ಸನಾತನ ಹಾಗೂ ಸಮ್ಮಿಶ್ರ ಸಂಸ್ಕೃತಿಯ ಭಾರತದಲ್ಲಿ ಪ್ರಮುಖವಾಗಿ ಆರ್ಯ, ದ್ರಾವಿಡ, ಮಹಮ್ಮದೀಯ, ಆಂಗ್ಲ ಜನಾಂಗಗಳ ಸಮ್ಮಿಶ್ರ ಪ್ರಭಾವದ ಅಂಶಗಳೇ ವ್ಯಾಪಕ ಹಾಗೂ ಪ್ರಮುಖವಾಗಿ ಗಣ್ಯವಾಗಿದ್ದರೂ, ಗಣನೆಗೆ ಸಿಗದಷ್ಟು ಆದಿವಾಸಿ ಬುಡಕಟ್ಟು ಅಂತೇವಾಸಿ “ಜನಸಮುದಾಯಗಳ “ಸಾಂಸ್ಕೃತಿಕ ಅಂಶಗಳು” ಮುಖ್ಯ ಪ್ರವಾಹಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ಒಡೆಬೆರಸಿರುವುದು ಒಂದು ಮಹತ್ವದ ಅಂಶ. ಸಂಸ್ಕೃತಿ ಮತ್ತು ಉಪಸಂಸ್ಕೃತಿಗಳ ಚಿಂತನೆ, ಅಧ್ಯಯನ, ದಾಖಲೆಗಳು ನಡೆಯುತ್ತಿರುವ ಈಚಿನ ದಿನಮಾನಗಳಲ್ಲಿ ಈ “ಅಂಶ” ಈಗ ಹೆಚ್ಚು ಪ್ರಖರವಾಗುತ್ತಿರುವುದು ಸಮಾಧನಾದ ಸಂಗತಿ. ಪಾಶ್ಚಾತ್ಯ ಪ್ರವಾಸಿಗಳು, ಮಾನವ ಶಾಸ್ತ್ರಜ್ಞರು ಕೊಡಮಾಡಿರುವ ದಾಖಲೆಗಳು, ದೇಶೀಯವಾದ ಸಾಹಿತ್ಯ, ಶಿಲ್ಪ, ಮುಂತಾದ ಸಾಂಸ್ಕೃತಿಕ ದಾಖಲೆಗಳಲ್ಲಿ ಉಳಿದುಬಂದಿರುವ “ತುಣುಕು”ಗಳು ಈ ಬುಡಕಟ್ಟು ವನವಾಸೀ ಜನರ ಬಗೆಗಿನ ಇತಿಹಾಸ ಪುನಾರಚನೆಗೆ ಪ್ರಮುಖ ಸಾಧನಗಳಾಗಿದ್ದರೂ ಇಂದಿಗೂ ಮೂಲ ಜೀವನ ಪ್ರವಾಹದಿಂದ ಪ್ರತ್ಯೇಕವಾಗಿ ಉಳಿದಿರುವ ಬುಡಕಟ್ಟು ಜನಸಮುದಾಯಗಳ ನೇರ ಅಧ್ಯಯನ ತೆರೆದು ತೋರುವ ಪ್ರಮುಖ ಸಂಗತಿಗಳು – ಚಿತ್ರ, ವಿಚಿತ್ರ ವೈವಿಧ್ಯಮವಾಗಿರುವುದನ್ನು ಗುರುತಿಸುತ್ತಿರುವದರಿಂದ ಈ ಬುಡಕಟ್ಟುಗಳ ಸಾಂಸ್ಕೃತಿಕ ಅಧ್ಯಯನ ಇಂದು ಭಾರತೀಯ ಸಾಂಸ್ಕೃತಿಕ ಅಧ್ಯಯನದ ಒಂದು ಪ್ರಮುಖ ಅಂಗವೇ ಆಗಿದೆ. ಈ ಆದಿವಾಸಿ ಜನಸಮುದಾಯದ ನಾಗರೀಕರಣ ನಡೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಅವರ ಮೂಲ ಸಂಸ್ಕೃತಿಯ ವೈಶಿಷ್ಟ್ಯಗಳ ದಾಖಲೆ ಮಾಡುವುದು ಅತ್ಯಾವಶ್ಯಕ. ಅಲ್ಲಿನ ಪಳೆಯುಳಿಕೆಗಳು ಪ್ರಮುಖ ಜನವಾಹಿನಿಯಲ್ಲಿ ಸಮ್ಮಿಳಿತವಾಗಿರುವ ಸಂಗತಿ ಹಾಗೂ ಆ ಬುಡಕಟ್ಟುಗಳು ಈ ಮುಖ್ಯವಾಹಿನಿಯಲ್ಲಿ ಪ್ರಭಾವಕ್ಕೊಳಗಾಗಿರುವ ವಿಷಯಗಳಿಗೆ ಚಾರಿತ್ರಿಕ ಮಹತ್ವ ಇದೆ. ಪಾಶ್ಚಾತ್ಯೀಕರಣ, ಉದಾರೀಕರಣ, ಆಧುನೀಕರಣಗಳ ಹಾವಳಿಯಲ್ಲಿ ನಮ್ಮ ದೇಶೀಯ ಸಂಸ್ಕೃತಿ ಪುಸ್ತಕದ ದಾಖಲೆಗಳಾಗಿ ಉಳಿಯುವ ಕಾಲ ಬಂದಿದೆ. ಆದರೆ, ಐತಿಹಾಸಿಕವಾಗಿ ಪರಿಶೀಲಿಸಿದರೆ ಈ ನಿರಂತರ ಚಲನಶೀಲವಾದ ಸಂಸ್ಕೃತಿ ಚಕ್ರ ಆವರ್ತನಗೊಂಡು ಮೂಲ ಅಂಶಗಳತ್ತ ಮತ್ತೆ ಹೊರಳುವ ದೂರದ ಸಾಧ್ಯತೆಗಳಿರುವುದರಿಂದ, ಇಂದಿನ ಸಮಗ್ರ ದಾಖಲೆಗಳು ಅನರ್ಥಕವಾದ ವ್ಯಾಯಾಮ ಆಗುವುದಿಲ್ಲ. ಅಲ್ಲದೆ, ಮುಂದೆ “ಪುರಾಣವಿತ್ಯೇವ”ವಾದುವುಗಳೆಲ್ಲ ಸಾಧುಸರ್ವಂ ಎಂದೇ ಆಗಬಹುದಾದ ಸಾಧ್ಯತೆಗಳು ಕಡಿಮೆಯಾದರೂ ಇವುಗಳ ಐತಿಹಾಸಿಕ ಮಹತ್ವಕ್ಕೆ ಮಾತ್ರ ಇಂದಿಗೂ ಮಾನ್ಯತೆಯಿದೆ. ಈಗ ನಮ್ಮ ಪುರಾತನ ಬೌದ್ಧ ಸಂಸ್ಕೃತಿ, ಜೈನ ಸಂಸ್ಕೃತಿಗಳ ಪುನರಧ್ಯಯನ ಪ್ರಾರಂಭವಾಗಿರುವುದೇ ಇದಕ್ಕೆ ಸಾಕ್ಷಿ.

ಅಲೆಮಾರಿಗಳಾಗಿದ್ದ ಅನೇಕ ಬುಡಕಟ್ಟು ಜನಸಮುದಾಯ ನೆಲೆಯೂರಿಗಳಾಗಿ ಸಾಂಸ್ಕೃತೀಕರಣ ಪ್ರಕ್ರಿಯೆಗೆ ಒಳಗಾದ ಲಂಬಾಣಿ, ಕೊರಗ, ಕೊರಮ ಮುಂತಾದ ಆದಿವಾಸಿಗಳ ಜೀವನ ಇತಿಹಾಸ ನಡೆ-ನುಡಿ-ನಂಬಿಕೆಗಳು, ಪ್ರಮುಖವಾಗಿ ಭಾಷಿಕ ಕೊಡುಗೆಗಳ ಬಿಡಿಬಿಡಿ ಸಂಶೋಧನೆಗಳು ಉಪಸಂಸ್ಕೃತಿ (ಪ್ರತಿ ಸಂಸ್ಕೃತಿ-ಅಲ್ಲ) ಸಮಗ್ರ ಅಧ್ಯಯನಕ್ಕೆ ದಾರಿ ತೆರೆದಿವೆ. ಡಾ|| ಬಿ.ಪಿ. ರಾಮಯ್ಯ ಅವರ ದಕ್ಷಿಣ ಕರ್ನಾಟಕದ ಕೊರಮರು ಒಂದು ಸಾಂಸ್ಕೃತಿಕ ಅಧ್ಯಯನ ಒಂದು ಗಣನೀಯ ಕೃತಿ. ಕರ್ನಾಟಕ ತಿಪಟೂರು-ತುಮಕೂರು ತೆಂಗಿನ ನಾಡಿನಲ್ಲಿ ವ್ಯಾಪಕವಾಗಿ ನೆಲೆಸಿರುವ ಕೊರಮ ಸಮುದಾಯದ ಸತ್ಪುತ್ರರೇ ಆಗಿರುವ ಡಾ|| ರಾಮಯ್ಯ ತಮ್ಮ ಜನಾಂಗದ ಅಧಿಕೃತ ವಕ್ತಾರರಾಗಿರುವರು. ವ್ಯಾಪಕವಾದ ಕ್ಷೇತ್ರಕಾರ್ಯ, ವಿಸ್ತಾರವಾದ ಅಧ್ಯಯನ ತೌಲನಿಕ ಹಾಗೂ ಸಮತೂಕದ ನಿರ್ಣಯಗಳಿಂದಾಗಿ ಇದೊಂದು ಬುಡಕಟ್ಟುಗಳ ಮಾದರಿ ಅಧ್ಯಯನವಾಗಿದೆ. ಸಮಗ್ರ ಭಾರತ ವ್ಯಾಪ್ತಿಯಾಗಿರುವ ಕೊರಮ ಜನಸಮುದಾಯದ ವಿಸ್ತಾರ ಅಧ್ಯಯನಕ್ಕೆ ದಾರಿದೀಪ ಸಂಶೋಧನೆಯಾಗಿದೆ. ಮುಂಚೂಣಿಯದೂ ಆಗಿದೆ. ಅಲ್ಲದೇ, ನಾನು ಹುಟ್ಟಿ ಬೆಳೆದ ನನ್ನ ಹಳ್ಳಿಯ ಒಂದು ಪಕ್ಕದಲ್ಲಿ ಲಂಬಾಣಿಗಳ ಮತ್ತೊಂದು ಪಕ್ಕದಲ್ಲಿ ಕೊರಮ ಕೊರಚರ ಹಟ್ಟಿಗಳಿದ್ದು, ಅವುಗಳ ನಿಕಟ ಪರಿಚಯ ನನಗೆ ಆದುದು ಈ ಸಂಶೋಧನೆಯು ಸರಿದಾರಿಯಲ್ಲಿ ನಡೆಯಲು ನೆರವಾಯಿತೆಂದು ಭಾವಿಸುವೆ. ಈ ಎರಡು ಬುಡಕಟ್ಟುಗಳ ಬಡತನದ ಬವಣೆ, ಶ್ರಮ ಜೀವನ, ಆದರೂ ವೈಶಿಷ್ಟ್ಯವೂ ರಂಜನೀಯವೂ ಆದ ಬದುಕು ದಾಖಲೀಕರಣಗೊಂಡುದು ನನಗೂ ತೃಪ್ತಿ ತಂದಿದೆ. ಲಂಬಾಣಿ ಗಿಲ್ ಗಿಲ್-ಕೊರವಂಜಿ ಕೊಕ್ಕ್‌ಕೊಕ್ಕ್‌ಕಳ್ಳ ಕೊರಮ, ಕುಳ್ಳ ಲಮಾಣಿ ಎಂಬ ಪಡೆನುಡಿಗಳು ನಮ್ಮ ಆಡುಮಾತುಗಳಲ್ಲಿ ಬೆರೆತುಕೊಂಡಿವೆ. ಕೊರವಂಜಿ ಮತ್ತು ಲಮಾಣಿ ಹೆಂಗಸರ ರಂಜನೀಯ ದೃಶ್ಯದಂತೆ ಅವರ ಬುಟ್ಟಿ ಹಣೆಯುವ ಹಚ್ಚೆ ಹಾಕುವ ದನಕರುಗಳ ವ್ಯಾಪಾರ ಉಪ್ಪು-ಸೊಪ್ಪು-ಸೌದೆ ಮಾರುವ ಉಪಜೀವನ ವಿಧಾನ ನಿಧಾನವಾಗಿ ಇಂದು ಮಾಯವಾಗುತ್ತಿದೆ. ಗ್ರಾಮೀಣ ಬದುಕಿನ ಅಂಗವೇ ಆಗಿದ್ದ ಈ ಜನಸಮುದಾಯ ಮುಖ್ಯ ಜನವಾಹಿನಿಯಲ್ಲಿ ಬೆರೆತು ಮಾಯವಾಗುತ್ತಿರುವುದು, ವ್ಯಸನದ ಸಂಗತಿ. ಆದರೂ ಅವರ ಬದುಕು ಬಂಗಾರವಾಗುವುದರತ್ತ ನಡೆದಿರುವುದು ಸಮಾಧಾನದ ಸಂಗತಿ. ಆದರೆ ಸಂಸ್ಕೃತೀಕರಣ ಪ್ರಕ್ರಿಯೆ ಸರಿದಾರಿಯಲ್ಲಿ ನಡೆಯಲೆಂಬುದೇ ನಮ್ಮ ಹಾರೈಕೆ. ಕೊರಮ ಜನರನ್ನು ಕುರಿತು ಡಾ|| ರಾಮಯ್ಯನವರ ಈ ಕಕ್ಕುಲತೆಯ ಕಳಕಳಿಯ ಮಾತುಗಳು ಗಮನಾರ್ಹ. ಕಳ್ಳತನದ ಮುಳ್ಳಿನ ಕಿರೀಟವನ್ನು ಹೊತ್ತು ಸಮಾಜ ಬಾಹಿರೆನ್ನುವಂತೆ ಬಾಳಿದ್ದರೂ, ಗ್ರಾಮೀಣ ಜನಸಾಮಾನ್ಯರ ಬದುಕಿಗೆ ನೆಮ್ಮದಿ ನೀಡುವ ಕಣಿ ಹೇಳುವ ಕಾಯಕದಿಂದ ಜನಪ್ರಿಯರಾಗಿ ಬಾಳಿ ಶತಮಾನಗಳವರೆಗೆ ಜನಜೀವನದ ಮೂಲವಾಹಿನಿಯ ಸಂಪರ್ಕದಿಂದ ದೂರವಾಗಿದ್ದರೂ ಇಂದಿಗೂ ತಮ್ಮ ಜನಾಂಗದ ವೈಶಿಷ್ಟ್ಯ, ಅನನ್ಯತೆಗಳನ್ನು ಉಳಿಸಿಕೊಂಡು ಬಂದಿರುವ ಈ ಕೊರಮ ಬುಡಕಟ್ಟು ತಮ್ಮ ಬದುಕನ್ನು ವಿಸ್ತರಿಸಿಕೊಂಡು, ನಾಡಿನಗಲಕ್ಕೂ ಹಬ್ಬಿ ಹರಡಿ, ಮುಖ್ಯ ಪ್ರವಾಹದಲ್ಲಿ ಒಡಬೆರೆತು ಮುನ್ನಡೆಯುವಂತೆ ಮಾಡಬೇಕಾದುದು ಎಲ್ಲರ ಕರ್ತವ್ಯ. ಆ ದಿಶೆಯಲ್ಲಿ ಈ ಅಧ್ಯಯನ ಒಂದು ತೋರು ಬೆರಳು. ಡಾ|| ರಾಮಯ್ಯ ಈ ಪ್ರಯತ್ನದ ಮೊದಲಿಗರಲ್ಲೊಬ್ಬರು.

ಡಾ|| ಬಿ.ಪಿ. ರಾಮಯ್ಯ, ತಿಪಟೂರು ಸಮೀಪದ ಬಿದರೇಗುಡಿಯಲ್ಲಿ ದಿ|| 15-10-1946ರಂದು ಜನಿಸಿ, ತಿಪಟೂರು ಹಾಸನ ಮೈಸೂರುಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆದು, ಡಾ|| ಎ.ವಿ. ಬಾಳಿಗಾ ಕಲೆ ಮತ್ತು ವಿಜ್ಞಾನ ಕಾಲೇಜು (ಕುಮಟಾ-ಉ.ಕ.ಜಿಲ್ಲೆ) ಇಲ್ಲಿ ಕನ್ನಡ ಉಪನ್ಯಾಸಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಜನಪ್ರಿಯ ಮೇಷ್ಟ್ರು-ಸರ್ ಆಗಿರುವುದು ಅಭಿಮಾನದ ಸಂಗತಿ. ಕೊರಮ ಜನಾಂಗದ ಶ್ರೀ ಅಂಕೇನಹಳ್ಳಿ ಪಾಪಯ್ಯ, ಮತ್ತು ಸೌ|| ಸಾವಿತ್ರಮ್ಮನವರ ನಾಲ್ವರು ಗಂಡುಮಕ್ಕಳಲ್ಲಿ ಎರಡನೆಯ ಮಗನಾಗಿ ಜನಿಸಿ, ಜೀವನ ನಿರ್ವಹಣೆಗಾಗಿ ಕೊರವಂಜಿ ವೃತ್ತಿಯನ್ನವಲಂಬಿಸಿದ ತಾಯಿಯ ಬಗಲ-ಗೋಲಿ-ಗಜ್ಜುಗ ಆಡಿ ಬೆಳೆದ, ಶಿಕ್ಷಣ-ಸಂಸ್ಕೃತಿ ಸಂಸ್ಕಾರಕ್ಕೆ ತಮ್ಮನ್ನು ತೆರೆದುಕೊಂಡು, ಕಷ್ಟ-ನಷ್ಟ ಬಡತನಗಳ ಹಸಿ-ಬಿಸಿ ಉಂಟು, ಕನ್ನಡ ಪ್ರಾಧ್ಯಾಪಕ ವೃತ್ತಿಯೇ ಕಾಯಕವಾಗಿ ಬೆಳೆದು ಶ್ರೀರಾಮಯ್ಯ ಇಂದು ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿ ರಂಗದಲ್ಲಿ ಹೆಸರು ಮಾಡಿರುವುದು ಅತ್ಯಂತ ಸಾಹಸದ ಮಾತು. ತಮ್ಮ ಸಣ್ಣಕತೆ, ಲೇಖನಗಳ ಮೂಲಕ ಜನಪ್ರಿಯರಾಗಿ, ಅಧ್ಯಾಪಕ ವೃತ್ತಿಯಲ್ಲಿ ಜಾನಾನುರಾಗಿಯಾಗಿ, ಕುಮಟಾದಂಥ ನಾಗರಿಕ ಪಟ್ಟಣದ ಜನಸಮುದಾಯದೊಡನೆ ಕೂಡಿ ಬಾಳಿ, ಬೆಳೆದು ಕೊರಮರ ರಾಮಪ್ಪ ಪ್ರೊ. ರಾಮಯ್ಯನವರು ಆಗಿರುವುದು ಅದೆಂಥ ಸಾಧನೆ, ಅದೆಷ್ಟರ ಸಾಹಸ-ಪ್ರಯತ್ನ! ಸಹೋದರರಾದ ಶ್ರೀ ನಂಜಪ್ಪ ಮತ್ತು ಕೃಷ್ಣಯ್ಯನವರ ಶಿಕ್ಷಣ, ಉದ್ಯೋಗ ಜೀವನದ ನೆಲೆಗೆ ಸಹಾಯಕರಾಗಿ ನಿಂತು, ಬಿದರೇ ಗುಡಿಯ ಗೌರವದ ಮಗ ಆಗಿರುವ ಶ್ರೀ ರಾಮಯ್ಯ ಸುಖ ಸಂಸಾರಿ. ಪತ್ನಿ (ಸರಕಾರಿ ನೌಕರಿಯ) ಶ್ರೀಮತಿ ಸಿದ್ದಮ್ಮ, ಒಂದು ಗೊಂಚಲಿನ ಮೂರು ಮಾವಿನ ಹಣ್ಣುಗಳಂತಿರುವ ಚಿ|| ಶುಭಾ (ಬಿ.ಎ.) ಸುಷ್ಮಾ (ಎಂ.ಎ), ಚಿ|| ಸುಮಾ (ಪಿ.ಯು.ಸಿ.) ಅವರೊಂದಿಗೆ ತಿಪಟೂರಿನಲ್ಲಿ ಸ್ವಂತ ಮನೆಕಟ್ಟಿಕೊಂಡು, ಕುಮಟಾದಲ್ಲಿ ಸುದೀರ್ಘ ಜೀವನ ನಡೆಸಿರುವುದು, ಬುಡಕಟ್ಟು ಜನಾಂಗದ ಸಂಸಾರವೊಂದರ ಸಾಂಸ್ಕೃತೀಕರಣ ಪ್ರಕ್ರಿಯೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕಾಡಿನ ಹಾಡಿ-ಹಟ್ಟಿಯಲ್ಲಿರಬಹುದಾಗಿದ್ದ ಈ ಸಂಸಾರ ಇಂದು ಸುಸಂಸ್ಕೃತ ಸಂಸಾರವಾಗಿ ಬೆಳೆದು ಕುಮಟಾದಲ್ಲಿ ಪ್ರಸಿದ್ಧವಾದ ಪ್ರೊ. ರಾಮಯ್ಯ ಕುಟುಂಬವೆಂದು ಜನಮನ್ನಣೆ ಪಡೆದಿರುವುದು ದಾಖಲಿಸುವ ಅಂಶ. ಈ ಎಲ್ಲ ಸಾಧನೆಗೆ ಕಳಸವಿಟ್ಟವಂತೆ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಂಶೋಧಕರಾಗಿ ತಮ್ಮದೇ ಬುಡಕಟ್ಟುವಿನ ಅಧ್ಯಯನ ಮಾಡಿ ಅನೇಕ ಅಡೆ-ತಡೆ ಅನಾರೋಗ್ಯದ ಮಧ್ಯೆಯೂ, ಸೋಲರಿಯದ ಸಾಹಸ ಮಾಡಿ, 1993 ರಲ್ಲಿ ಗೌರವಾನ್ವಿತ ಪಿಎಚ್‌ಡಿಯಂಥ ಉನ್ನತ ಪದವಿ ಭೂಷಣರಾಗಿರುವರು ಈ ಸಂಶೋಧನೆಗೆ 1994ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಲಿಂ. ಶ್ರೀ ತಲಗವಾಡಿ ಸೋಮಾರಾದ್ಯ ಸ್ಮರಣ ಬಂಗಾರದ ಪದಕ ಪಡೆದಿರುವರು. ಇಂಥ ಪ್ರತಿಷ್ಠಿತ ತಮ್ಮ ಸಂಶೋಧನೆಯನ್ನು ಇದೀಗ ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರಯತ್ನ ಶೀಲತೆ ಸಾಹಸ ಶೀಲತೆ ಅತ್ಯಂತ ಹೆಮ್ಮೆಯ ವಿಷಯ. ಈ ಸಾಹಸಕ್ಕೆ ಕಳಸವಿಟ್ಟಂತೆ ಡಾ|| ರಾಮಯ್ಯ ಇಂದು ಪಿಎಚ್‌ಡಿ ಸಂಶೋಧನೆಗೆ ಮಾರ್ಗದರ್ಶಕರಾಗಿರುವುದು ಅದೆಂಥ ಅಭಿಮಾನದ ಸಾಹಸ! ಈ ಹತ್ತು ಹದಿನೈದು ವರ್ಷಗಳಲ್ಲಿ ನಿಕಟ ಸಂಬಂಧ ಬೆಳೆಯಿಸಿಕೊಂಡ ಕಾರಣವಾಗಿ ಶ್ರೀ ರಾಮಯ್ಯ ಅವರ ವ್ಯಕ್ತಿ-ವ್ಯಕ್ತಿತ್ವ ಕ್ರಿಯತ್ವಗಳ ಬಗೆಗೆ, ಸಂಸಾರ ಸ್ನೇಹ-ಸಂಬಂಧಗಳ ಬಗೆಗೆ ದಾಖಲಿಸಲು ನನಗೆ ಅಭಿಮಾನ. ಅವರ ಸಂಶೋಧನೆಯ ಬಗೆಗೆ ವರ್ಣಿಸಲು ಕುತೂಹಲ. ಅಲ್ಲದೆ, ಈಚೆಗೆ ಕೊರಮ, ಲಂಬಾಣಿ ಮುಂತಾದ ಬುಡಕಟ್ಟುಗಳ ಬಗೆಗೆ ನಡೆದಿರುವ ಸಂಶೋಧನೆಗಳಲ್ಲಿ, ಈ ಕೃತಿಗೆ ಮನ್ನಣೆಯ ಮಣೆಯಿದೆ ಎಂಬುದನ್ನೂ ನಾನು ಹೇಳಬಯಸುತ್ತೇನೆ. ಆದರೂ, ವಿನಯಶಾಲಿ ಸಹೃದಯಶೀಲಿ ಡಾ|| ಬಿ.ಪಿ.ರಾಮಯ್ಯ ಬರೆದುಕೊಂಡಿದ್ದಾರೆ. ಅಲೆಮಾರಿ ಜನಾಂಗದಲ್ಲಿ ಹುಟ್ಟಿ ಬೆಳೆದ ನಾನು ನನ್ನ ಜನಾಂಗದ ಸಾಂಸ್ಕೃತಿಕ ಅಧ್ಯಯನವನ್ನು ಮಾಡುವಂಥ ಒಂದು ವಿಶೇಷ ಸುಯೋಗ ದೊರೆತು, ನನ್ನ ಮಾರ್ಗದರ್ಶಕರು ತೋರಿದ ಹೆಜ್ಜೆ ಗುರುತುಗಳನ್ನು ಹಿಡಿದು ಮುನ್ನಡೆದು ಈ ಅಧ್ಯಯನವನ್ನು ನಡೆಯಿಸುವ ಪುಣ್ಯ ನನ್ನದಾಯಿತು. ಈ ನುಡಿ ಅವರ ವ್ಯಕ್ತಿತ್ವದ ಕನ್ನಡಿ, ಅವರ ಸಂಶೋಧನೆಗೆ ಮುನ್ನಡಿ. ಈ ಕಾರ್ಯವನ್ನು ಆಗು ಮಾಡಲು ನೆರವಾಗಿ ವಿಶೇಷ ಸಹೃದಯ ತೃಪ್ತಿ ಪಡೆದ ನನ್ನ ಈ ಮೊದಲ ನುಡಿಗಳೂ ನನ್ನ ಭಾವನೆಗೆ ಚಿನ್ನುಡಿ

ದಕ್ಷಿಣ ಕರ್ನಾಟಕದ (ದಕ್ಷಿಣ ಕನ್ನಡದ – ಅಲ್ಲ) ಕೊರಮರು ಎಂಬ ಸಂಶೋಧನ ಕೃತಿ, ಭರತಖಂಡದಲ್ಲಿ ವ್ಯಾಪಕವಾಗಿ ಹರಡಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ ನೆಲೆನಿಂತು, ಅವಿಸ್ಮರಣೀಯ ಸಾಂಸ್ಕೃತಿಕ ಕೊಡುಗೆಗಳನ್ನು, ಭಾರತದ ಮೂಲ ಸಂಸ್ಕೃತಿಗೆ ನೀಡಿದ ಬುಡಕಟ್ಟು ಜನಸಮುದಾಯದ ವ್ಯಾಪಕ ಅಧ್ಯಯನದ ಕೃತಿ, ಸಂಶೋಧನೆಯ ಶಿಸ್ತು-ಕ್ಷೇತ್ರಕಾರ್ಯ ಮಾಹಿತಿ ಸಂಗ್ರಹ ವಕ್ತೃಗಳೊಡನೆ ಸಂವಾದ ಹಾಗೂ ತೌಲನಿಕ ದೃಷ್ಟಿಯ ವಿವೇಚನೆಯ ಕಾರಣವಾಗಿ ಈ ಗ್ರಂಥ ಗಮನಾರ್ಹವಾದುದು. ತೀವ್ರ ಬದಲಾವಣೆಗೆ ಗುರಿಯಾಗಿರುವ ಅಲೆಮಾರಿ ಬುಡಕಟ್ಟು ಜನಸಮುದಾಯದ ರಂಜನೀಯ ದಯನೀಯ ಬದುಕನ್ನು ಚಿತ್ರವತ್ತಾಗಿ ಕಟ್ಟಿ ತೋರುವ ಪ್ರಯತ್ನದ ಈ ಗ್ರಂಥ, ಕೊರಮ ಜನಾಂಗವನ್ನು ಕುರಿತ ಬಹುಶಃ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಪ್ರಥಮ ಪ್ರಯತ್ನವಾಗಿರುವುದರಿಂದ ಈ ಗ್ರಂಥ ಪ್ರಥಮ ದ ಹೆಮ್ಮೆಯಂತೆ, ಪ್ರಾರಂಭಿಕದ ಕೊರತೆಗಳನ್ನೂ ಗರ್ಭೀಕರಿಸಿಕೊಂಡಿರುವುದು ಅನಿವಾರ್ಯ, ಮುಖ್ಯವಾಗಿ ಕೊರಮರ ಭಾಷೆ ಕುಳವ (ೞ?) ದ ಪ್ರಾಥಮಿಕ ನೋಟಮಾತ್ರ ಇಲ್ಲಿದೆ, ಇದರ ತಮಿಳು, ತೆಲುಗು ಮೂಲಗಳನ್ನು ಪರೀಕ್ಷಿಸಿ, ಇದರ ಪೂರ್ವದ್ರಾವಿಡ ಭಾಷೆಯ ಹತ್ತುಗಡೆಯನ್ನು ಪ್ರತ್ಯೇಕ ಸಂಶೋಧನೆಯಾಗಿ ಎತ್ತಿಕೊಳ್ಳುವತ್ತ ಈ ಗ್ರಂಥ ದಾರಿತೋರುತ್ತಿದೆ. ಜನಾಂಗದ ಜೀವನಪದ್ಧತಿ ನಂಬಿಕೆ-ಆಚರಣೆ, ಕುಲಪದ್ಧತಿ ಮತ್ತು ಭಾಷಿಕ ಅಧ್ಯಯನ ಪ್ರಪ್ರಥಮವೂ, ಸವಿಸ್ತಾರವೂ ಆಗಿರುವುದು ಉಲ್ಲೇಖನೀಯ. ಕೊರಮ ಬುಡಕಟ್ಟಿನ ಬಗೆಗೆ ಇಲ್ಲಿನವರೆಗೆ ದಾಖಲಾಗಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ, ಅವುಗಳ ಕುಂದುಕೊರತೆಗಳನ್ನು ಪರೀಕ್ಷಿಸಿ ನಿಜಸಂಗತಿಗಳತ್ತ ಬೆಳಕು ಬೀರಿರುವುದು ಈ ಕೃತಿಯ ಗಮನಾರ್ಹ ಸಾಧನೆ.

1) ಕೊರಮರಲ್ಲಿ ಧಾರ್ಮಿಕ ಪ್ರಜ್ಞೆ, ಮಾನವೀಯತೆಯ ಅಂಶ ಕಾಣುತ್ತದೆಯಾದರೂ ಬಡತನದ ಮುಂದೆ ಅದೆಲ್ಲ ನಿಲ್ಲುವುದಿಲ್ಲ!

2) ಕೊರಮರು ತಮ್ಮ ಅಪರಾಧಗಳನ್ನು ಮುಚ್ಚಿಕೊಳ್ಳಲು ಬೆತ್ತಲಾಗುವ, ಓಡಿ ಹೋಗುವ, ಮೋಹಗೊಳಿಸುವ, ಬಲಿದಾನಕ್ಕೆ ಸಿದ್ಧವಾಗುವ ಜನಾಂಗಿಕವಾದ ಈ ಪ್ರವೃತ್ತಿ ಸನ್ಮಾರ್ಗ ಸಾಧನೆಗಳತ್ತ ಹೊರಳಿದರೆ, ಕೊರಮರು ಸಮಾಜದ ಒಂದು ಬಲಿಷ್ಠ ಅಂಗವಾಗಿ, ಸಮಾಜದ ರಕ್ಷಣಾ ವ್ಯವಸ್ಥೆ, ಕ್ರೀಡಾಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡುವ ಸಾಧ್ಯತೆಗಳಿವೆ.

3)  ಪ್ರಕೃತ ಕೊರಮ ಜನಾಂಗದ ಸಂಸ್ಕೃತಿ (ಉಪಸಂಸ್ಕೃತಿ ಎನ್ನುವುದು ಸೂಕ್ತ) ಭಾರತೀಯ ಜನಾಂಗದ ಮುಖ್ಯ ಪ್ರವಾಹದಲ್ಲಿ ತನ್ನತನವನ್ನು ಉಳಿಸಿಕೊಂಡು. ಏಕತಾನತೆಯ (ಹಳೆಯ) ಮಾರ್ಗ ಹಿಡಿಯುವುದು ಸರಿಯಾದುದಲ್ಲ. ಅನೇಕತೆಯಲ್ಲಿ ಏಕತೆ ಎಂಬ ಭಾರತೀಯ ಸಂಸ್ಕೃತಿಗೆ ಕೊರಮ ಜನಸಮುದಾಯದ ಕಾಣಿಕೆ ಬಹು ಹಿರಿದಾದುದಲ್ಲವಾದರೂ, ಕೀಳರಿಮೆಯಿಂದ ಕುಗ್ಗಬೇಕಾಗಿಲ್ಲ ಸಂಸ್ಕಾರದಿಂದ ಹಿಗ್ಗಿ ತಲೆಯೆತ್ತಿ ಬೆಳೆಯಲು ಸಾಧ್ಯವಿದೆ.

4) ಕೊರಮರ ನಂಬಿಕೆ ಆಚರಣೆ ಜನಾಂಗದ ಕಟ್ಟುಪಾಡುಗಳು, ಮದುವೆ ಮಸಣದ ಕ್ರಿಯೆಗಳ ವೈಶಿಷ್ಟ್ಯ-ನಾಡದೇವತೆಗಳ ಪೂಜೆ, ಹಿರಿಯರ ಪೂಜೆ, ಹಬ್ಬಗಳು ಪೂಜೆ, ಎಡೆ, ಅಡಿಗೆಗಳ ವೈವಿಧ್ಯ, ನ್ಯಾಯಪದ್ಧತಿ, ಕುಲ ಹೊಲೆ ಬಹಿಷ್ಕಾರ, ಆಚಾರ-ವಿಚಾರಗಳಲ್ಲಿ ಪ್ರಮುಖ ಸಂಸ್ಕೃತಿಯ ಅನುಕರಣೆ, ಛಾಯೆ ಕಂಡುಬಂದರೂ ತಮ್ಮದೇ ಆದ ಜನಾಂಗಿಕ ವಿವಿಕ್ತ ಆಚರಣೆಗಳು ಗಮನಾರ್ಹವಾಗಿವೆ. ಹಿರಿಯರ ಪೂಜೆಯ ಪೆದ್ಲೆಡೆ, ಹಬ್ಬಗಳಲ್ಲಿ ಬಳಸುವ ಮಾಂಸ (ದನದ ಮಾಂಸವಿಲ್ಲ306ಲ್ಲ) ಹಕ್ಕಿ-ಪಕ್ಷಿಗಳ ಮಾಂಸ ನಿಷಿದ್ಧ ಇ.ಇ.) ದ ಎಡೆ, ಗಂಡಸರ-ಹೆಂಗಸರ ಮದುವೆಯ ಉಡುಪು, ಆಭರಣ, ವಿಧಿ-ವಿಧಾನಗಳು ಗಮನಾರ್ಹವಾದುವು. ಇವನ್ನೆಲ್ಲ ದಾಖಲಿಸಿದ ಡಾ|| ರಾಮಯ್ಯ, ಕೊರಮರ ಕಳ್ಳತನದ ವೃತ್ತಿಯನ್ನೂ, ಬೇಟೆಯ ವಿಧಿ-ವಿಧಾನಗಳ ವಿವರಗಳನ್ನೂ ನೀಡಿ, ಕೈಯಲ್ಲಿಲ್ಲದವ ಕಳ್ಳ, ಹೊಟ್ಟೆಗಿಲ್ಲದವ ಬಡವ ಎಂಬ ಸಮಾಧಾನ ನೀಡುತ್ತಾರೆ. ಅಲ್ಲದೆ, ಅದರ ಕಾರಣಗಳನ್ನೂ ದಾಖಲಿಸುತ್ತಾ ಶಿಕ್ಷಣ ಅವರಿಗೆ ಆಕಾಶ ದೀಪವಾಗಿರುವುದನ್ನೂ, ಅವರ ಕಸಬುಗಳಿಗೂ ಸಂಚಕಾರ ಬಂದಿರುವುದನ್ನೂ ಸಕಾರಣವಾಗಿ ಮುಂದಿಡುವರು ಅದೇನೆ ಆದರೂ, ದಕ್ಷಿಣ ಭಾರತದ ಭಾಷೆ-ಸಾಹಿತ್ಯದಲ್ಲಿ ದಾಖಲಾಗಿರುವ ಕೊರವಂಜಿ ತನ್ನ ಕೊರವಂಜಿಕಣಿ-ಕೊರವಂಜಿಯ ಹಚ್ಚೆ ಕೊರಮರದೇ ಆದ ದೇಶೀಯ ಸಾಹಿತ್ಯ ಸಾಂಸ್ಕೃತಿಕ ವೈಶಿಷ್ಟ್ಯಗಳೇ ಎಂಬುದು ಸತ್ಯ. ಇಂಥ ಸಂಗತಿಗಳನ್ನೆಲ್ಲ ಡಾ|| ರಾಮಯ್ಯ ಪ್ರಾಮಾಣಿಕವಾಗಿ ದಾಖಲಿಸಿರುವರು.

5) ಕೊನೆಯದಾಗಿ ಆಧುನಿಕತೆಯ ಭರಾಟೆಯಲ್ಲಿ ಕೊರಮ ಜನಸಮುದಾಯ ಮುಖ್ಯ ಪ್ರವಾಹದಲ್ಲಿ ಬೆರೆತು ಬೇರಿಲ್ಲವಾಗಬಹುದು. ಆದರೆ, ಅವರ ಕೊರಮತನ (ಕಳ್ಳತನ, ಮೋಸ, ಇಇ) ಕೊರಮಗೊಂದೂರಲ್ಲ, ಕೊಕ್ರೆಗೊಂದು ಕೆರೆಯಲ್ಲ ನರಮನುಷ್ಯರಲ್ಲೇ ಕೊರಮ ಚಾಂಡಾಲ! ಹಕ್ಕಿ ಪಕ್ಷಿಗಳಲ್ಲೇ ಕಾಗೆ ಚಂಡಾಲ ಎಂಬ ನುಡಿ ಸಾಮತಿಗಳು ಕನ್ನಡ ಭಾಷೆಯಲ್ಲಿ ಶಾಶ್ವತವಾಗಿ ಉಳಿದುರುತ್ತವೆ. ಅಲ್ಲದೆ ಕೊರವಂಜಿ ಹಾಡುಗಳೆಂಬ ವಿಶಿಷ್ಟ ಸಾಹಿತ್ಯ ಉಪಪ್ರಕಾರವೊಂದು ಎಂದಿಗೂ ಕೊರಮ ಕೊರವಂಜಿಗಳ ನೆನಪನ್ನು ತರುತ್ತವೆ. ಜನಪದ ನಾರದ ನಾರದೆಯರೆಂಬ ಡಾ|| ಜಚನಿಯವರ ಪ್ರಯೋಗ ಚಿರಂತನವಾಗಿ ಉಳಿದಿರುತ್ತದೆ. ಕೊರಮರ ಬೇಟೆ ಬಲೆ ವಿಧಾನಗಳಂತೆ ಕೊರವಂಜಿಯ ಹಚ್ಚೆ ಔಷಧ ಹಾಗೂ ಕಣಿಗಳೂ ಸಾಂಸ್ಕೃತಿಕ ದಾಖಲೆಗಳಾಗಿ ಉಳಿದಿರುತ್ತವೆ. ಅಲ್ಲದೆ, ಕೊರಮರ ಭಾಷೆಯ ಕೆಲವು ವಿಶಿಷ್ಟ ಪದಗಳು ಶಬ್ದಗಳು ಕನ್ನಡದ ಅಥವಾ ಮೂಲದ್ರಾವಿಡ ಭಾಷೆಯ ಪದಸಂಪತ್ತಿಯನ್ನು ಹಿಗ್ಗಲಿಸಿರುವುದೂ ಅನೇಕ ವಿಶಿಷ್ಟ ಪದಗಳಿಗೆ ಈಗ ಕಳೆದು ಹೋಗಿರುವ ಅರ್ಥದ ತಿಳುವಳಿಕೆಗೆ ದಾರಿಮಾಡಬಹುದು. ಉದಾ. ಕುರ‍್ರಮಾಮ ಕಾವಾಡಿ ಕೋವಾಡ ಮುಂತಾದ ಪದಗಳನ್ನು ಗಮನಿಸಬಹುದು. ವಿಶೇಷವಾಗಿ ಕೊರಮ ಸಮುದಾಯ ಬಡತನ ಹಿಂದುಳಿಯುವಿಕೆಯ ಬೇಗೆಗೆ ಬಲಿಯಾದರೂ, ಮುಸ್ಲಿಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗದೆ ಬದುಕಿರುವ ಅವರ ವೈಶಿಷ್ಟ್ಯ ಮಾತ್ರ ಅತ್ಯಂತ ಗಮನಾರ್ಹ ಅಷ್ಟೇ ಅಲ್ಲ ಆದರಣೀಯ ಮಾದರಿಯೂ ಅಹುದು. ಹಿಂದೂ ಜನಾಂಗದ ಮುಖ್ಯ ವಾಹಿನಿಯಲ್ಲಿ ಕೊರಮ ಜನರಿಗೆ ಗೌರವದ ಸ್ಥಾನ ದೊರೆಯಲೇಬೇಕಾದುದು ಅನಿವಾರ್ಯ ಬುಡಕಟ್ಟು, ಪರಿಶಿಷ್ಟ, ಅಲ್ಪಸಂಖ್ಯಾತ ಹಿಂದುಳಿದಿರುವಿಕೆ ಮುಂತಾದ ಪ್ರಕ್ರಿಯೆಗಳಲ್ಲಿ ತೊಳಲಾಡುತ್ತಿರುವ ಕೊರವ ಜನಸಮುದಾಯ ಭಾರತದ ಮೂಲ ಜನಾಂಗವಾದ ಹಿಂದೂ ಪದರದಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು. ಭಾರತೀಯತೆಯ ಸಂಮ್ಮಿಶ್ರ ಸಂಸ್ಕೃತಿಯ ವೈಶಿಷ್ಟ್ಯಕ್ಕೆ ಧಕ್ಕೆ ಬರದಂತಿರಬೇಕಾದುದು ಅತ್ಯಾವಶ್ಯಕ. ಕೊರಮ ಜನಸಮುದಾಯ ಇದಕ್ಕೆ ಹೊರತಾಗದಿರಲಿ. ಡಾ|| ಬಿ.ಪಿ. ರಾಮಯ್ಯನಂಥವರ ಪರಿಶ್ರಮದ ಫಲ ಇದೇ ಎಂದು ನಂಬುವೆ. ಜಾನಪದ ಅಭಿಮಾನಿಗಳು, ಸಂಸ್ಕೃತಿಪ್ರಿಯರು, ಜನಾಂಗಿಕ ಅಧ್ಯಯನ ಶೀಲರು ಈ ಕೃತಿಯನ್ನು ಗಂಭೀರವಾಗಿ ಪರಿಗಣಿಸುವರೆಂದು ನಂಬಿದ್ದೇನೆ. ಸರಸಕಾದಂಬರಿಯಂತೆ, ಕ್ಷಣಕ್ಷಣ ನವೀನಾಂಶಗಳನ್ನು ಚಿಮುಕಿಸುವ ಈ ಸಂಶೋಧನ ಕೃತಿ ಸಾಮಾನ್ಯ ಓದುಗರಿಗೆ ಪ್ರಿಯವಾದಂತೆ, ಸಂಶೋಧಕರಿಗೆ ಇಲ್ಲಿನ ಅಧಿಕೃತ ಮಾಹಿತಿ ಪ್ರಿಯವಾಗುವುದು ಸಹಜ. ಮಾದರಿಯ ಈ ಸಂಶೋಧನೆ ಮುಂದಿನ ಅಧ್ಯಯನಗಳಿಗೆ ಪ್ರೇರಣೆ ನೀಡಿ, ಮೇಲ್ಪಂಕ್ತಿಯಾಗಿ ಬಾಳಲೆಂದು ಹಾರೈಸುವೆ.

ಅಭಿಮಾನ, ಆದರ, ಆತ್ಮೀಯತೆಯ ಈ ಚೆನ್ನುಡಿ ಮುನ್ನುಡಿ ಈ ಸಂಶೋಧನ ಕೃತಿಗೆ ಚಂದವಾದ ಮೊದಲ ನುಡಿಯೇ ಆದರೂ, ಸತ್ಯಕ್ಕೆ ದೂರವಲ್ಲದ, ಅಸತ್ಯದ ಗೀಚುಗೆರೆಯಲ್ಲದ ಹೃದಯ ತುಂಬಿ ಆಡಿದ ಮಾತುಗಳು ಎಂಬುದನ್ನು ಸಹೃದಯರು ಗಮನಿಸಬೇಕು. ಈಚೆಗೆ ಸುವರ್ಣ ಮಹೋತ್ಸವವನ್ನು ಆಚರಿಸಿದ ಕುಮಟಾದ ಪ್ರತಿಷ್ಠಿತ ಎ.ವಿ. ಬಾಳಿಗಾ ಕಾಲೇಜಿನ ಶೈಕ್ಷಣಿಕ ಸಾಂಸ್ಕೃತಿಕ ಸಾಧನೆ ಸಾವಿರದಲ್ಲಿ ಈ ಸಂಶೋಧನಾ ಕೃತಿಯೂ ಒಂದು ಗರಿ. ಅಂಥ ಪ್ರತಿಷ್ಠಿತ ಕಾಲೇಜಿನ ಅಧ್ಯಾಪಕೀಕರಣ ಡಾ|| ಬಿ.ಪಿ. ರಾಮಯ್ಯ ಎಂಬುದು ದಾಖಲಿಸುವ ಸಂಗತಿಯೇ ಆಗಿದೆ. ಈ ಗ್ರಂಥದ ಪ್ರಕಟನೆಯಲ್ಲಿ ಹೆಣ್ಣುಮಕ್ಕಳ ಮದುವೆಯ ಸಂಭ್ರಮವನ್ನೇ ಅನುಭವಿಸುತ್ತಿರುವ ಡಾ|| ರಾಮಯ್ಯ ಕೀರ್ತಿವಂತರಾಗಲಿ, ಕ್ರಿಯಾಶೀಲರಾಗಲಿ, ಮೊಮ್ಮಕ್ಕಳಂಥ ಹೆಚ್ಚಿನ ಸಾಹಿತ್ಯ ಕೃತಿಗಳನ್ನು ನಾಡು ನುಡಿಗೆ ನೀಡುವ ಪುಣ್ಯಶಾಲಿಗಳಾಗಲಿ ಎಂಬುದು ನನ್ನ ಮತ್ತು ಪ್ರೊ. ಲಲಿತಾಂಬ ವೃಷಬೇಂದ್ರ ಸ್ವಾಮಿಯವರ ಜೋಡು ಆಶೀರ್ವಾದ. ಇದೇ ಚೆನ್ನುಡಿಯ ಮುನ್ನುಡಿಯ ಹಿಂದಿರುವ ಸದಾಶಯ ಎಂಬುದನ್ನು ಸಹೃದಯ ಓದುಗರು, ಅಭಿಮಾನಪಡುವ ಮುಂದಿನ ಕಾಲದ ಜಾನಪದ ಸಂಶೋಧಕರು ಗಮನಿಸುವರೆಂದು ಭಾವಿಸುವೆ.  ಕನ್ನಡದ ಆದ್ಯ ಆರಾಧ್ಯಕವಿ ಶ್ರೀ ಪಂಪನೆನ್ನುವಂತೆ ಗರ್ವಮೆ ದೋಷಂ, ಅಱ್ತ (ಅಕ್ಕರೆ-ಪ್ರೀತಿ) ಗಂ ದೋಷಮೆ? ಕಾಣೆನ್, ಎನ್ನುವವ ಮಾಱ್ಕೆಯೆ ಪೇಱ್ವೆನದಾವ ದೋಷಮೊ? (ಪಂಪಭಾರತ (1-13) (ಒಣ ಅಹಂಕಾರ-ಅಭಿಮಾನದ ಪ್ರದರ್ಶನ ದೋಷವೇ, ಆದರೆ, ಪ್ರೀತಿ-ಕುಕ್ಕಲತೆಗೆ ದೋಷವೆಲ್ಲಿಯದು? ಇಲ್ಲ-ಇಲ್ಲ, ನನಗೆ ತಿಳಿದ ರೀತಿಯಲ್ಲಿ ಹೇಳಿದ್ದೇನೆ, ಇದೇನು ದೋಷವೇ?)

ಎಸ್‌.ಎಂ.ವೃಷಭೇಂದ್ರಸ್ವಾಮಿ
(ನಿವೃತ್ತ) ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-3

ಶಿವಪ್ರಸಾದ
ಕಲ್ಯಾಣನಗರ, ಧಾರವಾಡ – 7
ದಿ|| 1-4-2002