(ಅದೇ ದೇವಾಲಯ. ಅಲ್ಲಿಯ ವಿಗ್ರಹಗಳನ್ನು ಬಾಲಕ ಡಂಕಣ ತದೇಕ ಧ್ಯಾನದಿಂದ ನೋಡುತ್ತಿದ್ದಾಗ ಜಕ್ಕಣನ ಪ್ರವೇಶ)

 

ಜಕ್ಕಣ : ಯಾರದು?

ಡಂಕಣ : ನಾನು ಡಂಕಣ (ಜಕ್ಕಣನ ಪಾದ ಮುಟ್ಟಿ ನಮಸ್ಕರಿಸುವನು)

ಜಕ್ಕಣ : ನೀನು ನನ್ನ ಶಿಷ್ಯನಂತೆ ಕಾಣುವುದಿಲ್ಲ.

ಡಂಕಣ : ನಿಜ.

ಜಕ್ಕಣ : ಯಾರು ನೀನು? ಇಷ್ಟು ಹೊತ್ತಿನಲ್ಲಿ ದೇವಾಲಯದಲ್ಲಿ ಇರಬಾರದೆಂದು ಗೊತ್ತಿಲ್ಲವೆ?

ಡಂಕಣ : ಕ್ಷಮಿಸಿ ಸ್ವಾಮಿ. ಹೊರಡೋಣವೆಂದೇ ಇದ್ದೆ. ಆದರೆ ಈ ದೇವಾಲಯ ನನ್ನನ್ನು ಸೆಳೆಯಿತು. ಇಂಥ ಸೆಳೆತವನ್ನು ನಾನು ನನ್ನ ಜೀವಮಾನದಲ್ಲೇ ಅನುಭವಿಸಿಲ್ಲ. ದೇವಾಲಯವನ್ನು ನೋಡಿದ ಮೇಲೆ ಇದರ ಸ್ಥಪತಿಗಳ ಪಾದಗಳಿಗೆ ನಮಸ್ಕರಿಸಿಯೇ ಹೋಗಬೇಕೆನ್ನಿಸಿತು. ಸಂಜೆ ಹೊತ್ತು ನೀವು ದೇವಾಲಯಕ್ಕೆ ಬಂದು ಏಕಾಂತ ಕೂರುತ್ತೀರೆಂದು ನಿಮ್ಮ ಶಿಷ್ಯರು ಹೇಳಿದರು ಕಾಯುತ್ತಿದ್ದೆ. ನಿಮಗೆ ಬೇಸರವಾಗುವುದಾದರೆ ಈಗಲೇ ಹೊರಡುತ್ತೇನೆ.

ಜಕ್ಕಣ : ಎಲ್ಲಿಂದ ಬಂದೆ?

ಡಂಕಣ : ಕಳಿಂಗ ದೇಶದಿಂದ ಬಂದೇ ಸ್ಥಪತಿಗಳೇ. ಅಲ್ಲಿಯು ದೇವಾಲಯಗಳ ನಿರ್ಮಾಣ ಬರದಿಂದ ಸಾಗಿದೆ. ಅಲ್ಲಿದ್ದಾಗ ಬೇಲೂರಿನಲ್ಲಿ ಇದಕ್ಕಿಂತ ಅದ್ಬುತ ದೇವಾಲಯವನ್ನು ನಿರ್ಮಿಸಲಾಗುತ್ತಿದೆಯೆಂದು ಯಾರೋ ಹೇಳಿದರು; ಬಂದೆ.

ಜಕ್ಕಣ : ದೇವಾಲಯ ನಿರ್ಮಾಣವಾಗುತ್ತಿರುವುದು ಕಳಿಂಗದೇಶದ ವೇಳೂರುನಲ್ಲಿ ಅಲ್ಲವೆ?

ಡಂಕಣ : ಹೌದು, ನಿಮಗೆ ಹ್ಯಾಗೆ ಗೊತ್ತಾಯಿತು?

ಜಕ್ಕಣ : ಗೊತ್ತಾಗದೇನೋ ಹುಡುಗಾ? ನಿನ್ನ ನೋಡಿ ನನ್ನ ಯೌವನದ ನೆನಪಾಯಿತು. ನಾನು ನಿನ್ನ ಹಾಗೇ ದೇವಾಲಯಗಳಿಗೆ ನುಗ್ಗುತ್ತಿ‌ದ್ದೆ, ಕಲಿಯುತ್ತಿದ್ದೆ. ಹೇಳು ನೀನು ಒಬ್ಬ ರೂವಾರಿ, ಹೌದೋ?

ಡಂಕಣ :  ಹೌದು ಸ್ಥಪತಿಗಳೆ. ನಾನು ರೂವಾರಿಯ ವಂಶದಲ್ಲಿ ಹುಟ್ಟಿದವನು.

ಜಕ್ಕಣ : ನಿನ್ನ ಗುರು ಯಾರು?

ಡಂಕಣ : ನನಗೆ ಯಾರು ಕಲಿಸಲಿಲ್ಲ, ರೂವಾರಿತನ ನನ್ನ ರಕ್ತದಲ್ಲಿದೆ. ಚಿಕ್ಕಂದಿನಿಂದಲೂ ನನಗೆ ಶಿಲ್ಪದ ಬಗ್ಗೆ ಆಸಕ್ತಯಿತ್ತು. ಮಣ್ಣಿನಿಂದ ಗೊಂಬೆ ಮಾಡುತ್ತಿದ್ದೆ. ತಾಯಿ ಬೇಡವೆಂದಷ್ಟು ನನ್ನ ಹಟ ಹೆಚ್ಚಾಯಿತು. ಕದ್ದು ಕಲ್ಲಿನಲ್ಲಿ ವಿಗ್ರಹ ಕೊರೆಯಲಿ ಶುರು ಮಾಡಿದೆ. ಹಾಗೇ ರೂವಾರಿಯಾದೆ. ಈಗ ಕಲ್ಲಿನ ದರ್ಶನದಿಂದ ಮಾತ್ರದಿಂದ ಅದರಲ್ಲಿ ಯಾವ ಮೂರ್ತಿಯು ಒಡಮೂಡುವದೆಂದು ಹೇಳಬಲ್ಲೆ.

ಜಕ್ಕಣ : ಹಾಗೊ? ಸರಿ ಹಾಗಾದರೆ ಅಕೋ ಅಲ್ಲಿ ಬಿದ್ದಿದೆಯಲ್ಲ, ಆ ಕಲ್ಲು ಕಂಡೆಯಾ?

ಡಂಕಣ : ಕಂಡೆ ಸ್ವಾಮಿ.

ಜಕ್ಕಣ : ಹಾಗಿದ್ದರೆ ಹೇಳು, ಆ ಕಲ್ಲಿನಲ್ಲಿ ನಿನಗೆ ಯಾವ ಮೂರ್ತಿ ಕಂಡಿತು?

ಡಂಕಣ : ನೀವು ಯಾವ ಮೂರ್ತಿಯನ್ನು ಮಾಡಲಿಕ್ಕೆ ಆ ಶಿಲೆಯನ್ನು ತಂದಿದ್ದೀರೋ ಗೊತ್ತಿಲ್ಲ. ನನಗಂತೂ ಆ ಕಲ್ಲಿನಲ್ಲಿ ವೇಣುಗೋಪಾಲನ ಮೂರ್ತಿ ಕಾಣುತ್ತಿದ್ದೆ. (ಸ್ಥಳ ತೋರಿಸಿ) ವೇಣು ಹಿಡಿದ ಹಸ್ತ , ಇಲ್ಲಿ ಮೂಡಿದರೆ ಚೆನ್ನ.

ಜಕ್ಕಣ : ಭಲೇ ಹುಡುಗಾ! ವೇಣುಗೋಪಾಲನ ಮೂರ್ತಿಯನ್ನು ಕಡೆಯಲೆಂದೇ ಈ ಕಲ್ಲು ತರಿಸಿ ಇಟ್ಟುಕೊಂಡೆ. ಮನುಷ್ಯ ದೈವದ ಹಾಗೆ ಪ್ರತಿಮೆಗಳಿಗೂ ಒಂದು  ದೈವವಿರುತ್ತದೆ. ನನಗದು ಇನ್ನೂ ತಿಳಿಯುತ್ತಿಲ್ಲ. ವೇಣುಗೋಪಾಲನ ಮೂರ್ತಿ ಯಾಕೆ ನನ್ನ ಪರೀಕ್ಷೆ ಮಾಡುತ್ತಿದ್ದಿತೋ ಗೊತ್ತಿಲ್ಲ. ಎಷ್ಟು ಅನುಸಂಧಾನ ಮಾಡಿದರೂ ಮೂರ್ತಿಯ ಸ್ಪಷ್ಟ ಕಲ್ಪನೆ ನನಗಿನ್ನೂ ಸಾಕ್ಷಾತ್ಕಾರವಾಗಿರಲಿಲ್ಲ. ಕಾಲ ಕೂಡಿ ಬರಲೆಂದು ಈ ಕಲ್ಲನ್ನು ಹಾಗೇ ಇಟ್ಟುಕೊಂಡಿದ್ದೆ. ನೀನದರ ಹಸ್ತ ತೋರಿಸಿದ ಮೇಲೆ ನನಗೀಗ ವೇಣುಗೋಪಾಲನ ಆಕೃತಿ ಸ್ಪಷ್ಟವಾಯಿತು. ನಿನ್ನ ಬಗ್ಗೆ ನನ್ನ ಆಸಕ್ತಿ ಕೆರಳುತ್ತಿದೆ. ಹೇಳು ಹುಡುಗಾ, ನಿನಗ್ಯಾರೂ ಗುರುಗಳಿಲ್ಲ ಅಂದೆ. ನಿಮ್ಮ ಊರಿನಲ್ಲಿ ರೂವಾರಿಗಳಿರಬೇಕಲ್ಲ?

ಡಂಕಣ : ಆಯ್ಕೆ ಅಂತಃಕರಣದ ವ್ಯಾಪಾರವಲ್ಲವೆ ಸ್ಥಪತಿಗಳೆ ಗುರು ಸಿಕ್ಕರೆ ಅದು ಭಾಗ್ಯ ವಿಶೇಷ ಹೌದು. ‘ಇವನೇ ನನ್ನ ಶಿಷ್ಯನೆಂದು ಗುರುವೂ’, ‘ಇವರೇ ನನ್ನ ಗುರು’ಗಳೆಂದು’ ಶಿಷ್ಯನೂ ನೋಟ ಮಾತ್ರದಿಂ‌ದಲೇ ಆಯ್ದುಕೊಳ್ಳುತ್ತಾರೆಂದು ನನ್ನ ತಂದೆ ಹೇಳುತ್ತಿದ್ದರಂತೆ. ಹೀಗೆಂದು ನನ್ನ ತಾಯಿ ಹೇಳುತ್ತಿದ್ದಳು.

ಜಕ್ಕಣ : (ಚಕಿತನಾಗಿ) ನಿನ್ನದು ಯಾವ ಊರು ಹುಡುಗಾ?

ಡಂಕಣ : ಕೆಲವು ವೈಯಕ್ತಿಕ ಪ್ರಶ್ನೆಗಳಿಗೆ ನಾನು ಉತ್ತರ ಹೇಳಲಾರೆ ಕ್ಷಮಿಸಬೇಕು ಸ್ಥಪತಿಗಳೇ. ಹಾಗೆಂದು ನನ್ನ ತಾಯಿಗೆ ಮಾತು ಕೊಟ್ಟಿದ್ದೇನೆ.

ಜಕ್ಕಣ : ಒಬ್ಬೊಬ್ಬರದು ಒಂದೊಂದು ಗೋಳಿನ ಕತೆ ಮಾರಯಾ! ನನ್ನದು ಅಂಥದೇ ಒಂದು ಕತೆ. ನನ್ನ ಊರು ಕೇರಿ ಯಾವುದೆಂದು ನಾನು ಹೇಳಿಲ್ಲ. ಮಹಾರಾಜರು ಕೇಳಿಲ್ಲ. ಪಟ್ಟಮಹಾದೇವಿಯರ ಉಸ್ತುವಾರಿಯಲ್ಲೇ ದೇವಾಲಯದ ಕೆಲಸ ನಡೆದಿದೆ. ಅವರಿಗೂ ವೈಯಕ್ತಿಕ ವಿವರಗಳಲ್ಲಿ ಆಸಕ್ತಿ ಕಡಿಮೆ. ಒಮ್ಮೆ ಮಾತ್ರ ನನ್ನ ಊರು ಕೇರಿಯ ವಿಷಯ ಕೇಳಿದರು. ನಾನು ಹೇಳಲಿಲ್ಲ. ಅಷ್ಟಕ್ಕೆ ಅವರು ಸುಮ್ಮನಾದರು. ಅವರಿಗೆ ಪ್ರತಿಭೆ ಒಂದಿದ್ದರಾಯಿತು. ನನ್ನ ವಿಷಯ ಬಿಡು, ನಿನಗೆ ಗುರುಗಳಿಲ್ಲ ಅಂದೆ, ಯೋಗ್ಯರಾದ ಗುರುವನ್ನು ಹುಡುಕುತ್ತ ಬಂದೆಯೊ?

ಡಂಕಣ : ನಿಜ ನಾನು ದಾರಿಹೋಕ. ನಾನು ಹುಡುಕುವ ದಾರಿಯಲ್ಲೇ ಸಿಕ್ಕಬೇಕು. ಮಾರ್ಗದರ್ಶಕ ಸಿಗಲೆಂದೇ ಮಾರ್ಗ ಹಿಡಿದಿದ್ದೇನೆ ಸ್ಥಪತಿಗಳೇ.

ಜಕ್ಕಣ : ಚಿತ್ರ ಚರಿತ್ರನಯ್ಯಾ ನೀನು! ಹೋಗಲಿ ಬಿಡು. ದೇವಾಲಯವನ್ನ ನೋಡಿದೆಯಲ್ಲ. ಏನೆನ್ನಿಸಿತು?

ಡಂಕಣ : ನಿಜ ಹೇಳುತ್ತೇನೆ ಸ್ಥಪತಿಗಳೇ, ದೇವಾಲಯ ಮಾತ್ರ ಅದ್ಬುತವಾಗಿದೆ! ಇಡೀ ಮಂದಿರ ಚೇನ್ನಕೇಶವನ ಅಂತಃಪುರ; ಶಿಲಾಬಾಲಿಕೆಯರೆಲ್ಲ ಅವನ ಪ್ರೇಯಸಿಯರು!

ಜಕ್ಕಣ : ಭಲೆ, ಒಳ್ಳೆ ಕಸುಬುದಾರ ನೀನು! ಇನ್ನಷ್ಟು ವಿವರವಾಗಿ ಹೇಳು.

ಡಂಕಣ : ನನಗೊಂದು ಅನುಮಾನ ಸ್ಥಪತಿಗಳೆ, ಇವರು ಅಲೌಕಿಕ ಪ್ರೇಯಸಿಯರಲ್ಲವೆ?

ಜಕ್ಕಣ : ಖಂಡಿತವಾಗಿ! ಚೆನ್ನಕೇಶವನಿಗೆ ಲೌಕಿಕ ಪ್ರೇಯಸಿಯರಿರುವುದುಂಟೇನಯ್ಯಾ?

ಡಂಕಣ : ಇಲ್ಲಿಯ ಬಹಳಷ್ಟು ಶಿಲಾಮೂರ್ತಿಗಳ ಚೆಲುವಿಕೆ ಅಪೂರ್ವವಾದದ್ದು ನಿಜ. ಆದರೆ ಚೆನ್ನಕೇಶವನ ಪ್ರೇಯಸಿಯರು ನಿತ್ಯ ಷೋಡಸಿಯರು. ಇವರದು ಮೊಲೆ ಬಲಿತು ಮಾಗಿದ ಯೌವನವೆಂದು ಅನಿಸುವುದಿಲ್ಲವೆ?

ಜಕ್ಕಣ : ನಿನಗದು ಅನುಭವ ಬಲಿತ ಮೇಲೆ ತಿಳಿದೀತು; ಆಮೇಲೆ?

ಡಂಕಣ : ಇಲ್ಲಿಯ ಬಹಳಷ್ಟು ಶಿಲಾಬಾಲಿಕೆಯರ ಅಂಗಸೌಷ್ಠವದ ಹಿಂದೆ ಒಬ್ಬಳೇ ಹೆಣ್ಣಿನ ಅಂಗಸೌಷ್ಠವದ ಮಾದರಿ ಇದ್ದಂತಿದೆ, ಹೌದೆ ಸ್ಥಪತಿಗಳೇ?

ಜಕ್ಕಣ : ಇದೂ ನಿನಗೆ ಅನುಭವ ಬಲಿತ ಮೇಲೆ ತಿಳಿದೀತು. ಚೇನ್ನಕೇಶವನ ಮೂರ್ತಿಯ ನೋಡಿದೆಯಾ?
ಡಂಕಣ : (ಶಾಂತಿಯಿಂದ) ನೀವು ಮಾಡಿದ ಚೇನ್ನಕೇಶವನ ಮೂರ್ತಿಯ ಅವಗುಂಠನ ತೆಗೆದು ನಿಮ್ಮ ಶಿಷ್ಯರು ತೋರಿಸಿದರು; ನೋಡಿದೆ. ಅದೊಂದು ಶಾಸ್ತ್ರರೀತ್ಯಾ ಮಾಡಿದ ಅಪೂರ್ವ ಕಲಾಕೃತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ…..

ಜಕ್ಕಣ : ಏನು ಆದರೆ?

ಡಂಕಣ : ಮೂರ್ತಿಯ ಅಂತರಂಗದಲ್ಲಿ ದೋಷವಿದೆ. ಆದ್ದರಿಂದ ಅದು ಪೂಜಾರ್ಹವಲ್ಲ! ಅರ್ಹವೆಂದು ನಂಬಿದ್ದೀರಿ.

ಜಕ್ಕಣ : (ಕೋಪದಿಂದ) ಮೂರ್ಖಾ ಶಾಸ್ತ್ರಾಧಾರವಿದೆಯೋ ಯಾವುದಕ್ಕೂ; ಮ್ಯಾಲೆ ಕೈಲಾಸಕೂ ಕೆಳಗೆ ಭೂಲೋಕಕೂ! ಶಾಸ್ತ್ರವನ್ನು ಬಿಟ್ಟು ಒಂದಂಗುಲವೂ ಆಚೆ ಈಚೆ ಸರಿದಿಲ್ಲ ನಾನು!

ಡಂಕಣ : (ಶಾಂತನಾಗಿ) ಅದೇ ನೀವು ಮಾಡಿರುವ ತಪ್ಪು ಸ್ಥಪತಿಗಳೇ. ಶಾಸ್ತ್ರಮೂರ್ತಿಯ ಪ್ರಮಾಣವನ್ನು ಹೇಳಬಲ್ಲದು. ಅದು ಅಂತರಂಗವನ್ನು ತೋರಿಸಲಾರದು. ಅಂತರಂಗಕ್ಕೆ ಅಂತಃಕರಣವೇ ಪ್ರಮಾಣ, ಶಾಸ್ತ್ರವಲ್ಲ. ನಿಮಗೆ ಕಲ್ಲಿನ ಶಾಸ್ತ್ರ, ಕಲೆಯ ಶಾಸ್ತ್ರ ಎರಡೂ ಗೊತ್ತಿವೆ. ಆದರೆ ಈ ಮೂರ್ತಿಯ ವಿಷಯದಲ್ಲಿ ಮಾತ್ರ ಕಲ್ಲಿನ ಅಂತರಂಗ ತಿಳಿದಿಲ್ಲವೆಂದೇ ಹೇಳಬೇಕಾಗುತ್ತದೆ.

ಜಕ್ಕಣ : (ವ್ಯಂಗ್ಯವಾಗಿ) ಭಲೇ ಭಲೇ! ಭಾರೀ ತಿಳಿದುಕೊಂಡಿದ್ದೀಯಪ್ಪ! ಉತ್ತರದ ಗೋದಾವರಿಯಿಂದ ದಕ್ಷಿಣದ ಕನ್ಯಾಕುಮಾರಿತನಕ ವಿಜಯಧ್ವಜ ಹಾರಿಸಿದ ಈ ಆಚಾರ್ಯನಿಗೆ ಕಲ್ಲಿನ ಅಂತರಂಗ ತಿಳಿದಿಲ್ಲವೆಂದು ಕವಡೆ ಆಡುವ ಹುಡುಗನೊಬ್ಬ ಹೇಳುವಂತಾದುದು ಈ ನೆಲದ ಮಹಿಮೆಯಲ್ಲವೆ? ನಿನಗ್ಯಾಕೆ ಗುರು ಸಿಕ್ಕಿಲ್ಲವೆಂದು ನನಗೆ ಈಗ ಅರ್ಥವಾಯಿತು. ನೀನಗ್ಯಾಕೆ ಗುರು ಸಿಕ್ಕಿಲ್ಲವೆಂದು ನನಗೆ ಈಗ ಅರ್ಥವಾಯಿತು. ನೀನೇ ಗುರುವಾಗುವಷ್ಟು ಪ್ರತಿಭಾವಂತನಾಗಿರುವಾಗ ನಿನಗಿನ್ನೊಬ್ಬ ಗುರುವ್ಯಾಕೆ ಬೇಕು? ಅಲ್ಲವೇ?

ಡಂಕಣ : ಈಗಲೂ ವಿನಯದಿಂದಲೇ ಹೇಳುತ್ತಿದ್ದೇನೆ ಸ್ಥಪತಿಗಳೇ, ನನ್ನ ಮಾತು ಕೇಳಿ, ಇನ್ನೊಂದು ಮೂರ್ತಿಯ ಮಾಡಿಕೊಡುವುದುಚಿತ.

ಜಕ್ಕಣ : ವಿದ್ಯೆಯ ಕೊಬ್ಬು ನಿನ್ನ ನೆತ್ತಿಗೇರಿದೆಯೋ ಮೂರ್ಖಾ, ನಿನ್ನನ್ನು ದೇವಾಲಯದೊಳಕ್ಕೆ ಬಿಟ್ಟುದೇ ತಪ್ಪು. ತೊಲಗು ಇಲ್ಲಿಂದ (ಹೆಮ್ಮೆಯಿಂದ) ನಾನು ಮೂರ್ತಿ ಮಾಡುವಾಗ ಸ್ವಯಂ ದೇವರೇ ನನ್ನೆದುರು ಬಂದು ರೂಪದರ್ಶಿಯಾಗಿ ಕೂರುತ್ತಾನೆ! ಗೊತ್ತೇನೋ ಕತ್ತೆ?

(ಅಸಹನೆಯಿಂದ ಡಂಕಣನ ಕೆನ್ನೆಗೆ ಹೊಡೆಯುವನು. ಈಗಲೂ ಡಂಕಣ ಸಹಿಸಿಕೊಂಡಿರುವನು.ಅಷ್ಟರಲ್ಲಿ ಗರ್ಭಗುಡಿಯ ಕಡೆಯಿಂದ ಚೆನ್ನಕೇಶವಾ ಎಂದು ಹೆಣ್ಣಿನ ದನಿ ಕೇಳಿಸಿ ಕಡೆ ಹೊರಡುವ ಮುನ್ನ ಜಕ್ಕಣನ ಎದುರು ಬಂದು)

ಡಂಕಣ : ಚೆನ್ನಕೇಶವನನ್ನು ಕಾಣುವ ಕಣ್ಣು ನಿಮ್ಮ ಮುಖದಲ್ಲಿಲ್ಲ ಸ್ಥಪತಿಗಳೇ.

(ಹೋಗುವನು. ಡಂಕಣನ ಸೊಕ್ಕಿನ ಮಾತು ಕೇಳಿ ಅಸಹಾಯಕ ಆಘಾತ ಹೊಂದಿ ಜಕ್ಕಣ ನಿಶ್ಯಕ್ತಿಯಿಂದ ಅಲ್ಲೇ ಒಂದು ಕಲ್ಲಿನ ಮೇಲೆ ಕುಸಿದು ಕೂರುವನು. ದೇವಾಲಯದ ಹೊರಭಾಗದಲ್ಲಿ ಬೆಳ್ದಿಂಗಳಿದೆ. ಅಲ್ಲಿ ಗೊಲ್ಲರ ಹುಡುಗ ನಿಂತಿದ್ದಾನೆ.)

ಗೊ.ಹುಡುಗ : ಎಂದಿನಂತಿಲ್ಲ ಇಂದಿನ ರಾತ್ರಿ. ಮುತ್ತಿಕ್ಕಿದ ಮೋಡಗಳಿಂದ ಚಂದ್ರನಮುಖ ರಾಡಿಯಾಗಿದೆ. ಕಿಡಿ ಸಿಡಿಸುತ್ತಿವೆ ತಾರೆಗಳು. ಕಲಾವಿದನ ರೂಪಕಗಳು ನೆತ್ತರು ಬಸಿಯುತ್ತಿವೆ. ಬೂದಿಯಾಗಿವೆ ಕ್ಷಿತಿಜಗಳು. ಅರೆಕೊರೆದ ಮೂರ್ತಿಗಳು! ಕಿರಿದ ಹಲ್ಲು ಕಿಸಿದ ಕಣ್ಣು ಬಿಳಿಚಿಕೊಂಡಿವೆ.

ಜಕ್ಕಣ : ಯಾರದು?

ಗೊ.ಹುಡುಗ : ನಾನು ಗೊಲ್ಲರ ಹುಡುಗ.

ಜಕ್ಕಣ : ಗೊಲ್ಲರ ಹುಡುಗ ಅಂದರೆ ಯಾರು?

ಗೊ.ಹುಡುಗ : ಇನ್ನೂ ಗುರುತು ಸಿಗಲಿಲ್ಲವೇ ಸ್ಥಪತಿಗಳೇ? ಚೆನ್ನಕೇಶವನ ಮೂರ್ತಿ ಮಾಡುವಾಗ ಮಾದರಿಗಾಗಿ ಸ್ವಲ್ಪ ಹೊತ್ತು ಹಾಗೇ ನಿಂತಿರು ಅಂತ ಮುಂದೆ ನಿಲ್ಲಿಸಿ ಕೊಂಡಿದ್ದಿರಲ್ಲ? ಆ ಕೇಶವ!

ಜಕ್ಕಣ : ಯಾಕಯ್ಯಾ ಇಷ್ಟು ಹೊತ್ತಿನಲ್ಲಿ ಈ ಕಡೆ ಬಂದೆ?

ಗೊ.ಹುಡುಗ : ನೀವಿದ್ದೀರಲ್ಲ. ನೋಡಿಕೊಂಡು ಹೋಗೋಣ ಅಂತ ಬಂದೆ.

ಜಕ್ಕಣ : ಆಗಲೇ ಒಬ್ಬ ಹುಡುಗ ಮಾತಾಡಿ ಹೋದನಲ್ಲ, ಆವಾಗ ನೀನಿದ್ದೆಯೊ?

ಗೊ.ಹುಡುಗ : ಇದ್ದೆ. ಯಾಕೆ ನಾನಿರಬಾರದಿತ್ತೆ ಸ್ಥಪತಿಗಳೆ? ನಿಮ್ಮ ನಡುವೆ ನಡೆದ ಮಾತುಗಳನ್ನು ನಾನು ಯಾರಿಗೂ ಹೇಳುವುದಿಲ್ಲ.

ಜಕ್ಕಣ : ಅಧಿಕ ಪ್ರಸಂಗತನ ಮಾಡಬೇಡ. ಯಾರು ಕೇಳಬಾರದ ನುಡಿಗಳನ್ನು ನಾವೇನೂ ಆಡಲಿಲ್ಲವಲ್ಲ? ನಿನಗೆ ಹಾಗಿನ್ನಿಸಿತೇನಯ್ಯಾ?

ಗೊ.ಹುಡುಗ : ನನಗೂ ಹಾಗನ್ನಿಸಲಿಲ್ಲ.

ಜಕ್ಕಣ : ಆ ರೂವಾರಿಯ ಮಾತು  ಉದ್ಗಟತನ ಅಂತ ಅನ್ನಿಸಲಿಲ್ಲವೆ?

ಗೊ.ಹುಡುಗ : ಅಬ್ಬಾ ಏನವನ ಧಿಮಾಕು! ಕೊಂಬುಗಳನ್ನು ಅಲಂಕರಿಸಿಕೊಂಡು ನಿಂತ ಸಂಕ್ರಾತಿಯ ಹೋರಿಯ ಹಾಗೆ ಕಂಡನಾತ. ನಿಮ್ಮ ಹೆಮ್ಮೆಗಳಿಗೆ ಭಾರೀ ಗಾಯ ಮಾಡಿದ!

ಜಕ್ಕಣ : ಅಂದರೆ ನೀನವನ ಮಾತುಗಳನ್ನು ಒಪ್ಪಿಕೊಳ್ಳುತ್ತೀಯಾ?

ಗೊ.ಹುಡುಗ : ಒಪ್ಪುವುದೂ ಬಿಡುವುದೂ ನಿಮಗೂ ಮಹಾರಾಜರಿಗೂ ಬಿಟ್ಟಿದ್ದು. ಆದರೆ ಆ ಪ್ರತಿಮೆ ದೋಷಪೂರ್ಣವೆಂಬ ಶಬ್ದಸೂತಕವಂತೂ ಹಾಗೇ ಉಳಿಯಿತಲ್ಲ!

ಜಕ್ಕಣ : ಮೂರ್ತಿಯಲ್ಲಿಯ ದೋಷದ ಬಗ್ಗೆ ಅಂತಿಮವಾಗಿ ಹೇಳಬೇಕಾದವನು ನಾನೊ? ಆ ದಾರಿಹೋಕನೋ?

ಗೊ.ಹುಡುಗ : ಮಹಾರಾಜರು! ಯಾಕಂತೀರೋ ಮೂರ್ತಿ ದೋಷಪೂರ್ಣವೆಂದು ತಿಳಿದ ಮೇಲೂ ಪ್ರತಿಷ್ಠಾಪನೆ ಮಾಡಿದರೆ ಆಮೇಲೆ ಹುಟ್ಟುವ ಕಥೆಗಳಿಗೆ ಅವರೇ ನಾಯಕರಾಗಬೇಕಾಗುತ್ತದೆ. ಅಲ್ಲವೇ?

ಜಕ್ಕಣ : ಎರಡು ದಿನ ರೂಪದರ್ಶಿಯಾಗಿ ಕೂತವನು ಮೂರನೇ ದಿನ ಕಲಾ ವಿಮರ್ಶಕನಾಗಿ ಹೊರಹೊಮ್ಮುವುದೆಂದರೆ ಈ ಮಣ್ಣಿನಲ್ಲಿ ಏನೋ ವಿಶೇಷವಿರಬೇಕಲ್ಲವೆ?

ಗೊ.ಹುಡುಗ : ನೀವೆನಾದರೂ ಹೇಳಿ, ನಿಮಗೆ ಸಿಕ್ಕದ ಶಿಲ್ಪಕಲೆಯ ಸೂಕ್ಷ್ಮಗಳು ಆ ಬಾಲಕನ ಬಾಯಿಂದ ಸಿಡಿದವೆಂದು ಅನ್ನಿಸಲಿಲ್ಲವೆ ಸ್ಥಪತಿಗಳೆ? ಇರಲಿ, ನೀವಿಬ್ಬರೂ ಮಾತಾಡುತ್ತಿದ್ದಾಗ ಯಾವುದೋ ಹೆಂಗಸು ಬಂದು ದೇವರಿಲ್ಲದ ಗರ್ಭಗುಡಿಯಲ್ಲಿ ದೀಪಹಚ್ಚಿ ಮಂಗಳಾರತಿ ಗುನುಗಿ, ಬಿಕ್ಕಿದ್ದು ಕೇಳಿಸಿತೆ?

ಜಕ್ಕಣ : ಇಲ್ಲ.

ಗೊ.ಹುಡುಗ : ಸರಿ ಹೋಯ್ತಲ್ಲ! ನೀವು ಮಾಡಿದ ಚೆನ್ನಕೇಶವನ ತುಟಿಗಳಲ್ಲಿ ಮಲಗಿರುವ ಮೌನವನ್ನು ಆ ಹುಡುಗನಂತೂ ಕೆಣಕಿದ್ದಾನೆ. ಮುಂದೆ ಅವನೇ ಉತ್ತರಿಸುತ್ತಾನೆ ಬಿಡಿ.

(ಗೊಲ್ಲರ ಹುಡುಗ ಹೋಗುವನು. ಜಕ್ಕಣ ಹಾಗೇ ಕೂರುವನು)

ಜಕ್ಕಣ : ನನ್ನನ್ನು ಮೀರಿದ ಒಂದರಿಂದ ವಿಪರೀತವಾದದ್ದೇನೋ ನಡೆಯುತ್ತಿದೆ ಅಂತ ಅನ್ನಿಸುತ್ತಿದೆಯಲ್ಲಾ!