ಯಾತನೆಯ ಮುಖವೆತ್ತಿ ಬೋಳು ಕೊಂಬೆಗಳ ಚಾಚಿ
ಮೊರೆಯಿಟ್ಟದ್ದು ಒಂದಾದರೂ ಮೋಡವಿರದಾಕಾಶಕ್ಕೆ ;
ಕರೆಗೆ ಓಗೊಟ್ಟದ್ದು ಆಳ ನೆಲದಾಳದಿಂದ !
ಬೇರಿನ ಒಳಗೆ ಸರಸರ ಏರಿ, ಕೊಂಬೆ ರೆಂಬೆಯ
ತುಂಬ ಜುಳು ಜುಳು ಹರಿದು, ಟೊಂಗೆ-ಟಿಸಿಲುಗಳಲ್ಲಿ
ಸಣ್ಣಗೆ ಪುಟಿದು ಸೊಂಪಾಗಿ ತೂಗುತಿದೆ ಬಂದ ಆನಂದ.

ಕಣ್ಣುದ್ದಕ್ಕೂ ಚಾಚಿರುವ ನೆಲದ ಮೈ ಚರ್ಮವೆಲ್ಲಾ ಸುಕ್ಕು ;
ಕೆರೆ ಕಟ್ಟೆಗಳ ಕೆನ್ನೆಯೆಲ್ಲಾ ಬತ್ತಿ, ಅಲ್ಲಲ್ಲಿ ಕದಡು ಹೊಂಡ-
ಗಳ ಕಣ್ಣಲ್ಲಿ ಕರೆಗಟ್ಟಿನಿಂತ ಪಾಚಿ. ಆಗಾಗ ತರಗೆಲೆ ಚಿಂದಿ-
ಯನ್ನುಟ್ಟು ಬಟ್ಟಬಯಲಲ್ಲಿ ಅಲೆವ ಸುಂಟರಗಾಳಿ. ಧಗೆಯ
ಬಾರುಕೋಲಿನ ಕೆಳಗೆ ದಿನದ ಬಂಡಿಯನೆಳೆದು ಸಾಗಿವೆ
ಹಗಲೂ ರಾತ್ರಿ. ನಿರ್ಭಾವ ನೀಲಿಯ ನಡುವೆ ಉರಿಯುವ
ಕಣ್ಣು. ಈ ಸುಡುವ ನೆಲಮುಗಿಲುಗಳ ನಡೂಮಧ್ಯೆ
ಮರಮರದ ಹಾಸುಗೆಯಲ್ಲಿ ಮಂದಹಾಸದ ನಿದ್ದೆ.