(ಅನೇಕ ಹೆಣ್ಣು ಧ್ವನಿಗಳ ನರಳುವಿಕೆಯೊಂದಿಗೆ ತೆರೆ ಸರಿಯುತ್ತದೆ. ಮೇಳವಾಗಿ ಹೂ ಹೂ ಹೂ ಎಂದು ಸಣ್ಣಗೆ ಸುರುವಾಗಿ, ಸ್ಪಷ್ಟವಾಗುತ್ತ ಒಮ್ಮಿಂದೊಮ್ಮೆ ಉದ್ರೇಕಗೊಂಡ ಹೆಣ್ಣು ಧ್ವನಿಯೊಂದು ಚೀರಿಅಯ್ಯೋ ಬಿಡಸರ್ಯೋ ಗಂಡ್ಸಾದರ ಅಪ್ಪಾ ಅಂತೇನು, ಹೆಂಗಸಾದರ ಅವ್ವಾ ಅಂತೇನು ಬಿಡಸರ್ಯೋ”- ಎಂದು ಅಳಲಾರಂಭಿಸಿದಾಗಲೂ ಉಳಿದ ಧ್ವನಿ ಹಿಮ್ಮೇಳದಂತೆ ಮೊದಲಿನ ಸ್ವರದಲ್ಲಿಯೇ ಮುಂದುವರಿಯುತ್ತವೆ. ರಂಗದ ಮುಂಭಾಗದಲ್ಲಿ ಸ್ಟೂಲಿನ ಮೇಲೆ ಭೀಮ್ಯಾ ಮೊಳಕಾಲಿಗೆ ಕೈ ಸುತ್ತಿ ನಿಶ್ಚಿಂತವಾಗಿ ಕೂತಿದ್ದಾನೆ. ರಂಗದ ಹಿಂಭಾಗದ ಆಳದಲ್ಲಿ ಅಸ್ಪಷ್ಟ ಕತ್ತಲೆಯಿದ್ದು ಮೂಲಕ ರಂಗ ಇಬ್ಭಾಗವಾಗದಂತೆ ಕಾಣಿಸಬೇಕು. ಭಾಗದಲ್ಲಿಯೇ ಅಸ್ಪಷ್ಟವಾದ ಸ್ತ್ರೀಯರ ನೆರಳಿನ ಚಲನವಲನ ಕಾಣಿಸುತ್ತದೆ. ಕೆಲಹೊತ್ತು ಹೀಗೇ ನಡೆದ ಬಳಿಕ ಬಾಗಿಲು ಹಾಕಿದ ಸಪ್ಪಳವಾಗಿ ನಾಣಿ, ತಲೆಕೆದರಿ, ಅಸ್ತವ್ಯಸ್ತ ಉಡುಪಿನಲ್ಲಿ ನಿಧಾನವಾಗಿ ಬಂದು ಭೀಮ್ಯಾನ ಎದುರಿಗಿರುವ ಕುರ್ಚಿಯಲ್ಲಿ ಉಸ್ಸೆಂದು ಕುಕ್ಕರಿಸಿ ಹೊಕ್ಕಳಿನ ಮೇಲೆ ಕೈಯಾಡಿಸುತ್ತಾನೆ)

ನಾಣಿ : ಈ ಹೊಕ್ಕಳೊಂದು ಎಷ್ಟು ನೋಯತದ ಅಂದರ, ಇದ ನನ್ನ ಹೊಕ್ಕಳಂತ ನಂಬಾಕಾಗೋದಿಲ್ಲ.

ಭೀಮ್ಯಾ : ವಯಸ್ಸ ಹ್ವಾಧಾಂಗ- ಹ್ವಾಧಾಂಗ ನನಗ ಈಗೀಗ ನೆನಪಾಗಕ ಹತ್ತೇತ್ರಿ- ನೀವ್ ಏರೋ ಕುದುರಿ ಸಿಕ್ಕೀತೇನಾ- ಅಂತ. ನಿಮಗ ಬ್ಯಾಸರ ಬರಾಣಿಲ್ರಿ?

ನಾಣಿ : ಬರದೇನೋ? ಬ್ಯಾಸರ್ಯಾಕ ಬರೋದಿಲ್ಲಂದಿ?

ಭೀಮ್ಯಾ : ಇಷ್ಟ ತಲೀ ಕೆಡಿಸಿಕೊಳ್ತೀರಿ- ತಿನ್ನೋದ ಬ್ಯಾರೇ ಅಲ್ಲಾ, ವಿಚಾರ ಮಾಡೂದ ಬ್ಯಾರೇ ಅಲ್ಲಾ: ಒಮ್ಮೊಮ್ಮೆ ತಲೀಲೆ ತಿಂದ ಬಾಯಿಲೆ ವಿಚಾರ ಮಾಡತೇರಿ, ಅದಕ್ಕ ಬ್ಯಾಸರ ಬರಾಣಿಲ್ಲೇನ್ರಿ ಅಂದೆ.

ನಾಣಿ : ಬರತ ಬರತ ನೀ ದುಶ್ಚಟಧಾಂಗ ಕಾಣತಿ, ಹಸನ ಅಂಗಿ ಹಾಕೊಬಾರದ?

ಭೀಮ್ಯಾ : ತಗೊ, ಕೇಳಿ ನೋಡಿದರ ಒಂದು ಮಾತು, ನನಗ ನಿಮಗ ಎಷ್ಟ ಫರಕ ಮಾಡತೈತಿ ನೋಡ್ರಿ. ಸಾಹೇಬರ ನನ್ನ ಎಂದ ಬಿಡತೇರಿ? ಒಮ್ಮಿ ಹೇಳಿ ಬಿಡ್ರಿ.

ನಾಣಿ : ಅವ ಸಿಕ್ಕಮ್ಯಾಲ ಒಂದು ತಾಸ ಇರಬ್ಯಾಡಂತ ಹೇಳಿಲ್ಲಾ ನಿನಗ? (ರಂಗದ ಎಡಬದಿಗೆ ಗೀತಾ ಬಂದು ಬಾಗಿಲು ಬಡಿದಂತ ಕೈ ಮಾಡಿದಾಗ ಸಪ್ಪಳವಾಗುತ್ತದೆ. ಇಬ್ಬರೂ ಕ್ರಿಯಾಶೀಲರಾಗಿ) ಬಂದಳಂತ ಕಾಣತದ. ಹೋಗು, ಮರೀಗಿ ನಿಂತಕೋ, ಹೊತ್ತ ನೋಡಿ ಮುಖಾ ಹಾಕು.

ಭೀಮ್ಯಾ : (ಎದ್ದು ಮೈ ಮುರಿದು)

ಈಗ ಹೋಗಿ ಜೋಗತೀನರೇ ಕರಕೊಂಬರಲೇನ್ರಿ?

ನಾಣಿ : ಮತ್ತ ಯಾವ ಜೋಗತಿನೊ? ಸುಮ್ಮನ ಹೋಗಬಾರದ?

ಭೀಮ್ಯಾ : (ಹೋಗುತ್ತ)

ನಾ ಕರಕೊಂಬರಾವ ನೋಡ್ರಿ. (ಭೀಮ್ಯಾ ಮಾಯವಾಗುತ್ತಲೂ ನಾಣಿ ಹೋಗಿ ಅವಳೆದುರು ನಿಂತು ಬಾಗಿಲು ತೆಗೆದಂತೆ ನಟಿಸುವನು. ಗೀತಾ ಒಳ ಬಂದು ಅವಸರದಿಂದ ಬಾಗಿಲು ಹಾಕಿದಂತೆ ಮಾಡಿ ಬೆವರು ಒರೆಸಿಕೊಳ್ಳುತ್ತ)

ಗೀತಾ : ಏನ ಬಿಸಿಲೂ, ಏನ ಬಿಸಿಲೂ, ಏನ ಬಿಸಿಲೂ ಅಂತೀನಿ-

ನಾಣಿ : ಹೌದ, ಹೌದ: ಹೊರಗ ನೋಡಬಾರದ? ಜಗತ್ತೆಲ್ಲಾ ಬಿಸಲಗುದರ್ಯಾಗಿ ಥೈ ಥೈ ಕುಣುಕೋತ ಓಡಿಧಾಂಗ. ಹಿಡೀಬೇಕಂದರ ನನ್ನಂಥಾ ಸ್ಪೋರ್ಟ್ಸ್‌ಮನ್‌ ಬಿಡು, ಬಸ್ಸಿಗಿ ಕೂಡಾ ಸಿಗಾಣಿಲ್ಲ,

ಗೀತಾ : ನಿನ್ನ ಸಲುವಾಗಿ ಏನೆಲ್ಲಾ ಸುಳ್ಳಸುಳ್ಳ ಒಂದಕ್ಕ ಒಂಬತ್ತ ಹೇಳಿ, ನಮ್ಮತ್ತಿ- ಅದೊಂದು ಎಂದ ಬೆಂಕೀ ಕಾಣತದನೋ (ಅಣಿಕಿಸುತ್ತ) ‘ಗೀತಾ, ಜೋಡೀ ಚಿತ್ರಾನ ಕರಕೊಂಡ್ಹೋಗು’ ಅಂದ್ಲು. ಹಿಂಗ್ಹೋಗಿ ಹಾಂಗ್ಬರಾಕ ಹುಡಿಗೀನ್ಯಾಕ ಸಾಲೀ ಬಿಡಸ್ತೇರೆಂತ ಅಂದ ಓಡಿ ಓಡಿ ಬಂದೆ,

ನಾಣಿ : ನನ್ನ ಕುದರೀಮ್ಯಾಲ ಇಷ್ಟ್ಯಾಕ ದುಡ್ಡು ಕಟ್ಟಾಕ ಹೋಗಿದ್ದೆ? ಫಕ್ಕನ ಕಾಲಮುರದರ ಏನ ಮಾಡತಿ?

ಗೀತಾ : ನಮಗ ದುಃಖದಾರ ನಿಮಗ ಭಾಳ ಸಂತೋಷೇನೋ.

ನಾಣಿ : ಸಣ್ಣದೊಂದ ನಗಚೇರಿಕಿ ಸುದ್ದಾ ತಡ್ಯಾಣಿಲ್ಲಲ್ಲ ನೀನು?

ಗೀತಾ : ಕಣ್ಣಾಗ ನೀರ್ಬರ್ತಾವೇನ ನೋಡೂಣು- ಅಂತ  ಬೆರಳ ಚುಚ್ಚಿ ಚೇಷ್ಟಾ ಮಾಡಂತದ ಏನೊ.

ನಾಣಿ : ಮಾರಾಯಳ ನಮೋ ಅಂತೇನಾಯ್ತ? ಕಿವಿಗೆ ಹಳ್ಳಾ ಹಚ್ಚಿಕೊಳ್ಲಾ? ದೀಡ ನಮಸ್ಕಾರ ಹಾಕಲ್ವಾ? (ಮಾತು ಮುಗಿಯುತ್ತಿರುವಂತೆ ಸ್ತ್ರೀ ಧ್ವನಿಯೊಂದು ನರಳುತ್ತದೆ. ಗೀತಾ ಹೆದರಿ, ಥಟ್ಟನೆ ಹೋಗಿ ನಾಣಿಯ ರಟ್ಟೆ ಹಿಡಿದುಕೊಂಡು)

ಗೀತಾ : ಯಾರೋ ನರಳಿಧಾಂಗ ಕೇಳತದ, ಯಾರದು?

ನಾಣಿ : ಅದ?

ಗೀತಾ : ಯಾರದು?

ನಾಣಿ : ಪಕ್ಕದ ಮನ್ಯಾಗ ಒಬ್ಬ ಎಳೀ ಹುಡುಗ ಇದ್ದಾನ.

ಗೀತಾ : ಯಾರೋ ಹೆಂಗಸರು ನರಳಿಧಾಂಗಿತ್ತು.

ನಾಣಿ : ಅವಂದ ಈ ಮನಿ.

ಗೀತಾ : ಹೆಂಗಸರು ನರಳಿಧಾಂಗಿತ್ತಂದರ.

ನಾಣಿ : ಘನ ಚೆಲುವ. ಬಟ್ಟಮುಖಾ, ಚಿಗರ ಮೀಸಿ…

ಗೀತಾ : ಅಯ್ಯ ಹೆಂಗಸ ನರಳಿಧಾಂಗಿತ್ತಂದರ….

ನಾಣಿ : ಹೂ ಅನ್ನ, ಅದನ್ನ ಹೇಳತೇನ. ಅದರಾಗ ಮುಗುಳನಗಿ ಕಲತ್ತಾನು: ಎಷ್ಟಂದರೂ ಎಳೀ ಹರೆ. ಮಗನ ಹುಳಿಮುದಾ ತುಳುಕಿ ಕೊಡದ ತಳಾ ಕಾಣ್ಸಾಣಿಲ್ಲ. ಯೋಳೆಂಟ ಮಂದಿ ಹೆಂತಾ ನೋಡಿದರ ನದರ ಜಾರಬೇಕಂಥಾ ಹುಡಿಗೇರ‍್ನ ಎಲ್ಲೆಲ್ಲೆವರ್ನೋ, ಪೋಲೀಸು ಪೋಜುದಾರ ಹೆಂಡರನೆಲ್ಲಾ ಓಡಿಸಿಕೊಂಡ ಬಂದ ಇಟ್ಟಕೊಂಡಾನ. ಅವರು ಇಲ್ಲಿ ಬಂದ ಕೂಡ್ಲೆ ಕಣ್ಣ ಕಳಕೊಳ್ತಾರ, ಇನ್ನ ಮುಗೀತ ನಿಮ್ಮ ಮನೀಗಿ ಹೋಗರೆಂದರ ನೀ ಅಂದಾಂಗ ಆಡಿಕೋತ ಇಲ್ಲೇ ಇರತೇವಂತಾರ ಅವರು! ಅವ ಕೊಡದಾಗ ಮುಖ ನೋಡಿ ತಲೀ ಹಿಕ್ಕೋಬೇಕಂದರ, ಇವರು ಅವನ ಸುತ್ತಮುತ್ತ ನಿಂತ ಅತ್ತಗೋತ, ಇಲ್ಲಾ ನಕ್ಕೋತ ಅದನ್ನಳಿಗ್ಯಾಡಸ್ತಾರ. ಅದಕ್ಕೆ ಅವರು ಹಗಲ ಸಂಜೀತನಕಾ ನಗತಾರ. ರಾತ್ರಿ ಬೆಳತನಕಾ ಅಳತಾರ. ತಲೀ ಚಿಟ್ಟ ಹಿಡದೈತಿ ನಂಗಂತೂ.

ಗೀತಾ : ಪೋಲೀಸರಿಗಿ ಕಂಪ್ಲೇಂಟ ಯಾಕ ಕೊಡಬಾರದು?

ನಾಣಿ : ನಾಲ್ಕೈದು ಸಲ ಹೋಗಿದ್ದೆ. ಹ್ವಾದಾಗೊಮ್ಮಿ ಆಫೀಸಿನ್ಯಾಗ ನಿನ್ನ ಗಂಡs ಕುಂತಿರತಾನ ಏನ್ಹೇಳ್ತಿ?

ಗೀತಾ : ಅಕ್ಕಪಕ್ಕದವರಿಗಿ ತ್ರಾಸ ಆಗತದ, ಹಿಂಗ ಮಾಡಬ್ಯಾಡ್ರಂತ ಹೇಳಬೇಕು.

ನಾಣಿ : ಅದೂ ಆಯ್ತು. ಒಂದಿನ ಸಿಟ್ಟಿಗೆದ್ದ ಆಜೂಬಾಜು ನೋಡಿ ಗುದಮುರಗಿ ಹಾಕಬಾರದ? ತಲೀ ಎಲ್ಲಿಟ್ಟಿದೇರೇಂತ ಟಬರಲೆ ಹೋಗಿ ನೋಡತೇನು, ಒಬ್ಬರಿಗೂ ತಲೀ ಇಲ್ಲ: ಯೋಳೆಂಟೂ ಮಂದಿ ಸಾಲಕ ನಿಂತ ಸೀರಿ ಎತ್ತೆತ್ತಿ ನಿಂತಾರಲಾ! ಅವರವರ ತಲಿ ಅವರವರ ತೊಡ್ಯಾಗ ನಗತಿದ್ದವು!

ಗೀತಾ : (ಮತ್ತೆ ತಬ್ಬಿಕೊಂಡು)

ಅವಯ್ಯ ಈ ಮನಿ ಯಾಕ ಬಿಡವೊಲ್ಲಿ?

ನಾಣಿ : ನೀ ಸಿಗೋತನಕ ಇರಲೆಂತ ಸುಮ್ಮಕಿದ್ದೆ.

ಗೀತಾ : ಖರೇನ?

ನಾಣಿ : ಖರೆ. ನೀ ನನಗ ಸಿಕ್ಕ ದಿನಾ ಈ ಮನ್ಯಾಗ ನಾ ಇರೋದಿಲ್ಲಂತ ಜೋತಿಷ್ಯ ಹೇಳ್ಯಾರ.

ಗೀತಾ : ಅದೆಲ್ಲಾ ಖರೆ. ಸರಕಾರದವರು ನನ್ನ ಗಂಡಗ ಏನು ಗುಂಡಿನ ಪಿಸ್ತೂಲ ಕೊಟ್ಟಾರ.

ನಾಣಿ : ಅವೇನ ಕೊಲ್ಲತಾನ? ನೆಟ್ಟಗೊಂದ ತಗಣಿ ಒರದ ಗೊತ್ತಿಲ್ಲ.

ಗೀತಾ : ತಗಣೀಗಿ ಬಾಳ ಹೆದರತಾನ ಖರೆ, ಮನ್ಯಾಗಿದ್ದಾಗೆಲ್ಲ ಅದರ ಗುರಿ ನನ್ನ ಕಡೇನ ಮಾಡಿ ಇಟ್ಟಿರತಾನ.

ನಾಣಿ : ಚಿಂತಿ ಮಾಡಬ್ಯಾಡ, ಒಂದ ಒಳಗುಟ್ಟ ಹೇಳಿರತೇನ, ಯಾರ ಮುಂದ ಹೇಳಬ್ಯಾಡ. ಪೋಲೀಸ, ಪೋಜುದಾರ ಇವರ್ಯಾರಿಗೂ ಗುರಿ ಹಿಡದ ಗೊತ್ತಿಲ್ಲ.

ಗೀತಾ : ಗೊತ್ತಿಲ್ಲಾ?

ನಾಣಿ : ಗೊತ್ತಿಲ್ಲ. ಈ ಪಕ್ಕದ ಮನಿ ಹುಡುಗ ಇದ್ದಾನಲ್ಲ. ಪೋಜದಾರ ಹೆಂತೀನs ತಂದಾನ.

ಗೀತಾ : ಅವಯ್ಯಾ

ನಾಣಿ : ಪೋಲೀಸರೆಲ್ಲಾ ಅವನ ತಲಾಸದಾಗ  ಅದಾರ. ಅವ ಅಂತ ತಿಳಕೊಂಡ ಇಲ್ಲೀತನಕ ಹತ್ತ ಹದಿನೈದ ಮಂದೀನ್ನ, ಪಾಪ ಯಾರ್ಯಾರ್ನೋ ಕೊಂದು ಒಗದರು.

ಗೀತಾ : ಅವಯ್ಯಾ ನನಗಿಲ್ಲಿ ಅಂಜಿಕಿ ಬರ್ತದ. ನಾ ಹೋಗ್ತೇನಿ.

ನಾಣಿ : ಅಷ್ಟ್ಯಾಕ ಅವಸರಾ ಮಾಡ್ತೀ? ಓಡಿ ಬಂದೀದಿ. ದಣದ್ದಿ ಅಂತ ತಿಳಕೊ. ನೋವ ಗೀವ ಆಗಿದ್ದರ ಹೇಳು ಬ್ಯಾಂಡೇಜ ಕಟ್ಟತೀನಿ. ನನಗ ನೀಕಟ್ಟು. ನಿಮ್ಮ ಹಿತ್ತಲದಾಗ ಕದ್ದ ಓಡಾಡಿ ಕಾಲೆಷ್ಟ ನೋಯ್ತಾವ ಗೊತ್ತದೇನ?

ಗೀತಾ : ಹಿತ್ತಲದಾಗ?

ನಾಣಿ : ಹೂ, ದಿನಾ ಬಂದ ಸಿಳ್ಳ ಹೊಡೀತೇನ, ಕೇಳ್ಸಾಣಿಲ್ಲ?

ಗೀತಾ : ಇಲ್ಲಾ ಯಾ ಮಗ್ಗಲಾ ಹಚ್ಚಿದರೂ ನನ್ನ ಗಂಡ ಗೊರಕಿ ಹೊಡಿಯೂದs ಕೇಳತದ. ಅಬ್ಬಬ್ಬ! ಎಂಥಾ ಕೆಟ್ಟ ನಿದ್ದೆಂತಿ? ಮದಿವ್ಯಾದಗಿನಿಂದ ಅವ ಎಚ್ಚರಿದ್ದಾಗ ಒಮ್ಮಿಯೂ ಅವನ್ನೋಡೇ ಇಲ್ನಾನು.

ನಾಣಿ : ಮತ್ತ ರಾತ್ರಿ ಏನ್ಮಾಡ್ತಿ?

ಗೀತಾ : ಇನ್ನೇನ್ಮಾಡ್ಲಿ? ಅವರ ಗೊರಕಿ ಜೋಡಿ ಆಟಾ ಆಡಿಕೋತ ಮಲಗೋದು.

ನಾಣಿ : ನಾ, ಸಿಳ್ಳ ಹೊಡದದ್ದ ಕೇಳಿಸಲಿಲ್ಲ ಅನ್ನಬಾರದ?

ಗೀತಾ : ಇಲ್ಲ.

ನಾಣಿ : ನಾ ಸುಧಾ, ಸುಧಾ, ಸುಧಾ ಅಂತ, ನಾಗಿನ ಸಿನಿಮಾ ಧಾಟಿ ಹಚ್ಚಿ ನಾಕೈದ ಹಾಡು ಬರೆದು, ಹಿಂದ ಹಿತ್ತಲಾಗ ಹಾಡಿಕೋತ, ನಡನಡವ ಸಿಳ್ಳಹೊಡೆದು, ಪುಂಗಿ ಮ್ಯೂಸಿಕ್‌ ಕೊಟ್ಟು ಹಾಡತಿದ್ದೆ. ಕೇಳಿಸಲಿಲ್ಲಾ?

ಗೀತಾ : ಸುಧಾ?

ನಾಣಿ : ಸುಧಾ ಅಲ್ಲ, ಸುಧಾ ಸುಧಾ. ಈಗೊಂದು ಸ್ಯಾಂಪಲ್‌ ಹೇಳಲೇನು? ಗುಡ್ ಐಡಿಯಾ – (ಎರಡು ಕೈ ಪುಂಗಿಯಂತೆ ಮಾಡಿ, ಗಲ್ಲ ಉಬ್ಬಿಸಿ, ನಾಗಿನ ಚಿತ್ರದ ಪುಂಗಿಯ ಧಾಟಿಯಲ್ಲಿ ಸುಧಾ ಸುಧಾ ಸುಧಾ, ಎಂದು ಹೇಳುತ್ತ, ಅವಳ ಮುಖದ ಸುತ್ತ ಅದು ಹಾವಿನ ಹೆಡೆಯೆಂಬಂತೆ ಸುತ್ತುವನು. ಅವಳು ಅವನ ಕೈ ತಿವಿದೀತೆಂದು ಮುಖ ಅತ್ತಿತ್ತ ತಪ್ಪಿಸಿಕೊಳ್ಳುವಾಗ, ಅದು ಹಾವಿನ ಹೆಡೆಯಂತೇ ಚಲಿಸುವುದು. ಅದನ್ನು ನೋಡಿ ಗೆಲುವಿನಿಂದ) ಹೆಂಗ ಬಂದಿ. ಹೆಂಗ ಬಂದಿ? ಕೇಳಿಸ್ತಿಲ್ಲ? ನನ್ನ ಮೈಗಿ ಸಿಂಬಿ ಸುತ್ತಿ ಏರಬೇಕನ್ನಸ್ತದಲ್ಲ?

ಗೀತಾ : ನನ್ಹೆಸರು ಸುಧಾ ಅಲ್ಲಾ ಅಂದೆ.

ನಾಣಿ : ಹಿಂಗ್ಯಾಕ ಮುಟ್ಟುವಾಟ ಆಡ್ತೀನ ಸುಧಾ? ಕಾಲೇಜ ಹಿಂದ ಹೊಂಡದ ಹತ್ತರ ನೀ ನಿಂತಾಗ, ನಾ ಹಿಂದಿಂದ ಬಂದ- ನೆನಪೈತಿ? ನೀರಿನ್ಯಾಗ ನೋಡಿದ್ರ ಮೈ ತುಂಬ ಹೂ ಬಿಟ್ಟ ತೆರಕೊಂಡ ನಿಂತಿದ್ದಿ. ಕೆಟ್ಟ ಮಳೀಗಾಳ್ಯಾಗ ಕ್ರಾಪ ಕೆಟ್ಟೈತೇನ ನೋಡಿಕೊಳ್ಳೋಣಂತ ಬಂದರ- ನನ್ನ ಬದಲಿ ನೀ ಕಂಡಿ- ನಾ ಸುಧಾ ಅಂತ ಕರೆದಾಗ ಏನಂದಿ ನೆನಪೈತಿ?

ಗೀತಾ : ಇಲ್ಲ.

ನಾಣಿ : ಯಾಕ ಸುಳ್ಳ ಹೇಳತೀಯೇ ಸುಧಾ-

ಗೀತಾ : ನನ್ನ ಹೆಸರು ಸುಧಾ ಅಲ್ಲಾ, ಅಂದೆ. ನನ್ನ ಹೆಸರು ಗೀತಾ ಗೀತಾ ಗೀತಾ. ಅವ್ವ ಅಪ್ಪ ಕರೆದದ್ದು ಗೀತಾ ಅಂತ. ನನ್ನ ಗಂಡ ಮದಿವ್ಯಾಗ ಹೆಸರು ಹೇಳಿದ್ದು ‘ಹಗ್ಗಲೆ ಬಡದರ ಮಗ್ಗಲಾಗ ಬರತಾಳ ಗೀತಾ’ ಅಂತ.

ನಾಣಿ : ಅವ್ವ ಅಪ್ಪಾ ಇಟ್ಟ ಹೆಸರ ಕರ್ಯಾಕ ನಾ ಏನ ಹಾಜರಿ ಬುಕ್ಕೇನ? ಮದಿವ್ಯಾದ ಮ್ಯಾಲ ಹುಟ್ಹೆಸರು ಬಿಟ್ಟು ಇನ್ನೊಂದು ಹೆಸರಿಡತಾರ ಗೊತ್ತದಿಲ್ಲೋ? ನಾ ಹೇಳಿದ್ದು ಆ ಹೆಸರು ಸುಧಾ ಅಂತ. ನಿನ್ನ ಗಂಡ ಇನ್ನ ಆ ಹಳೇ ಹೆಸರಿನಿಂದ ಕರೀತಾನಂತs ನಿನಗದು ಕೇಳ್ಸಾಣಿಲ್ಲ ಹೌದು? ಕೇಳಿಸಿದರೂ ಅವ್ವಾ ಅಪ್ಪಾ ಕರಧಾಂಗ ಕೇಳತದ. ನನಗ ನಿರಾಸೆ ತಡಕೊಳ್ಳಾಕ ಆಗಾಣಿಲ್ಲ. ಇನ್ನಷ್ಟ ಹೇಳತೇ ನ್ನೋಡು, ನೀ ಈಗೊಂದ ಸರಳರೂಪ ಲೆಕ್ಕಾ ಕಲೀತೀ ಅಂತ ತಿಳಕೋ. ಅದರ ಸೂತ್ರ ಏನಂದರ: ಅಷ್ಟಕ್ಕ ಇಷ್ಟಾದರ ಇಷ್ಟಕ್ಕ ಎಷ್ಟ? ಹಡದವರಿಗೆ ಮಗಳಾದರ ಗಂಡಗ ಏನದ್ಲಾ? ಹೆಂಡತಿ. ಅದರಂತೆ, ಗಂಡಗ ಹೇಂತ್ಯಾದರ ಹಾದರಕೇನಾದ್ಲು? ಉತ್ತರ: ಸುಧಾ! ನಾವು ಹಿಂಗ ಬ್ಯಾರೇ ಹೆಸರ ಇಟ್ಟಗೊಳ್ಳದಿದ್ದರ ಊರ ಮಂದಿಗೆಲ್ಲಾ ನಮ್ಮ ಗುಟ್ಟ ಗೊತ್ತಾಗಿ ಆಮ್ಯಾಲ ಏನ ಮಾಡ್ತೀ ಹೇಳು? ಇದನ್ನ ತಿಳಿದs ನಾ ನಿನ್ನ ಬೆನ್ನ ಕೂಡ್ಲೆ ಹೆಸರ ಬದಲಿ ಇಟಗೊಂಡೆ. ತಿಳೀತ?

ಗೀತಾ : ನನ್ನ ಹೆಸರು ಸುಧಾ ಅಲ್ಲಾ ಅಂದೆ.

ನಾಣಿ : ಮತ್ತ ನನ್ನ ಹೆಸರೇನ ನಾಣೀ ಏನ? ಸುಮ್ಮನ ಹೆಸರ ಇರೋದ್ಯಾಕ? ಅನುಕೂಲಕ. ಈಗ ಸುಧಾ ಅಂತ ಕರದರ ಅನುಕೂಲಾಗತೈತಿ, ಅದನ್ನ ಕರೀತೇನೆ.

ರೆಡಿ? ಎಲ್ಲಿ?- ಸುಧಾ ಅಂತ ಕರೀತೇನೆ, ಓ ಅನ್ನಬೇಕು ಹಾ? ಸುಧಾ….
(ಗೀತಾ ನಗುತ್ತಾ ಎನ್ನಲು ತುಟಿ ತೆರೆಯುತ್ತಿರುವಂತೇ ಹೆಣ್ಣು ಧ್ವನಿಗಳು ಕಿರುಚಲಾರಂಭಿಸುತ್ತವೆ. ಗೀತಾ ಹೆದರಿ ಓಡಬೇಕೆಂದು ನಾಲ್ಕೈದು ಹೆಜ್ಜೆ ಇಟ್ಟಿರುವಷ್ಟರಲ್ಲೇ ಭೀಮ್ಯಾ ಬಾಗಿಲಲ್ಲಿ ನಿಂತಿರುತ್ತಾನೆ. ಗೀತಾ ಮತ್ತೆ ಅವಸರದಿಂದ ಮತ್ತೆ ನಾಣಿಯನ್ನು ತಬ್ಬಿದಾಗ ಅವನುಹೆದರಬ್ಯಾಡ ಹೆದರಬ್ಯಾಡ ನಾ ಇಲ್ಲಾ? ಎಂದು ಸಂತೈಸುತ್ತ ಕುರ್ಚಿಯಲ್ಲಿ ಕುಳ್ಳರಿಸುತ್ತಾನೆ) ನೀ ಹಾಂಗೆಲ್ಲಾ ಓಡಿಹೋಗಲಾರೆ ಸುಧಾ,

ಭೀಮ್ಯಾ : (ಒಮ್ಮೆಲೆ ಬಾಗಿಲ ಬಳಿಕಾಣಿಸಿಕೊಂಡು)

ಸಾಹೇಬರ ಏನ್ರೆ ಕೆಲಸೈತ್ರಿ?

ನಾಣಿ : ಈಗ ಬಂದ್ಯಾ ಮಗನ? ಆ ರಂಡೇರ ಸತ್ತರೇನ ನೋಡ.
(ಭೀಮ್ಯಾಒಳಗಡೆ ಹೋಗಿ ಮತ್ತೆ ಸ್ವಸ್ಥಾನಕ್ಕೆ ಬಂದು)

ಭೀಮ್ಯಾ : ಇನ್ನೂ ಹಾಂಗ ಅದಾರ್ರಿ.
(ಎನ್ನುತ್ತ ಪಿಸ್ತೂಲ ಗುರಿ ಗೀತಾಳ ಕಡಗೇ ಹಿಡಿದು ಬಾಗಿಲಲ್ಲಿ ನಿಲ್ಲುತ್ತಾನೆ)

ನಾಣಿ : ನೀನು ಹಾಂಗೆಲ್ಲಾ ಓಡಿ ಹೋಗಲಾರೆ ಸುಧಾ, ಯಾಕ ಗೊತ್ತಾ?

ಗೀತಾ : ಊಹೂ.

ನಾಣಿ : ಎಷ್ಟು ಬೇಕ ನಿನಗ ಕಾಣ? ಒಂದು: ನಾನೊಬ್ಬ ಮಹಾ ಆರ್ಟಿಸ್ಟು, ಆರ್ಟಿಸ್ಟು ಪ್ರಪಂಚದ ಕಚ್ಚಾ ವಾಸ್ತವಿಕತೆಯಲ್ಲಿ ಹೊಸ ಹೊಸ ಜೀವಚೇತನಗಳನ್ನು ಸೃಷ್ಟಿಸಿ ಅವುಗಳಿಗೆ ಹೊಸ ಹೆಸರು ಕೊಡುತ್ತಾನೆ. ಪ್ರತಿಯಾಗಿ ಅವುಗಳಿಗೆ ತನ್ನ ಹೆಸರು ಕಲಿಸುತ್ತಾನೆ. ನಿನ್ನ ಬ್ರಹ್ಮನ್ನ ಬಿಟ್ಟ ನೀ ಹೆಂಗ ಹ್ವಾದೀ, ಎಲ್ಲಿ ಹ್ವಾದೀ, ಯಾಕ ಹ್ವಾದೀ ಹೇಳು? ಎರಡು : ಭೀಮ್ಯಾ.

ಭೀಮ್ಯಾ : ಓರಿ ಸಾಹೇಬರ.
(ನಾಣಿ ಗೀತಾಳನ್ನು ನೋಡುತ್ತಲೇ ಕೈ ಒಡ್ಡುವನು, ಭೀಮ್ಯಾ ಅವನ ಕೈಗೆ ಪಿಸ್ತೂಲು ಕೊಟ್ಟು ಸ್ವಸ್ಥಾನಕ್ಕೆ ಹೋಗುವನು)

ನಾಣಿ : ಪಿಸ್ತೂಲಂದರ ಇದs
(ಅವಳಿಗೆ ಗುರಿ ಹಿಡಿದು) ಓಡಿ ಹೋಗ್ತೀ?

ಗೀತಾ : ನಾಣಿ, ನಮಗಿಂತಾ ಚೇಷ್ಟೆಯೇನೂ ಸರಿ ಬರಾಣಿಲ್ಲ. ಚೆಂದ ಚೆಂದ ಪತ್ರಾ ಬರೆದು ಕರೀತಿ, ಹಿಂಗೆಲ್ಲಾ ಚುಚ್ಚಿ ಚುಚ್ಚಿ ಮೋಜಾ ನೋಡ್ತಿ.

ನಾಣಿ : ಅದನ್ನ ಬ್ಯಾರೇ ಥರಾ ಹೇಳಬೇಕಂದರ ಈ ಪಿಸ್ತೂಲ ನೀ ತಗೋ, ಹಿಡಕೋ. ಇದು ಅದರ ಕುದರಿ.
(ಪಿಸ್ತೂಲು ಅವಳ ಕೈಗಿತ್ತು ಅವಳ ಬೆರಳನ್ನು ಅದರ ಕುದರಿಯಲ್ಲಿ ಸೇರಿಸಿ ಅದರ ಗುರಿ ತನ್ನ ಎದೆಗೆ ಹಿಡಿದುಕೊಂಡು)

ನೀ ನನ್ನ ಕೊಲ್ಲು, ಕುದುರಿ ಹಿಂದ ಜಗ್ಗಿದರಾಯ್ತು. ಗುಂಡ ಹಾರತದ, ಅಯ್ಯೋ ಅಂತ ಸತ್ತ ಬೇಳ್ತೇನ ನಾ. ಎಲ್ಲಿ ಹಾರಸು (ಗೀತಾ ಪಿಸ್ತೂಲು ಚೆಲ್ಲುವಳು) ಯಾಕ ಕೊಲ್ಲಲಿಲ್ಲ ಹೇಳು? ಯಾಕಂದರ ನೀ ಓಡಲಾರೆ. ಯಾಕ ಓಡಲಾರೆ ಹೇಳು? ಯಾಕಂದರ ನೀನ ನನ್ನ ಸೃಷ್ಟಿ, ಸುಧಾ.

ಗೀತಾ : ನಾಣಿ ನಾ ಹೇಳಲಾ? ಖರೇನ ನನಗೇನ ಇದ ಚೆಂದ ಕಾಣ್ಸಾಣಿಲ್ಲ, ತಗಿ. ಜೀವ ಪಣಕ್ಕ ಹಚ್ಚಿ ಬಂದರ ಏನಕೇನರ ಹೊಯ್ಕಾ ತಗೀತಿ. ಮಾಡಿಕೊಂಡ ಹೇಂತಿ ಸುದ್ದಾ ಹೇಳಿಧಾಂಗ ಕೇಳಾಣಿಲ್ಲ. ಶಾಣ್ಯಾ ಅದಿ, ಆ ಶನಿ ಹಾದಿ ಬಿಡಸ, ನಾವ ಹೋಗತೇವ. ಸುಧಾ ಅಂತ. ಹೊಸ ಹೆಸರಂತ, ಆಕಿ ಯಾವಾಕಿ ಸುಧಾ ಸುಧಾ ಅಂತ ಹಾಡ ಕಟ್ಟೀದಿ ಆಕಿ ಬೆನ್ಹತ್ತಿ ಹೋಗು. ನಿನ್ನ ಸಹವಾಸ ಸಾಕ್ನಮಗ. ಅಷ್ಟಕ್ಕ ಮುಗೀತೇನ ಅಂದರ ಮತ್ತೆ ತನ್ಹೆಸರೂ ಬದಲ ಮಾಡಿದಾನಂತ.

ನಾಣಿ : ಮೋಸ ವಂಚನೆ ಇದರಾಗೇನದ?

ಗೀತಾ : ಅಪ್ಪ ಅಂದ ಕಾಲ ಬೀಳತೇನಾಯ್ತು? ಮೊದಲಿನ್ಹಾಂಗ ನೀ ನಾಣೀ ಆಗಿ ಗೀತಾ ಅಂತ ಬಾ, ಓ ಅಂದೇನ.

ನಾಣಿ : ಮಾರಾಯಳ ಒಂದ ಅಂದರ ಹತ್ತ ಕರಾರ ಹಾಕತಿ.

ಗೀತಾ : ತಣ್ಣಗ ಗೀತಾ ಅಂತಂದರ ಕರಾರ್ಯಾಕ ಬೇಕ ನಡುವ? ಹುಳಾ ಕಡದ ಹಗಣಾ ಮಾಡತಿ, ಅದಕ್ಕ ಕಾಗದ, ಕರಾರ ಪತ್ರ ಬೇಕ.

ನಾಣಿ : ಹೋಗಲಿ, ನಾ ನೀ ಕೂಡಿ ಕಾಲೇಜ ಕಲ್ತದ್ದಾದರೂ ಹೌದ?

ಗೀತಾ : ಅಲ್ಲಂದಿನಿ?

ನಾಣಿ : ಕ್ಲಾಸಿನ್ಯಾಗ ಈ ಹುಡುಗನ್ನ ನಾಣಿ ಅಂತ ಕರದಿ?

ಗೀತಾ : ಇಲ್ಲಾ?

ನಾಣಿ : ಅಂದ ಸಿನಿಮಾಕೆ ಹೋಗಿದ್ವಿ. ಎಷ್ಟು ಮಜಾ, ನೋಡಿದರ ಗಲಗುಚ್ಚಿ ಆಗ್ತದಲ್ಲಾ, ಅಂದಾಗ ನಾಣಿ ಅಂದಿ?

ಗೀತಾ : ಹೂ, ಹೂ, ಹೂ, ಕ್ಲಾಸಿನ್ಯಾಗ ಹಿಂದಿನ ಬೆಂಚಿದಾಗ ಕುಂತ ಜಡೀ ಜಗ್ಗತ್ತಿದ್ದಾ, ನಾಣೀ ಅಂದೆ ಸುಮ್ಮನಾದ. ಸಿನಿಮಾ ನೋಡೋವಾಗ ಟೊಂಕದಾಗ ಕೈಯಾಡಸಾಕ ಬಂದ- ನಾಣೀ ಅಂದೆ ಕೈ ತೆಗೆದ. ಸಿಕ್ಕಸಿಕ್ಕಾಗ ಹಲ್ಲ ಕಿಸೀತಿದ್ದ, ತೊಳಕೊಂಡ ಕಿಸೀಬಾರದ ನಾಣೀ, ಅಂದೆ. ಟೂಥ್ ಪೇಷ್ಟು ಬ್ರಶ್ಯು ಕೊಂಡ. ನಾ ಪತ್ರದಾಗ ಒಂದು ಸಲ ನಾಣೀ ಅಂದರ ಮೂರಸಲ ಉತ್ತರಾ ಕೊಡತಿದ್ದಾ. ಅಬ್ಬಬ್ಬ ಈ ಕೂಡೋಣ ಬಾ, ಕೆಡಿಸೋಣ ಬಾ- ಸಾಕ ನನಗ. ಪತ್ರದಾಗ ಗೀತಾ ಗೀತಾ ಅಂತ ಹಲಬತಿದ್ದಿ. ನೀ ಒಮ್ಮಿ ಕರದರ ರಾತ್ರಿ ಕನಸಿನಾಗ ಓ ಓ ಓ ಅಂತ ಉಟ್ಟ ಸೀರಿ ಉಂಗುಟಕ ಸಿಕ್ಕ ಹರದರೂ ಖಬರಿಲ್ಲದ ಕುಣೀತಿದ್ದೆ ಗೊತ್ತಾ? ಬೆಳಗ್ಗಿ ಎದ್ದ ನೋಡಿದರ ಜಗತ್ತಿನ ತುಂಬ ನನ್ನ ಬಿಟ್ಟ ಉಳಿದವರೆಲ್ಲಾ ಗಂಡರ ಆಗಿ, ರೋಮರೋಮೆಲ್ಲಾ ಗವೀ ಆಗಿ, ಗವಿಗೊಬ್ಬೊಬ್ಬ ಬ್ರಹ್ಮಚಾರಿ ಕುಂತ ನನಗಾಗೇ ತಪಸ್ಸ ಮಾಡಿಧಾಂಗ ಅನ್ನಸ್ತಿತ್ತು. ನಾಣೀ ಅಂತ ಒಬ್ಬನ್ನ ಕರದರ ಎಲ್ಲರೂ ಓ ಅಂತಿದ್ದರು…

ನಾಣಿ : ಸುಳ್ಳು.

ಗೀತಾ : ಏನ್ಸುಳ್ಳು?

ನಾಣಿ : ಆ ಬ್ರಹ್ಮಚಾರಿಗೆ ನೀ ನಾಣೀ ಅಂದದ್ದು ಸುಳ್ಳು.

ಗೀತಾ : ಮತ್ತೇನ ಏ ಅಂದೆ?

ನಾಣಿ : ಊಹೂ, ನಕಾರದಿಂದ ಸರುವಾಗಿ ಎರಡನೇ ಅಕ್ಷರಕ ಮುಗೀತದ ಹೇಳ್ನೋಡೋಣ.

ಗೀತಾ : (ನಗುತ್ತ) ನಮ ನಾಮ ನಕ ನಳ.

ನಾಣಿ : ಊಹೂ, ಮತ್ತೆ ನಕಾರದೊಳಗs ಮುಗೀತದ.

ಗೀತಾ : ನಾ ನೀನೀ ನೂನೂ ನೇನೇ.

ನಾಣಿ : ಊಹೂ ನಾ ದಿಂದ ಸುರುವಾಗಿ ನು ದಾಗ ಮುಗೀತದನ.

ಗೀತಾ : ನಾ ನಾನಾ ನಾನೂ?

ನಾಣಿ : ಹಾ ನೋಡ ನನ್ನ ಸುಧಾ ಸುಧಾ ಸುಧಾ. ನನ್ಸುಧಾ, ಏನ್ಚೆಂದ ಹೇಳತಿ? ಒಂದ ಸಲ ನಾನೂ ಅಂತ ಕರೀ ಸುಧಾ.

ಗೀತಾ : ನಾನೂ.
(ಅವಳು ಬಾಯಿ ತೆರೆದು ನಗುತ್ತ ಧ್ವನಿ ಹೊರಡಿಸುವಷ್ಟರಲ್ಲಿ ಧ್ವನಿಗಳು ಕಿರುಚಲಾರಂಭಿಸುತ್ತವೆ. ನಾಣಿ ತಲೆ ತಲೆ ಚಚ್ಚಿಕೊಂಡು)

ನಾಣಿ : ಏ ಭೀಮ್ಯಾ.

ಭೀಮ್ಯಾ : ಬನ್ರಿ ಧಣೇರ.

ನಾಣಿ : ಹೋಗಿ ಆ ರಂಡೇರ‍್ನ ಗುಂಡ ಹಾಕಿ ಕೊಂದ ಬಾರೋ. ಯಾರಾದರೂ ಯಾಕಂದರ, ಸರಕಾರದ ಹೆಸರ್ಹೇಳು ಹೋಗು. ತಗೋ ಈ ಪಿಸ್ತೂಲ.
(ನಾಣಿ ಎಸೆದ ಪಿಸ್ತೂಲನ್ನು ಭೀಮ್ಯಾ ಹಿಡಿದುಕೊಂಡು ಒಳಗೆ ಹೋಗುವನು😉

ಈ ರಂಡೇರೊಂದ ಎಂದ ಸಾಯತಾರೋ, ಯಾಕೋ? ಹಂಗs ಬಂದಿ?
(ಭೀಮ್ಯಾ ಹೊರ ಬಂದು ಸ್ವಸ್ಥಾನಕ್ಕೆ ಹೋಗುತ್ತ)

ಭೀಮ್ಯಾ : ಕೊಲ್ಲಬೇಕಂದರ ಅವರ ನಡುವ ಆ ಹುಡುಗ ಕುಂತಾನ್ರಿ. ಎಲ್ಲೆರೆ ಗುರಿ ತಪ್ಪಿ ಅವಗ ತಾಗೀತು ಅಂತೇನ್ನಾ.

ಗೀತಾ : ನಾಣೀ, ಬಂದದಕ್ಕ ಚಂದ ಹೂವ ಏರಿಸಿದಿ, ನಾ ಹೋಗತೇನಿನ್ನ. ನಿನಗ ಗೊತ್ತದ, ಆದರೂ ನೆನಪಿರಲೆಂತ ಹೇಳಿರತೇನ- ನನಗ ಗಂಡಗ ಸರಕಾರದವರು ಹೊಸದಾಗಿ ಏಳು ಗುಂಡಿನ ಪಿಸ್ತೂಲ ಕೊಟ್ಟಾರ. (ಎದ್ದು ಹೊರಡುವಳು)

ಭೀಮ್ಯಾ : ಸಾಹೇಬರ ಹೊರಗ ಪೋಲೀಸರು ನಿಂತಾರ್ರೀ…

ನಾಣಿ : ಪೋಲೀಸರಾ?

ಗೀತಾ : ಪೋಲೀಸರಾ?
(ನಡಗುತ್ತಾ ಗೀತಾ ಅಲ್ಲೆ ನಿಲ್ಲುವಳು)

ನಾಣಿ : ಅವ ಹೆಂತಾವದಾನೋ?

ಭೀಮ್ಯಾ : ಕ್ವಾರಿಮೀಸಿ, ಲಂಡಚಣ್ಣಾ, ಟೊಂಕದಾಗ ಯೋಳಗುಂಡಿನ ಪಿಸ್ತೂಲೈತಿ. ಎರಡೂ ಕೈಲೆ ಮೂಗು ತಿಕ್ಕೋಂತ ಸುಂಬಳ ಒರಿಸಿಕೊಳ್ಳಾಕ ಹತ್ಯಾನ್ರಿ.

ಗೀತಾ : (ಅಳುತ್ತ ಕುರ್ಚಿಯಲ್ಲಿ ಕೂತು)

ಅಯ್ಯಯ್ಯೋ ಇನ್ಹೆಂಗ ಮಾಡ್ಲಿ? ಅವರs ನನ್ನ ಯಜಮಾನ್ರು. ಬರಬಾರದ ಬಂದ ಶಗಣೀ ತಿನ್ನೂ ಕಾರಭಾರ ಆಯ್ತು ಎವ್ವಾ.

ನಾಣಿ : ನಾ ಇರೋತಕ ನೀ ಯಾಕಳತಿ? ಸುಮ್ಕಿರ. ನಾನ್ಯಾನ ಹಿಡ್ಯಾಕ ಓಡ್ಯಾಡತಾರ ಅವರು.

ಗೀತಾ : ಯಾ ನಾನ್ಯಾ?

ನಾಣಿ : ಅದ, ಆ ಪಕ್ಕದ ಮನೀ ಹುಡುಗ. ಪೋಲೀಸ ಪೋಜದಾರರ ಹೆಂಡರನ್ನೆಲ್ಲಾ ಓಡಿಸಿಕೊಂಡ ಬಂದಾನಂತ ಹೇಳ್ಲಿಲ್ಲ?

ಗೀತಾ : ಅವನ್ನ್ಯಾಕ ಪೋಲೀಸರಿಗಿ ಹಿಡಿಕೊಡವೊಲ್ಲಿ?

ನಾಣಿ : ನೀ ಬ್ಯಾರಿ ಇಲ್ಲಿ ಬಂದೀದಿ. ಹೆಂಗ ಹೋಗಿ ಹೇಳ್ಲಿ?

ಗೀತಾ : ಹಂತಾವನ ಹೆಸರ ಬೇಕಾತ ನಿನಗ?

ನಾಣಿ : ನಾ ಹೇಳಿಧಾಂಗ ನೀ ಸುಧಾ ಆಗಿದ್ದರ ಎಷ್ಟ ಸರಳ ಆಗ್ತಿತ್ತೀಗ! ರೋಬಾರೋಬ ಅವನ ಮುಂದ ಹಾದಹೋಗಿದ್ದರೂ ಗುರುತ ಹಿಡೀತಿರಲಿಲ್ಲ.

ಗೀತಾ : ನಾ ಹೆಂಗ ಪಾರಾಗಲಿ?

ನಾಣಿ : ಎಷ್ಟ ಹೊತ್ತ ನಿಂತಾನ? ಕಾಲಸೋತಮ್ಯಾಲ ತಾನs ಹೋಗತಾನ.

ಗೀತಾ : ತಡಮಾಡಿ ಅತ್ತಿಗೇನುತ್ತರಾ ಹೇಳ್ಲಿ?

ನಾಣಿ : ಏನಾರ ಕವನ ಕಟ್ಟಬಹುದs?

ಗೀತಾ : ಅಯ್ಯಯ್ಯೋ ಅತ್ತೀ ಉಗುಳ ದಾಟಿಬನ್ನೇ ಎವ್ವಾ.

ನಾಣಿ : ಅಳೋವಾಗ ಎಷ್ಟ ಚಂದ ಕಾಣತೀನ ಸುಧಾ.

ಗೀತಾ : ಹೌದ, ನಾವಳೋವಾಗs ನಿನಗ ಚಂದ ಕಾಣ್ಸೋದು.

ನಾಣಿ : ಕಣ್ಣೀರಿದ್ದರ ಭಾಳ ಅನುಕೂಲ. ನಿನಗೊತ್ತಿಲ್ಲ. ತುಂಬಿದ ಸರವೋರಧಾಂಗ ಅಷ್ಟ ದೂರಿಂದ ನೋಡಿದರೂ ಪ್ರತಿಬಿಂಬ ಕಾಣತದ. ನಾ ನಕ್ಕರ ಅವನೂ ನಗತಾನ. ನಾ ನಾನೂ ಅಂತ ಕರದರ ಅವನೂ ನಾನೂ ಅಂತ ಕರೀತಾನ. ಎಲ್ಲಾ ಡಬ್ಬಲ್‌. ನಿನ್ನ ಮುಂದಂತ ಹೇಳತೇನೆ. ದಯಮಾಡಿ ಇನ್ಯಾರ ಮುಂದ ಹೇಳಬ್ಯಾಡ. ಸಣ್ಣಂದಿರತ ನಾನಾ, ಅವಾ ಸಾಲೀತಪ್ಪಿಸಿ ಹೊಳೀಗಿ ಯಾರಿಲ್ದಲ್ಲಿ ಈಸ್ಯಾಡಾಕ ಹೋಗಿ, ತಿಳೀತಿಲ್ಲ? ಎಷ್ಟ ಮಜಾ ಮಾಡತಿದ್ದುವಂತಿ? ಒಂದಿನಾ ಹಲ್ಕಟ್ಟ ನನ್ನ ಗಲ್ಲಾ ಕಡಿದಿದ್ದಾ.