ಉತ್ತಮ ಸಂಗೀತ ಕಲಾವಿದರು ಉತ್ತಮ ಸಂಗೀತ ಶಿಕ್ಷಕರಾಗಿರುವುದು ತುಂಬ ವಿರಲ. ಅಂತಹ ವಿರಳರಲ್ಲಿ ಶ್ರೀ ಚೆನ್ನವೀರ ಬನ್ನೂರ ಗವಾಯಿಗಳು ಒಬ್ಬರು. ಅವರು ಜನಿಸಿದ್ದು ೧-೬-೧೯೪೩ರಲ್ಲಿ; ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬನ್ನೂರ ಗ್ರಾಮದಲ್ಲಿ. ತಂದೆ ಶ್ರೀ ರುದ್ರಪ್ಪ ತಾಯಿ ಶ್ರೀಮತಿ ಪಾರ್ವತೆವ್ವ ತಂದೆಯವರು ಬಯಲಾಟದ ಪ್ರಸಿದ್ಧ ಕಥೆಗಾರರಾಗಿದ್ದರು. ಸಂಗೀತದಲ್ಲೂ ಅವರಿಗೆ ವಿಶೇಷ ಆಸಕ್ತಿಯಿತ್ತು. ಈ ವಾತಾವರಣ ಬಾಲ್ಯದಲ್ಲಿಯೇ ಚನ್ನವೀರ ಅವರನ್ನು ಸಂಗೀತ ಕಲೆಯತ್ತ ಸೆಳೆದೊಯ್ಯುವಲ್ಲಿ ಸಫಲವಾಯಿತು. ಜೇಕಿನ ಕಟ್ಟಿ ಶ್ರೀ ಚನ್ನಬಸಯ್ಯ ಹಾಗೂ ಊರ ಹಿರಿಯರ ಸಹಕಾರದಿಂದ ಚನ್ನವೀರ ಅವರು ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಬಂದು ಪಂ. ಡಾ. ಪುಟ್ಟರಾಜ ಗವಾಯಿಗಳ ಶಿಷ್ಯತ್ವ ವಹಿಸಿ ೮ ವರ್ಷಗಳ ಕಾಲ ಹಾಡುಗಾರಿಕೆ ಹಾಗೂ ಹಾರ್ಮೋನಿಯಂ ವಾದನದಲ್ಲಿ ಪರಿಣತಿ ಪಡೆದರು. ಸಂಗೀತ ವಿದ್ಯೆ ಪಡೆದ ನಂತರ ೨ ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಸಂಗೀತ ವಿದ್ಯಾ ಪಾರಂಗತರಾದ ಶ್ರೀ ಚನ್ನವೀರ ಬನ್ನೂರ ಅವರು ೧೯೭೫ರಲ್ಲಿ ವಿಜಾಪುರಕ್ಕೆ ಬಂದು ಅಲ್ಲಿ ಶ್ರೀ ಗುರು ಪಂಚಾಕ್ಷರ ಸಂಗೀತ ಪಾಠಶಾಲೆ ಎಂಬ ಸಂಗೀತ ಸಂಸ್ಥೆ ಸ್ಥಾಪಿಸಿ ಇದುವರೆಗೆ ನೂರಾರು ಆಸಕ್ತರಿಗೆ ಸಂಗೀತ ವಿದ್ಯೆ ನೀಡಿ ಶಿಷ್ಯ ಸಂಪತ್ತನ್ನೂ ಬೆಳೆಸಿದ್ದಾರೆ. ಬಾಗಲಕೋಟೆಯ ನಟರಾಜ ಸಂಗೀತ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಣವನ್ನು ಅನೇಕ ವರ್ಷಗಳಿಂದ ನೀಡುತ್ತಿದ್ದಾರೆ. ಅಧ್ಯಾಪಕ ಸೇವೆಯೊಂದಿಗೆ ಕರ್ನಾಟಕ ಸರ್ಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಸಂಗೀತ ಸೀನಿಯರ್ ಗ್ರೇಡ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ , ವಿದ್ವತ್‌ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಹಾಗೂ ಗಾಂದರ್ವ ಮಹಾ ವಿದ್ಯಾಲಯದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಂಧ, ಅನಾಥ, ಅಂಗವಿಕಲ, ಹಿಂದುಳಿದ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ವಿದ್ಯೆ ನೀಡಿದ್ದಾರೆ. ಅವರ ಶಿಷ್ಯರನೇಕರು ಸರ್ಕಾರಿ ಪ್ರಾಥಮಿಕ ಶಾಲೆ, ಹೈಸ್ಕೂಲು, ನವೋದಯ ಮತ್ತು ಕೇಂದ್ರಿಯ ವಿದ್ಯಾಲಯಗಳಲ್ಲಿ ಸಂಗೀತ ಶಿಕ್ಷಕರಾಗಿ, ಸಂಗೀತಗಾರರಾಗಿ ನಾಡಿನಾದ್ಯಂತ ಹೆಸರು ಗಳಿಸುತ್ತಿದ್ದಾರೆ.

ಆಕಾಶವಾಣಿ ಕಲಾವಿದರೂ ಆಗಿರುವ ಶ್ರೀ ಚೆನ್ನವೀರ ಬನ್ನೂರ ಅವರಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅಂಥವುಗಳಲ್ಲಿ ಉಜ್ಜಯಿನಿ ಜಗದ್ಗುರುಗಳ ‘ಗಾನ ವಿಶಾರದ’, ಕಂಪ್ಲಿಯ ಶಿವಾನುಭವ ಸಮಿತಿಯ ‘ಗಾನಕಲಾ ನಿಪುಣ’, ಮುಧೋಳದ ‘ಸಂಗೀತ ವಿದ್ವಾನ್‌’, ಜಿಲ್ಲಾಡಳಿತದ ‘ಉತ್ತಮ ಸಂಗೀತ ಶಿಕ್ಷಕ’, ಹುಮನಾಬಾದ್‌ ನಾದ ವೇದಿಕೆಯ ‘ಗಾನ ಸಿರಿ’, ಬೆಂಗಳೂರಿನ ‘ಸಂಗೀತ ಕಲಾ ಜ್ಯೋತಿ’, ಶಿವಯೋಗ ಮಂದಿರ ‘ಸಂಗೀತ ವಿಶಾರದ’, ಜಿಲ್ಲಾಡಳಿತದ ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ (೨೦೦೧ ರಲ್ಲಿ) ‘ಕರ್ನಾಟಕ ಕಲಾಶ್ರೀ’ ಉಲ್ಲೇಖನೀಯವಾಗಿವೆ. ಬಾಗಲಕೋಟೆ ಹಾಗೂ ವಿಜಾಪುರಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಸುದೀರ್ಘ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿ ಸಂಗೀತಾರಾಧನೆಗೈಯುತ್ತಿರುವ ಶ್ರೀಯುತರು ಮೈಸೂರು ದಸರಾ, ನವರಸಪುರ, ಪಟ್ಟದಕಲ್ಲು, ಮುಧೋಳ ಹಾಗೂ ಬಾಗಲಕೋಟೆಯಲ್ಲಿ ನಡೆದ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.