ಚೈತ್ರ ವೈಶಾಖ ಶ್ರಾವಣ ಬಂದು ಒಂದಾದಮೇಲೊಂದು
ತೊಡಿಸಿದ್ದ ಹಸುರಂಗಿ ಹರಿದು ಚೂರಾಗಿ,
ತಿಳಿನೀಲಿಯನ್ನೆ ಬಿಂಬಿಸುವಂಥ ಥಳಥಳ ಕಣ್ಣು
ಪಾಚಿಮಬ್ಬಾಗಿ, ಸುತ್ತಲೂ ತೆರೆಯಿಳಿದ ಗುರುತು ಗೆರೆಯೊತ್ತಿ,
ಬಂಡೆಗುಂಡುಗಳನ್ನೂ ಮಿದುವಾಗಿಸುತ್ತ ತಬ್ಬಿಕೊಂಡಿದ್ದ
ಶ್ಯಾಮಲತೆ ಬತ್ತಿ,
ಕೊಂಬೆ ಕೊಂಬೆಯ ನಡುವೆ ಇದುವರೆಗು ಮರೆಯಾಗಿದ್ದ
ಹಕ್ಕಿಗೂಡಿನ ಗುಟ್ಟು ಬಯಲಾಗಿ,
ಬಂಗಾರದಂಥ ಸಂಜೆಯ ಕೆಳಗೆ ಈ ಬದುಕೆಲ್ಲ
ಬರೀ ಬೂದಿಯಾಗಿ,
ಮುಂಜಾನೆ ತರ್ಪಣ ಕೊಡುವ ಮಂಜಿನ ಒಳಗೆ
ಏನೋ ಮಂತ್ರೋಚ್ಚಾರ
ಭಟ್ಟರೈವರ ಒಟ್ಟುದನಿ ಮೊರೆತಕ್ಕೆ ಕಿವಿಗೊಟ್ಟು ಕೇಳಿದರೆ
ಏನೋ ಜಾತಕರ್ಮದ ಸಮಾಚಾರ.