(ಬೆಂಗಳೂರಿನಂಥ ನಗರದಲ್ಲಿಯ ಒಂದು ಮಧ್ಯಮವರ್ಗದ ಮನೆ. ಚಿಕ್ಕ ಹಾಲು, ಹೊರಗಡೆ ತುಸು ಹೊತ್ತಿನಲ್ಲಿಯೇ ಸೂರ್ಯೋದಯವಾಗಬೇಕಷ್ಟೆ. ಶಿವಣ್ಣ ವಯಸ್ಸು ಮೂವತ್ತುಯಾವುದೋ ಆಫೀಸಿನಲ್ಲಿ ಜವಾಬ್ದಾರಿಯ ಸ್ಥಾನದಲ್ಲಿದ್ದಾನೆಂದು ನೋಡಿದೊಡನೆ ಹೊಳೆಯುತ್ತದೆ. ದಿನಪತ್ರಿಕೆಗಾಗಿ ಕಾಯುತ್ತಿದ್ದಾನೆ. ಹಾಲಿಗಂಟಿ ಬೆಡ್ರೂಮಿದ್ದು ಅದರ ಬಾಗಿಲು ಮಾತ್ರ ಕಾಣುತ್ತಿದೆ. ಒಳಗೆ ಲೈಟಿದೆ. ಹೆಂಡತಿ ಪಾರ್ವತಿ ಒಳಗಿದ್ದಾಳೆ. ಮುಂದೆ ರಂಗದ ಮೇಲೆ ಪ್ರವೇಶವಾಗುವವರೆಗೆ ಅವಳ ಮಾತುಗಳು ರೂಮಿನಿಂದಲೇ ಬರುತ್ತವೆ. ಅಡುಗೆ ಮನೆಯನ್ನು ಸೂಚಿಸುವ ಇನ್ನೊಂದು ಬಾಗಿಲು ಇದೆ. ಅಲ್ಲಿ ಬೆಳಕಿಲ್ಲ.)

ಶಿವಣ್ಣ : ಇನ್ನೂ ಕಾಫಿ ಆಗಿಲ್ಲವೇನೆ?

ಪಾರ್ವತಿ : (ಒಳಗಿನಿಂದ) ಹಾಲಿನ್ನೂ ಬಂದಿಲ್ಲ. ಬಂದಿದ್ದರೆ ಕಾಫೀ ಕೊಡ್ತ ಇರಲಿಲ್ಲವ?

ಶಿವಣ್ಣ : ಏನೇ ಹುಡುಗಿ, ಸಂಸಾರ ಹೂಡಿ ಇನ್ನೂ ಆರುತಿಂಗಳಾಗಿಲ್ಲ, ಆಗಲೇ ಗಂಡನ ಮೇಲೆ ಜೋರು ಮಾಡ್ತೀಯ?

ಪಾರ್ವತಿ : ಮತ್ತಿನ್ನೇನು ಅಷ್ಟೂ ತಾಳ್ಮೆ ಇಲ್ಲದೋರು ಊರಿಗ್ಮುಂಚೆ ಯಾಕೇಳಬೇಕಿತ್ತು? ಹಾಲು ಬಂದಮೇಲೆ ನಾನೇ ಎಬ್ಬಿಸ್ತಿರಲಿಲ್ಲವ?

ಶಿವಣ್ಣ : ಆಗಲೇ ಆರುಗಂಟೆ ಆಯ್ತು; ಪೇಪರಿನ್ನೂ ಬರಲಿಲ್ಲವೆ?

ಪಾರ್ವತಿ : ಒಂದು ಗಂಟೆ ತಡವಾಗಿ ಬಂದರೇನೀಗ? ಹಾಲು ಬಂದಮೇಲೆ ಕಾಫಿ ಕಾಯ್ಸಿ ಕೊಡ್ತೇನೆ. ಇಲ್ಲಿ ಬನ್ನಿ.

ಶಿವಣ್ಣ : ಛೇ, ಆ ಪೇಪರಿನವನಿಗೇನು ಧಾಡಿಯಾಯ್ತೊ? ಅವನು ತಡ ಮಾಡೋದಂದರೆ,

ಪಾರ್ವತಿ : ಪೇಪರ್ ಬಂದಮೇಲೆ ಹೋಗೀರಂತೆ; ಇಲ್ಲಿ ಬನ್ನೀಂದ್ರೆ-

ಶಿವಣ್ಣ : ಇರು ಮಾರಾಯಳೆ-

ಪಾರ್ವತಿ : ಹಾಳಾದ್ದು ಆ ಪೇಪರಲ್ಲೇನಿರುತ್ತೊ?

ಶಿವಣ್ಣ : ಪೇಪರೋದ್ದೇ ಹೋದರೆ ಪ್ರಪಂಚದಲ್ಲಿ ಏನೇನಾಗ್ತಾ ಇದೆ-ಅಂತ ಹ್ಯಾಗೆ ತಿಳಿಯೋದು?

ಪಾರ್ವತಿ : ನೀವು ಪೇಪರೋದಿದರೂ, ಓದ್ದೇ ಹೋದರೂ ಏನೂ ಆಗೋಲ್ಲಾರಿ. ಮಳೆಗಾಲ ಆದಮೇಲೆ ಚಳಿಗಾಲ ಬರತ್ತೆ, ಚಳಿಗಾಲ ಆದ ಮೇಲೆ-

ಶಿವಣ್ಣ : ಬೇಸಿಗೆ ಬರತ್ತೆ.

ಪಾರ್ವತಿ : ಅದಕ್ಕೇ ಹೇಳಿದೆ,-ಏನೂ ಆಗೋಲ್ಲಾಂತ. ಏನೂ ಆಗೋಲ್ಲಾಂತ ಸ್ವಥಾ ಇಂದಿರಾಗಾಂಧೀಯವರೇ ರೇಡಿಯೋದಲ್ಲಿ ಭಾಷಣ ಮಾಡಿದಾರೆ, ಕೇಳಿಸಿಕೊಳ್ಳಲಿಲ್ಲವ?

ಶಿವಣ್ಣ : ಏ ರಾಣಿ ಬಾರೇ ಇಲ್ಲಿ,

ಪಾರ್ವತಿ : ಬಂದೇನು ಮಾಡ್ಲಿ?

ಶಿವಣ್ಣ : ಲವ್ ಮಾಡೋಣ ಬಾರೇ.

ಪಾರ್ವತಿ : ಥೂ ನಿಮಗೆ-

ಶಿವಣ್ಣ : ಹೊತ್ತುಗೊತ್ತು ಒಂದೂ ಇಲ್ಲಾಂತ ತಾನೆ?

ಪಾರ್ವತಿ : ಬುದ್ದೀನೂ ಇಲ್ಲ.

ಶಿವಣ್ಣ : ಹೋಗಲಿ, ನಿನ್ನೆ ರಾತ್ರಿ ನಿಲ್ಲಿಸಿದ್ದಿವಲ್ಲ- ಹಗಲಗನಸಿನ ಆಟ, ಅದನ್ನ ಮುಂದುವರಿಸೋಣವ? ಏನೇ,-

ಪಾರ್ವತಿ : (ಹೊರಬಂದು ಅವನ ಭುಜದ ಮೇಲೊರಗುತ್ತ) ಥೂ ಹೋಗಿಪ್ಪ, ನೀವು ಮಲಗೋಕ್ಕೂ ಬಿಡೋಲ್ಲ-

ಶಿವಣ್ಣ : ನಮ್ಮ ಮಗ ಹ್ಯಾರ್ಗಿತಾನೆ ಗೊತ್ತೆ? ಒಳ್ಳೇ ಹಳ್ಳೀಕಡೆ ಹೋರಿ ಇರುತ್ತೆ ನೋಡು-ಹಾಗೆ.

ಪಾರ್ವತಿ : ಛೀ, ಅವನಿನ್ನೂ ಮೂಡಿ ಮೂರುತಿಂಗಳಾಗಿಲ್ಲ, ಆಗಲೇ ಹೋರಿ ಅಂತೀರ! ಪ್ರಾರಂಭದಿಂದ ಸುರುಮಾಡಿ, ಅಂದರೆ-

ಶಿವಣ್ಣ : ನಮ್ಮ ಮಗುವಿನ ಕಣ್ಣು ಹ್ಯಾಗಿರುತ್ತವೆ ಗೊತ್ತ? ಹೂವಿನಥರ! ಕಣ್ಣು ತೆರೆದಾಗೆಲ್ಲ ಎರಡು ಹೂ ಅರಳಿದ ಹಾಗೆ-

ಪಾರ್ವತಿ : ಅಂಬೆಗಾಲಿಟ್ಟುಕೊಂಡು, ಜೊಲ್ಲು ಸುರಿಸಿಕೊಂಡು ಮನೆತುಂಬ ಓಡಾಡ್ತಾನೆ! ಅವನ ಜೊಲ್ಲು ಬಿದ್ದಲ್ಲೆಲ್ಲ ಮಲ್ಲಿಗೆ ಹೂ ಬಿದ್ದಿರುತ್ತೆ!

ಶಿವಣ್ಣ : ಹೌದು ಅವನ ಕಣ್ಣಿನ ಕೊಣೆ ತುಸು ರಂಗೇರಿರುತ್ತೆ! ಯಾಕೆ ಗೊತ್ತ! ನನ್ನ ಮಗ ಬಣ್ಣದ ಕನಸು ಕಾಣತಾನೆ, ನನ್ನ ಹಾಗೆ! ಮೂಗಿದೆ ನೋಡು, ತುಸು ಮೊಂಡ, ನಿನ್ನ ಹಾಗೆ, ಯಾಕೆಂದ್ರೆ ಅವನಿಗೂ ನಿನ್ನ ಹಾಗೇ ಮುಂಗೋಪ ಜಾಸ್ತಿ….

ಪಾರ್ವತಿ : ಏನ್ರೀ, ನಮ್ಮ ಮಗೂನ ಬಗ್ಗೆ ಹೇಳೋದಕ್ಕೆ ಒಂದಾದರೂ ದೊಡ್ಡ ಮಾತ ಹೊಳೆಯೋದೇ ಇಲ್ಲವ ನಿಮಗೆ?

ಶಿವಣ್ಣ : ಹೌದಲ್ಲ, ನೋಡೇ, ನಮ್ಮ ಮಗು ಮಹಾತ್ಮಾ ಗಾಂಧಿ ಇದ್ದ ಹಾಗೆ…..ಸಾಕ?

ಪಾರ್ವತಿ : ಯಾರಿಗ್ಗೊತ್ತು? ದೇಶಕ್ಕೆಲ್ಲಾ ದೊಡ್ಡೋನಾದರೂ ಆದಾನು. ಆಗಬಾರದೆಂತೇನು? ಅವನೇ ನಮ್ಮ ಭವಿಷ್ಯ ಅಲ್ಲವಾ?

ಶಿವಣ್ಣ : ಹೌದು ಆದರೆ ಹೆಣ್ಣು ಮಗು ಆದರೆ….?

ಪಾರ್ವತಿ : ಬಿಡಿ, ಏನೀಗ? ಅವಳೂ ದೊಡ್ಡೋಳಾಗಭೌದು.

ಶಿವಣ್ಣ : ರಾಣೀ, ನಿನ್ನೆ ರಾತ್ರಿ ಒಂದು ಭಯಂಕರ ಕನಸು ಬಿದ್ದಿತ್ತು, ಕಣೇ!

ಪಾರ್ವತಿ : ಹಗಲುಗನಸು ಅಲ್ಲ ತಾನೆ?

ಶಿವಣ್ಣ : ಕೇಳೇ, ಕನಸಿನಲ್ಲಿ ಒಬ್ಬ ಗಾಂಧೀಥರದ ಮುದುಕ ಇದ್ದ. ಒಬ್ಬ ಹೆಂಗಸಿದ್ದಳು.

ಪಾರ್ವತಿ : ಹೆಂಗಸು? ಯಾವೋಳ್ರಿ ಅವಳು?

ಶಿವಣ್ಣ : ಹೆಂ‌ಗಸು ಅಂದರೆ ಮುದುಕಿ ಕಣೇ, ಮುದುಕೀನೇ!

ಪಾರ್ವತಿ : ನಿಮಗೆ ಪರಿಚಯದವಳ?

ಶಿವಣ್ಣ : ಅಲ್ಲ.

ಪಾರ್ವತಿ : ಹ್ಯಾಗಿದ್ದಳು?

ಶಿವಣ್ಣ : ಗುಳಿಬಿದ್ದ ಕಣ್ಣು! ಬಿಳೀ ತಲೆ-ಚೂಪು ಮೂಗು…..ನೆನೆದರೆ ಈಗಲೂ ಭಯವಾಗುತ್ತೆ!

ಪಾರ್ವತಿ : ಏನ್ರೀ ಕನಸು ಅಷ್ಟೊಂದು ಟೆರಿಬಲ್ಲಾಗಿತ್ತ? ನೆನಪಿದೆಯ?

ಶಿವಣ್ಣ : ಡೀಟೇಲ್ಸ್ ನೆನಪಿಲ್ಲ. ನೆನಪಾದಷ್ಟು ಹೇಳ್ತೀನಿ, ಬೆಳಿಗ್ಗೆದ್ದು ವಾಕಿಂಗ್ ಹೋದೆ…..

ಪಾರ್ವತಿ : ನೀವು ವಾಕಿಂಗ್ ಹೋಗೇ ಇಲ್ಲ ಅಂದ್ರೆ….

ಶಿವಣ್ಣ : ಕನಸಿನಲ್ಲಿ ಕಣೇ…. ವಾಕಿಂಗ್ ಹೋಗಿ ವಾಪಸ್ಸಾದಾಗ ನಾನು ಹೆಜ್ಜೆಯಿಟ್ಟಲ್ಲಿ ರಕ್ತದ ಕಲೆ ಇತ್ತು!

ಪಾರ್ವತಿ : ಅಬ್ಬ!

ಶಿವಣ್ಣ : ಕನಸಿಗೇ ಇಷ್ಟೆಲ್ಲ ಗಾಬರಿ ಬೀಳೋದಂದರೆ….

ಪಾರ್ವತಿ : ನೀವು ಹೇಳೊದನ್ನ ಕೇಳಿದರೆ ಅದ್ಯಾವುದೋ ಭಯಂಕರ ಕನಸೇ ಇರಬೇಕು. ಅದೇನು ಹೇಳೀಂದರೆ….

ಶಿವಣ್ಣ : ನೆನಪಿದ್ದಷ್ಟು ಹೇಳುತ್ತೇನೆ: ಆ ಹೆಂಗಸು ಅಂದರೆ ಮುದುಕಿ ಇತ್ತಲ್ಲ, ನನ್ನ ಕತ್ತು ಹಿಸುಕೋದಕ್ಕೆ ಬಂದ್ಲು! ನಾನೇ ಅವಳನ್ನ ಕೊಂದುಬಿಟ್ಟೆ!

ಪಾರ್ವತಿ : ಮೆಲ್ಲಗೆ ಮಾತಾಡ್ರಿ, ನೀವ್ಯಾಕೆ ಅವಳ್ನ ಕೊಂದಿರಿ?

ಶಿವಣ್ಣ : ಅವಳು ನನ್ನ ಕತ್ತು ಹಿಸುಕಿದಳು. ಬಿಡಿಸಿಕೊಳ್ಳೋದಕ್ಕೆ ತುಂಬ ಪ್ರಯತ್ನ ಮಾಡಿದೆ, ಬಿಡಲೇ ಇಲ್ಲ. ಕೊನೇಗೆ ನನ್ನ ಕೈಗೆ ಅವಳ ಕತ್ತು ಹ್ಯಾಗೋಸಿಕ್ತು! ದೂಕಿದೆ. ಅಲ್ಲೇ ಬಿದ್ದುಬಿಟ್ಟಳು. ತಕ್ಷಣ ಎಚ್ಚರಾಯ್ತು.

ಪಾರ್ವತಿ : ರೀ ರೀ ಇದೆಲ್ಲಾ ನಿಜ ಏನ್ರಿ?

ಶಿವಣ್ಣ : ನಿಜ ಅಲ್ಲ, ಕನಸು ಹೇಳ್ತಿದ್ದೇನೆ ಮಾರಾಯಳೇ-ಎಚ್ಚರವಾಯ್ತಲ್ಲ? ಈಗಲೂ ಎದೆ ಡಬಡಬ ಅಂತ ಪಕ್ಕೆಲುವಿಗೆ ಗುದ್ದುತಾ ಇತ್ತು! ಹೆದರಿ ನಿನ್ನನ್ನ ಎಬ್ಬಿಸೋಣ ಅಂತಿದ್ದೆ.

ಪಾರ್ವತಿ : ಮತ್ತೇ ನನಗೇನೂ ಹೇಳಲೇ ಇಲ್ಲ?

ಶಿವಣ್ಣ : ನೀನು ಗಾಢ ನಿದ್ದೆಯಲ್ಲಿದ್ದೆ, ಎದ್ದು ಲೈಟು ಹಾಕಿ ನೀರು ಕುಡಿದೆ. ಸುಧಾರಿಸಿಕೊಂಡಾದ ಮೇಲೆ ಮಲಗಿದೆ. ಆಮೇಲೆ ನಿದ್ದೆ ಬರಲೇ ಇಲ್ಲ. ಪಾರ್ವತಿ, ಬೆಳಗಿನ ಹೊತ್ತು ಬಿದ್ದ ಕನಸು ನಿಜ ಆಗುತ್ತಲ್ಲವ?

ಪಾರ್ವತಿ : ಅದೇನೋಪ್ಪ, ನಂಗೋತ್ತಿಲ್ಲ. ನನಗೇನಾದರೂ ಇಂತಹ ಕನಸು ಬಿದ್ದಿದ್ದರೆ ಕನಸಲ್ಲೇ ಸತ್ತು ಬಿಡುತ್ತಿದ್ದೆ. ಈ ಹಿಂದೆ ನೀವು ಅವಳನ್ನ ಎಲ್ಲಾದರೂ ನೋಡಿದ್ದಿರಾ?

ಶಿವಣ್ಣ : ನೋಡಿದ ಹಾಗಿಲ್ಲ. ಯಾವಳೋ ಘನವಾದ ಹೆಂಗಸೇ ಇರಬೇಕು. ಹಾಗೇನಾದರೂ ಕನಸು ನಿಜ ಆಗಿಬಿಟ್ಟೀತು ಅಂತ ಭಯ ನನಗೆ…..
(ಅಷ್ಟರಲ್ಲಿ ಕಾಲಿಂಗ ಬೆಲ್ ಆಗುತ್ತದೆ.)
ಹಾಲಿನವ ಬಂದ. ಹೋಗು, ಬೇಗ ಕಾಫಿ ಮಾಡು.
(ಪಾರ್ವತಿ ಹೋಗಿ ಬಾಗಿಲು ತೆರೆಯುತ್ತಾಳೆ. ಪೊಲೀಸ್ ಇನ್ಸ್ಪೆಕ್ಟರ್ ಕೇಬಿ ಒಳಗೆ ಬರುತ್ತಾನೆ. ಕೇಬಿ ೫೦ರ, ಯಾವುದಕ್ಕೂ ಡೋಂಟ್ ಕೇರ್ ಅಧಿಕಾರಿ. ಅವನ ಹುಬ್ಬು ಹಾಗೂ ತುಟಿಗಳಲ್ಲಿ ಬೇರೆಯವರ ಬಗೆಗಿನ ಅಸಡ್ಡೆ ಸ್ಪಷ್ಟವಾಗಿದೆ. ಕಣ್ಣುಗಳು ಕನಸಿನಲ್ಲಿ ಬರುವ ಪಾತ್ರಗಳಂತೆ ಕ್ರೂರವಾಗಿವೆ. ಅವನನ್ನು ನೋಡಿ ಇಬ್ಬರಿಗೂ ಆಘಾತವಾಗುತ್ತದೆ. ಶಿವಣ್ಣ ಎದ್ದು ನಿಂತುಕೊಳ್ಳುತ್ತಾನೆ.?)

ಕೇಬಿ : ನಿಮ್ಮ ಹೆಸರು ಶಿವರಾಮು ತಾನೆ?

ಶಿವಣ್ಣ : ಅಲ್ಲ ಶಿವಣ್ಣ ಅಂತ.

ಕೇಬಿ : ಪಿ.ಎನ್. ಶಿವರಾಮು.

ಶಿವಣ್ಣ : ನನ್ನ ಹೆಸರು ಎಸ್. ಬಿ. ಶಿವಣ್ಣ ಅಂತ.

ಕೇಬಿ : (ಧ್ವನಿ ಏರಿಸಿ) ಕೇಳಿದ್ದಕ್ಕೆ ತಿಗಾ ಮೆಚ್ಚಿಕೊಂಡು ಎಸ್ಸನ್ನು, ನನ್ನನ್ನ ತಿದ್ದೋನು ಈ ದೇಶದಲ್ಲಿನ್ನೂ ಹುಟ್ಟಿಲ್ಲ. ನಂಬರ್ ಹನ್ನೇರಡು, ನಾಲ್ಕನೇ ಮೇನ್, ಮೂರನೇ ಅಡ್ಡರಸ್ತೆ- ಅಡ್ರೆಸ್ಸು ಸರಿಯೊ?

ಶಿವಣ್ಣ : ಹೌದು.

ಕೇಬಿ : ಗಾಬರಿ ಬೀಳಬೇಡ, ನಿಜ ಏಳಿದರಂತೂ ಹಪಾಯವೇ ಹಿಲ್ಲ. ನಾ ಏಳಿದ್ದು ನಿಜ ತಾನೇ? ಲೇ ಪ್ಯಾದೇ, ತಲಾಷ್ ಮಾಡು.
( ತನಕ ಹೊರಗಡೆಯಿದ್ದ ಪ್ಯಾದೆಯೊಬ್ಬ ಸೊಕ್ಕಿನಿಂದ ಒಳಬಂದು ಒಳಗಿದ್ದ ಯಾರನ್ನೂ ಕೇರ್ ಮಾಡದೆ ಹುಡುಕತೊಡಗುವನು. ಇಬ್ಬರೂ ಗಾಬರಿಯಿಂದ ಓಡಿಹೋಗಿ ಪೊಲೀಸ್ನೆದುರಿಗೆ ನಿಂತು

ಪಾರ್ವತಿ : ನೋಡಿ, ಏನು ಹೇಳದೆ ಕೇಳದೆ ಈ ಥರ ಮನೆ ನುಗ್ಗಿದರೆ ಅಕ್ಕಪಕ್ಕದೋರನ್ನ ಕೂಗಬೇಕಾಗುತ್ತೆ.

ಪೊಲೀಸ್ : ಸಾರ್, ಸಾರ್, ಇವಳನ್ನೋಡಿ ಮಾತಾಡ್ತೀರ ಸೋಲ್ಪ. ಪ್ರೀತಿ ಮಾಡು ಅಂತ ನನ್ನನ್ನ  ಕರೀತಿದಾಳೆ. (ಪಾರ್ವತಿಗೆ) ಇನ್ನೊಂದ ಸಲ ಈ ರೀತಿ ಎದುರು ಬಂದರೆ ನಾನು ನಿನ್ನನ್ನ ಪ್ರೀತಿ ಮಾಡಿಬಿಡ್ತೀನಷ್ಟೆ; ಹುಷಾರ್.

ಪಾರ್ವತಿ : ರೀ ಕೇಳಿದಿರಾ ಇವನ ಮಾತನ್ನ?

ಕೇಬಿ : ಯಾರಯ್ಯಾ ಹಿವಳು?

ಶಿವಣ್ಣ : (ಅಸಹನೆಯಿಂದ) ನನ್ನ ಹೆಂಡತಿ, ಪಾರ್ವತಿ.

ಕೇಬಿ : ನೀವಿಬ್ಬರೂ ಗಂಡ ಎಂಡತಿ ಹನ್ನೋದಕ್ಕೆ ದಾಖಲೆಯಿದೆಯೆ?

ಶಿವಣ್ಣ : ಏನ್ಸಾರ್ ಈ ಥರ ಕೇಳ್ತೀರಿ? ಈ ತನಕ ಯಾರು ನನ್ನನ್ನ ಈ ಪ್ರಶ್ನೆ ಕೇಳಿಲ್ಲ.

ಕೇಬಿ : ನಾನು ಕೇಳಿದೆನಲ್ಲ.

ಶಿವಣ್ಣ : ನೀವು ಕೇಳೋ ಪ್ರಶ್ನೆಗೆಲ್ಲಾ ನಾನು ಉತ್ತರ ಕೊಡಬೇಕಾದ್ದಿಲ್ಲ, ಮೊದಲು ತಾವಿಲ್ಲಿಂದ ಹೊರಟರೆ ಸರಿ, ಇಲ್ಲದಿದ್ದರೆ….

ಕೇಬಿ : ಪೊಲೀಸ್ ಸ್ಟೇಷನ್ನಿಗೆ ಪೋನ್ ಮಾಡತಿ; ಸರಿ ತಾನೆ? ಪೊಲೀಸ್  ಹಿನ್ಸ್‌ಪೆಕ್ಟರ್ ನಾನೇ ಬಂದೀನಲ್ಲಯ್ಯಾ.

ಶಿವಣ್ಣ : ನೀವ್ಯಾರೋ ನಕಲಿ ಪೋಲೀಸಿನೋರಿರಭೌದು, ಯಾರೋ ರೌಡಿಗಳು ಪೊಲೀಸ್ ಡ್ರೆಸ್ಸಲ್ಲಿ ಬಂದಿರಭೌದು.
(ಅಷ್ಟರಲ್ಲಿ ಪಾರ್ವತಿ ಓಡಿಹೋಗಿ ಪೊಲೀಸ್ ಸ್ಟೇಶನ್ನಿಗೆ ಪೋನ್ ಮಾಡುವಳು. ಇನ್ಸ್ಪೆಕ್ಟರ್ ಅವಳನ್ನೇ ನೋಡುತ್ತ ನಿರ್ಲಕ್ಷದಿಂದ ನಿಂತಿರುವನು.)

ಪಾರ್ವತಿ : ಪೊಲೀಸ್…. ಪೊಲೀಸ್ ಪ್ಲೀಜ್….ನೋಡಿ ….. ನಮ್ಮನೇಲಿ ಯಾರೋ ರೌಡಿಗಳು ನುಗ್ಗಿದ್ದಾರೆ, ದಯವಿಟ್ಟು ಬೇಗನೆ ಬರ್ತೀರಾ ಪ್ಲೀಸ್….. ಏನಂದ್ರಿ? ನಾಲ್ಕನೇ ಮೇನು, ಮೂರನೇ ಅಡ್ಡರಸ್ತೆ ಮನೆ ನಂಬರ ಹನ್ನೆರಡು ಎಸ್.ಬಿ. ಶಿವಣ್ಣ ಅಂತ. ದಯವಿಟ್ಟು ಬೇಗನೇ ಬನ್ನಿಯಪ್ಪ…. ಪ್ಲೀಸ್ …… ಏನು ನಮ್ಮ ಮನೆಗೆ ಬಂದವರು ನಿಮ್ಮ ಪೈಕೀನ? ಇನ್ಸ್‌ಪೆಕ್ಟರ್ ಕೇಬಿನ?

ಕೇಬಿ : ಹಿನ್ಸ್‌ಪೆಕ್ಟರ್ ಕೇಬಿ ಹಂದರೆ ನಾನೇ ಮ್ಯಾಡಂ. ನಮಸ್ಕಾರ ಹೀವಾಗಾದರೂ ನಾನು ಹಸಲಿಪೊಲೀಸಿ ಇನ್ಸ್‌ಪೆಕ್ಟರಂತ ಗೊತ್ತಾಯ್ತೊ? ಮಿಸ್ಟರ್ ಶಿವರಾಂ…..

ಶಿವಣ್ಣ : ನನ್ನ ಹೆಸರು ಶಿವರಾಮು ಅಲ್ಲ, ಶಿವಣ್ಣ ಅಂತ, ಎಸ್.ಬಿ. ಶಿವಣ್ಣ.

ಕೇಬಿ : ಸುಳ್ಳಬೊಗಳಬೇಡ. ಗೂಡಚಾರೀ ವಿಭಾಗದ ಪ್ರಕಾರ ನಿನ್ನ ಕೋಡ್ ಎಸರು ಶಿವರಾಂ ಅಂತ. ಒಪ್ಪಿಕೊ.

ಶಿವಣ್ಣ : ಆದರದು ನಿಜ ಅಲ್ಲ.

ಕೇಬಿ : ನಾ ಏಳ್ತೀನಂದ ಮ್ಯಾಕೆ ನಿಜ ಹಾಗಲೇಬೇಕು. ಮಿಸ್ಟರ್ ಶಿವರಾಮ ಹಿಕಾ, ನಿನ್ನ ಮ್ಯಾಕೆ ವಾರಂಟಿದೆ ನೋಡಿಕೊ. ನೋಡು, ನನ್ನ ಹೈಡಿ ಕಾರ್ಡಿದು. (ಇಬ್ಬರಿಗೂ ಕೊಡುವನು, ನೋಡಿ ಪಾರ್ವತಿ ಹತಾಶಳಾಗಿ)

ಪಾರ್ವತಿ : ಸಾರ್ ಇದೆಲ್ಲಾ ಯಾಕೇಂತ ಕೇಳಭೌದ?

ಕೇಬಿ : ಏಳತಿವ್ನಿ, ಏಳೋಕೇ ಬಂದಿವ್ನಿ. ನಾ ಕೇಳಿದ್ದಕ್ಕೆಲ್ಲಾ ಹೆಸ್ಸಂತ ಹುತ್ರ ಕೊಟ್ಟರೆ, ಹಾಮ್ಯಾಕೆ ಸಮಜಾಯಿಸಿ ಏಳತಿವ್ನಿ, ತಿಳೀತ? ರೈಟಿಂಗ್‌ಲ್ಲಿ ವಾರಂಟ್ ತಂದಿವ್ನಿ ಹಂದರೆ ತಮಾಶೇನ? (ಒಳಗಿನಿಂದ ಪೊಲೀಸ್ ಪೆನ್ ತರುವನು) ಹದನ್ನ ಯಾಕೋ ತಂದೆ?

ಪೊಲೀಸ್ : (ಜಯದ ಹುಮ್ಮಸ್ಸಿನಿಂದ) ತುದಿ ನೋಡಿ ಸಾರ್.

ಕೇಬಿ : ರೆಡ್ ಹಿಂಕಿದೆ.

ಪೊಲೀಸ್ : ರಕ್ತ ಸಾರದು, ಒಣಗೋಗದೆ.

ಪಾರ್ವತಿ : ಒಂದ್ನಿಮಿಷ ನಿಲ್ಲಿಸಿ ಇದೆಲ್ಲಾ ಏನಂತ ಹೇಳ್ತಿರಾ? ಇಲ್ಲದಿದ್ದರೆ ಹುಚ್ಚಿಯಾಗ್ತೀನಿ ನಾನು.

ಶಿವಣ್ಣ : ನನಗೂ ಅರ್ಥವಾಗ್ತಾ ಇಲ್ಲ. ವಾರಂಟಂತ ಹೇಳತಾರೆ. ಅದರಲ್ಲಿನ ಒಂದಕ್ಷರಾನು ತಿಳೀತಿಲ್ಲ.

ಪೊಲೀಸ್ : ನೋಡಿ ಸಾರ್, ಪ್ರೀತಿ ಮಾಡೂಂತ ಗಂಟುಬಿದ್ದವ್ಳೆ.

ಶಿವಣ್ಣ : ಯೂ ಸೆಟಪ್

ಕೇಬಿ : ನೀವಿಬ್ಬರೂ ಒಂಚೂರು ನಿಮ್ಮ ಫಿಟ್ಸ್ ಕಂಟ್ರೋಲ್ ಮಾಡಿಕೊಳ್ಳೋ ಆಗಿದ್ದರೆ ನಾನೇ ಏಳತಿವ್ನಿ. ಮಿಸ್ಟರ್ ಶಿವರಾಂ- (ಅಂದಿನ ಪತ್ರಿಕೆ ತೋರಿಸುತ್ತ) ಈಯಮ್ಮ ಯಾರೂಂತ ಗೊತ್ತ?

ಶಿವಣ್ಣ : ನನಗೇನು ಗೊತ್ತು?

ಕೇಬಿ : ನೋಡಿದ ಮ್ಯಾಕೇಳು.

ಶಿವಣ್ಣ : (ನೋಡಿ) ಗೊತ್ತಲ್ಲ.

ಕೇಬಿ : ತಿರಗಾ ನೋಡು.

ಶಿವಣ್ಣ : ನೋಡಿದ ಮೇಲೇ ಹೇಳಿದ್ದು.

ಕೇಬಿ : ಔದಾ? (ಶಿವಣ್ಣ ಜುಟ್ಟು ಹಿಡಿದು ಒತ್ತಾಯದಿಂದ ಅಂದಿನ ದಿನ ಪತ್ರಿಕೆಯ ಮುಖ ಪುಟ ನೋಡುವಂತೆ ಮಾಡಿ) ಈಗೇಳು, ಗೊತ್ತಿಲ್ಲವಾ?

ಶಿವಣ್ಣ : (ನೋಡಿ, ಚಕಿತನಾಗಿ) ಹೌದು-ಪಾರ್ವತಿ ನನ್ನ ಕನಸಲ್ಲಿ ಬಂದವಳು ಇವಳೇ!

ಕೇಬಿ : ನೀನು ಈಯಮ್ಮನ್ನ ಕೊಲೆ ಮಾಡೋಕೆ ಪ್ರಯತ್ನ ಮಾಡಿದ್ದು ನಿಜವೊ?

ಶಿವಣ್ಣ : ನನಗೆ ಬೇಕಾದ್ದಿಷ್ಟೆ.
(ಸೀದಾ ಪೋನು ಮಾಡಲು ಹೋಗುವನು)

ಶಿವಣ್ಣ : ಕನಸಿಗೂ ಕೊಲೆಕೇಸಿಗೂ ಏನ್ರಿ ಸಂಬಂಧ?

ಕೇಬಿ : ಕನಸಿನ ಲೋಕವೋ, ನಿಜ ಲೋಕವೋ- ಯಾವುದೋ ಒಂದರಲ್ಲಿ ಆಯಮ್ಮನ ಕೊಲೆ ಮಾಡೋದಕ್ಕೆ ಪ್ರಯತ್ನ ಮಾಡಿದ್ದು ನಿಜವೋ? (ಪೋನಿನಲ್ಲಿ) ಅಲೋ ಜಜ್ ಸಾಯೇಬರೇನು? ನಮಸ್ಕಾರ. ನಾನು ಸ್ವಾಮಿ ಹಿನ್ಸ್‌ಪೆಕ್ಟರ್ ಕೇಬಿ. ಹಪರಾದಿ ಸಿಕ್ಕಬಿದ್ದವ್ನೆ, ಬಂದಬುಡಿ ಬುದ್ದಿ.

ಶಿವಣ್ಣ : ಎಲ್ಲಿದ್ದೆಲ್ಲಿ ಸಂಬಂಧ ಹೇಳ್ತೀರಿ ಸಾರ್?-ಆ ಹೆಂಗಸು ಯಾರೂಂತ ಗೊತ್ತಿಲ್ಲ. ಒಂದು ಬಾರೀನೂ ನಾನಾಕೇ ಮುಖ ನೋಡಿಲ್ಲ. ಅಂಥವಳನ್ನ ನಾನು ಕೊಲೆ ಮಾಡೋದಕ್ಕೆ ಪ್ರಯತ್ನ ಮಾಡೋದು ಹ್ಯಾಗೆ ಸಾಧ್ಯ?

ಕೇಬಿ : ಏ ಕನಸಲ್ಲಿ ಬಂದಿದ್ದಳು ಹಂತೇಳನಿಲ್ಲವ?

ಶಿವಣ್ಣ : ಕನಸಲ್ಲಿ ಬಂದಿದ್ದಳು, ಅಷ್ಟೇ.

ಕೇಬಿ : ನಾ ಹೇಳೋದು ಅಷ್ಟೇ. ಕನಸಲ್ಲಿ ಆಯಮ್ಮನ ಕೊಲೆ ಮಾಡೋದಕ್ಕೆ ಪ್ರಯತ್ನ ಮಾಡಿದೆ ತಾನೇ?

ಶಿವಣ್ಣ : ಕನಸಲ್ಲಿ ಅಪರಾಧ ಮಾಡಿದರೂ ಶಿಕ್ಷೆ ಕೊಡತೀರ? ಅಬ್ಬ! ನಿಮ್ಮ ಕೈಯಲ್ಲಿ ಮಾತ್ರ ಇರೋ ಗುಟ್ಟಾದ ಕಾನೂನುಗಳಿರಬೇಕು.

ಕೇಬಿ : ಹಿದರಲ್ಲೇನೂ ಗುಟ್ಟಿಲ್ಲ, ನಿನ್ನ ಮೂರ್ಖತನ ಮಾತ್ರ ಇರೋದು. ಮಿಸ್ಟರ್ ಶಿವರಾಂ; ನಮ್ಮದು ಪ್ರಜಾಪ್ರಭುತ್ವ ಮತ್ತು ನಾನಿರೋದು ಪ್ರಜಾಪ್ರಭುತ್ವ ರಕ್ಷಣೆಗಾಗಿ. ಬೂಮಿತಾಯಿ ನಿನ್ನಂಥ ಪಾಪಿಗಳ ಸಂಕ್ಯೆ ಜಾಸ್ತಿ ಹಾಗಿ ಬಾರ ಎಚ್ಚಾದಾಗೆಲ್ಲಾ ಇಷ್ಣುವಿನ  ಅತ್ತಿರ ಓಗಿ ಕಾಪಾಡೋ ಶಿವನೇಂ’ತ ಎಂಗೆ ಕೇಳತಿದ್ದಳೋ -ಅಂಗೆ ಈ ದೇಶಾನೂ ನಮ್ಮತ್ರ ಬಂದು ಪ್ರಜಾಪ್ರಭುತ್ವ ಕಾಪಾಡೋ ಅಂತ ಕೇಳ್ಕೊತವಳೆ. ಹಾವಾಗ ನಾನು ರಕ್ಷಣೆ ಮಾಡತಿವ್ನಿ. ಬೂಲೋಕದ ಪ್ರಜಾಪ್ರಭುತ್ವಕ್ಕೆ ಹಪಾಯ ಬಂದಾಗೆಲ್ಲಾ ದೇಶದ ಮ್ಯಾಕೆ ತುರ್ತು ಪರಿಸ್ಥಿತಿ ಏರಿಯಾದರೂ ರಕ್ಷಣೆ ಮಾಡಬೇಕಾಗುತ್ತೆ ಗೊತ್ತೊ? ದೇಶದಲ್ಲೀಗ ತುರ್ತು ಪರಿಸ್ಥಿತಿ ಇದೆ-ಮರೀಬೇಡ.

ಶಿವಣ್ಣ : ದೇಶದ್ರೋಹದ ಕೆಲಸ ನಾನೇನೂ ಮಾಡಿಲ್ಲವಲ್ಲ.

ಕೇಬಿ : ಹಿನ್ನೂ ಹೇನ ಮಾಡಬೇಕಂತಿದ್ದಿ? ಒರಗಡೆ ಮಾಡಲಾರದ್ದನ್ನ ಕನಸಲ್ಲಿ ಮಾಡಿದಿ; ಸಾಲದ? ಒರಗಡೆ ಕೊಲೆಮಾಡೊ ನನ್ನ ಮಕ್ಕಳು ಪೆದ್ದರು. ಸುಲಭವಾಗಿ ಸಿಕ್ಕು ಬೀಳತವ್ರೆ; ನಿಮ್ಮಂತೋರಿದ್ದೀರಲ್ಲ ಬುದ್ದಿಜೀವಿಗಳು – ಮಾಡೋ ಹೇಸ್ಗೇನ್ನ ಒಳಗೇ ಅತ್ತಿಕ್ಕಿಕೊಂಡು ಯಾರಿಗೂ ಕಾಣದಂಗೆ ಮಾಡ್ತೀರ! ದೇಶಕ್ಕೆ ನಿಮ್ಮಂತೋರೇ ಜಾಸ್ತಿ ಹಪಾಯಕಾರಿ. ಹದಕ್ಕೇ ರಾತ್ರಿ ನಿಮ್ಮ ಕನಸುಗಳನ್ನ ವಾಚ್ ಮಾಡ್ತೀನಿ, ತಿಳೀತ?