ಹುಲ್ಲುಹೂವಿನ ಕೊರಳಿಗೂ ಮಣಿಹಾರ ತೂಗುವ ಜ್ಯೋತಿಯೆ
ಬೋಳು ಬಯಲನು ಹಸುರ ನಗೆಯಲಿ ತುಂಬಿ ತಬ್ಬುವ ಪ್ರೀತಿಯೆ
ನೆಲದ ಬಯಕೆಯ ನೂರು ಶಿಖರವನೆತ್ತಿ ನಿಲ್ಲುವ ಮೌನವೇ
ಕಡಲ ಕರೆಗೋಗೊಟ್ಟು ಸಾಗುವ ರಮ್ಯ ಜಲಕಲನಾದವೇ.

ಕಪ್ಪು ಮೋಡಕು ಬೆಳ್ಳಿಯಂಚನು ಬರೆವ ಮಿಂಚಿನ ಕುಂಚವೇ
ಬಾನದೇಗುಲಕಿಂದ್ರಚಾಪದ ತೋರಣದ ಸಮ್ಮೋಹವೇ,
ಸಪ್ಪುಳಿಲ್ಲದೆ ತಿರೆಯನಪ್ಪುವ ಬಾನಿನೊಲವಿನ ಸೋನೆಯೇ
ನೆಲದ ಹಸುರಿನ ಬಯಕೆ ಬೀಜವನೆಚ್ಚರಿಪ ಕ್ರತುಶಕ್ತಿಯೇ.

ಗುಡುಗು ಮಿಂಚಿನ ಪಡೆಯ ವಿಕ್ರಮದಲ್ಲಿ ತೋರುವ ವೀರವೇ
ಕ್ಷೀರಧಾರೆಯ ಕರೆವ ಕೆಚ್ಚಲ ಚಂದ್ರಿಕೆಯ ವಾತ್ಸಲ್ಯವೇ
ನೀಲ ನಭದೊಳು ಲೀಲೆಯಾಡುವ ಶುಭ್ರ ಮೇಘೋಲ್ಲಾಸವೇ
ಚಿಕ್ಕೆ ಚಿತ್ರಾಂಕಿತದ ನಭದೀ ಛತ್ರಿಯರಳಿಪ ತೇಜವೆ!

ಶಿಶಿರ ಮೌನ ಮ್ಲಾನ ಗರ್ಭದಿ ಮೊಳೆವ ಸುಗ್ಗಿಯ ಸ್ವಪ್ನವೇ
ಹಳೆಯ ಹೆಜ್ಜೆಗೆ ಹೊಸತು ಗೆಜ್ಜೆಯ ಕಟ್ಟಿ ಸುಖಿಸುವ ತುಷ್ಟಿಯೇ
ಸುಪ್ತಮನದೊಳು ತಪ್ತಜ್ವಾಲಾಮುಖಿಯ ಹರಿಸುವ ಮೋದವೆ
ಈ ಚಿರಂತನ ಉತ್ಸವಪ್ರಿಯ ಸೃಷ್ಟಿi ಸಿಂಗಾರವೆ !

ಹಸುಳೆಗನಸನು ಚಂದ್ರಲೋಕಕ್ಕೊಯ್ವ ಹೂವಿನ ಯಾನವೆ
ಹರೆಯದೆದೆಯೊಳು ಮತ್ಸ್ಯಯಂತ್ರವ ಭೇದಿಸುವ ಉನ್ಮಾದವೇ
ಕುದಿವ ಕಡಲೊಳು ತೇಲ್ವನೌಕೆಗೆ ಕರ್ಣಧಾರತ್ರಾಣವೆ
ಸಂಜೆಬಾನಿನ ತುಂಬ ಹಗಲಿನ ಸ್ಮ ತಿಯ ಬರೆಯುವ ಭಾವವೆ !

ಪದರ ಪದರಗಳಾಗಿ ಜೀವವ ಬಿಗಿದು ಸುತ್ತುವ ಮೋಹವೆ
ತನ್ನತನವನೆ ಇಲ್ಲಗೈಯುವ ತುಂಬು ಬಯಕೆಯ ಪ್ರೀತಿಯೆ
ಮೈಯ ಗಾಳವನೆಸೆದು ಮನಸಿನ ಮೀನವಾಡಿಪ ಕಾಮವೆ
ಅಲ್ಪದೊಳೆ ನಿಲ್ಲಿಸದೆ ಭೂಮಕೆ ಸೆಳೆವ ಪ್ರೇಮಸ್ರೋತವೆ !

ಕಣ್ಣ ಸಂಪುಟದಲ್ಲಿ ವಿಶ್ವವ ಮೊಗೆವಗಸ್ತ್ಯನ ಶಕ್ತಿಯೆ
ಜೀವದೆದೆಯಲಿ ನೂರು ಅನುಭವದಚ್ಚನೊತ್ತುವ ಮಂತ್ರವೇ
ಸಾಂತವೇದಿಕೆಯಲ್ಲನಂತನ ರುಂದ್ರ ಬಂಧುರ ನೃತ್ಯವೇ
ಅಣುವಿನಲ್ಲೂ ಗ್ರಹಗಳಲ್ಲೂ ಲಾಳಿಯಾಡುವ ಸೂತ್ರವೇ !

ನೂರು ವರ್ಣದ ನೂರು ರಾಗದ ಮಧುರ ಛಂದೋಬಂಧವೆ
sಹಗಲು ಇರುಳೂ ನೆಳಲು ಬೆಳಕಿನ ಅಲೆಯನಾಡಿಪ ಸಿಂಧುವೇ,
ನಿತ್ಯಯಾತ್ರೆಗೆ ಸಂದು ಲೋಕವ ನವ್ಯವಾಗಿಪ ಬಂಧುವೇ
ಎಷ್ಟು ಸವಿದರು ಇದುವೆ ಮೊದಲೆಂತೆನ್ನಿಸುವ ಆನಂದವೇ.

ಅಂತರಂಗದ ಬೆಳಕು ಬಾಹ್ಯದ ಬೆಳಕನೊಲಿಯುವ ತಾಣವೆ
ಪಾತ್ರ ಪಾತ್ರದೊಳರಳಿ ಸ್ಪಂದಿಸುವಾತ್ಮಕಿರಣ ಪ್ರಾಣವೆ!
ಜೀವದೇವನ ಸಾಮರಸ್ಯದ ನವ್ಯ ಆವಿರ್ಭಾವವೆ
ಕುದಿವ ಬೆಂಕಿಯೊಳರಳಿನಿಲ್ಲುವ ಚಂದ್ರಸುಮಸೌಗಂಧವೇ.

‘ಆಹ’ ಎನಿಸುತ ಬಂದು ‘ಅಯ್ಯೋ’ ಎನಿಸಿ ನಡೆಯುವ ಚಂಚಲೆ
ನಿನ್ನ ಮಿದುಪದ ಸೋಂಕಲೀ ಮನ ನೂರು ಮಿಂಚಿನ ಗೊಂಚಲೆ!
ನಿನ್ನ ಕೃಪೆಗೊಳಗಾದ ಸಂತಗೆ ಸರ್ವಸೃಷ್ಟಿಯೆ ಚಿತ್‌ಕಲೆ,
ಕಂಡುದೆಲ್ಲವು ಚೆಲುವು, ಮತ್ತಲ್ಲುಂಡುದೇ ರಸವಲ್ಲವೆ?

* * *