(ಬಿಸಿಯುಸಿರಜೊತೆಗೆ ಉಸಿರಾಟದ ಅಸ್ಪಷ್ಟ ಸಪ್ಪಳ…. ತುಸು ಹೊತ್ತು ಹೀಗೇ ಸಾಗಿದ ಬಳಿಕ ರಗ್ಗು ಸರಿಸಿದಕುರ್ಚಿಗೆ ತಡವರಿದ ಸಪ್ಪಳ).

 

ಸದಾಶಿವ : ಯಾರವರು?

ಶಂಕರ : ನಾನು ಶಂಕರ ಸಾರ್.

ಸದಾಶಿವ : ನಿದ್ದೆ ಬರಲಿಲ್ವೇನೋ ಇನ್ನೂ?

ಶಂಕರ : ಅಕ್ಕವರು ಇನ್ನೂ ಬರಲಿಲ್ಲ ಸಾರ್, ಹನ್ನೆರಡು ಹೊಡೀತು.

ಸದಾಶಿವ : ಅವಳಿನ್ನು ಎಂದಿಗೂ ಬರಲಿಕ್ಕಿಲ್ಲ ಶಂಕರ- ಎಂದಿಗೂ ಬರಲಿಕ್ಕಿಲ್ಲ. ಎಂದೂ ತಿರುಗಿ ಬಾರದಷ್ಟು ದೂರ ಹೋಗಿದ್ದಾಳೆ.

ಶಂಕರ : (ಅಳುತ್ತ) ನೀವು ಏನೇ ಹೇಳಿ ಸಾರ್. ಅಕ್ಕಾ ಖಂಡಿತ ಬರುತ್ತಾರೆ.

ಸದಾಶಿವ : ಎಲಾ ಅಳ್ತಾ ಇದ್ದೀಯಲ್ಲೊ? ನಿನ್ನಕ್ಕನ ಮೇಲೆ ನಿನಗೆ ತುಂಬ ಪ್ರೀತಿಯೇನೊ?

ಶಂಕರ : ನಿಮಗೆ ಸಂಬಂಧಿಸಿದ ಎಲ್ಲದರ ಮೇಲೂ ನನಗೆ ತುಂಬ ಪ್ರೀತಿ ಸಾರ್. ನೀವು ಉಪಯೋಗಿಸುವ ಈ ದಾಡಿ ಸೆಟ್ಟಿನ ಮೇಲೂ ನನಗೆ ತುಂಬ ಅಭಿಮಾನ! ನಮ್ಮಂಥ ಅನಾಥರ ದೇವರು ಸಾರ್….

ಸದಾಶಿವ : ಶಂಕರ, ಒಂದು ಪ್ರಶ್ನೆ ಕೇಳಲೇ?

ಶಂಕರ : ಕೇಳಿ ಸಾರ್….

ಸದಾಶಿವ : ಜನರೆಲ್ಲಾ ನನಗೆ ಕುರಾಡಾಂತ ಹೇಳ್ತಾರೆ. ನಿನಗೂ ಹಾಗೇ ಅನ್ನಿಸುತ್ತೇನೋ?

ಶಂಕರ : ಏನು ಮಾತು ಸಾರ್? ಹಾಸ್ಪಿಟಲ್‌ಗೆ ಹೋಗಿ ಬಂದಾಗಿನಿಂದ ಒಬ್ಬರೇ ಅಡ್ಡಾಡ್ತೀರಿ, ಬರೀತೀರಿ,- ಓದ್ತೀರಿ-

ಸದಾಶಿವ : ನಿನ್ನಕ್ಕ- ಶೀನೂ-

ಶಂಕರ : (ತಡೆದು) ಹೌದು ಸಾರ್. ಶ್ರೀನಿವಾಸರಾಯರು-ಅಕ್ಕಾವರು ಇಬ್ಬರೇ ಸಾರ್ ನಿಮಗೆ ಕುರುಡಾಂತನ್ನೋದು. ಆ ಸೊಕ್ಕಿನ ಶ್ರೀನಿವಾಸರಾಯರು….

ಸದಾಶಿವ : ಛೀ ಛೀ…. ಈ ಜಗತ್ತಿನಲ್ಲಿ ನಾವು ಯಾರನ್ನೂ ದ್ವೇಷಿಸಬಾರದು.

ಶಂಕರ : ನಮಗೆ ಅನ್ಯಾಯ ಮಾಡಿದವರನ್ನೂ….?

ಸದಾಶಿವ : ಅವರನ್ನೂ ದ್ವೇಷಿಸಬಾರದು. ನಾವು ಹುಟ್ಟಿರೋದು ತಿರಸ್ಕರಿಸಲಿಕ್ಕಲ್ಲ ಶಂಕರ್, ಪ್ರೇಮಿಸೋದಕ್ಕೆ!

ಶಂಕರ : ಸರ್ ಸರ್….

ಸದಾಶಿವ : ಹೂಂ-

ಶಂಕರ : ಈ ಫೋಟೋ ಯಾರದು ಸಾರ್….?

ಸದಾಶಿವ : ಯಾವದು? ಆ ಕುರ್ಚಿಯ ಮೇಲಿನದೋ?

ಶಂಕರ : ಹೌದು ಸಾರ್.

ಸದಾಶಿವ : ಅಹಲ್ಯೆಯದು. ಅದ್ಯಾಕೋ ಬೇಕಿತ್ತು ನಿನಗೆ?

ಶಂಕರ : ಅಕ್ಕಾವರು ಈ ಫೋಟೋನ್ನ ನೋಡಿದ ಕೂಡಲೇ ಚೀರಿ “ನಾನು ಹೋಗಲಾರೆ ಹೋಗಲಾರೇಂತ…” ಅಳತೊಡಗಿದರು. ಯಾರು ಸಾರ್ ಈ ಅಹಲ್ಯಾ ಅಂದರೆ-?
(ಬಾಗಿಲು ಬಡೆಯುವ ಸಪ್ಪಳ.)

ಸದಾಶಿವ : ಯಾರವರು?
(ತುಸು ಹೊತ್ತು ನೀರವ. ಮತ್ತೆ ಬಾಗಿಲು ಬಡೆದ ಸಪ್ಪಳ.)

ಶಂಕರ : ನಾನು ತೆಗೀತೇನಿ ಸರ್….

ಸದಾಶಿವ : ನಿನಗೆ ಕೊಂಡಿ …. ನಿಲುಕುವದಿಲ್ಲಲ್ಲೋ?

ಶಂಕರ : ಅಂದ ಹಾಗೇ ಈ ಅಹಲ್ಯಾ ಅಂದರ ಯಾರಂತ ಹೇಳಲೇ ಇಲ್ವಲ್ಲ ಸಾರ್….
(ಬಾಗಿಲು ಕೊಂಡಿ ಬಿಡಿಸಿಬಾಗಿಲು ತೆರೆದ ಸಪ್ಪಳ…. ತುಸು ಹೊತ್ತು ನೀರವ).

ಶಂಕರ : (ಉತ್ಸಾಹದಿಂದ) ನೋಡಿ ಸಾರ್! ನಾನು ಹೇಳಿರಲಿಲ್ವೆ ಅಕ್ಕಾ ಖಂಡಿತ ಬರ್ತಾರೇ-ಅಂತ. ಅಕ್ಕಾ ಬಂದರು!…. ಲೈಟ್‌ ಹಚ್ತೀನಿ ಸಾರ್….!
(ಲೈಟ್ಸ್ವಿಚ್ಚು ಒತ್ತಿದ ಸಪ್ಪಳ.)