(ಚೆನ್ನಕೇಶವನ ವಿಗ್ರಹದೆದುರು ಜಕ್ಕಣ ಚಿಂತಾಕ್ರಾಂತನಾಗಿ ಕೂತಿದ್ದಾನೆ. ಸೇವಕ ಬಂದಪಟ್ಟ ಮಹಾದೇವಿಯವರು ಬಂದರು ಅನ್ನುತ್ತಾನೆ. ಜಕ್ಕಣ ಎದ್ದುನಿಲ್ಲುವಷ್ಟರಲ್ಲಿ ಶಾಂತಲೆ ಬರುವಳು)

 

ಜಕ್ಕಣ : (ಕೈಮುಗಿದು) ಪಟ್ಟಮಹಾದೇವಿಯವರು ಬರಬೇಕು.

ಶಾಂತಲೆ : ಸ್ಥಪತಿಗಳೆ ಯಾಕೆ ಹೀಗಿದ್ದೀರಿ? ಮೈ ಹುಷಾರಿಲ್ಲವೆ?

ಜಕ್ಕಣ : ಹುಷಾರಾಗಿದ್ದೇನೆ ಪಟ್ಟ ಮಹಾದೇವಿಯವರೆ.

ಶಾಂತಲೆ : ಮೂರ್ತಿ ಪೂರ್ಣವಾಯಿತೆ ಸ್ಥಪತಿಗಳೆ?

ಜಕ್ಕಣ : ಅಲ್ಲಲ್ಲಿ ನಯಗೊಳಿಸಬೇಕು. ಇನ್ನೂ ಒಂದು ವಾರ ಸಮಯವಿದೆಯಲ್ಲ, ಸಂಪೂರ್ಣವಾಗುತ್ತದೆ.

ಶಾಂತಲೆ : ಯಾರೋ ದಾರಿಹೋಕನೊಬ್ಬ ಮೂರ್ತಿಯಲ್ಲಿ ದೋಷವಿದೆಯೆಂದು ಹೇಳಿದನಂತಲ್ಲ? ಯಾರವನು?

ಜಕ್ಕಣ : (ವಿಷಾದಿಂದ) ತನ್ನ ವಿಷಯ ಹೇಳಿಕೊಳ್ಳಲಿಲ್ಲ.

ಸೇವಕ : ಪ್ರತಿಮೆಯಲ್ಲಿ ದೋಷ ಕಂಡು ಹಿಡಿದವನು ಅಗೋ ದೇವಾಲಯದಲ್ಲಿದ್ದಾನೆ ಮಹಾರಾಣಿ!

ಶಾಂತಲೆ : ಇಲ್ಲಿಗೆ ಕರೆದುಕೊಂಡು ಬಾ ಅವನನ್ನ.
(ಸೇವಕ ಹೋಗುವನು, ಅವರು ಬರುವವರೆಗೆ ಇಬ್ಬರೂ ಕಡೆಗೇ ನೋಡುತ್ತ ನಿಲ್ಲುತ್ತಾರೆ. ಡಂಕಣ, ಸೇವಕ ಬರುವರು.)

ಜಕ್ಕಣ : ಇವನೇ ಆ ರೂವಾರಿ ತಾಯಿ, ರೂವಾರಿ ಪಟ್ಟಮಹಾದೇವಿ ಶಾಂತಲಾ ದೇವಿಯವರು!

ಡಂಕಣ : (ಕೈ ಮುಗಿದು) ತಮ್ಮ ಹೆಸರು ಕೇಳಿದ್ದೆ. ಈ ದಿನ ಪ್ರತ್ಯಕ್ಷ ಕಂಡುದು ನನ್ನ ಸೌಭಾಗ್ಯ ಮಹಾದೇವಿಯವರೆ.

ಶಾಂತಲೆ : (ತನ್ನಲ್ಲಿ) ಒಬ್ಬರ ಅಚ್ಚಿನಲ್ಲಿ ಇನ್ನೋಬ್ಬರ ಎರಕ ಹುಯ್ದಂತಿ‌ದೆಯಲ್ಲ! ಆಶ್ಚರ್ಯ! (ಪ್ರಕಾಶ) ನಿನ್ನನ್ನು ಕಂಡು ಸಂತೋಷವಾಯಿತಪ್ಪ. ನಿನ್ನ ಹೆಸರೇನು, ನಿನ್ನ ಗುರು ಯಾರು? ನಿನ್ನದು ಯಾವುರಾಯ್ತು ರೂವಾರಿ?

ಜಕ್ಕಣ : ಕ್ಷಮಿಸಬೇಕು. ಅವನಿಗೂ ವೈಯಕ್ತಿಕ ಪ್ರಶ್ನೆಗಳು ಅಪಥ್ಯ ತಾಯಿ.

ಶಾಂತಲೆ : ನೀವೂ ಹಾಗೇ ಹೇಳುತ್ತೀರಿ. ಈ ರೂವಾರಿಯೂ ಹಾಗೇ ಹೇಳುತ್ತಾನೆ. ಎಲ್ಲ ರೂವಾರಿಗಳ ಕತೆಯೂ ಒಂದೇ! ಇರಲಿ, ಹೇಳು ರೂವಾರಿ. ದೇವಾಲಯವನ್ನು ನೋಡಿದೆಯಲ್ಲವೆ? ಏನನ್ನಿಸಿತು?

ಡಂಕಣ : ನಾನು ನೋಡಿದ ಇನ್ನೊಂದು ಸುಂದರವಾದ ಮಂದಿರ ಕಳಿಂಗದ ವೇಳೂರದಲ್ಲಿ ಇದೆ ತಾಯಿ. ಇದು ಮಾತ್ರ ಅದಕ್ಕಿಂತ ಅದ್ಭುತವಾದ ಸೃಷ್ಟಿ! ಇಂಥ ಇನ್ನೊಂದು ದೇವಾಲಯವನ್ನು ನಾನು ಕಲ್ಪಿಸಲೂ ಸಾಧ್ಯವಿಲ್ಲ ತಾಯಿ!

ಶಾಂತಲೆ : ನಿನ್ನ ಮಾತು ಕೇಳಿ ಆನಂದವಾಯಿತಪ್ಪ. ಮೂಲ ವಿಗ್ರಹವನ್ನು ನೋಡಿದೆಯಲ್ಲವೆ? (ವಿಗ್ರಹವನ್ನು ತೋರಿಸುವಳು. ಸನ್ನೆಯ ಆಜ್ಞೆಯಂತೆ ಸೇವಕ ಅವಗುಂಠನವನ್ನು ಸ್ಮರಿಸುವನು)

ಡಂಕಣ : ನಾನು ಇದನ್ನೂ ನೋಡಿದ್ದೇನೆ ತಾಯಿ.

ಶಾಂತಲೆ : ಈ ಬಗ್ಗೆ ನೀನೇನೋ ಹೇಳಿದೆಯಂತೆ?

ಡಂಕಣ : ಹೌದು ತಾಯಿ, ಕಲೆಯ ದೃಷ್ಟಿಯಿಂದ ಈ ಪ್ರತಿಮೆ ಅಪ್ರತಿಮವಾಗಿದೆ. ಆದರಿದು ಮೂಲ ವಿಗ್ರಹವಲ್ಲವೆ ತಾಯಿ?

ಶಾಂತಲೆ : ಹೌದು.

ಡಂಕಣ : ಅಂದರೆ ದಿನಾಲೂ ಪೂಜೆಗೊಳ್ಳುವಂಥದು.

ಶಾಂತಲೆ : ಹೌದು.

ಡಂಕಣ : ಅಂದರೆ ಇದರಲ್ಲಿ ದೈವ ಪ್ರತಿಷ್ಠಾಪನೆಯಾದ ಮೇಲೆ ಕಾಲಾಂತರದಲ್ಲಿ ಕೋಟಿ ಕೋಟಿ ಭಕ್ತರ ಅಭೀಷ್ಟವನ್ನು ಈಡೇರಿಸುವ ಶಕ್ತಿಯನ್ನು ಈ ವಿಗ್ರಹ ಪಡೆಯುತ್ತದೆ……

ಜಕ್ಕಣ : (ಅಸಹನೆಯಿಂದ) ಹೌದು ಹೌದು ಹೌದು. ಈ ವಿಗ್ರಹ ದೋಷಪೂರ್ಣವಾಗಿದೆಯೆಂದು ತಾನೇ ನೀನು ಹೇಳುವುದು?

ಡಂಕಣ : ವಿಗ್ರಹದಲ್ಲಿ ದೋಷವಿಲ್ಲ ಸ್ಥಪತಿಗಳೇ, ಪ್ರತಿಮಾ ಲಕ್ಷಣಗಳನ್ನು ಅನುಸರಿಸಿ ಕಡೆದ ಮೂರ್ತಿ ಇದಾದ್ದರಿಂದ ಮೂರ್ತಿಯಲ್ಲಿ ಯಾವ ದೋಷವೂ ಇಲ್ಲ. ದೋಷವಿರೋದು ಕಲ್ಲಿನಲ್ಲಿ!

ಶಾಂತಲೆ : ಏನು ನೀನು ಹೇಳುವುದು? ಸ್ಥಪತಿಗಳು ಹಿರಿಯರು ಅನುಭವಿಕರು, ಇಡೀ ದಕ್ಷಣಕ್ಕೆ ಶಿಲ್ಪದಲ್ಲಿ ಆಚಾರ್ಯರು. ಮೂರ್ತಿಗಾಗಿ ಕಲ್ಲನ್ನು ಪರೀಕ್ಷಿಸಿಯೇ ಆಯ್ದಿರುತ್ತಾರೆ. ಅಲ್ಲವೆ ಸ್ಥಪತಿಗಳೆ?

ಜಕ್ಕಣ : (ನೊಂದು) ನಿಜ ತಾಯಿ, ಇದರ ಅಣು ಅಣುವನ್ನು ಪರೀಕ್ಷಿಸಿ ನಾನು ಈ ಕಲ್ಲನ್ನು ಆಯ್ದು ತಂದೆ. ಇದರಲ್ಲಿ ಸುಳಿಯಾಗಲಿ, ಗಂಟು ಗೆರೆಗಳಾಗಲಿ ಇಲ್ಲ. ಉಳಿಗೆ ಒಮ್ಮೆ ಇದರ ಲಯ ಸಿಕ್ಕರೆ ಸಾಕು ಮೂರ್ತಿಯನ್ನು ತಂತಾನೇ ಬಚ್ಚಿಕೊಡುತ್ತದೆ. ಇಷ್ಟು ವರ್ಷ ಕಲ್ಲು ಕೆತ್ತಿದ್ದೇನೆ, ನನಗೆಂದೂ ಕಲ್ಲು ಸುಳ್ಳು ಹೇಳಿಲ್ಲ. ಈಗ ಈ ಮಹಾಶಯನಿಂದ ಕಲ್ಲು ಹೇಳುವ ಸುಳ್ಳುಗಳನ್ನು ಕಲಿಯಬೇಕಾಗಿದೆ! ನನ್ನ ಅದೃಷ್ಟ.

ಶಾಂತಲೆ : ನೋಡಿದೆಯಾ ರೂವಾರಿ? ನೀನು ಹಿರಿಯರನ್ನು ಅವಮಾನಿಸಲಿಕ್ಕಾಗಿಯೇ ಕಲ್ಲಿನಲ್ಲಿ ದೋಷ ಹುಡುಕಿದಂತಿದೆ.

ಡಂಕಣ : ಸ್ಥಪತಿಗಳೆ ಬಗ್ಗೆ ನನಗೆ ಅಪಾರವಾದ ಗೌರವವಿದೆ ತಾಯಿ. ನನ್ನ ತಾಯಿಯಾಣೆಗೂ ಅವರನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ಸ್ಥಪತಿಗಳೆ ಹೇಳಿದಂತೆ ಮೇಲುನೋಟಕ್ಕೆ ಕಲ್ಲು ದೋಷರಹಿತವಾಗಿಯೇ ಇದೆ. ಆದರೆ ದೋಷವಿರುವುದು ಕಲ್ಲಿನ ಅಂತರಂಗದಲ್ಲಿ! ಒಳಗೆ ಹುಸಿ ಮುಚ್ಚಿಕೊಂಡು ಹೊರಗೆ ಸಜ್ಜನಿಗೆ ಮೆರೆವ ಡಾಂಭಿಕನಂತೆ ಕಲ್ಲು ಇವರೊಂದಿಗೆ ಆಟವಾಡಿದೆ ತಾಯಿ!

ಶಾಂತಲೆ : ಆ ದೋಷ ನಿನ್ನ ಕಣ್ಣಿಗೆ ಹ್ಯಾಗೆ ಬಿತ್ತು?

ಡಂಕಣ : ಬಾಲ್ಯದಿಂದಲೂ ಕಲ್ಲಿನಲ್ಲಿ ಬೆಳೆದಿದ್ದೇನೆ, ಪಟ್ಟಮಹಾದೇವಿಯರೆ. ಅವು ತಮ್ಮ ಅಂತರಂಗವನ್ನು ತೆರೆದು ತೋರಿಸಿ ನನಗೆ ತಮ್ಮ ಕಥೆಯನ್ನ ಹೇಳುತ್ತವೆ.

ಶಾಂತಲೆ : ಆ ಕಲ್ಲು ಸ್ಥಪತಿಗಳಿಗೂ ತನ್ನ ಅಂತರಂಗ ತೋರಿಸಿರಬೇಕಲ್ಲ?

ಡಂಕಣ : ಇವರು ನೋಡಿಲ್ಲ. ನೋಡಿದ್ದರೆ ಆ ಕಲ್ಲನ್ನು ಆರಿಸುತ್ತೀರಲಿಲ್ಲ.

ಜಕ್ಕಣ : (ವ್ಯಂಗ್ಯದಿಂದ) ನಿನಗಿನ್ಯಾವುದೋ ಮೂರನೆಯ ಕಣ್ಣಿದಂತೆ ಮೊಳಗುವ ನುಡಿಗಳನ್ನು ಆಡುತ್ತಿರುವೆ ಬಾಲಕಾ. ನಿನಗೆ ಮಾತ್ರ ಕಂಡಿರುವ ಕಲ್ಲಿನ ದೋಷವನ್ನು ನಾವೂ ನೋಡಬಹುದೆ?

ಡಂಕಣ : (ಅಷ್ಟೇ ವ್ಯಂಗ್ಯದಿಂದ) ನೋಡಬಹುದು ನೋಡುವ ಕಣ್ಣಿದ್ದರೆ.

ಜಕ್ಕಣ : ಹಾಗಾದರೆ ಪರೀಕ್ಷೆಯಾಗಲಿ.

ಶಾಂತಲೆ : ಪರೀಕ್ಷೆಯೆಂದರೆ ಹ್ಯಾಗೆ ಆಗಬೇಕು?

ಜಕ್ಕಣ : ವಿಗ್ರಹವನ್ನು ಒಡೆದು ನೋಡುವುದೊಂದೇ ದಾರಿ.

ಶಾಂತಲೆ : ರೂವಾರಿ, ನೀನು ಹೇಳಿದಂತೆ ವಿಗ್ರಹದ ಕಲ್ಲಿನ ಒಳಗಡೆ ದೋಷ ಇದೆಯೆಂದಾದರೆ ವಿಗ್ರಹವನ್ನು ಒಡೆದೇ ನೋಡಬೇಕೆಂದಾಯಿತು. ಜವಾಬ್ದಾರಿಯಿಂದ ಹೇಳು. ಪ್ರತಿಮೆಯನ್ನು ಒಡೆಯುವುದೆಂದರೆ ಯಾವುದೋ ಹಣ್ಣು ಬಿಚ್ಚಿ ನೋಡಿದಂತಲ್ಲ. ಬಿಚ್ಚಿದಾಗ ಹಣ್ಣಿನ ಒಳಗಡೆ ದೋಷವಿದ್ದರೆ ಎಸೆಯಬಹುದು ಚೆನ್ನಾಗಿದ್ದರೆ ತಿನ್ನಬಹುದು. ಪ್ರತಿಮೆಯ ಮಾತು ಹಾಗಲ್ಲ ನೋಡು! ಒಡೆದು ನೋಡಿದಾಗ ದೋಷ ಕಂಡುಬಂದರೆ ಸೈ. ಇಲ್ಲದಿದ್ದರೂ ಭಗ್ನಮೂರ್ತಿ ನಿರುಪಯುಕ್ತವಲ್ಲವೆ? ಇದಕ್ಕೇನೆನ್ನುತ್ತಿ?

ಡಂಕಣ : ತಾಯೀ, ನನಗೆ ಕಂಡ ಸತ್ಯವನ್ನಂತೂ ಹೇಳಿದ್ದೇನೆ. ಅದನ್ನು ಒಪ್ಪುವುದೂ ಬಿಡುವುದೂ ನಿಮ್ಮ ವಿವೇಕಕ್ಕೆ ಬಿಟ್ಟಿದ್ದ. ಈ ಪ್ರತಿಮೆ ಪೂಜೆಗೆ ಅರ್ಹವಲ್ಲ ಎನ್ನುವುದಂತೂ ನಿಜ. ಈವರೆಗಿನ ನನ್ನ ಮಾತು ವ್ಯರ್ಥ ಕಾಲಹರಣವಾಗಿದ್ದರೆ ಕ್ಷಮಿಸಿ ತಾಯಿ. (ನಮಸ್ಕರಿಸಿ ಹೊರಡುವನು)

ಜಕ್ಕಣ : ನಿಲ್ಲು. ಪಟ್ಟಮಹಾದೇವಿಯವರ ಅಪ್ಪಣೆ ಇಲ್ಲದೆ ಹೊರಟಿದ್ದೀಯಲ್ಲ, ಎಷ್ಟಯ್ಯ ನಿನ್ನ ಕೊಬ್ಬು? ಹೇಳಿಕೊಳ್ಳಲು ಒಬ್ಬ ಗುರುವಿನ ಗುರುತು ಕೂಡ ಇಲ್ಲದ ನೀನು ರೂವಾರಿಯ ಕುಲದಲ್ಲಿ ಹುಟ್ಟಿದವನೆಂಬುದೂ ಹುಸಿ, ಯಾವನೋ ಅಡ್ಡ ಕಸುಬಿಗೆ ಹುಟ್ಟಿ…..

ಡಂಕಣ : (ತಡೆದು) ನಿಮ್ಮಂಥ ಹಿರಿಯರಿಗೆ ಈ ಮಾತು ಶೋಭಿಸುವುದಿಲ್ಲ ಸ್ಥಪತಿಗಳೇ. ನೀವು ಸರಸ್ವತಿ ಪುತ್ರರೆಂದು ಗೌರವ ಪಡೆದಿರಬಹುದು. ನಾನೊಬ್ಬ ತಾಯಿಯ ಮಗನೆಂದಾದರೂ ಒಪ್ಪಿಕೊಳ್ಳುವ ಸೌಜನ್ಯ ತೋರಿಸಿ. ನಾನು ರೂವಾರಿ. ನೀವು ತೋರಿಸಿದ ಕಲ್ಲಿನಲ್ಲಿ ವೇಣುಗೋಪಾಲನ ಮೂರ್ತಿ ಕಾಣುತ್ತಿದೆ ಎಂದಾಗ ಹೌದೆಂದು ನೀವೇ ಒಪ್ಪಿಕೊಂಡಿರಲ್ಲವೆ? ನಾನು ರೂವಾರಿಯ ಮಗನೆಂದು ನನ್ನ ತಾಯಿ ಹೇಳಿದಳು. ನಾನು ಒಪ್ಪಿದೆ. ಅಲ್ಲಿಗದು ಮುಗಿಯಿತು. ನಾನು ರೂವಾರಿಗಳ ವಂಶದಲ್ಲಿ ಹುಟ್ಟಿದೆನೆಂಬುದೇ ಹುಸಿ ಎಂದಿರಿ. ಆ ಕಲ್ಲಿನಲ್ಲಿರುವ ವೇಣುಗೋಪಾಲನ ಮೂರ್ತಿ ಸರಸ್ವತೀ ನಿಮಗೆ ಇನ್ನೂ ಹೊಳೆದಿರಲಿಲ್ಲವಲ್ಲ! ವೇಣು ಹಿಡಿದ ಕೈಗಳ ಸ್ಥಳ ಇದೆಂದು ತೋರಿಸಿದಾಗ ನೀವೇ ಭಲೇ ಬಾಲಕಾ ಅಂದಿರಿ!

ಜಕ್ಕಣ : ಆಯಿತಯ್ಯ ನಾನು ಈವರೆಗೆ ಕಲಿತ, ಕಲಿಸಿದ, ಕೆತ್ತಿದ ವಿದ್ಯೆಯಲ್ಲ ಹುಸಿ, ನಿನ್ನದೇ ನಿಜವೆನ್ನೋಣ. ನನಗೇನೋ ನಂಬಿಕೆಯಿದೆ – ಪ್ರತಿಮೆಯಲ್ಲಿ ದೋಷವಿಲ್ಲ ಎಂದು. ಅದಕ್ಕಾಗಿ ನೀನು ಕೇಳಿದ ಪಣ ಕಟ್ಟಬಲ್ಲೆ. ಪ್ರತಿಮೆಯಲ್ಲಿ ದೋಷವಿದೆಯೆಂದು ಇಷ್ಟು ಗಟ್ಟಿಮುಟ್ಟಾಗಿ ಹೇಳುವೆಯಲ್ಲ- ಒಂದು ವೇಳೆ ಅದು ಸುಳ್ಳಾದರೆ ನೀನು ಕಟ್ಟುವ ಪಣ ಏನು?

ಡಂಕಣ : ನಾನು ಹೇಳಿದ್ದು ಸುಳ್ಳಾದರೆ ಸುಳ್ಳು ಹೇಳಿದ ನಾಲಿಗೆಯನ್ನು ಕತ್ತರಿಸಿ ಚೆಲ್ಲುತ್ತೇನೆ. ರೂವಾರಿತನ ಮಾಡುವ ಈ ಕೈಗಳನ್ನು ಕತ್ತರಿಸಿ ಹಾಕುತ್ತೇನೆ ಒಪ್ಪಿಗೆಯೊ?

ಜಕ್ಕಣ : ಹಾಗಾದರೆ ನನ್ನ ಪಣ ಕೇಳು.

ಡಂಕಣ : ನಿಲ್ಲಿಸಿ ಸ್ಥಪತಿಗಳೇ. ಪಣ ಸಮಾನರಲ್ಲಿರಬೇಕು. ನಾನು ನಿಮ್ಮ ಸಮಾನನಲ್ಲ. ವಯಸ್ಸಿನಲ್ಲಿ, ಅನುಭವದಲ್ಲಿ, ವಿದ್ಯೆಯಲ್ಲಿ ಕೂಡ ನಾನು ಹುಡುಗ. ಇದು ನನ್ನ ವಿದ್ಯೆಯ ಪರೀಕ್ಷೆ. ನಿಮ್ಮದಲ್ಲ. ನಿಮ್ಮ ಪಣವನ್ನು ನಾನು ಒಪ್ಪಲಾರೆ.

ಶಾಂತಲೆ : ಭಲೇ ರೂವಾರಿ! ನಿನ್ನ ಮಾತನ್ನು ಮೆಚ್ಚಿಕೊಂಡೆ. ಎಂಥಾ ಮಹಾತಾಯಿ ನಿನ್ನನ್ನು ಹೆತ್ತಿರಬೇಕಪ್ಪ! ಆ ತಾಯಿಯ ಒಡಲು ತಂಪಾಗಿರಲಿ. ಸ್ಥಪತಿಗಳೇ ಪ್ರಾಯವನ್ನು ಅವಿಶ್ವಾಸದಿಂದ ಕಾಣುವುದು ಬೇಡ. ನಿಮ್ಮಿಬ್ಬರಿಗೂ ನಾನು ಹಾಕುವ ಶರತ್ತೊಂದಿದೆ. ಯಾವುದೇ ಪಣಗಳಿಲ್ಲದೆ ಈ ಪರೀಕ್ಷೆ ನಡೆಯಬೇಕು.

ಜಕ್ಕಣ : ಇದು ನಮ್ಮ ಕಲೆಯ ಪರೀಕ್ಷೆ. ಪಣಗಳಿಲ್ಲದೆ ಕಲೆಯ ಸತ್ಯ ಹೊಳೆಯಲಾರದು ಪಟ್ಟ ಮಹಾದೇವಿಯವರೇ.

ಶಾಂತಲೆ : ನೀವು ಮಾಡಿದ ಚೆನ್ನಕೇಶವನ ಪ್ರತಿಮೆ ಶ್ರೇಷ್ಠ ಕಲಾಕೃತಿ ಎಂದು ರೂವಾರಿ ಒಪ್ಪಿಕೊಂಡಿದ್ದಾನೆ. ಆದ್ದರಿಂದ ಇದು ಕಲೆಗಾರಿಕೆಯ ಪರೀಕ್ಷೆಯಲ್ಲ. ಇಬ್ಬರು ಕಲಾವಿದರ ವೃತ್ತಿ ಪರೀಕ್ಷೆ. ಆದ್ದರಿಂದ ಪಣದ ಅಗತ್ಯವಿಲ್ಲ.

ಜಕ್ಕಣ : ಕೆಲವು ಸಲ ಹಿಂಸೆಯ ಮೂಲಕವೇ ಪರೀಕ್ಷೆಯ ನಿರ್ಣಯ ಪ್ರಕಟವಾಗುತ್ತದಲ್ಲವೆ ಮಹಾದೇವಿಯವರೆ?

ಶಾಂತಲೆ : ಭರತ ಬಾಹುಬಲಿಯರ ಪರೀಕ್ಷೆ ಅಹಿಂಸೆಯ ಮೂಲಕ ನಡೆಯಿತೆಂಬುದು ನೆನಪಿರಲಿ ಸ್ಥಪತಿಗಳೆ. ಈಗ ಹೇಳು ರೂವಾರಿ. ಪ್ರತಿಮೆಯ ದೋಷ ನಿರ್ಣಯ ಮಾಡುವುದು ಹ್ಯಾಗೆ?

ಡಂಕಣ : ಪ್ರಥಮದಲ್ಲಿ ಪ್ರತಿಮೆಯ ಮೈತುಂಬ ಲೇಪಿಸಬೇಕು. ಅದು ಒಣಗುವ ತನಕ ತಡೆದು ಎಲ್ಲ ಒಣಗಿದ ಮೇಲೆ ಮೂರ್ತಿಯ ಯಾವುದಾದರು ಭಾಗದಲ್ಲಿ ಹಸಿ ಉಳಿದರೆ ದೋಷ ಅಲ್ಲೇ ಇದೆ ಎಂದು ತಿಳಿಯಬೇಕು. ಆ ಸ್ಥಳದಲ್ಲಿ ಒಡೆದು ನೋಡಿದರೆ ದೋಷವೇನೆಂದು ತಾನೇ ತಿಳಿಯುತ್ತದೆ.

ಶಾಂತಲೆ : ಇದ್ದಕ್ಕೆ ಒಪ್ಪಿಗೆಯೆ ಸ್ಥಪತಿಗಳೆ?

ಜಕ್ಕಣ : ಒಪ್ಪಿದೆ ಪಟ್ಟ ಮಹಾದೇವಿಯವರೆ.

ಶಾಂತಲೆ : ಹಾಗಿದ್ದರೆ ಈಗ ನನ್ನ ಶರ್ತು ಕೇಳಿರಿ: ಈ ಪರೀಕ್ಷೆ ಮಹಾರಾಜರ ಕಟ್ಟಳೆಗೆ ಒಳಗಾಗಿ, ಅವರ ಸನ್ನಿಧಿಯಲ್ಲೇ ನಡೆಯಬೇಕು. ಪರೀಕ್ಷೆಯ ನಿಯಮಗಳನ್ನು ಮಾಡುವವರು, ನಿರ್ಣಯ ಹೇಳುವವರು ಮಹಾರಾಜರೇ. ನಾಳೆ ಮುಂಜಾನೆ ಚೆನ್ನಕೇಶವನ ಸಮ್ಮುಖದಲ್ಲಿ, ಇದೇ ಜಾಗದಲ್ಲಿ ಸೇರೋಣ. ಅಲ್ಲಿಯವರೆಗೆ ಇಬ್ಬರ ನಡುವೆ ಯಾವುದೇ ಮನಸ್ತಾಪ ನಡೆಯಕೂಡದು. ಅರ್ಥವಾಯಿತೇ? ಈಗ ಎಲ್ಲರೂ ಹೊರಡಿ.

(ಎಲ್ಲರೂ ಹೋಗುವರು, ಶಾಂತಲೇ ಒಬ್ಬಳೇ ಚೆನ್ನಕೇಶವನ ಮೂರ್ತಿಯನ್ನು ನೋಡುತ್ತ ನಿಟ್ಟುಸಿರಿಡುವಳು. ಗೊಲ್ಲರ ಹುಡುಗ ಬರುವನು.)

ಗೊ.ಹುಡುಗ : ಆಶ್ಚರ್ಯ! ಮೂರ್ತಿ ಕಡೆದವನೇ ಮೂರ್ತಿ ಭಂಜನೆಗೆ ಸಿದ್ಧವಾಗಿದ್ದಾನೆ. ಮಾಡಿಸಿದವರು ನಿಟ್ಟುಸಿರುಗರೆಯುತ್ತಿದ್ದಾರೆ, ವಿಚಿತ್ರವಲ್ಲವೆ ಪಟ್ಟಮಹಾದೇವಿಯವರೆ?

ಶಾಂತಲೆ : ವಿಚಿತ್ರವೇನು ಬಂತು ನನ್ನಪ್ಪಾ. ನಾನು ಜೈನಮತೀಯಳಾದರೂ ಕಲೆ ನನ್ನ ಸ್ವಧರ್ಮ. ಅದಕ್ಕೆ ನನಗೆ ದೇವಾಲಯ ನಿರ್ಮಾಣದಲ್ಲಿ ಇಷ್ಟು ಆಸಕ್ತಿ. ಸ್ಥಪತಿ, ರೂವಾರಿ ಇಬ್ಬರೂ ಕಲಾವಿದರು. ಅಂದರೆ ಕಲೆ ಅವರ ಸ್ವಧರ್ಮ. ಅಹಂಕಾರದಿಂದ ಒಬ್ಬ ತನ್ನ ಸ್ವಧರ್ಮವನ್ನ ಮಲಿನಗೊಳಿಸಿಕೊಂಡಿದ್ದಾನೆ. ಅದೇ ಇಬ್ಬರ ಜಗಳಕ್ಕೆ ಕಾರಣ.

ಗೊ.ಹುಡುಗ : ಸರಿಯಾಗಿ ಹೇಳಿದಿರಿ ತಾಯಿ. ಯಾರ ಸ್ವಧರ್ಮ ಮಲಿನವಾಗಿದೆ? ಯಾರದು ಶುದ್ಧವಾಗಿದೆ?

ಶಾಂತಲೆ : ಇದೆಲ್ಲ ನನಗೆ ಹ್ಯಾಗೆ ತಿಳಿದೀತಯ್ಯ? ಕೇಶವನೇ ತೋರಿಸುತ್ತಾನೆ ಇರು. ದೇವರು ಕೊಟ್ಟ ನಿರ್ಣಯ ಶತಮಾನಗಳಿಗೆ ಕೇಳಿಸುತ್ತದೆ. ಮನುಷ್ಯ ಕೊಟ್ಟ ನಿರ್ಣಯ ಹೆಚ್ಚೆಂದರೆ ಒಂದು ಗಂಟೆ ಮಾತ್ರ.

ಗೊ.ಹುಡುಗ : ಬಹಳ ದೊಡ್ಡ ಮಾತನ್ನು ಹೇಳಿದಿರಿ. ದೇವರಿಗೇ ದೇವರ ಜವಾಬ್ದಾರಿ ಹೇಳಿ ಎಚ್ಚರಿಸಿದಿರಿ. ತಾಯಿ!