ತಮ್ಮ ೧೦ನೇ ವಯಸ್ಸಿನಲ್ಲಿಯೇ ಸಂಗೀತಕ್ಕೆ ಮನ ಸೋತು, ಹಾರ್ಮೋನಿಯಂ ವಾದ್ಯದಲ್ಲಿ ಅದ್ಭುತ ಪ್ರತಿಭೆ ಮೆರೆದು, ನಾಲ್ಕು ದಶಕಗಳ ಕಾಲ ರಂಗಭೂಮಿಯಲ್ಲಿ ಹಾರ್ಮೋನಿಯಂ ವಾದಕರಾಗಿ, ರಂಗಗೀತೆಗಳ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಕಲಾ ಸೇವೆ ಮಾಡಿ ೮೦ ವರ್ಷ ತುಂಬು ಬಾಳ್ವೆ ನಡೆಸಿ ಬದುಕಿನ ಕಷ್ಟ-ನೋವುಗಳೆಲ್ಲ ತಾನುಂಡು, ಇತರರಿಗೆ ನಲಿವು-ಸಂತೋಷವನ್ನು ಹಂಚಿ ಕಲಾ ಲೋಕದಿಂದ ಕಣ್ಮರೆಯಾಗಿರುವ ಅಂಧ ಸಂಗೀತ ವಿದ್ವಾಂಸ ಪಂ. ಜಂಪಣ್ಣ ವಂದಗನೂರ ಅವರು ನಾಡಿನ ಹೆಸರಾಂತ ಹಾರ್ಮೋನಿಯಂ ವಾದಕರಲ್ಲೊಬ್ಬರು.

ಜಂಪಣ್ಣನವರು ಜನಿಸಿದ್ದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ. ೧೯೨೦ರ ಜೂನ್‌ ೧ ರಂದು. ತಂದೆ ಸಂಗಪ್ಪ ತಾಯಿ ನಿಂಗಪ್ಪ. ಈ ದಂಪತಿಗಳ ಎರಡನೆ ಮಗನೆ ಜಂಪಣ್ಣ. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡ ಬಾಲಕನಿಗೆ ಸಂಗೀತದತ್ತ ಒಲವು ಬೆಳೆಯಿತು. ತನ್ನ ೧೦ ವಯಸ್ಸಿನಲ್ಲಿಯೇ ಅವರು ಸಮೀಪದ ಕೋಟೆಕಲ್ಲಿನ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಸಂಗೀತ ಪಾಠಶಾಲೆಯಲ್ಲಿ ಸಂಗೀತ ಶಿಕ್ಷಣ ಕಲಿತರು. ಮುಂದೆ ಗದುಗಿನ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಯಗಳ ಶಿಷ್ಯತ್ವ ವಹಿಸಿ ಹತ್ತಾರು ವರ್ಷ ಹಾರ್ಮೋನಿಯಂ ಸಾಧನೆ ಮಾಡಿ ಪ್ರಬುದ್ಧ ಸಂಗೀತಗಾರನಿಸಿದರು.

ಆಗಿನದು ವೃತ್ತಿ ನಾಟಕ ಕಂಪನಿಗಳ ಕಾಲ. ಆ ನಾಟಕಗಳಲ್ಲಿ ಸಂಗೀತಕ್ಕೆ ಎಲ್ಲಿಲ್ಲದ ಸ್ಥಾನ. ಹೆಸರಾಂತ ಸಂಗೀತಗಾರರು, ನಟರು ಪಾತ್ರ ಮಾಡುತ್ತ ಹಾಡುತ್ತಿದ್ದರು. ಹೀಗೆ ಜಂಬಣ್ಣನವರು ಏಣಗಿ ಬಾಳಪ್ಪನವರ ನಾಟಕ ಕಂಪನಿಗಳಲ್ಲಿ ೪೦ ವರ್ಷಗಳ ಕಾಲ ಹಾರ್ಮೋನಿಯಂ ನುಡಿಸಿ, ಸಂಗೀತ ನಿರ್ದೇಶನ ನೀಡಿ, ರಂಗ ಗಾಯನ ಮಾಡಿ ಕಲಾ ಸೇವೆ ಮಾಡಿದರು. ರಂಗ ಗೀತೆಗಳನ್ನು ಅವರು ಅಪಾರ ಸಂಖ್ಯೆಯಲ್ಲಿ ಹಾಡುತ್ತಿದ್ದರು. ಅವುಗಳಲ್ಲಿ ಕೆಲವು ರಂಗಗೀತೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧ್ವನಿ ಮುದ್ರಿಸಿಕೊಂಡಿದೆ. ಇನ್ನೂ ಕೆಲವನ್ನು ಹಸ್ತಪ್ರತಿಯಲ್ಲಿ ಸಂಗ್ರಹಿಸಲ್ಪಟ್ಟಿದೆ.

ಹಾರ್ಮೋನಿಯಂ ನುಡಿಸುವುದರಲ್ಲಿ ಜಂಪಣ್ಣನವರು ತುಂಬ ನಿಷ್ಣಾತರಾಗಿದ್ದರು. ಹಾರ್ಮೋನಿಯಂನ್ನು ಹಲವಾರು ವಿಭಿನ್ನ ಲಯಗಳಲ್ಲಿ ನುಡಿಸುವುದು ಅವರ ಹೆಗ್ಗಳಿಕೆ. ಹಾರ್ಮೋನಿಯಂ ಅನ್ನು ಬುಡಮೇಲು ಮಾಡಿ ಮುಷ್ಠಿಯಿಂದಲೇ ಅದನ್ನು ಸುಶ್ರಾವ್ಯವಾಗಿ, ವಿವಿಧ ಲಯಗಳಲ್ಲಿ ನುಡಿಸುತ್ತಿದ್ದ ಆ ಕ್ಷಣಗಳನ್ನು ಸಂಗೀತ ಲೋಕ ಎಂದೂ ಮರೆಯದು. ಅಂಥ ಅಪ್ರತಿಮ ಪ್ರತಿಭೆ ಅವರದಾಗಿತ್ತು.

೨೦೦೧ರ ಡಿಸೆಂಬರ ೩೧ ರಂದು ನಾದಲೋಕದಲ್ಲಿ ಲೀನರಾದ ಜಂಪಣ್ಣನವರಿಗೆ ಕೆಲವು ಪ್ರಶಸ್ತಿ – ಪುರಸ್ಕಾರ ಬಂದಿವೆ. ಬಸವಕಾರುಣ್ಯ ಪ್ರಶಸ್ತಿ (೧೯೯೬) ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕಲಾ ತಿಲಕ ಪ್ರಶಸ್ತಿ (೧೯೯೬), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೭) ಪಂಡಿತ ಪುರಸ್ಕಾರ- ಮುಂತಾದವುಗಳು ಉಲ್ಲೇಖನೀಯವಾಗಿವೆ.