(ಧಾರವಾಡದ ಅಶೋಕ ಪಾರ್ಕ್. ರಾತ್ರಿ ಹತ್ತು ಘಂಟೆ ಸಮಯ. ರಂಗದ ಹಿಂಭಾಗದಲ್ಲಿ ದಟ್ಟವಾದ ಮಳೆ. ಅಲ್ಲೊಂದು ಬೆಂಚು. ರಂಗದ ಮುಂಭಾಗದಲ್ಲಿ ಬೆಳಕಿದೆ. ಬೆಳಕಿರುವಲ್ಲಿ ಎಡಭಾಗಕ್ಕೊಂದು ಬೆಂಚು. ತೆರೆ ಸರಿದಾಗ ಪೋಲೀಸ್  ಹೆಡ್ಕಾನ್ಸ್ಟೇಬಲ್ ಹದಿನೆಂಟು, ಬೀಡಿ ಸೇದುತ್ತ ಬರುತ್ತಾನೆ. ವಯಸ್ಸು ೫೦ ಮೇಲೆ. ಸ್ವಲ್ಪ ಸಮಯವಾದ ಮೇಲೆ ದೂರದಿಂದ ಪೋಲೀಸ್ ಸೀಟಿ ಕೇಳಿಸುತ್ತದೆ. ಅದಕ್ಕುತ್ತರವಾಗಿ ಇವನೂ ಸೀಟಿ ಊದುತ್ತಾನೆ. ಮತ್ತೆ ಬೀಡಿ ಸೇದುತ್ತ ಪ್ರೇಕ್ಷಕರನ್ನು ಕುರಿತು ಮಾತಾಡತೊಡಗುತ್ತಾನೆ)

ಹದಿನೆಂಟು : ನಾನು ಪೋಲೀಸ್‌ ಹೆಡ್‌ಕಾನ್ಸ್‌ಟೇಬಲ್ ಚಿಕ್ಕೀರ ಅಂತ. ನಾನಂತೂ ಸಿವಿಲ್‌ ಡ್ರೆಸ್‌ ಹೊಲಿಸಿಲ್ಲ. ಅಟೆಂಡೆನ್ಸ್ ರಿಜಿಸ್ಟರದಾಗ ಚಿಕ್ಕೀರ ಅಂತ ಬರದೈತಿ ಖರೆ, ಹಾಗಂತ ನನ್ನ ಯಾರೂ ಕರ್ಯಾಣಿಲ್ಲ. ಕರದರ ನಾ ಓ ಅನ್ನಾಣಿಲ್ಲ. ಮ್ಯಾಲಿನವರೆಲ್ಲಾ ನನ್ನ ‘ಹದಿನೆಂಟು’ ಅಂತಾರ, ಯಾಕಂದರ ನನ್ನ ನಂಬರ ಹದಿನೆಂಟ ಐತಿ. ಹದಿನೆಂಟು ಅಂದರ ಹದಿನೆಂಟ ಸುಳ್ಳ ಹೇಳಾವಂತ್ಲೂ ಐತಿ. ಬಹುಶಃ ಹದಿನೆಂಟ ಸುಳ್ಳಿಗೂ ನನ್ನ ನಂಬರಿಗೂ ಅರ್ಥಾತ್ ಸಂಬಂಧ ಇರಲಿಕ್ಕಿಲ್ಲ. ನಿಮ್ಮ ಕಣ್ಣಿಗೆ ನಾ ಎಲ್ಲಾ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್‌ರ್ಹಾಂಗ ಕಾಣತಿರಬಹುದು. ಆದರ ಜಾತ್ಯಾ ಪೋಲೀಸರಿಗೂ ನನಗೂ ಭಾಳ ಫರಕ ಐತಿ. ಹೇಳಿದರ ಕೈ ಬಡದ ನಕ್ಕೀರೆಪಾ- ನಾ ಪೋಲೀಸಾದ್ದು ಲಂಚಾ ತಿನ್ನಾಕಲ್ಲ. ನಾ ಸಣ್ಣಂದಿರತ- ಹತ್ತ, ಹನ್ನಾಡ ವಯಸ್ಸಿರಬೇಕು, ನಮ್ಮೂರಾಗೊಮ್ಮಿ ಕಳವಾಯ್ತು. ಒಬ್ಬ ಪೋಲೀಸ ಬಂದಿದ್ದ. ಏನ ಡ್ರೆಸ್ಸದು! ದೇವರ ಕಿರೀಟದಂಥಾ ಟೋಪಿಗಿ. ಇಕ್ಕs ಈಗ ಇಸ್ತ್ರಿ ಮಾಡಿಧಾಂಗ ಚಣ್ಣ, ಅಂಗಿ; ಅದನೇನ ಮಾಡ್ತೀರಿ ನಡೀಗಿ ಅಂಗೈಯಗಲ ಬೆಲ್ಟು. ಎಡಗೈಯಾಗೊಂದು ಗುಂಡ ಬಡಗಿ. ಬಲಗೈಯಾಗೊಂದು ಬೀಡಿ- ಅಲಲಲಲ! ಸ್ವಥಾ ನಮ್ಮ ತಿರುಪತಿ ತಿಮ್ಮಪ್ಪನs ಅಡ್ಡಾಡಕೋತ ಬೀಡಿ ಸೇದಿಧಾಂಗ! ದೇವರ ಸಮಾ ನಿಮ್ಮ ಮುಂದ ಹೇಳ್ತೀನ್ರಿ- ಅವ ಬಂದ ಮೂರ ಬೀಡಿ ಸೇದೋದರೊಳಗ ಮುಚ್ಚಿಟ್ಟ ಖರೆ ಕೊಸರಿಕೊಂಡ ಹೊರಗ ಬಂತ! ಕಳವಾದ ಮಾಲ ಬಂದ ಚಾವಡ್ಯಾಗ ಬಿತ್ತು! ಏನ ಮಹಿಮಾ! ಏನ ಪವಾಡ! ಅಂದs ಅಂದಕೊಂಡಬಿಟ್ಟೆ: ಆದರ ನಾ ಪೋಲೀಸs ಆಗಬೇಕಂತ. ಆಮ್ಯಾಲ ಪೋಲೀಸೂ ಆದೆ, ಅಂದಂತೂ ಏನ ಸಡಗರ ಮಾಡಿದೆ! ರಾತ್ರಿ ಡ್ರೆಸ್ ಕಳೀಲೇ ಇಲ್ಲ. ಹಾಂಗs ಮಲಗಿದೆ. ಕನಸಿನಾಗ ತಿರುಪತಿ ತಿಮ್ಮಪ್ಪ ಬಂದ. ನೋಡತೀನಿ: ದೇವರs ಪೋಲೀಸರ್ಹಾಂಗ ಡ್ರೆಸ್‌ ಹಾಕಿದ್ದ! “ಎಪ್ಪಾs” ಅಂದೆ. “ಮಗನ” ಅಂದ. ಬಲಗೈಯಾಗ ಬೀಡಿ ಇತ್ತು; ಹಾಂಗs ಆಶೀರ್ವಾದ ಮಾಡಿ, ಕೇಳಿದ: “ಮಗನs ಈ ಜಗತ್ತಿನ ಮಂದಿಗೆಲ್ಲಾ ಒಂದ ಐತಿ; ಒಂದ ಇಲ್ಲಾ; ಏನ ಹೇಳು.”

“ಗೊತ್ತಿಲ್ಲೆಪಾ”

“ಇಷ್ಟೂ ತಿಳಿಯಾಣಿಲ್ಲೇನೋ- ದುಃಖ ಐತಿ; ಸುಖ ಇಲ್ಲಾ” ಅಲಲಲ! ಏನ ಶಾಣ್ಯಾ ನಮ್ಮ ದೇವರು! ಮತ್ತ ಅಂದ.

“ನೋಡೋ ಈ ಮಂದಿಗಿ ಸುಖಾ ಇಲ್ಲ ಅಂದ್ನೆಲ್ಲಾ- ಯಾಕಿಲ್ಲಾ ಗೊತ್ತೈತೇನು?”

“ಎಷ್ಟು ಗೊತ್ತಿಲ್ಲರೀ”.

“ಯಾಕಂದರ ಮಂದಿ ಜಗಳಾಡತಾರೋ! ಯಾಕ ಜಗಳಾಡತಾರ?”

“ಸುಳ್ಳ ಸುಳ್ಳ ಜಗಳಾಡತಾರರೀ,”

“ಸುಳ್ಳ ಸುಳ್ಳ ಅಲ್ಲೋ ಮಗನs ಖರೆ ಖರೆ ಜಗಳಾಡತಾರ!”

“ಹಂಗಾದರ ಖರೆ ಎಲ್ಲಿರತೈತಿ ಎಪಾ!”

“ನಿನ್ನಲ್ಲಿ ಐತಿ ಅಂತ ನೀ ಅಂತಿ, ಮಂದಿ, ಅದಕ್ಕ ಸುಳ್ಳಂತಾರ.

ಮಂದೀ ಖರೆ ನಿನಗ ಸುಳ್ಳ ಕಾಣಸ್ತೈತಿ.”

“ಹಂಗಾದರ ಖರೇನs ಇಲ್ಲಂತೀಯಪಾ?”

“ಐತೋ ಇಲ್ಲೋ! ಅದರ ಉಸಾಬರಿ ನನಗ ನಿನಗ ಯಾಕೋ?”

ಒಬ್ಬೊಬ್ಬಗ ಒಂದೊಂದ ಖರೆ ಇರತೈತಿ! ನಿಂದ ಬಿಟ್ಟ ಇನ್ನೊಬ್ಬರ ಖರೆ ನುಂಗಬ್ಯಾಡ. ಮಂದೀ ಖರೆ ನುಂಗೋದಂದರ ಕುಡಗೋಲ ನುಂಗಿಧಾಂಗೇ ನಪಾ. ಕುಡಗೋಲ ನುಂಗಿದರ ಏನಾಗತೈತಿ?

“ಬುಡ ಹರೀತೈತಿ!”

“ಬುಡ ಹರದರ ‌‌‌‌ಮೋತಿ ನೋಡಾಕ ಆಗತೈತೇನೊ ಮಗನ?”

“ಆಗತೈತಿ, ಅದರ ಕಣ್ಣೀರ ಬರತಾವೆಪ್ಪ.”

ಅದಕ್ಕ ಹೇಳ್ತೀನಪ್ಪಾ, ಅವರವರು ಅವರವರ ಖರೇನs ನುಂಗಬೇಕು. ಅಂದರ ಅದು ಒಳಗ ಹೋಗಿ ಕೂಸಾಗಿ ಹೊರಗ ಬರತೈತಿ. ಇಲ್ಲದಿದ್ದರ ಐತೆಲ್ಲ –” “ಆದರ ಎಪ್ಪ, ಮಂದೀ ಖರೆ ನುಂಗಿದವರು ಮಕ್ಕಳಾ ಹಡದಿಲ್ಲಂದಿರಿ?”

“ಎಷ್ಟ ಧಡ್ಡದೀಯೋ ಮಗನs! ಮನಿಶಾನ ಮನಸ ನಮಗ ತಿಳಿದೈತಿ? ತಿಳಿದಿ‌ದ್ದರ ನಾ ದೇವರ್ಯಾಕ ಆಗತ್ತಿದ್ದೆ? ನೀ ಸರಕಾರ ಯಾಕ ಆಗತಿದ್ದಿ? ನಾವಿಬ್ಬರೂ ನಿಶ್ಚಿಂತಿ  ಇರಬೇಕಂದರ ನೀ ಮಂದಿಗಿ ತಿಳಿಸಿ ಹೇಳಬೇಕು, ಏನ ಹೇಳು.”

“ತಿಳೀತೆಪ್ಪ ತಿಳೀತು. ಅಪಾ ಕುಡಗೋಲು ನುಂಗಬ್ಯಾಡ್ರೋ”

“ತಥಾಸ್ತು”

ಅಂದ ಮಾಯವಾದ! ಗಪ್ಪನ ಎಚ್ಚರಾಗಿ ಕಣ್ಣ ತೆರೆದ ನೋಡತೇನು: ಪುಟ್ಟ ಪೂರಾ ಬೆಳಗಾಗೇತಿ. ಅಂದಿನಿಂದ ನೋಡ್ರೆಪಾ ದೇವರಾಣಿ ಖರೇ ಹೇಳತೇನು. ಈ ಡ್ರೆಸ್‌ ಹಾಕಿದಾಗ- ಸುಳ್ಳಾಡಾಣಿಲ್ಲ, ಲಂಚ ತಿನ್ನಾಣಿಲ್ಲ; ಪಾರ್ಕಿಗೆ ಬಂದ ಮಂದಿಗೆಲ್ಲಾ ಹೇಳತಿರತೇನು; ಅಪಾ ಕುಡಗೋಲು ನುಂಗಬ್ಯಾಡ್ರೋ- ಅಂತ
(ಅಷ್ಟರಲ್ಲಿಟ್ವೆಂಟಿ ಇನ್ನೊಬ್ಬ ಪೋಲೀಸ೩೦ ಒಗರು ಬರುವನು) ನನ್ನ ಮಾತು ಯಾರು ಕೇಳೋದs ಇಲ್ಲ.

ಟ್ವೆಂಟಿ : (ಸೆಲ್ಯೂಟ್ಹೊಡೆದು)

ಎಸ್ಸರ್.

ಹದಿನೆಂಟು : ಏ ಟ್ರೆಂಟೀ ಎಲ್ಲಿ ಹೋಗಿದ್ಯೋ ಸರಗ್ಯಾಡಕ? ಪಾರ್ಕಿನ ತುಂಬ ಒಂದ ರೌಂಡ ಹೊಡದ ಬಂದೇನ?

ಟ್ವೆಂಟಿ : ಬಂದೆ ಸರ್.

ಹದಿನೆಂಟು : ಎಷ್ಟು ಹೊತ್ತು?

ಟ್ವೆಂಟಿ : ಹಾಪ್‌ ಅವರ್ ಸರ್.

ಹದಿನೆಂಟು : ಯಾಕಲೆ ಎದುರುತ್ತರ ಕೊಡತಿ? ಬೇಕೇನ ಬೆನ್ನ ಮ್ಯಾಗೆರಡು?

ಟ್ವೆಂಟಿ : (ಸುಮ್ಮನಿರುವನು)

ಹದಿನೆಂಟು : ಎಲ್ಲಾರೂ ಪಾರ್ಕ್‌ ಬಿಟ್ಟ ಹೋದರೇನು?

ಟ್ವೆಂಟಿ : ಹೋದ್ರು ಸರ್. ಎಲ್ಲರಿಗೂ ಹೇಳ್ದೆ ಸರ್.

ಹದಿನೆಂಟು : ಏನು ಹೇಳಿದೆ?

ಟ್ವೆಂಟಿ : ಕುಡಗೋಲ ನುಂಗಬ್ಯಾಡ್ರಿ ಅಂತ ಹೇಳಿದೆ.

ಹದಿನೆಂಟು : (ಖುಷಿಯಾಗಿ)

ಬಂದೋಬಸ್ತಂದರ ಹಾಂಗಿರಬೇಕು. ನಿನಗ ತಿಳಿಯಾಣಿಲ್ಲಪಾ ಪೋಲೀಸಂದರ ಹಾಂಗs ಇರಬೇಕು. ಯಾಕಂದರ….

ಟ್ವೆಂಟಿ : ಗೊತ್ತು ಸರ್. ನಿಮ್ಮ ಕನಸಿನಾಗ ತಿರುಪತಿ ತಿಮ್ಮಪ್ಪ….

ಹದಿನೆಂಟು : ಹೆದರಬ್ಯಾಡ, ಅದನೇನೂ ನಿನ್ನ ಮುಂದ ರಿಪೀಟ ಮಾಡಾಣಿಲ್ಲ. ಹಾಂಗ ಗಿಡ, ಕಂಟಿ, ನೆರಳು ಕತ್ತಲ ಮರೆ ಇದ್ದದ್ದೆಲ್ಲಾ ಇನ್ನೊಮ್ಮಿನೋಡೋಣ ಬಾ. ಈ ಕಾಲೇಜ ಹುಡುಗರೋ…. ನೀ ಈ ಕಡಿಂದ ಹೋಗು, ನಾ ಆ ಕಡಿಂದ ಬರತೀನಿ.

ಟ್ವೆಂಟಿ : ಎಸ್ಸರ್.

(ಇಬ್ಬರೂ ಒಂದೊಂದು ದಿಕ್ಕಿಗೆ ಹೋಗುವರು. ಒಂದು ಹೆಂಗಸು ಹೆದರಿ ಹೆದರಿ ಒಂದು ಬುಟ್ಟಿ ತಂದು ರಂಗದ ಹಿಂಭಾಗದ ಮಳೆಯ ಮರೆಯಲ್ಲಿ ಅವಸರವಾಗಿಟ್ಟು ಹೊರಬರುವಳು. ಅತ್ತಿತ್ತ ನೋಡಿ ಓಡಬೇಕೆಂದು ಸಿದ್ಧಳಾಗುವಷ್ಟರಲ್ಲಿ ಪೋಲೀಸ್ ಸೀಟಿ ಕೇಳಿಸುವುದು. ಹೋದವರಿಬ್ಬರೂ ಬರುತ್ತಿರುವುದನ್ನು ಗಮನಿಸಿ ಧೈರ್ಯ ತಂದುಕೊಳ್ಳುವಳು. ಇಬ್ಬರೂ ಪೋಲೀಸರು ತಂತಮ್ಮ ದಿಕ್ಕಿನಿಂದ ಪ್ರತ್ಯಕ್ಷರಾಗುವರು. ಟ್ವೆಂಟಿ ಬಳಿ ಸಾರುವನು. ಹದಿನೆಂಟು ದೂರ ನಿಂತು ಗಮನಿಸುತ್ತಿರುವನು.)

ಟ್ವೆಂಟಿ : ಯಾರಬೇ ನೀನು?

ಹೆಂಗಸು : ಕಾಣಸಾಣಿಲ್ಲಾ? ಮನಶೇರು.

ಟ್ವೆಂಟಿ : ತಿಳದ ಬಂತು. ತಾಯಿ ಇಲ್ಲಿಗ್ಯಾಕ ಬಂದಿ?

ಹೆಂಗಸು : ಮಂದೆಲ್ಲಾ ಯಾಕ ಬರತಾರ?

ಟ್ವೆಂಟಿ : ಎಲೀ ಇದರ! ತಾಯೀ, ಹಸೀಖಾರ ತಿಂದ ಬಂದೀಯಂತ ನನಗಾದರು ತಿಳೀತು; ಮ್ಯಾಲ ನಮ್ಮ ಸಾಹೇಬರಿಗಾದರು ತಿಳೀತು. ಇಲ್ಲೇನ ತಿನ್ನಾಕ ಬಂದಿ?

ಹೆಂಗಸು : ಗಾಳಿ ಹವಾ ತಿನ್ನಾಕ.

ಟ್ವೆಂಟಿ : ಭಲೆ ಭಲೆ! ತಿಂದೇನ?

ಹೆಂಗಸು : ಅದನೇನ ಢರಿಕಿ ಹೊಡದ ತೋರಸಬೇಕ?

ಟ್ವೆಂಟಿ : ಬ್ಯಾಡ ಎವ್ವಾ! ನೀ ಗಾಳಿ ಹವಾ ತಿಂಧಾಂಗಾಯ್ತು. ತಿಂದ ಹವಾ ನೆತ್ತಿಗೆ ಹತ್ತಿಧಾಂಗಾಯ್ತು. ಇನ್ನ ನಡೀತಿರೀ?

ಹೆಂಗಸು : ಗೇಟ ಬಾಗಲ ಎಲ್ಲಿ ಐತಿ?

ಟ್ವೆಂಟಿ : ಬರೋವಾಗ ಹೆಂಗ ಗ್ವಾಡೀ ಜಿಗದ ಬಂದ್ರಿ?

ಹೆಂಗಸು : ಇಲ್ಲಾ ಪಕ್ಕಬಿಚ್ಚಿ ಹಾರಕೋತ ಬಂದೆ!

ಟ್ವೆಂಟಿ : ಇದ್ದಿರಬೇಕು. ಗೇಟ ಬಾಗಲಾ ತೋರಸಲಿ?

ಹದಿನೆಂಟು : ಏ ಟ್ವೆಂಟೀ. ನಾ ಸೀನಿಯರ್ ಇರೋವಾಗ ನನ್ನ ಕೇಳದs ಗೇಟ ಬಾಗಲಾ ತೋರಸ್ತಿಯೇನೋ ರಾಸ್ಕಲ್?

ಟ್ವೆಂಟಿ : ಎಸ್ಸರ್, ಸರ್. ಈಕಿಗಿ ಗೇಟ ಬಾಗಲಾ ತೋರಿಸಲಿ!

ಹದಿನೆಂಟು : ಆಲ್‌ರೈಟ್‌, ತೋರಿಸು.

ಟ್ವೆಂಟಿ : ಹಿಂಗ ಹೋಗವಾs

ಹದಿನೆಂಟು : ಏ ಟ್ವೆಂಟೀ,

ಟ್ವೆಂಟಿ : ಎಸ್ಸರ್, ಹಾಂಗೆಲ್ಲಾ ಕುಡಗೋಲ ನುಂಗಬಾರದವಾ!

ಹೆಂಗಸು : (ತಿರುಗಿ ನಿಂತು)

ಕುಡಗೋಲ? ಯಾಕಲಾ ಭಾಡಕೌ? ಮಾನವಂತ ಹೆಣಮಗಳಿಗಿ ಹಿಂಗೆಲ್ಲಾ ಮಾತಾಡ್ತಿ? ಏಟುದ್ದ ಐತ್ಯೋ ನಿನ್ನ ಕುಡಗೋಲು? ನಾಕಾಣೆ ಖಾಕೀ ಚಣ್ಣ ಹಾಕೀಯಂತ ನನ್ನ ಮುಂದ ಧಿಮಾಕ ತೋರಸ್ತಿಯೇನೋ?
(ಜಗಳವಾಡಲು ಸಿದ್ಧಳಾಗಿ ಸರ್ರನೆ ಸೆರಗು ಬಿಗಿಯುವಳು. ಟ್ವೆಂಟಿ ಹೆದರಿಸರ್ ಸರ್ ಎಂದು ಹದಿನೆಂಟನ ಬಳಿಗೆ ಓಡುವನು. ಹೆಂಗಸು ಸುಮ್ಮನಾಗಿ ಸೆರಗು ಸರಿಪಡಿಸಿಕೊಳ್ಳುತ್ತ ಹೋಗುವಳು)

ಟ್ವೆಂಟಿ : ಸರ್, ಇದು ಕುಡಗೋಲ ನುಂಗಿಸೋ ಜಾತಿ!
(ಹದಿನೆಂಟು ನಗುತ್ತ ಒಂದು ಸಲ ಸೀಟಿ ಊದಿ ಟ್ವೆಂಟಿಗೆ ಸನ್ನೆ ಮಾಡುವನು. ಇಬ್ಬರೂ ಮತ್ತೆ ತಮ್ಮ ದಿಕ್ಕಿನಲ್ಲಿ ಮಾಯವಾಗುವರು. ಕೆಲಹೊತ್ತು ನೀರವ. ಶೋಭಾ ಸೂಟ್ಕೇಸಿನೊಂದಿಗೆ ಬರುವಳು. ತುಂಬ ಗಾಬರಿ ಅವಸರದಲ್ಲಿದ್ದಾಳೆ. ಸೂಟ್ಕೇಸನ್ನು ಮೆಳೆಯ ಮರೆಗೆ ಬುಟ್ಟಿಯ ಹತ್ತಿರ ಇಟ್ಟು ರೆಸ್ಟ್ಲೆಸ್ಆಗಿ ವಾಚು ನೋಡುತ್ತ ಯಾರಾದರೂ ಕಂಡಾರೆಂದು ಮಳೆಯ ಮರೆಯಲ್ಲಿ ಹುದುಗುವಳು. ಸ್ವಲ್ಪ ಹೊತ್ತಾದ ಮೇಲೆ ರವಿ ಸೂಟ್ಕೇಸಿನೊಂದಿಗೆ ಓಡಿ ಬರುವನು. ಸ್ಥಳ ಗುರುತಿಸಿ ಸೂಟ್ಕೇಸಿಟ್ಟು ಬೆವರೊರಿಸಿಕೊಳ್ಳುವನು. ಶೋಭಾರವೀ ಎಂದು ಕರೆಯುತ್ತಾ ಹೊರಬರುವಳು/ ಇಬ್ಬರೂ ವಾಚು ನೋಡಿಕೊಳ್ಳುವರು.)

ರವಿ : ಬಂದ ಭಾಳ ಹೊತ್ತಾಯ್ತೇನ?

ಶೋಭಾ : ಈಗಷ್ಟೆ ಬಂದೆ.

ರವಿ : ಯಾರಾದರೂ ನೋಡಿದರೇನ?

ಶೋಭಾ : ಯಾರೂ ಇದ್ಧಾಂಗಿರಲಿಲ್ಲ. ನನ್ನ ಪತ್ರ ಮನ್ಯಾಗ ಬಿಟ್ಟಿಲ್ಲ ಹೌದಲ್ಲ?

ರವಿ : ಏನ ಮಾಡಿದ್ನೋ! ಇನ್ನ ಮ್ಯಾಲ ಸಿಕ್ಕರ ಸಿಗಲಿ ಬಿಡು. ಸ್ಟೇಶನ್ನಿಗೆ ಹೊರಡೋಣೇನು?

ಶೋಭಾ : ಟ್ರೇನ್ ಬರೋದಿನ್ನೂ ಒಂದು ತಾಸು. ಅಷ್ಟರಾಗ ನಮ್ಮಪ್ಪ ಸ್ಟೇಷನ್ನಿಗೇ ಬಂದರ?

ರವಿ : ಬೆನ್ನ ಹತ್ತಿರಬೇಕಂದಿ?

ಶೋಭಾ : ನಮ್ಮವ್ವಗs ಸಂಶೆ ಬಂದಿತ್ತು. ಆಕೀ ಕಣ್ಣ ತಪ್ಪಿಸಿ ಬರಬೇಕಾದರs ಸಾಕ ಬೇಕಾತು.

ರವಿ : ಟಿಕೆಟ್ ತಗಸೋದs ಬ್ಯಾಡ. ಆಚೀ ಕಡಿಂದ ಟ್ರೇನ್‌ ಬಂದ ಹುರುಪಲೆ ಓಡಿಹೋಗಿ ಹತ್ತಿ ಬಿಡೋಣು.

ಶೋಭಾ : ಅದೂ ಖರೆ. ಸ್ಟೇಶನ್ನದಾಗ ಮತ್ತ ಯಾರು ಗುರುತಿನವರಿರತಾರೊ! ನಿಮ್ಮ ಮನ್ಯಾಗೇನ ಹೇಳಬಂದಿ?

ರವಿ : ಏನೂ ಹೇಳೇ ಲ್ಲ ಮೆತ್ತಗ ರೊಕ್ಕಾ ತಗೊಂಡ ದಾಟಿ ಬಂದೆ. ನಮ್ಮವ್ವನ ಕಣ್ಣಾಗ ಸಂಶೇ ಇದ್ಧಾಂಗಿತ್ತು. ಏನು ಮಾಡತಾಳೊ!

ಶೋಭಾ : ಯಾವೂರಿಗಿಳಿಯೋಣು?

ರವಿ : ಊರಂತೂ ಬಿಡೋಣ. ಮುಂದಿಂದ ಮುಂದ. ಆದರೂ ನನಗ ಅನ್ನಸ್ತೈತಿ, ಪರೀಕ್ಷೆ ಆಗೋತನಕ ಕಾದರ ಹೆಂಗ? ಅಂತ.

ಶೋಭಾ : ಕಾದರೂ ಬಿಟ್ಟರೂ ಎಲ್ಲಾ ಒಂದs ಇದಕೆಲ್ಲಾ, ಅವರ ಎದಿ ಹೆಂಗ ಕರಗೀತ ಹೇಳು.

ರವಿ : ಮಾಡೋ ಖಟಪಟಿ ಮಾಡೋಣು.

ಶೋಭಾ : ಅಧೆಂಗಾದೀತು? ಖಟಪಟಿ ಮಾಡಿದಷ್ಟೂ ನಮ್ಮವ್ವಗ ನನ್ನ ಮ್ಯಾಲ ಸಂಶೇ ಬರಾಕ ಸುರುವಾತು. ಎಲ್ಲಿ ಬಸರಾಗ್ಯಾಳೇನೋ! ಅದಕ್ಕs ಇಷ್ಟ ಅವಸರ ಮಾಡ್ತಾಳಂತ ಹೇಳೇಬಿಟ್ಲು ಅದೂ ಕೂಡಿದ ಮಂದ್ಯಾಗ. ಈಗ ನಾ ಬರೆದ ಪತ್ರ ಸಿಕ್ಕಿದ್ದರಂತೂ ಕತಿ ಮುಗೀತು. ಜಾತಿ ಒಂದಾಗಿದ್ದರ ಇಂದಿಲ್ಲ ನಾಳಿ ಬಂದಾರ ಹಾದಿಗಂತ ಹಲಬಿಕೊಂಡಿರಬೌದಿತ್ತು.

ರವಿ : ಮದಿವ್ಯಾದ ಮ್ಯಾಲ ಹಾದಿಗಿ ಬಂದಾರೊ ಏನೊ

ಶೋಭಾ : ಮದಿವ್ಯಾದ ಮ್ಯಾಲಲ್ಲ. ಮೊಮ್ಮಗನ ಕಂಡಮ್ಯಾಲ!

ರವಿ : ಅಡ್ಡೀಯಿಲ್ಲ. ಇಂಥಾ ಹೊತ್ತಿನಾಗೂ ಚಾಷ್ಟೀ ಮಾಡತೀಯಲ್ಲ! ಎಲಾ ಹೆಣ್ಣ!

ಶೋಭಾ : ನಾ ಒಂದಿಷ್ಟು ತಂದೀನಿ: ನೀ ಅಷ್ಟ ದುಡ್ಡ ತಂದೀಯೇನು?

ರವಿ : ಅದರ ಕಾಳಜಿ ಬಿಡು. ಆದರೂ ನಮ್ಮವ್ವಾ ಅಪ್ಪಾ, ಮುಂದ ನಿಂತ ಮದಿವಿ ಮಾಡಿದ್ದರ ಅದರ ಹೌಸನ ಬ್ಯಾರಿ!

ಶೋಭಾ : ನಶೀಬs ಖೊಟ್ಟಿದ್ದರ ಏನ ಮಾಡೋದು?

ರವಿ : ಯಾರೋ ಆ ಕಡಿ ಅಡ್ಡಾಡತಿದ್ದಾಂಗ ಕಾಣತೈತಲ್ಲ? ಪೋಲೀಸರೇನೋ? ಹೌಂದು. ಶೋಭಾ ಲಗು ಅಡಿಗಿಕೊ.

ಶೋಭಾ : ಅಡಗಿದರೆಲ್ಲಿ ಬಿಡತಾರ? ಸೂಟಕೇಸ ಮುಚ್ಚಿಟ್ಟ ನಾವೂ ಅಡ್ಡಾಡಾಕ ಬಂಧಾಗಿದ್ದರಾಯ್ತು. ಅಕಾ ನಿನ್ನ ಸೂಟಕೇಸ ಅಲ್ಲಿಟ್ಟಬಿಡು. (ರವಿ ತನ್ನ ಸೂಟಕೇಸನ್ನು ಅವಳ ಸೂಟ್ಕೇಸಿನ ಹತ್ತಿರ ಇಡುವನು. ಇಬ್ಬರೂ ಸಹಜವಾಗಿ ಅಡ್ಡಾಡ ಬಂದವರಂತೆ ಅಭಿನಯಿಸತೊಡಗುವರು. ಹದಿನೆಂಟು, ಟ್ವೆಂಟಿ ಇಬ್ಬರೂ ಸಂದೇಹದಿಂದ ಬಂದು ಗಮನಿಸುತ್ತ ನಿಲ್ಲುವರು.)

ರವಿ : ರೂಮಿನೊಳಗೆ ಏನ ಶಕೆ ಅಂತೀನಿ! ಮಿಸ್‌ ರತ್ನಾ, ಪರೀಕ್ಷೆ ತಯಾರಿ ಹೆಂಗ ನಡಿಸೀರಿ?

ಶೋಭಾ : ನನಗೂ ಭಾಳ ಶಕೆ ಆಗಿ ಅಡ್ಡಾಡಿಕೊಂಡ ಬರೋಣಂತ ಬಂದೇರಿ. ಓದಿ ಓದಿ ತಲೀ ಚಿಟ್ಟ ಹಿಡೀತು. ಅಂಧಾಂಗ ನಿಮ್ಮ ಪೋರ‍್ಶನ್ ಮುಗದೈತಿ ಹೌಂದಲ್ಲರಿ?

ರವಿ : ಮುಗದದ್ದೇನೊ ಖರೆ. ಆದರ ಒಂದ ಸಲಾನೂ ನಾ ಪೂರ್ತಿ ಓದಿಲ್ಲರಿ. ಈ ಸಲ ಪರೀಕ್ಷೇಕ್ಕೂರೋದs ಬ್ಯಾಡೇನೋ ಅಂತಿದೀನಿ

ಶೋಭಾ : ಅದ್ಯಾಕರೀ ಹಾಂಗಂತೀರಿ? ಹರದಷ್ಟ ಮೊಳ ಕಿರಿದಾಯ್ತು. ಕೂತ ಎಷ್ಟ ಸಬ್ಜೆಕ್ಟ ದಾಟಿದರ ಅಷ್ಟ ಅನಕೂ. ನಾನಂತೂ ಕೂರತೀನ್ರಪಾ. ಒಂದು ಸಲಕ್ಕ ಪಾರಾಗೋದಂತೂ ಆಗೋಣಿಲ್ಲ. ನೋವೂ ನನ್ಹಾಂಗs ಅಂದರ ನೀವು ಮನಸಿಗಿ ಹಚ್ಚಿಕೊಳ್ಳೋಣಿಲ್ಲ ಹೌಂದಲ್ಲರಿ?

ಟ್ವೆಂಟಿ : (ಹದಿನೆಂಟಿನ ಕಿವಿಯಲ್ಲಿ)

ಸರ್, ಈ ಕೋಳಿ ತತ್ತಿಗಿ ಬಂದಾಳಂತ ಅನ್ನಿಸಾಣಿಲ್ಲರಿ?

(ಇವರು ಹೀಗೆ ಮಾತಾಡುತ್ತಿರುವುದನ್ನು ಮಾತು ನಿಲ್ಲಿಸಿ ರವಿ ಶೋಭಾ ಇಬ್ಬರೂ ಗಮನಿಸಿ ಸುಮ್ಮನಾಗುವರು, ಹದಿನೆಂಟು ಸಮಯ ಸ್ಫೂರ್ತಿಯ ಜೋರಿನಿಂದ)

ಹದಿನೆಂಟು : ಛೇ ಛೆ ಆ ತಳಿ ಬ್ಯಾರೇನಪಾ ಅದು. ಪಾಪ ಇವರು ಕಾಲೇಜು ಹುಡುಗರು,ಯಾರ್ರೀ ಅವರು?

ರವಿ : ಪೋಲೀಸ್‌ ಸಾಹೇಬರೇನು? ನಾನು ರಾಜೀವ ಅಂತ. ಇಲ್ಲೆ ಕರ್ನಾಟಕ ಕಾಲೇಜಿನಾಗ ಬಿ.ಎ. ಕಲೀತೀನಿ. ಇವರು ಮಿಸ್ ರತ್ನ ಅಂತ.

ಟ್ವೆಂಟಿ : ಹಾ ನನಗೀಗ ಬರೋಬರಿ ಹೊಳೀತ ನೋಡ್ರಿ.
(ಹದಿನೆಂಟನ ಕಿವಿಯಲ್ಲಿ)

ಸರ್ ಸರ್. ನಾನು ಹೇಳಿದ್ದ ಖರೆ ನೋಡ್ರಿ.

ಹದಿನೆಂಟು : ಯಾಕ?

ಟ್ವೆಂಟಿ : ಮೊನ್ನಿ ಕರ್ನಾಟಕ ಕಾಲೇಜ ಪಾಯಖಾನೇಕ ಹೋಗಿದ್ದೆ. ಅಲ್ಲಿ ಗ್ವಾಡೀ ಮ್ಯಾಲ ಈಕೀ ಹೆಸರ ಬರೆದಿತ್ತರೀ.

ಹದಿನೆಂಟು : ಹಾಕಿದ ಹೌಂದಲ್ಲ ಹರದ ಬೂಟಿನಂಥಾ ನಿನ್ನ ಮೂಗ?
(ರವಿಗೆ)

ಅದ ಖರೆ. ಈ ವ್ಯಾಳ್ಯಾದಾಗ ಪಾರ್ಕಿಗಿ ಬಂದಿರಲ್ಲಾ….

ರವಿ : ಅದು ರೂಮಿನೊಳಗ….

ಟ್ವೆಂಟಿ : ಶಕೆ ಭಾಳಂತ ಅಡ್ಯಾಡಕ ಬಂದಿರೇನೊ…..

ರವಿ : ಹೌಂದ್ಹೌದು. ಐ ಮೀನ್…. ನೋಡ್ರೆಲ್ಲಾ ಓದಿ ಓದಿ….

ಟ್ವೆಂಟಿ : ತಲೀ ಚಿಟ್ಟ ಹಿಡಿದಿರಬೇಕು….

ರವಿ : ಆಫ್‌ಕೋರ್ಸ್‌… ಎಸ್ಸೆಸ್…. ಸಾಹೇಬರು ಸಿಗರೇಟು ಸೇದ್ತಿರೇನು?

ಟ್ವೆಂಟಿ : ಕೊಡ್ರೆಲ್ಲ.
(ಓಡಿ ಹೋಗಿ ರವಿ ಕೊಟ್ಟ ಸಿಗರೇಟು, ಕಡ್ಡೀಪೆಟ್ಟಿಗೆ ಇಸಿದು ತಂದು ಹದಿನೆಂಟನ ಎದುರಿಗೆ ಹಿಡಿಯುವನು. ಅವನು ತನ್ನ ಗಣೇಶ ಬೀಡಿ ಹೊತ್ತಿಸುವನು. ಟ್ವೆಂಟಿ ಸಿಗರೇಟು ಹೊತ್ತಿಸುವನು. ಇಬ್ಬರೂ ಅವರಿಗೆ ಇನ್ನಷ್ಟು ಸಮೀಪ ಹೋಗುವರು.)

ಹದಿನೆಂಟು : ಸಾಹೇಬರು ಯಾವೂರವರು?

ರವಿ : ಸವದತ್ತಿ.

ಹದಿನೆಂಟು : ಹಾಸ್ಟಲದಾಗಿದೀರೇನೊ.

ರವಿ : ಹೌಂದು, ಇಲ್ಲೇ ಸಮೀಪ ಐತಿ.

ಟ್ವೆಂಟಿ : ಈ ಹೆಣಮಗಳೂ ನೀವು ಕ್ಲಾಸಮೆಂಟ ಏನ್ರಿ?

ಶೋಭಾ : ಹೌಂದು.

ಟ್ವೆಂಟಿ : (ಶೋಭಾಗೆ)

ನೀವ್ಯಾರ ಪೈಕೀರಿ?

ಶೋಭಾ : ನಾನು…. ಸಪ್ತಾಪುರ – ರೇಡಿಯೋ ಸ್ಟೇಶನ್ ದಾಟಿದ ಮ್ಯಾಲ ಸಿಗತೈತಲ್ಲ – ಅಲ್ಲೆ ಸಕ್ಕರಿ ಶಂಕರಪ್ಪನವರು ಅಂತ; ಅವರ ಮಗಳು… ಮಿಸ್‌ ರತ್ನ ಅಂತ. ಬಿ.ಎ. ಕ್ಲಾಸಿನಾಗದೀನಿ, ಪರೀಕ್ಷೆ ಬಂತಲ್ಲ….

ಟ್ವೆಂಟಿ : ಸಕ್ಕರಿ ಶಂಕರಪ್ಪ? ಗೊತ್ತs ಇಲ್ಲ ಬಿಡಿರಿ.
(ರವಿಗೆ)

ಸಾಹೇಬರs ಸಿಗರೇಟ ಒಳೆ ಖಡಕ ಐತ್ರೆ. ಹೆಂಗೊಂದ ಪಾಕೀಟರಿ ಇದು?

ರವಿ : ಐದು ರೂಪಾಯಿ.

ಟ್ವೆಂಟಿ : ಅಲಲಲ! ಇಡೀ ಹಿಂದೂಸ್ತಾನದಾಗ ಇಂಥಾ ಸಿಗೇರಟ ಯಾರೂ ಸೇದಾಕ ಶಕ್ಯ ಇಲ್ಲ ಬಿಡರಿ. ಗಣೇಶ ಬೀಡಿ ಇದರ ಮುಂದ ಏನೇನೂ ಅಲ್ಲ.

(ಹದಿನೆಂಟು ಟ್ವೆಂಟಿಯನ್ನು ನೋಡವರು)

ಅಲ್ಲಲ್ಲ ಗಣೇಶ ಬೀಡಿಹಾಂಗ ಇದಲ್ಲ ತಗೀರಿ.

ಹದಿನೆಂಟ : ಏ ಟ್ವೆಂಟೀ ಬಾಯ್ಮುಚ್ಚೋ.
(ರವಿಗೆ)

ಅಲ್ರೆಪಾ ಮಿಸ್ಟರ್ ನಿಮ್ಮ ಹೆಸರೇನಂದರಿ?

ರವಿ : ಶಿವರಾಮಂತ.

ಹದಿನೆಂಟು : ಮಿಸ್ಟರ್ ಶಿವರಾಂ; ಏನೋ ಬಂದೀರಿ, ನಿಂತೀರಿ…. ಪಾಪ ನೀವೇನೂ ಅಂಥವರಲ್ಲಾ; ಅದು ಬ್ಯಾರಿ. ಆದರ ಇಷ್ಟ ಹೊತ್ತಿನಾಗ ಪಾರ್ಕಿನಾಗ ಅಡ್ಡಾಡಾಕ ಬಿಡಾಣಿಲ್ಲಂತ ಗೊತ್ತಿಲ್ರೆ ನಿಮಗ?

ರವಿ : ಆಫ್‌ ಕೋರ್ಸ್‌ ಹ….ಹ…. ನಾವೇನೂ ಅಂಥ ಹಲ್ಕಟ್ಟ ದಂಧೆ ಮಾಡಾಕ ಬಂದಿಲ್ವಲ್ಲ!

ಟ್ವೆಂಟಿ : ತಾವು ಹಲ್ಕಟ್ಟ ದಂಧೆ ಮಾಡಾವರು ಅಂತ ಯಾರೂ ಹೇಳಿಕೊಳ್ಳೋದಿಲ್ಲರಿ. ಹೋಗಲಿ ದಂಧೆ ಮಾಡಾವರಲ್ಲ ಅಂತೀರಿ. ಇಂಥಾ ಅಪರಾತ್ರ್ಯಾಗ ಬಂದೀರಿ. ಮಿಸ್ಟರ, ಮಿಸ್ಸಾ, ಕ್ಲಾಸಮೇಟಾ…. ಹಗಲಿ ಮಂದಿ ಇದ್ದಾಗ ನೀವs ಬಂದಿದ್ದರ ನಾ ಹಿಂಗನ್ನಾಕ ಬರತ್ತಿತ್ತ? ನೀವು ತಿಳಿದವರು, ಕಲಿತವರು, ನಾನ್ಹಾಂಗ ಧಡ್ಡರs? ನೀವs ಹೇಳ್ರಲ್ಲ – ಇಲ್ಲೊಂದ ಎಳೀ ಕುದರಿ ಮೇಯತಿತ್ತಂತ ತಿಳೀರಿ, ಆದರ ಬೆನ್ನ ಮ್ಯಾಗ ಆರೀದ ಹುಡಗೊಬ್ಬ ಕೈಯಾಡಸ್ತಿದ್ದರ….

ಶೋಭಾ : ಏ ಮಿಸ್ಟರ್, ನಾಲಿಗಿ ಬಿಗಿಹಿಡಿದ ಮಾತಾಡರಿ. ಅಡ್ಡಾಡಿಕೊಂಡ ಹೋಗಬೇಕಂತ ಬಂದಿವಿ. ಅದಕ್ಕ ಇಲ್ಲದ್ದೆಲ್ಲಾ ಹೊಂದಿಸಿದರ ಸಿಟ್ಟ ಬರತೈತಿ ನಮಗೂ. ನಿಮಗ್ಯಾರೂ ಅಕ್ಕ ತಂಗೇರಿಲ್ಲೇನ್ರಿ?

ಟ್ವೆಂಟಿ : ನನ್ನ ಅಕ್ಕತಂಗೇರ ಇಂಥಾ ಅಪವ್ಯಾಳಾದಾಗ ಹೀಂಗ ಒಬ್ಬ ಹುಡುಗನ ಜೋಡಿ ಬಂದಿದ್ದರ – ನೋಡವಾ ಹೆಣಮಗಳ – ಇಷ್ಟೊತ್ತ ಹಿಂತಾ ಮಾತ ಕೇಳಾಕ ಆಕಿ ಜೀವಂತ ಇರತಿರಲಿಲ್ಲ.

ಶೋಭಾ : ಅಂದರೇನು? ನಾನು ಇಲ್ಲಿ ಇವರ ಜೋಡಿ ಹಲ್ಕಟ್ಟಗಿರಿ ಮಾಡಾಕ ಬಂದೀನಿ ಅಂತೇನು?

ರವಿ : ಶೋಭಾ ಸುಮ್ಮನಿರತೀಯೋ ಇಲ್ಲೋ?

ಶೋಭಾ : ಮತ್ತ ಯಾಕಿವರು ಹಿಂಗೆಲ್ಲಾ ಮಾತಾಡಬೇಕರಿ?

ರವಿ : (ಟ್ವೆಂಟಿಯನ್ನು ಸಮಾಧಾನ ಮಾಡುತ್ತ) ಮಿಸ್ಟರ್ ನೋಡ್ರಿ….

ಟ್ವೆಂಟಿ : ನಿಮ್ಮನ್ನೇನ ನೋಡತಾರರೀ?

ರವಿ : (ಹದಿನೆಂಟನಿಗೆ)

ಸಾಹೇಬ್ರ ಕೇಳ್ರಿಲ್ಲೆ… ನನ್ನ ಮಾತು.
(ಹದಿನೆಂಟ ಸುಮ್ಮನೆ ಬೀಡಿ ಸೇದುತ್ತ ನಿಂತಿದ್ದಾನೆ)

ಟ್ವೆಂಟಿ : ಮತ್ತೇನ ಕೇಳತಾರರಿ? ಬಾಯಿಗಿ ಬಂದಿದ್ದ ಹಿಂದ ತಿರಗಸಾಕ ತಯಾರಿಲ್ಲ ಈ ಹೆಣ್ಣುಮಗಳು. ನಾ ಏನ್ರಿ ಅನ್ನಬಾರದ್ದ ಅಂದೆ? ಹೇಳ್ರಿ; ರಾತ್ರಿ ಹತ್ತ ಹೊಡೀತು. ಪಾರ್ಕಿನಾಗ ಒಂದ ಹುಳಾ ಇಲ್ಲ. ನಮ್ಮನ್ನ ಬಿಟ್ಟರ – ಕಾಲೇಜ ಹುಡಗಾ ಹುಡುಗಿ ಇಲ್ಲಿ ನಿಂತೀರಿ. ಯಾಕ ನಿಂತೀರಿ ಅಂದರ ಕೇಳಬಾರದ ಮಾತs ಇದು? ನಾಳೆ ಇಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರ ಯಾರ ಜವಾಬ್ದಾರಿ? ಹಿಂತಾ ಬೇಜವಾಬ್ದಾರೀ ಕೆಲಸ ಆಗಬಾರದಂತs ನಮ್ಮನಿಲ್ಲಿ ಇಟ್ಟಾರರೀ.

ಶೋಭಾ : ಹೌಂದ್ಹೌಂದು – ಈ ಜಗತ್ತೆಲ್ಲಾ ಬರೋಬರಿ ನೋಡಿಕೊಳ್ಳಪಾ ಅಂತ ದೇವರs ನಿಮ್ಮನ್ನ ನೇಮಸ್ಯಾನ.

ಟ್ವೆಂಟಿ : ಸ್ವಾರೀ ಮೇಡಂ ದೇವರಲ್ಲ, ಸರ್ಕಾರ ನೇಮಸ್ಯಾರ.

ರವಿ : ಶೋಭಾ, ಮಾತಿಗೆ ಮಾತ ಪೋಣಿಸಿ ಎಲ್ಲಿಗೆ ಮುಟ್ಟಬೇಕಂತಿ?
(ಹದಿನೆಂಟನ ಹತ್ತಿರ ಬಂದು)  

ಸಾಹೇಬರ ನೀವಾದರೂ ತಿಳಿಸಿ ಹೇಳ್ರಿ; ಉಪ್ಪಲ್ಲ ಹುಳೀ ಅಲ್ಲ ಬರೀ ಬಾಯಿ ಮಾಡಿದರ ಎದಕ್ಕ ಬಂತು? ನೀವು ಕೇಳಿದ್ದ ತಪ್ಪಲ್ಲ. ಕೇಳಿದ್ದಕ ಜವಾಬ ಕೊಡಾಕ ನಾ ಇದ್ದೀನಿಲ್ಲೆ. ಮನೆತನಸ್ಥ ಹೆಣ್ಣುಮಗಳು, ಪೋಲೀಸರ ಮಾತ ಕೇಳಿ ಖಾರ ಆಗಿರಬೇಕು. ನೀವು ತಿಳಿದವರು, ಲೋಕಾ ಬಲ್ಲವರು. ನಿಮಗೂ ಗೊತ್ತೈತಿ; ನಾವು ಹಲಕಟ್ಟ ಮಂದಿ ಅಲ್ಲಂತ.

ಹದಿನೆಂಟು : ಏ ಟ್ವೆಂಟೀ

ಟ್ವೆಂಟಿ : ನಾನೂ ಅದನ್ನ ಹೇಳ್ತೀನ್ರಿ ಕುಡುಗೋಲ ನುಂಗಬ್ಯಾಡ್ರಂತ.

ಹದಿನೆಂಟ: ಅಲ್ಲರಿ ಮಿಸ್ಟರ್, ನಾವು ಹೌದಂದರ ಅಲ್ಲಂತೀರಿ. ಅಲ್ಲಂದರ ಹೌದಂತೀರಿ. ಎಲ್ಲಾರೂ ಹೀಂಗ ಇರತಾರಂತಲ್ಲ. ಆದರ ದರವೊಂದ ಜಾತಿ ಒಳಗೂ ಹಾದರಕ್ಕ ಹುಟ್ಟಿದವರು ಇದ್ದs ಇರತಾರ. ಅಂಥವರ್ನ ಹಿಡೀಬೇಕಾದರ ನಾವಿಂಥಾ ಮಾತ ಕೇಳೇಬೇಕಾಗತೈತಿ. ಖರೆ ಅಂತೀರೋ, ಸುಳ್ಳಂತೀರೊ?

ರವಿ : ನನ್ನ ಮಾತ ನಂಬರಿ. ನಾವೇನೂ ನಿಮ್ಮ ಕಣ್ಣಾಗ ಮಣ್ಣ ತೂರಿಲ್ಲಾ….

ಹದಿನೆಂಟು : ನೀವಿಬ್ಬರೂ ಗಂಡಾ ಹೆಂತೀ ಏನು?

ರವಿ : ಅಲ್ಲ.

ಹದಿನೆಂಟು : ಹಂಗಾದರ ನೀವs ಹೇಳ್ರೆಪಾ: ಮನೆತನಸ್ತ ಹೆಣ್ಣು ಮಗಳಿಗೆ ಪಾರ್ಕಿನಾಗ, ರಾತ್ರಿವ್ಯಾಳ್ಯಾ, ಕಾಲೇಜು ಹುಡುಗನ ಜೋಡಿ, ಯಾರೂ ಇಲ್ಲದಲ್ಲಿ ಏನ ಕೆಲಸ? ಶಕೆ ಆಯ್ತು ಅನ್ನಬ್ಯಾಡ್ರಿ: ಇಡೀ ಊರಾಗ ನಿಮ್ಮಬ್ಬರಿಗೇ ಶಕೆ ಆಗಬೇಕ? ಸಪ್ತಾಪುರದಾಗ ಶಕೆ ಇತ್ತು ಅನ್ನಬ್ಯಾಡ್ರಿ: ಅಲ್ಲಿ ಇಲ್ಲಿಗೀಂತ ತಂಪೈತಿ ಅಂತ ಕೇಳೀನಿ. ನಾವಿಬ್ಬರೂ ಅಣ್ಣ ಬಸವಣ್ಣ, ಅಕ್ಕಮಹಾದೇವಿ ಅನ್ನಬ್ಯಾಡ್ರಿ: ಆಗಲೇ ನಿಮ್ಮ ಹೆಸರ ಹೇಳಿಕೊಂಡೀರಿ. ನಿಮ್ಮ ಹೆಸರು ಒಮ್ಮಿ ರಾಜೀವಂತೀರಿ ಇನ್ನೊಮ್ಮಿ ಶಿವರಾಮಂತೀರಿ. ಆ ಹೆಣಮಗಳೊಮ್ಮಿ ಮಿಸ್‌ ರತ್ನಾ ಇನ್ನೊಮ್ಮಿ ಬರೇ ಶೋಭಾ – ಹಿಂಗ್ಯಾಕ ಗಳಿಗ್ಗೊಮ್ಮಿ ಹೆಸರ ಬದಲಾಗತಾವ ಹೇಳ್ರಿ –

ಟ್ವೆಂಟಿ : ನಾ ಹೇಳ್ತೀನ್ರಿ: ಯಾಕಂದರ ಪಗಡೀ ಆಟದಾಗ ಯಾವ ಕಾಯಿ ಬಿಡತೀರಿ ಅದರ್ಹಾಂಗ ಮಸಡಿ ಮಾಡಿರಬೇಕಂತ ನೇಮ ಐತಿ.

ರವಿ : ನೋಡ್ರಿ ನಾವು ಎರಡೆರಡ ಹೆಸರ ಹೇಳಿದಿವಿ. ತಪ್ಪಾಯ್ತು. ಅದರಿಂದs ನಿಮಗ ತಿಳಿದರಬೇಕು: ನಾವು ಅಂಥಾ ದಂಧೆಯವರಲ್ಲಂತ.

ಟ್ವೆಂಟಿ : ಇದೆಲ್ಲಿ ಲೆಕ್ಕಾಚಾರಪಾ! ಇವರು ಸುಳ್ಳ ಸುಳ್ಳ ಹೆಸರ ಹೇಳತಾರಂತ, ನಾವು ಇವರಿಗೆ ಹರಿಶ್ಚಂದ್ರಾs ಅನ್ನಬೇಕಂತ!

ರವಿ : ಛೇ, ಛೇ, ಎಲ್ಲೀದೆಲ್ಲಿಗೆ ಒಯ್ತೀರಿ?

ಟ್ವೆಂಟಿ : ನಿಮ್ಮ ಮಾತು ಬಿಟ್ಟ ಒಂದು ಹೆಜ್ಜೀನಾದರೂ ಹಿಂದ ಮುಂದ ಹೋಗೇನೇನು?

ರವಿ : ನಿಮಗ ಹೆಂಗ ತಿಳಿಸಿ ಹೇಳ್ಲಿ?

ಟ್ವೆಂಟಿ : ಅದನ್ನs ಕೇಳ್ತೀನ್ರಿ:- ತಿಳಸಬಾರದಂಥಾ ಗದ್ದಲ ಏನೈತಿ? ಬಿಚ್ಚರಿ ಗಂಟು.

ರವಿ : (ತಕ್ಷಣ ಯೋಚನೆ ಮಾಡಿ ಕಿಸೆಯಿಂದ ದುಡ್ಡು ತೆಗೆದು)

ಸಾಹೇಬರs ಈ ಹತ್ತ ರೂಪಾಯಿ ತಗೊಂಡ ನಮ್ಮ ಉಸಾಬಾರಿ ಬಿಟ್ಟುಬಿಡರಿ.
(ಕೊಡ ಹೋಗುವನು)

ಹದಿನೆಂಟು : ಲಂಚಾ ಕೊಡಾಕ ಬಂದೀರೇನ್ರಿ?

ಟ್ವೆಂಟಿ : ನಮ್ಮ ಸಾಹೇಬರ ಕಡೆ ಬೆರಳಮಾಡಿ ತೋರಸೋ ಮಗ ಇಡೀ ಜಿಲ್ಲಾದಾಗ ಇನ್ನs ಹುಟ್ಟಿಲ್ಲ. ಅವರಗಿ ಲಂಚಾ ಕೊಡಾಕ ಬಂದಿರೇನ್ರಿ?

ರವಿ : ಲಂಚ ಅಲ್ಲರಿ ಇದು.

ಟ್ವೆಂಟಿ : ಅದರಪ್ಪ!