ಭೀಮ್ಯಾ : ತಗ್ಯಾನ ತಗದರ ಜೋಗವ್ವಾ ನಿನ್ನ ಮುಂದ ಹೇಳತೇನು: ಒಂದು ಬಿಟ್ಟ ಯೋಳ ಮಂದಿ ಹೆಂಗಸರು, ಹೆಂತಾ ಚೆಲೀವೇರಂದರ ಹಂತಾ ಚಲವೇರು, ಥಳಾ ಥಳಾ ಬ್ಯಾಂಗಡಿ ಹಂಗ ಹೊಳೀತಿದ್ದರ ಹಂಗs. ಕಾಲಾಗ ಬಂಗಾರ ಗೆಜ್ಜೇನ, ಉಟ್ಟ ಪೀತಾಂಬರೇನ, ತೊಟ್ಟ ದಾಗೀನೇನು! ಎಲ್ಲಾರ ಕಣ್ಣಾಗ ಎಡ್ಡೆಡ್ಡ ಬಂಗಾರ ಕೊಡಾ. ಝಣ ಝಣ್ಣಂತ ಬಂದವರ ಸಾಬರ ಸುತ್ತ ಕುಣ್ಯಾಕ ಹತ್ತಿದರು. ಧೈರ್ಯ ಮಾಡಿ, ಸಾಹೇಬರು ಒಬ್ಬೊಬ್ಬಾಕೀನ ಮುರದ ತೊಡ್ಯಾಗ ಹಿಡಕೊಂಡ ಕೊಡದ ಕಂಟದಾಗ ಹಣಕಿ ನೋಡಿದರ ನೆರಳ ಕಾಣವೊಲ್ದು! ಘಾತಾ ಮಾಡಿದರಂದವರ, ಪಿಸ್ತೂಲ ಹಿಡಕೊಂಡ ಹೊರ ಬೀಳ್ತೀರೋ ಇಲ್ಲೋ? ಅಂದರು. ಹೊರಗ ಹಾಕಬ್ಯಾಡೋ ನಿನ್ನ ಕುರುವ ತುರಿಸಿಕೋತ ಇಲ್ಲೆ ಇರ್ತೇವಂದರು. ಸಾಹೇಬರ ಎಚ್ಚರಿದ್ದಾಗೆಲ್ಲಾ ಅವರ ಕೈ ಉಗರಾಗಿ, ಕುರುವಿನ ಮ್ಯಾಲ ಕೈಯಾಡಸ್ತಾರ. ಅವರು ಕೈಯಾಡಿಸುವಾಗಲೆಲ್ಲಾ ಇವರು ಎಚ್ಚರಿರತಾರ. ಇಲ್ಲೆ ಅದಾರ.

ಜೋಗತಿ : ಅವ್‌ ಅವ್ ಅವ್ ಇನ್ನೇನ ಮಾಡಲೆ?

ಭೀಮ್ಯಾ : ಹೂವಾ ಕಾಯೀ ತರಾಕ ಹೋಗ್ಯಾರ.

ಜೋಗತಿ : ಅವ ಹೆಂತಾವಿದ್ದಾನ ನಿನ್ನ ಸಾಬ?

ಭೀಮ್ಯಾ : ಬಟ್ಟಮುಖಾ, ಮುಗಳನಗಿ ಬ್ಯಾರಿ ಕಲತ್ತಾನು. ತಾಜಾ ಹರೆ ತುಂಬಿ ತುಂಬಿ ಯೋಳ ಹೊರಸಿನ ನುಲೀಗಿ ನೆಲಿ ಸಿಗಾಣಿಲ್ಲ.

ಜೋಗತಿ : ಅವ್ವ ಅವ ಹೆಂಗ ಸಿಕ್ಕಾನ?

ಭೀಮ್ಯಾ : ಎಲೀ ಇದರ ನಿಂದೂ ಘನ ಕೆಟ್ಟ ಸೇಲಿನ.

ಜೋಗತಿ : ಸೆಲೀ ಅಲ್ಲೊ ಮಗನ ಹುಕ್ಕೇರಿ ಕಾರಂಜಿ.

ಭೀಮ್ಯಾ : ಸಾಹೇಬರೂ ಮಗನ ಅಂತಾರು. ನೀನೂ ಅಂತಿ. ಎವ್ವ ನಿನ್ನ ಹೆಸರೇನಾ?

ಜೋಗತಿ : ಹಳೀ ಹೆಸರೇನ ಮಾಡ್ತಿ? ನೀನs ಒಂದು ಚೆಂದಾಂದ ಆರಿಸಿ ಇಡು.

ಭೀಮ್ಯಾ : ಸಾಹೇಬರ, ಸಾಹೇಬರ ಲಗುಬರ್ರೀ. ಎಲ್ಲಿ ಹ್ವಾದರೊ. ಸಾಹೇಬರ? ಅಂಧಾಂಗ ಎವ್ವ, ನಿನ್ನ ಮನೀ ಕೀಲಿಗಿ ಎಷ್ಟ ಕೈ ಅದಾವು?

ಜೋಗತಿ : ಎಷ್ಟಿದ್ದರೇನ? ಮಲೀಗಿ ಎದ್ದಮ್ಯಾಲ ಧೂಳ ಜಾಡಿಸಿದ ಜೋಗತಿ ಮುತ್ತೋದೇರಿಗಿಂತ ಹೆಚ್ಚಂತ ತಿಳಿ. ಅವ ಬಂದ ಆಡಬೇಕೆಂದರ ಅಂಗಳ ಹೆಂಗಿರಬೇಕ?

ಭೀಮ್ಯಾ : (ಸಮೀಪಕ್ಕೆ ಸರಿದು) ಯಾವ, ಅವ?

ಜೋಗತಿ : ಹೌಂದೌಂದ ಅವ.

ಭೀಮ್ಯಾ : ನಿನ್ನ ಮೈಯಾಗ ಅವ ಆಡಾತಾನ ಹೌಂದಲ್ಲ?

ಜೋಗತಿ : ಹೂ ಹೂ ಯಾಕ?

ಭೀಮ್ಯಾ : ಆಗಾಗ ಸಾಹೇಬರೂ ನನ್ನ ಮೈಯಾಗ ಆಡತಾರ.

ಜೋಗತಿ : ಅಯ್ಯ ಲಡದು, ನಿನ್ನ ಸಾಬ ಜೀವಂತ ಅದಾನಂತ ಹೇಳಿದೆಲ್ಲ.

ಭೀಮ್ಯಾ : ಅವನೂ ಸತ್ತಾನೇನ ಹಂಗಾರ?

ಜೋಗತಿ : (ಧ್ವನಿ ನಡಗಿಸುತ್ತು) ಅವ್ಹೆಂಗೆ ಸಾಯತಾನ? ಹುಟ್ಟಿಲ್ಲ, ಸಾವಿಲ್ಲ ಇಲ್ಲೆದಾನ ಇಲ್ಲಿಲ್ಲ. ಸರವ ಲೋಕಕ್ಕೆಲ್ಲಾಗ ಇರಿವಂಭು ಇರಿವೀ ಹಿಡಕೊಂಡ ಆನೆಂಬೊ ಆನಿಗೆಲ್ಲಾ ಆಧಾರಾದಾವ. ಅವನಾಟ ಏನ್ಕೇಳ್ತೀ ಮಗನ?

ಭೀಮ್ಯಾ : ನೀ ಅವನ್ನ ನೋಡೀದೀ?

ಜೋಗತಿ : ಏನ ಮಾತೋ ತಿಳಿಗೇಡಿ, ಬಾಲಖಾ? ಬಂದ ಬಲಕ್ಕ ಕುಂತ ಮದಿವ್ಯಾಧವ. ಮೈಗೆ ಭಂಡಾರ ಹಚ್ಚಿ ಮುತ್ತ ಕಟ್ಟಿಧಾವ. ದಿನ ಬೆಳಗಾದರ ಈ ಸರೇರದಾಗ ಸರಚೆಂದ ಆಟ ಆಢಾವ. ಆ ಸ್ವಾದರ ಮಾವನ್ನ ನೋಡೀದೀ ಏನಂಥೀಯಲ್ಲೋ?

ಭೀಮ್ಯಾ : ಏನ ವಯಾ ಅವಂದ? ಹೆಂಗದಾನು?

ಜೋಗತಿ : ಖಾಯಂ ಪಂಚವೀಸ ವರಸದ ಹರೆ. ನಿನ್ನ ಸಾಬನ ತಾಜಾ ಹರೇದ ನೆಲಿಯೋಳ ಹೊರಿಸಿನಿ ನುಲೀಗಿ ಸಿಕ್ಕಿಲ್ಲಾದರ, ಅವನ ಹರೇದ ನೆಲಿ ಈ ಜಗತ ಕಟ್ಟಿದ್ದ ಉಪ್ಪಾರಗs ಸಿಕ್ಕಲ್ಲ. ಸರವ ಲೋಕೆಲ್ಲಾ ಬಂದ ಕೊಡ ತುಂಬಿ ತುಂಬಿಕೊಂಡ, ಮ್ಯಾಲ ನಳಾ ಹಚ್ಚಿ ಎಳದರೂ ಒಂದ ಹಿನಿ ಕಮ್‌ ಬಂದಿಲ್ಲ. ಇಷ್ಟಾದರೂ ಒಂದ ಯಾಕಂಧಾನೇನ? ಒಂದ ಏನಂಧಾನೇನ?

ಭೀಮ್ಯಾ : (ಗಪ್ಪನೆ ಕಾಲು ಹಿಡಿದು) ತಾಯೀ ಎಷ್ಟ ಕಾಡಿದಿ ಏನ ಓಡ್ಯಾಡ್ಸಿದಿ? ನಿನ್ನ ಹೆಸರಿನ್ಯಾಗ ಗುಡಿ ಅಂತಿಳದ ಗಟಾರದಾಗೆಲ್ಲಾ ಹೊಳ್ಯಾಡಿ ಹೇಸಿ ಹೇಸಿ ಎಬರೇಸಿ ಹುಡಿಕ್ಯಾಡತೇನು; ಕಂಡ ಕಾಣವೊಲ್ಲಿ. ನೀ ನಮ್ಮ ಸಾಹೇಬರಿಗಿ ಅವನ್ನ ತೋರಸಾಕಬೇಕ.

ಜೋಗತಿ : ಕರೀ ನಿನ್ನ ಸಾಬನ್ನ. ಜೀವಂತದಾನು?

ಭೀಮ್ಯಾ : ಏ ನಾ ಕರದರ ಓ ಅನ್ನಲಿಲ್ಲ. ನೀನs ಕರ್ಯಾಕ ಬೇಕ.

ಜೋಗತಿ : ನಾನಾದರೂ ಕರ್ಯಾಕ ಬೇಕ?

ಭೀಮ್ಯಾ : ಹೌಂದ ನೀನಾದರೂ ಕರ್ಯಾಕ ಬೇಕ.

ಜೋಗತಿ : ಹುಡಕ್ಯಾಡೋ ಹುಡುಗಾ. ನೀ ಹುಡುಕೋದ ಹಿಡಕೊಂಡ ಬಂದ, ಬಾಗಿಲಾಗ ನಿಂತೇನ. ತಗೊಂಡ ಹೋಗ. (ಇಬ್ಬರೂ ಸ್ವಲ್ಪ ಸಮಯ ಕಾಯವರು. ಭೀಮ್ಯಾ ಎದ್ದು ನೆರಳುಗಳ ಕಡೆಗೆ ಹೋಗಿ ಹುಬ್ಬುಗೈ ಹಚ್ಚಿ ನೋಡಿ ಬಂದು ಕುಳಿತುಕೊಳ್ಳುತ್ತಾ)

ಭೀಮ್ಯಾ : ಇನ್ನೂ ಅವರಿಗೆ ನಿನ್ನ ಗುರುತ ಹತ್ತಿಲ್ಲೇನವಾ. ಅವರು ಯಾವತ್ತೂ ಹಾಂಗ. ಒಮ್ಮೊಮ್ಮಿ ನನ್ನ ಗುರುತಾನs ಹಿಡ್ಯಾಣಿಲ್ಲಂದರ.

ಜೋಗತಿ : ಹಂತಾದೇನ ಆಗೇತೆವಗ?

ಭೀಮ್ಯಾ : ಏನ್ಹೇಳ್ಲಿ ಜೋಗವ್ವಾ? ಆ ಕೊಪ್ಪರಗಿ ಮುತ್ತೋದೇರ ಅಂತ ನಾ ಹೇಳ್ಲಿಲ್ಲ?

ಜೋಗತಿ : ಹೂಂ ಹೂಂ.

ಭೀಮ್ಯಾ : ಅವರ ಇಷ್ಟ ಧಡ್ಡರಧಾರಲಾ,- ನಮ್ಮ ಸಾಹೇಬರ ಒಂದಮಾತ ತಿಳ್ಯಾಣಿಲ್ಲವರಿಗಿ. ಅವರ ಮಾತ ಇವರಿಗಿ ತಿಳ್ಯಾಣಿಲ್ಲ. ತಿಳೀಲಾರಕ ಬೈದಾಡಾಕ ಸುರು, ನೀ ಹೊಲಸ ನೀ ಹೊಲಸ. ಕಡೇಕ ಬ್ಯಾಸತ್ತ ನಾನ, ಏ ಹುಚ್ಚಗೋಳ್ರಾ, ಕೂಡಿ ಇರೋದು ಹಿಂಗಲ್ಲಾ. ಹೂ ಹೂ ಅಂದರ ಕೂಡಿದಾಂಗ ಅಂತ ಹೇಳಿ ಬಂದ್ನಿ. ಈಗ ತಗೊಳ್ಳವಾ? ನೀನು ಹೂ, ನಾನು ಹೂ, ಹೂ ಹೂ ಹೂ. ತಲೀ ಚಿಟ್ಟ ಹಿಡದ ಮನೀಗಿ ಮನೀನ ನೆಳ್ಳಿಧಾಂಗ ಕೇಳತೈತಿ. ಏನ ಮಾಡತಿ?

ಜೋಗತಿ : ಹಿಂತಾ ಮಂದಿ ನನ್ನ ಹಂತ್ಯಾಕ ಸಾಲಗಟ್ಟಿ ಬರತಾರ. ನನಗ ತಿಳೀಧೇನೋ ತಿಳಿಗೇಡಿ ಬಾಲಖಾ?

ಭೀಮ್ಯಾ : ಕೆಲಸ ಕೆಟ್ಟಿತ.

ಜೋಗತಿ : ಹಂತಾದೇನಾತ?

ಭೀಮ್ಯಾ : ಸಾಹೇಬರ ಮನೀ ಚಾಕರೀ ಬಿಟ್ಟ ಬಿಡಬೇಕಂತ ವಾಟಾಗಟಿ ಹಾಕ್ಕ್ಯೊಂಡ ನಾ ಕುಂತೇನು. ಇವರ‍್ನ ಬಿಟ್ಟ ಇನ್ನೊಬ್ಬ ಇವನs ಗಂಟಬಿದ್ದರೇನ್ಮಾಡ್ಲಿ?

ಜೋಗತಿ : ಚಿಂತೀ ಮಾಡಬ್ಯಾಡ ನಿನಗ ಪೋಲೀಸ ಕೆಲಸ ಸಿಗತೈತಿ.

ಭೀಮ್ಯಾ : ಖರೆ?

ಜೋಗತಿ : ನನ್ನ ವಾಕ್ಯೆ ಹುಸೀ ಹೋಗಾಣಿಲ್ಲ. ನಾಲಿಗ್ಯಾಗ ಕರೀಮಚ್ಚಿ ಕೊಟ್ಟಿದಾನ ಅವ. (ನಾಲಿಗೆ ತೆಗೆದು ತೋರುತ್ತಾಳೆ)

ಭೀಮ್ಯಾ : ಅದ ನಾಲಗ್ಯಾಗ ಇದೊಂದ ಹೇಳ. ನಮ ಸಾಹೇಬರಿಗಿ ಅವ ಸಿಗತಾನ?

ಜೋಗತಿ : ಅವನ ಮುಂಗೈಯಾಗ ಹಿಂಗ್ಹಿಡದ, ನಿನ್ನ ಸಾಬನ ಅಂಗೈಯಾಗ ಇಟ್ಟರಾತಿಲ್ಲೊ?

ಭೀಮ್ಯಾ : (ಗಪ್ಪನ ಕಾಲು ಹಿಡಿದು) ಅಷ್ಟ ಮಾಡ ಹಡದವ್ವಾ. ನಿನ ಪಾದ ತೊಳದ ನೀರ ಕುಡೀತೇನು. ಏಳ ಒಳಗ ಹೋಗೋಣು.

ಜೋಗತಿ : ಯಾಕ?

ಭೀಮ್ಯಾ : ಸಾಹೇಬರ್ನ ಎಬ್ಬಿಸಿಕೊಂಡ ಬರಾಕ.

ಜೋಗತಿ : ಏಳವೊಲ್ಲರಂತೀ.

ಭೀಮ್ಯಾ : ನೆನಪಾತೇಳ ನೀ (ಏಳುವರು. ನಿಧಾನವಾಗಿ ಮಾತನಾಡುತ್ತಲೇ ರಂಗದ ಪ್ರದಕ್ಷಿಣೆ ಹಾಕುತ್ತ) ಸಾಹೇಬರ ಕುರುವಿನ ಮ್ಯಾಲ ಕೈಯಾಡಿಸಿದರ ಅವರಿಗೆ ಎಚ್ಚರಾಗತೈತಿ. ಮೆತ್ತಗ ತುರುಸಬೇಕು. ಯಾಕಂದರ ಆ ರಂಡೇರ ತುರಿಸಿ ತುರಿಸಿ ಕೀವಾ ರಕ್ತಾ ಬಸೀತೈತಿ.

ಜೋಗತಿ : ಎಲ್ಲಾ ಬಿಟ್ಟ ಅಲ್ಲೆ ಯಾಕಾಗೇತಿ?

ಭೀಮ್ಯಾ : ನಿನ್ನ ಮೈಯಾಗ ಬರ್ತಾನಲ್ಲಾ ಅವಾ ಇವ ಒಂದs.

ಜೋಗತಿ : ಒಂದs?

ಭೀಮ್ಯಾ : ನನಗೇನ ಅದರಾಗ ಸಂಶೇನs ಇಲ್ಲ.

ಜೋಗತಿ : (ಕೈ ಮುಗಿದು ನಿಂತು) ಅದೆಂಗಾದೀತ?

ಭೀಮ್ಯಾ : ಅದೆಂಗ ಅಂದರ ಸಣ್ಣಂದಿರತ ಇಬ್ಬರೂ ಒಂದಲ್ಲೇ ಹುಟ್ಟಿ ಒಂದಲ್ಲೇ ಬೆಳೆದು ಒಂದs ಸಾಲಿ ಬರದವರು. ಅವಗ ಖುಷೀ ಆದರ ಇವರು ನಗಬೇಕು. ಇವರಿಗಿ ನೋವಾದರ ಅವ ಅಳಬೇಕು. ಒಟ್ಟ ಇಬ್ಬರೂ ಒಂದ ಬಾಯಲೇ ಉಂಡ ಒಂದ ಮುಕಳೀಲೆ ಹೇತವರಂದರ ಇದರ- ಮ್ಯಾಲ ತಿಳೀಯಲ್ಲ. ಇಬ್ಬರದೂ ಹೊಕ್ಕಳ ಬಾಲ ಒಂದs. ಕತ್ತಿರಸಬೇಕಂತ ಇಂದ ನಾಳಿ ಇಂದನಾಳಿ ಮುಂದ ಹದಿಮೂರ ವರಸ ಹಾಂಗ ದಾಟಿತು. ಸಾಹೇಬರ ಮುಲ್ಕೀ ಪರೀಕ್ಷೇಕ ಹೋಗೂದ ಬರಾಣಾ ಕತ್ತರಿಸಿದರು. ಇಬ್ಬರೂ ಅತ್ತ, ಚೀರಿ, ಹೊಕ್ಕಳ ತುಂಬ ರಗತಾಗಿ, ಆ ಗಾಯ ಇ‌ನ್ನೂ ಮಾದಿಲ್ಲ. ಅಂದಿನಿಂದ ಅವನ ತಲಾಸದಾಗs ಅದಾರು, ಅವ ಸಿಕ್ಕೇ ಇಲ್ಲ.

ಜೋಗತಿ : ಹಂಗಾರ ನಮ್ಮಾವ ನನ್ನ ಮುಂದ್ಯಾಕ ಹೇಳಲಿಲ್ಲ?

ಭೀಮ್ಯಾ : ನೀ ಕೇಳಿಲ್ಲಾ ಅವ ಹೇಳಿಲ್ಲಾ
(ಎನ್ನುತ್ತ ಭೀಮ್ಯಾ ಒಳಗೆ ಹೋಗುತ್ತಲೂ ಜೋಗತಿ ತಲೆ ಸೆರಗು ತೆಗೆದ ಹೊಕ್ಕಳಿಗೆ ಕುಂಕುಮ ಸವರಿಕೊಂಡು ಸೆರಗನ್ನು ಕಂಕುಳಲ್ಲಿ ಸಿಕ್ಕಿಸಿಕೊಳ್ಳುವಳು. ಬಂಡಾರ ಹಣೆಗೆ ಬಡಿದುಕೊಳ್ಳುವುಷ್ಟರಲ್ಲಿ ಭೀಮ್ಯಾ ವಾಪಾಸ್ಸು ಬರುವನು.)

ಜೋಗತಿ : ಕರೀ ಅವನ್ನ.

ಭೀಮ್ಯಾ : ನೀ ಬರಾಕ ಬೇಕ.

ಜೋಗತಿ : ಕರತಾ ಇಲ್ಲಿ, ಅಂದರ.

ಭೀಮ್ಯಾ : ನಿನ್ಹೆಸರ ಏನ್ಹೇಳಲಿ?

ಜೋಗತಿ : ಅವಂದೇನ?

ಭೀಮ್ಯಾ : ನಾನೂ.

ಜೋಗತಿ : ನಂದೂ ನಾನೂ ಹೋಗ.
(ಭೀಮ್ಯಾ ಒಳಗೆ ಹೋಗುತ್ತಲೂ ತುರುಬು ಬಿಚ್ಚಿ ಕೂದಲು ಮೈ ತುಂಬ ಪಸರಿಸಿಕೊಳ್ಳುತ್ತಾಳೆ. ರಂಗದ ಬೆಳಕು ಕಂದಿ ಹಳದಿಯ ಎಳೆಬೆಳಕು ಮಾತ್ರ ರಂಗದ ಮೇಲೆ ಬಿದ್ದು ಉಳಿದೆಡೆಯಲ್ಲ ಮೊದಲಿನಂತೆ ಕತ್ತಲೆ ಆವರಿಸಿದೆ. ಹೆಣ್ಣಿನ ಧ್ವನಿಗಳು ಅತ್ಯಂತ ಅಸ್ಪಷ್ಟವಾಗಿ ನರಳತೊಡಗಿ, ಒಂದರಲ್ಲಿ ಒಂದು ಸೇರಿ ಹೂ, ಹೂ, ಹೂ, ಹೂ, ಹೂ ಎಂದು ತಾಳಿಗನುಗುಣವಾಗಿ ಒಂದೇ ಸ್ತರದಲ್ಲಿ, ಬರಬರತ್ತ ಸ್ಪಷ್ಟವಾಗುತ್ತ ಬರುತ್ತದೆ. ಭೀಮ್ಯಾ ನಾಣಿಯ ಕೈ ಹಿಡಿದು ರೋಗಿಯನ್ನು ತರುವಂತೆ ಕರೆತಂದು ಕುರ್ಚಿಯಲ್ಲಿ ಕೂರಿಸುತ್ತಲೂ ನಾಣಿ ಜೋಗತಿಯನ್ನು ಗಮನಿಸದೆ ನರಳುತ್ತ ತಲೆ ಹಿಂದಕ್ಕಾನಿಸಿ ಒರಗುತ್ತಾನೆ. ನರಳುವ ಧ್ವನಿ ಈಗ ಬಹಳ ಸ್ಪಷ್ಟವಾಗಿದೆ. ಜೋಗತಿ ತನ್ನ ಹೆಜ್ಜೆಯ ಗೆಜ್ಜೆಗಳನ್ನು ಸ್ಪಷ್ಟವಾಗಿ ಸಪ್ಪಳಿಸುತ್ತ ನಾಣಿಯ ಎದುರಿಗೆ ಹೋಗಿ ಹೊಕ್ಕುಳ ತೆರೆದು ತೋರಿ ಠೀವಿಯಲ್ಲಿ ನಿಂತು)

ಜೋಗತಿ : ಸಿಕ್ಕತೇನಪಾ ಗುರುತ?

ನಾಣಿ : (ಗಮನಿಸಿ ಕೈ ಮುಗಿದು)
ಶರಣಾ ತಾವು ಯಾರು?

ಭೀಮ್ಯಾ : ಸಾಹೇಬರ, ಈಕಿನs ಅವನ್ನ ಇಟ್ಟಗೊಂಡಾಕಿ. ಈಕೀ ಸರೇರದಾಗ ದಿನ್ನಾ ಬಂದ ಸರಚೆಂದ ಆಟಾ ಆಡಿ ಹೋಗತಾನಂತ್ರಿ. ನೀವ ಬೇಕಾದ್ದ ಕೇಳ್ರಿ, ಹೇಳತಾಳ. ಹೆಸರ ಹೇಳಿದರ ಸಾಕು. ಆ ಮನಿಶಾ ಯಾರಿಗಿ, ಎಂದ, ಯಾಕ ಹುಟ್ಟಿದಾ ಎಲ್ಲಾ ಹೇಳತಾಳ್ರಿ.

ಜೋಗತಿ : ತಿಳೀತೇನ?

ನಾಣಿ : ಶರಣ ತಾವು ಯಾರು?

ಭೀಮ್ಯಾ : ಭಾಳಂದ್ರ ಭಾಳ ಶಾಣ್ಯಾಳ್ರಿ ಮತ್ತ, ಬೇಕಾದಂಥಾ ಗಂಟ ಅಗ್ಗಂಟ ಕಗ್ಗಂಟೆಲ್ಲಾ ಈಕಿನ್ನೋಡೇ ಬಿಚ್ಚತಾವರಿ.

ಜೋಗತಿ : ಅರಿವಾತೇನ?

ಭೀಮ್ಯಾ : ಸಾಹೇಬರ ಈಕೀ ಪುಸ್ತೇಕದಾಗೂ ರಗಡ ಪಾನ ಅದಾವ್ರೀ. ನಾಕಮಂದಿ ಧಣೇ ನೆಗವತಾರ ನೋಡ್ರಿ. ಬೇಕಾದ ಬಾಯ ಲೆಕ್ಕಾ ಹೇಳ್ರಿ. ಹಾ ಅನ್ನೂದರಾಗ ಬಿಡಸ್ತಾಳ.

ಜೋಗತಿ : ಈಗರೆ ತಿಳಿತಿಲ್ಲೊ?

ನಾಣಿ : ತಾವು ಯಾರು? ಶರಣನಾ?

ಜೋಗತಿ : ಇನ್ನೂ ಯಾರೇನೋ?
(ಆವೇಶದಿಂದ ಸೆರಗನ್ನು ಇನ್ನಷ್ಟು ಸರಿಯಾಗಿ ಸಿಕ್ಕಿಸಿಕೊಂಡು, ಕುಣಿಯಲು ಅವಕಾಶವಾಗುವಂತೆ ಕಚ್ಚೆ ಹಾಕಿಕೊಳ್ಳುತ್ತಾಳೆ. ನರಳುವ ಧ್ವನಿಗಳು ಇನ್ನೂ ಸ್ಪಷ್ಟವಾಗುತ್ತವೆ. ಜೋಗತಿ ರಭಸದಿಂದ ಕುಣಿಯಲಾರಂಭಿಸಿ ರಂಗವನ್ನು ಮೂರು ಪ್ರದಕ್ಷಿಣೆ ಹಾಕಿ, ಕುಣಿಯುತ್ತಲೇ ಬಳಿಗೆ ಬಂದು ತಲೆಗೂದಲನ್ನು ಮುಖದ ಮೇಲೆ ಬಿಟ್ಟುಕೊಂಡು ನಾಣಿಯ ಹೊಕ್ಕಳಿನ ಮೇಲೆ ಕುಡುಗೋಲು ಮಸೆದಂತೆ ಕೂದಲನ್ನು ಕಡೆ ಕಡೆ ಆಡಿಸಿತೊಡಗುತ್ತಾಳೆ. ಕೆಲ ಹೊತ್ತು ಹೀಗೆ ಮಾಡಿದ ಮೇಲೆ ನಾಣಿ ಸುಮ್ಮನೆ ಅವಕ್ಕಾಗಿ ಕೂತಿರುವಾಗ ಜೋರಿನಿಂದ ಅವನ ಹೊಕ್ಕುಳಿಗೆ ಕೂದಲಿನಿಂದ ಕಟಿಯುತ್ತಾಳೆ. ಮತ್ತೆ ಮಸೆದು, ಅಪ್ಪಳಿಸಿ ಹೀಗೆ ಮೂರು ಸಲ ಮಾಡಿ ಠೀವಿಯಲ್ಲಿ ನಿಂತು)

ಜೋಗತಿ : ಸಿಕ್ಕಿತ ಗುರುತ?

ನಾಣಿ : ಶರಣಾ ತಾವು ಯಾರು?
(ನರಳುವ ನೆರಳುಗಳೆಲ್ಲ ಈಗ ಸ್ಪಷ್ಟವಾಗಿ ಕೇಕೆ ಹಾಕಿ ನಗುತ್ತ, ರಂಗದ ಮೂಲೆ ಮೂಲೆಯಲ್ಲೆಲ್ಲ ಸ್ತ್ರೀಯರಿಗಾಗಿ ಗೋಚರಿಸುತ್ತಾರೆ. ಅವರಲ್ಲಿ ಗೀತಾ ಒಬ್ಬಳಿದ್ದಾಳೆ, ಜೋಗತಿ ಚೀರಿ ದೇವರು ತುಂಬಿ ನಡುಗಲಾರಂಭಿಸುತ್ತಾಳೆ. ಉಳಿದ ಸ್ತ್ರೀಯರೆಲ್ಲ ಮಾತಿನ ಮಧ್ಯೆ ಮಧ್ಯೆ ಗಹಗಹಿಸಿ ನಕ್ಕು ಓಡಾಡುತ್ತಿದ್ದರೂ ಮೂವರಿಗೆ ಅವರಕಡೆ ಗಮನವಿಲ್ಲ.)

ಜೋಗತಿ : (ಚೀರುತ್ತ)

ಒಂಧಲ್ಲೆ ಹುಟ್ಟಿ ಒಂದಲ್ಲೆ ಬೆಳದ ಮತ್ತ ಮರತೇನಂತೀಯಲ್ಲೊ- ಏನ್ಹೇಳ್ಲಿ?

ನಾಣಿ : ಶರಣಾ ಸಿಕ್ಕಿತು ಗುರುತ!

ಜೋಗತಿ : ಹೇಳ ನಾ ಯಾರು?

ನಾಣಿ : ಅರಗೊಡ್ಡಿ.
(ಹೆಂಗಸರು ಗಹಗಹಿಸಿ ನಗುತ್ತಾರೆ)

ಜೋಗತಿ : ಯಾರಾ?

ನಾಣಿ : ಬಯಲಾಟದ ಅರಗೊಡ್ಡಿ, ವಿದೂಷಕ.

ಜೋಗತಿ : ಏನಂದಿ?

ನಾಣಿ : ದೇವರ ಹತ್ತಿರ ಹೋಗಿ ದೇವರ್ಹಾಂಗ ನಟನಾ ಮಾಡಾಕ ಕಲತ ಬಂದಿ? ನಿನ್ನ ಬಿಟ್ಟ ಇನ್ನೊಂದರ‍್ಹಾಂಗ ಆಡಿದರ ಅದೆಲ್ಲಾ ನಟನಾ ಅಲ್ಲೇನ? ನಾಟಕ ಮಾಡಿದರ ನಗೀ ಬರದ ಇನ್ನೇನಾಗತೈತಿ? ಒಂದು ಸಲ ಆದರೂ ಕನ್ನಡೀ ಮುಂದ ಯಾರಿಲ್ಲದಾಗಾದರೂ ಬತ್ತಲಾಗಬಾರದ? ನೋಡಿಕೋಬಾರದ? ಉಟ್ಟ ಉಡುಪ ಯಾರದು? ಅರಗೊಡ್ಡಿ ಅಂದರ ಸಿಟ್ಟಿಗಿ ಬರತಿ. ಹೋಗ್ಹೋಗ ನಿನಗ ನೋಡೋದಕ್ಕ ನಮ್ಮಲ್ಲೇನಿಲ್ಲ. ಹೊರಭೀಳು.

ಜೋಗತಿ : (ಚೀರಿ)

ತಿಳಿದ ಮಾತಾಡಲೇ ಮಗನ.
(ನಾಣಿ ಎದ್ದು ನಿಂತು ಪ್ಯಾಂಟಿನ ಜೇಬಿನಿಂದ ಪಿಸ್ತೂಲ ತೆಗೆದು ಅವಳಿಗೆ ಗುರಿ ಹಿಡಿದು)

ನಾಣಿ : ಹೊರಬೀಳ.

ಜೋಗತಿ : (ಧ್ವನಿ ಏರಿಸಿ)

ಹುಟ್ಟ ಹೊಂದಿಲ್ಲದವನನ್ನ ಕೊಂದೇನಂಬು ಹುಡಗಾ, ನೀ ಏನ, ನಿನ್ನ ಪಿಸ್ತೂಲೇನ? ಹಾರಸು ತಾಕತ್ತಿದ್ದರ,
(ರಭಸದಿಂದ ಕುಣಿಯ ತೊಡಗುತ್ತಲೂ ಮೂಲೆಯ ಸ್ತ್ರೀಯರೆಲ್ಲ ಕೇಕೆ ಹಾಕುತ್ತ ಕುಣಿದಾಡುತ್ತಾರೆ)

ನಾಣಿ : ಭೀಮ್ಯಾ.

ಭೀಮ್ಯಾ : ಸಾಹೇಬರ.

ನಾಣಿ : ಹೊರಗಹಾಕ.

ಭೀಮ್ಯಾ : ಶರಣರ ಹೊರಬೀಳ್ರೀ.

ನಾಣಿ : ಹೊರಗ್ಹಾಕ.

ಭೀಮ್ಯಾ : ಶರಣರ ಹೊರಬೀಳ್ರಿ. ಸಾಹೇಬರ ಚೇರಾಪಟ್ಟಿ ಯಾಕೊ ಬ್ಯಾರೆ ಕಾಣತೈತಿ ಹೊರಬೀಳ್ರಿ.

ನಾಣಿ : ಹೊರಗ್ಹಾಕು.

ಭೀಮ್ಯಾ : ಶರಣರs
(ಎಂದು ಹೇಳುತ್ತಿರುವಂತೆ ಗುಂಡು ಹಾರಿ, ಕುಣಿಯುತ್ತಿದ್ದ ಜೋಗತಿ ಸತ್ತು ಬೀಳುತ್ತಾಳೆ. ಸ್ತ್ರೀಯರೆಲ್ಲ ಕಿರುಚುತ್ತ ರಂಗದ ಸುತ್ತ ಚೆಲ್ಲಾಪಿಲ್ಲಿಯಾಗಿ ಓಡ್ಯಾಡಿ ಒಬ್ಬೊಬ್ಬರೇ ಓಡಿ ಹೋಗಿ ರಂಗ ಒಮ್ಮೆಲೆ ಶಾಂತವಾಗುತ್ತದೆ. ಗುಂಡು ಹಾರಿಸಿದ ಭಂಗಿಯಲ್ಲೇ ನಾಣಿ ದಿಗ್ಭ್ರಮೆಯಿಂದ ನಿಂತಿದ್ದಾನೆ. ಭೀಮ್ಯಾ ಬಾಯಿ ತೆರೆದವನು ತೆರೆದುಕೊಂಡೇ ನಿಂತಿದ್ದಾನೆ. ಅಷ್ಟರಲ್ಲಿ ಪೋಲೀಸರ ಸೀಟಿ ಧ್ವನಿಮೊದಲು ಒಂದು, ಮೇಲೆ ಅನೇಕ ಕೇಳಿ ಪೋಜದಾರನೊಬ್ಬ ನಾಲ್ಕೈದು ಪೋಲೀಸರನ್ನು ಕೂಡಿಕೊಂಡು ಪಿಸ್ತೂಲು ಹಿಡಿದುಕೊಂಡೇ ಬರುತ್ತಾನೆ. ಭೀಮ್ಯಾ ಹೆದರಿ ನಾಣಿಯನ್ನು ಅಲುಗುತ್ತಲೂ ಎಚ್ಚರವಾಗಿ ಗಡಬಡಿಸಿ ಗಪ್ಪನೆ ಪೋಜದಾರನ ಕಾಲು ಹಿಡಿದುಕೊಳ್ಳುತ್ತಾನೆ.)

ನಾಣಿ : ಸಾಹೇಬರ, ಸಾಹೇಬರ ನಾನಲ್ರೀ, ಒಳಗೆ ಓಡಿಹೋದ. ಇಲ್ಲೆ ಮನ್ಯಾಗ ಅಡಗಿರಬೇಕ್ರಿ. ಅಲ್ಲೇನೋs?

ಭೀಮ್ಯಾ : ಹೌಂದ್ಹೌಂದ್ರಿ ಕೈಯಾಗ ಪಿಸ್ತೂಲೈತ್ರಿ.
(ನಾಣಿ ಗಡಬಡಿಸಿ ಪಿಸ್ತೂಲೆಸೆಯುವನು)

ಗುರಿ ಹಿಂಗೆಂದೂ ಹಿಡಿದಾವಲ್ರಿ.

ನಾಣಿ : ಹೊಡೆದ ಹಾಂಗs ನಿಂತಿದ್ರಿ. ನಿಮ್ಮ ಸೀಟಿ ಕೇಳಿ ಓಡಿ ಹ್ವಾದ್ರಿ.

ಭೀಮ್ಯಾ : ಹೌಂದ್ಹೌಂದ್ರಿ. ಹೊಕ್ಕಳಮ್ಯಾಲ ರಗತ ಇನ್ನೂ ಹತ್ತಿರ ಬೇಕ್ರಿ.

ಪೋಜದಾರ : ಹೆಂಗದಾನವ?

ಭೀಮ್ಯಾ : ಎರಡ ಕಾಲಾ, ಎರಡ ಕೈಯಾ, ಒಂದ ಮೋತೊ. ಚೆಲುವಂತ ನಮ್ಮ ಸಾಹೇಬರ ಹೇಳತಿದ್ದರ್ರೀ?

ನಾಣಿ : ನಿಮ್ಮ ಹೆಂಡರನ್ನೆಲ್ಲಾ ಅವ ಓಡಿಸಿಕೊಂಡ ಬಂದಿದ್ದರಿ. ಅಲ್ಲೇನೋ?

ಭೀಮ್ಯಾ : ಹೌಂದಹೌಂದ್ರಿ. ಇಕ್ಕ, ಈಗ ಅವರೆಲ್ಲಾ ಓಡಿಹ್ವಾದರ್ರಿ.

ಪೋಜದಾರ : ಇಲ್ಲಿ ಯಾಕ ಬಂದಿದ್ದವ?

ಭೀಮ್ಯಾ : ಸಾಹೇಬರ ಯಾಕ ಬಂದಿದ್ದರೀ?

ನಾಣಿ : ಅವರ ಮನೀಗೂ ನಮ್ಮ ಮನಿಗೂ ನಡುವ ಒಂದs ಗ್ವಾಡಿರಿ.

ಪೋಜದಾರ : ಈ ಜೋಗತಿ ಯಾಕೆ ಬಂದಿದ್ಳು?

ಭೀಮ್ಯಾ : ಭೇಟಿ ಆಗಾಕರಿ.

ಪೋಜದಾರ : ಆತೇನ?

ಭೀಮ್ಯಾ : ಅಷ್ಟರಾಗ ಧಡಂದುಡಿಕಿ ಆತಲ್ರಿ.

ಪೋಜದಾರ : ಏನವನ ಹೆಸರ?

ಭೀಮ್ಯಾ : ಸಾಹೇಬರ ಏನ್ರಿ?

ನಾಣಿ : ಈ ಈ ಈ, ಈಈ ಮುದುಕರು ಅವಗ ದೇವರೂ ಅಂತ ಕರೀತಿದ್ದರ ನೋಡ್ರಿ.
(ಕೂಡಲೇ ಪೋಜದಾರ ಬೇರೆ ಪೋಲೀಸರಿಗೆ ಒಂದೊಂದು ದಿಕ್ಕಿನಲ್ಲಿ ಸಂಶೋಧಿಸುವಂತೆ ಸೂಚಿಸಿ ತಾನೊಂದು ದಿಕ್ಕಿನಲ್ಲಿ ಮಾಯವಾಗುತ್ತಾನೆ. ಭೀಮ್ಯಾ ಸಹ ಅವರೊಂದಿಗೆ ಹೋದಾಗ ನಾಣಿ ಬಹಳ ಕುತೂಹಲದಿಂದ ಕಾಯುತ್ತಿರುತ್ತಾನೆ. ಕೆಲ ಸಮಯವಾದ ಮೇಲೆ ಪೋಜದಾರ ಎರಡು ಮೂರಡಿ ಎತ್ತರದ ಗೊಂಬೆಯೊಂದನ್ನೆತ್ತಿಕೊಂಡು ತರುತ್ತಾನೆ. ಅದರ ಹೊಕ್ಕುಳಲ್ಲಿ ಹಸೀ ನೆತ್ತರಿದೆ. ನೋಡಿದೊಡನೆ ನಾಣಿ ಆನಂದಭರಿತನಾಗಿ ಕಸಿದುಕೊಂಡು ತಬ್ಬಿಕೊಳ್ಳುತ್ತಾನೆ. ಕಣ್ಣೀರು ಸುರಿಸುತ್ತ.)

ನಾಣಿ : ನಾನೂ! ನಾನು! ಇಷ್ಟು ದಿನ ಎಲ್ಲಿದ್ದೆ! ಎಷ್ಟು ಹುಡಿಕಿದೆ! ಬೀದಿ ಮನೀ ಮಠ ದೇಶ ಅಲೆದಾಡಿದೆ! ಸುದ್ದಿಲ್ಲ, ಪತ್ರ ಇಲ್ಲ. ಹುಡುಕಿದೆ! ಚಿಂತಿ ಮಾಡಬ್ಯಾಡ. ಒಳ್ಳೊಳ್ಳೆ ಡಾಕ್ಟರದಾರ. ನಾನೂ ನೋಡಿದ್ಕೂಡಲೆ ಎಲ್ಲಾರ ಪತ್ತಾ ನೆನಪಾಗತಾವ. ಆ ಪೋಲೀಸರಿಗಿ ಹೇಳಬಿಡ. ನಾ ಕೊಂದಿಲ್ಲ ಅಂತ ಹೇಳ.
(ಗೊಂಬೆ ಮಕ್ಕಳ ಧ್ವನಿಯಲ್ಲಿ ವಾವಾ? ಎಂದು ಹೇಳುತ್ತದೆ)

ಏನಂದಿ? ವಾವಾ! ವಾವಾ! ನೆನಪ ಆಗವಲ್ದಲ್ಲ. ಡಿಕ್ಸನರಿ, ಡಿಕ್ಸನರಿ.
(ಗೊಂಬೆಯನ್ನು ಕುರ್ಚಿಯ ಮೇಲೆ ಕೂಡ್ರಿಸಿ, ಒಳಗೋಡಿ, ಡಿಕ್ಸನರಿ ತರುತ್ತಾನೆ. ವಾ! ವಾ! ವಾ! ವಾ! ಎಂದು ಹೇಳುತ್ತಾ ಹುಡುಕುತ್ತಾನೆ ಮತ್ತೆ ಓಡಿಹೋಗಿ ಇನ್ನೊಂದು ತರುತ್ತಾನೆ. ಇನ್ನೊಂದು, ಮತ್ತೊಂದು ಹೀಗೆ ರಾಶಿ ರಾಶಿ ಡಿಕ್ಸನರಿ ತಂದು ಭಾವುಕನಾಗಿ ಹುಡುಕುತ್ತಿರುವಂತೆ ಪೋಜದಾರ ಗೊಂಬಿಯ ಅಂಗಾಂಗಳನ್ನು ಕಿತ್ತು ರಂಗದ ಮೂಲೆ ಮೂಲೆಗೆ ಪ್ರೇಕ್ಷಕರಲ್ಲಿ ಎಸೆಯುತ್ತಾನೆ. ಬರೀ ದಡ ಉಳಿದ ಮೇಲೆ ಜೋಗತಿಯ ಶವದ ಮೇಲೆ ಇಟ್ಟು, ಬೇಡಿ ತೆಗೆದು ನಾಣಿ ಚೀರುತ್ತಿದ್ದರೂ, ಯಾಕರಿ ನಾನಲ್ಲರೀ ಎನ್ನುತ್ತಿದ್ದರೂ ಅವನನ್ನು ಬಂಧಿಸಿ ಹೆಣದ ಎದುರಿಗೆ ಕುರ್ಚಿಯಲ್ಲಿ ಕೂರಿಸಿದಾಗ, ಕರುಣೆ ಬರುವ ಹಾಗೆ ಅಳುತ್ತಾನೆ. ಅಷ್ಟರಲ್ಲಿ ಭೀಮ್ಯಾ ಗಂಟು ಕಟ್ಟಿ ಹೊರಬರುತ್ತಾನೆ.)

ಪೋಜದಾರ : ನಡೀಲೇ ನಿನಗ ಪೋಲೀಸ ಕೆಲಸ ಕೊಡತೀನಿ.
(ಎಂದು ಹೇಳಿ ಎಲ್ಲರೂ ಹೊರಟಾಗ, ನಾಣಿ ಅಳುತ್ತ ಬೆನ್ನು ಹತ್ತಬೇಕೆನ್ನುತ್ತಾನೆ. ಅಷ್ಟರಲ್ಲಿ ಪೋಜುದಾರ ಉಳಿದ ಪೋಲೀಸರಿಗೆ ಕಣ್ಣ ಸನ್ನೆ ಮಾಡುತ್ತಲೂ ಅವರು ನಾಣಿಯನ್ನು ಮೊದಲಿನ ಭಂಗಿಯಲ್ಲಿ ಕೂರಿಸಿ ಹಗ್ಗದಿಂದ ಕುರ್ಚಿಗೆ ಬಂಧಿಸುತ್ತಾರೆ. ಅವನು ಒದ್ದಾಡಿ, ಹೆಣ ನೋಡಲಾರದೆ ಕಿರುಚುತ್ತಿದ್ದರೆ ಉಳಿದವರೆಲ್ಲ ಹೋಗುತ್ತಾರೆ. ನಾಣಿ ಒದ್ದಾಡಿ ಅಳುತ್ತ ಚೀರುತ್ತಿರುವಂತೆ ಬೆಳಕು ಕಂದಿ, ಕಂದಿ ತೆರೆ ಬೀಳುತ್ತದೆ.).