(ಚೆನ್ನಕೇಶವ ದೇವಾಲಯ, ಉರಿಬಿಸಿಲಲ್ಲಿ ಶಿಲ್ಪಿ ಜಕಣಾಚಾರ್ಯರ ಶಿಷ್ಯರು ಊಟ ಮಾಡಿ ಮರದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದೂರದ ಇನ್ನೊಂದು ಮರದಡಿ ಮಲಗಿದ ಮುದುಕಿಯ ಕಂಡು ಮರುಗುತ್ತ ಅವರೇ ಮೇಳವಾಗುತ್ತಾರೆ.)

 

ಮೇಳ : ಯಾರು ಈ ಮುದುಕಿ? ನಡು ಹಗಲು ಸುಡುಬಿಸಿಲಲ್ಲಿ ಕೆಂಪು ಹೂವರಳಿ ಉರಿಯುವ ಮರದ ನೆರಳಲ್ಲಿ ಕೂರಲಾರದೆ, ಮುರಿದ ಮಾತು, ಹರಿದ ಕನಸುಗಳ ಕನವರಿಸುತ್ತ ಮಲಗಿದ್ದಾಳೆ.

ಮೇಳ : ಯಾರೊಂದಿಗೋ ನುಡಿದಾಡುವಂತಿದೆ ಅವಳ ಚಹರೆ.

ಮೇಳ : ಸುಮಾರು ದಿನಗಳಿಂದ ನೋಡುತ್ತಿದ್ದೇನೆ. ದೇವಾಲಯದ ಒಳಗೆ ಹೊರಗೆ ಅರೆಮರುಳದಂತೆ ಅಲೆದಾಡುವಳು ತೋಣಚಿ ಹೊಕ್ಕ ದನದಂತೆ.

ಮುದುಕಿ : (ಆರ್ತಳಾಗಿ) ಚೆನ್ನಕೇಶವಾ….

ಮೇಳ : ಅಯ್ಯಯ್ಯೋ ಪಾಪವೇ ಅಕಟಕಟಾ ದುಃಖವೇ! ಆಗೊ ಆಗೋ ಬೇಟೆಗೊಂಡ ಪ್ರಾಣಿಯ ಹಾಗೆ ಕಿರಿಚಿ ಬೊಕ್ಕ ಬೊರಲು ಬಿದ್ದಳು ಮುದುಕಿ, ಯಾರಾದರೂ ಬನ್ನಿರಯ್ಯಾ-ಬಿದ್ದುಕೊಂಡಳುವ, ಹಾಡಿಕೊಂಡಳುವ, ದಿಂಡುರಳಿ ಬಿಕ್ಕಳಿಸಿ ಅಳುವ ಮುದುಕಿಯ ಸಂತೈಸಿರಯ್ಯಾ!

ಮುದುಕಿ : ಚೆನ್ನಕೇಶವ….. (ಎನ್ನುತ್ತ ಹೊರಗೆ ಓಡಿ ಹೋಗುವಳು. ಗರ್ಭಗುಡಿಯಿಂದ ಗೊಲ್ಲರ ಹುಡುಗನೊಬ್ಬ ಹೊರಬಂದು ಅವಳನ್ನೇ ನೋಡುತ್ತ)

ಹುಡುಗ : ಯಾರದು? ಯಾರು ನನ್ನನ್ನು ಕರೆದವರು?

ಮೇಳ : ಯಾರಪ್ಪಾ ಅದು?

ಹುಡುಗ : ನಾನು ಚೆನ್ನಕೇಶವ, ಯಾರೋ ಕೂಗಿದಂತಾಯಿತಲ್ಲ?

ಮೇಳ : ಓಹೋ ಚೆನ್ನಕೇಶವನೊ? ಆಕಾರವೇನೋ ಕೊಂಚ ನಮ್ಮ ಗುರುಗಳು ಕಡೆದ ದೇವರ ಮೂರ್ತಿಯ ಹಾಗೇ ಇದ್ದೀಯ, ಇರಲಿ ನೀನು ಯಾರಾದರೂ ಆಗಿರಲಿ, ಅಗೋ ಅಲ್ಲಿದಾಳಲ್ಲ, ಆ ಮುದುಕಿ ಕೂಗಿದವಳು. ಯಾರಪ್ಪಾ ಅವಳು?

ಹುಡುಗ : ತಾಯಿ!

ಮೇಳ : ಯಾರ ತಾಯಿ?

ಹುಡುಗ : ಶಿಲ್ಪಿಗಳ ತಾಯಿ!ನಿಮಗೂ ತಾಯಿ!

ಮೇಳ : ನಮ್ಮ ತಾಯಿ? ನಮಗೆ ಗೊತ್ತಿಲ್ಲವೆ!

ಹುಡುಗ :  ಗೊತ್ತಿಲ್ಲದಿದ್ದರೂ ಆಗಲೇ ಆಕೆ ನಿಮ್ಮ ಕಥೆಯಲ್ಲಿ ಪ್ರವೇಶಪಡೆದಾಗಿದೆ!

ಮೇಳ : ಒಡಪಿನ ಬಡಿವಾರ ಬಿಟ್ಟು ಮಾತಾಡಯ್ಯ, ಯಾರು ಆ ಮುದುಕಿ?

ಹುಡುಗ : ಮಹಾ ತಾಯಿ! ಉಲ್ಕೆಯಂತೆ ಉರಿವ ಆ ತಾಯ ಕಣ್ಣಲ್ಲಿ ಎನೆಲ್ಲ ಇವೆ: ಸೀದ ಬೇಸಿಗೆ, ಹಳಸಲು ನಗೆ, ದನಿಯಿರದ ಹಾಡು……
ಅವಳ ಎದೆಯಲ್ಲೆರಡು ಬೆಟ್ಟಗಳು. ಬೆಟ್ಟದ ಕೆಳಗೆ ಬಿಸಿ ಹಾಲಿನ ಬುಗ್ಗೆ ರಭಸದಲ್ಲಿ ಹರಿದು ಮಡುಗಟ್ಟಿದ ಸರೋವರದಲ್ಲಿ ಬಾಡಿ ನಿಂತಿದೆ; ಮುಲುಮುಲು ಜೀವದ ಸಹಸ್ರದಳ ಕಮಲ- ಹೊಕ್ಕಳ ಬಳ್ಳಿಯ ಎಳೆ ಹಿಡಿದು ಎಳೆಯುತ್ತ! ಇಗೋ ಬಂದೇ ತಾಯಿ…………
(ಹೋಗುವನು)

ಮೇಳ : ಮುದುಕಿಯ ಅವಾಂತರದಲ್ಲಿ ಸಂಜೆಯಾದದ್ದೇ ಗೊತ್ತಾಗಲಿಲ್ಲ.

ಮೇಳ : ದೇವಾಲಯದಲ್ಲಿ ಯಾವನೋ ಬಾಲಕ ವಿಗ್ರಹಗಳನ್ನು  ನೋಡುತ್ತ ನಿಂತಿರುವನಲ್ಲ? ಗುರುಗಳಿಗೆ ಗೊತ್ತಾದರೆ ಹಾಗೇ ಬಿಡುವರೆ?

ಮೇಳ : ಗುರುಗಳ ಕೋಪದ ವಿಷಯ ಹೇಳಿ ನೋಡಿದೆ. ಏನೇ ಆದರು ಗುರುಗಳನ್ನು ನೋಡಲೇಬೇಕೆಂದು ಹೇಳಿದ. ನೋಡಿಕೊಳ್ಳಲಿ ಬನ್ನಿ. ಅಷ್ಟಕ್ಕೂ ನಾವು ಅವನನ್ನು ಕರೆಯುವಷ್ಟರಲ್ಲಿ ಗುರುಗಳೇ ಬಂದು ಬಿಡಬಹುದು.