ಎತ್ತರದ ಬಾನಡಿಗೆ ತೆರೆದ ಬದುಕಿನ ತೆರದಿ
ಮಲಗಿಕೊಂಡಿಹುದಿಲ್ಲಿ ಗದ್ದೆ ಬಯಲು,
ನೀಲಿ ಮುಗಿಲಿನ ಮನದ ಕನಸುಗಳ ರೀತಿಯಲಿ
ಮೈಚಾಚಿ ಹರಹಿಹುದು ಗಿರಿಯ ಸಾಲು !

ಅದಿಗೊ ಬೆಳ್ಳಕ್ಕಿಗಳ ಮಾಲೆ ತೇಲುತ ಬಂತು :
ದಿವ್ಯ ಸುಂದರ ಕವನದೊಂದು ಸಾಲು !
ಇದೊ, ಕೇಳುತಿದೆ ಕಿವಿಗೆ, ಕೆರೆ ನೀರ ತೊಟ್ಟಿಲಲಿ
ಅಲೆಯ ಕೂಸಿನ ಕೇಕೆ, ಮತ್ತೆ ತೊದಲು !

ಇಲ್ಲೆ, ಬದಿಯೊಳಗೊಂದು ಪಾಳು ಗುಡಿ ನಿಂತಿಹದು
ಭಾವವೇ ಇರದೊಂದು ಕಗ್ಗದಂತೆ !
ಬಾವಲಿಯ ಕೀಚುದನಿ ಹಗಲಿರುಳು ಕೇಳುತಿದೆ
ಅದಕೊಂದು ವ್ಯಾಖ್ಯಾನ ಬರೆಯುವಂತೆ !

ಭೂತಬೈರಾಗಿಯೊಲು ಕಬಂಧ ಕೊಂಬೆಗಳ
ಚಾಚಿ ನಿಂತಿಹುದಿಲ್ಲಿ ಹಿರಿಯಾಲವು.
ಅದರ ಜಟೆಯೊಳು ತೂರಿ ಉಯ್ಯಾಲೆಯಾಡುತಿವೆ.
ಹಗಲಿರುಳು ನೂರಾರು ನೆಳಲು ಬೆಳಕು !

ಈ ಎಲ್ಲ ನೋಟಗಳ ನೆಲಮುಗಿಲುಗಳ ಹಿಡಿದು
ಯಾವ ಚೌಕಟ್ಟಿನಲೊ ಬಂಧಿಸಿಹವು ;
ಇನಿತೆಲ್ಲವನು ಹಿಡಿದು ಸವಿಯುತಿದೆ ನನ್ನ ಮನ,
ಇದಕಿಂತ ಮಿಗಿಲುಂಟೆ ಹಿರಿಚೋದ್ಯವು !