ಒಬ್ಬ ವಿಜ್ಞಾನಿಯನ್ನು ‘ವಿಜ್ಞಾನದ ಪಿತಾಮಹ’ ಅಥವಾ ಒಬ್ಬ ಕವಿಯನ್ನು ‘ಕಾವ್ಯದ ಪಿತಾಮಹ’ ಎನ್ನುವುದು ಪ್ರಮಾಣದೂರ ಅಭಿಪ್ರಾಯ. ಒಬ್ಬ ಕವಿಯನ್ನು ಆದಿಕವಿ ಎನ್ನುವುದು ಮೊಟ್ಟಮೊದಲು ಬರಹದಲ್ಲಿ ದೊರಕಿದ ಕಾವ್ಯಕ್ಕೆ ಸಂಬಂಧಿಸಿದ ಮಾತು. ಕಾವ್ಯವು ಮೌಖಿಕ ರೂಪದಲ್ಲಿ ಅದಕ್ಕಿಂತ ಎಷ್ಟೋ ಕಾಲದ ಹಿಂದಿನಿಂದಲೇ ಇತ್ತು. ಹೋಮರನ ಇಲಿಯಡ್ ಅಂಡ್ ಒಡಿಸಿ (ಕ್ರಿಸ್ತ ಪೂರ್ವ 10ನೇ ಶತಮಾನ) ಎಂಬ ಕಾವ್ಯ ಕ್ರಿಸ್ತ ಪೂರ್ವ 13ನೇ ಶತಮಾನದಲ್ಲಿ ಹತ್ತು ವರ್ಷಗಳ ಕಾಲ ನಡೆದ ಟ್ರೋಜನ್ ಯುದ್ಧದ ಕುರಿತಾಗಿ ಜನರ ಬಾಯಲ್ಲಾಡುತ್ತಿದ್ದ ಕಥಾಕಾವ್ಯವನ್ನು ಆಧರಿಸಿದೆ. ವಾಲ್ಮೀಕಿಯ ರಾಮಾಯಣ (ಕ್ರಿಸ್ತ ಪೂರ್ವ 4000-3000) ಮತ್ತು ವ್ಯಾಸನ ಮಹಾಭಾರತ (ಕ್ರಿಸ್ತ ಪೂರ್ವ 3000) ಕೂಡ ಜನಪದ ಕಥನಕಾವ್ಯದ ಸೃಜನಶೀಲ ಏಕರೂಪತಾ ಸಂಯೋಜನೆ.

ಇದೇ ರೀತಿ, ವೈಜ್ಞಾನಿಕ ಜ್ಞಾನವು ಕೂಡ ಐತಿಹ್ಯಗಳು ಹೇಳುವಂತೆ ‘ಮೊತ್ತಮೊದಲ ಚಿಂತಕ ಅರಸ’ ಎಂದು ಹೇಳಲಾಗುವ ಅಗಸ್ತ್ಯ (ಕ್ರಿಸ್ತ ಪೂರ್ವ 3000) ಮತ್ತು ಗ್ರೀಕ್ ಗಣಿತಜ್ಞ ಯೂಕ್ಲಿಡ್ (ಕ್ರಿಸ್ತ ಪೂರ್ವ300)ಗಿಂತ ಬಹಳ ಹಿಂದೆ ಇತ್ತು. ವೈಜ್ಞಾನಿಕ ಜ್ಞಾನವು ನಂಬಿಕೆಗಳ ರೂಪದಲ್ಲಿತ್ತು. ಯೂಕ್ಲಿಡ್ ಗಿಂತಲೂ ಹಿಂದಿನ ಕಾಲದ ‘ವಿಜ್ಞಾನಿ’ಗಳ ‘ಸಿದ್ಧಾಂತ’ಗಳು ಅಂಥ ನಂಬಿಕೆಗಳೇ ಆಗಿದ್ದವು. ‘ವಿಜ್ಞಾನಿ ಅರಸ’ನಾಗಿದ್ದ ಟೊಲೆಮಿ ಭೂಮಿ ಗುಂಡಗಿದೆಯೆಂದೂ, ಸೂರ್ಯ, ಗ್ರಹ ಮತ್ತು ನಕ್ಷತ್ರಗಳು ಭೂಮಿಯ ಸುತ್ತು ತಿರುಗುತ್ತವೆಂದೂ ಹೇಳಿದ. ಅವನದು ನೂರಕ್ಕೆ ನೂರು ಪ್ರಮಾಣರಹಿತ ಸಿದ್ಧಾಂತ! ಅದು ಶತಮಾನಗಳಿಂದ ಇದ್ದ ನಂಬಿಕೆಗಳನ್ನೇ ಸತ್ಯ ಎಂದು ನಂಬುವ ಜನರ ಕಾಲವಾಗಿತ್ತು. ಆದರೆ, ಕಾಪರ್ನಿಕಸ್ (1473-1543) ‘ಭೂಮಿ ಗುಂಡಗಿದೆ’ ಎಂದುದಕ್ಕೆ ಮತ್ತು ಗೆಲಿಲಿ ‘ಭೂಮಿ ಚಲಿಸುತ್ತಿದೆ’ ಎಂದುದಕ್ಕೆ ಎಂಥ ಶಿಕ್ಷೆಗೆ ಗುರಿಯಾದರು ಎಂಬುದು ಬಹಳ ಖೇದದ ಸಂಗತಿ.

ಭಾರತ ವೈಜ್ಞಾನಿಕ ಚಿಂತನೆಯ ದೇಶ

ಮನುಷ್ಯನ ಎಲ್ಲಾ ‘ಕಂಡುಹುಡುಕುವಿಕೆ’ಗಿಂತ ಮಹತ್ತಾದ ಕಂಡುಹುಡುಕುವಿಕೆಯೆಂದರೆ ಆತ ಭಾಷೆಯನ್ನು ಕಂಡುಹುಡುಕಿದ್ದು. ಅದನ್ನವನು ಕಂಡುಹುಡುಕಿದ್ದು ತನ್ನಲ್ಲೇ ಎನ್ನುವುದನ್ನು, ‘ನನ್ನ ನಾಲಿಗೆಯನ್ನು ನಾನೇ ಕಂಡುಹುಡುಕಿದ್ದು’ ಎನ್ನುವಂತೆ ನಾವು ಪ್ರಮಾಣರಹಿತವಾಗಿ ಒಪ್ಪಿಕೊಳ್ಳಬಹುದು.

ಮನುಷ್ಯ ಮೊದಲು ತನ್ನ ಗಂಟಲಿನಲ್ಲಿರುವ ಧ್ವನಿಪೆಟ್ಟಿಗೆ (larynx)ಯನ್ನು ಮತ್ತು ಅದರ ಕಾರ್ಯವಿಧಾನವನ್ನು ಗುರುತಿಸಿದ. ಅದನ್ನು ಹೇಗೆ ತನ್ನಂತಿರುವ ಇತರರೊಡನೆ ಸಂವಹನಕ್ಕೆ ಉಪಯೋಗಿಸಬಹುದು ಎಂಬುದನ್ನು ಕಂಡುಕೊಂಡ. ಮನುಷ್ಯ ಅದನ್ನು ಅಕ್ಷರಗಳಿಂದ (syllables) ಆರಂಭಿಸಿರಬಹುದು. ಆರಂಭದಲ್ಲಿ ಅದು ಸುದೀರ್ಘವಾದ ‘ಆ’ಗಳು ‘ಊ’ಗಳು ‘ಹೇಹೇ’ಗಳು, ‘ಹೋಹೋ’ಗಳು ಆಗಿತ್ತು ಎಂದು ತರ್ಕಿಸಬಹುದು.

ಮೊದಲು ಸ್ವರಾಕ್ಷರಗಳು, ಅನಂತರ ಸ್ವರಸಹಿತ ವ್ಯಂಜನಾಕ್ಷರಗಳು. ಸುಮಾರಾಗಿ ಹೀಗೆ ಎಂದು ಊಹಿಸಬಹುದು: ಈಉ- ನೀರು; ಅಅ- ಮರ; ಅಉ- ಹಸು; ಆಉ- ಹಾವು: ಅಅ- ದನ; ಆಉ- ಹಾಲು; ಇತ್ಯಾದಿ. ‘ಅಅ’ ಎನ್ನುವುದು ಮರ ಮತ್ತು ದನ ಎರಡೂ ಆದಾಗ ಒಂದರಿಂದ ಇನ್ನೊಂದನ್ನು ಬೇರೆಯಾಗಿ ತೋರಿಸಲು ವ್ಯಂಜನ ಅಗತ್ಯವಾಗುತ್ತದೆ. ಕ್ರಮೇಣ `ಮಅ’ `ಮರ’ವಾಗುತ್ತದೆ; `ದಅ’ `ದನ’ವಾಗುತ್ತದೆ. ಮಗು ಭಾಷೆಯನ್ನು ಕಲಿಯುವ ರೀತಿಯನ್ನು ಗಮನಿಸಿದರೆ ತಿಳಿಯುವುದಿಲ್ಲವೆ? ಮಗು ಹೀಗೇ ಆರಂಭಿಸುವುದು. ಮಗುವಿಗೆ ವೊವೆಲ್ಸ್ ತಾನಾಗಿ ಬರುತ್ತದೆ. ಕನ್ಸೊನೆಂಟನ್ನು ಅನುಕರಣೆಯಿಂದ ಕಲಿಯುತ್ತದೆ.

ಮೃಗ ಪಕ್ಷಿಗಳಿಗೆ ಕೂಡ ಅವುಗಳದೇ ಆದ ‘ಭಾಷೆ’ ಅರ್ಥಾತ್ ಸಂವಹನ ವಿಧಾನ ಇದೆ. ಅವುಗಳ ಗಂಟಲಿನಲ್ಲಿಯೂ ಧ್ವನಿಪೆಟ್ಟಗೆ ಇದೆ. ಅವುಗಳು ಸಾಮಾನ್ಯವಾಗಿ ಸ್ವರಾಕ್ಷರಗಳಲ್ಲಿ ಮಾತಾಡುತ್ತವೆ. ಕೆಲವು ಪಕ್ಷಿಗಳು ಕೆಲವೊಂದು ವ್ಯಂಜನಗಳನ್ನು ಕೂಡ ಉಚ್ಚರಿಸುತ್ತವೆ. ಮನುಷ್ಯನಾಡುವ ವ್ಯಂಜನಗಳನ್ನು ಅತ್ಯಂತ ಸಮರ್ಥವಾಗಿ ಪುನರುಚ್ಚರಿಸಬಲ್ಲ ಪಕ್ಷಿ ಗಿಳಿ. ಆದರೆ ತಾನು ಕೇಳಿದ್ದನ್ನು ಅತ್ಯಂತ ಸೃಜನಶೀಲವಾಗಿ ಬಳಸುವ ಪಕ್ಷಿ ಬಹುಶಃ ಕಾಜಾಣ. ಕಾಜಾಣ ಎಂದರೆ ಕಾಡಿನ ಜಾಣ ಎಂಬುದರ ಹೃಸ್ವ ರೂಪವಾಗಿರಬಹುದು.

ಮೃಗಪಕ್ಷಿಗಳು ವಸ್ತುಗಳನ್ನು ಅವುಗಳ ಬಣ್ಣ, ಆಕಾರ, ವಾಸನೆ, ಸ್ಪರ್ಶ ಮತ್ತು ರುಚಿಯ ಆಧಾರದಲ್ಲಿ ಗುರುತಿಸಬಲ್ಲವು. ಆದರೆ, ಭಾಷೆಯ ಬಳಕೆಯಲ್ಲಿ ಪಕ್ಷಿಗಳು ಮೃಗಗಳಿಗಿಂತ ಮುಂದಿವೆ. ಅವು ತಾವು ಗುರುತಿಸಿದ್ದರ ಬಗ್ಗೆ ಮೃಗಗಳಿಗಿಂತ ಚೆನ್ನಾಗಿ ಮಾತಾಡಬಲ್ಲವು.

ನಿಸ್ಸಂದೇಹವಾಗಿಯೂ ಮೃಗಪಕ್ಷಿಗಳು ಕೂಡ ಯೋಚಿಸಬಲ್ಲವು. ಮೃಗಪಕ್ಷಿಗಳ ಯೋಚನೆಗಳು ನೂರಕ್ಕೆ ನೂರು ಅವುಗಳ ಅಸ್ತಿತ್ವಕ್ಕೆ ಬೆಸೆದುಕೊಂಡಿರುವಂಥವು. ಅಷ್ಟೆ, ಅದಕ್ಕಿಂತ ಹೆಚ್ಚಿಲ್ಲ. ಅವುಗಳ ಜೀವನ ಶೈಲಿ ಅಂದೂ ಇಂದೂ ಹಾಗೆ ಇದೆ, ಭಾಷೆಯೂ ಹಾಗೇ ಇದೆ. ಜೀವನ ಶೈಲಿ ಬದಲಾಗುವುದರೊಂದಿಗೆ ಭಾಷೆ ಕೂಡ ಬದಲಾಗುವುದು ತೀರಾ ಸಾಮಾನ್ಯ ಎಂದು ಯಾರೂ ಒಪ್ಪಿಕೊಳ್ಳಬಹುದು!

ಆರಂಭದಲ್ಲಿ, ಮನುಷ್ಯರು ಕೂಡ ವಸ್ತುಗಳನ್ನು ಮೃಗಪಕ್ಷಿಗಳು ಗುರುತಿಸುವ ರೀತಿಯಲ್ಲೇ ಗುರುತಿಸಿರಬೇಕು. ಆದರೆ ತನ್ನ ಅಗತ್ಯಕ್ಕನುಸಾರ ಅವನು ಅವುಗಳಿಗೆ ಹೆಸರುಗಳನ್ನು (ನಾಮಪದ) ಕೊಟ್ಟ. ಪ್ರತಿಯೊಂದು ವಸ್ತುವಿಗೂ ಹೆಸರಿಡಬೇಕಾದ ಅಗತ್ಯ ಅವನಿಗಿತ್ತು. ಯಾಕೆಂದರೆ, ಅವನ ಬದುಕು ಅವುಗಳ ಜೊತೆಯಲ್ಲಿ ನಡೆಯುತ್ತಿತ್ತು.

ಕ್ರಮೇಣ, ಅವುಗಳನ್ನು ಅವುಗಳ ಜೊತೆಯಲ್ಲಿ ನಡೆಯುವ ಕ್ರಿಯ ಮೂಲಕ ಗುರುತಿಸಬೇಕಾದ ಅಗತ್ಯವುಂಟಾದ್ದರಿಂದ ಅವನು ಕ್ರಿಯೆಯ ಶಬ್ದಗಳನ್ನು(ಕ್ರಿಯಾಪದ) ಸೃಷ್ಟಿಸಿಕೊಂಡ. ಆದರೆ ನೂರಾರು, ಸಾವಿರಾರು ವಸ್ತುಗಳನ್ನು ಅವುಗಳ ಹೆಸರುಗಳು ಮತ್ತು ಕ್ರಿಯೆಯ ಶಬ್ದಗಳಿಂದ ಗುರುತಿಸುವುದಷ್ಟೇ ಸಾಲದಾಯಿತು. ಅವನು ವಸ್ತುಗಳ ಗುಣಧರ್ಮಗಳನ್ನು ಹೇಳುವ ಶಬ್ದಗಳನ್ನು (ನಾಮವಿಶೇಷಣ) ಮತ್ತು ಕ್ರಿಯೆಯ ಗುಣವಿಧಾನಗಳನ್ನು ಹೇಳುವ ಶಬ್ದಗಳನ್ನು (ಕ್ರಿಯಾ ವಿಶೇಷಣ) ಸೃಷ್ಟಿಸಿದ.

ಅನಂತರ ವಸ್ತು- ವಸ್ತು ಸಂಬಂಧ, ಕ್ರಿಯೆ- ಕ್ರಿಯೆ ಸಂಬಂಧ, ಕ್ರಿಯೆ- ವಸ್ತು ಸಂಬಂಧ ಮುಂತಾದ ವಿಚಾರಗಳನ್ನು ಹೇಳಲಿಕ್ಕಾಗಿ, ಕೆಲವು ಚಿಕ್ಕ- ಚಿಕ್ಕ ಶಬ್ದಗಳನ್ನು (ಅನಂತರದ ಕಾಲದಲ್ಲಿ  ವೈಯಾಕರಣಿಗಳಿಂದ ಉಪಸರ್ಗ, ಅವ್ಯಯ, ಸಮುಚ್ಚಯ ಎಂದು ಮುಂತಾಗಿ ನಾಮಕರಣಗೊಂಡ ಶಬ್ದಗಳನ್ನು) ಸೃಷ್ಟಿಸಿಕೊಂಡ.

ಮನುಷ್ಯ ಅವನ ದೇಹ ಮತ್ತು ಮಿದುಳಿನ ರಚನೆಯ ವಿಶಿಷ್ಟತೆಯಿಂದ ನೋಡಿದರೆ, ವಿಪರೀತ ವೇಗದಿಂದ ವಿಕಾಸಗೊಂಡ ಪ್ರಾಣಿ. ಈ ವಿಕಾಸದ ಮೂಲದಲ್ಲಿರುವುದು ಭಾಷೆ. ಭಾಷೆಯಿಂದ ಚಿಂತನೆ. ಈ ಭಾಷೆ ಮತ್ತು ಚಿಂತನೆ ಇಲ್ಲದ್ದರಿಂದ ಇತರ ಮೃಗಗಳು ಮೃಗಗಳಾಗಿಯೇ ಉಳಿದುಬಿಟ್ಟದ್ದು.

ಪಾಣಿನಿಯ ಕೆಲಸ

ಭಾಷೆ ಹೇಗೆ ಹುಟ್ಟಿತು, ಮನುಷ್ಯ ಹೇಗೆ ಭಾಷೆಯ ಬಳಕೆಯನ್ನು ಆರಂಭಿಸಿದ ಎಂಬ ಬಗ್ಗೆ ಒಂದಲ್ಲ ಒಂದು ಸಂದರ್ಭದಲ್ಲಿ ಕುತೂಹಲಗೊಳ್ಳದವರಿಲ್ಲ. ಹೀಗೇ ಹುಟ್ಟಿತು ಎಂದು ಹೇಳುವವರು ಯಾರು? ಏನು ಆಧಾರ? ಭಾಷೆಯನ್ನು ಯಾರೂ ವಿಜ್ಞಾನವೆಂದು ಕರೆಯುವುದಿಲ್ಲ. ಆದರೆ ಭಾಷೆಯಿಲ್ಲದೆ ವಿಜ್ಞಾನವಿಲ್ಲ. ಭಾಷೆಯಿಲ್ಲದೆ ಶಾಲೆಯಿಲ್ಲ. ಭಾಷೆಯಿಲ್ಲದೆ ಮನುಷ್ಯನೇ ಇಲ್ಲ. ಎಲ್ಲ ಜ್ಞಾನ, ಎಲ್ಲ ವಿಚಾರ ಭಾಷೆಯಲ್ಲಿ, ದಾಖಲೆ ಭಾಷೆಯಲ್ಲಿ. ಭಾಷೆಯ ಕುರಿತಾದ ಸಂಶೋಧನೆ ವಿಜ್ಞಾನ.

ಭಾಷೆಯ ಕುರಿತು ಗಾಢವಾಗಿ ಚಿಂತಿಸಲು ತೊಡಗಿದ ಪಾಣಿನಿಯ ಚಿಂತನೆ, ಅವಲೋಕನ ಮತ್ತು ಅಧ್ಯಯನದಿಂದ ಸೃಷ್ಟಿಯಾದದ್ದು ಅವನ ಪ್ರಧಾನ ಕೃತಿಯಾದ ‘ಅಷ್ಟಾಧ್ಯಾಯಿ’ ಅಥವಾ ‘ಅಷ್ಟಕ’ ಎಂಬ ವ್ಯಾಕರಣಗ್ರಂಥ. ಈ ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನೂ ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ.

ಪಾಣಿನಿ ‘ಅಷ್ಟಾಧ್ಯಾಯಿ’ಯಲ್ಲಿ ‘ಪವಿತ್ರ ಪಠ್ಯ’ ಮತ್ತು ‘ಸಂವಹನ ಪಠ್ಯ’ದ ಭಾಷೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುತ್ತಾನೆ. ಸಂಸ್ಕೃತ ಭಾಷೆಯ ಸ್ವರಾಕ್ಷರ ಮತ್ತು ವ್ಯಂಜನಾಕ್ಷರ ಉತ್ಪತ್ತಿಯ ರೀತಿಯನ್ನು ಮತ್ತು ನಿಯಮಗಳನ್ನು ಕೊಡುತ್ತಾನೆ. ಸುಮಾರು 1700 ಶಬ್ದಗಳನ್ನು ಭಾಷೆಯ ಮೂಲ ‘ಸಾಧನಗಳು’ ಎಂದು ಉಲ್ಲೇಖಿಸಿ, ಅವುಗಳನ್ನು ಸ್ವರಗಳು, ವ್ಯಂಜನಗಳು, ನಾಮಪದಗಳು, ಕ್ರಿಯಾಪದಗಳು ಎಂದು ಮುಂತಾಗಿ ವರ್ಗೀಕರಿಸುತ್ತಾನೆ. ಆಧುನಿಕ ಭಾಷಾವಿಜ್ಞಾನದಲ್ಲಿ ಹೇಳಿರುವಂತೆ ವಾಕ್ಯ, ಸಂಯುಕ್ತ ನಾಮಪದ ಇತ್ಯಾದಿಗಳ ರಚನೆಯ ನಿಯಮಗಳನ್ನು ಕೊಡುತ್ತಾನೆ.

ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಆಸಕ್ತಿಯುತವಾದ ವಿಚಾರವೊಂದಿದೆ. ಪಾಣಿನಿ ತನ್ನ ‘ವ್ಯಾಕರಣ’ವನ್ನು ಅರ್ಥಾತ್ ಭಾಷಾನಿಯಮಗಳನ್ನು ಮತ್ತು ಶಬ್ದೋತ್ಪತ್ತಿ ಸಿದ್ಧಾಂತಗಳನ್ನು ಕೊಡುವುದಕ್ಕೆ ಬಹಳ ಹಿಂದೆ ದೈನಂದಿನ ಸಂವಹನದ ಭಾಷೆಗಿಂತ ಭಿನ್ನವಾದ ಒಂದು ಭಾಷೆ ಜನಪದ ಕಾವ್ಯಕಥನಗಳಲ್ಲಿ ವಿಜೃಂಭಿಸುತ್ತಿತ್ತು, ಬೆಳೆಯುತ್ತಿತ್ತು. ಹೋಮರ್ (ಹತ್ತನೆಯ ಶತಮಾನ) ಇಲಿಯಡ್ ಮತ್ತು ಒಡಿಸಿ ಬರೆಯುವ ಮೊದಲು ಗ್ರೀಕ್ ಭಾಷೆಯಲ್ಲಿ ‘ವ್ಯಾಕರಣ’ ಎಂಬ ಶಾಸ್ತ್ರವಿರಲಿಲ್ಲ.

ಭಾಷಾವಿಜ್ಞಾನದ ಹುಟ್ಟು

ಭಾಷೆಯ ಮೂಲಕವೇ ಯೋಚನೆ; ಆದುದರಿಂದ, ನಮಗೆ ಗೊತ್ತಿರುವುದು ಒಂದು ಸಾವಿರ ಶಬ್ದಗಳು ಮಾತ್ರ ಎಂದಾದರೆ, ನಮಗೆ ಯೋಚಿಸುವುದು ಮತ್ತು ಮಾತಾಡುವುದು ಆ ಒಂದು ಸಾವಿರ ಶಬ್ದಗಳಲ್ಲಿ ಮಾತ್ರ ಸಾಧ್ಯ. ಸಾವಿರಾರು ವರ್ಷಗಳ ಹಿಂದಿದ್ದ ಸ್ಥಿತಿ ಇದೇ. ಈಗ ಪ್ರಪಂಚದಲ್ಲಿ ಕೆಲವು ಸಾವಿರ ಭಾಷೆಗಳಿವೆ. ಇವುಗಳ ಪೈಕಿ ಕೇವಲ ಹತ್ತು ಸಾವಿರ ಶಬ್ದಗಳು ಕೂಡ ಇಲ್ಲದ ಭಾಷೆಗಳಿವೆ.

ಪಾಣಿನಿಯನ್ನು ನಾವು ಮೊದಲ ‘ಭಾಷಾಶಾಸ್ತ್ರಜ್ಞ’ (ಕಾಲ ಕ್ರಿಸ್ತ ಪೂರ್ವ 7ನೇ ಶತಮಾನ ಮತ್ತು 8ನೇ ಶತಮಾನಗಳ ನಡುವೆ ಎಂದು ಅಂದಾಜು) ಎಂದು ಪರಿಗಣಿಸುವಾಗ, ಅವನು ಮಾನವ ಸಂವಹನ ಶಬ್ದಗಳನ್ನು ‘ವೈಜ್ಞಾನಿಕ’ ವಿಧಾನದಲ್ಲಿ ವಿಶ್ಲೇಷಿಸಿ ದಾಖಲಿಸಿದ ಮೊತ್ತ ಮೊದಲ ‘ವಿಜ್ಞಾನಿ’ ಎಂದು ತಿಳಿಯಬಹುದು. ಅವನು ಶಬ್ದಗಳನ್ನು ಭಾಷಿಕವಾಗಿ (linguistically) ಮಾತ್ರವಲ್ಲ, ಶಾಬ್ದಿಕವಾಗಿಯೂ (phonetically) ಕೂಡ ವಿಶ್ಲೇಷಿಸಿದ್ದಾನೆ. ಭಾಷೆಯ ಹುಟ್ಟಿನ ಬಗ್ಗೆ ಅವನು ಮಾಡಿರುವ ತರ್ಕಗಳ ಹಿಂದೆ ನಿಸರ್ಗದಲ್ಲಿ ಕೇಳಿಬರುವ ಶಬ್ದಗಳು ಅರ್ಥಾತ್ ಧ್ವನ್ಯನುಕರಣ ಶಬ್ದಗಳ (onomatopoeia) ಸೂಕ್ಷ್ಮಅವಲೋಕನ ಮತ್ತು ಅಧ್ಯಯನದಿಂದ ಕಂಡುಕೊಂಡ ಸತ್ಯಗಳು ಇವೆ.

ಪಾಣಿನಿಯ ವ್ಯಾಕರಣ ಸೂತ್ರಗಳೆಂದರೆ ಬಹು ಅಂಶ ಲಿಖಿತ ರೂಪದಲ್ಲಿ ಮೌಖಿಕ ಶಬ್ದಗಳ ವಿಂಗಡಣೆ ಮತ್ತು ವರ್ಗೀಕರಣ. ಅದು ಭಾಷೆ ಮತ್ತು ವ್ಯಾಕರಣ ಒಂದೇ ಆಗಿದ್ದ ‘ವ್ಯಾಕರಣ ಶಾಸ್ತ್ರ’ದ ಮೊದಲ ಹಂತ. ಆಗ ಇದ್ದುದಷ್ಟೇ, ಯೋಚನೆ ಮತ್ತು ಅದರ ಅಭಿವ್ಯಕ್ತಿ. ಪಾಣಿನಿಯ ‘ಅಷ್ಟಾಧ್ಯಾಯಿ’ಯನ್ನು ಮನುಷ್ಯನ ಮೇಧಾಶಕ್ತಿಯ ಅತ್ಯಂತ ಶ್ರೇಷ್ಠ ದಾಖಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.