ನಾನು ಆಗಾಗ ಬರೆದ ಐದು ಸಣ್ಣ ನಾಟಕಗಳನ್ನು ಅಥವಾ ಏಕಾಂಕಗಳನ್ನು ಇಲ್ಲಿ ಒಟ್ಟಾಗಿ ಸೇರಿಸಿಕೊಡುತ್ತಿದ್ದೇನೆ. ಇವೆಲ್ಲ ಈ ಹಿಂದೆ ಪತ್ರಿಕೆಗಳಲ್ಲಿ ಬಂದಿರುವಂಥವೇ. ‘ಹಳವಂಡಗಳು’, ‘ಜಕ್ಕಣ’, ‘ಭಾರತಾಂಬೆ’- ಇವು ಪ್ರಜಾವಾಣಿಯ ದೀಪಾವಳಿ ವಿಶೇಷಾಂಕಗಳಲ್ಲೂ, ‘ಖರೋಖರ’ ಉದಯವಾಣಿಯ ದೀಪಾವಳಿ ವಿಶೇಷಾಂಕದಲ್ಲೂ, ‘ನಾರ್ಸಿಸಸ್‌’ ಸಂಕ್ರಮಣದಲ್ಲೂ ಅಚ್ಚಾಗಿದ್ದವು. ‘ಜಕ್ಕಣ’ ೨೦೦೮ರ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ‘ಬೆಂಬತ್ತಿದ ಕಣ್ಣು’ ನನ್ನ ಮೊಟ್ಟಮೊದಲನೆಯ ನಾಟಕವಾದ್ದರಿಂದ ಇಲ್ಲಿದೆ. ‘ಭಾರತಾಂಬೆ’ ಈ ಹಿಂದೆ ಮತಾಂತರ ಎಂಬ ಹೆಸರಿನಲ್ಲಿತ್ತು ಈ ನಾಟಕಕ್ಕೆ ಜೀನ್‌ ಪಾಲ್ ಸಾರ್ತ್ರ ಅವರ ಫ್ರೆಂಚ್‌ ನಾಟಕದ ಇಂಗ್ಲಿಷ್‌ ಅನುವಾದ The Respectful Prostituteದ ಪ್ರೇರಣೆ ಉದ್ದಕ್ಕೂ ಇದೆ. ಅಥವಾ ಇದರಲ್ಲೇನಾದರೂ ಗುಣ ಇದ್ದರೆ ಅದು ಮೂಲ ನಾಟಕಕ್ಕೆ ಸೇರಬೇಕೆಂದು ಹೇಳ ಬಯಸುತ್ತೇನೆ. ಜಕ್ಕಣ ಹೊರತುಪಡಿಸಿ ಉಳಿದ ನಾಟಕಗಳು ೧೯೮೯ರಲ್ಲಿ ಸಂಕಲನವಾಗಿ ಹೊರಬಂದಿದ್ದವು.

ಈ ನಾಟಕಗಳನ್ನು ತಮ್ಮ ಪತ್ರಿಕೆಗಳಲ್ಲಿ ಅಚ್ಚು ಮಾಡಿದ ಸಂಪಾದಕರಿಗೆ,

ಆಡಿದ ನೋಡಿದ ಮಹಾಶಯರಿಗೆ,

ಪ್ರಕಟಿಸಿದ ಅಂಕಿತ ಪುಸ್ತಕದ ಶ್ರೀ ಪ್ರಕಾಶ್‌ ಕಂಬತ್ತಳ್ಳಿ ಅವರಿಗೆ,

ವಂದನೆಗಳು.

ಚಂದ್ರಶೇಖರ ಕಂಬಾರ
೨೦೧೧