ಮುಗಿಲ ತುಂಬ ಬೆಳ್ಗುದುರೆಯ
ಮೋಡದ ಪಡೆಯೋಡಿರೆ
ಬಂದಿಯಂತೆ ಬಿದ್ದ ಗುಡ್ಡ
ಬಿಡುಸುಯ್ಯುತ ನೋಡಿರೆ,
ಮಳೆಯು ತೊಳೆದ ಹಸಿರ ಮೈಯ
ಬಿಸಿಲ ಬೆರಳು ಸವರಿರೆ
ಗರಿ ಮೂಡಿದ ಕನಸಿನಂತೆ
ಬೆಳ್ಳಕ್ಕಿಯ ಮಾಲೆಯೊಂದು
ಮಿಂಚಿಕೊಂಡು ಹಾರಿರೆ,
ತೆಕ್ಕನೊಂದು ಚೆಲುವಿನ ಪುಟ
ಕಣ್ಣೆದುರಿಗೆ ತೆರೆದಿದೆ.

ಗಾಳಿಬೆರಳು ಮೋಡದ ಮುಸು-
ಕನ್ನು ಕೊಂಚ ಸರಿಸಿರೆ,
ಮಡುಗಟ್ಟಿದ ಮಂದಹಾಸ
ಜಲಕ್ಕನೆಯೆ ಜಾರಿರೆ,
ಬಾಸಿಂಗವ ಸೂಡಿಕೊಂಡು
ಗುಡಿಯ ಬೆಟ್ಟ ನಿಂದಿರೆ,
ಹದುಗಿ ಹರಿವ ಗುಟ್ಟಿನಂತೆ
ಹಸುರಿಗೆ ಪಿಸುಮಾತನೊರೆದು
ನುಸುಳುತಿರಲು ಕಾಲುವೆ
ತೆಕ್ಕನೊಂದು ಚೆಲುವಿನ ಪುಟ
ಕಣ್ಣೆದುರಿಗೆ ತೆರೆದಿದೆ !