ಕರ್ನಾಟಕದಲ್ಲಿ ನೃತ್ಯ ಕಲೆಗೆ ಪ್ರಸಿದ್ಧವಾಗಿದ್ದ ಸ್ಥಳಗಳಲ್ಲಿ ಒಂದು-ಮೂಗೂರು. ಆ ಪರಂಪರೆಗೆ ಸೇರಿದ. ನೃತ್ಯ ಕಲಾವಿದಯಾಗಿದ್ದ ಶ್ರೀಮತಿ ಪುಟ್ಟಮ್ಮನವರ ಮಗಳು ಶ್ರೀಮತಿ ಚಿನ್ನಮ್ಮನವರು ಹುಟ್ಟಿದುದು ಮೈಸೂರು ನಗರದಲ್ಲಿ ೧೦-೬-೧೯೧೦ರಂದು. ಬಾಲ್ಯ ಪಾಠ ತಾಯಿಯವರಿಂದ. ಅನಂತರ ಮೈಸೂರಿನಲ್ಲಿ ನಾಟ್ಯ ಸರಸ್ವತಿ ಎಂದು ಪ್ರಶಂಸೆಗೆ ಪಾತ್ರಾಗಿದ್ದ ಜೆಟ್ಟಿ ತಾಯಮ್ಮನವರಿಂದ. ಮುಂದೆ ಆಸ್ಥಾನ ವಿದ್ವಾಂಸರಾಗಿದ್ದ ನಾಟ್ಯಾಚಾರ್ಯ ತಿರುಚಿಗೋಂಡು ಸುಬ್ರಹ್ಮಣ್ಯಪಿಳ್ಳೆಯವರಿಂದ ನೃತ್ಯ ಕಲೆಯಲ್ಲಿ ಇನ್ನೂ ಹೆಚ್ಚಿನ ಶಿಕ್ಷಣ. ಜೊತೆಗೆ ಸಂಗೀತದಲ್ಲಿಯೂ ಶಿಕ್ಷಣ. ಮೊದಲು ಆಸ್ಥಾನ ವಿದ್ವಾಂಸರಾಗಿದ್ದ ಗಾನ ವಿಶಾರದ ಬಿಡಾರದ ಕೃಣಪ್ಪನವರಿಂದ, ಅನಂತರ ಆಸ್ಥಾನ ವಿದ್ವಾಂಸ ಗಾನ ವಿಶಾರದ ಡಾ|| ಬಿ. ದೇವೇಂದ್ರಪ್ಪನವರಿಂದ. ಮೈಸೂರು ಅರಮನೆ ಅಲ್ಲದೆ ರಾಜ್ಯದ ಮುಖ್ಯ ಸಾಂಸ್ಕೃತಿಕ ಕೇಂದ್ರಗಳಲ್ಲೆಲ್ಲಾ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿಗಳಿಗೆ ಭರತನಾಟ್ಯದಲ್ಲಿ ಶಿಕ್ಷಣವನ್ನು ನೀಡುತ್ತಿದ್ದರು. ಜೀವನದ ಸಂಧ್ಯೆಯಲ್ಲಿರುವ ಚಿನ್ನಮ್ಮನವರಿಗೆ ನಾಟ್ಯ ಕಲಾ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಮನ್ನಿಸಿ ೧೯೭೨-೭೩ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ.