ಈ ಮರಗಳು
ಹೂಮಳೆಗರೆಯುವ ಬಣ್ಣದ ಮೋಡಗಳು.
ದಾರಿಗಳು
ಹೂ ಹುಡಿ ಹರಡಿದ ರಂಗೋಲಿಯ ಸೂರೆಗಳು
ತೂಗಡಿಸುವ ನೆಳಲುಗಳು
ಮಡುಗಟ್ಟಿದ ತಂಪುಗಳು
ತೇಲಾಡುವ ಕಂಪುಗಳು
ಚಿಲಿಪಿಲಿ ಹಕ್ಕಿಗಳಿಂಪುಗಳು
ಬಗೆ ಬಗೆ ದನಿ ಪುಟಿಯುವ ಕಾರಂಜಿಗಳು.
ಹಗಲುಗಳು
ಧಗ ಧಗಿಸುವ ಕುಲುಮೆಗಳು
ಇರುಳುಗಳು
ಝಗ ಝಗಿಸುವ ನಕ್ಷತ್ರದ ಹರಳುಗಳು.
ಬಾರದ ನಿದ್ರೆಗಳು
ಸುತ್ತಲು ಕೆಣಕುವ ಕನಸುಗಳು
ಎಲ್ಲೋ ಯಾಕೋ ಏನೋ
ಮಾತಾಡುವ ಬಾಯಿಗಳು
ಏನೇನೋ ನೆನಪುಗಳು.
Leave A Comment