ಛತ್ರಸಾಲ ಬುಂದೇಲಖಂಡ ಎಂಬ ಪ್ರದೇಶದ ವೀರ. ಸುಮಾರು ಇನ್ನೂರ ಐವತ್ತು ವರ್ಷಗಳ ಕೆಳಗೆ ಭಾರತದಲ್ಲಿ ಹಿಂದೂಗಳು ತೀರ ಕಷ್ಟದಲ್ಲಿದ್ದಾಗ ಅವರ ರಕ್ಷೆಯಾದನು.

ಬುಂದೇಲರಿಗೆ ಆ ಹೆಸರು ಬರಲು ಕಾರಣವನ್ನು ವಿವರಿಸುವ ಒಂದು ಕಥೆ ಇದೆ.

ರಕ್ತದ ಬಿಂದುಗಳು

ವೀರಭದ್ರ ಎಂಬ ಒಬ್ಬ ರಾಜ. ಅವನಿಗೆ ಐದು ಜನ ಮಕ್ಕಳು. ಕಿರಿಯ ಮಗ ಪಂಚಮ, ತಂದೆಯ ಪಂಚ ಪ್ರಾಣ. ಸಾಯುವ ಸಮಯದಲ್ಲಿ ತಂದೆ ಪಂಚಮನಿಗೆ ಅರ್ಧ ರಾಜ್ಯವನ್ನು ಕೊಟ್ಟರು. ಉಳಿದ ಅರ್ಧ ರಾಜ್ಯವನ್ನು ನಾಲ್ಕು ಮಕ್ಕಳಲ್ಲಿ ಹಂಚಿದರು. ಅಣ್ಣಂದಿರಿಗೆ ಸಿಟ್ಟು ಬಂತು. ತಮ್ಮನೊಡನೆ ಯುದ್ಧ ಮಾಡಿ ಅವನನ್ನು ಸೋಲಿಸಿ ಓಡಿಸಿದರು. ಪಂಚಮನಿಗೆ ತಂದೆ ತೀರಿಕೊಂಡ ದುಃಖ, ಅಣ್ಣಂದಿರೆಲ್ಲ ಶತ್ರುವಾದರೆಂಬ ದುಃಖ, ರಾಜ್ಯವನ್ನು ಕಳಕೊಂಡ ದುಃಖ-ಹೀಗೆ ಎಲ್ಲವೂ ಸೇರಿ ಮನಸ್ಸಿಗೆ ತುಂಬ ನೋವಾಯಿತು. ಅವನು ವಿಂಧ್ಯಾವಾಹಿನಿ ದೇವಿಯ ತಪಸ್ಸು ಮಾಡತೊಡಗಿದ. ಆಮೇಲೆ ದೇವಿಗೆ ತನ್ನನ್ನೇ ಅರ್ಪಿಸಿಕೊಳ್ಳುತ್ತೇನೆ ಎಂದುಕೊಂಡ. ಖಡ್ಗವನ್ನು ಎತ್ತಿ ಇನ್ನೇನು ಕುತ್ತಿಗೆ ಕಡಿದು ಬೀಳಬೆಕು; ಅಷ್ಟರಲ್ಲಿ ಅಶರೀರ ವಾಣಿ ಕೇಳಿಸಿತು. “ಮಗೂ, ಈ ಬಲಿದಾನ ಬೇಡ. ನಿನ್ನ ರಾಜ್ಯವು ನಿನಗೆ ಸಿಗುವುದು.”

ಪಂಚಮನು ಖಡ್ಗವನ್ನು ಕೆಳಗಿರಿಸಿ ದೇವಿಗೆ ನಮಸ್ಕರಿಸಿದ. ಅದಕ್ಕೆ ತಗುಲಿದ ರಕ್ತಬಿಂದು ಬಿಂದುಗಳಾಗಿ ಭೂಮಿಯ ಮೇಲೆ ಬಿತ್ತು. ಅಂದಿನಿಂದ ಈ ಜನರನ್ನು ಬುಂದೇಲರು ಎಂದು ಕರೆದರು. ಅವರು ವಾಸಮಾಡುವ ಸ್ಥಾನ ಬುಂದೇಲಖಂಡವಾಯಿತು. ಛತ್ರಸಾಲನು ಬುಂದೇಲ ಜನಾಂಗದವನು.

ಬುಂದೇಲಖಂಡದ ವಿಸ್ತಾರ ಯಮುನಾ ನದಿಯಿಂದ ನರ್ಮದೆವರೆಗೆ. ಹಾಗೂ ಚಂಬಲ್ ನದಿಯಿಂದ ಟೋಂಸ್ ನದಿಯವರೆಗೆ. ಮಹಾಭಾರತದ ಕಾಲದಲ್ಲಿ ಇದನ್ನು ಚಿಂದಿ ರಾಜ್ಯವೆಂದು ಕರೆಯುತ್ತಿದ್ದರು. ಆಗ ಇಲ್ಲಿ ಶಿಶುಪಾಲನು ರಾಜನಾಗಿದ್ದನು. ಆಮೇಲೆ ರಾಜಾವಿಕ್ರಮನು ಮಧ್ಯ ಭಾರತವನ್ನು ಜಯಿಸಿ ಆಳಿದಾಗ ಇದನ್ನೇ ಕೇಂದ್ರವಾಗಿ ಇಟ್ಟುಕೊಂಡಿದ್ದನು. ನಾಗವಂಶ, ಕಛವಾಹವಂಶ, ಪರಿಹಾರವಂಶ, ಗಹರವಾರವಂಶ ಹೀಗೆ ಅನೇಕ ವಂಶದವರು ಇಲ್ಲಿ ರಾಜ್ಯವಾಳಿದ್ದರು. ಪಂಚಮನು ಗಹರವಾರ ವಂಶದವನು.

ರಾಜಾ ಪ್ರತಾಪರುದ್ರ

ಬುಂದೇಲರಲ್ಲಿ ರಾಜಾ ಪ್ರತಾಪರುದ್ರ ಮಹಾವೀರ. ಮೊಗಲ ಸರದಾರ ಇಬ್ರಾಹಿಮ್‌ಲೋದಿಯನ್ನು ಸೋಲಿಸುತ್ತ ಇವನು ಬಹಳವಾಗಿ ರಾಜ್ಯವಿಸ್ತಾರ ಮಾಡಿದನು. ಮೊಗಲ ಬಾದಶಹನಾದ ಬಾಬರನೇ ದಂಡೆತ್ತಿ ಬಂದಾಗಲೂ ಅವನನ್ನು ಹೊಡೆದೋಡಿಸಿದ ವೀರನೀತ. ಕ್ರಿ.ಶ. 1587ರಲ್ಲಿ ಓರಛಾ ಎಂಬ ಮಹಾನಗರವನ್ನು ಕಟ್ಟಿಸಲು ಅಡಿಪಾಯ ಹಾಕಿದನು. ಮರು ವರುಷವೇ ಹುಲಿಯ ಬಾಯಿಂದ ದನವನ್ನು ರಕ್ಷಿಸಿದ ಸಂದರ್ಭದಲ್ಲಿ ತನ್ನ ದೇಹಕ್ಕಾದ ಗಂಭೀರ ಗಾಯಗಳಿಂದ ಮೃತನಾದನು. ಮಗ ಭಾರತೀಚಂದ್ರನು ಪಟ್ಟವೇರಿದುದೇ ತಡ, ಮತ್ತೊಮ್ಮೆ ಮೊಗಲರು ಷೇರಶಾಹನೆಂಬ ಸರದಾರನ ಕೈಕೆಳಗೆ ಕೂಡಿ ಯುದ್ಧ ಹೂಡಿದರೂ ಸೋತು ಓಡಿದರು. 1611ರಲ್ಲಿ ಭಾರತೀಚಂದ್ರನು ಮೃತ್ಯುವಶನಾದಮೇಲೆ ತಮ್ಮನಾದ ಮಧುಕರಶಾಹನು ಪಟ್ಟವೇರಿದನು.

ಬುಂದೇಲಖಂಡದ ಮೇಲೆ ಮೊಗಲರಿಗೆ ಕಣ್ಣಿದ್ದೇ ಇತ್ತು. ಬಾಬರನ ಸಂತತಿಯವರಾದ ಅಕ್ಬರ, ಷಹಜಹಾನ್ ಎಲ್ಲರಿಗೂ ತನ್ನ ತಂದೆ, ತಾತ ಯಾರ ಕೈಯಲ್ಲೂ ಆಗದೇ ಇದ್ದದ್ದನ್ನು ತಾನು ಸಾಧಿಸುವ ಹಂಬಲ.

ಜಝಾರಸಿಂಹ ತಂದುಕೊಂಡ ವಿಪತ್ತು

ಆಗ ಓರಛಾ ರಾಜ್ಯವನ್ನು ಆಳುತ್ತಿದ್ದ ಜಝಾರಸಿಂಹನು ಸಾಹಸಿಯೂ, ಶೂರನೂ ಆಗಿದ್ದನು. ಆದರೆ “ಎಲ್ಲ ಬಣ್ಣ ಮಸಿ ನುಂಗಿತು” ಎನ್ನುವಂತೆ ಅವನಲ್ಲಿ ಒಂದು ದೋಷ ಇತ್ತು. ಅದೇ ಸಂಶಯ ಸ್ವಭಾವ, ಎಲ್ಲ ವಿಷಯಗಳಲ್ಲೂ ಸಂದೇಹ. ಯಾರನ್ನೂ ನಂಬುತ್ತಿರಲಿಲ್ಲ. ಅಲ್ಪ ಕಾರಣಕ್ಕಾಗಿ ಕಿರಿಯ ತಮ್ಮ ಹರದೇವನ ಮೇಲೆ ಸಂಶಯ ಬಂತು. ಕೂಡಲೇ ಅವನಿಗೆ ವಿಷ ಕೊಡಿಸಿದನು.

ಹರದೇವನು ಮಲ್ಲಯುದ್ಧ ಪ್ರವೀಣ; ಖಡ್ಗ ಯುದ್ಧದಲ್ಲಿ ಮಹಾಚತುರ. ಇಂತಹ ಸಾಹಸಿ ತನ್ನ ರಾಜ್ಯದ ಬಹುದೊಡ್ಡ ಸಂಪತ್ತು ಎಂದು ತಿಳಿದುಕೊಳ್ಳುವಷ್ಟು ವಿವೇಕವೂ ಜಝಾರಸಿಂಹನಲ್ಲಿ ಉಳಿಯಲಿಲ್ಲ. ಅಣ್ಣನ ಆಜ್ಞೆಯಂತೆ ಹರದೇವನು ವಿಷ ಕುಡಿದು ಪ್ರಾಣಬಿಟ್ಟನು.

ಷಹಜಹಾನನಿಗೆ ಈ ಸುದ್ದಿ ಸಿಕ್ಕಿತು. ಇದೊಳ್ಳೇ ಸಮಯ ಎಂದು ಆತ ಹಿಗ್ಗಿದ. ಬಂದೇಲಖಂಡ ಸಿಕ್ಕಿತೆಂದೇ ಬಗೆದ. ಮೂವರು ಸೇನಾಧಿಪತಿಗಳ ಕೈಕೆಳಗೆ ಬಹುದೊಡ್ಡ ಸೈನ್ಯವನ್ನು ಕಳುಹಿಸಿದ. ತೋಪು, ತುಪಾಕಿ, ಗುಂಡು ಸಿಡಿಸುತ್ತ ಬಂತು ಸೈನ್ಯ. ಓರಛಾ ನಗರಕ್ಕೆ ಮಹಾವಿಪತ್ತು ಒದಗಿತು.

ಆಗ ಮಹೇವಾದಲ್ಲಿ ವೀರ ಚಂಪತರಾಯನು ರಾಜನಾಗಿದ್ದನು. ತನ್ನ ದಾಯಾದಿಗೆ ಬಂದೊದಗಿದ ಕಷ್ಟವನ್ನು ಕೇಳುತ್ತಲೇ ಈ ವೀರನು ಸಹಾಯಕ್ಕಾಗಿ ಧಾವಿಸಿದನು. ಚಂಪತರಾಯನ ವೀರ ಸೈನಿಕರು ಆವೇಶದಿಂದ ಹೋರಾಡಿದರು. ಮೊಗಲರು ಸೋತರು. ಅಸಂಖ್ಯ ಸೈನಿಕರು ಮಡಿದರು. ಉಳಿದ ಸೈನಿಕರು ಕಾಲಿಗೆ ಬುದ್ಧಿ ಹೇಳಿದರು. ಬುಂದೇಲಖಂಡವನ್ನು ಜಯಿಸುವ ಕನಸು, ಕನಸಾಗಿಯೇ ಉಳಿಯಿತು.

ಎರಡು ವಿಶೇಷಗಳು

ಮೊಗಲರು ಎಷ್ಟೊಂದು ಬಾರಿ ಸೋತು ಓಡಿದರೆಂದು ಲೆಕ್ಕವಿದೆಯೇ? ದಿಲ್ಲಿ ಸಿಂಹಾಸನವನ್ನೇರಿದ ಎಲ್ಲ ಮೊಗಲ ರಾಜರೂ ರಾಜ್ಯವಿಸ್ತಾರಕ್ಕಾಗಿ ಯುದ್ಧ ಮಾಡಿದರು. ಸೋಲುಂಡರೂ, ಸಾವಿರಾರು ಸೈನಿಕರು ಮಡಿದರೂ, ಇವರು ಪುನಃ ಸೈನ್ಯ ಕಟ್ಟಿ ಆಕ್ರಮಣ ಮಾಡುತ್ತಿದ್ದರು. ಸೋತಾಗ ಹಿಮ್ಮೆಟ್ಟಿ, ಮತ್ತೆ ಅನುಕೂಲವಾದ ಸಮಯ ಬರುವವರೆಗೆ ಕಾದು ಮುನ್ನುಗ್ಗುವುದು ಇವರ ನೀತಿ. ಗೆದ್ದರೆ ಇವರ ಅಟ್ಟಹಾಸವೇ ಬೇರೆ. ಸಂಪತ್ತನ್ನು ಕೊಳ್ಳೆ ಹೊಡೆಯುವುದು, ಮಠ ಮಂದಿರಗಳನ್ನು ನೆಲಸಮ ಮಾಡುವುದು, ಕೆಲವೊಮ್ಮೆ ಊರಿಗೇ ಬೆಂಕಿ ಇಡುವುದು.

ಹಿಂದೂ ರಾಜರ, ಸೈನಿಕರ ಕತೆಯೇ ಬೇರೆಯಾಗಿತ್ತು. ಇವರು ಯುದ್ಧದ ನಿಯಮಗಳನ್ನು ಪಾಲಿಸುತ್ತಿದ್ದರು. ಕ್ಷಮೆ ಬೇಡಿದ ಶತ್ರುವಿಗೆ ಕ್ಷಮೆ ಕೊಡುವುದು ದೊಡ್ಡಗುಣ ಎಂದು ತಿಳಿದುಕೊಂಡಿದ್ದರು. ತಮ್ಮ ವಂಶದ ಗೌರವಕ್ಕಾಗಿ, ದೇಶರಕ್ಷಣೆಗಾಗಿ ಪ್ರಾಣ ತೆರುವುದು ಅವರಿಗೆ ಭೂಷಣವಾಗಿತ್ತು. ಯುದ್ಧಭೂಮಿಯಲ್ಲಿ ಶತ್ರುವಿಗೆ ಬೆನ್ನು ತೋರಿಸುವುದು ಹೇಡಿತನವಾಗಿತ್ತು. ತಾವು ಬೆರಳೆಣಿಕೆಯಷ್ಟು ಮಂದಿ ಇದ್ದು, ಶತ್ರುಗಳು ಸಾವಿರಾರು ಸಂಖ್ಯೆಯಲ್ಲಿದ್ದರೂ ದೇಹದಲ್ಲಿ ರಕ್ತದ ಕೊನೇ ಬಿಂದು ಇರುವ ತನಕವೂ ಹೋರಾಡಿ ಪ್ರಾಣ ಕೊಡುತ್ತಿದ್ದರು. ಓಡಿಹೋಗಿ ತಲೆಮರೆಸಿಕೊಳ್ಳುತ್ತಿರಲಿಲ್ಲ. ಮೊಗಲರು ಸೋತು ಶರಣಾದರೆ ಅವರನ್ನು ಕ್ಷಮಿಸಿ ಸಂತೋಷ ಪಡುತ್ತಿದ್ದರು. ತಾವು ಗೆದ್ದರೂ ಮತ್ತೊಮ್ಮೆ ಮೊಗಲರು ದಾಳಿ ಮಾಡಬಹುದೆಂಬ ಚಿಂತೆಯಿಲ್ಲದೇ ನೆಮ್ಮದಿಯಿಂದ ಇರುತ್ತಿದ್ದರು.

ಜಝಾರಸಿಂಹನ ಕತೆಯೂ ಹೀಗೆಯೇ ಆಯಿತು. ಚಂಪತರಾಯನ ಸಹಾಯದಿಂದ ಒಮ್ಮೆ ಗೆದ್ದುದೇನೋ ನಿಜ. ಆದರೆ ಮತ್ತೊಮ್ಮೆ ಶತ್ರುಗಳು ಹಠಾತ್ತನೆ ಆಕ್ರಮಣ ಮಾಡಿ ಸಹಾಯ ಬರುವ ಮೊದಲೇ ಜಝಾರಸಿಂಹನನ್ನು ಮುಗಿಸಿಬಿಟ್ಟರು. ಅವನ ಮಕ್ಕಳನ್ನು ಕೊಂದರು.

ವೀರ ಚಂಪತರಾಯ

ಚಂಪತರಾಯನಿಗೆ ತನ್ನ ರಾಜ್ಯದಷ್ಟೇ ಓರಛಾ ರಾಜ್ಯವೂ ಪ್ರಿಯವಾಗಿತ್ತು. ದಾಯಾದಿಗಳನ್ನು ಆತ ಒಡಹುಟ್ಟಿದವರಂತೆಯೇ ಪ್ರೀತಿಸುತ್ತಿದ್ದನು. ಆತನಿಗೆ ಆಕ್ರಮಣದ ಸುದ್ದಿ ಸಿಕ್ಕಿ ಸಹಾಯಕ್ಕೆ ಧಾವಿಸುವ ಮೊದಲೇ ಇಷ್ಟೆಲ್ಲ ಪಾಪಕೃತ್ಯಗಳು ನಡೆದವು. ಇದನ್ನು ಕೇಳಿ ಚಂಪತರಾಯನ ರಕ್ತ ಕುದಿಯಿತು. ಆತ ತನ್ನ ವೀರ ಅನುಯಾಯಿಗಳೊಡನೆ ಸೇರಿ ಅಲ್ಲಿ ಇಲ್ಲಿ ಮೊಗಲರ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲತೊಡಗಿದನು.

ಷಹಜಹಾನನಿಗೆ ಈ ಬುಂದೇಲವೀರನ ಪ್ರತಾಪ ಕೇಳಿ ಸಿಟ್ಟು ಬಂತು. ಅವನು ಬಾಕಿಖಾನ್‌ಎಂಬ ಸೇನಾಧಿಪತಿಯ ಕೈಕೆಳಗೆ ಪ್ರಚಂಡ ಸೈನ್ಯವನ್ನು ಕಳುಹಿಸಿ ಚಂಪತರಾಯನ ಹುಟ್ಟನ್ನೇ ಅಡಗಿಸಲು ಆಜ್ಞೆ ಕೊಟ್ಟನು.

ದೊಡ್ಡ ಸೈನ್ಯದೊಂದಿಗೆ ಭಾರೀ ಕೋಲಾಹಲ ಮಾಡುತ್ತಾ ಬಾಕಿಖಾನನು ಚಂಪತರಾಯನ ಮೇಲೆ ಆಕ್ರಮಣ ಮಾಡಿದನು. ಚಂಪತರಾಯನು ಎದೆ ಗುಂದಲಿಲ್ಲ. ವೀರ ಬುಂದೇಲರಿಗೆ ಯುದ್ಧವೆಂದರೆ ದಿನವೂ ಆಡುವ ಆಟದಂತಿತ್ತು. ಅವರು ನಾಲ್ಕೂ ಕಡೆಗಳಿಂದಲೂ ಮೊಗಲ ಸೈನ್ಯದ ಮೇಲೆ ಬಿದ್ದು ರುಂಡಗಳನ್ನು ಚೆಂಡಾಡತೊಡಗಿದರು. ಹೆಣಗಳು ರಾಶಿಯಾದವು.

ಹುಡುಗನ ಮೇಲೆ ಆಕ್ರಮಣ

ಅಷ್ಟರಲ್ಲಿಯೇ ಬಾಕಿಖಾನನಿಗೆ ಸುದ್ದಿ ಸಿಕ್ಕಿತು. ಚಂಪತರಾಯನ ಮಗನು ಸಂಗಡಿಗರೊಡನೆ ನದಿಯಲ್ಲಿ ಈಜುತ್ತಿದ್ದಾನೆ ಎಂದು. ಕೂಡಲೇ ಆ ದುಷ್ಟನು ಈ ಮುಗ್ಧ ಬಾಲಕರನ್ನು ಕೊಲ್ಲಲು ಸದ್ದುಗದ್ದಲವಿಲ್ಲದೇ ಸೈನ್ಯದ ಒಂದು ತುಕಡಿಯನ್ನು ಕಳುಹಿಸಿದನು.

ಹದಿನಾಲ್ಕು ವರ್ಷ ವಯಸ್ಸಿನ ಸಾರವಾಹನನು ತನ್ನ ಸ್ನೇಹಿತರೊಡನೆ ನದಿಯಲ್ಲಿ ಈಜುತ್ತ ಮೋಜು ಮಾಡುತ್ತಿದ್ದನು. ಫಕ್ಕನೆ ಈ ಮಕ್ಕಳಿಗೆ ಶತ್ರುಗಳ ಸುಳಿವು ಸಿಕ್ಕಿತು. ಕೂಡಲೇ ಇವರು ದಂಡೆಗೆ ಈಜಿ ತಮ್ಮ ಬಟ್ಟೆಗಳನ್ನು ತೊಟ್ಟುಕೊಂಡರು.

ಶತ್ರುಗಳನ್ನು ನಡುಗಿಸಿದ ಎಳೆಯರು

ಬಾಲಕರು ಬಿಲ್ಲು ಬಾಣಗಳನ್ನು ಎತ್ತಿಕೊಳ್ಳುವುದಕ್ಕೂ ಶತ್ರುಗಳು ಕಣ್ಣಿಗೆ ಬೀಳುವುದಕ್ಕೂ ಸರಿಹೋಯಿತು. ಹತ್ತಾರು ಬಾಲಕರು ನೂರಾರು ಕ್ರೂರ ಸೈನಿಕರನ್ನು ಎದುರಿಸಿದರು. ಪೊದೆಗಳಲ್ಲಿ ಅಡಗಿದರು; ಕಾಡಿನ ದೊಡ್ಡ ದೊಡ್ಡ ಮರಗಳ ಆಸರೆ ಪಡೆದರು. ಅಡಗಿ ನಿಂತು ಬಾಣಗಳನ್ನು ಬಿಟ್ಟು ಅನೇಕರನ್ನು ಯಮಲೋಕಕ್ಕೆ ಅಟ್ಟಿದರು. ಈ ಸುದ್ದಿ ಸಿಕ್ಕಿದೊಡನೆಯೇ ಬಾಕಿಖಾನನು ಸಿಟ್ಟಿನಿಂದಿ ಹುಚ್ಚನಂತಾದನು. ಚಿಕ್ಕ ಬಾಲಕರು ತನ್ನ ಸೈನಿಕರನ್ನು ಕೊಲ್ಲುವುದೆಂದರೇನು? ಈಗಲೇ ಇಷ್ಟೊಂದು ಶೌರ್ಯವಾದರೆ ಮುಂದೆ ದೊಡ್ಡವರಾದ ಮೇಲೆ ತಮ್ಮನ್ನು ಜೀವಂತ ಬಿಡುವರೇ? ಹೇಗಿದ್ದರೂ ಇವರನ್ನು ಕೊಂದೇ ತೀರಬೇಕು ಎನ್ನುತ್ತ ಇನ್ನೂ ದೊಡ್ಡ ಸೈನ್ಯವನ್ನು ಕಳುಹಿಸಿದನು.

ಒಂದು ಸಿಂಹದ ಮರಿಯನ್ನು ಕೊಲ್ಲಲು ನೂರಾರು ಬೇಟೆನಾಯಿಗಳು ಬಂದಂತಾಯಿತು. ಇಷ್ಟರಲ್ಲಿ ಚಂಪತರಾಯನ ಸೈನಿಕರೂ ಅಲ್ಲಿಗೆ ಬಂದು ತಲುಪಿದರು. ಎರಡೂ ಸೈನ್ಯಗಳೊಳಗೆ ಘೋರ ಯುದ್ಧ ನಡೆಯಿತು. ಬುಂದೇಲರನ್ನು ಎದುರಿಸಲಾಗದೇ ಶತ್ರುಗಳು ಕಾಲಿಗೆ ಬುದ್ಧಿ ಹೇಳಿದರು. ಆದರೆ ಬಾಲಕ ಸಾರವಾಹನನ ಮೈತುಂಬ ಗಾಯಗಳಾಗಿದ್ದವು. ಅವುಗಳಿಂದ ರಕ್ತ ಹರಿದು ಬಾಲಕನು ಮರಣವನ್ನಪ್ಪಿದನು. ಮಗನು ವೈರಿಗಳೊಡನೆ ಹೋರಾಡಿ ವೀರಸ್ವರ್ಗವನ್ನು ಪಡೆದನೆಂದು ತಂದೆಗೆ ಭಾರೀ ಹೆಮ್ಮೆ ಒಂದೆಡೆ; ಇಂತಹ ವೀರಪುತ್ರನು ಸದಾಕಾಲಕ್ಕೂ ಅಗಲಿ ಹೋದನೆಂಬ ದುಃಖ ಇನ್ನೊಂದೆಡೆ.

ಮುಂದಿನ ವರ್ಷ 1706ರಲ್ಲಿ ಅವನ ಹೆಂಡತಿ ಮಹೇವಾ ರಾಜ್ಯದಲ್ಲಿ ಚಂಪತರಾಯನ ಭವನದಲ್ಲಿ ಒಬ್ಬ ಮಗನಿಗೆ ಜನ್ಮವಿತ್ತಳು. ಅವನಿಗೆ ಛತ್ರಸಾಲನೆಂದು ನಾಮಕರಣ ಮಾಡಿದರು.

ಚಂಪತರಾಯನ ಜೀವನದ ಏರುಪೇರುಗಳು

ಇಲ್ಲಿಂದ ಮುಂದೆ ಮೊಗಲರಿಗೂ ಚಂಪತರಾಯನಿಗೂ ಯುದ್ಧ ನಡೆಯುತ್ತಲೇ ಹೋಯಿತು. ಚಂಪತರಾಯ ಎದುರಿಸಿದ ಅಪಾಯಗಳು ಒಂದೊಂದಲ್ಲ. ಅವನ ನೆಂಟ ಪಹಾಡಸಿಂಹನೇ ಅವನನ್ನು ಕೊಂದರೆ ಮೊಗಲ್‌ಚಕ್ರವರ್ತಿ ಷಹಜಹಾನನಿಗೆ ಸಂತೋಷವಾಗುತ್ತದೆಂದು, ಅವನಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ. ಚಂಪತರಾಯನ ಬಂಟ ಭೀಮಸಿಂಹನಿಗೆ ಅನುಮಾನ ಬಂದು ತನ್ನ ಯಜಮಾನನಿಗೆ ಕೊಟ್ಟ ಆಹಾರವನ್ನು ತಾನೇ ತಿಂದು ಪ್ರಾಣಬಿಟ್ಟ. ಚಂಪತರಾಯನನ್ನು ಉಳಿಸಿದ. ಪಹಾಡಸಿಂಹನು, ಚಂಪತರಾಯನು ರಾತ್ರಿ ಮಲಗಿದ್ದಾಗ ಅವನನ್ನು ಕೊಲ್ಲಲು ಒಬ್ಬ ಕಟುಕನನ್ನು ಕಳುಹಿಸಿದ. ಎಚ್ಚರವಾಗಿದ್ದ ಚಂಪತರಾಯ ಕೊಲೆಗಡುಕನನ್ನೆ ಕೊಂದ. ಷಹಜಹಾನ್‌ತನ್ನ ಮಗನನ್ನೆ ದಂಡನಾಯಕನನ್ನಾಗಿ ಮಾಡಿ ಭಾರಿ ಸೈನ್ಯವನ್ನು ಕಳುಹಿಸಿದ. ಆದರೆ ಚಂಪತರಾಯನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಮುಂದೆ ಮೊಗಲರ ಸಿಂಹಾಸನಕ್ಕೆ ಅಣ್ಣ ತಮ್ಮಂದಿರಲ್ಲಿ ಜಗಳವಾದಾಗ ರಾಜಕುಮಾರ ಔರಂಗಜೇಬ್‌ಚಂಪತರಾಯನ ಸಹಾಯನವನ್ನು ಬೇಡಿದ. ತಾನು ಔರಂಗಜೇಬನಿಗೆ ನೆರವಾಗಿ ಅವನು ಚಕ್ರವರ್ತಿಯಾದರೆ ಮೊಗಲರ ಜೊತೆಗೆ ತನ್ನ ಮನೆತನದ ಹೋರಾಟ ನಿಲ್ಲುತ್ತದೆ, ಅಲ್ಲದೆ ತನ್ನ ನೆರವನ್ನು ಪಡೆದ ಔರಂಗಜೇಬ ಹಿಂದೂಗಳಿಗೆ ಅನ್ಯಾಯ ಮಾಡಲಾರ ಎಂದು ಚಂಪತರಾಯ ಯೋಚಿಸಿದ; ಔರಂಜೇಬನಿಗೆ ಸಹಾಯ ಮಾಡಿದ. ಆದರೆ ಚಕ್ರವರ್ತಿಯಾದನಂತರ ಔರಂಗಜೇಬನು ಚಂಪತರಾಯನಿಗೆ ಅಪಮಾನ ಮಾಡಿದ. ಚಂಪತರಾಯ ಅವನಿಂದ ದೂರವಾದ.

ಚಂಪತರಾಯನ ಮರಣ

ಚಂಪತರಾಯನಿಗೆ ವಯಸ್ಸಾಗುತ್ತ ಬಂದಿತ್ತು. ದೇಹದ ಶಕ್ತಿ ಕುಂದುತ್ತಿತ್ತು. ಇದೇ ಹೊತ್ತಿಗೆ ಅನಾರೋಗ್ಯವೂ ಸೇರಿಕೊಂಡಿತು. ತಮ್ಮ ಸುಜಾನರಾಯನು ಎದುರಾಳಿ ಶುಭಕರಣನೊಡನೆ ಸಂಧಿಮಾಡಿಕೊಳ್ಳಲು ಸಿದ್ಧತೆ ನಡೆಸಿದರೂ ಚಂಪತರಾಯನು ಒಪ್ಪಲಿಲ್ಲ. ಪರಿಣಾಮವಾಗಿ ಊರಿಂದೂರು ಅಲೆಯಬೇಕಾಯಿತು. ಮೊಗಲರೂ, ಶುಭಕರಣನೂ ಬೆಂಬತ್ತಿದ್ದ ಭೂತವಾದರು. ಸಹರಾ ರಾಜ್ಯದಲ್ಲಿ ಆಶ್ರಯ ಪಡೆಯಲು ಹೊರಟಾಗ ದಾರಿಯಲ್ಲಿ ಸಹಾಯಕರೆಂದು ತಿಳಿದ ಭಟರು ಮೋಸಮಾಡಿದಾಗ ಚಂಪತರಾಯನೂ ಆತನ ಪತ್ನಿ ಲಾಲಕುವರಿಯೂ ಭರ್ಜಿಯಿಂದ ತಮ್ಮನ್ನೇ ತಾವು ತಿವಿದುಕೊಂಡು ಆತ್ಮ ಬಲಿದಾನಗೈದರು. ಈ ದುರ್ಘಟನೆಯ 1720ರಲ್ಲಿ ನಡೆಯಿತು.

ಅನಾಥವಾದ ಮರಿಸಿಂಹ

ಆಗ ಕಿರಿಯಮಗ ಛತ್ರಸಾಲನಿಗೆ ಹದಿನಾಲ್ಕು ವರ್ಷ ವಯಸ್ಸು. ಈ ಬಾಲಕನಿಗೆ ತಂದೆತಾಯಂದಿರ ಬಲಿದಾನದ ಸುದ್ದಿ ಸಿಡಿಲಿನಂತೆ ಬಂದೆರಗಿತ್ತು. ಆದರೆ ಇವನನ್ನು ಸಂತೈಸಿ ರಕ್ಷಣೆ ಕೊಡುವ ಬಂಧುಗಳ ಯಾರು? ಎಲ್ಲಿ ಔರಂಗಜೇಬನು ತಮ್ಮ ಮೇಲೂ ಆಕ್ರಮಣ ಮಾಡುವನೋ ಎಂದು ಎಲ್ಲರ ಎದೆಯಲ್ಲೂ ನಡುಕ. ಆದರೆ ಛತ್ರಸಾಲನ ಹೊಟ್ಟೆಯಲ್ಲಿ ಸೇಡಿನ ಬೆಂಕಿ ಧಗಧಗನೆ ಉರಿಯುತ್ತಿತ್ತು. ಅವನು ಆ ಚಿಕ್ಕವಯಸ್ಸಿಗೇ ಗರಡಿಯಲ್ಲಿ ಪಳಗಿದ್ದನು. ಮಲ್ಲಯುದ್ಧ, ಕತ್ತಿಕಾಳಗ, ಕುದುರೆ ಪಂದ್ಯಗಳಲ್ಲಿ ಮೊದಲಿನಾಗಿದ್ದನು. ಬಿಲ್ಲಿಗೆ ಬಾಣ ಹೂಡಿ ಗುರಿ ಮುಟ್ಟುವುದರಲ್ಲಿ ಅದ್ವಿತೀಯನಾಗಿದ್ದನು. ತಂದೆ ತಾಯಂದಿರಿಗೆ ಆಶ್ರಯವನ್ನು ದೊರಕಿಸಲು ಈತನು ಮುಂಚಿತವಾಗಿ ಸಹರಾ ರಾಜ್ಯಕ್ಕೆ ಹೋಗಿದ್ದನು. ಈಗ ಅಲ್ಲೇ ಉಳಕೊಳ್ಳುವುದರಿಂದ ಏನು ಲಾಭ? ಮೆಲ್ಲನೆ ಆ ರಾಜ್ಯವನ್ನು ಬಿಟ್ಟು ದೇವಗಢದಲ್ಲಿ ಅಣ್ಣ ಅಂಗದರಾಯನನ್ನು ಸೇರಿಕೊಂಡನು.

ಛತ್ರಸಾಲನು ಉಗ್ರವಾಗಿ ಹೋರಾಡಿದನು.

ಮೊಗಲರು ಹಿಂದೂ ರಾಜರನ್ನು ಹೇಗೆ ಆಟವಾಡಿಸುತ್ತಾರೆ ಎಂಬುದನ್ನು ಛತ್ರಸಾಲನು ಕಣ್ಣಾರೆ ಕಂಡಿದ್ದನು. ಇವರೊಡನೆ ಸ್ನೇಹವೂ, ವಿಷದ ಹಾವಿನೊಡನೆ ಸರಸವೂ ಒಂದೇ ಎಂದು ಈತನಿಗೆ ಖಾತ್ರಿಯಾಗಿತ್ತು. ಈಗಂತೂ ಇವರು ಬಹಳ ಪ್ರಬಲರಾಗಿದ್ದರು. ಇವರನ್ನು ಹೊಡೆದೋಡಿಸುವ ಅವಕಾಶವನ್ನು ಕಾಯುತ್ತಾ ಕೆಲವು ವರ್ಷಗಳನ್ನು ಕಳೆದನು. ಛತ್ರಸಾಲನು ವಿವಾಹವೂ ಆಯಿತು.

ವೀರಯೋಧ

ಹೀಗಿರಲು ಔರಂಗಜೇಬನು ಜಯಸಿಂಹನನ್ನು ದಕ್ಷಿಣದ ರಾಜ್ಯಗಳ ಸುಬೇದಾರನನ್ನಾಗಿ ಮಾಡಿ ಕಳುಹಿಸಿದನು. ಛತ್ರಸಾಲ ಜಯಸಿಂಹನ ಸೈನ್ಯದಲ್ಲಿ ಸೇರಿಕೊಂಡು, ಅಣ್ಣ ಅಂಗದರಾಯನನ್ನೂ ಸೇರಿಸಿಕೊಂಡನು. ಸ್ವಲ್ಪ ಸಮಯದಲ್ಲಿಯೇ ಔರಂಗಜೇಬನು ದೇವಗಢವನ್ನು ಜಯಿಸಲು ಜಯಸಿಂಹನಿಗೆ ಸಹಾಯಕನಾಗಿ ಬಹಾದುರ ಖಾನನನ್ನು ದೊಡ್ಡ ಸೈನ್ಯದೊಡನೆ ಕಳುಹಿಸಿದನು. ತನ್ನ ಶೌರ್ಯ, ಪ್ರತಾಪಗಳನ್ನು ಮರೆಸಲು ಇದೇ ತಕ್ಕ ಸಮಯವೆಂದು ಛತ್ರಸಾಲನು ಸೈನ್ಯದಲ್ಲಿ ಅಗ್ರಸ್ಥಾನವಹಿಸಿ ಉಗ್ರವಾಗಿ ಹೋರಾಡಿದನು. ಅಂಜದೇ, ಅಳುಕದೇ ಕತ್ತಿ ಝಳಪಿಸುತ್ತಾ ಶತ್ರು ಸೈನ್ಯವ್ಯೂಹವನ್ನು ಛೇದಿಸಿಕೊಂಡು ಬಹುದೂರ ಹೋಗಿಬಿಟ್ಟನು. ಸಂಗಡಿಗರೆಲ್ಲ ಹಿಂದೆ ಬಿದ್ದರು.

ದೇವಗಢ ವಶವಾಯಿತು. ಆದರೆ ಛತ್ರಸಾಲನು ಕಾಣಸಿಗಲಿಲ್ಲ. ರಾತ್ರಿಯೂ ಆಗಿತ್ತು. ಯಾವುದನ್ನೂ ಸರಿಯಾಗಿ ಪತ್ತೆ ಮಾಡುವುದಕ್ಕೂ ಆಗುತ್ತಿರಲಿಲ್ಲ. ಛತ್ರಸಾಲನ ಅನುಯಾಯಿಗಳು ಬೆಳಗಾಗುವುದನ್ನೇ ಕಾಯುತ್ತಿದ್ದು, ಸೂರ್ಯೋದಯವಾದೊಡನೆಯೇ ಮತ್ತೊಮ್ಮೆ ತಮ್ಮ ಸ್ವಾಮಿಯನ್ನು ಹುಡುಕಲಾರಂಭಿಸಿದರು. ಇಷ್ಟರಲ್ಲಿ ಕೆಲವು ಮೊಗಲ ಸೈನಿಕರು ಹೇಳಿದರು: “ನಿನ್ನೆ ನಾವು ಒಂದು ಸುಂದರವಾದ ಕುದುರೆ ರಣಭೂಮಿಯಲ್ಲಿ ನಿಂತಿರುವುದನ್ನು ಕಂಡು ಅದನ್ನು ಹಿಡಿಯಲು ಪ್ರಯತ್ನಿಸಿದೆವು. ಆದರೆ ಅದು ಯಾರನ್ನೂ ಬಳಿಬರಲು ಬಿಡುತ್ತಿರಲಿಲ್ಲ. ಭಯಂಕರವಾಗಿ ಹೇಷಾರವ ಮಾಡಿ ಕುಣಿದು ಹೆದರಿಸುತ್ತಿತ್ತು. ಅದರ ಬಳಿಯೇ ಒಬ್ಬ ಸೈನಿಕನು ಶವದಂತೆ ಬಿದ್ದುಕೊಂಡಿದ್ದನು. ಬಹುಶಃ ಆ ಕುದುರೆ ಸವಾರನೋ ಏನೋ! ಏಕೆಂದರೆ ಕುದುರೆ, ನರಿ, ಹದ್ದುಗಳನ್ನು ಓಡಿಸುತ್ತಾ ಅವನ ಸುತ್ತ ಕಾವಲು ಕಾಯುತ್ತಿತ್ತು.”

ಛತ್ರಸಾಲನ ಸೈನಿಕರು ಮೊಗಲರು ವರ್ಣಿಸಿದ ಸ್ಥಳಕ್ಕೆ ಓಡಿಹೋದರು. ಅಲ್ಲಿ ಬಿದ್ದಿದ್ದು ವೀರಯೋಧ ಛತ್ರಸಾಲನೇ. ಆತನನ್ನು ಕರೆತಂದು ಉಪಚರಿಸಿ ಬದುಕಿಸಿದರು. ಮೂಕಪ್ರಾಣಿ ಕುದುರೆ ತನಗೆ ಹುಲ್ಲು, ನೀರನ್ನು ಕೊಡುವ ಸ್ವಾಮಿಯ ಋಣವನ್ನು ಸಂದಾಯ ಮಾಡಿತ್ತು.

"ಒಗ್ಗಟ್ಟಿನಲ್ಲಿ ಬಲವಿದೆ"

ಛತ್ರಸಾಲನ ಉತ್ಸಾಹ ಅಡಗಿತು

ಆದರೆ ಬಹಾದುರಖಾನನಲ್ಲಿ ಈ ಪ್ರಾಣಿಯ ಕೃತಜ್ಞತೆಯ ನೂರರ ಒಂದು ಭಾಗವಾದರೂ ಇತ್ತೇ? ತಾನು ಗೆದ್ದೊಡನೆಯೇ ತನಗೆ ವಿಜಯವನ್ನು ದೊರಕಿಸಿಕೊಟ್ಟ ಛತ್ರಸಾಲನು ಬದುಕಿರುವನೇ ಎಂದು ಸಹ ವಿಚಾರಿಸಲಿಲ್ಲ. ದಿಲ್ಲಿಗೆ ಬಂದಮೇಲೂ ದೇವಗಢದ ವಿಜಯಕ್ಕೆ ತಾನೇ ಕಾರಣನೆಂದು ಬಹಳ ಹೆಮ್ಮೆಯಿಂದ ಹೇಳಿಕೊಂಡನು. ಈ ನೀಚತನ ಛತ್ರಸಾಲನ ಮನಸ್ಸಿಗೆ ಮುಳ್ಳಿನಂತೆ ನಾಟಿತು.

ಇನ್ನೊಮ್ಮೆ ಬಹಾದುರಖಾನನು ದಕ್ಷಿಣದ ಮೇಲೆ ದಂಡೆತ್ತಿ ಬಂದಾಗ ಛತ್ರಸಾಲನೇ ಸೇನಾಧಿಪತಿಯಾಗಿ ಜೊತೆಗಿದ್ದರೂ ಹಿಂದಿನಂತೆ ಹೋರಾಡಲಿಲ್ಲ. ಇದರಿಂದಾಗಿ ಬಹಾದುರಖಾನನು ಸೋತು ಹಿಂತಿರುಗಬೇಕಾಯಿತು.

ಶಿವಾಜಿಯ ಬಳಿಗೆ

ಛತ್ರಸಾಲನ ಮನಸ್ಸಿಗೆ ಶಾಂತಿಯಿರಲಿಲ್ಲ. ಯಾರು ತನ್ನದೇ ತೋಳುಗಳ ಬಲದಿಂದ ರಾಜ್ಯವನ್ನು ಸಂಪಾದಿಸಿ ಸಾಮ್ರಾಟನಂತೆ ಆಳಬಲ್ಲನೋ ಅವನು ಜಯಸಿಂಹನ ಬಳಿ ಮಾಸಿಕವೇತನ ಪಡೆದು ಆಳಿನಂತೆ ಮೊಗಲರ ಸೇವೆ ಮಾಡಿಕೊಂಡಿರುವುದು ಸಾಧ್ಯವೇ? ಮನಸ್ಸಿಗೆ ಬೇಗುದಿ ಹಚ್ಚಿದಾಗ ಒಂದು ದಿನ ಛತ್ರಸಾಲನು ಯಾರಿಗೂ ಹೇಳದೇ ಕೇಳದೇ ಛತ್ರಪತಿ ಶಿವಾಜಿಯನ್ನು ಕೂಡಿಕೊಳ್ಳುವುದಕ್ಕಾಗಿ ಹೊರಟುಹೋದನು.

ಛತ್ರಪತಿ ಶಿವಾಜಿಯು ಶತ್ರುಗಳ ಅತ್ಯಾಚಾರಗಳಿಂದ ಹಿಂದುಗಳನ್ನು ರಕ್ಷಿಸಲು ಹೋರಾಡುತ್ತಿದ್ದನು. ಅಲ್ಲಲ್ಲಿ ಶತ್ರುಗಳನ್ನು ಸೋಲಿಸಿ ಹಿಂದಕ್ಕೆ ಅಟ್ಟುತ್ತಾ ತನ್ನ ರಾಜ್ಯದ ಗಡಿಗಳನ್ನು ವಿಸ್ತಾರ ಮಾಡುತ್ತಿದ್ದನು. ಎರಡೂ ಕಡೆಯ ಗಡಿಗಳಲ್ಲೂ ಕಟ್ಟುನಿಟ್ಟಾದ ಪಹರೆ ಇರುತ್ತಿತ್ತು. ಒಬ್ಬರ ರಾಜ್ಯದಿಂದ ಇನ್ನೊಬ್ಬರ ರಾಜ್ಯಕ್ಕೆ ಹೋಗುವುದೆಂದರೆ ಪ್ರಾಣಕ್ಕೇ ಬರುತ್ತಿತ್ತು.

ಛತ್ರಸಾಲನು ತನ್ನ ಕೆಲವೇ ಸಂಗಡಿಗರೊಡನೆ ಬೇಟೆಗಾರರ ವೇಷದಲ್ಲಿ ಗುಡ್ಡಕಾಡುಗಳಿಂದಲೇ ಮುಂದುವರೆದನು. ಭಯಾನಕವಾದ ಅರಣ್ಯಗಳಲ್ಲಿ ರಾತ್ರಿಗಳನ್ನು ಕಳೆದು, ಭಯಂಕರವಾದ ಭೀಮಾ ನದಿಯನ್ನು ತೆಪ್ಪಗಳ ಸಹಾಯದಿಂದ ದಾಟಿ ಶಿವಾಜಿಯ ಆಸ್ಥಾನಕ್ಕೆ ಕಾಲಿಟ್ಟನು.

ಒಗ್ಗಟ್ಟಿನಲ್ಲಿ ಬಲವಿದೆ”

ಶಿವಾಜಿಯ ಸಂತೋಷಕ್ಕೂ, ಆಶ್ಚರ್ಯಕ್ಕೂ ಪಾರವಿರಲಿಲ್ಲ. ಛತ್ರಸಾಲನು ಸೈನ್ಯದಲ್ಲಿ ಸೇರಿ ಹೋರಾಡುವ ಆಸೆಯನ್ನು ಪ್ರಕಟಿಸಿದಾಗ ಶಿವಾಜಿಯು ಹೀಗೆಂದನು:

“ವೀರಾಗ್ರೇಸರನೇ, ನೀನು ಸ್ವತಂತ್ರನಾಗಿ ಹೋರಾಡಿದರೆ ನಿನ್ನ ಸಾಹಸಕ್ಕೂ, ಧೈರ್ಯಕ್ಕೂ ಹೆಚ್ಚಿನ ಅವಕಾಶಗಳು ಸಿಗುವವು. ಅಲ್ಲದೇ ನೀನು ನಿನ್ನ ರಾಜ್ಯದಿಂದ ಅವರನ್ನು ಅಟ್ಟು. ನಾಲ್ಕು ನಿಟ್ಟಿನಿಂದಲೂ ಪೆಟ್ಟು ಬಿದ್ದು ಅವರ ಹುಟ್ಟಡಗಿ ಹೋಗಲಿ. ನಿನ್ನ ಆಸುಪಾಸಿನ ರಾಜರನ್ನೆಲ್ಲ ಒಂದುಗೂಡಿಸು. ಒಗ್ಗಟ್ಟಿನಲ್ಲಿ ಬಲವಿದೆ; ಸಂಘಟನೆಯಲ್ಲಿ ಶಕ್ತಿಯಿದೆ”.

ಛತ್ರಸಾಲನು ಒಪ್ಪಿದನು. ಅವನನ್ನು ಬೀಳ್ಕೊಡುವಾಗ ಶಿವಾಜಿಯು ಎರಡೂ ಕಡೆ ಹರಿತವುಳ್ಳ ತಲವಾರವನ್ನು ಛತ್ರಸಾಲನ ಟೊಂಕಕ್ಕೆ ಕಟ್ಟಿದನು.

ಯುದ್ಧವೊಂದೇ ದಾರಿ”

ಛತ್ರಸಾಲನು ಬುಂದೇಲಖಂಡಕ್ಕೆ ಹಿಂದುರುಗಿದನು. ಆಗ ಅಲ್ಲಿ ಸೂಬಾ ಶುಭಕರಣನೆಂಬವನು ಔರಂಗಜೇಬನ ಸುಬೇದಾರನಾಗಿ ಆಳಿಕೊಂಡಿದ್ದನು. ಆತನು ಛತ್ರಸಾಲನನ್ನು ಪ್ರೀತಿಯಿಂದ ಬರಮಾಡಿಕೊಂಡರೂ, ಔರಂಗಜೇಬನಿಂದ ಮಾಸಿಕ ವೇತನ ಕೊಡಿಸುವುದಾಗಿ ಹೇಳಿದನು. ಆದರೆ ಛತ್ರಸಾಲನ ಉದ್ದೇಶ ಬೇರೆಯೇ ಆಗಿತ್ತಲ್ಲವೆ? ಆತನು ಶುಭಕರಣನಿಗೆ ತಿಳಿಹೇಳಿದನು:

“ಬಾದಶಹನ ಮಾಸಿಕ ಪಗಾರಕ್ಕೆ ಧಿಕ್ಕಾರವಿರಲಿ. ದುಷ್ಟರೊಡನೆ ಸ್ನೇಹದ ವ್ಯವಹಾರ ನಡೆಯುವುದಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಯುದ್ಧವೊಂದೇ ಅವರಿಗೆ ಬುದ್ಧಿ ಕಲಿಸಲು ಇರುವ ದಾರಿ.”

ಛತ್ರಸಾಲನು ಹೇಳಿದುದರಲ್ಲಿ ಸುಳ್ಳೇನೂ ಇರಲಿಲ್ಲ. ಅವನೇ ಮೊಗಲರಿಗೆ ನೆರವಾಗಿ ಅವರ ಔದಾಸೀನ್ಯವನ್ನು ಅನುಭವಿಸಿದ್ದನಲ್ಲವೆ?

ಹಿಂದೂಗಳ ಸಂಕಟ

ಮೊಗಲ್‌ಚಕ್ರವರ್ತಿಯಾಗಿದ್ದ ಔರಂಗಜೇಬನು ಇಸ್ಲಾಂ ಧರ್ಮದಲ್ಲಿ ವಿಶೇಷ ನಿಷ್ಠೆ ಇದ್ದವನು. ಇಷ್ಟೇ ಆಗಿದ್ದರೆ ತಪ್ಪಿರಲಿಲ್ಲ. ಆದರೆ ಇತರ ಧರ್ಮಗಳನ್ನು ಕಂಡರಾಗದು. ಘಂಟೆ, ಜಾಗಟೆ, ಶಂಖಧ್ವನಿಗಳು ಕೇಳಬಾರದೆಂದು ಅಪ್ಪಣೆ ಮಾಡುವಷ್ಟು ದೂರ ಹೋದ. ದೇವಾಲಯಗಳ ಮೇಲೆ ದೇವರ ಧ್ವಜ ಹಾರಕೂಡದೆಂದು ಅಪ್ಪಣೆ ಮಾಡಿದ. ಇದು ತನ್ನ ಸಿಂಹಾಸನಕ್ಕೇ ಮಾರಕ ಎಂಬುದು ಅವನಿಗೆ ಹೊಳೆಯಲಿಲ್ಲ. ಅವನನ್ನು ಸಂತೋಷಪಡಿಸಲು ಸಿದ್ಧರಾದ ಸೈನ್ಯಾಧಿಕಾರಿಗಳೂ ಇದ್ದರು. ಫಿದಾಯಿಖಾನ್ ಎಂಬುವನು ಚಕ್ರವರ್ತಿಯ ಅಪ್ಪಣೆಯನ್ನು ಶಿರಸಾವಹಿಸಿ ಹಿಂದೂಗಳಿಗೆ ಎಲ್ಲ ಬಗೆಗಳಲ್ಲಿ ತೊಂದರೆ ಕೊಡಲು ಸಿದ್ಧನಾದನು.

ಚಂದೇರಿಯ ರಾಜನಿಂದ ಇದನ್ನು ಸಹಿಸುವುದಾಗಲಿಲ್ಲ. ಆ ಧೀರನು ತನ್ನ ಕೆಲವೇ ಸಿಪಾಯಿಗಳೊಡನೆ ಒಮ್ಮೆಲೇ ಫಿದಾಯಿಖಾನನ ಸೈನ್ಯದ ಮೇಲೇರಿ ವೀರಾವೇಶದಿಂದ ಕಾದಾಡಿದನು. ಮೊಗಲ ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಸೇನಾಧಿಪತಿ, “ಬದುಕಿದರೆ ಬೇಡಿ ತಿಂದೇನು” ಎನ್ನುತ್ತಾ ತಲೆತಪ್ಪಿಸಿಕೊಂಡು ಓಡಿದನು.

ಸುಜಾನಸಿಂಹನ ಆತಂಕ

ಆಗ ಓರಛಾವನ್ನು ಪಹಾಡಸಿಂಹನ ಮಗ ಸುಜಾನಸಿಂಹನು ಆಳುತ್ತಿದ್ದನು. ಮೊಗಲರು ಸೋತು ಓಡಿದರೆಂದು ಸಂತೋಷಗೊಂಡರೂ, ಔರಂಗಜೇಬನು ದೊಡ್ಡ ಸೈನ್ಯವನ್ನು ಕಳುಹಿಸಿದರೇನು ಗತಿ ಎಂದು ಚಿಂತೆಯಾಗಿತ್ತು. ಅಲ್ಲದೇ ಮುತ್ತಾದ ಜಝಾರಸಿಂಹನ ಕುಟುಂಬದ ಸಾಮೂಹಿಕ ಹತ್ಯೆ, ಆ ಕುಟುಂಬದ ಹೆಂಗಸರು ಮಕ್ಕಳು ಪಟ್ಟ ಸಂಕಟ ಇವೆಲ್ಲವನ್ನು ನೆನೆದು ಅವನು ನಡುಗಿದ. ಇದೇ ಹೊತ್ತಿಗೆ ಛತ್ರಸಾಲನು ರಾಜ್ಯವನ್ನು ಪ್ರವೇಶಿಸಿದ ಸುದ್ದಿ ಬಂತು. ಚಂಪತರಾಯನ ಮಗನಾದ ಛತ್ರಸಾಲನಂತಹ ವೀರನಿದ್ದರೆ ಮೊಗಲರನ್ನು ಓಡಿಸುವುದು ಸುಲಭವೆನ್ನುವ ಸಂತೋಷದೊಂದಿಗೆ ಸ್ವಲ್ಪ ಭಯವೆನಿಸಿತು. ತನ್ನ ವಂಶದ ಶುಭಕರಣ ಹಿಂದೆ ಮೊಗಲರೊಡಗೂಡಿ ಚಂಪತರಾಯನ ಮೇಲೆ ಕತ್ತಿ ಮಸೆದಿರಲಿಲ್ಲವೇ? ತನ್ನ ತಂದೆಯು ಚಂಪತರಾಯನೊಡನೆ ಹಗೆಯನ್ನು ಸಾಧಿಸಲಿಲ್ಲವೇ? ಆ ಸೇಡಿನ ಕಿಡಿ ಮಗನಲ್ಲಿದ್ದರೆ?

ಆಸೆಗೆ ಬಲಿಯಾಗುತ್ತೀಯಾ?”

ಕೊನೆಗೆ ಆತ ಧೈರ್ಯಮಾಡಿ ಕಾಣಿಕೆಗಳನ್ನು ಕಳುಹಿಸಿ ಛತ್ರಸಾಲನನ್ನು ಆತ್ಮೀಯವಾಗಿ ಬರಮಾಡಿಕೊಂಡನು. ಮಹೇವಾ ವೀರರು ವಿಶೇಷವಾಗಿ ಚಂಪತರಾಯನು ಓರಛಾದ ಆಪದ್ಭಂದು ಎಂದು ಬಹಳ ಹೊಗಳಿದನು. ಛತ್ರಸಾಲನು ಹೊಗಳಿಕೆಯಿಂದ ತೃಪ್ತಿಪಟ್ಟುಕೊಳ್ಳುವ ಜಾತಿಯವನಾಗಿರಲಿಲ್ಲ. ಆತನು ನೇರವಾಗಿ ಕೇಳಿದನು? “ಹಿಂದು ಅನೇಕ ಅನಾಹುತಗಳು ಇಲ್ಲಿ ನಡೆದಿವೆ. ಈಗ ನೀನು ಬಾದಶಹನ ಪಗಾರ ಅಥವಾ ಜಾಗೀರನ ಆಸೆಗೆ ಬಲಿ ಬೀಳಲಿರುವಿಯೋ?”

ಸುಜಾನಸಿಂಹನು ಲಜ್ಜಿತನಾದರೂ, ದೃಢ ಕಂಠದಿಂದ ತಾನು ಕೊನೆಯವರೆವಿಗೂ ಛತ್ರಸಾಲನ ಪರವಾಗಿ ಹೋರಾಡುವೆನೆಂದು ಪ್ರತಿಜ್ಞೆ ಮಾಡಿದನು.

ಅಲ್ಲಿ ಒಂದೆರಡು ದಿನಗಳಿದ್ದು, ಛತ್ರಸಾಲನು ಸುತ್ತುಮುತ್ತಲಿನ ಅನೇಕ ಚಿಕ್ಕಪುಟ್ಟ ನಾಯಕರನ್ನು ಕಂಡು ಮೊಗಲರನ್ನು ಹೊಡೆದೋಡಿಸುವುದು ಎಷ್ಟು ಅನಿವಾರ್ಯ ಎಂಬುದನ್ನು ಮನಗಾಣಿಸಿದನು. ಹೀಗೆ ಅಲ್ಲಲ್ಲಿ ಸಂಘಟನೆ ಮಾಡುತ್ತಾ, ಯುದ್ಧ ತಯಾರಿಯ ಸೂಚನೆ ಕೊಟ್ಟು ಔರಂಗಾಬಾದಿಗೆ ಪ್ರಯಾಣ ಬೆಳೆಸಿದನು. ಅಲ್ಲಿ ವೀರ ಬಲದೇವನಿಂದ ಆದರದ ಸ್ವಾಗತ ಸಿಕ್ಕಿತು. ಯುದ್ಧ ವಿಚಾರವನ್ನು ಕೇಳಿ ಆತ ಅತ್ಯಂತ ಹರ್ಷಗೊಂಡನು. ಯುದ್ಧ ತಯಾರಿ ಭರದಿಂದ ಆರಂಭವಾಯಿತು. ಛತ್ರಸಾಲನ ಸೈನ್ಯಕ್ಕೆ ಕುದುರೆಗಳು ಬೇಕಾಗಿದ್ದವು. ಕೊಳ್ಳಲು ಹಣ ಇರಲಿಲ್ಲ. ತಾಯಿಯ ಒಡವೆಗಳನ್ನು ಮಾರಿ ಕುದುರೆಗಳನ್ನು ಕೊಂಡುಕೊಂಡ. ಕಷ್ಟಪಟ್ಟು ಹಣ ಕೂಡಿಸಿ ಸೈನಿಕರಿಗೆ ಸಂಬಳ ಕೊಟ್ಟು ಸೈನ್ಯ ಕಟ್ಟಿದ.

ಧೀರರಾಗಿ ಬದುಕಬೇಕು”

ವಿಜಾವರದ ಅರಸು ರತ್ನಷಾಹನು ಬಾದಶಹನಿಗೆ ಕಪ್ಪಕಾಣಿಕೆಗಳನ್ನು ಕೊಟ್ಟು ರಾಜಿ ಮಾಡಿಕೊಂಡಿದ್ದನು. ಛತ್ರಸಾಲನು ಅವನಿಗೆ ಯುದ್ಧಕ್ಕೆ ಪ್ರೇರಣೆ ಕೊಟ್ಟನು. 1728ರ ಸಂಗತಿಯಿದು. ಛತ್ರಸಾಲನಿಗಿನ್ನೂ ಇಪ್ಪತ್ತೆರಡು ವರ್ಷ ವಯಸ್ಸು. ರತ್ನಷಾಹನಿಗೆ ಹೇಗೆ ಧೈರ್ಯ ಬಂದೀತು? ಸೈನ್ಯ, ಅಧಿಕಾರ, ಹಣ ಎಲ್ಲವೂ ಇದ್ದ ಬಾದಶಹನಿಗೆ ಎದುರು ಬೀಳುವುದೆಂದರೇನು?

"ನ್ಯಾಯಕ್ಕಾಗಿ, ಧರ್ಮಕ್ಕಾಗಿ, ಸ್ವಾತಂತ್ರ‍್ಯಕ್ಕಾಗಿ ಹೋರಾಡೋಣ".

ರತ್ನಷಾಹ ಛತ್ರಸಾಲನಿಗೆ ಹೇಳಿದ: “ಮೊಗಲರದು ವಿಸ್ತಾರವಾದ ಸಾಮ್ರಾಜ್ಯ. ಅವರಿಗೆ ಬೇಕಾದಷ್ಟು ಹಣವಿದೆ. ಬಲವಾದ ಸೈನ್ಯವಿದೆ. ಅವರ ಮುಂದೆ ನಾವೆಷ್ಟರವರು? ಅವರ ಸಮುದ್ರದಂತಹ ಸೈನ್ಯ ಬಂದು ನಮ್ಮನ್ನು ಲೆಖ್ಖವೇ ಇಲ್ಲದೆ ನುಂಗಿಹಾಕಿಬಿಡುತ್ತದೆ. ಕಾಪಾಡುವವರು ಯಾರು?”

ಛತ್ರಸಾಲ ಹೇಳಿದ: “ಶತ್ರು ಶಕ್ತಿವಂತ ಎಂದು ಎಷ್ಟು ತುಳಿದರೂ ತುಳಿಸಿಕೊಳ್ಳುವುದಕ್ಕಾಗುತ್ತದೆಯೆ? ನೀವು ಕ್ಷತ್ರಿಯರು. ನ್ಯಾಯಕ್ಕಾಗಿ, ಧರ್ಮಕ್ಕಾಗಿ ಹೋರಾಡುವುದು ನಿಮ್ಮ ಧರ್ಮ. ಹಿಂದೂಗಳ ಸ್ಥಿತಿ ನೋಡಿ. ನಮ್ಮ ಪಾಡಿಗೆ ತಾವು ದೇವರ ಪೂಜೆ, ಪ್ರಾರ್ಥನೆ ಮಾಡಿಕೊಳ್ಳುವ ಹಾಗಿಲ್ಲ. ಅವರು ಹಿಂದೂಗಳೆಂದೇ ಔರಂಗಜೇಬ ಅವರ ಮೇಲೆ ಜೆಸಿಯಾ ಕಂದಾಯ ಹೊರಿಸಿದ್ದಾನೆ. ಇದಕ್ಕಿಂತ ಅನ್ಯಾಯ ಬೇಕೆ? ಎಲ್ಲ ಅಪಮಾನ, ಅನ್ಯಾಯಗಳನ್ನು ಸಹಿಸಿಕೊಂಡು ಬಾಳುವುದಕ್ಕಿಂತ ಸಾಯುವುದೇ ಉತ್ತಮ, ಅಲ್ಲವೆ? ನ್ಯಾಯಕ್ಕಾಗಿ, ಧರ್ಮಕ್ಕಾಗಿ, ಸ್ವಾತಂತ್ರ‍್ಯಕ್ಕಾಗಿ ಹೋರಾಡೋಣ. ದೇವರು ನಮಗೆ ಸಹಾಯ ಮಾಡುತ್ತಾನೆ. ಇಷ್ಟರ ಮೇಲೆ ಸೋತು ಸತ್ತರೂ ಧೀರರಾಗಿ ಬದುಕಿ ಧೀರರಾಗಿ ಸತ್ತಂತೆ, ಅಲ್ಲವೆ?”.

ಊಹುಂ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ. ಎಲ್ಲವೂ ವ್ಯರ್ಥ. ಛತ್ರಸಾಲನು ಬೇಸರಗೊಂಡರೂ ನಿರಾಶನಾಗದೇ ಅಲ್ಲಿಂದ ಹೊರಟ.

ಈ ಹೊತ್ತಿಗೆ ಸರಿಯಾಗಿ ಬಲದೇವನು ತನ್ನ ಸೈನಿಕರೊಡನೆ ಅವನನ್ನು ಕೂಡಿದನು. ಅನೇಕ ವೀರ ಬುಂದೇಲರು ತಾವಾಗಿಯೇ ಸೈನ್ಯ ಸೇರಿದರು. ಛತ್ರಸಾಲನಿಗೆ ಸ್ವಲ್ಪ ಉತ್ಸಾಹ ಬಂದಿತು.

ವಿಜಯ ಕೈಗೂಡಿತು

ಸೈನ್ಯದಲ್ಲಿ ಮುನ್ನೂರು ಸಿಪಾಯಿಗಳಿದ್ದರು. ಛತ್ರಸಾಲನು ದಂಧೇರಾ ನಗರವನ್ನು ಗೆದ್ದನು. ದಂಧೇರರು ರಾಜಕುವರಿಯನ್ನು ವಿವಾಹ ಮಾಡಿಕೊಟ್ಟು ಸಂಧಿ ಮಾಡಿಕೊಂಡರು. ಆಮೇಲೆ ಛತ್ರಸಾಲನು ಒಂದೊಂದಾಗಿ ರತ್ನಾಗರ, ಸಿರೌಂಜನಗರ, ಗೌನಾ, ಪಿಪರಾಹಟ್, ಘೋರಾಸಾಗರ, ಹನೂಟೂಕ್, ಲಖರೌನಿ, ಬಡಿಹಾರ, ಹೀಗೆ ಅನೇಕ ಚಿಕ್ಕಪುಟ್ಟ ನಗರಗಳನ್ನೆಲ್ಲ ಜಯಸಿದ, ತನ್ನ ಖಜಾನೆಯನ್ನು ತುಂಬಿಕೊಂಡನಲ್ಲದೇ ರಾಜ್ಯವನ್ನೂ ವಿಸ್ತರಿಸಿದನು.

ಛತ್ರಸಾಲನಿಂದ ಸೋಲು ತಿಂದವರಲ್ಲಿ ಮಹಮದ್‌, ಹಾಶಿಮ್, ಆನಂದರಾಯ, ಖಾಲಿಕ್‌, ಕೇಶೋರಾಯ ಮವಾಸಿ ಮೊದಲಾದವರು ಪ್ರಮುಖರು.

ವಿಜಯ ಪರಂಪರೆ

ಒಮ್ಮೆ ಛತ್ರಸಾಲನು ಐದಾರು ಜನ ಸಂಗಡಿಗರೊಂದಿಗೆ ಬೇಟೆಗಾಗಿ ಅರಣ್ಯಕ್ಕೆ ಹೋಗಿದ್ದನು. ಗುಪ್ತಚರರಿಂದ ಸುದ್ದಿ ಸಿಕ್ಕಿದೊಡನೆಯೇ ಸೇನಾಧಿಪತಿ ಸೈಯದ್‌ಬಹಾದೂರನು ಸೈನ್ಯದೊಂದಿಗೆ ಅರಣ್ಯದೊಳಗೇ ನುಗ್ಗಿದನು. ಛತ್ರಸಾಲನು ಕೆರಳಿದನು. ಹಿಂಡು ಜಿಂಕೆಗಳ ಮೇಲೆರಗಿದ ಗಾಯಗೊಂಡ ಹೆಬ್ಬುಲಿಯಂತೆ ಸಿಕ್ಕಸಿಕ್ಕ ಮೊಗಲರನ್ನು ಕತ್ತರಿಸಿ ಚೆಲ್ಲಿದನು. ಪರಾರಿಯಾಗುವ ಅವಕಾಶವನ್ನು ತಪ್ಪಿಸುತ್ತಾ ಬೆನ್ನಟ್ಟಿ ತುಂಡರಿಸಿದನು. ಅವನ ಅನುಯಾಯಿಗಳೂ ಶೌರ್ಯ, ಪರಾಕ್ರಮಗಳಲ್ಲಿ ಕಡಿಮೆಯಿರಲಿಲ್ಲ. ಬೆರಳೆಣಿಕೆಯಷ್ಟು ಮಂದಿ ನೂರಾರು ಸೈನಿಕರನ್ನು ಯಮಲೋಕಕ್ಕೆ ಅಟ್ಟಿದರು.

ಇದರ ನಂತರ ಛತ್ರಸಾಲನು ವರಾವಾ, ಘೂಮಘಾಟ್‌, ಗೋಪಾಚಲ, ಸೈದಮನೋವರ್ ಮೊದಲಾದವುಗಳನ್ನೆಲ್ಲ ಗೆದ್ದನು. ಗ್ವಾಲಿಯರನ್ನು ಲೂಟಿಮಾಡಿ ಬೊಕ್ಕಸವನ್ನು ತುಂಬಿದನು. ವಿಜಯಿಯಾದಲ್ಲೆಲ್ಲ ತೆರಿಗೆ, ಕಂದಾಯವನ್ನು ವಸೂಲು ಮಾಡಲಾರಂಭಿಸಿದನು.

ಈತನ ಕೀರ್ತಿ ದಶದಿಕ್ಕುಗಳಲ್ಲಿ ಹಬ್ಬಿತು. ಚಿಕ್ಕಪುಟ್ಟ ನಾಯಕರೆಲ್ಲ ಇವನನ್ನು ಕೂಡಿಕೊಂಡರು. ಇವರಲ್ಲಿ ಒಮ್ಮೆ ವಿರೋಧಿಸಿ ಮಾತನಾಡಿದ ರತ್ನಷಾಹ ಮತ್ತು ಇಂದ್ರಮಣಿ ಪ್ರಮುಖರು.

ಮಠಮಂದಿರಗಳಲ್ಲಿ ಘಂಟೆ, ಜಾಗಟೆ, ಶಂಖಗಳು ಧ್ವನಿಸಿದವು. ಭಗವಾಧ್ವಜ ಏರಿತು. ಪೂಜೆ, ಪ್ರಾರ್ಥನೆಗಳು ನಡೆದವು. ಹಿಂದೂಗಳು ನಿರ್ಭಯವಾಗಿ ನಡೆದರು.

ಮೊಗಲರ ದಾಳಿ

ಈ ವಿಷಯಗಳೆಲ್ಲ ಔರಂಗಜೇಬನಿಗೆ ವರದಿಯಾದವು. ಅವನು ಕೋಪದಿಂದ ಕಿಡಿಕಿಡಿಯಾದ. ವಿಸ್ತಾರವಾದ, ಶ್ರೀಮಂತವಾದ, ಶಕ್ತಿಶಾಲಿಯಾದ ಮೊಗಲ್‌ಸಾಮ್ರಾಜ್ಯದ ವಿರುದ್ಧ ಈ ಛತ್ರಸಾಲನ ಹೋರಾಟವೆ? ಕೆರಳಿದ ಚಕ್ರವರ್ತಿ ರಣದುಲಹ ಎಂಬ ಹಿಂದೂ ಸೈನ್ಯಾಧಿಕಾರಿಗೆ ಮೂವತ್ತು ಸಾವಿರ ಕುದುರೆ ಸವಾರರ ಸೈನ್ಯವನ್ನು ಕೊಟ್ಟು ಛತ್ರಸಾಲನನ್ನು ಸದೆಬಡಿಯುವಂತೆ ಅಪ್ಪಣೆ ಮಾಡಿ ಕಳುಹಿಸಿದ.

ರಣಭಯಂಕರ ಛತ್ರಸಾಲನೊಡನೆ ರಣದುಲಹನದೇನು ನಡೆದೀತು? ಘನಘೋರ ಕಾಳಗದಲ್ಲಿ ಸೋತು ಸುಣ್ಣವಾದ ರಣದುಲಹನು ಕಾಲುಕಿತ್ತನು. ನೂರು ಗಾಡಿಗಳಲ್ಲಿ ದಿಲ್ಲಿಗೆ ಸಾಗುತ್ತಿದ್ದ ಹೇಳರ ದ್ರವ್ಯವನ್ನು ಲೂಟಿಮಾಡಿ ಛತ್ರಸಾಲನು ಖಜಾನೆ ತುಂಬಿದನು. ರೊಚ್ಚಿಗೆದ್ದ ಔರಂಗಜೇಬ ರೂಮಿ ಎಂಬ ಸೇನಾಧಿಪತಿಯನ್ನು ಭಾರೀ ಸೈನ್ಯದೊಂದಿಗೆ ಕಳುಹಿಸಿದನು. ಅವನಿಗೂ ಸೋಲೇ ಕಟ್ಟಿಟ್ಟು ಬುತ್ತಿಯಾಯಿತು. ಆಮೇಲೆ ತಹವರ ಖಾನ್, ಸೈಯದ್ ಲತೀಫ್‌ಎಂಬ ಸೈನ್ಯಾಧಿಕಾರಿಗಳು ದಂಡೆತ್ತಿ ಬಂದು ಸೋತು ಹಿಂದುರುಗಿದರು.

ಮತ್ತೆ ಕಾಳಗ

ಔರಂಗಜೇಬನಿಗೆ ವಿಪತ್ತಿನ ಕಾರ್ಮೋಡಗಳು ಕವಿದಿದ್ದವು. ಒಂದೆಡೆ ಶಿವಾಜಿ, ಇನ್ನೊಂಡೆದೆ ಬುಂದೇಲರು, ಮತ್ತೊಂದೆಡೆ ರಜಪೂತರು ಹೀಗೆ ಎಲ್ಲೆಡೆಗಳಿಂದಲೂ ಆಕ್ರಮಣ ಮತ್ತುಸೋಲಿನ ಸುದ್ದಿಗಳೇ ಬಂದು ಆತ ಕಂಗೆಟ್ಟನು. ಖಜಾನೆಯೂ ಬರಿದಾಗತೊಡಗಿತ್ತು. ಕೊನೆಗೆ ಸುತರದೀನ ಈರಾನಿ ಎಂಬ ಮಹಾದುಷ್ಟನೂ, ಕ್ರೂರಿಯೂ ಆದ ಸೈನ್ಯಾಧಿಪತಿಗೆ ಛತ್ರಸಾಲನನ್ನು ಕೊಲ್ಲಲು ರಣವೀಳ್ಯ ಸಿಕ್ಕಿತು. ಸುತರದೀನನು ಧಾಮೌನಿ ರಾಜ್ಯದ ಶಾಸಕನಾಗಿ ಒಂದು ಸೈನಿಕರನ್ನು ಕಲೆ ಹಾಕಿದನು. ತನ್ನ ನೆಲೆಯನ್ನು ಭದ್ರಗೊಳಿಸಿ ಛತ್ರಸಾಲನಿಗೆ ವೃಥಾ ಪ್ರಾಣಕ್ಕೆ ಎರವಾಗದೇ ಸಂಧಿಮಾಡಿಕೊಳ್ಳಲು ಹೇಳಿ ಕಳುಹಿಸಿದನು.

ಛತ್ರಸಾಲನಿಗೆ ಯುದ್ಧವೆನ್ನುವುದು ಬೇಟೆಯಾಟದಂತೆ. ಆತನು ಉತ್ತರ ಕೊಟ್ಟನು? “ನಾವು ಕ್ಷತ್ರಿಯರು; ಯುದ್ಧಕ್ಕೆ ಹೆದರುವವರಲ್ಲ. ಸುತರದೀನನಿಗೆ ನಿಜವಾಗಿಯೂ ಸಂಧಿ ಮಾಡಿಕೊಳ್ಳಬೇಕೆಂದಿದ್ದರೆ ನಮಗೆ ತೆರಿಗೆ, ಕಂದಾಯವನ್ನು ಒಪ್ಪಿಸಲಿ”.

ಸರಿ. ಎರಡೂ ಬಣಗಳೊಳಗೆ ಯುದ್ಧಾರಂಭವಾಯಿತು. ಬುಂದೇಲರ ಮಿಂಚಿನ ದಾಳಿ, ಗುರಿ ಮುಟ್ಟುವ ಬಾಣಗಳು, ಒಬ್ಬೊಬ್ಬನಿಗೂ ನೂರಾರು ಶತ್ರುಗಳನ್ನು ತುಂಡರಿಸಿ ಚೆಲ್ಲುವ ಧೈರ್ಯ, ಪರಾಕ್ರಮಗಳನ್ನು ಕಣ್ಣಾರೆ ಕಂಡ ಸುತರದೀನನು ತತ್ತರಿಸಿ ಹೋದನು. ವಿಜಯಲಕ್ಷ್ಮಿ ಬುಂದೇಲರಿಗೇ ಒಲಿದಳು. ಅಬ್ದುಲ್ ಸಮದ್, ದಲೇಲ ಖಾನ್, ಬಹಲೋಲಖಾನ್‌…… ಹೀಗೆ ಲೆಕ್ಕವಿಲ್ಲದಷ್ಟು ಸೇನಾಧಿಪತಿಗಳನ್ನೂ, ಸೈನ್ಯವನ್ನೂ ನುಚ್ಚುನೂರು ಮಾಡಿದ ಕೀರ್ತಿ ಛತ್ರಸಾಲನಿಗೇ ಸಲ್ಲುತ್ತದೆ.

ಛತ್ರಸಾಲನ ರೀತಿ ನೀತಿ

ಛತ್ರಸಾಲನ ವಿಜಯಕ್ಕೆ ಕೆಲವು ಮುಖ್ಯ ಕಾರಣಗಳಿವೆ. ಧೈರ್ಯ, ಪರಾಕ್ರಮಗಳಲ್ಲಿ ಯಾವ ಹಿಂದೂರಾಜರೂ ಕಡಿಮೆಯಿರಲಿಲ್ಲ. ಎಲ್ಲರಿಗೂ ಯುದ್ಧರಂಗದಲ್ಲಿ ಹೋರಾಡಿ ಮಡಿಯುವುದೇ ಗೌರವವಾಗಿತ್ತು. ಆದರೆ ಛತ್ರಸಾಲನಲ್ಲಿ ಶಕ್ತಿಯೊಡನೆ ಯುಕ್ತಿ ಇತ್ತು. ತನ್ನ ಕಡೆಯವರು ಬೆರಳೆಣಿಕೆಯಷ್ಟೇ ಮಂದಿ ಇದ್ದು, ಶತ್ರುಗಳು ಸಾವಿರಾರು ಸಂಖ್ಯೆಯಲ್ಲಿದ್ದರೆ ಆತನು ಒಮ್ಮಲೇ ಮಾಯವಾಗುತ್ತಿದ್ದನು. ವ್ಯರ್ಥವಾಗಿ ಯಾರನ್ನೂ ಬಲಿಗೊಡುತ್ತಿರಲಿಲ್ಲ. ಸೈನ್ಯ ಮೈಮರೆತಿದ್ದಾಗ ಹಠಾತ್ತನೇ ಮಿಂಚಿನ ದಾಳಿ ನಡೆಸುತ್ತಿದ್ದನು. ಸೈನ್ಯದಲ್ಲಿ ಹಾಹಾಕಾರ ಏಳುತ್ತಿತ್ತು. ಅರ್ಧಕ್ಕರ್ಧ ಸೈನಿಕರು ಉರುಳುತ್ತಿದ್ದರು. ವಿಜಯಿಯಾದ ಮೇಲೆ ಆತನೆಂದೂ ಮೈಮರೆಯುತ್ತಿರಲಿಲ್ಲ. ತಹವರಖಾನನು ದಂಡೆತ್ತಿ ಬಂದಾಗ ಛತ್ರಸಾಲನು ಸಾಬರ ರಾಜ್ಯದ ರಾಜಕುವರಿಯೊಡನೆ ವಿವಾಹ ವೇದಿಕೆಯಲ್ಲಿ ಇದ್ದನು. ಅಲ್ಲಿಂದಲೇ ನೇರವಾಗಿ ಯುದ್ಧಭೂಮಿಗೆ ಬಂದು ತಹವರಖಾನನ ಸೊಲ್ಲಡಗಿಸಿದನು. ಭೋಗದಲ್ಲಿ ಎಂದೂ ಮೈಮರೆಯಲಿಲ್ಲ. ಚಿಕ್ಕಪುಟ್ಟ ಹಿಂದೂ ರಾಜರಿಗೆ ತಾವೇ ಪರಸ್ಪರ ಕಾದಾಡುವುದರಲ್ಲಿ ಅರ್ಥವಿಲ್ಲೆಂದು ತಿಳಿಸಿ ಹೇಳಿ ಅವರನ್ನೆಲ್ಲ ಸಂಘಟಿಸಿದನು. ಆದರೆ, ಯಾರು ಒಳ್ಳೇ ಮಾತಿಗೆ ಕಿವಿಗೊಡುತ್ತಿರಲಿಲ್ಲವೋ ಅವರಿಗೆ ಕತ್ತಿಯ ರುಚಿ ತೋರಿಸುವುದಕ್ಕೂ ಹಿಂಜರಿಯುತ್ತಿರಲಿಲ್ಲ. ತಾನು ವಿಜಯಿಯಾದಲ್ಲೆಲ್ಲ ತೆರಿಗೆ, ಕಂದಾಯಗಳನ್ನು ವಸೂಲು ಮಾಡುವ ವಿಧಾನದಿಂದ ರಾಜ್ಯದ ಬೊಕ್ಕಸ ತುಂಬಿರುತ್ತಿತ್ತು. ಹೀಗೆ ರಾಜ್ಯದಲ್ಲಿ ಶಾಂತಿನ್ನೂ, ಸಮೃದ್ಧಿಯನ್ನೂ ನೆಲೆಗೊಳಿಸಿ ಸಮಸ್ತ ಬುಂದೇಲಖಂಡದಲ್ಲಿ ಏಕಾಧಿಪತ್ಯವನ್ನು ಸ್ಥಾಪಿಸಿದನು.

ಛತ್ರಸಾಲನು ದೈವಭಕ್ತನಾಗಿದ್ದನು. ಶ್ರೀ ಪ್ರಾಣನಾಥರು ಇವರ ಗುರುಗಳಾಗಿದ್ದರು. ಇವರೇ ಛತ್ರಸಾಲನಿಗೆ ತಿಲಕವಿಟ್ಟು, ಸೊಂಟಕ್ಕೆ ಖಡ್ಗವನ್ನು ಕಟ್ಟಿ “ನೀನು ಸದಾ ವಿಜಯಿಯಾಗು” ಎಂದು ಹರಸಿದ್ದರು.

ಮತ್ತೆ ಮೊಗಲರ ಆಹ್ವಾನ

1764ರಲ್ಲಿ ಔರಂಗಜೇಬನು ಅಹಮದ್‌ನಗರದಲ್ಲಿ ಕೊನೆಯುಸಿರು ಎಳೆದ ಮೇಲೆ ಬುಂದಲೇಖಂಡದಲ್ಲಿ ಕೆಲವು ವರ್ಷಗಳವರೆಗೂ ಶಾಂತಿ ನೆಲೆಸಿತ್ತು. ಅನಂತರ ದಿಲ್ಲಿ ಸಿಂಹಾಸನವನ್ನೇರಿದ್ದ ಬಹಾದುರಶಾಹನು ಹೆಚ್ಚಿನ ರಾಜ್ಯ ವಿಸ್ತಾರಕ್ಕೆ ಅಥವಾ ಯುದ್ಧಕ್ಕೆ ಇಳಿಯುವುದು ಸಾಧ್ಯವಾಗಲಿಲ್ಲ. ಬೊಕ್ಕಸ ಬರಿದಾಗಿತ್ತು. ಸೈನ್ಯದಲ್ಲಿ ಯಾವುದೇ ಉತ್ಸಾಹ, ಶಿಸ್ತು ಇರಲಿಲ್ಲ. ಆದರೂ ಆತನಿಗೆ ಛತ್ರಸಾಲನಂತಹ ವೀರನು ತನ್ನ ರಾಜ್ಯದಲ್ಲಿ ಮಾಸಿಕ ವೇತನವನ್ನು ಪಡೆದುಕೊಂಡು ಇರಬೇಕೆಂಬ ಮನಸ್ಸಿತ್ತು. ಆತನು ಛತ್ರಸಾಲನನ್ನು ಬರಹೇಳಿದನು. ಮಿತೃತ್ವದ ಆಹ್ವಾನವೆಂದು ತಿಳಿದು ಛತ್ರಸಾಲನು ದಿಲ್ಲಿಗೆ ಬಂದನು. ಅಲ್ಲಿ ಸರಿಸಮಾನತೆಯ ಗೌರವದ ಬದಲು ಮಾಸಿಕ ವೇತನದ ಮಾತು ಕೇಳಿ, ಅದನ್ನು ತಿರಸ್ಕರಿಸಿ ತನ್ನ ರಾಜ್ಯಕ್ಕೆ ಹಿಂತಿರುಗಿದನು.

ಮತ್ತೆ ಛತ್ರಸಾನಿಗೆ ವಿಜಯ

ಬಹಾದುರಶಾಹನು ಸಿಟ್ಟುಗೊಂಡನು. ಮಹಮದ್ ಖಾನ್ ಬಂಗಶ ಎಂಬ ಸೇನಾಧಿಪತಿಯನ್ನು ದೊಡ್ಡ ಸೈನ್ಯದೊಂದಿಗೆ ಕಳುಹಿಸಿದನು. ಎಂಬತ್ತು ಸಾವಿರ ಯೋಧರ ಸೇನಾದಳವನ್ನು ಕಂಡು, ಛತ್ರಸಾಲನು ಬಾಜಿರಾವ್ ಪೇಶ್ವೆಯ ಸಹಾಯ ಕೇಳಿದನು. ಪೇಶ್ವೆಯೂ ಕೂಡಲೇ ಸಹಾಯಕ್ಕೆ ಬರಲು ಇಬ್ಬರೂ ಕೂಡಿ ಮೊಗಲರನ್ನು ಮಣ್ಣುಮುಕ್ಕಿಸಿದರು. ಬಂಗಶನು ಓಡಿಹೋಗಿ ಜೈತಪುರ ಕೋಟೆಯಲ್ಲಿ ಆಶ್ರಯ ಪಡೆದನು. ಕೂಡಲೇ ಅಲ್ಲಿಗೂ ಮುತ್ತಿಗೆ ಬಿತ್ತು. ಆರು ತಿಂಗಳ ಕಾಲವೂ ಕೋಟೆಯನ್ನು ಸೈನ್ಯವು ಮುತ್ತಿಕೊಂಡೇ ಇತ್ತು. ಬಂಗಶನ ಪುತ್ರನು ಶರಣಾದುದರಿಂದ ತಂದೆಗೆ ಜೀವದಾನ ಸಿಕ್ಕಿತು.

ಛತ್ರಸಾಲ ಮಹಾರಾಜನು ಎಂಬತ್ತನಾಲ್ಕು ವರ್ಷಗಳ ತುಂಬುಜೀವನವನ್ನು ಬಾಳಿದನು. ತನ್ನ ರಾಜ್ಯವನ್ನು ಇಬ್ಬರು ಮಕ್ಕಳಿಗೂ, ಪೇಶ್ವೆಗೂ ಹಂಚಿಕೊಟ್ಟನು. 1790ರಲ್ಲಿ ಈ ಮಹಾಚೇತನವು ದೈವಾಧೀನವಾಯಿತು.

ಆತ್ಮಗೌರವಕ್ಕಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ

ಛತ್ರಸಾಲನ ಎಂಬತ್ತನಾಲ್ಕು ವರ್ಷಗಳ ಬದುಕಿನಲ್ಲಿ ಎಪ್ಪತ್ತು ವರ್ಷಗಳು ಹೋರಾಟದಲ್ಲಿಯೇ ಕಳೆದವು. ಅವನ ತಂದೆ ತೀರಿಕೊಂಡಾಗ ಅವನಿಗೆ ಹದಿನಾಲ್ಕು ವರ್ಷ. ಆ ಹದಿನಾಲ್ಕು ವರ್ಷಗಳಲ್ಲೂ ತಂದೆ ಯುದ್ಧ ಮಾಡುತ್ತಿದ್ದುದನ್ನು ಕಾಣುತ್ತಿದ್ದ. ತಂದೆ ಹೋದಾಗ ಹುಡುಗ ತೀರ ತಬ್ಬಲಿಯಾದ. ಪ್ರಬಲ ಶತ್ರುವಾದ ಮೊಗಲ ಚಕ್ರವರ್ತಿಗೆ ಹೆದರಿ ಯಾರಾದರೂ ಛತ್ರಸಾಲನಿಗೆ ಸಹಾಯ ಮಾಡಲು ಹಿಂಜರಿಯುತ್ತಿದ್ದರು. ಪ್ರಚಂಡ ಸೈನ್ಯಬಲವಿದ್ದ ಮೊಗಲ್ ಚಕ್ರವರ್ತಿಯನ್ನು ಸಣ್ಣ ರಾಜ್ಯದ ಅಧಿಪತಿ ಛತ್ರಸಾಲ ಯಶಸ್ವಿಯಾಗಿ ಎದುರಿಸಿದನು. ಅವನು ಹೋರಾಡಿದ್ದು ಮೊಗಲರ ವಿರುದ್ಧ ಮಾತ್ರವಲ್ಲ. ಹಿಂದುಗಳ ಪರವಾಗಿ ಮಾತ್ರವಲ್ಲ. ಅವನು ಹೋರಾಡಿದ್ದು ಸ್ವಾತಂತ್ರ್ಯಕ್ಕಾಗಿ, ಆತ್ಮ ಗೌರವಕ್ಕಾಗಿ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಮನಸ್ಸಿನಂತೆ ಬದುಕುವ ಹಕ್ಕಿಗಾಗಿ. ಯಾವ ಧರ್ಮದವರಾಗಲಿ ತಮ್ಮ ಪವಿತ್ರ ಸ್ಥಳಗಳಲ್ಲಿ ತಮಗೆ ಒಪ್ಪಿಗೆಯಾದಂತೆ ಪೂಜಿಸುವ ಹಕ್ಕಿಗಾಗಿ, ಆತ್ಮಗೌರವಕ್ಕಾಗಿ ಹೋರಾಡಿದ.

ದ್ವೇಷಕ್ಕಾಗಿ ದ್ವೇಷವಲ್ಲ

ಛತ್ರಸಾಲ ಮೊಗಲ ಬಾದಷಹನ ಅಥವಾ ಇತರ ರಾಜರ ಕೈಕೆಳಗಿದ್ದು ತಿಂಗಳಿಗೆ ಇಷ್ಟು ಹಣ ಎಂದು ತೆಗೆದುಕೊಂಡು ನೆಮ್ಮದಿಯಿಂದ ಇರಬಹುದಾಗಿತ್ತು. ಆದರೆ ಈ ಗುಲಾಮಗಿರಿಯ ನೆಮ್ಮದಿಗಿಂತ ಕಷ್ಟದ ಸ್ವಾತಂತ್ರ್ಯವೇ ಇರಲಿ ಎಂದು ಆರಿಸಿಕೊಂಡ ವೀರ ಅವನು. ದ್ವೇಷಕ್ಕಾಗಿ ದ್ವೇಷವಲ್ಲ ಅವನದು. ಅವನ ತಂದೆ ಚಂಪತರಾಯನೂ ಛತ್ರಸಾಲನೂ ಮೊಗಲರೊಡನೆ ಸ್ನೇಹದಿಂದ ಬಾಳಲು ಪ್ರಯತ್ನಿಸಿದರು. ಅವರು ಕರೆದಾಗ ದೆಹಲಿಗೆ ಹೋದರು. ಅವರಿಗೆ ನೆರವಾದರು. ಚಂಪತರಾಯ ಔರಂಗಜೇಬನು ಸಿಂಹಾಸನವನ್ನು ಪಡೆಯಲು ಸಹಾಯ ಮಾಡಿದ. ಛತ್ರಸಾಲ ಔರಂಗಜೇಬನ ಸೈನ್ಯದಲ್ಲೇ ಸೇರಿ ಹೋರಾಡಿದ. ಆದರೆ ಇಷ್ಟಕ್ಕೂ ಪ್ರತಿಫಲವಾಗಿ ಅಪಮಾನವೇ ದೊರೆಯಿತು.

ಹಿಂದೂಗಳು ಗೌರವದಿಂದ ಬಾಳುವುದು ಸಾಧ್ಯವಿಲ್ಲದೆ ಹೋಯಿತು. ಇಂತಹ ಸನ್ನಿವೇಶದಲ್ಲಿ ಚಂಪತರಾಯನೂ ಛತ್ರಸಾಲನೂ ಹೋರಾಟದ ಮಾರ್ಗವನ್ನೇ ಆರಿಸಿಕೊಂಡರು.

ಛತ್ರಸಾಲ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಸಿಂಹ. ಐಕಮತ್ಯದ ಅಗತ್ಯವನ್ನು ತೋರಿಸಿದ ವಿವೇಕಿ ನಾಯಕ. ಶತ್ರುವಿನ ಬಲಕ್ಕೆ ಹೆದರದೆ ಕಲಿಯಾಗಿ ಹೋರಾಡಿ ಆತ್ಮ ಗೌರವವನ್ನು ಉಳಿಸಿಕೊಂಡ ಮಹಾಪುರುಷ.