡದಿಹುದದು ಶಾಂತ
ಹಸಿದು ಮಕ್ಕಳು ಅಳೆ ಹೆಂಡತಿ ರೋಧಿಸೆ
ಕುಸಿದು ಬೀಳದೊಡದು ಶಾಂತ 2

ಕೊಟ್ಟಿದ್ದು ಸುಳ್ಳು ಎಂಬುವರೆದುರಿಗೆ
ಕೊಟ್ಟಿಲ್ಲವೆಂಬುದೇ ಶಾಂತ
ಭ್ರಷ್ಟರು ನಾನಾ ನಿಂದೆಯ ಮಾಡಲು
ಭಯ ಹುಟ್ಟಿದಿರುವುದೇ ಶಾಂತ
ಬಿಟ್ಟುಹೋಗಲು ತನ್ನ ಸತಿ ಸುತರೆಲ್ಲರು
ಭ್ರಾಂತಿಯ ತೋರುವುದೇ ಶಾಂತ
ದಿಟ್ಟ ಚಿದಾನಂದ ಸದ್ಗುರು ತಾನಾಗಿ
ದೃಢನಾಗಿಹುದದು ಶಾಂತ 3

204
ಶಿವನೀ ಹ್ಯಾಗಲ್ಲ ಮನುಜ

ಶಿವನೀ ಹ್ಯಾಗಲ್ಲ ಮನುಜ
ಶಿವನೀಹ್ಯಾಗಲ್ಲ
ಶಿವನೇ ಜೀವನು ಬ್ರಹ್ಮಾಂಡಪಿಂಡಾಂಡ ಪ

ಶಿವಜೀವನು ತಿಳಿ ತಾನೊಬ್ಬ
ಕಣ್ಣೇ ಸೂರ್ಯನು ಕಿವಿಯೇ ದಿಕ್ಕು
ಚಿನ್ನಾದ ಪ್ರಾಣವೆ ತಾವಶ್ವಿನಿ 1

ಜಿಹ್ವೆಯೇ ವರುಣತ್ವ ತ್ಪಕ್ಕುತಾವಾಯುವು
ಗುಹ್ಯವೇ ವಿಧಾತೃ ಉಪಸ್ಥವೇ ಮೃತ್ಯು 2

ವಾಕ್ಕು ತಾನಗ್ನಿ ಪಾದ ಉಪೇಂದ್ರನು
ಚೊಕ್ಕೂಟದಿಂತಿಳಿ ಪಾಣಿಯೆ ಇಂದ್ರನು 3

ಮನವೆ ಚಂದ್ರನು ಬುದ್ಧಿಯೆ ಬ್ರಹ್ಮನು
ಘನ ಚಿತ್ತವು ತಾನದು ಕ್ಷೇತ್ರಜ್ಞ 4

ಅಹಂಕಾರ ರುದ್ರನು ಜ್ಞಾತೃವೇ ಈಶ್ವರ
ಶಂಕರ ಚಿದಾನಂದನೀ ಪರಮಾತ್ಮನು 5

205
ಶ್ರವಣ ಮನನ ನಿಧಿ ಧ್ಯಾನವು ಯೋಗಕ್ಕೆ

ಶ್ರವಣ ಮನನ ನಿಧಿ ಧ್ಯಾನವು ಯೋಗಕ್ಕೆ
ಸಮನಿಸೆ ಸಾಧಕಂಗೇತಕೆ ಈ ಮೂರು ಪ

ನಿತ್ಯಗುರುಮುಖದಿಂದ ನಿಜವೇದಾಂತ ಸಾರವ-
ನಿತ್ಯಕಾಲದಲ್ಲಿ ಕೇಳುತಲಿ ಇದ್ದು
ನಿತ್ಯಜೀವರ ಪರಮ ನಿಲುಗಡೆಗಳ ತಿಳಿದು
ಸತ್ಯತಾನೆಂದು ಕಂಡು ನಿಶ್ಚೈಸಿದುದೆ ಶ್ರವಣ 1

ವಾಸನೆ ಹರವಾಗಿ ಬಲಿದು ಆತ್ಮಾನಂದಕೆ
ಸೂಸದೆ ಮನವನು ನಿಲ್ಲಿಸುತ
ದೇಶಿಕೋತ್ತಮನಿಂದ ತನಗಾವ ಉಪದೇಶ
ಬೇಸರಿಸದೆ ಮತ್ತೆ ಮತ್ತೆ ನೆನೆವುದೆ ಮನನ 2

ದಧಿಮಥನವ ಮಾಡೆ ನವನೀತ ತೇಲುವೊಲು
ಉದಧಿಮಥಿಸೆ ಅಮೃತ ತಾ ಬಂದಂತೆ
ಮಥಿಸೆ ಕಾಷ್ಟಕ್ಕೆ ಕಾಷ್ಠ ಅಗ್ನಿ ತಾ ಪುಟಿದಂತೆ
ವಿಧಿಸೆ ಈ ತೆರದಲಿ ತಾನದುವೆ ನಿಧಿಧ್ಯಾಸ 3

ಈ ಮೂರು ಸಾಧನಗಳಿರಬೇಕು ಯೋಗಕ್ಕೆ
ಈ ಮೂರು ಸಾಧಿಸಲು ರಾಜಯೋಗಿ ತಾನು
ಇವರೊಳು ಒಂದು ಕಡಿಮೆಯಾದರು ಯೋಗಿಯಾಗನು
ಇಂತಿಲ್ಲದಿರೆ ನಿಜಮುಕ್ತಿ ದೊರಕದು 4

ಶ್ರವಣವೆಂಬುದು ಅದು ಸರ್ವಸಾಧನವಯ್ಯ
ಶ್ರವಣ ಮನನವಾಗೆ ಶ್ರಮ ಪರಿಹಾರವು
ಶ್ರವಣ ಮನನ ನಿಧಿಧ್ಯಾಸ ಮೂರಾಗೆ
ಶಿವನೆ ಆತನು ಚಿದಾನಂದ ದೇವನವನು 5

206
ಶ್ರೀ ಗುರುವಿನ ನೆನದು ಸುಖಿಯಾಗು ಮನವೇ

ಶ್ರೀ ಗುರುವಿನ ನೆನದು ಸುಖಿಯಾಗು ಮನವೇ ನೀನು
ದುರ್ಗುಣ ಪಾಪಹರಿದು ಭೇದಿಸು ಜನನವ ಪ

ನಾನಾ ಜನ್ಮದಿ ತೊಳಲಿ ನೀ ಬಂದು ನರ
ಮನುಷ ಜನ್ಮವ ತಾಳಿ ಮರತ ಕಂಡ್ಯಾ ತನುವಿನಲಿ
ಧ್ಯಾನಿಸುಸದಾಕಾಲದಿ ದುರ್ಜನ ಬುದ್ಧಿ
ಮಾಣಿಸು ಪರಂಜ್ಯೋತಿಯ
ನೆನೆದು ನೆನೆದು ದೃಷ್ಟಿಸಿ ಕಾಣುಗುಣಜ್ಞನ ಕರುಣ
ಪ್ರಾಜ್ಞನ ಜ್ಞಾನ ಸಿದ್ಧನ ಗುರುವ ಸಿದ್ಧನ
ಮಾನಸ ರೂಪನ ಮೂಜಗ ವ್ಯಾಪನ
ದೀನರನಾಥನ ವಾಙ್ಮಯಾತೀತನ 1

ಸುಜನರ ಸಂಗವ ಮಾಡದೆ ಸಾಯುತಲಿಹೆ
ಕುಜನರ ಸಂಗದಿಂದ ಕರುಣವೆಂಬುದು ಮರೆತೆ
ತ್ಯಜಿಪುದು ನಿನಗೆ ನೀತಿಯೆ ಥೂ ನಿನಗೆ ಬುದ್ಧಿಯೇ
ಭಜಿಸು ಪರಾತ್ಪರವ ನೆನೆದು ದೃಷ್ಟಿಸು ಮನವೇ
ತ್ರಿಜಗ ವಂದ್ಯನ ತ್ರಿಗುಣಕೆ ಮಾನ್ಯನೆ
ಸುಜನವ್ರಾತನ ಸುಪ್ರಭಾತೀತನ
ಭಜಕರ ಭಾಗ್ಯನ ಬಹುಗುಣ ಯೋಗ್ಯನ
ಸರ್ವಬೇಧಜ್ಞನ ನಯಸರ್ವಜ್ಞನ 2

ಇರುವೆ ಮೊದಲು ಗಜ ಕಡೆಯಾದ ಎಂಭತ್ತನಾಲ್ಕು
ತಿರುವಿನ ಲಕ್ಷಜೀವದಿ ಜನಿಸಿ ಜನಿಸಿ ಪುಟ್ಟುವ
ಪರಿಯನೆಲ್ಲವ ಛೇದಿಪ ಉಪಾಯವ ತಿಳಿವ
ಚಿರಕಾಲ ನೆನೆಯೋ ಕಂಡ್ಯಾ ಚಿದಾನಂದಾವಧೂತನ
ಪರಮ ಪರೇಶನ ಪಂಡಿತ
ಪುರುಷನ ಶರಣು ಜನಾಂಗನ ಸುಗುಣ ಕೃಪಾಂಗನ
ಕರುಣಾ ಕಟಾಕ್ಷನ ಕಾರಣ ಮೋಕ್ಷನ
ಮರಣ ವಿದೂರನ ಮುನಿಯತಿ ವರನ 3

207
ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆ

ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆ
ಸಂತೆಯವರ ನಂಬಿದರೆ ಕೆಟ್ಟುಹೋಗುವೆ ಕಾಣೆ ಪ

ತಂದೆತಾಯಿ ನೆವಗಳಿಂದ ಸಂತೆಗೆ ಬಂದೆ
ಬಂದು ಕೂಡಿದನು ಗಂಡ ಜೋಡಾದೆನು ಎಂದೆ
ಬಂದನೀಗ ಮಗೆನೆಂಬುವನು ಸೊಸೆಯು ಆತನ ಹಿಂದೆ
ಬಂಧುಬಳಗ ಬಹಳಾಯಿತು ನೆರೆದುದು ಸಂತೆಯು ಮುಂದೆ 1

ಸಂತೆ ಮಾಡಿಕೊಂಡು ಗಂಡನೀಗ ತೆರಳಿದನೆ
ಅಂತು ಸಂತೆಯ ಮಾಡಿ ಮಗನೀಗ ಹೋಗಿಹನು
ಇದಕು ಮೊದಲೇ ಸೊಸೆಯ ಇಹಲೋಕ ಬಿಟ್ಟಿಹಳು
ಇಂತು ಸಂತೆಯ ಮಾಡಿ ಬಯಲಿಗೆ ಬಿದ್ದೆನೇ 2

ದಾರಿಕಾರರೆಲ್ಲ ಸರಿದು ಸಂತೆ ಬಯಲಾಗೆ
ಅರಿಗಾರು ಇಲ್ಲವಾಗಿ ನನ್ನ ಬಿಟ್ಟು ಹೋಗೆ
ಧೀರ ಚಿದಾನಂದ ಗುರು ಕೈಯ ಹಿಡಿದ ಬೇಗ
ನೀರೆ ಅಂಜಬೇಡವೆಂದು ಮುಟ್ಟಿಸಿದ ಮನೆಗೆ 3

208
ಸಂಸಾರ ಶರಧಿಯೊಳು ಮುಳುಗಿ ಮುಳುಗಿ

ಸಂಸಾರ ಶರಧಿಯೊಳು ಮುಳುಗಿ ಮುಳುಗಿ ಸಂಶಯವಿಲ್ಲದೆ
ಬಳಲುತಿಹ ಮರುಗಿ ಮರುಗಿ ಪ

ಅಜ್ಞಾನ ತಿಮಿರವೆಂಬ ವ್ಯಾಪಾರದೊಳೋಡಾಡಿ
ಸುಜ್ಞಾನ ಜ್ಯೋತಿಯ ಬಿಡುಗಡೆಯ ಮಾಡಿ
ಭಗ್ನ ಮಾಡಿಯೆ ಶಾಂತ ಬುದ್ಧಿಗಳನೇ ನೋಡಿ
ಪ್ರಾಜ್ಞನಾಗದೆ ಕೆಡುವೆ ನರಕವನು ಕೂಡಿ 1

ಕಾಲವಿಪರೀತದಿಂದ ಕೇಡುಬರೆ ನೀನದನು
ಕಾಲಲೊದೆಯದೆ ಬಹಳ ಚಿಂತೆಯನು ಮಾಡಿ
ಓಲಗಿಸಿ ಮನದೊಳಗೆ ತಾ ಕೆಟ್ಟೆಯೆನ್ನುವನು
ಪಾಲಿಸುವರಿಲ್ಲೆಂದು ಸೇರುವೆಯ ನರಕವನು 2

ಬೇಡ ಮನದೆ ಇನ್ನು ಖುಲ್ಲ ಗುಣಗಳ ಬಿಟ್ಟು
ಖೋಡಿ ಸಂಸಾರವೆಂಬುದನು ಸುಟ್ಟು
ಗೂಢ ಚಿದಾನಂದಾವಧೂತನೊಳು ಅಳವಟ್ಟು
ಕೂಡು ಕೆಲಸಾರದಲೆ ದೃಷ್ಟಿ ಆತ್ಮನಲಿಟ್ಟು 3

209
ಸತ್ಕರ್ಮ ತ್ಯಾಗವೇ ನಿಜಬ್ರಹ್ಮವು

ಸತ್ಕರ್ಮ ತ್ಯಾಗವೇ ನಿಜಬ್ರಹ್ಮವು
ಸತ್ಕರ್ಮ ಬ್ರಹ್ಮಕೆ ಉಪಾಧಿರೂಪವಯ್ಯಾ ಪ

ಹುಟ್ಟಿಗೆ ಶಾಖಗಳ ರುಚಿ ಹತ್ತದಿದ್ದಂತೇ
ಬಿಟ್ಟಿಹನು ಮತ್ತೆಂಬೆ ಸಂಸಾರದಿ ಹುಟ್ಟಿಗೆಯು ವಾಸವೆಯು
ಹತ್ತದಲೆ ಇಹುದೆ ಬಿಟ್ಟು ಕೊಡಬೇಕು ಸತ್ಕರ್ಮ ಪಥವ 1

ಹೂಡುವೆತ್ತುಗಳೆತ್ತ ನಡೆಪ ಘೋಡವದೆತ್ತ
ಮಾಡ್ವ ಎರಡರಲಿ ಬಿಟ್ಟಿಹ ಯೋಗವನು ಎತ್ತ
ಝೂಡಿಸಿಯೆ ಬಿಡದಿ ಸತ್ಕರ್ಮ ಪಥವ 2

ಎರಡು ಕಡೆ ಚಿತ್ತವು ಸಮನಿಸುವುದೇತಕ್ಕೆ
ಗುರು ಗುಟ್ಟಲೇಕೆ ಉರಲಿಕ್ಕಲೇಕೆ
ಕರೆಕರೆಯ ಸತ್ಕರ್ಮ ತ್ಯಾಗವನು ಮಾಡಿ ಬಿಡಿ
ಗುರು ಚಿದಾನಂದ ಸಹಜರಾಗುವಿರಿ ನಿಜದಿ 3

210
ಸತ್ಕರ್ಮವೆಂಬುದು ಸಾಧನವಲ್ಲದಲೆ

ಸತ್ಕರ್ಮವೆಂಬುದು ಸಾಧನವಲ್ಲದಲೆ
ಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವು
ಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವು
ಸತ್ಕರ್ಮತ್ಯಾಗ ನಿಶ್ಯಬ್ಧ ವಸ್ತು ಪ

ಗಾರುಡಿಯನರಿವೆನೆಂದು ಮಹೋರಗನ ಮೇಳವೇ
ಆರು ನಂಬಲು ಬಹುದು ವಿಕಾರ ಮನವನು
ನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲು
ಸೇರುವುದು ಎಂತು ಪೂರ್ಣ ಬ್ರಹ್ಮ 1

ಬ್ರಹ್ಮನರಿದು ಸಂಸಾರವ ಮಾಡು ಈಗ ಎಂಬನು
ಬ್ರಹ್ಮಘಾತನು ಅವನು ಮಿಥ್ಯವಲ್ಲವು
ನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆ
ಸುಮ್ಮನೆ ಬಿಡಲಿಬೇಕು ಸತಿ ಸುತರನು 2

ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲು
ವಾಸನಾಕ್ಷಯವು ಎಂತು ಸಂಸಾರದಿ
ಗೋಪನಾರಬೇಡವೆನಲು ನಾರುವುದು ಬಿಡುವುದೇ
ಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು 3

ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆ
ಅಕ್ಕಿನೀರುವಗ್ಗಿದಂತೆ ಆಗಬಾರದು
ರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲು
ಭಕ್ಷಣಹುದು ಬ್ರಹ್ಮಜ್ಞಾನ ಬಿಡುವುದಿಲ್ಲವು 4

ಸಂಸಾರದಿ ಮುಕ್ತ ನಾನು ಎನಲು
ತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇ
ಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತು
ಹಂಸಪರಮ ಚಿದಾನಂದ ತಾನೆಯಾಹನು 5

211
ಸರ್ವಂ ಬ್ರಹ್ಮಮಯಂ ತಿಳಿವಡೆ

ಸರ್ವಂ ಬ್ರಹ್ಮಮಯಂ ತಿಳಿವಡೆ
ಸರ್ವ ಬ್ರಹ್ಮಮಯಂ ಪ

ಮತಿಗತಿ ಬ್ರಹ್ಮಮಯಂ ಮಹಾಕೃತು ಜಪ ಬ್ರಹ್ಮಮಯಂ
ಸತಿಸುತ ಬ್ರಹ್ಮಮಯಂ ಶಾಂತವು ಖತಿಯು ಬ್ರಹ್ಮಮಯಂ 1

ಪಶುಧನ ಬ್ರಹ್ಮಮಯಂ ಪಟ್ಟಣಸುಧೆಯು ಬ್ರಹ್ಮಮಯಂ
ಶಿಶುಗಳು ಬ್ರಹ್ಮಮಯಂ ಸಮಸ್ತದಸೆಗಳು ಬ್ರಹ್ಮಮಯಂ 2

ಯುಗತಿಥಿ ಬ್ರಹ್ಮಮಯಂ ನಾನಾ ಖಗಮೃಗ ಬ್ರಹ್ಮಮಯಂ
ನವನಧಿ ಬ್ರಹ್ಮಮಯಂ ಚಿದಾನಂದ ಬಗಳೆ ಬ್ರಹ್ಮಮಯಂ 3

212
ಸುರತ ಸುಖಕೆ ಅಂಗನೆಯರ ಮೇಳದಲಿ

ಸುರತ ಸುಖಕೆ ಅಂಗನೆಯರ ಮೇಳದಲಿ
ಇಹಗೆ ಆಧ್ಯಾತ್ಮದ ಗೊಡವೆ ಏತಕೆ ಪ

ಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆ
ರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆ
ಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ 1

ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆ
ಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆ
ಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆ
ಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ 2

ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆ
ವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆ
ಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆ
ಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ 3

213
ಸೈಶಬಾಸ ಗಬರು ದರೋಡೆ ಬರತದ

ಸೈಶಬಾಸ ಗಬರು ದರೋಡೆ ಬರತದ
ಅಬಬ್ಬ ನೋಡಿದರೆ ಆರ್ಭಟ
ಸಬಬ ಐತಿದು ಸಾಧುರ ಪುಣ್ಯ
ಶುಭ ನುಡಿಯುತದ ಶಕುನದ ಹಕ್ಕಿ ಪ

ಐದು ಮಂದಿ ನೆಲೆಗಳ್ಳರು ಕೂಡಿ
ಊರ ಆತ್ಮದಲಿ ಸೇರುವರು
ಐಕ್ಯದಿಂದ ಶ್ರೀ ಗುರುವಿನ ಕೂಡಿ
ಐದು ಮಂದಿ ಬಿಟ್ಟೋಡುವರು 1

ಎಂಟು ಹತ್ತು ಮಂದಿ ಬಂಟರು ಕೂಡಿ
ಮುತ್ತಿಗೆ ಹಾಕಿ ನಿನ್ನ ಕೆಡಿಸುವರು
ಸತ್ಯನಾದ ಶ್ರೀ ಗುರುವಿನ ನೆನೆದರೆ
ಹತ್ತು ಮಂದಿ ಬಿಟ್ಟೋಡುವರು 2

ನೋಡಿ ಬಗೆಯೋ ನಿನ್ನ ಕಾಡವು ಹುಲಿಗಳು
ಬೇಡಿದ ಪದಾರ್ಥ ದೊರಕುವುದು
ಕೂಡಿ ಭಜಿಸೊ ಶ್ರೀ ಚಿದಾನಂದನ
ಮೂಲ ಮಂತ್ರ ಪ್ರಣವ ದೊರಕುವುದು 3

214
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿ

ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿ
ಮಿಕ್ಕು ಮೀರಿ ಮೂರಕ್ಕರಗಳಕಂಡು
ನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನ ಪ

ಮೂರ ಕಟ್ಟಿ ಮೂರನು ಅರಶೀರಗುಟ್ಟಿ
ಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿ
ತೋರುವ ಎರಡು ನಾಲ್ಕನು ತೊಲಗಿಸಿದಾತನ 1

ಲೋಕದ ಕೂಡ ಕೂಡಿಯೆ ವಿವೇಕ ಬೇಡ
ಏಕವೆಂಬುದು ಬಿಡ ಅನೇಕವೆಂಬುದ ನಾಡ
ಮೂಕ ಪದಗಳೆಂದು ನಿರಾಕರಿಸುತಲಿಹನು 2

ಅಕ್ಷಯ ಮುಚ್ಚಿ ತೆರದು ತೆರದಕ್ಷಯ ಮುಚ್ಚಿ
ರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-
ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ 3

ಮತಗಳ ನೆನೆದು ಶಾಸ್ತ್ರಗಳ ಗೆಲಿದು
ಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಿ
ಸತತ ಕಾಲದಿ ತನ್ನ ಮತಿ ಹಿಡಿಯೆಂಬನ 4

ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯ
ತಾನಾಗದ ಗುರು ಚಿದಾನಂದನ ತಾ ಕಂಡು
ತಾನೆ ತಾನಾಗಿ ತೋರುವ ನಿಜ ಯೋಗಿಯ 5

215
ಸ್ಥಳವಲ್ಲದ ಸ್ಥಳದಲ್ಲಿ ಕಸ್ತೂರಿಯನಿಟ್ಟ ಬ್ರಹ್ಮ

ಸ್ಥಳವಲ್ಲದ ಸ್ಥಳದಲ್ಲಿ ಕಸ್ತೂರಿಯನಿಟ್ಟ ಬ್ರಹ್ಮ
ಬಳಿಕ ಬೈದರೆ ವಿವೇಕವಹುದೇ ಎಲೆ ತಮ್ಮ ಪ

ಶೀಲಮೃಗ ನಾಭಿಯಲಿ ಕಸ್ತೂರಿಯನಿಡುವುದು
ಖೂಳರ ಜಿಹ್ವೆಯಲಿ ಅದನಿಡಲು ನೀತಿಯಹುದು
ನಾಲಗೆಯ ಲೋಕೋಪಕಾರವಹುದು
ಮೇಲೆ ಕಸ್ತೂರಿಬಹುದು ಜಗಸಮ್ಮತವಹುದು 1

ಕಸ್ತೂರಿಗೋಸ್ಕರವೆ ಧರ್ಮ ಮೃಗವಾದುದನು ಬಿಡದೆ
ಕೊಲ್ಲುವವನು ವ್ಯಾಧನೀಗ
ಸಂಚಲ ಚಿತ್ತವುಳ್ಳವನು ವಿಧಿವರವರಿಯನು
ಅಸ್ತವ್ಯಸ್ತದಿ ಪಶುಗೆ ನೀರತಿದ್ವಿದನು 2

ಧರಿಸಿದನು ದೋಷವನು ತಾನೀಗ ಎರಡನ್ನ
ಹಿರಿಯರನು ನಿಂದಿಪುದು ಮೃಗವ ಕೊಂದವನು
ಕರುಣೆ ಚಿದಾನಂದ ಸದ್ಗುರುವಿಗೆ ಮೆಚ್ಚಿಸು ಅದು
ಮರವಾದ ಮುಪ್ಪಿನಲಿ ವಿಧಾತ್ರನು 3

216
ಹಿರಿದು ಸಂಸಾರ ನೆಲೆಯದು ಕಲ್ಪತರು

ಹಿರಿದು ಸಂಸಾರ ನೆಲೆಯದು ಕಲ್ಪತರು
ಕಾಮಧೇನುವದು ಸುಖವೋ ದುಃಖವೋ
ಹೊನ್ನು ಸತಿಯು ಸುತರೆನ್ನವರೆನ್ನದೆ
ಚಿನ್ಮಯರೂಪೆಂದು ತಿಳಿದು
ಉನ್ನತವಾಗಿಹ ಸಾಧುಗುಣದಿ ತಾ
ಮುನ್ನ ನೋಡುವವನ ನರನೋ ಹರನೋ 1

ಮನೆಯು ಮಾತಾ ಪಿತ ಮನುಜವರ್ಗವನೆಲ್ಲ
ಘನ ಮಹಿಮನ ವಿನೋದವೆಂದು
ಸನುಮತದಲಿ ತಾನಧಿಕಾರಿಯೆನಿಸಿಯೆ
ಮನದಿ ಸೂಚಿಪುದು ಉರಿಯೋ ಸಿರಿಯೋ 2

ಬಂಧನದೊಳು ಮಹಾ ನಿಂದನೆಯನು ಕೇಳುತಲಿ
ಕುಂದು ಕೊರತೆಗೆಲ್ಲ ಹಿಗ್ಗುತಲಿ
ಇಂದಿದು ಆತ್ಮನ ಲೀಲಾ ಚರಿತನೆಂದು
ಮುಂದೆ ತೋರುವದಿದು ಭಯವೋ ಜಯವೋ 3

ಜನನ ಮರಣ ಸುಟ್ಟು
ಮನುಜ ಜೀವನ ಕೆಟ್ಟು
ಕನಸಿನ ತೆರ ಸಂಸಾರ ಮೂಡಿ
ದಿನಕರ ಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದು
ಗೆಲುವೋ ಒಲವೋ 4

ಕರುಣ ಕಟಾಕ್ಷ ಸುಕರುಣ ಶಾಂತತ್ವದಿ
ಸರಸ ಸುಜ್ಞಾನವನಳವಡಿಸಿ
ಗುರು ಚಿದಾನಂದಾವಧೂತನೆ ತಾನಾಗಿ
ಹರುಷಿಸಿ ಸುಖಿಪುದು ದೊರೆಯೋ ಚರಿಯೋ 5

217
ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚು

ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚು
ಹುಚ್ಚು ತಿಳಿವುದಲ್ಲ ಹುಚ್ಚನ ಗುರುವೇ ಬಲ್ಲ ಪ

ನಿರ್ಮಳಾಂಗದ ಹುಚ್ಚು ನಿಗಮ ಶಿರದ ಹುಚ್ಚು
ಕರ್ಮರಹಿತನ ಹುಚ್ಚು ಕಮನೀಯ ಹುಚ್ಚು 1

ಸಜ್ಜನ ಸಂಗದ ಹುಚ್ಚು ಸಂತೋಷಪೂರಿತ ಹುಚ್ಚು
ವೆಚ್ಚವಿಲ್ಲದ ಹುಚ್ಚು ಎಣಿಸಬಾರದು ಹುಚ್ಚು 2

ಬ್ರಹ್ಮಾನಂದದ ಹುಚ್ಚು ಭೇದರಹಿತದ ಹುಚ್ಚು
ಹಮ್ಮನಳಿದ ಹುಚ್ಚು ಪರಿಪೂರ್ಣ ಹುಚ್ಚು 3

ಮತವ ಕಡಿದಾ ಹುಚ್ಚು ಮಹತ್ತೆನಿಪಾ ಹುಚ್ಚು
ಸತತ ಶಾಂತಹ ಹುಚ್ಚು ಸಹಜಾನಂದದ ಹುಚ್ಚು 4

ಲೋಕ ಸಾಕ್ಷಿಕ ಹುಚ್ಚು ಲೋಕವುತಾನಾದ ಹುಚ್ಚು
ಏಕವೆಂಬ ಹುಚ್ಚು ಯಮನ ಗೆಲಿದಾ ಹುಚ್ಚು 5

ಆರರ ಮೇಲಣ ಹುಚ್ಚು ಅನ್ಯಮನಸ್ಕದ ಹುಚ್ಚು
ಚಾರು ತಾಮಸ ಹುಚ್ಚು ಚಲನೆಯಿಲ್ಲದ ಹುಚ್ಚು 6

ಗುರುಭಕ್ತಿಯ ಹುಚ್ಚು ಗುರೂಪದೇಶದ ಹುಚ್ಚು
ಸ್ಮರಣೆ ಬಲಿದ ಹುಚ್ಚು ಸಮನಿಸಿದ ಹುಚ್ಚು 7

ಜ್ಯೋತಿರ್ಮಯದ ಹುಚ್ಚು ಜಾತಿ ನಿರ್ಮೂಲದ ಹುಚ್ಚು
ಖ್ಯಾತಿಯಾಗಿಹ ಹುಚ್ಚು ಭೇದರಹಿತದ ಹುಚ್ಚು 8

ಚಿನ್ಮಯ ಚಿದ್ರೂಪದ ಹುಚ್ಚು ಚಿದಾನಂದನ ಹುಚ್ಚು
ತನ್ಮಯವಾಗಿದೆ ಹುಚ್ಚು ತಿಳಿಯಲರಿಯುವುದು ಹುಚ್ಚು 9

ಭಾಗ-4 : ಲೋಕನೀತಿಯ ಪದಗಳು

218
ಅಜ್ಞಾನಿ ನೀನೀಗ ಕೇಳು ಸುಜ್ಞಾನಿಗಳನು ನೀ ನಿಂದಿಸುವೆ

ಅಜ್ಞಾನಿ ನೀನೀಗ ಕೇಳು ಸುಜ್ಞಾನಿಗಳನು ನೀ ನಿಂದಿಸುವೆ
ಭಗ್ನವಾಗುವೆ ನೀನು ಯಮನ ಕೈಯಿಂದ ಪ

ವಿಷಯದೊಳಗೆ ಹುಟ್ಟಿ ಬೆಳೆದು
ವಿಷಯದೊಳಗೆ ಮುಳುಗಿ ತೇಲಿ
ವಶವಲ್ಲೆದ ಮಾತುಗಳ ನುಡಿವೆ ನೀನು ಕೇಳೋ ಅಜ್ಞಾನಿ 1

ಅಸಮ ಗುಣಗಳ ನೋಡೆ
ಋಷಿಗಳ ಅನುಭವಗಳನು ಹಳಿವೆ
ದುಷ್ಮಾನ ನೀನು ಕೇಳೋ ಅಜ್ಞಾನಿ 2

ಒಂದು ನಿನಗ್ಹೋಗಲಿಲ್ಲ ಒಂದು ನುಡಿನಯವಿಲ್ಲ
ಇಂದು ಅನುಭವಿ ತಾನು ಎಂಬೆಯಲ್ಲೊ ಕೇಳೋ ಅಜ್ಞಾನಿ 3

ಸುಂದರ ಸಾಕ್ಷಿಯ ನಲಿಯದೆ ನೀನೀಗ
ಇಂದೀಗ ನಾನೆಂದು ಕಂಡೆಯಲ್ಲೋ
ಚಂದ ಚಿದಾನಂದ ನೀನಾಗಿಹೆ ಕೇಳು
ಮಂದ ಮತಿಯ ಬಿಡು ನೀನು ಕೇಳೋ ಅಜ್ಞಾನಿ 4

219
ಅಧಿಕಾರಿ ಮೋಕ್ಷಾಧಿಕಾರಿ ಬಲು

ಅಧಿಕಾರಿ ಮೋಕ್ಷಾಧಿಕಾರಿ ಬಲು
ಗುದಿಗೆಯ ಮಾರಿ ಅನಧಿಕಾರಿ ಪ

ಮುರುಕು ಮಾಳಿಗೆಯಲಿರೆ ಮರುಗುತಲ-
ವರಿಗೆ ಮನೆಯ ಕೊಡುವನವನಧಿಕಾರಿ
ಮರಗಳ ಕಡಿವನು ಮುಂದುಗಾಣದಲೆ
ಮನೆ ಹೋಗಗೊಡದವ ಅನಧಿಕಾರಿ 1

ಕೇಳುತ ತತ್ವ ಆಲೋಚನೆಮಾಡಿ
ಅಂತೆಯೆ ನಡೆವನಧಿಕಾರಿ
ಖೂಳರೊಳಾಡುತ ಕುಂಚಿತನೆ
ಕುರುಡನವನು ಅನಧಿಕಾರಿ 2

ಪಡೆಯನು ಪಾಪವ ಬಿಡನವ ಸತ್ಯವ
ನುಡಿವ ಸುವಾಕ್ಯವನಧಿಕಾರಿ
ಮಡದಿಯ ಮೋಹಕೆ ಮುಂದುಗಾಣದಲಿಹ
ಮುಡುದಾರನೆನಿಪವ ಅನಧಿಕಾರಿ 3

ತಿಳಿದರ ಸೇವೆಗೆ ತೇಯುವ ತನುವನು
ತಗಲನು ನಿಂದ್ಯಕೆ ಅಧಿಕಾರಿ
ತಲೆಯನು ಮಣಿಯನು ಮನದಲಿ
ಮೋಸವ ಚಿಂತಿಪನವನು ಅನಧಿಕಾರಿ 4

ಚಿತ್ ಬಿಂದು ಉಕ್ಕುತ ಚಿತ್ಸುಖ ಸವಿದು
ಚಿದಾನಂದನಾಗುವನಧಿಕಾರಿ
ಎಡಬಲ ನೋಡುತ ಎತ್ತತ್ತ ಒಲೆವುತ
ನಿಂತಿಹನವನು ಅನಧಿಕಾರಿ 5

220
ಅರಿತ ಗುರುಗಳನೀಗ ಹುಡುಕಿ ಹೊಂದು ಎಚ್ಚರಿಂದು

ಅರಿತ ಗುರುಗಳನೀಗ ಹುಡುಕಿ ಹೊಂದು ಎಚ್ಚರಿಂದು
ಮರುಳ ಗುರುಗಳನೀಗ ಸೇರೆ ನರಕ ತಪ್ಪದೋ ಪ

ಒಳ್ಳೆ ನಾವೆಯೊಳು ಕಲ್ಲು ಹಾಕಿ ನದಿಯನು ದಾಟಿಪುದು
ಕಲ್ಲಿಗೆ ಕಲ್ಲು ಕಟ್ಟಿ ಮುಂದೆ ನಡೆಯದು ಮುಳುಗಿಹೋಗುವುದೋ 1

ಜಾರುವವನ ಕಾಲು ಹಿಡಿಯೆ ಜಾರುತ ನೀನು ಬೀಳುವೆ
ಪೋರ ಗುರುವ ನಿಂತು ಸೇರೆ ಕೆಟ್ಟುಹೋಗುವೆ ಭವಕೆ ಸೇರುವೆ 2

ತಾನು ಮೂರ್ಖ ಮೂರ್ಖನ ಕೂಡಲು ಇಹುದು ಕೇಡು ಮುಂದೆ
ಜ್ಞಾನಿ ಚಿದಾನಂದ ಬಗಳೆ ಚರಣ ಹೊಂದೆ ಮುಕ್ತಿಯ ಅಂದೇ 3

221
ಅವಿವೇಕ ಸಂಸಾರ ಸುಖವ ಕೇಳ್ಮಗನೆ

ಅವಿವೇಕ ಸಂಸಾರ ಸುಖವ ಕೇಳ್ಮಗನೆ
ಭವವ ತಿರುಗುವನಿವನನಂತ ಜನ್ಮವ ಪ

ಬೆಳಗಾಗಲು ನಿತ್ಯಗಂಡಾತರವು ಎಂಬ
ತೊಳಲಾಡುತಿಹ ತಾನು ಹೊಟ್ಟೆಗಾಗಿ ಎಂಬ
ಬಲುಜನಕೆ ನಾನೀಗ ಎಲ್ಲಿತರಲೆಂಬ
ಕಳವುಗಳ ಮಾಡಿ ಕಾಲ್ಕೈಕೊಯಿಸಿಕೊಂಬ 1

ಅಳಿಯನೊಲ್ಲನು ಮಗಳ ಏನು ಗತಿ ಎನುವ
ಹೊಲೆ ಹೋದಳು ಹ್ಯಾಗೆ ಮಾಡಲಿ ಎನುವ
ಬಲು ದಿವಸವಾಯ್ತು ಸುತರಾಗಲಿಲ್ಲ ಎನುವ
ಹಲವು ದೇವರ ಮುಂದೆ ಕೆಡಹುವನು ತನುವ 2

ಗಂಡು ಮಕ್ಕಳು ಹುಟ್ಟೆ ಸಕ್ಕರೆಯ ಹಂಚುವನು
ಕೊಂಡೊಯ್ಯೆ ಯಮನು ಹಣೆಯ ಬಡುಕೊಳ್ಳುವನು
ಹೆಂಡತಿಗೆ ರೋಗ ಬರೆ ಮನೆ ಮುಳುಗಿತೆನ್ನುವನು
ಕಂಡ ವಿಷಯಕೆ ಬಾಯಿ ತೆರೆಯುತಿಹನು 3

ಗುರು ದೇವರ ದ್ರವ್ಯ ವಂಚಿಸುವವನಾಗಿ
ಪರಹಿತವ ದಾನ ತಿಳುವಳಿಕೆ ಎಲ್ಲ ನೀಗಿ
ಜಿರಲೆಯಂದದಿ ಜನಕೆ ಬೇಡದವನಾಗಿ
ಬರಿದೆ ಸಾಯುವ ನೀನು ಕಾಲವಶನಾಗಿ 4

ಜ್ಞಾನಿಗಳು ಮನೆಯನೆ ಹೊಗಬಾರದೆಂದು
ಏನು ನಡೆತೆಯು ಅವರದೀಗ ಎಂತೆಂದು
ನಾನು ಜಾಣನು ನನಗೆ ಅಧಿಕರಿಲ್ಲೆಂದು
ಜ್ಞಾನಿ ಚಿದಾನಂದನನು ಮರೆತೆ ಎಂದೆಂದು 5

222
ಅಸುರ ಪ್ರಕೃತಿಯ ದೈವ ಪ್ರಕೃತಿಯನೆರಡನು

ಅಸುರ ಪ್ರಕೃತಿಯ ದೈವ ಪ್ರಕೃತಿಯನೆರಡನು ನೀನೀಗ ಕೇಳು
ಅಸುರ ಪ್ರಕೃತಿಯಲಿ ಜನ್ಮವು ದೈವ ಪ್ರಕೃತಿಯಲಿ ಮುಕ್ತಿಯೆ ಎಂಬೆನು ಪ

ಕೃತ್ರಿಮ ಕಾಮವು ಮದಮತ್ನರವು ತಾನಿವು ಅಸುರ ಪ್ರಕೃತಿ
ಸತ್ಯವು ಶಾಂತವು ಶಮದಮವೆಂಬಿವು ತಾನಿವು ದೈವ ಪ್ರಕೃತಿ 1

ಬದ್ಧ ಅವಿದ್ಯೆಯು ಭ್ರಾಂತಿಯು ನಾಶವು ತಾನಿವು ಅಸುರ ಪ್ರಕೃತಿ
ಶ್ರದ್ಧೆಯು ಸೌಮ್ಯವು ಸಂತಸ ಸಾಕ್ಷಿಯು ತಾನಿವು ದೈವ ಪ್ರಕೃತಿ 2

ಕಪಟವು ಕಲ್ಮಷ ಕೃತ್ರಿಮ ಸಂಶಯ ತಾನಿವು ಅಸುರ ಪ್ರಕೃತಿ
ಅಪರೋಕ್ಷಾನುಭವ ಆತ್ಮ ವಿಚಾರವು ತಾನಿವು ದೈವ ಪ್ರಕೃತಿ 3

ದುಃಖ ದುರ್ಬೀಜವು ಕ್ರೂರ ದೃಷ್ಟಿಯು ತಾನಿವು ಅಸುರ ಪ್ರಕೃತಿ
ಸುಖ ಆನಂದವು ಅಂತರ ದೃಷ್ಟಿಯು ತಾನಿವು ದೈವ ಪ್ರಕೃತಿ 4

ಮರಣ ಜನನಕೆ ಅಜ್ಞಾನ ಕಾರಣ ತಾನಿದು ಅಸುರ ಪ್ರಕೃತಿ
ಅರಿತು ತನ್ನನು ಚಿದಾನಂದನಾಗುವುದು ತಾನಿದು ದೈವ ಪ್ರಕೃತಿ 5

223
ಅಹಂಕಾರದಿ ಮದ ಅಹಂಕಾರದಿ

ಅಹಂಕಾರದಿ ಮದ ಅಹಂಕಾರದಿ
ಅಹಂಕಾರದಿ ಹಿರಿಯರ ನಿಂದಿಸಿ
ಆವ ನರಕಕೆ ತೆರಳುತಿಹರೋ ಪ

ಕಂಡ ಕಂಡ ಮನೆಯ ತಿರುಗಿ ಕಾಲ್ಮುರಿ ನಾಯಿ ಬೆದಕಿದಂತೆ
ಹೆಂಡೆಯು ಜೊಂಡನು ಹಂದಿಯು ಬೆದಕಿದಂತೆ
ಭಂಡ ಮನುಜರು ತುಂಡು ಗುಲಾಮರು
ಭ್ರಷ್ಟ ಹೊಲೆಯರು ಬಾಳುಗೇಡಿಗಳು
ಪಂಡಿತ ಮಹಾತ್ಮರ ತಪ್ಪು ಹುಡುಕುವವರು 1

ಯವಲಕಾಡೊಳು ಕತ್ತೆ ಗೊರಕನು ಯತ್ನವಮಾಡಿ ಬೆದಕಿದಂತೆ
ನೆಲೆಯನರಸುತ ಪೊದೆಯೊಳಗನು ನರಿಯು ಬೆದಕಿದಂತೆ
ಕಲುಷಕರ್ಮರು ಕಾಳ ಮೂಳರು ಕಷ್ಟದುಷ್ಟರು
ಬಲು ಮಹಾತ್ಮರ ನಡೆಯ ತಪ್ಪು ಹುಡುಕುವರು 2

ನಿತ್ಯಾನಂದರ ನಿತ್ಯ ತೃಪ್ತರ ನಿತ್ಯ ಶುದ್ಧರ
ನಿತ್ಯಬುದ್ಧ ನಿತ್ಯ ನಿಶ್ಚಯ ನಿತ್ಯನಿರವಯ ನಿತ್ಯ ಆತ್ಮರ
ಪ್ರತ್ಯಗಾತ್ಮರ ಪರಬ್ರಹ್ಮರ ಪರಮ ಚಿದಾನಂದನ ಬೆರೆದವರ
ನಿತ್ಯ ಜೀವನ್ಮುಕ್ತರ ನಡತೆಯ ತಪ್ಪು ಹುಡುಕುವರು 3

224
ಆಡಿದ ನಾಟಕವ ಕಿರಾತ ಮದನ

ಆಡಿದ ನಾಟಕವ ಕಿರಾತ ಮದನ
ಗೂಢ ಚಿದಾನಂದನನರಿಯದ ನರ ಮೃಗವ ಪ

ಸ್ತ್ರೀಯ ದೇಹವು ಎಂಬ ಅಡವಿಯೊಳಗೆ
ಸ್ತ್ರೀಯ ಹುಚ್ಚೆಂಬ ಸಿಂಗಾಡಿ ತೆಗೆದು
ಮುಂಗುರುಳುಗಳು ಎಂಬ ಸಿಂಜನಿಯನೆ ಬಿಗಿದು
ಸ್ತ್ರೀ ದೃಷ್ಟಿಯೆಂದೆಂಬ ಸಿಳೀ ಮುಖವನೆ ಪಿಡಿದು 1

ಸಿರಿತುಳುಕುವ ಅವಯವದ ಸಿಡಿಬಲೆಯನೊಡ್ಡಿ
ಪರಿಯ ತಿಳಿಯದೆ ಬರುವ ಪುರುಷ ಮೃಗವ
ಕರುಣವಿಲ್ಲದೆ ಮಹಾ ಕೋಪದಿಂದಲಿ
ಎರಡು ಗಿರಿಯ ಸಂದಿಯಲಿರಿದು ಇರಿದು ಕೆಡುತಿಹ 2

ಇಂತು ಬೇಟೆಯನಾಡಿ ಎಲ್ಲ ಲೋಕವ ಕೆಡಹಿ
ಚಿಂತೆ ಮಾಡುವ ಚಿದಾನಂದ ಭಕ್ತರ ಮುಂದೆ ಸುಳಿಯಲಿಕಂಜಿ
ಮರೆಯದೆ ಶಿವನ ಗುರುತ ಅಂತಹುದು
ಇವರನೀಗ ಮುಟ್ಟಬಾರದು ಎಂದು 3

225
ಆಡುವನೀಶ್ವರ ಜೀವಪಗಡೆಯ ಕಾಯ

ಆಡುವನೀಶ್ವರ ಜೀವಪಗಡೆಯ ಕಾಯ
ಆಡುವನವರವರ ಕರ್ಮಾನುಸಾರ
ಅಡಿಯೆ ತನಗೆ ಬೇಸರವಾಗೆ ಕಟ್ಟುವ
ಆಡುವ ವಿವರವ ಹೇಳುವೆ ಕೇಳಿ ಪ

ಪ್ರಪಂಚ ಹಾಸಂಗಿ ಪ್ರಾರಬ್ಧ ಲತ್ತವು
ಪಾಪ ಅಜ್ಞಾನ ಲಿಂಗತನುವೆಂಬ ಚಿಟ್ಟೆಯು
ರೂಪು ನಾನಾ ಬಗೆಯ ಜೀವಕಾಯನೆ ಮಾಡಿ
ಭಾಪು ಭಳಿರೇ ಎಂದು ಕೊಂದು ಹೂಡಾಡುತ 1

ಒಂದಕೊಂದರಬಲ ಒಂದಕೆ ಜೋಡು ಬಲ
ಒಂದು ಜೋಡಿಗೆ ಒಂದು ಜೋಡು ಬಲ ಮಾಡಿ
ಒಂದರಿಂದೊಂದು ಕೊಂದು ಜೋಡಿಂದ ಜೋಡು ಕೊಂದು
ಅಂದು ಹುಟ್ಟಿ ಸಾಯುವುದಕ್ಕೆ ಕಡೆಯಿಲ್ಲದೇ 2

ಈ ಪರಿಯಲಾಡುತ್ತ ತನಗೆ ಬೇಸರ ಹುಟ್ಟಿ
ಪಾಪಿಗಳನೆಲ್ಲ ಪಾಪ ಚೀಲದಿ ಕಟ್ಟಿ
ಭೂಪ ಚಿದಾನಂದನು ಆದ ಈಶ್ವರ ತಾನು
ರೂಪು ವಿರೂಪಾದ ನಿದ್ದೆಯಲಿ ಮಲಗುವ 3

226
ಆತ್ಮನನು ತಿಳಿಯದುದೇ ಕೇಡು ಅವನ ಜನ್ಮವ ಸುಡು

ಆತ್ಮನನು ತಿಳಿಯದುದೇ ಕೇಡು ಅವನ ಜನ್ಮವ ಸುಡು
ಆತ್ಮನನು ಅರಿಯದುದೆ ಪಾಪ ಅಹುದು ಜನ್ಮನಿರೂಪ ಪ

ಸರ್ವಶಾಸ್ತ್ರವನೋದಿ ಸಕಲರೊಳಗೆ ವಾದಿ
ಸರ್ವವನೇಕವ ಕೂಡಿಟ್ಟು ಘನ ಅಹಂಕಾರದಿ ಕೆಟ್ಟು 1
ಕೋಪ ತಾಪವ ಗಳಿಸಿ ಕೊನೆಬನೆ ಅನುಗೊಳಿಸಿ
ವ್ಯಾಪಾರ ಸ್ತ್ರೀಯರ ಚಿಂತೆ ಊರ ಶ್ವಾನನು ಎಂಬಂತೆ 2
ಹಿರಿಯರ ನಿಂದೆಯ ಮಾಡಿ ಹೀನತ್ವದಿ ಹಾಡಿ
ಗುರು ಚಿದಾನಂದ ಕಾಣ ಪಾಪರಾಶಿಯಲಿ ಕೂಡಿ 3

227
ಆರಿಗಾರು ಇಲ್ಲವಯ್ಯ ಅರಿಗಾರು ಇಲ್ಲವಯ್ಯ

ಆರಿಗಾರು ಇಲ್ಲವಯ್ಯ ಅರಿಗಾರು ಇಲ್ಲವಯ್ಯ ಪ
ಮಡದಿಯೆಂಬಳು ಯಾಕೆ
ಬಿಡದೆ ಪಂಕ್ತಿಯ ಊಟ ಎಂಬ ಭಾವ ಮೈದುನನೇಕೆ
ಪಡದ ತಂದೆ ತಾಯಿ ಏಕೆ ಪಡಿತತ್ವ ಯಾಕೆ
ಬಡಿಯುತ ಯಮನೀಗ ಒಯ್ಯೆ ಬಿಡಿಸಿಕೊಂಬರಿಲ್ಲ 1

ಅಣ್ಣತಮ್ಮನು ಯಾಕೆ ಅಳಿಯನು ಯಾಕೆ
ಬಣ್ಣದ ಬಾಳು ತಾನೇಕೆ ಬಂಧುಗಳದೇಕೆ
ಚಿನ್ನಕೊಪ್ಪರಿಗೆ ಯಾಕೆ ಚಿತ್ರಮನೆಯಾಕೆ
ಕಣ್ಣ ಕಟ್ಟಿ ಕಾಲನೆಳೆಯ ಕಾವರಾರು ಇಲ್ಲವಯ್ಯ 2

ಆರ ನಂಬಿದರು ನಿನ್ನಕಡೆ ಹಾಯಿಪರಿಲ್ಲ
ನೂರು ಬಾರಿ ತಿಳಿದು ನೋಡು ನಿನ್ನೊಳಗೆಲ್ಲ
ಧೀಧೀ ಚಿದಾನಂದ ಹೊಂದೆಯುಕ್ತಿಯಹುದೆಲ್ಲ
ಬಾರೆ ಜನನ ಮರಣಕೆ ಸಂದೇಹವಿಲ್ಲ 3

228
ಆಶ್ರಮ ಧರ್ಮ ನಾಲ್ಕು ಉಪದ್ರ

ಆಶ್ರಮ ಧರ್ಮ ನಾಲ್ಕು ಉಪದ್ರ
ಆಶ್ರಮ ಧರ್ಮ ಬಿಡೆ ಅವ ಪಟ್ಟ ಬದ್ಧ ಪ

ಬ್ರಹ್ಮಚಾರಿಯು ಅಗೆ ಕರ್ಮದ ಉಪದ್ರ
ಬ್ರಹ್ಮಚರ್ಯವು ಹೋಗೆ ಸ್ತ್ರೀಯ ಉಪದ್ರ
ಸುಮ್ಮಗೆ ವಾನಪ್ರಸ್ಥನಾಗೆ ಬೆಂಕಿ ಉಪದ್ರ
ಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ 1

ಗೃಹಸ್ಥನಾಗೆ ವ್ರತಗಳ ಉಪದ್ರ
ಸತತ ಸಂಧ್ಯಾ ಜಪತಪದ ಉಪದ್ರ
ಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರ
ಸತತ ಶುಚಿ ಅಶುಚಿ ಎಂಬುದರ ಉಪದ್ರ 2

ಆವ ಆಶ್ರಮದಲಿರೆ ಅವುದೊಂದು ಉಪದ್ರ
ಆವ ಆಶ್ರಮದಿ ಉಪದ್ರವೇ ಅದು ಹೋಗದು
ಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹ
ದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ 3

229
ಆಸೆ ಎಂಬೋ ನದಿ ಆಸೆ ಎಂಬೋ ನದಿ

ಆಸೆ ಎಂಬೋ ನದಿ ಆಸೆ ಎಂಬೋ ನದಿ
ಆಸೆ ಎಂಬೋ ನದಿಯಿರೆ ಮಹಾ-
ತೃಷೆಯ ಆರು ದಾಟಲಳವಲ್ಲ ಪ

ಮನೋರಥ ನೀರು ಮನೋರಥ ನೀರು
ಮನೋರಥ ನೀರು ಇರೆ ಮಹಾತೃಷೆ ಅಲೆಗಳಯ್ಯ 1

ಮೋಹವೆಂಬೋ ಸುಳಿ ಮೋಹವೆಂಬೋ ಸುಳಿ
ಮೋಹವೆಂಬಾ ಸುಳಿಯಿರೆ ಮಹಾತೊರೆ ಹರಿಯಯ್ಯಾ 2

ಸತಿ ಎಂಬ ಮೊಸಳೆ ಸತಿ ಎಂಬಾ ಮೊಸಳೆ
ಸತಿ ಎಂಬ ಮೊಸಳೆಯಿರೆ ಸುತರೆಂಬರು ಏಡಿಗಳಯ್ಯ 3

ಬಂಧುಗಳು ಗ್ರಹ ಬಂಧುಗಳು ಗ್ರಹ
ಬಂಧುಗಳು ಗ್ರಹ ಇರೆ ಬಡಿದಾಟ ನೀರು ಗುಳ್ಳೆಯಯ್ಯ 4

ಗುರು ದಯವೇ ನಾವೆ ಗುರುದಯವೇ ನಾವೆ
ಗುರುದಯವೆ ನಾವೆಯಿರೆ ಗುರು ಚಿದಾನಂದ ಸೇರಬೇಕಯ್ಯ 5

230
ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕುಪರಬೊಮ್ಮ

ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕು ಪರಬೊಮ್ಮ ಪ
ಮನುಜ ಜನ್ಮಕೆ ಬಂದು ಮರೆತರೆ ಕಷ್ಟವು ಮುಂದು
ಇನಿತು ವಿಚಾರವಿಲ್ಲ ಇದುವೆ ವಿವೇಕವದಲ್ಲ 1

ಕೊನಬುಗಳೆಲ್ಲವ ಬಿಡಿರೋ ಕೋಪವನೆಲ್ಲವ ಸುಡಿರೋ
ತನು ಸುಖವಾಗಿಹುದಲ್ಲ ತಪ್ಪಿದರೆ ಬಳಿಕೆಲ್ಲ 2

ಭ್ರಮೆಯೆಲ್ಲವ ಬಿಡಬೇಕು ಬಂಧನ ಹರಿಯಲು ಬೇಕು
ನಮಗಿದು ನೀತಿಯಿದಲ್ಲ ನಾಚಿಕೆ ಕಿಂಚಿತ್ತು ಇಲ್ಲ 3

ತನ್ನ ತಿಳಿದರೆ ತಾ ಬಂಧು ತನ್ನ ಮರೆತರೆ ಶತ್ರುವಹ
ಸನ್ನುತವಚನವಿದೀಗ ಸಾಧಿಸುವುದು ಬಹುಬೇಗ 4

ಚೆನ್ನಾಗಿ ಶ್ರವಣದ ಕೇಳಿ ಚಿತ್ರ ಶುದ್ಧಿಯ ತಾಳಿ
ಚಿನ್ಮಯನನು ನೀವು ಧರಿಸಿ ಚಿದಾನಂದ ತಾನೆಂದು ಸ್ಮರಿಸಿ 5

231
ಉಪವಾಸ ಬೀಳುವುದ್ಯಾಕೋ ಮನುಜ

ಉಪವಾಸ ಬೀಳುವುದ್ಯಾಕೋ ಮನುಜ
ಉಪವಾಸ ಬೀಳುವುದ್ಯಾಕೋ
ಉಪವಾಸ ಬೀಳಲಿಕೆ ನಿನಗೆ ಗ್ರಹಚಾರ ಸಾಲದೆ ಬೇಕೋ ಪ

ಅಂಗದಿ ತತ್ವಾಭಿಮಾನವು ಇರಲಿಕೆ ಆಹಾರವರ್ಜಿಪುದ್ಯಾಕೋ
ಮಂದ ಮತಿಗಳು ಕೂಡಿಯೆ ನೀನು ಮಂದಮತಿಯಾದೆ ಯಾಕೋ 1

ದೇಹದಿ ವೈಶ್ವಾನರನಿರಲಿಕೆ ದೇಹವ ದಂಡಿಪುದ್ಯಾಕೋ
ಮಹಾವ್ರತವೆಂದು ಮೊಸರ ಬಿಟ್ಟು ಮಣ್ಣನೆ ಮುಕ್ಕುವಿಯಾಕೋ 2

ನಿತ್ಯಾತ್ಮನು ಚಿದಾನಂದ ತಾನಿರೆ ನಿರಾಹಾರವದ್ಯಾಕೋ
ಮತ್ತೇಕಾದಶಿ ಶಿವರಾತ್ರೆನ್ನುತ ಬಿಣ್ಣನೆ ಬಳಲುವಿಯಾಕೋ 3

232
ಎಂತು ಪೇಳ್ವುದು ಇವನಿಗೆ ಎಂತು ಪೇಳ್ವುದು ಜ್ಞಾನ

ಎಂತು ಪೇಳ್ವುದು ಇವನಿಗೆ ಎಂತು ಪೇಳ್ವುದು ಜ್ಞಾನ
ಎಂತು ಗಂಗೆಯಲಿ ಮುಳುಗಿದರೇನು ಶುಚಿಯಹುದೇ ಶ್ವಾನ ಪ

ಹೆಂಡತಿ ಉಟ್ಟು ತಿರುಗಾಡುವುದು ಹರಕು ಹರಕು ಚಿಂದಿ
ಮಿಂಡಿತಿ ಉಟ್ಟು ಮೆರೆಯುವುದು ಮಿಸುನಿಯ ಮೇಲ್ಬಂದಿ 1

ಹೆಂಡತಿಯದು ತಾ ಕೊಳೆ ತುಂಬಿದ ಮಂಡೆ
ಮಿಂಡತಿಯದು ಚೌರಿ ರಾಗಟೆ ಗೊಂಡೆ 2

ಇದ್ದಲಿಯನು ಹಾಲೊಳ್ ತೊಳೆದರೆ ಶುಭ್ರವು ತಾನಹುದೆ
ಶುದ್ಧ ಚಿದಾನಂದನ ಬೋಧೆಯಲಿ ದುರ್ಬುದ್ಧಿಗೆ ಬುದ್ಧಿಯು ಬಹುದೆ 3

233
ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆ

ಎಚ್ಚರ ಹೇಳುವೆ ನಾನೀಗ ನಿನಗೆ ಎಚ್ಚರಿಕೆಚ್ಚರಿಕೆ
ಸಚ್ಚಿದಾನಂದನೆ ನೀನೆಂದು ತಿಳಿ ನಿನ್ನ ಎಚ್ಚರಿಕೆಚ್ಚರಿಕೆ ಪ

ಈಷಣವೆಂದೆಂಬ ಕಾಡಿನೊಳಗೆ ಹೊಕ್ಕಿ ಎಚ್ಚರಿಕೆಚ್ಚರಿಕೆ
ದೋಷಕಾರಿಗಳು ಇಂದ್ರಿಯನಾಯ್ಗಳು ಎಳೆದಾವು ಎಚ್ಚರಿಕೆಚ್ಚರಿಕೆ 1

ಅಷ್ಟಮದವೆಂಬ ಆನೆ ಕೈಗೆ ಸಿಕ್ಕಿ ಎಚ್ಚರಿಕೆಚ್ಚರಿಕೆ
ದುಷ್ಟ ಪಂಚಕ್ಲೇಶದ ಪೊದೆಗೆ ಸಿಲುಕೀಯೆ ಎಚ್ಚರಿಕೆಚ್ಚರಿಕೆ 2

ವ್ಯಸನಗಳೆಂಬ ಕುದುರೆಯ ಕಾಲೊಳಾದೀಯೆ ಎಚ್ಚರಿಕೆಚ್ಚರಿಕೆ
ದುಶ್ಮನರಾರ್ವರ ಕಣ್ಣಿಗೆ ಬಿದ್ದೀಯೆ ಎಚ್ಚರಿಕೆಚ್ಚರಿಕೆ 3

ತಾಪತ್ರಯದ ಹಳ್ಳದಿ ಹರಿದುಹೋದೀಯೆ ಎಚ್ಚರಿಕೆಚ್ಚರಿಕೆ
ಪಾಪವೆಂಟು ಪಾಶವೆಂಬ ಉರುಲಿಗೆ ತಗುಲೀಯೆ ಎಚ್ಚರಿಕೆಚ್ಚರಿಕೆ 4

ಸಂಸಾರ ನಂಬಲು ಕೆಟ್ಟುಹೋಗುವೆ ಎಚ್ಚರಿಕೆಚ್ಚರಿಕೆ
ಹಂಸ ಚಿದಾನಂದ ಗುರುಹೊಂದೆ ಕಡೆಹಾಯುವೆ ಎಚ್ಚರಿಕೆಚ್ಚರಿಕೆ 5

234
ಎನ್ನ ಮಾತನು ಕೇಳೋ ತಂದೆ

ಎನ್ನ ಮಾತನು ಕೇಳೋ ತಂದೆ ಎರವಾಗದಿರು ನೀನೆಂದೆ
ನಿನ್ನ ಕುಲವನುದ್ಧರಿಸೆಂದೆ ನೀನು ಸುಪುತ್ರನಾಗೆಂದೆ ಪ

ಸುಳ್ಳನು ಬಿಡುಎಂದೆ ಶರಗೊಡ್ಡಿ ಕೊಂಬೆನು ಎಂದೆ
ಕಳ್ಳತನವು ಬೇಡವೆಂದು ಕಾಲಿಗೆ ಬೀಳುವೆ ತಂದೆ 1

ನಾಲಿಗೆ ಸಂಬಾಳಿಸೆಂದೆ ನಾರಿಯ ನೆಚ್ಚದಿರೆಂದೆ
ಜಾಲವನೆ ತಳೆ ಎಂದೆ ಜೋಕೆಯ ಸಾಧಿಸು ಎಂದೆ 2

ವಂಚನೆ ಬೇಡವು ಎಂದೆ ಭಾಷೆಯ ತಪ್ಪದಿರೆಂದೆ
ಕಿಂಚನು ಆಗದಿರೆಂದೆ ಕುಮಂತ್ರ ನೆನಿಸದಿರೆಂದೆ 3

ಸಂಸಾರ ನಂಬದಿರೆಂದೆ ಸ್ವಪ್ನದ ತೋರಿಕೆ ಎಂದೆ
ಧ್ವಂಸವು ಎಲ್ಲವು ಎಂದೆ ಯಾವುದು ಸತ್ಯವಲ್ಲೆಂದೆ 4

ಕನಕದ ಮಾತಲ್ಲವೆಂದೆ ಕಾಲಗೆ ತುತ್ತಾಗದಿರೆಂದೆ
ಚಿದಾನಂದನ ಹೊಂದು ಎಂದೆ ಚಿತ್ತಾರ ಮಶಿನುಂಗಿತೆಂದೆ 5

235
ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇ

ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇ
ಎನ್ನ ಮನವೆಂಬ ಗಂಡನ ಪರಿಯ ಪೇಳುವೆನೆ ಪ

ಅಡಕಿಲಿಗಳನೆಲ್ಲವ ಹುಡುಕುವನೇ
ಅಡುಗೆಯ ಮಡಕೆಯನೆಲ್ಲ ಒಡೆದನೇ
ಗುಡುಗುಟ್ಟುತ ಯಾವಾಗಲೂ ಇಹನೇ
ಗುಡ್ಡವನೇರುವನೇ 1

ಮುನಿಸಿಕೊಂಡು ಮೇಲಟ್ಟದಿ ಕೂರುವನೇ
ಘನ ಹುಟ್ಟನೆ ಮುಂದಿಹನೇ
ಮನೆಯಲೆಲ್ಲರ ಬಡಿವನೇ
ಮತವನು ಕೆಡಿಸಿದನೆ 2

ದುಡಿವ ಕೋಣನನು ಕೊಂದನೇ
ಕಡಿದುಬಿಟ್ಟನೆ ಕಾಯುವ ನಾಯನು
ಪುಡಿ ಮಾಡಿದ ಕಟ್ಟುವ ಹಗ್ಗವನೇ
ಪಂಕ್ತಿಯ ಸೇರದಿಹನೆ 3

ಒತ್ತೆಯ ಒಡವೆಯನೆ ತಿಂದನೇ
ಬತ್ತಿಯ ಹಿರಿದಾಗ ಚಾಚುನವೇ
ಕಿತ್ತು ಒಗದನೇ ದೇವರನೇ
ಕಡಿದನೇ ಮರವನ್ನೇ 4

ತ್ಯಜಿಸಿದ ನೆಚ್ಚಿದ ಮಡದಿಯನೇ
ತ್ಯಜಿಸಿದ ಮೋಹದ ಮನೆಯನ್ನೇ
ಭಜಿಸಿದ ಚಿದಾನಂದ ಗುರುವನ್ನೇ
ನಿಜದಲಿ ಬೆರೆತನು ಅವರನ್ನೇ 5

236
ಎರಡು ದಿನ ಎರಡು ದಿನ ಸಂಸಾರ

ಎರಡು ದಿನ ಎರಡು ದಿನ ಸಂಸಾರ ಎರಡು ದಿನ
ಎರಡು ದಿನವೆನ್ನದೇ ಕಡುತಲಿಹೆ ಮನುಜ ಪ

ಪೋರತನದಿ ಕುಣಿಯುವುದು ಎರಡು ದಿನ
ನಾರಿ ಹಿಂದೆ ತಿರುಗುವುದು ತಾನು ಎರಡು ದಿನ
ಸೇರಿ ಮನೆಯಗ್ಗಳಿಕೆ ಮೂಡುವುದು ತಾನು ಎರಡು ದಿನ
ಜಾರಿ ಸತ್ಯವು ನಡುಗುವುದು ತಲೆಯು ಎರಡು ದಿನ 1

ಸಿರಿಯು ಬಂದು ಹಿಂದಕೆ ಸೆಲೆಯುವುದು ತಾನು ಎರಡುದಿನ
ದೊರೆತನವು ದೌಲತ್ತು ತಾನದು ಎರಡು ದಿನ
ಹಿರಿಯ ಆಕೆಯು ಮನೆಯು ಸೇರಿ ಬಳಲುವುದು ಎರಡು ದಿನ
ತೆರಳುವುದು ದೊಡ್ಡ ಯಾತ್ರೆಗೆ ತಾನು ಎರಡು ದಿನ 2

ಇಂತು ಎನಿತು ವ್ಯರ್ಥವಾಗಿ ಹೋದವೀಗ ದಿನಗಳು
ಇಂತು ಎಂತು ಜನ್ಮದಲಿ ತಿರುಗುತಿರುವೆ ಯುಗಗಳು
ಚಿಂತೆಯಿಕ ಚಿದಾನಂದ ಬಗಳೆ ಹೊಂದು ನೀನು
ಅರಿತು ನಿನ್ನ ಖೂನ ತಿಳಿದು ಬಹುದು ಬ್ರಹ್ಮಜ್ಞಾನ 3

237
ಎಲ್ಲಿ ಗತಿಯು ನಾರಿಯ ಕೂಡಿದವಗೆ

ಎಲ್ಲಿ ಗತಿಯು ನಾರಿಯ ಕೂಡಿದವಗೆ
ಎಲ್ಲಿ ಗತಿಯು ತಿಳಿಯೋ
ಬಲ್ಲವನಾದರೆ ಸತಿಯ ಬಿಟ್ಟು ಸದ್ಗುರು
ಹೊಂದಲು ಮನೆಯು

ಮೊದಲೇ ಕೋತಿಯು ಮದ್ಯವನು
ಕುಡಿಸೆ ಮನೆಗೆ ಬಹುದೇ
ಅದರ ತೆರೆದಿ ಪಾಮರನಿಗೆ ಸ್ತ್ರೀಯ
ಕೂಡಿಸಬಹುದೇ 1

ಕಣ್ಣೆಯಿಲ್ಲದವನೀಗ
ಕುಣಿಯ ಬೀಳುವನಲ್ಲ
ಕಣ್ಣು ಎರಡು ಇದ್ದವನು
ಬೀಳೆ ಪಾಪವಲ್ಲವೆ 2

ಮುಕ್ತಿ ಬೇಕಾದರೆ ತನಗೆ ಸು-
ದತಿಯ ಬಿಡಬೇಕು
ಶಕ್ತಿ ಚಿದಾನಂದ ಶುದ್ಧ ಬ್ರಹ್ಮವ
ನೀತ ಕೂಡಲಿಬೇಕು 3

238
ಎರಿ ಮುಂಡೆ ಇವನೆರಿ ಮುಂಡೆ ಏನು

ಎರಿ ಮುಂಡೆ ಇವನೆರಿ ಮುಂಡೆ ಏನು
ಅರಿಯದೆ ಒದರುವ ಎರಿಮುಂಡೆ ಪ

ತನ್ನ ನಿಜವ ತಾನು ಅರಿಯದೆ ತತ್ವದ
ಕುನ್ನಿಯಂತೆ ಒದರುವ ಎರಿಮುಂಡೆ
ಭಿನ್ನ ಬುದ್ಧಿಯಲಿದ್ದು ನಾ ಬ್ರಹ್ಮವೆಂಬುದನು
ಚೆನ್ನಾಗಿ ಅರಿಯದ ಎರಿಮುಂಡೆ 1

ಯೋಗವ ತಿಳಿಯದೆ ಯೋಗವ ಹಳಿವನು
ಈಗ ಹೇಳಿವನೀಗ ಎರಿಮುಂಡೆ
ಆನಿಹೆ ಬ್ರಹ್ಮವು ನಾನೆಂದು ಎತ್ತೆತ್ತೆ
ನುಡಿವನು ಎರಿಮುಂಡೆ 2

ಕೋಟಿ ಸೂರ್ಯರ ತೇಜ ಪಾಟಿಸಿ ಕಾಣದೆ
ಬೂಟಕ ನುಡಿದವ ಎರಿಮುಂಡೆ
ದಾಟಿ ಸಹಸ್ರಾರ ಬ್ರಹ್ಮರಂಧ್ರದ ನಾಳ
ಕೇಳದ ನರನಾಗ ಎರಿಮುಂಡೆ 3

ಮಾತರಿಯದೆ ಜ್ಞಾನ ನುಡಿಯಿದ್ದುದ
ಕಳೆದು ಮಣ್ಣು ಹೋಯ್ಯೆಂಬುವ ಎರಿಮುಂಡೆ
ಮಾತಿಲಿ ಬ್ರಹ್ಮವು ಆಗಬೇಕಾದರೆ
ಮಹಾಸಾಧನವೇಕೆ ಎರಿಮುಂಡೆ 4

ಒಂದು ಹೋಗಲಿಲ್ಲ ಒಂದೇ ನಾನೆಂಚಿನು
ಇಂದು ಕೇಳುವನೀಗ ಎರಿಮುಂಡೆ
ಸುಂದರ ಚಿದಾನಂದ ಸ್ವರೂಪ ತಿಳಿ
ಯದೆ ಸುಲಭ ಎಂದೆಂಬುವ ಎರಿಮುಂಡೆ 5

239
ಎಲೆ ಕೊರಡೆ ಕೇಳೆಲೆ ಕೊರಡೆ

ಎಲೆ ಕೊರಡೆ ಕೇಳೆಲೆ ಕೊರಡೆ
ಎಳ್ಳಷ್ಟು ತೊಡಕಿಲ್ಲೆಲೆ ಕೊರಡೆ ಪ

ರೋಗಿಗೆ ಔಷಧಿ ಕಹಿ ಕೊರಡೆ
ರೋಗ ನಿವಾರಕ ತಿಳಿ ಕೊರಡೆ
ಎನ್ನ ಮಾತುಗಳು ಕಹಿ ಕೊರಡೆ
ಮನ ಅಮೃತವು ತಿಳಿ ಕೊರಡೆ 1

ಅಂಗವು ಎಂತಾಯಿತು ಎಲೆ ಕೊರಡೆ
ಅಧಿಪತಿಗಳನರಿನೀ ಎಲೆ ಕೊರಡೆ
ಅಂಗವ ಧರಿಸಿಯೆ ಬೆಳೆಗುವವನ ತಿಳಿ
ಅಳಬೇಡಲೆ ಮಾನವ ಕೊರಡೆ 2

ಎಲ್ಲಿಂದ ಬಂದೆಯೋ ಎಲೆ ಕೊರಡೆ
ಎಲ್ಲಿಗೆ ಹೋಗುವೆ ಎಲೆ ಕೊರಡೆ
ಎಲ್ಲಿಯ ಕುಲ ನಿನ್ನ ನಾಮವದಾವುದು
ಎಗರಾಡಲು ಬೇಡಲೆ ಕೊರಡೆ 3

ಸತಿ ಎಷ್ಟಾದರು ಎಲೆ ಕೊರಡೆ
ಸುತರೆಷ್ಟಾದರು ಎಲೆ ಕೊರಡೆ
ಅತಿ ದೇಹವು ಮನೆ ಎಷ್ಟಾದವು ತಿಳಿ
ಹಿತರೆಲ್ಲಿಹರೊ ಎಲೆ ಕೊರಡೆ 4

ಕರ್ಮೋಪಾಧಿಲಿ ಎಲೆ ಕೊರಡೆ
ಕರ್ಮವು ಸತ್ತಿತು ಎಲೆ ಕೊರಡೆ
ಓರ್ವ ಚಿದಾನಂದ ನೀನೆಂದು ಕಾಣಲು
ಜಾರುವುದದು ಭವ ತಿಳಿ ಕೊರಡೆ 5

240
ಎಲ್ಲಿ ಮತಿಯು ಎಲ್ಲಿ ಗತಿಯು

ಎಲ್ಲಿ ಮತಿಯು ಎಲ್ಲಿ ಗತಿಯು ಎಲ್ಲನೀಗ ಹುಸಿಯು ಕಂಡ್ಯ
ಎಲ್ಲವಿಹುದು ಬಹುದು ಬಹಳ ಸಂಸ್ಕಾರಿಯೊಬ್ಬಗೆ ಪ

ಭಕ್ತಿಯನ್ನು ಮಾಡುವರು ಹಲವು ಮಂದಿ ನೋಡಲಿಕೆ
ಭಕ್ತಿಯಿಹುದು ತಾನೀಗ ಅದರೊಳೊಬ್ಬಗೆ
ಮುಕ್ತಿಮಾತ ಕೇಳುವರು ಮುಗಿದ ಕೈಗಳಿಂದ
ಮುಕ್ತಿ ಮೇಲೆ ಚಿತ್ತವಿಹುದು ಅದರೊಳೊಬ್ಬಗೆ 1

ಕಣ್ಣುಗಳ ಮುಚ್ಚಿಕೊಂಡು ನೋಡವರು ಆತ್ಮನ
ಕಣ್ಣು ಕುಳಿತು ಕಾಣಬಹುದದರೊಳೊಬ್ಬಗೆ
ಹುಣ್ಣಿಮೆಯ ಬೆಳಕಿನಂತೆ ಹರಹಿಯಿಹುದು ಎಂಬರು
ತಣ್ಣನೆಯ ಕಳೆಯು ತೋರುವುದದರೊಳೊಬ್ಬಗೆ 2

ಜ್ಞಾನಗಳ ಹೇಳುವರು ಜ್ಞಾನಿಗಳೊ ಎಂಬಂತೆ
ಜ್ಞಾನ ನಿಶ್ಚಯಹುದು ತಾನು ಅದರೊಳೊಬ್ಬಗೆ
ಮಾನನಿಧಿ ಚಿದಾನಂದ ತಾನೀಗ ಅದರೊಳೊಬ್ಬಗೆ
ತಾನೆ ತಾನಾದ ನಿಜವು ಅದರೊಳೊಬ್ಬಗೆ 3

241
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇ

ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇ
ಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ

ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆ
ತೃಪೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆ
ಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆ
ಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ 1

ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆ
ಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆ
ಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2

ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದ
ಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆ
ಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3

ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ
ವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆ
ಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆ
ಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ 4

ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆ
ವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆ
ಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆ
ಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5

242
ಏನು ತಿಳಿವುದೋ ಮೂರ್ಖರಿಗೇನು ತಿಳುವುದೋ

ಏನು ತಿಳಿವುದೋ ಮೂರ್ಖರಿಗೇನು ತಿಳುವುದೋ
ತಾನೇ ತಾನಾದ ತತ್ವವ ಹೇಳಲು ತನ್ನ ತಲೆಯನು ತೂಗುತಿರುವಗೆ ಪ

ಮಂಕರಿ ಹೊರುವ ಕೋಣನ ಮುಂದೇ ಮಹಾವೀಣೆಯನು ಹಿಡಿದು
ಕಿಂಕಿಣಿ ಕಿಣಿ ಕಿಣಿ ಎಂದು ಬಾರಿಸೆ ತಿಳಿಯುವುದೇ
ಓಂಕಾರದ ಮಹಿಮೆಯನು ಒಲಿದು ಹಿರಿಯರು ಹೇಳುತಿರಲು
ತಂಕದಿ ಕೇಳುತ ಹೋ ಹೋ ಎಂದು ತಲೆಯನು ತೂಗುವರಿಗೆ 1

ಮೂಟೆಯ ಹೊರುವ ಕತ್ತೆಯ ಮೂಗಿಗೆ ಮಘ ಮಘಿಹ ಕಸ್ತೂರಿಯ ಹಚ್ಚಲು
ಗಾಳಿಯ ಪರಿಮಳ ಸುಗಂಧಗಳ ಅದು ತಿಳಿಯುವುದೇ
ಲಾಲಿಪ ಬ್ರಹ್ಮಾನಂದದ ಲಕ್ಷಣ ಲಕ್ಷ್ಯವ ಹಿರಿಯರು ಹೇಳುತಿರಲು ಕೇಳಿದಾಗಲೇ
ಹೋ ಹೋ ಎನ್ನುತ ತಲೆಯ ತೂಗುವವರಿಗೆ 2

ಸತ್ಯಾನಂದರೆ ಅವರೇ ಗುರುಗಳು ಸತ್ಯ ಸಂಧರು ಅವರೇ ಭಕ್ತರು
ಸತ್ಯ ಜ್ಞಾನವ ತಿಳಿಯಲಿಕೆ ಅವರೇ ಯೋಗ್ಯರು
ಸತ್ಯವಸ್ತು ಚಿದಾನಂದ ಸಾಕ್ಷಾತ್ ರೂಪವೇ ಹೇಳುತಿರಲು
ಚಿತ್ತದಿ ಕೇಳು ಹೋ ಹೋ ಎಂದು ತಲೆಯ ತೂಗುವರಿಗೆ 3

243
ಏನು ನಡತೆಯೋ ಏಕೆ ಕೆಡುವೆಯೋ

ಏನು ನಡತೆಯೋ ಏಕೆ ಕೆಡುವೆಯೋ
ಮನುಜ ಜನ್ಮವನ್ನು ವ್ಯರ್ಥಮಾಡಿಬಿಟ್ಟೆ ಮೂರ್ಖ ಪ

ಹೆಂಡತಿ ಕದಪನು ನೀನು ಸವರಿ ನೋಡುವಂತೆ ಮೊನ್ನೆ
ಕೊಂಡ ಸಾಲಗ್ರಾಮವನ್ನು ಮುಟ್ಟಬಾರದೇ ತಡಹಬಾರದೇ
ರಂಡೆಯರ ವಿಷಯವಾಗಿ ಕಾಲಿಗೆರಗಿದಂತೆ ತತ್ತ್ವ
ಪಂಡಿತರ ಚರಣಕ್ಕೆ ಬೀಳಬಾರದೆ ಹೊರಳಬಾರದೆ
ದುಂಡು ಮುತ್ತಿನ ಸರವ ಸತಿಗೆ ಕೊಂಡು ಹಾಕಿದಂತೆ
ಪಿಂಡಾಂಡ ವಿವರಿಪರಿಗೆ ವಂದನೆ ಮಾಡಬಾರದೇ
ಭಂಡ ಮಾತನು ನಾರಿ ಕಿವಿಯ ಖಂಡಿ ಯೊಳು ಪೇಳ್ದ ತೆರದಿ
ಸುವಚನ ಸಾಧುಗಳೊಳು ಉಸುರಬಾರದೇ ಅರುಹಬಾರದೆ 1

ನನ್ನ ಮಕ್ಕಳೆಂದು ನೀನು ಬನ್ನಬಟ್ಟ ತೆರದಿ ಇತರ
ಸಣ್ಣವರ ಮೇಲೆ ನೀನು ಕರಗಬಾರದೆ ತೋರಬಾರದೆ
ಹೊನ್ನು ಹಣವು ಬಿದ್ದುಯಿರೆ ಹೆಂಟೆಯೆನುತಲಾಗ ಎರಡು
ಕಣ್ಣು ತೆರೆದು ದೃಷ್ಟಿಸಿ ನೋಡಬಾರದೆ ಕಾಣಬಾರದೆ
ಮನ್ನಣೆ ಎಂಬುದನ್ನು ಸೂಕರನ ವಿಷೈ ಸಮನು
ಎನ್ನುತಲಿ ಚಿತ್ತದಲ್ಲಿ ಎಣಿಸಬಾರದೆ ಹತ್ತಬಾರದೆ
ಉನ್ನತದ ಜೀವರಾಶಿ ಎಲ್ಲ ಒಬ್ಬ ಶಿವನು ಎಂದು
ಭಿನ್ನ ಕಳೆದು ಆತ್ಮ ಸುಖದಿ ಮುಳುಗಬಾರದೆ ಬೆಳಗಬಾರದೆ 2

ನಾನಾ ಜನ್ಮ ಜನ್ಮ ತಿರುಗಿ ನರನ ಜನುಮ ಬಂದು
ನಾನಾರೋ ಎಂದು ನಿನ್ನ ತಿಳಿಯಬಾರದೆ ಅರಿಯಬಾರದೆ
ಜ್ಞಾನಿಗಳ ಮುಖಗಳಿಂದ ನಿನ್ನ ಒಳಗೆ ನಿನ್ನ ಕಂಡು
ನಾನೆ ಬ್ರಹ್ಮವೆಂದು ನಿಜವ ಕಾಣಬಾರದೆ ಕೂಡಬಾರದೆ
ನಾನಾಧ್ವನಿಯು ನಾನಾಕಳೆಯು ದೇಹದೊಳು ತೋರುತಿರಲು
ಆನೆಯಂತೆ ನೀನು ಈಗ ತೊನೆಯಬಾರದೆ ತೂಗಬಾರದೆ
ತಾನಾದ ಚಿದಾನಂದ ಗುರುವು ತಾನೆ ತಾನೆಯಾಗಿ
ನಾನು ನೀನು ಎಂಬುದನ್ನು ತಿಳಿಯಬಾರದೆ ಕಳೆಯಬಾರದೆ 3

244
ಒರೆವೆ ಹಿತವನೆ ಕೇಳು ಎಲೆ ಮರುಳ ಮೂಢಾ

ಒರೆವೆ ಹಿತವನೆ ಕೇಳು ಎಲೆ ಮರುಳ ಮೂಢಾ
ಒರೆವೆ ಹಿತವನ ಕೇಳೊ
ಇರುವೆನು ಎಲ್ಲಿ ಎಂದೆನ್ನುವೆ ಏಕೆ
ತೆರಳುವೆನೆಲ್ಲಿಗೆ ಎನ್ನು ಶಿವನಹೆ ಪ

ಸತಿಸುತರ ನಂಬಬೇಡ ಯಮಧರ್ಮನ
ಮನೆಯ ಸೇವಕರು ನೋಡಾ ಮಕ್ಕಳ ಒಡಗೂಡಾ
ಮಿತಿಯಿಲ್ಲದೆ ಮೋಹವು ಹೆಚ್ಚಿ
ಗತಿಗೆಡಿಸೆ ಒಪ್ಪಿಸುವರು ನಿನ್ನ 1

ಎಲ್ಲಿ ಎಮ್ಮ ಮನೆಯು ಇಂದು ನಿನಗೆ ವಸತಿ ಸ್ಥಳವು
ಎಲ್ಲಿ ದೇವರು ಬಂದು ತುಳಿದಾಡುವರಿಂದು
ಬಲ್ಲವನಾದರೆ ಸತ್ಯವಿದೆನ್ನುತ
ಎಲ್ಲರ ಆಸೆಯ ಮನದಲಿ ತ್ಯಜಿಸು 2

ಸುಂಟರಗಾಳಿಯು ರವದಿ ತಿರುಗಿದವೊಲು
ಉಂಟು ಅನಂತಕಾಲದಿ ಜನನ ಮರಣಗಳು
ಅಂಟಿಯೆ ಕಾಲವ ಮರುಳದು ಬೇಡ
ಅಂಟಿಯೆ ಹೊಂದು ಚಿದಾನಂದ ಬ್ರಹ್ಮವ 3

245
ಓದು ಬೇಡ ನಿನಗೆ ಶಾಸ್ತ್ರ ಬೇಡ ಸುಶೀಲ

ಓದು ಬೇಡ ನಿನಗೆ ಶಾಸ್ತ್ರ ಬೇಡ ಸುಶೀಲ
ಬುದ್ಧಿಲಿ ದೃಷ್ಟಿ ನಿಲಿಸಿದರೆ ಸಾಕೊ ಪ

ವೇದ ಎನ್ನಲಿ ಬೇಡ ಯಮುನೆ
ಧುಮುಕಲಿ ಬೇಡ ಕಪ್ಪೆಯಂತೆ ನೀರಲಿ ಮುಳಗ
ಬೇಡ ಬಾಯಿ ಬಿಗಿಯಲಿ ಬೇಡ ಮೂಗ ಹಿಡಿಯಲಿ
ಬೇಡ ಆ ಜಾಗದಲಿ ದೃಷ್ಟಿ ನಿಲಿಸಿದರೆ ಸಾಕೋ 1

ಆಯಾಸ ಬಡಬೇಡ ಅಡವಿ ಸೇರಲಿ ಬೇಡ
ಕಾವಿ ಕಮಂಡಲ ಧರಿಸಬೇಡ
ಜಪವ ಎಣಿಸಲಿ ಬೇಡ ಉಪವಾಸವಿರಬೇಡ
ಕಾಳಷ್ಟು ದೃಷ್ಟಿ ನಿಲಿಸಿದರೆ ಸಾಕೊ 2

ಎರಡೂ ಕಣ್ಣಿನಿಂದ ನೋಡಿ ನಿಂತಿರಲಾಗಿ
ಶರೀರ ಬಯಲಾದರೂ ಅಳಿವು ತಪ್ಪುದು
ಅರಿವಿಗೇ ಅರಿವಾಗಿ ಅರಿವಿಗೆ ಕುರುಹಾಗಿ
ಗುರು ಚಿದಾನಂದ ಗುರುತು ಇಲ್ಲೆನ್ನಬೇಡ 3

246
ಕತ್ತಲೆಯೊಳಗಣ ಬಾವಿ ಕಾಲ್ದಪ್ಪಿ ಬೀಳಬೇಡ

ಕತ್ತಲೆಯೊಳಗಣ ಬಾವಿ ಕಾಲ್ದಪ್ಪಿ ಬೀಳಬೇಡ
ಮೃತ್ಯುವಲ್ಲದೆ ಅದು ನಿತ್ಯವಲ್ಲ ಪ

ರಾವಣನೆಂಬುವ ಬಿದ್ದು ರಂಗಕ್ಕೆ ಈಡಾದ
ಭಾವಿಸೆ ಜಲಂಧರನು ಬದುಕಲಿಲ್ಲ
ಕೇವಲ ಕೀಚಕನೆಂಬುವವ ಕೇಡ ಹೇಳುವುದೇನು
ದೇವ ಇಂದ್ರನೆಂಬವನ ದೇಹ ಕೆಟ್ಟಿತು 1

ನಹುಷನೆಂಬುವ ಬಿದ್ದು ನಾಚಿಕೆಗೆ ಈಡಾದ
ಬಹು ಹೇಳುವುದೇನು ವಾಲಿಯುಬದುಕನು
ಮಹಾಮಾಯಾವಿ ಎಂಬುವನ ಬಣ್ಣ ಕಂಡವರಿಲ್ಲ
ಊಹಿಸೆ ಭಸ್ಮಾಸುರನು ಉರಿದುಹೋದ 2

ಕತ್ತಲೆ ಬಾವಿಯಲಿ ಬಿದ್ದು ಕೆಟ್ಟವರು ಹಲವರುಂಟು
ಕತ್ತಿಯ ಧಾರೆಗೆ ಇಕ್ಕಿದಾ ಮಧುವದು
ಚಿತ್ತಶುದ್ಧರು ಚಿದಾನಂದ ಭಕ್ತರು ಕಂಡು
ಕತ್ತಲೆಯ ಬಾವಿಯಲಿ ಬೀಳಲಿಲ್ಲ 3

247
ಕತ್ತೆಯು ನೀನಲ್ಲ ಕರುಣಾಕರನಹೆ ಕತ್ತೆಯಾಗಬೇಡ ಕತ್ತೆ

ಕತ್ತೆಯು ನೀನಲ್ಲ ಕರುಣಾಕರನಹೆ ಕತ್ತೆಯಾಗಬೇಡ ಕತ್ತೆ
ಸತ್ಯ ಚಿದಾನಂದ ನೀನರೆ ಮರೆತರೆ ಕತ್ತೆ ನೀನಾಗುವೆ ಕತ್ತೆ ಪ

ಬೊಂಬೆಗೆ ಪ್ರಾಣವನಿಟ್ಟು ದೇವರು ಎಂಬೆ ದೇವರು ಅವು ಕತ್ತೆ
ಬೊಂಬೆಗೆ ಪ್ರಾಣ ಪ್ರತಿಷ್ಠೆಯ ಮಾಡಲು ನೀನಾರು ಹೇಳಲೋ ಕತ್ತೆ
ಬೊಂಬೆ ಸತ್ತವಲ್ಲೊ ಪ್ರಾಣ ತೆಗೆದುಕೊಳ್ಳೆ ನೀರ ಮುಳುಗು ನೀನು ಕತ್ತೆ
ಬೊಂಬೆ ಚೇತನ ಸಾಕ್ಷಾತ್ಕಾರವೆ ಇರೆ ದೇವ ನೀನೆಂತಲ್ಲ ಕತ್ತೆ 1

ಹಿಂದಣ ಪುರಾಣ ಹೇಳುವೆ ನೀನೀಗ ನಿನ್ನ ಪುರಾಣವೆಲ್ಲೊ ಕತ್ತೆ
ಬಂದವನಾರೋ ಹೋಗುವನಾರೋ ಎಂಬುದು ತಿಳಿಯಲಿಲ್ಲ ಕತ್ತೆ
ಬಂದೆಯೋ ಅವಿದ್ಯೆ ದೆಸೆಯಿಂದ ರೂಪಿಗೆ ಜೀವ ನೀನೆನಿಸಿ ಕತ್ತೆ
ಎಂದು ಎಂದಿಗೂ ನೀ ಬ್ರಹ್ಮವೆ ಸತ್ಯವು ಯೋಚನೆ ಬಿಡು ನೀ ಕತ್ತೆ 2
ನಮಕ ಚಮಕ ಅಭಿಷೇಕ ಮಾಡುವಿ ಏನಂತ ಮಾಡುವಿ ಕತ್ತೆ
ಸಮನಿಸಲಿಲ್ಲ ವೇದಾಂತದರ್ಥವು ನಿನಗೆ ಸುಡು ನಿನ್ನ ತಿಳಿವಿಗೆ ಕತ್ತೆ
ಕಮಲಮುಖಿಯ ಸುತರನು ನೀನು ನಂಬುವೆ ಪ್ರಪಂಚ ಸತ್ಯವೇನೋ ಕತ್ತೆ
ಭ್ರಮಣಕ್ಕೆ ಸಿಲುಕಿ ನಾನಾ ಭಂಗಪಡುವೆ ಭಾವಿಸಿ ತಿಳಿನೀ ಕತ್ತೆ 3
ಕನಸಿನನುಭವದಂತೆ ಪ್ರಾರಬ್ಧ ತೋರುವುದು ದೇಹದಾರಿಗಳಿಗೆ ಕತ್ತೆ
ಚಿನುಮಯಾತ್ಮಕನಲ್ಲಿ ಪ್ರಾರಬ್ಧ ತೋರಿಯೆ ತನಗೆ ತಾನಡಗುವುದು ಕತ್ತೆ
ನಿನಗದು ಏನಿಲ್ಲ ಮನಸಿನ ಭ್ರಾಂತಿಯೆನಲನುಭವಿಸುವೆ ಕತ್ತೆ 4

ಹಿಂದಾದುದನು ಬಿಡು ಹೊಂದು ಸದ್ಗುರು ಪಾದ ತಿಳಿ ತತ್ತ್ವಮಸಿಯನ ಕತ್ತೆ
ಬಂಧಿಸಿ ಆಧಾರ ಚಕ್ರವನೇರು ಏರಿ ನಿಂತು ಭ್ರೂಮಧ್ಯದಿ ಕತ್ತೆ
ಮುಂದೆ ಹರಿಯ ನೋಡು ಸಹಸ್ರಾರದ ಪೀಠ ಛಂದದಿ ಅಡರ್ಮೇಲೆ ಕತ್ತೆ
ಸುಂದರ ಚಿದಾನಂದ ನಾಗಿಯ ಥಳಥಳ ಬೆಳಕಲ್ಲಿ ಬೆಳಕಾಗೊ ಕತ್ತೆ 5

248
ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿ

ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿ
ಮಿತಿಯಿಲ್ಲದ ಮೃಷೆ ಸಂಸಾರವದು ಇರುತಿಹುದು ಅಪರಿಯಲ್ಲಿ ಪ

ಸತಿಯಂಬುವಳಾರು ತಾವಾರು
ಸುತರಿಂದ ಗತಿಯಾಗುವುದೆಲ್ಲಿ
ಮಿತಿಯಿಲ್ಲದ ಬಹುಬಂಧು ಬಳಗಗಳು
ಬಹರೆ ತನ್ನ ಹಿಂದಲ್ಲಿ 1

ಹಗೇವಿನ ಬತ್ತವು ಬಣಬೆಯ ಸೊಪ್ಪೆಯು
ಬಗೆ ಬಗೆವಸ್ತುವು ತಾನೆಲ್ಲಿ
ಬಿಗುಮಿಗೆಯಾದ ದನಕರುವುಗಳು
ಬರಲಿಲ್ಲವು ತಾವಂದದಲ್ಲಿ 2

ತಳ್ಳಿಗೆ ತಳ್ಳಿ ಸುಳ್ಳು ಸಂಸಾರವು
ತೆಗೆಲೀಯದು ಈ ಬಗೆಯೆಲ್ಲಿ
ಎಲ್ಲಕೆ ಮಂತ್ರವು ತಾ ಚಿದಾನಂದನು
ಎನಲಿಕೆ ಪಾಪವು ಇನ್ನೆಲ್ಲಿ 3

249
ಕಾಲ ತಪ್ಪದು ನಿನಗೆಂದಿಗು ಮರುಳೆ

ಕಾಲ ತಪ್ಪದು ನಿನಗೆಂದಿಗು ಮರುಳೆ
ಒಳ್ಳಿತಾಗಿ ಕೇಳಿಕೋ ಹಿರಿಯರನು ಮರುಳೆ
ನಾಳೆ ನಾಡದೋ ಆವಾಗಲೋ ತನು ನಿತ್ಯವಲ್ಲ
ಕಾಲಕೆ ಸಿಕ್ಕಬೇಡ ಮರುಳೆ ಪ

ಆಳುವ ಮಠಪತಿ ಊರಲ್ಲಿ ತನ್ನನ್ನು
ಹೂಳ್ಯಾರು ಎನಬಾರದ ಮರುಳೆ
ಮೂಳ ಸಂಸಾರ ನೆಚ್ಚಲು ಕೆಡುವೆ
ಆಲೋಚನೆ ಮಾಡಿಕೋ ಮರುಳೆ 1

ಮನವುಳ್ಳವರು ಇಹರೆ ಸಂಸಾರ
ವೇನೆಂಬೆ ನೀನು ಸಂಗವ ಮರೆವೆ ಮರುಳೆ
ಮಾನಿನಿ ಸುತರ ಮೋಹಕ ಬಿದ್ದು
ನಿನಗಾಗುವ ಮಾನಹಾನಿಯ ಕಾಣೆ ಮರುಳೆ 2

250
ಕಿವಿ ಮಾತು ಹೇಳುವೆನು ಎನ್ನ ಮಾತ ಕೇಳಿರೋ

ಕಿವಿ ಮಾತು ಹೇಳುವೆನು ಎನ್ನ ಮಾತ ಕೇಳಿರೋ
ಶಿವನು ನೀನಾಗುವಂಥ ಸಿದ್ಧಿಯನ್ನು ಹೇಳಿಕೊಡುವೆ ಪ

ಅನಂತ ಯೋನಿಯೊಳಗೆ ಅನಂತ ಜನ್ಮತಿರುಗಿ
ಅನಂತ ಯುಗಯುಗಂಗಳಲಿ ಸತ್ತು ಹುಟ್ಟೆ
ಅನಂತನಾಟವೆಯೆಂದು ಅರಿವು ಇಲ್ಲದೆ ಹೋಗಿ
ಅನಂತ ದುಃಖಸಾಗರದಿ ಹಿರಿದು ಬಳಲುವಿರಿ 1

ವಿಶ್ವತೈಜಸ ಪ್ರಾಜ್ಞ ಮೂವರೆಂದೆನಿಸಿ
ವಿಶ್ವದೊಳು ನಾನಾ ರೂಪಗಳ ತಾಳಿ
ವಿಶ್ವದೊಳ ಹೊರಗೆಲ್ಲ ಪೂರ್ಣ ತಾನೆಂದೆನಲು
ವಿಶ್ವಾತ್ಮಕನು ನೀವು ಮತ್ತಾರು ತಿಳಿಯಿರೋ 2

ಮೂರವಸ್ಥೆಗಳಲ್ಲಿ ಮೂರು ಮೂರ್ತಿಗಳಾಗಿ
ತೋರುತಿಹ ನಾನಾ ಬಗೆ ಲೀಲೆಗಳನು
ಭೂರಿ ಸಂಸಾರಗಳ ದುಃಖ ಸುಖವೆಂದೆನಿಸಿ
ತೋರಿ ನೋಡಿಪನವನು ಮತ್ತಾರು ತಿಳಿಯಿರೋ 3

ಸತಿ ಪುರುಷರಾಗಿಹನು ಸುತನು ತಾನಾಗಿಹನು
ಖತಿಯು ಶಾಂತಿಯು ಕಾಮವಾಗಿ ತಾನಿಹನು
ಅತಿ ಕುಲಗಳಾಗಿಹನು ಅತಿ ಜಂತುವಾಗಿಹನು
ಮಿತಿಯಿಲ್ಲದಾಗಿಹನು ನೀವಾರು ತಿಳಿಯಿರೋ 4

ಈ ವಾಕ್ಯಗಳನೇ ನೀವಾರಮುಂದುಸುರದಲೆ
ಸಾವದಾನದಿ ತಿಳಿದು ನೋಡಿ
ದೇವ ಚಿದಾನಂದ ಗುರು ತಾನೀಗ ನಿಜವೆಂದು
ಸಾವದಾನದಿ ಕಂಡು ಕಡೆಹಾಯಿರೋ 5

251
ಕುಲದ ಮೇಲೆಯೇ ಹೊಂದಲಿಬೇಡ ಕೇಳಿದನೋ ಕತ್ತೆ

ಕುಲದ ಮೇಲೆಯೇ ಹೊಂದಲಿಬೇಡ ಕೇಳಿದನೋ ಕತ್ತೆ
ಕುಲವು ಬೇರೆ ಜ್ಞಾನದ ಹಾದಿಗೆ ನಿನಗೆ ತಿಳಿಯಿತೆ ಪ

ಸಣ್ಣವನಾಗಲಿ ಸ್ತ್ರೀಯು ಆಗಲಿ ಆರು ಆದರೆ ಏನು
ತನ್ನನ್ನು ತಿಳಿದು ತಾನೆಯು ಆದರೆ ಅವನೆ ನಿಜ ಮುಕ್ತಾ 1

ಹಿರಿಯನು ಇಲ್ಲವು ಕಿರಿಯನು ಇಲ್ಲವು
ತನ್ನನು ತಿಳಿದವ ಹಿರಿಯ ಕರೆಕರೆ
ಸಂಸಾರ ಕೇವಲ ಸುತ್ತಲು ಅರಿತವ ಎಂದಿಗೆ ಮನೆಯೂ 2

ಆವ ಕುಲವು ಆದರೆ ಏನು ತನ್ನ ತಿಳಿಯೆ ಜ್ಞಾನ
ದೇವ ಚಿದಾನಂದನವನನು ಇಲ್ಲವನೆಂದವ ನಲಿವನಾ 3

252
ಕೆಟ್ಟ ಕೇಡನೇನ ಹೇಳಲಿ

ಕೆಟ್ಟ ಕೇಡನೇನ ಹೇಳಲಿ ಎನ್ನ-
ದೃಷ್ಟದಿ ಪಡೆದಿದ್ದ ಫಲವಷ್ಟೇ ಅಮ್ಮ ಪ

ಸತಿಯ ಸಂಗ ಕೆಟ್ಟೆ ಸಕಲ ವರ್ತನೆಗೆಟ್ಟೆ
ಸುತರು ಬೇಕೆಂಬ ಸಂತಸಗೆಟ್ಟೆ
ಮತಿಯ ವಿಚಾರಗೆಟ್ಟೆ ಮನದ ವಾಸನೆಗೆಟ್ಟೆ
ಖತಿಯು ಎಂಬುದ ಕೆಟ್ಟೆ ಕಾಮಗೆ ಮೊದಲು ಕೆಟ್ಟೆ 1

ಮನೆವಾರ ನೇಮಗೆಟ್ಟೆ ಮನೆ ತಾಪತ್ರಯ ಕೆಟ್ಟೆ
ಘನಭೋಗ್ಯ ಭಾಗ್ಯ ಕೆಟ್ಟೆ ಸರ್ವವ ಕೆಟ್ಟೆ
ತನು ತಾನೆಂಬುದು ಕೆಟ್ಟೆ ತಳ್ಳಿ ತಗಾದೆ ಕೆಟ್ಟೆ
ಜನರ ಕೂಡಿ ಕೆಟ್ಟೆ ಜಡ ಜೀವ ಕೆಟ್ಟೆ 2

ಕುಲದಭಿಮಾನ ಕೆಟ್ಟೆ ಕುಹಕರ ಮಾತು ಕೆಟ್ಟೆ
ಕಲಹವೆಂಬುದ ಕೆಟ್ಟೆ ಕಠಿಣ ಗೆಟ್ಟೆ
ಹಲವು ಎಂಬುದ ಕೆಟ್ಟೆ ವಿಧಿ ನಿಷೇಧ ಕೆಟ್ಟೆ
ಫಲದ ತೋರಿಕೆಗೆಟ್ಟೆ ಪರರ ನಿಂದ್ಯ ಕೆಟ್ಟೆ 3

ಇಹ ಪರವನು ಕೆಟ್ಟೆ ಇಷ್ಟು ಎಲ್ಲವ ಕೆಟ್ಟೆ
ಬಹಿರಂಗವನು ಕೆಟ್ಟೆ ಭಂಗ ಕೆಟ್ಟೆ
ಅಹಿತತ್ವವನು ಕೆಟ್ಟೆ ಅಂಗಡಿಯನು ಕೆಟ್ಟೆ
ಮಹಿಮೆ ಎಂಬುದ ಕೆಟ್ಟೆ ಮಹಾ ಸುಖ ದುಃಖ ಕೆಟ್ಟೆ 4

ನ್ಯಾಯ ಅನ್ಯಾಯ ಕೆಟ್ಟೆ ನಿತ್ಯ ಕರ್ಮವ ಕೆಟ್ಟೆ
ಬಾಯಿ ಪಿಟಪಿಟ ಬೆರಳೆಣಿಕೆ ಕೆಟ್ಟೆ
ಪ್ರಿಯವೆಂಬುದ ಕೆಟ್ಟೆ ಪಿಂಡ ಪ್ರಧಾನ ಕೆಟ್ಟೆ
ಜೀಯ ಚಿದಾನಂದನಾಗಿ ಜನ್ಮಗೆಟ್ಟೆ 5

253
ಕೆಟ್ಟದು ಮೋಹ ಕೆಟ್ಟದು

ಕೆಟ್ಟದು ಮೋಹ ಕೆಟ್ಟದು ಈ
ನಷ್ಟ ವಿಷಯಕೆ ಬಿದ್ದು ನಾರಿ ಪಾಲಾಗೋದು ಪ

ಕರುಳ ಭಾವಕೆ ಸೋತು ಕುಚದ ಭಾರಕೆ ಸೋತು
ಸಿರಿಮುಡಿ ವೇಣಿ ಶಿಸ್ತಿಗೆ ಸೋತು
ಕಿರುನಗೆಗೆ ತಾ ಸೋತು
ಉರಿಯ ಮೋಹಕೆ ಬಿದ್ದ ಚಿಟ್ಟೆಯಂತೊರಲುವುದು 1

ಕಣ್ಣ ಭಾವಕೆ ಸೋತು ಕದಪುಗಳಿಗೆ ಸೋತು
ನುಣ್ಣನೆಯ ಮೋರೆಯ ನುಣುಪಿಗೆ ಸೋತು
ಸಣ್ಣ ಹಲ್ಲಿಗೆ ಸೋತು ಸುಮನಾಸಿಕಕೆ ಸೋತು
ಸುಣ್ಣ ನೀರಲಿ ಕೂಡಿ ಕುದಿವಂತೆ ಕುದಿವುದು 2

ಬಳಲು ನಡೆಗೆ ಸೋತು ಬಡ ನಡುವಿಗೆ ಸೋತು
ಸುಳಿನಾಭಿಗೆ ಮೆರೆವ ಸುತ್ರಿವಳಿಗೆ ಸೋತು
ಸುಲಭ ಚಿದಾನಂದ ಸುಪಥವ ಕಾಣದೆ
ತಲೆ ಕೆಳಕಾಗಿ ನರಕಕ್ಕೆ ತೆರಳುವುದು 3

254
ಕೆಡಬೇಡವೋ ಎಲೆ ಕರ್ಮಿ ಮನುಜ ನೀ

ಕೆಡಬೇಡವೋ ಎಲೆ ಕರ್ಮಿ ಮನುಜ ನೀ
ಕೆಡದಿಹ ಪಥವ ಕೇಳಿನ್ನು ಪ

ಹೆಂಡತಿ ಮೋರೆಯ ಮೋಡಿಯ ನೋಡಿ ಹೆಂಡತಿ ಥೂ ಎನ್ನು
ಗಂಡಸು ಮಕ್ಕಳು ಗತಿಯೇನೆಂಬರು ಗಂಡು ಮಕ್ಕಳ ಛಿ ಎನ್ನು
ಕಂಡೆವು ಕಾಣೆವು ಎಂಬ ಬಂಧುಗಳ ಕಣ್ಣಮುಂದಿರಬೇಡಿನ್ನು
ಹಿಂಡು ಹಿಂಡು ನೆರೆದಿಹ ಪರಿಜನರ ಹಿಂಡು ಸಂದಳಿಯ ಬಿಡು ಇನ್ನು 1

ಬಹುಗೃಹ ಕಟ್ಟಿದೆ ದಿಕ್ಕಿಲ್ಲವೆಂಬೆ ಬಹು ಗೃಹವನು ಸುಡಲೆನ್ನು
ಇಹುದಿದು ದ್ರವ್ಯವು ಇದಕೇನೆಂಬೆಯ ಇಹುದನು ಧರ್ಮವ ಮಾಡಿನ್ನು
ದಾಹದಿ ಗಳಿಸಿದೆ ಆಸ್ತಿಯನೆಂಬೆಯ ಸಜ್ಜನರಿಗೆ ಕೊಳ್ಳೆನ್ನು
ಇಹೆ ನಾಲಕು ದಿನ ಎಂಬ ಭ್ರಮೆಯನು ಇಡು ಪಾದರಕ್ಷೆಯೊಳಿನ್ನು 2

ಮತಿವಂತರು ಅರಿಲ್ಲವೆಂಬೆಯ ಮತಿಗೆ ಶಿವ ತಾನಿಹೆನೆನ್ನು
ಗತಿಯೇನಿನ್ನು ಈ ಕುಟುಂಬಕೆಂಬೆಯ ಗತಿಯಿದ್ದಾಗುವುದೆನ್ನು
ಅತಿ ಋಣ ಭಾರವು ಆಗಿಹುದೆಂಬೆಯ ಅರಿಗೆ ಋಣ ಎಂದೆನ್ನು
ಸುತರಿಲ್ಲ ತನಗೆ ಗತಿಯಿಲ್ಲವೆಂಬೆಯ ಸುತರಿಂದ ಗತಿಯು ಸಾಕಿನ್ನು 3

ಪಾಪಹರರ ಪುಣ್ಯಪುರುಷರ ನೋಡಿ ಪಾಪಿಯ ಕಡೆಹಾಯ್ಸಿನ್ನು
ದೀಪಿಸುತಿಹ ಬ್ರಹ್ಮ ಬೋಧೆಯ ನುಡಿಗಳ ದೀಪ್ಯಮಾನದಿ ಕೇಳಿನ್ನು
ಕೋಪದಿ ಹಿಡಿ ಕೆಟ್ಟೆನ್ನುವ ಯಮದೂತರ ಕಾಲಲಿ ಒದೆಯವರನ್ನು
ಆ ಪರ ಬ್ರಹ್ಮವ ನೋಡುತ ಸುಖದಲಿ ಆನಂದದಿ ಮಲಗಿನ್ನು 4

ನಿತ್ಯ ನಿರಾಳ ನಿರಂಜನ ನಿರವಯ ನಿತ್ಯನು ಬೇರಿಲ್ಲೆನ್ನು
ಪ್ರತ್ಯಗಾತ್ಮ ಪರಾತ್ಪರ ಪರತರ ಪ್ರತ್ಯಗೆ ತಾನಹುದೆನ್ನು
ಚಿತ್ತಿನ ಪ್ರಭೆಯದು ಢಾಳಿಸುತಿರುತಿರೆ ಚಿತ್ತವಲಯ ಮಾಡಿನ್ನು
ಪ್ರತ್ಯಗಾತ್ಮ ಚಿದಾನಂದನ ನೆನೆಯುತ ಪ್ರಾಣವ ಕಳೆಯಿನ್ನು 5

255
ಕೊಡವನು ಹೊರಲಾರೆನೆ ಅಕ್ಕ

ಕೊಡವನು ಹೊರಲಾರೆನೆ ಅಕ್ಕ
ಕೊಡುವನು ಹೊರಲಾರೆನೆ
ಕೊಡವನು ಹೊರಲಾರೆನೆ ಕಷ್ಟಪಡಲಾರೆ
ಕೊಡವನು ಒಡೆದರೆ ಕಡೆಹಾಯ್ವೆನೆ ಪ

ತಿಳಿಯಲು ಒಂಬತ್ತು ತೂತಿನ ಕೊಡನೆ
ಕೊಳೆಯದು ನಿತ್ಯವು ತುಂಬಿಹ ಕೊಡನೆ
ಹೊಲಸಿನ ಹೊದ್ದಿಕೆಯ ಹೊದ್ದಿಹ ಕೊಡನೆ
ತೊಳೆದರು ನಿತ್ಯವು ಶುಚಿಯಾಗದ ಕೊಡನೆ 1

ರೂಪವು ದಿನದಲಿ ಮೂರಿಹ ಕೊಡನೆ
ಆಪತ್ತಿನಿಂದಲಿ ನರಳುವ ಕೊಡನೆ
ಪಾಪದ ಪುಂಜದ ಪಡಿಶಂಟು ಕೊಡನೆ
ಜೋಪಾನ ಮಾಡಲು ಜರಿವಾ ಕೊಡನೆ 2

ಎಲ್ಲಿಂದ ಬಂದಿತೋ ಎನಗೀ ಕೊಡವು
ಎಲ್ಲಿಯ ಪಾಪಿಯು ಮಾಡಿದ ಕೊಡನೆ
ಬಲ್ಲ ಚಿದಾನಂದ ಮರೆಸುವ ಕೊಡನೆ
ಬಾಳನು ಕೆಡಿಸುವ ಸತಿ ಎಂಬ ಕೊಡವು 3

256
ಕೊರಡು ಎಂಬೆನು ಇಂಥವನ ಕಂಡು

ಕೊರಡು ಎಂಬೆನು ಇಂಥವನ ಕಂಡು
ಕೊರಡು ಎಂಬೆಹುಸಿಯದೆ
ಕೊರಡು ಅಲ್ಲದೆ ಶಿವನಿರೆ
ಜೀವನೆಂಬುವನ ಕೊರಡು ಎಂಬೆ ಪ

ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆ
ಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆ
ಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆ
ಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ 1

ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆ
ಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆ
ತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆ
ಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ 2

ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆ
ವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆ
ವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆ
ಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ 3

257
ಕೋಣ ಕೇಳಲೋ ಕೋಣ ನೀನು

ಕೋಣ ಕೇಳಲೋ ಕೋಣ ನೀನು
ಕೋಣನಲ್ಲವು ಬ್ರಹ್ಮ ಕೋಣ ಪ

ಶಾಸ್ತ್ರ ಪುರಾಣವ ಕೋಣ ನೀನು ವಿಸ್ತರವೋದಿದೆ ಕೋಣ
ವಸ್ತು ತಿಳಿಯಲಿಲ್ಲ ಕೋಣ ನಿನ್ನ ಪುಸ್ತಕ ಬಟ್ಟೆಯಲ್ಲೋ ಕೋಣ 1

ಎಲ್ಲವನೋದಿದೆ ಕೋಣ ನಾನು ಬಲ್ಲೆನೆನುತಿಹೆ ಕೋಣ
ಬಲ್ಲೆನು ನಿನ್ನ ಕೋಣ ನೀನು ಬಲ್ಲಿಡೆ ಬಲ್ಲೆಯೋ ಕೋಣ 2

ಹೆಂಡಿರು ಮಕ್ಕಳು ಕೋಣ ಪ್ರಪಂಚ ಯಮನಾಳು ಕೋಣ
ಖಂಡಿಸಿ ತಿಳಿ ನೀನು ಕೋಣ ಪ್ರಾಣ ಕೊಂಡವರವರೀಗ ಕೋಣ 3

ಎಲ್ಲಿಂದ ಬಂದೆಯೋ ಕೋಣ ನೀನೆಲ್ಲಿಗೆ ಹೋಗುವೆ ಕೋಣ
ಬಲ್ಲವಿಕೆ ನಿನಗಿಲ್ಲ ಕೋಣ ನೀ ಎಲ್ಲರ ಹೊಡೆಗೆಡೆ ಕೋಣ 4

ನನ್ನ ನುಡಿ ಕೇಳೋ ಕೋಣ ನಿನಗಿನ್ನ ಬುದ್ಧಿಯಿಲ್ಲವೋ ಕೋಣ
ನಿನ್ನನೆ ನೀ ಅರಿ ಕೋಣ ಇನ್ನು ಚಿದಾನಂದನರಿಯದಿದ್ದಡೆ ಕೋಣ 5

258
ಗುಣವಂತರ ಗುಣವ ಗುಣವಂತನರಿವನು

ಗುಣವಂತರ ಗುಣವ ಗುಣವಂತನರಿವನು
ಗುಣಹೀನ ಗುಣವಂತನ ಗುಣವೇನ ಬಲ್ಲನೋ ಪ

ಕಮಲಗಳ ಹೃದಯ ಭ್ರಮರಕ್ಕೆ ತಿಳಿಯುವುದು
ಕಮಲಗಳ ಗುಣ ಕಪ್ಪೆಗೇನು ತಿಳಿವುದೋ
ವಿಮಲರಾ ಹೃದಯ ವ್ಯುತ್ಪನ್ನರಿಗೆ ಹೊಳೆಯುವುದು
ಕುಮತಿಗಳಿಗೆ ಕೋಮಲರ ಘನತೆಯಿಂತರಿವುದೋ 1

ಕೆಚ್ಚಲೊಳಿರುತಿಹುದು ಕರುವಿಗೆ ದೊರಕುವುದು
ಕೆಚ್ಚಲ ಕಚ್ಚಿರುವ ಉಣ್ಣೆಗದು ದೊರೆವುದೋ
ಸಚ್ಚರಿತ್ರರ ಬೋಧೆ ಸತ್ಪುರುಷಗಂಟುವುದು
ಹುಚ್ಚ ತಾ ಬದಿಯಿದ್ದರೆ ಪರಿಣಾಮವೇನಹುದೋ 2

ಸಾಧುಗಳ ಮಹಿಮೆಯ ಸಾಧುಗಳ ಹೃದಯವು
ಸಾಧುಗಳ ಬೋಧೆಯ ಸಾಧು ಸಹವಾಸ
ಬೋಧ ಚಿದಾನಂದ ಬಗಳೆಯಾದವರಿಗರಿವು
ವಾದಿಯಾಗಿಹ ಮೂರ್ಖರಿಗೆ ಗುಣವೇನು ತಿಳಿಯವುದೋ 3

259
ಗುರುವಿಗೆ ಒಂದು ಶರಣಾರ್ಥಿ ಗುರು

ಗುರುವಿಗೆ ಒಂದು ಶರಣಾರ್ಥಿ ಗುರು
ಭಕ್ತರಿಗೊಂದು ಶರಣಾರ್ಥಿ ಪ

ಸಾಧನ ನಾಲ್ಕನು ಸಾಧಿಸುತಿರುತಿಹ
ಸಾಧಕರಿಗೆ ಒಂದು ಶರಣಾರ್ಥಿ
ವಾದವ ವರ್ಜಿಸಿ ವಸ್ತುವ ಧ್ಯಾನಿಪ
ಉತ್ತಮರಿಗೆ ಒಂದು ಶರಣಾರ್ಥಿ 1

ಯೋಗಗಳಿಂದಲೆ ಯೋಗ್ಯರಾಗಿಹ
ಯೋಗೀಶರಿಗೊಂದು ಶರಣಾರ್ಥಿ
ರಾಗ ಪೋಗಿ ರಂಜಿಸುತಿರುತಿಹ
ರಂಜಕರಿಗೆ ಒಂದು ಶರಣಾರ್ಥಿ 2

ದೂಷಣ ಭೂಷಣ ದೂರ ಮಾಡಿಹ
ದೃಢವಂತರಿಗೆ ಒಂದು ಶರಣಾರ್ಥಿ
ಆಸೆಗಳೆಂಬ ಅಳಿದು ಇರುತಿಹ
ಆನಂದರಿಗೊಂದು ಶರಣಾರ್ಥಿ 3

ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ
ದೃಢವಂತರಿಗೆ ಒಂದು ಶರಣಾರ್ಥಿ
ಆಸೆಗಳೆಂಬ ಅಳಿದು ಇರುತಿಹ
ಆನಂದರಿಗೊಂದು ಶರಣಾರ್ಥಿ 3

ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ
ಪಂಡಿತರಿಗೆ ಒಂದು ಶರಣಾರ್ಥಿ
ತಾಪವನೀಗಿ ತಮ್ಮನೆ ಮರೆತಿಹ
ತಾಪಸರಿಗೆ ಒಂದು ಶರಣಾರ್ಥಿ 4

ಜನನ ಮರಣಗಳ ಜಡರನೆ ಕಳೆದಿಹ
ಜನಪತಿಗಳಿಗೊಂದು ಶರಣಾರ್ಥಿ
ಚಿನುಮಯಾತ್ಮಕ ಚಿದಾನಂದನ ಬೆರೆದಿಹ
ಚಿದ್ರೂಪರಿಗೆ ಒಂದು ಶರಣಾರ್ಥಿ 5

260
ಛಿ ಛಿ ಮನುಜನೆ ನಿನ್ನನೆ ತಿಳಿಯೋ

ಛಿ ಛಿ ಮನುಜನೆ ನಿನ್ನನೆ ತಿಳಿಯೋ
ಚಿಕ್ಕ ಬುದ್ಧಿಯ ನೀನೀಗ ಮಾಡಬೇಡ ಪ

ಎಲ್ಲ ದಿನಗಳು ಆಗಲೋ ಈಗಲೋ
ಒಳ್ಳಿತಾಗಿ ಬಿಡು ಸಂಸಾರವನು
ಸರ್ವರನು ನಿನಗೊಪ್ಪಿಸೆಯೋ ಸತಿಸುತರೆಂಬರು
ಏನಾದರೆಂದು ತಿರುಗಿ ಪರಾಮರಿಸಿ ಕೊಂಬೆಯಾ 1

ತುದಿಗಟ್ಟೆಯಲಿ ತಂಬಿಗೆ ಇಟ್ಟರೆ
ತೆಗೆಯಿರಿ ಒಳಯಿಕೆ ನೀವೆಂಬಿ
ತುದಿಗಟ್ಟೆಯಲಿಹ ತುಂಬಿಗೆಯಿಂದಲಿ
ತಿರುಗಿ ಕುಡಿಯುವೆಯೋ ನೀನೀರ 2

ಮನೆ ಮಾತಿಗೆ ನೀ ಬಡಿದು ಆಡಿದ
ಮನೆ ತಕ್ಕೊಂಡೆಲ್ಲದರ
ಮನೆಯಲಿ ಆರಿಗೆ ಹೇಳಿ ಹೋಗುವೆಯೋ
ಮನೆ ಪರಾಮರಿಗೆ ತಿರುಗಿ ಕೊಂಬೆಯೋ 3

ದೇಹವ ಸಾರ್ಥಕ ಮಾಡಿರಿ ಎಂದು
ದೈನ್ಯದಿ ಎಲ್ಲರಿಗೂ ಹೇಳುವೆ
ದೇಹವ ಸಾರ್ಥಕ ಮಾಡಿದರಿಲ್ಲವೋ
ದೇಹ ಪರಾಮರಿಕೆಯ ಕೊಂಬೆಯೋ 4

ನಿನ್ನ ದೇಹವೇ ನಿನಗೆ ಇಲ್ಲವೋ
ನಿನಗೆಲ್ಲಿಯ ಸತಿಸುತ ಭ್ರಾಂತಿ
ನಿನ್ನ ಚಿದಾನಂದ ಗುರುವೆಂದು ಕಂಡರೆ
ನಿನಗೇನಿಲ್ಲವೋ ಗುರುವಾಗುವೆ ನೀ 5

261
ಜೀವ ನಾನೆನ್ನಬೇಡ ಮುಕ್ತಾ ಜೀವ

ಜೀವ ನಾನೆನ್ನಬೇಡ ಮುಕ್ತಾ ಜೀವ
ನಾನೆನ್ನ ಬೇಡ ಮುಕ್ತಾ ನೀನೆ
ದೇವ ಚಿದಾನಂದನು ನೀನೆ ಸತ್ಯ ಅವಶ್ಯಕ್ತಾ ಪ

ಇಲ್ಲ ನಿನಗೆ ಸತಿ ಇಲ್ಲಿ ಸುತರು ಎಂಬುದಿಲ್ಲ
ಭಾಗ್ಯವು ಎಂಬುದಿಲ್ಲ ಮನೆ
ಇಲ್ಲವು ಇಲ್ಲವು ದೇಹವು ನಿನಗೆ
ಎಲ್ಲವು ಭ್ರಾಂತಿಯು ನೀ ಪರಮಾತ್ಮ 1

ಆರು ನಿನಗೆ ತಾಯಿಯು ಯಾರು ತಂದೆಯ ತಾ
ನಾರು ಹಿತರುಯೆಂಬರಾರು ಮೊದಲು ನೀನಾರು
ಆರಾರಿಲ್ಲವು ಕೆಡಬೇಡ ವ್ಯರ್ಥವು
ಪೂರಣ ತಿಳಿ ನಾ ಸಾಕ್ಷಾತ್ತೆಂದು 2

ಒಳಗೆ ದೃಷ್ಟಿಯಿಡು ದೃಷ್ಟಿಯೊಳಗೆ ಉಕ್ಕುವ ಕಳೆ
ಯೊಳಗೆ ಉಕ್ಕುವ ತೇಜದೊಳಗೆ ಆ ಬೆಳಗಿನ್ನೊಳಗೆ
ಥಳಥಳಿಸುತ ಕಲೆ ತಾ ಬಂಡದಿ
ನಳನಳಿಸುವ ಚಿದಾನಂದನೆ ಆಗೋ 3

262
ಜ್ಞಾನಿಯ ಕಾಣಲು ಧಗದಲ್ಯನಾಗುವ ಶಾಸ್ತ್ರಿ

ಜ್ಞಾನಿಯ ಕಾಣಲು ಧಗದಲ್ಯನಾಗುವ ಶಾಸ್ತ್ರಿ
ಜ್ಞಾನಿಗಳು ಶಾಸ್ತ್ರಿಗೇನ ಮಾಡಿದರೋ
ಏನಾದರೂ ಪೂರ್ವದ್ವೇಷವಿತ್ತಾದರೂ
ತಾನು ನಿಂದಿಸಿ ಕುಲಸಹ ಕೆಡಿಸುವನು ಶಾಸ್ತ್ರಿ ಪ

ದನವ ಕಾಣುವ ವದನವರಿಹುತಲಿಹ
ದನವ ಕಾಯ್ದವಗಿಂತ ಅತ್ತಿತ್ತ ಕಡೆ ಶಾಸ್ತ್ರಿ
ಘನ ವೇದಾಂತವನೋದಿ ಜ್ಞಾನಿಗಳ ನರರೆಂಬ
ಎನಿತುಗರ್ವ ಅಹಮ್ಮಲಿ ತನ್ನ ತಿಳಿಯ ಶಾಸ್ತ್ರಿ 1

ಓದೋದು ವೇದಾಂತ ಓದುವನಾರೆಂದು ಅರಿಯ
ಓದಿಹೆನೆಂಬ ಗರ್ವವು ತಲೆಗೆ ಹತ್ತಿ
ಓದಿಯೇ ಅಲ್ಲಿ ಗೆದ್ದೆ, ಇಲ್ಲಿ ಗೆದ್ದೆ ನೆಂಬ
ಅದನೊಬ್ಬನೆಲ್ಲೋ ಇರೆ ಆರಗೆದ್ದನು ಶಾಸ್ತ್ರಿ 2

ಸಾಧುಗಳಿಗೆ ವಂದಿಸಲಿಲ್ಲ ಸಾಧುಗಳ ಮನೆ ಹೋಗಲಿಲ್ಲ
ಸಾಧುವು ಮುಂದೆ ಹಾಯಲು ಕುಳಿತು ಏಳದಲಿಹನು
ಸಾಧುವ ಕಂಡು ನಡೆಯೇನು ನುಡಿಯೇನು ಎಂಬ
ಸಾಧುವ ಭಜಿಪಗೆ ಬಹಿಷ್ಕಾರೆಂದನು ಶಾಸ್ತ್ರಿ 3

ನಾನು ಅರಿಯೆ ನಿನಗೆ ಗತಿಯೇನು ಮತಿಯೇನು
ನಾನು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ
ನಾನು ನನ್ಹೆಸರೇನು ಆರು ತಿಳಿಸುವರೆಂಬ
ಜ್ಞಾನವಿಲ್ಲದೆ ಘಟಪದಿ ಮೆರೆದಿಹ ಶಾಸ್ತ್ರಿ 4

ನಾನೇ ಶ್ರೇಷ್ಠನೆಂದೂ ನಾನೇ ದೊಡ್ಡವನೆಂದೂ
ನಾನು ಆರಿಹೆನೆಂಬ ಎಚ್ಚರವದು ಹೋಗಿ
ತಾನಾದ ಚಿದಾನಂದರಾದ ಸತ್ಪುರುಷ
ಏನೇನೋ ನಿಂದೆಯ ಮಾಡಿ ನರಕಕ್ಕಿಳಿಸುವ ಶಾಸ್ತ್ರಿ 5

263
ಜ್ಞಾನವನ್ನೇ ತಿಳಿದುಕೋ ಮನುಜ ಜ್ಞಾನವನ್ನೇ ತಿಳಿದುಕೋ

ಜ್ಞಾನವನ್ನೇ ತಿಳಿದುಕೋ ಮನುಜ ಜ್ಞಾನವನ್ನೇ ತಿಳಿದುಕೋ ಪ

ಸತ್ತು ಹುಟ್ಟಿಯೇ ಸತ್ತು ಮುಂದಣ ಜನ್ಮಕು ಮತ್ತು
ಮತ್ತು ಗಳಿಸಿಕೊಂಡು ವಿಪತ್ತು ಮತ್ತೆ ಬಂದಿದೆ ಮೃತ್ಯು 1

ಹಾದಿಯಿದೆ ಸಾಪು ಕಾಣದೆ ಬಿಡುವೆ ಅಪು
ಬಯಕೆ ಯೋನಿಯ ಕೂಪು ಹಾಕಿ ಹಾಕಿ ಭಾಪು 2

ಹಸಿವು ಬಿಡೋ ಹಸಿವು ಯಾಕೆ ಆದಿ ಪಶುವು
ಬಗುಳ ಬೇಡ ಹುಸಿಯು ನಾಚುತಿದೆ ಬಸಿರು 3

ಹೆಚ್ಚ ಬೇಡ ಹೆಚ್ಚು ಅಹಂಕಾರ ಮುಚ್ಚು
ಓದಿಗೆ ಬೆಂಕಿಯ ಹಚ್ಚು ಮಾಡಿಕೊಂಡೆಯ ಕಿಚ್ಚು 4

ಜ್ಞಾನವ ತಿಳಿಯಿನ್ನು ಯಮಗೆ ಕೊಡಬೇಡ ಬೆನ್ನು
ಆರುತಾನಿಹನೆನ್ನು ಚಿದಾನಂದನೆ ಎನ್ನ 5

264
ತನ್ನ ತಿಳಿಯದವನೇಕೆ ಇನ್ನವನನು ಸುಡಬೇಕು

ತನ್ನ ತಿಳಿಯದವನೇಕೆ ಇನ್ನವನನು ಸುಡಬೇಕು

ವೇದಾರ್ಥಿಯು ತಾನಾಗಿ ವಾದಿಸುತಿಹನೀ ಗೂಗೆ
ಓದಿದ ಓದದು ವ್ಯರ್ಥ ಒಳ್ಳಿತಾಗಿ ಗಳಿಸಿದನರ್ಥ 1

ಆಚಾರದಿ ಒದ್ದಾಡಿ ಅಡವಿಯ ಹಿಡಿದನು ಖೋಡಿ
ಕುಚಾಳಿಯೆ ವ್ಯವಹಾರ ಕುಮಂತ್ರಕೆ ಬಲು ಧೀರ 2

ಮಾನ್ಯರ ಕೋಪದಿ ಝಡಿವಾ ಅವಮಾನ್ಯರ ಕೊಂಡಾಡಿ ನುಡಿವಾ
ಜ್ಞಾನದ ಹಾದಿಯ ಕಾಣ ಗೋಣಿಯ ಹೊರುವ ಕೋಣ 3

ಮುಕ್ತಿಯ ತಿಳಿಯಲು ಬಾರ ಮುಂದಿನ ಭವಿತವ ನೋಡ
ಭಕ್ತಿಯೆಂಬುದಿಲ್ಲ ಈ ಕತ್ತೆಗೇನು ಸಲ್ಲ 4

ಕಲ್ಲನೆ ದೇವರು ಎಂಬ ಕಡಮೆಯಲಿಲ್ಲವು ಎಂಬ
ಒಳ್ಳಿತಲ್ಲವು ಅವನಿರವು ಒಲಿದವನೇ ಚಿದಾನಂದ ಗುರುವು 5

265
ತಿಳಿದು ನೋಡಲೆ ಮನವೆ ತೀವ್ರ ತಾಮಸವೇಕೆ ತಿಳಿದುಕೋ

ತಿಳಿದು ನೋಡಲೆ ಮನವೆ ತೀವ್ರ ತಾಮಸವೇಕೆ ತಿಳಿದುಕೋ
ನಿನ್ನ ನೀನು ತಿಳಿಯೆ ಮಾಯೆಗಳಿಲ್ಲ ತಿಳಿಯೆ ಶಿವನಾಗುತಿಹ
ಬಲುಮರವೆ ಯಾಕೆ ಪಾಪಿ ಮನವೆ ಪ

ಮಂಗಳ ಮಹಾ ಶೂನ್ಯ ಮಹಾ ಪುರುಷ
ನಿಸ್ಸಂಗ ನಿರ್ಗುಣ ನಿರಾಶಾ
ಸಂಗದೂರ ಉದಾರ ಸಕಲ ಜಗದಾಧಾರ
ಮಂಗಳಕಾರ ಮಹಿಮ
ತುಂಗ ವೇದಾಂಗಗಳ ಗಣಿತಕಪಾರ
ದುರಿತ ಭಂಗತರ ತರಂಗ ಮೂರ್ತಿ
ಜಂಗಮನೆ ನೆಲೆಸಿಹನು ಜನಿಸಿ
ನೀ ನಿನ್ನೊಳಗೆ ಕಣ್ಗಾಣದಿಪ್ಪೆ ಗುರುವ ಮನವೆ 1

ಮಾಯೆ ಮೋಹಕೆ ಸಿಲುಕಿ ಮಗ್ನನಾಗಿರುತಿಹೆ
ಕಾಯವಿದು ನಿನಗೆ ಸ್ಥಿರವೇ
ಆಯಾಸಂಬಡಬಹುದೆ ಅಲ್ಪ ಮತಿಗಳ
ಕೂಡಿ ನ್ಯಾಯವೆ ನಿನಗೆ
ರಾಯ ನಾನೆಂಬ ಹೆಮ್ಮೆಯ ತಾಳ್ದು ರತಿ
ಬಹಳ ಸ್ತ್ರೀಯರಲಿ ಸೊಗಸಬಹುದೇ
ಮಾಯಕಿಂತಕಟ ನೀ ಶಿಲ್ಕಿ ಒಳಗಾಗುವುದು
ಮಾಯವೋ ಇದು ಮಹಿಮೆಯೋ ಮನವೇ 2

ಎನ್ನ ಸತಿಸುತ ಬಂಧು ಎನ್ನ ಗೃಹವು
ಇದೆಂದು ಬನ್ನಬಡುತಿಹೆ ಯಾತಕೆ
ನಿನ್ನೊಳಗೆ ಇಹ ವಸ್ತು ನೀನೆ ಕಾಣದಲಿರೆ
ಮನ್ನಿಸಾ ಗುರುಹಿರಿಯರ
ಉನ್ನತ ಕಟಾಕ್ಷದಲಿ ಒಳಗೆ ದೃಷ್ಟಿಸಿ ಕಂಡು
ನಿನ್ನೊಳಗೆ ಪುಳಕನಾಗು
ಚಿನ್ಮಯ ಚಿದಾನಂದ ಚಿದ್ರೂಪ ತಾನೆಂದು
ನಿನ್ನ ಸಂಶಯ ಕಳೆಯೋ ಮನವೇ 3

266
ತಿಳಿಯಲೋ ರನ್ನಾ ನಿನ್ನೊಳು ನಿನ್ನ

ತಿಳಿಯಲೋ ರನ್ನಾ ನಿನ್ನೊಳು ನಿನ್ನ ಪ
ಅನ್ನವ ನೀಡು ತುಪ್ಪವ ಕೊಡು
ಚೆನ್ನಾಗಿ ಉಣ್ಣುವವನಾರೋ ಅವನಾರೋ 1

ಹೋಳಿಗೆ ಹಿಸುಕಿ ಹಾಲೊಳು ಕುಸುಕಿ
ಹೋಳಿಗೆ ಉಂಬವನ್ಹೆಸರೇನೋ ಹೆಸರೇನೋ 2

ಜಡಕೆಯು ಇಲ್ಲಾ ಇದೆಲ್ಲಾ
ಮೃಢ ಚಿದಾನಂದ ನೀನೆನ್ನು ನೀನೆನ್ನು 3

267
ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ

ತಿಳಿಯಿರೋ ಸಮ್ಮಿಂದ ಹೇಳುವೆ ಸುಧಾನಂದ ಪ

ಉಂಬವ ತಾನಾರು ಉಣಬಲ್ಲವನಾರು
ಸಂಭವಿಸುವನಾರು ಸಮನಿಸಿ ಇಂಬಾಗಿಹನಾರು 1

ಕಣ್ಣಿಂದಲೆ ನೋಡಿ ನೋಡುವ ಕಣ್ಣು ಕಾಂಬುದೆ ಖೋಡಿ
ಕಣ್ಣೊಳಗದೆ ನೋಡಿ ಕಂಡಾ ಕಣ್ಣಹುದೆಂದಾಡಿ 2

ಕಿವಿಯಿಂದಲೆ ಕೇಳಿ ಕಿವಿಯನು ಕಿವಿಯೆ ಗಯ್ಯಾಳಿ
ಕಿವಿಯೆ ದಿವಾಳಿ ಕಿವಿಗಾ ಕಿವಿಗರಿವಹುದ್ದೇಳಿ 3

ನಾಲಗೆ ನುಡಿಯಿರಲಿ ನುಡಿವುದೆ ನಾಲಗೆ ಬರಿ ತೊಗಲು
ನಾಲಗೆಯೊಳಗಿರಲು ಮೂಲದ ನಾಲಗೆಯಲಿ ಬರಲು 4

ಮೂಗಿನ ಮೂಲಕ ಪ್ರಾಣ ಅರಿವಡೆ ಮೂಗು ಬಲ್ಲುದೆ ಕೋಣ
ಮೂಗರಿದವ ಜಾಣ ಮೂಗದು ನಿರ್ವಾಣ 5

ತನುವಿನ ಒಳಗಿರ್ದು ಚೇತನ ಜನಿಸುತಲಿರುತಿರ್ದು
ಇನಿತಾದಲಿರ್ದು ಬೆಳಗುವ ತಾನೆ ತಾನಿರ್ದು 6

ರೂಪಕೆ ವಿರಹಿತನೆ ತೋರ್ಪಾ ರೂಪವೇ ತಾನಿಹನಾ
ಲೇಪಕೆ ದೂರಿಹನಾ ಚಿದಾನಂದಪತಿ ಗುರುವವನಾ 7

268
ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆ

ತುಪಾಕಿ ಸಾಧನವನು ತ್ವರಿಯ ಬಿದ್ದು ಮಾಡುತಿರುವೆ
ಶಾಬಾಸು ಶಿವನೇ ನೀನಣ್ಣ ಪೇಳುವೆನಣ್ಣ ಪ

ಮೌನವೆಂದೆನಿಪ ಮುಸೈದೆ ಸಹಿತಾಗಿ
ಜ್ಞಾನ ಪಡೆದಳವ ಬಗಿಯಣ್ಣಾ ಸಾಧಿಸು ಅಣ್ಣ
ಧ್ಯಾನವೆಂದೆನಿಪ ತಲೆಕಟ್ಟನೆ ಕಟ್ಟಿ
ಆನಂದವನೆ ಆಡಣ್ಣ ಸಾಧಿಸು ಅಣ್ಣ 1

ಆರು ಚಕ್ರವೆಂಬ ಆರು ಕಟ್ಟಿನ ತುಪಾಕಿ
ಧೀರತನದಿಂದ ಪಿಡಿಯಣ್ಣಾ ಸಾಧಿಸು ಅಣ್ಣ
ಮೂರಾವಸ್ಥೆಯೆಂಬ ಮೂವೆರಳ ಮದ್ದ ಹೊಯ್ದ
ಪೂರಾಯದವನ ಮಾಡಣ್ಣ ಸಾಧಿಸು ಅಣ್ಣ 2

ಇಡಾಪಿಂಗಳವೆಂಬ ಎರಡು ಗುಂಡನೆ ಹಾಕಿ
ರೂಢಿ ಎಂಬ ಗಜವ ಜಡಿಯಣ್ಣ ಸಾಧಿಸು ಅಣ್ಣ
ಕೂಡಿಹ ಸತ್ವನೆಂಬ ಕೂರಿ ರಂಜಕವರೆದು
ಗೂಡು ಗುರು ಜಾವಿಗೆ ಒತ್ತಣ್ಣ ಸಾಧಿಸು ಅಣ್ಣ 3

ಆಸನ ನಳಿಕೆಯೆಂಬ ಆಧಾರವನೆ ಆಂತು
ವಾಸರ ಹೊಗ್ಗೊಡಬೇಡಣ್ಣ ಸಾಧಿಸು ಅಣ್ಣ
ನಾಸಿಕಾಗ್ರವು ಎಂಬ ನೊಣನ ದಿಟ್ಟಿಸಿ ನೋಡಿ
ಸೂಸದೆ ಏರಿಸಿ ನಿಲ್ಲಣ್ಣ ಸಾಧಿಸು ಅಣ್ಣ 4

ಬರಿಯ ಪ್ರಣವವೆ ಎಂಬ ಬೆರಳ ಬೊಬ್ಬೆಯನಿಟ್ಟು
ಭರದಿ ಭೀತಿಯನಳಿಯಣ್ಣಾ ಸಾಧಿಸು ಅಣ್ಣ
ಗುರು ಚಿದಾನಂದನು ಎಂಬ ಗುರಿ ಭ್ರೂಮಧ್ಯವೆ ಇರೆ
ಗುರಿಯ ತಾಗುವಂತೆ ಇಡಣ್ಣ ಸಾಧಿಸು ಅಣ್ಣ 5

269
ತ್ಯಜಿಸಬಾರದೋ ನೀವು ಸಜ್ಜನರ ಸಂಗ

ತ್ಯಜಿಸಬಾರದೋ ನೀವು ಸಜ್ಜನರ ಸಂಗ
ತ್ಯಜಿಸಬಾರದೋ ನೀವು ಪ

ದರುಶನ ಮಾಡೆ ದುರ್ದೋಷವು ಹರಿವುದು
ಸ್ಪರ್ಶವ ಮಾಡೆ ಪ್ರಪಂಚವು ಹರಿವುದು 1

ಮಾತು ಆಡುತಲಿರೆ ಮೈಯದು ಮರೆವುದು
ಪ್ರೀತಿಯಿಂ ಶರಣೆನೆ ಪರಿಣಾಮ ತೋರ್ಪುದು 2

ವಾಸನೆ ಇರೆ ನಿರ್ವಾಸನೆಯಹುದು
ಸೂಸುತಲಿಹ ಮನ ನಿಶ್ಚಿತವಹುದು 3

ಸಂಶಯವಿರೆ ನಿಃಸಂಶಯವಹುದು
ಹಂಸೋಹಂ ಭಾವ ಸಹಜಾವಾಗಿ ನಿಲ್ಲುವುದು 4

ಸುದತಿ ಇಹಪರ ತಾ ಬಿಡಲು ಬಹುದು
ಸುಧಾ ಚಿದಾನಂದನ ಬೆರೆತರೆ ತ್ಯಾಗ ಮಾಡಲು ಬಾರದು 5

270
ಥೂ ಥೂ ಚತುಷ್ಪಾದಿ ನಿನಗೇತಕೋ ಗುರುಹಾದಿ

ಥೂ ಥೂ ಚತುಷ್ಪಾದಿ ನಿನಗೇತಕೋ ಗುರುಹಾದಿ
ಮಾತು ತತ್ವದ ಬೋಧ ನಡತೆಯಲಿ ಕತ್ತೆಯಾದೆ ಪ

ನೀರಲಿ ನೆರಳನೆ ನೋಡುವೆ ಹಣೆಗೆ ಗಂಧವ ತೀಡುವೆ
ಹಾರ ತುರಾಯ್ಗಳ ಸೂಡುವೆ ಮೋರೆಯನೆತ್ತೆತ್ತ ಮಾಡುವೆ 1

ಜಾರೆಯರೊಡನೆ ಬೆರೆವೆ ಕಿಸಿ ಕಿಸಿ ಹಲ್ಲನೆ ಕಿರಿವೆ
ಬಾರದ ಪದವ ಒದರುವೆ ಹಮ್ಮಿನಿಂದೆಲ್ಲೆಲ್ಲಿ ಮೆರೆವೆ 2

ಬಿಡುವೆನು ಗುರುಪಾದವೆಂಬೆ ಬೇಡಿತಿಯ ಕೂಡುವೆನೆಂಬೆ
ಸುಡುವೆನು ಕಪನಿಯನೆಂಬೆ ಲಿಂಗವ ಕಟ್ಟಿರಿ ಎಂಬೆ 3

ವಿಧ ವಿಧ ವೇಷವ ಧರಿಸಿ ಬಹು ಜಾತಿಯಲಿ ಕೈ ಬೆರಳಿರಿ
ಚಿದಾನಂದ ನೀ ಮೆರೆಸಿ ಬಾಳುವೆ ದೊಡ್ಡವನೆನಿಸಿ 4

271
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದು

ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದು
ದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ

ಮಗ ಬುದ್ಧಿವಂತನಾಗಲಿಲ್ಲವೆಂದೆಂಬ
ಮಗಳಿಗೊದಗಲಿಲ್ಲ ಅಳಿಯ ಎಂದೆಂಬ
ಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದು
ಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು 1

ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದು
ಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದು
ಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದು
ಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2

ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದು
ಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದು
ಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದು
ಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು 3

ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದು
ಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು
ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದು
ಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4

ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದು
ನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದು
ಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದು
ಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5

272
ದೇಹ ಪ್ರಾರಬ್ಧವು ದೇಹಕೆ ಸ್ತ್ರೀ

ದೇಹ ಪ್ರಾರಬ್ಧವು ದೇಹಕೆ ಸ್ತ್ರೀ
ದೇಹ ಬಿಟ್ಟಾತಗೆ ಹ್ಯಾಗೆ
ದೇಹ ಪ್ರಾರಬ್ಧವು ಕಡೆಯಲ್ಲಿ ಬೀಳ್ವುದು
ದಯ ಮಾಡುವೆನು ಒಳಿತಾಗೆ ಪ

ಶರೀರದಿ ವ್ಯವಹಾರವೆಲ್ಲವ ಮಾಡುತ
ಸಾಕ್ಷಿಯಾಗಿಹರದು ಹ್ಯಾಗೆ
ತಿರುತಿರುಗಿ ಬಿಡೆ ಸತ್ವವೆಂತೋ ಅಂತಿರ್ದು
ಒರಗುವ ಪರಿ ಹಾಗೆ 1

ಎಂಬನೇನು ನಾನಾ ವಿಷಯಂಗಳೊಳಿರ್ದು
ಎರಡು ಆಗಿಹರದು ಹ್ಯಾಗೆ
ಅಂಬ ಸೇಡಿಯಂಬಿಡೆ ಸತ್ವಂತೋ ಅಂತ್ಹೋಗಿ
ಅಂಬು ತಿಲಕೆ ಬಿದ್ದ ಹಾಗೆ 2

ಭೂಪ ಚಿದಾನಂದ ಸದ್ಗುರುವಾಗಿ
ಭೂಮಿ ಮೇಲಿಹರದು ಹ್ಯಾಗೆ
ದೀಪದ ತೈಲವು ತೀರುವನಕ ಇರ್ದು
ದೀಪವು ನಂದಿದ ಹಾಗೆ 3

273
ನನ್ನ ಮಗನೆಂಬರು ನಾಯಿ ಮಕ್ಕಳು

ನನ್ನ ಮಗನೆಂಬರು ನಾಯಿ ಮಕ್ಕಳು
ತನ್ನ ತಾನೆ ಬ್ರಹ್ಮವದು ತಾನೆ ವೇಷ ಹಾಕಿ ಬರೆ ಪ

ಸತಿಪತಿ ತಾವು ಆಗ ಸಂಯೋಗದ ಕಾಲದಲ್ಲಿ
ಸುತನ ಕಿವಿ ಮೂಗ ಏನ ತಿದ್ದಿದರೇನೋ
ಅತಿ ಆಶ್ಚರ್ಯವಲ್ಲದೆ ಅವಯವ ತಾಳಿಕೊಂಡು
ಕ್ಷಿತಿಗೆ ಮೈದೋರುತ ತಾನೆ ಬಂದರೆ 1

ಗಂಧ ಕಸ್ತೂರಿಯ ಪೂವು ಗಮಕದಲಿ ಧರಿಸುವಾಗ
ಒಂದನ್ನ ಸುತೆಗೆ ಗುರುತು ಮಾಡಿದರೇನೋ
ಇಂದು ಇದೆನೆವವೆಂದು ಇಳಿದು ಸಪ್ತಧಾತು ತಾಳಿ
ಛಂದದಿ ವಿನೋದಕಾಗಿ ತಾನೆ ಬಂದರೆ 2

ಮಂಚವೇನು ಸಂಪತ್ತಿಗೆ ಮಡಿಹಾಸಿಗೆಯೊಳಿರ್ದು
ಮಂಚದಲಿರುತ ಸುತಗೆ ಚೇತನ ತುಂಬಿದರೇನೋ
ಹೊಂಚಿನೋಡಿ ಚಿದಾನಂದ ಹೊರೆಯೇರಿ ಹರುಷದಿ
ಪಂಚವಿಂಶತಿ ತತ್ವ ಕೊಡಿ ತಾನೆ ಬಂದರೆ 3

274
ನಿಂದಕರು ಎಂದವರ ತುಚ್ಚಿಸಲಾಗದು

ನಿಂದಕರು ಎಂದವರ ತುಚ್ಚಿಸಲಾಗದು
ಸಂದೇಹವಿಲ್ಲವು ಅವರು ಅತಿಹಿತರು ಪ

ಸಂಚಿಸಿದ ಕರ್ಮದಿಂ ಸತ್ಪುರುಷರುದಿಸಿರಲು
ಹಂಚಿಕೊಂಬರು ತಾವು ಎಲ್ಲರದನು
ವಂಚಕರು ಎಂದವರ ನೀಚಸಲಿಕಾಗದು
ಮುಂಚೆವಂದಿಸಬೇಕು ಅವರ ಪದಕೆ 1

ತಾಯಿ ಶಿಶುವಿನ ಮಲವ ತಾ ತೃಣದಿ ತೆಗೆಯುವಳು
ಮಾಯಹರ ಮಹಾಪುರುಷರ ಮಲವನು
ಆಯಾಸವಿಲ್ಲದಲೆ ತಮ್ಮ ನಾಲಿಗೆಯಲಿ ತೆಗೆಯುವರು
ಪ್ರಿಯರಿಂತವರಿಗಿಂತ ಹಿತವರುಂಟೆ 2

ಉದಯ ಮಧ್ಯಾಹ್ನ ಮುಹೂರ್ತಗಳ ನೋಡದಲೆ
ವಿಧವಿಧದ ಪಾಪಗಳ ತಮ್ಮ ಮುಖದಿ
ಮುದದಲುಚ್ಚರಿಸಿ ಚಿದಾನಂದ ಗುರುಭಕ್ತರನು
ಸುಧೆಯ ಸುಖಮುಕ್ತಿಯೊಳು ಹೊಂದಿಸುವವರು 3

275
ನಿನ್ನನೆ ನೀ ಕಾಣಣ್ಣ

ನಿನ್ನನೆ ನೀ ಕಾಣಣ್ಣ
ನಿನ್ನ ಕಾಣುವುದರಿಯಣ್ಣ
ನಿನ್ನಯ ದೇಹದೊಳಣ್ಣ
ನಿನಗೆ ಹೇಳುವೆನಣ್ಣ ಪ

ಕಣ್ಣನೆ ಮುಚ್ಚಣ್ಣ ಕಪ್ಪನು ಲಕ್ಷಿಸೋ ಅಣ್ಣ
ಹೊನ್ನು ಕಳೆಗಳಣ್ಣ ಹುಟ್ಟುವುದು ಮುಂದಣ 1

ಕಪ್ಪದು ಅಡಗಲಿ ಅಣ್ಣ ಕಪ್ಪಿನ ಸ್ಥಳ ಹಿಡಿಯಣ್ಣ
ಕುಪ್ಪಳಿಸುವುದು ಬೆಳಗಣ್ಣ ಕಾಡು ಕಿಚ್ಚಿನಂತಣ್ಣ 2

ದೃಷ್ಟಿಯಲಿ ದೃಷ್ಟಿವಣ್ಣ ದೃಷ್ಟಿಯ ನೆಲೆಯಾಗಲಣ್ಣ
ಶಿಷ್ಟ ಚಿದಾನಂದನಣ್ಣ ಸಾಕ್ಷಾತ್ ನೀನಹೆಯಣ್ಣ 3

276
ನೆನೆಯಿರೋ ಪಾಪಿಗಳಿರ ನೆನೆಯಿರೋ ಪಾಪಿಗಳಿರ

ನೆನೆಯಿರೋ ಪಾಪಿಗಳಿರ ನೆನೆಯಿರೋ ಪಾಪಿಗಳಿರ
ನೆನೆಯಿರೋ ದ್ರೋಹಿಗಳಿರ ನೆನೆಯಿರೋ ಆತ್ಮನನು ಪ

ಘಳಿಗೊಂದು ಮರೆಯಾಗಲಾಗಿ ಮೇರು ಕೊಟ್ಟರು ತಿರುಗದು
ಘಳಿಗೆರಡು ಪೋಗೆ ಕಡೆಯಿಲ್ಲ ಕೇಡು
ಸುಲಭವೆನಲಿಕ್ಕಿಲ್ಲ ದೇಹ ನಿತ್ಯವದಲ್ಲ
ಕಲಹದ ಮಾತಲ್ಲ ಕಡೆ ಹಾಯ್ವ ಪಥವು 1

ಮಲಗಿದಾಗಲೆ ಏನೋ ಕುಳಿತಾಗಲೇನೋ
ತಿಳಿದು ನೋಡಲು ನಡೆವಾಗ ನುಡಿವಾಗಲೇನೋ
ಬಲವು ಕಾರಣವಲ್ಲ ಆಗೇನೋ ಈಗೇನೋ
ಮಲ ಮೂತ್ರ ಮಾಂಸಗಳ ಮುರಿಕೆ ಮಜ್ಜೆಯಿದು 2

ತನ್ನ ದೇಹದೊಳಿರುವ ಆತ್ಮನನು ಮರೆತಾಗ
ತಾನೆ ಆತ್ಮ ದ್ರೋಹಿ ತಾನೆ ಗುರು ದ್ರೋಹಿ
ತನ್ನ ದೇಹವ ಹೊತ್ತು ಚಿದಾನಂದ ಬೆಳಗುತಿರೆ
ತನ್ನ ಮರೆತು ಭವ ಪಾಲಹ ಪಾಪಿ 3

277
ನೋಡಿರೆ ಅಡ್ಡ ಬಂದ ಗ್ರಹಚಾರ

ನೋಡಿರೆ ಅಡ್ಡ ಬಂದ ಗ್ರಹಚಾರ
ಮಾಡೆ ಪಾಪವ ಮನ ಆತ್ಮಣಗೆಂಬುದು ಪ

ಕಳ್ಳ ಕನ್ನದಿ ಸಾಯೆ ಡೊಳ್ಳುಕೋಮಟಿಗನ
ತಳ್ಳಿ ಶೂಲಕೆ ಏರಿಸು ಎಂಬ ಗಾದೆ
ಜಳ್ಳು ಮನವಿದು ನಿಲದೆ ಪಾಪವನು ಮಾಡಿದರೆ
ಆ ಪಾಪ ಆತ್ಮಗೆ ಎಂದು ಊಹಿಸುವರು 1

ಏಡಿ ಹಾದರವಾಡೆ ಗೋದರಕಪ್ಪಯ ಕೂಡಿ
ಎಲ್ಲರಿಗು ಕೋಳ ಹಾಕೆಂಬ ಗಾದೆ
ಮೂಢ ಮನವಿದು ತಾನು ಪಾಪವನು ಮಾಡಿದರೆ
ಆಡಲೇನದ ಆತ್ಮಗೆಂದು ಊಹಿಸುವರು 2

ಮನವು ಎಂಬುದು ಆತ್ಮನಿಂದ ಸಂಚರಿಪುದು
ಮನವು ಆತ್ಮನೊಳು ಲಯವು ಅಹುದು
ಮನವು ಮೊದಲಿಗೆ ಸುಳ್ಳು ಪಾಪಗಳಿಹವೆಲ್ಲಿ
ಮನಕುಗೋಚರ ಚಿದಾನಂದ ಶುದ್ಧಾತ್ಮನು 3

278
ಪತ್ರ ಜಲದಂತೆ ಇಹ ಮಹಾತ್ಮರು ಬುದ್ಧಿ

ಪತ್ರ ಜಲದಂತೆ ಇಹ ಮಹಾತ್ಮರು ಬುದ್ಧಿ
ಶಿಷ್ಯಂಗೆ ಹೇಳ್ವುದು ಹ್ಯಾಗೆ
ಪತ್ರ ಜಲದಂತೆ ಇರುವವರ ವಿವರವ
ಕಂಡದ್ದಪೇಳುವೆ ತಿಳಿದ್ಹಾಗೆ ಪ

ಪರಮ ಶಿಷ್ಯರಿಗೆ ತತ್ವದ ಬೋಧೆ ಬೋಧಿಸಿ
ಪರವಾಗಿಹರದು ಹ್ಯಾಗೆ
ಹುರಿದ ಚಣಕ ತಿನಲಿಕೆ ಬಹುದಲ್ಲದೆ
ಹುಟ್ಟುವಣಿಲ್ಲದ ಹಾಗೆ 1

ವೆಗ್ಗಳವಾಗಿಹ ತತ್ವಗ್ರಂಥವ ಹೇಳಿ
ವಸ್ತುವಾಗಿರದು ಹ್ಯಾಗೆ
ಬೊಗ್ಗೂವಡೆದ ಮಾಡಬಾಹಣವಲ್ಲದೆ
ಬೊಗ್ಗೂ ಕಟ್ಟಿಗೆಯಾದ್ಹಾಗೆ 2

ಶಬ್ದಡಗಿದ ಚಿದಾನಂದ ಮಹಾತ್ಮರು
ಶಬ್ದವಾಡುವರದು ಹ್ಯಾಗೆ
ಶಬ್ದವು ಗವಿಯಲ್ಲಿ ಮಾಡಲು ಮಾಡುವುದು
ಶಬ್ದವೀ ಗವಿಗಿಲ್ಲದ ಹಾಗೆ 3

279
ಪಾಪ ಹತ್ತಿದೆ ಜಗಕೆ ಪಾಪ ಹತ್ತಿದೆ

ಪಾಪ ಹತ್ತಿದೆ ಜಗಕೆ ಪಾಪ ಹತ್ತಿದೆ
ಪಾಪದೊಳಗೆ ಮಹಾಪಾಪ ಪುರುಷ
ಬೀಜಕೆ ಬಂದಿದೆ ಮೃತ್ಯು ಪ

ಅಂದು ಕೃತಯುಗದಿ ಪಾರ್ವತಿಯಾಯಿತು ಭಸ್ಮಾಸುರಗೆ
ಮುಂದೆ ತ್ರೇತಾಯುಗದಿ ಸೀತೆಯಾಗಿ ಹಿಡಿಯಿತು
ರಾವಣಂಗೆ ಮೃತ್ಯು 1

ಹಿಂದೆ ದ್ವಾಪರಯುಗದಿ ದ್ರೌಪದಿಯಾಗಿ
ದುರ್ಯೋಧನನ ಮುರಿಯಿತು ಮೃತ್ಯು
ಇಂದು ಕಲಿಯುಗದಿ ನೋಡಲು ಇದಕೋ
ಮನೆಮನೆಗೆ ಮೃತ್ಯು 2

ಹೆಡಕತ್ತಲಿ ಕೂತು ಹಗಲು ಇರುಳು ಕಾಯಿತಿದೆ ಮೃತ್ಯು
ಬಿಡಿಸಿಕೊಂಡು ಸ್ವರ್ಗಕೆ ಹೋದರೆ ಬೆನ್ನ
ಬಿಡದು ಅಲ್ಲಿ ಮೃತ್ಯು
ಅಡ ಶಿರೋಶಿ ಇಲ್ಲಿಗೆ ಬಂದರೆ
ಅಡರಿ ಕೊಂಬುದು ಮೃತ್ಯು 3

ಮೃತ್ಯುಭಯವ ಬಿಡಿಸಿ ಮುಂದೆ ಕಾವರಿಲ್ಲವೋ
ಮೃತ್ಯುಂಜಯರು ಚಿದಾನಂದ ಭಕ್ತರುಂಟು
ನಂಬಿದರೆ ಮೃತ್ಯು ಮಗ್ಗುಲಲಿದ್ದರೇನು
ಮೋಹವಿಲ್ಲದಂತೆ ಮಾಡುವುದು 4

280
ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆ

ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆ
ಪಾಪಿಯ ನೋಡೆ ಪಾಪದ ಪಿಶಾಚಿ
ಪಾಪಿಯ ಮೋರೆಯ ನೋಡಬಾರದಕ್ಕೆ ಪ

ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳು
ಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು
ಎದುರಿಗೆ ನಿಂತೆ ಮುಸಿ ಮುಸಿ ನಗುವಳು 1

ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ
ಬೇಸಗೆ ಸೆಖೆ ಎಂತೆಂಬಳು
ಮಜ್ಜಿಗೆ ಹಾಕೆನೆ ಮಂದಮತಿಗಳ
ಮಹಾಶೈತ್ಯವು ಬೇಡವು ಎಂತೆಂಬಳು 2

ಉತ್ತಮರೆಂದರೆ ಒಳ್ಳೆಯದಿಕ್ಕಳು
ಉಬ್ಬಿಸಹೋದರೆ ಉಬ್ಬದಿಹಳು
ನಿತ್ಯ ಚಿದಾನಂದ ಸತ್ಪುರುಷರಿಗೆ
ನಿಶ್ಚಯವಾಗಿ ಉಣಬಡಿಸುವಳು 3

281
ಪುಣ್ಯದ ಹಾದಿಯ ಪೇಳ್ವೆ ಪೇಳಿದಂದದಲಿರೆ

ಪುಣ್ಯದ ಹಾದಿಯ ಪೇಳ್ವೆ ಪೇಳಿದಂದದಲಿರೆ
ಪುಣ್ಯಲೋಕವು ನಿನಗಣ್ಣ
ಪುಣ್ಯವ ಕೆಡುಗೊಡದಲೆ ನೀನು ನಡೆದರೆ
ಪುಣ್ಯ ಪುರುಷನಹೆಯಣ್ಣ ಪ

ಬಿಸಿಲೊಳಗಿದ್ದವರ ನೀನು ನೆರಳಿಗೆ ಕರೆದರೆ
ಬಹಳ ಸುಖವು ನಿನಗಣ್ಣ
ಹಸಿದು ಬಂದವರಿಗೆ ತುತ್ತನಿಕ್ಕಲು ನಿನಗೆ
ಅರಕೆಯಿಲ್ಲದ ಅನ್ನವಣ್ಣ 1

ನೀರಡಸಿದವರಿಗೆ ನೀರನ್ನು ಎರೆದರೆ
ನಿನಗೆಂದು ಕಷ್ಟವಿಲ್ಲಣ್ಣ
ದಾರಿ ತಪ್ಪಿದವರಿಗೆ ದಾರಿಯ ತೋರಿಸೆ
ಧಾವತಿ ನಿನಗಿಲ್ಲವಣ್ಣ 2
ಮನೆಯಿಲ್ಲದವರಿಗೆ ಮನೆಯ ಕೊಟ್ಟೊಡೆ
ನಿನಗೆ ಮುಂದಿಹುದು ಮನೆಯಣ್ಣ
ಇನಿತು ವಸ್ತ್ರವಿಲ್ಲದವಗೆ ವಸ್ತ್ರವನು ಕೊಡೆ
ಏನು ವಿಪತ್ತು ನಿನಗಾಗದಣ್ಣ 3
ಬಡವರನು ಮುಂದಂತೆ ತಂದರು
ನೀನೀಗ ಬಲವಂತನಾಗುವೆಯಣ್ಣ
ನುಡಿಯಲು ಒಳ್ಳೆಯ ವಾಕ್ಯವ ನೀನೀಗ
ನೋಯದಂತಿರುವೆ ಮುಂದಣ್ಣ 4
ವನಗುಡಿ ಕೆರೆಬಾವಿ ಧರ್ಮ ಮಳಿಗೆ ಹಾಕೆ
ಒಲಿವನು ಶಿವನು ನಿನಗಣ್ಣ
ಘನ ಚಿದಾನಂದ ಸತ್ಪುರುಷರ ಸೇರಲು
ಘಟ್ಟಿ ಮುಕ್ತಿಯು ನಿನಗಣ್ಣ 5

282
ಪುರುಷ ಪ್ರಕೃತಿಯಲ್ಲಿಹನು ಎಂತೆನೆ

ಪುರುಷ ಪ್ರಕೃತಿಯಲ್ಲಿಹನು ಎಂತೆನೆ
ಇರುವನೀ ತೆರದಿ ಉಭಯದಲಿ ಪುರುಷ ಪ

ತಿಲದೊಳಗೆ ತೈಲ ಕಾಷ್ಟದೊಳಗೆ ಅಗ್ನಿ
ಫಲದಲಿ ರುಚಿಯು ಇದ್ದಂತೆ ಪುರುಷ 1

ಸ್ತನದೊಳಗೆ ಕ್ಷೀರ ಕ್ಷೀರದೊಳಗೆ ಘೃತ
ಘನ ಭೇರಿಯಲಿ ನಾದ ಇದ್ದಂತೆ ಪುರುಷ 2

ಮಣಿಗಣದಲಿಸೂತ್ರ ಮಾಲಿಕೆಯಲಿ ತಂತು
ಘನವಾದ ಘಟದಲ್ಲಿ ಬಯಲಂತೆ ಪುರುಷ 3

ಘನದಲ್ಲಿ ಉದಕ ಗಗನದಲಿ ಮಿಂಚು
ಅನಿತು ಔಷಧಿಯಲ್ಲಿ ರಸದಂತೆ ಪುರುಷ 4

ತೈಲಬಿಂದುವು ಉದಕದಲ್ಲಿ ವ್ಯಾಪಿಸಿದಂತೆ
ಲೋಲ ಚಿದಾನಂದ ತಾನಿಹ ಪುರುಷ 5

283
ಪ್ರತಿಮೆ ಪೂಜೆಗಳವು ಪರಮಾರ್ಥವಲ್ಲವು

ಪ್ರತಿಮೆ ಪೂಜೆಗಳವು ಪರ-
ಮಾರ್ಥವಲ್ಲವು ಪಾಮರರಿಗೆ ಅದು ಸಾಧನವು
ಪ್ರತಿಮೆ ಪೂಜೆಯು ತಿಳಿದವರಿಗೆ
ಉತ್ತಮವಲ್ಲದ ಪರಮಾತ್ಮ ಪ್ರತ್ಯಕ್ಷ ನೀವೆನ್ನಿ ಪ

ಕಳ್ಳನು ಮನೆದೇವರನೊಯ್ಯೆ ಪ್ರತಿಮೆಯಲಿ
ಎಳ್ಳಷ್ಟು ಕರುಣ ಹಿಡಿಯಲಿಲ್ಲ
ಹುಲ್ಲು ಶುನಕ ಮನೆ ಮುಂದಿತ್ತು ಆದರೆ
ಬಲ್ಲತೊದರಿ ಮನೆಯ ಉಳುಹುವುದು 1

ದಂಡು ಬರಲು ದೇವರನು ಹೊರು ಎಂಬರು
ಮುಂದೆ ಏನು ಕೆಲಸವಿಲ್ಲವು
ಮುಂದೆ ಉರಿಯುವುದು ಹೊತ್ತರೆ ಹಗುರವಿಲ್ಲ
ಚಂಡ ಚೈತನ್ಯಾತ್ಮೆ ನೀವೆನ್ನಿರಿ 2

ಬೆಕ್ಕನೆ ಹಿಡಿದೊಯ್ಯೆ ಇಲಿಗಳ ಹಿಡಿಯುವುದು
ಬಟ್ಟೆ ಬರಿಯ ಜೋಪಾನ ಮಾಡುವುದು
ಬೆಕ್ಕು ಪ್ರಯೋಜನ ದೇವರಪ್ರಯೋಜನ
ತಕ್ಕವು ಪರಮಾತ್ಮ ನೀವೆನ್ನಿರಿ 3

ಪ್ರತಿಮೆಗಳ ಯೋಗ್ಯವಲ್ಲ ಬ್ರಹ್ಮವಾದೀ
ಪ್ರತಿಮೆ ಎಂತು ಯೋಗ್ಯ ಪಂಚಾಳನವು
ಪ್ರತಿಮೆ ಎಂಬುವು ಜಡಬೊಂಬೆ
ಸಂಶಯವಿಲ್ಲ ಪರವಿಲ್ಲ ಪರವಸ್ತು ನೀವೆನ್ನಿರಿ 4

ಹೊಟ್ಟೆಗಿಲ್ಲದ ಕಾಲ ತಮಗೆ ಬಂದರೆ
ಘಟ್ಟಾಗಿ ದೇವರೆ ಗತಿ ಎಂಬರು
ಶಿಷ್ಟ ಚಿದಾನಂದ ಸದ್ಗುರು ನೀವೀಗ
ಬಿಟ್ಟಿರಿ ನಾನಾ ಪರಿ ದೇವರ 5

284
ಪುರುಷ ಪ್ರಕೃತಿಯಲ್ಲಿಹನು ಎಂತೆನೆ

ಬಹು ಚಿಂತೆಯೊಳಗಾಗಿ ನೀನು ದುಃಖಿಸಬೇಡ
ಬಹು ಕ್ಲೇಶ ಕಷ್ಟದಿ ಮುಳುಗಿ ಬಳಲಬೇಡ ಪ

ಹಿಂದೆ ನಾನಾ ಯೋನಿಯಲ್ಲಿ ಹಡಿಕೆಯೊಳು ಜನಿಸಿ ಜನಿಸಿ
ತಂದೆ ತಾಯಿ ಹೆಂಡಿರೇಸು ಲೆಕ್ಕವಾಯ್ತು ನೋಡ
ಮುಂದೆ ಬಹ ದುಃಖಕೆ ಮುಳುಗಿ ಮುಳುಗಿ ಧೈರ್ಯ ಪಡೆದು
ಮಂದ ಮತಿಯಾಗಿ ಗುರುವ ಮರೆಯಲಿ ಬೇಡ 1

ದುರ್ಜನರ ಸಂಗ ಮಾಡಿ ದುಷ್ಟ ನಡತೆಯಲ್ಲಿ ನಡೆದು
ಸಜ್ಜನರ ಸಂಗ ನೀ ಮರೆಯಲಿ ಬೇಡ
ಜಜ್ಜುಗಟ್ಟಿ ಪಾಪಕರ್ಮ ಜರಿದು ಜರಿದು
ಜೋಕೆಯಲ್ಲಿ ಸದ್ಗುರುನಾಥ ಸ್ಮರಣೆ ಮಾಡು 2

ಮನೆಯು ಮಕ್ಕಳೆಂಬ ಧನವು ಪಶುಗಳಲ್ಲಿ ಆಸೆಯಿಟ್ಟು
ನೆನೆಸಿ ನೆನೆಸಿ ಬಿಕ್ಕಿ ಬಿಕ್ಕಿ ಅಳಲು ಬೇಡ
ಚಿನ್ಮಯ ಚಿದಾನಂದಾವಧೂತನೊಳು ಬೆರೆತು
ಘನವನೈದಿ ಸದ್ಗುಣಾದಿ ತಿಳಿದು ನೋಡ 3

285
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟಿ

ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟಿ
ಬುದ್ಧಿಯ ನಾನು ಹೇಳುವೆ
ಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟಿ ಪ

ಹಿಂದಣ ಕುಲವು ಎಲ್ಲಿ ಎಲೆ ಎಂಗರವಟ್ಟಿ
ಹಿಂದಣ ಮತವು ಎಲ್ಲಿ ಹಿಂದಣ ಸತಿ ಎಲ್ಲಿ ಹಿಂದಣ ಸುತರೆಲ್ಲಿ
ಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1

ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟಿ
ಮುಂದಾರ ಮದುವೆಯಹೆ ಎಲೆ ಎಂಗರವಟ್ಟಿ
ಮುಂದಣ ತಾಯಿ ಯಾರು ಮುಂದಣ ತಂದೆ ಯಾರು
ಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ 2

ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿ
ಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟಿ 3

ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆ
ನಿನ್ನ ಮುಂದೆಯೇ ತನು ತಾನು ಹೋಗುವುದು
ತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟಿ 4

ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನು
ಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟು
ಒಡೆಯ ಚಿದಾನಂದನು ನೀನಾಗಿ ನೀನಿರು 5

286
ಬೇಗ ಮಾಡೋ ಭಕುತಿ ಆಗುವುದು ಮುಕುತಿ

ಬೇಗ ಮಾಡೋ ಭಕುತಿ ಆಗುವುದು ಮುಕುತಿ
ಆಗ ಈಗ ಎನ್ನದಿರು ಇದೆ ನಿನಗೆ ಮುಕುತಿ ಪ

ಧ್ಯಾನ ಹಲವು ಬಿಡು ಧ್ಯಾನ ಆತ್ಮನ ಮಾಡು
ಧ್ಯಾನ ಧಾರಣ ಸಮಾಧಿಯಂಗಳ ನೋಡು ನಿಜವ ಕೂಡು 1

ಎಚ್ಚರ ಬಾಹಿರ ಮರೆತು ಎಚ್ಚರ ಅಂತರವರಿತು
ಎಚ್ಚರ ಬಾಹಿರ ಅಂತರ ಮರೆತು ಎಚ್ಚರ ಬೇರರಿತು 2

ಸಾಧಿಸು ನಿತ್ಯ ಬಿಡದೆ ವಾದಕೆ ಮಯ್ಯ ಕೊಡದೆ
ಸಾಧಿಸು ನಿತ್ಯಾನಿತ್ಯಾ ವಸ್ತುವ ಸಾಧಿಸು ಗುರುವ ಹಿಡಿದೇ 3

ಬೇರೆ ಎಂಬುದ ಮಾಣು ಎಲ್ಲವ ನಿನ್ನಲೆ ಕಾಣು ನಾ
ಬೇರೆಯೆಂಬ ಮತಿಯ ಮಾಣು ಬಳಿಕ ಜಾಣ 4

ಬೋಧವನ್ನೇ ಹಿಡಿಯೋ ಬೋಧ ತುರೀಯ ಪಡೆಯೋ
ಬೋಧವೆನಿಪ ಚಿದಾನಂದ ಬೋಧ ಗುರಿವಿಡಿಯೋ 5

287
ಬೇಡವೀಗ ಬಾಲೆ ಸಂಗ ಕೆಟ್ಟುಹೋಗುವೆ ಇದು

ಬೇಡವೀಗ ಬಾಲೆ ಸಂಗ ಕೆಟ್ಟುಹೋಗುವೆ ಇದು
ಪಾಡಲ್ಲ ಭಂಗವನು ಅನುಭವಿಸುತ
ಕಾಡ ಹಿಡಿಯುವೇ ಹುಟ್ಟುಗೆಡುವೆಯಲ್ಲೊ ಪ

ಸತ್ಯವದು ನಾರಿದೋಷ ಮೃತ್ಯುವಲ್ಲೋ ಯಮ
ನಿತ್ಯದಲಿ ಎತ್ತಿರುವ ಕತ್ತಿಯಲ್ಲೋ ಆತ್ಮ-
ಹತ್ಯವಲ್ಲೋ ಅಪಥ್ಯವಲ್ಲೋ 1

ನಾರಿ ಮುಖವು ತಿಳಿದವಗೆ ನರಕವಲ್ಲೋ ಇಷ್ಟು
ಮರುಕವಂತು ಕಾಲಗೆ ದೊರಕದಲ್ಲೋ ದೊಡ್ಡ
ಫರಕು ಎಲ್ಲೊ ಕೆಟ್ಟ ಸರಕು ಎಲ್ಲೋ 2

ಶಿಷ್ಟಾಶಿಷ್ಟರೆಂಬವರು ಕೆಟ್ಟರಲ್ಲೋ ಬಲು
ಗಟ್ಟಿ ತವಸಿಗಳು ಮತಿಗೆಟ್ಟರಲ್ಲೊ ಕಂ-
ಗೆಟ್ಟರಲ್ಲೊ ಘಾಸಿಪಟ್ಟರಲ್ಲೋ 3

ಧಾರಣೆಯು ಧ್ಯಾನಮೌನ ಹಾರಿತೆಲ್ಲೋ ಕಾಮ
ಕೂರ್ಗಣೆಗಳು ಮೊನೆದೋರಿತಲ್ಲೋ ಮನೆ
ಹಾರಿತಲ್ಲೋ ಧೈರ್ಯತೂರಿತೆಲ್ಲೋ 4

ನಾರಿಯವಳು ನಿನ್ನ ಗತಿಗೆ ಮಾರಿಯಲ್ಲೋ ಗುರು
ವೀರ ಚಿದಾನಂದನನ್ನು ಸೇರು ಎಲ್ಲೋ
ಪರಿಹಾರವೆಲ್ಲೊಲ್ಲೋ ಮುಕ್ತಿ ಸಾರೆ ಎಲ್ಲೋ 5

288
ಬ್ರಹ್ಮಜ್ಞಾನಿಗಳ ನೋಡಿರೊ ಇಹ್ಹಿಹ್ಹಿ

ಬ್ರಹ್ಮಜ್ಞಾನಿಗಳ ನೋಡಿರೊ ಇಹ್ಹಿಹ್ಹಿ
ಬ್ರಹ್ಮಜ್ಞಾನಿಗಳ ನೋಡಿರೋ ಪ

ಜ್ಞಾನಿಗಳು ತಾವು ಅಂತೆ ತಾವೇ ಪರಬ್ರಹ್ಮರಂತೆ
ಏನೋನೊ ಹುಚ್ಚುಮಾತು ಕೇಳಿರಯ್ಯ ಅಹ್ಹಹ್ಹ 1

ಜೊಂಡು ಹುಲ್ಲಿನಂತೆ ಮಂಡೆಗಳ ಬೆಳೆಸಿಕೊಂಡು
ಕಂಡ ಕಂಡಂತೆ ತಿರುಗುವವರ ನೋಡಿರಯ್ಯ ಅಹ್ಹಹ್ಹ 2

ಸಂಧ್ಯವಿಲ್ಲ ಸ್ನಾನವಿಲ್ಲ ಮುಂದೆ ಹೋಮ ತರ್ಪಣವಿಲ್ಲ
ಅಂದು ತಾವೇ ಬ್ರಹ್ಮವಂತೆ ಕಂಡಿರೇನೋ ಅಹ್ಹಹ್ಹ 3

ಕಾವಿ ಕೌಪವುಟ್ಟುಕೊಂಡು ಕಮಂಡಲು ಹಿಡಿದುಕೊಂಡು
ದೈವ ತಾನೇ ಎಂಬ ದೈವಗಳ ನೋಡಿರೋ ಅಹ್ಹಹ್ಹ 4

ಇಂತು ಚಿದಾನಂದ ಗುರು ಭಕ್ತರಗಳ ನಿಂದ್ಯಮಾಡಿ
ಅಂತು ಕಾಲನ ಅರಮನೆಯ ಕುರಿಗಳಾದರಹ್ಹಹ್ಹ 5

289
ಬ್ರಹ್ಮವೆತ್ತಲು ಪರಬ್ರಹ್ಮವೆತ್ತಲು

ಬ್ರಹ್ಮವೆತ್ತಲು ಪರಬ್ರಹ್ಮವೆತ್ತಲು
ಬ್ರಹ್ಮ ತಾವೆಯೆಂದು ವಾಚಾ
ಬ್ರಹ್ಮವನೆ ಬಗಳುತಿಹರಿಗೆ ಪ

ಆಸೆಯೆಂಬದು ಅಳಿಯಲಿಲ್ಲ ಆಕಾಂಕ್ಷೆತಾ ಕಳೆಯಲಿಲ್ಲ
ಪಾಶವೆಂಬುದು ಬಿಗಿದು ಉರುಲು ಬಿದ್ದಿಹುದು
ದೋಷವೆಂಬುದು ಅಡಗಲಿಲ್ಲ ದುಷ್ಕೃತವೆಂಬುದು ಒಣಗಲಿಲ್ಲ
ಕ್ಲೇಶ ಪಂಚಕದ ವಿಷಯದಿ ಕೆಡೆದಿಹ ಮನುಜರಿಗೆ 1

ಕಾಮವೆಂಬುದು ಕಡಿಯಲಿಲ್ಲ ಕ್ರೋಧವೆಂಬುದು ಅಳಿಯಲಿಲ್ಲ
ತಾಮಸವೆಂಬುದು ಶರೀರ ತುಂಬಿಕೊಂಡಿಹುದು
ಕಾಮಿತವೆಂಬುದು ಹೋಗಲಿಲ್ಲ ಕಷ್ಟವೆಂಬುದು ನೀಗಲಿಲ್ಲ
ಪಾಮರರಾಗಿ ದಾಹಕೆ ಸಿಕ್ಕುಬಿದ್ದಿಹ ಮನುಜರಿಗೆ 2

ಮೋಹವೆಂಬುದು ಹರಿಯಲಿಲ್ಲ ಮೂರ್ಖತೆಯೆಂಬುದು ಕರಗಲಿಲ್ಲ
ಊಹೆ ಎಂಬ ಕುಬುದ್ಧಿಯು ಉಡುಗಲಿಲ್ಲ
ದೇಹ ಶೋಧನೆ ತಿಳಿಯಲಿಲ್ಲ ದೇಹಿ ಚಿದಾನಂದ ಅರಿಯಲಿಲ್ಲ
ಕಾಹುರ ಮದದಲಿ ಮರೆತಿಹ ಮಂಕುವನು ಮನುಜರಿಗೆ 3

290
ಭಕ್ತಿಯು ಸುಲಭ ತಾನಲ್ಲ ನಿಜ

ಭಕ್ತಿಯು ಸುಲಭ ತಾನಲ್ಲ ನಿಜ
ಭಕ್ತಿ ದೊರಕಲವಗಾಗುವುದು ಎಲ್ಲ ಪ

ಎಲ್ಲ ಸಂಗವ ಬಿಡಬೇಕು ತಾನು
ಬಲ್ಲ ಗುರುವ ಸೇವೆ ಮಾಡಬೇಕು
ಎಲ್ಲಕೆ ತಾನಿರಬೇಕು ಭಕ್ತಿ
ಬಲ್ಲವನಿಂದ ನಿತ್ಯದಿ ಹೆಚ್ಚಬೇಕು 1

ಹೇಳಿದಲ್ಲಿಗೆ ಹೋಗಬೇಕು ಮನ
ಕೇಳದಿರಲು ಬುದ್ಧಿಯ ಹೇಳಬೇಕು
ಕಾಳರಾತ್ರೆಯೆನ್ನದಿರಬೇಕು ನಿತ್ಯ
ಬಾಲಕನಂತೆ ತೋರುತಲಿರಬೇಕು 2

ಹಸಿವು ತೃಷೆಯ ಬಿಡಬೇಕು ತಾನು
ಎಸಗಿ ಗುರುಸೇವೆ ಮಾಡಬೇಕು
ಬಿಸಿಲು ಮಳೆ ಎನ್ನದಿರಬೇಕು ಧೈರ್ಯ
ವೆಸಗಿ ಭಯಕೆ ಬೆಚ್ಚದಲಿರಬೇಕು 3

ಗುರುವಿನನಡೆ ನೋಡಬೇಕು ಆ
ಗುರುವಿನ ನಡೆಯ ಕಂಡಂತಿರಬೇಕು
ಕರಣ ವಿಷಯ ಹೋಗಬೇಕು ನಿತ್ಯ
ಭರತಿವಾನಂದವಾಗಿರಬೇಕು 4

ಇಂತು ಎಲ್ಲ ಕಾಂಬವನು ಗುರು
ಚಿಂತಾಯಕನು ಚಿದಾನಂದನು ತಾನು
ಸಂತೈಸಿ ಕರವ ನೀಡುವನು ಏ-
ನೆಂತು ಪೇಳಲಿ ತನ್ನೊಳೆರಕ ಮಾಡುವನು 5

291
ಭರಬರನೆ ಬಾಜಾರಕೆ ನಾ ಬಂದೆನಯ್ಯ

ಭರಬರನೆ ಬಾಜಾರಕೆ ನಾ ಬಂದೆನಯ್ಯ
ಚಿದಾನಂದನ ಮರೆಯಲಿಕೆ ಪ

ಐವರು ಗೌಡರು ಕಟ್ಟಿದದ ಪೇಟೆ ಆ ಪೇಟೆಗೆ
ಐದು ನಾಲ್ಕು ಬಾಗಿಲುಗಳು
ಐದು ಮಂದಿ ಸೆಟ್ಟರು ಸೇರಿಹರು ಅವರಲ್ಲಿಯೆ
ಐದು ಮಂದಿ ಚಲವಾದಿಗಳು 1

ಸೂರ್ಯನ ಬೀದಿ ಚಂದ್ರನ ಬೀದಿ ಬಾಜಾರವಿದೆ
ಸಾರೆ ಸಾರೆ ಮಳಿಗೆ ಇದ್ದಾವೆ
ಬಾರದ ಗಿರಾಕಿ ಬರುತಿಹನು ಈ
ನೆರೆವುದಕ್ಕೆ ವಾರದ ಭಾರ ನೇಮಲ್ಲಿದೆ 2

ತಡುಗರೆಂಬವಾಲೆ ಶೆಟ್ಟಿಗಳೆ ಅಲ್ಲಿಗಲ್ಲಿಗೆ
ಪಡುವಲ ಕೋರಿ ಶೆಟ್ಟಿಗಳೇ
ಕಡುಕರ್ಮಿ ಕೋಮಟೆ ಶೆಟ್ಟಿಗಳೇ ಬಾಯಿ ಘನವಾಗೆ
ಬಡಬಡಿಪ ಪಟ್ಟಣ ಶೆಟ್ಟಿ 3

ಪಾಪವೆಂಬ ವಸ್ತ್ರದಂಗಡಿಯೇ ನಾ ನೋಡಲಾಗಿ
ತಾಪವೆಂಬ ಜವಳಿ ಅಂಗಡಿಯೆ
ಕೋಪವೆಂಬ ಕುಪ್ಪಸ ದಂಗಡಿಯೇ
ಒಪ್ಪುತಲಿರೆ ಕಾಪಥವೆಂಬ ಸಕಲಾತ್ಮಂಗಡಿಯೇ 4

ಚಿ, ಛೀ ಎಂಬ ಚಿಕ್ಕ ತಕ್ಕಡ ಗಂಡಿಯೆ ನಾ ಬರುತಿರೆ
ನಾಚಿಕೆಯಿಲ್ಲದ ಕಂಚಿನಂಗಡಿಯೇ
ಚು ಛೂ ಎಂಬ ಚೀನಿಯಂಗಡಿಯೇ ಯಡಬಲದಲ್ಲಿ
ಕೋಚು ಮಾಡೋ ಉದ್ದಿನಂಗಡಿಯೇ 5

ತನು ವ್ಯಸನವೆಂಬ ತಾಡಪತ್ರಿ ತೋರಲಾಗಿ
ಮನವ್ಯಸನವೆಂಬ ಕಿಂಕಾಪು
ಧನವ್ಯಸನವೆಂಬೋ ಮಖಮಲ್ಲು ನಾ ಬೆರಗಾಗೆ
ಜನ ವ್ಯಸನವೆಂಬೋ ಜರತಾರಿಯೇ 6

ನಾನಾ ವಿಷಯ ವೆಂಬೋ ಉತ್ತತ್ತಿ ಅಲ್ಲಿದ್ದಾವೆ
ಜ್ಞಾನಶೂನ್ಯ ಜಾಜಿಕಾಯಿ
ಮಾನ ಹಾನಿಯೆಂಬೋ ಜಾಪತ್ರಿ
ನಾನು ನನ್ನದು ಎಂಬ ಭಂಗಿ ಸೊಪ್ಪು 7

ಜೀವನೆಂಬ ಹೊಗೆಯ ತೊಪ್ಪಲೇ ಹಿರಿಯವಾದ
ನೋವು ಕಷ್ಟಗಳೆಂಬ ಗಾಂಜಿಯೇ
ಸಾವು ಬದುಕು ಎಂದೆಂಬ ಮಾಲೆಗಳೇ ಮಾರುತಲಿತ್ತೋ
ನಾನು ನೀನು ಎಂಬ ಚಿಲುಮೆಗಳೋ 8

ಭೇದವೆಂಬ ನಿಲುವುಗನ್ನಡಿಯೆ ಒಳಗಿದ್ದಾವೆ ವಾದವೆಂಬ
ವಜ್ರದಹರಳೇ ಹಾದಿ ಕಾಣೆನೆಂಬ ಹವಳದ
ರಾಶಿಯೇ ಹರಡಿದ್ದಾವೆ
ಗಾದಿ ಎಂಬ ಸೂಜಿದಬ್ಬಣವೇ 9

ಪ್ರಾರಬ್ಧವೆಂಬೋ ಉಂಬತಳಿಗೆಯೇ ಪಸರಿಸುತಿರುವ
ಘೋರ ತಾಪತ್ರಯದ ತಟ್ಟೆಯೇ
ನಾರಿ ನೋಟೆಂಬ ಕಠಾರಿಯೇ ನಿಲಿಸಿದ್ದಾವೆ
ಸೂರಿಯ ಸುಕೃತವೆಂಬೋ ತುಬಾಕಿಯೇ 10

ಪರಿಣಾಮಿಲ್ಲದ ಪಡವಲಕಾಯಿ ದಾರಿಯಲಿ
ದಾರಿಯಿಲ್ಲದ ದೊಡ್ಡಿಲಕಾಯಿ
ಅರಿವಿಲ್ಲದ ಕುಂಬಳಕಾಯಿ ಹಾಗಿದ್ದಾವೆ
ಮರುಳು ಎಂಬ ಮಾವಿನಕಾಯಿ 11

ಮಂಠ ಎಂಬೋ ಮೆಂತ್ಯ ಪಲ್ಲಯೇ ಮಾಸಲವಿತ್ತೆ
ಕಂಟಕ ಎಂಬೋ ಹರಿವೆ ಪಲ್ಲೆಯೇ
ಕೊಂಟೆಯೆಂಬೋ ಬಸಲೆ ಪಲ್ಲೆಯೇ ತೀವ್ರದಲಿತ್ತೆ
ಶುಂಠವೆಂಬೋ ಬೆರಕೆ ಪಲ್ಲೆಯೇ 12

ಬಂಗಾರವೆಂಬೋ ಬಿಳಿಯ ಜೋಳವೇ ಬೆಡಗಿಲಿರೇ
ರಂಗು ಎಂಬೋ ರಾಗಿ ರಾಶಿಯೇ
ಸಂಗವೆಂಬೋ ಸಣ್ಣಕ್ಕಿಯೇ ಸಾರಿದ್ದಾವೆ
ಹಿಂಗದೀಪರಿ ದಿವಾರಾತ್ರಿಯೇ 13

ಸಂಕಲ್ಪೆಂಬೋ ಧಾರಣೆ ಹಚ್ಚಿರೋ ಸಂಗಾತಲೆ
ವಿಕಲ್ಪೆಂಬೋ ಧಾರಣೆಯಿಳಿವುದೇ
ಸುಖದುಃಖವೆಂಬೋ ಮಾರಾಟವೇ ಸಾಗಿರಲಾಗಿ
ಕಾಕಧಾವಂತರ ಸಂಧಾನವೇ 14

ಕಾಮಕ್ರೋಧಗಳೆಂಬ ಕಳ್ಳರೇ ಕಾವಲಿರ್ದು
ರಾಮನೆಂಬ ಸ್ಮರಣೆ ಕದ್ದಿಹರೋ
ಕಾಮುಕರೆ ತಿರುಗಾಡುವರೆಲ್ಲ ಕಾಣದ ಹಾಗೆ
ಆ ಮಹಾಜ್ಞಾನವ ಸುಲಿದಿಹರೋ 15

ಬರಬಾರದ ನಾನು ಬಂದೆನೇ ಬಾಜಾರ ಬಿಟ್ಟು
ಹೊರಡುವ ತೆರನ ಕಾಣೆನೇ
ಕರುಣಿಯಾಗಿ ಕೈ ವಿಡಿವರಾರೋ
ಕರುಣಾಕರ ಹರ ವಿಶ್ವೇಶನೇ ಬಲ್ಲ 16

ಚಿಂತೆ ನಾನು ಮಾಡುತಿರಲಾಗಿ ಚಿದಾನಂದ
ಚಿಂತೆ ಬೇಡೆಂದು ಮುಂದೆ ನಿಂದಿಹನು
ಚಿಂತೆ ಬಿಡು ಕಾವಲಿಹೆನೆಂದು ಚಿದ್ರೂಪ ತೋರಿ
ಎಂತು ಪೇಳಲಿ ಎನ್ನೆದುರು ನಿಂದಿಹನೆ 17

292
ಮಕ್ಕಳಿಂದಲೆ ಗತಿಯು ಎಂಬುದೇನಿರಯ್ಯ

ಮಕ್ಕಳಿಂದಲೆ ಗತಿಯು ಎಂಬುದೇನಿರಯ್ಯ
ಮಕ್ಕಳಿಲ್ಲದವರಿಗೆ ಗತಿಯಿಲ್ಲವೇ ಪ

ಸತ್ಯ ಶೌಚಾಚಾರ ಶಮೆದಮೆಗಳಳವಟ್ಟು
ನಿತ್ಯ ಕಾಲದಿ ಹರಿಯ ಮನದಿ ನೆನೆದು
ಅತ್ಯಂತ ಸಂತುಷ್ಟನಾದರಿಂದಲ್ಲದಲೆ
ಹೆತ್ತವರಿಂದ ಗತಿಯು ಎಂಬುದು ನಗೆಯಲ್ಲವೇ 1

ಅಣುಮಹತ್ತಿಲಿ ಶುಚಿಯು ಅಶುಚಿಯಾಗಿಪ್ಪಂಥ
ಎಣಿಕೆ ಎಲ್ಲವನು ತಾಯೆನಿಸಿ ತಿಳಿದು
ತ್ರಿಣಯನಾಗಿಹೆನೆಂದು ತಾನೆ ತಾನಾಗದಲೆ
ಕ್ಷಣಿಕ ಸುತರಿಂ ಗತಿಯು ಎಂಬುದು ನಗೆಯಲ್ಲವೆ 2

ಸ್ನಾನ ಜಪತಪ ತಿಲೋದಕ ಶ್ರಾದ್ಧ ತರ್ಪಣದ
ಕ್ಷೀಣ ಕರ್ಮಗಳಿಂದ ಮುಕುತಿಯಹುದೇ
ಮಾನನಿಧಿ ಚಿದಾನಂದ ಗುರುಪಾದ ಪದ್ಮವನು
ನ್ಯೂನವಿಲ್ಲದೆ ನಂಬಿ ಸುಖಿಯಾದರಲ್ಲವೆ 3

293
ಮಗನೇ ಅವನೀಗ ತಾನೇಕೆ ಸುಡಲಿ ಮಾತೃವ

ಮಗನೇ ಅವನೀಗ ತಾನೇಕೆ ಸುಡಲಿ ಮಾತೃವ ಬಳಲಿಪ
ಮಗನೇ ಅವನೀಗ ತಾನೇಕೆ ಸುಡಲಿ
ಮಗನಿಗೆಂತೆಂದು ಹೇಳಿಯೆ ಕೊಂಬ ಮ-
ಲಗುವಳ ಮರಳೆಗೆ ನಾನೇನೆಂಬೆ ಪ

ಮಡದಿಯ ಎತ್ತರಕೇರಿಸಿಹ ಹಡದ ತಾಯಿಗೆ
ಝಡಿವ ಗಂಟುಗಳನೇ ಹೊರಿಸಿಹ ಹುಡುಗರ ಕೊಟ್ಟಿಹ
ತುಡುಗ ರಂಡೆಮಗಳೋಡೋಡಿ ಬಾಯೆಂದು
ಬಿಡು ಮಾತುಗಳಿಂದ ಬೈಯುತಲಿ 1

ಒಳ್ಳೆಯದನು ತಾನುಣುತಲಂದು ನುಚ್ಚನು ನುರಿಯನು
ಕಲ್ಲಗಡಿಗೆಯೊಳು ಕುದಿಸಿಕೋ ಎಂದು ಕೆಕ್ಕರಿಸು-
ತಲಂದು ಹಲ್ಲ ಕಿಸುವಳಿಗೆ ಜರಿಯ ಸೀರೆಯನುಡಿಸಿ
ಝಲಕ ಬಟ್ಟೆಯ ಹಚ್ಚಿಕೋ ಎಂಬ 2

ಮಂಚವು ಲೇಪುಗಳು ತಮಗೆ ತಮ್ಮಮ್ಮನಿಗೆ
ಕಿಂಚಿತು ದುಪ್ಪಟಿ ಕೆಳಗೆ ಹೊರಬರಕಲ್ಲೊಳಗೆ
ಮಿಂಚುವ ಚಿದಾನಂದ ಸದ್ಗುರುನಾಥನು
ಪಂಚಮ ಪಾತಕಿ ನಿನಗೆಂತೊಲಿವನು 3

294
ಛೀ ಛೀ ಛೀ ಛೀ ಮೂಳಿ ನಾಚಿಕೆ ಇಲ್ಲದ ಹಾಳಿ

ಛೀ ಛೀ ಛೀ ಛೀ ಮೂಳಿ ನಾಚಿಕೆ ಇಲ್ಲದ ಹಾಳಿ
ನೀಚ ಮನುಜರೊಡನೆ ಆಡಲುಬಂತು ಮೂರ್ಖೆ ಮೂಳಿ ಪ

ಸಜ್ಜನ ಸಂಗವ ಬಿಟ್ಟಿ ನೀದುರ್ಜನಕೆ ಮನವಿಟ್ಟಿ
ಜಜ್ಜಿಗುಟ್ಟಿದೆ ಪೂರ್ಣ ಆಯುಷ್ಯ ಸುಕೃತ ಮಾರ್ಗವ ಸುಟ್ಟೆ 1

ಎಲ್ಲಿ ಸತಿಯು ಸುತರು, ಮತ್ತೆಲ್ಲಿ ಪತಿಯು ಪಿತರು
ಯಮನು ವೈಯ್ಯುವಾಗ ಬಹರೆ ಸರ್ವಹಿತರು
ಗುರುವಿನ ಪಾದವ ಹೊಂದು ನೀ 2

ಮರೆಯದಿರು ಮಾತೆಂದೂ
ಗುರು ಚಿದಾನಂದನು ತಾನೆ ಎನಲು ಹೋಹುದು ಭವವುಹಿಂದು 3

295
ಮದನನಗೇಹ ಸುಖ ಮರಣ ಸುಖ

ಮದನನಗೇಹ ಸುಖ ಮರಣ ಸುಖ
ಮದನನ ತೊತ್ತಿನ ಮಕ್ಕಳಾಗಬೇಡಿರೋ ಪ

ಸ್ತ್ರೀಯರೂಪವ ಕಂಡು ಸೈರಿಸದೆ ಕಳಕಳಿಸಿ
ಸುಯ್ಗರೆದು ಶರೀರವು ಬೆವರೇರುತ
ಕೈಕಾಲ್ಗಳಿಗೆ ನಡುಕ ಹುಟ್ಟಿ ಕಾಮ ಶರಕೆ ಮೈಯನಿತ್ತು
ಕೊಯಿಸಿಕೊಳ್ಳುವ ಕೊರಳ ನಿತ್ಯದಿ ಕಷ್ಟದಿ ಸುಖವು 1

ಮುಖ ಕಾಂತಿಯ ನೋಡಿ ಮೋಹದಲಿ ಮುಳುಗಾಡಿ
ಸುಖವೆಂದು ಬಗೆಯುತ ಸಂಗಯೋಗದ
ಕಕುಲಾತಿಪಡುತಲಿ ಕೆಡೆದುತಾಪದಿ ಹೊರಳಿ
ಬಕಧ್ಯಾನದಲಿ ತನ್ನ ನಿಜಸುಖವ ಮರೆವ 2

ಅವಯವಗಳ ನೋಡಿ ಆಶ್ಚರ್ಯವನೆ ಪಟ್ಟು
ತವಿಸಿ ಇಂದ್ರಿಯದ್ವಾರತವಿಸುತಲಿ
ಖವಿಖವಿಸಿ ನಗುತಲಿ ನಿಜದಾರಿಯನು ಬಿಟ್ಟು
ಭುವನ ಪತಿ ಚಿದಾನಂದ ಕಾಣದ ಸುಖವು 3

296
ಮನುಜ ಕೇಳೋ ಮನುಜ ಕೇಳೋ

ಮನುಜ ಕೇಳೋ ಮನುಜ ಕೇಳೋ
ಮನುಜ ಕೇಳೆನ್ನ ಮಾತನು ಮುಕ್ತನಾಗುವಿ ಪ

ವೇಸಿಯ ಮೇಲಿಹ ವಾಸನೆ ತೊಲಗಿಸು
ಮೀಸಲ ಮನವಿಡು ಈಶ ನೀನಾಗುವಿ 1

ವಿಷಯಂಗಳಲಿ ನೀ ಬಯಸಿ ಬಿದ್ದ ತೆರ
ಹುಸಿಯದೆನ್ನನು ಹೊಂದುಹರನು ನೀನಾಗುವಿ 2

ಸುದತಿಯ ಸುತರನು ನಿತ್ಯ ನೀ ನಂಬದೆ
ಚಿದಾನಂದನ ಹೊಂದು ಮುಕ್ತ ನೀನಾಗುವಿ 3

297
ಮಹಾಪುರುಷನೆತ್ವ ತಾನೆತ್ತ

ಮಹಾಪುರುಷನೆತ್ವ ತಾನೆತ್ತ
ಮಹಾಪುರುಷರ ಶ್ರೇಷ್ಠವೇನೆಂದು ಅರಿಯನು ಪ

ಕುದುರೆ ತಾನಹೆನೆಂದು ಕತ್ತೆ ಬೀದಿಯೊಳು ನಿಂತು
ಕುದುರೆ ಕುಣಿತವನು ಕುಣಿದ ತೆರದಿ
ವಿಧವಿಧದ ಓದುವೋದಿ ಮಹಾಪುರುಷನಹೆನೆಂದರೆ
ಸದಮಲಾನಂದರ ಸರಿತಾನು ಬಹನೇ 1

ಹುಲಿಯು ತಾನಹೆನೆಂದು ಹುರುಡಿರಿಗೆ ನರಿ ಮೈಯ್ಯ
ಬಲವಂತದಿ ಸುಟ್ಟುಕೊಂಡ ತೆರದಿ
ಹಲವು ಶಾಸ್ತ್ರವನೋದಿ ಮಹಾಪುರುಷನಹೆನೆಂದರೆ
ಬಲು ಮಹಾತ್ಮರ ಸರಿತಾನು ಬಹನೇ 2

ಮಹಾಪುರುಷನೆಂಬಾತ ಮಹಾಸಮಾಧಿಯಲಿ ಮುಳುಗಿ
ಮಹಾ ಚಿದಾನಂದ ಗುರು ತಾನಾಗಿ ಇಹನು
ಮಹಾಪುರುಷತಾನೆಂದು ಕಾಪುರುಷ ಪೇಳಿದಡೆ
ಮಹಾಪುರುಷ ಸರಿತಾನು ಬಹನೇ 3

298
ಮಾಡುಸಂಸಾರ ಅಂಟದಂದದಿ ಮನುಜ

ಮಾಡುಸಂಸಾರ ಅಂಟದಂದದಿ ಮನುಜ
ಮಾಡಿದರೆ ಸತ್ಪುರುಷರೊಳಗೆ ನೀ ಕುಲಜ ಪ

ಜಾರೆ ಹೆಂಡತಿಯಾಗೆ ಮನಸಿಗೆ ತರಬೇಡ
ಆರಾದರಭಿಮಾನ ಹಚ್ಚಿಕೊಳಬೇಡ
ಶರೀರ ನಿನ್ನದು ಈಗ ಎಂದು ಎನಬೇಡ
ನೂರು ದೂಷಣವಾಡೆ ನೋಯಬೇಡ 1

ಎನ್ನ ಮನೆ ಪಶು ಬಂಧು ಇಂದೀಗ ಬೇಡ
ಅನ್ಯರನು ಬೇರೆಯವರೆಂದು ನುಡಿಬೇಡ
ಭಿನ್ನ ಪರಮಾತ್ಮನೆಂದು ಜಗವ ಕಾಣಲು ಬೇಡ
ನೀ ಬ್ರಹ್ಮೆಂಬುದನು ಮರೆಯಬೇಡ 2

ಮಾಡಬೇಕೆನಿಸಿದರೆ ಸಂಸಾರವನು ಮಾಡು
ಕೂಡಿದರೆ ಹತ್ತುವುದು ನಿನಗೆ ಭವಕೇಡು
ಪೀಡೆಯಿದು ಮಮತೆಯ ಬಿಟ್ಟು ಬೆರದಾಡು
ಗೂಢ ಚಿದಾನಂದ ನೀನಹುದಲ್ಲವೇ ನೋಡು 3

299
ಮಾಯೆಯ ಮಹಾ ಸರೋವರದೊಳಗೆ ಕಡೆ

ಮಾಯೆಯ ಮಹಾ ಸರೋವರದೊಳಗೆ ಕಡೆ
ಹಾಯ್ವರೊಬ್ಬರನು ಕಾಣೆ ಪ

ಹರಿ ತಾ ಮುಳುಗಿದ ಹರ ತಾ ಮುಳುಗಿದ
ಹಂಸವಾಹನನು ಮುಳುಗಿದನು
ಸುರಪತಿ ಮುಳುಗಿದ ಶಿಖಿ ತಾ ಮುಳುಗಿದ
ಸುರಾಸುರರು ತಾ ಮುಳುಗಿದರು 1

ಸೂರ್ಯನು ಸುಧಾಂಶುಮುಳುಗಿದ ನವಗ್ರ
ಹರೆಲ್ಲ ಮುಳುಗಿದರು
ಶೂರನು ಮುಳುಗಿದ ಶುಂಠನು ಮುಳುಗಿದ ಸ-
ಚರಾಚರರೆಲ್ಲ ಮುಳುಗಿದರು 2

ಭಾಗ್ಯನು ಮುಳುಗಿದ ಬಡವನು ಮುಳುಗಿದ
ಬಹುದರಿದ್ರನೂ ಮುಳುಗಿದನು
ಯೋಗ್ಯರು ಚಿದಾನಂದ ಭಕ್ತರು
ತಾವು ಕಂಡು ಮಾತ್ರ ಮುಳಗಲಿಲ್ಲ 3

300
ಮುಕ್ಕ ನಿನ್ನ ನಡತೆ ನೋಡೋ

ಮುಕ್ಕ ನಿನ್ನ ನಡತೆ ನೋಡೋ
ಮುಕ್ಕ ನಿನ್ನ ನಡತೆ ನೋಡೋ
ತಕ್ಕ ಯಮನ ಶಿಕ್ಷೆಯಿಹುದು
ಸೊಕ್ಕ ಬೇಡವೋ ಮುಂದೆ ದುಃಖಗಳಿಸಿಹ
ರೊಕ್ಕ ಕಕ್ಕಸಬಡುವೆಯೋ ಕಾಸದು ಹೋದರೆ
ದಕ್ಕಿಸಿಕೊಂಬೆಯಾ ಎಲೆ ಹುಚ್ಚು ಮೂಳ ಪ

ಗುರುಹಿರಿಯರ ನಿಂದೆ ಮಾಡಿ ಅವರ
ಚರಣ ಸ್ಥಳವ ಜರೆದಾಡಿ ದುಷ್ಟ
ದುರುಳರ ಜೋಡುಗೂಡಿ ನೀನು
ಬರಿದೆ ಆಯುಷ್ಯ ಕಳೆದೆ ಓಡಾಡಿ ಎಲೆ ಖೋಡಿ
ಭರಭರದಿಂದಿಳಿವರು ಕಾಲನ ದೂತರು
ಕೊರಳನೆ ಕಡಿವರು ಎಲೆ ಹುಚ್ಚು ಮೂಳ 1

ನಿನ್ನನು ನೀನೇ ನೋಡಿಕೊಂಬೆ ನಾನು
ಚೆನ್ನಾಗಿ ಇಹೆನು ಎಂದೆಂಬೆ ಹುಚ್ಚು
ಕುನ್ನಿಯಂತೆ ಓಡಾಡಿ ಒದರಿಕೊಂಬೆ ಜಾರ
ಕನ್ನೆಯರ ಜೋಡುಗೊಂಬೆ ನಾಕಾಣೆನೆಂಬೆ
ಇನ್ನೇನು ಹೇಳಲಿ ಕಾಲನ ದೂತರು
ಬೆನ್ನಲಿ ಸುಳಿವರು ಎಲೆ ಹುಚ್ಚು ಮೂಳೆ 2

ಹೆಂಡತಿ ನೋಡಿ ಹಲ್ಲು ತೆರೆವೆ ಆಕೆಯ
ಗೊಂಡೆ ಚವುರಿ ನೋಡಿ ಬೆರೆವೆ
ಕಂಡ ಕಂಡ ವಿಷಯಕ್ಕೆ ಮನವೊಲಿದೆ ಅಂಟಿ
ಕೊಂಡಿವೆ ಅಜ್ಞಾನ ಮರೆವೆ
ಚಂಡ ಯಮದೂತರು ಚಂಡಿಕೆ ಹಿಡಿದು
ಮಂಡೆಗೆ ಒದೆವರು ಎಲೆ ಹುಚ್ಚು ಮೂಳ 3

ಬಾಲೆಯ ಸುತರ ನಂಬುವೆಯೋ ಕೊಪ್ಪ
ವಾಲೆಗಳ ಮಾಡಿಸಿ ಇಡುವ ಯಮ
ನಾಳುಗಳು ಕೈ ಬಿಡುವರೇನೋ ನಿನ್ನ
ಬಾಳು ವ್ಯರ್ಥವಾಯಿತು ಬಿಡಿಪರಿಲ್ಲವೋ
ಸೀಳುವೆನೆನುತಲಿ ಕಾಲ ದೂತರು
ಕಾಲ್ಹಿಡಿದಳೆವರೋ ಎಲೆ ಹುಚ್ಚು ಮೂಳ 4

ಇನ್ನಾದರೂ ಜ್ಞಾನವ ತಿಳಿಯೋ
ಚೆನ್ನಾಗಿ ಧ್ಯಾನದಿ ಬಲಿಯೋ ಕಂಡು
ನಿನ್ನೊಳು ಥಳಥಳ ಹೊಳೆಯೋ
ನಿನ್ನ ಜನ್ಮ ಜನ್ಮವೆಲ್ಲ ಕಳೆಯೋ
ಬ್ರಹ್ಮನಾಗಿ ಬೆಳೆಯೋ
ರತ್ನದೊಳಗೆ ರತ್ನ ಬೆಳಗಿದಂತೆ
ಚೆನ್ನ ಚಿದಾನಂದ ನೀ ನಿತ್ಯನಾಗೋ 5

301
ಮುಕ್ತನು ನೀನಣ್ಣ ನಿನಗೆ ಎತ್ತ ಜನನವಣ್ಣ

ಮುಕ್ತನು ನೀನಣ್ಣ ನಿನಗೆ ಎತ್ತ ಜನನವಣ್ಣ ಪ

ಹೆಣ್ಣಿನ ಕಾಲನು ನೀನೀಗ ಗಂಡೆಂದು ನೋಡಿದರೆ
ಚೆನ್ನವು ಬಿದ್ದಿರೆ ಮನದಲಿ ಹೆಂಟೆಂದು ತಿಳಿದರೆ 1

ಕಲ್ಲನು ಮುಳ್ಳನು ಕೇವಲ ದೇವರೆಂದರಿತರೆ
ಎಲ್ಲಪಮಾನವು ತನಗೆ ಸ್ತೋತ್ರವು ಎಂದರೆ 2

ನರನು ಆದವನ ತ್ರಿಪುರ ಹರನೆಂದರಿತರೆ
ಚರ ಅಚರವನೆಲ್ಲ ಚಿದಾನಂದ ಗುರುವೆಂದು ಕಂಡರೆ 3

302
ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆ

ಮುಟ್ಟು ಮುಟ್ಟೆನ್ನುತ ಮೂರ್ನಾರು ಹೊರಲೆ
ಮುಟ್ಟಲಿ ಬಂತೆ ಬಿಕನಾಶಿ ಪ

ಮುಟ್ಟೋ ನೀನೇ ಮಡಿಯೂ ನೀನೇ
ಕೆಟ್ಟಿತು ನಿನಮಡಿ ಮೊದಲೇ ಜಲದಲಿ ನೀ ಮುಳುಗೆ
ಕಡೆಯಲಿ ಆ ಉದುಕವನೇ ತರುವೆ
ದೇವರಿಗಿಂದಭಿಷೇಕವ ಮಾಡುತ
ಅಹಂನ ಬಿಡು ನಿನ ಬಿಕನಾಶಿ 1
ಎಲುಬು ಚರ್ಮದಿ ಮಲಮೂತ್ರದ ಗೂಡಲಿ
ನಲಿಯುತಲಿದ್ದೆ ಬಿಕನಾಶಿ
ನೆಲೆಗೊಂಡಾ ನವ ದ್ವಾರದ ಜಲದೊಳು
ತೊಳಲುತ ಬಿಕನಾಶಿ 2

ಹುಟ್ಟುತ ಸೂತಕ ಹೊಂದುತ ಸೂತಕ
ನಟ್ಟ ನಡುವೆ ಬಿಕನಾಶಿ
ಪಟ್ಟಣದಾ ಕಾವೇರಿ ಮುಳುಗಲು
ಮುಟ್ಟು ತೇಲಿಯಿತೆ ಬಿಕನಾಶಿ 3

ಉತ್ತಮ ಹತ್ತಿ ಬತ್ತಿರಲಾಂಜನ
ವೃಕ್ಷದಿ ಬೆಳೆವುದೆ ಬಿಕನಾಶಿ
ಉತ್ತಮ ರೋಧನ ಭಾರವ ಕೆಡಿಸಲು
ಕೆಟ್ಟಿತು ನಿನ ಮಡಿ ಬಿಕನಾಶಿ 4

ನಾನಾ ಶಾಸ್ತ್ರವನೋದಿ ನಾ ನಿನ್ನ ಮರೆವೆನು
ಹೀನವ ಬಿಡು ನಿನ್ನ ಬಿಕನಾಶಿ
ನಾನಾ ಶಾಖದಲಿ ಇರಲಾದರೂರ್ವಿ
ಅದು ರುಚಿ ತಿಳಿವುದೆ ಬಿಕನಾಶಿ 5

ಚರ್ಮವು ತೊಳೆದರೆ ಕರ್ಮವು ಹೋಯಿತೆ
ಕರ್ಮವು ಬಿಡದು ನಿನ್ನ ಬಿಕನಾಶಿ
ಒಮ್ಮೆ ಚಿದಾನಂದ ಪಾದವ ಸ್ಮರಿಸಲು
ನಿರ್ಮಲವಾದೆಯ ಬಿಕನಾಶಿ 6

303
ಮುಸ್ತೈದು ಮಾಡಿದ ಮದನ ನಾರಿಯನೆತ್ತಿ

ಮುಸ್ತೈದು ಮಾಡಿದ ಮದನ ನಾರಿಯನೆತ್ತಿ
ವಸ್ತು ತಿಳಿದವರಿಗೆ ಆಯಿತದು ಕತ್ತಿ ಪ

ಎರಡು ಸ್ತನಗಳು ಎಂಬ ಎರಡು ಬಿರಡೆಯ ಮಾಡಿ
ಪರಿಶುದ್ಧ ಪಚ್ಚಾಳವೆಂಬ ಪರಜು ಮಾಡಿ
ಮುಕುರ ಮುಖವೆಂಬ ಮೂಲಮನೆ ಮಾಡಿ
ಗರಿಯವೇಣಿಯು ಎಂಬ ಗೊಂಡೆಗಳನೇ ಮಾಡಿ 1

ದೇಹ ನಿಡಿದು ಎಂಬ ದೊಡ್ಡ ಅಲಗನೆ ಮಾಡಿ
ಮೋಹವೆಂದೆಂಬ ಮೊನೆಯ ಮಾಡಿ
ಸಾಹಸವೆಂದೆಂಬ ಸಾಣೆಯನೆ ಮಾಡಿ
ಗಹಗಹಿಕೆ ಎಂದೆಂಬ ಘನತರಹದನ ಮಾಡಿ 2

ಭೋ ಎನುತ ಕೂಗಿ ಕೈಗೆ ಕತ್ತಿಯ ಕೊಂಡು
ಬಾಯ ಬಿಡಲು ಜಗವ ಬಿದಿರುತ್ತಲಿ
ಮಾಯೆ ಹರಿದು ಚಿದಾನಂದ ಭಕ್ತರ ಮುಟ್ಟದೆ
ದಾಯವರಿತು ಜಗವ ಧಾತುಗೆಡಿಸಿದನು 3

304
ಮುಳಿದು ಮಾಳ್ವುದೇನು ಜನರು ಜ್ಞಾನಿ ಪುರುಷನ

ಮುಳಿದು ಮಾಳ್ವುದೇನು ಜನರು ಜ್ಞಾನಿ ಪುರುಷನ
ತನು ಗುಣಂಗಳೆಂಬುವನ ಮುಟ್ಟದಿದ್ದ ಬಳಿಕ ಪ

ಸುಖವುಬರೆ ಹಿಗ್ಗಲಿಲ್ಲ ದುಃಖದಿಂದ ಕುಗ್ಗಲಿಲ್ಲ
ನಿಖಿಳ ಪ್ರಪಂಚದಲ್ಲಿ ವಾಸನಿಲ್ಲವೋ
ಸಕಲ ವಿಷಯ ಸಂಗವಿಲ್ಲ ಶಠದ ಭಾವ ವೆಂಬುದಿಲ್ಲ
ಪ್ರಕಟ ಪರಮಾತ್ಮನಾಗಿ ಮುಕುತಿ ಪತಿಯು ಆದ ಬಳಿಕ 1

ನಿಂದೆ ಸ್ತುತಿಗೆ ಮರುಗಲಿಲ್ಲ ಬಂದುದನ್ನು ಕಳೆಯಲಿಲ್ಲ
ಕುಂದುಗಳಿಗೆ ನೊಂದು ಮನಸು ಮಿಡುಕಲಿಲ್ಲವೋ
ಹಿಂದಣದನೆನೆಯಲಿಲ್ಲ ಬೆಂದ ಒಡಲಿನಾಸೆಯಿಲ್ಲ
ಸುಂದರಾತ್ಮತಾನೆಯಾಗಿ ಬಿಂದು ಸಾಕ್ಷಿಯಾದ ಬಳಿಕ 2

ಅರಿವು ಮರೆವು ಎಂಬುದಿಲ್ಲ ಪರರ ಜರೆದು ನುಡಿಯಲಿಲ್ಲ
ಇರುಳು ಹಗಲು ಎಂಬುವಾವು ತೋರಲಿಲ್ಲವೋ
ಮರಣ ಭಯದ ಚಿಂತೆಯಿಲ್ಲ ದುರುಳತನದ ಚರ್ಚೆಯಿಲ್ಲ
ಶರಣ ಸರ್ವಕಾಲ ಕರಣ ದೂರನಾದ ಬಳಿಕ 3

ಮೋಹದಲ್ಲಿ ಸಿಲುಕಲಿಲ್ಲ ತಾಮಸದಲ್ಲಿ ತೊಡಗಲಿಲ್ಲ
ಕಾಮ ಬಾಧೆ ಎಂಬುವಾವು ಕಾಡಲಿಲ್ಲವೋ
ನೇಮ ನಿತ್ಯ ಮೊಳೆಯಲಿಲ್ಲ ಕಾಮಿತಕ್ಕೆ ಕೂಡಲಿಲ್ಲ
ಪ್ರೇಮಾನಂದನಾಗಿ ನಿತ್ಯ ವ್ಯೋಮಾತೀತನಾದ ಬಳಿಕ 4

ತನ್ನವರು ಎನ್ನಲಿಲ್ಲ ತನ್ನ ತಾನು ಹೊಗಳಲಿಲ್ಲ
ಮನ್ನಣೆ ಎಂಬುದದಕೆ ಹಿಗ್ಗಲಿಲ್ಲವೋ
ಭಿನ್ನ ಭಾವವೆಂಬುದಿಲ್ಲ ನನ್ನ ನಿನ್ನದೆಂಬುದಿಲ್ಲ
ಚೆನ್ನ ಚಿದಾನಂದ ಚೇತನಾತ್ಮತಾನಾದ ಬಳಿಕ 5

305
ಯೋಗಿಯ ನಡತೆ ಲೋಕಕ್ಕೆ ವಿರುದ್ಧ

ಯೋಗಿಯ ನಡತೆ ಲೋಕಕ್ಕೆ ವಿರುದ್ಧ
ಆಗಲೆಂದೇ ಮೂಡುತಿರಲವನೇ ಗೆದ್ದ ಪ

ಸ್ನಾನವೆಂಬುದು ಇಲ್ಲ ಸಂಧ್ಯಾದಿ ಮೊದಲಿಲ್ಲ
ಹೀನ ಶೀಲತ್ವವದು ಇರುತಿಹುದು
ಏನೇನು ಶುಚಿಯಿಲ್ಲ ಜಾತಿ ಸಂಕರವೆಲ್ಲ
ತಾನು ಪಿಶಾಚಿಯಂತಿಹನು ಯೋಗಿ 1

ಕಂಡಲ್ಲಿಯೆ ಉಂಬ ಕಂಡ ಕಡೆಯೆತ್ತಿಂಬ
ಹೆಂಟೆ ಹುಡಿಯನ್ನದಲೆ ಮಲಗಿಕೊಂಬ
ಭಂಡ ನಡತೆಯ ನಡೆದು ಭ್ರಷ್ಟನಾಗಿ ಕಾಣಿಸುತ
ಉಂಡ ಬಾಯಿಯ ತಾನು ತೊಳೆಯದಿಹ ಯೋಗಿ 2

ದೇಹಸ್ಥಿತಿಯನು ನೋಡೆ ಮಣ್ಣಿಹುದು ಗೇಣುದ್ದ
ಊಹಿಸಲು ತಲೆಯಲ್ಲ ಜಡೆಗಟ್ಟಿ ಬಿದ್ದಿಹುದು
ದೇಹಪರವಶನಾಗಿ ಉನ್ನತ್ತ ಸ್ಥಿತಿಯಾಗಿ
ದೇಹಿ ಚಿದಾನಂದ ಗುರು ತಾನಾದ ಯೋಗಿ 3

306
ಲಿಂಗವ ಕಟ್ಟಿಕೊಂಬೋದಣ್ಣ

ಲಿಂಗವ ಕಟ್ಟಿಕೊಂಬೋದಣ್ಣ
ಇಷ್ಟಲಿಂಗಾದಿ ಸಾಧನಿರಲಿಕ್ಕಣ್ಣ ಪ

ಭಕ್ತನು ಆಗುವುದಕ್ಕಣ್ಣ ನಿತ್ಯ ಭಕ್ತಿಯ ಹುಟ್ಟಿಸುವುದಣ್ಣ
ಮುಕ್ತಿಯ ಪಡೆವುದಕಣ್ಣ ವಿರಕ್ತನಾದರೆ ಸಾಧ್ಯವಣ್ಣ 1

ಕೆಟ್ಟದು ಸಂಸಾರವಣ್ಣ ಕೊಟ್ಟನು ಕ್ರಿಯದಲಣ್ಣ
ಕಟ್ಟಿದ ಎಳೆಗುದಿಗಣ್ಣ ನಿತ್ಯ ಮುಟ್ಟಿ ಪೂಜಿಸಬೇಕಣ್ಣ 2

ಗುರುಗಳ ಪೂಹಿಸುವುದಕಣ್ಣ ಎಲ್ಲ ನರರಿಗೆ ಅನ್ನವನಿಕ್ಕಲಿಕ್ಕಣ್ಣ
ನಿರುತವು ತಾನಡೆದಣ್ಣ ಮುಂದೆ ಚಿದಾನಂದನ ಕಾಣೋದಣ್ಣ 3

307
ಲೇಸಿನ ಮಾರ್ಗ ಕೇಳಿರೋ ಜನರು

ಲೇಸಿನ ಮಾರ್ಗ ಕೇಳಿರೋ ಜನರು
ಈಸು ಲಾಲಿಸಿದರೆ ಲೇಸು ಪ

ಹಂದಿನಾಯಿ ತೃಣಗಳಲಿರುವ ದೇವನ
ಅರಿದರೆ ಅದು ಲೇಸು
ಹಿಂದಾಗಿಹುದನು ಮುಂದಾಗುವುದನು
ಚಿಂತಿಸಿದರೆ ಅದು ಲೇಸು 1

ಕ್ರೂರ ಮನುಜರೊಡಗೂಡದೆ ಮೌನದಿ
ಬೇರೆಯಿಹುದು ಅದು ಲೇಸು
ಪ್ರಾರಬ್ಧದ ದಶೆಯಿಂದಲಿ ಬಂದುದ
ಕಳೆದುಕೊಂಡರೆ ಅದು ಲೇಸು 2

ಘೋರವಾದ ತಾಪತ್ರಯಗಳು ಮನೆ
ಸೇರದಿದ್ದಡೆ ಅದು ಲೇಸು
ಸಾರವ ತಿಳಿದು ವ್ಯವಹಾರದೊಳಿದ್ದು
ಧೀರನಾಗಿಹುದದು ಲೇಸು 3

ಪಾಪಿಯ ಕೂಡದೆ ಸುಜನರ ಕೂಡುತ
ದೇವನ ಕಾಂಬುದೆ ಲೇಸು
ಕೋಪವು ಎಂದಿಗು ಸುಳಿಯದೆ ಶಾಂತಿಯು
ವ್ಯಾಪಿಸಿ ತಾನಿಹುದದು ಲೇಸು 4

ಪಾಪ ಪುಣ್ಯಗಳ ಗುರುವಿಗೆ ಅರ್ಪಿಸಿ
ಬಾಳುವೆ ನಡೆಸುವುದದು ಲೇಸು
ಈಪರಿ ನಡೆಯ ನಡೆದು ಚಿದಾನಂದ
ಭೂಪನಾಗುವುದತಿ ಲೇಸು 5

308
ಲೊಳ್ಳ ಕಳ್ಳೊಟ್ಟೆ ಜಂಬಾಳ

ಲೊಳ್ಳ ಕಳ್ಳೊಟ್ಟೆ ಜಂಬಾಳ
ಗಟ್ಟೆ ಸಂಸಾರ ನೋಡಮ್ಮ
ಲೊಳ್ಳ ಕಳ್ಳೊಟ್ಟೆ ಸರಸನಂಬಲು
ಗತಿಯದು ಲೊಳ್ಳಟ್ಯಮ್ಮಮ್ಮ ಪ

ಹೆಂಡಿರು ಮಕ್ಕಳು ತಂದೆ ತಾಯಿಗಳು
ಭಾಗ್ಯವು ಲೊಳ್ಳಟ್ಯಮ್ಮಮ್ಮ
ಚಂಡ ಯಮದೂತರು ಮಂಡೆ ತಿವಿವಾಗ
ಬಿಡಿಸುವರಾರು ಇಲ್ಲಮ್ಮ 1

ಶ್ರೇಷ್ಠತೆ ಚೆಲುವಿಕೆ ವಸ್ತ್ರವು ಪ್ರಾಯವು
ಸಿದ್ಧಿಯು ಲೊಳ್ಳಟ್ಯಮ್ಮಮ್ಮ
ದುಷ್ಟಮದೂತರು ದುಬುದುಬು ಬಡಿವಾಗ
ಬಿಡಿಸುವರಾರು ಇಲ್ಲಮ್ಮ 2

ವಾರೆ ಮುಂಡಾಸವು ಗೀರು ಗಂಧಗಳು
ಪೋರತನವು ಲೊಳ್ಳಟ್ಯಮ್ಮಮ್ಮ
ಘೋರ್ಯಮದೂತರು ಘರ್ಜಿಸುತ ಒಯ್ದಾಗ
ಬಿಡಿಸುವರಾರು ಇಲ್ಲಮ್ಮ 3

ಕನಸಿನ ತೆರವಿದು ಸಂಸಾರವೆಂಬುದು
ಅನುಮಾನವಿದಕಿಲ್ಲಮ್ಮಮ್ಮ
ಕನಸೆಂದು ನಿಶ್ಚೈಸೆ ಕಾಲನು ಬಾರನು
ಮನದಲಿ ತಿಳಿದುಕೊ ನೀನಮ್ಮ 4

ತನ್ನನು ಮರೆತು ಸಂಸಾರ ನೆಚ್ಚಲು
ತಿರುಗುವ ಜನ್ಮವ ನಮ್ಮಮ್ಮ
ಚೆನ್ನ ಚಿದಾನಂದ ಗುರುವೆಂದು ನಂಬಲು
ಜನ್ಮವ ಕಳೆವುವು ತಿಳಿಯಮ್ಮ 5

309
ವದರಿ ವದರಿ ತರ್ಕವ ಹೊದ್ದಿದೆ ನರಕವ

ವದರಿ ವದರಿ ತರ್ಕವ ಹೊದ್ದಿದೆ ನರಕವ ಪ

ಸಾಧುಗಳ ಕಂಡು ಕ್ರೋಧಕೆಡೆಗೊಂಡು
ವಾದಿಸಿ ವಾದಿಸಿ ಕಂಡೆ ಏನ ಎಲೆ ಹಳ್ಳಿ ಕೋಣ 1

ನರಿಗೆ ಎತ್ತ ಸಿಂಹಕೆ ಎತ್ತ
ಸರಿಯ ಮಾಡೆ ಸಾಟಿಯಹುದೇ ನೋಡು 2

ಹರಿಯ ವಂದಿಸಿ ಹರನ ನಿಂದಿಸಿ
ಬರಿದೆ ಬರಿದೆ ಬೆಂಕಿ ಬಿದ್ದೆಯಲ್ಲೋ ರಣಹದ್ದೇ 3

ಈ ತೆರದಿಂದ ವಾದಗಳಿಂದ
ಮಾತಿನ ಮಾತಿನ ಮಾಲೆಗಳಿಂದ ಕುನಿ ಜನ್ಮಕ್ಕೆ ಹೋದೆ 4

ಸತ್ಯದಿಂದ ಚಿದಾನಂದ
ನಿತ್ಯನಿತ್ಯದಿ ತಿಳಿಯದುದೆ ವ್ಯರ್ಥ ಕೆಟ್ಟುಹೋದೆ 5

310
ವಿವೇಕವ ಪಡೆಯಿರೋ ವಿಭುಗಳ ಕೃಪೆಯಿಂದ

ವಿವೇಕವ ಪಡೆಯಿರೋ ವಿಭುಗಳ ಕೃಪೆಯಿಂದ
ವಿವೇಕವ ಪಡೆದರೆ ಈಶ್ವರಗಿಂ ಮಿಗಿಲಯ್ಯ ಪ

ಮನವು ನಿಲ್ಲದು ಎಂದು ಮರುಗುವಿರೇಕಯ್ಯ
ಮನವು ನಿಲ್ಲಲಿಕೆ ನಿಮ್ಮಧೀನವೆ
ಮನವು ಆದಾತನಾನೇ ಮಹತ್ತು ಆದಾತನಾನೇ
ಮನಕೆ ವಿರಹಿತುಮಾಪತಿಯು ತಾನೆಂದು 1

ಪಾಪವ ಮಾಡಿದೆನೆಂದು ಹಿರಿದು ಮರುಗಲದೇಕೆ
ಪಾಪ ಪುಣ್ಯವು ಪ್ರಕೃತಿಯಲಾದವು
ಪಾಪವೆಲ್ಲಿಹವೆಲೆ ಪುಣ್ಯವೆಲ್ಲಿಹವೆಂದು
ಪರಪುರುಷ ತಾನಾಗದೆಂದೂ 2

ಆತ್ಮನರಿಪೆನೆಂದು ಅತಿ ಕಷ್ಟಬಡಲೇಕೆ
ಆತ್ಮನ ವಿವರಿಸೆ ಅವನಲ್ಲವೆ
ಆತ್ಮನೇ ತಾಕಂಡ್ಯಾ ಅಗಣಿತ ಮಹಿಮನು
ಆತ್ಮ ಅನಂತನಾಮನೆ ತಾನೆಂದು 3

ಅರಿವು ಮರೆವೆ ಎಂಬ ಅಜ್ಞಾನವೇತಕೆ
ಅರಿವು ಮರೆವು ಅಂಗದ ಧರ್ಮವು
ಅರಿವು ಮರೆವೆಯುಂಟೆ ಆತ್ಮತಾನಾದವನಿಗೆ
ಅರಿವು ಮರೆವು ಅಂಬುಧಿ ತೆರೆಯುಂಟು 4

ಇಂತು ವಿವೇಕವನ್ನು ವಿಭುಗಳಿಂದಲರಿದು
ಚಿಂತೆ ಹರಿದು ಚಿದಾನಂದ ಗುರುವಾ
ಮುಂತೆ ದೃಷ್ಟಿಸಿಕೊಂಡು ಮರೆತು ತನುವನು ನಿ-
ಶ್ಚಿಂತ ರಾಗಿಯೆ ನಿಜವಿದೆಯಂತೆಂದು 5

311
ವ್ಯರ್ಥ ಕೆಟ್ಟೆಯೋ ಸಂಸಾರವನು ನಂಬಿ

ವ್ಯರ್ಥ ಕೆಟ್ಟೆಯೋ ಸಂಸಾರವನು ನಂಬಿ
ಕಾಣೆನೋ ಜನರನು ಯಡ್ಡೆ
ಸಾರ್ಥಕವಾಗುವ ಮಾರ್ಗ ಕಾಣಲಿಲ್ಲ
ನರಜನ್ಮಕೆ ಬಂದು ಗೊಡ್ಡೆ ಪ

ಹಿರಿಯರನಂಜಿಯೋ ಹೆಂಡತಿ ಕಿವಿಯೊಳು
ಲೊಟಕೆಯ ಹಾಕುವ ಮಂದಿ
ದುರುಳ ಯಮದೂತರು ತಾವೀಗ ಬಂದರೆ
ಹಾಕುವವರು ನಿನಗೆ ಭಂಗಿ 1

ದಾನಕೆ ಇಲ್ಲವು ಧರ್ಮಕೆ ಇಲ್ಲವು
ಹೆಂಡತಿಯಾದರೆ ಬಡವಿ
ಏನು ಎಂಬೆಯೋ ಯಮದೂತರವರಿಗೆ
ಹೇಳಲೋ ನೀನೀಗ ಬಡವಿ 2

ಹೆಂಡತಿ ಮರುಕಕೆ ಬಗ್ಗೆ ಬಗ್ಗಿಯೇ ನೋಡ್ವೆ
ಮೋರೆಯ ಬಣ್ಣಕೆ ಮೆಚ್ಚಿ
ಭಂಟರು ಯಮದೂರತು ಬರಲು ಏನ
ಹೇಳುವೆಯಲೆ ಹುಚ್ಚಿ 3

ಹೆಂಡತಿ ಮಕ್ಕಳು ಬುದ್ಧಿಯ ಹೇಳುವರು
ವಳ್ಳಿತಾಗಿ ನೀನೀಗ ಕೇಳೋ
ಕೆಂಡವನುಗುಳುತ ಯಮದೂತರೊಯಿದರೆ
ಬಿಡಿಸಿಕೊಳ್ಳಹೇಳೋ 4

ಹೆಂಡಿರು ಮಕ್ಕಳು ಹಿತರೆಂದು ನಂಬಲು
ಕೆಡುವೆ ನೀನೀಗ ಕಂಡ್ಯಾ
ಚೆನ್ನ ಚಿದಾನಂದ ಸದ್ಗುರುವನು ನಂಬು
ಕಡೆಹಾಯಿದು ಹೋಗುವಿ ಕಂಡ್ಯಾ 5

312
ಶಿಷ್ಯನು ಶಿಷ್ಯನು ಎಂದು ತುಂಬಿಯಿಹುದು

ಶಿಷ್ಯನು ಶಿಷ್ಯನು ಎಂದು ತುಂಬಿಯಿಹುದು
ಜಗ ಶಿಷ್ಯನದ್ಯಾತರಶಿಷ್ಯ
ಶಿಷ್ಯನಾದರೆ ತನುಮನವನರ್ಪಿಸಿ ದೃಢದಲಿ
ಶಿಷ್ಯನಾದರೆ ಸಚ್ಛಿಷ್ಯ ಪ

ಹೇಳಿದಲ್ಲಿಗೆ ಹೋಗಿ ಹೇಳಿದುದನೆ ಮಾಡಿ ಬಾಲನಂತಿಹನವಶಿಷ್ಯ
ಕಾಲತ್ರಯಗಳಲಿ ಗುರು ಪೂಜೆವಂದನೆ ತಪ್ಪದೆ ನಡೆಸುವವಶಿಷ್ಯ
ಬಾಲೆಸುತರು ಬಂದರಾದರೆ ತನ್ನಂತೆ ಬಾಳ್ವೆ ಮಾಡೆಂಬವಶಿಷ್ಯ 1

ಮಾನವನಾಗಿ ಅರೇನೆಂದರೆ ಅಭಿಮಾನ ಹಿಡಿಯದವಶಿಷ್ಯ
ಹೀನ ಕೆಲಸಗಳ ಮಾಣಿಸುತೆಲ್ಲವ ತಾನೆ ದೂರನಹಶಿಷ್ಯ
ಏನಿದು ನಿನ್ನ ಹಣೆಯ ಬರಹವೆಂದೆನೆ ಯೋಚನೆಗೊಳಗಾಗದವಶಿಷ್ಯ 2

ದೇಹಾಭಿಮಾನವನು ಗುರುಪಾದವಕೊಪ್ಪಿಸಿ ಶಠತೆಯ ಕಳೆದವಶಿಷ್ಯ
ಕರುಣಾಳು ಸದ್ಗುರು ತತ್ವ ಜ್ಞಾನವ ಹೇಳೆ ಆಲಿಸಿ ನಲಿವವಶಿಷ್ಯ
ಅರಿತು ಮನಕೆ ಜ್ಞಾನವ ತಂದು ಅದರಂತೆ ನಡೆವವಶಿಷ್ಯ
ಗುರು ಚಿದಾನಂದ ಸದ್ಗುರು ವಾಕ್ಯದಿ ಗುರುವಾದವನವಶಿಷ್ಯ 3

313
ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣ

ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣ
ಸಂಸಾರ ಸತ್ಯವೆಂಬುವನ ಬಾಯಲ್ಲಿ ಹೊರೆ ಮಣ್ಣಣ್ಣ ಪ

ಹೆಂಡತಿಯು ಕನಸಣ್ಣ ಗಂಡನೂ ಕನಸಣ್ಣ
ಗಂಡು ಮಗ ಸೊಸೆ ಸಹೋದರರು ಬಂಧುಗಳು ಕನಸಣ್ಣ 1

ದನಕರು ಕನಸಣ್ಣ ದವಲತ್ತು ಕನಸಣ್ಣ
ಮನೆ ಮದುವೆ ಮಂಟಪ ಮಹಾಲಕ್ಷ್ಮೀ ಕನಸಣ್ಣ 2

ವೈಯ್ಯಾರ ಕನಸಣ್ಣ ವಸ್ತುಗಳು ಕನಸಣ್ಣ
ಮೈಯಲ್ಲಿಹ ಬಲವದು ಮತ್ತೆ ಮುರಿ ಮೀಸೆ ಕನಸಣ್ಣ 3

ನಾನಿಹುದು ಕನಸಣ್ಣ ನೀನಿಹುದು ಕನಸಣ್ಣ
ಶಾಣಿತನ ಮಾನಾಪಮಾನಗಳು ಸೈನ್ಯ ಕನಸಣ್ಣ 4

ಸಂಸಾರ ಮಾಡಿದರಣ್ಣ ಸಾಕ್ಷಿಯಾಗಿರಬೇಕಣ್ಣ
ಹಂಸ ಚಿದಾನಂದ ಸದ್ಗುರು ಹೊಂದಲು ಸರಿವುದು ಜನನವಣ್ಣ 5

314
ಸಂಸಾರ ದುಷ್ಟೆಂದು ತಿಳಿದ ಮಹಾತ್ಮರ

ಸಂಸಾರ ದುಷ್ಟೆಂದು ತಿಳಿದ ಮಹಾತ್ಮರ
ಸಂಸಾರ ಮಾಡುವುದು ಹ್ಯಾಗೆ
ಸಂಸಾರದೊಳಗಿದ್ದು ಇಲ್ಲದ ವಿವರವ
ಬರೆದೆನು ದೃಷ್ಟಾಂತವಾಗೆ ಪ

ನಾರಿ ಪುತ್ರರೊಳಗೆ ತಾವು ಕಲೆತಿದ್ದು
ನಾಸ್ತಿಯಾಗಿಹರದು ಹ್ಯಾಗೆ
ವಾರಿಯೊಳಗೆ ತಾವರೆಕರ್ಣ ತಾನಿರ್ದು
ನೀರಿಗೆ ಅಂಟದ ಹಾಗೆ 1

ಎಲ್ಲ ಪ್ರಪಂಚವ ಮಾಡುತ್ತ ನಿತ್ಯದಿ
ಎರಡು ಆಗಿಹರದು ಹಾಗೆ
ಹಲ್ಲೊಳಗೆ ನಾಲಗೆ ತಾನು ಇರುತಿರ್ದು
ಹಲ್ಲ ಬುಡಕೆ ಬೀಳದ್ಹಾಗೆ 2

ಶಿಷ್ಯ ಚಿದಾನಂದನಾಗಿ ಸಂಸಾರವ
ಮುಟ್ಟಿಮುಟ್ಟದಿರು ಹ್ಯಾಗೆ
ಹುಟ್ಟು ನಾನಾಕಾರಗಳನು ತೊಳಸಿಯೆ
ಹುಟ್ಟು ರುಚಿಯ ಅರಿಯದ್ಹಾಗೆ 3

315
ಸಂಸಾರ ನಂಬುವೆಯ ಹೆಡ್ಡ

ಸಂಸಾರ ನಂಬುವೆಯ ಹೆಡ್ಡ ಈ
ಸಂಸಾರವಿಹುದು ಮುಕ್ತಿಗೆ ಅಡ್ಡ ಪ

ಮನೆಯು ಎಂಬುದುವಸ್ತಿ ಮಳಿಗೆ ಸತಿ
ತನಯ ಹೋಹರು ಹಾದಿಗಳಿಗೆ
ಎನಿತು ಮಮತೆ ಇದರೊಳಗೆ ಯಮ
ಮನಮುಟ್ಟಿ ಹಿಡಿದಿಹ ಗುದಿಗೆ 1

ಸುಳ್ಳುಗಳಾಡೋದು ಎಷ್ಟುಮಹಾ
ತಳ್ಳಿಕಾರಿಕೆ ಬೆಟ್ಟದಷ್ಟು
ಬೆಳ್ಳಿಟ್ಟು ಬಗುಳೋದು ಯಷ್ಟು ಯಮ ಕಕ್ಕಲಿಹ
ಶೀಳುಯಂಬಾಕೊಲ್ಲೆಯಿವನ ಕುಟ್ಟುಕುಟ್ಟು 2

ಮಕ್ಕಳು ಮನೆಗಿಲ್ಲವೆಂಬ ಎನಗೆ
ತಕ್ಕ ಹೆಂಡತಿ ಅಲ್ಲವೆಂಬ
ರೊಕ್ಕವ ದಿನ ನೋಡಿಕೊಂಬ ಯಮ
ಕಕ್ಕರಲಿರು ಶೀಳುಯೆಂಬ 3

ಗುರುಹಿರಿಯರ ನಿಂದಿಪನು ಸತಿ
ಮರುಕಕೆ ಹಲ್ಲು ತೆರವನು
ಹೊರಡಿಪ ತಂದೆ ತಾಯಿಯನುಯಮ
ನರಕಕೆ ಹಾಕುಯೆಂಬುವನು 4

ನಾನಾರುಯೆಂಬುದು ಅಣಕೆ ಹಿಂದಕ್ಕೆ
ನಿದ್ದೆಯೆಂಬುದು ಒಣಗಿ
ಏನೋಮುದೆಂಬುದು ಜಣಗಿ ಚಿದಾನಂದ-
ನೆಂಬುದು ಮುಣಗಿ 5

316
ಸಂಸಾರ ಸಂಸಾರವೆಂಬೆರಿ ಸರ್ವದಿವಾರಾತ್ರಿಯಲಿ

ಸಂಸಾರ ಸಂಸಾರವೆಂಬೆರಿ ಸರ್ವದಿವಾರಾತ್ರಿಯಲಿ
ಸಂಸಾರ ಎನಗೊಂಬೆ ಅಲ್ಲದೆ ಸಂಸಾರ ಎನಗುಂಟೇನಯ್ಯ ಪ

ಸತ್ಯವೆಂಬುದೆನ್ನಸತಿಯು ಶಾಂತವೆಂಬುದೆನ್ನಸುತನು
ಸತ್ಯವೆಂಬುದೆನ್ನ ಸೊಸೆಯು ನಿಜವಿದೀಗ
ಅತ್ಯಧಿಕ ಗುಣಿಯೆಂಬ ಅಗಣಿತದ ಪಿತನಿರಲು
ಮಿಥ್ಯವಾದ ಸಂಸಾರದಲಿ ಮಗ್ನರಹರೇ 1

ಬುದ್ಧಿ ಎಂಬುದೆನ್ನಭ್ರಾತೃ ಭಾವನೆ ಎಂಬುದೆನ್ನ ಭಾವ
ಅದ್ವೈತವೆಂಬ ಅತ್ತೆ ಅಂತಃಕರಣವೆಂಬ ಮಾವ
ಶುದ್ಧಾತ್ಮವೆಂಬ ಬಂಧು ಸಂಬಂಧವೆನಗಿರಲಾಗಿ
ಈ ದ್ವೈತಸಂಸಾರದಲ್ಲಿ ಮಗ್ನರಹರೇ 2

ಇಂತು ಸಂಸಾರ ಸುಖ ನಿಜದೊಳಗೆನಗಿರಲು
ಭ್ರಾಂತದಲ್ಲವೆ ನಿಮ್ಮ ಮಾತಿದೆಲ್ಲ
ಚಿಂತಯಕ ಚಿದಾನಂದ ಚಿನ್ಮಯನೆ ತಾ ಬಲ್ಲ
ಅಂತರಂಗದ ಮಾಟಕೆ ಅವನೆ ಸಾಕ್ಷಿ 3

317
ಸಂಸಾರ ಸುಖವಿಲ್ಲವದು ಖ್ಯಾಲ ಮೇಲಾ

ಸಂಸಾರ ಸುಖವಿಲ್ಲವದು ಖ್ಯಾಲ ಮೇಲಾ
ಸಂಸಾರಗಳ ನಂಬಿದವ ಕಾಳಮೂಳ ಪ

ಸತಿ ಎಂಬ ಕೆಸರೊಳಗೆ ಸುತರಹರು ಜೊಂಡು ಬೆಂಡು
ಮಿತಿಯಿಲ್ಲದಾಸೆಯಲಿ ಇಳಿದಡೆ ಮೇಲೆ ಬರಲಾರೆ ಮೂಳ 1

ಮಂದಿರವು ಸೆರೆಮನೆ ತಂದೆ ತಾಯಿ ಕಾವಲರು
ಬಂಧು ಬಳಗ ಗುಂಗಾಡು ತಾಪತ್ರಯ ಚೇಳುಗಳು 2

ಸಂಸಾರವೆ ಸುಖವೆಂದು ಸಂಸಾರಮಾಡಲಾಗದು
ಸಂಸಾರವೆ ಅದು ಘಾತುಕ ಚಿದಾನಂದ ಸುಖಕೆ ಹಾನಿ 3

318
ಸತಿಸುತಗೆಷ್ಟು ತನಗೆಷ್ಟು ಮಾಡಲು ಬೇಕು

ಸತಿಸುತಗೆಷ್ಟು ತನಗೆಷ್ಟು ಮಾಡಲು ಬೇಕು
ಮಿತಿ ಮೀರಿ ಮಾಡಿದರೆ ಅಧೋಗತಿ ಮರುಳೆ ಪ

ಅವರ ಸ್ವಾಸ್ತಿಯನೀಗ ಇವರಿಗೆ ಮಾಡಿದರೆ
ಅವರು ಬಾರದೆ ಇವರು ಬಹರೇ ಮರುಳೇ
ಅವರಾರು ಇವರಾರು ನಿನ್ನೊಳಗೇ ನೀ ತಿಳಿಯೋ
ಜವ ಕರೆಯೆ ತೆರಳುವೆಯೋ ಸಂಗಡಲೆ ಮರುಳೆ 1

ಮನ ಕಂಡರೆ ಇಲ್ಲ ಮೋಕ್ಷ ಕಂಡರೆ ಇಲ್ಲ
ಮಾನಿನಿಯ ಒಡವೆಯಲಿ ಚಿಂತೆ ಮರುಳೆ
ಜ್ಞಾನಿಗಳ ಗುರುತರಿಯನಿನಗೆ ಸ್ಥಿರವೆಂತೆಂಬೆ
ನೀನು ಹೊಗದೆ ನಿತ್ಯ ನೀನೆಂತು ಮರುಳೆ 2

ಕದನ ಮಾಡುವೀ ನಿನ್ನದೀಗ ಎನ್ನದು ಎಂದು
ಕದನವಾಡಲಿಕೆ ನೀನಾರೋ ಮರುಳೆ
ಮುದ ಸುಖವನು ಆಗದಿರು ನೀನು ವಸ್ತಿಯಂಕುರ
ಚಿದಾನಂದ ಬಗಳೆಯ ಚಿಂತೆಯನು ಮಾಡುತಲಿ 3

319
ಸಮಾಧಿ ಸಾಧಕಗೆ ಸಮಾಧಿ ಸಾಧಕಗೆ

ಸಮಾಧಿ ಸಾಧಕಗೆ ಸಮಾಧಿ ಸಾಧಕಗೆ
ಇವು ಎಲ್ಲಿ ಇರಬೇಕು ಪ

ಮಾತುಗಳು ಕಿವಿಯಲ್ಲಿ ಬೀಳದಿರಬೇಕು
ಮಹಾ ಕಠೋರ ರವಗಳು ಬೀಳದಿರಬೇಕು
ವಾತವೆಂಬುದು ಸುತ್ತ ಸುಳಿದಾಡದಿರಬೇಕು
ದುರ್ಜನರು ದೂರದಲಿರೆ ನೋಡದಲಿರಬೇಕು 1

ಆಕಳಿಕೆ ಆಲಸ್ಯಗಳಿಲ್ಲದಿರಬೇಕು
ತೇಗು ಬಿಕ್ಕಳಿಕೆ ಕಡಿಕಿಲ್ಲದಿರಬೇಕು
ಉಗುಳುವುದು ತೂಕಡಿಕೆ ಇವು ಇಲ್ಲದಿರಬೇಕು
ತಾಗುವ ಮದನಿದ್ರೆಗೆ ತವಕಿಸದಿರಬೇಕು 2

ಕನಸು ಸೀನು ಕಳವಳಿಕೆಗಳಿಲ್ಲದಿರಬೇಕು
ಜಿನುಗು ಸಂಶಯಗಳು ಜಾರುತಲಿರಬೇಕು
ಘನ ಚಿದಾನಂದನ ಘನಸುಖ ಕಾಣಬೇಕು
ಮನವೀ ಪರಿನಿಂದು ಮೈಮರೆತು ಇರಬೇಕು 3

320
ಸಲ್ಲದು ಸಲ್ಲದು ಜ್ಞಾನ ಬೋಧೆ

ಸಲ್ಲದು ಸಲ್ಲದು ಜ್ಞಾನ ಬೋಧೆ
ಸುಳ್ಳರಿಗೆ ಮತ್ತು ಶುಂಠರಿಗೆ ಪ

ಮುಂದೆ ಹೊಗಳಿ ಹಿಂದೆ ನಿಂದಿಸುವರಿಗೆ
ಸಂದೇಹಿಸುತ ಸಜ್ಜನರಿಗೆ ಹಳಿಯುತ
ಮುಂದೆ ಕಾಣದೆ ಮೂರ್ಖತೆಯಲಿ ನುಡಿಯುತ
ಕುಂದು ಕೊರತೆಯಹ ಕುಹಕರಿಗೆ 1

ಬರಡು ಮಾತಿನಲಿ ಕಾಲ ಕಳೆಯುತ
ಜರಿದು ನುಡಿಯುತಾ ಕೂಡಿ ನಗುವರಿಗೆ
ಇರುಳು ಹಗಲು ಇಹಪರದಿ ಬಿದ್ದಿಹ
ನರರುಗಳಿಗೆ ಮತಿ ನಷ್ಟರಿಗೆ 2

ಬ್ರಹ್ಮ ನುಡಿಯ ಮೂರು ನುಡಿಯನೆ ಕಲಿತ
ಬ್ರಹ್ಮ ವಿದ್ವಾಂಸರು ವಾದಿಸುವ
ಬ್ರಹ್ಮತಾವಾಗುವ ಪರಿಯೆಂತೋ ಪರ
ಬ್ರಹ್ಮ ಚಿದಾನಂದನ ಕಾಣದವರಿಗೆ 3

321
ಸಾರ್ಥಕವು ಸಾರ್ಥಕವು ಸಾರ್ಥಕವು

ಸಾರ್ಥಕವು ಸಾರ್ಥಕವು ಸಾರ್ಥಕವು
ದೇಹಕ್ಕೆ ಗತಿ ಕಂಡರೆ ಪ

ಸಂಸಾರ ತೃಷೆ ಎಂದರಿದರೆ
ಸಂಸಾರಕೆ ಹತ್ತದಿದ್ದರೆ
ಅಂಶವಿದು ಜಗ ಬ್ರಹ್ಮವೆಂದರೆ
ಸಂಶಯ ಮೂಲವನೆ ಕಳೆದರೆ 1

ತನುವಿನ ಅಭಿಮಾನ ಬಿಟ್ಟರೇ
ಮನದ ಧಾವಾಂತ ನೀಗಿದರೆ
ಘನ ದುರ್ಗುಣಗಳ ಕುಡಿ ಚೂಡಿದರೆ
ಕನಕವು ನರಕವು ಸರಿಯೆಂದಾದರೆ 2

ಗುರುಪಾದಕ್ಕೆ ಮೊರೆ ಹೊಕ್ಕರೆ
ಗುರುವಿಂದ ತನ್ನನು ತಿಳಿದರೆ
ಗುರುವಾಗಿಯೇ ತನ್ನನು ಕಂಡರೆ
ಗುರು ಚಿದಾನಂದನಾಗಿಯೆ ನಿಂತರೆ 3

322
ಸಾಧು ಸಾಧುಗಳೆಂದು ಎಂಬರೆ ನಿಮ್ಮನು

ಸಾಧು ಸಾಧುಗಳೆಂದು ಎಂಬರೆ ನಿಮ್ಮನು
ಸಾಧುಗಳೇ ನೀವು ಸಾಧುಗಳೇ
ಸಾಧುಗಳಾದರೆ ವಂದಿಸೆ ಎಲ್ಲರು
ಸಾಧುಗಳೇ ನೀವು ಸಾಧುಗಳೇ ಪ

ನೀಚನು ಮೇಲಕೆ ಹೊಲಸನೆಸದರೂ
ಚಲಿತನಾಗದವ ಸಾಧು
ಇನ್ನು ಕೃತಾರ್ಥನು ಪಾವನನಾದೆನು
ಎನ್ನುತಲಿರುವನೆ ಸಾಧು 1

ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿ
ನೋಡೆ ತಳ್ಳಿ ಹೋಗದಿಹನೆ ಸಾಧು
ರಾಯ ಸದ್ಗುರು ಲೀಲೆಯಿದೆನ್ನುತ
ಶಾಂತನಾಗಿರೆ ಸಾಧು 2

ತನ್ನ ಸತಿಯಳು ತನ್ನಯ ಮುಂದೆ ರಮಿಸಲು
ತಯಾರಾಗಿಹನವ ಸಾಧು
ಇನ್ನು ನಾ ಪುರುಷಲ್ಲಸ್ತ್ರೀಯ ತಾನಲ್ಲೆಂದು
ಸುಮ್ಮನಿರುವನೆ ಸಾಧು 3

ದೇಹವ ಕೊಯಿದು ಕೊಡೆಂದೆನೆ
ದೇಹವ ಕೊಯ್ದಿಕ್ಕುವನೆ ಸಾಧು
ಮಹಾ ಸದ್ಗುರುನಾಥನು ದೃಢವ
ನೋಡುವೆನೆಂದು ಮನಮಿಸುಕದಿಹನೆ ಸಾಧು 4

ಎತ್ತೆತ್ತ ಏಕೋ ದೇವನು ಆಗಿ
ನೋಡುವನು ಸಾಧು
ಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆ
ಸತ್ಯದಿಂದಿರುತಿಹ ಸಾಧು 5

323
ಸ್ತ್ರೀಯ ತ್ಯಜಿಸಲು ಬೇಕು ಶಿವಧ್ಯಾನಕೆ

ಸ್ತ್ರೀಯ ತ್ಯಜಿಸಲು ಬೇಕು ಶಿವಧ್ಯಾನಕೆ
ಬಯ್ಯಬೇಡಿರಿ ಬುದ್ಧಿ ಎಂದೆನ್ನಿರಯ್ಯ ಪ

ಮಹಿಳೆಯ ಮೋಹದಲಿ ಮಗನು ತನ್ನವನೆಂಬೆ
ಮಹಿಳೆಯ ತೆರಳೆ ಮಗನಿಗಾರೋ
ಇಹುದು ಪ್ರಪಂಚವೆಲ್ಲ ಎಲ ಸತಿಯಿಂದಲಿ
ಮಹಾದೇವ ಚಿಂತನೆಗೆ ಮರೆವೆ ಸ್ತ್ರೀಯಯ್ಯಾ 1

ಮಗನು ಶಿಶುವಾಗಿರಲು ಮಾನಿನಿಯ ಬಡಿವನು
ಮಗ ಬಲಿಯೆ ಮುರಿವನು ನಿನ್ನೆಲುಬನು
ಮಗನು ಯಾರವ ಹೇಳು ಮನೆಯು ಯಾರದು ಹೇಳು
ನಗುವು ಅಲ್ಲದೆ ನನ್ನದೆಂತೆನಲಿಕಯ್ಯಾ 2

ಪತ್ನಿಯನು ಬಯ್ಯೆ ಮಗ ಬಡಿವನು ಎಂಬ
ಹೆತ್ತಾಕೆ ಬಯ್ಯೆ ಹೇವಿಲ್ಲದಿಹನು
ತೊತ್ತಿನ ಮಗನಾಗಿ ನಿನ್ನ ತಳ್ಳುವನು
ಮಿತ್ರನಾಗಿಹನವನು ತಾಯಿಗಯ್ಯಾ 3

ಮನೆಯು ಸವತಿಯವಳದು ಮಕ್ಕಳೆಲ್ಲ ಸವತಿಯದು
ಎನಿತೆನಿತು ಭಾಗ್ಯ ಸೊದೆ ಎಲ್ಲ ಸವತಿಯಳದು
ಮನಕೆ ಹೇಸಿಗೆ ಹುಟ್ಟಿ ಮಹಾತ್ಮನಾಗಲು
ತನ್ನ ಹಿಂದೆ ತಿರುಗುವರೆ ತಿಳಿದು ನೋಡಯ್ಯ 4

ಸಂಗತಿಯ ಮೂಲದಲಿ ಸುತ್ತಿಹುದು ಪ್ರಪಂಚ
ಕಂಗಳೊಳು ಕಸ ಚೆಲ್ಲಿದಂತೆ ಇಹುದು
ಮಂಗಳ ಚಿದಾನಂದ ಮುಕ್ತ ತಾನಾಗುವುದಕೆ
ಅಂಗನೆಯ ಬಿಡಬೇಕು ಚಿಂತೆ ಯಾಕಯ್ಯಾ 5

324
ಸುಪುತ್ರನು ಎಂಬುವನಿವನು

ಸುಪುತ್ರನು ಎಂಬುವನಿವನು
ಸುಪುತ್ರನನು ಹೇಳುವೆ ನಾನು ಪ

ತಂದೆ ತಾಯಿಗಳ ಪೂಜಿಸುವ
ಬಂಧುಗಳಿಗೆ ಬಹು ಪ್ರಿಯನಾಗಿ ಇರುವ
ಎಂದಿಗೂ ಕೆಟ್ಟದ್ದ ನುಡಿಯ ಅವ-
ಬಂದವರಿಗೆಲ್ಲ ಅನ್ನವ ಕೊಡುವ 1

ಕುಲದ ಆಚಾರವ ತಪ್ಪಿಸನು
ಹಲವು ವ್ರತಗಳನವ ತಾ ಬಿಡನು
ಬಲು ತಿಳುವಳಿಕೆಯನು ತಿಳಿದಿಹನು
ನೆಲೆಯಿಲ್ಲದ ತಪಮಾಡುವನು 2

ಅಣ್ಣ ಅತ್ತಿಗೆಗೆ ಉತ್ತರಕೊಡನು
ಪುಣ್ಯ ಕಥೆಯನು ಕೇಳ್ವುದ ಬಿಡನು
ತನ್ನ ದೇಹವ ಪೋಷಣೆ ಮಾಡನು
ಭಿನ್ನ ಬುದ್ಧಿಯನೆಂದಿಗು ತೋರನು 3

ತತ್ವ ವಿಚಾರವೆಂಬುದೆ ಜೀವ
ನಿತ್ಯ ಅನಿತ್ಯವ ತಿಳಿದು ಅವನೀವ
ಸತ್ಪುರುಷರೊಳು ಒಡನಾಡುವ
ಎಲ್ಲ ಮಿಥ್ಯೆ ಎಂದರಿವ 4

ಸಂಶಯ ಸಂಕಲ್ಪನೀಗಿ
ಧ್ವಂಸ ಮಾಡಿ ವಾಸನೆಯೆಲ್ಲವ
ಶಿಂಶುಮಾರದ ಚಕ್ರಕೆ ಹೋಗಿ
ಹಂಸ ಚಿದಾನಂದ ಗುರುವಾಗಿ 5

325
ಸುಳ್ಳು ಮಾತಿನ ನಿನ್ನಾಚಾರವು ತಿಳಿವಿಕೆ ಏನೇನಿಲ್ಲ

ಸುಳ್ಳು ಮಾತಿನ ನಿನ್ನಾಚಾರವು ತಿಳಿವಿಕೆ ಏನೇನಿಲ್ಲ
ಎಲ್ಲ ಡಂಭವು ನಡತೆಯ ವಿವರವು ಗತಿಗೆ
ನೀ ದೂರಾದೆಯಲ್ಲ ಪ

ಮಂಡೆಯ ಬೋಳಿಸಿ ಕಣ್ಣನೆ ಮುಚ್ಚುವಿ
ಪಿಟಿಪಿಟಿ ಏನದು ಮಂತ್ರ
ದಂಡವೇತಕೆ ಮನಸದು ಚಂಚಲ
ಏತಕೆ ಮಾಡುವಿ ತಂತ್ರ 1

ಕೈಯಣ ಗಿಂಡಿಯ ಕಂಕುಳ ಪೆಟ್ಟಿಗೆ
ಕಟ್ಟಿಯಿಹುದು ತಲೆಗಟ್ಟು
ಬೈಗಳೆಂಬುವು ಪರಿಪರಿ ನೋಡಲು
ಕೋತಿ ಹಾರಿಕೆಯಳವಟ್ಟು 2

ಜ್ಞಾನವದಿಲ್ಲವು ಪುಸ್ತಕ ಮನೆಯೊಳು
ಹೋಳಿಗೆ ತುಪ್ಪದ ಗಬಕು
ಧ್ಯಾನವಿಲ್ಲವು ಮೌನವಿಲ್ಲವು ಯಮನ
ಕೈಯಿಂದ ದುಬುಕು 3

ನಿರಿವಿಡಿದುಟ್ಟಿಹ ಪಂಚೆಕಚ್ಚೆಯಧೋತ್ರ
ನಾಮ ವಿಭೂತಿಯ ಬೆಳಕು
ಪರಮಾನ್ನವ ಸಕ್ಕರೆಯನು ಕಲಸಿ
ನುಂಗುವೆ ಗುಳುಕು ಗುಳುಕು 4

ಮುಂದೆ ಹೇಳುವನ ಮೆಟ್ಟಿಕೊಂಡುಂಬುದು
ಇಂತಿದು ನಿನ್ನಯ ಬದುಕು
ಸುಂದರ ಚಿದಾನಂದ ಸ್ವರೂಪವ ತಿಳಿವುದು
ಎಂದುಎಂದಿಗೆ ಬಲುಧಡಕ 5

326
ಹುಚ್ಚು ಮಾಡಿದ ಎನ್ನ ಗುರುವು

ಹುಚ್ಚು ಮಾಡಿದ ಎನ್ನ ಗುರುವು
ಈ ಹುಚ್ಚನರಿವೊಡೆ ಸಚ್ಚರಿತರಿಗರಿವು ಪ

ಆಶ್ರಮ ಧರ್ಮವು ಹೋಯ್ತು
ನಿರಾಶ್ರಮವೆಂಬುದು ನಿಜವಾಯ್ತು
ಕುಶ್ರಮಗಳು ನಾಶವಾಯ್ತು
ಜೀವಭ್ರಮೆಯೆಂಬುದು ಖಿಲವಾಯ್ತು 1

ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿ
ಜಪವೆಲ್ಲ ಮರತೇಹೋಯ್ತು
ಮೌನವೆಂಬುದು ಬಹಳವಾಯ್ತು ಗುರುತಾನೆ
ಎಂದೆಂಬ ಧ್ಯಾನವುಪೂರ್ಣವಾಯ್ತು 2

ಕುಲಗಳೆಂಬುವು ಕಾಣದಾಯ್ತು
ಕುಲಛಲಗಳು ಮರತೇಹೋಯ್ತು
ಹೊಲೆ ಶುದ್ಧಗಳು ಬರಡುನುಡಿಯಾಯ್ತು
ನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು 3

ಭೇದಾಭೇದವು ಮಾಯವಾಯ್ತು
ಹಾಳುವಾದಗಳು ಕೇಳದಂತಾಯ್ತು
ಸಾಧುಸಂಗವ ಬಿಡದಂತಾಯ್ತು
ಸುವಾದವಮಾಡಿ ಸುಖಿಸುವಂತಾಯ್ತು 4

ದಯೆ ನಿರ್ದಯೆಗಳ ತೊರೆದಾಯ್ತು
ಭಯ ನಿರ್ಭಯಗಳು ಅದೃಶ್ಯವಾಯ್ತು
ಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮ
ಪರಕ್ಷೇಮಗಳ ವಿಚಾರ ಹೋಯ್ತು 5

ಕೋಪ ತಾಪವು ಶಮವಾಯ್ತು
ತಾಪತ್ರಯದಬಿತ್ತು ಮೊಳೆಯದಾಯ್ತು
ಯೋಗ ವಿದ್ಯೆಯ ಹರಿತವಾಯ್ತು
ನಿರ್ವಾಣವಾಗಿ ಎಲ್ಲ ಇಂತಾಯ್ತು 6

ಇಂತಹ ಹುಚ್ಚನು ಎನಗೆ ಕವಿಯಿಸಿ
ನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿ
ಅಂತರಂಗದಿ ತಾನೆ ನೆಲೆಸಿ ಚಿಂತಾಯಕ
ಚಿದಾನಂದ ತಾ ಬೆರೆಸಿ 7

327
ಹುಚ್ಚು ಹಿಡಿದು ಕೆಟ್ಟಯೋಗಿ

ಹುಚ್ಚು ಹಿಡಿದು ಕೆಟ್ಟಯೋಗಿ
ಹುಚ್ಚು ಹಿಡಿದು ಕೆಟ್ಟನೋ
ನಿತ್ಯ ನಿತ್ಯ ಕಾಲದಲ್ಲಿ ನಿಜನಾದ ಕೇಳಲಾಗಿ ಪ

ಇಂದ್ರಪದವಿಯನ್ನು ಒಲ್ಲ ಈಸಪದವಿ ಮೊದಲೆ ಒಲ್ಲ
ಹಿಂದ ಮುಂದಣ ವಿಚಾರ ಹೀನಮಾಡಿ ಮರೆತನಯ್ಯೋ 1

ಮಾತನಾಡೆ ಮಾತನಾಡ ಮನಕೆ ಹಿಡಿದುದನ್ನ ಬಿಡ
ಯಾತ ಯಾತರಲ್ಲೂ ಕಿವಿಯ ನಿಡ ಯತ್ನ ಬೇರಾಯಿತಯ್ಯೋ 2

ಅರಿವು ಮರೆವು ಆಗಿ ಇಹನು ಅರಕೆಯಿಲ್ಲದೆ ಸುಮ್ಮನಿಹನು
ಮರುಳು ಮರುಳು ಆಗಿ ಬುದ್ಧಿ ಮಂದನಾಗಿ ಹೋಯಿತಯ್ಯೋ 3

ಶರೀರ ಪರವೆಯಿಲ್ಲ ಯಾವುದರ ನಿಷೇಧವಿಲ್ಲ
ಅರಿಯದವರು ಅದರಲ್ಲಿ ಅನ್ನ ಉಂಟೆನೆಂಬನಯ್ಯೋ 4

ದಯೆಯು ಇಲ್ಲ ಧರ್ಮವಿಲ್ಲ ದುಷ್ಟತನಗಳೇನು ಇಲ್ಲ
ಬಯಲು ಚಿದಾನಂದ ಗುರು ಬಯಲು ಕೂಡಿ ಬಯಲೆ ಆದ 5

328
ಹೆಂಡತಿ ಎಂಬ ದೇವರನು ನಂಬಿಹನಣ್ಣ

ಹೆಂಡತಿ ಎಂಬ ದೇವರನು ನಂಬಿಹನಣ್ಣ
ಹೆಂಡತಿಯೆ ದೇವರೆಂದು ಕೆಡುತಿಹನಣ್ಣ ಪ

ತಲೆಗೆ ತಾನೆರೆಯುವುದೆ ಮಂಗಲ ಸ್ನಾನವಣ್ಣ
ಬಲು ವಸ್ತ್ರವುಡಿಸುವುದೆ ಅಭಿವಸ್ತ್ರವಣ್ಣ
ಎಲೆಗೊಪ್ಪು ಮೊದಲಾಗಿಡುವುದೇ ಆಭರಣವಣ್ಣ
ಹಲವು ಪರಿಮಳ ಲೇಪನವೇ ಗಂಧವಣ್ಣ 1

ನಾನಾ ದಂಡೆಯ ಹಾರವ ಮುಡಿವುದೆ ಪುಷ್ಪವಣ್ಣ
ನಾನಾ ಬಹುಮಾನ ಮಾಡುವುದೆ ಧೂಪವಣ್ಣ
ನಾನಾ ಪರಿ ಉಣಿಸುವುದೆ ನೈವೇದ್ಯವಣ್ಣ
ನಾನಾ ಸಂತಸಪಡಿಸುವುದೆ ದೀಪವಣ್ಣ 2

ನೆನೆದೂಳಿಗ ಮಾಡುವುದೆ ಪ್ರದಕ್ಷಿಣವಣ್ಣ
ಮುನಿಸುವಳ ತಿಳಿಸುವುದೆ ಸಾಷ್ಟಾಂಗವಣ್ಣ
ಇನಿತು ಪೂಜೆಯ ಮಾಡಿ ತಿರುಗೊಂದು ಭವವಣ್ಣ
ಚಿನುಮಯ ಚಿದಾನಂದ ನಿನಗೆ ದೊರೆಯನಣ್ಣ 3

329
ಹೆಂಡತಿಯ ಮಾಡಿಕೊಂಡೆ ಯಾಕೋ

ಹೆಂಡತಿಯ ಮಾಡಿಕೊಂಡೆ ಯಾಕೋ ಕಟ್ಟಿ-
ಕೊಂಡು ಮಂಡೆ ತುರುಸುವುದ್ಯಾಕೋ ಪ

ಮಕ್ಕಳಿಲ್ಲವೆಂದು ಬಳಲುವುದೇಕೋ ಎಲ್ಲ
ಮಕ್ಕಳಳಿದರೆಂದು ಅಳುವುದೇತಕೋ 1

ಎಲ್ಲವ ಉಳಿದು ಹೋಹೆಯಾಕೋ ಮೋಹನ
ವಲ್ಲಭೆಯ ಬಿಟ್ಟು ತೆರಳುವೆ ಯಾಕೋ 2

ಒಪ್ಪಿಸಯೋ ಸತಿಯ ಸುತರನ್ಯಾಕೋ ನೀನು
ಬರ್ಪಣಿಲ್ಲ ಪರಾಂಬರಿಕೆ ಯಾತಕೋ 3

ದುಡ್ಡನೀಗ ಕೈಲಿ ಕೊಟ್ಟೆಯಾತಕೋ ನೀನು
ದೊಡ್ಡ ಚೇಳು ಕಡಿಸಿಕೊಂಬೆಯಾತಕೋ 4

ಹೆಂಡತಿಯ ಸಂಗತಿ ಸಾಕೋ
ಮುಂದೆ ಚೆನ್ನ ಚಿದಾನಂದನಾಗಬೇಕೋ 5

330
ಹೇಳಲಾಗದು ತತ್ವ ಹೇಳಲಾಗದು ಜ್ಞಾನ

ಹೇಳಲಾಗದು ತತ್ವ ಹೇಳಲಾಗದು ಜ್ಞಾನ
ಖೂಳ ಮೂಳರಾದ ಕುಹಕಿಗಳಿಗೆ ಪ

ನಾರುತಿಹ ತೊಗಲನು ಕಡಿದನಾಯಿ ಮುಖದ ಮುಂದೆ
ದಾರವಟ್ಟದಲಿ ತುಪ್ಪವ ನೀಡಲು ಅರಿವುದೆ
ಘೋರ ಸಂಸಾರ ವಿಷಗಟ್ಟಾಗಿ ಹಿಡಿದವಗೆ
ಸಾರ ಬೋಧೆಯನರಿಯಲು ತಿಳಿಯುವುದೇ 1

ಗೊಜ್ಜಲ ತೃಣವನು ತಿಂಬ ಗಾರ್ಧಭನ ಮುಂದೆ
ಸಜ್ಜೆಗೆಯ ತಂದಿಡಲಿಕೆ ಅದನರಿವುದೆ
ಲಜ್ಜೆಯಹ ನಾನಾ ಮೋಹ ಪಾಶಲಿಪ್ಪರಿಗೆ
ಸಜ್ಜನ ಶಾಸ್ತ್ರವನೊರೆಯಲದು ತಿಳಿವುದೇ 2

ದೊಡ್ಡಕ್ಕಚ್ಚನೆ ಕುಡಿವ ಗೊಡ್ಡೆಮ್ಮೆಯ ಮುಂದಕೆ
ಲಡ್ಡುಗೆಯ ತಂದಿಡಲಿಕೆ ಅದನು ತಿಳಿವುದೇ
ದಡ್ಡ ಬುದ್ಧಿಯು ಬಲಿತು ದೊಡ್ಡನಾದವಗೆ
ದೊಡ್ಡ ಚಿದಾನಂದ ಬ್ರಹ್ಮವು ತಿಳಿವುದೇ 3

331
ತಪ್ಪುವುದೇ ಬ್ರಹ್ಮಕೆ ಗುರಿಯು ನೀನು

ತಪ್ಪುವುದೇ ಬ್ರಹ್ಮಕೆ ಗುರಿಯು ನೀನು
ತಪ್ಪಿದರು ತಾನು ತಪ್ಪದು ಅರಿಯೋ ನೀನು ಪ

ಕರವ ಭೂಮಿಗೆ ಬಡಿಯಲು ಪೆಟ್ಟ
ಹೊರಗನೆ ಮಾಡುವುದು ಆವ ಪರಿ
ಪರಿಪೂರ್ಣ ಬ್ರಹ್ಮ ತುಂಬಿರಲು ನೀನು
ಪರವೆಂದು ಕಾಣೆ ಸಂಶಯವೆ ನಿಜವಿರಲು 1
ಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನ
ದೊಡ್ಡ ಬ್ರಹ್ಮವೆನಲು ಸಂಶಯ ನೋಡೆ

ಗುಡ್ಡಕೆ ಗುರಿಯ ನೋಡಿದೆ ಅದು
ಅಡ್ಡಬಿಟ್ಟು ಬೇರೆ ನಿಲ್ಲುವುದೆ ನೋಡೆ
ಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನ
ದೊಡ್ಡ ಬ್ರಹ್ಮವೆನಲು ಸಂಶಯ ನೋಡೆ 2

ಆಕಾಶ ನೋಡುವುದೇ ತಾನು ಆ
ಆಕಾಶ ನೋಡಲು ನೂಕು ನುಗ್ಗೇನು
ಏಕ ಚಿದಾನಂದ ನೀನು ಜಗ
ದೇಕ ಬ್ರಹ್ಮವೆಂದು ನಿನ್ನ ನೀನೇ ಕಾಣ 3

332
ಲಿಂಗ ಕಟ್ಟುವೆ ಯಾಕೋ ನೀ ಲಿಂಗ

ಲಿಂಗ ಕಟ್ಟುವೆ ಯಾಕೋ ನೀ ಲಿಂಗ
ಲಿಂಗಾಂಗವೆಲ್ಲವು ಸರ್ವಾಂಗ ಲಿಂಗ ಪ

ಉಳಿಮುಟ್ಟದ ಲಿಂಗ, ಊರು ಮುಟ್ಟದ ಲಿಂಗ
ತಿಳಿಯೆ ತಂದೆ ತಾಯಿಗಳಿಂದಾಗದ ಲಿಂಗ
ಕುಲಕರ್ಣಿ ಕಂಚುಗಾರರಲಿ ಹುಟ್ಟದ ಲಿಂಗ
ನಲಿಯತು ತನ್ನಿಂ ತಾನಾದ ಲಿಂಗ 1

ಏಕವಾಗಿಹ ಲಿಂಗ ಎಲ್ಲವು ತಾನಾದ ಲಿಂಗ
ಸಾಕಾರವಾಗಿ ಸಂಚರಿಸುತಿರುವ ಲಿಂಗ
ನಾಲ್ಕು ತನುವಿಗೆ ನಿಲುಕದ ಲಿಂಗ
ಬೇಕೆಂದ ರೂಪಿಗೆ ಬಂದಂತ ಲಿಂಗ 2

ಏನು ತೋರದ ಲಿಂಗ ಎಡೆದೆರೆಪಿಲ್ಲದ ಲಿಂಗ
ಧ್ಯಾನಕೆ ಮೌನಕೆ ನಿಲುಕದ ಲಿಂಗ
ಜ್ಞಾನ ಮೂರುತಿ ಚಿದಾನಂದ ಲಿಂಗ
ತಾನೆ ವಿಲಾಸದಿ ಬಂದಂಥ ಲಿಂಗ 3

ಭಾಗ-5: ಬ್ರಹ್ಮಾನುಭವ

333
ಅದಕೋ ಕೈವಲ್ಯಂ ಅದಕೋ ಕೈವಲ್ಯಂ

ಅದಕೋ ಕೈವಲ್ಯಂ ಅದಕೋ ಕೈವಲ್ಯಂ
ಅದಕೋ ಕೈವಲ್ಯಂ ಅದಕೋ ಕೈವಲ್ಯಂ ಪ

ಬೆಳದಿಂಗಳಿನೊಳು ಪಟಿಕದ ಮಣಿ ಬಿದ್ದು
ಬೆಳಗೊಂದೆಯಾಗಿರುತಿಹುದೆ ಕೈವಲ್ಯಂ 1

ಜೋತಿ ಎರಡು ಇರೆ ಜೋತಿ ಒಂದರಲಿಡೆ
ಜೋತಿಯೊಂದಾಗಿ ಬೆಳಗುತಲಿರೆ ಕೈವಲ್ಯಂ 2

ಕರ್ಪೂರ ಉರಿ ಸೋಂಕಿ ಉರಿ ಆವರಿಸಿರೆ
ಕರ್ಪೂರ ಕಾಣ್ಬಾರದ ತೆರದಿಹುದೇ ಕೈವಲ್ಯಂ 3

ದರ್ಪಣಕೆ ಮುಖವೆರಡು ಆಗೆ
ದರ್ಪಣವಿಲ್ಲದಿರೆ ಕಾಣದಿಹುದೇ ಕೈವಲ್ಯಂ 4

ಕೈವಲ್ಯವದು ವಾಙ್ಮಮನಕಗೋಚರ
ಕೈವಲ್ಯ ಸ್ಥಿತಿ ನಿಲ್ಲಲವನೇ ಚಿದಾನಂದ 5

334
ಅದು ನಿರಾಲಂಬ ಅದು ನಿರಾಲಂಬ

ಅದು ನಿರಾಲಂಬ ಅದು ನಿರಾಲಂಬ
ಅದು ನಿರಾಲಂಬ ಕೇಳದ ನಿರಾಲಂಬ ಪ
ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆ
ತನಗೆ ತಾನಿಹುದದು ನಿರಾಲಂಬ 1
ಬುದ್ಧೀಂದ್ರಿಯಕ್ಕೆ ಅತ್ತ ಅಹಂಕಾರಕ್ಕೆ ಅತ್ತ
ಸುದ್ದಿಲ್ಲದಹುದದು ನಿರಾಲಂಬ 2

ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆ
ಇಂದ್ರಿಯಗಳರಿಯದುದು ನಿರಾಲಂಬ 3
ಅರಿವುದು ಕಾಣದೆ ಮರೆವುದು
ತೋರದೆ ಅದು ಚಿದಾನಂದ ಅದು ನಿರಾಲಂಬ 4
ಬಹಿರಂತಲ್ಲದೆ ಬೇರೆಂಬುದಿಲ್ಲದೆ
ಮಹಾ ಬೆಳುದಿಂಗಳದೆ ನಿರಾಲಂಬ 5

335
ಆತ್ಮಲಿಂಗ ಭವನದಿ

ಆತ್ಮಲಿಂಗ ಭವನದಿ
ಆತ್ಮಲಿಂಗ ಭವನದಲಿ ವಿಚಿತ್ರವನೆ ಕಂಡು
ಆತ್ಮನೆಂತಿಹನೆಂದು ಅರಸನಾ ಬಲಗೊಂಡು
ಆತ್ಮನಾನೆರಡೆಂಬ ಅವಿ ವಾಚ್ಯನಳಿಗೊಂಡು
ಆತ್ಮನಾಗಿರುತಿಪ್ಪನು ಪ

ಭೂತ ಪಂಚಕಗಳು ದೇಹದೊಳು ಕಂಡೆ
ಜಾತಿ ಜಾತಿಗೆ ಇಪ್ಪ ಜೀವರನು ಕಂಡೆ
ಪ್ರೀತಿಯಿಂ ಪರಿ ಪರಿಯ ಸರಗಳನೆ ಕಂಡೆ
ಮಾತಿಗುತ್ತರಿಸದಿಹ ಮಹಾ ಮಹಿಮೆಯ ಕಂಡೆ 1

ಈಕ್ಷಿಸಿಯೆ ವಸ್ತುವನ ಏಳು ಬಾಗಿಲು ಕಂಡೆ
ದಕ್ಷಿಣೋತ್ತರ ಎಂಬುದರ ಬಾಗಿಲನು ಕಂಡೆ
ಅಕ್ಷಯಾಗಿಹ ಲಕ್ಷವಹ ದಿಡ್ಡಿಯನೆ ಕಂಡ
ರಕ್ಷಕನಾಗಿಹನ ರಾಗದಲಿ ಕಂಡೆ 2

ಪಂಚಇಂದ್ರಿಯಗಳೆಂಬ ಪರಿಚಾರಕರನು ಕಂಡೆ
ಕಿಂಚ ಕೆಲಸಕ್ಕಿರುವ ಕರ್ಮೇಂದ್ರಿಯರ ಕಂಡೆ
ಸಂಚರಿಪ ಮೂರೆರಡು ಸತ್ಪ್ರಾಣಿಗಳ ಕಂಡೆ
ವಚನಾಂತಃಕರಣ ವರ್ತಕರ ಕಂಡೆ 3

ಸತ್ಯಗುರು ಪೂರಿತಹ ಸಾರಣೆಯ ಕಂಡೆ
ತಥ್ಯವೆನಿಸುವ ಶಾಂತ ತೋರಣವ ಕಂಡೆ
ಅತ್ಯಧಿಕ ಬುದ್ಧಿಯ ರಂಗವಲ್ಲಿಯ ಕಂಡೆ
ಎತ್ತ ನೋಡಿದಡತ್ತ ಎಸೆದಿಹುದ ಕಂಡೆ 4

ಆರು ಅಂತಸ್ಥನು ಕಂಡೆ ಅಲ್ಲಿರುವವರ ಕಂಡೆ
ಬೇರೆ ಮೂರಿಹ ಮಧ್ಯ ರಂಗಗಳ ಕಂಡೆ
ಘೋರ ಘೋಷಣ ಪ್ರಣವ ಘಂಟನಾದವ ಕಂಡೆ
ಸಾರವಮೃತ ಕಲಶ ಪಾನಕವ ಕಂಡೆ 5

ಜ್ಯೋತಿ ಎಂದೆನ್ನುತಿಹ ಜ್ಯೋತಿರ್ಮಯನ ಕಂಡೆ
ಸಾತಿಶಯ ಗರ್ಭಗುಡಿ ಶೀಘ್ರದಲಿ ಕಂಡೆ
ಆತುರದಲೊಳ ಪೊಕ್ಕು ಆತ್ಮಲಿಂಗವ ಕಂಡೆ
ಪೂತ ರಕ್ಷಿಸು ಎಂದು ಪೂಜೆ ಕೈಗೊಂಡೆ 6

ನಿತ್ಯ ನಿಶ್ಚಲ ನಿಷ್ಕಲಂಕ ನಿಜನೆ ಎಂದು
ಪ್ರತ್ಯಗಾತ್ಮ ಪರಬ್ರಹ್ಮನೆ ಸ್ಥಿರವೆಂದು
ಸತ್ಯ ಸಂವಿದ್ರೂಪ ಸಕಲಕಧಿಪತಿ ಎಂದು
ಅತ್ಯಧಿಕ ಚಿದಾನಂದ ಆತ್ಮ ತಾನೆಂದು 7

336
ಇಂತಿದೆ ಬ್ರಹ್ಮ ಇಂತಿದೆ ಅದು

ಇಂತಿದೆ ಬ್ರಹ್ಮ ಇಂತಿದೆ ಅದು
ಎಂತೋ ಇಹುದು ಎಂದು ಚಿಂತೆ ಮೂಡಲದೇಕೆ ಪ

ಎರಡು ಕೈಗಳಿವೆ ಎರಡು ಕಾಲ್ಗಳಿವೆ
ಎರಡು ಕಣ್ಣುಗಳು ಮತ್ತು ಎರಡು ಕಿವಿಗಳಿವೆ
ಎರಡಕ್ಕೆ ಠಾವಿಲ್ಲ ಏಕವೇ ತಾನಿದೆ
ಎರಡು ಎಂಬುದು ಮಾತಿನಿಂದೆರಡಾಗಿದೆ 1

ತಾನೆ ಬೇಡುತಲಿದೆ ತಾನೆ ಉಣ್ಣುತಲಿದೆ
ತಾನೆ ತನ್ನ ಬಾಯ ತೊಳೆದುಕೊಳ್ಳುತಿದೆ
ತಾನೆ ನಡೆಯುತಿದೆ ತಾನೆ ಮಲಗುತಿದೆ
ತಾನೆ ಕುಳ್ಳಿರ್ದು ಹಾಡಿ ಪಾಡಿ ನಗುತಲಿದೆ 2

ಒಬ್ಬನೇ ಎನಿಸಿದೆ ಒಬ್ಬನೇ ತೋರಿದೆ
ಒಬ್ಬನೇ ಆಗಿ ಆಡುತ್ತಲಿದೆ
ಒಬ್ಬ ಚಿದಾನಂದ ಗುರುವರ ತಾನಿದೆ
ಒಬ್ಬನೇ ಒಬ್ಬನೇ ಒಬ್ಬನೇ ಇದೆ ಇದೆ 3

337
ಇರಬೇಕು ಲಕ್ಷ್ಯ ಇರಬೇಕು

ಇರಬೇಕು ಲಕ್ಷ್ಯ ಇರಬೇಕು
ಈ ಧರಣಿ ಮೇಲೆ ಶರೀರವಿರುವ ತನಕ ಪ

ಸೂರ್ಯನಿರುತಲಿರೆ ಸೂರ್ಯನೊಳ್ ಪ್ರಭೆ ಹುಟ್ಟಿ
ಸೂರ್ಯನೊಳಗೆ ಪ್ರಭೆಯು ಅಡಗುವಂತೆ
ಉರ್ವಿ ಎನ್ನಲಿ ಪುಟ್ಟಿ ಎನ್ನಲಿ ಲಯವೆಂದು
ಸರ್ವಕಾಲದ ನಿತ್ಯ ಸಾಕ್ಷಿ ವಿಷಯದಲಿ 1

ಉದಕವಿರುತಿರೆ ಉದಕದೊಳ್ ತೆರೆ ಪುಟ್ಟಿ
ಉದಕದೊಳಗೆ ತೆರೆಯು ಅಡಗುವಂತೆ
ಇದುವೆ ಎನ್ನಲಿ ಜಗವಿದೆನ್ನಲಿ ಲಯವೆಂದು
ವಿಧಿಸಿ ನಿಶ್ಚಯದಿಂದ ನಿತ್ಯ ವಿಷಯದಿಂದ 2

ನಭವು ಇರುತಲಿರೆ ನಭದಿ ಮೇಘವು ಹುಟ್ಟಿ
ನಭದೊಳಗೆ ಮೇಘವು ಅಡಗುವಂತೆ
ಈ ಭುವನವೆನ್ನಲಿ ಪುಟ್ಟಿ ಎನ್ನಲಿಲಯವೆಂದು
ಪ್ರಭು ಚಿದಾನಂದ ತಾನೆಂಬ ವಿಷಯದಲಿ 3

338
ಇಹವಸ್ತುವೊಂದೇ ಜಗದೊಳಗೆ ಇಹವಸ್ತುವೊಂದೇ

ಇಹವಸ್ತುವೊಂದೇ ಜಗದೊಳಗೆ ಇಹವಸ್ತುವೊಂದೇ
ಸೋಹಂ ಸೋಹಂ ಸೋಹಂ ಸೋಹಂ
ಸೋಹಂ ಸೋಹಂ ಸೋಹಂ ಎಂದೇ ಪ

ಸಂಗ ದೂರೆನಿಸಿ ಸಂಗವೆ ತಾನೆನಿಸಿ
ಮಂಗಳ ಮಂಗಳ ಮಂಗಳ ಮಂಗಳ
ಮಂಗಳ ಮಂಗಳ ಮಂಗಳವೆಂದೇ 1

ಜ್ಞಾನವೆ ತಾನಾಗಿ ಅಜ್ಞಾನಕೆ ತಾದೂರಾಗಿ
ತಾನೇ ತಾನೇ ತಾನೇ ತಾನೇ
ತಾನೇ ತಾನೇ ತಾನೇ ಎಂದು 2

ವರ್ಣಂಗಳು ಆರು ಮೀರುವರ ಚಿದಾನಂದ ಗುರು
ಪೂರಣ ಪೂರಣ ಪೂರಣ ಪೂರಣ
ಪೂರಣ ಪೂರಣ ಪೂರಣವೆಂದು 3

339
ಊಟ ಮಾಡಿದೆನು ಬ್ರಹ್ಮಾನಂದದ ಊಟವ

ಊಟ ಮಾಡಿದೆನು ಬ್ರಹ್ಮಾನಂದದ ಊಟವ
ಆರು ಅರಿಯದ ಯೋಗ್ಯರು ಎಂಬ ಊಟ ಪ

ಸದ್ಗುರು ಎಂದೆಂಬ ಅನ್ನಪೂರ್ಣ ತಾನು
ಶುದ್ಧ ಹೃದಯವೆಂಬ ಹರಿವಾಣದೊಳಗೆ
ಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವ
ಸಿದ್ಧ ಗುರುವೇ ತಂದು ಎನ್ನ ಮುಂದಿಡಲು 1

ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿ
ಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದು
ಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿ
ಎತ್ತಿ ಸವಿದೆನು ನಾನು ಅನುಭವದ ತುತ್ತ 2

ಸಾರಾಮೃತೆಂಬ ಸಾರನೇ ಸುರಿಯುತ
ತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿ
ಮೀರಿದಾನಂದಗುಳ್ದೂರಿಗೆಯ ಮಂಡಿಗೆಯ
ತೋರುವೆಚ್ಚರು ಮರೆತು ಹಾಯೆನುತಲುಂಡು 3

ಹೇಳಬಾರದ ಪರಮಾತ್ಮ ಪರಮಾನ್ನ ಸುರಿದು
ಮೇಲೆ ಗುರುದಯದ ಉದಕವನೆ ಕುಡಿದು
ಮೂಲನಾದವ ಘೋಷ ಸುತ್ತೆಲ್ಲ ಪಸರಿಸಲು
ಗೋಲ ನಾನಾ ತೇಜ ದೀಪ ಬೆಳಕಿನಲ್ಲಿ 4

ಇಂತೂಟವನೆ ಉಂಡು ನಿಜ ತೃಪ್ತಿಯದಾಗೆ
ಅಂತು ಕಳೆದೆನು ಅವಿದ್ಯದ ಕಡು ಹಸಿವನು
ಚಿಂತಯಕ ಚಿದಾನಂದ ಅನ್ನಪೂರ್ಣನು ಎಣಿಸೆ
ಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ 5

340
ಊರ ದೇವರ ಮಾಡಿ ಊರ ಶಾಂತಿಯಾಗಲಿ

ಊರ ದೇವರ ಮಾಡಿ ಊರ ಶಾಂತಿಯಾಗಲಿ
ಊರದೇವತೆ ಗುರು ಚಿದಾನಂದ ತಾನೆನುತ ಪ

ಶುದ್ಧ ಸುನಾದವೆನಿಸುವ ಡಂಗುರವ ಸಾರಿ
ಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದು
ವೇದಾಂತವೆಂದೆಂಬ ಹಂದರವನೆ ಹಾಕಿ
ವಾದಾತೀತಾತ್ಮದೇವಿಯ ಎದುರುಗೊಂಡು 1

ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿ
ಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆ
ಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿ
ಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ 2

ಅಡ್ಡಾಡುವ ಮನವ ಹಿಡಿ ತಂದು ಕಟ್ಟಿ
ದೊಡ್ಡ ಅಹಂಕಾರದ ಕೋಣವನು ಕಡಿಸಿ
ಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿ
ಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ 3

ಸಿದ್ಧ ತಾನೆಂದೆಂಬ ಅಡುಗೆಯದು ಆಗಲು
ಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆ
ಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲು
ಅದ್ದಿಸಿರಿ ಆನಂದದಲಿ ಊರ ಜನರ 4

ಊರೆಂಬುದು ನಿಮ್ಮ ದೇಹವೇ ತಿಳಿಯಿರೋ
ಊರ ದೇವತೆ ನೀನು ನಿಜವನರಿಯೋ
ಊರ ದೇವರ ಮಾಡಿ ಆನಂದಪಡೆಯೋ
ಇದಕೆ ತಾ ಸಾಕ್ಷಿ ಚಿದಾನಂದನರಿಯೋ 5

341
ಎಂದೆಂದು ಕಂಡುದಿಲ್ಲಮ್ಮ

ಎಂದೆಂದು ಕಂಡುದಿಲ್ಲಮ್ಮ
ಎಂದೆಂದು ಕಂಡುದಿಲ್ಲಮ್ಮ ಗುರು
ಇದೀಗ ತೋರಿದ ನಮ್ಮ ಮನ
ಸಂದೇಹವು ಹರಿಯಿತಮ್ಮ ನೀನೇ
ಎಂದೆನೆ ಹರುಷಾದೆ ನಮ್ಮ ಬ್ರಹ್ಮವನಮ್ಮ ಪ

ರೂಪುನಾಮವು ಅದಕ್ಕಿಲ್ಲವಮ್ಮ ಅದು
ಹೋಗುವುದಿಲ್ಲ ಬರುವುದಿಲ್ಲಮ್ಮ ಎಲ್ಲ
ವ್ಯಾಪಕವಾಗಿಹುದಮ್ಮ ದೀಪವೆ
ತುಂಬಿಹುದಮ್ಮ ಬ್ರಹ್ಮವದಮ್ಮ 1

ಕಾಯದ ಒಳಗೆ ಹೊರಗಮ್ಮ ಗುರು
ರಾಯನ ದಯವಾಗಬೇಕಮ್ಮ ತನ್ನ
ಮಾಯೆ ಬಿಟ್ಟರೆ ತೋರುವುದಮ್ಮ ಬ್ರಹ್ಮವದಮ್ಮ 2

ಮಂದಿರ ಮನೆ ಪಶುರೂಪವಮ್ಮ ಜಗ
ವೊಂದೆ ಅಖಂಡವಿಹುದಮ್ಮ
ತಂದೆ ತಾಯಿ ಮಕ್ಕಳು ತಾನೆ ಅಮ್ಮ
ಚಿದಾನಂದನೆ ತಾನೆಂದ ನಮ್ಮ ಬ್ರಹ್ಮವನಮ್ಮ 3

342
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ

ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ

ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆ
ನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1

ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆ
ಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2

ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನು
ಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3

343
ಕಂಡದಿಲ್ಲರ ಚಿತ್ರ ನಾ ಕಂಡೆ

ಕಂಡದಿಲ್ಲರ ಚಿತ್ರ ನಾ ಕಂಡೆ ಪ

ಕೋತಿ ಸತ್ತುದ ಕಂಡೆ ಕೋಣನಳಿದುದ ಕಂಡೆ
ಮಾತಿಗೆ ಬಾರದ ನಾಯ ಹರಿ ತಿಂಬುದ ಕಂಡೆ 1

ಕಾಗೆ ಕಣ್ಣು ಹೋದುದ ಕಂಡೆ ಕಳ್ಳರ ತಲೆ ಬಿದ್ದುದ ಕಂಡೆ
ಕೋಗಿಲೆ ಕೊನೆಯಲಿ ಕೂಗಿದುದ ಕಂಡೆ 2

ಮರವ ಕಡಿದುದ ಕಂಡೆ ನೆರಳಲಿ ನಿಂತುದ ಕಂಡೆ
ಬರಿಯ ವೋಡಲಿ ಹಾಲ ಕರೆದುಂಬುದ ಕಂಡೆ 3

ನೀರ ಮೇಲೆ ಒಲೆ ಉರಿವುದ ಕಂಡೆ
ಮೇರುವಿನ ಶಿಖರದಿ ಜ್ಯೋತಿಯ ಕಂಡೆ 4

ಇರುಳು ಹಗಲು ಒಂದಾಗಿ ಇರುವುದ ಕಂಡೆ
ಗುರು ಚಿದಾನಂದ ಬ್ರಹ್ಮವ ಗುರುತಿಲ್ಲದ ಕಂಡೆ 5

344
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆ

ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆ
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತ್ತದೆ ಪ
ಮುಂಡಕೆ ದಂಡೆಯ ಮಾಡಿಸಿದೆ
ಮುಸುಕಲಿ ಸೋಭಾನ ಮಾಡಿದೆ
ಮುಂಡಕೆ ರುಂಡವ ಕೂಡಿಸಿದೆ ಮಂಗಳಾರತಿ ಬೆಳಗಿಸಿದೆ 1

ಕೋತಿಯು ಅಲ್ಲಿ ಕುಣಿಯುತ್ತಿತ್ತು
ಕೋಣವು ಮದ್ದಲೆ ಬಾರಿಸುತ್ತಿತ್ತು
ಕೋತಿಯ ಕಾಲನೆ ಮುರಿದೆ ಕೋಣನ ಮದ್ದಲೆ ಮುರಿದೆ 2

ಹಾರುವವನನು ಕಟ್ಟಿ ಹಾಕಿಸಿದೆ ಹಾದಿಲಿ ದೀಪವ ಹಿಡಿಸಿದೆ
ಮೂರು ಮನೆಯ ಮೇಲಟ್ಟದಲ್ಲಿ
ಮೆರವಣಿಗೆಯನೆ ಮಾಡಿಸಿದೆ 3

ಒಳ್ಳೆ ಬೀಗರ ಬೆಳ್ಳಿ ತಳಿಗೆಯಲ್ಲಿ ಎಲ್ಲರ ಒತ್ತೊತ್ತಾಗಿ ಕೂರಿಸಿದೆ
ಬೆಲ್ಲದ ಪರಮಾನ್ನವನೆ ಉಣಿಸಿದೆ
ಬೆಳ್ಳನೆ ಉಡುಗೊರೆ ಹೊದಿಸಿದೆ 4

ಗುಡ್ಡ ಮೂರ ಕೊನೆಯಲಿದ್ದ ಅಡ್ಡಗಲದೆ ದೇವರ ಮನೆಗೊಯ್ದು
ದೊಡ್ಡ ಚಿದಾನಂದ ಗುರುವಿಗೆ ನಾ
ಅಡ್ಡಗೆಡವಿ ಮದುವೆ ಮಾಡಿಸಿದೆ 5

345
ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿ

ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿ
ಗಾಂಜ ಸೇದಿದರೆ ನಿಮಗೆ ಭವವಿಲ್ಲವೆನ್ನಿ ಪ

ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜ
ಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ 1

ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜ
ಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ 2

ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜ
ಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ 3

ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜ
ಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ 4

ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜ
ತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ 5

346
ಗುಲ್ಲು ಹುಟ್ಟಿತು ಗ್ರಾಮದೊಳಗೆ

ಗುಲ್ಲು ಹುಟ್ಟಿತು ಗ್ರಾಮದೊಳಗೆ
ಗಲಿಬಿಲಿಯಾಯಿತು ನೀವು ಕೇಳಿ
ಖುಲ್ಲರು ಕುಲಸಹ ಕೂಡೆ ಮಡಿದರು ನೀವು ಕೇಳಿ ಪ

ಮರ ಮುರಿದೊರಗಿತು ನೆರಳೆ ನೆಲೆಯಾಯಿತು ನೀವು ಕೇಳಿ
ಕುರಿತಳೇ ಸತ್ತವು ನರಿ ಮಾಳಿಗೆ ಏರಿತು ನೀವು ಕೇಳಿ 1

ಅತ್ತೆಯು ಅಳಿದಳು ಸೊಸೆಯು ಸುಖಿಸಿದಳು ನೀವು ಕೇಳಿ
ಮುತ್ತೈದೆಯಾದಳು ರಂಡೆ ತಾನೀಗ ನೀವು ಕೇಳಿ 2

ಕೊಡವೊಡೆಯಿತು ಕಳ್ಳರ ತಲೆ ಹೋದವು ನೀವು ಕೇಳಿ
ನಡೆದುಹೋದರು ಬಯಲೂರಿಗೆ ಗೂಳೆಯ ನೀವು ಕೇಳಿ 3

ಮಂಡೆಗೆ ಕೈ ಬಂದಿತು ಮುರುಕು ಆಯಿತು ಹುಟ್ಟು ನೀವು ಕೇಳಿ
ರುಂಡವಿಲ್ಲದೆ ತಲೆ ಬಂದು ಹತ್ತಿತು ನೀವು ಕೇಳಿ 4

ಗುಡ್ಡದ ಸಂದಿಯ ನೀರನೆ ಕುಡಿದು ನೀವು ಕೇಳಿ
ದೊಡ್ಡ ಚಿದಾನಂದ ಗುರುವ ಸೇರಿದರು ನೀವು ಕೇಳಿ 5

347
ಜಂಗಮನು ಇಂತಿವನು ಸರ್ವ

ಜಂಗಮನು ಇಂತಿವನು ಸರ್ವ
ಸಂಗ ದೂರಾದವನೀಗ ಜಂಗಮ ಪ

ತನ್ನ ತಿಳಿದು ತಾನಾದವ ಜಂಗಮ ಜಗವ
ಭಿನ್ನವೆಂದು ಕಾಣದವ ಜಂಗಮ
ಹೊನ್ನು ಹೆಣ್ಣು ಬಿಟ್ಟವನು ಜಂಗಮ ಸಂ
ಪನ್ನ ಸಾಧು ಸಂಗವಿಹ ಜಂಗಮ 1

ಒಳಗೆ ಹೊರಗೆ ಒಂದಾದವ ಜಂಗಮ ಎಲ್ಲ
ಹೊಳೆವುದೊಂದೆ ಜ್ಯೋತಿಯು ಎಂಬುವ ಜಂಗಮ
ಹೊಲೆಯು ಶುದ್ಧವ ಕಳೆದವ ಜಂಗಮ ಎನಗೆ
ಕುಲವು ಛಲವು ಇಲ್ಲವೆಂಬುವ ಜಂಗಮ 2

ಅಂಗ ಲಿಂಗವಾಗಿಹ ಜಂಗಮ
ಲಿಂಗ ಅಂಗ ಏಕವಾಗಿಹ ಜಂಗಮ
ಮಂಗಳವೇ ನಿತ್ಯವಿಹ ಜಂಗಮ ಗುರು
ಲಿಂಗವಾದ ಚಿದಾನಂದ ಜಂಗಮ 3

348
ಜ್ಞಾನದ ಬೆಳೆಯನು ಬೆಳೆಯೊ ಶ್ರೀಗುರು

ಜ್ಞಾನದ ಬೆಳೆಯನು ಬೆಳೆಯೊ ಶ್ರೀಗುರು
ಬಲವನು ನೀ ಪಡೆಯೋ ಪ

ನಾದಗಳೆತ್ತನು ಹೂಡು ಅದಕೆ ತ್ರಿಗುಣದ ಕೂರಿಗೆ ಜೋಡು
ಬೋಧದ ಬೀಜವು ನೋಡು ಮನಸಿನ ಹೊಲದಲಿ ಬಿತ್ತಿಬಿಡು 1

ಧರ್ಮದೆಡೆಯ ಹಿಡಿದು ಬಳಿಕ ಕರ್ಮ ಕಸವ ಕಳೆದು
ನಿರ್ಮಳ ಬೆಳೆಗೊಂಡು ಗುರು ತಾ ಸ್ವರ್ಮಣಿ ಬಲಗೊಂಡು 2

ತೇಜರಾಶಿಗಳನೆಳೆದು ರಾಜಿಪ ರಾಜ ಕೊಳಗದಲಿ ಅಳೆದು
ಭೋಜನಕೆ ಎಡೆಮಾಡಿ ಚಿದಾನಂದ ಸಹಜ ಮೂರುತಿಗೂಡಿ 3

349
ತನ್ನನು ತಿಳಿದೇ ತಾನೇ ನೋಡಲಿ ಆನಂದಾನಂದಂ

ತನ್ನನು ತಿಳಿದೇ ತಾನೇ ನೋಡಲಿ ಆನಂದಾನಂದಂ
ತನ್ನನು ಕಂಡೆ ತಾನಾಗಿರುತಿರೆ ಆನಂದಾನಂದಂ ಪ

ಶ್ರವಣ ಮನನ ನಿಧಿಧ್ಯಾಸನ ಸಾಧಿಸೆ ಆನಂದಾನಂದಂ
ಶ್ರವಣ ಮನನ ನಿಧಿಧ್ಯಾಸದಿ ಬೆರೆತಿರೆ ಆನಂದಾನಂದಂ 1

ಒಳ ಹೊರ ಸಾಧಿಸೆ ತನ್ನನು ತಾನು ಆನಂದಾನಂದಂ
ಒಳ ಹೊರಗೆಂಬುದ ಮರೆತರೆ ನಿಜದಿಂ ಆನಂದಾನಂದಂ 2

ಲಕ್ಷ್ಯವು ಕೂರಲು ತನ್ನಲಿ ನಿಜದಿಂ ಆನಂದಾನಂದಂ
ಲಕ್ಷ್ಯವು ನಿಲ್ಲೆ ಸಾಕ್ಷಾತಿರುತಿಹ ಆನಂದಾನಂದಂ 3

ನಾದವ ಕೇಳುತ ಸುಖದಲಿ ಮಲಗಿರೆ ಆನಂದಾನಂದಂ
ನಾದವ ಮರೆತೇ ನಾದವ ಮೀರಿರೆ ಆನಂದಾನಂದಂ 4

ಉರಿವ ಕರ್ಪೂರದಂದದಲಿರುತಿದೆ ಆನಂದಾನಂದಂ
ಉರಿವ ಕರ್ಪೂರವು ತಾನಾಗಿದ್ದುದೆ ಆನಂದಾನಂದಂ 5

ಬ್ರಹ್ಮವೆ ತಾನೆಂದು ತನ್ನಲೆ ಕಾಣಲು ಆನಂದಾನಂದಂ
ಬ್ರಹ್ಮವು ತಾನಾಗಿ ತನ್ಮಯನಾಗಿರೆ ಆನಂದಾನಂದಂ 6

ನರನು ತನ್ನನು ಗುರುವೆಂದು ಕಾಣಲು ಆನಂದಾನಂದಂ
ಗುರು ಚಿದಾನಂದನು ಸಹಜವಾಗಿರೆ ಆನಂದಾನಂದಂ 7

350
ತನು ಸಹ ಕಾಂಬುದೆ ಬ್ರಹ್ಮ

ತನು ಸಹ ಕಾಂಬುದೆ ಬ್ರಹ್ಮ
ಸತ್ಯವು ಸತ್ಯವ ಕೇಳೆಲೋ ತಮ್ಮ
ತನು ಸಹ ಕಾಂಬುದೆ ಬ್ರಹ್ಮ
ತನುವನು ಬಿಟ್ಟು ಬೇರೇನೊ ತೋರದು
ನಿನಗೆ ಅರಿದು ನಿಮ್ಮಪ್ಪಗೆ ಅರಿದು ಪ

ಹೂವನೆ ಮುಂದೆ ಮುಂದಿಟ್ಟುಕೊಂಡು
ಸರ ಕಟ್ಟಬಹುದು ದೊಡ್ಡ ಚೆಂಡು
ಹೂವನೆ ಮುಂದಿಟ್ಟಿಕೊಂಡು
ಹೂವನೆ ಬಿಟ್ಟು ಪರಿಮಳ ಕಟ್ಟೆನೆ
ಅವ್ವಗೆ ಅರಿದು ಅವ್ವನವ್ವಗೆ ಅರಿದು 1

ಮುತ್ತದು ಕೇವಲ ಜ್ಯೋತಿ ಕಿವಿಗೆ
ಮುತ್ತಿಡುವರಿಗದು ನೀತಿ
ಮುತ್ತದು ಕೇವಲ ಜ್ಯೋತಿ
ಮುತ್ತದು ಬಿಟ್ಟು ಜ್ಯೋತಿಯ ಬಿಡು ಎನೆ
ಮುತ್ತದು ಅಜಗೆ ಅರಿದು ಮಹೇಶ್ವರಗರಿದು 2

ಬೆಲ್ಲದ ಮುದ್ದೆಯ ನೋಡು
ಹಲ್ಲಿನಿಂದಲೇ ತಿನಬೇಕು ಕಡಿದು
ಬೆಲ್ಲದ ಮುದ್ದೆಯ ನೋಡು
ಬೆಲ್ಲವನು ಬಿಟ್ಟು ಸಿಹಿಯನು ತಿನ್ನೆನೆ
ಬಲ್ಲ ಚಿದಾನಂದ ಸದ್ಗುರುಗರುದು 3

351
ತಾನೇ ಬ್ರಹ್ಮ ತಾನೇ ಬ್ರಹ್ಮ

ತಾನೇ ಬ್ರಹ್ಮ ತಾನೇ ಬ್ರಹ್ಮ
ತಾನೇ ತಾನೆಯಾಗಿ ತನ್ನನೆ ಮರೆತರೆ ಪ

ಮನಸಿನೊಳಗೆ ಕೂಡಿ ಮನಸದು ಎರಡಾಗಿ
ಮನದ ಅರಿವ ನಿಜದರಿವನೆ ಅರಿತರೆ 1

ಬುದ್ಧಿಯೊಳಗೆ ಕೂಡಿ ಬುದ್ಧಿಯದು ಎರಡಾಗಿ
ಬುದ್ಧಿಯ ಅರಿವು ನಿಜದರಿವನೆ ಅರಿತರೆ 2

ಇಂದ್ರಿಯ ದೊಳಗೆ ಕೂಡಿ ಇಂದ್ರಿಯಗಳೆರಡಾಗಿ
ಇಂದ್ರಿಯವರಿದ ಚಿದಾನಂದನು ಅರಿತರೆ 3

352
ತಾನೇ ಬ್ರಹ್ಮನಿರುತಲಿರೆ

ತಾನೇ ಬ್ರಹ್ಮನಿರುತಲಿರೆ
ತಾನೇ ವಸ್ತುವಿರುತಲಿರೆ
ತಾನೇ ತನ್ನ ತಿಳಿಯಲಾರದೆ
ಏನೇನೋ ಮಾಡುತಲಿಹರು ಪ

ಆಸನವನು ಒಲಿದು ಒಲಿದು
ನಾಸಿಕದೊಳು ದೃಷ್ಟಿಯಿಟ್ಟು
ಸೊಸಲೀಯದೆ ಮನವ ನಿಲ್ಲಿಸಿ
ಈಸು ಪರಿಯ ಕಾಂಬುದೇನೋ 1

ಅನ್ನವ ವರ್ಜಿಪುದಾರಿಗೆ
ಅಡವಿಯೊಳು ಇಹುದು ಯಾರಿಗೆ
ತನ್ನ ತಿಳಿಯಲಾರದ ದುಃಖ
ತನ್ನ ನಿಂತು ಮಾಡುತಲಿಹುದು 2

ಚೇತನರಹಿತ ಶರೀರಕ್ಕೆ
ಚೇತನವಾಗಿ ತಾನೆ ಇರ್ದು
ಚೇತನಾತ್ಮಕ ಚಿದಾನಂದ
ಚೇತನನಾಗಿ ಆಡುತಲಿರೆ 3

353
ದೀಪ ಮುಟ್ಟಿಸಿ ಅಕ್ಕ ದೀಪ ಮುಟ್ಟಿಸಿ ಅಕ್ಕ

ದೀಪ ಮುಟ್ಟಿಸಿ ಅಕ್ಕ ದೀಪ ಮುಟ್ಟಿಸಿ ಅಕ್ಕ
ದೀಪ ಮುಟ್ಟಿಸಿ ಮನೆಗೆ ಈಗ ದೇವರು
ನಿನಗೆ ಕಾಣಬಹುದು ಪ

ದೇಶಿಕ ಕರುಣೆಂಬೆ ಅಕ್ಕ ದಿಟ್ಟದ ಬೆಂಕಿಯು ಅಕ್ಕ
ನಾಸಿಕ ಕೊನೆ ಭ್ರೂಮಧ್ಯದ ಒಲೆಯು
ನಂದದ ತೆರದಲಿ ವೈನದಲಿಟ್ಟೆ 1

ಕಾಮ ಕ್ರೋಧವೆಂಬುವ ಅಕ್ಕ ಕರಡನೆ ಹಾಕಿ ಅಕ್ಕ
ಸೋಮ ಸೂರ್ಯಸ್ವರ ಕೊಳವಿಯಲೂದಿ
ಸೂರಿಯ ಕೋಟಿ ಎಂಬ ಉರಿಯನೆ ಮಾಡಿ 2

ಜ್ಞಾನ ಜ್ಯೋತಿಯು ಅಕ್ಕ ಘನವಾಗಿ ಮುಟ್ಟಿಸೆ ಅಕ್ಕ
ತಾನು ತಾನಾದ ಮನೆಮನೆ ಹೊಕ್ಕು
ತಾನಾದ ಚಿದಾನಂದ ಬ್ರಹ್ಮವ ಕಾಣುವ 3

354
ದೇಹ ಭಾಗವು ಹೋಗಿ ದೇವನೇ ತಾನಾಗಿ

ದೇಹ ಭಾಗವು ಹೋಗಿ ದೇವನೇ ತಾನಾಗಿ
ದೇಹಗುಣವೆಲ್ಲಿಯದೋ ಮುಕ್ತ ಪ

ಗರುಡನ ಮನೆಯೊಳಗೆ ನಾಗರ ಜಾತಿಯ
ಪರಿ ನಡೆವುದೇನೋ ಮುಕ್ತ
ಶರೀರ ಸಹಿತದ ಬ್ರಹ್ಮಾಗಿ ತಾನಿರೆ
ಹರಿವವೆ ಪ್ರಾಣಗಳು ಮುಕ್ತ 1

ಉರಿಯದು ಉರಿಯಲು ಉರಿಯಲಿ
ಅರಗದು ಇಹುದೇನೋ ಮುಕ್ತ
ಕರುವಿಟ್ಟೆರಕದಿ ಥಳಥಳ ಹೊಳೆಯದೆ
ಇರುವುದೇ ಈ ಇಂದ್ರಿಯಗಳು ಮುಕ್ತ 2

ರವಿಯದು ಬೆಳಗಿರೆ ಕಿರಣ ಕಾಂತಿಯಿರಿ
ಗೂಗೆಗಳೆಲ್ಲ ತಿರುಗುವವೋ ಮುಕ್ತ
ಖವ ಖವ ಖವಿಸುತ ಪರವಶವಿರೆ
ವಿವರಿಸೆ ಮನವೆಲ್ಲೊ ಮುಕ್ತ 3

ಈಶನ ಕಣ್ಣುರಿ ಭುಗು ಭುಗು ಭುಗಿಲೆನ
ಏಸು ಉಳಿವುದು ಕಾದು ಮುಕ್ತಿ
ಸೂಸುವ ಮುಖದಲಿ ತೃಪ್ತಿಯೆ ತುಂಬಿರೆ
ವಾಸನೆ ಎಲ್ಲಿಹುದೋ ಮುಕ್ತ 4

ಪರಮಾತ್ಮನು ತಾ ಪರಿಪೂರ್ಣನಾನಿರೆ
ಮೆರೆವುದು ಅವಿದ್ಯೆ ಮುಕ್ತ
ಗುರು ಚಿದಾನಂದ ಸಹಜದಿ ತಾನಿರೆ
ಇರುವುದೆ ಜೀವತ್ವ ಮುಕ್ತ 5

355
ನಗುವು ಬರುತಿದೆ ಎನಗೆ ನಗುವು ಬರುತಿದೆ

ನಗುವು ಬರುತಿದೆ ಎನಗೆ ನಗುವು ಬರುತಿದೆ
ಬಿಗಿದು ಶ್ವಾಸ ಮೂಗ ಹಿಡಿದು ನಿಟಿಲ
ನೋಡುವವರ ಕಂಡು ಪ

ಹಡೆದ ದೈವ ಹತ್ತಿರಿರಲ ನೋಡಿದರು ನೋಡದಂತೆ
ಮೃಡನು ತಾನೆ ಇರಲು ಮೂಗ ಕೊನೆಯ ನೋಡುವವರ ಕಂಡು 1

ಹೊಳೆಯುತಿಹುದು ಪರಬ್ರಹ್ಮ ನಾನಾ ರೂಪಗಳನು ತಾಳಿ
ಮನದಿ ಪೂಜೆಯನ್ನು ಮಾಡ್ವ ಮಂದಮತಿಗಳನ್ನು ಕಂಡು 2

ತಿಳಿಯದಲೆ ತನ್ನನೀಗ ಕಣ್ಣು ಮುಚ್ಚುವವರ ಕಂಡು
ಮನಕೆ ನಿಲುಕದವನು ತಾನೆ ಮಂಗಳವಾಗಿ ಬೆಳಗುತಿರಲು 3

ತಾನು ದೇವ ನಿಜವಿದಿರಲು ತಂದು ಪ್ರತಿಮೆ ಇಟ್ಟುಕೊಂಡು
ಏನೋ ಮಂತ್ರ ಒದರುತಿರುವ ಮನುಜರನ್ನು ಕಂಡು ನನಗೆ 4

ಯೋಗ ಮಾಡಿಕೊಂಬುದೇನು ಯೋಗಮಾಡುವವನೆ ಇರಲು
ಯೋಗಿಯಾದ ಚಿದಾನಂದ ತಾನೆ ಸಾಕ್ಷಿಯಾಗಿ ಇರಲು 5

356
ನನಗೆ ಹೊತ್ತು ಹೋಗದೆ ನಾನೆಯೆ ಆಡುವೆ

ನನಗೆ ಹೊತ್ತು ಹೋಗದೆ ನಾನೆಯೆ ಆಡುವೆ
ನನಗೆ ಹೊತ್ತು ಹೋಗದೆ ಪ

ಈಶನ ಅವತಾರವಾಗಿ ಜೀವನ ಅವತಾರವಾಗಿ
ಈಶನಾಗಿ ಜೀವ ಬೊಂಬೆಯನಾಡುವೆ 1

ಜೀವರ ಹುಟ್ಟಿಸಿಯೆ ಜೀವರ ಬೆಳೆಸಿಯೇ
ಜೀವರಲ್ಲಿ ಲಯಿಸುವೆ ತ್ರೈಮೂರ್ತಿಯಾಗುವೆ 2

ಎಚ್ಚರವನೆ ಕೊಟ್ಟು ಎಚ್ಚರವನೆ ಕೊಟ್ಟು
ಎಚ್ಚರವನೆ ತಿಳುಹಿ ನಿಚ್ಚಳ ಚಿದಾನಂದನನು ಮಾಡುವೆ 3

357
ನೋಡು ನೋಡು ಬ್ರಹ್ಮವ ಮುಕ್ತನೆ

ನೋಡು ನೋಡು ಬ್ರಹ್ಮವ ಮುಕ್ತನೆ
ನೋಡು ನೋಡು ಬ್ರಹ್ಮವ
ನೋಡು ನೋಡು ಬ್ರಹ್ಮವನ್ನು
ಗೂಢವಲ್ಲ ಎದುರಿಲ್ಲದೆ
ಆಡಲಿಕ್ಕೆ ನಾಲಗಿಲ್ಲ ಸರ್ವರೂಪದಲ್ಲಿದೆ ಪ

ಸ್ತ್ರೀಯ ರೂಪಾಗಿದೆ ಪುರುಷ ರೂಪಾಗಿ ಇದೆ
ಸ್ತ್ರೀಯು ಅಲ್ಲ ಪುರುಷನಲ್ಲ ಅಹುದು
ಅಹುದು ಅಹುದು ಅಲ್ಲ 1

ಸತಿಯು ಪತಿಯು ಆಗಿ ಇದೆ
ಸುತರು ಸೊಸೆಯು ಆಗಿ ಇದೆ
ಅತಿ ಬಳಗವಾಗಿ ಇದೆ ಎಲ್ಲ ವೇಷ ಹಾಕಿ ಇದೆ 2

ಎಲ್ಲವಾಗಿ ಆಡುತಿದೆ
ಎಲ್ಲವಾಗಿ ಪಾಡುತಿದೆ
ಎಲ್ಲವಾಗಿ ಚಿದಾನಂದ ಬ್ರಹ್ಮವೀ ಪರಿಯಲಿದೆ 3

358
ಪಡಿಶಟ್ಟು ಪಟ್ಟಣವ ಕೇಳದೆಯಕ್ಕ

ಪಡಿಶಟ್ಟು ಪಟ್ಟಣವ ಕೇಳದೆಯಕ್ಕ
ಪಡಿಶಟ್ಟು ಪಟ್ಟಣವ
ಪಡಿಶಟ್ಟು ಪಟ್ಟಣದ ವಿವರ ಕೇಳೇ
ಹುಟ್ಟಳಿವುದಕೆ ಕಡೆಯಿಲ್ಲ ಪ

ಪಟ್ಟಣದರಸಗೆ ತಲೆಯೇ ಇಲ್ಲ
ಪಟ್ಟಣದರಸನ ಹೆಂಡತಿ ರಂಡೆ
ಪಟ್ಟುಗೊಡುವ ಓಲೆಕಾರರು ಪಾಪಾಶಿ ಬೆಲೆಯವರು 1

ಸಿಂಗಲೀಕನವ ಪ್ರಧಾನಿ ಶಿಷ್ಟನೀಗವನು ಕೋಣ
ಮಂಗಳನೀಗವನು ತಳವಾರ
ಅಂಗತಿರುಗುವವನೆ 2

ಕರಣೀಕನೀಗವ ಮೊಂಡ
ನೊಣವು ಎಂಬುವನವನಾಚಾರಿ
ಹಿರಿಯ ಗೂಗೆ ಬಹಳ ಮುದುಕಿ ಎಲ್ಲರಿಗು ಹಿರಿಯವಳು 3

ಹದ್ದು ಈಗ ತಾ ದಳವಾಯಿ
ನೀಚರೆಲ್ಲರು ನಾಯಕರು
ಇದ್ದ ವಕ್ಕಲು ಎಲ್ಲ ದುಃಖಿಗಳು ಬಲು ಎಡವಟ್ಟುಗಳು 4

ಗುರು ಕರುಣದಿ ಅರಸಗೆ ತಲೆ ಬರಲು
ಅರಸನ ಹೆಂಡತಿ ಮಂಗಳೆಯಾಗಲು
ಗುರು ಚಿದಾನಂದ ತಾನಾದರಸು ಎಲ್ಲರು ಮುಕ್ತರೆ 5

359
ಪುರುಷರಾದವರೆಲ್ಲ ಪುರುಷರೆನಿಸುವುದೋ

ಪುರುಷರಾದವರೆಲ್ಲ ಪುರುಷರೆನಿಸುವುದೋ
ಪುರುಷರೊಳಗೂ ಪುಣ್ಯಪುರುಷನೇ ಪುರುಷ ಪ

ಪರಮ ದಿವ್ಯ ಜ್ಞಾನಪೂತ ಭಸಿತವಿಟ್ಟು
ಸ್ಥಿರವೆಂಬ ಸಿಂಹ ಪೀಠದಲಿ ಕುಳಿತು
ನಿರುತ ನಿತ್ಯಾನಂದ ನಿರಾಮಯ ತಾನೆಂದು
ಭರದಿ ಪೂಜಿಸುತಿರುವನು ಪುರುಷ 1

ಸುಖ ದುಃಖವೆಂಬೆರಡು ಸೀಮೆಗೂ ಸೇರದೇ
ಅಖಿಲೇಂದ್ರಿಯಗಳ ಆಟ ಕೆಡಿಸಿ
ಭಕುತಿಯೇ ನಿಜವೆಂದು ಭಜಿಸಿ ಸರ್ವದಿ ಮಹಾ
ಮುಕುತಿ ಪಥ ಸೇರಿದವನವ ಪುರುಷ 2

ಅಂಗ ಕಾಣುವ ವಿಷಯಗಳ ಆತ್ಮಗರ್ಪಿಸುತ
ಸಂಗ ರಹಿತನಾಗಿ ತಾನಾಗಿ ಇರುತ
ಮಂಗಳವು ಎನಿಸಿಯೇ ಮರೆತು ಬಾಹ್ಯವನು
ವಿಹಂಗಪಥದಿ ನಿಂತಿರುವನವ ಪುರುಷ 3

ಶಾಂತರಸವಂ ಕುಡಿದು ಸರ್ವಕ್ಕೂ ಬೆದರದೆ
ಭ್ರಾಂತು ಎನಿಪ ಬೆಳಗ ತರಿದು
ಸಂತ ಸಾಲೋಕ್ಯ ಮೊದಲು ಸಾಯುಜ್ಯವನೆಲ್ಲ
ಪಂಥದಿ ಮೀರಿ ಪರಿವನವನೆ ಪುರುಷ 4

ನಾದದಾನಂದದಿ ಮೂರವಸ್ಥೆಯ ಗೆಲಿದು
ನಾದ ವೀಣೆಯ ಪರಿ ಪರಿ ಕೇಳುತ
ನಾದ ಸಾಕ್ಷಿಕ ತಾನು ಚಿದಾನಂದ ಗುರುವಾಗಿ
ನಾದದಾನಂದದಲಿ ಮುಳುಗಿರುವನವ ಪುರುಷ 5

360
ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲು

ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲು
ಬಲವನು ದುರ್ಗುಣಕೆ ಹತ್ತಬಹುದೇ
ಬೆಳಗುತ್ತ ಜ್ಞಾನದ ಚಂದ್ರನು ಹೊಳೆದಿರೆ
ಬಳಿಕ ಜನನ ಮರಣ ಮುತ್ತಬಹುದೆ ಪ

ಬಹು ಬೆಳಕು ಬೆಳಗಲು ಮನದ ಮರ್ಕಟವದು
ಮರವ ನೇರದೆ ಕೆಳಗೆ ನಿಲ ಬಲ್ಲುದೆ
ಬಹು ಕಾಮವೆಂಬ ಕಾಗೆ ಕಣ್ಣುಡುಗಲು
ಗೂಡಿನಿಂದಾ ಹೊರಗೆ ಬರಬಲ್ಲದೆ 1

ಚೆಲ್ಲಿರೆ ಕಾಂತಿಯು ಕಳ್ಳರಾರ್ವರ ತಲೆ
ಚೆಂಡಾಡದೆ ತಾನು ಸುಮ್ಮನಿಹುದೆ
ಫುಲ್ಲ ತಿಂಗಳ ಬೆಳಕು ಎಲ್ಲೆಡಗೆ ಹರಡಿರೆ
ಪಂಚ ವಂಚಕರು ಓಡದಿಹರೆ 2

ಒಲಿದರೆ ತೇಜವು ಅವಿದ್ಯದ ಕತ್ತಲೆಯು
ತಾನೋಡದೆ ಅಲ್ಲಿ ನಿಲಬಲ್ಲುದೆ
ಬಲು ಕಳೆ ಚಿದಾನಂದಗುರು ತಾನು ಬೆಳಗುತಿರೆ
ಬಹಳ ಜನ್ಮದ ಪಾಪ ಹರಿಯದಿಹುದೇ 3

361
ಬೆಳುದಿಂಗಳಿನೊಳು ಬೇಟೆಯನಾಡಿರಿ

ಬೆಳುದಿಂಗಳಿನೊಳು ಬೇಟೆಯನಾಡಿರಿ
ಬಲ್ಲವರಾದವರೆಲ್ಲ
ಒಳ್ಳೊಳ್ಳೆಯವರು ಕೂಡಿ ಆಡಿರಿ
ಶಮದಮ ಶಾಂತರು ಎಲ್ಲ ಪ

ತನ್ನ ಸರಿಯದ ಅವಿದ್ಯೆ ಹುಲಿಯದು
ಘುಡುರು ಘುಡುರು ಘುಡುರೆಂದೆನಲು
ಸುಮ್ಮನೆ ಪ್ರಣವದ ಧನುವನು ಎಳೆದು
ನಾದ ಬಾಣದಿ ಬೀಳಿಸಿರಿ 1

ನಾನು ಎಂಬ ಕರಡಿಯು ಬಂದು
ಅಡರಲು ನಿಮ್ಮನು ನಿಲುವುದ್ಧ
ಸ್ವಸ್ಥ ವಿವೇಕದ ಕೋಲಲಿ ಬಡಿಯಿರಿ
ಕೆಡಹಿರಿ ನೋಡದೆ ನೀವೆಲ್ಲ 2

ಅಪರೋಕ್ಷವೆಂಬ ಬಲೆಯನೆ ಒಡ್ಡಿ
ದುರ್ಗುಣ ಮೃಗಗಳನೆ ಬಡಿದು
ಭವ ಹರ ಚಿದಾನಂದನ ನೆನೆಯುತ
ಬೇಟೆಯನಾಡಿರಿ ಎಲ್ಲ 3

362
ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ

ಬಯಲ ಜಾತ್ರೆಗೆ ನಡೆಹೋಗುವ ಬಾರದಲೆ ಅಲ್ಲಿರುವ ಪ

ಶಾಂತಿ ಎಂದೆಂಬ ಕಂಟಲೆಗಳು ಶಮೆ ಹುರಿಗೆಜ್ಜೆ ಎತ್ತುಗಳು
ದಾಂತಿ ಎಂದೆಂಬ ಕಾವಡಿಗಳು ದಮೆ ಎಂಬ ಹೂಜೆಗಳು 1

ಮಂಗಳವೆಂಬ ಬಾಲಕರು ಮುಕ್ತಿ ಎಂಬ ಮುತ್ತೈದೆಯರು
ಸಂಗ ಹರರಹ ವಿಟಗಾರರು ಸೈರಣೆ ಎಂಬ ಹಿರಿಯರು 2

ಸಂತೋಷವೆಂಬ ಅಂಗಡಿಗುಂಪು ಸಹಜದ ಹೂಕಂಪು
ಶಾಂತರೆನಿಪ ದೊರೆಗಳ ಗುಂಪು ಸುಖ ಛತ್ರಿಯ ತಂಪು 3

ಓಂಕಾರನಾದದ ನಗಾರಿ ವೀಣಾನಾದದ ತುತ್ತೂರಿ
ಸಂಕಲ್ಪ ಸುಳ್ಳೆಂಬ ತಂಬೂರಿ ಸಾಮವೆನಿಸುವ ಭೇರಿ 4

ಆರು ಚಕ್ರದ ಅರವಟ್ಟಿಗೆ ಅಮೃತ ಬಿಂದುವಿನ ಮೊಗೆಯು
ದಾರಿದಾರಿಗೆ ಸೋಹಂಸ್ಮರಣೆ ದೃಢ ಮನವದು ಚಡಿಯು 5

ಆನಂದ ವನಗಳ ಸಾರುತ ಆಯಾಸ ಕಳೆಯುತ್ತ
ಸ್ವಾನಂದ ಗೋಪುರ ಕಾಣುತ ಸುಮ್ಮಾನವ ಪಡೆಯುತ 6

ಮೃಢನಾಳ ದ್ವಾರವ ಪೋಗುತ ಮುಂದೆ ಚಂದ್ರನ ಕಾಣುತ
ಅಡರಿದ್ವಿದಳ ಸದರೇರುತ ಅತ್ತತ್ತ ಸಾರುತ 7

ಸಹಸ್ರಾರವೆನಿಪ ಸರೋವರ ಸ್ನಾನ ಮಾಡುವ ಅಪಾರ
ಮಹಾ ಕಮಲ ಪೀಠವನೇರುವರ ಮಹೇಶನೆನ್ನು ಅವರ 8

ತುರೀಯವೆಂದೆಂಬ ಬಯಲಗೂಡಿ ತಾವು ಹೋಗುವ ನಾಡಿ
ಹರ್ಷದ ಧೂಳ ದರ್ಶನ ಮಾಡಿ ಹಾಯಿಗುಡಾರ ಹೂಡಿ 9

ಶಿಂಶುಮಾರವೇ ದೇವರ ಪೀಠ ಸಿದ್ಧವೆಂಬ ಕವಾಟ
ಸಂಶಯವಿಲ್ಲದ ಎಡೆಯಾಟ ತತ್ಪುರುಷರ ಕೂಟ 10

ಎತ್ತೆತ್ತ ನೋಡಿದರು ಚಿದೀಪ್ಯ ಸೂರ್ಯ ಕೋಟಿಗೆ ಘನವು
ಒತ್ತೊತ್ತು ಪೂರ್ಣಾಭಿಷೇಕ ಓಂ ಎಂದೆಂಬ ಸ್ವರವು 11

ಸುವಾಸನೆ ಎಂದೆಂಬ ಧೂಪವು ಸುಂದರ ಪುಷ್ಪಗಂಧ
ತಾವು ಮಾಡುವ ಭಾವದಲಿಂದ ತೃಪ್ತಿ ನೈವೇದ್ಯ ಚಂದ 12

ಎರಡಿಲ್ಲದೇಕಾರ್ತಿ ಬೆಳಗುತ ತಾ ಹೊಳೆಯುತ
ಹೊರ ವೊಳಗೆಂಬುದ ಮರೆಯುತ ಹೇಮದ ತಗಡಾಗಿ ಇರುತ 13

ಬೆಳಕ ಕಂಡಾರತಿ ಎತ್ತುತ ಬೆಳಗನು ಬೆಳಗುತ್ತ
ತಿಳಿದು ಪ್ರದಕ್ಷಿಣೆ ಮಾಡುತ ತೋರುವುದು ಬ್ರಹ್ಮವದೆನ್ನುತ 14

ಭಯದ ವಿಸರ್ಜನೆ ಮಾಡುತ ಬಯಲಾಗಿಯೆ ತೋರುತ
ಬಯಲ ಚಿದಾನಂದನಿಗೆರಗುತ್ತ ಬ್ರಹ್ಮನಾಗಿ ತಾನಿರುತ 15

363
ಬ್ರಹ್ಮವದು ಹ್ಯಾಗಿದೆ

ಬ್ರಹ್ಮವದು ಹ್ಯಾಗಿದೆ
ಬ್ರಹ್ಮ ಕೇಳ್ವನ ಹಾಗಿದೆ
ಬ್ರಹ್ಮವದು ಹೀಗೆಂದು ತೋರಲಿಕೆ ಶಕ್ಯವೇ ಪ

ಬ್ರಹ್ಮವದು ಶೂದ್ರನೇ
ಬ್ರಹ್ಮವದು ಭದ್ರನೇ
ಬ್ರಹ್ಮವದು ರುದ್ರನೆಂದು ತೋರಿಸಲು ಶಕ್ಯವೇ 1

ಬ್ರಹ್ಮವದು ಯಂತ್ರವೇ
ಬ್ರಹ್ಮವದು ತಂತ್ರವೇ
ಬ್ರಹ್ಮವದು ಮಂತ್ರವೆಂದು ತೋರಿಸಲು ಶಕ್ಯವೇ 2

ಬ್ರಹ್ಮವದು ರೊಟ್ಟಿಯೇ
ಬ್ರಹ್ಮವದು ಪುಟ್ಟಿಯೇ
ಬ್ರಹ್ಮವದು ಹೊಟ್ಟೆಯೆಂದು ತೋರಿಸಲು ಶಕ್ಯವೇ 3

ಬ್ರಹ್ಮವದು ಜೋಳಿಗೆ
ಬ್ರಹ್ಮವದು ಮಾಳಿಗೆ
ಬ್ರಹ್ಮವದು ಹೋಳಿಗೆ ಎಂದು ತೋರಿಸಲು ಶಕ್ಯವೇ 4

ಹೇಗಿದೆಂದು ಕೇಳ್ವಡೆ
ಹೀಗೆದೆಂದ ಪೇಳ್ವಡೆ
ಹೇಗೆ ಹೀಗೆ ಎಂಬುದಕ್ಕೆ ಚಿದಾನಂದನ ನೋಡಿದೆ 5

364
ಬ್ರಹ್ಮವು ನೀನೇ

ಬ್ರಹ್ಮವು ನೀನೇ
ಬ್ರಹ್ಮವು ನೀನೆಂದು ನಂಬಲೋ ದೊರೆಯೇ ಪ

ವ್ಯಾಪಾರ ಮೂಗಿನಲ್ಲಲ್ಲ ಮೂಗಿನ
ವ್ಯಾಪಾರ ಕಣ್ಣಿನಲ್ಲಿಲ್ಲ
ನಿನ್ನ ವ್ಯಾಪಾರ ಸಕಲವು ಎಲ್ಲ
ನಿನ್ನ ಹೊರತು ಬೇರೆ ಏನಿಲ್ಲ 1

ಜಾಗೃತ ವ್ಯಾಪಾರ ಸ್ವಪ್ನದಲಿಲ್ಲ
ಸ್ವಪ್ವದ ವ್ಯಾಪಾರ ಜಾಗೃತದಲ್ಲಿಲ್ಲ
ಜಾಗೃತ ಸ್ವಪ್ವವೆರಡು ಸುಷುಪ್ತಿಯಲ್ಲಿಲ್ಲ
ಸುಷುಪ್ತಿ ತುರೀಯವು ಜಾಗೃತದಲ್ಲಿಲ್ಲ 2

ನಾದದ ವ್ಯಾಪಾರ ಬಿಂದುವಿನಲ್ಲಿಲ್ಲ
ಬಿಂದು ವ್ಯಾಪಾರ ನಾದದಲ್ಲಿಲ್ಲ
ನಾದ ಬಿಂದು ಕಳೆ ಮೂರಕೆ ಇಲ್ಲ
ಬೋಧ ಚಿದಾನಂದ ಹೊರತಿಹನಲ್ಲ 3

365
ಬ್ರಹ್ಮವೇ ನೀನೆನ್ನು ಮುಕ್ತನೇ

ಬ್ರಹ್ಮವೇ ನೀನೆನ್ನು ಮುಕ್ತನೇ
ಬ್ರಹ್ಮವೇ ನೀನೆನ್ನು ಪ

ತುಪ್ಪದ ಹನಿಯೆಲ್ಲವು ಮುಕ್ತನೆ
ತುಪ್ಪವೆಯಲ್ಲವೆ ಮುಕ್ತನೆ
ಇಪ್ಪ ಈ ಜಗವೆಲ್ಲ ಮುಕ್ತನೆ
ತುಪ್ಪದ ತೆರನಂತೆ ಈ ಬ್ರಹ್ಮ 1

ಸಕ್ಕರೆ ಚೂರೆಲ್ಲ ಮುಕ್ತನೆ
ಸಕ್ಕರೆಯಲ್ಲವೆ ಮುಕ್ತನೆ
ತಕ್ಕು ಆಪರಿ ಆ ಜಗವು ಮುಕ್ತನೆ
ಸಕ್ಕರೆ ತೆರನಂತೆ ಈ ಬ್ರಹ್ಮ 2

ಅಣುರೇಣು ತೃಣ ಕಾಷ್ಠ ಮುಕ್ತನೆ
ಘನ ಜೀವ ತಾನೆ ಎನ್ನು ಮುಕ್ತನೆ
ಗುಣಾತೀತ ಚಿದಾನಂದ ಮುಕ್ತನೆ
ಅನುಮಾನವಿಲ್ಲದೆ ನೀನೇ ಈ ಬ್ರಹ್ಮ 3

366
ಬ್ರಹ್ಮಾಗಿ ತನ್ನ ಕಾಣೆ ಬ್ರಹ್ಮವಲ್ಲವೆ

ಬ್ರಹ್ಮಾಗಿ ತನ್ನ ಕಾಣೆ ಬ್ರಹ್ಮವಲ್ಲವೆ ಪ

ಕೀಟ ಭೃಂಗವ ಹೊಂದಿ ಕೀಟ ಭೃಂಗವಾಗಲು
ಕೀಟವ ನೆನೆಸಲುಂಟೆ ಭೃಂಗದಲ್ಲಾದ
ಕೂಟ ಪ್ರಾಣವೆ ಹೋಗಿ ಘಾಟಿ ಬ್ರಹ್ಮದಲಿರೆ
ಕೂಟ ಪ್ರಾಣವದೆನಲುಂಟೆ ಬ್ರಹ್ಮನಲ್ಲದೆ 1

ಕರ್ಪೂರದುರಿಯ ಸೋಂಕಿ ಕರ್ಪುರ ಉರಿಯಾಗಲು
ಕರ್ಪೂರವ ನೆನಸಲುಂಟೆ ಉರಿಯಲ್ಲದೆ
ಇಪ್ಪ ಇಂದ್ರಿಯ ಹೋಗಿ ಅಪ್ಪಟ ಆತ್ಮನಾಗೆ
ಇಪ್ಪ ಇಂದ್ರಿಯ ಎನಲುಂಟೆ ಬ್ರಹ್ಮನಲ್ಲದೆ 2

ತೊತ್ತು ಅರಸನಸೇರಿ ತೊತ್ತು ಅರಸನಾಗಲು
ತೊತ್ತುತನವ ನೆನಸಲುಂಟೆ ಅರಸಲ್ಲದೆ
ಚಿತ್ತವೆಂಬುದು ಹೋಗಿ ಶುದ್ಧ ಆತ್ಮವ ದಾಗೆ
ಚಿತ್ತವೆನಲುಂಟೆ ಬ್ರಹ್ಮವಲ್ಲದೆ 3

ಲವಣ ನೀರನು ಕೂಡಿ ಲವಣನೀರಾಗಲು
ಲವಣ ನೆನಸಲುಂಟೆ ನೀರಲ್ಲದೆ
ಸವನಿಸೆ ಮನವದು ಶಿವನಾಗಿ ವರ್ತಿಸೆ
ಸವನಿಸೆ ಮನ ಎನಲುಂಟೆ ಬ್ರಹ್ಮವಲ್ಲದೆ 4

ಶರೀರ ತನ್ನದು ಎಲ್ಲ ಶರೀರ ಗುರುವಿನದಾಗೆ
ಶರೀರ ತಾನೆ ಎನಲುಂಟೆ ಗುರುವಲ್ಲದೆ
ನರನು ಚಿದಾನಂದ ಗುರುವಾಗಿ ತನ್ನ ಕಾಣೆ
ನರನು ಎನಲುಂಟೆ ಬ್ರಹ್ಮವಲ್ಲದೆ 5

367
ಬ್ರಹ್ಮಾನಂದದ ಸಭಾ ಮಧ್ಯದಲಿ

ಬ್ರಹ್ಮಾನಂದದ ಸಭಾ ಮಧ್ಯದಲಿ
ಸುಮ್ಮನೆ ಇರುತಿಹುದೇನಮ್ಮ
ಬ್ರಹ್ಮಾದಿಗಳಿಗೆ ದೂರಾಗಿಹ
ನಿರ್ಮಲ ನಿರುಪಮ ತಾನಮ್ಮ ಪ

ಹೇಳಲು ಬಾರದ ಸುಖರೂಪದಲಿ
ಹೊಳೆಯುತ ಅಹುದು ಏನಮ್ಮ
ಮೇಳದ ಲೋಕಕೆ ಕರ್ತೃ ತಾನಾಗಿಹ
ಲೋಲ ಪರಾತ್ಪರ ತಾನಮ್ಮ 1

ಬೋಧದ ರೂಪದಿ ಹಾ…. ಎಂಬಂದದಿ
ಬೆಳಗುತಲಿಹುದದು ಏನಮ್ಮ
ಆದಿ ಅನಾಧಿಯು ಅವ್ಯಕ್ತವೆನಿಪ
ಅಚಲಾನಂದವೆ ತಾನಮ್ಮ 2

ತೃಪ್ತಾನಂದದಿ ತೂಷ್ಣೀ ಭಾವದಿ
ದೀಪ್ತವಾಗಿಹುದದು ಏನಮ್ಮ
ಸಪ್ತಾವರಣದ ಮೀರಿ ಮಿಂಚುವ
ಗುಪ್ತಜ್ಞಪ್ತಿಯು ತಾನಮ್ಮ 3

ಕದಲದೆ ಚೆದುರದೆ ಕೈ ಕಾಲಿಲ್ಲದೆ
ಉಕ್ಕುತಲಿಹುದದು ಏನಮ್ಮ
ಸದಮಲ ಸರ್ವಾತ್ಮತ್ವವೆಯಾಗಿಹ
ಸಾಕ್ಷೀಭೂತವು ತಾನಮ್ಮ 4

ತೋರುತಲಡಗದ ಸಹಜಭಾವದಿ
ಥಳಥಳಿಸುತಿಹುದದು ಏನಮ್ಮ
ಕಾರಣ ಕಾರ್ಯವ ಕಳೆದ ಚಿದಾನಂದ
ಕಾಲಾತೀತನು ತಾನಮ್ಮ 5

368
ಮಂಗಳನಾದ ಕೇಳುವತನಕ ಮನಸು ನಿಲ್ಲುವುದೇ

ಮಂಗಳನಾದ ಕೇಳುವತನಕ ಮನಸು ನಿಲ್ಲುವುದೇ
ಸಂಗಹರನು ಆಗದತನಕ ಸಾಕ್ಷಿಯಾಗುವುದೇ ಪ

ಭಾಮಿನಿಯನ್ನು ತ್ಯಜಿಸದತನಕ ಭಕ್ತನಾಗಲಹುದೇ
ಕಾಮವನ್ನು ಕಡಿಯದತನಕ ಕರುಣಿಯಾಗಲಹುದೆ 1

ಪ್ರಾಣಾಪಾದವು ಕೂಡದತನಕ ಪರ ತಾನಾಗುವುದೇ
ನೀನು ನಾನೆಂಬುದ ನೀಗದತನಕ ನಿಜವದು ತಾನಹುದೇ 2

ಹಮ್ಮು ಕೋಶ ಕಳೆಯುವತನಕ ಹಂಸನಾಗಹುದೇ
ಬ್ರಹ್ಮ ಚಿದಾನಂದನಾಗದತನಕ ಭ್ರಮೆ ತಾ ತೊಲಗುವುದೇ 3

369
ಮರವೆ ಎಂಬುದು ಎಲ್ಲಿಹುದೋ ಯೋಗಿಗೆ

ಮರವೆ ಎಂಬುದು ಎಲ್ಲಿಹುದೋ ಯೋಗಿಗೆ
ಮರವೆ ಎಂಬುದು ಎಲ್ಲಿಹುದೋ
ಅರಿತು ಸರ್ವವ ಸರ್ವದಲಿ ಆತ್ಮ ತಾನಾಗಿರ್ದು
ನಿರುತ ಕಾಲದಿ ಮುಕ್ತಗೆ ಅವಗೆ ಪ

ನಿರ್ವಿಕಲ್ಪ ಸಮಾಧಿ ನಿತ್ಯ ನಿತ್ಯಳವಟ್ಟು
ದುರ್ವಿಘ್ನಗಳೆ ಜರಿದು
ಗರ್ವದೂರವಾಗಿ ಗಾಢ ತೂರ್ಯದೊಳಿದ್ದು
ನಿರ್ವಹಿಸಿ ನಿಜಸುಖವನು
ಪರ್ವಿಪಸರಿಸಿ ತನಗೆ ಪ್ರತಿಗಾಣುತಿರುತಿಪ್ಪ
ಸರ್ವಸಾಕ್ಷಿ ತಾನಾದವಗೆ 1

ನಾದದೊಳು ಕಿವಿಯಿಟ್ಟು ನಾಸ್ತಿಮನವಸಿಮಾಡಿ
ಬೋಧೆ ಬಲಿದಾ ಲಹರಿಯ
ಹಾದಿಯಂತುಟೋ ಅಂತು ಹರಿದಾಡುತಲಿ ತಾ
ಭೇದಾ ಭೇದಗಳನುಳಿದು
ಸಾಧು ಸಂಗವ ಕೂಡಿ ಸಂತುಷ್ಟನಾಗಿಪ್ಪ
ನಾದ ಮೂರುತಿಯಾಗೆ 2

ಪರಮ ಸಾರವ ತಿಳಿದು ಪರಿಪೂರ್ಣನಾಗಿರುತ
ವರ ಚಿದಾನಂದ ಗುರುವೆ ಚರಣ
ಸ್ಮರಣೆಯ ಮನದಿ ಚಲಿಸದಂತಾವಾಗ
ಹಿಡಿದು ನಾಲಗೆಯೊಳಿರಿಸಿ
ಗುರುವೆ ಗುರುವೆ ಎಂದು ತಾನಾಗಿರ್ದು
ನಿರತಿಶಯದ ಪರಮಗೆ 3

370
ಮಾಡಿದನೆನ್ನ ಫಕೀರನಾಗಿ ಸದ್ಗುರು

ಮಾಡಿದನೆನ್ನ ಫಕೀರನಾಗಿ ಸದ್ಗುರು
ಮಾಡಿದನೆನ್ನ ಫಕೀರನ ನೋಡಲಿಕ್ಕಾಶ್ಚರ್ಯ
ಪ್ರಪಂಚ ಕಳೆದೆ ನಾಮರೂಪಕೆ ದೂರ ಪ

ಅನುಭವಕಪ್ಪರ ಹೃದಯದ ಜೋಳಿಗೆ
ಎನ್ನುವ ಕಂಕುಳೊಳಿಟ್ಟು
ಅನಿಮಿಷ ದೃಷ್ಟಿ ಅರುಹಿನಕಪನಿ
ಅಮೃತ ಕಮಂಡಲು ಕೊಟ್ಟು 1

ನಾದದ ಕಿನ್ನರಿ ಕೈಯೊಗಳಿಟ್ಟು
ಟೋಪಿಗೆ ಪೆಟ್ಟಿಗೆಯಿಟ್ಟ
ಬೋಧದ ಅಂಗಿಯು ನಿರ್ಗುಣ
ಲುಂಗಿಯ ಸೈರಣೆಲುಟಿಕೆಯ ಕೊಟ್ಟ 2

ಈ ಪರಿ ಮಾಡಿಯೆ ಬಯಲನು
ಹಿಡಿ ಎಂದು ಕರವನು ನೆತ್ತಿಯಲಿಟ್ಟ
ಭೂಪ ಚಿದಾನಂದ ಫಕೀರನಾಗಿಯೆ
ತಿರುಗೆಂದಪ್ಪಣೆ ಕೊಟ್ಟ 3

371
ಯೋಗ ಯೋಗಗಳೆಂದು ಕಸಿವಿಸಿ ತಾನೇಕೆ

ಯೋಗ ಯೋಗಗಳೆಂದು ಕಸಿವಿಸಿ ತಾನೇಕೆ
ಯೋಗವು ತಾನದೆ ಬಂಧ
ಯೋಗವ ಬಿಟ್ಟು ತನ್ನನೆ ಬ್ರಹ್ಮನೆಂದೆನೆ
ಯೋಗವೆ ರಾಜಯೋಗವೆಂದ ಪ

ವ್ರತನೇಮ ಶೌಚದಿ ಮುಕ್ತಿಯು ಎಂದನೆ
ವ್ರತನೇಮ ಶೌಚವು ಬಂಧ
ಪ್ರತಿಯಿಲ್ಲದಾ ವಸ್ತು ತಾನೆಂದು ಚಿಂತಿಸೆ
ಅತಿರಾಜಯೋಗವೆಂತೆಂದ 1

ಮೂರ್ತಿಧ್ಯಾನಷ್ಟಾಂಗದಲಿ ಮುಕ್ತಿಯೆಂದನೆ
ಮೂರ್ತಿಧ್ಯಾನಷ್ಟಾಂಗ ಬಂಧ
ಕರ್ತೃನಾ ಸರ್ವ ಕಾರಣವೆಂದು ಚಿಂತಿಸೆ
ಕರ್ತೃರಾಜಯೋಗವೆಂದ 2

ಲಯ ಲಕ್ಷದಿಂದ ಮುಕ್ತಿ ಎಂದೆನೆ
ಲಯ ಲಕ್ಷ ತಾನದು ಬಂಧ
ಸ್ವಯಂ ಬ್ರಹ್ಮವೆಂದು ತಾನೆ ಚಿಂತಿಸಿ
ನಿಯಮವು ರಾಜಯೋಗವೆಂದ 3

ಖೇಚರಿ ಭೂಚರಿಯಲಿ ಮುಕ್ತಿ ಎಂದೆನೆ
ಖೇಚರಿ ಭೂಚರಿ ಬಂಧ
ವಾಚಾತೀತ ವಸ್ತು ತಾನೆಂದು ಚಿಂತಿಸೆ
ಗೋಚರ ರಾಜಯೋಗವೆಂದ 4

ಎರಡಕ್ಕೆ ತಾವಿಲ್ಲ ಇಹನೊಬ್ಬನೇ ತಾನೇ
ಎರಡಾಗಿ ಕಾಂಬುದೊಂದೇ ಬಂಧ
ಗುರು ಚಿದಾನಂದನ ಸಾಕ್ಷಾತ್ಕಾರವೆಂದೆನೆ
ಗುರಿಯದು ರಾಜಯೋಗವೆಂದ 5

372
ಯೋಗಿಯ ಭಾವವು ಆರಿಗು ತಿಳಿಯದು

ಯೋಗಿಯ ಭಾವವು ಆರಿಗು ತಿಳಿಯದು
ಯೋಗಿಯೆಂದೆನಿಪುದು ಸುಖವೋ ದುಃಖವೋ ಪ

ನಾದವ ಸಾಧಿಸಿ ನಾದವ ಭೇದಿಸಿ
ನಾದಾನಂದದಲಿ ಮುಳುಗಿರ್ದ
ನಾದಾಮೃತವನು ಸವಿಸವಿದುಂಬುವ
ನಾದ ಮೂರುತಿಯವ ನರನೋ ಹರನೋ 1

ಅಂತರ್ಲಕ್ಷ್ಯ ಬಹಿರ್ಲಕ್ಷ್ಯವನೊಂದ
ನು ತರಿಸಿದೆ ಸಮನಿಸುತಿರ್ದು
ಸಂತತ ಪೂರ್ಣಾನಂದದಿ ಮುಳುಗಿ ನಿ-
ರಂತರ ಸುಖಿಪುದು ಉರಿಯೋ ಸಿರಿಯೋ 2

ಬಯಲಾಟವ ನೋಡಿ ಬಯಲೆಲ್ಲವ ಮಾಡಿ
ಬಯಲ ಬಗೆಗೆ ತಾ ಓಲಾಡಿ
ಬಯಲಿಗೆ ಬಯಲು ಬಯಲಾಗಿರುತಿಹ
ಬಯಲಾನಂದವು ಭಯವೋ ಜಯವೋ 3

ಮೂರವಸ್ಥೆಯ ಮೂವರಿಗೊಪ್ಪಿಸಿ
ಬೇರೆ ಸಾಕ್ಷ್ಯಗೆ ತಾನಿರುತಿದ್ದು
ತೋರುವುದೆಲ್ಲ ತನ್ನತನವೆಂದರಿತು
ಶೂರನಾಗಿರುವುದು ಗೆಲುವೋ ಒಲವೋ 4

ಗುರು ಕೀಲನೆ ನೋಡಿ ಗುರುವೆಲ್ಲವ ಮಾಡಿ
ಗುರು ಲೀಲೆ ಯಂತಿರುತಿದ್ದು
ಗುರು ಚಿದಾನಂದ ಮೂರುತಿಯ ಕೂಡಿರುತಿಹ
ಗುರುತರ ತಾನದು ದೊರೆಯೋ ಚರಿಯೋ 5

373
ಲಗ್ಗೆಯ ಚೆಂಡನಾಡಿರಿ ಲಕ್ಷಣವಂತರು

ಲಗ್ಗೆಯ ಚೆಂಡನಾಡಿರಿ ಲಕ್ಷಣವಂತರು
ಲಕ್ಷಿಸಿ ಬ್ರಹ್ಯವ ನೋಡುವರು
ಲಗ್ಗೆಯೊಡ್ಡಲು ಬಹುದುರ್ಗುಣರವರ
ಲಾಗಗಳ ಹೊಯ್ಯಂದದಲಿಡಿರಿ ಪ

ಸಪ್ತಾವರಣದ ಲಗ್ಗೆಯ ಬಿಲ್ಲೆಯು
ಒಂದರ ಮೇಲೊಂದಿರಲು
ದೀಪ್ತವೆನಿಸಿ ಸಚ್ಚಿತ್ತಿನ ಚೆಂಡೊಳು
ಬೀಳಿಸಿ ಬಿಲ್ಲೆಯನು 1

ಲಗ್ಗೆಯು ಬೀಳಲು ಓಡಿಯೆ ಹೋಗಿ
ಬಗ್ಗಿ ಬಗ್ಗಿ ತಾ ಬರುತಿರಲು
ಬಗ್ಗುತ ಬಲು ಸನಿಹಕೆ ಬರಲು
ಹೊರಳಾಡುವ ತೆರದಲಿ ಹೊಡೆದೋಡಿಸಿರಿ 2

ನಿರ್ಮಲಾಕಾಶದ ಬಲುಬಯಲಿನೊಳು
ನಿಂತಿಹ ಬಿಲ್ಲೆಗಳನೇ ಕೆಡಿಸಿ
ನಿರ್ಮಲ ಚಿದಾನಂದ ಆತ್ಮ ತಾನಾಗಿ
ಆಡಿರಿ ನಿತ್ಯದಿ ಲಗ್ಗೆಯನು 3

374
ಲಿಂಗವಾದವ ಲಿಂಗನಹನೆ

ಲಿಂಗವಾದವ ಲಿಂಗನಹನೆ
ಲಿಂಗವಾಗಿ ತಾನಿರೆ ಅಂಗವೆನಿಸಬಲ್ಲನೆ
ಲಿಂಗ ಬೋಧಮತಂಗ ಅಮೃತಗಂಗ
ಮುಕ್ತಿಗೆ ಅನಂಗ ದೀಪ್ತಿಯ ತರಂಗರಂಗ
ಲಿಂಗ ಲಿಂಗ ನಿಜ ಸಂಯೋಗಿರಲಿಕೆ
ಲಿಂಗ ಸಹಜ ಅಖಂಡವೇ ತಾನಾದ ಪ

ಮುತ್ತು ನೀರಿನರಲಿಕೆ ಮುತ್ತು ನೀರಹುದೇ
ಮತ್ತೇ ಆಪರಿ ಆತ್ಮ ಲಿಂಗನಹನೇ
ಮುತ್ತು ಸರ್ವಾಂಗಕ್ಕಿತ್ತು ಕಳೆಯದೊತ್ತೊತ್ತು
ಭ್ರಾಂತಿ ಹಾರಿತ್ತು ಸುಖವು ಬಂದಿತ್ತು ಇತ್ತು
ಸುತ್ತಮುತ್ತ ಬರಿ ಬೋಧವೆ ತುಂಬಿವೆ
ಚಿತ್ತ ಸತ್ತು ಚಿನ್ಮಾತ್ರವೆ ತಾನಾದಾ 1

ಫಲವದು ಫಕ್ವವಾಗೆ ಪಕ್ಷವು ಕಾಯಹುದೇ
ತಿಳಿಯೆ ಆಪರಿ ಆತ್ಮ ಲಿಂಗನಹನೇ
ಫಲವು ಫಲವು ಪ್ರಣವದ ಒಲವು
ಶುಕ್ರರೂ ಹಲವು ತೇಜದ ಬಲವು ಆನಂದ ನಿಲುವು ನಿಲುವು
ಕಳೆಯೊಳಗೆ ತಾ ಥಳಥಳಿಸುತ ಬಲು
ಪ್ರಭಾವವಾಗಿಹ ಪರಮನೆ ತಾನಾದ 2

ದೇವವೃಕ್ಷಾದುದು ಈಗ ಸನಿಯಹುದೇ
ಜೀವಿ ಆ ಪರಿ ಆತ್ಮ ಲಿಂಗನಹನೇ
ದೇವ ಭಕ್ತ ಸಂಜೀವ ಜ್ಞಪ್ತಿಯ ಭಾವ
ಎಲ್ಲ ತುಂಬಿರುವ ಆವಾಗ ಈವ ಈವ
ಜೀವ ಹೋಗಿ ಚಿದಾನಂದನೆ ತಾನಾಗಿ
ಆವಾವ ಕಾಲದಿ ಬ್ರಹ್ಮವೆ ತಾನಾದ 3

375
ವಿವೇಕವೆಂಬ ಫೌಜದು ಮುತ್ತಲು

ವಿವೇಕವೆಂಬ ಫೌಜದು ಮುತ್ತಲು
ಉಳಿವು ಅಸುರರಿಗಿಲ್ಲಾಯ್ತು
ಸವರಿಯೆ ಹೋದರು ದುಷ್ಟರು ನುಣ್ಣಗೆ
ಸಂತೋಷವು ನಗರಕ್ಕಾಯ್ತು ಪ

ಭೂತ ದಯನು ಶಾಂತಾತ್ಮ ವಿಚಾರನು
ಬ್ರಹ್ಮನಿಷ್ಠವಿರತೆನಿಸುವನು
ಖ್ಯಾತಿಗೆ ಬಂದಿಹ ಹಿರಿಯ ವಜೀರರು
ಕವಿದರು ತನುಪುರದುರ್ಗವನು 1

ಧಮಧಮ ನಾದದ ನಗಾರಿ ಬಾರಿಸೆ
ದಿಂಡೆಯರಸುಗಳು ನೆಲಕೊರಗೆ
ಅಮಮ ಅಡರಿಯೆ ದುರ್ಗವ ಕೊಂಡರು
ಅರೆದರು ದುಷ್ಟರು ಊರೊಳಗೆ 2

ಕಡಿದರು ಕಾಮನ ಹೊಡೆದರು ಡಂಭನ
ಕೆಡಹಿಯೆ ಕೊಯ್ದರು ಚಂಚಲನ
ಹುಡಿಮಾಡಿದರು ಅಹಂಕಾರ ಕ್ರೋಧರ
ಹುರಿದರು ಖಳರು ಬೀಜವನು 3

ಆದನು ಪುರಕೆ ವಿವೇಕ ಮಂತ್ರಿಯು
ಆದನು ವಿರತಿಯು ದಳವಾಯಿ
ಆದನು ಶಾಂತನು ಸಮಸ್ತ ವೃತ್ತಿಗೆ
ಆಯಿತು ನಗರಕೆ ಅದು ಹಾಯಿ 4

ಜೀವ ರಾಜನು ಹಿಡಿದೆ ಚೋಧಿಸಿ
ಜಡನಾದಸುರ ಪ್ರಕೃತಿ ಎಂದು
ಜೀವ ಚಿದಾನಂದ ಸ್ವಾಮಿಯೆ
ನೀನೆಂದು ದರಬಾರನೆ ಕಾಯ್ದರಂದು 5

376
ಶಿವನಾದ ಮೇಲೆ ಶಿವ

ಶಿವನಾದ ಮೇಲೆ ಶಿವ
ತಾನೆಂಬರಿವು ಇರಬೇಕು ಪ

ಕಂಗಳ ಮುಟ್ಟಿ ತೆರೆಯಲು ಬೇಕು
ಕಂಗಳೊಳು ಆನಂದವಿರಬೇಕು
ಸಂಗಹರನಾಗಿ ಇರಬೇಕು 1

ದೇಹವೆ ತೂಗುತಲಿರುತಿರಬೇಕು
ದೇಹವೇ ತಾನೆಂದರಿತಿರಬೇಕು
ದೇಹವ ಮರೆತಿರಬೇಕು 2

ಜಗವಿದು ಎನ್ನಲಿ ಜನನವೆನಬೇಕು
ಜಗವಿದು ಎನ್ನಲಿ ಲಯವೆನಬೇಕು
ಜಗಕೆ ತಾ ಸಾಕ್ಷಿಯಿರಬೇಕು 3

ನೀತಿಯ ಶಮೆದಮೆ ಶಾಂತಿಯು ಇರಬೇಕು
ಪಾತಕವೆಲ್ಲವ ಹರಿದಿರಬೇಕು
ಮಾತು ಮಾತಿಗೆ ಗುರುವೆನಬೇಕು 4

ಸುಧೆ ಶರದಿಯ ಸುಖ ತುಳುಕಲಿ ಬೇಕು
ವಿಧವಿಧ ಗುಣಗಳ ಬಿಟ್ಟಿರಬೇಕು
ಚಿದಾನಂದ ಗುರು ತಾನೆನಬೇಕು 5

377
ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮ

ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮ
ಸರ್ವ ಪರಬ್ರಹ್ಮ ತಾನೆ ಪರಬ್ರಹ್ಮ ಪ

ಹುದುಗಲ್ಲ ಕಣುಕಲ್ಲ ಬೇಳೇ ಭಕ್ಷ್ಯವು ಅಲ್ಲ
ಅದರೊಳಗಣ ಸಿಹಿ ಅದುವೆ ಪರಬ್ರಹ್ಮ 1

ತೊಳೆಯಲ್ಲ ಬೀಜಲ್ಲ ತೊಗಟಲ್ಲ ಹಣ್ಣಲ್ಲ
ತಿಳಿಯೆ ರುಚಿಯು ಬೇರೆ ಅದುವೆ ಪರಬ್ರಹ್ಮ 2

ಹಾಲು ನವ ನೀತವಲ್ಲ ಮೊಸರು ಮಜ್ಜಿಗೆಯಲ್ಲ
ಹಾಲೊಳಗಣ ಘೃತ ಅದುವೆ ಪರಬ್ರಹ್ಮ 3

ದೇಹವಲ್ಲ ತತ್ವವಲ್ಲ ಮನ ಬುದ್ಧೀಂದ್ರಿಯವಲ್ಲ
ದೇಹದೊಳಗಣ ದೇಹಿ ಅದುವೆ ಪರಬ್ರಹ್ಮ 4

ಸರ್ವಮಾಯೆ ಮಾತು ಮಿಥ್ಯ ಸರ್ವಬ್ರಹ್ಮವೇ ಸತ್ಯ
ಸರ್ವ ಚಿದಾನಂದ ಸರ್ವ ಪರಬ್ರಹ್ಮ 5

378
ಸಲ್ಲದು ಪುನರ್ಜನ್ಮ ಸಲ್ಲದು ಯೋಗಿಗೆ

ಸಲ್ಲದು ಪುನರ್ಜನ್ಮ ಸಲ್ಲದು ಯೋಗಿಗೆ
ಪರದ ವಲ್ಲಭ ತಾನಾಗಿ ನಿತ್ಯ ಸುಖಿಸುವಾತಾಂಗೆ ಪ

ಬೀಜವದು ಹೋಗಿ ಅನ್ಯ ತೇಜದೊಳು ಬಿದ್ದ ಬಳಿಕ
ಬೀಜವೆಂದು ಬಿತ್ತಲದು ಫಲಿತವಾಗುವುದೋ
ಸಾಜಕರ್ಮಿಗಳು ಗುರುಕೃಪೆಯ ಪಡೆಯಲು
ಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದೋ 1

ಕಾಷ್ಠವದು ಹೋಗಿ ಅಗ್ನಿ ಕುಂಡದಲಿ ಸುಟ್ಟ ಬಳಿಕ
ಕಾಷ್ಠವೆಂದು ಕರೆಯಲದು ಕಾಷ್ಠವಹುದೇ
ಶ್ರೇಷ್ಠವಾದ ಬ್ರಹ್ಮದೊಳು ವೇಷ್ಠಿತಾನಾದ ಬಳಿಕ
ನಷ್ಟಮಾತಲ್ಲದೇ ಪುನರ್ಜನ್ಮವೆಲ್ಲಿಹುದು 2

ಕೀಟವದು ಹೋಗಿ ಭೃಮರದಾಟದೊಳು ಬಿದ್ದು ತನ್ನ
ಕೀಟತನವಳಿದ ಮೆಲೆ ಕೀಟವಾಗುವುದೇ
ಪಾಡಿ ಚಿದಾನಂದನೊಳು ಕೂಟವು ತಾನಾದ ಮೇಲೆ
ಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದು 3

379
ಸಹಜ ಸಮಾಧಿ ಸಹಜ ಬ್ರಹ್ಮವಾದುದೇ

ಸಹಜ ಸಮಾಧಿ ಸಹಜ ಬ್ರಹ್ಮವಾದುದೇ
ಸಹಜ ಸಮಾಧಿ ಪ

ಅರಸಾಗಿಕುಳಿತಿದ್ದು ಅರಸಾಗಿ ಮಲಗಿದ್ದು
ಅರಸಾಗಿ ನುಡಿವುದೇ ಸಹಜ ಸಮಾಧಿ 1

ಜಗಬೇರೆಯಾಗದೇ ತಾ ಬೇರೆಯಾಗದೇ
ಜಗತಾನೊಂದಾದುದೇ ಸಹಜ ಸಮಾಧಿ 2

ಒಳಗೆಂಬುದಿಲ್ಲವೇ ಹೊರಗೆಂಬುದಿಲ್ಲವೋ
ಒಳಹೊರಗು ಒಂದಾಗೆ ಸಹಜ ಸಮಾಧಿ 3

ಎಲ್ಲಿದ್ದರೇನಿಲ್ಲ ಎಲ್ಲುಂಡರೇನಿಲ್ಲ
ಎಲ್ಲವು ತಾನಾಗೆ ಸಹಜ ಸಮಾಧಿ 4

ಚಿದ್ವಸ್ತುವಾಗಿಯೇ ಚಿನ್ಮಾತ್ರವೇ ಇದ್ದು
ಚಿದಾನಂದನಿಹುದೇ ಸಹಜ ಸಮಾಧಿ 5

380
ಸಾಂಖ್ಯತಾರಕ ಅಮನಸ್ಕಾ ಬಿರುದಂತಾಗಿ

ಸಾಂಖ್ಯತಾರಕ ಅಮನಸ್ಕಾ ಬಿರುದಂತಾಗಿ
ತೆಗೆವುದು ಮಾಯೆ ಮುಸುಕು ಪ

ಜೀವನು ನೀನಲ್ಲವೆಂದು ನನಗಾವ ಪ್ರಪಂಚವು ಕಾರಣವಿಲ್ಲೆಂದು
ಇವ ಬ್ರಹ್ಮವು ನೀ ಸತ್ಯವೆಂದು ಗುರುದೇವನಿಂದಲಿ
ಬೋಧಿಪುದೇ ಸಾಂಖ್ಯ ಎಂದು 1

ತನ್ನಲ್ಲಿಯೆ ಇಟ್ಟು ಕಣ್ಣು ಒಳಗೊಳಗೆ ತಾಕುಳಿತು
ಥಳಥಳಿಸುತಲಿನ್ನು ಭಿನ್ನವೆಂಬುದ ಕಳೆದಿನ್ನು
ಸಂಪನ್ನ ಸುಖವನು ಎಂಬುವುದ ತಾರಕವೆನ್ನು 2

ಮರತೆ ಮನದ ಎಚ್ಚರದು ಏನು ಕರುಹಿಲ್ಲದವಳ
ಹೊರಗೆಂಬುದನು ಬರೆತುಂಬಿಹ ತೇಜದೊಳ್ ಸ
ದ್ಗುರು ಚಿದಾನಂದನ ಮನವೆಯಿದು 3

381
ಸ್ಥಿರದಿ ಸ್ಥಿರದಿ ನಿತ್ಯಾನಂದ ಭರಿತವಾಗಿರಲು

ಸ್ಥಿರದಿ ಸ್ಥಿರದಿ ನಿತ್ಯಾನಂದ ಭರಿತವಾಗಿರಲು
ಭರಿತವಾದಾನಂದ ಭರಿಸುತಿರಲು ಪ

ಆದಿಶಕ್ತಿಯು ಎಂಬ ಆಕಳನೆ ಬರಿಸಿ
ಸಾಧುಗುರು ಕರುವೆಂಬುದದನೆ ಮುಂದಿರಿಸಿ
ವೇದನಾಲಕು ಎಂಬ ಮೊಲೆಗಳನೆ ತೊರೆಸಿ
ಭೇದರಹಿತಾದವರು ಹಿಂಡಿಲನು ಕರೆಸಿ 1

ಸ್ಥೂಲತನುವೆಂದೆಂಬ ಪಾತ್ರೆಯನೆ ತಂದು
ಲೋಲ ಸಾಂಖ್ಯವು ಎಂಬ ಕ್ಷೀರವನೆ ಕರೆದು
ಮೂಲಭೂತವದೆಂಬ ಹೆಪ್ಪನೆರೆದು
ಜೋಲುಮನಸಿನ ಬಡತನವನೆಲ್ಲ ಹರಿದು 2

ಸಾಧಕಾಂಗಗಳೆಂಬ ಮೊಸರನ್ನು ಮಥಿಸಿ
ವಾದಹರವೆಂದೆಂಬ ಬೆಣ್ಣೆಯನು ತೆಗೆಸಿ
ಸಾಧು ಶಾಂತಜ್ಞವೆಂಬ ಪುಟದ ಮೇಲಿರಿಸಿ
ಆತ ಘೃತ ಚಿದಾನಂದ ಜ್ಯೋತಿಯೊಡಬೆರಸಿ 6

382
ಸುಳ್ಳೇ ತೋರಿದೆ ಜಗವೆಲ್ಲ

ಸುಳ್ಳೇ ತೋರಿದೆ ಜಗವೆಲ್ಲ
ಸುಳ್ಳಾದವರಿಗೆ ಸುಳ್ಳು
ಸುಳ್ಳೇ ತೋರಿದೆ ಜಗವೆಲ್ಲ ಪ

ಮೂರು ಮೂರುತಿ ಮೂರು ಶಕ್ತಿಯೆ ಸುಳ್ಳು
ಮೂರು ಸ್ಥಾನ ಮೂರು ಗುಣಗಳೇ ಸುಳ್ಳು
ಮೂರು ಮೂಲವೇ ಸುಳ್ಳು ತಾನಿಹುದೇ ಸುಳ್ಳು 1

ಚಂದ್ರ ಸೂರ್ಯರುಗಳೆಂಬುವರೆ ಸುಳ್ಳು
ಇಂದ್ರರು ಅಹಮಿಂದ್ರರು ಸುಳ್ಳು
ಸಾಂದ್ರ ನಕ್ಷತ್ರವೇ ಇದು ಸುಳ್ಳು ತಾನಿಹುದೆ ಸುಳ್ಳು 2

ದಿಗ್ಗಜಗಳು ದಿಕ್ಪಾಲಕರೆ ಸುಳ್ಳು
ವಗ್ಗಿಗರಹ ವಸು ಎಂಬರು ಸುಳ್ಳು
ಸ್ವರ್ಗವೆಂಬುದು ಅದು ಸುಳ್ಳು 3

ಬಹುಲೋಕವು ಭುವನಂಗಳು ಸುಳ್ಳು
ಇಹಪರ ಎಂಬವು ಎರಡಿವು ಸುಳ್ಳು
ಬಹಿರಂಗವೆಂಬುದಿರು ಸುಳ್ಳು ತಾನಿಹುದೆ ಸುಳ್ಳು 4

ನಾನಾರೂಪದ ಬಹೂರೂಪವೆ ಸುಳ್ಳು
ನಾನಾ ವಿನೋದಂಗಳು ಇವು ಸುಳ್ಳು
ನಾನಾ ಬೆಳಕುಗಳು ಸುಳ್ಳು ತಾನಿಹುದೆ ಸುಳ್ಳು 5

ಬ್ರಹ್ಮಾಂಡವು ತಾನಿಹುದೇ ಸುಳ್ಳು
ಪಿಂಡಾಂಡವು ತಾ ಮೊದಲಿಗೆ ಸುಳ್ಳು
ಕಂಡೆನೆಂದೆಂಬುವು ಎಲ್ಲ ಸುಳ್ಳು ತಾನಿಹುದೆ ಸುಳ್ಳು 6

ಸುಳ್ಳು ಚಿದಾನಂದನೆಂಬುದು ಸುಳ್ಳು
ಸುಳ್ಳಿನ ಕೀಲನು ಅರಿತರಿಗೆ ಸುಳ್ಳು
ತಿಳಿಯದವರಿಗೆ ನಿಜಸುಳ್ಳು ತಾನಿಹುದೇ ಸುಳ್ಳು 7

383
ಹೇಗಿಹನು ಹಾಗಿಹನು ಪರಿಪೂರ್ಣ ಬ್ರಹ್ಮ

ಹೇಗಿಹನು ಹಾಗಿಹನು ಪರಿಪೂರ್ಣ ಬ್ರಹ್ಮ
ಹೇಗಿಹನು ಹಾಗಿಹನು
ಹೇಗಿಹನು ಎಂತೆಂದು ಕೇಳುವರು ಯಾರು
ಹೀಗಿಹನು ಎಂತೆಂದು ಹೇಳುವರು ಯಾರು ಪ

ಹಸಿವೆಯಾಗಿರಲು ಹಸಿವೆಯಂತಿಹನು
ತೃಷೆಯು ತಾನಾಗಿರಲು ತೃಷೆಯಂತೆ ಇಹನು 1

ದುಃಖಿಯಾಗಿರಲು ದುಃಖಿಯಂತಿಹನು
ಸುಖಿಯು ತಾನಾಗಿರಲು ಸುಖಿಯಂತೆ ಇಹನು 2

ದುಷ್ಟ ತಾನಾಗಿರಲು ಅವ ದುಷ್ಟನಾಗಿಹನು
ಶಿಷ್ಟನಾಗಿರಲು ಅವ ಶಿಷ್ಟನಾಗಿಹನು 3

ಜೀವನಾಗಿರಲು ಅವ ಜೀವನಾಗಿಹನು
ಶಿವನಾಗಿರಲು ಅವ ಶಿವನಾಗಿ ಇಹನು 4

ಚಿತ್ತಕ್ಕೆ ಬುದ್ಧಿಗೆ ತಾನಿಹನು ದೂರ
ಸತ್ಯ ಚಿದಾನಂದ ಗುರುವೆಂಬಾತನು 5

ಭಾಗ-6: ಸಂಪ್ರದಾಯದ ಹಾಡುಗಳು
384
ಆರತಿ ಬೆಳಗಿದೆನೆ ಗುರುವಿಗೆ

ಆರತಿ ಬೆಳಗಿದೆನೆ ಗುರುವಿಗೆ
ಆರತಿ ಬೆಳಗಿದೆನೆ
ಆರಾರು ಬೆಳಗೇ ಬೆಳಗದಂಥಾ
ಆರತಿ ಬೆಳಗಿದೆನೆ ಪ

ಹೃದಯ ತಳಿಗೆಯಲಿ ನಾನೀಗ
ಭಾವದಾರತಿ ಮಾಡಿ
ವಿದವಿದ ಬುದ್ಧಿಯ ಬತ್ತಿಯ ಮಾಡಿ
ನಿರ್ಮಲಾಜ್ಯ ಹೊಯ್ದು 1

ಜ್ಞಾನ ಜ್ಯೋತಿಯನೆ ಮುಟ್ಟಿಸಿ
ಚಿತ್ತದಿಂ ಪಿಡಿದು
ನಾನೇ ನಾನೇ ನಾನೆಂದಾ
ರತಿ ಬೆಳಗಿದೆನೇ 2

ಬಲುಶಶಿ ಸೂರ್ಯರ ಶತಕೋಟಿ
ಪ್ರಭೆಯನೆ ಮೀರ್ದು
ಥಳಥಳ ಥಳಥಳ ಹೊಳೆಯುತ
ನಾನೇ ಆರತಿ ಬೆಳಗಿದೆನೆ 3

ಎತ್ತೆತ್ತ ನೋಡೆ ಪ್ರಭೆ ತಾ
ಮೊತ್ತ ಮೊತ್ತವಿದೆ ಕೋ
ಚಿತ್ತದಿಂದಲಿ ಚಿಜ್ಯೋತಿಯ ಪ್ರಭೆ
ನಿತ್ಯದಿ ಬೆಳಗಿದೆನೆ 4

ಅನಂತಾನಂತವ ಮುಚ್ಚಿಹುದು
ಅನಂತಾನಂತವನು
ಅನಂತ ಚಿದಾನಂದ ಗುರು ತಾನೆ
ಎಂದಾರತಿ ಬೆಳಗಿದನೆ 5

385
ಆರತಿ ಮಂಗಳಾರತಿ ಆರತಿ ಬೆಳಗಿದೆ

ಆರತಿ ಮಂಗಳಾರತಿ ಆರತಿ ಬೆಳಗಿದೆ
ಆತ್ಮ ಚಿದಾನಂದಗೆ ಪ

ಆರು ಸ್ಥಾನವ ತಿಳಿದು
ಆರನೆ ಸ್ಥಳದಿ ನಿಂತು
ಆರು ಭ್ರಮೆಯ ಹರಿದು
ಆರ್ ಮೇಲೆ ಬೆಳಗಿದೆ 1

ಮೂರು ಸ್ಥಾನವ ತಿಳಿದು
ಮೂರನೆಯ ಸ್ಥಳದಿ ನಿಂದು
ಮೂರು ಗುಣವ ಹರಿದು
ಮೂರ್ ಮೇಲೆ ಬೆಳಗಿದೆ 2

ಎರಡು ಸ್ಥಾನವ ತಿಳಿದು
ಎರಡನೆಯ ಸ್ಥಳದಿ ನಿಂದು
ಎರಡನೆ ಚಿದಾನಂದನೊಳು
ಎರಡಾಗದೆ ಬೆಳಗಿದೆ 3

386
ಆರತಿಯನೆತ್ತಿರೆಲ್ಲ ಆನಂದಗೆ

ಆರತಿಯನೆತ್ತಿರೆಲ್ಲ ಆನಂದಗೆ
ಆರತಿಯನೆತ್ತಿರೆಲ್ಲ ಸ್ವಾನಂದನೆ ಪ

ಆರು ಚಕ್ರಗಳಿಂದ ಅತ್ತಲಿಹಗೆ
ಮೀರಿ ಭ್ರೂಮದ ಸದನ ಮೀರಿಹಗೆ
ಸಾರಿ ಸಹಸ್ರ ಸದನ ಬಿಟ್ಟಿಹಗೆ
ತೋರುತಿಹ ಬ್ರಹ್ಮರಂಧ್ರ ತುರೀಯ ರೂಪಗೆ 1

ಕಣ್ಣಿನೊಳಗೆ ಕಣ್ಣು ತೆರೆದು ನಿರೀಕ್ಷಿಪಗೆ
ಕಣ್ಣ ಬೊಂಬೆಯೊಳಗೆ ಕುಳಿತು ನೋಡುತಿಹಗೆ
ಭಿನ್ನವಿಲ್ಲದ ಆನಂದ ಸುಖದಿ ರಮಿಸುತಿಹನಿಗೆ
ಹೊನ್ನ ತಗಡಿನಂತೆ ಥಳಥಳಿಸುತಿಹಗೆ 2

ಉಕ್ಕುವ ತೇಜಗಳೆಲ್ಲ ತಾವೊಂದಾಗಿ ಕೂಡಿ
ಮಿರು ಹರಿವ ಬೆಳದಿಂಗಳಂತೆಯಿಹಗೆ
ಲೆಕ್ಕವಿಲ್ಲದೆಲೆಯುತಿಹ ಸುಖದ ರಾಶಿಗೆ
ಮುಕ್ತಿ ಮೂರುತಿ ಶ್ರೀ ಚಿದಾನಂದ ಗುರುವಿಗೆ 3

387
ಆರತಿಯಾಡುವೆನು ಸದ್ಗುರುವಿಗೆ

ಆರತಿಯಾಡುವೆನು ಸದ್ಗುರುವಿಗೆ
ಆರತಿಯಾಡುವೆನು ಪ

ಕಾಯವ ಜರೆಯುತ್ತಲಿ
ಕೈಯನೆ ಮುಗಿಯುತಲಿ
ಮಾಯವ ಹರಿಯುತಲಿ
ಬಾಯಿ ಕೊಂಡಾಡುತಲಿ ಸದ್ಗುರುವಿಗೆ 1

ಕುಣಿ ಕುಣಿದಾಡುತಲಿ
ಮನವನೆ ನೀಡುತಲಿ
ಘನಮುಕ್ತಿ ಬೇಡುತಲಿ
ಅನುಮಾನವ ಬಿಡುತಲಿ ಸದ್ಗುರುವಿಗೆ 2

ಅರಿವನೆ ಅರಿತು
ಗುರಿಯನೆ ಮರೆತು
ಪೂರವನೆ ಬೆರೆತು
ಗುರು ಚಿದಾನಂದನರಿತು ಸದ್ಗುರುವಿಗೆ 3

388
ಖಳರನು ತರಿವಾ ಬಗಳಾಂಬೆಗೆ

ಖಳರನು ತರಿವಾ ಬಗಳಾಂಬೆಗೆ
ಕಮಲದಾರತಿ ಬೆಳಗಿರೆ ಪ

ಅರಿ ಎಂಬ ಶಬ್ಧವು ಕಿವಿಗೆ ಬೀಳಲು
ಸರಿದವು ಸರಿದವು ಖಡ್ಗದಿಂ ಕೆಂಗಿಡಿ
ಭರದಿಂದರಿಯನೆ ತುಡುಕಿಯೆ ಮುಂದಲೆ
ತರಿದಳಾಗಲೆ ತಲೆಯ ಬಗಳಾಂಬೆ
ಮುರಿದಳಾಗಲೆ ತಲೆಯ ಬಗಳಾಂಬೆ 1

ಕಡಿಯುತ ಅವುಡನು ಅರಿಯನು ದೃಷ್ಟಿಸಿ
ಝಡಿಯುತ ಮುದ್ಗರ ಹಿಡಿದು ನಾಲಗೆ
ಮೃಡಹರಿ ಬ್ರಹ್ಮರು ಅಹುದಹುದೆನೆ
ಹೊಡೆದಳಾಗಲೆ ಅರಿಯ ಬಗಳಾಂಬ
ಪುಡಿಯ ಮಾಡಿದಳರಿಯ ಬಗಳಾಂಬ 2

ಕಾಲಲಂದುಗೆ ಗೆಜ್ಜೆ ಕಂಠಾಭರಣವು
ಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲು
ಲೋಲ ಚಿದಾನಂದ ರೂಪಿಣಿ ಬಗಳೆಯು
ಪಾಲಿಸಿದಳು ಭಕ್ತರ ಬಗಳಾಂಬ
ಲಾಲಿಸಿದಳು ಭಕ್ತರ ಬಗಳಾಂಬ 3

389
ಜಯ ಜಯ ಮಂಗಳ

ಜಯ ಜಯ ಮಂಗಳ
ಜಯ ಮಂಗಳ ಅಮರಾಧೀಶನಿಗೆ ಪ

ಕಪ್ಪು ಗೊರಳನಿಗೆ ಕರುಣಾಸಮುದ್ರಗೆ
ಕಾಮ ಸಂಹಾರ ಮಾಡಿದಗೆ
ಮುಪ್ಪುರ ಗೆಲಿದಗೆ ಮೂಜಗದೊಡೆಯಗೆ
ಮೂರನೆಯ ಗುಣದಾ ಮನೆಯವಗೆ
ಒಪ್ಪುವ ದಶಭುಜ ತೋಳಲಿ ಡಮರುಗ
ವಿಡಿದಿಹ ಪಾಶಾಂಕುಶಧರಗೆ
ತಪ್ಪದೆ ಭಕ್ತರಿಗೊಲಿವಗೆ ಪಾಲಿಪ
ಕರುಣಕೋಟಿ ಪ್ರಕಾಶನಿಗೆ 1

ಕರಿದೊಗಲುಟ್ಟಿಹ ಕಮಲಜಪಾಕಸಖ
ಅಖಂಡಲಖಂಡ ಪ್ರಕಾಶನಿಗೆ
ಶಿರದಲಿ ಚಂದ್ರನ ಸೂಡಿಯೆ ಜಡೆಯೊಳು
ಸುರನದಿ ಧರಿಸುತ ಮೆರೆದವಗೆ
ಕೊರಳೊಳು ರುಂಡದ ಮಾಲೆಯ ಹಾಕಿಹ
ಕೋಮಲ ಸ್ಫಟಿಕ ಪ್ರಕಾಶನಿಗೆ
ಕರದಲಿ ಕಂಕಣ ಧರಿಸಿಹ ಮೂರ್ತಿಗೆ
ಕಣ್ಣುರಿಭಾಳದಿ ರಂಜಿಪಗೆ 2

ದೇಶದಿ ಪೆಸರಾಗಿರುತಿಹ ಅಮರಾಧೀಶನು
ಎನಿಪ ನಾಯಕಗೆ
ಮಾಸದ ಮಂಜಿನ ಮಲೆಯೊಳು ನೆಲಸಿಯೆ
ಆಸೆಯನೆಲ್ಲವ ಸಲಿಸುವಗೆ
ಶ್ರೀಸಚ್ಚಿದಾನಂದಾವಧೂತ ದೊರೆ
ಶಿರತಾರಕ ಅಮರೇಶನಿಗೆ 3

399
ಜಯ ಜಯ ಮಂಗಳ

ಜಯ ಜಯ ಮಂಗಳ
ಜಯ ಮಂಗಳ ಶುದ್ಧಾದೈತನಿಗೆ ಪ

ಅಗಣಿತ ಮಹಿಮಗೆ ಅಕ್ಷಯರೂಪಗೆ
ಅಖಂಡ ಸಹಜಾನಂದನಿಗೆ
ಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿ
ಝಣನಾದವ ಕೇಳ್ವನಿಗೆ
ಸೊಗಯಿಸಿ ಚಂದ್ರನ ಶತಕೋಟಿಯ
ಪ್ರಭೆ ಸಾರವ ಸವಿಸವಿದುಣ್ಣುವಗೆ
ಬಗೆ ಆನಂದದಿ ಸುಖಿಸುವ ದೇವಗೆ
ಭಾಸ್ಕರ ತೇಜಃಪುಂಜನಿಗೆ 1

ನಿತ್ಯಾನಂದಗೆ ನಿರ್ಮಲರೂಪಗೆ
ನಿಶ್ಚಲ ಪರಬ್ರಹ್ಮಾತ್ಮನಿಗೆ
ನಿತ್ಯಶುದ್ಧಗೆ ನಿಜನಿರ್ಮಾಯಗೆ
ನಿಜಬೋಧ ಜ್ಞಾನೈಕ್ಯನಿಗೆ
ಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆ
ಪರಮ ಪರತರ ಪಂಡಿತಗೆ
ನಿತ್ಯತೃಪ್ತಗೆ ನಿಗಮಾಗಮನಿಗೆ
ನಿಶ್ಚಿಂತಾತ್ಮ ನಿಸ್ಪೃಹಗೆ 2

ಕೈಯಲಿ ಪಿಡಿದಿಹ ಜಪಮಾಲೆಯ
ಸರ ಕರ್ಣಕುಂಡಲವಿಟ್ಟಿಹಗೆ
ಮೈಯೊಳು ಪೊದ್ದಿಹ ಕಾಷಾಯಂಬರ
ಮಿರುಪಿನ ಕೌಪೀನವುಟ್ಟಿಹಗೆ
ಮೈಯೊಲೆದಾಡುವ ಸ್ವಾತ್ಮಾನಂದದಿ
ನಲಿವ ಸದ್ಗುಣ ಶಾಂತನಿಗೆ
ಮೈಯನೆ ಸದ್ಗತಿ ಭಕ್ತರಿಗೀಯುವ
ವ್ಯಾಪಿತ ಜೀವನ್ಮುಕ್ತನಿಗೆ 3

ಆರವಸ್ಥೆಯ ಧರಿಸಿಯೆ ಜಗದಲಿ
ಅನಂತರೂಪ ತಾನಾಗಿಹಗೆ
ಮೀರಿಯೆ ಸದ್ಗುಣ ನಿರ್ಗುಣ ರೂಪವ
ಮರೆದಿಹ ಮುಮುಕ್ಷಾಂಗನಿಗೆ
ತೋರುವ ತ್ವಂಪದ ತತ್ವಮಸಿ
ಪದತೋರಿ ವಿರಾಜಿಪ ತುಷ್ಟನಿಗೆ
ಧೀರೋದ್ಧಾರಗೆ ದೀನರನಾಥಗೆ
ದೃಶ್ಯಾದೃಶ್ಯ ವಿದೂರನಿಗೆ 4

ನಿರುಪಮ ನಿರಮಯ ನಿಜ ನಿರ್ಲಿಪ್ತಗೆ
ನಿರ್ಭಯ ನಿರ್ವಿಕಲ್ಪನಿಗೆ
ಪರಮಪುರುಷಗೆ ನಿಗಮೋದರನಿಗೆ
ಪರಮಾರೂಢಾ ಮಾರ್ಗನಿಗೆ
ಗುರುಚಿದಾನಂದ ಅವಧೂತಾತ್ಮಗೆ
ಗುಣನಿಧಿ ತುರಿಯಾತೀತನಿಗೆ
ಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆ
ಬಗಳಾ ಶ್ರೀಗುರು ರೂಪನಿಗೆ 5

391
ಜಯ ಜಯ ಮಂಗಳ

ಜಯ ಜಯ ಮಂಗಳ
ಜಯ ಮಂಗಳ ಸುಂದರಿ ಶಾಂಭವಿಗೆ

ಕಾಲಲಂದುಗೆ ಕೈಯಲಿ ಕಂಕಣ ಲಲಾಟದಿ ಚಂದ್ರನ ನಿಟ್ಟಿಹಳೇ
ಕಳೆಯಿರಿ ಕಾಂತಳೆ ಕಮಲ ಮುಖಿಯಳೆ
ಹೊಳೆವ ಮುತ್ತಿನ ವಾಲೆಯಳೇ
ನಳಿನ ಮುಖಿಯರ ನಡುವೆ ಕುಳಿತು
ಥಳ ಥಳ ಹೊಳೆಯುವಳೇ
ಒಳಹೊರಗೆ ತನ್ನ ಪ್ರಭೆಯನು ತೋರಿ
ನೋಡಿ ಓಲಾಡಿ ತಾ ನಗುವವಳೇ 1

ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇ
ಮಿಂಚುವ ಮೂಗುತಿ ಮೂಗಲಿ ಹೊಳೆಯುತ
ಮಿಗಿಲಾದಾಭರಣವ ಧರಿಸಿಹಳೇ
ಅಂಚು ರಂಗಿನ ಸೀರೆಯನುಟ್ಟು
ಅನಂತ ರೂಪವ ತೋರಿಹಳೇ
ಅಂಚೆ ನಡೆಯಲಿ ನಡೆಯುತ ನಲಿಯುತ
ಸದಾ ಮತ್ತಳಾಗಿರುವವಳೇ 2

ರತ್ನದ ಉಡಿದಾರ ಚಿನ್ನದ ಚಿಂತಾಕ
ಹೊನ್ನಿನ ಡಾಬನು ತೊಟ್ಟಿಹಳೇ
ಎಡೆ ಎಡೆಗೆ ತಾ ಭರಿಸಿಹಳೇ
ಸಣ್ಣ ಬಣ್ಣದ ಕುಪ್ಪಸ ತೊಟ್ಟು
ಮುಗುಳ್ನಗೆ ಬೀರುತ ಕುಳಿತಿಹಳೇ
ಧನುರ್ಬಾಣ ಪಾಶವ ಕೈಯಲಿ ಅಂಕುಶ
ಆಯುಧ ಪಿಡಿದಿಹಳೇ 3

ದುಂಡು ಕೈಯವಳೇ ಸುಂದರ ಕಾಯಳೇ
ಚಂಡ ಮುಂಡ ಸಂಹಾರಕಳೇ
ಮಾಂಡಲಿಕಳೇ ಮಹದ್ಭೂತಳೇ
ಮಹಾಯೋಗಿ ವಿಲಾಸಳೇ
ದಂಡಿ ಕಿರೀಟಳೇ ದಂಡೆಯ ಮುಡಿದಿಹ
ಗೊಂಡೆಯಂದೊಲಿದಾ ಜಡೆಯವಳೇ
ಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿ
ದೇವಿ ತಾ ಕೊಂದಿಹಳೇ 4

ಅದಿರಹಿತಳೇ ಅಧ್ವಯ ರೂಪಳೇ
ಅನಂತ ಕೋಟಿ ಪ್ರಭಾರೂಪಳೆ
ಶುದ್ಧ ಬುದ್ಧಳೇ ನಿತ್ಯಮುಕ್ತಳೇ
ಚಿದಾನಂದ ರೂಪಳೇ
ಸದ್ಯೋಜಾತಳೇ ಸರ್ವಾತೀತಳೆ
ಸಿದ್ಧ ಪರ್ವತ ಬಗಳೇ
ಶುದ್ಧಾದ್ವೈತಳೆ ಸುಷುಮ್ನನಾಳಳೆ
ಸೂಕ್ಷ್ಮವೆನಿಸುವಳೇ 5

392
ಜಯದೇವ ಜಯದೇವ ಜಯ ಸದ್ಗುರುವೆಂದು

ಜಯದೇವ ಜಯದೇವ ಜಯ ಸದ್ಗುರುವೆಂದು
ಜಯವೆಂದು ಬೆಳಗಿದಳು ಬಗಳಾಂಬನಿಂದು ಪ

ಬಿಗಿದ ಹೆದೆ ಬೆನ್ನಿಂಗೆ ಧನು ಶರಗಳ ಸೆಕ್ಕಿ
ತಗತಗನೆ ಹೊಳೆಯುತಿಹ ಖಡ್ಗವ ಹೊರಗಿಕ್ಕಿ
ಝಗಝಗನೆ ಆಭರಣ ಹೊಳೆಯಲು ಕಳೆಯುಕ್ಕಿ
ಮಿಗಿಲೆನಿಪ ಆರುತಿಯೊಳ್ ಮುಕ್ತಾಕ್ಷತೆಯನಿಕ್ಕಿ 1

ಹತ್ತು ಕೈಯೊಳು ಹೊತ್ತು ನೆಗೆಹಿದಳು ಚದುರೆ
ರತ್ನಖಚಿತದ ನತ್ತು ಹಣೆಬಟ್ಟು ಬೆದರೆ
ಮತ್ತೆ ಕಿರುಬೆರಳ ಮುತ್ತು ಮುತ್ತುದುರೆ
ಎತ್ತತ್ತಲೂ ಆರತಿಯ ಬಲು ಬೆಳಕು ಚದುರೆ 2

ಎತ್ತಿ ಹಾಡುತ ಒಲಿದು ಬಗಳೆ ಗುರುವಿಂಗೆ
ತಥ್ಥೆಯ್ಯ ತಥ್ಥೆಯ್ಯ ತಥ್ಥೆಯ್ಯ ಕುಣಿದು
ಎತ್ತಲಾಯಿತೋ ದೇಹ ಪರವಶವದಾಗೆ
ಮತ್ತೆ ಕಂಡಳು ತನ್ನ ಚಿದಾನಂದಾತ್ಮಗೆ 3

393
ಜಯದೇವ ಜಯದೇವ ಜಯ ಬಗಳಾ ರಮಣ

ಜಯದೇವ ಜಯದೇವ ಜಯ ಬಗಳಾ ರಮಣ
ಜಯ ಜಯತು ಜಯ ಜಯತು ಜಯ ನಿರಾವರಣ ಪ

ಆಧಾರವ ಹತ್ತಿ ಸ್ವಾಧಿಷ್ಠಾನವ ತೋರಿ
ಭೇದಿಸಿ ಮಣಿಪೂರಕ ಅನಾಹತ ಸಾರಿ
ಶೋಧಿಸಿ ವಿಶುದ್ಧಿ ಆಜ್ಞೇಯವನೇರಿ
ಹರಿದು ತ್ರಿಕೋಣೆಯ ಸಹಸ್ರಾರ ಮೀರಿ 1

ತೋರಲು ಪ್ರಭೆಗಳು ತುಂತುರು ತುಂತುರುಗಳಿಂದ
ಮೀರಿಯೆ ರವಿ ಶತಕೋಟಿಯ ಕಳೆ ಬೆಳಗುತ ಚೆಂದ
ಬೀರುತ ಬೆಳಕನು ಪುಂಖಾನುಪುಂಖದಿ
ಚಾರು ಮಂಗಳ ಮೂರ್ತಿ ಘುನ ಬ್ರಹ್ಮಾನಂದ 2

ಅವ್ಯಕ್ತಾ ಚಲ ಗೋಚರ ಅಗಮ್ಯ ವಸ್ತು
ನಿರ್ವಿಕಲ್ಪ ನಿತ್ಯ ನಿರ್ಮಲ ಸಂವಿತ್ತು
ನವ್ಯ ಕಲ್ಪ ಸಿದ್ಧ ಪರ್ವತ ನಿಜ ಕರ್ತೃ
ದಿವ್ಯಚಿದಾನಂದಾವಧೂತ ಬಗಳ ಪರವಸ್ತು 3

394
ಜಯದೇವಿ ಜಯದೇವಿ ಜಯ ದುರಿತ ಬ್ರಹ್ಮಾಸ್ತ್ರ

ಜಯದೇವಿ ಜಯದೇವಿ ಜಯ ದುರಿತ ಬ್ರಹ್ಮಾಸ್ತ್ರ
ಜಯಜಯ ಜಯತು ಪ್ರತಿಯಿಲ್ಲದಸ್ತ್ರಾ ಪ

ಉಟ್ಟಿಹ ಕಾಶಿಯ ಉಡಿಗೆ
ತೊಟ್ಟಿಹ ಎದೆ ಕಟ್ಟು
ಕಟ್ಟಿದ ಖಡ್ಗ ಕಠಾರಿ
ರಕ್ತದ ತಿಲಕವಿಟ್ಟು
ಮುಷ್ಠಿಯಲಿ ಮುದ್ಗರ ಶೂಲ
ಧನು ಶರವಳವಟ್ಟು
ಬಿಟ್ಟ ಕಂಗಳ ಕಿಡಿಯು
ಛಟಛಟ ಛಟವಿಟ್ಟು 1

ಏರಿಸಿ ಪಟ್ಟೆಯ ಹಲಗೆ
ಎಡಬಲ ನೋಡದೆ
ಹರಿಯ ಘನ ಶತ್ರುವಿನ
ನಾಲಗೆ ಹಿಡಿದೆಳೆಯೆ
ವೀರ ಮಂಡಿಯ ಹೂಡಿ
ಅವುಡನೇ ಕಡಿಕಡಿದೇ
ಹಾರಿಸಿದೆ ತಲೆಗಳನು
ಹಾ ಎನುತಲಿ ಬಿಡದೆ 2

ಮುಕುಟ ಕಾಂತಿಯಮಿಹಿರ
ಕೋಟೆಯ ಕಳೆಯು ಹಳಿಯೆ
ಲಕಲಕನೆ ಬೆಳಗುತಿಹ
ಕುಂಡಲ ಸರಪಳಿಯೆ
ಚಕಚಕನೆ ಮೂಗುತಿಯ
ಮುತ್ತು ಹೊಳೆಹೊಳೆ ಹೊಳೆಯೇ
ಸಬಲೆ ಎನಿಪ ಚಿದಾನಂದ
ಬಗಳಾಂಬ ತಿಳಿಯೆ 3

395
ಜಯದೇವಿ ಜಯದೇವಿ ಜಯ ಬಗಳಾಮುಖಿಯೇ

ಜಯದೇವಿ ಜಯದೇವಿ ಜಯ ಬಗಳಾಮುಖಿಯೇ
ಜಯವೆಂದು ಬೆಳಗುವೆನು ಜಯಭಕ್ತ ಸಖಿಯೇ ಪ

ಪೀತಾಂಬರಧಾರಿಣಿ ಪೀತಭೂಷಣೆ
ಪೀತ ಪುಷ್ಪವು ನಿತ್ಯ ಪೀತೋಪಚರಣೆ
ಪೀತಕುಂಡಲ ಹಾರಪೀತ ವರ್ಗಾವರಣೆ
ಪೀತಮೂರ್ತಿಯ ನೆನೆವೆ ಪೀತ ಪ್ರಿಯೆ ಸ್ಮರಣೆ 1

ಬತ್ತೀಸಾಯುಧ ಪಿಡಿದೆ ಭಯಂಕರಿ ಉಗ್ರೇ
ಶತ್ರುನಾಶಕಿ ನೀನು ಭಕುತ ಸಾಹಸ್ರೇ
ಮತ್ತೆ ಹುಡುಕುತ್ತಿರುವೆ ದುಷ್ಟರನು ಶೀಘ್ರೆ
ನಿತ್ಯ ನಾ ಭಜಿಸುತಿಹೆ ಮನವ ಏಕಾಗ್ರೇ 2

ಬ್ರಹ್ಮ ಚಿದಾನಂದ ಬಗಳಾಮುಖಿ ರಾಣಿ
ಹಮ್ಮಳಿದ ಮಹಿಮರಾ ಮೆಚ್ಚಿನ ಕಟ್ಟಾಣಿ
ಬ್ರಹ್ಮರಂಧ್ರದೊಳು ವಾಸಿಸುತಿಹ ದಿನಮಣಿ
ಬಿಮ್ಮನೆ ನಮಗೊಲಿಯೆ ಶೀಘ್ರದಿಂ ಕೃಪಾಣಿ 3

396
ಜೋ ಜೋ ಎನ್ನಿ ನಿರ್ವಿಕಾರಿಯ

ಜೋ ಜೋ ಎನ್ನಿ ನಿರ್ವಿಕಾರಿಯ
ಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ

ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿ
ವೇದ ನಾಲಕು ಎಂಬ ನೇಣನೆ ಹೂಡಿ
ಸಾಧನ ಚತುಷ್ಟಯ ಹಾಸಿಗೆ ಹಾಸಿ
ಬೋಧಾನಂದಳನು ಭಾವದಿ ತಂದು ನೋಡಿ 1

ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿ
ಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆ
ಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿ
ಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2

ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟು
ಶರಶಾರ್ಙೆ ಬತ್ತಳಿಕೆ ಎಡಭಾಗದಲ್ಲಿಟ್ಟು
ದುಷ್ಟ ಶತ್ರುಗಳ ಕಾಲದೆಸೆಗಿಟ್ಟು
ಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3

ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲ
ಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲ
ಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲ
ಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4

ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋ
ಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋ
ಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋ
ಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5

ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋ
ಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋ
ಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋ
ಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6

ಯೋಗಾರೂಢಕೆ ಏಕಾಕ್ಷರಿ ಜೋ ಜೋ
ಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋ
ಯೋಗಿ ಬೃಹತ್ಯಾಗಿ ವಿರಾಗಿ ಜೋಜೋ
ಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7
ಚಿದಬಿಂದುಗಳೆಂಬ ಮಂತ್ರ ಪುಷ್ಟ ಚೆಲ್ಲಿ
ಚೆದುರೆಯರು ಮಂಗಳಾರತಿ ಬೆಳಗುತಿಲ್ಲಿ
ಸದಮಳೆ ನೀ ಮಲಗು ಯೋಗ ನಿದ್ರೆಯಲಿ
ಚಿದಾನಂದ ತಾನಾದ ಬಗಳಾಂಬೆ ಸುಖದಲಿ 8

397
ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆ

ಜೋ ಜೋ ಜೋ ಜೋ ಎನ್ನಿ ನಿರ್ವಿಕಾರಗೆ
ಜೋ ಎಂದು ತೂಗಿರಿ ಚಿದಾನಂದ ದೊರೆಗೆ ಪ

ಚಿದ್ದಯಲಿನೊಳು ಹೃದಯ ತೊಟ್ಟಿಲ ಮಾಡಿ
ಬದ್ಧ ವೇದಾಂತದ ನೇಣ ಬಿಗಿದು
ಸದ್ಭಾವವೆಂಬ ಹಾಸಿಗೆಯ ಹಾಸಿ
ಶುದ್ಧಾತ್ಮನನು ಭಾವದಿ ತಂದು ನೀಡಿ 1

ಅದ್ವೈತವೆಂಬ ಆಭರಣ ತೊಡಿಸಿ
ಸಿದ್ಧ ಭೂಮಿಕೆ ಎಂಬ ಅಡವನಿಡಿಸಿ
ಬುದ್ಧಿ ನಿರ್ಮಳವಾದ ತಲೆದಿಂಬನಿಡಿಸಿ
ನಿದ್ದೆ ಮಾಡೋ ಬ್ರಹ್ಮಾನಂದ ಬೋಧದಲಿ 2

ಚಿತ್ಪ್ರಭೆಯ ದೀಪವನು ಎಡಬಲದಿ ಹಚ್ಚಿ
ಮೊತ್ತವಹ ದಶನಾದ ಭೇರಿಯರವ ಹಚ್ಚಿ
ಮತ್ತೆ ಓಂಕಾರ ಮಂತ್ರ ಘೋಷದಿ ಮುಚ್ಚಿ
ನಿತ್ಯಾತ್ಮನನು ನೋಡಿ ಹರುಷ ತುಂಬುತಲಿ 3

ವಸ್ತು ಸಾಕ್ಷಾತ್ತೆಂಬ ಮುತ್ತೈದೆಯರೆಲ್ಲ
ಸ್ವಸ್ಥ ಚಿತ್ತೆಂಬುದನೆ ಸಿಂಗರಿಸಿಕೊಂಡು
ನಿಸ್ಸಂಗನಹ ಆತ್ಮ ಶಿಶುವನೊಡತಂದು
ಸುಸ್ವರದ ನಾದದಲಿ ಜೋಗುಳವ ಪಾಡುತಲಿ 4

ಜೋ ಜೋ ಕಾಮಸ್ತಂಭವ ಎನ್ನಿ ನರರೆಲ್ಲ
ಜೋ ಜೋ ಕ್ರೋಧ ಸ್ತಂಭನ ಎನ್ನಿ ನರರೆಲ್ಲ
ಜೋ ಜೋ ಮೋಹ ಸ್ತಂಭನ ಎನ್ನಿ ನರರೆಲ್ಲ
ಜೋ ಜೋ ವಿಷಯ ಸ್ಥಂಭನ ಎನ್ನಿ ನರರೆಲ್ಲ 5

ಜೋ ಜೋ ಯಮನಿಯಮಾಸನ ಅರುಹಿದವನೆ
ಜೋ ಜೋ ಜೋ ಜೋ ಖೇಚರ ಮುದ್ರೆ ನಿಲಿಸಿದವನೆ
ಜೋ ಜೋ ಜೋ ಜೋ ಅವಿದ್ಯೆ ಖಂಡಿಸಿದವನೆ
ಜೋ ಜೋ ಜೋ ಜೋ ಜೀವನ್ಮುಕ್ತಿದಾತನೆ 6

ಜೋ ಜೋ ಪರಮಾರೂಢನೆ ಪರಮೇಶ
ಜೋ ಜೋ ಪರಮ ಪರೇಶನೆ ಪಂಡಿತ
ಜೋ ಜೋ ನಿರುತ ವಸ್ತು ವ್ಯಕ್ತ ಅವ್ಯಕ್ತ
ಜೋ ಜೋ ಶರಣ ರಕ್ಷಕ ರಾಜ ಯೋಗೀಂದ್ರ ಜೋ ಜೋ 7

ಸತ್ಯ ಸನಾಥ ವಿಶ್ವೋತ್ಪತ್ತಿ ಜೋ ಜೋ
ಪ್ರತ್ಯಗಾತುಮ ಪರಬ್ರಹ್ಮನೆ ಜೋ ಜೋ
ನಿತ್ಯ ಸಹಜಾನಂದ ಚಿನ್ಮಾತೃ ಜೋ ಜೋ
ಭಕ್ತರ ಭಂಡಾರಿ ಭಾಗ್ಯನೆ ಜೋ ಜೋ 8

ಮಿಹಿರ ಶತಕಳೆಯೆಂಬ ಮಂತ್ರಪುಷ್ಪವ ಚೆಲ್ಲಿ
ಮಹಾ ಬೆಳಕಿನ ಮಂಗಳಾರತಿಯ ಬೆಳಗುತಲ್ಲಿ
ಅಚಲ ಸಮಾಧಿಯೆ ಆದ ಯೋಗನಿದ್ರೆಯಲಿ
ಮಹಾ ಚಿದಾನಂದಾವಧೂತ ಮಲಗಿರು ಸುಖದಲ್ಲಿ 9

398
ಧೂಪಾರತಿಯ ಮಾಡುವ ಬನ್ನಿ ಸರ್ವ

ಧೂಪಾರತಿಯ ಮಾಡುವ ಬನ್ನಿ ಸರ್ವ
ರೂಪ ರಹಿತ ತನ್ಮಾತ್ರನಿಗೆ
ಕೆಟ್ಟ ವಾಸನೆಗಳು ಎಷ್ಟಿಹವೆಲ್ಲ ಪ

ಅಷ್ಟನು ಕುಟ್ಟಿ ಪುಡಿಯನು ಮಾಡಿದ
ಶಿಷ್ಟ ದಶಾಂಗಮ ಘಮ ಘಮ ಬೀರಲು
ಸುಟ್ಟು ಎತ್ತುವ ಧೂಪಾರತಿಯ 1

ವಾಸನತ್ರಯವೆಂಬ ಗುಗ್ಗಳ ಸಾಂಬ್ರಾಣಿ
ದ್ವೇಷ ಭ್ರಾಂತಿಗಳ ಪರಿಪರಿಯಾದ
ವಾಸನೆ ಎತ್ತೆತ್ತ ಮಕಮಕ ಎಸೆಯಲು
ಸೂಸಿ ಎತ್ತುವ ಸುಧೂಪಾರತಿಯ 2

ಶರೀರದೊಳಗೆ ಹೊರಗೆಲ್ಲ ಸರ್ವತನುವಿನಲೆಲ್ಲ
ಬರಿಯ ಸುವಾಸನೆ ತುಂಬಿ ತುಂಬಿ
ಗುರು ಚಿದಾನಂದ ತಾನಾದಾತ್ಮಗೆತ್ತುವೆ
ಪರಮಮಂಗಳ ಸುಧೂಪಾರತಿಯ 3

399
ನಿರ್ಮಲ ಹೃದಯ ಮಂಟಪದೊಳಗೆ ನಿಶ್ಚಲ ಮಣಿಯಿಟ್ಟು

ನಿರ್ಮಲ ಹೃದಯ ಮಂಟಪದೊಳಗೆ ನಿಶ್ಚಲ ಮಣಿಯಿಟ್ಟು
ಧರ್ಮ ಪಟ್ಟಾವಳಿಯ ಹಸೆ ಹಾಸಿ
ಧರ್ಮ ಪಟ್ಟಾವಳಿಯ ಹಸೆ ಹಾಸಿ ಮುಕ್ತಿಯನು
ಕರ್ಮ ಹರೆಯರು ಕರೆದರು 1

ಪರಮ ಪುರುಷ ಬಂದು ಪರಿಣಾಮದಿ ಕುಳಿತು ಇಹನು
ಪರಮ ಪಾವನೆ ಹಸೆಗೇಳು
ಪರಮ ಪಾವನೆ ಹಸೆಗೆ ಏಳೆಂದು ಮುಕ್ತಿಯನು
ಪರಮ ಶಾಂತಿಯರು ಕರೆದರು 2

ನಿತ್ಯತೃಪ್ತನು ಬಂದು ನಿಜದಲ್ಲಿ ಕುಳಿತಿಹನು
ನಿತ್ಯ ಆನಂದೆ ಹಸೆಗೆ ಏಳು
ನಿತ್ಯ ಆನಂದೆ ಹಸೆಗೆ ಏಳೆಂದು ಮುಕ್ತಿಯನು
ನಿತ್ಯ ಸತ್ಯೆಯರು ಕರೆದರು 3

ಮಂಗಳ ಮೂರುತಿ ಬಂದು ಮಂಗಳವಾಗಿ ಕುಳಿತಿಹನು
ಮಂಗಳ ಮುಖಿಯೇ ಹಸೆಗೇಳು
ಮಂಗಳ ಮುಖಿಯೇ ಹಸೆಗೇಳು ಎಂದು ಮುಕ್ತಿಯನು
ಮಂಗಳ ಮುಖಿಯರು ಕರೆದರು 4

ರೂಪ ರಹಿತನು ಬಂದು ರೂಪವಾಗಿ ಕುಳಿತಹನು
ರೂಪ ಮಹಾ ರೂಪೇ ಹಸೆಗೇಳು
ರೂಪ ಮಹಾ ರೂಪೇ ಹಸೆಗೇಳು ಎಂದು ಮುಕ್ತಿಯನು
ರೂಪವತಿಯರು ಕರೆದರು 5

ಅಚ್ಯುತನೆ ತಾ ಬಂದು ಅಚ್ಚಾರಿಯಲಿ ಕುಳಿತಿಹನು
ಅಚ್ಯುತ ರೂಪಳೆ ಹಸೆಗೇಳು
ಅಚ್ಯುತ ರೂಪಳೆ ಹಸೆಗೇಳೆಂದು ಮುಕ್ತಿಯನು
ನಿಶ್ಚಿತ ಮತಿಯರು ಕರೆದರು 6

ಸಾಕ್ಷಿರೂಪನೆ ಬಂದು ಸಾಕ್ಷಾತ್ತು ಕುಳಿತಿಹನು
ಸಾಕ್ಷಿಭೂತಳೆ ನೀನು ಹಸೆಗೇಳು
ಸಾಕ್ಷಿಭೂತಳೆ ನೀನು ಹಸೆಗೇಳೆಂದು ಮುಕ್ತಿಯನು
ಸೂಕ್ಷ್ಮಮತಿಯರು ಕರೆದರು 7

ವೇದಾತೀತನೆ ವೇದ್ಯವಾಗಿ ಕುಳಿತಿಹನು
ವೇದಮಾತೆಯೆ ನೀನು ಹಸೆಗೇಳು
ವೇದಮಾತೆಯೆ ನೀನು ಹಸೆಗೆ ಏಳೆಂದು ಮುಕ್ತಿಯನು
ವೇದಸ್ಮೃತಿಯರು ಕರೆದರು 8

ಜ್ಯೋತಿ ಚಿದಾನಂದನೆ ಬಂದು ಜೋಕೆಯಲಿ ಕುಳಿತಿಹನು
ಜ್ಯೋತಿ ಪ್ರದೀಪೆಯೇ ಹಸೆಗೇಳು
ಜ್ಯೋತಿ ಪ್ರದೀಪೆಯೇ ಹಸೆಗೇಳು ಏಳೆಂದು ಮುಕ್ತಿಯನು
ಜ್ಯೋತಿರ್ಮತಿಯರು ಕರೆದರು 9

400
ಬೆಳಗಿ ಆರತಿಯನೀಗ ಭಾಗ್ಯದಂಬಗೆ ಮುಂದೆ

ಬೆಳಗಿ ಆರತಿಯನೀಗ ಭಾಗ್ಯದಂಬಗೆ ಮುಂದೆ
ಸುಳಿದು ಆರತಿಯನೆತ್ತಿ ಶೂರೆ ಅಂಬಗೆ ಪ

ಮುತ್ತಿನೋಲೆ ಮೂಗುತಿಯ ಧರಿಸಿದಂಬಗೆ
ಕತ್ತಿಯನ್ನು ಹಿಡಿದಿರುವ ಶೂರೆ ಅಂಬಗೆ 1

ಪದಕ ಕುಂಡಲಧಾರಿ ಪೂರ್ಣೆ ಅಂಬಗೆ
ಬೆದರದಲೆ ಶತ್ರುಗಳನು ಕೊಂದ ಅಂಬಗೆ 2

ಶರಣರ ದ್ವಾರ ಕಾಯುತಲಿಹ ವೀರೆ ಅಂಬಗೆ
ಶರಧಿ ಕರುಣಿ ಚಿದಾನಂದ ಬಗಳಾಮುಖಿ ಅಂಬಗೆ 3

401
ಬೆಳಗಿತು ಆರತಿ ಗುರುವಿಗೆ ತಾನೆ ತನ್ನಿಂದ

ಬೆಳಗಿತು ಆರತಿ ಗುರುವಿಗೆ ತಾನೆ ತನ್ನಿಂದ
ತೊಳಗುತ ಬೆಳಗುತ ಥಳಥಳಿಸುತ ತಾ ನಿತ್ಯದಿಂದ ಪ

ಬ್ರಹ್ಮವಿಷ್ಣು ರುದ್ರೇಶ್ವರ ಶಿವರಾಸ್ಥಾನ ಸ್ಥಾನಗಳಲ್ಲಿ
ಬ್ರಹ್ಮ ಆದಿಶಿವ ಅಂತ್ಯದವರೆಗೆ ಚೇತನಗೂಡುತಲ್ಲಿ 1

ಒಳಹೊರಗೆಲ್ಲವ ವ್ಯಾಪಿಸಿ ತುಂಬಿಯೆ ಪೂರ್ಣವು ತಾನಾಗಿರುತ
ತಿಳಿದೆ ನೋಡಲಿ ರವಿ ಕೋಟೆಯ ಪ್ರಭೆ ಪ್ರಭೆಯನು ಬೀರುತ 2

ಅತ್ತ ಮಿಂಚುತ ಇತ್ತ ಮಿಂಚುತ ಎತ್ತೆತ್ತಲು ಝಳಕು
ಚಿತ್ತ ಜ್ಯೋತಿ ಚಿದಾನಂದ ಗುರುವಿನ ಚಿಜ್ಯೋತಿಯ ಬೆಳಗು 3

402
ಮಂಗಳಂ ಜಯ ಸದಾ ಶುಭ ಮಂಗಳಂ

ಮಂಗಳಂ ಜಯ ಸದಾ ಶುಭ ಮಂಗಳಂ
ಮಂಗಳಂ ಆರೂಢ ಮಹಾತ್ಮಗೆ ಪ

ಕಲುಷ ನಿರ್ಧೂತಗೆ ಕರ್ಮ ವಿಧ್ವಂಸಗೆ
ಬಲು ಅವಿದ್ಯಾಬ್ರಾಂತಿ ವಿನಾಶಗೆ
ಲಲಿತ ನಿಜ ಮುಕ್ತಗೆ ಲಕ್ಷ್ಯ ಅಲಕ್ಷ್ಯಗೆ
ಥಳಥಳಿಪ ತೇಜೋಮಯಾತ್ಮನಿಗೆ 1

ಮಾಯೆ ನಿರ್ಮೂಲಗೆ ಮಲತ್ರಯ ವಜ್ರ್ಯಗೆ
ಕಾಯ ಭ್ರಾಂತಿಯನು ತೊಲಗಿಪಗೆ
ಸಾಯಸವಳಿದಗೆ ಸಾಕ್ಷಿಯಾಗಿಹಗೆ
ಮಾಯಾ ರಹಿತಗೆ ಶಿವಶರಣಗೆ 2

ಸಿಂಧು ಆನಂದಗೆ ಶಿವನಾದವನಿಗೆ
ಎಂದೆಂದಿಗು ಇಹ ಏಕನಿಗೆ
ಬಿಂದು ಕಳಾತೀತಗೆ ಬೊಧದಖಂಡಗೆ
ಸುಂದರ ಚಿದಾನಂದ ಸೂಕ್ಷ್ಮಾತ್ಮನಿಗೆ 3

403
ಮಂಗಳಂ ನಿತ್ಯ ಮಂಗಳಂ ಶುಭ

ಮಂಗಳಂ ನಿತ್ಯ ಮಂಗಳಂ ಶುಭ
ಮಂಗಳಂ ಮಹಾ ಮಂಗಳಂ ಪ

ಭಾನುವಿಗೆ ಆತ್ಮ ಭಾನುವಿಗೆ
ಧೇನುಗೆ ನತ ಧೇನುಗೆ
ಮೌನಿಗೆ ಶಬ್ದ ಮೌನಿಗೆ
ದಾನಿಗೆ ಮುಕ್ತಿ ದಾನಿಗೆ 1

ಪಾಲಗೆ ಜಗ ಪಾಲಗೆ
ಕಾಲಗೆ ಭವ ಕಾಲಗೆ
ಶೀಲಗೆ ಭಕ್ತ ಶೀಲಗೆ
ಮೂಲಗೆ ಸರ್ವ ಮೂಲಗೆ 2

ಬಂಧಗೆ ಹರ ಬಂಧಗೆ
ನಂದಗೆ ಆನಂದಗೆ
ಸಿಂಧುಗೆ ಜ್ಞಾನ ಸಿಂಧುಗೆ
ಚೆಂದಗೆ ಚಿದಾನಂದಗೆ 3

404
ಮಂಗಳ ಮಂಗಳ ಜಯ ಮಂಗಳ ಶುಭ

ಮಂಗಳ ಮಂಗಳ ಜಯ ಮಂಗಳ ಶುಭ
ಮಂಗಳ ಗುರುಮೂರ್ತಿ ವಿರೂಪಾಕ್ಷನಿಗೆ ಪ

ಶುಭ್ರಾಂಶುಧರನಿಗೆ ಶುಭ್ರವಸ್ತ್ರವನಿಟ್ಟು
ಶುಭ್ರತಿದೇಹ ಶುಭ್ರದಾಭರಣಗೆ
ಶುಭ್ರಸ್ತ್ರೀಧರ ಯಶಶ್ಯುಭ್ರನಿಗೆ 1

ದರಹಾಸ ಮುಖನಿಗೆ ನಗಾಲಯನಾಗಿರ್ದ
ಧರಶಿಖಿ ಶಿವಪಾತ್ರ ಭರಣಿಪತಿಗೆ
ಧರಮುನಿ ವರದಗೆ ಧರರೂಪ ಪಾಲಗೆ
ಧರಧನುವನು ತಾಳ್ದ ಧರವಾಸಗೆ 2

ಪುರಮಾರಹರನಿಗೆ ಪುರಗಿರಿ ಗೇಹನಿಗೆ
ಶರಣಜನ ಬಂಧು ಚರಣಾಂಗಗೆ
ಗುರು ಚಿದಾನಂದಗೆ ಗಣಪತಿ ಸಾಂದ್ರಗೆ
ದುರಿತ ಭವ ಭವ ದುರಿತನಿಗೆ 3

405
ಮಂಗಳ ಮಂಗಳ ಜಯ ಮಂಗಳ ಬ್ರಹ್ಮಾಸ್ತ್ರನಿಪಳಿಗೆ

ಮಂಗಳ ಮಂಗಳ ಜಯ ಮಂಗಳ ಬ್ರಹ್ಮಾಸ್ತ್ರನಿಪಳಿಗೆ ಪ

ಕಂಬುಗೊರಳಳಿಗೆ ಮಂಗಳ ಚಳತುಂಬನಿಟ್ಟಾಕೆಗೆ ಮಂಗಳ
ಕುಂಭ ಕುಚಗಳಿಗೆ ಮಂಗಳ ಪೀತಾಂಭರಧರಳಿಗೆ ಮಂಗಳ 1

ಮುತ್ತಿನವಾಲೆಗೆ ಮಂಗಳ ರತ್ನದ ನತ್ತಿಟ್ಟವಳಿಗೆ ಮಂಗಳ
ಮುತ್ತ ಕಟ್ಟಿಹಳಿಗೆ ಮಂಗಳ ಕಂಕಣೊತ್ತಿ ಇಟ್ಟಾಕೆಗೆ ಮಂಗಳ 2

ಮುರುಡಿ ಇಟ್ಟವಳಿಗೆ ಮಂಗಳ ವಜ್ರದ ಹರಡಿ ಕಟ್ಟಿಹಳಿಗೆ ಮಂಗಳ
ಜರಿವ ವಡ್ಯಾಣವಧರಿಸಿದವಳಿಗೆ ಹೇಮದಸರಿಗೆ ಇಟ್ಟವಳಿಗೆ ಮಂಗಳ 3

ಪಚ್ಚೆ ಮುಕುಟಗಳಿಗೆ ಮಂಗಳ ಮೆಚ್ಚಿ ಒಲಿದವಳಿಗೆ ಮಂಗಳ
ಬಿಚ್ಚಿಹ ಖಡ್ಗಿಗೆ ಮಂಗಳ ಅವುಡುಗಚ್ಚಿಕೊಂಡಿಹಳಿಗೆ ಮಂಗಳ 4

ಸಾನಂದಳಿಗೆ ಮಂಗಳ ಚಿದಾನಂದ ರೂಪಿಗೆ ಮಂಗಳ
ತಾನಾದ ಬಗಳೆಗೆ ಮಂಗಳ ಭಕ್ತರ ಮಾನ ಕಾಯ್ದವಳಿಗೆ ಮಂಗಳ 5

406
ಮಂಗಳ ಸದ್ಗುರುವರಗೆ ಮಂಗಳ ಸದ್ಗುರುವರೆಗೆ

ಮಂಗಳ ಸದ್ಗುರುವರಗೆ ಮಂಗಳ ಸದ್ಗುರುವರೆಗೆ
ಮಂಗಳ ದುರ್ಗಣ ಹರಗೆ ಮಂಗಳ ಬಗಳಾಂಬ ಚಿದಾನಂದ ದೊರೆಗೆ ಪ
ಪೀತದ ಪೀಠದ ಮೇಲೆ ಪೀತಾಂಬರಿಯು ಕುಳ್ಳಿರಲು
ಪೀತದಾರತಿಯನ್ನು ಕೈಯಲಿ ಪಿಡಿದು
ಪೀತದಾಭರಣೆ ಪೀತದಾವರಣೆಗೆ
ಪೀತದಾರತಿಯ ಬೆಳಗಿರೆ 1

ಮುತ್ತಿನ ಪೀಠದ ಮೇಲೆ ಮುಕ್ತಾಂಗಿ ಕುಳಿತಿಹಳು
ಮುತ್ತಿನಾರತಿಯನ್ನು ಕೈಯಲ್ಲಿ ಪಿಡಿದು
ಮುತ್ತಿನಾಭರಣೆಗೆ ಚಿತ್ತ ಚಿದ್ರೂಪಿಣಿಗೆ
ಮುತ್ತಿನಾರತಿಯ ಬೆಳಗಿರೆ 2

ಪದ್ಮಾಸನದ ಪೀಠದ ಮೇಲೆ ಪದ್ಮಾಸನೆ ಕುಳಿತಿಹಳು
ಪದ್ಮದಾರತಿಯನ್ನು ಕೈಯಲ್ಲಿ ಪಿಡಿದು
ಪದ್ಮಶ್ರೀ ಚಿದಾನಂದ ಸದ್ಗುರುವಿಗೆ
ಪದ್ಮದಾರತಿಯ ಬೆಳಗಿರೇ 3

407
ಮಂಗಳವು ಬಗಳೆ ನಾಮ ಪರಮ ಮಂಗಳ

ಮಂಗಳವು ಬಗಳೆ ನಾಮ ಪರಮ ಮಂಗಳ
ಮಂಗಳವು ಬಗಳ ಧ್ಯಾನ ನಿತ್ಯ ಮಂಗಳ ಪ

ಉಟ್ಟ ಪೀತಾಂಬರದುಡಿಗೆ ಕಾಶಿ ಮಂಗಳ
ತೊಟ್ಟ ಹೇಮ ಕಂಚುಕಿಯ ತೊಡವು ಮಂಗಳ
ದಟ್ಟ ದಟ್ಟವಿದ ಪಟ್ಟಿ ಮುತ್ತು ಮಂಗಳ
ಇಟ್ಟ ಮೂಗು ರತ್ನ ನತ್ತು ನಿತ್ಯ ಮಂಗಳ 1

ಕಣ್ಣ ಚಂಚಲ ಕಡೆಯ ಸರಗು ಮಂಗಳ
ನುಣ್ಣನೆಯ ಗಲ್ಲದುಬ್ಬು ನುಡಿಯು ಮಂಗಳ
ಎಣ್ಣೆ ನೂಲು ಉಡುವಣೆಯು ವಜ್ರ ಮಂಗಳ
ಕನ್ನಡಿಯು ಕಾಲುಗೆಜ್ಜೆ ಕಡಗ ಮಂಗಳ 2

ವಿಧ ವಿಧದ ಮಾಣಿಕ್ಯ ಮುಕುಟ ಮಂಗಳ
ಅದ್ಭುತದ ಹಿರಿಯ ಖಡ್ಗ ತೇಜ ಮಂಗಳ
ಪದುಮಭವನ ಜಿಹ್ವೆ ಹಿಡಿದ ಕರವು ಮಂಗಳ
ಚಿದಾನಂದ ಬಗಳೆ ಸ್ಮರಣೆ ಸರ್ವ ಮಂಗಳ 3

408
ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ ಮಂಗಳಾರತಿ ಎತ್ತಿರೆಲ್ಲ

ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ ಮಂಗಳಾರತಿ ಎತ್ತಿರೆಲ್ಲ
ಮಂಗಳರೂಪಗೆ ಮಂಗಳ ಮಹಿಮಗೆ ಮಂಗಳಕರಗೆ ಮಂಗಳಪ್ರದಗೆ ಪ

ಹೃದಯ ಪಂಚಾರತಿ ಮಾಡಿ ತತ್ವಾಕ್ಷತೆ ನೀಡಿ
ಒದವಿದ ಬುದ್ಧಿ ಬತ್ತಿಯಮಾಡಿ ನಿರ್ಮಳ ಘೃತ ನೀಡಿ
ಮುದದಿಂ ಚಿಜ್ಯೋತಿಯನೆ ಮುಟ್ಟಿಸಿ
ಸದಮಲ ಸರ್ವ ಬ್ರಹ್ಮವೆ ಎಂದು 1

ನೆಲೆಗಾಣದಂತೆ ತೇಜ ತುಂಬೆ
ಹೊಳೆಯಲು ಬಿಂದು ಬೊಂಬೆ
ತಿಳಿದು ನೋಡಲಿ ಕಣ್ಣು ತುಂಬಿ ಉಳಿವು ಇನ್ನು ಎಂಬೆ
ಬಲುಪ್ರಭೆ ತಿಳಿಯೆ ಥಳಥಳ ಹೊಳೆಯೆ ತೊಳಗಿ ತೊಳಗಿ ಬೆಳಗಿ ಬೆಳಗಿ 2

ನಾನಾ ವರ್ಣವೆ ಪೊಳೆಯಲು ಅತ್ತಲಿತ್ತಲು
ನಾನಾ ವರ್ಣವ ತಾಳುತ್ತ ಎತ್ತಾಲೆತ್ತಲು
ತಾನು ಚಿದಾನಂದ ಗುರು ಬೇರಾಗದೆ
ತಾನೆ ತಾನೆಯಾಗಿ 3

409
ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ

ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ
ಮಂಗಳಾರತಿ ಎತ್ತಿರೆಲ್ಲ
ಸಂಗಾತೀತ ಚಿದಾನಂದಾವಧೂತಾಂಗ ಶ್ರೀ
ಬಗಳಾಮುಖಿ ದೇವಿಗೆ ಪ

ಕರದೊಳು ಚೂಡೆ ಕಂಕಣವಿಟ್ಟು
ಕೊರಳೊಳು ಸರಿಗೆಯ ಧರಿಸಿ
ಶಿರದಿ ರತ್ನದ ಕಿರೀಟವಿಟ್ಟು ಸರ್ವಾಭರಣವ
ಧರಿಸಿ ದುರುಳರ ದುಷ್ಟರ ಛೇಧಿಸಿ ಭ-
ಕ್ತರ ಪಾಲಿಪ ಬಗಳಾಮುಖಿಗೆ 1

ನಿತ್ಯ ನಿರ್ಗುಣ ನಿರಾಮಯಗೆ ನಿಂದಕವಿದಾರಣೆಗೆ
ಭಕ್ತ ವತ್ಸಲೆ ಭುವನೇಶ್ವರಿ ಮಾತೆಗೆ
ಭಕ್ತಾಧಾರೆಗೆ ಪ್ರತ್ಯಗಾತ್ಮೆಗೆ ಪರಬ್ರಹ್ಮ ರೂಪಿಣಿ
ಭಕ್ತ ಪ್ರಾಣಿಗೆ ಬಗಳಾಮುಖಿಗೆ 3

410
ಮಂಗಳಾರತಿಯ ತಂದೆತ್ತಿರೆ

ಮಂಗಳಾರತಿಯ ತಂದೆತ್ತಿರೆ
ಶುಭಮಂಗಳಜಗದಾದಿದೇವಿಗೆ ಪ

ಮಧುಕೈಟಭಾಸುರ ಮರ್ದನ ದೇವಿಗೆ
ಮದನ ಕೋಟಿ ರೂಪ ಮಹಾದೇವಿಗೆ
ಸದಮಲ ಬ್ರಹ್ಮರ ಹೃದಯದ ಆತ್ಮಗೆ
ಮದನಾರಿ ಭೂತೆಗೆ ಆರತಿ ಎತ್ತಿರೆ 1

ಭಾನು ಸಾಸಿರ ಕೋಟಿ ತೇಜ ಮಹಾತ್ಮಳಿಗೆ
ದಾನವಾಂತಕಳಾದ ದಯಾಶೀಲಗೆ
ಮಾನನಿಧಿ ಭಕ್ತರನು ಮರೆಯದೇ ರಕ್ಷಿಪ
ಬಾಣಾರಿ ಜನನಿಗೆ ಆರತಿಯನೆತ್ತಿರೆ 2

ರಕ್ಷಬೀಜಾರಿಗೆ ರಾಕ್ಷಸಧ್ವಂಸಿಗೆ
ಭಕ್ತರ ಸಲಹುವ ಬಗಳಾಂಬೆಗೆ
ಮುಕ್ತಿ ಸದ್ಗುರು ಚಿದಾನಂದವಧೂತಗೆ
ಮುತ್ತಿನಾರತಿಯನೆತ್ತಿರೆ 3

411
ಮಾಡುವ ಬನ್ನಿ ನಾವು ನೀವು ಎಲ್ಲರು ಏಕಾರತಿಯ

ಮಾಡುವ ಬನ್ನಿ ನಾವು ನೀವು ಎಲ್ಲರು ಏಕಾರತಿಯ
ಗೂಢ ಚಿದಾನಂದನೊಳು ಕೂಡಿಕೊಂಬರ್ಥಿಯ ಪ

ನೀರು ಲವಣ ಕೂಡಿ ಒಂದೇ ನೀರು ನಿಜವೆ ಆದಂತೆ
ಕಾರಣಾತ್ಮಕನೆಲ್ಲ ಕರಗಿಹೋಗುವ ಏಕಾರತಿ 1

ಉರಿಯುವ ಕರ್ಪೂರವ ತಗುಲಿ ಉರಿಯು ತಾನಾಗಿ ಬೆಳಗಿದಂತೆ
ನರನು ತಾನೇ ಸಾಕ್ಷಾತ್ ಹರನಾದುದೇ ಏಕಾರತಿ 2

ಕೀಟಭೃಂಗ ಧ್ಯಾನದಿಂದ ಕೀಟ ಭೃಂಗವಾದ ತೆರದಿ
ಪಾಡಿ ಚಿದಾನಂದ ತಾನೇ ತಾನಾದುದೇ ಏಕಾರತಿ 3

412
ಲಾಲಿ ಪಂಪಾಂಬಿಕೆ ಲಾಲಿ ಭ್ರಮರಾಂಬಿಕೆ

ಲಾಲಿ ಪಂಪಾಂಬಿಕೆ ಲಾಲಿ ಭ್ರಮರಾಂಬಿಕೆ
ಲಾಲಿ ಬಗಳಾಂಬಿಕೆ ಲಾಲಿ ಲಾಲಿ
ಎಂದು ಪಾಡಿರಿ ಸಾಧು ಸಜ್ಜನರೆಲ್ಲ
ದೇವಿ ತಾನೇ ಎಂದು ಲಾಲಿ ಪ

ಅದ್ವಯಾಗಮ ದ್ಯುತಿಗೋಚರ ಅನಾದಿ
ಅಚಲಾನಂದವೇ ಲಾಲಿ
ಶುದ್ಧ ಸಮ್ಯಕ್ ಜ್ಯೋತಿರ್ಮಯ ಸ್ವರೂಪ
ಸುಚರಿತ್ರ ನಿಶ್ಚಲ ಲಾಲಿ
ಚಿದ್ಬಯಲಿನೊಳು ಹೃದಯ ತೊಟ್ಟಿಲೊಳು
ಭಾವ ಹಾಸಿಗೆಯಲ್ಲಿ ಪವಡಿಸಿಹೆ ಲಾಲಿ
ಸಿದ್ಧರಿ ಮಲಗಿನ್ನು ಜೋಗುಳ ಪಾಡುವೆ
ಶ್ರೀ ಮಹಾಲಕ್ಷ್ಮಿಯೇ ಲಾಲಿ 1

ನಿತ್ಯನಿರ್ಗುಣ ನಿಷ್ಕಲಂಕ ನಿರ್ವಿಕಲ್ಪ
ನಿಜನಿತ್ಯ ನಿರ್ಮಳೆ ಲಾಲಿ
ಸತ್ಯ ವಸ್ತುವೆ ಸನಾಥ ವಿಶೋತ್ಪತ್ತಿ
ಸರ್ವಪರಬ್ರಹ್ಮ ರೂಪ ಲಾಲಿ
ಪ್ರತ್ಯಗಾತ್ಮಳೆ ಪೂರ್ಣಪರಮ ಪರತರ ವಂದ್ಯೆ
ಪಾವನ ಚಾರಿತ್ರೆ ಲಾಲಿ
ಕರ್ತೃನೀ ಅನಂತ ಬ್ರಹ್ಮಾಂಡಾದಿಗಳಿಗೆ
ಕರುಣಾ ಸಮುದ್ರವೇ ಲಾಲಿ 2

ಪೃಥ್ವಿ ಅಪ್ಪು ತೇಜ ವಾಯುರಾಕಾಶಕ್ಕೆ
ಪೃಥಕಾಗಿ ಹೊಳೆದಿಹಳೆ ಲಾಲಿ
ಸತ್ವರಜತಮಸು ಮೂರರೊಳಗೆ ನೀ
ಸಾಕ್ಷಿರೂಪದಲಿರುವೆ ಲಾಲಿ
ವೇದ ವೇದಾಂಗಗಳ ವಾಗ್ರೂಪಿನಲ್ಲಿ
ನೆಲೆಸಿ ರಂಜಿಪಳೆ ಲಾಲಿ
ತತ್ವವಿಂಶತಿ ಪಂಚಶರೀರಗಳೊಳಗೆ ನೀ
ತೊಳ ತೊಳಗಿ ಬೆಳಗುತಿಹೆ ಲಾಲಿ 3

ಜಾಗೃತ ಸ್ವಪ್ವ ಸುಷುಪ್ತಿ ಮೂರವಸ್ಥೆ
ಜನಿತದಿ ಕಾಣಿಸಿ ಲಾಲಿ
ಪ್ರಾಜ್ಞ ತೈಜಸ ವಿಶ್ವ ಮೂರು ಮೂರುತಿಯಾಗಿ
ಪರಿಣಮಿಸಿ ತೋರುವೆ ಲಾಲಿ
ಶೀಘ್ರದಲಿ ಸದ್ಭಾವ ಸಚ್ಛಿಷ್ಯರಾದರ್ಗೆ
ಸ್ವಾನಂದ ಸುಖವೀವೇ ಲಾಲಿ
ರೌದ್ರದಲಿ ಭುಗುಭುಗು ಭುಗಿಲೆಂಬ ಕಳೆಗಳು
ಅತ್ಯುಗ್ರದಿ ಝಂಗಿಸುವೆ ಲಾಲಿ 4

ವಿದ್ಯಾವಿದ್ಯವ ತೋರಿ ದೃಶ್ಯಾದೃಶ್ಯಕೆ ಮೀರಿ
ಅದೃಶ್ಯರೂಪ ಶ್ರೀ ಲಕ್ಷ್ಮೀಲಾಲಿ
ಸಿದ್ಧಿಗಳೆಂಬುವ ಛೇದಿಪ ಹರಿಹರ
ಸರಸಿಜೋದ್ಭವ ಮಾತೆ ಲಾಲಿ
ಸಿದ್ಧ ಪರ್ವತವಾಸ ಸಾಹಸ್ರದಳ ಮಧ್ಯೆ
ಶ್ರೀ ಬಗಳಾಮುಖಿ ಲಾಲಿ
ಸದ್ಗುರು ಚಿದಾನಂದ ಅವಧೂತ
ಬಗಳಾಂಬ ಸಗುಣ ನಿರ್ಗುಣಮೂರ್ತಿ ಲಾಲಿ 5

413
ಶೋಭನವೇ ಶೋಭನವೇ

ಶೋಭನವೇ ಶೋಭನವೇ
ಶೋಭನ ಗುರುವಿಗೆ ಬಗಳಾಂಬಳಿಗೆ ಪ

ಉರಿಬಿಟ್ಟಗ್ನಿಯು ಇಲ್ಲದಂತೆ
ಉರಿಯು ಅಗ್ನಿಯು ಒಂದೆಂಬಂತೆ
ಗುರುವು ಬಗಳಾಂಬನು ತಾನು ಕೂಡಿಯೆ
ತರಣಿ ಶತಕೋಟಿಯಲಿ ಹೊಳೆಯುತಿದೆ 1

ಬಂಗಾರದಿ ಮಾಡಿಹ ಒಡವೆಗಳಂತೆ
ಬಂಗಾರ ಒಡವೆ ಒಂದೆ ಎಂಬಂತೆ
ಮಂಗಳ ಗುರು ಬಗಳಾಂಬನು ಕೂಡಿಯೆ
ತಿಂಗಳ ಶತಕೋಟಿಯಲಿ ಹೊಳೆಯುತಿದೆ 2

ತೆರೆ ಬಿಟ್ಟ ಉದಕವು ಇಲ್ಲದಂತೆ
ತೆರೆ ಉದಕವು ಒಂದೆಂಬಂತೆ
ಗುರು ಚಿದಾನಂದ ಶ್ರೀ ಬಗಳೆ ಕೂಡಿಯೆ
ಶರಣರ ಹೃದಯದಿ ಥಳಥಳಿಸುತಿರೆ 3

414
ಶೋಭನವೇ ಶೋಭನವೇ

ಶೋಭನವೇ ಶೋಭನವೇ
ಶೋಭನ ಚಿದಾನಂದ ಅವಧೂತಗೆ ಪ

ರೇಚಕ ಪೂರಕ ಕುಂಭಕವ
ರೇಚಿಪ ಪೂರಿಪ ಕ್ರಮದನುವಾ
ಸೂಚನೆಯರಿದಾ ಸುಷುಮ್ನದನುಭವ
ರೋಚಕವಾಗಿಹ ಕಳೆಸವಿವ 1

ಹೃದಯಾಕಾಶದಿ ಲಕ್ಷ್ಯವಿಟ್ಟು
ಮುದದಿ ತೋರಲು ಪ್ರಭೆಮಿಂಚಿಟ್ಟು
ಬುದು ಬುದುಕಳೆ ಪ್ರಕಾಶಗಳೆದುರಿಟ್ಟು
ಒದವೆ ನಾದಧ್ವನಿ ಇಂಪಿಟ್ಟು 2

ನಿರುಪಮ ನಿರ್ಗುಣ ನಿರ್ಭೀತ
ನಿರವಯ ನಿಶ್ಚಲ ನಿಜದಾತಾ
ವರ ಚಿದಾನಂದ ಸದ್ಗುರು ಅವಧೂತ
ಶರಣು ಜನ ಕಾವ ಪ್ರಖ್ಯಾತ 3

415
ಶೋಭಾನವೇ ಬಗಳಾಮುಖಿ ದೇವಿಗೆ

ಶೋಭಾನವೇ ಬಗಳಾಮುಖಿ ದೇವಿಗೆ
ಶೋಭಾನವೇ ಸದ್ಗುರುನಾಥಗೆ ಶೋಭಾನವೆನ್ನಿ ಶುಭವೆನ್ನಿ ಪ

ಸುತ್ತಿದ ಸರಿಗೆಯು ಒತ್ತಿದ ಚಿಂತಾ
ಕೆತ್ತಿದ ರಾಗಟೆ ಹತ್ತಿದ ಚವುರಿ
ಮತ್ತೆ ತುರುಬಿಗೆ ಪಂಚಕ ಮುಡಿದಿಹ
ಮುಡಿದೀ ಬಗಳಾಮುಖಿಗೆ ರತ್ನದಾರತಿಯ ಬೆಳಗಿರೇ 1

ಶ್ರವಣ ಮನನ ನಿಧಿಧ್ಯಾಸನ ಸಾಧಿಸಿ
ಭವಭವಗಳ ತರಿದೆಲ್ಲವ ಛೇದಿಸಿ
ಶಿವಸಾಕ್ಷಾತ್ತಾಗಿ ಬೆಳಗುತ ಬೆಳಗುತ ಸದ್ಗುರುನಾಥಗೆ
ಪವಳದಾರತಿಯೆ ಬೆಳಗಿರೆ 2

ವಾಲೆ ಬಳೆಗಳು ತಾಳಿಯು ಮೂಗುತಿ
ಸಾಲಿನ ಅಡ್ಡಿಕೆ ತಾಯಿತ ಸರಪಳಿ
ಮೇಲು ಪದಕವೆ ಮೆರೆದಿಹೆ ಮೆರೆದಿಹ ಬಗಳಾಮುಖಿಗೆ
ಲೋಲದಾರತಿ ಬೆಳಗಿರೆ 3

ಬಾಲೋನ್ಮತ್ತ ಪಿಶಾಚಾಂಧರ ಬದಿರ ಲಕ್ಷಣ
ಮೂಕಾವಸ್ಥೆಯ ತಾ ತಾಳಿ ಅರವಸ್ಥೆಯ ಧರಿಸಿ
ಧರಿಸಿಹ ಸದ್ಗುರುನಾಥಗೆ
ತೈಲದಾರತಿಯ ಬೆಳಗಿರೆ 4

ಹೊಸ ಮಿಂಟಿಕೆ ಪಿಲ್ಲೆ ಸವಂದಿಗೆ
ಜಸವುಂಗರ ಮೀನೆಸೆದಿಹ ಮುದ್ರಿಕೆ
ಮಿಸುನಿಯೊಡ್ಯಾಣವು ತೊಳಗುವ ತೊಳಗುವ ಬಗಳಾಮುಖಿಗೆ
ಶೀಲದಾರತಿಯ ಬೆಳಗಿರೆ 5

ಧಗಧಗಿಸುವ ಪೀತಾಂಬರದುಡುಗೆಯ
ಝಗ ಝಗಿಸುವ ಮಹಾಸ್ವರ್ಣದ ಕಂಚುಕಿ
ನಿಗಮವೆಡಬಲದಲ್ಲಿ ಹೊಗಳುವ ಹೊಗಳುವ ಬಗಳಾಮುಖಿಗೆ
ಸುಗಮದಾರತಿಯ ಬೆಳಗಿರೆ 6

ಝಗ ಝಗಿಸುವ ಪ್ರಭೆ ದೃಷ್ಟಿಸಿ ಶ್ರವಣದಿ
ಮೊಗೆ ಮೊಗೆದು ದಶನಾದವ ಸೇವಿಸಿ
ಬಗೆ ಬಗೆ ಆನಂದದಿ ಸುಖಿಸುವ ಸುಖಿಸುವ ಸದ್ಗುರುನಾಥಗೆ
ಸುಗಮದಾರತಿಯ ಬೆಳಗಿರೆ 7

ಸಪ್ತಾವರಣ ಭಸ್ಮವ ಮಾಡಿ
ಸಪ್ತಭೂಮಿಕೆ ಪಾವಟಿಗೆಯನೇರಿ
ಗುಪ್ತ ಪ್ರಭಾತೀತವಾಗಿ ತೊಳಗುವ ತೊಳಗುವ ಸದ್ಗುರುನಾಥಗೆ
ತೃಪ್ತದಾರತಿಯು ಬೆಳಗಿರೆ 8

ಕಂಕಣ ಹರಡಿಯ ಹಸ್ತದ ಕೈಯ್ಯಲಿ
ಅಂಕುರ ಪಟ್ಟಿಯು ಪರಿಘವು ಶರಧನು
ಅಂಕೆಯಿಲ್ಲದಾಯುಧ ಪಿಡಿದಿಹ ಪಿಡಿದಿಹ ಬಗಳಾಮುಖಿಗ
ಪಂಕಜದಾರತಿಯ ಬೆಳಗಿರೆ 9

ಸಾರಿಯೆ ತ್ವಂ ಪದ ತತ್ವಮಸಿ ಪದ
ಮೀರಿಯೆ ಸಗುಣ ನಿರ್ಗುಣ ರೂಪವ ತೋರಿಚರಿಸುವ
ಚರಿಸುವ ಸದ್ಗುರುನಾಥಗೆ ಸಾರದಾರತಿಯ ಬೆಳಿಗಿರೆ 10

ಪಿಡಿದೆಡಗೈಯಲಿ ವೈರಿಯ ಜಿಹ್ವೆಯ ಕೆಡುಹುತ ತುಳಿದೆ
ಹೊಡೆಯುತ ಖಡುಗದಿ ಕೊಡುತ ಬೇಡಿದವರಿಗೆ ಅಭಯವ
ಅಭಯವೀವ ಬಗಳಾಮುಖಿಗೆ ಸಡಗರದಾರತಿಯ ಬೆಳಗಿರೆ 11

ಸಾಧನ ನಾಲ್ಕನು ಸಾಧಿಪ ಸಚ್ಛಿಷ್ಯರಿಗೆ
ಅಭಯವ ನೀಡುತ ಭಕ್ತಿರಿಗಾದಾರವಾಗಿ ಕರುಣಿಪ
ಕರುಣಿಪ ಸದ್ಗುರುನಾಥಗೆ ಸಾಧುಗಳಾರತಿ ಬೆಳಗಿರೆ 12

ಚಿದಾನಂದ ಪರಬ್ರಹ್ಮವು ತಾನೇ
ಮದಮುಖನು ಸಂಹರಿಸಲೋಸುಗ
ಸದನ ಬ್ರಹ್ಮ ರಂಧ್ರದಿ ಸ್ಥಾನವಾಯ್ತು
ಸ್ಥಾನವಾಯ್ತು ಬಗಳಾಮುಖಿಗೆ ಸುಧೆಯ ಆರತಿ ಬೆಳಗಿರೆ 13

ಸಿದ್ಧ ಪರ್ವತವಾಗಿಹ ಪ್ರ-
ಸಿದ್ಧ ಬಗಳಾಮುಖಿಯೆಂದೆಣಿಸುವ
ಸಿದ್ಧ ಚಿದಾನಂದಾವದೂತ ಅವಧೂತ ಸದ್ಗುರುನಾಥಗೆ
ಸಿದ್ಧದಾರತಿಯ ಬೆಳಗಿರೆ 14

416
ಶ್ರೀ ಮಹಾಲಕ್ಷ್ಮಿಗೆ ಮಂಗಳ

ಶ್ರೀ ಮಹಾಲಕ್ಷ್ಮಿಗೆ ಮಂಗಳ
ಸೋಮಶೇಖರಿ ಬಗಳೆಗೆ ಮಂಗಳ ಪ

ಭದ್ರಕಾಳಿ ಭವಾನಿ ಶಕ್ತಿಗೆ ಮಂಗಳ ಅತಿ
ಶುಭ್ರ ಕಾಂತಿ ಭುವನೇಶ್ವರಿ ಮಂಗಳ
ಕ್ಷುದ್ರ ಸಂಹಾರಿಣಿ ಶಂಕರಿ ಮಂಗಳ ಅತಿ
ಭದ್ರ ಸುಂದರಿ ಶೋಡಸಿ ಮಂಗಳ 1

ಶುಂಭ ಮರ್ದಿನಿ ಭೈರವಿ ಮಂಗಳ ವಿಶ್ವ ಕು-
ಟುಂಬಿನಿ ಸುರನಂತೆ ಮಂಗಳ
ಕುಂಭಕುಚೇ ಪೀತಾಂಬರಿ ಮಂಗಳ ಶ್ರೀ ವಿ-
ಜೃಂಭಿಣಿ ಶಂಕರಿ ಮಂಗಳ 2

ಆನಂದ ರೂಪಿಣಿ ರೌದ್ರಿಣಿ ಮಂಗಳ ಪೂರ್ಣ
ಜ್ಞಾನ ರೂಪಿಣಿ ಸುಧಾರಸೆ ಮಂಗಳ
ಮೌನಿಯೋಗಿನಿ ಕರಾರ್ಚಿತೆ ಮಂಗಳ ಬಗಳ
ಜ್ಞಾನಿ ಚಿದಾನಂದಾವಧೂತೇ ಮಂಗಳ 3

417
ಸದ್ಗುರುನಾಥಗೆ ಮಂಗಳ ಭಾಸ ಶತ

ಸದ್ಗುರುನಾಥಗೆ ಮಂಗಳ ಭಾಸ ಶತ
ಸೂರ್ಯ ತೇಜಗೆ ಮಂಗಳ
ನಿರ್ಗುಣ ನಿರ್ವಿಕಾರಗೆ ಮಂಗಳ ಸ್ವಪ್ನ
ಜಾಗೃತಿ ಸುಷುಪ್ತಿ ನಿಗ್ರಹಗೆ ಮಂಗಳ
ಭರ್ಗೋ ದೇವಗೆ ಭಯಂಕರನಿಗೆ ಮಂಗಳ ಅತಿ
ಶೀಘ್ರ ಭಕ್ತರ ಪಾಲಿಪಗೆ ಮಂಗಳ 1

ನಿತ್ಯ ನಿರ್ಮಲ ನಿಜಬೋಧಗೆ ಮಂಗಳ ಘನ
ವಸ್ತು ಸಾಕ್ಷಾತ್ಕಾರನಿಗೆ ಮಂಗಳ
ಸತ್ವ ಸನಾಥ ಸಾಕ್ಷಿಗೆ ಮಂಗಳ
ಶುದ್ಧ ಚಿತ್ಪ್ರಭಾಗಮ್ಯಗೆ ಮಂಗಳ 2

ಪರಮ ಚೈತನ್ಯ ಪರಮೇಶಗೆ ಮಂಗಳ ಸತ್ಯ
ಶರಣ ರಕ್ಷಕ ಯೋಗಿಗೆ ಮಂಗಳ
ಪರಮ ಆರೂಢ ಪರಮೇಶಗೆ ಮಂಗಳ ನಿಜ
ಗುರು ಚಿದಾನಂದಾವಧೂತಗೆ ಮಂಗಳ 3

418
ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರ

ಸುವ್ವಿ ಎಂದು ಪಾಡಿರೆ ಸುಜ್ಞಾನ ದೇವರ
ಭವಹರಿವುದು ಭಯವಿಲ್ಲ ಸುವ್ವಿ
ಪಂಚ ಶಕ್ತಿಗಳೆಂಬ ಪರಮ ಮುತ್ತೈದೆಯರು
ವಂಚನೆಗೆ ದೂರಾಗಿ ವರ್ತಿಸುತ ಸುವ್ವಿ
ವಂಚನೆಗೆ ದೂರಾಗಿ ವರ್ತಿಪ ಐದೆಯರು
ಮುಂಚೆ ಬೇಗದಲಿ ಮಡಿಯಾಗಿ ಸುವ್ವಿ 1

ಕ್ಷೇತ್ರದ ಒರಳಲ್ಲಿ ಕ್ಷರನೆಂಬ ಅಕ್ಕಿಯು
ಕ್ಷೇತ್ರಜ್ಞನೆಂಬ ಒನಕೆಯ ಸುವ್ವಿ
ಕ್ಷೇತ್ರಜ್ಞನೆಂಬ ಒನಕೆಯ ಪಿಡಿದು
ಪಾತ್ರನಾಗೆಂದು ಹರಸುತ ಸುವ್ವಿ 2

ಆರು ಮೂರಾದವನ ಐದು ಎಂಟಾದವನ
ಬೇರೇಳು ನಾಲ್ಕೆರಡು ಬಗೆಯಾದವನ ಸುವ್ವಿ
ಬೇರೇಳು ನಾಲ್ಕೆರಡು ಬಗೆಯಾದನೆಲ್ಲನು
ವಾರಣದಿ ನೀವೆಲ್ಲ ತಳಿಸಿರೆ ಸುವ್ವಿ 3

ವಾಸನೆಯ ಮೆರುಗನು ಒಳಿತಾಗಿ ತಳಿಸುತ್ತ
ಸೂಸದಂತೆಲ್ಲವ ಮಗುಚುತ್ತು ಸುವ್ವಿ
ಸೂಸದಂತೆಲ್ಲವ ಮಗಚುತ್ತ ಅಕ್ಕಿಯ
ರಾಶಿಯನು ಮಾಡಿ ಬಿಡಿರವ್ವ ಸುವ್ವಿ 4

ಪರವಸ್ತುವಾದವನ ಪರಬ್ರಹ್ಮವಾದವನ
ಪರಮಾತ್ಮನೆಂಬ ಪುರುಷನ ಸುವ್ವಿ
ಪರಮಾತ್ಮನೆಂಬ ಪುರುಷ ಚಿದಾನಂದನ
ಪರಮ ನೈವೇದ್ಯದ ಪಾಕಕ್ಕೆ ಸುವ್ವಿ 5

419
ಮುತ್ತಿನ ಮಹಿಮೆ

ಮುತ್ತು ಬಂದಿದೆ ಕೊಳ್ಳಿರಣ್ಣಾ ಅದಕೆ
ವೆಚ್ಚವೇನಿಲ್ಲ ಬೆಲೆಯಾಗದಣ್ಣಾ

ಥಳತಳ ಹೊಳೆಯುತದಣ್ಣಾ
ಅದು ಬಲ್ಲ ಜಾಣಂಗಿನ್ನು ಬಯಲೊಳಗಣ್ಣ
ಕೂದಲ ಎಳಿಗಿಂತ ಅದು ಸಣ್ಣ
ಬಣ್ಣ ಬಣ್ಣದ ಬ್ರಹ್ಮದ ಲೋಕಣ್ಣ

ತನು ಎಂಬ ತಕ್ಕಡಿ ಪಿಡಿದು
ಆದಿ ಶರಣರು ತೂಗ್ಯಾರು ವಾಸನೆ ಕಳೆದು
ಮನವೆಂಬ ಮಣಿದಾರ ಪಿಡಿದು
ಲೋಕ ಹೋಗದೆ ತೂಗ್ಯಾರು ಯೋಗ ಮಾಡಿ ಅವರು

ಮುತ್ತಿನ ಮಹಿಮೆ ಮುಂದದ
ಇದರ ಗೊತ್ತು ತಿಳಿಯದೆ ಮಂದಿ ಸತ್ತು ಹೋಗೇದ
ಸುತ್ತಮುತ್ತಲು ಸುಳಿವುತಲದು
ಚಿದಾನಂದನ ಚಿತ್ತದೊಳಗದ

420
ನಾನು ಎಂಬುದು ಅಳಿದು

ಮಡಿಯಾಗಿ ತಂಗಿ ಮಹಾಲಿಂಗ ಪೂಜೆ ಮಾಡೇ
ಮುಕ್ತಿ ಸದನಕೇರುವೆ ನೋಡೇ

ದೇಹವೆಂಬ ಮನೆಯ ಸಾರಿಸೆ
ಮೋಹವೆಂಬ ತಂಗಳ ಮಡಕೆ ಹೊರಗಿರಿಸೆ
ಸೋಹಂ ಎಂಬ ರಂಗವಲ್ಲಿಯನಿಡೆ
ಜ್ಯೋತಿಯನು ಬೆಳಗಿಸೆ ನೀನು

ನಾನಾವಾಸನೆಯ ಮೈಲಿಗೆಯನು ಬಿಡೆ
ಮನಮೈಲಿಗೆಯನು ತೊಳೆ
ಸ್ವಾನುಭವದ ಪೀತಾಂಬರವನುಡೆ
ನಾನು ಎಂಬ ಕಸವನು ಗುಡಿಸೆ
ನಾದದ ಸುಖವನು ಅನುಭವಿಸೆ ನೀನು

ಧ್ಯಾನ ಮನನೆನಪಿಲ್ಲದಾಗಿ
ಸ್ವಸ್ಥಾನದಲ್ಲಿ ಭಾನುವೀಗ ಬೆಳಗಿದಂತಾಗಿ
ನಾನು ಎಂಬುದ ಅಳಿದು ನೀನೆ
ಚಿದಾನಂದನಾಗಿ ಪೂಜಿಸು

421
ಕಾಯುವ ಬಿಟ್ಟು ಆತ್ಮೆಲ್ಲಿ

ದೇಹವ ಬಿಟ್ಟು ಬ್ರಹ್ಮವು ಎಂತೆನೆ
ದೇಹಬಿಟ್ಟು ಬ್ರಹ್ಮವೆಲ್ಲಿ
ದೇಹವು ಬ್ರಹ್ಮವು ಒಂದೆಯೋ
ದೇಹವು ಇಹುದು ಬ್ರಹ್ಮದಲ್ಲಿ

ಮಾಯೆಯ ಬಿಟ್ಟು ಬ್ರಹ್ಮವು ಎಂದೆನೆ
ಮಾಯೆಯ ಬಿಟ್ಟು ಬ್ರಹ್ಮೆಲ್ಲಿ
ಕಾಯ ಬಿಟ್ಟು ಆತ್ಮವು ಎಂತೆನೆ
ಕಾಯುವ ಬಿಟ್ಟು ಆತ್ಮೆಲ್ಲಿ

ಪಿಂಡವ ಬಿಟ್ಟು ಬ್ರಹ್ಮಾಂಡವೆಂತೆನೆ
ಪಿಂಡಾಂಡಿಲ್ಲದೆ ಬ್ರಹ್ಮಾಂಡವೆಲ್ಲಿ
ಖಂಡವ ಬಿಟ್ಟಾ ಖಂಡವೆಂತೆನೆ
ಖಂಡವ ಬಿಟ್ಟು ಅಖಂಡವದೆಲ್ಲಿ

ಜಗವನು ಬಿಟ್ಟು ತನ್ನನು ತೋರನೆ
ಜಗವನು ಬಿಟ್ಟು ತಾನೆಲ್ಲಿ
ಜಗಪತಿ ಚಿದಾನಂದ ಸದ್ಗುರು ನೀನು ನೀ
ಜಗಸಂಶಯವೆಲ್ಲಿ

422
ಮಲ್ಲಿಗೆ ಮಳೆಗರೆವುದ ಕಂಡೆ

ಕಣ್ಣಿನೊಳು ಕಣ್ಣುಕಂಡೆ ಕಾಣಬಾರದನು ಕಂಡೆ
ನೋಡಿ ಕಣ್ಣಿನೊಳು ಪನ್ನಗಧರನ ಕಂಡೆ

ಝಗ ಝಗಿಸುವುದನು ಕಂಡೆ ಮಲ್ಲಿಗೆ ಮಳೆಗರೆವುದ ಕಂಡೆ
ನೋಡಿ ಕಣ್ಣಿನೊಳು ನಿಗಿನಿಗಿ ಕಿಚ್ಚು ಸುರಿಸುವುದ ಕಂಡೆ

ಮುತ್ತು ಸುರಿವುದ ಕಂಡೆ ಮಲ್ಲಿಗೆ ಮಳೆಗರೆವುದ ಕಂಡೆ
ನೋಡಿ ಕಣ್ಣಿನೊಳು ರತ್ನದ ಕಾಂತಿ ಕಂಡೆ

ಸಾಧು ಸತ್ಪುರುಷರ ಕಂಡೆ ಸಾಕ್ಷನ್ನಿರುಪಾಧಿಯ ಕಂಡೆ
ನೋಡಿ ಕಣ್ಣಿನೊಳು ಗುರು ಚಿದಾನಂದನ ಕಂಡೆ

423
ಗುಣವೆಲ್ಲ ಕಳಕೊಂಡೆ

ಎಂಥಾ ಗಾರುಡಿಗಾ ಸದ್ಗುರು
ಗುರುವಿನ ನಂಬಿ ನಾ ಗುಣವೆಲ್ಲ ಕಳಕೊಂಡೆ

ಶರಣು ಮಾಡೆಂದರೆ ಶರಣು ಮಾಡಲು ಪೋದೆ
ಕರದೊಳು ಇದ್ದ ನಿಜಭೂತಿ
ಶಿರದ ಮೆಲೆ ಎನ್ನ ಮೈಮೇಲೆ ಎಳೆಯಲು
ಶರೀರವ ಮರೆತು ನಾ ಸಾಕ್ಷಿಯಾದೆನು

ಯಾರೂ ಇಲ್ಲದ ನೋಡಿ ಬೇರೆನ್ನ ಕರೆದೊಯ್ದು
ಮರಕಿವಿಯೊಳು ಇಟ್ಟು ಮಂತ್ರಿಸಿದ
ನಾರಿ ಬದುಕು ಮನೆಮಕ್ಕಳನೆಲ್ಲ
ಸೇರಿ ಸೇರದಂತೆ ಮಾಡಿದನೆ ಗುರು

ಭವಗೇಡಿ ಕುಲಗೇಡಿ ಸಂಗಗೇಡಿಯಾದೆ
ಇವರ ವಿಶ್ವಾಸದ ಫಲದಿಂದಾಗಲೇ
ಇವರ ಮೇಲೆ ಎನ್ನ ವ್ಯಾಕುಲ ಹತ್ತಲು
ವ್ಯವಹಾರವೆಂಬುದು ಎಡವಟ್ಟಾಯಿತು

ಮಂತ್ರಿಸಿದಾಗಳೆ ಮರುಳು ಎನ್ನ ಮನ
ಮಂತ್ರ ತಂತ್ರಕೆ ಬಗ್ಗಿತಲ್ಲ
ಮಂತ್ರದ ಮಹಿಮೆಯು ಮಹಾಮಹಿಮನ ಕೈ
ಮಾಂತ್ರಿಕರೊಳು ಬಲು ದೊಡ್ಡವನೆ ಗುರು

ಇವರ ನಂಬಿದ ಮೇಲೆ ಇವರಂತೆ ಆಗದೆ
ಭುವನಕ್ಕೆ ಬಂದುದು ಫಲವೇನು?
ವಿವರಿಸಿ ಹುರುಳಿಲ್ಲ ಹೇಳು ಕೇಳುವದೇನು
ಭುವನ ರಕ್ಷಕ ಚಿದಾನಂದ ತಾನಾದನು

424
ಶಕುನದ ಹಕ್ಕಿ

ಸೈ ಶಬಾಸ ಗಬರು ದರೋಡೆ ಬರತದ
ಅಬಬ ನೋಡಿದರ ಅರ್ಭಾಟ
ಸಬದ ಐತಿದು ಸಾಧುರ ಪುಣ್ಯ
ಶುಭ ನುಡೀತದ ಶಕುನದ ಹಕ್ಕಿ

ಐದು ಮಂದಿ ನೆಲಗಳ್ಳರು ಕೂಡಿ
ಸಾರಿ ಆತ್ಮದಲಿ ಸೇರುವರು
ಐಕ್ಯದಿಂದ ಶ್ರೀಗುರುವಿನ ನೆನೆದರೆ
ಐದು ಮಂದಿ ಬಿಟ್ಟೋಡುವರು

ಎಂಟು ಹತ್ತು ಮಂದಿ ಬಂಟರು ಕೂಡಿ
ಮುತ್ತಿಗೆ ಹಾಕಿ ನಿನ್ನ ಕೆಡಹುವರು
ಸತ್ಯನಾದ ಶ್ರೀಗುರುವಿನ ನೆನೆದರೆ
ಹತ್ತು ಮಂದಿ ಬಿಟ್ಟೋಡುವರು

ನೋಡಿ ಒಂದನೊಗಿ ಕಾಡವು ಹುಲಿಗಳು
ಬೇಡಿದ ಪದಾರ್ಥ ದೊರಕುವದು
ಕೂಡಿ ಭಜಿಸೊ ಶ್ರೀ ಚಿದಾನಂದ
ಮೂಲಮಂತ್ರ ಪ್ರಣವ ದೊರಕದು

425
ಯಮನೇಮ ಬೇಡ

ವೇದ ಬೇಡ ನಿನಗೆ ಶಾಸ್ತ್ರ ಬೇಡ
ಗೋಧಿಕಾಳಿನಷ್ಟು ಭಕ್ತಿಯಿದ್ದರೆ ಸಾಕು
ಆವಾವ ಉಪವಾಸ ಬೇಡ | ಅಡವಿ ಸೇರಬೇಡ
ಕಾವಿ ಕಮಂಡಲ ಧರಿಸಲು ಬೇಡ

ಯೋಗ ಮಾಡಲು ಬೇಡ
ಯಮ ನೇಮವು ಬೇಡ
ಎಲ್ಲಿಗ್ಹೋಗದೆ ದೃಷ್ಟಿ
ಅಲ್ಲೆ ನಿಲ್ಲಿಸಿದರೆ ಸಾಕು

ಮೂಗ ಹಿಡಿಯಲು ಬೇಡ
ಮುಖ ಬಿಗಿಯಲು ಬೇಡ
ಆದಿಯೊಂದಾದಿ ನೀರಲಿ
ಮುಳುಮುಳಗಲಿ ಬೇಡ

ಎರಡು ದೃಷ್ಟಿಯು ಕೂಡಿ
ಇರಲಿರಲಿ ಒಂದೂ
ಶರೀರದೊಳಗೆ ಬಯಲಾಗಿ
ಅರುವು ಅಪ್ಪುವುದೊ

ಅರುವಿಗೆ ಅರಿವುಂಟೋ
ಗುರುವಿಗೆ ಗುರುವುಂಟೋ
ಗುರು ಚಿದಾನಂದನ
ಗುರುತ್ತಿದ್ದರೆ ಸಾಕೋ!

426
ಕೋಟಿ ಮಿಂಚಿನ ಬೆಳಕು

ಹ್ಯಾಂಗ ಮರೆಯಲಿ | ಗುರುವಿನ
ಹ್ಯಾಂಗ ಮರೆಯಲೀ

ಹ್ಯಾಂಗ ನಾನು ಮರೆಯಲವನ
ಶರೀರದಾಶೆಯ ಬಿಡಿಸಿದವನ
ಪರಿಪರಿಯಿಂದ ತಿಳಿಸಿ ಎನ್ನೊಳು
ಪರಬ್ರಹ್ಮನ ತೋರಿಸಿದವನ

ಮೂಢತನದಿ ಹೇಡಿ | ನಾನು
ಆದೆನೋ ಬಲು ಖೋಡಿ
ಮನಸಿನ ಬೆನ್ಹತ್ತಿ | ಕೇಡು
ಮಾಡಿಕೊಂಡೆನೊ ಅತಿ
ಬಾಡಿಗೆತ್ತಿನಂತೆ ದುಡಿದು ದುಡಿದು

ಕಾಡಜನ್ಮ ತಿರುಗಿ ಕೆಟ್ಟೆನು
ಮೂರು ಮಂದಿ ಪ್ರೀತಿಯ | ಗೆಳೆಯರ
ಮೋಹವ ಬಿಡಿಸಿದನು
ಆರು ಮಂದಿ ವೈರಿಗಳನು
ಊರ ಹೊರಗೆ ಹಾಕಿದನು
ಪರಮಾರ್ಥದ ತತ್ವದೊಳು ಮನವ
ಸ್ಥಿರವಾಗಿ ನಿಲ್ಲಿಸಿಬಿಟ್ಟನು
ಎಂಟು ಮಂದಿ ಬಂಟರ | ಹೊಡೆದು
ಸೊಂಟವ ಮುರಿದನು
ಏಳು ಪಾಳೇಗಾರರ | ಕಟ್ಟಿ
ಗೋಳು ಹಿಡಿಸಿದನು
ಕಾಳಗತ್ತಲೆಯ ಮನೆಯೊಳಗ
ಕೋಟಿ ಮಿಂಚಿನ ಬೆಳಕ ತೋರಿದನು

ಒಂಬತ್ತು ಬಾಗಿಲಗಳಿಗೆಲ್ಲಾ
ಕೀಲಿ ಹಾಕಿದನು
ಮತ್ತೆ ನಾನು ಭವಕೆ | ಮರಳಿ
ಬರದಂತೆ ಮಾಡಿದನು
ಸುತ್ತು ಮುತ್ತು ಎತ್ತ ನೋಡಲು
ಚಿತ್ತು ಚಿದಾನಂದದಿ ಬೆರೆಸಿದನು

427
ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೇನು

ಆಧ್ಯಾತ್ಮ ಹೆಚ್ಚೇನು ಅವಿದ್ಯೆ ಕಡಿಮೇನು
ಆಧ್ಯಾತ್ಮ ವಿದ್ಯೆಯನು ಅನುಭವಿಸಲರಿಯದವಗೆ ಪ

ಪುಸ್ತಕಂಗಳ ಪಿಡಿದು
ಪುಸ್ತಕದೊಳಿದ್ದುದನು ವಿಸ್ತರಿಸಿ ಎಲ್ಲರಿಗೆ ಹೇಳುತಿಹನು
ಪುಸ್ತಕದ ಅರ್ಥವನು ಮನಕೆ ತಾರದಲೆ
ಪುಸ್ತಕದ ಅಕ್ಷರವ ಪೇಳುವವಗೆ 1

ಜ್ಞಾನವನು ಹೇಳುತಿಹ
ಜ್ಞಾನವನು ತಾನರಿಯ
ಜ್ಞಾನಿಗಳ ನಡೆಯನು ಮೊದಲೆ ತಿಳಿಯ
ಜ್ಞಾನಿಗಳನೇ ಕಂಡು ಜ್ಞಾನವಿಲ್ಲೆಂದೆಂಬ
ಜ್ಞಾನಿ ತಾನೆಂತೆಂದು ಬರೆ ಬಣ್ಣಿಸುವವಗೆ 2

ದೇವತಾರ್ಚನೆ ಜಪವ ತಪವ ದಂಭದಿ ತಾಳ್ದು
ಪಾವುಗೆಯ ಮೆಟ್ಟಿ ಸುಳಿಸುಳಿದಾಡುತ
ಸಾಧಿಸದೆ ಪುಣ್ಯ ಪುರುಷರ ನೆಲೆಯ ತಿಳಿಯದೆಲೆ
ದೇವ ತಾನೆಂದು ಬರೆ ಬೋಧಿಸುವವಗೆ 3

ಯೋಗೀಶ್ವರರ ಕಂಡು ಯೋಗದಿಂದೇನೆಂಬ
ಯೋಗವಳವಟ್ಟತೆರನಂತೆ ನುಡಿದ
ಯೋಗಾಮೃತದ ಪೂರ್ಣರಸವ ಸವಿದುಣ್ಣದಲೆ
ಯೋಗಿ ತಾನೆಂದು ಬರೆ ತೋರುತಿರುವವಗೆ 4

ಮಾಡಿದಡೆ ಬಹದಲ್ಲ
ಕೇಳಿದಡೆ ಬಹದಲ್ಲ
ಆದರಿಸಿ ಒಬ್ಬರಿಗೆ ಹೇಳಿದಡೆ ತಾ ಬರದು
ಸಾಧಿಸಿಯೆ ಮನನದಭ್ಯಾಸದಿಂ ದೃಢವಾಗಿ
ವಾದ ಹರ ಚಿದಾನಂದ ತಾನಾದರಲ್ಲದೆ 5

428
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತದೆ

ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತದೆ
ಕೇಳಕ್ಕಯ್ಯ ನಾ ಮಾಡಿದ ಮದುವೆ ಮನಸಿಗೆ ಬರುತದೆ ಪ

ಮುಂಡಕೆ ದಂಡೆಯ ಮುಡಿಸಿದೆ
ಮುಸುಕಿಲಿ ಸೋಬಾನ ಹಾಡಿದೆ
ಮುಂಡಕೆ ರುಂಡವ ಕೂಡಿಸಿದೆ
ಮಂಗಳಾರತಿ ಬೆಳಗಿಸಿದೆ 1

ಕೋತಿಯು ಅಲ್ಲಿ ಕುಣಿಯುತ್ತಿತ್ತು
ಕೋಣವು ಮದ್ದಳೆ ಬಾರಿಸುತ್ತಿತ್ತು
ಕೋತಿಯ ಕಾಲನು ಮುರಿದೆ
ಕೋಣನ ಮದ್ದಳೆ ಮುರಿದೆ 2

ಹಾರುವನನು ಕಟ್ಟಿ ಹಾಕಿಸಿದೆ
ಹಾದಿಲಿ ದೀಪವ ಹಿಡಿಸಿದೆ
ಮೂರು ಮನೆಯ ಮೇಲಟ್ಟದಲ್ಲಿ
ಮೆರವಣಿಗೆಯನ್ನೇ ಮಾಡಿಸಿದೆ 3

ಒಳ್ಳೆ ಬೀಗರ ಬೆಳ್ಳಿ ತಳಿಗೆಯಲಿ
ಎಲ್ಲರ ಒತ್ತೊತ್ತಾಗಿ ಕೂರಿಸಿದೆ
ಬೆಲ್ಲದ ಪರಮಾನ್ನವನೆ ಉಣಿಸಿದೆ
ಬೆಳ್ಳನೆ ಉಡುಗೊರೆ ಹೊದಿಸಿದೆ 4

ಗುಡ್ಡ ಮೂರ ಕೊನೆಯಲಿದ್ದ
ಅಡ್ಡಗಲದೆ ದೇವರ ಮನೆಗೊಯ್ದು
ದೊಡ್ಡ ಚಿದಾನಂದ ಗುರುವಿಗೆ ನಾ
ಅಡ್ಡಗೆಡವಿ ಮದುವೆ ಮುಗಿಸಿದೆ 5

429
ವೇದ ಬ್ಯಾಡಾ ನಿನಗೆ ಶಾಸ್ತ್ರ ಬ್ಯಾಡಾ

ವೇದ ಬ್ಯಾಡಾ ನಿನಗೆ ಶಾಸ್ತ್ರ ಬ್ಯಾಡಾ
ಗೋದೀಕಾಳಿನಷ್ಟು ದೃಷ್ಟಿ ನಿಲಸಿದರೆ ಸಾಕು ಪ

ಆವಾವ ಉಪವಾಸ ಬ್ಯಾಡಾ ಅಡವೀ ಸೇರಲಿ ಬ್ಯಾಡಾ
ಕ್ಯಾವಿ ಕಮಂಡಲು ಧರಿಸಬ್ಯಾಡಾ 1

ಯೋಗ ಮಾಡಲು ಬ್ಯಾಡಾ ಯಮ ನೇಮವು ಬ್ಯಾಡಾ
ಎಲ್ಲಿ ಹೋಗದೆ ದೃಷ್ಟಿ ಅಲ್ಲೇ ನಿಲಸಿದರೆ ಸಾಕು 2

ಮೂಗ ಹಿಡಿಯಲಿ ಬ್ಯಾಡಾ ಮುಕಳಿ ಬಿಗಿಯಲಿ ಬ್ಯಾಡಾ
ಕಾಗಿಯಂದದಿ ನೀರೋಳ್ ಮುಳುಗಬ್ಯಾಡಾ 3

ಎರಡೂ ದೃಷ್ಟಿಯು ಕೂಡಿ ಇರಲಿಕ್ಕೆ ಒಂದು
ಶರೀರದೋಳ್ ಬೈಲಾಗಿ ಅರವು ಅಪ್ಪುವದು 4

ಅರವೀಗೆ ಅರವುಂಟು ಗುರುವಿಗೆ ಕುರುಹುಂಟು
ಗುರು ಚಿದಾನಂದನ ಗುರುತು ಇದ್ದರೆ ಸಾಕು 5