ತಮಿಳು ನಾಡಿನ ಕುಂಭಕೋಣಂನಲ್ಲಿ ಸಂಗೀತಗಾರರ ಕುಟುಂಬದಲ್ಲಿ ೧೫-೭-೧೯೩೪ ರಂದು ಜನಿಸಿದ ಜಂಬು ಅವರಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ವಿಶೇಷವಾದ ಅಭಿರುಚಿ ಇತ್ತು. ಮೊದಲಿಗೆ ಸಂಬಂಧಂ ಪಿಳ್ಳೆಯವರ ಸಂಗೀತ ಶಾಲೆಯಲ್ಲೂ ನಂತರ ಕುಂಭಕೋಣಂ ಶಿವನ್‌ ಮತ್ತು ಕೃಷ್ಣಮೂರ್ತಿಯವರಲ್ಲೂ ಸಂಗೀತ ಶಿಕ್ಷಣ ಪಡೆದರು. ವಿವಾಹಾನಂತರ ಬೆಂಗಳೂರಿನಲ್ಲಿ ನೆಲೆಸಿರುವ ಇವರು ವಲ್ಲಭಂ ಕಲ್ಯಾಣ ಸುಂದರಂ, ಟಿ.ಕೆ. ರಂಗಾಚಾರಿ, ಎಸ್‌. ಕಲ್ಯಾಣರಾಮನ್‌ ಹಾಗೂ ಆನೂರು ಎಸ್‌. ರಾಮಕೃಷ್ಣ ಅವರುಗಳಲ್ಲಿ ಪ್ರೌಢಶಿಕ್ಷಣ ಪಡೆದರು. ಶಾಸ್ತ್ರೀಯತೆ ಮಾಧುರ್ಯ ಇವರ ಗಾಯನದಲ್ಲಿರುವ ಮುಖ್ಯಾಂಶಗಳು.

ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆಯಾಗಿರುವ ಇವರ ಕಾರ್ಯಕ್ರಮಗಳು ಆಕಾಶವಾಣಿ- ದೂರದರ್ಶನಗಳಿಂದ ಪ್ರಸಾರವಾಗುತ್ತಿರುತ್ತವೆ. ದೆಹಲಿ, ತಿರುಚಿ, ಕೊಯಮತ್ತೂರು ಕೇಂದ್ರಗಳಿಂದಲೂ ಇವರ ಗಾಯನ ಪ್ರಸಾರವಾಗಿದೆ. ಮಧುರೈ ಟಿ.ಎನ್‌. ಶೇಷಗೋಪಾಲನ್‌ ಅವರಿಂದಲೂ ಮಾರ್ಗದರ್ಶನ ಪಡೆದಿರುವ ಶ್ರೀಮತಿಯವರು ಹಲವು ಭಕ್ತಿಗೀತೆಗಳ ಧ್ವನಿಸುರುಳಿಗಳಿಗಾಗಿ ಹಾಡಿದ್ದಾರೆ.

ಗಾಯನ ಸಮಾಜದ ಸಂಗೀತ ಸಮ್ಮೇಳನವೊಂದರಲ್ಲಿ ಇವರ ಗಾಯನಕ್ಕೆ ಸ್ವರ್ಣಪದಕ ಲಭಿಸಿದೆ. ‘ಗಾನ ಕಲಾ ಪ್ರಪೂರ್ಣೆ’ ‘ಸ್ವರ ಭೂಷಣಿ’, ‘ಪ್ರಣವಶ್ರೀ’ ಮುಂತಾದ ಬಿರುದುಗಳನ್ನು ಗಳಿಸಿರುವ ಇವರನ್ನು ರಾಜ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಉತ್ತಮ ಬೋಧಕಿಯಾಗಿ ಜಂಬೂ ಕಣ್ಣನ್‌ ಅವರು ಅನೇಕ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ್ದಾರೆ. ಸಂಗೀತದ ಅಭಿವೃದ್ಧಿಯಲ್ಲಿ ಆಸಕ್ತರಾಗಿರುವ ಶ್ರೀಮತಿಯವರು ನಗರದ ಹಲವಾರು ಸಂಸ್ಥೆಗಳ ಆಶ್ರಯದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಮೂಲಕವೂ ಕಲಾ ಸೇವೆ ಮಾಡುತ್ತಿದ್ದಾರೆ.