ಮೇಳ : ಯಾರವನು ಹಾಗೆ ಹೇಳಿದವನು? ದಕ್ಷಿಣಕ್ಕೆ ಓವಜನಾದ ಜಕ್ಕಣಾಚಾರ್ಯರ ಪ್ರತಿಭೆ, ವಿದ್ವತ್ತು, ಪಡೆದ ಕೃಪೆಯನ್ನೆಲ್ಲ ಪಣಕ್ಕಿಟ್ಟು ಮಾಡಿದ ಕೇಶವನ ಪ್ರತಿಮೆಯಲ್ಲಿ ದೋಷವಿದೆಯೆಂದನಲ್ಲ – ಯಾರು ಆ ಪೋರ?

ಆತ ಹುಚ್ಚನೋ? ಉಂಡಾಡಿಯೋ?-ಗೊತ್ತಲ್ಲ! ಅಥವಾ ಶಿಲ್ಪಶಾಸ್ತ್ರದ ವಿದ್ಯಾರ್ಥಿಯೊ? ಹಾಗಿದ್ದಲ್ಲಿ ಪ್ರತಿಭೆಯ ಪ್ರಥಮ ಸ್ಪರ್ಶದಲ್ಲೇ ಸ್ಖಲನವಾಗಿ ಬಾಯಿಗೆ ಬಂದುದನಾಡಿದ್ದಾನೆ. ಆಚಾರ್ಯರು ಯಾರು? ಅವರ ಪತಿಶ್ರಮವೇನು? ಜೊತೆ ನಿಂತು ಕಟ್ಟಿದವರಿಗಲ್ಲದೆ ನೆತ್ತಿಯ ಮಾಂಸವಾರದ ಬಾಲಕನಿಗೆ ತಿಳಿಯಲುಂಟೆ?

(ಗೊಲ್ಲರ ಹುಡುಗ ಬರುವನು)

ಬಂದವನು ನೀನ್ಯಾರಪ್ಪ?

ಗೊ.ಹುಡುಗ : ನಾನು ಕೇಶವ.

ಮೇಳ : ನೀನೇ ಏನಪ್ಪಾ, ಕೇಶವನ ಪ್ರತಿಮೆಯಲ್ಲಿ ದೋಷವಿದೆ ಅಂತ ಸಾರಿದವನು?

ಗೊ.ಹುಡುಗ : ನಾನಲ್ಲ, ಆದರೆ ಹಾಗೆ ಒಬ್ಬ ಹುಡುಗ ಸಾರುವಾಗ ನಾನಲ್ಲಿ ಇದ್ದೆ.

ಮೇಳ : ಹಾಗೊ? ಆ ಹುಡುಗನಲ್ಲಿ ಶಿಲ್ಪವಿದ್ಯೆಯ ಬಗ್ಗೆ ಕಿಂಚಿತ್ತಾದರೂ ತಿಳುವಳಿಕೆ ಇದೆ ಅಂತ ಅನ್ನಿಸಿತೇನಪ್ಪಾ ನಿನಗೆ?

ಗೊ.ಹುಡುಗ : ಖಂಡಿತ ಇದೆ ಸ್ವಾಮಿ.

ಮೇಳ : ಹಾಗಿದ್ದರೆ ಅವನ್ಯಾಕೆ ಸಿದ್ಧಮಾಡಿ ತೋರಿಸಲಿಲ್ಲ?

ಗೊ.ಹುಡುಗ : ನಿಜ, ಅವನು ಹಾಗೆ ಮಾಡಬೇಕೆಂದಾಗಲೇ ಒಬ್ಬ ಹೆಂಗಸು ಗರ್ಭಗುಡಿಯ ಮುಂದೆ ನಿಂತು ಮಂಗಳಾರತಿ ಗುನುಗಿ ಬಿಕ್ಕಿದಳಪ್ಪ. ಹುಡುಗನನ್ನು ನೋಡಿದ್ದೇ ಓಡಿಹೋದಳು! ಆ ಹುಡುಗನೂ ಯಾವುದೋ ಜನಪದ ದೇವತೆಯನ್ನು ಕಂಡೆ ಹಾಗೆ ಅವಳ ಹಿಂದೆ ಓಡಿದ. ನನಗಿಷ್ಟೆ ಗೊತ್ತು.

ಮೇಳ : ಇನ್ನೂ ಚೆನ್ನಕೇಶವನ ಮೂರ್ತಿಯ ಪ್ರತಿಷ್ಠಾಪನೆಯೇ ಆಗಿಲ್ಲ. ಆಗಲೇ ಮಂ‌ಗಳಾರತಿ ಗುನುಗಿ ಬಿಕ್ಕಿದಳಪ್ಪ. ಹುಡುಗನನ್ನು ನೋಡಿದ್ದೇ ಓಡಿಹೋದಳು! ಆ ಹುಡುಗನೂ ಯಾವುದೋ ಜನಪದ ದೇವತೆಯನ್ನು ಕಂಡ ಹಾಗೆ ಅವಳ ಹಿಂದೆ ಓಡಿದ. ನನಗಿಷ್ಟೆ ಗೊತ್ತು.

ಮೇಳ : ಇನ್ನೂ ಚೆನ್ನಕೇಶವನ ಮೂರ್ತಿ ಪ್ರತಿಷ್ಠಾಪನೆಯೇ ಆಗಿಲ್ಲ. ಆಗಲೇ ಮಂಗಳರಾತಿ ಗುನುಗಿದಳು ಅಂತೀಯಲ್ಲಪ? ನಿನಗೆ ಬುದ್ಧಿ ಬ್ಯಾಡವಾ? ಹೋಗು ಹೋಗು.

ಗೊ.ಹುಡುಗ : ಸುಳ್ಳಲ್ಲ ನಿಜ ಸ್ವಾಮಿ.

ಮೇಳ : ಬಂದೂ ಬಂದೂ ನಿನ್ನನ್ನೂ ಕೇಳಿದೆವಲ್ಲ. ನಮ್ಮ ಬುದ್ಧಿಯ ಕೇಡು….. ಹೋಗು ಹೋಗು.

ಗೊ.ಹುಡುಗ : ಅಯ್ಯಯ್ಯೋ ನೀವೇ ಬನ್ನಿ ಸ್ವಾಮಿ, ದೇವಾಲಯದ ವಿಗ್ರಹಗಳೆಲ್ಲ ಇದನ್ನೇ ಪಿಸುನುಡಿದಾಡುವುದನ್ನು ನಾನೇ ಕೇಳಿಸಿಕೊಂಡೆ…….