ರಾಜ್ಯದ ತುಮಕೂರು, ಚಿತ್ರದುರ್ಗ, ಕೊಪ್ಪಳ, ಆಂಧ್ರದ ಅನಂತಪುರ ಜಿಲ್ಲೆಗಳಲ್ಲಿ ನೂರಾರು ಎಕರೆ ಬೀಳು ಜಮೀನು. ಅದು ಮಳೆ ಬಾರದೆ ಬೀಳು ಬಿಟ್ಟಿರುವುದಲ್ಲ, ಅಲ್ಲಿ ಬೆಳೆ ಇಟ್ಟರೆ ಸರಿಯಾಗಿ ಬೆಳೆಯುವುದಿಲ್ಲ ಎಂಬ ಕಾರಣಕ್ಕೆ ಬೀಳು ಬಿಟ್ಟದ್ದು. ಕಾರಣ ಅದೆಲ್ಲಾ ಚೌಳು ಭೂಮಿ. ಇಂತಹ ಮಣ್ಣಿನ ಮೇಲ್ಭಾಗವು ಸಾಮಾನ್ಯವಾಗಿ ಬಿಳಿ ಬಣ್ಣಕ್ಕಿದ್ದು ಹೆಚ್ಚು ಉಪ್ಪಿನ ಅಂಶವಿರುತ್ತದೆ. ಮಣ್ಣು ಹೆಪ್ಪುಗಟ್ಟಿದಂತಿದ್ದು ಬೀಜ ಬಿತ್ತಿದರೆ ಸರಿಯಾಗಿ ಮೊಳಕೆ ಬರುವುದಿಲ್ಲ. ಒಂದು ವೇಳೆ ಮೊಳಕೆ ಬಂದರೂ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಕೃಷಿ ತಜ್ಞರ ಪ್ರಕಾರ ಇದು ಕೇವಲ ನಮ್ಮ ರಾಜ್ಯ ಅಥವಾ ದೇಶದ ಸಮಸ್ಯೆಯಲ್ಲ ಜಾಗತಿಕ ಸಮಸ್ಯೆ, ಪ್ರಪಂಚದಲ್ಲಿ ಸುಮಾರು ೯೫೪ ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆಯಿದೆ. ನಮ್ಮ ದೇಶದಲ್ಲಿ ರಾಷ್ಟ್ರೀಯ ಕೃಷಿ ಆಯೋಗದ ಪ್ರಕಾರ ೭.೪೨ ಮಿ.ಹೆ. ಮತ್ತು ಕರ್ನಾಟಕದಲ್ಲಿ ೨.೪೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆಯಿದೆ. ಪ್ರತಿ ವರ್ಷ ಈ ಪ್ರದೇಶ ವಿಸ್ತರಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರಪಂಚದ ಒಟ್ಟು ಕೃಷಿ ಭೂಮಿಯಲ್ಲಿ ಶೇ ೧೦ ರಷ್ಟು ಚೌಳು ಭೂಮಿಯಿದ್ದು ಬಹುತೇಕ ಅನುತ್ಪಾದಕವಾಗಿದೆ. ಕರ್ನಾಟಕದೆಲ್ಲೆಡೆ ಚೌಳು ಭೂಮಿ ಸಮಸ್ಯೆ ಬಾಧಿಸುತ್ತಿದೆ.

ಉದಾಹರಣೆಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕೊಂದರಲ್ಲಿಯೇ ೮೦೦ ಎಕರೆಗಿಂತ ಹೆಚ್ಚು ಚೌಳು ಭೂಮಿಯಿರುವುದು ಮಣ್ಣು ಪರೀಕ್ಷೆ ಪ್ರಯೋಗಾಲಯದಿಂದ ಧೃಢಪಟ್ಟಿರುತ್ತದೆ. ಒಟ್ಟು ೧೯೨೭ ತಾಕುಗಳ ಮಣ್ಣು ಮಾದರಿಗಳನ್ನು ಪರೀಕ್ಷಿಸಿದ್ದು ೬೧೦ ಮಾದರಿಗಳಲ್ಲಿ ಚೌಳು ಸಮಸ್ಯೆ ಕಂಡು ಬಂದಿರುತ್ತದೆ. ನಂತರದ ಸ್ಥಾನದಲ್ಲಿ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ೧೨೭೦ ಮಾದರಿಗಳಲ್ಲಿ ೫೩೦ ಮಾದರಿಗಳು ಚೌಳು ಭೂಮಿಯ ಸಮಸ್ಯೆಯನ್ನು ಖಚಿತಪಡಿಸಿವೆ. ಪಾವಗಡದ ಶೇ ೪೦ ರಷ್ಟು ಮಣ್ಣು  ಚೌಳು ಅಂಶವನ್ನೊಳಗೊಂಡಿದೆ.

ಮಂಡ್ಯದ ವಿ.ಸಿ.ಫ಼ಾರಂನ ಕೃಷಿ ವಿಜ್ಞಾನಿ ಟಿ.ಶಿವಕುಮಾರ್ ಅವರ ಪ್ರಕಾರ ಇದಕ್ಕೆ ಕಾರಣ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಒಂದೇ ರೀತಿಯ ಬೆಳೆ ಇಡುತ್ತಿರುವುದು,  ಅಗತ್ಯಕ್ಕಿಂತ ಹೆಚ್ಚಿನ ನೀರು ಉಪಯೋಗ, ರಸಗೊಬ್ಬರಗಳ ಅತಿಯಾದ ಬಳಕೆ, ಬಿಸಿಲಿನಲ್ಲಿ ಸುಧೀರ್ಘ ಕಾಲ ಜಮೀನು ಒಣಗುವಿಕೆ ಮತ್ತು ಇತರ ಅಸಮರ್ಪಕ ನಿರ್ವಹಣೆಯಿಂದ ಸಾವಿರಾರು ಎಕರೆ ಚೌಳು ಮತ್ತು ಕ್ಷಾರ ಮಣ್ಣಿನ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ಇಂತಹ ಜಮೀನುಗಳಲ್ಲಿ ಕೃಷಿಯು ಲಾಭದಾಯಕವಲ್ಲ. ಈ ಸಮಸ್ಯಾತ್ಮಕ ಮಣ್ಣುಗಳನ್ನು ಗುಣಪಡಿಸಲು ಹಲವಾರು ಪ್ರಯತ್ನಗಳು ಚಾಲ್ತಿಯಲ್ಲಿವೆ ಎನ್ನುತ್ತಾರೆ.

ತಜ್ಞರು ಚೌಳು ಮಣ್ಣಿನಲ್ಲಿ ಕೃಷಿ ಲಾಭದಾಯಕವಲ್ಲ ಎಂದು ಹೇಳಿದರೂ ಸಹ ನಮ್ಮ ರೈತರು ಅನಾದಿ ಕಾಲದಿಂದಲೂ ಚೌಳು ಮಣ್ಣನ್ನು ಪಳಗಿಸಿ ಕೃಷಿ ಮಾಡುತ್ತಿದ್ದಾರೆ. ಚೌಳು ಮಣ್ಣಿಗೆಂದೇ ಪ್ರತ್ಯೇಕ ದೇಸೀ ಬೀಜಗಳನ್ನು ಬಳಸುವುದು ಅವರ ಜಾಣ್ಮೆಗೆ ಉತ್ತಮ ನಿದರ್ಶನ. ವಿಶೆಷವಾಗಿ ಭತ್ತದಲ್ಲಿ ಚೌಳು ನಿರೋಧಕ ತಳಿಗಳ ಅಧ್ಬುತ ಭಂಡಾರವೇ ಇದೆ.

ತುಮಕೂರು ಚಿತ್ರದುರ್ಗ ಭಾಗದ ರೈತರು ಮಣ್ಣಿನಲಿ ಚೌಳು ಅಂಶವನ್ನು ಕಡಿಮೆ ಮಾಡಲು ಭೂಮಿಗೆ ಹಸಿ ಸಗಣಿಯನ್ನು ಹಾಕುವುದು, ಬೇರೆಡೆಯಿಂದ ಕೆಂಪುಮಣ್ಣನ್ನು ತಂದು ಬೆರೆಸುವುದು, ಮರಳು ಬೆರೆಸುವುದು, ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಕೆ, ಹಸಿರೆಲೆ ಗೊಬ್ಬರ ಬಳಕೆ, ಹೊಂಗೆ ಸೊಪ್ಪು, ಹೊಂಗೆ ಹೂವು ಮಿಶ್ರಣ ಮಾಡುವುದಲ್ಲದೆ ಬೇವು, ಕಕ್ಕೆ, ಬಂದ್ರೆ, ತಂಗಡಿ, ಕಾಡುತಂಗಡಿ, ಮಾವು, ಹಲಸು ಮುಂತಾದ ಸೊಪ್ಪುಗಳನ್ನು ಕೊಟ್ಟಿಗೆ ಗೊಬ್ಬರಕ್ಕೆ ಇಲ್ಲವೇ ನೇರವಾಗಿ ಗದ್ದೆಗೆ ಮಿಶ್ರ ಮಾಡುತ್ತಾರೆ.

ಮುಖ್ಯವಾಗಿ ಚೌಳುಯುಕ್ತ ಮಣ್ಣಿಗೆ ಆಳವಾಗಿ ಉಳುಮೆ ಮಾಡಬಾರದು. ನಿಯಮಿತವಾಗಿ ನೀರು ಹಾಯಿಸಬೇಕು ಹಾಗೂ ಬೇಸಾಯ ಮಾಡುವ ಚೌಳುಯುಕ್ತ ಪ್ರದೇಶವನ್ನು ಸಣ್ಣ-ಸಣ್ಣ ಪಾತಿಗಳಾಗಿ ವಿಂಗಡಿಸಿ ನೀರು ನಿಲ್ಲಿಸಬೇಕು. ಹೀಗೆ ಮಾಡುವುದರಿಂದ ಚೌಳಿನಂಶ ನೀರಿನಲ್ಲಿ ಕರಗುತ್ತದೆ. ಆ ನೀರನ್ನು ಬಸಿಗಾಲುವೆಗಳ ಮೂಲಕ ಬಸಿದು ಹೋಗುವಂತೆ ಮಾಡುವುದರಿಂದ ಮಣ್ಣಿನಲ್ಲಿ ಚೌಳಿನಂಶ ಕಡಿಮೆಯಾಗುತ್ತದೆ.

ಚೌಳು ನಿರೋಧಕ ಭತ್ತದ ತಳಿಗಳು!

ನೂರಾರು ವರ್ಷಗಳಿಂದ ಚೌಳು ಮಣ್ಣಿಗೆ ಹೊಂದಿಕೊಂಡು ಬೆಳೆಯುವ ಭತ್ತದ ತಳಿಗಳನ್ನು ತುಮಕೂರು, ಚಿತ್ರದುರ್ಗ ಮತ್ತು ಇವೇ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಆಂಧ್ರದ ಅನಂತಪುರದ ರೈತರು ಬಳಸುತ್ತಿದ್ದಾರೆ. ನಮ್ಮ ದೇಸೀ ಭತ್ತದ ಅದ್ಭುತ ಗುಣವಿಶೇಷಕ್ಕೆ ಇವು ಸಾಕ್ಷಿ.

ಕಾಸರ ನೆಲ್ಲು : ೫ ತಿಂಗಳ ಅವಧಿಯ ತಳಿ. ಜೂನ್-ಜುಲೈನಲ್ಲಿ ಬಿತ್ತನೆ.  ೪ ರಿಂದ ೫ ಅಡಿ ಎತ್ತರ ಬೆಳೆಯುತ್ತದೆ. ಇದರ ವಿಶೇಷ ಗುಣವೆಂದರೆ ಮಡಿಕಟ್ಟಿದ (ನರ್ಸರಿ) ೪೫ ದಿನಗಳ ನಂತರವೂ ನಾಟಿ ಮಾಡಬಹುದು. ಬಿತ್ತನೆಗೆ ಬಳಸುವ ಬೀಜವು ಮಳೆಯಲ್ಲಿ ನೆನೆಯಬಾರದು ಮತ್ತು ಬಣವೆಯಲ್ಲಿ ೧ ವಾರಕ್ಕಿಂತ ಜಾಸ್ತಿ ದಿನಗಳ ಕಾಲ ಬಿಡಬಾರದು. ಭತ್ತವು ಕೆಂಪು ಮಿಶ್ರಿತ ಕಂದು ಬಣ್ಣಕ್ಕಿರುವುದರಿಂದ ಕಾಸರನೆಲ್ಲು ಎಂಬ ಹೆಸರು. ಅಕ್ಕಿ ಕೆಂಪಗಿದ್ದು ದಪ್ಪನಾಗಿರುತ್ತೆ. ಅನ್ನ ತುಂಬಾ ರುಚಿ. ಬಾಣಂತಿಯರಿಗೆ ತುಂಬಾ ಒಳ್ಳೆಯ ಪೌಷ್ಠಿಕ ಆಹಾರ ಎಂದು ಅಮ್ಮುಕುಂದಿ ಗ್ರಾಮದ ೭೫ ವರ್ಷ ವಯಸ್ಸಿನ ಹಟ್ಟಿಸ್ವಾಮಿಯವರ ತಾಯಿ ಹೇಳುತ್ತಾರೆ.

ಮುಳ್ಳು ಭತ್ತ : ಜೂನ್-ಜುಲೈನಲ್ಲಿ ಬಿತ್ತನೆ ಮಾಡಬಹುದು. ಅವಧಿ ೪ ತಿಂಗಳು. ಇಳುವರಿ ೨೦ ರಿಂದ ೨೫ ಕ್ವಿಂಟಾಲ್. ಮೊಳಕಾಲ್ಮೂರು ಭಾಗದಲ್ಲಿ ಮೊಳಕೆ ಕಟ್ಟಿ ಬಿತ್ತನೆ ಮಾಡುತ್ತಾರೆ. ಗದ್ದೆಯಲ್ಲಿ ನೀರು ಸದಾಕಾಲ ನಿಂತಿರಬೇಕು ಇಲ್ಲವಾದರೆ ಹೆಚ್ಚು ಜೊಳ್ಳು ಆಗುತ್ತದೆ. ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಕ್ವಿಂಟಾಲ್‌ಗೆ ೮೦೦ ರಿಂದ ೧೦೦೦ ರೂ.ಗಳವರೆಗೆ ಬೆಲೆ ಇದೆ. ಹೆಚ್ಚಾಗಿ ಅವಲಕ್ಕಿ, ಇಡ್ಲಿರವೆ ಮತ್ತು ಸಿಹಿಗಾರ್ಗಿ ತಯಾರಿಸಲು ಕೊಂಡುಕೊಳ್ಳುತ್ತಾರೆ. ಭತ್ತದ ತುದಿಯಲ್ಲಿ ಅರ್ಧ ಇಂಚು ಮುಳ್ಳಿನ ಹಾಗೆ ಮೀಸೆ ಇರುವುದರಿಂದ ಮುಳ್ಳುಭತ್ತ ಎಂದು ಹೆಸರು. ಸುಮಾರು ೭೦ ವರ್ಷಗಳ ಹಿಂದಿನಿಂದಲೂ ಈ ತಳಿಯನ್ನು ಬೆಳೆಯುತ್ತಿದ್ದೇವೆಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ|| ಅಮ್ಮು ಕುಂದಿ ಗ್ರಾಮದ ಹಟ್ಟಿಸ್ವಾಮಿ ಅಡಪದ ತಿಳಿಸುತ್ತಾರೆ.

ಸಣ್ಣನೆಲ್ಲು : ೨ ರಿಂದ ೩ ಅಡಿ ಬೆಳೆಯುತ್ತದೆ. ಜೂನ್-ಜುಲೈ ತಿಂಗಳಿನಲ್ಲಿ ಮಡಿಕಟ್ಟಿ ೨೫ ದಿನಗಳಿಗೆ ನಾಟಿ ಮಾಡುತ್ತಾರೆ. ಎಕರೆಗೆ ೧೫ ರಿಂದ ೨೦ ಕ್ವಿಂಟಾಲ್ ಇಳುವರಿ ಸಿಗುತ್ತದೆ. ಮಂಡಕ್ಕಿ ಮಾಡಲು ಹೆಚ್ಚು ಉಪಯೋಗಿಸುತ್ತಾರೆ. ಒಂದು ಕ್ವಿಂಟಾಲ್‌ಗೆ ಒಂದು ಸಾವಿರದವರೆಗೆ ಧಾರಣೆಯಿದೆ. ‘ನಾವು ಸುಮಾರು ೧೫ ವರ್ಷಗ ಳಿಂದ ಬೆಳೆಯುತ್ತಿದ್ದೇವೆ’ ಎಂದು ಮೊಳಕಾಲ್ಮೂರು ತಾ|| ಚಿಕ್ಕೇರಹಳ್ಳಿ ಗ್ರಾಮದ ಮೋಸೆ ಗೋವಿಂದಪ್ಪ ಹೇಳುತ್ತಾರೆ.

ಚಿಂತಪೂಲ ವೊಡ್ಲು : ತೆಲುಗಿನಲ್ಲಿ ಮೊಡ್ಲು ಎಂದರೆ ಕನ್ನಡದಲ್ಲಿ ಭತ್ತ. ಚಿಂತಪೂ ಎಂದರೆ ಹುಣಸೆ ಹೂ. ಹುಣಸೆ ಹೂವಿನ ಬಣ್ನದ ಭತ್ತವಾದ್ದರಿಂದ ಈ ಹೆಸರು. ೪ ತಿಂಗಳ ಬೆಳೆ. ಜೂನ್ ಕೊನೆಯ ಇಲ್ಲವೆ ಜುಲೈ ಮೊದಲ ವಾರದಲ್ಲಿ ಮಡಿಕಟ್ಟಿ ಬಿತ್ತನೆ ಮಾಡುತ್ತಾರೆ. ಹಬ್ಬ-ಹರಿದಿನಗಳಲ್ಲಿ ಈ ಅಕ್ಕಿಯನ್ನು ಬಳಸಿ ತಂಬಿಟ್ಟು (ತಮುಟ) ತಯಾರಿಸುತ್ತಾರೆ. ‘ನಾವು ಸುಮಾರು ೧೫ ವರ್ಷಗಳಿಂದಲೂ ಮನೆ ಬಳಕೆಗಾಗಿ ಬೆಳೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಮಡಕಶಿರಾ ತಾ|| ಮರವಪಲ್ಲಿಯ ರುದ್ರಪ್ಪ.

ಬಿಳಿತೋಕು ವೊಡ್ಲು : ಮಡಕಶಿರಾ ತಾ|| ತಿರುಮದೇವರಪಲ್ಲಿಯ ಶಿವಮ್ಮನವರು ಹೇಳುವಂತೆ ತೆಲುಗಿನಲ್ಲಿ ತೋಕು ಎಂದರೆ ಕನ್ನಡದಲ್ಲಿ ಮುಳ್ಳು, ಮೂತಿ ಅಥವಾ ಮೀಸೆ ಎಂದು. ಮೀಸೆಯುಳ್ಳ ಬಿಳಿಬಣ್ಣದ ಭತ್ತ. ೪ ತಿಂಗಳ ಬೆಳೆ. ಎಕರೆಗೆ ೩೫ ರಿಂದ ೪೦ ಸೇರು ಬಿತ್ತನೆ ಬೇಕಾಗುತ್ತದೆ. ಜೂನ್ -ಜುಲೈ ತಿಂಗಳಿನಲ್ಲಿ ಪುಣಜಿ ಮಾಡುತ್ತಾರೆ. ಉತ್ತಮ ರುಚಿ, ‘೧೫ ವರ್ಷಗಳಿಂದ ಬಳಸುತ್ತಿದ್ದೇವೆ’ ಎನ್ನುತ್ತಾರೆ ಶಿವಮ್ಮನವರು.

ಕರಿತೋಕು ವೊಡ್ಲು : ಕಪ್ಪುಬಣ್ನದ ಮೀಸೆಯುಳ್ಲ ಭತ್ತ. ಪಾವಗಡ ತಾ|| ಕಡುಮಲಕುಂಟೆ ಹನುಮಂತರಾಯಪ್ಪನವರು ಕರಿತೋಕುವೊಡ್ಲು ಬೆಳೆಯುವ ಕೃಷಿಕನಾಗಿದ್ದು ಅವರ ಚೌಳು ಭೂಮಿಗಾಗಿಯೇ ಈ ತಳಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಸುಮಾರು ೨೫ ವರ್ಷಗಳಿಂದಲೂ ಮನೆ ಬಳಕೆಗಾಗಿ ಈ ತಳಿಯನ್ನು ಬೆಳೆದುಕೊಳ್ಳುತ್ತಾರೆ. ಅಕ್ಕಿ ದಪ್ಪಗಿದ್ದು ಉತ್ತಮ ರುಚಿ ಹೊಂದಿದೆ. ೪ ತಿಂಗಳ ಬೆಳೆ. ಎಕರೆಗೆ ೧೫ ರಿಂದ ೨೦ ಕ್ವಿಂಟಾಲ್ ಇಳುವರಿ ಬರುತ್ತದೆ. ಮೊಳಕೆ ಕಟ್ಟಿ ನಂತರ ಪುಣಜಿ ವಿಧಾನದಲ್ಲಿ ಭತ್ತ ಬೆಳೆಯುತ್ತಾರೆ.

ಸಣ್ಣ ವೊಡ್ಲು : ಪಾವಗಡ ತಾ|| ಹೊಸಹಳ್ಳಿ ತಾಂಡದ ಅಜ್ಜಾನಾಯ್ಕರವರು ಹೇಳುವಂತೆ ಇದು ಸೋನಮಸೂರಿಗಿಂತಲೂ ಸಣ್ಣಗಿರುತ್ತದೆ. ಇವರು ಈ ತಳಿಯನ್ನು ೪೦ ವರ್ಷಗಳಿಂದ ಬೆಳೆಯುತ್ತಿದ್ದಾರೆ. ೪ ತಿಂಗಳ ಬೆಳೆ. ಎಕರೆಗೆ ೨೦ ರಿಂದ ೨೫ ಚೀಲ ಇಳುವರಿ ಬರುತ್ತದೆ. ಅಕ್ಕಿ ಕಂದು ಮಿಶ್ರಿತ ಕೆಂಪಗಿದ್ದು ತಿನ್ನಲು ರುಚಿಕರ. ಅನ್ನವು ಹೂವಿನಂತೆ ಮೆದುವಾಗಿರುತ್ತದೆ. ಭತ್ತ ಸಣ್ಣಗಿರುವುದರಿಂದ ಸಣ್ಣವೊಡ್ಲು ಎಂಬ ಹೆಸರು.

ಪಿಚ್ಚ ನೆಲ್ಲು : ಅತ್ಯಂತ ಜನಪ್ರಿಯ ಚೌಳು ಭೂಮಿ ತಳಿ. ನಾಲ್ಕೂವರೆ ತಿಂಗಳ ಅವಧಿ. ಆರಿದ್ರ ಮಳೆಗೆ ಬಿತ್ತನೆ ಮಾಡುತ್ತಾರೆ. ಮೊಳಕೆ ಪ್ರಮಾಣ ಶೇ. ೬೦ರಷ್ಟಿದ್ದು, ಎಕರೆಗೆ ೪೦ ಸೇರು ಭತ್ತ ಬೇಕಾಗುತ್ತದೆ.  ೪ ರಿಂದ ೫ ಅಡಿ ಎತ್ತರಕ್ಕೆ ಬೆಳೆಯುತ್ತದೆ. ಭತ್ತವು ಬಿಳಿ-ಕಂದು ಮಿಶ್ರಿತವಾಗಿದ್ದು, ಉತ್ತಮ ರುಚಿ, ಎಕರೆಗೆ ೨೦ ರಿಂದ ೨೫ ಕ್ವಿಂಟಾಲ್ ಇಳುವರಿ ಸಿಗುತ್ತದೆ.

ಬಿಳಿಪಿಚ್ಚ ನೆಲ್ಲು : ನಾಲ್ಕೂವರೆಯಿಂದ ಐದು ತಿಂಗಳ ಬೆಳೆ. ಜೂನ್-ಜುಲೈನಲ್ಲಿ ಮೊಳಕೆ ಕಟ್ಟಿ ಪುಣಜಿ ಮಾಡುತ್ತಾರೆ. ೩ ರಿಂದ ೪ ಅಡಿ ಬೆಳೆಯುತ್ತದೆ. ೨೫ ರಿಂದ ೩೦ ಕ್ವಿಂಟಾಲ್ ಇಳುವರಿ. ಬಿತ್ತನೆ ಬೀಜವನ್ನು ಮೊಳಕೆ ಕಟ್ಟುವುದಕ್ಕೆ ಮೊದಲ ೨ ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಕಟ್ಟುವುದರಿಂದ ಮೊಳಕೆ ಚೆನ್ನಾಗಿ ಬರುತ್ತದೆ ಎಂಬುದು ರೈತರ ಅನುಭವ. ಅಕ್ಕಿ ಮೃದುವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ ಎಂದು ಈ ತಳಿಯನ್ನು ಸುಮಾರು ೨೫ ವರ್ಷಗಳಿಂದಲೂ ಬೆಳೆಯುತ್ತಿರುವ ಮಡಕಸಿರಾ ತಾಲ್ಲೂಕಿನ ಜಿಲ್ಲಡಗುಂಟೆಯ ರೈತರು ನುಡಿಯುತ್ತಾರೆ.

ತೋಕೆಪಿಚ್ಚ ನೆಲ್ಲು : ನಾಲ್ಕೂವರೆ ತಿಂಗಳಿಗೆ ಬರುತ್ತದೆ. ಎಕರೆಗೆ ೨೦ ರಿಂದ ೨೫ ಕ್ವಿಂಟಾಲ್ ಇಳುವರಿ ಬರುತ್ತದೆ. ಭತ್ತವು ಸಣ್ಣಗಿದ್ದು, ಕಂದುಮಿಶ್ರಿತ ಕೆಂಪು. ಭತ್ತದ ಮೂತಿಯಲ್ಲಿ ಮುಳ್ಳುಗಳ ಹಾಗೆ ತೋಕೆ ಇರುವುದರಿಂದ ‘ತೋಕೆಪಿಚ್ಚನೆಲ್ಲು’ ಎನ್ನುತ್ತಾರೆ. ಆಂಧ್ರದವರು ತೋಕೆಪಿಚ್ಚನೆಲ್ಲು, ಕರ್ನಾಟಕದವರು ಕೂರ್‍ಲುಚೆನ್ನಂಗಿ ಎಂಬ ಹೆಸರಿನಿಂದ ಕರೆಯುತ್ತಾರೆಂದು ಚೌಳಹಳ್ಳಿಯ ಲಕ್ಷ್ಮೀದೇವಮ್ಮ ಹೇಳುತ್ತಾರೆ.

ಚೌಳು ಚನ್ನಂಗಿ: ಕೂರಲು ಚನ್ನಂಗಿ ಎಂದೂ ಕರೆಯುತ್ತಾರೆ. ಭತ್ತದ ತುದಿಯಲ್ಲಿ ಚೂಪಾದ ಬಾಲ ಇರುವುದರಿಂದ ಈ ಹೆಸರು. ಕೊಟ್ಟಿಗೆ ಗೊಬ್ಬರ ಸಾಕು ಚೆನ್ನಾಗಿ ಬೆಳೆಯುತ್ತದೆ ಎನ್ನುತ್ತಾರೆ ಶಿರಾ ತಾಲ್ಲೂಕಿನ ಕಗ್ಗಲಡು ರೈತರು. ಭತ್ತಕ್ಕಿಂತಲೂ ಹುಲ್ಲಿಗಾಗಿಯೇ ರೈತರು ಇದನ್ನು ಬೆಳೆಯುತ್ತಿದ್ದರು ಎನ್ನುತ್ತಾರೆ ಕ್ಯಾತಗಾನಕೆರೆಯ ಸುಬ್ರಹ್ಮಣ್ಯ. ಕಾಂಡ ಜೋಳದ ದಂಟಿನಂತೆ ಇರುತ್ತದೆ. ೧೪೦ ದಿವಸದ ತಳಿ. ೧೦ ರಿಂದ ೧೫ ಕ್ವಿಂಟಾಲ್ ಕಾಳು ಹಾಗೂ ೫ ರಿಂದ ೬ ಗಾಡಿ ಹುಲ್ಲಿನ ಇಳುವರಿ ನೀಡುತ್ತದೆ. ಅಕ್ಕಿ ಮೃದು, ತುಂಬಾ ಸಿಹಿ, ಕಜ್ಜಾಯ, ದೋಸೆ, ಇಡ್ಲಿ, ರೊಟ್ಟಿಗೆ ಬಳಸುತ್ತಾರೆ. ಹತ್ತು-ಹದಿನೈದು ವರ್ಷದ ಹಿಂದೆ ಹಂಸ ತಳಿಯ ಪ್ರವೇಶದ ನಂತರ ಇದರ ಬಳಕೆ ವ್ಯಾಪಕವಾಗಿ ಕಡಿಮೆಯಾಗಿದೆ.

ಈ ಮೇಲಿನವು ರೈತರು ಅನುಭವದಿಂದ ಬಳಸುತ್ತಿರುವ ತಳಿಗಳಾದರೆ ಕೃಷಿ ತಜ್ಞರ ಪ್ರಕಾರ ಹೆಸರು, ಬಟಾಣಿ, ಹುರುಳಿ, ಬೆಂಡೆ, ಗೋರಿ, ಅಲಸಂದೆ, ತೊಗರಿ, ಮುಸುಕಿನ ಜೋಳ, ಸಜ್ಜೆ, ಕಡಲೆ, ಕುಸುಬೆ, ಗೋದಿ, ಬಾರ್ಲಿ, ಬೀಟ್‌ರೂಟ್ ಮುಂತಾದ ಬೆಳೆಗಳನ್ನು ಚೌಳು ಮಣ್ಣಿನಲ್ಲಿ ಬೆಳೆಯಬಹುದು.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಅಮ್ಮುಕುಂದಿ ಗ್ರಾಮ ಚೌಳುನಿರೋಧಕ ಭತ್ತದ ತಳಿಗಳನ್ನು ಈಗಲೂ ಉಳಿಸಿಕೊಂಡು ಬರುತ್ತಿರುವ ಗ್ರಾಮ. ಈ ತಳಿಗಳನ್ನು ಉಳಿಸುವುದು ಇಲ್ಲಿನ ರೈತರಿಗೆ ಅನಿವಾರ್ಯ. ಏಕೆಂದರೆ ಗ್ರಾಮದ ಕೆರೆ ಹಿಂಭಾಗದ ಸುಮಾರು ೨೫೦ ಹೆಕ್ಟೇರ್ ಭೂಮಿ ಪೂರ್ತಿ ಚೌಳು. ಈ ಭೂಮಿಯಲ್ಲಿ ಇಲ್ಲಿನ ಸಾಂಪ್ರದಾಯಿಕ ಭತ್ತದ ತಳಿಗಳಾದ ಕಾಸರನೆಲ್ಲು, ಮುಳ್ಳುಭತ್ತ, ಸಣ್ಣ ನೆಲ್ಲುಗಳನ್ನು ಬಿಟ್ಟರೆ ಬೇರೇನೂ ಬೆಳೆಯದು ಎಂಬುದು ಸುಮಾರು ೭೫ ವರ್ಷಗಳಿಂದ ನಾಟಿ ಭತ್ತಗಳನ್ನೇ ಬೆಳೆಯುತ್ತಿರುವ ರೈತ ಹಟ್ಟಿಸ್ವಾಮಿ ಅನುಭವ. ಅಮ್ಮುಕುಂದಿ ಗ್ರಾಮವಲ್ಲದೆ ಅಲ್ಲಿನ ಕೆರೆ ನೀರು ಹರಿಯುವ    ಚಿಕ್ಕೆರೆಹಳ್ಳಿ, ಬಟ್ರಹಳ್ಳಿ, ಹಿರೆಕೆರೆಹಳ್ಳಿ, ನಾಗಸಮುದ್ರ, ಸಿದ್ದಾಪುರ ಗ್ರಾಮಗಳೂ ಸಹ ಚೌಳು ಸಮಸ್ಯೆಯನ್ನು ಎದುರಿಸುತ್ತಿದ್ದು ನಾಟಿ ಭತ್ತದ ತಳಿಗಳನ್ನೇ ಅವಲಂಬಿಸಿವೆ.

ಅಮ್ಮುಕುಂದಿಯ ಹಟ್ಟಿಸ್ವಾಮಿ ಹಡಪದ ಅವರು ತಮ್ಮ ತಾತನ ಕಾಲದಿಂದಲೂ ಚೌಳು ಭತ್ತದ ತಳಿಗಳನ್ನೇ ಬಳಸುತ್ತಾ ಬರುತ್ತಿದ್ದಾರೆ. ಇವರಿಗೆ ೬ ಎಕರೆ ಜಮೀನಿದೆ. ಅದರಲ್ಲಿ ೨ ಎಕರೆಗಳಲ್ಲಿ ಕಾಸರನೆಲ್ಲು ಬೆಳೆಯುತ್ತಾರೆ. ಅದೇ ರೀತಿ ಗ್ರಾಮದ ಚನ್ನಬಸಪ್ಪನಿಗೆ ೪ ಎಕರೆ ಚೌಳು ಭೂಮಿ ಇದ್ದು ಇದರಲ್ಲಿ ಮುಳ್ಳುಭತ್ತ ಬೆಳೆಯುತ್ತಾರೆ. ಇವರೂ ಸಹ ತಲೆಮಾರುಗಳಿಂದ ಈ ತಳಿಯನ್ನು ಉಳಿಸುತ್ತಿದ್ದಾರೆ. ಈ ತಳಿಗೆ ಉತ್ತಮ ಮಾರುಕಟ್ಟೆ ಇದೆ ಎನ್ನುತ್ತಾರೆ ಇವರು. ಅಮ್ಮುಕುಂದಿ ಪಕ್ಕದ ಗ್ರಾಮವಾದ ಚಿಕ್ಕೆರೆಹಳ್ಳಿಯ ಮೋಸೆ ಗೋವಿಂದಪ್ಪ ಒಂದು ಎಕರೆ ಚೌಳು ನೆಲದ ಜಮೀನಿನ ಒಡೆಯ. ಅದರಲ್ಲಿ ಕಳೆದ ೧೫ ವರ್ಷಗಳಿಂದ ಸಣ್ಣನೆಲ್ಲು ಎಂಬ ಚೌಳು ನಿರೋಧಕ ತಳಿ ಬೆಳೆಯುತ್ತಿದ್ದಾರೆ. ಈ ತಳಿ ಮಂಡಕ್ಕಿ ಮಾಡಲು ಸೂಕ್ತವಾಗಿದ್ದು ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ಮೋಸೆ.

ಹೀಗೆ ಚೌಳು ಮಣ್ಣಿಗೆ ಸೂಕ್ತವಾದ ಹಲವಾರು ತಳಿಗಳನ್ನು ನಮ್ಮ ಹಿರೀಕರು ಬಳಸುತ್ತಾ ಅಂತಹ ಜಮೀನನ್ನು ಯಾವುದೇ ಕಾರಣಕ್ಕೂ ಬೀಳು ಬಿಡದೆ ಗೆಯ್ಮೆ ಮಾಡುತ್ತಿದ್ದರು, ಜೊತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿಯನ್ನೂ ಸಹ ಪಡೆಯುತ್ತಿದ್ದರು. ಅವರ ಪಾಲಿಗೆ ಚೌಳು ಮಣ್ಣು ಅಂತಹ ಸಮಸ್ಯೆಯಾಗಿರಲಿಲ್ಲ. ಆದರೆ ಹೊಸ ತಲೆಮಾರಿನ ರೈತರು ಚೌಳು ಭೂಮಿಯನ್ನು ಪಳಗಿಸುವ ಹಿರಿಯರ ಜ್ಞಾನವನ್ನೂ ಪಡೆಯಲಿಲ್ಲ. ಹಳೆಯ ತಳಿಗಳನ್ನೂ ಉಳಿಸಿಕೊಳ್ಳುತ್ತಿಲ್ಲ. ಹಾಗಾಗಿ ಚೌಳು ಮಣ್ಣು ಬೃಹತ್ ಸಮಸ್ಯೆಯಾಗಿ ಬೆಳೆದಿದೆ, ಅಷ್ಟೇ ಅಲ್ಲದೆ ಸಾವಿರಾರು ಎಕರೆ ಚೌಳು ಭೂಮಿ ಬರಡಾಗಿ ಬಿದ್ದಿದೆ ಎನ್ನುತ್ತಾರೆ ಈ ತಳಿಗಳ ಹುಡುಕಾಟದಲ್ಲಿ ತೊಡಗಿಸಿಕೊಂಡಿರುವ ತುಮಕೂರಿನ  ಜಯರಾಮ್.

ಈಗ ತುರ್ತಾಗಿ ಆಗಬೇಕಿರುವುದು ಅಲ್ಲಲ್ಲಿ ಉಳಿದಿರುವ ಚೌಳು ನಿರೋಧಕ ಭತ್ತ, ರಾಗಿ ಇತ್ಯಾದಿ ತಳಿಗಳನ್ನು ಹುಡುಕಿ ಸಂರಕ್ಷಿಸುವುದು, ಅವುಗಳನ್ನು ಬೆಳೆಯುವಂತೆ ರೈತರಿಗೆ ಪ್ರೇರೇಪಿಸುವುದು, ಆ ತಳಿಗಳ ಶುದ್ಧತೆ ಕಾಪಾಡುವುದು. ಚೌಳು ಮಣ್ಣನ್ನು ಪಳಗಿಸುವ ನಮ್ಮ ಹಿರೀಕರ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಿ ಅಳವಡಿಸಿಕೊಳ್ಳುವುದು.