ಚುಕ್ಕೆ ಸೊಪ್ಪು ಸ್ವಲ್ಪ ಹುಳಿಯಿಂದ ಕೂಡಿದ ಸೊಪ್ಪು ತರಕಾರಿ. ಇದನ್ನು ಕುಂಡಗಳಲ್ಲಿ ಸಹ ಬೆಳೆಸಿ ಬಳಸಬಹುದು. ತೂಗು ಬುಟ್ಟಿಗಳಲ್ಲಿಟ್ಟರೆ ಎಲೆಗಳು ಗೊಂಚಲಾಗಿದ್ದು ನೋಡಲು ಆಕರ್ಷಕವಾಗಿರುತ್ತವೆ. ಇದು ಪೌಷ್ಟಿಕ ಸೊಪ್ಪು ತರಕಾರಿ.

ಪೌಷ್ಟಿಕ ಗುಣಗಳು : ಈ ಸೊಪ್ಪಿನಲ್ಲಿ ಗಣನೀಯ ಪ್ರಮಾಣದ ಶರ್ಕರಪಿಷ್ಟ, ಪ್ರೊಟೀನ್, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೫.೨ ಗ್ರಾಂ
ಶರ್ಕರಪಿಷ್ಟ – ೧.೪ ಗ್ರಾಂ
ಪ್ರೊಟೀನ್ – ೧.೬ ಗ್ರಾಂ
ಕೊಬ್ಬು – ೦.೩ ಗ್ರಾಂ
ಖನಿಜ ಪದಾರ್ಥ – ೦.೯ ಗ್ರಾಂ
ನಾರು ಪದಾರ್ಥ – ೦.೬ ಗ್ರಾಂ
ಕ್ಯಾಲ್ಸಿಯಂ – ೬೩ ಮಿ.ಗ್ರಾಂ
ರಂಜಕ – ೧೭. ಮಿ.ಗ್ರಾಂ
ಕಬ್ಬಿಣ – ೮.೭ ಮಿ.ಗ್ರಾಂ
’ಎ’ ಜೀವಸತ್ವ – ೬೧೦೦ ಐ.ಯೂ
ಥಯಮಿನ್ – ೦.೦೫ ಮಿ.ಗ್ರಾಂ
ರೈಬೋಫ್ಲೇವಿನ್ – ೦.೦೬ ಮಿ.ಗ್ರಾಂ
’ಸಿ’ ಜೀವಸತ್ವ – ೧೨. ಮಿ.ಗ್ರಾಂ
ನಿಕೋಟಿನಿಕ್ ಆಮ್ಲ – ೦.೨ ಮಿ.ಗ್ರಾಂ


ಔಷಧೀಯ
ಗುಣಗಳು ಇದರಲ್ಲಿ ಕಬ್ಬಿಣದ ಅಂಶ ಇರುವ ಕಾರಣ ಶುದ್ಧ ರಕ್ತ ಹೆಚ್ಚುವಂತೆ ಮಾಡಬಲ್ಲದು. ಜೀವಸತ್ವಗಳು ಇರುವ ಕಾರಣ ರೋಗ ನಿರೋಧಕ ಸಾಮರ್ಥ್ಯ ಹಾಗೂ ಕಣ್ಣುಗಳ ದೃಷ್ಟಿ ಸುಧಾರಿಸುತ್ತವೆ.

ಉಗಮ ಮತ್ತು ಹಂಚಿಕೆ : ಇದರ ತವರೂರು ನೈಋತ್ಯ ಏಷ್ಯ ಹಾಗೂ ಉತ್ತರ ಆಫ್ರಿಕಾ, ಭಾರತದ ಆದ್ಯಂತ ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೇಸಾಯದಲ್ಲಿದೆ.

ಸಸ್ಯ ವರ್ಣನೆ : ಇದು ಏಕವಾರ್ಷಿಕ ಮೂಲಿಕೆ. ಇದು ವಾಲಿಗೊನೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ. ಪೂರ್ಣ ಬೆಳೆದಾಗಿ ೧೫ ರಿಂದ ೩೦ ಸೆಂ.ಮೀ. ಎತ್ತರವಿದ್ದು, ಬಿಳಿ ಹಸುರು ಬಣ್ಣವಿರುತ್ತದೆ. ಎಲೆಗಳು ಚಪ್ಪಟೆಯಾಗಿ, ಅದುಮಿದಂತಿದ್ದು ಅಂಡಾಕಾರ ಇಲ್ಲವೇ ಓರೆಯಾಗಿದ್ದು, ೨.೫-೭.೫ ಸೆಂ.ಮೀ. ಉದ್ದವಿರುತ್ತವೆ. ಹೂವು ಸಣ್ಣ ತೊಟ್ಟುಗಳಿಂದ ಕೂಡಿದ್ದು ತೆನೆ ಅಥವಾ ಗೊಂಚಲುಗಳಲ್ಲಿ ಬಿಟ್ಟಿರುತ್ತವೆ. ಹೂಗೊಂಚಲು ಎಲೆತೊಟ್ಟುಗಳಿಗೆ ಅಭಿಮುಖವಾಗಿ, ತುದಿಯಲ್ಲಿ ಮೂಡುತ್ತವೆ. ಬೀಜ ಬಲು ಸಣ್ಣವು.

ಹವಾಗುಣ :  ಇದು ಎಲ್ಲಾ ತೆರನಾದ ಹವಾಗುಣದಲ್ಲಿ ಬೆಳೆಯಬಲ್ಲದು. ಚೆನ್ನಾಗಿ ಮಳೆಯಾಗುವ ಪ್ರದೇಶಗಳಲ್ಲಿ ಹುಲುಸಾಗಿ ಫಲಿಸುತ್ತದೆ.

ಭೂಗುಣ : ಇದಕ್ಕೆ ನೀರು ಬಸಿಯುವ ಮರಳು ಮಿಶ್ರಿತ ಗೋಡು ಸೂಕ್ತ. ತಗ್ಗು ಹಾಗೂ ಜೌಗು ಪ್ರದೇಶಗಳನ್ನು ಆರಿಸಿಕೊಳ್ಳಬಾರದು.

ತಳಿಗಳು : ಇದರಲ್ಲಿ ಹೆಸರಿಸುವಂತಹ ತಳಿಗಳಾವುವೂ ಇಲ್ಲ. ಸ್ಥಳೀಯ ಬಗೆಗಳನ್ನೇ ನೆಟ್ಟು ಬೆಳೆಸಬೇಕು.

ಸಸ್ಯಾಭಿವೃದ್ಧಿ : ಬೀಜ ಊರಿ ಬೆಳೆಸುವುದು ಸಾಮಾನ್ಯ. ಇದರ ಬೀಜ ಗಾತ್ರದಲ್ಲಿ ಸಣ್ಣವು. ಸಮನಾಗಿ ಹಂಚಿಕೆಯಾಗಲು ಅವುಗಳ ೨೦-೩೦ ಪಟ್ಟು ಸಣ್ಣ ಮರಳು ಇಲ್ಲವೇ ಪುಡಿಗೊಬ್ಬರ ಬೆರೆಸಿ ಬಿತ್ತಬೇಕು.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಅನುಕೂಲಕ್ಕೆ ತಕ್ಕಂತೆ ಚೌಕ ಮಡಿಗಳನ್ನು ತಯಾರಿಸಿ, ತಿಪ್ಪೆಗೊಬ್ಬರ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಬೀಜವನ್ನು ತೆಳ್ಳನೆಯ ಗೀರು ಸಾಲುಗಳಲ್ಲಿ ಬಿತ್ತಿ, ಮೇಲೆ ಪುಡಿಗೊಬ್ಬರ ಉದುರಿಸಿದರೆ ಸಾಕು. ಹೆಕ್ಟೇರಿಗೆ ೨ ಕಿ.ಗ್ರಾಂ ಬೀಜ ಬೇಕಗುತ್ತದೆ. ವರ್ಷದ ಯಾವ ಕಾಲದಲ್ಲಾದರೂ ಬಿತ್ತಬಹುದು.

ಗೊಬ್ಬರ : ಹೆಕ್ಟೇರಿಗೆ ೧೫-೨೦ ಟನ್ ತಿಪ್ಪೆಗೊಬ್ಬರ ಹಾಕಬೇಕಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬಳಕೆ ಬಗ್ಗೆ ತಿಳಿದುಬಂದಿಲ್ಲ.

ನೀರಾವರಿ : ಮಳೆಗಾಲದಲ್ಲಿ ನೀರು ಕೊಡುವ ಅಗತ್ಯವಿಲ್ಲ. ಇತರ ದಿನಗಳಲ್ಲಿ ೪-೫ ದಿನಗಳಿಗೊಮ್ಮೆ ನೀರು ಹಾಯಿಸಬೇಕಾಗುತ್ತದೆ

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಈ ಬೆಳೆಗೂ ಸಹ ಕಳೆಗಳ ಬಾಧೆ ಇದ್ದೇ ಇರುತ್ತದೆ. ಪ್ರಾರಂಭದ ದಿನಗಳಲ್ಲಿ ಕಳೆಗಳನ್ನು ಕಿತ್ತು ತೆಗೆಯಬೇಕು.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಸೊಪ್ಪನ್ನು ಕಿತ್ತು ಬಳಸಬಹುದು. ಕೆಲವೊಮ್ಮೆ ಗೊಂಚಲುಗಳಿಂದ ಕೂಡಿದ ಎಲೆಗಳನ್ನು ಮಾತ್ರವೇ ಕೊಯ್ಲು ಮಾಡುವುದುಂಟು. ಚಿಗುರು ಕುಡಿಗಳೂ ಸಹ ಉತ್ಕೃಷ್ಟ ತರಕಾರಿಯೇ. ಹೆಕ್ಟೇರಿಗೆ ೮ ಟನ್ನು ಸೊಪ್ಪು ಸಾಧ್ಯ; ಎರಡು ಮೂರು ತಿಂಗಳ ಕಾಲ ಸೊಪ್ಪು ಸಿಗುತ್ತಿರುತ್ತದೆ

ಕೀಟ ಮತ್ತು ರೋಗಗಳು : ಇದಕ್ಕೆ ಹಾನಿಯನ್ನೆಸಗುವ ಕೀಟ ಮತ್ತು ರೋಗಗಳಾವುವೂ ವರದಿಯಾಗಿಲ್ಲ.

* * *