ಹೂವ ಬಿಟ್ಟಿವೆ, ಹೂವ ತೊಟ್ಟಿವೆ, ಹೂವನುಟ್ಟಿವೆ ಮರಗಳು!
ಚೈತ್ರ ಜಾತ್ರೆಗೆ ಬಂದು ನಿಂತವೊ ನೂರು ಚೆಲುವಿನ ರಥಗಳು!
ಕಾಮರತಿಯರು ಬಂದು ಆಡುವ ರಾಸಲೀಲಾ ಪಥಗಳು
ಸೃಷ್ಟಿ ಬರೆಯುವ ಚೈತ್ರ ಕಾವ್ಯದ ಮಧು ಪವಾಡದ ಕಥೆಗಳು!
(ಚೈತ್ರ ೧೯೫೪)

ಇದು ಚೈತ್ರದ ಪ್ರಾರಂಭ. ನಿಸರ್ಗದಲ್ಲಿ ಹೊಸ ಚೈತನ್ಯೋತ್ಕರ್ಷದ ಕಾಲ. ಈ ನೆಲದ ಸೃಜನಶೀಲತೆ ಸಮೃದ್ಧವಾದ ಬಣ್ಣ-ಬೆಡಗು-ದನಿಗಳಿಂದ ತನ್ನನ್ನು ತಾನು ಪ್ರಕಟಿಸಿಕೊಳ್ಳುವ ಕಾಲ. ಇಂಥ ಕಾಲವನ್ನು ಕಂಡು ಬೆರಗಾದ ಕವಿಯಿಲ್ಲ; ಮರುಳಾಗದ ಕಲೆಗಾರನಿಲ್ಲ; ಸಂತೋಷಪಡದ ಹೃದಯವಿಲ್ಲ.

ಚೈತ್ರದಿಂದ ಪ್ರಾರಂಭವಾಗಿ ಹೇಮಂತದಲ್ಲಿ ಒಂದು ಸುತ್ತು ಮುಗಿಸಿ, ಮತ್ತೆ ಚೈತ್ರದಿಂದ ಚಲನಶೀಲವಾಗುವ ಈ ಋತುಪರಿವರ್ತನೆಯೂ ಒಂದು ನಿಶ್ಚಿತ ಜೀವನ ಕ್ರಮವನ್ನು ಸಾಂಕೇತಿಸುತ್ತದೆ. ಸ್ವಾರಸ್ಯದ ಸಂಗತಿ ಎಂದರೆ, ನಮ್ಮ ಎಲ್ಲ ಹಬ್ಬಗಳೂ ಒಂದಿಲ್ಲೊಂದು ರೀತಿಯಲ್ಲಿ ಋತು ಪರಿವರ್ತನೆಯ ವಿವಿಧ ಕಾಲಘಟ್ಟಗಳೊಂದಿಗೆ ತಳುಕು ಹಾಕಿಕೊಂಡಿವೆ. ಅದರಲ್ಲೂ ‘ಯುಗಾದಿ’ ಚೈತ್ರೋದಯ ಮೂಲಕ ಪ್ರಾರಂಭವಾಗುವ ಹೊಸವರ್ಷದ ಸಂಭ್ರಮವನ್ನು ಆಚರಿಸುವ ಒಂದು ಹಬ್ಬವಾಗಿದೆ.

ಒಂದು ಕಾಲಕ್ಕೆ, ಅಂದರೆ ಮನುಷ್ಯ ನಿಸರ್ಗಕ್ಕೆ ತೀರಾ ಸಮೀಪವಾಗಿದ್ದಾಗ, ನಿಸರ್ಗದ ಶಿಶುವೇ ಆಗಿದ್ದಾಗ, ಇಂಥ ಚೈತ್ರಮಾಸದ ಚೈತನ್ಯೋತ್ಕರ್ಷವನ್ನು ಹಾಡು,  ಕುಣಿತ, ಉತ್ಸವ, ಆರಾಧನೆಗಳ ಮೂಲಕ, ಅಭಿನಯಿಸಿ, ಆಚರಿಸಿ, ಅದರೊಂದಿಗೆ ತನಗಿರುವ ಗಾಢ ಸಂಬಂಧವನ್ನು ಅನುಭವಿಸುತ್ತಿದ್ದ. ಇದರಿಂದಾಗಿ ‘ವಸಂತೋತ್ಸವ’ದ ಕಲ್ಪನೆ ಹುಟ್ಟಿಕೊಂಡಿತು. ವರ್ಷವರ್ಷವೂ ಚೆಲುವಿನ ಪ್ರಕರ್ಷ ಅಭಿವ್ಯಕ್ತಿಯಂತೆ ಮೈದೋರುವ ಚೈತ್ರದೊಂದಿಗೆ ಅಂದಿನ ಮನುಷ್ಯ ಪಡುತ್ತಿದ್ದ ಆನಂದವನ್ನು, ಅದರೊಂದಿಗೆ ಸ್ಥಾಪಿಸಿಕೊಳ್ಳುತ್ತಿದ್ದ ಸಹಜ ಸಂಬಂಧವನ್ನು ವಸಂತೋತ್ಸವದಂಥ ಆಚರಣೆಗಳು ಸಾಂಕೇತಿಸುತ್ತಿದ್ದವು.

ಆದರೆ ಮನುಷ್ಯ  ನಾಗರಿಕತೆಯಲ್ಲಿ ಮುಂದುವರಿದಂತೆ ಕ್ರಮಕ್ರಮೇಣ ನಿಸರ್ಗದ ಬಾಂಧವ್ಯಗಳಿಂದ ದೂರವಾಗುತ್ತಾ ಬಂದಿದ್ದಾನೆ. ತನಗೂ ಅದಕ್ಕೂ ಇದ್ದ ಹೊಕ್ಕಳ ಬಳ್ಳಿಯ ನೆಂಟನ್ನು ಕಡಿದುಕೊಂಡಿದ್ದಾನೆ. ಆಧುನಿಕ ಸಮಕಾಲೀನ ಸಂದರ್ಭದಲ್ಲಂತೂ ಅಭಿವೃದ್ಧಿಯ ಹೆಸರಿನಲ್ಲಿ, ಯಂತ್ರ ನಾಗರಿಕತೆಯು ವಿಸ್ತರಣೋದ್ಯಮಗಳಲ್ಲಿ, ತನ್ನ ಸುತ್ತಣ ನಿಸರ್ಗದ ಸಸ್ಯ ಶ್ಯಾಮಲತೆಯನ್ನು ನಾಶ ಮಾಡಿದ್ದಾನೆ. ನಿರ್ಮಲವಾಗಿದ್ದ ನದೀ ಜಲಗಳನ್ನು ಕಲ್ಮಷಗೊಳಿಸಿದ್ದಾನೆ. ವಾತಾವರಣವನ್ನು ಧೂಮಮಯವನ್ನಾಗಿ ಮಾಡಿದ್ದಾನೆ. ನಿಸರ್ಗವನ್ನು ವಿಕಾರಗೊಳಿಸಿ ಪ್ರಕೃತಿಯ ಸಮತೋಲವನ್ನು ಹಾಳು ಮಾಡಿದ್ದಾನೆ. ಒಟ್ಟಾರೆಯಾಗಿ ‘ಮಾಲಿನ್ಯ ಯುಗ’ವೊಂದನ್ನು ಪ್ರಾರಂಭಿಸಿ, ತನಗೂ ನಿಸರ್ಗಕ್ಕೂ ಇದ್ದ ಬಹುಕಾಲದ ಬಾಂಧವ್ಯವನ್ನು ಕಡಿದುಕೊಂಡು ಈ ಹೊತ್ತಿನ ಮನುಷ್ಯ ಏಕಾಂಗಿಯಾಗಿ ನಿಂತಿದ್ದಾನೆ.

ಆದರೂ ಚೈತ್ರೋದಯವಾಗಿದೆ. ಹಳೆಯ ಎಲೆಗಳನ್ನು ನಿರ್ದಾಕ್ಷಿಣ್ಯವಾಗಿ ಉದುರಿಸುತ್ತ, ಬೋಳುಬೋಳಾದ ಕೊಂಬೆ-ರೆಂಬೆಗಳ ಮೈಯ್ಯಲ್ಲಿ ಹೊಸ ಚಿಗುರುಗಳನ್ನು ಎಚ್ಚರಿಸುವ ಮತ್ತು ಮೂಡಿಸುವ ಮಾಂತ್ರಿಕಶಕ್ತಿ ಕ್ರಿಯಾಶೀಲವಾಗಿದೆ. ಅದೋ ಅಲ್ಲಿ ಬಟಾಬಯಲಿನಲ್ಲಿ ಯಾರೋ ಸ್ವಿಚ್ಚು ಹಾಕಿದಂತೆ, ಆ ಕಾರಣಕ್ಕಾಗಿ ಝಗ್ಗನೆ ಹೂವಿನ ಹುಚ್ಚು ಹೊತ್ತಿಕೊಂಡಂತೆ ತೋರುವ ಹಳದಿ, ನೇರಿಲೆ ನಸುಗೆಂಪು ಹೂವುಗಳಿಂದ ಜ್ವಲಿಸುವ ಮರಗಳು ಕಣ್ಣನ್ನು ಸೆಳೆಯುತ್ತಿವೆ. ದಾರಿ ಬದಿಯ ಮರಗಳೂ ಇನ್ನೂ ಸ್ವಲ್ಪ ಕಾಲದಲ್ಲಿ ಹೂವಿನ ಮಳೆಗರೆಯುವ ಬಣ್ಣದ ಮೋಡಗಳಂತಾಗುತ್ತ ತಮ್ಮ ಬುಡಕ್ಕೆ ಹೂವಿನ ಹುಡಿಯನ್ನು ಚೆಲ್ಲುತ್ತವೆ. ಕೊಂಬೆ ರೆಂಬೆಗಳ ನಡುವೆ, ಎಲೆಯುದುರಿದಾಗ ಥಟ್ಟನೆ ಬಯಲಾದ ಹಕ್ಕಿಗೂಡುಗಳ ಗುಟ್ಟುಗಳ ಸುತ್ತ ಮತ್ತೆ ಹೊಸ, ಹಸುರು ಬಲೆ ನೇಯುತ್ತದೆ. ಎಂಥ ಬಡಕಲು ಗಿಡವೂ ಸಹ ಚೈತ್ರಸ್ಪರ್ಶದಿಂದ ಚೆಲುವಿನ ಅಪ್ಸರೆಯಾಗಿಬಿಡುತ್ತದೆ. ಈ ಬದುಕನ್ನು ಹೊಸ ಹೊಸತನ್ನಾಗಿ ಮಾಡುವ ನಿಸರ್ಗದ ಮೋಡಿಯೇ ಇಂಥದು.

ಹೀಗೆ ವರ್ಷವರ್ಷವೂ ಹೊಸ ಹೊಸತಾಗುವ ಈ ನಿಸರ್ಗದ ಚೆಲುವಿನ ನಡುವೆ ನಾವೇನಾಗಿದ್ದೇವೆ? ನಾವೋ ದಿನದಿಂದ ದಿನಕ್ಕೆ ಸವೆದು ಹೋಗುತ್ತಿದ್ದೇವೆ. ಶೈಶವದಿಂದ ಬಾಲ್ಯಕ್ಕೆ, ಬಾಲ್ಯದಿಂದ ತಾರುಣ್ಯಕ್ಕೆ, ತಾರುಣ್ಯದಿಂದ ಮಧ್ಯವಯಸ್ಸಿಗೆ, ಅಲ್ಲಿಂದ ವೃದ್ಧಾಪ್ಯಕ್ಕೆ, ಸಾವಿಗೆ ಪ್ರಯಾಣ ಮಾಡುತ್ತಿದ್ದೇವೆ. ಆದರೆ ನಮ್ಮ ಸುತ್ತಲಿನ ಪ್ರಕೃತಿ ಮಾತ್ರ ವರ್ಷವರ್ಷವೂ ಹಳೆಯದನ್ನು ಕಳಚಿಕೊಂಡು, ಹೊಸದನ್ನು ತೊಟ್ಟುಕೊಂಡು ನವನವೀನವಾಗಿ ಮುಂದುವರಿಯುತ್ತಿದೆ. ನಮ್ಮ ಬದುಕು ಯಾಕೆ ಹೀಗೆ ಪ್ರಕೃತಿಯ ಹಾಗೆ, ಹಳೆಯದನ್ನು ಕಳಚಿಕೊಂಡು ಹೊಸ ಹುಟ್ಟುಗಳನ್ನು ಪಡೆದುಕೊಳ್ಳಬಾರದು? ವರಕವಿ ದ. ರಾ. ಬೇಂದ್ರೆಯವರು, ಮನುಷ್ಯನ ಈ ವಿಲಕ್ಷಣ ಕೊರಗನ್ನು ‘ಯುಗಾದಿ’ಯನ್ನು ಕುರಿತ ಕವಿತೆಯೊಂದರಲ್ಲಿ ಅಭಿವ್ಯಕ್ತಗೊಳಿಸಿದ್ದಾರೆ. ಈ ಯುಗಾದಿ ‘ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ; ಆದರೆ ನಮ್ಮನ್ನಷ್ಟೆ ಮರೆತಿದೆ’

ಆದರೆ ಮನುಷ್ಯನ ಮನಸ್ಸು ಈ ಕೊರಗಿನಿಂದ ಪಾರಾಗುವ ದಾರಿಯನ್ನು ಕಂಡುಕೊಂಡಿದೆ ತನ್ನ ಸೃಜನಶೀಲತೆಯ ಮೂಲಕ. ಚೈತ್ರ ಅನ್ನುವುದು ಕೇವಲ ‘ಋತು’ ಅಲ್ಲ, ಅದು ಸೃಜನಶೀಲತೆಯ ಸಂಕೇತವೂ ಹೌದು. ಪ್ರತಿವರ್ಷದ ಚೈತ್ರದಲ್ಲೂ ಈ ಪ್ರಕೃತಿ ಹೊಸಹೊಸತಾಗುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಲೇ ಬದುಕಿಗೆ ಅಗತ್ಯವಾದ ಚಲನಶೀಲತೆಯನ್ನು ಕಾಯ್ದುಕೊಂಡು ಬರುತ್ತಿದೆ. ಹೀಗೆ ಹೊಸ ಹೊಸತಾಗಿ ಹೊಮ್ಮುವುದೇ ನಿಜವಾದ ಸೃಜನಶೀಲತೆಯ ಲಕ್ಷಣ. ನಿಜವಾದ ಅರ್ಥದಲ್ಲಿ ಕವಿ-ಕಲಾವಿದರೂ ಈ ‘ಚೈತ್ರವನ್ನು ಅಥವಾ ಚೈತನ್ಯೋತ್ಕರ್ಷವನ್ನು ತಕ್ಕಮಟ್ಟಿನ ಪ್ರಮಾಣದಲ್ಲಿ ತಮ್ಮ ವ್ಯಕ್ತಿತ್ವದಲ್ಲಿ ಉಳಿಸಿಕೊಂಡವರು. ಆದುದರಿಂದಲೇ ಅವರು ದೈನಂದಿನ ಪರಿಚಿತ ಸಾಧಾರಣ ಸಂಗತಿಗಳನ್ನೂ, ಅನುಭವಗಳನ್ನೂ ತಮ್ಮ ಪ್ರತಿಭೆಯ ಚೈತ್ರಸ್ಪರ್ಶದಿಂದ ಚಿರನೂತನವೆಂಬಂತೆ ಪರಿವರ್ತಿಸಬಲ್ಲರು’.

ಬಹುಹಿಂದೆಯೇ ಶ್ರೇಷ್ಠ ಕವಿಯೂ, ಘನ ವಿದ್ವಾಂಸರೂ ಆದ ಆನಂದವರ್ಧನನು ‘ಸರ್ವೇಜನಾ ಇವಾಂಭಾಂತಿ ಮಧು ಮಾಸ ಇವ ದ್ರುಮಾ’ ಎಂದಿದ್ದಾನೆ. ಕವಿ ಪ್ರತಿಭೆಯ ಸ್ಪರ್ಶದಿಂದ, ಅದೇ, ಪರಿಚಿತವಾದ ಪ್ರಪಂಚದ ಅನುಭವಗಳೂ ಮತ್ತು ಅವುಗಳನ್ನು ಅಭಿವ್ಯಕ್ತಿಸುವ ಪದಗಳೂ ಮಧುಮಾಸದ ಮರಗಳಂತೆ ನವನವತ್ವವನ್ನು ಪಡೆಯುತ್ತವೆ ಎಂಬುದು ಆನಂದವರ್ಧನನ ಮಾತಿನ ಅರ್ಥ.

ಆಚಾರ್ಯ ಶಂಕರರು ಹೇಳುತ್ತಾರೆ- ‘ಮಹಾಂತರಾದ ಸಂತರು ವಸಂತದ ಹಾಗೆ ಈ ಲೋಕಹಿತಕ್ಕಾಗಿ ಸಂಚಾರ ಮಾಡುತ್ತಾರೆ’.

ಯಾವ ಯಾವ ಕಾಲಗಳಲ್ಲಿ ಹಳೆಯ ಆಚಾರ-ವಿಚಾರಗಳಲ್ಲಿ ರೂಢಿ ಜಡತೆಯಿಂದಾಗಿ ಜನಜೀವನವು ಸ್ಥಗಿತಗೊಳ್ಳುತ್ತದೆಯೋ ಅಂಥ ಕಾಲಗಳಲ್ಲಿ ಮಹಾಂತರಾದ ಸಂತರು ವಸಂತದ ಹಾಗೆ ಸಂಚಾರ ಮಾಡುತ್ತಾ ಜೀವನದಲ್ಲಿ ಚೈತನ್ಯೋತ್ಕರ್ಷವನ್ನು ತರುತ್ತಾರೆ.

ಇಂಥ ಚೈತನ್ಯೋತ್ಕರ್ಷದ ಚೈತ್ರದೊಂದಿಗೆ ನಮ್ಮನ್ನು ನಾವು ಬೆಸೆದು ಕೊಂಡಿದ್ದೇವೆಯೇ ಅನ್ನುವುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.

ಚದುರಿದ ಚಿಂತನೆಗಳು : ೨೦೦೦