ಗೀತಾ : ಗಲ್ಲಾ?

ನಾಣಿ : ಹಾಂ ಗಲ್ಲಾ (ತೋರಿಸಿ) ಇಲ್ಲೆ. ದಾಡೀ ಮಾಡ್ಕೋವಾಗ ಈಗಲೂ ಅಲ್ಲಿ ನೋಯತದ. ಕಡಿದಿದ್ದಾ ಏನಾಗೆತೆಲೇ ಗೌಡ ಗಲ್ಲಕ? ಅಂತ ಮಾಸ್ತರ ಜಬರಿಸಿದರು. ಎಡವಿಬಿದ್ದ ಕಟಿಗಿ ಚುಚ್ಚೇತಿರಿ ಮಾಸ್ತರ ಅಂತೇಳಿ ಪಾರಾಗಬೇಕಾದರ ರಗಡ ಗಮ್ಮಾತ, ನಾ ನಾನ್ಯಾನ ಹೆಸರ ಹೇಳತೇನಂತ ಅವ ತಿಳಕೊಂಡಿದ್ದಾ. ನಾ ಹೇಳ್ಲಿಲ್ಲಾ. ಅವಗ ಒಳ್ಳೆ ಖುಷಿ ಆಗಿ ಮ್ಯಾಲಿಂದ ಮ್ಯಾಲ ಹೊಳೀಗಿ ಜಳಕಕ್ಕ ಕರಕಂಡ್ಹೋಗಿ ಮಜಾ ಮಾಡುತ್ತಿದ್ದ.

ಗೀತಾ : ಹೂ ಪೂರಾ ತಿಳೀತೀಗ. ಈಗ ಕರಕೊಂಡ ಹೋಗತಾನಿಲ್ಲೊ?

ನಾಣಿ : ಆ ಮ್ಯಾಲ ಮುಲ್ಕಿ ಪರೀಕ್ಷೆ ಆಗಿ ಅಗಲಿದ ಮ್ಯಾಲ ಅವಾ ನಾನು ಕೂಡೇ ಇಲ್ಲ.

ಗೀತಾ : ಇಲ್ಲೇ ಪಕ್ಕದ ಮನ್ಯಾಗ ಇದ್ದಾನಂತೀ ಕೂಡಿಲ್ಲಾ?

ನಾಣಿ : ಆ ರಂಡೇರ ಅವನ್ನ ಬಿಡಾಣಿಲ್ಲ ಹುಚ್ಚಿ. ನೋಡಿದಿಲ್ಲೋ, ಧೋ ಧೋ ಜೋಗ ದಬದಬಿ ಹಾಂಗ ಬೋರ್ಯಾಡತಾರ

ಗೀತಾ : ಅವ ನಿನ್ನ ಗೆಣ್ಯಾ ಹೌದಲ್ಲ?

ಭೀಮ್ಯಾ : ಗೆಣ್ಯಾರ ಅಂದರ ಲಂಗೋಟೀ ಗಣೀತನಾನ್ರಿ ಮತ್ತ, ನಾ ಸ್ವಥಾ ನೋಡಿದೇ ನಲ್ಲಾ: ಒಂದರಾಗ ಯಾಡ್ಡಿದ್ಧಾಂಗ ಇದ್ದರ ಬಿಡ್ರಿ. ಇಬ್ಬರೂ ಒಂದs ಬಾಯಾಲೆ ಉಂಡ ಒಂದs ಮುಖಳೀಲೇ ಹೇತವರಂದರ.

ಗೀತಾ : ನೀನೂ ಇವರ ಜೋಡಿ ಈಸ್ಯಾಡ್ಯಾಕ ಹೋಗತಿದ್ದಿ?

ಭೀಮ್ಯಾ : ಯಾವಾಗರ ಒಮ್ಮೊಮ್ಮಿ. ಇಬ್ಬರೂ ಅಗಲಿದ ಮ್ಯಾಲ ನನಗ ಈಸ ಕಲಿಸಬೇಕಂತ ನಮ್ಮ ಸಾಹೇಬರ ರಗಡ ಖಟಪಟಿ ಮಾಡದರ ಖರೆ, ನನ್ನ ಕೈಯ ಹೊಳ್ಳಲಿಲ್ಲಿ, ಒಮ್ಮೊಮ್ಮೆ ಮರತ ನನಗs ನಾನೂ ಅಂತ ಕರೀತಾರ್ರಿ. ನಾಣಿ : ಆ ದಡ್ಡ ನನಮಗನ ಮಾತೇನ ಕೇಳ್ತೀನ?

ಗೀತಾ : ತಾತ್ಪರ್ಯ, ನಾ ನಿನಗ ನಾನೂ ಅನ್ನಬೇಕ ಹೌದಲ್ಲೊ?

ನಾಣಿ : ಹೂಂ ಹೂಂ.

ಗೀತಾ : ನನಗ ನೀ ಸುಧಾ ಅಂತಿ.

ನಾಣಿ : ಹೂ ಹೂ.

ಗೀತಾ : ಆ ಮ್ಯಾಲ ನೀ ನನಗ ನಾನೂ ಅಂತೀ.

ನಾಣಿ : ಹೌದ್ಹೌದ. ಹೌದಂದೇನ ಹುಡುಗೀ.

ಗೀತಾ : ಆ ಮ್ಯಾಲ ನಾನೂ ನಾನು, ನೀನು ನಾನು.

ನಾಣಿ : ಆಹಾ ಸುಧಾ ಸುಧಾ.
(ಗೆಲುವಿನಿಂದ ಎದೆ ಮುಟ್ಟಿಕೊಂಡು ರಂಗದ ತುಂಬ ಓಡಿಯಾಡಿ ಭೀಮ್ಯಾನ ಹತ್ತಿರ ಬಂದು)

ಭೀಮ್ಯಾ ಭೀಮ್ಯಾ ಕೇಳಿದೇನೋ ಮಗನ? ನಾ ಹೇಳಿದ್ದಿಲ್ಲಾ, ಈಕಿ ಒಳಗ ಕನಿಷ್ಟ ಯೋಳ ಕೊಪ್ಪರಗಿ ಹೊನ್ನ ತುಂಬೇತಿ ಹೆಡಿ ಆಡಿಸಿ ಅದನ್ನ ಕಾಯತಾಳಂತ.

ಭೀಮ್ಯಾ : ಸಾಬರ, ಕೊಪ್ಪರಿಗಿ ಮುಚ್ಚಳಾ ಸಾವಕಾಶ ತಗೀರಿ, ಆ ಬಿಕನೇಸಿ ಪೋಲೀಸೊಬ್ಬ ಇಲ್ಲೆ ನಿಂತಾನ.

ನಾಣಿ : ಹೇಳು ಸುಧಾ, ನಾನೂ ನಾನು. ನೀನೂ ನಾನು.

ಆ ಮ್ಯಾಲ-

ಗೀತಾ : ನಾಣೀ ಮುಂಬೈದಾಗ ನಾನೂ ಅಂತ ಯಾರಿಗಂತಾರ ಗೊತ್ತದನ?

ನಾಣಿ : ಯಾರಿಗಿ?

ಗೀತಾ : ಪೌನೇ ಆಠಗ.

ನಾಣಿ : ಏನಂದಿ?

ಗೀತಾ : ಅವ ಏನ ಮಾಡತಾನ ಗೊತ್ತಾ?

ಭೀಮ್ಯಾ : ಅವ್ವಗೋಳ ಏನ ಮಾಡತಾನ್ರಿ?

ಗೀತಾ : ಪಡ್ಲಿಗಿ ಹೊತ್ತಕೊಂಡ ಜೋಗಾಡತಾನ.

ಭೀಮ್ಯಾ : ಅಡ! ಯಾಕೋ ಜೋಗವ್ವ ಇನ್ನೂಬರ್ಲಿಲ್ಲಲ್ಲ.

ನಾಣಿ : ನಾ ಹೇಳಿದ್ದ ಅದಲ್ಲಂದರ.

ಗೀತಾ : ಇನ್ನೇನ ಹೇಳಿದಿ ಹೇಳು?

ನಾಣಿ : ಹೆಂಗೂ ಹೊರಗ ನಿನ್ನ ಗಂಡ ನಿಂತಾನ ಅಲ್ಲೀತನಕ ನಿನ್ನ ಕಣ್ಣೀರ ಒರಸಲೇನಂತ.

ಗೀತಾ : (ದುಃಖದಿಂದ)

ಏನ ತಿಳಿದ ಎಲ್ಲಿಗೆ ಬಂದೆ? ಕಾಲೇಜಿನಾಗಿದ್ದಾಗ ಗೀತಾ ಗೀತಾ ಅಂತ ಹಲಬಿದಿ. ಆದರ ನಿನ್ನs ಮದಿವ್ಯಾಗಬೇಕಂತ ಡಬಲ್‌ ಗಾದೀ ದರಾ ಕೇಳಿ ಬಂದಿದ್ದೆ. ನನ್ನ ಯಜಮಾನರನ್ನ ಮದಿವ್ಯಾಗೋವಾಗ ಒಲ್ಲೆ ಅಂತ ಹಟ ಹಿಡಿದೆ. ಅತ್ತೆ ಕರದೆ, ಮಾಡಿಕೊಳ್ಳು ಚಲುವ ಬಂದು, ಒಂದು ಮಾತು ಕೇಳಲಿ ಅಂತ ತಾಯಿ ಹೇಳಿತು. ನೀ ಎಲ್ಲಿ ಸಿಗತಿ? ಆಗೋದೆಲ್ಲಾ ಚೆಲೋದಕ ಆಗತದಂತ, ಮತ್ತ ಆಕೀನ ನೋವಿಗಷ್ಟ ಮದ್ಹಾಕಿ ಕಟ್ಟಿದಳು. ಹೋಯಿತಂತ ಕೈ ತೊಳಕೊಂಡರ ಮತ್ತ ಉರಕೋತ ಬಂದಿ. ಹೋದ ಬಂದಲ್ಲೆಲ್ಲಾ ಬೆನ್ನ ಹತ್ತಿ ಕದ್ದ ಕದ್ದ ಕಾಗದಾ ಕೊಟ್ಟ ಹೋದಿ. ನೋವ ಹೆಚ್ಚಾಗಿ ಹಾಸಿಗೆಲ್ಲಾ ಹೊರಳ್ಯಾಡಿ, ಗಾದಿ ಸಾಲಾಣಿಲ್ಲಾ ಇನ್ನೊಂದ ತರಸರೀ ಅಂತ ಗಂಡಗ ತಕರಾರು ಕೊಟ್ಟೆ. ನಿನ್ನ ಹೆಸರಿನಿಂದ ಕಾಡಿಗೀ ಹಚ್ಚಿದ್ದೇನು, ತುರಬಾ ಬಿಚ್ಚಿ ಬಿಚ್ಚಿ ಕಟ್ಟಿದ್ದೇನು. ಉಬ್ಬುಬ್ಬಿ ಎದೀ ಅಳತಿ ಮಾಡಿಕೊಂಡದ್ದೇನು! ಕುದರಿ ಹತ್ತೋ ಮದುಮಗಳ್ಹಾಂಗ ಹೂ ಮುಡದದ್ದೇನು, ಒಂದು ದಿನ ನೀರಡಕಿ ಜಾಸ್ತಿ ಆಗಿ ಧೈರ್ಯ ಮಾಡಿ ಸುಳ್ಳ ಹೇಳಿ ನಿನ್ನ ಅದ್ದೂರಿ ನೋಡಾಕ ಬಂದ್ರ- ನೀ ಬಿಸಲಗುದುರಿ:
(ಕಣ್ಣ ಹನಿ ಒರಿಸಿಕೊಂಡು) ನಾ ಹೋಗಬೇಕಿಗ (ಏಳುವಳು)

ಭೀಮ್ಯಾ : ಸಾಹೇಬರ, ಇನ್ನೂ ಆ ಪೋಲೀಸ ಹಾಂಗ ನಿಂತಾನ್ರಿ.

ಗೀತಾ : ಎಚ್ಚರಿದ್ದಾರ ಅನ್ನೊದಕ್ಕೆ ಸಾಕಷ್ಟಾಯ್ತು.

ನಾಣಿ : ಹೋಗೋದ ಹೋಗ್ತಿ. ಕಡೀಸಲ ನನ್ನ ಕಡೆ ನೋಡಬಾರದ ಸುಧಾ

ಗೀತಾ : ಅದೆಲ್ಲಾ ನಂಗೊತ್ತಿಲ್ಲ.

ನಾಣಿ : ದಯಮಾಡಿ ಸುಧಾ, ಒಂದ ನಿಮಿಷ, ಸ್ವಲ್ಪ ಕಣ್ಣ ತೆರೆದ ಈ ಕಡೆ ನೋಡು.
(ಹೋಗಿ ಅವಳ ಭುಜ ಹಿಡಿದು ಕುರ್ಚಿಯಲ್ಲಿ ಕೂಡಿಸಿ ಅವಳ ಮುಖವನ್ನು ತನ್ನ ಕಣ್ಣೆದುರಿಗೆ ತರುತ್ತಾನೆ)

ಗೀತಾ : ಅಬ್ಬಬ್ಬ, ಇದ್ತುಂಬಾ ಆಯ್ತ.

ನಾಣಿ : ದಯಮಾಡಿ ಸುಧಾ.

ಗೀತಾ : ಕಣ್ಣಗ ಬೆರಳ ಚುಚ್ಚೀತಂದರ?

ನಾಣಿ : ಸುಧಾ ಕೈ ಮುಗೀತೇನೆ, ಕಣ್ಣತಗೀ.

ಗೀತಾ : ಇನ್ನೇನ ದುರಗವ್ವನಾಂಗ ಕಣ್ಣ ಕಿಸೀಬೇಕೇನ?

ನಾಣಿ : ನನ್ನ ಕಡೆ.

ಗೀತಾ : ಮತ್ತ ಯಾರ ಕಡೆ ನೋಡ್ತಾ ಇದ್ದೇನೀಗ?

ನಾಣಿ : ರೆಪ್ಪಿ ಬಡೀಬ್ಯಾಡ.

ಗೀತಾ : ರೆಪ್ಪಿ ಬಡೀದ ಹೆಂಗಿರೋದಿನ್ನ?

ನಾಣಿ : ಒಂದು ನಿಮಿಷ.

ಗೀತಾ : ಕಣ್ಣ ಕೀಳಬೇಕಂತೀಯೇನ?

ನಾಣಿ : ಕಾಲ ಬೀಳತೇನ ಸುಧಾ.

ಭೀಮ್ಯಾ : ಸಾಹೇಬರ ಚಿನ್ನಾ ಬೆಳ್ಳೀ ನಿಮಗ ಎತ್ತಲಿಕ್ಕೆ ಆಗದಿದ್ದರ ಕರೀರಿ ಇಲ್ಲೆ ಕುಂತಿರತೇನ.

ಗೀತಾ : ಸಾಕಾತ್ತನಗ.
(ಏಳುವಳು. ನಾಣಿ ಅಂಗಲಾಚಿ ಅವಳ ಕಾಲು ಹಿಡಿಯುತ್ತಲೂ ಗೀತಾ ಬೇಸತ್ತು ಕೂತು ಅವನು ಹೇಳಿದಂತೆ ಅವನು ಮುಖಕ್ಕೆ ಮುಖ ತಂದು, ಕಣ್ಣು ಕಿಸಿದು ನೋಡುತ್ತಿರುವಂತೆ ಧ್ವನಿಗಳು ನರಳಲಾರಂಭಿಸುತ್ತವೆ. ಗೀತಾ ಹೆದರಿ ಹಿಂದೆ ಸರಿಯಬೇಕೆನ್ನುವಷ್ಟರಲ್ಲಿ ಅವಳ ಮುಖವನ್ನ ಗಪ್ಪನೆ ಎರಡೂ ಕೈಯಿಂದ ಹಿಡಿದುಕೊಂಡು ಜಗ್ಗಿ ನೋಡಲಾರಂಭಿಸುವನು. ನೋಡನೋಡುತ್ತಿರುವಂತೆ ಧ್ವನಿಗಳು ಕರುಚಲಾರಂಭಿಸುತ್ತವೆ. ಬರಬರತ್ತ ನಾಣಿಯ ಮುಖ ಗಂಭೀರವಾಗಿ ಕ್ರೂರವಾಗಿ ಅವಳ ಮುಖವನ್ನು ದೇಹದಿಂದ ಕೀಳುವಂತೆ ಎಳೆಯತೊಡಗುತ್ತಾನೆ. ಗೀತಾ ಕುರ್ಚಿಯಿಂದ ಕೆಳಬಿದ್ದು ಅಯ್ಯೋ ಅಯ್ಯೋ ಎಂದು ಚೀರಿದಾಗ ಧ್ವನಿಗಳ ಚೀರುವಿಕೆಯೊಂದಿಗೆ ಬೆರೆಯುತ್ತದೆ. ಗೀತಾ ನಿಸ್ಸಹಾಯಕಳಾಗಿ ಕೈ ಮುಖ ಪರಚಿದರೂ ಕಡೆಗೆ ಅವಳನ್ನು ಬಿಟ್ಟೊಡನೆ ಧ್ವನಿಗಳ ಚೀರುವಿಕೆ ಒಮ್ಮೆಲೆ ಇಲ್ಲವಾಗಿ ಗೀತಾ ನರಳುವದು ಮಾತ್ರ ಕೇಳುತ್ತದೆ. ಅವಳು ಎದ್ದು ಸೀರೇ ಸರಿಪಡಿಸಿಕೊಳ್ಳುತ್ತ)

ಗೀತಾ : (ಅಳುತ್ತ ಚೀರುತ್ತ) ಗಂಡಿಗ್ಯಾ ಭ್ಯಾಡ್ಯಾ. ನನ್ನ ಗಂಡಗ ಹೇಳಿ ಹೆಂಗ ಮಾಡಸ್ತೇನ. ನಿನ್ನ ಚರ್ಮ ಸುಲಿಸಿ ಚಪ್ಪಲಿ ಮಾಡಿಸದಿದ್ದರ ನನ್ನ್ಹೆಸರ ಗೀತಾ ಅಲ್ಲಂತ ತಿಳೀಯೊ.

ನಾಣೀ : ಶನೀ

ಭೀಮ್ಯಾ :  ಓ ಸಾಹೇಬರ.

ನಾಣಿ :  ಹೆಣಾ ಹೊತ್ತಹಾಕಬಾ.

ಗೀತಾ :  ಹೆಣ್ಣ ಹೆಂಗಸಿನ ಮ್ಯಾಲ ಕೈ ಮಾಡಿ ಭಾಳ ಪುಂಡತನ ಮೆರದೀ ನೀ. ನಿನ್ನ… ನಿನ್ನ… ಎಲ್ಲಿ ಅದಾರವರ?
(ಹೊರಡುವಳು. ಭೀಮ್ಯಾ ಅಡ್ಡಬಂದು ಅವಳ ಕೈ ಹಿಡಿಯುವನು)

ಭೀಮ್ಯಾ : ಬಾಯ್ಮಚ್ಚ ಭೋಸಡೆ.

ಗೀತಾ : (ಕೊಸರಿಕೊಳ್ಳುತ್ತ) ಬೋಸಡೆ?

ಭೀಮ್ಯಾ : ರಂಡೆ, ಹಾದರಗಿತ್ತೆ.

ಗೀತಾ : ಎವ್ವಾ ಎಪ್ಪಾ ಯಾರರೇ ಬಿಡಸಬರ್ಯೋ. ಗಂಡಸಾದರ ಅಪ್ಪಾ ಅಂತೇನು ಹೆಂಗಸಾದರ ಅವ್ವಾ ಅಂತೇನು ಬರ್ರ್ಯೋ.
(ಚೀರುತ್ತ ಕೈ ಬಿಡಿಸಿಕೊಂಡು ರಂಗದ ತುಂಬ ಓಡಾಡುವಳು. ಹೋದ ಹೋದಲ್ಲೆಲ್ಲ ನಾಣಿ ಇಲ್ಲವೆ ಭೀಮ್ಯಾ ಅವಳಿಗೆ ಅಡ್ಡ ಬಂದು ಬಲೆಯ ಪ್ರಾಣಿಯ ಹಾಗೆ ಅವಳು ಸಂಕಟಪಡುವುದನ್ನು ನೋಡಿ ಸಂತೋಷಪಡುತ್ತಾರೆ. ಆಮೇಲೆ ಅವಳನ್ನು ಹಿಡಿದು ಭೀಮ್ಯಾ ಕೆನ್ನೆಗೆ ಎರಡೇಟು ಬಿಗಿದು)

ಭೀಮ್ಯಾ : ನೀ ಎಷ್ಟು ಚೀರಿದರೂ ಯಾರೂ ಬರೋದಿಲ್ಲನ್ನೋದ ಖಾತ್ರಿ ಆತಿಲ್ಲ?
(ಚೀರುತ್ತಿದ್ದರೂ ಅವಳ ಬಾಯಿಗೆ ಬಟ್ಟೆ ಕಟ್ಟಿ ಕೈ ಹಿಂದಕ್ಕೆ ಕಟ್ಟಿ ಕುರ್ಚಿಯಲ್ಲಿ ನೂಕುವರು. ಗೀತಾ ನರಳುತ್ತ ಬುಸುಗುಡತ್ತ ಇರುವಾಗ)

ಭೀಮ್ಯಾ : ನಾ ನಿನ್ನ ಗಂಡಂತ ತಿಳಕೊ.

ನಾಣಿ : ನಾ ನಿನ್ನ ಅತ್ತೆಂತ ತಿಳಕೊ.
(ನಾಣಿ ಮುದುಕಿಯರು ಕೂಡ್ರುವಂತೆ ಕೈ ಮೇಲೆ ಕೆನ್ನೆಯನ್ನೂರಿ ಕೂರುವನು. ಇಬ್ಬರೂ ಈಗ ಧ್ವನಿ ಬದಲಿಸಿ ಮಾತನಾಡುತ್ತಾರೆ)

ಭೀಮಾ : (ಇಲ್ಲದ ಮೀಸಿ ತಿದ್ದುತ್ತ)

ಅಲ್ಲವೇ ಹಿಂಗ ಹೋಗಿ ಹಾಂಗ ಬರತೇನಂತ ಆ ನಾನ್ಯಾನ ಬುಡುಕ ಬೀಳಾಕ ಹೋಗಿದ್ದಿ?

ನಾಣಿ : ನನ್ನ ಮಗನs ಆ ಬಿದ್ದಾಡಿ ಮನಿತನಕ ಬಟ್ಟಾ ಹಚ್ಚಿದಳೋ. ನೀ ಹೆಂತಾದೊ ಊರ ಪೋಲೀಸಂತ ಭಾಡ್ಯಾ ಸ್ವಂತ ಮನೀದ ಬಿಟ್ಟ ಊರಗಾರಿಕಿ ಆಗ ಹೋಗೆಲ್ಲಾ ಅಳದ ಸುರೀತಿ.

ಭೀಮ್ಯಾ : ನೀ ಒಮ್ಮೆರೆ ಹಿಂತಾ ಮಾತ ಹೀಗಂತ ಹೇಳಿದಿ?

ನಾಣಿ : ಲಡದೂ, ಮದಿವ್ಯಾದಾಗಿಂದ ನೀ ಎಚ್ಚರೆಲ್ಲಿ ಅದಿ? ಆಕಳಿಸಿಕೋಂತ ಬರತೀ. ನಿದ್ದಿಗಣ್ಣಾಗ ಹೊಂಟೆದ್ದ ಹೋಗತಿ. ಬೆಳೆದ ಗಂಡಸಾಗಿ, ಹೆಂಗಾ, ಏನಾ ಕೇಳಿದಿ? ಈ ಹಲಮಾಲಿ ಹಾ ಅನ್ನದೊರಳಗ ಬೆದೀಗಿ ಬಂದ ಕೋಳಿ- ಯೋಳ ಓಣಿ ಹಾರ್ಯಾಡಿ ಬರತಾಳ. ಮದಿವ್ಯಾಗೋವಾಗ ನನ್ನ ಮಗನ ಎಟ್ಟಂದರೂ ಕಾಲಿಸಿ ಕಟ್ಟಿ ಏರಿದಾಕಿ. ಇದ ನೀ ಹತ್ತೂ ಕುದರಿ ಅಲ್ಲಂದರ ಜೋಡ ಹೆಣಾಲಕ ಮುಳ್ಳಾಗಿ- ಮದಿವ್ಯಾದಿ, ಕಾಲೀಜ ಹುಡುಗೋರೆಲ್ಲಾ ಮಲ್ಲಿಗಿ ಮಾಲೀತಂದ ತಂದ ಹಿಂದ ಹಿತ್ತಲದಾಗ ದೊಡ್ಡ ಅಡೀ ಬಿದ್ದೈತಿ, ಹರೇದ ಹುಡುಗಾಗಿ ಮನೀ ಹೇಂತಿ, ದಿನಾ ನಿನಗ ಕೈ ಕೊಡತಾಳೋ ಕಾಲ್ಕೊಡ್ತಾಳೋ ತಳೀಬ್ಯಾಡ?

ಭೀಮ್ಯಾ : ಹೌಂದೇನ?

ನಾಣಿ : ಆಕಿನೇನ ಕೇಳ್ತಿ? ಹೇಳವಾಕಿ ನಾ ಮನಿಶಾಳಲ್ಲಾ? ಹೆಣಾಲ ಹಿಡಕೊಂಡ ಮಾವಾ ಅಂದರ ಸಾಕ್ನಿನಗ- ಈ ಹುಚಮಾವ ಹಾರಲಿ ಗಗನಕೆ ನಮ್ಮ ಧ್ವಜಾ ಅಂತ ಬಾಯ್ತಗೀತಿ.

ಭೀಮ್ಯಾ : ಹೂ, ಬಂದ ಮಾಡ ನಿನ್ನ ಬೀಸೂಕಲ್ಲ. ಈಗ ನನಗೇನ ಮಾಡಂದಿ?

ನಾಣಿ : ಅದನೂ ನಾನ ಹೇಳಬೇಕನ? ಮೋತಿಗಿ ಮಸೀ ಹುಚ್ಚು. ನೆಲಬಾವರದಾಗ ಚೆಲ್ಲಿ ಬಾ. ಬುದ್ಧಿ ಬರಲಿ.

ಭೀಮ್ಯಾ : ನೆಲಬಾವರದಾಗ?

ನಾಣಿ : ಮತ್ತೆಲ್ಲಿ ಹೋಗಿ ಮುನಸಿ ಪ್ಯಾಟ್ಯಾಗ ಇಡು. ಹುಡಗೋರದಾಯ್ತು ಇನ್ನು ಊರ ಗಂಡಸರದಷ್ಟ ಮಂಡಾಗಲಿ. ಪಕ್ಕಾ ಕಿತ್ತ ಮಸಾಲೀ ಹಾಕಿ ಸಿವಿಮಾಡಿ ತಿನ್ನೋದ ಬಿಟ್ಟೀದಿ. ನೀ ತಗೋ, ನೀ ತಗೋ ಅಂತ ಊರ ತುಂಬ ತಿರಗತಿ. ನಿನ್ನ ಕೈಲಿ ಆಗದಿದ್ದರ ತತಾ ಇಲ್ಲಿ.
(ಎದ್ದು ಗೀತಾಳನ್ನು ಹೊತ್ತುಕೊಂಡು ರಂಗದ ಹಿಂಭಾಗಕ್ಕೆ ಕತ್ತಲಿರುವಲ್ಲಿಗೆ ಸ್ತ್ರೀಯರ ನೆರಳುಗಳ ಚಲನವಲನವಿರುವಲ್ಲಿಗೆ ಒಯ್ಯುತ್ತಾನೆ. ಅವಳೂ ನೆರಳಾಗುತ್ತಾಳೆ. ಇಳಿಸಿ ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕೂತಾಗ ನೆರಳುಗಳೆಲ್ಲ ಅವನ ಸುತ್ತ ಹೊಕ್ಕಳಿನ ಮೇಲೆ ತಮ್ಮ ತಲೆಗೂದಲನ್ನು ಆಡಿಸತೊಡಗುತ್ತವೆ. ಬಹಳ ಸಣ್ಣಾಗಿ ನರಳುವಿಕೆಯೂ ಕೇಳಿಸುತ್ತದೆ. ಇತ್ತ ಬೆಳಕಿನ ಭಾಗದಲ್ಲಿ ಭೀಮ್ಯಾ ಸ್ಟೂಲಿನ ಮೇಲೆ ಮತ್ತೆ ಕೈ ಕಟ್ಟಿ ಕುಳಿತುಕೊಳ್ಳುತ್ತಿರುವಂತೆ ಬಾಗಿಲ ಕಡೆಯಿಂದ ರಂಗದ ಮೇಲೆ ಬಂಡಾರ ಹಾರುತ್ತದೆ. ಭೀಮ್ಯಾ ಹಾಗೆ ನೋಡುತ್ತ ಕುಳಿತಾಗ ಇನ್ನೊಮ್ಮೆ ಹಾರುತ್ತದೆ. ಎದ್ದು ಬಂದು ಬಾಗಿಲಲ್ಲಿ ನೋಡುತ್ತಿರುವಂತೆ ಇನ್ನೊಮ್ಮೆ ಬಂಡಾರ ಹಾರಿ, ಯಾಕುಂದ ಜೋಗಬಾಎಂದು ಪಡ್ಲಿಗಿ ಹೊತ್ತ, ಕೈಯಲ್ಲಿ ದೀವಟಿಗೆ ಹಿಡಿದ ಕೊರಳ ಬಂಡಾರ ಚೀಲದ ಜೋಗತಿ ಹಾಜರಾಗುತ್ತಾಳೆ. ಭೀಮ್ಯಾಬಾರವಾ ಜೋಗವ್ವಾ ಎಷ್ಟ ಹಾದೀ ಕಾಯಬೇಕ, ಬಗತರನ ಮರೀಬ್ಯಾಡ್ವಾ ಅಂದ್ನಿಎಂದು ಹೇಳುತ್ತ ಅವಳ ಕೈಯ ದೀವಟಿಗೆ ಇಸಿದುಕೊಂಡು ಒಂದು ಮೂಲಿಗೆ ಚುಚ್ಚುತ್ತಾನೆ. ಅಷ್ಟರಲ್ಲಿ ಜೋಗತಿ ಪಡ್ಲಿಗಿಯನ್ನು ಸ್ಟೂಲಿನ ಮೇಲಿಟ್ಟು ನಿವಳ ಒಯ್ಯಾರ ಮಾಡುತ್ತ ನಿರಿಗೆ ಹೊಡೆದು ಕೂಡ್ರುತ್ತಾಳೆ. ಭೀಮ್ಯಾ ದೇವರಿಗೆ ನಮಸ್ಕರಿಸಿ ಜೋಗತಿಯ ಅನತಿ ದೂರದಲ್ಲಿ ಕೂಡ್ರುತ್ತ )

ಭೀಮ್ಯಾ : ಭಗತರನ್ನ ಮರೀಬ್ಯಾಡವಾ ಅಂದ್ನಿ.

ಜೋಗತಿ : (ಉಟ್ಟರದಲ್ಲಿಯ ಸಣ್ಣ ಅತ್ತರೆಣ್ಣಿ ಬಾಟ್ಲಿ ತೆಗೆದು ಮೈಗೆ ಹಚ್ಚಿಕೊಳ್ಳುತ್ತ) ಬೇಬರಿಸಿ ಇದೇನ ಪ್ಯಾಟಿ ಅವ್ವಾ ಅನ್ಯಾಕ?

ಭೀಮ್ಯಾ : ಎಲೀ ಇದರ.

ಜೋಗತಿ : ಅಯ್ಯ ನೋಡಿ ಕಣ್ಣ ಕಿಸ್ಯಾಕ ಕರಕೊಂಬಂದೇನ?

ಭೀಮ್ಯಾ : ಛೇ ಹೋಗೊ ನಿನ, ನಿಂದೂ ಘನ ಕೆಟ್ಟ ದರಾನ.

ಜೋಗತಿ : ಗಂಡಸ ತೂಗಿ ಮಾತಾಡ. ಮಲಗಿ ಎದ್ದ ಮ್ಯಾಲ ಎಂಟ ದಿನಾ ಮೈ ನಾರಿದರ ರೊಕ್ಕ ಕೊಡ.

ಭೀಮ್ಯಾ : ಕೊಳೆತ?

ಜೋಗತಿ : ಯಾಕಲಾ ಲಡುದು? ನನ್ನ ಚಪ್ಪಲಿ ಬಟ್ಲಾಗ ಎದ್ದೆದ್ದಿ ದೊಡ್ಡ ದೊಡ್ಡ ಮಂದಿ ಸರೇ ಕುಡೀತಾರೂ. ಕುರಸಾಲ್ಯಾ ಬಂದ ಕೊಳತ ನಾರತತಿ ಅಂತಿ.

ಭೀಮ್ಯಾ : ಇದ ಒಳೆ ಹುದಲಾ ಬಿತ್ತಲೆ.

ಜೋಗತಿ : ಅದಕ್ಕ ಹಿರೇರ ಹೇಳತಾರ: ಕಿಸಗಣ್ಣಲೆ ಹೊಳಿ ಹಾರಬಾರದಂತ.

ಭೀಮ್ಯಾ : (ಚಪ್ಪನೆ ನೆಲ ಬಡಿದು)

ಹಾ ನನಗೀಗ ನೆನಪಾತ ನೋಡ. ನಾ ಮರಿವಿನಾವನ್ನೋದ.

ಜೋಗತಿ : ಏನಲಾ ಮರತಿದ್ದಿ?

ಭೀಮ್ಯಾ : ನಮ್ಮ ಸಾಹೇಬರು ಜಳಕಾ ಮಾಡೂದ ಬಿಟ್ಟ ಭಾಳ ದಿನಾ ಆತ.

ಜೋಗತಿ : ನಡುವ ಸಾಬಂದ್ಯಾಕ ನೆನಪಾತ?

ಭೀಮ್ಯಾ : ಅಡ, ಅದನೂ ಹೇಳಲಿಲ್ಲಾ ನಿನಗ? ಧೌಳಕ್ಕೆ, ಹೂ ಅಂದೇನಂದರ ಉಸರ ತಗೋಳಾಕ ಬಿಡುವೊಲ್ಲಿ. ಇನ್ನ ಸಾಬರ ಕತಿ ಏನ್ಹೇಳ್ಲಿ?

ಜೋಗತಿ : ಸಾಬರ ಕತೀ ಹೇಳಾಕ ಕರದಿ?

ಭೀಮ್ಯಾ : ಮತ್ತ ಕುದರಿ ಏರಿದಿ ಹೌಂದಲ್ಲ? ನೀ ಇಂದ ಹಸೀ ಖಾರಾಗೀರಾ ತಿಂದಬಂದೀ ಏನ? ಕೇಳಿಲ್ಲೆ. ಇಂದ ನಾ ಅಲ್ಲ. ನಮ್ಮ ಸಾಹೇಬರ ಪೂಜಿ ಮಾಡತಾರ.

ಜೋಗತಿ : ಅಯ್ಯ ಭಾಡಕೌ ಮೊದಲ ಯಾಕ್ಹೇಳಲಿಲ್ಲ? ಅವ ಬಂದಮ್ಯಾಲ ನಾರೂ ಎಣ್ಣಿ ಹಚ್ಚಕೋತಿದ್ನಿ.

ಭೀಮ್ಯಾ : ಎಂಟೆಂಟ ದಿನಾ ಹಾಂಗ ನಾರತತಿ ಅಂತಿ.

ಜೋಗತಿ : ಹಾಂಗತ ಅದಕೇನ ಎಳೆಹೊತ್ತಾ ಇಲ್ಲಾ?

ಭೀಮ್ಯಾ : ಬಾಳ ತುಟ್ಟಿದ ಕಾಣತತಿ.

ಜೋಗತಿ : ನಾತ ಬತ್ತು?

ಭೀಮ್ಯಾ : ಗೊಮ್ಮಂತ ಗೊಮಾಡಸಾಕ ಹತ್ತೇತಿ, ಒಂದಳತಿ
(ಮುಂಗೈ ಒಡ್ಡಿ)

ನಂಗಟ ಹಚ್ಚ ನೋಡೋಣ.

ಜೋಗತಿ : ರೊಕ್ಕ ಬಿದ್ದಾವ.

ಭೀಮ್ಯಾ : ನಮ್ಮ ಸಾಹೇಬರ ಸಂಸ್ಥಾನಕ ಬಡತಾನೇನ ತತಾರ.

ಜೋಗತಿ : (ಸ್ವಲ್ಪವೇ ಮುಂಗೈಗೆ ಹಚ್ಚಿ)

ಹೇಳ್ನಿಮ್ಮ ಸಾಬನ ಕತೀ ಏನ?

ಭೀಮ್ಯಾ : (ಮೂಸಿ)

ಇದಕ್ಕ ಕುರುವ ಸಾಯತಾವು?

ಜೋಗತಿ : ಹೆಂಗ ಹುರದ ಹುರದ ಬೀಳತಾವ.

ಭೀಮ್ಯಾ : ಇದೊಂದ ಪಾಡಾತ ಬಿಡತ್ತ. ನಮ್ಮ ಸಾಹೇಬರ ಹೊಕ್ಕಳ ಮ್ಯಾಲೊಂದ ಕುರುವಾಗೇತಿ. ಎಂಥಾ ಸಭಾದಾಗ ಕುಂತರೂ, ಪರಾ ಪರಾ ಪರಾ ಅದರಸುತ್ತ ತುರಿಸಿಕೊಂಡs ತುರಿಸಿಕೋತಾರ.

ಜೋಗತಿ : ಈ ಎಣ್ಣಿಗಿ ಹುಚ್ಚ ನಾಯಿ ಸಾಯ್ತಾವು, ಇನ್ನ ಕುರುವಿನ ಸುದ್ದಿ ಏನ್ಹೇಳ್ತೀಯೋ?

ಭೀಮ್ಯಾ : ಹುಚ್ಚ ನಾಯಿ?

ಜೋಗತಿ : ಹೂ ಹೂ, ಹುಚ್ಚನಾಯಿ. ಬೆಳಗಾಂವಿ ಸಾಬರ ನಾಯಿಗಿ ಹುಚ್ಚ ಹತ್ತಿ ಕೊಂಡ ಬಿಡರೀ ಆ ನಾಯಿ ಅಂದರ ಅದನ್ನ ತೆಕ್ಕಿಹಾದ ಅಳಾಕ ಸುರುಮಾಡತಿದ್ದರು. ಮೊದಲs ಹುಚ್ಚ ನಾಯಿ ಕೇಳೀತು? ಅವರ್ಹೇಂತೀನ ಕಡದು ಆಕಿ ನಾಯಿ ಹಾಂಗ ಒದರ್ಯಾಡಿದರೂ ಸಾಬರು ನಾಯಿ ಬಿಡುವೊಲ್ಲರೇನ ಮಾಡ್ತಿ? ಕಡೀಕಂದ್ರ ಅವರ ಕಳಬಳ್ಳಿ ನನ್ನ ಹಂತ್ಯಾಕ ಬಂದರು. ಎಣ್ಣೀ ಕೊಟ್ನಿ. ಹೀಂಗ ಹಚ್ಚೂದರಾಗ ಹಂಗ ಸತ್ತಹೋತ.

ಭೀಮ್ಯಾ : ಅಡಡಡಡಡ!

ಜೋಗತಿ : ಕರೀ ನಿನ್ನ ಕುರುವಿನ ಸಾಬನ, ಯಾ ಕಚೇಯಾಗ ಬರಕೋತಾನ ಅವ?

ಭೀಮ್ಯಾ : ಕಚೇರ್ಯಾಗ ಬರಕೋಳಾಕ ಅವರಿಗೇನ ಕಡಿಮ್ಯಾಗೇತೆ? ಅವರ ಬಿಟ್ಟ ಬೂಟ ಮ್ಯಾರಿ, ಎಷ್ಟ ಮಂದಿ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದಾರ. ಯಾರ ಮುಂದ ಹೇಳಬ್ಯಾಡ. ನೀ ನನಗಟ ಎಣ್ಣಿ ಹಚ್ಚೀದಿ ಅಂತ ಹೇಳತೇನು- ನಮ್ಮ ಸಾಹೇಬರ ಮನ್ಯಾಗ ಯೋಳಕೊಪ್ಪರಗಿ ಚಿನ್ನ ಐತಿ.

ಜೋಗತಿ : ಹಾ.

ಭೀಮ್ಯಾ : ಹಾಂಗ ಬಾಯ್ತೆಗೀಬ್ಯಾಡ, ನೊಣಾ ಭಾಳಿಲ್ಲಿ.

ಜೋಗತಿ : ಎಲ್ಲಿ ಸಿಕ್ಕಿತ, ಹೆಂಗ ಸಿಕ್ಕಿತ, ಯಾವಾಗ ಸಿಕ್ಕಿತ?

ಭೀಮ್ಯಾ : ಒಂದಿನ

ಜೋಗತಿ : ಹೂಂ.

ಭೀಮ್ಯಾ : ಆಯ್ತಾರಮಾಸಿ.

ಜೋಗತಿ : ಹೂಂ.

ಭೀಮ್ಯಾ : ಸೋಮಳಿ, ಭರ್‌ಸರ‍್ವತ್ತಿನ್ಯಾಗ ಯಾರೋ ಬಂದ ಬರತೇನ ಬರತೇನ ಅಂಧಂಗಾತ.

ಜೋಗತಿ : ಅವ್ವ ನನ್ನ ಶಿವನ!

ಭೀಮ್ಯಾ : ನನ್ನ ಧೋತರ ತೋಯ್ತ. ಎಷ್ಟಂದರೂ ನಮ್ಮ ಸಾಬರ ಧೈರ್ಯ- ಎದ್ದರು.

‘ಯಾವಾಕೆ ಹುಚ್ಚ ಬೋಸಡೆ?’ ಅಂದರು.

‘ಹುಚ್ಚೆಲ್ಲಾ, ಭೋಸಡೆಲ್ಲಾ

ಭಾಗ್ಯ ಬಂದು ಬಾಗಿಲದಾಗ ನಿಂತೇವ

ಕದಾ ತಗಿಯೋ ಮಾವಾ,’

ಅಂತಂದೂ, ಗೆಜ್ಜಿ ಸಪ್ಪಳಾ ಮಾಡಾಕ ಹತ್ತಿದರು! ಸಾಹೇಬರ‍್ನ ಕೇಳಬೇಕ?

‘ಹೆಸರಿಲ್ಲಾ ದಶಿಯಿಲ್ಲಾ

ಹಾದರಗಿತ್ತೇರಿಗೆಲ್ಲಾ ಕದಾ ತಗ್ಯಾಕ

ಇದೇನ ಧರಮಸಾಲೆಲ್ಲಾ, ಹೊಂಟ್ಹೋಗ್ರಿ’ ಅಂದರು.

‘ನೀ ಕರದ ಹೆಸರಿಗೆ ಓ ಅಂದ

ಹೇಳಿಧಾಂಗ ಕುಣೀತೇವ

ಕದಾ ತೆಗಿಯೋ ಕರಚೆಲುವಾ’ ಅಂದರು.

ನಮ್ಮ ಸಾಹೇಬರ ಯೋಳಬಾರಿನ ಪಿಸ್ತೂಲ ತಗೊಂಡ್ರು, ನನಗ ನಡಕ ಹುಟ್ಟಿತು!

ಜೋಗತಿ : ಅಯ್ಯ ನಿಂದೇನ ಮಾಡ್ತಿ ಮುಂದ ಹೇಳ.

ಭೀಮ್ಯಾ : ಬಾಗಿಲಾ ತಗದರು!

ಜೋಗತಿ : ಹೂಂ.