ಚೋಖಾಮೇಳ — ಪಂಢರಪುರದ ವಿಠ್ಠಲನ ಭಕ್ತ ಶ್ರೇಷ್ಠರಲ್ಲಿ ಒಬ್ಬ. ಇವನನ್ನು ಹಲವರು ಕೀಳು ಜಾತಿಯವನೆಂದು ಕೀಳಾಗಿ ಕಂಡರು, ಇವನಿಗೆ ಹಿಂಸೆ ಕೊಟ್ಟರು. ಆದರೆ ತನ್ನ ಪರಿಶುದ್ಧವಾದ ಭಕ್ತಿ ಮತ್ತು ನಿಷ್ಠೆ ನಿರ್ಮಲ ಜೀವನದಿಂದ ಬೆಳಗಿದ; ಸಂತರ ಪಂಕ್ತಿ ಸೇರಿದ. ಇವನ ಅಭಂಗ ಗಳಿಗೆ ಮರಾಠಿ ಸಾಹಿತ್ಯದಲ್ಲಿ ಹಿರಿಯ ಸ್ಥಾನವಿದೆ.

ಕೋರೆಗಾಂವ ಎಂಬ ಗ್ರಾಮದಲ್ಲಿ ಒಬ್ಬ ಪಟೇಲನಿದ್ದ. ಅವನು ಒಳ್ಳೆಯ ಭಾವಿಕನೂ ಏಕನಿಷ್ಠ ವಿಠ್ಠಲ ಭಕ್ತನೂ ಆಗಿದ್ದನು. ಯಾವುದೇ ಹೊಸ ಸಾಮಾನು ಮನೆಗೆ ಬಂದರೂ ಅದನ್ನು ದೇವರಿಗೆ ಅರ್ಪಿಸದೆ ಸ್ವೀಕರಿಸುತ್ತಿರಲಿಲ್ಲ; ಬಳಸುತ್ತಿರಲಿಲ್ಲ. ಇದು ಅವನು ಸ್ವಲ್ಪವೂ ಚಾಚೂ ತಪ್ಪದೆ ನಡೆಸಿಕೊಂಡು ಬಂದ ನಿಯಮವಾಗಿತ್ತು.

ಹಣ್ಣು ಹೊತ್ತ ಗಂಡ-ಹೆಂಡತಿ

ಒಂದು ವರ್ಷ ಅವನ ಮಾವಿನ ಗಿಡಗಳಲ್ಲಿ ಹಿಂದೆಂದೂ ಆಗದಷ್ಟು ಕಾಯಿಗಳಾದವು. ಅವು ಹಣ್ಣಾದನಂತರ ಅವುಗಳಲ್ಲಿ ಅತ್ಯುತ್ತಮವಾದ ೧೨೫ ಹಣ್ಣುಗಳನ್ನು ಆರಿಸಿ ವಿಠ್ಠಲನಿಗೆ ಅರ್ಪಿಸಲೆಂದು ಪಂಢರಪುರಕ್ಕೆ ಕಳಿಸಿದನು.

ಆರಿಸಿದ ಆ ಹಣ್ಣುಗಳನ್ನು ಆಳಿನೊಡನೆ ಪೂಜಾರಿ ಗಳಿಗೆ ಚೀಟಿ ಬರೆದುಕೊಟ್ಟು ಕಳಿಸಿದನು. ಈ ಆಳಿನ ಹೆಸರು ಸುದಾಮ. ಅವನ ಹೆಂಡತಿಯ ಹೆಸರು ಸಾವಿತ್ರಿಬಾಯಿ. ದಂಪತಿಗಳಿಬ್ಬರೂ ವಿಠ್ಠಲನ ಅನನ್ಯ ಭಕ್ತರಾಗಿದ್ದರು. ನಿಷ್ಠೆಯಿಂದ ತಮ್ಮ ಒಡೆಯನು ಕೊಟ್ಟ ಹಣ್ಣುಗಳನ್ನು ತೆಗೆದುಕೊಂಡು ಪಂಢರಪುರದ ದಾರಿ ಹಿಡಿದರು. ಆ ದಂಪತಿಗಳ ಮನಸ್ಸು ವಿಠ್ಠಲ ಮಂದಿರದ ಕಳಸವನ್ನು ಯಾವಾಗ ಕಂಡೇವು, ಮಹಾದ್ವಾರದ ಮುಂದೆ ನಿಂತು ವಿಠ್ಠಲನ ಘೋಷ ಯಾವಾಗ ಮಾಡೇವು ಎಂದು ತವಕಪಡುತ್ತಿತ್ತು. ವಿಠ್ಠಲನನ್ನು ಕಾಣುವ ಹಂಬಲದಲ್ಲಿ ಅವರಿಗೆ ಬಿಸಿಲು, ಹಸಿವು – ನೀರಡಿಕೆ, ದಣಿವುಗಳ ಪರಿವೆಯೇ ಇರಲಿಲ್ಲ.

ಸ್ವಲ್ಪ ದಾರಿ ಕ್ರಮಿಸಿದ ಮೇಲೆ ಸಾವಿತ್ರಿಬಾಯಿಯು ಗಂಡನಿಗೆ, “ನಮ್ಮ ಸುದೈವ, ವರ್ಷ ಎರಡನೆಯ ಸಲ ವಿಠ್ಠಲನ ದರ್ಶನಯೋಗ ಲಭಿಸಿದೆ” ಎಂದು ನುಡಿದಳು.

“ಹೌದು, ಏನೋ ವಿಶೇಷ ಅನುಗ್ರಹವಾಗುವ ಯೋಗವಿದ್ದಂತೆ ತೋರುತ್ತದೆ. ನಾವು ಹೊತ್ತ ಹರಕೆ ಕೈಗೊಡುವ ಕಾಲ ಸನ್ನಿಹಿತವಾಗಿದೆಯೆಂದು ಕಾಣುತ್ತದೆ” ಎಂದು ಸುದಾಮನು ಹೆಂಡತಿಯ ಮನದಾಳದಲ್ಲಿಯ ಮಾತನ್ನೇ ಆಡಿದನು. ಆ ದಂಪತಿಗಳಿಗೆ ಬಹುದಿನಗಳಿಂದ ಮಕ್ಕಳಾಗಿರಲಿಲ್ಲ.

ವೃದ್ಧ ಬ್ರಾಹ್ಮಣನಿಗೆ ಹಣ್ಣು

ಈ ಪ್ರಯಾಣದಲ್ಲಿ ಒಂದು ವಿಶೇಷ ಸಂಗತಿ ನಡೆಯಿತು ಎಂದು ಭಕ್ತರು ಹೇಳುತ್ತಾರೆ.

ಇನ್ನೇನು ಪಂಢರಪುರವು ಒಂದೆರಡು ಮೈಲುಗಳಷ್ಟು ದೂರ ಉಳಿದಿರಬಹುದು. ಅಷ್ಟರಲ್ಲಿ ವೃದ್ಧ ಬ್ರಾಹ್ಮಣ ನೊಬ್ಬನು ಅವರಿಗೆ ಎದುರಾದನು. ಅವನು ಹಸಿದು ಕಂಗಲಾಗಿದ್ದನು. “ಕಳೆದ ಮೂರು ದಿನಗಳಿಂದ ಒಂದು ತುತ್ತೂ ಅನ್ನ ಸಿಕ್ಕಿಲ್ಲ. ಏನಾದರೂ ತಿನ್ನಲು ಕೊಡಿ” ಎಂದು ದೈನ್ಯದಿಂದ ಕೇಳಿದನು. “ನಿನಗೆ ಕೊಡಲು ನಮ್ಮಲ್ಲಿ ಏನೂ ಇಲ್ಲ ; ಮೇಲಾಗಿ ನಾವು ಅಸ್ಪೃಶ್ಯರು. ನೀನು ಬ್ರಾಹ್ಮಣನಂತೆ ಕಾಣುತ್ತಿ. ನಮ್ಮ ತಲೆಯ ಮೇಲಿರುವ ಈ ಮಾವಿನ ಹಣ್ಣುಗಳು ನಮ್ಮವಲ್ಲ. ಇನ್ನೊಬ್ಬರು ಕೊಟ್ಟಿದ್ದನ್ನು ದೇವರಿ ಗಾಗಿ ಒಯ್ಯುತ್ತಿದ್ದೇವೆ” ಎಂದು ನುಡಿದು ಸುದಾಮನು ಮುಂದೆ ಸಾಗಿದನು.

ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಸಾವಿತ್ರಿ ಬಾಯಿಯನ್ನು ಆ ವೃದ್ಧ ಬ್ರಾಹ್ಮಣನು ಅದೇ ರೀತಿ ಬೇಡಿ ಕೊಂಡನು. ಹಸಿದು ಕಂಗಾಲಾದ ಆ ವೃದ್ಧ ಬ್ರಾಹ್ಮಣನ ಮೇಲೆ ಅವಳಿಗೆ ಕರುಣೆ ಬಂದಿತು. ಯಾವ ವಿಚಾರವೂ ಮಾಡದೆ ತಲೆಯಮೇಲಿನ ಬುಟ್ಟಿಯಿಂದ ಹಣ್ಣೊಂದನ್ನು ತೆಗೆದು ಅವನ ಕೈಯಲ್ಲಿಟ್ಟಳು. ಆ ವೃದ್ಧ ಬ್ರಾಹ್ಮಣನು ಅದನ್ನು ಕಚ್ಚಿನೋಡಿ ಹುಳಿ ಇದೆ ಎಂದು ಸಾವಿತ್ರಿ ಬಾಯಿಗೆ ಹಿಂತಿರುಗಿಸಿದನು. ತಾನು ಕೊಟ್ಟ ಹಣ್ಣು ಹುಳಿಯಾಯಿತಲ್ಲ ಎಂದು ಅವಳಿಗೆ ಬಹಳ ಹಳಹಳಿಯಾಯಿತು. ಅವನು ಎಂಜಲು ಮಾಡಿಕೊಟ್ಟ ಆ ಹಣ್ಣನ್ನು ಉಡಿಯಲ್ಲಿ ಹಾಕಿಕೊಂಡು ಮುಂದಕ್ಕೆ ಸಾಗಿದಳು.

ಉಡಿಯಲ್ಲಿ ಮಗು

ಪಂಢರಪುರಕ್ಕೆ ತಲುಪಿದ ಕೂಡಲೆ ಪೂಜಾರಿಗಳಿಗೆ ತಾವು ತಂದ ಹಣ್ಣುಗಳನ್ನೂ ಚೀಟಿಯನ್ನೂ ಒಪ್ಪಿಸಿದರು. ಪೂಜಾರಿಗಳು ಚೀಟಿಯ ಪ್ರಕಾರ ಹಣ್ಣುಗಳನ್ನು ಎಣಿಸಿ ನೋಡಿದರು. ಒಂದು ಹಣ್ಣು ಕಡಿಮೆ ಇದ್ದದ್ದು ಕಂಡು ಬಂದಿತು. “ಒಂದು ಹಣ್ಣು ಕಡಿಮೆ ಏಕೆ ?” ಎಂದು ಜಬರಿಸಿದರು. ಸುದಾಮನಿಗೆ ಏನೂ ತೋಚದಾಯಿತು.  ಆಗ ಸಾವಿತ್ರಿಬಾಯಿಯು ಮುಂದೆ ಬಂದು ದಾರಿಯಲ್ಲಿ ನಡೆದ ಸಂಗತಿಯನ್ನು ವಿವರಿಸಿ ಹೇಳಿದಳು. ಮತ್ತು ಆ ವೃದ್ಧ ಬ್ರಾಹ್ಮಣನು ಹುಳಿ ಎಂದು ಕಚ್ಚಿಕೊಟ್ಟ ಹಣ್ಣು ತನ್ನ ಉಡಿಯಲ್ಲಿದೆಯೆಂದು ತೆಗೆದು ತೋರಿಸಿದಳು.

ಆಶ್ಚರ್ಯ ! ಆಕೆಯ ಉಡಿಯಲ್ಲಿ ಕಚ್ಚಿದ ಹಣ್ಣಿನ ಬದಲು ಕುಲುಕುಲು ನಗುವ ಮುದ್ದು ಮಗು ಇತ್ತೆಂದು ಹೇಳುತ್ತಾರೆ.  ‘ಆಂಬೀಯಾಂಚೆ ಬಾಳ ಝಾಲೆ ತೇವ್ಹಾಂ’ (ಆಗ ಮಾವಿನಹಣ್ಣೇ ಶಿಶುರೂಪ ತಾಳಿತ್ತು) ಎಂದು ನಾಮದೇವನು ವರ್ಣಿಸಿದ್ದಾನೆ. ಅಲ್ಲಿ ನೆರೆದವರೆಲ್ಲರೂ ‘ವಿಠ್ಠಲನ ಲೀಲೆ ಅಗಾಧ’ ಎಂದು ಉದ್ಗಾರ ತೆಗೆದರಂತೆ. ದೇವರು ಮಾವಿನಹಣ್ಣನ್ನು ಕಚ್ಚಿ ಪ್ರಸಾದರೂಪವಾಗಿ ಈ ಕೂಸನ್ನು ಕೊಟ್ಟಿದ್ದಾನೆ ಎಂದು ನಂಬಿ ಕೂಸನ್ನು ‘ಚೋಖಾಮೇಳ’ ಎಂದು ಕರೆದರು. ಮರಾಠಿ ಭಾಷೆಯಲ್ಲಿ ‘ಚೋಖಲಾ’ ಅಂದರೆ ‘ಕಚ್ಚಿದನು’ ಎಂದು ಅರ್ಥ. ಆದ್ದರಿಂದ ಮಗುವಿಗೆ ಚೋಖಾಮೇಳ ಎಂದು ಹೆಸರಿಟ್ಟರು. ಈ ಅಲೌಕಿಕ ಘಟನೆಯ ಬಗ್ಗೆ ಇಪ್ಪತ್ತಾರು ಸಾಲುಗಳ ಒಂದು ಕಥನ ಕವನವು ಇಂದಿಗೂ ಜನರ ಬಾಯಲ್ಲಿ ಇದೆ. ಈ ಕವನದ ಕೊನೆಯ ಪಂಕ್ತಿಯಲ್ಲಿ ‘ನಾಮ ಮ್ಹಣೆ’ ಎಂಬ ಸಂತ ನಾಮದೇವನ ಅಂಕಿತವಿದೆ. ಆದ್ದರಿಂದ ಈ ಕಥನ ಕವನದ ಕರ್ತೃ ನಾಮದೇವನಿರಬೇಕೆಂದು ಭಾವಿಸಲಾಗಿದೆ.

ಚೋಖಾಮೇಳನ ಜನನದ ವಿಷಯವಾಗಿ ಪ್ರಚಲಿತ ವಿರುವ ಲೋಕ ಕಥೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಅಲೌಕಿ ಕತೆಯ ಅಂಶ ಕಡಿಮೆಯಿದೆ. ಆ ಕಥೆಯ ಸಾರವಿಷ್ಟು : ವಿಠ್ಠಲನು ವೃದ್ಧ ಬ್ರಾಹ್ಮಣನ ವೇಷ ಧರಿಸಿ ಬಂದು ಸಾವಿತ್ರಿಬಾಯಿಯು ಕೊಟ್ಟ ಮಾವಿನಹಣ್ಣನ್ನು ಕಚ್ಚಿ ಪ್ರಸಾದರೂಪವಾಗಿ ಅದನ್ನೇ ಅವಳಿಗೆ ತಿರುಗಿ ಕೊಟ್ಟನು. ಅನಂತರ ಅವಳು ಆ ಹಣ್ಣನ್ನು ಸೇವಿಸಿದಳು. ತತ್‌ಫಲ ವಾಗಿ ಗಂಡು ಕೂಸಿಗೆ ಜನ್ಮವಿತ್ತಳು. ಇನ್ನೂ ಕೆಲವು ಭಾವಿಕರು, ವಿಶೇಷವಾಗಿ ವಾರಕರಿ ಪಂಥದವರು ಚೋಖಾಮೇಳನು ಜಯದೇವ ಕವಿಯ ಅವತಾರ ಎಂದು ನಂಬುತ್ತಾರೆ.

ಚೋಖಾಮೇಳನ ಜನ್ಮಸ್ಥಾನದ ಬಗ್ಗೆ ಸಾಕಷ್ಟು ವಿವಾದವಿದೆ. ಸಂತ ಮಹೀಪತಿಯು ಚೋಖಾಮೇಳನು ಪಂಡರಪುರದವನೇ ಮತ್ತು ಪಂಢರಪುರದಲ್ಲಿಯೇ ವಾಸ ವಾಗಿದ್ದನು ಎಂದು ಉಲ್ಲೇಖಿಸಿದ್ದಾನೆ. ಇನ್ನೂ ಕೆಲವರು ಚೋಖಾಮೇಳನು ಮಂಗಳವೇಡೆಯಲ್ಲಿ ಜನಿಸಿದನು, ಅಲ್ಲಿಯೇ ಬೆಳೆದು ದೊಡ್ಡವನಾದನು, ಮುಂದೆ ಅವನ ಕಾರ್ಯಕ್ಷೇತ್ರ ಪಂಢರಪುರವಾಯಿತೆಂದು ಅಭಿಪ್ರಾಯ ಪಟ್ಟಿದ್ದಾರೆ. ಡಾಕ್ಟರ್ ಅಂಬೇಡಕರರು ಚೋಖಾ ಮೇಳನು ವರ‍್ಹಾಡ ಪ್ರಾಂತದವನು ಎಂದು ಅಭಿಪ್ರಾಯಪಟ್ಟಿದ್ದಾರೆ. ಚೋಖಾಮೇಳನ ಜನ್ಮ ದಿನಾಂಕದ ಬಗ್ಗೆಯೂ ನಿಶ್ಚಿತವಾಗಿ  ಏನೂ ಹೇಳಲು ಸಾಧ್ಯವಿಲ್ಲ. ಹದಿಮೂರನೆಯ ಶತಮಾನದ ಕೊನೆಯಲ್ಲಿ ಮತ್ತು ಹದಿನಾಲ್ಕನೆಯ ಶತಮಾನದ ಪ್ರಾರಂಭದಲ್ಲಿ ಇದ್ದ ಎಂದು ಹೇಳಬಹುದು.

ಚೋಖಾಮೇಳನ ಜನನದನಂತರ ಅವನ ತಾಯಿ_ ತಂದೆಗಳು ಪಂಢರಪುರಕ್ಕೆ ಬಂದು ನೆಲಸಿದರು. ಮುಂದೆ ಅವರಿಗೆ ಒಂದು ಹೆಣ್ಣು ಮಗುವೂ ಆಯಿತು. ಆ ಕೂಸಿಗೆ ನಿರ್ಮಲಾ ಎಂದು ನಾಮಕರಣ ಮಾಡಿದರು. ಚೋಖಾ ಮೇಳನ ಬಾಲ್ಯ ಜೀವನದ ಬಗ್ಗೆ ಹೆಚ್ಚು ತಿಳಿದು ಬರುವುದಿಲ್ಲ.

ಸಮಾಜಕ್ಕೇ ಅನಾರೋಗ್ಯ

ಮನೆಯಲ್ಲಿ ಅಷ್ಟದಾರಿದ್ರ್ಯ. ಶೂದ್ರಕುಲದಲ್ಲಿ ಜನಿಸಿದ್ದಕ್ಕೆ ಉಚ್ಚವರ್ಣೀಯರಿಂದ ಹೆಜ್ಜೆಹೆಜ್ಜೆಗೆ ಅವಹೇಳನ, ತಿರಸ್ಕಾರ. ಹೀಗೆ ಚೋಖಾಮೇಳನು ತಲೆಯನ್ನೇ ಎತ್ತಲಾರದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಬೆಳೆದುಕೊಂಡು ಬಂದನು. ಉಚ್ಚನೀಚ, ಸ್ಪೃಶ್ಯಅಸ್ಟೃಶ್ಯ, ಕುಲೀನಕುಲಹೀನ ಎಂಬ ಸಾಮಾಜಿಕ ವಿಷಮತೆಯು ವಿಕಾರ ರೂಪವನ್ನು ತಳೆದು ಸಮಾಜದ ಸ್ವಾಸ್ಥ್ಯವನ್ನೇ ಕದಡಿದ್ದ ಕಾಲವದು. ಧಾರ್ಮಿಕ ಕ್ಷೇತ್ರದಲ್ಲಿಯ ಕೆಲವರು ತಮ್ಮ ಸ್ವಾರ್ಥವನ್ನೇ ಬೆಳೆಸಿ ಕೊಂಡರು. ಇದರಿಂದ ಬಹುಪಾಲು ಜನತೆ ಆಧ್ಯಾತ್ಮಿಕ ಜ್ಞಾನದಿಂದ ವಂಚಿತವಾಗಿಯೇ ಉಳಿದುಕೊಂಡು ಬಂದಿತ್ತು.

ಧಾರ್ಮಿಕ ಕ್ರಾಂತಿ

ಇದೇ ಕಾಲಕ್ಕೆ ಸಂತ ಶಿರೋಮಣಿ, ಜ್ಞಾನಿಗಳ ಅರಸ ಜ್ಞಾನೇಶ್ವರನ ಅವತಾರವಾಯಿತು. ಜ್ಞಾನೇಶ್ವರರು ಸಂಸ್ಕೃತ ಭಾಷೆಯಲ್ಲಿಯೇ ಉಳಿದಿದ್ದ ವೇದಾಂತ ಜ್ಞಾನವನ್ನು ಬಹುಜನರ ಹಿತಕ್ಕಾಗಿ ಎಲ್ಲರಿಗೂ ಸುಲಭವಾಗಿ ತಿಳಿಯು ವಂತೆ ಮರಾಠಿ ಭಾಷೆಯಲ್ಲಿ ಬರೆದು ಪ್ರಚುರಪಡಿಸಿದರು.  ಹಿಂದುಧರ್ಮದ ವಿಕಾಸದ ಪರಿಪಕ್ವ ಫಲವಾದ ಭಾಗವತ ಧರ್ಮವು ಎಲ್ಲೆಡೆಯಲ್ಲಿ ಪ್ರಸಾರಗೊಂಡು ಭಕ್ತಿ ಭಾಗೀರಥಿಯು ಶ್ರೀಸಾಮಾನ್ಯನ ಮನೆಯಂಗಳದಲ್ಲಿ ಹರಿ ಯುವಂತಾಯಿತು. ಈ ಭಾಗವತ ಧರ್ಮವು ಸಮಾಜದ ಎಲ್ಲ ಸ್ತರಗಳಲ್ಲಿಯ ಜನರ ಜೀವನಕ್ಕೆ ಆಧ್ಯಾತ್ಮಿಕ ಅಧಿಷ್ಠಾನವನ್ನು ಒದಗಿಸಿಕೊಟ್ಟಿತು. ‘ಸಕಳಾಂಸಿ ಯೇಥೆ ಆಹೆ ಅಧಿಕಾರ’ (ಇಲ್ಲಿದೆ ಎಲ್ಲರಿಗೂ ಅಧಿಕಾರ) ಎಂದು ಸಾರಿ, ಜ್ಞಾನದೇವ, ನಾಮದೇವನೇ ಮೊದಲಾದ ಸಂತರು  ಶ್ರೀಸಾಮಾನ್ಯನಿಗಾಗಿ ಮೋಕ್ಷಸುಖದ ಅನ್ನಛತ್ರವನ್ನೇ ತೆಗೆದರು. ಉಚ್ಚನೀಚ, ಅಜ್ಞಸುಜ್ಞ, ಸ್ತ್ರೀ-ಪುರುಷ, ಈ ಜಾತಿ ಆ ಜಾತಿ ಎನ್ನದೆ ಎಲ್ಲರೂ ಭಾಗವತ ಧರ್ಮದ ಧ್ವಜದಡಿಯಲ್ಲಿ ಬಂದು ಸೇರಿದರು. ಈ ಧಾರ್ಮಿಕ ಕ್ರಾಂತಿಯ ಫಲವಾಗಿ ಸಮಾಜದಲ್ಲಿ ಎಲ್ಲ ಜಾತಿ ವರ್ಗಗಳಲ್ಲಿ ಸಂತ, ಮಹಂತ, ಭಕ್ತ ಶಿರೋಮಣಿಗಳು ಜನ್ಮವೆತ್ತಿ ಬಂದರು. ಜ್ಞಾನದೇವ, ನಾಮದೇವ, ಗೋರಕುಂಬಾರ, ವಿಸೋಬಾ ಖೇಚರ, ಸಾವಂತಮಾಳಿ, ನರಹರಿ ಸೋನಾರ, ಬಂಕಾ ಮಹಾರ, ಚೋಖಾಮೇಳ, ಮುಕ್ತಾಬಾಯಿ, ಜನಾಬಾಯಿ ಮೊದಲಾದ ಮಹಾನ್ ಸಂತರು ಜನ್ಮವೆತ್ತಿ ಬಂದು ಭಾಗವತ ಧರ್ಮದ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದರು. ಹೀಗೆ ಮಹಾರಾಷ್ಟ್ರದ ಅಧ್ಯಾತ್ಮಿಕ ಇತಿಹಾಸದಲ್ಲಿ ಕ್ರಿಸ್ತಶಕ ಹದಿಮೂರನೆಯ ಶತಮಾನವು ಸುವರ್ಣಕಾಲವಾಗಿ ಮೆರೆದಿದೆ.

ಹುಟ್ಟಿನಿಂದಲೆ ವಿಠ್ಠಲಭಕ್ತಿಯನ್ನು ಪಡೆದ ಚೋಖಾಮೇಳನು ತನ್ನ ಸಮಾಜದ ನೂರಾರು ಜನ ರೊಂದಿಗೆ ಈ ಧಾರ್ಮಿಕ ಕ್ರಾಂತಿಯಲ್ಲಿ ಪಾಲುಗೊಂಡನು. ಸಂತ ನಾಮದೇವನು ತೆರೆದ ಬಾಹುಗಳಿಂದ ಚೋಖಾ ಮೇಳನನ್ನು ಬರಮಾಡಿಕೊಂಡನು. ಅವನಿಗೆ ‘ವಿಠ್ಠಲ’ ಎಂಬ ಮೂರಕ್ಷರದ ಮಂತ್ರೋಪದೇಶ ಮಾಡಿ ಭಾಗವತ ದೀಕ್ಷೆಯನ್ನು ಕೊಟ್ಟನು.

ಕುಟುಂಬ

ಸೋಯರಾಬಾಯಿಯು ಚೋಖಾಮೇಳನಿಗೆ ಅನು ರೂಪಳಾದ ಪತ್ನಿಯಾಗಿದ್ದಳು. ಇಚ್ಛೆಯರಿವ ಸತಿ ಯಾಗಿದ್ದಳು. ತನ್ನ ಪತಿಯ ಭಕ್ತಿಮಯ ಜೀವನದಲ್ಲಿ ಒಂದಾಗಿದ್ದಳು. ಚೋಖಾಮೇಳನ ಸಹವಾಸದಿಂದ ಆಕೆಯಲ್ಲಿ ಸುಪ್ತವಾಗಿದ್ದ ಹರಿಭಕ್ತಿಯು ಜಾಗೃತಗೊಂಡು ಅವಳು ಕೂಡ ಭಕ್ತಿಯನ್ನು ವ್ಯಕ್ತಪಡಿಸುವ ಅಭಂಗಗಳನ್ನು ರಚಿಸಹತ್ತಿದಳು. ಸೋಯರಾಬಾಯಿಯ ತಮ್ಮನಾದ ಬಂಕಾ ಎಂಬಾತನು ಚೋಖಾಮೇಳನು ಬಂಕಾನ ಅಂತಃಕರಣ ದಲ್ಲಿದ್ದ ಭಕ್ತಿಭಾವಕ್ಕೆ ಪ್ರೇರಣೆಯನ್ನಿತ್ತು ಅವನ ಮುಖ ದಿಂದಲೂ ಅಭಂಗವಾಣಿಯು ಪ್ರವಹಿಸುವಂತೆ ಮಾಡಿ ದ್ದನು. ಅಂದಿನ ಸಂತರ ಸಮುದಾಯದಲ್ಲಿ ಬಂಕಾನಿಗೆ ಒಳ್ಳೆಯ ಗೌರವಸ್ಥಾನವಿತ್ತು. ಇದರಂತೆ ಚೋಖಾಮೇಳನ ತಂಗಿ ನಿರ್ಮಲಾ ಕೂಡ ಅಣ್ಣನಂತೆ ಜನ್ಮಜಾತ ಭಕ್ತಳಾಗಿದ್ದಳು. ಅವಳು ರಚಿಸಿದ ಅನೇಕ ಅಭಂಗಗಳು ಇಂದಿಗೂ ಜನರ ಬಾಯಲ್ಲಿ ಇವೆ. ಮುಂದೆ ನಿರ್ಮಲಾ ಬಂಕಾನ ಕೈಹಿಡಿದು ಸುಖಸಂಸಾರವನ್ನು ನಡೆಸಿದಳು. ಹೀಗೆ ಚೋಖಾಮೇಳನ ಪರಿವಾರದವರೆಲ್ಲರೂ ವಿಠ್ಠಲ ಭಕ್ತಿವಾಹಿನಿಯಲ್ಲಿ ಮಿಂದು ಸಂತುಷ್ಟರಾಗಿ ಬಾಳುತ್ತಿದ್ದರು.

ಬಹು ದಿನಗಳಾದರೂ ಚೋಖಾಮೇಳಸೋಯರಾ ಬಾಯಿ ದಂಪತಿಗಳಿಗೆ ಮಕ್ಕಳಾಗಲಿಲ್ಲ. ‘ದುಃಖರೂಪ ದೇಹ, ದುಃಖ ಸಂಸಾರ ! ಎಲ್ಲಿಯೂ ಇಲ್ಲ ಸುಖದ ವಿಚಾರ’ ಎಂದು ಹಾಡುವ ವೈರಾಗ್ಯನಿಧಿ ಚೋಖಾಮೇಳ ನಿಗೆ ಮಕ್ಕಳಿಲ್ಲದ ಕೊರತೆ ಅಸಹನೀಯವಾಗಲಿಲ್ಲ. ಆದರೆ ಹೆಂಡತಿ ಸೋಯರಾಬಾಯಿ ಸ್ತ್ರೀ ಸಹಜವಾದ ಮಕ್ಕಳ ಬಯಕೆಯಿಂದ ಒಳಗೊಳಗೇ ಕೊರಗುತ್ತಿದ್ದಳು. ಕೆಲವು ವೇಳೆ ತನ್ನ ಮನದ ಕೊರಗು, ಬೇಗುದಿ ಆ ಭಗವಂತನಿಗೆ ಗೊತ್ತು ಎಂದು ಎಲ್ಲ ಭಾರವನ್ನು ವಿಠ್ಠಲನ ಮೇಲೆ ಹಾಕಿ ನಿಶ್ಚಿಂತಳಾಗುತ್ತಿದ್ದಳು.

ಮುಂದೆ ಸೋಯರಾಬಾಯಿಗೆ ಪುತ್ರಸಂತಾನ ವಾಯಿತು. ಮಗುವಿಗೆ ಕರ್ಮವೇಳ ಎಂದು ನಾಮಕರಣ ಮಾಡಿದರು. ಮುಂದೆ ಕರ್ಮಮೇಳನು ತಂದೆಯಂತೆ ವಿಠ್ಠಲಭಕ್ತನಾದನು. ನೂರಾರು ಅಭಂಗಗಳನ್ನು ರಚಿಸಿ ಪ್ರಸಿದ್ಧನಾದನು. ತನ್ನ ಅಭಂಗಗಳಲ್ಲಿ ಕರ್ಮಮೇಳನು ಧರ್ಮದ ಹೆಸರಿನ ಮೇಲೆ ಅಂದು ನಡೆಯುತ್ತಿದ್ದ ಅತ್ಯಾಚಾರಅನ್ಯಾಯಗಳ ಮೇಲೆ, ಹೀನ ಜಾತಿಯವ ರೆಂದು ದೂರ ತಳ್ಳುತ್ತಿದ್ದ ಸಂಪ್ರದಾಯದ ವೈದಿಕರ ಮೇಲೆ ತೀಕ್ಷ್ಣ ಪ್ರಹಾರ ಮಾಡಿದ್ದಾನೆ. ಹೀಗೆ ಒಂದೇ ಕುಟುಂಬದ ಐದು ಜನರೂ ಅಭಂಗ ರಚನೆ ಮಾಡಿದ್ದು ಮಹಾರಾಷ್ಟ್ರದ ಭಾಗವತ ಸಂಪ್ರದಾಯದ ಪರಂಪರೆಯಲ್ಲಿ ಅಪೂರ್ವ ಘಟನೆಯಾಗಿದೆ.

ಪಂಡರಪುರದಿಂದ ಆಚೆಗೆ

ಚೋಖಾಮೇಳನು ಗುರುಗಳಾದ ಸಂತ ನಾಮ ದೇವರು ತೋರಿದ ಭಕ್ತಿಮಾರ್ಗದಲ್ಲಿ ಮುಂದುವರಿದನು. ಸಂಪ್ರದಾಯದ ವೈದಿಕರು ಚೋಖಾಮೇಳನನ್ನು ಹೀನ ಜಾತಿಯವನೆಂದು, ಅಸ್ಪೃಶ್ಯನೆಂದು ಹಳಿದು ಹೀಯಾಳಿಸಿ ಹತ್ತಿರ ಬರಗೊಡುತ್ತಿರಲಿಲ್ಲ. ಸದಾಕಾಲ ನಾಮ ಸಂಕೀರ್ತನೆಯಲ್ಲಿ ತನ್ಮಯ, ತಲ್ಲೀನನಾಗಿರುತ್ತಿದ್ದ ಚೋಖಾ ಮೇಳನಿಗೆ ಇದಾವುದರ ಪರಿವೆ ಇರಲಿಲ್ಲ. ‘ದೇವರನ್ನು ನೋಡಲು ಅವಕಾಶ ಮಾಡಿಕೊಡದಿದ್ದರೂ ಮಂದಿರದ ಮಹಾದ್ವಾರದ ಮುಂದೆ ನಿಂತು ಭಜನೆ ಮಾಡಲು ಅನುಮತಿಯಿತ್ತಿದ್ದಾರಲ್ಲ, ಇಷ್ಟೇ ಸಾಕು’ ಎಂದು ಸಮಾಧಾನ ತಳೆದು ಸಕಲ ಸಾಧನಗಳ ಸಾರ ಸರ್ವಸ್ವವಾದ ನಾಮರೂಪ ಸಾಧನದಲ್ಲಿ ನಿರತನಾದನು.

ಆದರೆ ದುರ್ದೈವದಿಂದ ಮಹಾದ್ವಾರದ ಮುಂದೆ ನಿಂತು ಕೀರ್ತನೆ, ಭಜನೆ ಮಾಡುವುದಕ್ಕೂ ಸಂಚಕಾರ ಬಂದಿತು. ಒಂದು ದಿನ ಪೂಜಾರಿಗಳು ‘ದೇವರಿಗೆ ಮೈಲಿಗೆಯಾಯಿತು, ಇದಕ್ಕೆ ಚೋಖಾಮೇಳನೇ ಮುಖ್ಯ ಕಾರಣ’ ಎಂದು ಆರೋಪ ಹೊರಿಸಿ ಅವನು ಪಂಢರಪುರ ದಿಂದ ಆಚೆ ಇರಬೇಕೆಂದು ಶಿಕ್ಷೆ ವಿಧಿಸಿದರು. ಆಜ್ಞೆಯಿಂದ ಚೋಖಾಮೇಳನು ಬಹಳ ನೊಂದುಕೊಂಡನು. ಮಾರುತ್ತರ ಕೊಡದೆ ಆಜ್ಞೆಯನ್ನು ಪಾಲಿಸಿದನು. ಚಂದ್ರಭಾಗಾ ನದಿಗೂ ತನ್ನಿಂದ ಮೈಲಿಗೆಯಾಗದಿರಲೆಂದು ನದಿಯ ಆಚೆಯ ದಡದಲ್ಲಿ ಗುಡಿಸಲು ಹಾಕಿಕೊಂಡು ಇರಹತ್ತಿದನು. ಅಲ್ಲಿಯೆ ಕಲ್ಲಿನಿಂದ ಒಂದು ದೀಪಮಾಲೆಯನ್ನು ನಿರ್ಮಿಸಿದನು. ಅಲ್ಲಿಂದಲೆ ವಿಠ್ಠಲನ ಕಡೆಗೆ ಮುಖ ಮಾಡಿಕೊಂಡು ನಿಂತು ಭಜನೆ ಮಾಡುತ್ತಿದ್ದನು. ಇಂದಿಗೂ ಆ ದೀಪಮಾಲೆಯ ಅವಶೇಷವು ಚೋಖಾಮೇಳನ ನಿಸ್ಸೀಮ ಭಕ್ತಿಗೆ ಸಾಕ್ಷ್ಯ ಹೇಳುತ್ತಿದೆ.

ಮಧ್ಯ ರಾತ್ರಿಯಲ್ಲಿ ಬಂದ ಅತಿಥಿ

ಭಕ್ತಿ ಮಾರ್ಗದಲ್ಲಿ ಮುನ್ನಡೆದಂತೆ ಚೋಖಾಮೇಳ ನಿಗೆ ದೇವರನ್ನು ಪ್ರತ್ಯಕ್ಷ ಕಾಣಬೇಕೆಂಬ ಹಂಬಲ, ತಳಮಳ ದಿನೇದಿನೇ ಬಲವಾಗಹತ್ತಿತು. ನಿಂತಲ್ಲಿ, ಕುಳಿತಲ್ಲಿ ಆ ದೇವನನ್ನು ಹೇಗೆ ಕಂಡೇನು ಎಂಬ ಚಿಂತೆಯಲ್ಲಿಯೆ ಮುಳುಗಿರುತ್ತಿದ್ದನು.

ಊರಿನ ಹೊರಗಡೆ ಚೋಖಾಮೇಳ ಭಜನೆ ಮಾಡುತ್ತಿದ್ದನು

ವಿಠ್ಠಲನು ಚೋಖಾಮೇಳನ ಹಂಬಲವನ್ನು ಪೂರ್ಣ ಮಾಡಿದ ಎಂದು ಭಕ್ತರು ಹೇಳುತ್ತಾರೆ. ಈ ಹಂಬಲ ಹೇಗೆ ಪೂರ್ಣವಾಯಿತು ಎಂದು ಅವರು ವಿವರಿಸುವ ಪ್ರಸಂಗ ಸ್ವಾರಸ್ಯವಾಗಿದೆ. ಮೇಲು ಜಾತಿ, ಕೀಳು ಜಾತಿ ಎಂಬುದೆಲ್ಲ ತಪ್ಪು ಭಾವನೆ, ಮನಸ್ಸು ನಿರ್ಮಲವಾಗಿರುವುದು ಮುಖ್ಯ ಎಂದು ಈ ಪ್ರಸಂಗ ಸಾರುತ್ತದೆ.

ಚಿಂತೆಯಿಂದ ಬಾಡಿ ಒಂದು ರಾತ್ರಿ ಚೋಖಾ ಮೇಳನು ಹಾಸಿಗೆಯ ಮೇಲೆ ಮಲಗಿಕೊಂಡಿದ್ದನು. ಅರ್ಧ ರಾತ್ರಿ ಸರಿದರೂ ಕಣ್ಣುಗಳಿಗೆ ನಿದ್ರೆ ಬಾರದಾಗಿತ್ತು. ‘ನಿನ್ನನೆಂದು ಕಾಂಬೆನೂ ವಿಠ್ಠಲ’ ಎಂದು ನಿಟ್ಟುಸಿರು ಬಿಡುತ್ತ ಒಮ್ಮೆ ಎಡಮಗ್ಗಲು, ಮತ್ತೊಮ್ಮೆ ಬಲಮಗ್ಗಲು ಹಾಸಿಗೆಯ ಮೇಲೆ ಹೊರಳಾಡುತ್ತಿದ್ದನು. ಮನೆಯಲ್ಲಿ ಉಳಿದವರೆಲ್ಲರೂ ಗಾಢ ನಿದ್ರೆಯಲ್ಲಿದ್ದರು. ಗುಡಿಸಲಿನ ಹೊರಗೆ ಕಗ್ಗತ್ತಲೆ ಕವಿದಿತ್ತು.

ನನ್ನ ಜೊತೆಗೆ ಬಾ

ಅಂತಹ ಕಗ್ಗತ್ತಲೆಯ ಮಧ್ಯರಾತ್ರಿಯಲ್ಲಿ, ಪಂಚೆ ಯುಟ್ಟ, ಕಂಬಳಿ ಹೊದ್ದ, ಕೈಯಲ್ಲಿ ಬಡಿಗೆಯನ್ನು ಹಿಡಿದ ಕೃಷ್ಣವರ್ಣದ ವ್ಯಕ್ತಿಯೊಬ್ಬನು ಬಂದು ಬಾಗಿಲು ತಟ್ಟಿದನು. ಚೋಖಾಮೇಳನು ಎದ್ದುಬಂದು ಬಾಗಿಲು ತೆಗೆದು ಆ ಅಪರಿಚಿತ ವ್ಯಕ್ತಿಯನ್ನು ಒಳಗೆ ಬರಮಾಡಿ ಕೊಂಡನು.

“ಇಂಥ ಅಪರಾತ್ರಿಯಲ್ಲಿ ಎಲ್ಲಿಂದ ಬಂದಿರಿ ?”

“ಬಹಳ ದೂರದಿಂದ ಬಂದೆ; ವಿಠ್ಠಲನ ದರ್ಶನ ಆಗಬೇಕಾಗಿತ್ತು.”

“ತಮ್ಮ ಜಾತಿ ಯಾವುದು ?”

“ಹೀನಜಾತಿ, ಅಸ್ಪೃಶ್ಯ!”

“ಹಾಗಾದರೆ ತಮಗೆ ವಿಠ್ಠಲನ ದರ್ಶನವಾಗುವುದು ಹೇಗೆ ಸಾಧ್ಯ ?”

“ದಾದಾ, ನಾನು ದೇವರ ದರ್ಶನ ಪಡೆದೇ ಬಂದಿದ್ದೇನೆ. ಗುಡಿಯ ಬಾಗಿಲು ತೆರೆದೇ ಇದೆ. ದರ್ಶನ ಪಡೆದು ತಿರುಗಿ ಕತ್ತಲೆಯಲ್ಲಿ ದಾರಿ ತಪ್ಪಿತು. ಇತ್ತಕಡೆ ಬಂದೆ.”

“ನೀನು ಭಾಗ್ಯವಂತನಪ್ಪ. ನಿನ್ನನ್ನು ಯಾರೂ ಗುಡಿಯೊಳಗೆ ತಡೆದು ನಿಲ್ಲಿಸಲಿಲ್ಲವೆ ? ಹೊಡೆದು ಹೊರ ದಬ್ಬಲಿಲ್ಲವೆ ?”

“ನನ್ನನ್ನು ಯಾರೂ ನೋಡಲಿಲ್ಲ ಸಹ. ಎಲ್ಲರೂ ಗಾಢನಿದ್ರೆಯಲ್ಲಿದ್ದಾರೆ. ಗುಡಿಯ ಬಾಗಿಲು ತೆರೆದಿದೆ. ದಾದಾ, ನಿಮಗೂ ದೇವರ ದರ್ಶನವಾಗಬೇಕಾಗಿದೆಯೆ?”

“ಏನು ಹೇಳಲಿ, ಒಂದು ಸಲವಾದರೂ ಆ ವಿಠ್ಠಲನನ್ನು ಕಣ್ಣಾರೆ ಕಂಡು, ಆಲಿಂಗಿಸಿ ಈ ಕಣ್ಣುಗಳಿಗೆ ತೃಪ್ತಿಪಡಿಸಬೇಕೆನ್ನಿಸಿದೆ. ಆದರೆ ಇದು ಹೇಗೆ ಸಾಧ್ಯ ? ಜಾತಿಹೀನ ನಾನು. ದೇವರ ಸೇವೆ ದೊರಕೀತು ಹೇಗೆ?”ಎಂದು ಚೋಖಾಮೇಳನು ದೀರ್ಘವಾದ ನಿಟ್ಟುಸಿರು ಬಿಟ್ಟನು.

“ದಾದಾ, ನೀನು ಏನೂ ಕಾಳಜಿ ಮಾಡಬೇಡ. ನಿನ್ನನ್ನು ಅತಿ ಸಮೀಪದ ದಾರಿಯಿಂದ ಗುಡಿಗೆ ಕರೆದುಕೊಂಡು ಹೋಗುತ್ತೇನೆ. ಬೇಗನೆ ಏಳು” ಎಂದು ಮಧ್ಯರಾತ್ರಿಯಲ್ಲಿ ಗುಡಿಸಲಿಗೆ ಬಂದ ಆ ಅಪರಿಚಿತನು ನುಡಿದನು.

ದೇವರನ್ನು ಕಾಣುವ ಆತುರದಲ್ಲಿ ಹಿಂದುಮುಂದಿನ ಯಾವುದೇ ವಿಚಾರವನ್ನು ಮಾಡದೆ, ಆಕಳನ್ನು ಕರುವು  ಹಿಂಬಾಲಿಸುವಂತೆ ಚೋಖಾಮೇಳನು ಆ ಅಪರಿಚಿತ ವ್ಯಕ್ತಿಯ ಹಿಂದೆ ನಡೆದನು. ಕಗ್ಗತ್ತಲೆಯ ರಾತ್ರಿ, ಸರಿಯಾಗಿ ದಾರಿ ಕಾಣುತ್ತಿಲ್ಲ. ಅಷ್ಟು ದೂರದ ದಾರಿಯನ್ನು ಕ್ಷಣಾರ್ಧದಲ್ಲಿ ಕ್ರಮಿಸಿ, ಗರ್ಭಗುಡಿಯೊಳಗೆ ದೇವರೆದುರು ಬಂದು ನಿಂತರು.

ನಾನು ಧನ್ಯನಾದೆ !

ಅದೇ ಕ್ಷಣ ಚೋಖಾಮೇಳನೊಡನೆ ಬಂದ ವ್ಯಕ್ತಿ ಮಾಯವಾದನು. ಚೋಖಾಮೇಳನು ಎದುರಿನಲ್ಲಿದ್ದ ವಿಠ್ಠಲನ ಆ ಸುಂದರ ಮುಖಾರವಿಂದವನ್ನು ನೋಡಿದ್ದೇ ತಡ, ಪದಗಳಲ್ಲಿ ತಲೆ ಇಟ್ಟು ನಮಸ್ಕರಿಸಿದನು. ದೇವರು ಪ್ರತ್ಯಕ್ಷನಾಗಿ ತನ್ನ ಪಾದಕ್ಕೆ ಬಿದ್ದ ಭಕ್ತ ಚೋಖಾಮೇಳನನ್ನು ಮೇಲಕೆತ್ತಿ ಆಲಿಂಗಿಸಿದನು. ಚೋಖಾಮೇಳನ ಕಣ್ಣುಗಳಿಂದ ಆನಂದಾಶ್ರುಗಳು ಕೋಡಿಯಾಗಿ ಹರಿದವು. ಹೀಗೆಂದು ಭಕ್ತರು ಹೇಳುತ್ತಾರೆ.

ಚೋಖಾಮೇಳ ವಿಠ್ಠಲ ಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದನು.

ದೇವ : ಚೋಖಾ, ನಿನ್ನ ಇಚ್ಛೆ ಪೂರ್ಣವಾಯಿತೆ?

ಚೋಖಾ : ಈ ಲೋಕದಲ್ಲಿ ಜನ್ಮವೆತ್ತಿ ಬಂದದ್ದಕ್ಕೆ ಸಾರ್ಥಕವಾಯಿತು. ದೇವಾ, ನಾನಿಂದು ಧನ್ಯನಾದೆ, ಕೃತಕೃತ್ಯನಾದೆ.

ವಿಠ್ಠಲನು ತನ್ನ ಕೊರಳಿನಲ್ಲಿದ್ದ ತುಳಸಿ ಮಾಲೆಯನ್ನು ಚೋಖಾಮೇಳನ ಕೊರಳಿಗೆ ಹಾಕಿ ಬೀಳ್ಕೊಂಡನಂತೆ.

ಚೋಖಾಮೇಳನು ಆನಂದದ ಉನ್ಮಾದಾವಸ್ಥೆ ಯಲ್ಲಿಯೆ ಅಲ್ಲಿಂದ ಹೊರಬಿದ್ದನು. ಗುಡಿಸಲಿಗೆ ಬಂದು ತಲುಪಿದಾಗ ಅರುಣೋದಯವಾಗಿತ್ತು. ಚೋಖಾಮೇಳನು ದೀಪಮಾಲೆಯ ಮೇಲೆ ವಿಠ್ಠಲ ಮಂದಿರದ ಕಡೆಗೆ ಮುಖ ಮಾಡಿ, ಹಿಂದಿನ ರಾತ್ರಿ ನಡೆದುಹೋದ ಘಟನೆಯೆಲ್ಲ ವನ್ನೂ ಮೆಲಕುಹಾಕುತ್ತಾ, ತದೇಕಧ್ಯಾನಚಿತ್ತನಾಗಿ ಕುಳಿತನು.

ದೇವರ ಕೊರಳಲ್ಲಿ ಹಾರವಿಲ್ಲ !

ಭಕ್ತರು ಹೇಳುವ ಪ್ರಸಂಗ ಇನ್ನೂ ಸ್ವಾರಸ್ಯವಗಿ ಮುಂದುವರಿಯುತ್ತದೆ. ಇತ್ತ ಮಂದಿರದಲ್ಲಿಯ ನಗಾರಿಯ ಸಪ್ಪಳದೊಂದಿಗೆ ಭಕ್ತಾದಿಗಳು ಎದ್ದು ಚಂದ್ರಭಾಗಾ ನದಿಯಲ್ಲಿ ಮಿಂದುಬಂದು ದೇವರ ದರ್ಶನಕ್ಕಾಗಿ ಕಾಯುತ್ತ ನಿಂತರು. ಮಂದಿರದ ಬಾಗಿಲು ತೆರೆಯಿತು. ದೇವರಿಗೆ ದೀಪದ ಆರತಿಯನ್ನು ಬೆಳಗಲು ಎತ್ತಿದ ಕೈ ಅರ್ಧಕ್ಕೇ ನಿಂತಿತು. ಪೂಜಾರಿಯು ತನ್ನ ಕಣ್ಣುಗಳನ್ನೇ ನಂಬದಾದನು. ಬರಿದಾದ ದೇವರ ಕೊರಳನ್ನು ನೋಡಿ ಗಾಬರಿಗೊಂಡನು. ಅದೇ ಆರತಿಯ ಬೆಳಕಿನಲ್ಲಿ ಸುತ್ತಲೂ ಕಣ್ಣು ಹಾಯಿಸಿದನು. “ದೇವರ ಕೊರಳಲ್ಲಿಯ ರತ್ನಹಾರ ಕಳುವಾಗಿದೆ” ಎಂದು ಗಟ್ಟಿಯಾಗಿ ಕೂಗಿದನು. ಎಲ್ಲೆಡೆ ಗದ್ದಲ, ಗಡಿಬಿಡಿ ಎದ್ದಿತು.  ‘ದೇವರ ಕೊರಳಲ್ಲಿಯ ರತ್ನಹಾರವನ್ನು ಯಾರು ಕದ್ದಿರಬಹುದು ?’ ಎಂಬ ಮಾತಿನ ಚರ್ಚೆ ಎಲ್ಲರ ಬಾಯಲ್ಲಿ.

ಚೋಖಾಮೇಳನಿಗೆ ವಿಪತ್ತು

ಕೆಲವರು ‘ಇದು ಚೋಖಾಮೇಳನ ಮತ್ತು ಅವನ ಜೊತೆಯವರ ಕೆಲಸವೇ ಇರಬೇಕು. ಭಕ್ತಿಯ ಸೋಗು ಹಾಕಿದ ಚೋಖಾಮೇಳನನ್ನು ಹಿಡಿದರೆ ಎಲ್ಲವೂ ಹೊರಬರುವುದು’ ಎಂದು ನುಡಿದರು. ಇಷ್ಟು ಅನ್ನುವುದೇ ತಡ, ನೂರಾರು ಜನರು ಚಂದ್ರಭಾಗಾ ನದಿಯ ಆಚೆಯ ದಡದಲ್ಲಿದ್ದ ಚೋಖಾಮೇಳನ ಗುಡಿಸಲಿನ ಕಡೆಗೆ ಧಾವಿಸಿದರು.

ಇತ್ತ ಚೋಖಾಮೇಳನಿಗೆ ಈ ಲೋಕದ ಪ್ರಜ್ಞೆಯೇ ಇರಲಿಲ್ಲ. ಹಿಂದಿನ ರಾತ್ರಿ ದೇವರಿತ್ತ ಪ್ರತ್ಯಕ್ಷ ದರ್ಶನ ಮತ್ತು ಆಲಿಂಗನದ ಸುಖದ ಸಮಾಧಿಯಲ್ಲಿದ್ದನು. ತಾನು ಅಲ್ಲಿಯವರೆಗೆ ನಡೆದುಬಂದ ಭಕ್ತಿಯ ಮಾರ್ಗದಲ್ಲಿ ಸಹಾಯಮಾಡಿದ ಸಂತರನ್ನು ಒಬ್ಬೊಬ್ಬರನ್ನಾಗಿ ನೆನಸುತ್ತಿದ್ದನು. ‘ಮೇಲಿನ ಜಾತಿಯವರು ಎಂದು ಕೊಂಡವರು ಹೀನ ಜಾತಿಯವ, ಕೀಳು ಕುಲದವ, ಅಸ್ಪೃಶ್ಯ, ಅಯೋಗ್ಯ ಎಂದು ಹೆಜ್ಜೆಹೆಜ್ಜೆಗೂ ಹಳಿದು ಹೀಯಾಳಿಸು ತ್ತಿದ್ದಾಗ, ಈ ಭೂಮಿಯ ಮೇಲೆ ಪ್ರತ್ಯಕ್ಷ ಈಶ್ವರೀ ಅವತಾರವೆಂದು ಹೆಸರಾದ ಸಂತ ಜ್ಞಾನೇಶ್ವರರು ನನ್ನ ಮೇಲೆ ಕೃಪೆದೋರಿ ಭಕ್ತಿಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರಿಸಿದರು. ನಾಮದೇವನಂತಹ ಸಮರ್ಥ ಸಂತರು “ವಿಠ್ಠಲ” ಎಂಬ ಅಮೃತಮಯ ಮಂತ್ರೋಪದೇಶ ಮಾಡಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಇದೆಲ್ಲಕ್ಕೂ ಕಳಸ ವಿಟ್ಟಂತೆ ವಿಠ್ಠಲನೇ ಕೃಪೆದೋರಿ ದರ್ಶನಾಲಿಂಗನವಿತ್ತನು. ಈ ಭೂಮಿಯ ಮೇಲೆ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು’ ಎಂದು ಹಿಗ್ಗುತ್ತಿದ್ದ ಎಂದು ಭಕ್ತರು ಹೇಳುತ್ತಾರೆ.

ಶ್ರೀಹರಿ ಮಾಡಿಸಿದಂತಾಗಲಿ !

ಈ ರೀತಿ ಚೋಖಾಮೇಳನು ಸುಖಸಮಾಧಿಯಲ್ಲಿ ಮೈಮರೆತಿದ್ದಾಗ ಈ ಜನಜಂಗುಳಿ ಬಂದು ಅವನನ್ನು ಮುತ್ತಿಕೊಂಡಿತಂತೆ.

ಆಶ್ಚರ್ಯದ ಸಂಗತಿ ಎಂದರೆ ಚೋಖಾಮೇಳನ ಕೊರಳಲ್ಲಿ ದೇವರ ರತ್ನಹಾರ !

ಜನರ ರೋಷ ಮೇರೆದಪ್ಪಿತು. ಸೇರಿದ ಜನರ ಪೈಕಿ ಒಬ್ಬನು ತನ್ನ ಕೈಯಲ್ಲಿಯ ಬಡಿಗೆಯಿಂದ ಚೋಖಾ ಮೇಳನನ್ನು ಚೆನ್ನಾಗಿ ಥಳಿಸಿ, “ಕಳ್ಳ, ದೇವರ ಕೊರಳಲ್ಲಿಯ ರತ್ನಹಾರ ಕದ್ದು ಇಲ್ಲಿ ಅಡಗಿಕೊಂಡು ಕುಳಿತಿರುವೆಯಾ?” ಎಂದು ಗರ್ಜಿಸಿದನು. ಉಳಿದವರೆಲ್ಲರೂ ‘ಹೊಡೆಯಿರಿ, ಬಡಿಯಿರಿ’ ಎಂದು ಒದರ ಹತ್ತಿದ್ದರು. ಚೋಖಾಮೇಳನಿಗೆ ದಿಕ್ಕು ತೋರಲಿಲ್ಲ. ತನ್ನ ಕೊರಳಲ್ಲಿ ತುಳಸಿಯ ಮಾಲೆಯೊಂದಿಗೆ ರತ್ನಹಾರವಿದ್ದದ್ದನ್ನು ನೋಡಿ ಅಚ್ಚರಿಗೊಂಡನು. ಕಳ್ಳತನದ ಆರೋಪಕ್ಕೆ ಗುರಿಯಾದೆನಲ್ಲ ಎಂದು ವ್ಯಾಕುಲಗೊಂಡನು. ‘ವಿಠ್ಠಲನು ದರ್ಶನವಿತ್ತು, ಆಲಿಂಗನ ಕೊಟ್ಟು ಈಗ ಜನರಿಂದ ಮೈಮುರಿಯುವಂತೆ ಹೊಡಿಸುತ್ತಿದ್ದಾನೆ. ಕಳ್ಳನೆನಿಸಿ ಜನರ ಅಪಹಾಸ್ಯಕ್ಕೆ ಗುರಿಮಾಡುತ್ತಿದ್ದಾನೆ. ಎಲ್ಲವೂ ಅವನ ಲೀಲೆ. ಶ್ರೀಹರಿ ಮಾಡಿಸಿದ್ದಾಗಲಿ !’ ಎಂದು ಕೊಂಡು ಸುತ್ತಲೂ ನೆರೆದ ಜನರಿಗೆ ಕೈಜೋಡಿಸಿ, “ಹಿರಿಯರೆ, ನಾನು ವಿಠ್ಠಲನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಈ ಹಾರವನ್ನು ನಾನು ಕದ್ದಿಲ್ಲ. ಈ ಹಾರ ನನ್ನ ಕೊರಳಲ್ಲಿ ಹೇಗೆ ಬಂದಿತೆಂಬುದನ್ನು ನಾನು ಅರಿಯೆ” ಎಂದು ನುಡಿದನು.

“ಹಾಗಾದರೆ, ನೀನು ದೊಡ್ಡ ಭಕ್ತನೆಂದು ತಿಳಿದು ದೇವರೇ ಪ್ರತ್ಯಕ್ಷನಾಗಿ ನಿನಗೆ ಈ ಹಾರವನ್ನು ಕೊಟ್ಟನೆ ? ನಿಜ ಹೇಳು, ನೀನು ಹಾರವನ್ನು ಕದ್ದಿರುವೆಯೊ ಇಲ್ಲವೊ?” ಎಂದು ನೆರೆದ ಜನರ ಪೈಕಿ ಒಬ್ಬನು ಕೇಳಿದನು.

“ಸತ್ಯವಾಗಿ ಹೇಳುತ್ತೇನೆ. ನಾನು ಈ ಹಾರವನ್ನು ಕದ್ದಿಲ್ಲ. ತಾವು ತಪ್ಪಾಗಿ ಭಾವಿಸಬಾರದು” ಎಂದು ಚೋಖಾಮೇಳನು ಪುನಃ ಅಂಗಲಾಚಿ, ಸೆರಗೊಡ್ಡಿ ಬೇಡಿ ಕೊಂಡನು.

“ಇವನೊಡನೆ ಮಾತನಾಡಿ ಫಲವಿಲ್ಲ. ಇವನನ್ನು ಪಂಚರ ಮುಂದೆ ಓಯ್ದು ನಿಲ್ಲಿಸಿ ನ್ಯಾಯ ಮಾಡೋಣ” ಎಂದು ನುಡಿದು, ಜನರೆಲ್ಲರೂ ಚೋಖಾಮೇಳನನ್ನು ದರದರನೆ ಎಳೆದುಕೊಂಡು ಹೋಗಿ ಪಂಚರೆದುರು ನಿಲ್ಲಿಸಿದರು.

ಎತ್ತಿನ ಕಾಲಿಗೆ ಕಟ್ಟಿ ಎಳೆಸಿರಿ

ಚೋಖಾಮೇಳನನ್ನು ರತ್ನಹಾರದ ಸಹಿತ ಪಂಚರೆದುರು ತಂದು ತಂದು ನಿಲ್ಲಿಸಿದರಲ್ಲವೆ? ಅವನ ಕಳ್ಳತನವನ್ನು ಸಿದ್ಧಮಾಡಲು ಇನ್ನು ಯಾವ ಸಾಕ್ಷಿ ಪುರಾವೆಗಳ ಅವಶ್ಯಕತೆ ಇರಲಿಲ್ಲ. ಪಂಚರ ದೃಷ್ಟಿಯಲ್ಲಿ ಹಾರವನ್ನು ಕದಿಯುವ ತಪ್ಪಿಗಿಂತಲೂ ಹೀನ ಜಾತಿಯವನಾಗಿ ದೇವರನ್ನು ಮುಟ್ಟಿ ಮೈಲಿಗೆ ಮಾಡಿದ್ದು ಅಕ್ಷಮ್ಯ, ಘೋರ ಅಪರಾಧವಾಗಿತ್ತು. ಆದ್ದರಿಂದ ಚೋಖಾಮೇಳನನ್ನು ಎತ್ತಿನ ಕಾಲುಗಳಿಗೆ ಕಟ್ಟಿ ಎಳೆಸಬೇಕೆಂಬ ಭಯಂಕರ, ಕ್ರೂರ, ಪ್ರಾಣಾಂತಿಕ ಶಿಕ್ಷೆಯನ್ನು ವಿಧಿಸಿದರು. ಈ ಶಿಕ್ಷೆ ಕೂಡಲೆ ಜಾರಿಗೆ ಬರಬೇಕೆಂದು ಕಟ್ಟಾಜ್ಞೆ ಮಾಡಿದರು. ಇದು ಪಂಚರ ಸರ್ವಾನುಮತ ನಿರ್ಣಯವಾಗಿತ್ತು.

ಭಕ್ತ ಚೋಖಾಮೇಳನಿಗೆ ವಿಧಿಸಿದ ಶಿಕ್ಷೆಯ ದಾರುಣ ವಾರ್ತೆ ಪಂಢರಪುರದ ತುಂಬೆಲ್ಲ ಹಬ್ಬಿತು. ಆ ಭಯಂಕರ ಶಿಕ್ಷೆಯನ್ನು ಹೇಗೆ ವಿಧಿಸುವರೆಂಬುದನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಚಂದ್ರಭಾಗಾ ನದಿಯ ದಂಡೆಯ ಮರಳಿನ ಮೈದಾನದಲ್ಲಿ ಬಂದು ಸೇರಿದರು. ಯಾವ ಮೈದಾನದಲ್ಲಿ ನಿಂತು ಮೈಮರೆತು, ‘ವಿಠ್ಠಲ, ವಿಠ್ಠಲ’ ಎಂದು ಕುಣಿದು ಹಾಡುತ್ತಿದ್ದನೋ ಅದೇ ಸ್ಥಳದಲ್ಲಿಯೇ ಚೋಖಾಮೇಳನಿಗೆ ಶಿಕ್ಷೆಯನ್ನು ವಿಧಿಸುವ ವ್ಯವಸ್ಥೆ ಮಾಡಲಾಗಿತ್ತು.

ಮನಸ್ಸು ಕದಡದ ಜ್ಞಾನಿ

ಎತ್ತುಗಳ ಕಾಲಿಗೆ ಕಟ್ಟಲು ನಿರಪರಾಧಿಯಾದ ಚೋಖಾಮೇಳನನ್ನು ಕರೆತರಲಾಯಿತು. ಚೋಖಾಮೇಳನ ಮುಖ೦ಮಂಡಲವು ಪ್ರಶಾಂತವಾಗಿತ್ತು. ಅವನು ಗಂಭೀರ ವಾಗಿ ಹೆಜ್ಜೆಗಳನ್ನು ಹಾಕುತ್ತ ಎತ್ತುಗಳ ಹತ್ತಿರ ಬಂದು ನಿಂತನು. ವಿಠ್ಠಲ ಮಂದಿರದ ಕಡೆ ಮುಖಮಾಡಿ ನಿಂತು ಎರಡು ಕೈಗಳನ್ನು ಮೇಲಕೆತ್ತಿ ನಮಸ್ಕರಿಸಿದನು. ಸುತ್ತಲೂ ನೆರೆದ ಜನರಿಗೆ ಕೈಜೋಡಿಸಿ, ತಲೆಬಗ್ಗಿಸಿ ವಂದಿಸಿದನು. ಆ ಎತ್ತುಗಳ ಮೈಯನ್ನು ಮುಟ್ಟಿ ಕಣ್ಣಿಗೆ ಹಚ್ಚಿಕೊಂಡನು. ಅನಂತರ ನಿರ್ಭಯವಾಗಿ ಎತ್ತುಗಳ ಕಾಲ ಕೆಳಗೆ ಒರಗಿದನು.

ಒಮ್ಮೆಲೆ ಜನಸಮುದಾಯವು ಒಂದು ಕ್ಷಣ ಅಲ್ಲೋಲ ಕಲ್ಲೋಲವಾಯಿತು. ಅಲ್ಲಿ ನೆರೆದ ಸಜ್ಜನರ ಕಣ್ಣುಗಳಲ್ಲಿ ನೀರೂರಿದವು. ದುಷ್ಟರಿಗೆ ರಾಕ್ಷಸೀ ಭಾವದ  ಆನಂದ ವಾಯಿತು. ಇತ್ತಕಡೆ ಜೋಖಾಮೇಳನ ಹೆಂಡತಿ ಎದೆಬಡಿದುಕೊಂಡು ಆಕ್ರೋಶ ಮಾಡುತ್ತಿದ್ದಳು. ಚೋಖಾ ಮೇಳನ ಕೈಗಳನ್ನು ಎತ್ತುಗಳ ಕಾಲುಗಳಿಗೆ ಹಗ್ಗಗಳಿಂದ ಗಟ್ಟಿಯಾಗಿ ಬಿಗಿದರು. ಜನರು ಮುಂದೆ ಬಂದು ಬಾರುಗೋಲಿನಿಂದ ಎತ್ತುಗಳನ್ನು ಹೊಡೆಯಹತ್ತಿದ್ದರು.

ಪುಟವಿಟ್ಟ ಚಿನ್ನ

ಬಾರುಗೋಲಿನ ಭಯಂಕರ ಹೊಡೆತಗಳನ್ನು ತಿಂದರೂ ಎತ್ತುಗಳು ಕಲ್ಲಿನಂತೆ ನಿಶ್ಚಲವಾಗಿ ನಿಂತವು. ಹೊಡೆದುಹೊಡೆದು ಪೂಜಾರಿಗಳ ಕೈಗಳಲ್ಲಿ ಗುಳ್ಳೆಗಳೆದ್ದವು.

ಪಾಂಡುರಂಗನೇ ಎರಡೂ ಕೈಗಳಿಂದ ಎತ್ತುಗಳನ್ನು  ಮುಂದಕ್ಕೆ ಹೋಗಗೊಡದಂತೆ ನಿಲ್ಲಿಸಿದ  ಎಂದೂ ಭಕ್ತರು ಹೇಳುತ್ತಾರೆ.

ಪೂಜಾರಿಗಳಿಗೆ ಪಶ್ಚಾತ್ತಾಪವಾಯಿತು. ಕೂಡಲೇ ಅವರು ಚೋಖಾಮೇಳನನ್ನು ಬಂಧಮುಕ್ತಗೊಳಿಸಿದರು. ಅವನನ್ನು ಸನ್ಮಾನದಿಂದ ಮೆರವಣಿಗೆಯಲ್ಲಿ ಮಂದಿರಕ್ಕೆ ಕರೆದೊಯ್ದರು. ‘ಚೋಖಾಮೇಳನಿಗೆ ಜಯವಾಗಲಿ’ ಎಂದು ಜನರು ಒಕ್ಕೊರಲಿನಿಂದ ಉದ್ಘೋಷಿಸಿದರು.

ಈ ಅಗ್ನಿದಿವ್ಯದಿಂದ ಚೋಖಾಮೇಳನು ಪುಟವಿಟ್ಟ ಚಿನ್ನದಂತಾಗಿ ಹೊರಬಂದನು.

ಇಷ್ಟು ಪವಿತ್ರ ಈತ –

ಭಕ್ತ ಚೋಖಾಮೇಳನು ಅನೇಕ ಅದ್ಭುತ ಪವಾಡ ಗಳನ್ನು ಮೆರೆದ ಎಂದು ಅವನ ಗುರು ನಾಮದೇವನು ತನ್ನ ಅಭಂಗಗಳಲ್ಲಿ ವರ್ಣಿಸಿದ್ದಾನೆ. ಶಿಷ್ಯನ ಮಹಿ ಮಾತಿಶಯಗಳನ್ನು ಗುರು ಹೊಗಳಿ ಹಾಡುವುದು ಭಕ್ತ ಪರಂಪರೆಯಲ್ಲಿ ಅಪೂರ್ವ. ಮುಂದೆ ಬಂದ ತುಕರಾಮ ಮಹಾರಾಜರು ತಮ್ಮ ಅಭಂಗಗಳಲ್ಲಿ ಚೋಖಾಮೇಳನ ಭಕ್ತಿಯು ಯಾವ ಉತ್ತುಂಗ ಮಟ್ಟವನ್ನು ಮುಟ್ಟಿತ್ತೆಂಬುದನ್ನು ವರ್ಣಿಸುತ್ತ ಈ ಕೆಳಗಿನ ಅಮೃತ ಶುದ್ಧೀಕರಣದ ಘಟನೆಯನ್ನು ‘ಚೋಖಾ ಮೇಳನ ಕರಸ್ಟರ್ಶದಿಂದ ಆಯಿತು ಅಮೃತ ಶುದ್ಧ | ಆ ಪ್ರಸಂಗ ಏನೆಂದು ವರ್ಣಿಸಲಿ ಅಂದಾನು ತುಕಾರಾಮ’ ಎಂದು ವಿವರಿಸಿದ್ದಾರೆ.

ಈ ಘಟನೆಯನ್ನು ತುಕಾರಾಮರು ವಿವರಿಸುವುದು ಹೀಗೆ. ಇಂದ್ರ ಲೋಕದಲ್ಲಿ ಎಷ್ಟೋ ದಿನಗಳಿಂದ ಇಟ್ಟಿದ್ದ ಅಮೃತದ ಮಧುರತ್ವವು ನಷ್ಟವಾಗಹತ್ತಿತಂತೆ. ಇದರಿಂದ ಇಂದ್ರನಿಗೆ ಬಹಳ ವಿವಂಚನೆಯಾಯಿತು. ಅವನು ಒಂದು ದಿನ ನಾರದನಿಗೆ, “ಅಮೃತದ ಮಧುರತ್ವವು ದಿನೇದಿನೇ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಹಾರವೇನು ?” ಎಂದು ಪ್ರಶ್ನಿಸಿದನಂತೆ. “ನಿನ್ನ ಸ್ವರ್ಗದಲ್ಲಿ ಇನ್ನು ಮುಂದೆ ಅಮೃತದ ಮಧುರತ್ವವು ಹೆಚ್ಚುವುದಿಲ್ಲ. ಭೂತಲದಲ್ಲಿ ಪಂಢರಪುರ ವೆಂಬ ಅತಿ ಪವಿತ್ರವಾದ ತೀರ್ಥಕ್ಷೇತ್ರವಿದೆ. ಅಲ್ಲಿಗೆ ಅಮೃತವನ್ನು ಒಯ್ದು ಶುದ್ಧ ಮಾಡಿಕೊಂಡು ಬರೋಣ” ಎಂದು ನಾರದನು ಹೇಳಿದನಂತೆ.

ಮುಂದೆ ಒಂದು ದಿನ ಏಕಾದಶಿಯಂದು ನಾರದರು ಇಂದ್ರನೇ ಮೊದಲಾದ ದೇವತೆಗಳನ್ನು ಕರೆದುಕೊಂಡು ಅಮೃತ ಕುಂಭವನ್ನು ತೆಗೆದುಕೊಂಡು ಪಂಢರಪುರಕ್ಕೆ ಬಂದನಂತೆ. ಚೋಖಾಮೇಳ ಮತ್ತು ಅವನ ಹೆಂಡತಿ ಕುಂಭವನ್ನು ಮುಟ್ಟಿದಾಗ ಅಮೃತ ಶುದ್ಧವಾಯಿತಂತೆ.

ಭಕ್ತರು ವರ್ಣಿಸುವ, ನಂಬುವ ಈ ಪ್ರಸಂಗಗಳಲ್ಲಿ ಒಂದು ಅಂಶ ಸ್ಪಷ್ಟವಾಗುತ್ತದೆ. ಚೋಖಾಮೇಳ ಕೆಳಗಿನ ಜಾತಿಯವನು, ಆದುದರಿಂದ ಮೈಲಿಗೆ ಎಂದು ಪ್ರಾರಂಭದಲ್ಲಿ ಸಂಪ್ರದಾಯವಂತರು ನಂಬಿದ್ದರು. ತನ್ನ ಶುಭ್ರ ಜೀವನದಿಂದ, ನಿರ್ಮಲ ಭಕ್ತಿಯಿಂದ, ಸರಳತೆಯಿಂದ ಆತ ಜಾತಿಗೂ ಯೋಗ್ಯತೆಗೂ ಸಂಬಂಧವಿಲ್ಲ ಎಂಬುದನ್ನು ತೋರಿಸಿಕೊಟ್ಟ. ಪವಿತ್ರವಾದ ಅಮೃತವನ್ನೇ ಶುದ್ಧಿಗೊಳಿಸು ವಷ್ಟು ಆತ ಪವಿತ್ರ ಎಂದು ಜನರು ಒಪ್ಪುವಂತಾಯಿತು.

ಚೋಖಾಮೇಳನ ಅಭಂಗ ಸಾಹಿತ್ಯ

ಕನ್ನಡದಲ್ಲಿ ಶರಣರ ವಚನಗಳಿದ್ದಂತೆ, ಹರಿದಾಸರ ಪದಗಳಿದ್ದಂತೆ ಮರಾಠಿಯಲ್ಲಿ ಅಭಂಗಗಳು. ಹೃದಯ ದಲ್ಲಿ ಭಕ್ತಿ ತುಳುಕಿದಾಗ ಭಕ್ತರ ಪ್ರಯತ್ನವಿಲ್ಲದ ಹೊರ ಹೊಮ್ಮಿದ ಕವನಗಳು ಇವು.

ಚೋಖಾಮೇಳನು ಅಭಂಗಗಳನ್ನು ರಚಿಸಿದನು ಎನ್ನುವುದಕ್ಕಿಂತ ಅಭಂಗಗಳು ಅವನ ಮುಖಗಂಗೆಯಿಂದ ಹರಿದುಬಂದವು ಎಂದು ಹೇಳಿದರೆ ಹೆಚ್ಚು ಸಮಂಜಸ ವೆನಿಸುವುದು. ಚೋಖಾಮೇಳನು ಸಾವಿರಾರು ಅಭಂಗ ಗಳನ್ನು ರಚಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ ಅವನ ೩೫೦ ಅಭಂಗಗಳು ಮಾತ್ರ ದೊರಕಿವೆ. ಚೋಖಾ ಮೇಳನು ‘ವಿವೇಕದೀಪ’ ಎಂಬ ಗ್ರಂಥವನ್ನು ಬರೆದಿದ್ದ ನೆಂಬ ಐತಿಹ್ಯವುಂಟು. ಆದರೆ ಆ ಗ್ರಂಥವು ದೊರೆತಿಲ್ಲ.

ಚೋಖಾಮೇಳನಿಗೆ ಓದಲುಬರೆಯಲು ಬರುತ್ತಿರ ಲಿಲ್ಲ. ಅವನು ನಿರಕ್ಷರಕುಕ್ಷಿಯಾಗಿದ್ದ ಎಂದು ಹೇಳುತ್ತಾರೆ. ಅಂದು ಅವನು ಬೆಳೆದುಕೊಂಡು ಬಂದ ಪರಿಸರವನ್ನು ನೋಡಿದರೆ ಈ ಮಾತನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಅವನು ರಚಿಸಿದ ಅಭಂಗಗಳನ್ನು ಅವಲೋಕಿಸಿದರೆ ಓದು ಇಲ್ಲದಿದ್ದರೂ ಸಹಜವಾಗಿ ಕಾವ್ಯಸೃಷ್ಟಿ ಮಾಡುವ ಪ್ರತಿಭೆ ಅವನದು ಎಂದು ಅನಿಸದೆ ಇರದು. ಇಷ್ಟೇ ಅಲ್ಲ, ದ್ವೈತಅದ್ವೈತ ಮತ್ತು ಭಗವದ್ಗೀತೆಯಲ್ಲಿ ಪ್ರತಿಪಾದಿತವಾದ ಎಲ್ಲ ತತ್ತ್ವಜ್ಞಾನಗಳ ಸಾರ ಅವನ ಅಭಂಗಗಳಲ್ಲಿ ಕಾಣುತ್ತವೆ. ಚೋಖಾಮೇಳನ ಅಭಂಗ ಗಳನ್ನು ಅನಂತಭಟ್ ಎಂಬವನೊಬ್ಬ ಬರೆದಿಟ್ಟು ಕೊಳ್ಳುತ್ತಿದ್ದನು. ಆ ಕಾಲದಲ್ಲಿ ಸಂತರ ಅಭಂಗಗಳನ್ನು ಅನಂತಭಟ್ ಎಂಬವನೊಬ್ಬ ಬರೆದಿಟ್ಟುಕೊಳ್ಳುತ್ತಿದ್ದನು. ಆ ಕಾಲದಲ್ಲಿ ಸಂತರ ಅಭಂಗಗಳನ್ನು ಬರೆದುಕೊಳ್ಳಲು ನಿಶ್ಚಿತಪಡಿಸಿದ ವ್ಯಕ್ತಿಗಳಿದ್ದರೆಂದು ತೋರುತ್ತದೆ. ಬೇರೆಬೇರೆ ಸಂತರ ಅಭಂಗಗಳನ್ನು ಯಾರುಯಾರು ಬರೆದುಕೊಳ್ಳುತ್ತಿದ್ದ ರೆಂಬ ಬಗ್ಗೆ ವಾರಕರಿ ಜನರಲ್ಲಿ ಪದ್ಯವೊಂದು ಪ್ರಚಲಿತ ವಾಗಿದೆ. ಅದರ ಪ್ರಕಾರ ಜ್ಞಾನದೇವನ ಶಬ್ದರತ್ನಗಳನ್ನು ಸಚ್ಚಿದಾನಂದನು ಬರೆದುಕೊಳ್ಳುತ್ತಿದ್ದನು. ನಿವೃತ್ತಿನಾಥನ ಲೇಖಕ ಸೋಪಾದೇವ. ಮುಕ್ತಬಾಯಿಯ ಅಭಂಗಗಳನ್ನು ಜ್ಞಾನದೇವನು ಬರೆಯುತ್ತಿದ್ದನು. ಪರಮಾನಂದನ ಅಭಂಗಗಳನ್ನು ಅವನ ಅಂತರಂಗ ಭಕ್ತ ವಿಸೋಬಾಖೇಚರ ಬರೆಯುತ್ತಿದ್ದನು. ವೈಷ್ಣವ ಭಕ್ತನಾದ ಸಾವಂತ ಮಾಳಿಯ ಲೇಖಕ ಕಾಶಿಬಾ. ಕೂರ್ಮದೇವನ ಕೃತಿಗಳನ್ನು ಸುದೇವನು ಬರೆದಿಟ್ಟುಕೊಳ್ಳುತ್ತಿದ್ದನು. ಅನಂತಭಟ್ ಎಂಬ ವನು ಚೋಖಾಮೇಳನ ಅಭಂಗಗಳನೂ ಬರೆದಿದ್ದನು.

ಚೋಖಾಮೇಳನ ಅಭಂಗಗಳ ಮೇಲೆ ‘ಜ್ಞಾನೇಶ್ವರಿ’ ಗ್ರಂಥದ ಪ್ರಭಾವವು ಸಾಕಷ್ಟಾಗಿದೆ. ‘ಜ್ಞಾನೇಶ್ವರಿ’ ಗ್ರಂಥದ ಅಖಂಡ ರಸಪಾನವನ್ನು ಚೋಖಾಮೇಳನು ಮಾಡಿರ ಬೇಕು. ಜ್ಞಾನೇಶ್ವರನನ್ನು ತನ್ನ ಅಭಂಗಗಳಲ್ಲಿ ಪ್ರಾಣ ಸಖಾ, ಜ್ಞಾನಿಗಳ ಅರಸ, ಮಹಾರಾಜ, ಅವತಾರಿ ಪುರುಷ ಎಂದು ಸಂಬೋಧಿಸಿ ತುಂಬು ಹೃದಯದಿಂದ ಹೊಗಳಿದ್ದಾನೆ. ‘ಜ್ಞಾನೇಶ್ವರಿ’ಯನ್ನು ಓದುವುದರಿಂದ ಜೀವನದಲ್ಲಿ ನನ್ನನ್ನು ನೋಡಿಕೊಳ್ಳುವವರೇ ಇಲ್ಲ, ನನಗೆ ಆಶ್ರಯವೇ ಇಲ್ಲ ಎಂಬ ಭಾವನೆ ಹೋಗುತ್ತದೆ. ನನ್ನನ್ನು ಕಾಪಾಡುವವನು ಒಬ್ಬ ಇದ್ದಾನೆ ಎಂಬ ನಂಬಿಕೆ ಬೆಳೆಯುತ್ತದೆ. ಇದೇ ಜೀವನದ ಸಾಫಲ್ಯ ಎಂದು ‘ಜ್ಞಾನೇಶ್ವರಿ’ಯ ಸಂದೇಶವನ್ನು ಮನಸ್ಸಿಗೆ ತಟ್ಟುವಂತೆ ವಿವರಿಸಿದ್ದಾನೆ. ಅದರಂತೆ ತನಗೆ ಭಾಗವತ ದೀಕ್ಷೆಯನ್ನು ಕೊಟ್ಟು ಉದ್ಧರಿಸಿದ ಸ್ವರೂಪೋ ದ್ಧಾರಕನಾದ ಗುರು ನಾಮದೇವನನ್ನು ಭಕ್ತಿ – ಆದರಗಳಿಂದ ಸ್ತುತಿಸಿದ್ದಾನೆ. ‘ನಾಮ ಸಾಮರ್ಥ್ಯದಿಂದ ವಿಷ ಅಮೃತವಾಗುವುದು. ಸಕಲ ಸಾಧನೆಗಳ ಸಾರ ರಾಮಕೃಷ್ಣ ಹರಿ ಉಚ್ಚಾರ’ ಎಂದು ಭಾಗವತ ಧರ್ಮದ ಮೂಲ ಸಿದ್ಧಾಂತವಾದ ದೇವರನಾಮದ ಮಹಾತ್ಮೆಯನ್ನು ತನ್ನ ಅಭಂಗಗಳಲ್ಲಿ ಪದೇಪದೇ ವರ್ಣಿಸಿದ್ದಾನೆ. ದೇಹವೇ ಪಂಢರಪುರ, ಆತ್ಮನೇ ವಿಠಲ, ಶಾಂತಿಯೇ ರುಕ್ಮಿಣಿ ಎಂದು ವರ್ಣಿಸಿದ್ದಾನೆ. ಇದಲ್ಲದೆ ಪರಮಾತ್ಮನ ಭಕ್ತವತ್ಸಲತೆ, ಸತ್ಸಂಗ ಮಹಿಮೆ, ವಿಠ್ಠಲರೂಪ ವರ್ಣನೆ, ಪಂಢರೀ ಕ್ಷೇತ್ರದ ಹಿರಿಮೆ, ಅಂದಿನ ಅಸ್ಪೃಶ್ಯ ಸಮಾಜದ ದೀನದಯನೀಯ ಸ್ಥಿತಿ ಮುಂತಾದ ವಿಷಯಗಳ ವಿವೇಚನೆಯನ್ನು ಅವನ ಅಭಂಗಗಳಲ್ಲಿ ಕಾಣುತ್ತೇವೆ. ತಾವು ಮೇಲಿನ ಜಾತಿಯವರು ಎಂಬ ಅಹಂಕಾರವಿದ್ದ ಕೆಲವರು ಚೋಖಾಮೇಳನನ್ನು ಹಾಸ್ಯ ಮಾಡಿದರು, ಅವನಿಗೆ ತುಂಬಾ ಹಿಂಸೆಯನ್ನು ಕೊಟ್ಟರು. ಇದನ್ನೆಲ್ಲ ತನ್ನ ಅಭಂಗಗಳಲ್ಲಿ ಚೋಖಾಮೇಳ ವರ್ಣಿಸಿದ್ದಾನೆ. ಆದರೆ ಅವರ ವಿಷಯದಲ್ಲಿ ಕೋಪ ವನ್ನಾಗಲಿ, ದ್ವೇಷವನ್ನಾಗಲಿ ತೋರಿಸಿಲ್ಲ. ಅವರು ಅಜ್ಞಾನಿ ಗಳು, ತಪ್ಪು ಕೆಲಸ ಮಾಡುತ್ತಿದ್ದಾರೆ ಎಂದು ಅನುಕಂಪ ತೋರಿಸಿದ್ದಾನೆ. ಇದರಲ್ಲಿ ಚೋಖಾ ಮೇಳನ ಘನತೆ ವ್ಯಕ್ತವಾಗುತ್ತದೆ.

ಚೋಕಾಮೇಳನು ರಚಿಸಿದ ನಾಲ್ಕು ಜೋಹಾರ ಪದಗಳು ಸಿಕ್ಕಿವೆ. ಜೋಹಾರ ಎಂದರೆ ನಮಸ್ಕಾರ, ವಂದನೆ, ರಾಮರಾಮ ಎಂದು ಅರ್ಥ. ಈ ಜೋಹಾರ ಸಾಹಿತ್ಯವು ಚೋಖಾಮೇಳನಿಂದಲೆ ಪ್ರಾರಂಭವಾಯಿತು ಎಂದು ಕೆಲವು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಚೋಕಾಮೇಳನ ಅನಂತರ ಬಂದ ಅನೇಕ ಸಂತರು ಜೋಹಾರ ಪದಗಳನ್ನು ರಚಿಸಿದ್ದಾರೆ. ಅವರೆಲ್ಲರೂ ಚೋಕಾಮೇಳನನ್ನು ಅತ್ಯಂತ ಗೌರವದಿಂದ ಕಂಡಿದ್ದಾರೆ.

ಅಸ್ತಿಗತವಾದ ವಿಠ್ಠಲ ಭಕ್ತಿ

ಚೋಖಾಮೇಳನು ಜೀವನದುದ್ದಕ್ಕೂ ಬಡತನದ ಬೇಗೆಯಲ್ಲಿಯೆ ಬೆಂದು ನೊಂದು ಬದುಕಬೇಕಾಯಿತು. ಇಳಿವಯಸ್ಸಿನಲ್ಲೂ ಅವನು ಜೀವನಕ್ಕಾಗಿ ಕೂಲಿಕುಂಬಳಿ ಕೆಲಸ ಮಾಡುತ್ತಿದ್ದನು. ಪಂಢರಪುರದಲ್ಲಿ ಕೂಲಿಯ ಕೆಲಸ ದೊರಕದಿದ್ದಾಗ ಸುತ್ತಮುತ್ತಲಿನ ಹಳ್ಳಿಗಳಿಗೆ ದುಡಿಯಲು ಹೋಗುತ್ತಿದ್ದ.

ಕೋಟೆ ಕಟ್ಟುವ ಕೆಲಸದಲ್ಲಿ ನಿರತನಾದ ಚೋಖಾಮೇಳನು

 

ಮಂಗಳವೇಡೆಯಲ್ಲಿ ಕೋಟೆ ಕಟ್ಟಿಸುವ ಕೆಲಸ ಪ್ರಾರಂಭವಾಗಿದೆ, ಎಲ್ಲರಿಗೂ ಅಲ್ಲಿ ತಿಂಗಳುಗಟ್ಟಲೆ ಕೆಲಸ ಸಿಗುವುದು, ಕೂಲಿಯ ದರವೂ ಹೆಚ್ಚು ಎಂಬ ಸುದ್ದಿ ಪಂಢರಪುರಕ್ಕೆ ಬಂದ ಕೂಡಲೆ ನೂರಾರು ಕೂಲಿಯಾಳು ಗಳು ಅಲ್ಲಿಗೆ ಹೊರಡಲು ಸಿದ್ಧರಾದರು. ಅವರೆಲ್ಲರೂ ಚೋಖಾಮೇಳನನ್ನು ತಮ್ಮೊಡನೆ ಕರೆದುಕೊಂಡು ಹೊರಡಲು ಬಯಸಿದರು.

ಈ ಹತ್ತಾರು ವರ್ಷಗಳಲ್ಲಿ ಚೋಖಾಮೇಳನು ಪಂಢರಪುರ ಬಿಟ್ಟು ಅತ್ತಿತ್ತ ಕದಲಿರಲಿಲ್ಲ. ಪಕ್ಕದ ಊರುಗಳಿಗೆ ಕೂಲಿಯ ಕೆಲಸಕ್ಕೆ ಹೋದರೂ ಸಾಯಂಕಾಲ ತಪ್ಪದೆ ವಾಪಸ್ಸು ಬಂದುಬಿಡುತ್ತಿದ್ದನು. ಹೀಗಾಗಿ ಅವನು ಪ್ರತಿದಿನ ಸಾಯಂಕಾಲ ಮಹಾದ್ವಾರದ ಎದುರಿಗೆ ನಡೆಯುವ ಭಜನೆಯ ಕಾರ್ಯಕ್ರಮವನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆ ಭಜನೆಯ ಕಾರ್ಯಕ್ರಮದ ಜೀವಾಳವೇ ಅವನಾಗಿದ್ದನು. ಮಳೆ ಇರಲಿ, ಛಳಿ ಇರಲಿ, ದೇಹಲಾಸ್ಯವಾಗಿರಲಿ ಚೋಖಾಮೇಳನ ಅಖಂಡವಾದ ವಿಠ್ಠಲ ಭಜನೆಗೆ ಚ್ಯುತಿ ಬಂದಿರಲಿಲ್ಲ. ಈಗ ಪಂಢರಪುರ ಬಿಟ್ಟು ಹೊರಡಬೇಕೆಂದರೆ ಚೋಖಾಮೇಳನಿಗೆ ಎಲ್ಲಿಲ್ಲದ ಸಂಕಟ, ಅನುತಾಪ. ನೀರಿನಿಂದ ಹೊರ ತೆಗೆದ ಮೀನಿ ನಂತೆ ಚಡಪಡಿಸಹತ್ತಿದ್ದನು. ಮಂಗಳವೇಡೆಗೆ ಹೋಗಲಿ ಕ್ಕಾಗದು, ಹೋಗದೆ ಇರಲಾಗದು, ಹೀಗೆ ಅಡಕೊತ್ತಿನಲ್ಲಿ ಸಿಕ್ಕ ಅಡಕೆಯಂತಾಯಿತು ಅವನ ಮನಸ್ಸು. ಮನೆಯಲ್ಲಿ ಒಪ್ಪತ್ತು ಊಟ, ಒಪ್ಪತ್ತು ಉಪವಾಸ. ಹೀಗಿರುವಾಗ ಹಲವಾರು ತಿಂಗಳುಗಳ ಕಾಲ ಕೂಲಿಯ ಕೆಲಸ ಸಿಗುವ ಸಂದರ್ಭದಲ್ಲಿ ಹೋಗದೆ ಇರಲು ಸಾಧ್ಯವಿಲ್ಲ. ಕೊನೆಗೆ ‘ಎಲ್ಲವೂ ಹರಿಯ ಇಚ್ಛೆ, ದೇವರು ಮಾಡಿಸಿದಂತಾಗಲಿ’ ಎಂದು ಭಾರವಾದ ಹೃದಯದಿಂದ ಪಂಢರಪುರವನ್ನು ಬಿಟ್ಟು ಮಂಗಳವೇಡೆಗೆ ಸಂಗಡಿಗರೊಡನೆ ನಡೆದನು.

ಮೂರುನಾಲ್ಕು ತಿಂಗಳುಗಳ ಕಾಲ ಕೆಲಸ ನಡೆದ ಮೇಲೆ ಒಂದು ದಿನ ಎಲ್ಲರೂ ಕೆಲಸ ಮಾಡುತ್ತಿದ್ದಾಗ ಕೋಟೆಯ ಗೋಡೆ ಕುಸಿದುಬಿತ್ತು. ಅದರ ಬುಡಕ್ಕೆ ಸಿಕ್ಕು ನೂರಾರು ಕೂಲಿಯಾಳುಗಳು ಮೃತಪಟ್ಟರು.

ಚೋಖಾಮೇಳನೂ ಗೋಡೆಯಡಿಯಲ್ಲಿ ಸಿಕ್ಕು ಪ್ರಾಣಬಿಟ್ಟ.

ಇದು ಸುಮಾರು ೧೩೩೮ ರಲ್ಲಿ ಈ ಘಟನೆ ನಡೆಯಿತು.

ಚೋಖಾಮೇಳನ ಮರಣವಾರ್ತೆ ಪಂಢರಪುರಕ್ಕೆ ತಲುಪಿದ ಕೂಡಲೆ ಇಡೀ ಊರೇ ಶೋಕಸಾಗರದಲ್ಲಿ ಮುಳುಗಿತು. ಸಂತಮಂಡಲಿಗಂತೂ ಅಘಾತವೇ ಆಯಿತು.

ಕೆಲದಿನಗಳನಂತರ ನಾಮದೇವನೂ ಇತರ ಭಕ್ತರೂ ಚೋಖಾಮೇಳನ ಅಸ್ತಿಗಳನ್ನು ಆರಿಸಿಕೊಂಡು ಬರಲು ಮಂಗಳವೇಡೆಗೆ ಹೋದರು. ಆ ಎಲುಬುಗಳನ್ನು ವಿಠ್ಠಲನ ಗುಡಿಯ ಮಹಾದ್ವಾರದೆದುರು ಸಮಾಧಿ ಮಾಡುವುದು ಅವರ ಉದ್ದೇಶ. ಈ ಸಂದರ್ಭದಲ್ಲಿಯೂ ಒಂದು ಆಶ್ಚರ್ಯಕರ ಸಂಗತಿ ನಡೆಯಿತು ಎಂದು ಭಕ್ತರು ಹೇಳುತ್ತಾರೆ.

ಮಂಗಳವೇಡೆಯಲ್ಲಿ ನೂರಾರು ಜನರ ಅಸ್ತಿಗಳ ರಾಶಿಯಲ್ಲಿ ಚೋಖಾಮೇಳನ ಅಸ್ತಿಗಳನ್ನು ಆರಿಸುವುದು ದುಸ್ತರವಾಯಿತು. ಆದರೆ ನಶ್ವರ ದೇಹ ನಷ್ಟವಾದರೂ ಪರಮೇಶ್ವರನ ಚಿಂತನೆ ಚೋಖಾಮೇಳನ ಅಸ್ತಿಗಳಲ್ಲಿ ಅಖಂಡ ನಡೆದಿತ್ತು. ಆದ್ದರಿಂದಲೇ ಅವನ ಅಸ್ತಿಗಳಲ್ಲಿ ‘ವಿಠ್ಠಲ….ವಿಠ್ಠಲ….ವಿಠ್ಠಲ’ ಎಂಬ ನಾಮೋಚ್ಚಾರವು ಕೇಳಿಬರುತ್ತಿತ್ತು. ಇವು ಚೋಖಾಮೇಳನ ಅಸ್ತಿಗಳೇ ಎಂದು ನಿರ್ಧರಿಸಿ ನಾಮದೇವನು ಅವೆಲ್ಲವುಗಳನ್ನೂ ಸಂಗ್ರಹಿಸಿ ಪಂಢರಪುರಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಬಂದನು. ಎಲ್ಲ ಭಗವದ್ಭಕ್ತರು ಸೇರಿ ವಿಜೃಂಭಣೆಯಿಂದ ವಿಠ್ಠಲ ಮಂದಿರದ ಮಹಾದ್ವಾರದೆದುರು ಅಸ್ತಿಗಳನ್ನು ಪ್ರತಿ ಷ್ಠಾಪಿಸಿದರು.

ಇಂದಿಗೂ ಪ್ರತಿವರ್ಷ ಪಂಢರಪುರದಲ್ಲಿ ವೈಶಾಖ ಶುದ್ಧ ತ್ರಯೋದಶಿಯಂದು ಅಂದು ಚೋಖಾಮೇಳನ ಪುಣ್ಯತಿಥಿಯ ಸಮಾರಂಭವನ್ನು ಭಕ್ತಿಯಿಂದ ನಡೆಸುತ್ತಾರೆ.  ಚೋಖಾಮೇಳನ ಪಲ್ಲಕ್ಕಿಯು ಹೊರಡುತ್ತದೆ. ಈ ಪಲ್ಲಕ್ಕಿಯು ಬಂಕಾನ ಗ್ರಾಮ ಮೇಹುಣಪುರದಿಂದ ಹೊರಟು ಜ್ಞಾನೇಶ್ವರನ ಸಮಾಧಿ ಸ್ಥಾನವಾದ ಆಳಂದಿಗೆ ಬರುತ್ತದೆ. ಅಲ್ಲಿಂದ ಪಲ್ಲಕ್ಕಿಯನ್ನು ಪಂಢರಪುರಕ್ಕೆ ವಿಠ್ಠಲನ ದರ್ಶನಕ್ಕಾಗಿ ತೆಗೆದುಕೊಂಡು ಹೋಗುವರು. ಇಂದಿಗೂ ಪ್ರತಿವರ್ಷ ವಾರಕರಿ ಪಂಥದವರು, ‘ಧ್ವಜ ಏರಿಸೋಣ, ಚಪ್ಪಾಳೆ ತಟ್ಟೋಣ, ಪಂಢರಪುರದ ದಾರಿ ಹಿಡಯೋಣ’ ಎಂಬ ಚೋಖಾಮೇಳನ ಅಭಂಗವನ್ನು ಹೇಳುತ್ತ ಪಂಢರಪುರಕ್ಕೆ ಹೋಗುತ್ತಾರೆ.

ನಿಷ್ಠೆಯ ಮೂರ್ತಿ

ಚೋಖಾಮೇಳನು ಗತಿಸಿ ಸುಮಾರು ಆರುನೂರು ಐವತ್ತು ವರ್ಷಗಳಾದವು. ಆದರೆ ಅವನಿತ್ತ ಸಂದೇಶವು ಇಂದಿಗೂ ತಾರಕವಾಗಿದೆ. ಅವನ ಸಂದೇಶದ ಸಾರವಿಷ್ಟು: ‘ಪರಮಾತ್ಮನಲ್ಲಿನ ಭಕ್ತಿಯು ಮಾನವ ಜೀವನದಲ್ಲಿ ಅತ್ಯಂತ ಮುಖ್ಯವಾದುದಾಗಿದೆ. ಇದಿಲ್ಲದೆ ಜೀವನವು ಉಳಿದ ಸಂಗತಿಗಳಿಂದ ಸಮೃದ್ಧವಾಗಿದ್ದರೂ ಅದು ದರಿದ್ರವೇ ಸರಿ. ಪ್ರತಿಯೊಬ್ಬ ಮಾನವನು ತನ್ನ ಪ್ರಾಣವನ್ನು ಪಣಕ್ಕೆ ಹಚ್ಚಿ ಈ ಅಂತಿಮ ಮೂಲ್ಯವನ್ನು ಕಾಯ್ದುಕೊಳ್ಳಬೇಕು’ _ ಇದನ್ನು ಚೋಖಾಮೇಳನು ಸ್ವಂತ ಆಚರಣೆಯಿಂದ ತೋರಿಸಿದನು.

ಚೋಖಾಮೇಳನ ಸಮಕಾಲೀನ ಸಂತರಾದ ನಾಮದೇವ, ಜನಾಬಾಯಿ, ಬಂಕಾ, ನರಹರಿ ಸೋನಾರ ಮುಂತಾದವರು ತಮ್ಮ ಅಭಂಗಗಳಲ್ಲಿ ಭಕ್ತರಾಜ ಚೋಖಾಮೇಳನಿಗೆ ಸ್ತುತಿರೂಪವಾದ ಭಕ್ತಿ ಕುಸುಮಾಂಜಲಿ ಯನ್ನು ಅರ್ಪಿಸಿದ್ದಾರೆ. ಅದರಂತೆ ಮುಂದೆ ಈ ಭಕ್ತ ಪರಂಪರೆಯಲ್ಲಿ ಜನ್ಮವೆತ್ತಿ ಬಂದ ಹಿರಿಯ ಸಂತರಾದ ಏಕನಾಥ ಮಹಾರಾಜ, ತುಕಾರಾಮ ಮಹಾರಾಜ, ಯೋಗಿರಾಜ, ಮಹಿಪತಿ, ಮೇರೋಪಂತ, ಪಾಂಡುರಂಗ ಬೋವಾ, ಅನಾಮಿ, ಸ್ವಾಮಿ ಸ್ವರೂಪಾನಂದ ಮುಂತಾದ ಭಕ್ತ ಮಹಾಮಹಿಮರೆಲ್ಲರೂ ತಮ್ಮ ಅಭಂಗಗಳಲ್ಲಿ ಚೋಖಾಮೇಳನ ಅನನ್ಯ ವಿಠ್ಠಲ ಭಕ್ತಿಯನ್ನು ಹೊಗಳಿ ಹಾಡಿದ್ದಾರೆ.

ಸಂತರು ಮತ್ತು ಭಕ್ತಶ್ರೇಷ್ಠರನ್ನು ಕುರಿತು ಆಶ್ಚರ್ಯ ವನ್ನುಂಟುಮಾಡುವಂತಹ ಸಂಗತಿಗಳ ವೃತ್ತಾಂತಗಳು ಎಲ್ಲ ದೇಶಗಳಲ್ಲಿ, ಜನರಲ್ಲಿ ಪ್ರಚಲಿತವಾಗಿರುತ್ತವೆ. ಅವರನ್ನು ಕುರಿತು ಅಂತಹ ವೃತ್ತಾಂತಗಳು ಜನರ ಬಾಯಿಯಲ್ಲಿ ಬರುತ್ತಿರುವುದೇ ಅವರ ಹಿರಿಮೆಗೆ ಗುರುತು. ಈ ಸಂತರ ಶುಭ್ರ ಜೀವನ, ತಮಗಾಗಿ ಏನನ್ನೂ ಬಯಸದ ಮನಸ್ಸು, ಅಹಂಕಾರದ ಸೋಂಕಿಲ್ಲದ ಸ್ವಭಾವ, ತಮ್ಮ ನಂಬಿಕೆಯಲ್ಲಿ ಸ್ವಲ್ಪವೂ ಅಲುಗಾಡದ ನಿಷ್ಠೆ – ಇವುಗಳಿಗಾಗಿ ಅವರು ಎಂದಿಗೂ ಗೌರವಾರ್ಹರು. ಬಾಳಿಗೊಂದು ನಿಷ್ಠೆ ಬೇಕು, ಅಂತಹ ನಿಷ್ಠೆಯ ಮೂರ್ತಿಗಳಾಗಿದ್ದವರು ಅವರು.