ಯುಗಾದಿಯ ದಿನವಾದರೂ
ಒಂದಷ್ಟು ನಗೋಣ
ಉಳಿದಂತೆ ವರ್ಷಾದ್ಯಂತ ಇದ್ದೇ ಇದೆ
ನಮ್ಮನ್ನರೆಯುವ ಗಾಣ.
***
ಖಳದುಶ್ಶಾಸನ ಹೇಮಂತ
ಮರಮರಗಳ ಹಸಿರುಡುಗೆಯ
ಸೆಳೆದು ಹಾಕಿ ನಗ್ನಗೊಳಿಸಿ
ಅವಮಾನವ ಮಾಡಿದ,
ಇಗೋ ಬಂದ ಋತು ವಸಂತ
ಕೊಳಲೂದುತ ಎಲ್ಲೋ ನಿಂತು
ಮರ ಮರಗಳ ಮೈಯ ತುಂಬ
ಹೊಸ ಚಿಗುರನು ಉಡಿಸಿದ.
***
ಮೂಗೊಂದು ಮೂಲಂಗಿ
ಕಣ್ಣು ಉಳ್ಳಾಗಡ್ಡೆ
ಬೆಳ್ಳುಳ್ಳಿ ಹಲ್ಲಿನವಳೆನ್ನ ಚೆಲುವೆ
ತರಕಾರಿ ಉಪಮೆಗಳ
ಹೀಗೆ ಪೋಣಿಸಿ ನಾನು
ಈ ಯುಗಾದಿಯ ದಿವಸ ಬದುಕಬಹುದೆ !
***

ಚುಟುಕು ಕವಿಗಳಿಗೊಂದು ಮಾತು :
ಪ್ರವಾಸಕ್ಕೆ ಹೊರಟಾಗ
ತಂಗಲು
ಟೆಂಟುಗಳೇ ಸಾಕು
ಆದರೆ ನಿವಾಸಕ್ಕೆ
ಮನೆಗಳೇ ಬೇಕು.

ಇಂಥ ಹನಿಗವಿತೆಗಳಲ್ಲಿ
ಕವಿ ಆಗಾಗ ರಮಿಸಬಹುದು
ಆದರೆ ಅವುಗಳಲ್ಲೇ
ವಿರಮಿಸಬಾರದು.