(ಮಾರನೆ ಮುಂಜಾನೆ ಅದೇ ಸ್ಥಳ, ವಿಷ್ಣುವರ್ಧನ, ಶಾಂತಲೆಯರು ಪೀಠಸ್ಥರಾಗಿದ್ದಾರೆ. ಸುತ್ತ ಅವರ ಪರಿವಾರ. ಜಕ್ಕಣ ಡಂಕಣರು ಚೆನ್ನಕೇಶವನ ಮೂರ್ತಿಯ ಬಳಿ ನಿಂತಿದ್ದಾರೆ. ಮೂರ್ತಿಯ ಮೈತುಂಬ ಗಂಧ ಲೇಪಿಸಲಾಗಿದೆ. ಒಣಗಲೆಂದು ಎಲ್ಲರೂ ಕಾಯುತ್ತಿದ್ದಾರೆ.)

 

ಮೇಳ : ಯಾಕೆ ಕುಂತಿದ್ದೀರಿ ಹೀಗೆ ಕೈ ಕಟ್ಟಿಕೊಂಡು, ಮೊಳಕಾಲುಗಳಲ್ಲಿ ತಲೆ ಹುದುಗಿಕೊಂಡು? ಹಿರೀಕರ್ಯಾಕೆ ಹಿರಿತನವ ಮಾಡುತ್ತಿಲ್ಲ? ಯಾಕೆ ಕುಂತಿದ್ದೀರಿ ಹೀಗೆ ಎದುರು ನೋಡದೆ ಆಸುಪಾಸಿನವರೊಂದಿಗೆ ಮಾತಾಡದೆ? ನಿಯಮಗಳು ಇವೆಯಣ್ಣ ಯಾವುದಕ್ಕೂ, ಮ್ಯಾಲೆ ಕೈಲಾಸಕೂ  ಕೆಳಗೆ ಭೂಲೋಕಕೂ. ಅವನ್ನು  ತಕ್ಕಡಿಯಲ್ಲಿಟ್ಟು ತೂಗಿ ಕೊಳೆತ ಆತ್ಮಗಳ, ಮುರಿದ ಮನಸುಗಳ ಹೇಳಿಕೆ ಕೇಳಿಕೆ ಕೇಳಿಕೊಂಡು ನ್ಯಾಯ ನಿರ್ಣಯ ತಿಳಿಯಬ್ಯಾಡವೆ?
ಶಿಲೆಯೊಳಗಿನ ನಿಜವ ಎಬ್ಬಿಸಿರಯ್ಯಾ ನಂಬಿದವರ ಗತಿಯೇನೆಂದು ಅಂಜಿ ಆಲಸಿಯಾಗಿ ಮಲಗಿದರೆ ಕೇಳಿರಯ್ಯಾ-

ವಿಷ್ಣುವರ್ಧನ : ಯಾಕೆ ಆರೋಗ್ಯ ಸರಿಯಿಲ್ಲವೆ ದೇವಿ?

ಶಾಂತಲೆ : ಬೆಳ್ಳಂ ಬೆಳಗು ನಿದ್ರೆಯಿಲ್ಲ ಸ್ವಾಮಿ. ಎರಡು ಗಾಳಿಗಳು ಎದುರೆದುರೆ ಅಪ್ಪಳಿಸಿ ಸುಂಟರಗಾಳಿಯಾಗಿ ಸುತ್ತಿ, ಕೇಶವನ ಕಲ್ಲಿನ ಕಣ್ಣಿನಲ್ಲಿ ಮಿಂಚಿನ ಬೆಳಕಾಡಿದಂತೆ ಕನಸಾಯಿತು.

ವಿಷ್ಣುವರ್ಧನ : ಕನಸು ಚೆನ್ನಾಗಿದೆಯಲ್ಲ? ಕೇಶವನ ಕಣ್ಣಿನ ಬೆಳಕಿನಲ್ಲಿ ಸತ್ಯವಾದದ್ದು ಕಂಡೇ ಕಾಣುತ್ತದೆ, ಚಿಂತೆ ಬೇಡ.
ಗಂಧದ ಲೇಪನ ಬಹುಭಾಗ ಒಣಗಿದೆ. ಇನ್ನೊಂದು ಗಳಿಗೆಯಲ್ಲಿ ಪೂರ್ತಿ ಒಣಗಬಹುದು. ಆಮೇಲೇನು ರೂವಾರಿಗಳೆ?

ಡಂಕಣ : ಮಹಾಪ್ರಭು, ಮೂರ್ತಿಯ ಒಳಗೆ ದೋಷವಿದ್ದರೆ ಅಷ್ಟು ಭಾಗ ಒಣಗುವುದಿಲ್ಲ. ಪರೀಕ್ಷೆಯ ನಿರ್ಣಯವನ್ನು ಮೂರ್ತಿಯೇ ನಮಗೆ ನೀಡುತ್ತದೆ.

ವಿಷ್ಣುವರ್ಧನ : ಆಯ್ತು, ವಿಗ್ರಹದ ಕೊಂಚ ಭಾಗ ಒಣಗುವುದಿಲ್ಲ ಅಂತ ಅಂದುಕೊಳ್ಳೋಣ. ಅಂದರೆ ಮೂರ್ತಿ ಅಶು‌ದ್ಧವೆಂದಾಯಿತು ಅಲ್ಲವೆ?

ಡಂಕಣ : ಹೌದು ಮಹಾಪ್ರಭು.

ವಿಷ್ಣುವರ್ಧನ : ಮೂರ್ತಿಯ ಅಷ್ಟು ಭಾಗ ಒದ್ದೆಯಾಗಿರಲು ಏನು ಕಾರಣ ಎಂದು ನೋಡಬೇಡವೆ?

ಡಂಕಣ : ಅದು ಸ್ಥಪತಿಗಳಿಗೂ ತಮಗೂ ಬಿಟ್ಟ ವಿಚಾರ.

ವಿಷ್ಣುವರ್ಧನ : ಒದ್ದೆಯಾಗುಳಿದ ಮೇಲೆ ಅಷ್ಟು ಭಾಗ ಒಡೆದರೂ ಅಷ್ಟೇ, ಬಿಟ್ಟರೂ ಅಷ್ಟೇ, ಆ ಮೂರ್ತಿ ಪೂಜೆಗೆ ಅರ್ಹವವಾಗುವುದಿಲ್ಲ. ಅಲ್ಲವೆ ಸ್ಥಪತಿಗಳೆ?

ಜಕ್ಕಣ : ಹೌದು ಮಹಾಪ್ರಭು.

ವಿಷ್ಣುವರ್ಧನ : ನಿಮ್ಮ ಪರೀಕ್ಷೆ ಮುಗಿದ ಮೇಲೆ ನಮ್ಮ ಪರೀಕ್ಷೆ ಸುರುವಾಗುವುದಲ್ಲ? ಅದಕ್ಕೇನು ಪರಿಹಾರ?

ಶಾಂತಲೆ : ಹೌದು. ಪರೀಕ್ಷೆಯಲ್ಲಿ ಒಬ್ಬರು ಸೋಲುತ್ತಾರೆ, ಒಬ್ಬರು ಗೆಲ್ಲುತ್ತಾರೆ, ಇಬ್ಬರೂ ಚೆನ್ನಕೇಶವನ ನಿರ್ಣಯವನ್ನು ಒಪ್ಪಿಕೊಂಡು ಮುನ್ನಡೆಯುವುದು ಜಾಣತನ. ಸೋಲಿನ ಸೇಡು ಉಳಿಯಬಾರದು.

ವಿಷ್ಣುವರ್ಧನ : ದೇವೀ, ಅದರ ಚಿಂತೆ ನನಗಿರಲಿ. ನಿರ್ಣಯವನ್ನು ಮೂರ್ತಿ ಕೊಡುತ್ತದಾದರೂ ಅದಕ್ಕೆ ಮಾತು ಕೊಡುವವರು ನಾವು. ಅದನ್ನು ಸಾರುವವರೂ ನಾವೇ! ನಾವು ಕೇಳುವುದಿಷ್ಟು; ನಿರ್ಣಯ ಏನು ಬೇಕಾದರು ಬರಲಿ; ಈ ಮೂರ್ತಿ ಶುದ್ಧವಾಗಿದೆಯೆಂದೇ ನಂಬಿ ನಾವಾಗಲೇ ಅದರ ಪ್ರತಿಷ್ಠಾಪನೆಗೆ ದಿನ, ಗಳಿಗೆ, ಮುಹೂರ್ತಗಳನ್ನು ನಿರ್ಣಯಿಸಿದ್ದೇವೆ. ಆ ದಿನ ಅದನ್ನು ನೋಡಲು ನೆರೆ ರಾಜ್ಯದ ಗಣ್ಯರನ್ನು ಆಮಂತ್ರಿಸಿದ್ದೇವೆ. ಇಂತಿರುವಾಗ ಮೂರ್ತಿ ಭಿನ್ನವಾದರೆ ಮುಹೂರ್ತ ನಿರ್ಣಯಕ್ಕೇನು ಮಾಡೋಣ? ಅಂದರೆ ನಾವು ನಿರ್ಣಯಿಸಿದ ಮುಹೂರ್ತಕ್ಕೆ ಸರಿಯಾಗಿ ಇನ್ನೊಂದು ಹೊಸ ಮೂರ್ತಿಯ ನಿರ್ಮಾಣವಾಗಬೇಕು; ಅದಕ್ಕೆ ನೀವಿಬ್ಬರೂ ಹೊಣೆ. ಅಂದರೆ ಪ್ರತಿಮೆ ಒಡೆದ ಮೇಲೂ ಮುಹೂರ್ತಕ್ಕೆ ಸರಿಯಾಗಿ ಹೊಸ ಮೂರ್ತಿ ಸಿದ್ಧವಾಗುವ ತನಕ ನಿಮ್ಮ ಪರೀಕ್ಷೆ ಇದೆ ಎಂಬುದು ನೆನಪಿರಲಿ.

ಜಕ್ಕಣ : ಅದಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ ಮಹಾಪ್ರಭು.

ಡಂಕಣ : ಹೌದು ಮಹಾಪ್ರಭು.

ವಿಷ್ಣುವರ್ಧನ : ಹಾಗಾದರೆ ಸರಿ.

(ಮೂರ್ತಿಯ ಬಹುಭಾಗ ಒಣಗಿ ತೊಡೆದು ಹತ್ತಿರ ಒಣಗಿಲ್ಲ.)

ಡಂಕಣ : ಮಹಾಪ್ರಭು, ತೊಡೆಯ ಭಾಗದಲ್ಲಿ ಹಸಿ ಉಳಿದಿದೆ. ಇನ್ನೂ ಸ್ವಲ್ಪ ಹೊತ್ತು ಕಾಯೋಣ.

ಜಕ್ಕಣ : ಅಗತ್ಯವಿಲ್ಲ ಮಹಾಪ್ರಭು. ದೋಷವಿದ್ದದ್ದು ನಿಜ, ಆದರೆ ಅದು ಏನೆಂದು ತಿಳಿಯಬೇಕು. ಅಪ್ಪಣೆಯಾದರೆ ನಾನೇ ಅಲ್ಲಿ ಒಡೆದು ನೋಡಲೆ?

ವಿಷ್ಣುವರ್ಧನ : ಸ್ಥಪತಿಗಳ ದುಡಕಬಾರದು. ಇನ್ನೂ ಸ್ವಲ್ಪ ಹೊತ್ತು ಕಾಯೋಣ. ಚೈತ್ರಮಾಸದ ಬಿಸಿಲು ಕಾಯುತ್ತಿದೆ. ಈಗ ಒಣಗಿದರೂ ಒಣಗಬಹುದು. ಸಮಾಧಾನವಿರಲಿ.

ಜಕ್ಕಣ : ಅಸಹನೆಯಿಂದ ನನ್ನ ತಲೆ ಕಾಯುತ್ತಿದೆ ಪ್ರಭು, ನಾನೇ ನೋಡುತ್ತೇನೆ.
(ಜಕ್ಕಣ ಸಣ್ಣ ಸುತ್ತಿಗೆಯಿಂದ ಒದ್ದೆಯಿದ್ದಲ್ಲಿ ಹೊಡೆಯುತ್ತಾನೆ. ಮೂರ್ತಿಯ ಶಿಲೆಯ ತುಂಡೊಂದು ಹಾರುತ್ತದೆ. ಒಳಗೆ ಹಿಡಿ ಮರಳು, ನೀರು ಮತ್ತು ಒಂದು ಕಪ್ಪೆ ಕಾಣತ್ತದೆ. ಕಪ್ಪೆ ಜಿಗಿದು ಹೊರಬರುತ್ತದೆ. ಎಲ್ಲರೂ ಮಂತ್ರಮುಗ್ಧರಾಗುತ್ತಾರೆ.)

ಜಕ್ಕಣ : ಪರೀಕ್ಷೆ ಮುಗಿಯಿತು. ನಾನು ಸೋತೆ ಪ್ರಭು, ತಾವು ನಿರ್ಣಯ ಹೇಳಬಹುದು.

ವಿಷ್ಣುವರ್ಧನ : ನಿರ್ಣಯ ಕಣ್ಣೇದುರಿಗೇ ಇದೆ ಸ್ಥಪತಿಗಳೇ. ಮುಂದಿನದನ್ನು ಪಟ್ಟಮಹಾದೇವಿಯವರು ಹೇಳುತ್ತಾರೆ. ಅವರಿಗೆ ಶಿಲ್ಪಶಾಸ್ತ್ರವೂ ಗೊತ್ತು; ಮನುಷ್ಯ ವ್ಯಕ್ತಿತ್ವದ ಶಿಲ್ಪವು ಗೊತ್ತು; ಎರಡರ ಅಂತರಂಗ ಬಹಿರಂಗಗಳೂ ಗೊತ್ತು. ಮುಂದಿನ ಕ್ರಮವನ್ನು ಅವರೇ ಹೇಳಲಿ.

ಶಾಂತಲೆ : ಯುವ ರೂವಾರಿ ಗೆದ್ದ. ಆದರೆ ಇಬ್ಬರ ಪರೀಕ್ಷೆ ಮುಗಿಯುವುದು ಮುಹೂರ್ತದ ಒಳಗೆ ಚೆನ್ನಕೇಶವನ ಇನ್ನೊಂದು ಮೂರ್ತಿ ಸಿದ್ಧವಾದಾಗ. ಆದರೆ ಒಂದು ಮಾತು ರೂವಾರಿ. ನಿನ್ನ ಹೆಸರು ಗೊತ್ತಿಲ್ಲ ನಿಜ. ಆದರೆ ನಮ್ಮ ಬೇಹುಗಾರರು ನಿನ್ನೆಯಿಂದ ಕೆಲವು ಸಂಗತಿಗಳನ್ನು ಸಂಗ್ರಹಿಸಿ ಹೇಳಿದ್ದಾರೆ. ನಿನ್ನ ಹೆಸರು ಡಂಕಣ. ನಿನ್ನ ಊರು ಕ್ರೀಡಾಪುರ, ನೀನೀಗ ಒಂದು ವರ್ಷದಿಂದ ಕಳೆದುಕೊಂಡ ತಂದೆಯನ್ನು ಹುಡುಕುತ್ತ ಮೊನ್ನೆಯಷ್ಟೇ ಇಲ್ಲಿಗೆ ಬಂದೆ. ಇದೆಲ್ಲ ನಿಜ ತಾನೆ?

ಡಂಕಣ : (ತಲೆ ತಗ್ಗಿಸಿ) ಹೌದು ಪಟ್ಟಮಹಾದೇವಿಯವರೆ.

ಜಕ್ಕಣ : ನೀನು ಕ್ರೀಡಾಪುರದವನೆ?

ಡಂಕಣ : ಹೌದು ಸ್ಥಪತಿಗಳೆ. ನಾನು ಕ್ರೀಡಾಪುರದಲ್ಲಿ ಹುಟ್ಟಿ ಬೆಳೆದವನು.

ಶಾಂತಲೆ : ರೇವಿಮಯ್ಯ ನೀನು ತಂದ ಸುದ್ದಿಯನ್ನು ಹೇಳು.

ರೇವಿಮಯ್ಯ : ನಾನು ಈಗೊಂದು ವರ್ಷದ ಹಿಂದೆ ಕ್ರೀಡಾಪುರಕ್ಕೆ ಹೋಗಿದ್ದೆ. ಅಲ್ಲಿ ರೂವಾರಿ ಡಂಕಣನ ತಾಯಿ ಸಿಕ್ಕಳು. ತನ್ನ ಮಗ ಡಂಕಣ ರೂವಾರಿತನದಲ್ಲಿ ಜನ್ಮಜಾತ ಪ್ರತಿಭೆಯುಳ್ಳವನೆಂದು ಹೆಮ್ಮೆಯಿಂದ ಹೇಳಿದ್ದಳು. ಆಮೇಲೆ ನಾನು ಗೌಂಡರನ್ನು ಕರೆಸಿ ವಿಚಾರಸಿದೆ. ತಾಯಿ ಹೇಳಿದಿದ್ದುದನ್ನು ಗೌಂಡರು ಹೇಳಿದರು. ಡಂಕಣನ್ನು ಅವರು ಬಾಲ್ಯದಿಂದ ಬಲ್ಲವರಂತೆ. ತಂದೆಯಂತೆಯೇ ಇವನೂ ಪ್ರತಿಭಾವಂತ ಎಂದರು. ವಯಸ್ಸಿಗೆ ಬಂದ ಮೇಲೆ ಡಂಕಣ ತನ್ನ ತಂದೆಯಲ್ಲಿ ಎಂದು ತಾಯಿಯನ್ನು ಪೀಡಿಸಿದನಂತೆ. ಡಂಕಣ ಹುಟ್ಟಿದಾಗಲೇ ಮನೆ ಬಿಟ್ಟು ಹೋದ ತಂದೆ ಹಿಂದಿರುಗಿ ಬಂದಿಲ್ಲವೆಂದು ಹೇಳಿದಳಂತೆ. ಈಗೊಂದು ವಾರದ ಹಿಂದೆ ಹೋಗಿದ್ದೆ. ಮನೆಯಲ್ಲಿ ಯಾರು ಇರಲಿಲ್ಲ. ಡಂಕಣ ತಂದೆಯನ್ನು ಹುಡುಕಿಕೊಂಡು ಹೋಗಿ ಆಗಲೇ ವರ್ಷವಾಯಿತು ಎಂದರು ನೆರೆಹೊರೆಯವರು. ಮಗ ಬಾರದ ದುಃಖದಲ್ಲಿ ಈಗೊಂದು ತಿಂಗಳ ಹಿಂದೆ ತಾಯಿಯೂ ತೌರಿನ ಕಡೆಗೆ ಹೋದಳಂತೆ.

ಶಾಂತಲೆ : ತಂದೆ ಯಾರೆಂದು ಹೆಸರು ಕೇಳಿದೆಯ?

ರೇವಿಮಯ್ಯ : ಕೇಳಿದೆ ಪಟ್ಟ ಮಹಾದೇವಿಯವರೆ. (ಜಕ್ಕಣನ ಕಡೆಗೆ ನೋಡುತ್ತ) ಅವರ ಹೆಸರು ಜಕ್ಕಣನಂತೆ.

ಜಕ್ಕಣ : ಒಂದೇ ಹೆಸರಿನವರು ಹಲವಾರು ಜನರಿರಬಹುದು

ಡಂಕಣ : ದಕ್ಷಿಣಕ್ಕೆಲ್ಲ ಜಕ್ಕಣಾಚಾರಿ ಒಬ್ಬನೇ ಅಂದಿರಿ!

ಜಕ್ಕಣ : ವಿಶೇಷವಾಗಿ ಒಬ್ಬನೆ ಅಂದೆ. ಆದರೆ ಒಂದೇ ಹೆಸರಿನವರು ಹಲವರು ಇರುವುದು ಸಾಧ್ಯ; ಅಲ್ಲವೆ?

ಶಾಂತಲೆ : ನಿಮಗೆ ಹಾಗನಿಸಿತೆ ಸ್ಥಪತಿಗಳೆ? ನಿಮ್ಮ ಹೆಸರನ್ನು ನೀವು ಈವರೆಗೆ ಹೇಳಿಲಿಲ್ಲ. ನಾವೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಈಗ ನಾನೊಂದು ಮಾತು ಕೇಳುತ್ತೇನೆ. ರಾಜ್ಯದ ಹಿತ ದೃಷ್ಟಿಯಿಂದ ಹೇಳಿ; ನೀವು ಮನೆ ಬಿಟ್ಟು ಬಂದಿರಂತೆ. ಅದು ಸ್ವಂತದ ವಿಷಯ ಕೇಳಬೇಡಿ ಎಂದು ನಿರ್ಬಂಧ ಹಾಕಿದಿರಿ. ಈಗ ದಯವಿಟ್ಟು ಹೇಳಿರಿ; ನೀವು ಮನೆ ಬಿಟ್ಟು ಬಂದದ್ದು ಯಾಕೆ?

ಜಕ್ಕಣ : ನಾನು ಮೊದಲೇ ಹೇಳಿದ್ದೇನೆ ಮಹಾದೇವಿಯವರೇ, ಅದು ನನ್ನ ಸ್ವಂತ ವಿಷಯ, ಹೇಳುವಂತಿಲ್ಲ. ಅಲ್ಲದೆ ರಾಜ್ಯದ ಹಿತಕ್ಕೂ ಇದಕ್ಕೂ ಸಂಬಂಧವಿಲ್ಲ. ದಯಮಾಡಿ ನಿರ್ಬಂಧಪಡಿಸಿಬಾರದು.

ವಿಷ್ಣುವರ್ಧನ : ಸಂಬಂಧವಿದೆ ಸ್ಥಪತಿಗಳೇ. ರಾಜ್ಯದವೆಂದರೆ ಶತ್ರುಗಳನ್ನು ಗೆದ್ದು ಬರೀ ಬೊಕ್ಕಸ ತುಂಬಿಕೊಳ್ಳವುದಲ್ಲ, ರಾಜ್ಯದ ಸೀಮೆಯ ವಿಸ್ತಾರವು ಅಲ್ಲ, ವೈಭವ ಪ್ರದರ್ಶನವು ಅಲ್ಲ. ಪ್ರಜೆಗಳನ್ನು ನೆಮ್ಮದಿಯಿಂದ ಇಡುವುದೇ ರಾಜ್ಯ.

ಶಾಂತಲೆ : ಸ್ಥಪತಿಗಳೇ. ನಮ್ಮ ರೇವಿಮಯ್ಯ ತಂದಿರುವ ಬೇಹು ನಿನ್ನೆ ಮೊನ್ನೆಯದಲ್ಲ. ನೀವು ದೇವಸ್ಥಾನದ ಸ್ಥಾಪತ್ಯವನ್ನು ಒಪ್ಪಿಕೊಂಡಾಗಲೇ ಪ್ರಾರಂಭವಾಗಿದೆ. ನಿಮ್ಮ ಪ್ರತಿಭೇ ಅಗಾಧವಾದದ್ದು. ಅದನ್ನು ನಾವು ಮೆಚ್ಚಿಕೊಂಡಾಗಲೆ ವಿಷಯ ಸಂಗ್ರಹಣೆ ಮಾಡಿದೆವು. ನೀವು ಕ್ರೀಡಾಪುರದವರೆಂದು ಅಂದೇ ಗೊತ್ತಾಗಿತ್ತು. ಮಗ ಹುಟ್ಟಿದಾಗ ಜಾತಕದ ಶಾಸ್ತ್ರ ನೋಡಿ, ಹುಟ್ಟಿದವನು ನನ್ನ ಮಗನಲ್ಲವೆಂದು ನಂಬಿ ಮನೆ ಬಿಟ್ಟು ಹೋದಿರಿ. ಆಮೇಲೆ ತಂದೆ ಮಗ ಭೇಟಿಯಾದದ್ದು ನಿನ್ನೆಯೇ. ಮುಖಚರ್ಯ ನೋಡಿದಾಗಲೇ ರೂವಾರಿ ನಿಮ್ಮ ಮಗನಿರಬೇಕೆಂದು ಅನುಮಾನವಾಯಿತು. ನಿಮ್ಮ ಮಗ ನಿಮ್ಮಂತೆಯೇ ಪ್ರಭಾವಶಾಲಿ. ಅವನು ನಿಮ್ಮನ್ನು ಹುಡುಕುತ್ತ ಚೆನ್ನಕೇಶವನ ದಯೆಯಿಂದ ಇಲ್ಲಿಗೆ ಬಂದ. ಡಂಕಣ ನಿಮ್ಮ ಮಗ, ಒಪ್ಪಿಕೊಳ್ಳಿ.

ಜಕ್ಕಣ : ನಾನು ಹಾಕಿದ ಜಾತಕ ಶಾಸ್ತ್ರ ಸುಳ್ಳಾಯಿತಲ್ಲ… ಎಂದು…..

ಶಾಂತಲೆ : ಅದು ಸುಳ್ಳು ಎಂದು ನಮಗಾಗಲೇ ತಿಳಿದಿತ್ತು. ನಿಮ್ಮನ್ನು ಅವಮಾನಿಸಬಾರದೆಂದು ಸುಮ್ಮನಿದ್ದೆವು. ನೀವು ನಮ್ಮ ಪ್ರಜೆ ಹೌದು. ಕ್ರೀಡಾಪುರ ನಮ್ಮ ರಾಜ್ಯದಲ್ಲಿದೆ. ಆದರೆ ನೀವು ಸಾಮಾನ್ಯ ಪ್ರಜೆಯಲ್ಲ. ನಿಮ್ಮ ಪ್ರತಿಭೆ ರಾಜ್ಯಕ್ಕಿಂತ  ಹೆಚ್ಚು ಬೆಲೆಯುಳ್ಳದ್ದು. ಆದ್ದರಿಂದ ಕಾಲ ಕೂಡಿ ಬರುವವರೆಗೆ ಸುಮ್ಮನಿರಬೇಕಾಯಿತು.

ಜಕ್ಕಣ : ಈ ಯುವಕನ ಪ್ರತಿಭೆ ಅಸಾಮಾನ್ಯವೆಂದು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಹಾಕಿದ ಜಾತಕದ ಶಾಸ್ತ್ರ ಸುಳ್ಳಾಯಿತೆಂಬ ಬಗ್ಗೆ ನನಗಿನ್ನೂ ಅನುಮಾನವಿದೆ. (ಗೊಲ್ಲರ ಹುಡುಗ ಬರುವನು. ಅವನ ಹಿಂದೆ ಹುಚ್ಚಿಯೂ ಬರುತ್ತಾಳೆ. ಹುಡುಗ ಹುಚ್ಚಿಯನ್ನು ತೋರಿಸಿ.)

ಗೊ.ಹುಡುಗ : ಈಕೆ ಯಾರು ಗೊತ್ತೇ ಸ್ಥಪತಿಗಳೇ?
(ಹುಚ್ಚಿಯನ್ನು ನೋಡಿ ಜಕ್ಕಣನಿಗೆ ಈಕೆ ತನ್ನ ಮಡದಿಯೆಂದು ಗುರುತಾಗಿ ಆಘಾತವಾಗುತ್ತದೆ. ಆದರೆ ಗೊಲ್ಲರ ಹುಡುಗನನ್ನು ಶಂಕಿಸುತ್ತಾನೆ.)

ಜಕ್ಕಣ : ನಿಜ ಹೇಳು ಯಾರು ನೀನು?

ಗೊ.ಹುಡುಗ: ನಾನು ನಿಮ್ಮ ಹಿತಚಿಂತಕನೆಂದು ಸಾರಿ ಹೇಳುತ್ತೇನೆ, ಸ್ಥಪತಿಗಳೆ. ನಿಮ್ಮ ಪ್ರತಿಭೆಗೆ ಮನಸೋತವನು ನಾನು. ನೀವೊಂದು ದೇವರ ಪ್ರತಿಭೆ ಮಾಡುತ್ತೇನೆಂದರೆ ಸ್ವಯಂ ಆ ದೇವರೇ ಬಂದು ನಿಮ್ಮೆದುರಿಗೆ ರೂಪದರ್ಶಿಯಾಗಿ ನಿಲ್ಲುವನೆಂದರೆ ಸಾಮಾನ್ಯ ಮಾತೇ ಇದು? ಆದರೆ ಒಂದು ತಿಂಗಳು ನಿಮ್ಮೆದುರು ನಾನು ನಿಂತರೂ ನಿಮಗೆ ನನ್ನ ಗುರುತಿಲ್ಲ! ಭೇಟಿಯಾದಾಗೊಮ್ಮೆ ಯಾರು ನೀನು ಅಂತೀರಿ! ಹೋಗಲಿ, ನಿಮಗೆ ಜೋತುಬಿದ್ದ ಹೆಂಗರುಳೊಂದು ನಿಮಗಾಗಿ ತನ್ನೆಲ್ಲ ನಿಟ್ಟುಸಿರುಗಳನ್ನು ವ್ಯಯಮಾಡುತ್ತಿರುವುದು ನಿಮಗೆ ಗೊತ್ತೇನು? ಈ ಹುಚ್ಚಿ ಒಂದು ತಿಂಗಳಿಂದ ನೀವೇ ಕಟ್ಟಿದ ದೇವಾಲಯದ ಗರ್ಭಗುಡಿಯೆದುರು ಗುನುಗುತ್ತ ಬಿಕ್ಕಿದು ನಿಮಗೆ ಕೇಳಿಸಿಲ್ಲ. ನೀವು ಒಂದೊಂದು ಸ್ತ್ರೀ ವಿಗ್ರಹವನ್ನು ತೊಡೆಯ ಮೇಲಿಟ್ಟುಕೊಂಡು ನಯವಾಗಿಸುವಾಗಲೂ ಈ ತಾಯಿ ಮತ್ಸರದಿಂದ ಸವುತೇ ಎಂದು ಲಟಿಕೆ ಮುರಿಯುವುದು ನಿಮಗೆ ಕಾಣಲಿಲ್ಲ. ಪಕ್ಕದಲ್ಲಿದ್ದ ಸತಿ ಸುತರನ್ನು ಗುರುತಿಸದವರು ಇನ್ನು ಈ ಸಾಮಾನ್ಯ ಗೊಲ್ಲರ ಹುಡುಗನನ್ನು ಗುರುತಿಸಬಹುದೆ ಸ್ಥಪತಿಗಳೆ?, ಮಣ್ಣು ರಸಾಯನವಾಗಿ ಕಲ್ಲಾಗಿ ಎಷ್ಟು ವರ್ಷಗಳಾದುವೋ! ಆ ಕಲ್ಲಿನಲ್ಲಿದ್ದ ಕಪ್ಪೆ ನೀರು ಮಳಲು ಅಂದಿನಿಂದ ಇಂದಿನವರೆಗೆ ನಿಮ್ಮ ಪ್ರಶ್ನೆಯ ಮೂಲಕ ಈಗದರ ಅಭಿವ್ಯಕ್ತಿಯ ಕಾಲ ಕೂಡಿ ಬಂತು. ಈ ಪ್ರಶ್ನೆ ಕೇಳುವ ಅರ್ಹತೆ ಕೊಟ್ಟವಳು ಈ ತಾಯಿ ಭವಾನಿ ಮತ್ತು ಈ ನಿಮ್ಮ ಮಗ ಡಂಕಣ! ನಿಮ್ಮ ಕಾರಣ ಶಕ್ತಿಯನ್ನು ದೇವರೇ ಕಾಪಾಡಬೇಕು. ಬರ್ತೀನಿ…
(ಗೊಲ್ಲರ ಹುಡುಗ ಮೇಲಿನ ಮಾತುಗಳನ್ನು ಹೇಳುತ್ತಿರುವಂತೆ ಜಕ್ಕಣನಿಗೆ ಹುಡುಗನ ಪರಿಚಯ ಹೆಚ್ಚಾಗುತ್ತ ಹೋಗುತ್ತದೆ. ಒಂದೊಂದೇ ಹೆಜ್ಜೆ ಹುಡುಗನತ್ತ ಹಾಕುತ್ತ ಬಂದು.)

ಜಕ್ಕಣ : ನಿಲ್ಲು!
(ಹೊರಟ್ಟಿದ್ದ ಹುಡುಗ ನಿಂತುಕೊಳ್ಳುತ್ತಾನೆ. ಜಕ್ಕಣ ಅವನ ಮುಂದೆ ಕೈಮುಗಿದು ಕುಸಿದು ಕೂತು.)

ಕೊನೆಗೂ ಕಾರಣ ಶಕ್ತಿಯನ್ನು ದಯಪಾಲಿಸಿದ ಚೆನ್ನಕೇಶವಾ, ತಂದೇ ನನಗೆ ನಿನ್ನ ಗುರುತೂ ಸಿಕ್ಕಲಾರದಾಯಿತೆ! ನಾನೊಬ್ಬ ಶಪಿತ ನಿಶಾಚಾರನಾಗಿದ್ದೆ ಕೇಶವಾ, ಹೆಣ್ಣಿನ ಪ್ರತಿಷ್ಠೆ ಗೌರವಗಳನ್ನು ನೋಯಿಸಿದವನು. ಡಂಕಣನನ್ನು ನೋಡಿ ನನ್ನ ಯೌವನ ನೆನಪಾಯಿತು : ನಾನು ಹುಡುಗನಾಗಿ ಮೂರ್ತಿಗಳ ಕಡೆಯುವಾಗ ಹಿಟ್ಟಿನ ಮುದ್ದೆ ಹುರುಳೀ ಕಾಳಿನ ಸಾರು ತಗೊಂಡು ನಾನಿದ್ದಲ್ಲಿಗೆ ಬರುತ್ತಿದ್ದಳು ಈ ನನ್ನ ಸತಿ ಭವಾನಿ! ನಮ್ಮ ಪ್ರೀತಿಗೆ ಬಿಟ್ಟ ಕುಡಿಯ ಜಾತಕ ನೋಡಿ ಚಿತ್ತ ಭ್ರಮಣೆಯಾಯ್ತು ನನಗೆ. ಶಾಸ್ತ್ರವ ನಂಬಿ ನನ್ನದಲ್ಲದ ಪಿಂಡಕ್ಕೆ ನಾ ಯಾಕೆ ತಂದೆಯಾಗಬೇಕೆಂದು ಅನುಮಾನಕ್ಕೆ ಆತ್ಮವ ಅಡವಿಟ್ಟು ಮಡದಿ ನುಡಿದ ನುಡಿ ತಪ್ಪೆಂದು ನಡೆದ ನಡೆ ತಪ್ಪೆಂದು ಮುಳ್ಳಿರುವ ಮಾತುಗಳನಾಡಿ ಚಕಿತಚಿತ್ತಳ ಬಿಟ್ಟು ದಾಟಿ ಬಂದೆ. ನನ್ನ ಭವಾನಿಯ ಆತ್ಮದ ಮ್ಯಾಲೆ ಅತ್ಯಾಚಾರ ಮಾಡಿ ಬಂದೆ ಕೇಶವಾ, ಚೆನ್ನಕೇಶವಾ ನನ್ನ ಕ್ಷಮಿಸು ತಂದೇ!
(ಹುಡುಗನ ಕಾಲು ಹಿಡಿಯಲು ಹೋಗುವನು. ಗೊಲ್ಲರ ಹುಡುಗ ಮಾಯವಾಗುವನು)

ಚೆನ್ನಕೇಶವಾ, ನನ್ನನ್ನು ಪುನರ್ಜಾತನ ಮಾಡಿ ಮಾಯಾವಾದಿರಾ ತಂದೇ! ಭವಾನೀ, ಡಂಕಣಾ ಕ್ಷಮಿಸಬೇಕಾದ ಚೆನ್ನಕೇಶವ ಮಾಯವಾದ, ನೀನಾದರೂ ನನ್ನನ್ನು ಕ್ಷಮಿಸಿಯಪ್ಪಾ……
(ಡಂಕಣ, ಭವಾನಿ, ಜಕ್ಕಣ ಪರಸ್ಪರ ತಬ್ಬಿಕೊಳ್ಳುವರು)

ಮಗನೇ ಡಂಕಣಾ, ನಿನ್ನೆದುರು ಸೋತು ಧನ್ಯನಾದೆನಪ್ಪಾ! ಮಹಾಪ್ರಭು, ಪಟ್ಟಮಹಾದೇವಿಯವರೇ ನನ್ನನ್ನು ಕ್ಷಮಿಸಿ.

ವಿಷ್ಣುವರ್ಧನ : ನಮಗೆ, ಇಡೀ ರಾಜ್ಯಕ್ಕೆ ಇದಕ್ಕಿಂತ ಸಂತೋಷದ ಗಳಿಗೆ ಯಾವುದಿದೆ ಸ್ಥಪತಿಗಳೆ? ನಾವೇ ಧನ್ಯರು; ನಮ್ಮ ರಾಜ್ಯವೇ ಧನ್ಯವಾಯಿತು! ಸ್ವಯಂ ಚೆನ್ನಕೇಶವನೇ ಪ್ರತ್ಯಕ್ಷನಾಗಿ ನಮ್ಮನ್ನು ಧನ್ಯನಾಗಿಸಿದ. ಇದಕ್ಕೆಲ್ಲ ನೀವು ಕಾರಣರು ಸ್ಥಪತಿಗಳೇ. ಇಡೀ ರಾಜ್ಯ ನಿಮಗೆ ಅಭಾರಿಯಾಗಿದೆ.

ಜಕ್ಕಣ : ಆದರೆ ಅಖಂಡ ಕಲ್ಲಿನಲ್ಲಿ ಕಪ್ಪೆ, ನೀರು, ಮಳಲು- ಈ ರೂಪಕದ ಅರ್ಥ ಹಾಗೇ ಉಳಿಯಿತಲ್ಲ ಪಟ್ಟ ಮಹಾದೇವಿಯವರೆ?

ಶಾಂತಲೆ : ನಮ್ಮ ನಮ್ಮ ಕಲೆಗಳ ಮೂಲಕ ಚೆನ್ನಕೇಶವನ ಆ ರೂಪಕದ ಅರ್ಥವನ್ನು ಶೋಧಿಸಬೇಕು ಸ್ಥಪತಿಗಳೆ. ಮುಹೂರ್ತಕ್ಕೆ ಸರಿಯಾಗಿ ಹೊಸ ಮೂರ್ತಿ ಸಿದ್ಧವಾಗಬೇಕಲ್ಲವೆ? ಶೋಧನೆಯನ್ನು ಸುರು ಮಾಡಿ.